Monday, 30 September 2013

ಯೋಗಮಾಲೆ ಅಥವಾ ಸಾಧನಾ ಮಾಲೆ


|| ಶ್ರೀ ಗುರುಭ್ಯೋ ನಮಃ ||

ಯೋಗಮಾಲೆ ಅಥವಾ ಸಾಧನಾ ಮಾಲೆ

ಮಾಲೆಗಳ ಕುರಿತು ಒಂದು ಪರಿಚಯ ಲೇಖನ

      ಮುಖ್ಯವಾಗಿ ನಮ್ಮ ಭಾರತೀಯ ಪರಂಪರೆಯಲ್ಲಿ ವಿಶಿಷ್ಟವಾದ ಕೆಲ ಮಾಲೆಗಳ ಇತಿಹಾಸ ಕಂಡುಬರುತ್ತವೆ.  ಹಾಗೇ ತಂತ್ರಶಾಸ್ತ್ರಗಳಲ್ಲಿ ಕೆಲ ಮಾಲೆಗಳ ಕುರಿತು ವಿಶೇಷ ಮಾಹಿತಿ ಇರುತ್ತವೆ. ಅಲ್ಲದೆ ಋಗ್ವೇದದ ಕೆಲ ಭಾಗದಲ್ಲಿ ಮಣಿವಿಧ್ಯಾ ರೂಪದಲ್ಲಿ, ಅಥರ್ವಣದಲ್ಲಿ ಹಲವು ರೀತಿಯ ಮಣಿವಿಧ್ಯೆಗಳೂ ಕಂಡು ಬರುತ್ತವೆ. ರತ್ನಗಳನ್ನು ಮಾಲೆಗಳಾಗಿ ಸಂಯೋಜಿಸುವ ತಂತ್ರಜ್ಞಾನ ಭಾರತೀಯವಾಗಿ ಪುರಾತನ. ಅಲ್ಲದೆ ಕೆಲ ವಿಶಿಷ್ಟ ರತ್ನಗಳ ಗುಣ, ಧಾತು, ಶಕ್ತಿ, ಕಾಠಿಣ್ಯ, ಕಿರಣ, ಪ್ರಕಾಶ, ತೀಕ್ಷ್ಣತೆ, ಬಲ, ಯೋಗ, ಸಾಮ್ಯಗಳೂ ವರ್ಣಿಸಲ್ಪಟ್ಟಿವೆ. ಈ ದಶವಿಧದಲ್ಲಿ ಶ್ರೇಷ್ಠವೆನಿಸಿದ ರತ್ನಗಳ ಪರಿಚಯವನ್ನೂ ಕೂಡ ಹಲವು ಗ್ರಂಥಗಳಲ್ಲಿ ಉದಾಹರಿಸಲ್ಪಟ್ಟಿದೆ. ಹಾಗಾಗಿ ಈ ಬಗ್ಗೆ ಒಂದು ವಿಶೇಷ ಅಧ್ಯಯನ ಲೇಖನವೇ ಈ ಭಾಗ. ಓದಿ ಅರ್ಥಮಾಡಿಕೊಳ್ಳಿರಿ. ಹಾಗೆಯೇ ಯೋಗಿನೀ ತಂತ್ರಾಧಾರಿತವಾದ ಒಂದು ಏಕೋತ್ತರ ಚತುರ್ಥಿ ಸೂತ್ರಾಧಾರಿತವಾದ ಮಣಿಮಾಲೆಯ ಬಗ್ಗೆ ವಿಸ್ತೃತ ವಿವರಣೆ ಸಚಿತ್ರ ಲೇಖನವೂ ಇರುತ್ತದೆ.
   ಮೊದಲು ಕೆಲ ವಿಶಿಷ್ಟ ಮಾಲೆಗಳ ಪರಿಚಯ ಮಾಡಿಕೊಳ್ಳೋಣ.  ಪುರಾಣೇತಿಹಾಸಗಳಲ್ಲಿ ಕೌಸ್ತುಭ, ವೈಜಯಂತಿ, ಚಂಪಕಾವಳಿ, ಮುಕ್ತಾವಳಿ, ರತ್ನಾವಳಿ, ವಿಜಯಮಾಲೆಗಳು  ಕ್ರಮವಾಗಿ ವಿಷ್ಣು, ಇಂದ್ರ, ಕುಬೇರ, ವರುಣ, ನಿರುತಿ, ಧರ್ಮರು ಧರಿಸಿದ್ದರೆಂದು ಕಂಡುಬರುತ್ತದೆ. ಅವೆಲ್ಲಾ ಕೆಲ ವಿಶಿಷ್ಟ ಗುಣಗಳನ್ನು ಹೊಂದಿದ್ದು ವಿಶೇಷವಾಗಿತ್ತು ಅಲ್ಲದೆ ಅಂಬರೀಶ, ಪೃಥು, ಯಯಾತಿ, ಧ್ರುವ, ಅನಿಮಿಷ, ಯುಯುತ್ಸು, ವಾಲಿ, ಕರ್ಣ, ಧೃಷ್ಟಕೇತು, ಕಾರ್ತಿವೀರ್ಯ, ರಾವಣ, ತ್ರಿಶಿರ, ತ್ವಷ್ಟೃ, ಶತ್ರುಘ್ನ, ಮನ್ಮಥ, ಪ್ರದ್ಯುಮ್ನ, ಕೃಷ್ಣ, ಯುಧಾಚಿತ್ತು, ಭಗದತ್ತ ಇವರೂ ಕೆಲ ವಿಶಿಷ್ಟ ವಿಜಯ ಸಾಧನೆಗಾಗಿ ಮಾಲಾಧಾರಣೆ ಮಾಡಿದ್ದ ಉದಾಹರಣೆ ಸಿಗುತ್ತದೆ.  ಹಾಗೇ ಜೊತೆ ಜೊತೆಯಲ್ಲಿಯೇ ವಿಶೇಷ ರತ್ನಗಳೂ ಧಾರಣೆ ಮಾಡಿದ್ದು ಕಂಡು ಬರುತ್ತದೆ. ಉದಾಹರಣೆಗೆ ಸ್ಯಮಂತಕ ಮಣಿ, ದರ್ಭಮಣಿ, ಔದುಂಬರ ಮಣಿ ಇತ್ಯಾದಿ ಇತ್ಯಾದಿಗಳು. ವೇದಗಳಲ್ಲಿ ವಿಶೇಷವಾದ ಮಣಿವಿಧ್ಯೆಗಳೇ ಹಲವಾರಿವೆ. ಒಂದು ವಿಶೇಷ ಉದ್ದೇಶ ಹೊಂದಿ ಶ್ರೇಷ್ಠ ವಿಚಾರಗಳ ಉತ್ಖನನಕ್ಕಾಗಿ ನಡೆಸುವ ಸಂಶೋಧನೆಗೆ ಈ ಮಣಿ ವಿಧ್ಯೆಗಳು ಸಹಕಾರಿ ಎಂಬುದಕ್ಕೆ ಎರಡು ಮಾತಿಲ್ಲ. ಇತಿಹಾಸದಲ್ಲಿ ಶಶಿಪ್ರಭೆಯೆಂಬ ಮಲೆಯಾಳದ ರಾಣಿ ಒಂದು ವಿಶಿಷ್ಟ ಮಾಲಾಧಾರಣೆ  ಮಾಡಿದ್ದಳು, ಅಜೇಯಳಾಗಿದ್ದಳು. ಕೊನೆಗೆ ಮಾರ್ತಾಂಡವರ್ಮನು ಅದೃಶ್ಯಕರಣಿ ಬಳಸಿ ಸರ ಅಪಹರಿಸಿ ಅವಳನ್ನು ಜಯಿಸಿ ವರಿಸಿದ. ಇದು ಇತಿಹಾಸ. ಇಂತಹಾ ಎಷ್ಟೋ ಪೌರಾಣಿಕ, ಐತಿಹಾಸಿಕ ಉದಾಹರಣೆಗಳು ಕಂಡು ಬರುತ್ತವೆ. ಹಾಗೆ ಶಿರಸ್ಸಿನಲ್ಲಿ ಅಶ್ವತ್ಥಾಮ ಮಣಿ ಧಾರಣೆ ಮಾಡಿದ. ಎದೆಯಲ್ಲಿ ಹಲವು ಜನ ವಿಶಿಷ್ಟ ಮಣಿ ಧಾರಣೆ ಮಾಡಿದ್ದಾರೆ. ಉದರಭಾಗದಲ್ಲಿ ಧಾರಣೆ ಮಾಡಿದ ಮಣಿಗಳ ವಿವರವೂ ಸಾಕಷ್ಟಿದೆ. ಹಾಗೆ ಕೈಯಲ್ಲಿ ಬೆರಳುಗಳಲ್ಲಿ ಧರಿಸಿದ ಮಣಿಗಳ ವಿಶಿಷ್ಟತೆಯೂ ಉದಾಹರಣೆ ಸಿಗುತ್ತದೆ.  ತತ್ಕಾಲದಲ್ಲಿ ಹರಳು ಧಾರಣೆ ಮಾರಾಟ ಒಂದು ದೊಡ್ಡ ವ್ಯಾಪಾರವೇ ಆಗಿರುತ್ತದೆ. ಇವೆಲ್ಲದರ ಹಿನ್ನೆಲೆಯಲ್ಲಿ ನಮ್ಮ ಪುರಾತನ ತಂತ್ರಶಾಸ್ತ್ರದ ಅಭಿಮತವೇನು ವೇದವು ಹೇಳಿದ ಮಣಿ ವಿಧ್ಯಾ ರಹಸ್ಯವೇನು ಎಂಬುದರ ಬಗ್ಗೆ ನಡೆಸಿದ ಅಧ್ಯಯನದ ಒಂದು ಸೂಕ್ಷ್ಮ ವಿವರಣೆಯೇ ಈ ಲೇಖನದ ಉದ್ದೇಶವಾಗಿರುತ್ತದೆ. ಇಲ್ಲಿ ಬರೆದ ವಿಚಾರಗಳೆಲ್ಲವೂ ಸಾಧಾರವಾಗಿರುತ್ತವೆ ಮತ್ತು ಆ ಸಂಬಂಧಿ ಸಂಶೋಧನೆಗಳಿಂದ ದೃಢಪಡಿಸಿರುವುದಾಗಿರುತ್ತದೆ ಎಂದು ಈ ಮೂಲಕ ಸ್ಪಷ್ಟಪಡಿಸುತ್ತೇನೆ. 

      ಈ ರೀತಿಯಲ್ಲಿ ಪುರಾತನ ತಂತ್ರಗ್ರಂಥಗಳನ್ನು ಅಧ್ಯಯನ ಮಾಡುತ್ತಾ ಹೋದಾಗ ಮಣಿ ವಿಧ್ಯೆಗಳೆಲ್ಲದರ ಬಗ್ಗೆ ಕೆಲ ಸುಳಿವುಗಳು ಕಂಡು ಬಂದವು.  ವೇದದಲ್ಲಿ ಪವಿತ್ರ ಧಾರಣೆ ಬಗ್ಗೆ ಮತ್ತು ಅದನ್ನು ಧರಿಸಿ ವಿಶೇಷ ಕಾರ್ಯಕ್ಷಮತೆ ಹೇಗೆ ಪಡೆಯಬಹುದು ಎಂಬ ಬಗ್ಗೆ ನಿರ್ದಿಷ್ಟ ಮಾಹಿತಿ ಇರುತ್ತದೆ. ಅದು ಅಥರ್ವವೇದೀಯ ದರ್ಭಮಣಿ ಎಂಬ ವಿಶಿಷ್ಟ ವಿಧ್ಯೆಯ ಪ್ರಯೋಗವಾಗಿದೆ.  ಕೆಲ ಮಂತ್ರಗಳಿಂದ ಮತ್ತು ಒಂದು ವಿಶಿಷ್ಟ ರೀತಿಯ ಗ್ರಂಥಿಯನ್ನು ಸಂಯೋಜಿಸಿ ಧಾರಣೆ ಮಾಡಿದ ವ್ಯಕ್ತಿಯಲ್ಲಿ ವಿಶಿಷ್ಟವಾದ ಕರ್ತೃತ್ವಶಕ್ತಿ ಕ್ರೋಢೀಕರಿಸಲು ಸಾಧ್ಯವೆಂದು ಪವಿತ್ರ ಋಷಿಯು ಕಂಡು ಹಿಡಿದ. ಹಾಗಾಗಿ ಆ ದರ್ಭೆಯ ಧಾರಣಾಯೋಗ್ಯ ಗ್ರಂಥಿ ಸಂಯೋಜನೆಗೆ ಪವಿತ್ರವೆಂದೇ ಹೆಸರು. 

ಪವಿತ್ರಂ ತೇ ವಿತತಂ ಬ್ರಹ್ಮಣಸ್ಪತೇ ಪ್ರಭುರ್ಗಾತ್ರಾಣಿ ಪರ್ಯೇಷಿ ವಿಶ್ವತಃ | ಅತಪ್ತತನೂರ್ನತದಾಮೋ ಅಶ್ನುತೇ ಶೃತಾಸ ಇದ್ವಹಂತಸ್ತತ್ಸಮಾಶತ ||

      ಎಂಬಂತೆ ಅದನ್ನು ಧರಿಸಿದ ವ್ಯಕ್ತಿಯು ಇದ್ಮನಾಗಿ ಶುದ್ಧ ಪ್ರಕ್ರಿಯೆ ನಡೆಸುವ ಶಕ್ತಿ ಪಡೆಯುತ್ತಾನೆಯೆಂಬುದು ಸತ್ಯ.  ಆದರೆ ಅದರಲ್ಲಿರುವ ತಂತ್ರವೇನು? ಅದಕ್ಕೆ ಸಿಗುವುದು ನಾಳಾತಂತ್ರದಲ್ಲಿ.  ತೀಕ್ಷ್ಣವಾದ ಅಗ್ರವುಳ್ಳ ದರ್ಭೆಗಳೆರಡು ಪರಸ್ಪರ ತಮ್ಮಲ್ಲೇ ಸುತ್ತಿಕೊಳ್ಳುತ್ತಾ ಒಳಗಿನ ಸೂಕ್ಷ್ಮನಾಳದಲ್ಲಿ ಹರಿಯುವ ಪ್ರಕೃತಿ ಸಂವೇದನೆಯು ಗ್ರಂಥಿಯ ಆಕಾರದಲ್ಲಿ ಹರಿದಾಗ ಧರಿಸಿದ ವ್ಯಕ್ತಿಗೆ ಪ್ರಚೋದನೆ ಕೊಟ್ಟು ಅವನಲ್ಲಿ ಶೃದ್ಧೆ, ನಿಷ್ಠೆ ಮೂಡಿಸುತ್ತಾ ಅವನನ್ನು ಸಮರ್ಥನನ್ನಾಗಿ ರೂಪಿಸುತ್ತದೆಯೆನ್ನುತ್ತದೆ ನಾಳಾತಂತ್ರ. ಹೀಗೆ ಅಥರ್ವ ವೇದಾಂತರ್ಗತವಾದ ಜಂಗಿಡಮಣಿ”, ಔದುಂಬರಮಣಿ”, ದರ್ಭಮಣಿ”, ಧೂಲಮಣಿ”, ಶಂಖಮಣಿ ಗರ್ಭಮಣಿ”, ಚಕ್ರಮಣಿ”, ರಕ್ತಮಣಿ”, ವರಮಣಿ”, ಅಶ್ವಮಣಿ”, ಗಜಮಣಿ”, ಅಜಮಣಿ ಗಳೆಂಬ ದ್ವಾದಶ ಮಣಿವಿಧ್ಯೆಗಳ ಬಗ್ಗೆ ವಿಶೇಷಾಧ್ಯಯನವಾದದ್ದು ಕಂಡುಬರುತ್ತದೆ. ಅವೆಲ್ಲಾ ಸ್ವಾಭಾವಿಕವಾಗಿ ಮಾನವನ ಜೀವನದಲ್ಲಿ ಅವನ ಕರ್ತೃತ್ವಶಕ್ತಿ ಹೆಚ್ಚಿಸಿ ಸಮರ್ಥನಾಗಿ ರೂಪಿಸುವ ವಿಧ್ಯೆಗಳು ಎಂಬುದು ನಿರ್ವಿವಾದ. ಋಗ್ವೇದದಲ್ಲಿಯೂ ಕಾಣ್ವರು, ಭರದ್ವಾಜರು, ಗೃತ್ಸಮದರೂ ಅಲ್ಲದೆ ಸೋಮಕರೂ ಕೂಡ ಹಲವು ಬಗೆಯ ವಿಶಿಷ್ಟಮಣಿ+ಮಾಲೆಗಳ ಬಗ್ಗೆ ಅಧ್ಯಯನ ಮಾಡಿ ಬರೆದಿದ್ದಾರೆ. ಅವನ್ನೆಲ್ಲಾ ಕ್ರೋಢೀಕರಿಸುತ್ತಾ ತಂತ್ರಶಾಸ್ತ್ರಗಳಲ್ಲಿ ಅನ್ವೇಷಣೆ ಮಾಡಿದಾಗ ಗಾಂಧಾರ ತಂತ್ರಗಳಲ್ಲಿ, ಆರ್ಯಾವರ್ತ ತಂತ್ರಗಳಲ್ಲಿ, ಬ್ರಹ್ಮಾವರ್ತ ತಂತ್ರಗಳಲ್ಲಿ ಅಲ್ಲದೇ ಇಲ್ಲಿನ ದಾಕ್ಷಿಣಾತ್ಯ ತಂತ್ರಗಳಲ್ಲಿಯೂ ಕೂಡ ಈ ಬಗ್ಗೆ ವಿಶೇಷ ಸಂಶೋಧನೆಯಾದದ್ದು ಕಂಡು ಬರುತ್ತದೆ. ಅವುಗಳಲ್ಲಿ ಮುಖ್ಯವಾದದ್ದು ಯೋಗಿನೀತಂತ್ರ.
      ಇತರೆ ತಂತ್ರಗಳಲ್ಲಿ ಹಲವು ರೀತಿಯ ಐಹಿಕ, ಪ್ರಾಪಂಚಿಕ ಲಾಭದಾಯಕ ಮಣಿ, ಮಾಲೆಗಳ ಬಗ್ಗೆ ವಿಸ್ತೃತ ಅಧ್ಯಯನವಾಗಿದೆ. ಆದರೆ ಯೋಗಿನೀ ತಂತ್ರದಲ್ಲಿ ಹಾಗಲ್ಲ ಆತ್ಮೋನ್ನತಿ ಸಾಧನೆಗೆ, ಸಾಧನಾಶಕ್ತಿ ವೃದ್ಧಿಗೆ, ಶಕ್ತಿಯ ಕ್ರೋಢೀಕರಣಕ್ಕೆ ಆಧರಿಸಿ ಕೆಲ ವಿಶಿಷ್ಟ ಮಣಿ ಮಾಲೆಗಳನ್ನು ಉದಾಹರಿಸಿ ರತ್ನಗಳನ್ನು ಹೆಸರಿಸಿ ಅದರ ಸಂಯೋಜನೆ ಬಗ್ಗೆ ವಿವರವಾಗಿ ತಿಳಿಸಲಾಗಿದೆ. ಮಣಿ ಸಂಯೋಜನೆ ಹೇಗಿರಬೇಕು? ಮಣಿಗಳ ಗುಣಮಟ್ಟ ಹೇಗಿರಬೇಕು?  ಅದರ ಸಾಧನಾಶಕ್ತಿ ಹೇಗೆ ಕೆಲಸ ಮಾಡುತ್ತದೆ? ಎಂಬ ವಿಚಾರವಾಗಿ ವಿಸ್ತೃತ ಸಂಶೋಧನೆ ನಡೆದಿರುತ್ತದೆ. ಯೋಗಿಯೊಬ್ಬನು ಮಾಲಾಧಾರಣೆ ಮಾಡುವುದರಿಂದ ತನ್ನ ಯೋಗಶಕ್ತಿಯನ್ನು ಹೇಗೆ ವೃದ್ಧಿಸಿಕೊಳ್ಳಬಲ್ಲನೆಂಬ ವಿವರ ಅಧಿಕೃತವಾಗಿ ನಿರೂಪಿತಗೊಂಡಿರುತ್ತದೆ. ಆ ಸಂಬಂಧಿಯಾದ ಒಂದು ಸಾಧನಾಮಾಲೆ ಅಥವಾ ಯೋಗಮಾಲೆಯ ಕುರಿತು ಈ ಲೇಖನ ಸಿದ್ಧಪಡಿಸಿದ್ದೇನೆ. ಮಾಲೆ, ಮಣಿಗಳ ವಿವರ, ಚಿತ್ರಪಟ, ಸಾಧನಾಶಕ್ತಿಯ ಪರಮಾವಧಿಯೆಲ್ಲವನ್ನೂ ಬರೆದು ನಿಯಮಾವಳಿಗಳನ್ನೂ ಬರೆದಿರುತ್ತೇನೆ. ಓದಿ ಸಾಧಕರಾಗಿ ಎಂಬ ಕಳಕಳಿಯೊಂದಿಗೆ ಈ ಲೇಖನವನ್ನು ಋತ್ವಿಕ್ ವಾಣಿ ಬಳಗಕ್ಕೆ ನೀಡುತ್ತಿದ್ದೇನೆ. 

ಮೊದಲಾಗಿ ಯೋಗಿನೀ ಗಣದಲ್ಲಿ ಮುಖ್ಯ ಕೂಟ 64. ಅವರೊಬ್ಬೊಬ್ಬರ ಸಮೂಹವು 20 ಸಾವಿರ ಮೊದಲ್ಗೊಂಡು ಕೆಲ ಕೂಟಗಳು 2 ಕೋಟಿ ಮೀರಿದ್ದೂ ಇದೆ. ಒಟ್ಟಾರೆ ತಂತ್ರಶಾಸ್ತ್ರಗಳು 33 ಕೋಟಿ ಯೋಗಿನಿಯರನ್ನು ಗುರುತಿಸಿದೆ. ಅವರೆಲ್ಲರ ಸಂಶೋಧನಾ ಸಂಗ್ರಹವೇ ಯೋಗಿನೀ ತಂತ್ರ. ಕೆಲವರದ್ದು ಒಂದೊಂದು ಶ್ಲೋಕವಾದರೆ ಕೆಲವರು ಸಾವಿರಕ್ಕೂ ಮಿಕ್ಕಿ ಶ್ಲೋಕರೂಪದಲ್ಲಿ ತಮ್ಮ ಸಂಶೋಧನೆಗಳನ್ನು ಬರೆದಿಟ್ಟಿದ್ದಾರೆ. ಅವೆಲ್ಲಾ ಒಟ್ಟು 1 ಲಕ್ಷ 26 ಸಾವಿರ ಶ್ಲೋಕಗಳಿವೆ. ಅವುಗಳಲ್ಲಿ ಮುಖ್ಯವಾಗಿ 18 ಪ್ರಧಾನ ಮಾಲೆಗಳು, ಇತರೆ 126 ಮಣಿಗಳು. ಇತರೆ ನೂರಕ್ಕೂ ಮಿಕ್ಕಿ ಮಾಲೆಗಳ ಬಗ್ಗೆ ಮಾಹಿತಿ ಬರೆದಿಟ್ಟಿದ್ದಾರೆ. ಅವುಗಳಲ್ಲಿ ಒಂದಾದ ಈ ಸಾಧನಾ ಮಾಲೆಯ ಬಗ್ಗೆ ಮಾತ್ರ ಬರೆಯುತ್ತಿದ್ದೇನೆ.
ಇದೊಂದು ಏಕೋತ್ತರ ಚತುರ್ಥಿ ಸೂತ್ರಾಧಾರಿತ ಮಾಲಾ ಸಂಯೋಜನೆ. 40+1=41 ಮಣಿಗಳ ವಿಶಿಷ್ಟ ಸಂಯೋಜನೆ (ಚಿತ್ರ ನೋಡಿ).

 
ಮಾಲೆಯ ಎಡಭಾಗ
1)      ಶಾಂತ
2)     ದ್ವಿತ
3)     ಗುಣ
4)     ಶಕ್ತಿ
5)     ಔದಾರ್ಯ
1)      ಶಮ
2)     ದಮ
3)     ತುಷ್ಠಿ
4)     ಪುಷ್ಠಿ
5)      ಪ್ರೀತಿ
6)     ದಯೆ
7)      ಕ್ಷಮಾ

1)      ಜ್ಞಾನ
2)     ಇಚ್ಛಾ
3)     ಕ್ರಿಯಾ
4)     ಬುದ್ಧಿ
5)      ಬಲ
6)     ತೇಜಸ್ಸು
7)      ಓಜಸ್ಸು
8)     ಧೈವ
9)     ಆತ್ಮ

ಬಲಭಾಗ
1)      ಹವಳ
2)     ಸ್ಫಟಿಕ
3)     ಪಚ್ಚೆ
4)     ಸ್ಫಟಿಕ
5)      ರುದ್ರನೀಲ
6)     ಸ್ಫಟಿಕ
7)      ರುದ್ರಾಕ್ಷಿ
8)     ಸ್ಫಟಿಕ
9)     ಮಾಣಿಕ್ಯ
10)    ಸ್ಫಟಿಕ
11)      ಪಚ್ಚೆ
12)     ಸ್ಫಟಿಕ
13)     ಕ್ಷೀರ
14)    ಸ್ಫಟಿಕ
15)     ಹವಳ
16)     ಸ್ಫಟಿಕ
17)     ಪಚ್ಚೆ
18)     ಸ್ಫಟಿಕ
19)     ರಕ್ತದಂತಿ
20)   ಸ್ಫಟಿಕ
21)     ಮೃದುಲಾ

ಅದರಲ್ಲಿ ಮಣಿಗಳ ಒಂದೊಂದರ ಮಧ್ಯದಲ್ಲೂ ಸ್ಫಟಿಕ ಸಂಯೋಜಿಸಲಾಗಿದೆ.
1)      ಮಾಣಿಕ್ಯ
2)     ದೂತಿಕಾ
3)     ರುದ್ರನೀಲ
4)     ಪಚ್ಚೆ
5)      ರಕ್ತದಂತಿ
6)     ಮೃದುಲಾ
7)      ಮುಕ್ತಾ
8)     ಹವಳ
9)     ಕ್ಷೀರ 

ಸ್ಫಟಿಕ, ರುದ್ರಾಕ್ಷಿಗಳೆಂಬ ನವಮಣಿ ಯೋಜನೆ ಇದಾಗಿರುತ್ತದೆ. ಎಲ್ಲವಕ್ಕೂ ಬಲದಾಯಿತ್ವ ಮತ್ತು ಕಿರಣ ಸಮತೋಲನಕ್ಕೆ ಸ್ಫಟಿಕ ಯೋಜಿಸಲಾಗಿದೆ. ಇಲ್ಲಿ ರುದ್ರಾಕ್ಷಿ+ಸ್ಫಟಿಕವು ಪೂರಕ.1.      ಮಾಣಿಕ್ಯ   =     ಚೋದಕ
2.      ದೂತಿಕಾ   =     ಪ್ರೇಷಕ
3.      ರುದ್ರನೀಲ =     ಕಠಿಣತೆ
4.      ಪಚ್ಚೆ       =     ನಿಷ್ಠೆ
5.      ರಕ್ತದಂತಿ   =     ಶೃದ್ಧಾ
6.      ಮೃದುಲಾ  =     ತಾಳ್ಮೆ
7.      ಮುಕ್ತಾ     =     ಜ್ಞಾನ
8.      ಹವಳ      =     ಯಶಸ್ಸು
9.      ಕ್ಷೀರ        =     ಕ್ಷಮತೆ
 


ಇವುಗಳ ಸಮತೋಲನಕ್ಕೆ ಆಧರಿಸಿ ರುದ್ರಾಕ್ಷಿ+ಸ್ಫಟಿಕವನ್ನು ಯೋಜಿಸಿ ಮಾಲೆಯ ಉದ್ದಕ್ಕೆ ಬೇಕಾಗಿ ಹೆಚ್ಚನ ಸ್ಫಟಿಕ ರುದ್ರಾಕ್ಷಿ ಯೋಜಿಸಲಾಗಿದೆ. 41 ಮಣಿಗಳ ಹಾರ. ಉದ್ದಕ್ಕೆ ಬೇಕಾಗಿ 7 ಮಣಿಗಳ ಹೆಚ್ಚಿನ ಸಂಯೋಜನೆ ಮಾಡಲಾಗಿದೆ. ಇದರ ಬಗ್ಗೆ ಇದರ ಮೂಲ ಸಂಯೋಜಕಿಯಾದ ಮಹಾದೇವಿ ಯೆಂಬ ಯೋಗಿನಿಯ ಅಭಿಪ್ರಾಯ ತಿಳಿಯೋಣ.  

      ಮೊದಲಾಗಿ ಇದರ ಹಿನ್ನೆಲೆ ಗಮನಿಸೋಣ. ನಮ್ಮ ಭಾರತ ದೇಶದಲ್ಲಿ ಹೆಣ್ಣು ಸಂತಾನ ಅತೀ ಹೆಚ್ಚಾಯ್ತು. ಅದು ಎಷ್ಟು ಪ್ರಮಾಣವೆಂದರೆ ಪುರುಷ ಸಂತಾನದ ಮೂರು ಪಟ್ಟು ಹೆಚ್ಚು. ಅವರೆಲ್ಲರಿಗೆ ಗೃಹಸ್ಥಾಶ್ರಮ ಸ್ವೀಕರಿಸಿ ಗೃಹಿಣಿಯರಾಗಿ ಬಾಳುವ ಅವಕಾಶಗಳು ಸಿಗುತ್ತಿರಲಿಲ್ಲ. ಆದರೆ ದಾರಿ ತಪ್ಪುತ್ತಲೂ ಇರಲಿಲ್ಲ. ನಿಧಾನವಾಗಿ ಅವರಲ್ಲಿ ಹುಟ್ಟಿದ ಕ್ರಾಂತಿಕಾರೀ ಮಾರ್ಗವೇ ಯೋಗಮಾರ್ಗಾನ್ವೇಷಣೆ ಯೋಗಿನಿಯರಾಗಿ ದೀಕ್ಷೆ ಪಡೆದು ಸಾಧಕರಾಗಿ ತಮ್ಮ ಆತ್ಮೋನ್ನತಿಯನ್ನು ಸಾಧಿಸಿಕೊಂಡ ಧೀರ ಮಹಿಳೆಯರಿವರು. ಅವರ ಬಗ್ಗೆ ವೇದಗಳಲ್ಲಿ ಹಲವು ಉದಾಹರಣೆಗಳಿವೆ. ಕೆಲ ಮಂತ್ರ ಉದಾಹರಣೆ ನೀಡುತ್ತಿದ್ದೇನೆ. ಮುಖ್ಯವಾಗಿ ಆಗಿನ ಸ್ತ್ರೀ ಮಹತ್ವ ಹೇಳುವ ಘೋಷ ವಾಕ್ಯಗಳು ಮತ್ತು ತಮ್ಮೊಂದಿಗೆ ಸೇರಿ ಸಾಧಕರಾಗಿರೆಂಬ ಕರೆಯಿದೆ. 

      ಋಗ್ವೇದ ಮಂ.8, ಸೂಕ್ತ 67, ಮಂತ್ರ 7

ಅಸ್ತಿ ದೇವಾ ಅಂಹೋರುರ್ವಸ್ತಿ ರತ್ನಮನಾಗಸಃ |

ಆದಿತ್ಯಾ ಅದ್ಭುತೈನಸಃ ||

      ಈ ಭೂಮಿಯಲ್ಲಿ ಮಾನವ ರೂಪದಲ್ಲಿ ಜನಿಸಿ ಕರ್ಮಬಂಧಕ್ಕೆ ಸಿಲುಕಿ ಆತ್ಮಿಕ ಭಾವ, ಗುಣ, ಉದ್ದೇಶ ಮರೆತು ಅಲ್ಪಜ್ಞತೆಯನ್ನು ಮೈಗೂಡಿಸಿಕೊಂಡ ಸ್ತ್ರೀಯರೇ ಬಿಡಿ ಈ ಪ್ರಾಪಂಚಿಕ ಮೋಹವನ್ನು. ಇಲ್ಲಿನ ಜೀವನ ನಿರಂತರ ದುಃಖಮಯ. ಅದನ್ನು ಬಿಟ್ಟು ಆನಂದಮಯವಾದ ಜಗತ್ತಿಗೆ ನಿಮ್ಮನ್ನು ಸ್ವಾಗತಿಸುತ್ತಿದ್ದೇವೆ. 

ಋಗ್ವೇದ ಮಂ.8, ಸೂಕ್ತ 67, ಮಂತ್ರ 8

ಮಾ ನಃ ಸೇತುಃ ಸೀಷೇದಯಂ ಮಹೇ ವೃಣಕ್ತುನಸ್ಪರಿ |

ಇಂದ್ರ ಇದ್ಧಿ ಶ್ರುತೋ ವಶೀ ||

ನಾವು ಈ ಪ್ರಾಪಂಚಿಕ ಆಸೆಯಿಂದ ಹೊರಬರೋಣ. ಸಾಂಸಾರಿಕ ಬಂಧನ ಬೇಕಿಲ್ಲ. ಆತ್ಮಸುಖವನ್ನು ಸಾಧಿಸೋಣ. ದೈಹಿಕ ದೌರ್ಬಲ್ಯಗಳಿಂದ ದೂರವಿದ್ದು ನಾವೆಲ್ಲರೂ ಒಂದಾಗಿ ಪ್ರಪಂಚ ಹಿತ ಸಾಧಿಸಲು ಪ್ರಯತ್ನಿಸೋಣ. ಅದಕ್ಕೆ ಸರಿಯಾದ ದಾರಿಯೇ ಇದಾಗಿದೆ.  

ಋಗ್ವೇದ ಮಂ.8, ಸೂಕ್ತ 67, ಮಂತ್ರ 9

ಮಾನೋ ಮೃಚಾ ರಿಪೂಣಾಂ ವೃಜಿನಾನಾಮವಿಷ್ಯವಃ |

ದೇವಾ ಅಭಿ ಪ್ರಮೃಕ್ಷತ ||

ಈ ಪ್ರಾಪಂಚಿಕವೆಂಬ ಅಘದಿಂದ ಹೊರಬರಲು ನಮಗೆ ಸಹಾಯಕರಾಗಿ ವಿಶ್ವೇದೇವರಿದ್ದಾರೆ. ವೇದ ವಿಧ್ಯೆಗಳಿವೆ. ಜಗದ್ರಕ್ಷಣೆಯ ನಮ್ಮ ಸಂಕಲ್ಪದಲ್ಲಿ ನಮಗೆ ಧೀಶಕ್ತಿ ನಿರಂತರ ಒದಗಿಸಲು ಯೋಗಮಾರ್ಗವಿದೆ.  ಬನ್ನಿರಿ ಈ ಆನಂದಮಯ ಜಗತ್ತಿಗೆ.
ಋಗ್ವೇದ ಮಂ.8, ಸೂಕ್ತ 67, ಮಂತ್ರ 10

ಉತ ತ್ವಾಮದಿತೇ ಮಹ್ಯಹಂ ದೇವ್ಯುಪಬ್ರುವೇ |

ಸುಮೃಳೀಕಾಮಭೀಷ್ಟಯೇ ||

ಸ್ತ್ರೀಶಕ್ತಿ ಅಸೀಮವಾದದ್ದು.  ಈ ಪ್ರಾಪಂಚಿಕ ಮೋಹ ಬಿಟ್ಟಲ್ಲಿ ಇಡೀ ಪ್ರಪಂಚವನ್ನೇ ಆರ್ಯವಾಗಿ ರೂಪಿಸಲು ಸಾಧ್ಯ. ನಾರೀಣಾಂ ಮಹಿಮಾತ್ವಾಸೀಮಾಃ ತಾಃ ಬಾಹ್ಯತೋಂತತಶ್ಚ ಅಖಂಡಾ ಭವಂತಿ ದಯಾನಂದ ಸರಸ್ವತಿ ಉವಾಚ ಇಂತಹಾ ಶ್ರೇಷ್ಠ ಶಕ್ತಿದಾಯಕ ಮಹಿಮಾಸೀಮರಾದ ನಾವೆಲ್ಲಾ ಒಂದಾಗಿ ಯೋಗ ಮಾರ್ಗ ದಲ್ಲಿ ಸಾಗುತ್ತಾ ಪ್ರಪಂಚಕ್ಕೆ ಈ ಐಹಿಕ ಸುಖದ ಹೊರತಾದ ಇನ್ನೊಂದು ಶ್ರೇಷ್ಠ ಆನಂದಮಯ ಜೀವನ ತೋರಿ ಕೊಡೋಣ ವೆಂದಿದ್ದಾರೆ. 

ಋಗ್ವೇದ ಮಂ.8, ಸೂಕ್ತ 67, ಮಂತ್ರ 11

ಪರ್ಷಿ ದೀನೇ ಗಭೀರ ಆ ಉಗ್ರಪುತ್ರೇ ಜಿಘಾಂಸತಃ |

ಮಾಕಿಸ್ತೋಕಸ್ಯ ನೋ ರಿಷತ್ ||

ಈ ಪಾಪಭೂಯಿಷ್ಠವಾದ ಹಿಂಸ್ರಕವೃತ್ತಿಯ, ದುಷ್ಟರ, ಪಾಪಾತ್ಮರ ಹುಚ್ಚು ಕಲ್ಪನೆಯ ಜೀವನ ಸುಖವೆಂಬ ಮೋಹದಿಂದ ಹೊರಬಂದು ಸಮಗ್ರ ಜೀವ ರಕ್ಷಣೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳೋಣ. ಎಂದೂ ನಾಶವಾಗದ ಸ್ಥಿರವೂ, ಶಾಶ್ವತವೂ ಆದ ಆನಂದ ಸುಖವನ್ನು ಅನುಭವಿಸೋಣ. ದುಷ್ಪ್ರವೃತ್ತಿ ನಿವಾರಣೆಗಾಗಿ ನಾವು ಯೋಗಿನಿಯರಾಗಿ ಯೋಗ ಮಾರ್ಗದಲ್ಲಿ ಸಂಚರಿಸೋಣ. ಬನ್ನಿರಿ, ಬನ್ನಿರಿ, ಬನ್ನಿರಿ. 

ಈ ಮೇಲ್ಕಂಡ ಉದಾಹರಣೆ ಗಮನಿಸಿ ಆಗಿನ ಕಾಲದ ಸ್ತ್ರೀಯರ ಧೀಶಕ್ತಿ ಪ್ರಚೋದಿಸುವ ಹೇಳಿಕೆ ಮತ್ತು ಯೋಗ ಮಾರ್ಗಾವಲಂಬನದ ಕರೆ ಹೇಗಿತ್ತು. ಅದು ಆಗಿನ ಕಾಲದ ಅನಿವಾರ್ಯತೆಯೂ ಆಗಿತ್ತು.  ಹೆಣ್ಣುಮಕ್ಕಳಿಗೆ ಸಹಜ ಸ್ವಾಭಾವಿಕ ಪ್ರಾಪಂಚಿಕ ಜೀವನ ಸುಖಪ್ರದವಾಗಿರಲಿಲ್ಲ.  ಹೆಚ್ಚಾಗಿ ಗಂಡಸರು ಆಶ್ರಯ ದಾತರೂ ಎನ್ನಿಸಿಕೊಳ್ಳುವುದಕ್ಕಾಗಿ ಒಂದಲ್ಲ ಹಲವು ಮದುವೆ ಆಗುತ್ತಿದ್ದರು. ಅವರೆಲ್ಲರಿಗೆ ಬರೇ ಆಶ್ರಯ ಸಿಗುತ್ತಿತ್ತೇ ವಿನಃ ಇತರೆ ಯಾವುದೇ ಪ್ರಾಪಂಚಿಕ ಸುಖ ನೆಮ್ಮದಿ ರಕ್ಷಣೆ ಇರಲಿಲ್ಲ. ಹಾಗಾಗಿ ಹುಟ್ಟಿದ ಕ್ರಾಂತಿಯೇ ಯೋಗಮಾರ್ಗದ ಯೋಗಿನಿ ಗಣಸಂಪದ.  ಆಗಿನ ಕಾಲದಲ್ಲಿ ಹೆಚ್ಚು ಮದುವೆಯಾಗುವುದು ಕೂಡ ಒಂದು ಪುರುಷ ಪ್ರಧಾನ ಸಮಾಜದ ಹೆಗ್ಗಳಿಕೆಯಾಗಿತ್ತು.  ಸಗರ ಚಕ್ರವರ್ತಿ 60 ಸಾವಿರ ಜನರನ್ನು ಮದುವೆಯಾಗಿದ್ದ. ನರಕಾಸುರ ಸಿಕ್ಕಿದವರನ್ನೆಲ್ಲಾ ತಂದಿಟ್ಟು ಕೊಂಡಿದ್ದ. ರಾವಣನ ಪತ್ನಿಯರಿಗೆ ಲೆಕ್ಕವಿಲ್ಲ. ಕಶ್ಯಪನು ದಕ್ಷನ 40 ಮಂದಿ ಹೆಣ್ಣುಮಕ್ಕಳ ಗಂಡ. ಚಂದ್ರನು 27 ಜನರನ್ನು ವರಿಸಿದ್ದ. ದಶರಥನು ನಾಲ್ಕು ಮಂದಿ ಪಟ್ಟದ ರಾಣಿಯರು ಇನ್ನಿತರೆ 62 ಜನ. ಕಾರ್ತವೀರ್ಯಾರ್ಜುನ 56 ಸಾವಿರ ಜನ ಪತ್ನಿಯರನ್ನು ಹೊಂದಿದ್ದ.  ಬಾಹುಬಲಿ 40 ಜನ ಪತ್ನಿಯರು.  ಶ್ರೀಕೃಷ್ಣ 8 ಜನ ಪಟ್ಟ ಮಹಿಷಿಯರು 16 ಸಾವಿರ ಜನ ಇಷ್ಟ ಮಹಿಷಿಯರು. ಎಲ್ಲರೂ ಹಲವು ಜನರನ್ನು ವಿವಾಹವಾದವರೇ. ಅದರರ್ಥ ಆಗಿನ ಕಾಲದ ಅಸಮತೋಲನ. ಅದು ಪ್ರಕೃತಿ ಸೃಷ್ಟಿ. ಅದರ ಉದ್ದೇಶವೇ ಬೇರಿತ್ತು. ಈ ಯೋಗಮಾರ್ಗದ ಉದ್ಭವವಾಗಬೇಕಿತ್ತು. ಹಾಗಾಗಿ ಹುಟ್ಟಿಕೊಂಡಿತು ಯೋಗಿನೀ ತಂತ್ರ.  ಇಲ್ಲಿ ಹಲವು ಕೋಟಿ ಯೋಗಿನಿಯರ ಸಾಧನೆ ಸಂಶೋಧನೆ ಸಾಧ್ಯವಾಯ್ತು. ದೇಶಕ್ಕೆ ಲಾಭವಾಯ್ತು.  ಇವರೆಲ್ಲರ ಸಾಧನೆಯ ಮುಖದಲ್ಲಿ ಸಾಧಕರಿಗೆ ಸಹಕರಿಸಲೆಂದೇ ಮಣಿವಿಧ್ಯೆಯ ಆವಿಷ್ಕಾರ ವಾಯ್ತು. ಮಾಲೆಗಳ ಆವಿಷ್ಕಾರವಾಯ್ತು. ಒಂದಾದರೂ ಹಾರವನ್ನು ಹೆಂಗಸರು ಧರಿಸಲೇ ಬೇಕು ಎಂಬ ನಿಯಮ ಈಗಲೂ ಚಾಲ್ತಿಯಲ್ಲಿದೆ. ಅದು ಕರಿಮಣಿಹಾರದ ರೂಪದಲ್ಲಿ ಈಗ. ಅದರರ್ಥ ಈ ಮಾಲೆಗಳ ಸಂಶೋಧನೆಗಳ ಹಿಂದೆ ಹಲವು ಆವಿಷ್ಕಾರಗಳು ಆಗಿ ಹೋಗಿವೆ ಎಂಬುದು. ಇಂತಹಾ ಉದಾಹರಣೆಗಳನ್ನು ಕೊಡುತ್ತಾ ಹೋದಲ್ಲಿ ಮುಗಿಯಲಾರದು. 

ಸಮಾಜದ ಸಮತೋಲನ ತಪ್ಪದಂತೆ ಕಾಪಾಡಬೇಕಾದ ಆಡಳಿತ ವ್ಯವಸ್ಥೆ ಹದಗೆಟ್ಟಾಗ ಇಂತಹಾ ಕ್ರಾಂತಿ ಹುಟ್ಟುತ್ತದೆ. ಅದು ಉತ್ತಮವಾದರೆ ಸ್ವಾಗತಾರ್ಹ. ಆದರೆ ಈಗಿನ ಕಾಲದ ಅಸಮತೋಲನ ನಿಗ್ರಹಿಸುವ, ಪ್ರತಿಭಟಿಸುವ ವಿಧಾನವಾದ ಭಯೋತ್ಪಾದಕತೆ ದೇಶಕ್ಕೆ ಲೋಕಕ್ಕೆ ಮಾರಕ. ಸರಕಾರ ಈ ನಿಟ್ಟಿನಲ್ಲಿ ಯೋಚಿಸಿದರೆ ಉತ್ತಮವಲ್ಲವೆ? ನೀವೂ ಚಿಂತಿಸಿ. 

ಇನ್ನು ಮಾಲೆಯ ಬಗ್ಗೆ ಕೆಲ ವಿಷಯ ಬರೆಯುತ್ತೇನೆ. ಚಿತ್ರದಲ್ಲಿ ಕಾಣಿಸಿದಂತೆ ಮಣಿಗಳನ್ನು ಯೋಜಿಸಿ ಮಾಲೆ ಮಾಡಿ ಹಾಕಿಕೊಂಡಲ್ಲಿ ಸಾಧಕನಿಗೆ ಅವನ ಧೀಶಕ್ತಿಯನ್ನೂ, ಸಾಹಸೀ ಪ್ರವೃತ್ತಿಯನ್ನೂ ಅಭಿವೃದ್ಧಿ ಪಡಿಸುತ್ತಾ ಮನಸ್ಸಿನ ವಿಕ್ಷಿಪ್ತತೆಯನ್ನು ದೂರೀಕರಿಸುತ್ತದೆ. ಈ ಸರದಲ್ಲಿ ಕಾಣಿಸಿದ ಮಣಿಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಸಾಧಕನಿಗೆ ಸಾಧನೆಗೆ ಪ್ರಶಸ್ತವಾದದ್ದು. ಇನ್ನು ಹಾಗೆ ಇತರೆ ಕೆಲ ಹಾರ, ಕುಂಡಲ, ಕೇಯೂರ, ಕಂಕಣ, ಕಡಗ, ಉಂಗುರ, ಮೌಂಜಿ (ಉಡಿದಾರ), ಶುನಾಸೀರ, ಶುಖಮುದ್ರಾ, ಶಿರಸ್ತ್ರಾಣ, ಕವಚ, ಅಂಗುಲೀಯಕಗಳ ಬಗ್ಗೆಯೂ ವಿಸ್ತೃತ ವಿವರಣೆಗಳೂ ಈ ಯೋಗಿನೀ ತಂತ್ರದಲ್ಲಿ ಕಂಡುಬರುತ್ತವೆ. 
  
ಅದರಲ್ಲಿ ಒಂದು ಈ ಸಾಧನಾ ಹಾರ. ಅಲ್ಲದೆ ಕೆಲ ವಿಶಿಷ್ಟ ದಂಡಗಳು, ಗೋಮುಖ, ವ್ಯಾಘ್ರಮುಖ, ಸರ್ಪಮುಖ, ಸೂಚೀಮುಖ, ಗೃದ್ಧಮುಖಗಳೆಂಬ ಕಮಂಡಲುಗಳು. ವಿಶಿಷ್ಟ ಆಸನಗಳು - ವ್ಯಾಘ್ರಾಸನ, ಚರ್ಮ, ಕೃಷ್ಣ, ದರ್ಭ, ಕಂಬಳ, ಕುಳೀರ, ಮುಂಜೀ, ತರು, ಶವ, ಸೃಕ್, ಕೂರ್ಮ, ಮಂಡೂಕಾದಿ ದ್ವಾದಶಾಸನಗಳೂ, ಹದಿನಾರು ರೀತಿಯ ತಲ್ಪಗಳೂ(ಶಯ್ಯಾ) ಯೋಗಿನೀ ತಂತ್ರದಲ್ಲಿ ಕಂಡುಬರುತ್ತವೆ. ಉದಾ- ವಿಷ್ಣು ನಾಗತಲ್ಪ. ಇವೆಲ್ಲಾ ವಿಶೇಷಾಧ್ಯಯನ ಕೈಗೊಳ್ಳಬೇಕಾದ ವಿಚಾರಗಳು. ಈ ನಿಟ್ಟಿನಲ್ಲಿ ನಮ್ಮ ಜನಮಾನಸ ಹರಿದರೆ ಖಂಡಿತಾ ಲೋಕಕ್ಷೇಮ ಸಾಧಿಸಬಹುದು. ಈಗ ಬರೇ ಇಂಜನಿಯರಿಂಗ್, ವೈದ್ಯಕೀಯ ಹೊರತು ಪಡಿಸಿದ ಒಂದು ಅಧ್ಯಯನ ಭಾಗದತ್ತ ಜನ ಮಾನಸ ತಿರುಗಿದರೆ ಖಂಡಿತಾ ಒಳ್ಳೆಯದಲ್ಲವೆ? ಯುವಶಕ್ತಿಗೆ ಒಂದು ಉತ್ತಮ ಗುರಿ ತೋರಿದಂತಲ್ಲವೆ? ಯಾವಾಗಲೂ ಹಣದ ಹಿಂದೆ ಹೋಗುವ ಭ್ರಷ್ಟತೆ, ಸುಖ ಲೋಲುಪತೆಯಿಂದ ಸರಿದಾರಿಗೆ ಬರಲು ಸಹಾಯಕವಲ್ಲವೆ? ಇಂತಹಾ ಯೋಜಿತ ನಿಯಮಬದ್ಧ ವ್ಯವಸ್ಥೆಗಾಗಿ  ಮತ್ತು ಸಾಮಾಜಿಕ ಅಸಮಾನತೆ ನೀಗುವತ್ತಣ ಪ್ರಯತ್ನವಾದ ಯೋಗಮಾರ್ಗವೆಂಬ ನಿರಂತರ ಸಂಶೋಧನಾ ಶೀಲ ಮಹಿಳೆಯರ ಸಾಹಸ ಸ್ತುತ್ಯರ್ಹ.  

ಅವರೇ ಗುರುತಿಸಿದ ನಾಡೀಜ್ಞಾನ ಮತ್ತು ಯೋಗಾಭ್ಯಾಸ ಶರೀರವೇ ಯೋಗ ರಂಗಸ್ಥಳವೆಂಬ ವಿಚಾರಕ್ಕೆ ಆಧರಿಸಿ ಋಗ್ವೇದದಲ್ಲಿ ಒಂದು ಉದಾಹರಣೆ ಕಂಡು ಬರುತ್ತದೆ. ಮಂಡಲ 8, ಸೂಕ್ತ 19, 37 ನೇ ಮಂತ್ರವು ಶರೀರವೊಂದು ಹೇಗೆ ಯೋಗಸಾಧನಾ ವೇದಿಕೆಯೆಂದು ವಿವರಿಸುತ್ತದೆ. 

ಉತ ಮೇ ಪ್ರಯಿಯೋರ್ವಯಿಯೋಃ ಸುವಾಸ್ತ್ವಾ ಅಧಿ ತುಗ್ವನಿ | 
ತಿಸೃಣಾಂ ಸಪ್ತತೀನಾಂ ಶ್ಯಾವಃ ಪ್ರಣೇತಾ ಭುವದ್ವಸುರ್ದಿಯಾನಾಂ ಪತಿಃ ||

ಈ ಶರೀರವೆಂಬುದು ಆತ್ಮನಾ ಸಾಧನಾ ವೇದಿಕೆ. ಶರೀರ ರೂಪ ಪ್ರಧಾನವಲ್ಲ. ರೂಪು ಪಡೆದ ಮೇಲೆ ಅದರ ಆಕಾರ ಗುಣ ಹೊಂದಿ ತನ್ಮೂಲಕ ಸಾಧನೆ ಮಾಡುತ್ತಾ ಶರೀರಮಾದ್ಯಂ ಖಲು ಧರ್ಮಸಾಧನಂ ಎಂಬಂತೆ  ಶರೀರಧರ್ಮವನ್ನು ಹಿಡಿತದಲ್ಲಿಟ್ಟು ಆತ್ಮ ಧರ್ಮಸಾಧನೆ ಮಾಡಬೇಕೆಂದಿದೆ. ಅದಕ್ಕೆ ಈ ಯೋಗಮಾರ್ಗವೇ ಶ್ರೇಷ್ಠ ದಾರಿಯೆನ್ನುತ್ತದೆ ಯೋಗಿನೀ ತಂತ್ರ. ಅದರಂತೆ ಹಿಂದಿನ ಚಿತ್ರದಲ್ಲಿ ತೋರಿಸಿದಂತೆ ಮಣಿ ಸಂಯೋಜನೆ ಮಾಡಿ ಸಾಧನಾ ಮಾಲೆ ಧಾರಣೆ ಮಾಡಿದಲ್ಲಿ ಸಾಮಾನ್ಯ ಸಮಕಾಲೀನ ಪ್ರಾಪಂಚಿಕ ಸಮಸ್ಯೆಗಳಿಂದ ದೂರವಿರಲು ಸಾಧ್ಯವೆಂಬುದು ಮಹಾದೇವಿಯಕ್ಕನ ಅಭಿಪ್ರಾಯವಾಗಿರುತ್ತದೆ. ಯೋಗಿನೀ ತಂತ್ರದಲ್ಲಿ ಇದನ್ನು ಸಾಧನಾ ಮಾಲೆ ಮತ್ತು ಮಣಿಗಳ ಕೂಟದಿಂದ ನಿರ್ಮಾಣವಾದ್ದರಿಂದ ಕೂಟಸ್ಥಾನ ಮಾಲೆ, ಮಹಾಕೂಟ ಮಾಲೆಯೆಂದೂ ಹೆಸರಿಸಲಾಗಿದೆ. ಎರಡೂ ಕಡೆಯಿಂದ 21 ಮಣಿ ಸಂಯೋಜನೆ ಮತ್ತು ಉದ್ದಕ್ಕೆ ಬೇಕಿದ್ದರೆ ಹೆಚ್ಚಿಗೆ ಸ್ಫಟಿಕ ರುದ್ರಾಕ್ಷಿ ಸಂಯೋಜನೆ ಮಾಡಿಕೊಳ್ಳಬಹುದು. ವಿಶಿಷ್ಟ  ಆಕರ್ಷಕ. ಚಿನ್ನದಿಂದಾಗಲಿ ಬೆಳ್ಳಿಯಿಂದಾಗಲಿ ಕಟ್ಟಬೇಕು. ಸಾಧಕರಿಗೆ ಬೇಕಾಗುವ ನಿರ್ಮಲ ಚಿತ್ತ, ಪರಿಶುದ್ಧತೆ, ತಮ್ಮ ಪೂರ್ವ ಜೀವನದ ಯಾವುದೋ ಒಂದಲ್ಲಾ ಒಂದು ಪಾಪಪ್ರಜ್ಞೆ ಕಾಡುವವರಿಗೆ ಇದು ತುಂಬಾ ಸಹಕಾರಿಯಾಗಿರುತ್ತದೆ. ಒಮ್ಮೆ ಧಾರಣೆ ಮಾಡಿದ ಮೇಲೆ ಇನ್ನೊಬ್ಬರ ಕೈಗೆ ಕೊಡಬೇಡಿ. ಇದು ಕೇವಲ ವಿಶಿಷ್ಟ ಅಧಿಕಾರವನ್ನೂ ಕೂಪ್ಯನ್ಯಾಸವನ್ನೂ ಹೇಳುತ್ತದೆ. ಧರಿಸಿದ ವ್ಯಕ್ತಿ; ಅವನಿಗೆ ಅವನ ಹೆಂಡತಿಗೆ ಮಾತ್ರಾ ಪರಸ್ಪರ ಧರಿಸಲು ಸೂಕ್ತ.  ಬೇರೆಯವರು ಧರಿಸಬಾರದು. ಕುತ್ತಿಗೆಯಿಂದ ತೆಗೆದು ನೋಡಬಾರದು. ಧಾರಣಾ ಕಾಲದಲ್ಲಿ ಯಾರೇ ಮುಟ್ಟಿದರೂ ಏನೂ ತೊಂದರೆ ಇಲ್ಲ. ಇನ್ನು ತಾಯಿ+ಮಗ ಗಂಡ+ ಹೆಂಡತಿ, ಗುರು+ಶಿಷ್ಯ ಸಮಾನಾಧಿಕಾರ ಸ್ಥಿತಿಯಿದೆ. ಇದರ ಬಗ್ಗೆ ಇನ್ನೂ ಹೆಚ್ಚಿಗೆ ಬರೆಯಲಾರೆ. ಈ ಮಾಲೆಯ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ಮಾಡಿರೆಂದು ಪ್ರಾರ್ಥಿಸುತ್ತೇನೆ.

ಇದು ಶಾಂತತೆ ಪರಿಶುದ್ಧತೆ
ನಿಷ್ಠೆ ಕೊಡುತ್ತದೆ.
ಇದಕ್ಕೆ ಶಾಂತತೆ ತಾಳ್ಮೆ ದಯಾಮಯತೆ ಅಗತ್ಯ.
                                                                                    - ಕೆ. ಎಸ್. ನಿತ್ಯಾನಂದ