Sunday, 7 April 2013

ಮದುವೆ ಎಂದರೇನು? ಅದರ ಆಚರಣೆಯ ಉಪಯೋಗವೇನು? ಭಾಗ - ೧

ಎಲ್ಲರಲ್ಲಿ ಬರುವ ಪ್ರಶ್ನೆಯೆಂದರೆ ಈ ಆಧುನಿಕ ಕಾಲದಲ್ಲಿ “ಮದುವೆ” ಈ ಮೂರಕ್ಷರದ ಶಬ್ದ ಯಾವುದಿದೆ, ಅದು ಏನು, ಮದುವೆ ಎಂದರೇನು? ಪ್ರಸಕ್ತ ಕಾಲದಲ್ಲಿ ಮದುವೆ ಮಾಡಿಕೊಂಡು ಗೃಹಸ್ಥಾಶ್ರಮ ಜೀವನ ನಡೆಸುವುದು ಎಂಬ ಹೇಳಿಕೆ ಮಾತ್ರ ಉಳಿದಿದೆ. ಆದರೆ ಯಾರಿಗೂ ಮದುವೆಯಾಗಲಿ ಅಥವಾ ಗೃಹಸ್ಥಾಶ್ರಮದ ಅರ್ಥವಾಗಲಿ ತಿಳಿದಿರುವುದಿಲ್ಲ. ಪೇಟೆಯಲ್ಲಾಗಲಿ ಅಥವಾ ವಿದೇಶದಲ್ಲಾಗಲಿ ಗಂಡು ಹೆಣ್ಣು ಒಟ್ಟಾದರೆ ಸಾಕು, ಬಾಳುತ್ತೇವೆ, ಮಕ್ಕಳಾಗುತ್ತವೆ, ಜೀವನ ಹೀಗೇ ನಡೆಯುತ್ತದೆ. ಇದನ್ನು ಇಂದಿನ ಕಾನೂನು ಸಹ ಒಪ್ಪುವ ಪರಿಸ್ಥಿತಿಗೆ ಈಡಾಗಿದೆ. ಆದ್ದರಿಂದ ಮದುವೆ ಎಂದರೇನು? ಮದುವೆ ಏಕೆ? ಎಂಬ ಈ ಪ್ರಾಥಮಿಕ ಪ್ರಶ್ನೆಗೆ ಉತ್ತರವನ್ನು ಪ್ರಸ್ತುತ ಪಡಿಸುತ್ತಿದ್ದೇವೆ.

ಕುತೂಹಲಿಗಳಾಗಿ ಪ್ರಶ್ನೆಗೆ ಉತ್ತರ ನೀಡಲು ಅವಕಾಶ ಮಾಡಿಕೊಟ್ಟಂತಹವರಿಗೆ ಕೃತಜ್ಞತೆ ಸಲ್ಲಿಸುತ್ತಾ ಮದುವೆ ಎಂದರೇನು ಎಂಬ ಪ್ರಶ್ನೆ ಮೇಲ್ನೋಟಕ್ಕೆ ತೀರಾ ಬಾಲಿಶವಾಗಿರುತ್ತದೆ. ಆದರೆ ಮದುವೆ ಎಂದರೆ ಯಾರಿಗೆ ಗೊತ್ತಿಲ್ಲ? ಎಲ್ಲರಿಗೂ ಗೊತ್ತಿದೆ. ಆದರೆ ನಿಜವಾಗಿಯೂ ಮದುವೆ ಎಂಬ ವಿಚಾರದ ಹಿನ್ನೆಲೆಯಲ್ಲಿರತಕ್ಕಂತಹ ವಿಶಾಲಾರ್ಥ ಹಿಂದೆ ಸ್ವಲ್ಪವಾದರೂ ಅನುಭವದಲ್ಲಿ ಇತ್ತು. ನಮ್ಮ ಭಾರತದಲ್ಲಿ ವಿಶಿಷ್ಟವಾದ ರೀತಿಯಲ್ಲಿ ಮದುವೆಯ ಅರ್ಥ ವ್ಯಾಪ್ತಿಗೊಳಗೊಂಡ ವ್ಯಾವಹಾರಿಕ ಜೀವನವಿತ್ತು. ಆದರೆ ವಿದೇಶಗಳಲ್ಲಿ ಇರಲಿಲ್ಲ. ನಮ್ಮ ಸಂಸ್ಕೃತಿಯಲ್ಲಿ ಮಾತ್ರ ಮದುವೆಯೆಂಬುದು ಉತ್ತಮ ಅರ್ಥವುಳ್ಳದ್ದಾಗಿ ಅನುಭವದ ಹಿನ್ನೆಲೆಯಲ್ಲಿ ಜೀವನವಿಧಾನವಾಗಿತ್ತು. ಆದರೆ ಈಗ ಅದು ನಶಿಸಿಹೋಗಿದೆ. ನಮಗೆ ಹೆಚ್ಚು ವಿದೇಶೀ ಸಂಸ್ಕೃತಿಯ ವ್ಯಾಮೋಹ. ಹಾಗಾಗಿ ಅದನ್ನು ಮರೆತು ಬಿಟ್ಟಿದ್ದೇವೆ. ಅದರ ಹಿನ್ನೆಲೆಯನ್ನು ಚಿಂತಿಸಬೇಕಾದರೆ ಮೊದಲು ಮದುವೆ, ಅದರಲ್ಲಿರುವ ಎಷ್ಟೆಷ್ಟೋ ಆಚಾರಗಳು, ಪ್ರಕ್ರಿಯೆಗಳು, ಏನೇನೋ ಕೆಲಸಗಳನ್ನೆಲ್ಲಾ ಮಾಡಿಸುತ್ತೇವೆ. ಆದರೆ ಅದನ್ನು ಏಕೆ ಹಾಗೆಯೇ ಮಾಡಬೇಕು? ಪ್ರತಿಯೊಂದು ಪ್ರಕ್ರಿಯೆಗೂ ಶಾಸ್ತ್ರಬದ್ಧವಾದ ಅರ್ಥವಿದೆ. ಹಾಗೆ ವೈಜ್ಞಾನಿಕ ಉದಾಹರಣೆಗಳೂ ಅದರ ಅನಿವಾರ್ಯತೆಯನ್ನು ತೋರಿಸಿಕೊಡುತ್ತದೆ. ಎಲ್ಲಾ ಆಚರಣೆಗಳು ಕೂಡ ವೈಜ್ಞಾನಿಕವಾಗಿ ಅನಿವಾರ್ಯವೇ ಆಗಿವೆ. ಆದರೆ ಈ ರೀತಿಯಲ್ಲಿ ಪ್ರಕ್ರಿಯೆಗಳನ್ನು ಮಾಡಬೇಕೆನಿಸಿದ್ದು ಯಾವಾಗ?

ಯುವಂ ಚಿತ್ರಂ ದದಥುರ್ಭೋಜನಂ ನರಾ ಚೋದೇಥಾಂ ಸೂನೃತಾವತೇ | 
ಅರ್ವಾಗ್ರಥಂ ಸಮನಸಾ ನಿಯಚ್ಛತಂ ಪಿಬತಂ ಸೋಮ್ಯಂ ಮಧು ||

ಎಂದು ನಮಗೆ ವೇದದಲ್ಲಿ ಆಧಾರ ಸಿಗುತ್ತದೆ. ಪ್ರತಿಯೊಂದು ಜೀವಿಗೂ ತನ್ನ ಜೀವವೆಂದರೆ ಮಧು. ಯಾವ ಜೀವಿಯೂ ಜೀವ ಬಿಡುವುದಕ್ಕೆ ಇಷ್ಟಪಡುವುದಿಲ್ಲ. ಪ್ರತಿಯೊಂದಕ್ಕೂ ಜೀವವೆಂದರೆ ಅಷ್ಟು ಅಗತ್ಯ ಹಾಗೂ ಮೋಹ. ಜೀವವೊಂದಿದ್ದರೆ ಏನು ಬೇಕಾದರೂ ತ್ಯಾಗ ಮಾಡುತ್ತೇನೆ ಎಂದು ಮನುಷ್ಯ ಮಾತ್ರವಲ್ಲ ಎಲ್ಲಾ ಜೀವಿಗಳೂ ಹೇಳುತ್ತವೆ. ಹಾಗಾಗಿ ಈ ಕರ್ಮಭೂಮಿಯಲ್ಲಿ ಜನನಕ್ಕೆ ಬಂದ ಜೀವಿಯಲ್ಲಿ ಜೀವದಷ್ಟು ಮಧುವಾದ ವಿಚಾರ ಬೇರೆ ಯಾವುದೂ ಇರುವುದಿಲ್ಲ. ಅಂತಹ ಶ್ರೇಷ್ಠವಾದಂತಹ ಮಧುವನ್ನು ಸ್ಥಿರಗೊಳಿಸಿಕೊಳ್ಳುವುದು ಹೇಗೆ? ಹೆಚ್ಚು ಕಾಲ ಅದರೊಂದಿಗೆ ಬಾಳುವುದು ಹೇಗೆ? ಎಂಬುದನ್ನು ತಿಳಿಸಿಕೊಡತಕ್ಕಂತಹ ಮಾರ್ಗವೇ ಮದುವೆ. 

ಹೆಚ್ಚು ಕಾಲ ಬದುಕಬೇಕಾದರೆ, ಹೆಚ್ಚು ಕಾಲ ಸಾರ್ಥಕ ಬದುಕು ಬದುಕಬೇಕಾದರೆ, ಆ ಬದುಕು ಮಧುವಾಗಬೇಕಾದರೆ ಅದಕ್ಕೆ ಮದುವೆ ಬೇಕು. ಹಾಗಾಗಿ ಬಹಳ ಪುರಾತನ ಕಾಲದಿಂದಲೂ ಇದರ ಬಗ್ಗೆ ಹಲವು ಕಡೆಯಿಂದ ಹಲವು ವಿಚಾರಗಳನ್ನು ಚಿಂತನೆ ಮಾಡಿದರು. ಇಲ್ಲಿ ೭ ವಿಚಾರಗಳನ್ನು ಸಂಯೋಜಿಸಲ್ಪಟ್ಟು ಒಂದು ಪ್ರಕ್ರಿಯೆಯ್ನ್ನು ರೂಪಿಸುತ್ತಾರೆ. ಮೊದಲು ಭೂಮಿಯಲ್ಲಿ ಹಲವು ಜೀವಪ್ರಭೇದದ ಜೀವಸೃಷ್ಟಿಯಾಯಿತು. ಅವುಗಳಲ್ಲಿ ಸಹಜ ಜೀವನ ವ್ಯವಸ್ಥೆಯಿತ್ತು. ಆ ವ್ಯವಸ್ಥೆಯನ್ನಾಧರಿಸಿ ಅದರದ್ದಾದ ಸಂತಾನೋತ್ಪಾದನೆ, ಸಂತಾನವೃದ್ಧಿ, ವಂಶಾಭಿವೃದ್ಧಿ ಆಗುತ್ತಿತ್ತು. ಅದಕ್ಕೆ ಯಾವ ನಿಯಮ, ಕಟ್ಟುಪಾಡುಗಳು ಅಥವಾ ಯಾವುದೇ ಒಂದು ನಿರ್ಣಯಗಳೂ ಇರಲಿಲ್ಲ. ಆದರೆ ಆ ರೀತಿಯಾದಾಗ ಸಹಜವಾಗಿ ಪಾಶವೀ ಪ್ರವೃತ್ತಿಯ ಸಮಾಜವು ವೃದ್ಧಿಯಾಗುವುದು ಕಂಡು ಬಂದಾಗ ಇದು ಖಂಡಿತಾ ಸ್ಥಿರವಾಗಲಿಕ್ಕಿಲ್ಲ; ಇದಕ್ಕೊಂದು ಸ್ಥಿರತೆ ಕೊಡಬೇಕಾದರೆ ಒಂದು ವ್ಯವಸ್ಥೆ ಇರಬೇಕು ಎಂದು ಋಷಿಮುನಿಗಳು ಗುರುತಿಸಿದರು. ವ್ಯವಸ್ಥಿತವಾದ ಜೀವನಪದ್ಧತಿ, ಅದರಿಂದ ಪ್ರಜೋತ್ಪತ್ತಿಯಾದರೆ ಆಗ ಮಾತ್ರ ಸ್ಥಿರವಾಗಿ, ಶಾಶ್ವತವಾಗಿ ಬಾಳಲು ಸಾಧ್ಯ. ಜೀವಿಗೆ ಜೀವವು ಮಧುವಾಗಲಿಕ್ಕೆ ಸಾಧ್ಯ, ಜೀವನವೂ ಮಧುವಾಗಲಿಕ್ಕೆ ಸಾಧ್ಯ, ತತ್ ಪ್ರಮಾಣವಾಗಿ ಆತ್ಮೋದ್ಧಾರ ಮಾಡುವಂತಹ ಯಾವ ಚಿಂತನೆಯಿದೆ, ಅದೂ ಮಧುವಾಗಲಿಕ್ಕೆ ಸಾಧ್ಯ ಎಂದು ಚಿಂತಿಸಿದರು.

ಹಾಗಾಗಿ ಅದಕ್ಕೆ ಬೇಕಾದ ಹೊಸ ಹೊಸ ಚಿಂತನೆಗಳ ಪರಿಷ್ಕರಣೆ ಕೊಡಬೇಕು. ಹೇಗೆ ಒಂದು ಆಚಾರವನ್ನು ಬಳಕೆಗೆ ತರಬೇಕು? ಒಂದು ವಿಚಾರ ಹೊಳೆದಾಕ್ಷಣ ಅದನ್ನು ಬಳಕೆಗೆ ತರಲು ಸಾಧ್ಯವಿಲ್ಲ. ಅದನ್ನು ಮೊದಲು ಸಂಶೋಧಿಸುತ್ತಾರೆ. ಯಾವ ಯಾವ ಜೀವಿಯಲ್ಲಿ ಯಾವ ಯಾವ ಅಂಶ ಉತ್ತಮವಾಗಿದೆ, ಆ ಅಂಶಗಳನ್ನು ಸೇರಿಸಿ, ಒಟ್ಟು ಮಾಡಿ ಒಂದು ಪ್ರಕ್ರಿಯೆಯಾಗಿ ಮದುವೆ ಎಂಬ ಉತ್ತಮ ವಿಧಾನವನ್ನು ರೂಪಿಸಿ, ಮದುವೆ ಎಂಬುದಾಗಿ ಕರ್ಮಾಂಗವಾಗಿ ಬಳಸಿ ಎಂದು ಬಳಕೆಗೆ ತರುತ್ತಾರೆ. ಅದರಿಂದಾಗಿ ನಿಮ್ಮ ಜೀವನವೂ ಮಧುಯುಕ್ತವಾಗಿರುವುದು, ಜೀವವೂ ಮಧುವಾಗುವುದು ಮತ್ತು ಆತ್ಮೋದ್ಧಾರವೆಂಬ ಸಾಧನೆಯ ಮಾರ್ಗವೂ ಮಧುವಾಗುವುದು ಎಂದು ಋಷಿಮುನಿಗಳು ಗುರುತಿಸಿದರು. ಮದುವೆಯಲ್ಲಿ ವರನಿಗೆ ಬೇಕಾದಂತಹ ವಿವಾಹ ಅರ್ಹತೆಗೆ ಸಂಸ್ಕಾರ, ಶುದ್ಧಿ ಪ್ರಕ್ರಿಯೆಗಳು, ಪ್ರಾಯಶ್ಚಿತ್ತ ಪ್ರಕ್ರಿಯೆಗಳು ಹಿಂದಿನ ದಿನ ನಡೆಯುತ್ತದೆ. ಮರುದಿನ ನಾಂದಿ ಪುಣ್ಯಾಹ ಶೋಭನಾ ದೇವತಾ ಪೂಜೆಗಳು, ನಂತರ ವಧೂ-ವರರನ್ನು ನಿರೀಕ್ಷೆಯಲ್ಲಿ ನಿಲ್ಲಿಸಿ, ಮಾಲಾಧಾರಣೆ, ಪಾಣಿಗ್ರಹಣ, ಗುಡಜೀರಿಕಾ ಪ್ರಯೋಗ, ಹಾಗೆ ಪರಸ್ಪರ ದೃಷ್ಟಿಯ ಸಮ್ಮಿಲನ, ಅಲ್ಲದೆ ಅಗ್ನಿಯಲ್ಲಿ ಲಾಜಾಹೋಮ, ಅಗ್ನಿಸಾಕ್ಷಿ, ಸಪ್ತಪದಿ, ಅರುಂಧತಿ ದರ್ಶನದವರೆಗೆ ಪ್ರಕ್ರಿಯೆಗಳು ನಡೆಯುತ್ತವೆ. ಪ್ರತಿಯೊಂದು ಆಚರಣೆಗೂ ವೈಜ್ಞಾನಿಕ ಅರ್ಥಗಳಿವೆ. ಈಗ ಸಮಷ್ಟಿಯಾಗಿ ವಿವರಿಸಲು ಪ್ರಯತ್ನಿಸುತ್ತೇನೆ.

ಮೊದಲು ವಧೂವರರು ಪರಸ್ಪರ ನೋಡಿಕೊಳ್ಳಬೇಕು. ಅಂದರೆ ಮಾಲಾರ್ಪಣೆಯಾದ ಮೇಲೆ ಅವರಲ್ಲಿ ಪರಸ್ಪರ ದೃಷ್ಟಿಯನ್ನು ಸಂಯೋಜಿಸುವಂತಾದ್ದು. ನಿಮಗೆ ಗೊತ್ತಿರಬಹುದು ಶ್ರೀಸೂಕ್ತ ಮತ್ತು ಪುರುಷಸೂಕ್ತವೆಂಬ ವಿಶೇಷ ಮಂತ್ರಪುಂಜಗಳಿವೆ. ಅದಕ್ಕೆ ಎಷ್ಟು ಪುರಾತನತೆ ಇದೆಯೆಂದರೆ ಸಂಕಲಿತ ವೇದಕ್ಕಿಂತಲೂ ಪೂರ್ವದಲ್ಲಿತ್ತು. ವೇದವು ಪ್ರಪಂಚದಲ್ಲಿ ಪ್ರಕಟವಾಗುವುದಕ್ಕೆ ಮುಂಚೆಯೂ ಶ್ರೀಸೂಕ್ತ ಮತ್ತು ಪುರುಷಸೂಕ್ತವೆಂಬ ವಿಶೇಷ ಮಂತ್ರಪುಂಜಗಳು ಬಳಕೆಯಲ್ಲಿತ್ತು. ಈ ಮಂತ್ರಗಳು ಯಾವಾಗ ಸಂಶೋಧಿಸಲ್ಪಟ್ಟವು ಎಂಬುದಕ್ಕೆ ನಿಖರ ಮಾಹಿತಿ ಇಲ್ಲದಿದ್ದರೂ ಆ ಸ್ವಾಯಂಭೂ ಮನ್ವಂತರ ಕಾಲದಲ್ಲಿ ಸ್ವಾಯಂಭೂ ಮನುವು ಈ ಪ್ರಪಂಚದಲ್ಲಿ ಯಾವ ಸೂತ್ರದಿಂದ ಸೃಷ್ಟಿಯನ್ನು ಮುಂದುವರೆಸಿದ? ಪ್ರಪಂಚದಲ್ಲಿ ಯಾವ್ಯಾವ ಜೀವಿಗಳು ಎಷ್ಟೆಷ್ಟಿರಬೇಕು? ನಾಯಿ, ಹುಲಿ, ಬೆಕ್ಕು, ಕಪ್ಪೆ ಇತ್ಯಾದಿ ಪ್ರಭೇದಗಳು ಎಷ್ಟೆಷ್ಟಿರಬೇಕು? ಹಾಗೆ ಮನುಷ್ಯ, ಗಿಡಮರಗಳು, ವನಮೂಲಿಕೆಗಳು ಎಷ್ಟಿರಬೇಕು? ಎಂಬುದಕ್ಕೆ ಶ್ರೀಸೂಕ್ತ ಮತ್ತು ಪುರುಷಸೂಕ್ತ ಇವುಗಳ ಆಧಾರದಲ್ಲಿ ಎಂದು ಹೇಳುತ್ತದೆ. ಅಂದರೆ ಸ್ವಾಯಂಭೂ ಮನುವಿನ ಕಾಲಕ್ಕಿಂತಲೂ ಹಿಂದೆಯೇ ಈ ಮಂತ್ರಗಳು ಪ್ರಕಟವಾಗಿದ್ದವು ಎಂದು ಹೇಳುತ್ತದೆ. ಈ ಮಂತ್ರಗಳಿಂದ ಈಗಿನ ವ್ಯಾಖ್ಯಾನಕಾರರು ಸಹಜವಾಗಿ ಪರಮಪುರುಷನ ೧೬ ಸ್ವರೂಪವನ್ನು ವರ್ಣನೆ ಮಾಡುತ್ತಾರೆ. ಆಗ ನಿಮಗೆ ಕಂಡುಬರುವುದು ವಿರಾಟ್ ಸ್ವರೂಪನಾದ ಪರಮ ಪುರುಷನಿದ್ದ, ಅವನು ಅಂಗುಷ್ಠ ಪ್ರಮಾಣದ ಸೂಕ್ಷ್ಮದೇಹಿಯಾಗಿ ಆಲದ ಎಲೆಯ ಮೇಲೆ ಮಲಗಿದ್ದ. ಅಂದರೆ ಸೃಷ್ಟಿಯ ಅತೀ ಆದಿ – ಪ್ರಪಂಚವೆಲ್ಲ ಜಲಮಯವಾಗಿದ್ದ ಕಾಲದ ವಿಚಾರಗಳನ್ನು ಹೇಳುತ್ತಾ ಕೊನೆಯಲ್ಲಿ ಈ ನಾದ ಮಾತ್ರ ಅಲ್ಲಿ ತುಂಬಿತ್ತು; ಅದು ಯಾವುದೆಂದರೆ ಶ್ರೀಸೂಕ್ತ ಮತ್ತು ಪುರುಷಸೂಕ್ತವೆಂಬ ಮಂತ್ರಗಳ ನಾದವಾಗಿತ್ತು. ಇದು ಪ್ರಪಂಚವೆಲ್ಲಾ ವ್ಯಾಪಿಸಿತ್ತು. ಇದರಿಂದಾಗಿಯೇ ಪ್ರಪಂಚವೆಲ್ಲ ನಡೆಯುತ್ತಿತ್ತು ಎಂದು ಹೇಳುತ್ತದೆ.

ಅಷ್ಟು ಪುರಾತನವಾದಂತಹ ಶ್ರೀಸೂಕ್ತ ಮತ್ತು ಪುರುಷಸೂಕ್ತವೆಂಬ ಮಂತ್ರಗಳು ಜೀವಶಾಸ್ತ್ರರೀತ್ಯಾ ಗಂಡಿನಲ್ಲಿ ೧೬ ಕಲಾಶಕ್ತಿಯಿರುತ್ತದೆ, ಹಾಗೆ ಪ್ರಕೃತಿಯಾದಂತಹ ಹೆಣ್ಣಿನಲ್ಲಿ ೧೫ ಕಲಾಶಕ್ತಿಗಳಿರುತ್ತವೆ ಎನ್ನುತ್ತದೆ. ಅವೆರಡೂ ಸಮವಾಗಬೇಕು. ಸಮವಾದರೆ ಮಾತ್ರ ಸತ್ಪ್ರಜಾವೃದ್ಧಿ ಸಾಧ್ಯ ಅಥವಾ ಏಕತೆ ಸಾಧ್ಯ ಎಂದು ಹೇಳುತ್ತದೆ. ಅಂದರೆ 15½ ಕಲಾಂಶ ಇಬ್ಬರಲ್ಲೂ ಇರಬೇಕು. ಅಂದರೆ ಅರ್ಧಾಂಶವನ್ನು ಪರಸ್ಪರ ಹಂಚಿಕೊಳ್ಳಬೇಕು. ಆ ಹಂಚಿಕೊಳ್ಳುವ ಪ್ರಕ್ರಿಯೆಯೇ ಪರಸ್ಪರ ದೃಷ್ಟಿಯನ್ನು ವಿನಿಮಯ ಮಾಡಿಕೊಳ್ಳುವಂತಹದ್ದು ಆಗಿರುತ್ತದೆ. ಅದಕ್ಕೆ ಕಿರಣಗಳ ಪರಿಣಾಮ ಅತೀ ಆಗುವುದರಿಂದ ಅದು ಸಮಸ್ಯೆ ಆಗಬಾರದು ಎಂಬುದಕ್ಕಾಗಿ ಜೀರಿಗೆಯನ್ನು ಅರೆದು ಬೆಲ್ಲದಲ್ಲಿ ಲೇಪವನ್ನು ಮಾಡಿ ತಲೆಗೆ ಹಚ್ಚಿ ತಂಪಾಗುವಂತೆ ಮಾಡಿ ಪರಸ್ಪರ ದೃಷ್ಟಿ ಸಂಮಿಲನ ಮಾಡಬೇಕು ಎಂದು ಹೇಳುತ್ತಾರೆ. ಕಿರಣಗಳ ಪರಿಣಾಮ ಅತಿಯಾಗದಂತೆ ಜೀರಿಗೆ ಬೆಲ್ಲವನ್ನು ತಲೆಗೆ ತಂಪಾಗಲು ಹಚ್ಚಬೇಕು. ನಂತರ ಪರಸ್ಪರ ದೃಷ್ಟಿಯ ಮುಖೇನ ಚೈತನ್ಯ ಕಲೆಯನ್ನು ಹಂಚಿಕೊಳ್ಳಬೇಕು ಎಂಬುದು ಅದರ ಅರ್ಥವಾಗಿರುತ್ತದೆ. ಈಗ ಕೇವಲ ನ್ಯಾಸರೂಪವಾಗಿ ಜೀರಿಗೆ ಬೆಲ್ಲ ಇಡುತ್ತಾರೆ. ಅದು ವಿಧಿವತ್ತಾಗಿ ಆಗದಿದ್ದಾಗ ಅಥವಾ ಈ ಔಷಧಿಯ ಪರಿಣಾಮ ಆಗದಿದ್ದಗ ಅಥವಾ ವಧೂವರರಲ್ಲಿ ಯಾರಿಗಾದರೂ ಪ್ರಖರ ಶಕ್ತಿಯಿದ್ದಾಗ ಪರಸ್ಪರ ದೃಷ್ಟಿ ಸಂಮಿಲನ ಕಾಲದಲ್ಲಿ ಮತ್ತೊಂದು ೧೦-೧೫ ನಿಮಿಷದಲ್ಲಿ ವಿಪರೀತ ತಲೆನೋವು ಆರಂಭವಾಗುತ್ತದೆ. ಅದು ಇಬ್ಬರಲ್ಲಿ ಯಾರಿಗೆ ಕೊರತೆ ಇರುತ್ತದೊ ಅವರಿಗೆ ಹೆಚ್ಚಾಗಿ ಪರಿಣಾಮ ಮಾಡುತ್ತದೆ. ಇದು ಎಷ್ಟೋ ವಧೂವರರ ಗಮನಕ್ಕೆ ಬಂದಿರಬಹುದು. ಆ ತಲೆನೋವು ಬರುವುದು ಚೈತನ್ಯಶಕ್ತಿಯನ್ನು ಹಂಚಿಕೊಂಡ ಪರಿಣಾಮವಾಗಿರುತ್ತದೆ.

ಇಂತಹಾ ವೈಜ್ಞಾನಿಕ ಸತ್ಯ ಅಡಕವಾದಂತಹ ಆಚರಣೆಗಳು ನಮ್ಮ ಈ ಮದುವೆ ಎಂಬ ಭಾಗದಲ್ಲಿ ಬಳಕೆಯಲ್ಲಿ ಬಂದಿವೆ. ಅದರ ಉದ್ದೇಶ ಪ್ರಪಂಚವು ಸದಾ ಎತ್ತರಕ್ಕೆ ಏರುತ್ತಾ ಹೋಗಬೇಕು, ಪ್ರಾಪಂಚಿಕವು ಜೀವನಕ್ಕೆ ಅನಿವಾರ್ಯ. ಪ್ರಾಪಂಚಿಕ ಜೀವನದೊಂದಿಗೆ ಪ್ರಪಂಚವನ್ನು ಬೆಳೆಸಬೇಕು, ಸುತ್ತಿನ ಪರಿಸರದೊಂದಿಗೆ ಎತ್ತರಕ್ಕೇರಬೇಕು, ಆ ಎತ್ತರಕ್ಕೆ ಏರುವಂತಹ ವಿಧಿಗಳನ್ನು ಅಳವಡಿಸಿ ಅದನ್ನು ಮದುವೆ ಎಂದು ರೂಪಿಸಿದರು. ಹಾಗಾಗಿ ಅತೀ ಶ್ರೇಷ್ಠವಾದಂತಹ, ಪ್ರತೀ ಜೀವಿಗೂ ಮಧುವಾದಂತಹ ಆ ತನ್ನ ಜೀವವನ್ನು ಶಾಶ್ವತಗೊಳಿಸಿಕೊಳ್ಳುವುದಕ್ಕೆ ಅಥವಾ ಸ್ಥಿರತೆಗೊಳಿಸಿಕೊಳ್ಳುವುದಕ್ಕೆ ಆಗತಕ್ಕಂತಹ ಅತ್ಯತ್ತಮವಾದಂತಹ ಉಪಾಯಮೇ ಈ ಮದುವೆಯೆಂಬ ಪ್ರಕ್ರಿಯೆ.

ಶತಂ ಜೀವಃ ಶರದೋ ವರ್ಧಮಾನಃ ಶತಂ ಹೇಮಂತಾನ್ ಚ್ಛತಮವಸಂತಾನ್ |
ಶತಮಿಂದ್ರಾಗ್ನೀ ಸವಿತಾ ಬೃಹಸ್ಪತಿಃ ಶತಾಯುಷಾ ಹವಿಷೇಮಂ ಪುನರ್ದುಃ || 

ನೂರು ಶರತ್ಕಾಲಗಳನ್ನು ಆನಂದಮಯವಾಗಿ ಕಳೆಯಬೇಕು. ಅಂದರೆ ನೂರು ಶರತ್ಕಾಲಗಳನ್ನು ಆನಂದಮಯವಾಗಿ ಕಳೆಯುವಷ್ಟು ಧೀಶಕ್ತಿಯನ್ನೂ, ದೇಹಶಕ್ತಿಯನ್ನು ಪಡೆಯುವುದಕ್ಕೆ ಬೇಕಾದಂತಹ ಹಂತ ಹಂತವಾದ ಎಲ್ಲಾ ಆಚರಣೆಗಳೂ ಈ ಮದುವೆ ಎಂಬ ಪ್ರಕ್ರಿಯೆಯಲ್ಲಿ ಬಳಕೆಯಲ್ಲಿದೆ. ಈಗ ನ್ಯಾಸರೂಪವಾಗಿ ಮಾತ್ರ ಮಾಡುತ್ತೇವೆ. ಅದನ್ನು ವಿಸ್ತಾರವಾಗಿ ಮಾಡುವುದಾದರೆ ಕಡಿಮೆ ಎಂದರೆ ೧೬ ದಿನಗಳ ಕಾಲ ಈ ಮದುವೆಯೆಂಬ ಪ್ರಕ್ರಿಯೆಯನ್ನು ನಡೆಸಬೇಕು. ಈಗ ನಡೆಯುವ ೧೬ ನಿಮಿಷದ ಮದುವೆಯಲ್ಲಿ ಆಗುವುದಿಲ್ಲ. ೧೬ ದಿನಗಳ ಕಾಲ ನಡೆಯುವ ಮದುವೆಯಲ್ಲಿ ಮನುಷ್ಯನು ದೀರ್ಘಾಯುಷಿಯಾಗಿ ಬದುಕಬಹುದು, ಹೆಚ್ಚು ಕಾಲ ಯಶಸ್ಸಿನ ಬದುಕನ್ನು ಬದುಕಬಹುದು, ಹೆಚ್ಚು ಆನಂದದಾಯಕವಾದ ಜೀವನವನ್ನು ಮಾಡಬಹುದು, ಅಂತಹ ಎಲ್ಲಾ ಉಪಾಯಗಳನ್ನು ಸೇರಿಸಿ, ಅದಕ್ಕೆ ಬೇಕಾದಂತಹ ವೈಜ್ಞಾನಿಕ ಉಪಾಯಗಳನ್ನು ಆಚರಣೆಯಲ್ಲಿ ತಂದು ಈ ಮದುವೆ ಎಂದು ಹೇಳತಕ್ಕಂತಹ ಪ್ರಕ್ರಿಯೆಯನ್ನು ರೂಪಿಸಿದ್ದಾರೆ. ಹಾಗಾಗಿ ಮದುವೆ ಎಂಬುದು ೩ ರೀತಿಯಲ್ಲಿ ವಧೂವರರಿಗೆ ಒದಗಿಸಿಕೊಡತಕ್ಕಂತಹ ಒಂದು ಆಚರಣೆ.

(ಸಶೇಷ..)

4 comments:

 1. Can you please provide the reference for the below statement "ನಿಮಗೆ ಗೊತ್ತಿರಬಹುದು ಶ್ರೀಸೂಕ್ತ ಮತ್ತು ಪುರುಷಸೂಕ್ತವೆಂಬ ವಿಶೇಷ ಮಂತ್ರಪುಂಜಗಳಿವೆ. ಅದಕ್ಕೆ ಎಷ್ಟು ಪುರಾತನತೆ ಇದೆಯೆಂದರೆ ಸಂಕಲಿತ ವೇದಕ್ಕಿಂತಲೂ ಪೂರ್ವದಲ್ಲಿತ್ತು. ವೇದವು ಪ್ರಪಂಚದಲ್ಲಿ ಪ್ರಕಟವಾಗುವುದಕ್ಕೆ ಮುಂಚೆಯೂ ಶ್ರೀಸೂಕ್ತ ಮತ್ತು ಪುರುಷಸೂಕ್ತವೆಂಬ ವಿಶೇಷ ಮಂತ್ರಪುಂಜಗಳು ಬಳಕೆಯಲ್ಲಿತ್ತು."

  ReplyDelete
  Replies
  1. Vaidhika BhautaShaastra, Kalpa Sutras in Tantra Shaastra spread in 64 Tantra Samucchayaas, original Vedic Meemaamsa Vruttis by Rishis. All are in Brahmi Script & language.

   Delete
 2. Sree Sooktha and Purusha Sooktha are part of the Rig and Yajur Samhita. Rig and Yajur Samhitá's have their first Hymns as - "Agnimeeley Purohitam...." and "Isheytworjetva..." respectively. I am interested to know where it is mentioned that Sreesooktha and Purusha Sooktha were in vogue before the first hymns of veda's were realized by Rishi's. Dhanyavaad....

  ReplyDelete
 3. ಇದೀಗ ಶ್ವೇತವರಾಹ ಕಲ್ಪ. ಇದರ ಹಿಂದಿನ ಕಲ್ಪದಾ ಕೊನೆಯಲ್ಲಿ ಮೇರುವಿನ ಉತ್ತರದಲ್ಲಿ ಉಂಟಾದ ಜಲಪ್ರಳಯದಲ್ಲಿ ಕಾಪಾಡಿಕೊಂಡು ಬಂದ ಜೀವ ಸಂಕುಲವೇ ನಾವೀಗ ಪಾರ್ಥಿವರಾಗಿ ಉಳಿದಿರಲು ಕಾರಣ. ಪುರಾಣ ಸಾರುತಿದೆ ಆ ಸಮಯದಲ್ಲಿ ಬಂದ ಮಾಯಾಮತ್ಸ್ಯ, ಅದರೊಂದಿಗೆ ವಿಷ್ಣುವಿನ ಪ್ರಥಮ ಅವತಾರ ಮಹಾಮತ್ಸ್ಯವು ಹಿಡಿತು ತಂದ ವೇದವೇ ನಮಗೀಗ ಲಭ್ಯ. ಹಾಗಾಗಿ ಹಿಂದೆ ಇದ್ದದ್ದು ವೇದ ಒಂದೇ. ಅದೊಂದು ಪುಸ್ತಕವಲ್ಲ, ಛಂದೋಬದ್ಧತೆಯಲ್ಲಿರುವ ವೇದತರಂಗ ಸೂತ್ರ. ಎಲ್ಲಾ ಜ್ಞಾನವೂ ಬೀಜಸ್ವರೂಪದಲ್ಲಿ ನ್ಯಸ್ತವಾಗಿತ್ತು ಅದರಲ್ಲಿ. ಅದನ್ನು ಕಶ್ಯಪನ ಕೈಯಲ್ಲಿತ್ತು ಮಹಾಮತ್ಸ್ಯವು ಸಹಸ್ರಾರು ವರ್ಷಗಳ ಕಾಲ ಮಾಯಾಮತ್ಸ್ಯದೊಂದಿಗೆ ಹೋರಾಡುತ್ತಿತ್ತು. ಅಲ್ಲಿಂದ ವೇದವಿಡಿದು ಹೊರಬಂದ ಕಶ್ಯಪನು ಸೃಷ್ಟಿ ಪ್ರಕ್ರಿಯೆಗಾಗಿ ಚಿಂತಿಸುತ್ತಿದ್ದನು. ಆಗ ಮಂಡೂಕ ಋಷಿಗಣರ ಸಮ್ಮುಖದಲ್ಲಿ ಹಲವು ಲಕ್ಷ ಯಜ್ಞ-ಯಾಗ ಸೂತ್ರಗಳನ್ನು ನಿರೂಪಿಸಿದರು. ಬೀಜ ರೂಪದಲ್ಲಿದ ವೇದವನ್ನು ಸತತ ತಪೋ ನಿರತರಾಗಿ ಮಂತ್ರ ರೂಪದಲ್ಲಿ ದ್ರಷ್ಟಿಸಿದ್ದರಿಂದ ಆಯಾ ಋಷಿಗಳು ವೇದ ದ್ರಷ್ಟಾರರಾದರು. ಅವರವರು ಪ್ರಕೃತಿಯಲ್ಲಿ ವೇದಬೀಜವನ್ನು ಬಿತ್ತಿ ನಾದಾನುಸಂಧಾನ ಎಂಬ ತಪಸ್ಸಿನಿಂದ ಕಂಡುಕೊಂಡ ಪರಮೋಚ್ಛ ಜ್ಞಾನವೇ ವಿಸ್ತರಿತ ವೇದ ಮಂತ್ರಗಳು. ಅದು ಅವರವರ ಪರಂಪರೆಯಲ್ಲಿ ಅನೂಚಾನವಾಗಿ ಉಳಿದುಕೊಂಡು ಬರುತ್ತಿತ್ತು. ಅಂತಹಾ ಸಮಾನ ವಿಭಾಗಗಳು ಪ್ರಧಾನವಾಗಿ ೪ ರೀತಿಯಲ್ಲಿ ಕಂಡುಬರುತ್ತಿತ್ತು. ಹಾಗೂ ಅದು ೧೪ ವಿಭಾಗಗಳಾಗಿ ವಿಧ್ಯಾ ಸ್ವರೂಪದಲ್ಲಿ ಪ್ರಚಲಿತ್ತವಿತ್ತು. ಹಾಗಾಗಿ ಮೂಲವೇದವು ಒಂದರಿಂದ ನಾಲ್ಕಾಗಿ, ಹದಿನಾಲ್ಕಾಗಿ, ಹದಿನೆಂಟಾಯಿತು. ಇದರಿಂದಲೇ ಮುಂದೆ ೧೮ ಸ್ಮೃತಿಗಳಾಯಿತು.

  ಸಮಗ್ರ ವೇದಜ್ಞಾನದ ಅಧ್ಯಯನವು ಕಷ್ಟವಾಗುತ್ತಾ ಬಂದಾಗ, ಜ್ಞಾನದ ಸಮಗ್ರತೆಯನ್ನು ಸಾಧಿಸಲು ಇಂತಹಾ ಎಲ್ಲಾ ಋಷಿ ಪರಂಪರೆಯಿಂದ ೬ ಪರೀಕ್ಷೆಗಳಿಗೆ ಒಳಪಡಿಸಿ ಯಾವುದೇ ರೀತಿಯ ಕಿಂಚಿತ್ ಲೋಪದೋಷಗಳಿಲ್ಲದಂತಹಾ ಮಂತ್ರಗಳನ್ನು ಅದರದ್ದಾದ ನಿಯಮದಂತೆ ಶ್ರೇಷ್ಠವೆಂದು ಗುರುತಿಸಿ, ಬಳಕೆಗೆ ಬೇಕಾಗಿ ವಿವಿಧ ಸಮೀಕರಣ, ಸೂತ್ರ, ನಾನಾರ್ಥ ಬಿಂಬಿಸುವಂತಹಾ "ವೇದ ಸಂಕಲನ ಸೂತ್ರದಿಂದ" ಮುಂದೆ ವ್ಯಾಸರು ಪ್ರಧಾನ ೪ ಶಾಖೆಗಳಾಗಿಯೂ, ೭ ಉಪವೇದಗಳೂ ಆಗಿ ವೇದವು ಏಕಾದಶ (೧೧) ಎಂದು ವಿಭಜಿಸಿದರು.

  ವೇದ ಸಂಕಲನ ಸೂತ್ರಕ್ಕೆ ಭಿನ್ನವಾದವುಗಳನ್ನು ಪರಿಶಿಷ್ಟದಲ್ಲಿ ಸೇರಿಸಿದರು. ಆದರೆ ಅದು ನಿರುಪಯುಕ್ತವೆಂದಲ್ಲ. ಸಂಕಲನ ಸೂತ್ರಕ್ಕೆ ಸೇರುವುದಿಲ್ಲ ಎಂದರ್ಥ. ಆದರೂ ಅದನ್ನು ಉಳಿಸಿಕೊಂಡು ಬಂದರು. ಅದರಲ್ಲಿ ಶ್ರೀಸೂಕ್ತವೂ ಒಂದು. ಇತ್ತೀಚೆಗೆ ೧೦೦ ವರ್ಷದ ಅಂತರದಲ್ಲೂ ನಾವು ತಿಳಿದಂತೆ ಕರ್ನಾಟಕದಲ್ಲೇ ಹಲವು ಪಾಠಶಾಲೆಗಳಲ್ಲಿ ಋಗ್ವೇದದ ೧೦ನೇ ಮಂಡಲವನ್ನು ಪಾಠ ಮಾಡುತ್ತಿರಲಿಲ್ಲ. ಅದರಲ್ಲಿ ಪವಮಾನ ಮಾತ್ರ ಪಾಠ. ಉಳಿಕೆ ಹಲವು ಭಿನ್ನ ಭಿನ್ನ ವಿಚಾರಗಳಿವೆ ಎಂದು ನಿಲ್ಲಿಸುತ್ತಿದ್ದರು. ೧೦ನೇ ಮಂಡಲದಲ್ಲಿ ದೊರಕುವುದೇ ನಿಮಗೆ ಪುರುಷಸೂಕ್ತ.

  ತರಂಗ ವಿಧ್ಯೆಯನ್ನು ಅಭ್ಯಸಿಸಿದ ಋಷಿಗಳು ಹೇಳಿದ್ದೇನೆಂದರೆ ಹಿಂದೆ ಪ್ರಪಂಚವ್ಯಾಪಿಯಾದ ನಾದ ಒಂದೇ ಇದ್ದಿತು. ಅದರ ಚಲನೆಯ ಕಾಲದಲ್ಲಿ ಉಂಟಾದ ಘರ್ಷಣೆಯಿಂದ ಋಣಾಂಶವು ಉತ್ಪನ್ನವಾಯಿತು. ಅದನ್ನೇ ಪ್ರಕೃತಿ + ಪುರುಷ, ಯೋಗ + ಮಾಯೆ, ಎಂದೆಲ್ಲ ಗುರುತಿಸಿದರು. ಈ ರೀತಿ ಮೂಲ ನಾದವು ಪ್ರವಹಿಸುತ್ತಿದ್ದ ಗುಣವನ್ನು ತರಂಗ ನಿಯಮದಂತೆ ಗುರುತಿಸಲಾಗಿ ದೊರಕಿದ ತರಂಗಗಳೇ ಈ ಶ್ರೀಸೂಕ್ತ ಮತ್ತು ಪುರುಷಸೂಕ್ತದ ತರಂಗಗಳು. ವೇದ ಸಂಕಲನ ಸೂತ್ರಗಳಲ್ಲಿ ಅದರ ನಾದಾನುಸಂಧಾನದಿಂದ ತಿಳಿದುಬರುವ ಸತ್ಯ ವಿಚಾರಗಳಾಗಿವೆ. ಅದಕ್ಕೆ ಕುರುಹುಗಳಾಗಿ ಹಲವು ಮಂತ್ರಗಳಲ್ಲಿ ಸೂಚ್ಯವಾಗಿ ಈ ೨ ತರಂಗಗಳು ಹೇಗೆ ಸೃಷ್ಟಿ ಆದಿಯಲ್ಲಿ ಪ್ರವರ್ತಿಸುತ್ತಿದ್ದವು ಎಂದು ವಿವರಿಸುತ್ತದೆ. ಅದಕ್ಕೆ ದೃಷ್ಟಾಂತವೆಂಬಂತೆ ಶ್ರೀಸೂಕ್ತ ಮತ್ತು ಪುರುಷಸೂಕ್ತಗಳ ನಾದ ತರಂಗಗಳು ಪೂರಕವಾಗಿವೆ. ಅದು ಕಲ್ಪಾಂತರ ಜ್ಞಾನವಾಗಿದೆ ಎಂದು ವೇದ ಸಂಕಲನಕಾರರೂ ತಿಳಿಸಿದ್ದಾರೆ. ಹೆಚ್ಚಿನ ಅಧ್ಯಯನಕ್ಕಾಗಿ ವೇದೋಕ್ತ ತರಂಗ ವಿಜ್ಞಾನವನ್ನು ಅಭ್ಯಸಿಸಿ, ನಿಮಗೇ ಅರ್ಥವಾಗುತ್ತದೆ.

  ReplyDelete

Note: only a member of this blog may post a comment.