Sunday, 26 January 2014

ಋಗ್ವೇದದಲ್ಲಿ ಗೃತ್ಸಮದ ಋಷಿವರೇಣ್ಯರ ಗಣಿತಸೂತ್ರಗಳು - ೧


ಋಗ್ವೇದದಲ್ಲಿ ಎರಡನೆಯ ಮಂಡಲವು ಗೃತ್ಸಮದ ಮಂಡಲವೆಂದು ಖ್ಯಾತಿ. ಇಲ್ಲಿ ಗೃತ್ಸಮದರು ಶಕ್ತಿ ಉಪಾಸಕರು. ಪ್ರಕೃತಿ ಉಪಾಸಕರು. ಪಂಚಭೂತಾತ್ಮಕ ಈ ಸೃಷ್ಟಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡವರು. ಅವರ ಮಾತಿನಲ್ಲೇ ವಿವರಿಸವುದಿದ್ದರೆ:

ಋಗ್ವೇದ ಮಂಡಲ -೨, ಸೂಕ್ತ-೧, ಮಂತ್ರ-೬,೭
त्वम॑ग्ने रु॒द्रो असु॑रो म॒हो दि॒वस्त्वं शर्धो॒ मारु॑तं पृ॒क्ष ई॑शिषे ।
त्वं वातै॑ररु॒णैर्या॑सि शंग॒यस्त्वं पू॒षा वि॑ध॒तः पा॑सि॒ नु त्मना॑ ॥
त्वम॑ग्ने द्रविणो॒दा अ॑रं॒कृते॒ त्वं दे॒वः स॑वि॒ता र॑त्न॒धा अ॑सि ।
त्वं भगो॑ नृपते॒ वस्व॑ ईशिषे॒ त्वं पा॒युर्दमे॒ यस्तेऽवि॑धत् ॥

ಜಗತ್ತಿನ ಸಕಲ ಸೃಷ್ಟಿ ಚರಾಚರಗಳಿವೆಯೋ ಅದೆಲ್ಲವೂ ಪ್ರಕೃತಿ = ತಾಯಿ. ಅದೇ ಸಕಲ ಜೀವ ಸಂವಹನ ಶಕ್ತಿ = ಅಗ್ನಿ. ಅಗ್ನಿರೂಪಳಾದ ತಾಯಿಯೇ ಸಕಲ ಜೀವ ಜೀವಾಧಾರ. ಅದರಲ್ಲಿ ಬೇರಿಲ್ಲ. ನದೀ ನದಗಳಿರಲಿ, ವನ ದುರ್ಗಗಳಿರಲಿ, ಕಾಡು ಮೇಡುಗಳಿರಲಿ, ಓಷಧಿಗಳಿರಲಿ, ಲತೆಗಳಿರಲಿ, ಎಲ್ಲವೂ ಕೂಡ ಪ್ರಕೃತಿಯೇ. ಪ್ರಕೃತಿಯ ನಡೆಯೇ. ಸಂಕಲ್ಪವೇ. ನಿಯಮವೇ "ಬ್ರಹ್ಮಸೂತ್ರ". ಯಾರು ಪ್ರಕೃತಿಯನ್ನು ಅರ್ಥಮಾಡಿಕೊಳ್ಳುತ್ತಾರೋ ಅವರೇ ಪರಬ್ರಹ್ಮಸ್ವರೂಪರು. ಯಾವ್ಯಾವ ಧರ್ಮಶಾಸ್ತ್ರಗಳಿರಲಿ, ವೇದವಾಙ್ಮಯವಿರಲಿ, ಯಾಗ ಯಜ್ಞಗಳಿರಲಿ, ಸೂತ್ರ ಗ್ರಂಥಗಳಿರಲಿ, ಅವೆಲ್ಲವೂ ಪ್ರಕೃತಿಯ ಧರ್ಮ ಆಧರಿಸಿ ಬ್ರಹ್ಮಸೂತ್ರದ ಆಧಾರದಲ್ಲಿ ರೂಪುಗೊಂಡಿದೆ. ಇಂದ್ರಾದಿ ದೇವತೆಗಳೂ, ರಾಜ ರಾಜರುಗಳು, ದೇವ ದೇವತೆಗಳು, ಐರಾವತ, ಕಾಮಧೇನು, ಕಲ್ಪವೃಕ್ಷಾದಿ ವಸ್ತುಗಳು, ರತ್ನಗಳು, ಲೋಹಗಳು, ಮೃಗಗಳು, ಮಾನವ, ಜೀವ, ಜಂತು, ಕ್ರಿಮಿ, ಕೀಟ, ಸರೀಸೃಪಾದಿಗಳ ವರ್ತನೆಯೆಲ್ಲವೂ ಪ್ರಕೃತಿ ಸೂತ್ರದಲ್ಲಿ ಅಡಕವಾಗಿದೆ. ಅದನ್ನು ವಿವರಿಸಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ ಗೃತ್ಸಮದರು. ಹಾಗಾಗಿ ಒಂದೇ ಒಂದು ವಿಶಿಷ್ಟ ಸಮೀಕರಣವನ್ನು ಈ ಸೂಕ್ತದಲ್ಲಿ ಅಳವಡಿಸಿದ್ದಾರೆ. ಅದು ಪ್ರಕೃತಿ ಎಲ್ಲವೂ ಆದ ಆ ಮೂಲ ಚೈತನ್ಯ ಏಕೀಭಾವದಿಂದ ಎಲ್ಲವೂ ಆಗಿರಲು ಹೇಗೆ ಸಾಧ್ಯ ಗಮನಿಸಿ.

ಋಗ್ವೇದ ಮಂಡಲ -೨, ಸೂಕ್ತ-೧, ಮಂತ್ರ-೮
त्वामग्ने दम विश्पतिंविशस्त्वां राजानं सुविदत्रमृञ्जते
त्वं विश्वानि स्वनीक पत्यसेत्वं हस्राणि ता दशप्रति॑ ॥

ಪ್ರಪಂಚವೆಲ್ಲವೂ ಉತ್ಪತ್ತಿ, ಪುನಃ ಸೃಷ್ಟಿ. ಅಂದರೆ ಹುಟ್ಟು ಸಾವುಗಳ ಸಂಕೋಲೆಯಲ್ಲಿಯೇ ಸಿಕ್ಕಿಯೇ ಇದೆ. ಆದರೆ ಕ್ಷೀಣಯೋಗವನ್ನು ಹೊಂದಿದೆ. ನಿರಂತರ ಬೌದ್ಧಿಕ ಕ್ಷೀಣತೆ, ದೈಹಿಕ ಕ್ಷೀಣತೆ, ವೈಚಾರಿಕ ಕ್ಷೀಣತೆಯೊಂದಿಗೆ ಸ್ವಾಭಾವಿಕವೆಂಬಂತೆ ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತಿವೆ. ಕಾರಣ ವೈಚಾರಿಕ ಮನೋಭಾವ ಕಡಿಮೆಯಾಗುತ್ತಿರುವುದು. ಮತ್ತು ಸ್ವತಂತ್ರ ಚಿಂತನಾ ಶೀಲತೆಯನ್ನು ಬಿಟ್ಟಿರುವುದು. ಹಾಗಾಗಿ ಬೌದ್ಧಿಕ ಮತ್ತು ವೈಚಾರಿಕ ಶಕ್ತಿ ಹೊಂದಿ ವೈಖರಿಯನ್ನು ಪಡೆದ ಮಾನವನೂ ತನ್ನ ಚಿಂತನೆಯನ್ನು ಬಿಟ್ಟಿರುತ್ತಾನೆ. ತಾನು ಸದೃಢನಾಗಬೇಕು, ಬುದ್ಧಿವಂತನಾಗಬೇಕು, ವಿಚಾರಶೀಲನಾಗಬೇಕು ಎಂಬ ಆದರ್ಶವನ್ನೇ ಬಿಟ್ಟು ಅಗತ್ಯಕ್ಕೆ ತಕ್ಕಷ್ಟ ಮಾತ್ರಾ ಮೈಗೂಡಿಸಿಕೊಳ್ಳುತ್ತಿದ್ದಾನೆ. ಹಾಗಾಗಿ ಮಾನವ ಪ್ರತೀ ನೂರು ವರ್ಷಕ್ಕೆ ಒಂದು ಅಂಶದಷ್ಟು ಕ್ಷೀಣವಾಗುತ್ತಿದ್ದಾನೆ. ಹಾಗೇ ಪ್ರಾಕೃತಿಕವಾಗಿ ಸಾವಿರ ವರ್ಷಕ್ಕೆ ಒಂದಂಶ ನಷ್ಟವಾಗುತ್ತಿದ್ದಾನೆ. ಹೀಗೆ ಕ್ಷೀಣಿಸುತ್ತಿದ್ದರೆ ಮಾನವೀಯತೆಯ ಬೆಲೆಯೇ ಅರಿಯದ ಸಮಾಜ ಮುಂದೆ ನಮ್ಮ ಮಕ್ಕಳ ತಲೆಮಾರಿಗೆ ನಷ್ಟವಾಗುತ್ತದೆ. ಹಾಗಿದ್ದ ಮೇಲೆ ಮಾನವಜೀವನ ವ್ಯರ್ಥವಲ್ಲವೇ? ಅಂತಹಾ ಮಾನವ ಜೀವನಕ್ಕ ಅರ್ಥವೇ ಇಲ್ಲ. ಅದನ್ನು ಸಂಶೋಧನೆ ಮಾಡಿದ ಗೃತ್ಸಮದರು ವಿಶೇಷತೆಯನ್ನೂ, ವಿಶಿಷ್ಟತೆಯನ್ನೂ, ಸಬಲತೆಯನ್ನೂ, ಕ್ಷಮತೆಯನ್ನೂ ಸಾಧಿಸುವ ಕೆಲ ಉಪಾಯಗಳನ್ನು ಕಂಡುಹಿಡಿದರು. ಅದರ ವಿವರ ನೋಡಿರಿ.

ಗೃತ್ಸಮದರು ಮಾನವನ ಉನ್ನತಿ ತನ್ಮೂಲಕ ಜೀವ ವಿಕಾಸ ದೃಷ್ಟಿಯಿಂದ ಈ ಕೆಳಗಿನ ೧೦ ವಿಶೇಷ ಮಾರ್ಗಗಳನ್ನು ಹೇಳಿದರು ಮತ್ತು ಅವಕ್ಕೆ ಕೆಲ ಉತ್ತಮ ಮಾರ್ಗದರ್ಶನ ಮಾಡಿದರು. ಅವುಗಳು ಹೀಗಿವೆ:
೧. ಯಜ್ಞಗಳು
೨. ಧ್ಯಾನಾದಿಗಳು
೩. ತಪಸ್ಸು
೪. ಸೇವೆ + ಚಿಕಿತ್ಸೆ
೫. ಅಧ್ಯಯನ + ಅಧ್ಯಾಪನ
೬. ಚಿಂತನೆ + ಮನನ
೭. ಕೃಷಿ + ಪಶುಸಂಗೋಪನೆ
೮. ಕ್ಷೇತ್ರಾಧಿವಾಸ
೯. ಪರ್ಯಟನೆ
೧೦. ಆತ್ಮನಿವೇದನೆ

ಈ ದಶವಿಧ ಉಪಾಯಗಳನ್ನು ತಿಳಿಸುತ್ತಾ ಇದರ ಬಗ್ಗೆ ವಿಶೇಷ ಸೂತ್ರಗಳನ್ನು ಬರೆದರು. ಗಮನಿಸಿ ಅದನ್ನು ಕನ್ನಡ ಭಾಷೆಯ "ಕಂದ"ದಂತೆ ವಿವರಿಸುತ್ತೇನೆ.

೧. || ಕೇಳು ಯಾಗಗಳೊಳಗೆ ಇಂತೀಪರಿಯ ಯಾಗಗಳಿವೆ ಮಗುವೆ ||
    || ತಳದೊಳು ಮೂರು ಮತ್ತೊಂದು ವಿಧ ಸಪ್ತಯಾಗಗಳು ಭಿನ್ನಗಳು ನೂರಾರು ||
    || ಇನ್ನು ಮೇಲಣ ಭಾಗ್ಯ, ಸಂಪದ, ಪುತ್ರ, ರಾಜ್ಯ ಕೋಶಗಳು ಬಯಸಿ ಮಾಡಲು ಫಲವಿದೆ ನಿತ್ಯವೂ ||
    || ಇಂದ್ರ, ವರುಣ, ಮಿತ್ರಾರ್ಯಮಣ, ಪೂಷಾ, ಮರುತ, ಋಭವಗಳ ಸಂಯೋಜಿಸಲು ||

೨. || ನಾ ನಿನ್ನ ಧ್ಯಾನದೊಳಿರಲೂ ನೀ ಎನ್ನನೆತ್ತರಕೇರಿಸುವೆ ವಿಚಾರವೇ ||
    || ಧ್ಯಾನ ವಿವೇಕವೇ ಯೋಗ ಮನದ ವಿಕ್ಷಿಪ್ತತೆಯ ದೂರೀಕರಿಸಿ ಸ್ವಸ್ಥತೆಯೀವ ||
    || ವೈಚಾರಿಕಾ ಧ್ಯಾನವೇ ನಿಜ ಧ್ಯಾನ ಕಾಣೆಲೊ ಧ್ಯಾನ ಯೋಗಗಳಿಗಿಂತ ಮಿಗಿಲಿಲ್ಲ ಧ್ಯಾನಿಯಾಗಿರಲೂ ||
    || ಆಕಸ್ಮಿಕವಿಲ್ಲ ಅಪಘಾತವಿಲ್ಲ ಆಪತ್ತಿಲ್ಲ ನಿರಂತರ ಆತ್ಮನೊಳು ಇರಲೂ ||

೩. || ಶಮದಮಾದಿಗಳಲ್ಲಿ ವಿಜಯಿಯು ತಪದೊಳಗೆ ಲೋಕಕ್ಷೇಮ ||
    || ಆತ್ಮನೋದ್ಧಾರ ವರಶಾಪದುದ್ಧಾರ ಕೆಳೆಂಟುಪರಿ ಈಂಟದಾ ತೆರ ನೀನಿರಲೂ ||
    || ಅಂಟದೈ ಲೋಕದಾ ಜಂಜಡ ಭಿನ್ನ ಬಾಧಕಗಳೆಲ್ಲ ಕರಗಿ ಹೋಗುವವು ತಪದ ಗುರಿಯೊಂದೇ ||
    || ಆಗಿರಬೇಕು ಮಾನವ ಗೆಲ್ಲಲು ತಾವರೆಯೆಲೆಯ ನೀರಿನಂತಿರಲು ತಾಪಸಿಯು ||

೪. || ಒಸಗೆಯಿರೆ ನಿರಂತರ ಸೇವೆ ಲಾಭದಾಸೆಯ ಬಿಟ್ಟು ಕೀರುತಿಗೆ ಒಲಿಯದೇ ||
    || ಪರಹಿತದ ಚಿಂತನೆ ನಿರಂತರ ಸುಖ ಲಾಭವಿದೆ ಲೋಕದಲಿ ಆರ್ತರಾ ಸೇವೆಯೇ ||
    || ಪುಣ್ಯಕರ ದಾಸನೇ ಭಗವಂತ ಮುಕ್ತಿಯ ಮಾರ್ಗವಿದು ಹೆದ್ದಾರಿ ದೀನರೊಳು ದೈನ್ಯವೀ ಸೇವೆಯೇ ||
    || ಪರಮ ಕಲ್ಯಾಣಕಾರಕ ಭಕ್ತವತ್ಸಲರೆಂಬ ಬಿರುದಿಗೆ ಒಡೆಯರಯ್ಯಾ ||

೫. || ಓದು ನೀ ನಿರಂತರ ಓದಿದಾ ವಿಚಾರ ಮಂಥನ ಸಾರ ಬೋಧನೆಯೇ ||
    || ಈ ಜಗದಲಿ ಅಧ್ಯಯನಾಧ್ಯಾಪನವು ಕಾಣಿರೊ ಲೋಕದಾ ಜ್ಞಾನವೃದ್ಧಿಗೆ ಕೃಷಿಯಿದು ನಿರಂತರ ||
    || ಒರೆಯಲಾವುದೇ ಇದರ ಸಾಧನೆ ಲೆಕ್ಕಕಿದೆ ಇರು ನೀ ನಿರಂತರಾಧ್ಯಯನದಲಿ ಜ್ಞಾನ ಸುಜ್ಞಾನವೆಲ್ಲಾ ||
    || ದೊರಕಿ ಮುನಿಯಪ್ಪೆ ಮಹಾಂತನಪ್ಪೆಯೊ ಮುಂದೆ ಆತ್ಮೋದ್ಧಾರವೂ ||

೬. || ಚಿಂತಕನಾಗಿರಬೇಕು ನಿರಂತರ ಚಿಂತಿಸುವಾ ವಿಚಾರವಿರಲಿ ||
    || ಒಳ್ಳೆಯದೇ ಲೋಕಹಿತ ಚಿಂತನೆಯಿರಲಿ ನಿರಂತರ ತಿಳಿದ ವಿಚಾರ ಸುಭಗವು ||
    || ಸುಶೀಲವಾಗಿರೆ ಬೋಧಿಸಿರಿ ಮನನಾ ನಂತರದಿ ತಾ ನಡೆದು ತೋರಿರಿ ಬರೇ ಹೇಳುವುದಾಗದಿರೀ ||
    || ನಂತರದಿ ಮನನವಾಗಿರೆ ವಿಚಾರ ಮನದುಬ್ಬಳಕೆ ಹಬ್ಬಕೆ ದಾರಿಯಯ್ಯಾ ||

೭. || ಮೇಟಿಯೊಳು ಮಾಟವಿದೆ ಮೋಹವಿದೆ ಸುಖವಿದೆ ಜ್ಞಾನ ||
    || ವಿದೆ ಕೇಳು ಪಶುವಿನೊಳು ತತ್ವಾರ್ಥ ಚಿಂತನೆ ಯೋಗಶಕ್ತಿಯೂ ಇದೆ ||
    || ಪಶು ಸಂಗೋಪನಾಗಿರುವ ಮಾನವಗೆ ವೇದಾದಿ ವಿಧ್ಯೆಗಳೇ ಎಲ್ಲವೂ ಆಗಿರಲು ಯೋಗಿಯಪ್ಪನು ||
    || ಸುಖ ಸಂಪದವ ಪಡೆಯುತಲಿ ಮೋಕ್ಷವನು ಸೂರಗೈವ ||

೮. || ಲಿಂಗಗಳು ಹನ್ನೆರಡು ತೀರ್ಥಗಳೆಪ್ಪತ್ತೇಳು ಕ್ಷೇತ್ರಗಳು ||
    || ನೂರೆಂಟು ಧಾಮಗಳು ಐವತ್ತ್ನಾಲ್ಕು ವಿಧ್ಯಾಭಂಡಾರಗಳೇಳು ಕಡೆ ||
    || ಇವೆ ಕೇಳು ಇವುಗಳಾ ಸಂದರ್ಶನದಿ ಮನು ಮನ ಸಂಸ್ಕಾರ ಪಡೆಯುತ ಜಿತೇಂದ್ರಿಯ ||
    || ವಪ್ಪನಾಗಲು ಆತ್ಮೋದ್ಧಾರ ಖಂಡಿತವು ಮರುಹುಟ್ಟು ಮುಂದಿಲ್ಲಾ ||

೯. || ಕಾಡುಮೇಡುಗಳಲೆದು ಓಷಧೀ ತರುಲತೆಯ ಪರಿಚಯ ||
    || ಕಡಲ ತೀರವ ಸುತ್ತುತಲಿ ನವರತ್ನಾದಿಗಳು ಸಂಪರ್ಕದಲಿ ಪರಿಕಿಸುತ ||
    || ನಾನಾ ನದೀ ನದಗಳನು ಉತ್ತರಿಸಿ ನಡೆದಾಡುತಲಿ ನಡೆ ನಡೆದು ಮುನ್ನಡೆದು ನೀ ||
    || ನಡೆ ಅಜಭವಾಂಡದ ಸೀಮೆಯುತ್ತರಿಸಲಾಗ ಮುಕ್ತನಪ್ಪೆ ಕಾಣೂ ||

೧೦. || ಸರ್ವ ಸಮರ್ಪಣಾ ಭಾವದಲಿ ಅರ್ಪಿಸುತ ನೀನಿರಲು ||
      || ಎಲ್ಲವಕು ಗತಿ ನೀನೇ ಗೋವಿಂದಾವೆಂಬ ಭಾವದಲಿ ನಾನೆಂಬುದನು ||
      || ಬಿಟ್ಟು ಸರ್ವರೊಳಗೊಂದಾಗಿ ದಾಸರ ದಾಸ ದಾಸಾನುದಾಸ ನೆಂದೆಂಬ ಆತ್ಮಭಾವದೊಳೂ ||
      || ಭಿನ್ನತೆಯ ಬಿಡಲು ಹರಿಯೊಳಗೊಂದಾಗುವೆಯೊ ಮನುಜಾ ||

ಈ ರೀತಿಯಲ್ಲಿ ಹತ್ತು ಮಾರ್ಗಗಳನ್ನು ತೋರಿಸುತ್ತಾ ಗೃತ್ಸಮದರು ಮಾನವ ಜನ್ಮ ಸಾರ್ಥಕ್ಯ ಪಡೆಯಲು ಸಾಧ್ಯವೆಂದರು. ಆದರೆ ಎಲ್ಲರೂ ಇದರಲ್ಲಿ ತೊಡಗಲಾರರು. ಅದಕೆ ಕಾರಣವಿದೆ. ಅದೇ ಈ ಲೆಕ್ಕವೆಂದು ಒಂದು ವಿಶಿಷ್ಟ ಸಮೀಕರಣ ಬರೆದು ಯಾರು ಈ ಮಾರ್ಗ ಹಿಡಿಯಬಲ್ಲರು? ಯಾರು ದಾಟಬಲ್ಲರು? ಯಾಕೆ? ಎಂಬುದಕ್ಕೆ ಈ ಗಣಿತ ಸೂತ್ರವೇ ಉತ್ತರ.

ಋಗ್ವೇದ ಮಂಡಲ -೨, ಸೂಕ್ತ-೧, ಮಂತ್ರ-೩,೪
त्वम॑ग्न॒ इन्द्रो॑ वृष॒भः स॒ताम॑सि॒ त्वं विष्णु॑रुरुगा॒यो न॑म॒स्य॑: ।
त्वं ब्र॒ह्मा र॑यि॒विद्ब्र॑ह्मणस्पते॒ त्वं वि॑धर्तः सचसे॒ पुरं॑ध्या ॥
त्वम॑ग्ने॒ राजा॒ वरु॑णो धृ॒तव्र॑त॒स्त्वं मि॒त्रो भ॑वसि द॒स्म ईड्य॑: ।
त्वम॑र्य॒मा सत्प॑ति॒र्यस्य॑ स॒म्भुज॒द त्वमंशो॑ वि॒दथे॑ देव भाज॒युः ॥

ಒಂದಾರು ಮೂರರಲಿ ಹರಿಯಿರಲು ಶಿವನಪ್ಪೆ ಶಿವಮೊತ್ತದಿಂದಲಿ
ಬೊಮ್ಮನನ ಭಾಜಿಸಲು ಇಂದ್ರನೊ ವರುಣನೊ ಮರುತನೊ
ಒಂದಾಗಿ ದೇವನಪ್ಪೆಯೊ ಮನುಜ ಅದಕೆ ಬೇಕೈ ನಿನ್ನ ಬಂಧ ಬಾಂಧವ ಸಹೋದರ ಪುಣ್ಯಸಂಖ್ಯೆಗಳೂ ||

ಇಂದು ನಿನ್ನಯ ಮೊತ್ತದಧಿಕ ಪಶುವಿರಲು ಮೊತ್ತದೊಳೇಳು ಜನ್ಮ
ವೆಂದು ಉತ್ತರಿಸುವುದೊ ಧರ್ತ ವಿಧರ್ತದೊಳು ಅರ್ಥವಿರೇ
ಅಂದೇ ನೀನಿದನೆಲ್ಲ ತೊಡಕಿಕೊಂಡವವನಲ್ಲವೆಂಬರಿವು ಮೂಡುವುದು ನಿನ್ನಾತ್ಮದರಿವು ಕಾಣೂ ||

- ಕೆ.ಎಸ್ ನಿತ್ಯಾನಂದ,
ಅಗಸ್ತ್ಯಾಶ್ರಮ ಗೋಶಾಲೆ, 
ಬಂದ್ಯೋಡು, ಕಾಸರಗೋಡು