Friday, 25 April 2014

ಮಾಘ ಮಾಸ, ಶಿವರಾತ್ರಿ, ಶಿಶಿರ ಋತು ವರ್ಣನೆ

ಅಂಗದವದು ಚಂದ್ರಕಲೆಯು ಚತುರ್ದಶಿಯೆಂಬರು
ಇಂದುವಿನ ಅಂದಕಾಣದ ರಿಕ್ತ ತಿಥಿಯದು
ಪ್ರಪಂಚಕೆ ವ್ಯವಹಾರದಲಿ ಅಶುಭವೆಂಬರು
ಶಂಕರನು ಶುಭಕರನು ಆತ್ಮೋನ್ನತಿಗೆ 
ಶಿವರಾತ್ರಿ ಪ್ರತಿಮಾಸ ವ್ರತವದು 
ಚಂದಿರನ ಪ್ರೀತಿಯಂತ್ಯದಿಂ ಭದ್ರದಾರಂಭವನಕ ಉಪಾಸಿತವು ||  ||

ಶಿವನುಡಿ:-

ಮಾಘ ಕಾಲವೇ ಪುಣ್ಯಕರ ಲೋಕಾನಂದಕರ ಈ 
ಮಾಘ ಪುಷ್ಕರವೆಂದು ಪೇಳಲು ಮಾತೆ ಪುಣ್ಯಕರ
ಮಾಘದಾ ಆದಿಯಲಿ ನೈಮಿಶಾರಣ್ಯದಲಿ ಯಾಗಾಗ್ನಿ ತಂಪಾಗಿ ಚಂದ್ರನೂ ನೆರೆಯುವನೂ |
ಮಾಘವೇ ಪೇಳುತಿದೆ ಅಘವೆಮಗೆ ಬೇಡ ಮಾ +
ಅಘವೆಂಬ ಶಬ್ದಾರ್ಥವೇ ಮಾಘದ ಅಂತರಾರ್ಥವು ನಿಜ
ಮಾಘದಲಿ ಸಾಧಿಸದ ಸಾಧನೆಯಿಲ್ಲ ಅಲ್ಲಿ ನಾ ಮೃತ್ಯುಂಜಯನಾದೆ ಕೇಳು ಲಲನೆ ||  ||

ಪುಣ್ಯಕರ ಮಾಸವದು ಈ ಮಾಸದಲಿ ತೀರ್ಥಯಾತ್ರೆಯಲಿ
ಪುಣ್ಯಪ್ರದ ಫಲವು ವಿಶೇಷ ಸಂಕ್ರಾಂತಿ ಘಟಿಸಲಾನುಗ್ರಹ
ಪುಣ್ಯವನಂತವೈ ಮಾಘದ ಮಹಿಮೆ ವರ್ಣಿಸಲಸದಳವು ಶಿವ ತಾ ಮೃತ್ಯುಂಜಯನಾದ ಕಾಲಾ ||
ಪುಣ್ಯವನಂತ ಕೋಟಿ ಲಭಿಸುವುದು ಸ್ನಾನದಲಿ ಹರಿನಾಮ ಸ್ಮ
ರಣೆಯೇ ತೀರ್ಥಸ್ನಾನವೇ ಆರ್ತ ಭೋಜನ ಸ್ಮಾರ್ತ
ಪುಣ್ಯಕರ್ಮಗಳೆಲ್ಲ ಅತುಲ ಅನಂತಫಲದಾಯಕವು ಕೇಳೆಂಬೆ ಲಲನೆ ||  ||

ಇಲ್ಲೊಂದು ರಹಸ್ಯವಡಗಿದೆ ಕೇಳು ಈ ಭವವು
ಇನ್ನೆಂದು ಬೇಡವೆಂಬಾ ಲೋಗರಿಗೆ ಮಾಘವೆಂಬಾ
ಇದೊಂದೆ ನಾಮಸ್ಮರಣೆ ಸಾಕೈ ಮಾ+ಘ ದೊಳು ಸಕಲ ಅಘ ನೀಗುವುದೂ |
ಇಂದು ಈ ಲೋಗರರಿಯದೆ ಅಘವ ಬೇಕೆಂದು
ಎಂದೆಂದು ಬೇಡುವರು ಅಘವವರ ಬಿಡದು
ಎಂದಿಗೂ ಮುಕ್ತಿ ಸಂಪದವಿಲ್ಲ ಸುಖವಿಲ್ಲ ಈ ಅಜ್ಞಾನಿಲೋಗರಿಗೆ ಬುದ್ಧಿ ಪೇಳಲಾರೂ ||  ||

ಇದುವೆ ಕೇಳೈ ಶಿಶಿರದಲಿ ಮಾಘ ಫಾಲ್ಗುಣರ ವೃತ್ತಿ
ಯದು ಶತಭಿಷವು ಆದಿಯಾಗಿಹುದು ರೇವತ್ಯಂತ
ವಿದು ಶಿಶಿರದಾಕಾಲ ಕೋಶಗಳು ಬೆಳೆಯುವವು ದೇಹದಲಿ ಶೇಷನಾಸನದೀ
ಇದು ಕಾಲವಿದು ಕಾಲ ವಿದುವೆ ಕಾಲವು ಭೂತ
ವಿದು ಭವ್ಯವಿದು ವರ್ತಮಾನವೆಂದೆಂಬ ಕಾಲ
ವಿದುವೇ ಮಾರ್ತಾಂಡನೆಂದೆಂಬ ಮೃತ್ಯುಹರ ಕಾಲ ಜೀವಿಗಳಿಗೆ ಮರುಜನ್ಮವೀವ ಕಾಲಾ ||  ||

Monday, 21 April 2014

ಪುರಾಣಗಳ ವೇದಮೂಲ

ಪ್ರಪಂಚದ ಜೈವಿಕ ಸರಪಳಿಯಲ್ಲಿರುವ 84 ಲಕ್ಷ ಜೀವಪ್ರಭೇದಗಳಲ್ಲಿ ಬೌದ್ಧಿಕತೆಯಲ್ಲಿ ಮಾತ್ರ ಮನುಷ್ಯನು ಶ್ರೇಷ್ಠನೆಂದು ಅನೂಚಾನವಾಗಿ ಹೇಳಲ್ಪಟ್ಟಿದೆ. ಆದರೆ ಭೌತಶಾಸ್ತ್ರದ ರೀತಿ ಭ್ರಮೆ ಹಾಗೂ ಭ್ರಾಂತಿಗಳಿಂದ ಮನುಷ್ಯನೂ ಹೊರಗಿರುವುದಿಲ್ಲ. ಅದನ್ನೇ ಅಧ್ಯಾತ್ಮದಲ್ಲಿ ಮಾಯೆ ಎಂದರು. ಹೀಗಿರುವಾಗ ಮಾನವ ರಚಿತ ಗ್ರಂಥದಿಂದ ಪೂರ್ಣ ಜ್ಞಾನ ದೊರೆಯಲು ಕಷ್ಟಸಾಧ್ಯ. ವೇದವೆಂಬುದು ಮನುಷ್ಯ ಅಥವಾ ಈಶ್ವರ ಅರ್ಥಾತ್ ಯಾವುದೇ ದೇವರು ಎಂದು ಹೇಳುವ ಒಡೆಯನಿಂದ ರಚಿಸಲ್ಪಟ್ಟದ್ದಲ್ಲ. ಪರಮೇಶ್ವರ ನಿಶ್ವಾಸವನ್ನಿತ್ಯಾ ಅನಾದಯೋನಂತಾ ಅಪೌರುಷೇಯಃ ಎಂದು ವರ್ಣಿಸಿದ್ದಾರೆ. ಪ್ರಳಯದಲ್ಲಿ ಪರಮೇಶ್ವರನ ಅಂತರ್ಹಿತವಾದ ಅದು ಈಶ್ವರನ ನಿಶ್ವಾಸ ರೂಪದಲ್ಲಿ ಹೊರಬರುತ್ತದೆ. ಮೊದಲು ಬ್ರಹ್ಮನು ವೇದಗಳ ಜ್ಞಾನವನ್ನು ಪಡೆಯುತ್ತಾನೆ. ನಂತರ ಋಷಿಗಳು ನಾದನುಸಂಧಾನ ಪೂರ್ವಕ ತಪಸ್ಸನ್ನಾಚರಿಸೇ, ತಮ್ಮ ಸಮಕ್ಷದಲ್ಲಿ ತದನುರೂಪವಾದ ವೇದದ ಅಂಶವು ಪ್ರಾದುರ್ಭವಿಸುತ್ತದೆ. ಆ ಋಷಿಗಳು ತಮ್ಮ ವಿಧ್ಯಾರ್ಥಿಗಳಿಗೆ ವೇದ ಶಿಕ್ಷಣ ನೀಡುತ್ತಾರೆ. ಹೀಗಿ ಸ್ವಶಿಷ್ಯ, ಪ್ರಶಿಷ್ಯ, ಅವರ ಶಿಷ್ಯರಿಗೆ ಅವಿಚ್ಛಿನ್ನವಾಗಿ ಗುರು-ಶಿಷ್ಯ ಪರಂಪರೆಯಲ್ಲಿ ವೇದಗಳ ಪ್ರಚಾರವಾಗುತ್ತಾ ಬರುತ್ತದೆ.

          ಹುಟ್ಟಿದ ಶಿಷುವು ಸಂಸ್ಕಾರ ಪಡೆಯುತ್ತಾ ಬಾಲಕನಾಗಿ, ದ್ವಿಜನಾಗಿ, ಉಪನೀತನಾಗಿ, ಬ್ರಹ್ಮಚರ್ಯ ಪೂರ್ವಕ ಚಿರಕಾಲ ಗುರುಗ್ರಹದಲ್ಲಿ ಉಷಿತವಾಗಿ ವೇದಾಭ್ಯಾಸ ನಿರತನಾಗುತ್ತಾನೆ. ವೇದಾರ್ಥ ತಿಳಿಯುವ ಸಲುವಾಗಿ ಬ್ರಾಹ್ಮೀ ಮೂಲದ ಅಕ್ಷಾನುಸಂಧಾನ ಪೂರ್ವಕ ಶಿಕ್ಷಾ, ಕಲ್ಪ, ವ್ಯಾಕರಣ, ನಿರುಕ್ತ, ಜ್ಯೋತಿಷ, ಛಂದಸ್ಸುಗಳೆಂಬ ಷಟ್ಶಾಸ್ತ್ರಗಳ ಅಧ್ಯಯನವನ್ನೂ ಮಾಡುತ್ತಾನೆ. ಬಹಳ ಪರಿಶ್ರಮದಿಂದ ವೇದಗಳ ವಾಸ್ತವಿಕ ಅರ್ಥವು ವೇದ್ಯವಾಗುತ್ತದೆ. ಅದರೊಂದಿಗೆ ನಿಷ್ಕಾಮ ಭಾವನಾ ಪೂರ್ವಕ ವೈಧಿಕ ಕರ್ಮಾನುಷ್ಠಾನಗಳಿಂದ ಅಂತಃಕರಣ ನೈರ್ಮಲ್ಯ ಉಂಟಾಗಿ, ನಿರ್ಮಲ ಮನಸ್ಸಿನಿಂದ ವಾಸ್ತವಿಕ ಬ್ರಹ್ಮಜ್ಞಾನ ಉಂಟಾಗಲು ಸಾಧ್ಯವಾಗುತ್ತದೆ. 

          ವ್ಯಾಸ ವಾಲ್ಮೀಕಿ ಇತ್ಯಾದಿ ಮಹರ್ಷಿಗಳು ಅಲೌಕಿಕ ತಪಸ್ಸನ್ನಾಚರಿಸಿ ಪರಮಾತ್ಮನ ಅನುಕಂಪದಿಂದ ವೇದಗಳ ಯಥಾರ್ಥಮರ್ಥವನ್ನು ತಿಳಿದು ಅದನ್ನು ಲೋಕಕ್ಕೆ ಪರಿಚಯ ಮಾಡುವ ಸಲುವಾಗಿ ಸನ್ನದ್ಧರಾಗುತ್ತಾರೆ. ಸಾಮಾನ್ಯವಾಗಿ ಎಲ್ಲರಿಗೆ ಬಹಳ ಕಾಲ ಗುರುಕುಲದಲ್ಲಿರಲು ಸಾಧ್ಯವಾಗದಿರಬಹುದು. ಪ್ರಾಪಂಚಿಕ ವ್ಯಾಪಾರದ ನಡುವೆ ವೇದಾಸಾರವನ್ನು ತಿಳಿಯಲು ಬೇಕಾದ ಬ್ರಹ್ಮಚರ್ಯ-ತಪಃ-ಸ್ವಾಧ್ಯಾಯ-ಅನುಷ್ಠಾನೇತ್ಯಾದಿ ಕಠಿಣ ಪರಿಶ್ರಮ ಮಾಡಲು ಕಷ್ಟಸಾಧ್ಯ. ಅಂಹಾ ಜನರಿಗೆ ವೇದಗಳ ನಿಗೂಢಾರ್ಥ ತಿಳಿಯಲು ಸರಸ, ಸರಳ, ಸುಬೋಧ, ಸುರುಚಿ ಪೂರ್ಣವಾಗಿ ಮತ್ತು ಓಘ ಸಹಿತವಾಗಿ ಮೂಲದಲ್ಲಿ ಬ್ರಾಹ್ಮೀ ಭಾಷೆಯಲ್ಲಿ ಇತಿಹಾಸ ಪುರಾಣಗಳನ್ನು ದಾಖಲಿಸಿರುತ್ತಾರೆ. 

          ಈ ಪುರಾಣಗಳ ಅಧ್ಯಯನದ ವಿನಃ ವೇದಾರ್ಥ ತಿಳಿಯುವುದು ಬಹಳ ಕಷ್ಟವೆಂದರು. ಪ್ರಪಂಚದ ಅತ್ಯಂತ ಪುರಾತನ ಕೃತಿಯೆಂದರೆ ಋಗ್ವೇದ ಎಂಬುದು ನಿರ್ವಿವಾದ. ಸ್ವಯಂ ನಾರಾಯಣನೇ ವ್ಯಾಸ ರೂಪದಲ್ಲಿ ವೇದಗಳನ್ನು ವಿಸ್ತರಿಸಿ ಪುರಾಣಗಳಾಗಿ ರಚಿಸಿದನು ಎಂಬುದು ಉಕ್ತಿ. ಗೂಢವಾಗಿ ವರ್ಣಿತ ಅರ್ಥವನ್ನು ಮೋದ, ಆಮೋದ, ಪ್ರಮೋದಗಳ ಪೂರ್ವಕ ರಂಜನೀಯವಾಗಿ ಆಖ್ಯಾನ, ಉಪಾಖ್ಯಾನ, ಗಾಥ, ಕಲ್ಪಶುದ್ಧಿಗಳೆಂಬ ಚಕ್ರಗಳಲ್ಲಿ ಪುರಾಣಾರ್ಥ ವಿಶಾರದರಾದ ವ್ಯಾಸರು ಪುರಾಣ ಸಂಹಿತೆಗಳನ್ನು ರಚಿಸಿರುತ್ತಾರೆ. 

          ವೇದವಿಜ್ಞಾನದ ಮನೋರಂಜಕ ಆಖ್ಯಾನದಲ್ಲಿ ಪರಿಣತಿ ಹೊಂದಿದ ಪುರಾಣಗಳಲ್ಲಿ ಅಪೂರ್ವ ಕೌಶಲ್ಯವಿದೆ. ವೇದಗಳ ವಾಸ್ತವಿಕ ರಹಸ್ಯ ತಿಳಿಯಲು ಪ್ರಾಚೀನಾಖ್ಯಾನ, ಉಪಾಖ್ಯಾನ ಇತ್ಯಾದಿ ವರ್ಣನೆಯಲ್ಲಿ ವಿವಿಧ ಉಪದೇಶಗಳನ್ನು ನೀಡಿ, ವಿಭಿನ್ನ ವಿಷಯಗಳನ್ನು ಉತ್ಕಟ ಲಾಲಸೆಯಿಂದ ಪರಿಗ್ರಹಿಸಲು, ಅಂತಃಕರಣವನ್ನು ಭಗವನ್ಮುಖವಾಗಿಸಲು, ಐತಿಹಾಸಿಕ ಘಟನೆಗಳನ್ನು ಉಲ್ಲೇಖಿಸುವ ಅವಶ್ಯಕತೆಯಂತಹಾ ವಿಶೇಷ ವಿಚಾರಗಳ ವರ್ಣನೆಯು ಪುರಾಣಗಳಲ್ಲಿದೆ. ಸರ್ವ ಪೌರಾಣಿಕರ ಕಥೆಗಳ ಮೂಲವು ವೇದವೇ ಆಗಿದೆ. ಪುರಾಣದಲ್ಲಿ ಲಿಖಿತ ವಿಚಾರವು ಯಾವುದೋ ವೇದ ಮಂತ್ರದ ವಿಸ್ತೃತ ವ್ಯಾಖ್ಯಾನವಾಗಿರುತ್ತದೆ. ಉದಾಹರಣೆಗೆ ಋಗ್ವೇದದ ಇದಂ ವಿಷ್ಣುರ್ವಿಚಕ್ರಮೇ ತ್ರೇಧಾ ನಿದಧೇ ಪದಮ್ ಇತ್ಯಾದಿಯಾಗಿ ವರ್ಣಿತ ವಿಚಾರವು ವಾಮನ ಪುರಾಣದಲ್ಲಿ ವಿಸ್ತಾರವಾಗಿ ವರ್ಣಿತವಾಗಿದೆ. ಆದರೆ ಆಖ್ಯಾಯಿಕೆಯನ್ನು ಸವಿಸ್ತಾರವಾಗಿ ವರ್ಣಿಸುವುದು ವೇದದ ಉದ್ದೇಶವಲ್ಲ. ವೇದದ ಯಾವುದೋ ಒಂದು ವಿಚಾರದ ಉದ್ದೇಶವನ್ನೋ, ಸಂಕ್ಷೇಪವಾಗಿ ನಿರ್ದಿಷ್ಟ ಕಥೆಯನ್ನೋ ಪುರಾಣದಲ್ಲಿ ವಿಸ್ತೃತ ಆಖ್ಯಾಯಿಕ ರೂಪದಲ್ಲಿ ವರ್ಣಿಸಲಾಗಿರುತ್ತದೆ. ಸಾಧಾರಣ ಮನುಷ್ಯರಲ್ಲಿ ಕುತೂಹಲ ಪೂರ್ವಕ ಭಗವದ್ಭಕ್ತ್ಯುತ್ಪಾದನೆಯು ಪೌರಾಣಿಕ ಹಾಗೂ ಆಖ್ಯಾಯಿಕರ ಪ್ರಮುಖ ಲಕ್ಷ್ಯವಾಗಿದೆ.

          ಶ್ರೀಮದ್ಭಾಗವತಾದಿ ಪುರಾಣ ಗ್ರಂಥಗಳಲ್ಲಿ ಜಗನ್ಮಾತೆ, ಗಿರಿರಾಜನ ಕುಮಾರಿ, ಭಗವತಿ, ಪಾರ್ವತಿಯು ಉಮಾ ರೂಪದಲ್ಲಿ ಜನ್ಮಗ್ರಹಿಸಿದ ಕಥೆಯು ಕಂಡುಬರುತ್ತದೆ. ಕೇನೋಪನಿಷತ್ತಿನಲ್ಲಿ ಬ್ರಹ್ಮವಿಧ್ಯೆಯಿಂದ ಹೈಮವತಿಯ ಉಮಾರೂಪದ ಆವಿರ್ಭವವು ವರ್ಣಿತವಾಗಿದೆ ಸ ತಸ್ಮಿನ್ನೇವಾಕಾಶೇ ಸ್ತ್ರಿಯಮಾಜಗಾಮ ಬಹುಶೋಭಮಾನಾಮುಮಾಂ ಹೈಮವತೀಮ್|”. ಅಥರ್ವವೇದದಲ್ಲಿ (ಕಾಂ 8. ಸೂ. 3,4,5) ಮಹಾರಾಜ ಪೃಥುವಿನ ಪೃಥ್ವೀದೋಹನವು ಸಂಕ್ಷೇಪವಾಗಿ ವರ್ಣಿತವಾಗಿದೆ. ಅದನ್ನೇ ಭಾಗವತದಲ್ಲಿ ವಿಸ್ತರಿಸಿದ್ದಾರೆ. ವೇದವು ಉಪಾಖ್ಯಾನದ ಮೂಲ ಉದ್ದೇಶವುಳ್ಳದ್ದಲ್ಲ. ಸಂಧಿ ವಿಶೇಷಗಳಲ್ಲಿ ವೇದವು ಉದಾಹರಣೆಯ ರೂಪದಲ್ಲಿ ಉಪಾಖ್ಯಾನವೀಯುತ್ತದೆ. ಆದರೆ ಪುರಾಣಗಳಲ್ಲಿ ಉಪಾಖ್ಯಾನಗಳು ಸಂಘಟಿತವಾಗಿ ಸಮಾವೇಶಗೊಂಡಿರುತ್ತವೆ. ಇಲ್ಲಿ ಒಂದು ಉಪಾಖ್ಯಾನವೇ ಬಹುವಿಸ್ತಾರವಾಗಬಹುದು. ವೇದ ಪುರಾಣಗಳು ಒಂದೇ ಸನಾತನ ಧರ್ಮದ ಅಭಿವೃದ್ಧಿಗಾಗಿ, ಲೋಕಕಲ್ಯಾಣಕ್ಕಾಗಿ ವಿಭಿನ್ನ ಕಾಲಘಟ್ಟದಲ್ಲಿ ಆವಿರ್ಭವಿಸಿದ ಮಹಾಗ್ರಂಥಗಳೆಂದು ಮಾನ್ಯತೆ ಪಡೆದಿವೆ. ವೇದ ಪುರಾಣಗಳಲ್ಲಿ ಭಿನ್ನತೆಯಿಲ್ಲ. ವಿಭಿನ್ನತೆಯು ಉಭಯ ವರ್ಣನಾ ಪದ್ಧತಿಗಳಲ್ಲಿ ಕಂಡುಬರಬಹುದು. ಆದರೆ ವೇದವೆಂಬ ಮೂಲ ಸೂತ್ರವನ್ನು ಅರಿತವರಿಗೆ ಭಿನ್ನತೆಯನ್ನರಿಯುವುದು ಸುಲಭ. ಹಾಗಾಗಿ ವೇದಾರ್ಥ ವಿವರಣೆಯ ಉದ್ದೇಶದಲ್ಲಿ ಪುರಾಣ-ವೇದೈಕ್ಯತೆಯು ನಿರ್ವಿವಾದವೆಂದು ಸಿದ್ಧವಾಗುತ್ತದೆ.

ಸ್ವಂತ ಅಧ್ಯಯನ ವರದಿ
ಹೇಮಂತ್ ಕುಮಾರ್ ಜಿ.

Wednesday, 16 April 2014

New born babies can Swim in Water, says Vedas

In one part of Vedic Gynecology (Prasutika Vijnaana) propounded by Sage Bharadwaaja in Rigveda, says that there used to be a procedure to put new born babies into water & they can swim fantastically. This initial training revokes the fear of Water which gives strength to withstand toughest problems in life. One of the African tribes still practice the process of leaving new born baby in the water tub for some time, where it swims without any trouble. Babies are born with natural swimming abilities and can hold their breath. However, this ability quickly disappears. Some related examples are quoted below:


Sunday, 13 April 2014

ವಿಶ್ವಾಮಿತ್ರ ಗಾಯತ್ರಿ ಚರಿತ್ರೆ


ನಮ್ಮ ಸೂತ್ರಕಾರರು ಗಾಯತ್ರಿಗೂ ವಿಶ್ವಾಮಿತ್ರನಿಗೂ ಅವಿನಾಭಾವ ಸಂಬಂಧವನ್ನು ಕಲ್ಪಿಸಿರುತ್ತಾರೆ. ಅವನು ಈ ಆಧ್ಯಾತ್ಮಿಕ ಜಗತ್ತಿಗೆ ಗಾಯತ್ರಿ ಮಂತ್ರವನ್ನು ಕಂಡುಹಿಡಿದು ನೀಡಿದ ಎಂಬ ವಿಚಾರ ಚಾಲ್ತಿಯಲ್ಲಿದೆ. ಅದಕ್ಕೆ ಸಮಾಜವು ಕೃತಜ್ಞತಾ ಸಮರ್ಪಣೆಯ ರೂಪದಲ್ಲಿ ಜಪ ಪೂರ್ವದಲ್ಲಿ ಅವನ ನಾಮಸ್ಮರಣೆ ಮಾಡುತ್ತಿದೆ. ಹಾಗಿದ್ದಲ್ಲಿ ಈ ಗಾಯತ್ರಿ ಎಂದರೇನು? ನಿಜವಾಗಿಯೂ ಇದು ಮಂತ್ರವೇ? ಅದನ್ನು ವಿಶ್ವಾಮಿತ್ರ ಹೇಗೆ ಕಂಡುಹಿಡಿದ? ಈ ವಿಶ್ವಾಮಿತ್ರ ಯಾರು? ಎಂಬ ವಿಚಾರ ವಿಮರ್ಷೆ ಮಾಡೋಣ.ಮುಖ್ಯವಾಗಿ ಗಾಯತ್ರಿ ಎಂದು ಹೇಳುವುದು ಮಂತ್ರವಲ್ಲ, ಅದು ಒಂದು ಛಂದಸ್ಸು. ರಾಗಮಾಲಿಕೆಯ ಪ್ರಕಾರ ಗಾಯತ್ರಿಯಲ್ಲದೆ ಅನುಷ್ಟುಪ್, ತ್ರಿಷ್ಟುಪ್, ಪಂಕ್ತಿ, ಜಗತೀ ಇತ್ಯಾದಿ ನಾನಾ ಛಂದಸ್ಸುಗಳಿವೆ. ಹಾಗೆಯೇ ಗಾಯತ್ರಿಯೂ ಕೂಡ ಒಂದು ಛಂದೋ ಪ್ರಕಾರವೇ ವಿನಃ ಮಂತ್ರ ಪ್ರಕಾರವಲ್ಲ. ಈಗ ಪ್ರಚಲಿತವಿರುವ ಋಗ್, ಯಜು, ಸಾಮ, ಅಥರ್ವ ವೇದಗಳು; ಬ್ರಾಹ್ಮಣ, ಅರಣ್ಯಕ, ಉಪನಿಷತ್ತುಗಳನ್ನು ಹುಡುಕಿದಾಗ ಸಾವಿರ ಸಾವಿರ ಸಂಖ್ಯೆಯ ಮಂತ್ರಗಳು ಸಿಗುತ್ತವೆ. ಹಾಗೆಯೇ ಈ ಗಾಯತ್ರಿ ಎಂದು ನಾವು ಏನು ಜಪಿಸುತ್ತವೆ, ಆ ಮಂತ್ರವೂ ಕೂಡ. ಈಗ ನಾವು ಜಪಿಸುತ್ತಿರುವ ಗಾಯತ್ರಿ ಮಂತ್ರ " ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ " ಈ ಮಂತ್ರವು ಋಗ್ವೇದದ ೩ನೇ ಅಷ್ಟಕ, ೩ನೇ ಮಂಡಲ, ೪ನೇ ಅಧ್ಯಾಯ, ೬೨ನೇ ಸೂಕ್ತದ, ೧೦ನೇ ಮಂತ್ರವಾಗಿರುತ್ತದೆ.ಈ ಮಂತ್ರವು ಒಂದು ಯುಗ್ಮದೇವತಾಕವಾದ ಮಂತ್ರವಾಗಿರುತ್ತದೆ. ಇದೇ ಅಲ್ಲದೆ ಯಜು, ಸಾಮ ಹಾಗೂ ಅಥರ್ವದಲ್ಲೂ ಈ ಮಂತ್ರವು ಕಂಡುಬರುತ್ತದೆ. ಸಾಕ್ಷಾತ್ ಬ್ರಹ್ಮ ಮುಖೋದ್ಗೀತವಾದ ಈ ಮಂತ್ರವು ಯಾರ ಸೃಷ್ಟಯೂ ಅಲ್ಲ ಮತ್ತು ಈಗಿನ ವಿಶ್ವಾಮಿತ್ರ ಮಂಡಲವು ಹಿಂದೆ ಗೃತ್ಸಮದ ಮಂಡಲವೆಂದೇ ಇತ್ತು. ಹಾಗಿದ್ದ ಮೇಲೆ ವಿಶ್ವಾಮಿತ್ರನಿಗೆ ಈ ಪಟ್ಟ ಎಲ್ಲಿಂದ ಬಂತು? ಹೇಗೆ ಬಂತು? ಕಾರಣವಿದೆ. ವಿಶ್ವಾಮಿತ್ರನು ತನ್ನ ತಪಃ ಶಕ್ತಿಯಿಂದ ಈ ಗಾಯತ್ರಿ ಛಂದಸ್ಸಿನ ಛಂದೋಸೂತ್ರವನ್ನು ಅಭ್ಯಸಿಸಿ ಆ ಛಂದೋಸೂತ್ರದಂತೆ ಆ ಮಂತ್ರಾಧಿಷ್ಠಾನ ದೇವತೆಯ ಸಾಕ್ಷಾತ್ಕಾರ ಹೊಂದಲು ಸಾಧ್ಯ ಎಂದು ಕಂಡುಹಿಡಿದು, ತತ್ಕಾರಣದಿಂದ ವಿಶ್ವಾಮಿತ್ರನಿಗೆ ಈ ಮಂತ್ರದ ದ್ರಷ್ಟಾರ ಎಂದು ಹೇಳುವುದು. ಇಲ್ಲಿ ಇನ್ನೊಂದು ವಿಚಾರ ಉದ್ಭವಿಸುತ್ತದೆ. ಗಾಯತ್ರಿ ಛಂದಸ್ಸಿನ ಸಾವಿರಾರು ಮಂತ್ರಗಳು ವೇದದಲ್ಲಿದ್ದರೂ, ಆಯಾಯ ಮಂತ್ರಗಳ ಅಧಿಷ್ಠಾತೃವಾಗಿ ಬೇರೆ ಬೇರೆ ದೇವತೆಗಳಿದ್ದರೂ ಈ ಮಂತ್ರವನ್ನೇ ಏಕೆ ವಿಶ್ವಾಮಿತ್ರನು ಅನುಷ್ಠಾನಕ್ಕೆ ಆರಿಸಿದ? ಅವನ ಉದ್ದೇಶವೇನು? ಎಂಬ ಜಿಜ್ಞಾಸೆ ಮೂಡುತ್ತದೆ. ಹಾಗಾಗಿ ಮುಖ್ಯವಾಗಿ ವಿಶ್ವಾಮಿತ್ರ ಯಾರು ಎಂದು ವಿವೇಚಿಸೋಣ.

ವಿಶ್ವಾಮಿತ್ರನ ಜನನ ವಿಚಾರವಾಗಿ ವಿವೇಚಿಸಿದಾಗ ಈತನು ಒಬ್ಬ ಚಂದ್ರವಂಶದ ಕ್ಷತ್ರಿಯ ರಾಜ, ಅವನ ವಂಶದಲ್ಲಿ ಹಿರಿಯನೊಬ್ಬನು ಕುಶಿಕನೆಂಬುವವನು ರಾಜನಗಿದ್ದಾಗ ಮಹಾ ಪ್ರಜಾಪೀಡಕನೂ, ಅತೀ ಕ್ರೂರಿಯೂ, ಸದಾ ದುರಾಲೋಚನಾಪರನೂ ಆಗಿದ್ದನು. ಅವನ ನಿಜನಾಮಧೇಯ ಲೋಮಶನೆಂದಿದ್ದರೂ ಸಹಾ ಕು = ಕೆಟ್ಟ, ಶಿಕ = ಸಂಚು; ಸದಾ ಕೆಟ್ಟ ಆಲೋಚನೆ ಮಾಡುವನಾಗಿದ್ದರಿಂದ ಕುಶಿಕನೆಂಬ ಹೆಸರೇ ಪ್ರಸಿದ್ಧವಾಯಿತು. ಅವನಿಂದ ಮುಂದೆ ಆ ವಂಶಸ್ಥರಿಗೆ ಕುಶಿಕ ವಂಶಸ್ಥರು ಅಥವಾ ಕೌಶಿಕರು ಎಂಬುದು ಚಾಲ್ತಿಯಲ್ಲಿ ಬಂದಿತು. ಆ ಚಂದ್ರವಂಶದಲ್ಲಿ ಗಾಧೀ ಎಂಬ ರಾಜನು ರಾಜ್ಯಭಾರ ಮಾಡತ್ತಿದ್ದ. ಆ ಕಾಲದಲ್ಲಿ ಹೈಹಯರು, ಕಿರಾತೀಯರು, ಪಾರ್ವತೇಯರು ಎಲ್ಲರೂ ಕ್ಷತ್ರಿಯ ಕುಲದವರಾದರೂ ನಿಸ್ತೇಜಿಗಳಾಗಿ ನಿರ್ಬಲರಾಗಿದ್ದರು. ಸದಾ ಬ್ರಾಹ್ಮಣರೊಂದಿಗೆ ಜಗಳ ಕಾಯುತ್ತಿದ್ದರು.

ದೈವ ಬ್ರಾಹ್ಮಣ ಪೀಡಕರಾದ ಇವರಿಗೆ ಬ್ರಹ್ಮ ತೇಜಸ್ಸಿನ ಮುಂದೆ ಸೋಲೇ ಖಚಿತವಾಯಿತು. ಆಗ ನಾವೂ ಕೂಡ ತೇಜಸ್ವಿಗಳಾಗಿ ಪ್ರಪಂಚದಲ್ಲಿ ಚಕ್ರಾಧಿಪತ್ಯವನ್ನು ಸ್ಥಾಪಿಸಬೇಕೆಂಬ ಹೆಬ್ಬಯಕೆಯೇ ಇ ಕುಟಿಲ ಕ್ಷತ್ರಿಯರದಾಗಿತ್ತು. ಆದರೆ ಯಾವುದೇ ಮಾರ್ಗದಿಂದ ಪ್ರಯತ್ನಿಸಿದರೂ ಜಯ ಸಿಗುತ್ತಿರಲಿಲ್ಲ. ಬ್ರಾಹ್ಮಣರು ಅಸ್ತ್ರವಿಧ್ಯಾ ರಹಸ್ಯವನ್ನು ಬಿಟ್ಟು ಕೊಡುತ್ತಿರಲಿಲ್ಲ. ಅದಕ್ಕಾಗಿ ಮೇಲೆ ಉದಾಹರಿಸಿದ ನಾನಾ ಕ್ಷತ್ರಿಯರು ಸೇರಿ ಬ್ರಹ್ಮ ತೇಜಸ್ಸನ್ನು ಅಪಹರಿಸುವ ಒಂದು ಸಂಚನ್ನು ಈ ಕುಶೀಕ ವಂಶೋದ್ಭವನಾದ ಗಾಧೀಯ ನೇತೃತ್ವದಲ್ಲಿ ತಯಾರಿಸಿದರು.

ಆ ಕಾಲದಲ್ಲಿ ಭೃಗು ವಂಶದವನಾದ ಋಚೀಕನೆಂಬ ಋಷಿಯು ಮಹಾ ತಪಸ್ವಿಯಾಗಿ, ಸದಾ ರುದ್ರಾನುಷ್ಠಾನ ನಿರತನಾಗಿ ಏಕಾದಶರುದ್ರರು ಸದಾ ಋಚೀಕನಿಂದ ಪೂಜಾಪೇಕ್ಷೆಯನ್ನು ಹೊಂದುವ ಮಟ್ಟಕ್ಕೆ ಏರಿ ಭೂಲೋಕದ ಪ್ರತ್ಯಕ್ಷ ಪರಮೇಶ್ವರ ಎಂದೆನಿಸಿಕೊಂಡಿದ್ದನು. ಈ ಕಾರಸ್ಥಾನಯುತರಾದ ಕ್ಷತ್ರಿಯರು ಆತನೊಂದಿಗೆ ಸಖ್ಯವನ್ನು ಬೆಳೆಸಿ, ಅವನಿಂದ ಬ್ರಹ್ಮ ತೇಜಸ್ಸನ್ನು ಅಪಹರಿಸುವ ಪ್ರಯತ್ನ ಮಾಡಿದರು. ಅದು ಹೇಗೆಂದರೆ, ಆ ಗಾಧಿಗೆ ಸತ್ಯವತಿ ಎಂಬ ಮಗಳಿದ್ದಳು. ತನ್ನ ಮಗಳನ್ನು ಈ ಋಚೀಕನಿಗೆ ಕೊಡುವುದರ ಮುಖೇನ ಬಾಂಧವ್ಯ ಬೆಳೆಸಿ, ಕಾಲಾನಂತರದಲ್ಲಿ ಅವನ ತಪಃ ಪ್ರಭಾವವನ್ನು ಅಪಹರಿಸಬಹುದು ಎಂದು ಚಿಂತಿಸಿದ ಅವರು ಋಚೀಕನನ್ನು ಆಹ್ವಾನಿಸಿ ದಾನ ರೂಪವಾಗಿ ತನ್ನ ಮಗಳನ್ನು ಕೊಟ್ಟನು. ಮತ್ತೆ ಮಗಳನ್ನು ಗಂಡನ ಮನೆಗೆ ಕಳುಹಿಸುವ ಕಾಲದಲ್ಲಿ ಈ ತನ್ನ ಸಂಚಿನ ಯಾವುದೇ ಗೌಪ್ಯತೆಯನ್ನು ಮಗಳಿಗೂ ಕೂಡ ಬಿಟ್ಟುಕೊಡದೆ, ಮಗಳ ಜೊತೆಯಲ್ಲಿ ಕಳುಹಿಸಿ ಕೊಡಬೇಕಾದ ದಾಸದಾಸಿಯರ ಜೊತೆಯಲ್ಲಿ ಸಂಚಿನ ರೂವಾರಿಯಾಗಿ ತನ್ನ ಹೆಂಡತಿಯನ್ನೇ ಕಳುಹಿಸಿಕೊಡುತ್ತಾನೆ. ತಿಳುವಳಿಕೆಯಲ್ಲಿ ಚಿಕ್ಕವಳಾದ ಸತ್ಯವತಿಗೆ ಆಶ್ರಮ ಜೀವನದಲ್ಲಿ ಯಾವುದೇ ಪರಿಶ್ರಮವಿಲ್ಲದಿದ್ದರೂ ತಾಯಿಯ ಸಹಾಯದೊಂದಿಗೆ ಆಕೆಯೂ ಅಲ್ಲದೆ ಋಚೀಕನೂ ಕೂಡ ಒಂದು ರೀತಿಯಲ್ಲಿ ಇವರ ಅಂಕೆಗೆ ಒಳಪಟ್ಟಂತಾಯಿತು.

ಅಳಿಯ ಮಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡ ಆ ಮಹಾತಾಯಿ, ಕಾಲಾನಂತರದಲ್ಲಿ ಮಗಳಿಗೆ ಮದುವೆಯಾಗಿ ಇಷ್ಟು ವರ್ಷವಾಯಿತು ಮಕ್ಕಳಾಗಲಿಲ್ಲ, ನಿನ್ನ ಗಂಡನನ್ನು ಕೇಳು, ಹಾಗೆಯೇ ನಮ್ಮ ವಂಶ ಬೆಳೆಯುವುದಕ್ಕಾಗಿ ಒಂದು ಗಂಡು ಮಗುವನ್ನು ಅನುಗ್ರಹಿಸಲು ಹೇಳು ಎಂದು ಎತ್ತಿಕಟ್ಟಿದಳು. ತಾಯಿಯ ಕಾರಸ್ಥಾನದ ಅರಿವಿಲ್ಲದ ಮಗಳು, ರುದ್ರಾನುಷ್ಠಾನ ಮಾಡುತ್ತಿರುವ ಸಂದರ್ಭದಲ್ಲಿ ಗಂಡನೊಂದಿಗೆ ತನ್ನ ಬೇಡಿಕೆಯನ್ನಿಡುತ್ತಾಳೆ. ಹೋಮ ಮಾಡುತ್ತಿರುವ ಕಾಲದಲ್ಲಿ ಅಗ್ನಿಧಾತಳಾದ ಪತ್ನಿಯು ಕೇಳಿದ್ದನ್ನು ನಿರಾಕರಿಸುವಂತಿಲ್ಲ, ಇಂತಹ ಇಕ್ಕಟ್ಟಿನಲ್ಲಿ ಸಿಕ್ಕಿದ ಋಚೀಕನು ಅನಿವಾರ್ಯವಾಗಿ ಈ ಕಾರಸ್ಥಾನದ ಅರಿವಾದರೂ ಕೂಡ ಉಮಾಮಹೇಶ್ವರರಿಗೆ ಅರ್ಪಿಸಬೇಕಾಗಿದ್ದ ಹವಿಸ್ಸನ್ನೇ ಪಿಂಡ ರೂಪದಲ್ಲಿ ಹೆಂಡತಿಯ ಕೈಯಲ್ಲಿ ಕೊಡುತ್ತಾನೆ. ಕೊಡುವಾಗ ಮೊದಲ ಪಿಂಡವನ್ನು ನೀನೇ ತಿನ್ನು, ಈ ಎರಡನೆಯ ಪಿಂಡವನ್ನು ನಿನ್ನ ತಾಯಿಗೆ ಕೊಡು ಎಂದು ಆದೇಶಿಸುತ್ತಾನೆ. ಹೀಗೆ ಯಾಗ ಸಮಾಪ್ತಿ ಮಾಡಿ ಮನಃಶಾಂತಿಗಾಗಿ ತಪಸ್ಸಿಗೆ ತೆರಳುತ್ತಾನೆ.

ಈ ಸತ್ಯವತಿಯು ಆ ಪಿಂಡಗಳನ್ನು ತೆಗೆದುಕೊಂಡು ಹೋಗಿ ತಾಯಿಗೆ ವಿಚಾರವನ್ನು ತಿಳಿಸುತ್ತಾಳೆ. ಆಗ ಆ ತಾಯಿಯು ತನ್ನ ಮತ್ತು ಮಗಳ ಪ್ರಸಾದ ರೂಪವಾದ ಪಿಂಡವನ್ನು ದೇವರ ಮುಂದೆ ಇಟ್ಟು ಸ್ನಾನ ಮಾಡುವ ನೆಪದಿಂದ ಮಗಳನ್ನು ನದಿಗೆ ಕರೆದೊಯ್ಯುತ್ತಾಳೆ. ಮಗಳಿಂದ ಮುಂಚಿತವಾಗಿಯೇ ಸ್ನಾನವನ್ನು ಮುಗಿಸಿ ಕ್ಷಿಪ್ರವಾಗಿ ಆಶ್ರಮಕ್ಕೆ ಬಂದು ಋಚೀಕನಿಂದ ಮಂತ್ರಿಸಲ್ಪಟ್ಟು ತನಗಾಗಿ ಕೊಟ್ಟ ಪಿಂಡವನ್ನು ಬಿಟ್ಟು ಮಗಳಿಗಾಗಿ ಕೊಟ್ಟ ಪಿಂಡವನ್ನು ತಿನ್ನುತ್ತಾಳೆ. ಈ ವಿಚಾರವನ್ನರಿಯದ ಸತ್ಯವತಿಯು ಆ ಪಿಂಡವನ್ನು ತಿನ್ನುತ್ತಾಳೆ. ಮುಂದೆ ಕಾಲಾನಂತರದಲ್ಲಿ ರುದ್ರಾಂಶದಿಂದ ಕೂಡಿದ ಕ್ಷಾತ್ರ ತೇಜೋಭಿಭೂತವಾದ ಪಿಂಡ ಭಕ್ಷಣ ಮಾಡಿದ ಸತ್ಯವತಿಯು ತನ್ನ ಗರ್ಭದ ಉರಿಯನ್ನು ತಾಳಲಾರದೆ ತಪಸ್ಸಿಗೆ ತೆರಳಿದ ಗಂಡನನ್ನು ಹುಡುಕಿ ಆತನಲ್ಲಿ ಮೊರೆಯಿಡುತ್ತಾಳೆ. ಆಗ ದಿವ್ಯದೃಷ್ಠಿಯಿಂದ ವಾಸ್ತವಾಂಶವನ್ನು ತಿಳಿದ ಋಚೀಕನು ಪ್ರಮಾದವಾಯಿತು, ನಿನ್ನ ತಾಯಿಯು ನಿನಗೆ ಮೋಸ ಮಾಡಿದಳು. ನಿನ್ನ ಹೊಟ್ಟೆಯಲ್ಲಿ ಕ್ಷತ್ರಿಯ ವಂಶಕುಟಾರಕನೂ, ಮಹಾ ಕ್ರೂರಿಯೂ ಆದ ಮಗ ಹುಟ್ಟುತ್ತಾನೆ. ನಾನು ನಿನಗೆ ಅಭಿಮಂತ್ರಿಸಿಕೊಟ್ಟ ಬ್ರಹ್ಮತೇಜಸ್ಸಿನ ಪಿಂಡವನ್ನು ನಿನ್ನ ತಾಯಿ ಭುಂಜಿಸಿದ್ದಾಳೆ. ಅವಳ ಹೊಟ್ಟೆಯಲ್ಲಿ ಮಹಾಜ್ಞಾನಿಯಾಗಿಯೂ, ಅತ್ಯಂತ ಪರಾಕ್ರಮಿಯೂ, ತೇಜಸ್ವಿಯೂ ಆದ ಮಗನು ಹುಟ್ಟುತ್ತಾನೆ. ಆದರೆ ಮುಂದೆ ಅವನು ಬ್ರಾಹ್ಮಣನಾಗುತ್ತಾನೆ, ಮಹಾತಪಸ್ವಿಯೂ ಆಗುತ್ತಾನೆ. ಗರ್ಭಮೂಲದಲ್ಲೇ ಕುಟಿಲತೆಯು ಬೆರೆತಿರುವುದರಿಂದ ಮಹಾ ಕೋಪಿಷ್ಟನೂ, ಮೂರ್ಖನೂ ಆಗುತ್ತಾನೆ ಎಂದು ಹೇಳುತ್ತಾನೆ.

ಋಚೀಕನ ಈ ಮಾತನ್ನು ಕೇಳಿದ ಸತ್ಯವತಿಯು ದುಃಖದಿಂದ ಗೋಳಿಡುತ್ತಾ ಈ ಕ್ಷಾತ್ರ ಪಿಂಡದ ತೇಜಸ್ಸನ್ನು ಭರಿಸುವ ಶಕ್ತಿ ನನಗಿಲ್ಲ, ಅಂತಹಾ ಕ್ರೂರಿ ಮಗನು ನನಗೆ ಬೇಡವೂ ಬೇಡ, ಹುಟ್ಟಲೇ ಬೇಕೆಂತಿದ್ದರೆ ಮುಂದೆ ನನ್ನ ಮಗನಿಂದ ಹುಟ್ಟಲಿ, ಹಾಗೆಯೇ ಅನುಗ್ರಹಿಸಿ ಎಂದು ಬೇಡಿಕೊಂಡಳು. ಆಗ ಅದಕ್ಕೆ ಸಂಬಂಧಪಟ್ಟ ಶಾಂತಿಕರ್ಮಗಳನ್ನು ಋಚೀಕನು ಆಚರಿಸಿದ. ಅದೇ ಅವನ ಮೊಮ್ಮಗ ಪರಶುರಾಮ ಜನಿಸಲು ಕಾರಣವಾಯಿತು. ಇತ್ತ ಸತ್ಯವತಿಯ ತಾಯಿ ನುಂಗಿದ ಪಿಂಡವು ದಿನೇ ದಿನೇ ಬ್ರಹ್ಮ ತೇಜೋಭಿಭೂತವಾದ ಶುಕ್ಲ ಪಕ್ಷದ ಚಂದ್ರನಂತೆ ಬೆಳೆದು ಒಂದು ಗಂಡು ಶಿಶುವಿಗೆ ಜನ್ಮ ನೀಡುತ್ತಾಳೆ, ಆ ಮಗುವಿಗೆ ವಿಶ್ವರಥ ಎಂದು ನಾಮಕರಣ ಮಾಡುತ್ತಾರೆ. ಕುಶೀಕ ವಂಶೋದ್ಭವನಾದುದರಿಂದ ವಿಶ್ವರಥನು ಕೌಶಿಕ ಎಂದೂ ಪ್ರಸಿದ್ಧನಾಗುತ್ತಾನೆ. ಹೀಗೆ ಕುಟಿಲ ಕಾರಸ್ಥಾನದಿಂದ ಪಾರ್ಥಿವ ಜೀವಕ್ಕೆ ಬಂದ ಈ ಪಿಂಡವು ಕೆಟ್ಟ ಆಲೋಚನೆ, ಕೆಟ್ಟ ನಡೆ, ಅತಿ ಚಪಲತ್ವ, ಪ್ರಪಂಚದ ಎಲ್ಲವೂ ಬೇಕೆಂಬ ಆಸೆ, ಛಲ, ಸಿಟ್ಟು, ಅಹಂಕಾರಗಳೇ ಮೂರ್ತೀಭವಿಸಿರುವ ಸ್ವರೂಪವೇ ವಿಶ್ವಾಮಿತ್ರನ ಪೂರ್ವಾಶ್ರಮವಾಗಿರುತ್ತದೆ.

ಇಂತಹಾ ವಿಶ್ವಾಮಿತ್ರನು ವಿಶ್ವರಥನೆಂಬ ಸಾರ್ಮಭೌಮನು, ಚೈತ್ರ ಯಾತ್ರಾ ಉದ್ದೇಶದಿಂದ ಪ್ರಪಂಚ ಪರ್ಯಟನೆ ಮಾಡುತ್ತಿರುವ ಕಾಲದಲ್ಲಿ ವಸಿಷ್ಠಾಶ್ರಮಕ್ಕೆ ಬರುತ್ತಾನೆ. ಅಲ್ಲಿ ವಸಿಷ್ಠ ಮಹರ್ಷಿಯು ಹೋಮಧೇನುವಾದ ನಂದಿನಿಯ ಸಹಾಯದಿಂದ ಆ ವಿಶ್ವಾಮಿತ್ರನ ಸಕಲಸೇನಾ ಸಹಿತವಾಗಿ ಎಲ್ಲರಿಗೂ ರಾಜಾತಿಥ್ಯವನ್ನು ನೀಡುತ್ತಾನೆ. ಈ ಕಾಡಿನ ಮಧ್ಯದಲ್ಲಿ ಇಷ್ಟೊಂದು ಅಕ್ಷೋಹಿಣಿ ಸಂಖ್ಯೆಯ ಸೈನ್ಯಕ್ಕೆ ರಾಜಾತಿಥ್ಯವನ್ನು ನೀಡುವಂತಹಾ ಸಫಲತೆ ಈ ಬಡ ಹಾರವನಿಗೆ ಹೇಗೆ ಬಂದಿತು ಎಂದು ಚಿಂತಿಸಿದ ವಿಶ್ವಾಮಿತ್ರನು ಇದಕ್ಕೆಲ್ಲಾ ಕಾರಣ ನಂದಿನಿ ಎಂಬ ಧೇನು ಎಂದು ತಿಳಿದನು. ಸ್ವಭಾವತಃ ಅತೀ ಚಪಲತ್ವನಾದ ವಿಶ್ವಾಮಿತ್ರನು, ವಸಿಷ್ಠರಲ್ಲಿ ಆ ಧೇನುವನ್ನು ತನಗೆ ಕೊಡಲು ಕೇಳಲು, ಅವರು ನಿರಾಕರಿಸಿದರು. ಅಲ್ಲಿಂದ ಬಲ ಪ್ರಯೋಗ ಆರಂಭ. ವಿಶ್ವಾಮಿತ್ರನ ಬಲವು ಪ್ರಯೋಜನಕ್ಕೆ ಬರಲಿಲ್ಲ. ಪುನಃ ಪುನಃ ಪ್ರಯತ್ನಿಸಿದ ವಿಶ್ವಾಮಿತ್ರನು ತಪೋ ಮಾರ್ಗವನ್ನು ಹಿಡಿದು, ಮಂತ್ರಾಸ್ತ್ರಗಳನ್ನು ಪಡೆದು ವಸಿಷ್ಠರ ಮೇಲೆ ಪ್ರಯೋಗಿಸಿದ, ಎಲ್ಲವೂ ಬ್ರಹ್ಮದಂಡದ ಮುಂದೆ ನಿಷ್ಕ್ರಿಯವಾಯಿತು. ಆಗ ಕ್ಷತ್ರಿಯ ತೇಜಸ್ಸು ನಿಷ್ಪ್ರಯೋಜಕ ಎಂದು ತಿಳಿದನು. ಬ್ರಹ್ಮತೇಜಸ್ಸೇ ಹೆಚ್ಚಿನ ಬಲವೆಂದು ತಿಳಿದ ವಿಶ್ವಾಮಿತ್ರನು ವಾಸನಾಬಲದಿಂದ ಪರಮೇಶ್ವರನನ್ನು ಒಲಿಸಿ ಶಿವನಿಂದ ಬ್ರಹ್ಮಾಸ್ತ್ರವನ್ನು ಪಡೆದ. ಅದನ್ನೂ ತಂದು ವಸಿಷ್ಠರ ಮೇಲೆ ಪ್ರಯೋಗಿಸಿದ. ಆಗಲೂ ಜಗ್ಗದ ವಸಿಷ್ಠರು ಆ ಬ್ರಹ್ಮಾಸ್ತ್ರವನ್ನೇ ನುಂಗಿಬಿಟ್ಟರು. ಆದರೆ ಪ್ರಯೋಗದಿಂದಾದ ಕ್ಷೋಭೆಯು ಪ್ರಪಂಚವನ್ನೆಲ್ಲಾ ದಹಿಸುತ್ತಿರಲು, ಪ್ರತ್ಯಕ್ಷನಾದ ಪರಮೇಶ್ವರನು ವಿಶ್ವಾಮಿತ್ರನನ್ನು ನಿಂದಿಸಿ, ಪ್ರಪಂಚವೆಲ್ಲಾ ನಾಶವಾಗುತ್ತಿದೆ, ಯಾರಿಗೂ ಲಭ್ಯವಾಗದೆ ಬ್ರಹ್ಮ ತೇಜಸ್ಸು ಲುಪ್ತವಾಗುತ್ತಿದೆ. ಬ್ರಹ್ಮಾಸ್ತ್ರ ನಾಶ ಮಾಡಿದ ದೋಷ ನಿನ್ನ ಮೇಲೆ ಬರುತ್ತದೆ. ನೀನು ಪುನಃ ನಿನ್ನ ತಪಃ ಶಕ್ತಿಯಿಂದ ಬ್ರಹ್ಮಾಸ್ತ್ರವನ್ನು ಸಿದ್ಧಿಸಿ ಲೋಕಮುಖಕ್ಕೆ ಕೊಡು ಎಂದು ಆದೇಶಿಸುತ್ತಾನೆ.


ಶಿವನಾಜ್ಞೆಯನ್ನು ಪಡೆದ ವಿಶ್ವಾಮಿತ್ರನು ಚಿಂತನಾಶೀಲನಾಗಿ, ಬ್ರಹ್ಮ ತೇಜಸ್ಸನ್ನು ಅನ್ವೇಷಿಸುವುದಕ್ಕೆ ಪ್ರಾರಂಭಿಸುತ್ತಾನೆ. ಎಲ್ಲಾ ತೇಜಸ್ಸಿಗೂ ಮೂಲವಾದ ಸೂರ್ಯನೇ ಬ್ರಹ್ಮ ತೇಜಸ್ಸಿಗೂ ಮೂಲವಿರಬಹುದೆಂದು ಚಿಂತಿಸಿದ ವಿಶ್ವಾಮಿತ್ರನು ಸವಿತೃ ದೇವತಾನುಷ್ಠಾನಕ್ಕೆ ಉಪಕ್ರಮಿಸುತ್ತಾನೆ. ಆದರೆ ಪ್ರಯತ್ನದಲ್ಲಿ ಯಶಸ್ವಿಯಾಗುವ ಲಕ್ಷಣವನ್ನು ಕಾಣದ ವಿಶ್ವಾಮಿತ್ರನು ಲೋಕ ಸಂಚಾರಕ್ಕೆ ತೆರಳುತ್ತಾನೆ. ಹಲವಾರು ಕ್ಷೇತ್ರ ಸಂದರ್ಶನ ಮಾಡುತ್ತಾ ಕೆಲವಾರು ವರ್ಷಗಳು ಕಳೆದಾಗ ವಿಶ್ವಾಮಿತ್ರನಲ್ಲಿ ಸಾತ್ವಿಕ ಗುಣ ವೃದ್ಧಿಯಾಗುತ್ತದೆ. ಆಗ ವಿಶ್ವಾಮಿತ್ರನಿಗೆ ಜ್ಞಾನೋದಯವಾಗುತ್ತದೆ. ವೇದಮಂತ್ರದ ಮೂಲವಾದಂತಹ ಛಂದಸ್ಸಿನ ಅರಿವಾಗುತ್ತದೆ. ಅದರಲ್ಲಿರುವ ಗಾಯತ್ರಿ ಎಂಬ ಛಂದಸ್ಸನ್ನು ತೆಗೆದು ಆ ಛಂದಸ್ಸಿನ ನಾದಾನುಸಂಧಾನ ಮಾಡಿದಾಗ ಸವಿತ್ರಾತ್ಮಕವಾದ ಬ್ರಹ್ಮತೇಜಸ್ಸು ಗೋಚರಿಸುತ್ತದೆ. ಅದಕ್ಕಾಗಿ ವಿಶ್ವಾಮಿತ್ರನು ಋಗ್ವೇದದ ೩ನೇ ಅಷ್ಟಕದ, ೩ನೇ ಮಂಡಲದ, ೪ನೇ ಅಧ್ಯಾಯದ, ೬೨ನೇ ಸೂಕ್ತವನ್ನು ಉಪಯೋಗಿಸಿಕೊಂಡ. ಅದು ಯುಗ್ಮ ದೇವತಾತ್ಮಕವಾದ್ದರಿಂದ ಅನಿವಾರ್ಯವಾಗಿ ಸವಿತ್ರಾತ್ಮಕವಾದ ಬ್ರಹ್ಮತೇಜಸ್ಸು ವಿಶ್ವಾಮಿತ್ರನಿಗೆ ಒಲಿಯಿತು. ಅದೇ ಬ್ರಹ್ಮಾಸ್ತ್ರ ಎಂದು ಪರಿಗಣಿಸಲ್ಪಟ್ಟಿತು. ಆಗ ವಿಶ್ವಾಮಿತ್ರನು ಬ್ರಾಹ್ಮಣನಾದ.


"ಈ ಗಾಯತ್ರಿ ಮಂತ್ರವನ್ನು ಎಲ್ಲರೂ ಅನುಷ್ಠಾನಿಸಿ " ಎಂದು ಲೋಕಕ್ಕೆ ಹುಡುಕಿಕೊಟ್ಟ. ಅದೂ ಅಲ್ಲದೆ ಅಲ್ಲಿಯವರೆಗಿನ ತನ್ನ ತಪಃ ಶಕ್ತಿಯನ್ನೆಲ್ಲಾ ಧಾರೆ ಎರೆದ. "ಯಾರು ಈ ಮಂತ್ರಾನುಷ್ಠಾನವನ್ನು ಮಾಡುವರೋ ಅವರಿಗೆ ಪ್ರಾಪಂಚಿಕ ಪಾತಕಗಳಾವುದೂ ಅಂಟದಿರಲಿ " ಎಂದು ಅನುಗ್ರಹಿಸಿದ. ಮುಂದೆ ಅದೇ ಸವಿತೃ ದೇವತಾತ್ಮಕವಾದ ಬ್ರಹ್ಮಾಸ್ತ್ರವೆಂದು ಲೋಕದಲ್ಲಿ ಪರಿಗಣಿಸಲ್ಪಟ್ಟಿತು. ಆಗ ಆ ಮಂತ್ರವಿರುವ ಭಾಗದ ದೃಷ್ಠಾರನಾದ ಗೃತ್ಸಮದನು ಆ ಭಾಗವನ್ನು ಪ್ರತ್ಯೇಕಿಸಿ ವಿಶ್ವಾಮಿತ್ರ ಮಂಡಲವೆಂದು ನಾಮಕರಣ ಮಾಡಿದ, ಬ್ರಹ್ಮನು ಪ್ರತ್ಯಕ್ಷನಾಗಿ ವಿಶ್ವಾಮಿತ್ರನಿಗೆ ಬ್ರಹ್ಮರ್ಷಿ ಪಟ್ಟವನ್ನು ಕೊಟ್ಟ. ಆದರೆ ಅಲ್ಲಿಯವರೆಗೆ ವಸಿಷ್ಠರಂತಹಾ ಪರಮ ಸಾತ್ವಿಕರೊಂದಿಗೇ ಸೆಣಸಾಡಿದ ಕಾರಣ, ಅವರು ಬ್ರಹ್ಮರ್ಷಿ ಎಂದು ಘೋಷಿಸಿದರೆ ಮಾತ್ರ ಆ ಪಟ್ಟವು ತನಗೆ ಭೂಷಣ ಎಂದು ನುಡಿದ. ಅದಕ್ಕೆ ವಸಿಷ್ಠರೂ ತಥಾಸ್ತು ಎಂದರು. ವಿಶ್ವಾಮಿತ್ರನ ತ್ಯಾಗವನ್ನು ದೇವತೆಗಳು, ಋಷಿಮುನಿಗಳು ಕೊಂಡಾಡಿ, ಅಲ್ಲಿಯವರೆಗೆ ವಿಶ್ವರಥವಾಗಿದ್ದ ಗಾಧಿಪುತ್ರ ಕೌಶಿಕನಿಗೆ " ವಿಶ್ವಾಮಿತ್ರ " ಎಂದೇ ನಾಮಕರಣ ಮಾಡಿದರು.

ಹೀಗೆ ಗಾಯತ್ರಿ ಮಂತ್ರವನ್ನು ವಿಶ್ವಾಮಿತ್ರನು ಲೋಕಮುಖಕ್ಕೆ ಕೊಟ್ಟ ಎಂಬ ಪ್ರತೀತಿ ಚಾಲ್ತಿಯಲ್ಲಿ ಬಂದಿತು. ಮುಖ್ಯವಾಗಿ ವಿಶ್ವಾಮಿತ್ರನು ಮಂತ್ರ ದೃಷ್ಟಾರನೇ ವಿನಃ, ಮಂತ್ರ ಜನಕನಲ್ಲ. ಗಾಯತ್ರಿ ಎಂಬುದು ಛಂದಸ್ಸೇ ವಿನಃ ಮಂತ್ರವಲ್ಲ. ನಾವು ಬಳಸುವುದು ಗಾಯತ್ರಿ ಛಂದಸ್ಸಿನ ಒಂದು ಮಂತ್ರ ಎಂಬುದನ್ನು ಗಮನದಲ್ಲಿಡಬೇಕು. ದೇವತೆಯು ಲಿಂಗ ಸೂಚಕವಲ್ಲ, ಕೇವಲ ತೇಜಸ್ಸು! ಇದಿಷ್ಟು ಪರಮ ಸತ್ಯ. ಈ ರೀತಿಯಲ್ಲಿ ಆಧ್ಯಾತ್ಮ ಜಗತ್ತಿನಲ್ಲಿ ಚಾಲ್ತಿಯಲ್ಲಿರುವ ಅಜ್ಞಾನಿಯನ್ನು ಸುಜ್ಞಾನಿಯನ್ನಾಗಿ ಮಾಡತಕ್ಕ ಮಹಾರಹಸ್ಯವೊಂದನ್ನು ಕಂಡುಹಿಡಿದ ವಿಶ್ವಾಮಿತ್ರನ ಚರಿತ್ರೆಯ ಮುಖೇನ ನಾವೇನು ಅರಿತುಕೊಳ್ಳಬಹುದು ಎಂದರೆ ಕಾಮಾದಿ ಅರಿಷಡ್ವರ್ಗಗಳನ್ನು ಜಯಿಸಿದರೆ ಮಾತ್ರ ಯಾವುದೇ ಒಬ್ಬ ಮನುಷ್ಯನು ಬ್ರಾಹ್ಮಣನಾಗಬಹುದು, ಬ್ರಹ್ಮರ್ಷಿಯಾಗಬಹುದು ಎಂಬ ಸತ್ಯ ಗೋಚರಿಸುತ್ತದೆ. ಇಲ್ಲಿಗೆ ಈ ಲೇಖನವನ್ನು ಮುಗಿಸುತ್ತಾ, ಗಾಯತ್ರಿ ರಹಸ್ಯವನ್ನು ಇನ್ನೊಂದು ಲೇಖನದಲ್ಲಿ ನೀಡಲಾಗುವುದು.

Tuesday, 8 April 2014

ನಮ್ಮ ಪುರಾತನ ಭಾರತೀಯ ರಾಜ್ಯಾಂಗ ವ್ಯವಸ್ಥೆ - ಒಂದು ಪರಿಚಯ - ಭಾಗ ೨

ಎಂಬ ಲೇಖನದಲ್ಲಿ ನಮ್ಮ ಪುರಾತನ ಭಾರತೀಯ ರಾಜ್ಯಂಗ ವ್ಯವಸ್ಥೆಯ ಸಮಗ್ರ ಆಡಳಿತ ರೂಪುರೇಷೆಯ ಕೋಷ್ಟಕ, ಚಕ್ರವರ್ತಿಯಿಂದ ಆರಂಭಿಸಿ ಒಟ್ಟು ವಿಭಾಗಗಳಲ್ಲಿ ೧೬x೧೬ ಒಂದು ಭಾಗದಲ್ಲಿ ಅರಸು + ಬೀಡು + ಗುತ್ತು ಮನೆಯ ಪರಸ್ಪರ ಪೂರಕ ಆಡಳಿತ, ರಾಜಾದಾಯ + ದೇವಸ್ವಾದಾಯ + ಸುಂಕ ಎಂಬ ರೀತಿಯ ತೆರಿಗೆ ಪದ್ಧತಿ, ಚಕ್ರಾಧಿಪತಿ + ಮಹಾಮಂಡಲೇಶ್ವರರು + ಮಂಡಲೇಶ್ವರರು + ಅರಸು ಮನೆತನ + ಬೀಡಿನ ಮನೆತನ + ಗುತ್ತಿನ ಮನೆತನ ಎಂಬ ವಿಭಾಗಗಳ ಸ್ಥೂಲ ವಿವರಣೆಯನ್ನು ನೀಡಲಾಗಿತ್ತು.

ಇವುಗಳಲ್ಲಿ ಮುಖ್ಯವಾಗಿ ಆಡಳಿತ ಸೂತ್ರದ ಮೂಲವಾದ ಗುತ್ತಿನ ಮನೆ ಮತ್ತು ಗುತ್ತು ಗಡಿ ಹಿಡಿದವರ ಸಂಬಂಧಿಯಾಗಿ ಲೇಖನ ಸಿದ್ಧಪಡಿಸಿರುತ್ತೇನೆ. ಇಲ್ಲಿ ಮಖ್ಯ ಉದ್ದೇಶವು ನಮ್ಮ ಪುರಾತನವಾದ ಆಳ್ವಿಕೆಯು ಎಷ್ಟು ಅರ್ಥಬದ್ಧ, ಸುಖಮಯ, ಸಾಮಾನ್ಯ ಮಧ್ಯಮ ವರ್ಗದ ಜೀವನಕ್ಕೆ ಎಷ್ಟು ಭದ್ರತೆ ಇತ್ತು ಎಂದು ಬಿಂಬಿಸುವುದು ಇದರ ಉದ್ದೇಶವಾಗಿರುತ್ತದೆ.

ಜನರ ಭಾರವನ್ನು ಹೊರುವವರು ಎಂಬರ್ಥದಲ್ಲಿ "ಗುತ್ತು" ಶಬ್ದ ಬಳಕೆಯಲ್ಲಿದೆ. ಭಾರವಾಹಕ ಅಂದರೆ ಮುಂಚೆ ತಲೆ ಹೊರೆಯಲ್ಲಿ ಸಾಮನು ಸಾಗಣೆ ಇದ್ದ ಭಾಗದಲ್ಲಿ ಗೆಟ್ಟಣೆ, ಕಟ್ಟೆ, ಗುತ್ತಿನ ಕಂಬ ಹೀಗೆ ಮಧ್ಯದಾರಿಯಲ್ಲಿ ವ್ಯವಸ್ಥೆ ಇರುತ್ತಿತ್ತು. ಅಲ್ಲಿ ತಲೆಯ ಎತ್ತರಕ್ಕೆ ಕಟ್ಟೆ ಇರುತ್ತಿತ್ತು. ಅಲ್ಲಿ ಹೊರೆಯನು ಇಳಿಸಿ ಸುಧಾರಿಸಿ ಪುನಃ ಹೊತ್ತು ಮುಂದೆ ನಡೆಯುತ್ತಿದ್ದರು. ಅದನ್ನು "ಗುತ್ತು" ಎಂದು ಗುರುತಿಸುತ್ತಿದ್ದರು. ಹಾಗೇ ಜನರ ಎಲ್ಲಾ ಜೀವನ ಭಾರವನ್ನು ತಾನು ಆಧರಿಸಿ ಸಮಾಜಕ್ಕೆ ಸುಖ ನೀಡುವವರು "ಗುತ್ತಿನ ಮನೆಯವರು". ಹೀಗೆ ಜನ ಹಿತಕ್ಕಾಗಿಯೇ ಗುತ್ತಿನ ಗಡಿ ಹಿಡಿಯುವ ಹಿರಿಯ ತನ್ನೆಲ್ಲಾ ಕುಟುಂಬ, ಸತಿ, ಸುತರಿಂದ ಕೂಡ ಆಧ್ಯಾತ್ಮಿಕವಾಗಿ ಹೊರಗುಳಿದು ಪೂರ್ತಾ ಸಮಾಜಕ್ಕಾಗಿಯೇ ತನ್ನನ್ನು ತೊಡಗಿಸಿಕೊಳ್ಳುತ್ತಾರೆ. ಅಂತಹವರನ್ನು "ಗುತ್ತಿನ ಹಿರಿಯರು" ಎಂದು ಕರೆಯುವುದು ವಾಡಿಕೆ. ಮೇಲಧಿಕಾರಿಯಾಗಿ ರಾಜ್ಯಾಂಗ ವ್ಯವಸ್ಥೆಯಲ್ಲಿ ೬ನೆಯ ಸ್ಥಾನವಾದರೂ ಸಾಮಾಜಿಕವಾಗಿ ತಮ್ಮ ಳ್ಳೆಯತನದಿಂದ ಮೊದಲನೆಯವರಾದವರು.

ತುಂಬಾ ವಿಶಾಲವಾದ ಭರತಖಂಡದಲ್ಲಿ ಸಾಮಾಜಿಕ ಅಸ್ಥಿತ್ವ, ಸಕಲರಿಗೂ ಅವರವರ ಸ್ಥಾನಬದ್ಧತೆ, ಗೌರವ ಒದಗಿಸಿ ಕೊಟ್ಟವರು ಗುತ್ತಿನವರು. ಭಾರತದೇಶದಲ್ಲೆಲ್ಲಾ ವ್ಯಾಪಿಸಿರುವ ಆಡಳಿತ ಪದ್ಧತಿ ಸಮರ್ಥವೂ, ನ್ಯಾಯಯುತವೂ, ಬದ್ಧವೂ ಆಗಿತ್ತು ಎಂಬುದಕ್ಕೆ ಒಂದು ಉದಾಹರಣೆ ಕೊಡುತ್ತೇನೆ.

ಹಿಂದೆ ಬ್ರಿಟಿಷರು ಆಳುತ್ತಿದ್ದ ಕಾಲದಲ್ಲಿ ಡೂಪ್ಲೆ ಎಂಬ ವೈಸ್ರಾಯ್ ಭಾರತಕ್ಕೆ ಬಂದನು. ಆಗಿನ ಕಾಲದ ಜಮೀನ್ದಾರಿ ಪದ್ಧತಿಯು ಪ್ರಪಂಚದ ಎಲ್ಲಾ ಕಡೆಯೂ ಬಳಕೆಯಲ್ಲಿದ್ದ ಕಾಲವದು. ಸಾಮಾನ್ಯ ವರ್ಗದಿಂದ ಬಂದಿದ್ದ ಆತನಿಗೆ ಸಹಜವಾಗಿ ಜಮೀನ್ದಾರಿಕೆಯ ವಿರುದ್ಧ ಸಿಟ್ಟು ಇತ್ತು. ಅವನ ಆಡಳಿತ ಕಾಲದಲ್ಲಿ ದೇಶದಲ್ಲಿ ಆಂಶಿಕ ಬರಗಾಲವಿತ್ತು. ಹಾಗಾಗಿ ಒಂದು ಆಜ್ಞೆ ಹೊರಡಿಸಿದ. ಜಮೀನ್ದಾರರ ಮನೆಯ ಕಣಜದ ಧಾನ್ಯಗಳ ಮುಟ್ಟಗೋಲು. ಸೇನೆ ಸಮೇತನಾಗಿಯೇ ದಾಳಿ ಮಾಡುತ್ತಿದ್ದ ಕಲೆಕ್ಟರರು ಗ್ರಾಮಕ್ಕೆ ಬಂದಾಗ ಜಮೀನ್ದಾರರು ಹೇಳುತ್ತಿದ್ದುದ್ದು ನಮ್ಮ ಕಣಜ ತುಂಬಿದೆ. ಬೇಕಾದರೆ ತೆಗೆದುಕೊಂಡು ಹೋಗಿ. ಆದರೆ ಗೇಣಿ ಕಣಜವಿದೆ ಅದನ್ನು ಮುಟ್ಟಬೇಡಿ, ಅದು ರೈತರ ಅನ್ನ ಎನ್ನುತ್ತಿದ್ದರು. ಜಮೀನ್ದಾರರೂ ಸ್ವಯಂ ಕೃಷಿ ಕೆಲಸ ಮಾಡುತ್ತಿದ್ದರು. ಒಂದೆರಡು ಕಣಜ ಬತ್ತ ಬೆಳೆಯುತ್ತಿದ್ದರು. ಉಳಿಕೆ ಜಮೀನು ಗೇಣಿಗೆ ಕೊಡುತ್ತಿದ್ದರು. ಅದರಿಂದ ಬಂದ ಆದಾಯ ರೈತರಿಗೇ ಮುಂದೆ ಸೂಕ್ತಾಸೂಕ್ತತೆ ಅರಿತು ಬಳಸುತ್ತಿದ್ದರು. ಇದನ್ನರಿತ ಡೂಪ್ಲೆ ತನ್ನ ಆದೇಶ ಹಿಂದೆ ಪಡೆದ. ಭಾರತೀಯ ಜಮೀನ್ದಾರರು ದೇವರಂತೆ ಎಂದ. ಸತ್ಯ ಪ್ರಾಮಾಣಿಕತೆಗೆ ಒಂದು ಜೀವಂತ ಉದಾಹರಣೆಯೆಂದ. ಹಾಗೇ ಅವರ ಸ್ನೇಹವನ್ನು ಬೆಳೆಸಿದ. ನಂತರ ತನ್ನ ಕುಹಕ ಬುದ್ಧಿಯಿಂದ ಅವರನ್ನೂ ಹಾಳು ಮಾಡಿದ; ಅದು ಇತಿಹಾಸ ಬಿಡಿ. ಜಮೀನ್ದಾರರೆಂದರೆ ಇಲ್ಲಿನ ಗುತ್ತಿನ ಮನೆಯವರು ಎಂದು ಕರೆಸಿಕೊಳ್ಳುವವರು. ಕೃಷಿ ಪ್ರಧಾನ ದೇಶದಲ್ಲಿ ಕಡ್ಡಾಯ ಕೃಷಿ ಪದ್ಧತಿ ಬಳಕೆಗೆ ತಂದ ಮೊದಲ ಜನರೆಂದರೆ ಗುತ್ತಿನವರು. ಈಗಿನ ೧೯೭೪ನೇ ಇಸವಿಯ ಟ್ರಚ್ನಲ್ ಟೆನೆನ್ಸಿ ಆಕ್ಟ್ ಪ್ರಕಾರ ಜಮೀನು ಪಡೆದ ಶೇ. ೪೦ ಭಾಗ ಜನರು ಭೂಮಿ ಮಾರಾಟ ಮಾಡಿಯೇ ಹಾಳು ಬಿಟ್ಟ ಜಮೀನು ವ್ಯರ್ಥ ಮಾಡಿದ್ದಾರೆ. ಆದರೆ ಆಗ ಕೃಷಿ ಜಮೀನು ಹೊಂದಿದ ರೈತ ಅಥವ ಗೇಣಿಗೆ ಪಡೆದ ರೈತ ಕೃಷಿ ಮಾಡದಿದ್ದರೆ ಅವನನ್ನು ಕಠಿಣ ಶಿಕ್ಷೆಗ ಗುರಿಪಡಿಸಲಾಗುತ್ತಿತ್ತು; ಅದು ಕಡ್ಡಾಯ ಕೃಷಿ ಕಾನೂನಿನಡಿಯಲ್ಲಿ. ಯಾರೇ ಕೃಷಿ ಭೂಮಿಯನ್ನು ಹೊಂದಿದ್ದರೂ ಅವರು ಹಾಳು ಬಿಡುವಂತಿಲ್ಲ. ಬಿಟ್ಟಲ್ಲಿ ಗುತ್ತಿನವರು ಮುಟ್ಟುಗೋಲು ಹಾಕಿಕೊಳ್ಳಬಹುದಿತ್ತು. ಈಗಲೂ ಅದೇ ಕಾನೂನು ಬಳಕೆಗೆ ಬಂದಲ್ಲಿ ದೇಶದ ಆಹಾರೋತ್ಪಾದನೆ ಕುಂಠಿತವಾಗುತ್ತಿರಲಿಲ್ಲ.

ಇಷ್ಟಲ್ಲದೆ ಮುಖ್ಯವಾಗಿ ಗುತ್ತಿನವರು ಅವರ ಪ್ರಾದೇಶಿಕ ಸಾಂಪ್ರದಾಯಿಕ ಕಲೆ, ಜಾನಪದೀಯ ಕಲೆ, ಆಟೋಟಗಳು, ಕೃಷಿಕರಿಗೆ ಉತ್ತೇಜನ, ಪಶುಸಂಗೋಪನೆ, ಆ ಸಂಬಂಧಿ ಬಹುಮಾನಗಳು, ಗೌರವಗಳನ್ನು ಕೊಟ್ಟು ಪುರಸ್ಕರಿಸಿ ಬೆಳೆಸುತ್ತಿದ್ದರು. ರಾಜಾದಾಯ, ದೇವಸ್ವ, ಸುಂಕಾದಿಗಳನ್ನು ಸಂಗ್ರಹಿಸಿ ಕ್ರಮಬದ್ಧವಾಗಿ ವಿನಿಯೋಗ ಮಾಡುತ್ತಿದ್ದರು. ದೇವಾಲಯಗಳು, ಭೂತಾಲಯಗಳು, ಉತ್ಸವ, ನೇಮ ಇತ್ಯಾದಿಗಳನ್ನು ಶಾಸ್ತ್ರೀಯವಾಗಿ ನಡೆಸುತ್ತಿದ್ದರು. ಉತ್ತಮ ನ್ಯಾಯ ಚಾವಡಿ ನಿರ್ವಹಣೆ, ಸಾಂವಿಧಾನಿಕ ನ್ಯಾಯಮೀಮಾಂಸೆಯಂತೆ ನ್ಯಾಯದಾನ, ಗಡಿವಿವಾದಾದಿಗಳ ನಿರ್ವಹಣೆ, ಕಳ್ಳತನಾದಿಗಳ ನಿರ್ಮೂಲನ, ಆಚಾರ ಹೀನರಿಗೆ ಶಿಕ್ಷಾದಿಗಳನ್ನು ಗುತ್ತಿನ ಮನೆಯವರು ನಿರ್ವಹಿಸುತ್ತಿದ್ದರು. ದೂರದೇಶಗಳಿಂದ ಬರುವ ವ್ಯಾಪಾರಿಗಳಿಂದ ಕರಸಂಗ್ರಹಣೆ, ದೂರದೇಶದ ಯಾತ್ರಾರ್ಥಿಗಳಿಗೆ ಊಟೋಪಚಾರ, ಸಾಧುಸಂತರ ಸತ್ಕಾರಗಳು, ರಾಜಾಧಿಕಾರಿಗಳ ಊಟ ವಸತಿ ವ್ಯವಸ್ಥೆ ನೋಡಿಕೊಳ್ಳುತ್ತಿದ್ದರು. ವ್ಯವಸ್ಥಿತ ಗರಡಿ ಮನೆ ನಿರ್ವಹಣೆ ಮಾಡಿ ಸೈನಿಕ ಪೂರೈಕೆ ಮಾಡುತ್ತಿದ್ದರು. ಇನ್ನು ಆಡಳಿತಾತ್ಮಕ ಆಧ್ಯಾತ್ಮಿಕ ಶಕ್ತಿಯ ಬಗ್ಗೆ ತಿಳಿಯೋಣ. ಮೊದಲಾಗಿ ಈ ಕೆಲವು ಮೂಲ ದಾಖಲೆಗಳ ವಿವರಣೆ ನೋಡಿರಿ.ಗುತ್ತಿನವರ ಆಧ್ಯಾತ್ಮಿಕತೆಯೇನು?

ಮೊದಲಾಗಿ ಗುತ್ತಿನವರನ್ನು ಆಯ್ಕೆ ಮಾಡುವುದು ಬೀಡಿನವರು. ಒಂದು ಬೀಡಿನವರು ೧೬ ಮಂದಿ ಗುತ್ತಿನವರನ್ನು ಆಯ್ಕೆ ಮಾಡುತ್ತಾರೆ. ನಂತರ ಅವರು ವಂಶಪಾರಂಪರ್ಯವಾಗಿ ನಡೆಸಿಕೊಂಡು ಹೋಗಬಹುದು. ಆದರೆ ಗುತ್ತಿನ ಗಡಿಕಾರನಿಗೆ ಸಹೋದರಿ ಇರಲೇ ಬೇಕು. ಇದು ಗುತ್ತಿನ ನಿಯಮ. ಗಡಿಹಿಡಿದವನು ಸತ್ಯವಂತನೂ, ಪ್ರಾಮಾಣಿಕನೂ, ರಾಜಪ್ರೀತನೂ, ದೇವಬ್ರಾಹ್ಮರಣರಲ್ಲಿ ಗೌರವವಿಡುವವನೂ, ಸಕಲರನ್ನೂ ಏಕಭಾವದಿಂದ ನೋಡುವವನೂ ಆಗಿರಬೇಕು. 

೧. ತನ್ನ ಸ್ವಂತಶ್ರಮದಿಂದ ಜೀವನ, 
೨. ನಿತ್ಯ ಧರ್ಮದೇವತೆಗಳ ಪೂಜೆ, 
೩. ಪಂಚಧೈವ ಆರಾಧನೆ, 
೪. ನಿತ್ಯ ಚಾವಡಿ ಸಮಾರಾಧನೆ, 
೫. ರಾಜಸ್ವ ಲೆಕ್ಕಪತ್ರ ಲೇಖನ, 
೬. ಸುಂಕಾದಿ ಆದಾಯ ನಿರ್ವಹಣೆ, 
೭. ನ್ಯಾಯಿಕ ಶಿಕ್ಷಾದಿಗಳ ಜಾರಿ. 

ಈ ಏಳರಲ್ಲಿ ಭಿನ್ನತೆಯಾಗದಂತೆ ತನ್ನ ಕೌಟುಂಬಿಕ ಜೀವನ ನಿರ್ವಹಣೆ. ಇವು ಕರ್ತವ್ಯಗಳು.

ಇದು ವಂಶ ಪಾರಂಪರ್ಯವಾದ್ದರಿಂದ ಗುತ್ತಿನವರು ತಾವು ಆರ್ಜಿಸಿದ ಆಸ್ತಿ ಒಂದು ಭಾಗವಾದರೆ ಅವರು ತಮ್ಮ ಸರಳ, ನಿಷ್ಕಾಪಟ್ಯ ಜೀವನದಿಂದ ಆರ್ಜಿಸಿದ ಪುಣ್ಯ ತಲತಲಾಂತರದಿಂದ ಹರಿದು ಬಂದು ಗಡಿಕಾರನಾದ ಮೇಲೆ ಒಬ್ಬ ದೇವತೆಯಂತೆಯೇ. ಹಾಗಾಗ ಕೆಲ ಆಹಾರ ಬದ್ಧತೆ, ನಿಯಮಬದ್ಧತೆಗಳೂ ಇರುತ್ತವೆ. ಅದರ ಮುಖ್ಯ ಉದ್ದೇಶ ನಿಯಮಪಾಲನೆ ದೀರ್ಘಾಯುಷ್ಯದ ಆಧಾರಸ್ಥಂಭ. ಕುಟಿಲ, ಕುಹಕಜನರು ವಿಷಾಹಾರ, ಮಾದಕವಸ್ತುಗಳ ಪ್ರಯೋಗದಿಂದ ತೊಂದರೆ ಉಂಟುಮಾಡಬಹುದು ಎಂಬ ಮುನ್ನೆಚ್ಚರಿಕೆ. ಹಾಗಾಗಿ ಬೇರೆ ಎಲ್ಲಿಯೂ ಊಟಾದಿ ಆಹಾರ ಸೇವನೆ ನಿಷೇಧಿಸಿದರು. ವಸ್ತ್ರಸಂಹಿತೆ ವ್ಯವಹಾರಕ್ಕೆ ಆಧರಿಸಿರುತ್ತದೆ. ಗುತ್ತಿನವರು ಧೈವಭಕ್ತ. ಸದಾ ದೇವರನ್ನೇ ಪೂಜಿಸುತ್ತಾ ದೇವರಾಗಿಯೇ ವ್ಯವಹರಿಸಬೇಕಾದ್ದರಿಂದ ಸಾಂಪ್ರದಾಯಿಕ ಉಡುಗೆ-ತೊಡುಗೆ ಹೇಳಲ್ಪಟ್ಟಿತು. ಮಡಿ, ಮೈಲಿಗೆ ಆಚರಣೆ - ಯಾವುದು ಅರಿಷಡ್ವರ್ಗ ಪ್ರೇಷಕವೋ ಅದರಿಂದ ದೂರವಿರುವುದೇ ಮಡಿ. ಯಾವುದು ಮನೋ ವಿಕಾರಗಳಿಗೆ ಪ್ರೇಷಕವೋ ಅದೇ ಮೈಲಿಗೆ. ಅದರಿಂದ ದೂರವಿದ್ದು ಮನೋನಿಗ್ರಹ ಸಾಧಿಸಿರಲೇಬೇಕು. ಆಹಾರ ಶುದ್ಧ ಸಾತ್ವಿಕವಾಗಿರಬೇಕು. ಉದಾರವಾಗಿ ಹೇಳುವುದಾದರೆ ಮನುಷ್ಯ ತಿನ್ನುವ ಆಹಾರವೆಂದಿದೆ. ಮಾನವ ಆಹಾರ :- ಹಣ್ಣು, ಗೆಡ್ಡೆ, ಗೆಣಸು, ಏಕದಳ, ದ್ವಿದಳ ಸಸ್ಯೋತ್ಪನ್ನ ಧಾನ್ಯಗಳು. ಅವುಗಳನ್ನು ಜೀರ್ಣಿಸಿಕೊಳ್ಳುವ ಶಕ್ತತೆಯ ಜೀರ್ಣಾಂಗಗಳನ್ನು ಮಾತ್ರ ಮಾನವ ಹೊಂದಿರುತ್ತಾನೆ. ಅದು ಹೊರತುಪಡಿಸಿ ಯಾವುದೂ ಮಾನವ ಆಹಾರವಲ್ಲ. ಅದೇ ಆಹಾರ ನಿಯಮವಾಗಿದೆ. ತಾಂಬೂಲ, ಗಂಧ, ಧೂಪ, ಪುಷ್ಪ, ಸ್ವರ್ಣಾಭರಣ, ಆಯುಧ, ಗುತ್ತಿನವರಿಗೆ ವಿಶೇಷ ಅಲಂಕಾರ. ಅವರ ತೂಕದ ಮಾತೇ ಧ್ವಜ. ಅವರ ನ್ಯಾಯ ನಿಷ್ಠುರತೆಯೇ ಸಿಂಹಾಸನ. ಧೈವಭಕ್ತಿಯೇ ಕಿರೀಟ. ಪರಂಪರೆಯ ಅವಿಚ್ಛಿನ್ನತೆಯೇ ಶಕ್ತಿ. ಕೈಯಲ್ಲ ಧರಿಸಿರುವ ಕಂಕಣವೇ ಅದರ ಕೀಲಕ. ಎರಡೂ ಕಡೆಯ ದ್ವಂದ್ವವಾದವನ್ನು ತಾಳ್ಮೆಯಿಂದ ಕೇಳವುದೇ ನ್ಯಾಸ. ನಂತರ ದ್ವಂದ್ವದ ಮಧ್ಯದ ಸತ್ಯವೇ ಬೀಜ. ಅದನ್ನಾಧರಿಸಿ ನೀಡುವ ನ್ಯಾಯವೇ ಅಸ್ತ್ರ. ಇದು ಗುತ್ತಿನವರ ಸಂಕಲ್ಪ ಅಥವಾ ದೀಕ್ಷೆ. ಇದನ್ನು "ಗಡಿ ಹಿಡಿಯುವುದು" ಎಂದರು. ತನ್ನ ಜೀವನಕ್ಕೆ ಒಂದು ಸೀಮಾರೇಖೆ ವಿಧಿಸಿ ಅದರ ಬದ್ಧತೆಯೊಂದಿಗೆ ಪ್ರಾಣವೇ ಪಣವಾಗಿಟ್ಟು ನಡೆಸುವ ಜೀವನಪದ್ಧತಿಯೇ ಗಡಿಹಿಡಿಯವುದು. ತಾನು ಆ ಗಡಿಯನ್ನು ಉಲ್ಲಂಘಿಸದೆ ಇರುವುದೇ ಗಡಿಬದ್ಧತೆ.

ಹೀಗೆ ಗಡಿಕಾರರು ಒಂದು ವ್ಯವಸ್ಥೆಯ ಬದ್ಧತೆಗೆ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿರುವುದರಿಂದ ಅವರು ಪೂಜ್ಯರೂ, ವಂದನೀಯರೂ, ಮಹಾತ್ಮರೂ ಆಗಿರುತ್ತಾರೆ. ವಿಚಕ್ಷಣಾ ಜ್ಞಾನ ಇವರ ಪರಂಪರೆಯ ಆಸ್ತಿ. ಇವರು ಕುಟುಂಬದಿಂದ ಬೇರ್ಪಟ್ಟು ಕೆಲ ಸಂಸ್ಕಾರ ಪೂರ್ವಕ ದೀಕ್ಷಾವಿಧಿಗಳನ್ನು ಪಡೆದ ಮೇಲೆ ಇವರಿಗೆ ಯಾವ ಜಾತೀಯ ಕಟ್ಟುಪಾಡುಗಳೂ ಇರುವುದಿಲ್ಲ. ಎಲ್ಲಾ ಜಾತಿಯೂ ಹೊರತುಪಡಿಸಿದ ಸರ್ವಮಾನ್ಯರಾಗಿರುತ್ತಾರೆ. ಆ ರೀತಿಯ ಜಾತೀಯ ಕಟ್ಟುಪಾಡುಗಳಾಗಲೀ ಅನರ್ಹತೆಗಳಾಗಲೀ ಪಾಲಿಸತಕ್ಕದ್ದಲ್ಲ.

ದೈನಂದಿನವಾಗಿ ಗುತ್ತಿನವರು ಪ್ರಾತಃ ಕಾಲದಲ್ಲಿ ಎದ್ದು ಕೈಕಾಲುಮುಖ ತೊಳೆದುಕೊಂಡು ಗೋಪೂಜಾದಿಗಳನ್ನು ಮಾಡಿ, ಪಂಚಧೈವಗಳ ಪೂಜೆ, ದಂಡ, ಕಂಕಣಕ್ಕೆ ಪೂಜೆ, ನ್ಯಾಯದೀಪ ಬೆಳಗಿಸುವುದು ನಿತ್ಯ ಕರ್ತವ್ಯ. ಇದರ ನಂತರ ವೈಯಕ್ತಿಕ ಅನುಷ್ಠಾನಗಳನ್ನು ಮಾಡುವುದು. ನಂತರ ಅವರವರ ವ್ಯವಹಾರಗಳಿಗೆ ತೊಡಗುವುದು. ಅಲ್ಲಿ ಕೃಷಿ, ವಾಣಿಜ್ಯ, ವಾಣಿಜ್ಯೇತರ, ವೈದ್ಯ, ಜ್ಯೋತಿಷ, ಉಪಾಧ್ಯಾಯ, ಅಶ್ವಹೃದಯ, ಗಜಹೃದಯ, ರಥನಿರ್ಮಾಣ, ಆದಿಯಾಗಿ ಯಾವುದೇ ವೃತ್ತಿಯನ್ನೂ ಮಾಡಬಹುದು. ಮಠಗಳ ಅಧಿಪತ್ಯ, ಪೌರೋಹಿತ್ಯ, ಅರ್ಚಕ, ಗ್ರಾಮಣಿ (ಶ್ಯಾನುಭೋಗ), ಪತ್ರವಾಹ, ಗೂಢಚರ್ಯೆ ಇವುಗಳು ನಿಷೇಧವಿರುತ್ತದೆ. ಹಸ್ತಾಕ್ಷರಗಳು ಹಾಕುವ ಸಂದರ್ಭದಲ್ಲಿ ಆಧ್ಯಾತ್ಮನಾಮ ಸೇರಿಸಿ ವ್ಯವಹಾರನಾಮ ರೂಢಿಯಲ್ಲಿರಬೇಕು.

ಒಟ್ಟಾರೆ ಪ್ರಸಕ್ತ ಕಾಲಕ್ಕೆ ಈ ಗುತ್ತಿನ ಮನೆ ಆಡಳಿತವೇ ಈಗಿನ ದೇಶೀಯ ಆಡಳಿತ ಸಮಾನಾಂತರದಲ್ಲಿದ್ದರೆ ಗ್ರಾಮೀಣ ಬದುಕು, ಸುಖ, ಸಂತೋಷ, ಆನಂದದಾಯಕ, ಭದ್ರವಾಗಿರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಈಗಿನ ದೇಶೀಯ ಆಡಳಿತ ಗ್ರಾಮೀಣ ಬದುಕನ್ನು ದುರ್ಭರಗೊಳಿಸುತ್ತಿದೆ. ಅದು ಹೊರತುಪಡಿಸಿ ಈ ಗುತ್ತಿನ ಆಡಳಿತ ಸಮಾನಾಂತರದಲ್ಲಿದ್ದರೆ ಎಷ್ಟೋ ಅನಕೂಲಕರವೆಂದು ಕಂಡುಬರುತ್ತದೆ. ಈಗಿನ ರಾಜಕೀಯದಲ್ಲಿ ಆಡಳತ ತಜ್ಞತೆ ಇಲ್ಲ. ರಾಜಕಾರಣಿಗಳಿಗೋ, ಅಧಿಕಾರಿಗಳಿಗೋ ಯಾವುದೇ ಬದ್ಧತೆ ಇಲ್ಲ. ತಾವು ಮಾಡಿದ ಕೆಲಸದ ಬಗ್ಗೆ ಶ್ರದ್ಧೆ ಇಲ್ಲ. ಹಾಗಾಗಿ ಇನ್ನು ಈ ಆಡಳಿತ ಸುಧಾರಣೆ ಸಾಧ್ಯವೇ ಇಲ್ಲವೆಂಬ ಮಟ್ಟಿಗೆ ಸಾವಿನಂಚಿನಲ್ಲಿದೆ. ಅದಕ್ಕಾಗಿ ಪ್ರಸಕ್ತ ಗ್ರಾಮೀಣ ಪ್ರದೇಶದಲ್ಲಾದರೂ ಗುತ್ತಿನ ಆಡಳಿತವನ್ನು ಸಾಮಾನ್ಯ ಜನರು ಆಯ್ದು ಕೊಂಡರೆ ೨೫ ವರ್ಷದಲ್ಲಿ ಅನಿವಾರ್ಯವೂ ಆಗುವ ಸಮಸ್ಯೆಗೆ ಉಜ್ವಲ ಭವಿಷ್ಯವಿರುವ ಒಂದು ವ್ಯವಸ್ಥೆ ಬರುತ್ತದೆ.

ಒಂದು ಉದಾಹರಣೆ:- ರಾಮಯ್ಯ ಮತ್ತು ಕೃಷ್ಣಯ್ಯ ಅಕ್ಕಪಕ್ಕದ ಮನೆಯವರು. ಅವರಿಗಿರುವ ಜಮೀನು ಅಕ್ಕಪಕ್ಕದ್ದು. ನೀರಿನ ಹರಿವಿನ ವಿಚಾರದಲ್ಲಿ ಅವರಿಬ್ಬರಿಗೂ ಒಂದು ವಿವಾದ ಹುಟ್ಟುತ್ತದೆ. ಆ ವಿವಾದ ಮುಂದುವರಿದು ಗಲಾಟೆ ಆರಂಭವಾಗುತ್ತದೆ. ಮೊದಲಿನ ಗುತ್ತಿನ ಆಡಳಿತ ಪದ್ಧತಿಯಲ್ಲಿ ನೀರಿನ ದಾರಿ, ನಡೆದಾಡುವ ದಾರಿ ಇತ್ಯಾದಿ ಅನುಭವ ರೀತ್ಯಾ ನಿರ್ಣಯವಿತ್ತು. ಹಾಗಾಗಿ ವಿವಾದ ಮುಂದುವರಿಯುತ್ತಿರಲಿಲ್ಲ. ಆದರೆ ಈಗ ಅವರ ವಿವಾದ ಊರಲ್ಲಿ ಕೇಳುವವರಿಲ್ಲ. ಎರಡೂ ಕಡೆಗೆ ಬೆಂಕೆ ಹಚ್ಚುವ ಜನ, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಎಂಬ ಹಣೆ ಪಟ್ಟಿ ಕಟ್ಟಿದ ಜನ ಗಲಾಟೆ ದೊಡ್ಡದು ಮಾಡುತ್ತಾರೆ. ಕೊನೆಗೆ ಹೊಡೆದಾಟ, ಪೋಲೀಸರು ಕೇಸು ಹಾಕುತ್ತಾರೆ, ಕೋರ್ಟಿಗೆ ಹೋಗುತ್ತದೆ. ಎರಡೂ ಕಡೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಕೋರ್ಟ್ ಆದೇಶ ಕೊಡುತ್ತದೆ. ಕೃಷಿ ನಿಂತಿತು, ಕೇಸು ನಡೆಯಲಾರಂಭಿಸಿತು. ರಾಮಯ್ಯ ಮತ್ತು ಕೃಷ್ಣಯ್ಯರ ಸಣ್ಣ ಮಕ್ಕಳೂ ಇದನ್ನು ಗಮನಿಸುತ್ತಾ ಬೆಳೆಯುತ್ತಾರೆ. ಅವರೂ ಪರಸ್ಪರ ವೈರಿಗಳಾಗಿ ಬೆಳೆಯುತ್ತಾರೆ. ಅಂದಾಜ ಹತ್ತೋ, ಇಪ್ಪತ್ತೋ ವರ್ಶಕ್ಕೆ ಕೋರ್ಟು ನೀರು ಹರಿಯುವಲ್ಲಿಯೇ ಹರಿಯಬೇಕು, ಮಾರ್ಗ ಗುರುತಿಸಿ ಕೊಡಿ ಎಂದು ಹೊಡೆದಾಟದ, ಸಾವು ನೋವಿಗೆ ಸಾಕ್ಷಾಧಾರ ಸಾಲದೆಂದೂ, ತೀರ್ಮಾನಿಸಿ ಆರ್ಡರ್ ಮಾಡುತ್ತದೆ.

ಅಷ್ಟೋತ್ತಿಗೆ ಕೃಷಿಯಿಲ್ಲದೇ ಜೀವನ ನಿರ್ವಹಣೆ ಅಸಾಧ್ಯವಾಗಿ ಊರಿನಲ್ಲಿ ಕೂಲಿ ಸಿಗದೇ ಪೇಟೆ ಪಟ್ಟಣ ಸೇರಿಯಾಗಿರುತ್ತದೆ. ಅವರಿಗಿನ್ನೆಂತು ಜೀವನ? ಈ ನ್ಯಾಯ ಪದ್ಧತಿ ಬೇಕೇ? ಆರಂಭದಲ್ಲಿಯೇ ಗುತ್ತಿನವರು ಎರಡೂ ಕಡೆಯ ವಿವಾದವನ್ನು ಅರ್ಥಮಾಡಿಕೊಂಡು ಮಳೆಯ ನೀರು ಹರಿದು ಹೋಗಲು ಯಾರಿಂದಲೂ ತಡೆ ಬರಬಾರದು. ಈ ವಿವಾದ ಸರಿಯಲ್ಲ ಎಂದು ತಿಳಿಸಿ ಸಮಾಧಾನ ಪಡಿಸಿದ್ದರೆ ಈ ೧೫ ವರ್ಷದ ನಂತರ ಸಿಗುವ ನ್ಯಾಯ ಆ ಕಾಲಕ್ಕೇ ಸಿಗುತ್ತಿರಲಿಲ್ಲವೆ? ಆದರೆ ಯಾವುದೇ ನಷ್ಟವಿಲ್ಲದೆ ರಾಮಯ್ಯ + ಕೃಷ್ಣಯ್ಯರು ಜಮೀನ್ದಾರರಾಗಿಯೇ ಉಳಿಯುತ್ತಿದ್ದರಲ್ಲವೆ? ಯಾವುದೇ ರೀತಿಯಲ್ಲಿ ಅವರ ಮಕ್ಕಳು ಮುಂದೆ ಹಗೆ ಸಾಧಿಸುತ್ತಾ ಬೆಳೆಯ ಬೇಕಿಲ್ಲವಲ್ಲವೆ? ಆದರೆ ಈಗಿನ ಪದ್ಧತಿಯಲ್ಲಿ ಕೋರ್ಟ್ ಕಟ್ಲೆ ವ್ಯವಹಾರ ಮುಗಿಯುವಲ್ಲಿಯವೆರೆಗೆ, ಮುಂದೆ ಸಿಗುವ ನ್ಯಾಯದ ಮೇಲೆ ಆಧರಿಸಿ ಹಗೆತನ ಬೆಳೆಯುತ್ತಾ ಹೋಗುವುದಿಲ್ಲವೆ? ಹಾಗಿದ್ದ ಮೇಲೆ ನಿಮಗೆ ಈ ನ್ಯಾಯದಾನ ಪದ್ಧತಿ ಬೇಕೆ? ಅಥವಾ ಹಿಂದಿನ ಗುತ್ತಿನವರ ನ್ಯಾಯ ಬೇಕೆ? ಅದರ ನಂತರದ ಬೀಡಿನವರ ದಂಡಪೂರ್ವಕ ನ್ಯಾಯ, ಅರಸು ಮನೆತನದ ಶಿಕ್ಷಾತ್ಮಕ ನ್ಯಾಯ, ಏನಿದ್ದರೂ ಅದು ಶೀಘ್ರ ನ್ಯಾಯಪದ್ಧತಿ. ಅದೇ ಉಪಯುಕ್ತವಲ್ಲವೆ? ಚಿಂತಿಸಿ. ಈ ವರ್ಷಾಂತರಗಳ ಕಾಲ ಕಾದು ಹಗೆ, ಕೊಲೆಯನ್ನು ಬೆಳೆಸಿ ಇತರೆ ಅಪರಾಧಗಳಿಗೆ ದಾರಿಯಾಗುವುದಾದರೂ ತಪ್ಪುತ್ತದೆಯಲ್ಲವೆ? ಬುದ್ಧಿವಂತರಾದ ನೀವು ನಿಮ್ಮಲ್ಲಿಯೇ ಒಂದು ಗಂಟೆ ಆಲೋಚಿಸಿ ಸರಿಯೆಂದು ಕಂಡರೆ ಮುಂದೆ ಸರಕಾರೀ ಕಚೇರಿಗಳಿಗೆ ಎಡತಾಕುವುದು ಬಿಟ್ಟು ರಾಜಾದಾಯ (ತೆರಿಗೆ) ಪಾವತಿಸಿ. ಆಮೇಲೆ ಅವರಿಂದ ನಿಮಗೆ ಯಾವುದೇ ಸಹಕಾರ, ಪತ್ರದ ಅಗತ್ಯವಿಲ್ಲದೇನೇ ನೀವೇ ಪರಸ್ಪರ ಸಹಕಾರ ಧರ್ಮದಿಂದ ಬಾಳುವೆ ರೂಪಿಸಿಕೊಂಡು ಬಾಳುವ ಒಂದು ದಾರಿಯ ಅನ್ವೇಷಣೆ ಮಾಡಿಕೊಂಡಲ್ಲಿ ಈಗಿನ ದೇಶೀಯ ಭ್ರಷ್ಟಾಚಾರದಲ್ಲಿ ಶೇ. ೭೦ ಭಾಗ ನಿರ್ನಾಮವಾಗುತ್ತದೆ ಎಂದು ತಿಳಿಸುತ್ತಾ ಈ ಲೇಖನ ಮುಗಿಸುತ್ತಿದ್ದೇನೆ.

ಗಂಡಹೆಂಡಿರ ಜಗಳದೊಳ್ ಕೂಸು ಬಡವಾಯ್ತಂತೆ
ಬಂಡಿ ಅನ್ನವ ತಿಂಬ ಕೂಸನು ಕಾಣದಾದಿರಿ ನೀವು ಈಗ
ಉಂಡೆ ಅನ್ನವ ತಿಂಬೆನೆಂದರು ಗತಿಯಿಲ್ಲವಾಯ್ತು ಮುಂದುವರಿದ ವೈಜ್ಞಾನಿಕತೆಯಲೀ |
ಖಂಡ ವೃಷ್ಟಿಯು ಸುರಿಯೆ ಜನ ಕಂಗಾಲಾಗಿ ಕೂಗುತ
ದಿಂಡೆದ್ದು ಓಡಿ ತಪ್ಪಿಸಿಕೊಳ್ಳಲಾಗದ ಷಂಡರನು ಏಕೆ
ಹಡೆದಳೋ ತಾಯಿ ಭಾರತಿಯ ಸರಕಾರ ಬಂದು ಕುಂಡಯಾ ಮೇಲೆತ್ತಿ ಏಳುವಿರಿ ಭಂಡ ಜನರೇ || ೧ ||

ಗಂಡುಗಲಿಗಳ ನಾಡು ಈ ಕನ್ನಡ ನೆಲವೆಂದು
ದುಂಡು ಅಕ್ಷರದಲ್ಲಿ ಬರೆಸಿದರೆ ಸಾಲದೈ ಏಳಿ ಎದ್ದೇಳಿ
ಗಂಡುಗಲಿಗಳ ತೆರದಿ ಸ್ವತಂತ್ರ ಜೀವನ ಮಾಡಿ ಭಿಕ್ಷಾನ್ನದಾ ಹಾರೈಕೆ ಬಿಡಿ ನೀವು |
ಚಂಡ ವಿಕ್ರಮಿಗಳಾಗಿರಿ ಯಾರೋ ಕೊಡುವ ಹಂಗಿನನ್ನಕೆ
ಭಂಡತನದಲಿ ಜೊಲ್ಲ ಸುರಿಸದಿರಿ ಅದು ಮರಣ ಸಮಾಸ
ಕಂಡು ಕಂಡು ನೀವ್ ಭಿಕ್ಷಾನ್ನದಾ ಸುಳಿಗೆ ಸಿಕ್ಕುವಿರಲ್ಲ ವ್ಯರ್ಥಬಾಳುವೆಗಿಂತ ಸಾವು ಮೇಲು || ೨ ||

ಕಂಡ ಕಂಡ ಕಲ್ಲು ದೇವರುಗಳಿಗೆ ಕೈಮಗಿದರೇನುಂಟು ಫಲ
ಭಂಡಬಾಳಿನ ಕೂಳಿನಾ ಋಣ ನಿನ್ನ ಮೇಲಿರಲೇನು ಮಾಡುವ
ಕಂಡ ಕಂಡ ಗುರುಗಳ ಸಮಾಧಿ ಸುತ್ತುತ ಭಕುತಿಯಾ ನಾಟಕವು ವ್ಯರ್ಥ ಕಾಣೆಲೋ ಮರುಳೇ ನೀ |
ಚಂಡ ವಿಕ್ರಮಿಯಹುದಾದರೆ ಮನದೊಳಗೆ ಸ್ಮರಿಸುತ ದೇವನು
ದ್ದಂಡನೆಂಬುದನರಿತು ನಿನ್ನಯ ಬಾಳ್ವೆಗೆ ಸ್ವತಂತ್ರತೆಯನಳ
ವಡಿಸಿಕೊಳೈ ಕೈಯ ಚಾಚದಿರು ಭಿಕ್ಷೆಗೆ ಬರಲಿ ಚಂಡಮಾರುತವೇನು ಹೆದರದಿರು ಮಾರ್ತಾಂಡಗೇ || ೩ ||

ತಾಯಿ ಭಾರತಿಯ ಗರ್ಭವನು ಹೀಗಳೆಯದಿರು ಮರುಳೇ
ನಾಯಿ ಬಾಳನು ಬಾಳಬೇಡೈ ಬಾಳುವೆಗೊಂದರ್ಥವಿದೆ ಅದಕೆ
ನೋಯದಿರು ಈ ದೇಶದಲಿ ಹುಟ್ಟಿದಕೆ ಸೋಲದಿರು ಪ್ರಚಂಡನಾಗು ಆಮಿಷಕೆ ಒಳಗಾಗದಿರೂ |
ಬಾಯ ಬಡಿವರು ಆಳುವವರು ನಿನ್ನನು ತಾಳು ನೀ ನಿನ್ನನಾಳ
ಹೇಯ ಬದುಕಿಗೆ ವ್ಯರ್ಥಗಳಹದಿರು ಕೇಳಯ್ಯ ಭಾರತೀ ಸುತನಾಗು
ಕಾಯವಳಿಯಲಿ ನಿನ್ನ ಆತ್ಮದಾ ಕೀರ್ತಿಯುಳಿಯಲಿ ನಿನ್ನನಾಳಿಕೊಂಡರೆ ಇದು ಖಂಡಿತವೂ || ೪ ||

ಅದಕೆ ಬೇಕೈ ನಿನಗೆ ಹಿಂದಿನ ಚರಿತೆ ಇತಿಹಾಸದರಿವು
ಅದನರ್ಥ ಮಾಡಿಕೊಂಡರೆ ನಮ್ಮ ಪೂರ್ವಿಕರ ಸುಖಬಾಳ್ವೆ
ಒದಗಿ ಕಾಣುವುದು ಬಿಡು ನೀನು ಅನರ್ಥ ಬಾಳಿನ ಈಗಿನ ದೊಂಬರಾಟವನೂ |
ಬದಿಗಿಟ್ಟು ನೈಜಜೀವನದರಿವು ಪಡೆಯುತ ಹಗೆದೊಲೆ
ಯೊದರದಂದದಿ ಬಾಳುವಾ ನಮ್ಮ ಇತಿಹಾಸವರಿತು ಬಾಳಿರಿ
ಒದಗುವುದು ನಿಮಗಾಗ ಜೀವನದರ್ಥ ಜ್ಞಾನ ಸುಖವಿದೆ ತ್ಯಾಗದಲಿ ಕಾಣಯ್ಯ ಮರುಳೇ || ೫ ||

ಇಂತು

ಕೆ. ಎಸ್. ನಿತ್ಯಾನಂದ