Friday, 30 May 2014

ಬೀಜಗಣಿತದ ಏಕವರ್ಣ ಸಮೀಕರಣ : ವಯೋಮಾನ ಲೆಕ್ಕ (Aptitude Interview Question)

ಮಲಯದೊಳ್ ಶ್ರೀ ಬಿಂದು ಎಂಬೀರ್ವ ಕಿನ್ನರಿಯರು
ಬಲು ಚೆಂದದಿಂ ಆಡುತಿರೆ ಬಂದು ಕೇಳಿದನಂದು
ಶರದಂಕೆಯ ಋತುರಾಜ ನಾನು ನಿನ್ನಾಯುಷವ ಬಿಂದುಬಿಟ್ಟು ಪೇಳೆಂದನು |
ಎನ್ನಯನದ ಬಿಂದುವಿನ ಗುಣಿತವು ಎನ್ನಾಯು, ಕರವರುಷದ
ಮುನ್ನ ಚಿಕ್ಕಿಗಿಂತ ನಾಲ್ಮೀರಿದೊಂದು ರವಿಕಾಂತಿ ಉದಿಸೆ,
ತಾಳೆಬೇಡ ತಾಳು ಮೊತ್ತಕೆ ಕಷ್ಟಗಳ ಕೂಡಿದರೂ ತಾಳಿಗೆ ಸಿಗೆ ತಾಳೈ ಸಿರಿ ತಾನೆಂದಳು  || ೨ ||

ಲೆಕ್ಕ:
ಶರದಂಕೆ = 5. ಐದನೇ ಋತುರಾಜ = ಹೇಮಂತ,
ಬಿಂದುಬಿಟ್ಟು = ಪೂರ್ಣ ಸಂಖ್ಯೆ.   
B = ತಂಗಿ ಬಿಂದುವಿನ ಪ್ರಸಕ್ತ ವಯಸ್ಸು,
S = ಅಕ್ಕ ಶ್ರೀಯ ಪ್ರಸಕ್ತ ವಯಸ್ಸು
ಪ್ರಸಕ್ತ: ನಯನ = 3. ಹಾಗಾಗಿ S = 3B
ಕರವರುಷ = 2 ವರ್ಷದ ಹಿಂದೆ:
   ಬಿಂದು: B - 2
   ಶ್ರೀ:    S - 2,

ಸಮೀಕರಣ:   
ನಾಲ್ಮೀರಿದೊಂದು ರವಿಕಾಂತಿ ಉದಿಸೆ = 4ನ್ನು ಗುಣಿಸಿ 1 ಕೂಡಿಸಿ
S - 2 = 4(B - 2) + 1
3B - 2 = 4B - 7
ತಂಗಿಯ ಪ್ರಸಕ್ತ ವಯಸ್ಸು: B = 5, ಅದಕ್ಕಿಂತ 8 (ಅಷ್ಟಕಷ್ಟಗಳು) ಜಾಸ್ತಿ => 13
ಅಕ್ಕಳ ಪ್ರಸಕ್ತ ವಯಸ್ಸು: S = 3B = 15, ಅದಕ್ಕಿಂತ 8 (ಅಷ್ಟಕಷ್ಟಗಳು) ಜಾಸ್ತಿ => 23
  
ವಿಶ್ಲೇಷಣೆ:-
ಈ ಏಕವರ್ಣ ಸಮೀಕರಣವನ್ನು ಭಾಸ್ಕರಾಚಾರ್ಯರ ಬೀಜಗಣಿತ ಉದಾಹರಣೆಗಳಿಂದ ಜೋಪಾನವಾಗಿ ೩ ದಿವಸ ಸತತ ಅಧ್ಯಯನದಿಂದ ರಚಿಸಿದೆನು. ರಚನಾ ಕೌಶಲ್ಯದಲ್ಲಿ ಶಬ್ದ ಚಮತ್ಕಾರಗಳೂ ಬಂದಿವೆ. ಲೆಕ್ಕದ ಆದಿಯಲ್ಲಿ ಪ್ರಾಕೃತಿಕ ವಿಭಜನೆಯನ್ನು ವರ್ಣಿಸಿದೆ. ಈ ಲೋಕದ ತ್ರಿಭುವನಗಳೆಂದರೆ ಸಹ್ಯಾದ್ರಿ ಮಲೆನಾಡು, ಪಶ್ಚಿಮ ಕರಾವಳಿಯಲ್ಲಿನ ದಕ್ಷಿಣ ಕನ್ನಡ ಮತ್ತು ಅದರ ಮುಂದಿನ ದಟ್ಟಾರಣ್ಯವುಳ್ಳ ಮಲಯ ಪ್ರಾಂತ್ಯ. ಈ ೩ ಪ್ರಾಂತ್ಯದಲ್ಲಿ ಪ್ರಸಕ್ತ ನಾಗಾರಾಧನೆ ಎಂದರೆ ಮನಸ್ಸಿನ ಆರಾಧನೆಯು ಪೂರ್ಣ ರೂಪದಲ್ಲಿ ಕಂಡುಬರುತ್ತದೆ. ಮಲೆನಾಡಿನಲ್ಲಿ ಭೂತಕಾಲೀನ ವಿಚಾರಗಳೇ ಮನಸ್ಸಿನ ಭೂತಾರಾಧನೆ, ದಕ್ಷಿಣ ಕನ್ನಡದಲ್ಲಿ ಮನಸ್ಸಿನ ವರ್ತಮಾನ ಸ್ವರೂಪದ ನಾಗಾರಾಧನೆ, ಮಲಯಾಳದಲ್ಲಿ ಮನಸ್ಸಿನ ಭವಿಷ್ಯತ್ ಸ್ವರೂಪದ ಯಕ್ಷಾರಾಧನೆ ಇಂದಿಗೂ ಅಳಿದುಳಿದು ಬಂದಿದೆ.

ಮನೋ ಆವರ್ತನಾ ಚಿಹ್ನೆ. ಅದನ್ನೇ ನಾಗಾರಾಧನೆಯಲ್ಲಿ ಪವಿತ್ರವೆನ್ನುತ್ತಾರೆ
ಕಿನ್ನರಿಯನ್ನು ನುಡಿಸುವ ಜೋಗಿಯ ಕಥೆ ನಿಮಗೆಲ್ಲ ತಿಳಿದೇ ಇದೆ. ಆದರೆ ಕಿನ್ನರಿ ಎಂಬುದು ಕಿಟಾರನೆ ಕಿರುಚುವ ಚಿಕ್ಕ ಪುಟ್ಟಿ ಎಂಬರ್ಥ ಕೊಡುತ್ತದೆಯಾದರೂ ಮಾನವನ ಸಾಧನಾ ಏರಿಕೆಯಲ್ಲಿ ಬರುವ ಕಿನ್ನರ ವರ್ಗವನ್ನೂ ಪ್ರತಿನಿಧಿಸುತ್ತದೆ. ಕಿನ್ನರಿ ಎಂದರೆ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಸುತ್ತ ಮುತ್ತಲಿನ ಕಿರಿದಾದ ವಿಚಾರಗಳನ್ನು ಅರಿತು ಹಿರಿಯರನ್ನೂ ಮೀರಿಸುವ ಚಾಣಾಕ್ಷೆ.

ಮಕ್ಕಳಿಗೆ ಗಣಿತ ಸಮಸ್ಯೆಗಳನ್ನು ಒಡ್ಡುವಾಗ ಹೆಚ್ಚಾಗಿ ಪರಿಸರ ಪ್ರೇಮ ಬೆಳಸುವ ಸಲುವಾಗಿ ಕಾಡು ಮೇಡುಗಳ ವರ್ಣನೆ ಇರಬೇಕು. ಹಾಗಾಗಿ ಇಲ್ಲಿ ಮಲಯ ಪ್ರಾಂತ್ಯವನ್ನು ಆರಿಸಿಕೊಂಡೆ. ರಜೆ ದಿನಗಳಲ್ಲಿ ಅಕ್ಕತಂಗಿಯರಿಬ್ಬರು ಅಂಗಳದಲ್ಲಿ ಆಡುತ್ತಿರುವ ದೃಷ್ಯವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತಾ ಅಲ್ಲಿಗೆ ಬಂದಂತಹಾ ಒಬ್ಬ ಯುವಕನು ತನ್ನ ಹೆಸರನ್ನು "ಶರದಂಕೆಯ ಋತುರಾಜ" (ಹೇಮಂತ) ಎಂದು ಹೇಳುತ್ತಾ ಶ್ರೀಯ ವಯಸ್ಸು ಕೇಳಿದ ಕೂಡಲೆ ಗಣಿತದ ಒಗಟನ್ನೇ ಒಡ್ಡುತ್ತಾರೆ ಸಹೋದರಿಯರು.

ಇಲ್ಲಿ ಋತುಜ್ಞಾನವೆಂಬ ಪರಿಸರ ವಿಜ್ಞಾನ ಅಡಗಿದೆ. ಒಂದು ವರ್ಷವನ್ನು ವಸಂತ, ಗ್ರೀಷ್ಮ, ವರ್ಷ, ಶರತ್, ಹೇಮಂತ, ಶಿಶಿರ ಎಂಬ 6 ಋತುಗಳು ಆಳುತ್ತವೆ. ಋತುಗಳ ಅಧ್ಯಯನವು ಪ್ರಾಕೃತಿಕ ಬದಲಾವಣೆ, ವಾತಾವರಣ, ಆಹಾರ ವಿಹಾರ ಪಥ್ಯ, ಆರೋಗ್ಯ ರಕ್ಷಣೆ, ಜ್ಞಾನಾರ್ಜನೆ, ಕರ್ಮವಿಪಾಕಗಳಿಗೆ ಬಹಳ ಮುಖ್ಯ.

ಶ್ರೀಯು "ಎನ್ನಯನದ" ಎಂಬ ಶಬ್ದದಿಂದ ಒಗಟನ್ನು ಆರಂಭಿಸುತ್ತಾಳೆ. ಇಲ್ಲಿ ಋತುವೆಂಬ ಕಾಲದ ಲೆಕ್ಕ ಬಳಸಿದ ಯುವಕನಿಗೆ "ಎನ್ನ + ಅಯನದ" ಎಂದು ಗೋಜಲು ಮಾಡುವ ಉದ್ದೇಶವಿದೆ. ಅಯನ ಎಂದರೆ ೬ ತಿಂಗಳ ಕಾಲ. ಎರಡು ಅಯನಗಳಾದ ದಕ್ಷಿಣಾಯನ ಮತ್ತು ಉತ್ತರಾಯನಗಳು ಒಂದು ಸಂವತ್ಸರ (ವರ್ಷವನ್ನು) ಉಂಟುಮಾಡುತ್ತವೆ. ಆದರೆ ಇಲ್ಲಿ ಅಡಗಿರುವುದು "ಎನ್ + ನಯನ" ಎಂಬ ಪ್ರಾಕೃತ ನುಡಿಗಟ್ಟು. ನಯನ ಎಂಬ ಸಂಖ್ಯೆಯು ತ್ರಿನಯನ ಅಥವಾ ತ್ರಿನೇತ್ರ ಎಂಬ ಕಾರಣ ೩.

"ಎನ್ನಯನದ ಬಿಂದುವಿನ ಗುಣಿತವು ಎನ್ನಾಯು" ಎಂದರೆ ತನ್ನ ತಂಗಿ ಬಿಂದುವಿಗಿಂತ ಇವಳ ವಯಸ್ಸು ೩ ಪಟ್ಟು ಎಂದರ್ಥ. "ಎನ್ನಯನದ ಬಿಂದುವಿನ" ಎಂದಾಗ ತನ್ನ ಕಣ್ಣಿನಲ್ಲಿ ಕಣ್ಣಿಟ್ಟು ನೋಡಿಕೊಂಡ ತಂಗಿಯ ಮಧುರ ಸಂಬಂಧದ ದ್ಯೋತಕ.

"ಕರವರುಷ ಮುನ್ನ" : ಕರ = ಕೈ = ೨ ವರ್ಷದ ಹಿಂದೆ.

"ನಾಲ್ಮೀರಿದೊಂದು ರವಿಕಾಂತಿ ಉದಿಸೆ" - ನಾಲ್ಕನ್ನು ಮೀರಿ ಸೂರ್ಯನಂತೆ ಒಂದೇ ಇರುವುದು. ಅಂದರೆ ಸಮೀಕರಣದಲ್ಲಿ ನಾಲ್ಕು ಪಟ್ಟು ಗುಣಿಸಿ ಅದಕ್ಕೆ ಒಂದನ್ನು ಸೇರಿಸಬೇಕೆಂದರ್ಥ.

"ತಾಳೆಬೇಡ ತಾಳು" : ಈ ಹಂತಕ್ಕೆ ಸಮೀಕರಣ ಬಿಡಿಸಿದಾಗ ಬಿಂದುವಿನ ವಯಸ್ಸು ೫, ಶ್ರೀಯ ವಯಸ್ಸು ೧೫ ಎಂದು ಬಂದಿರುತ್ತದೆ. ಲೆಕ್ಕವಾದೊಡನೆಯೇ ತಾಳೆ ನೋಡುವುದು ಅಭ್ಯಾಸವಾಗಿರುತ್ತದೆ. ಆದರೆ ಆತುರಗಾರನಿಗೆ ಬುದ್ಧಿ ಮಟ್ಟ ಎಂಬ ಎಚ್ಚರಿಕೆ ಇಲ್ಲಿದೆ. ಈ ಹಂತದಲ್ಲಿ ತಾಳೆ ನೋಡಬಾರದು ಎಂದು ಹೇಳುತ್ತಾಳೆ.

"ಮೊತ್ತಕೆ ಕಷ್ಟಗಳ ಕೂಡಿದರೂ": ಹಿಂದೆ ಬಂದ ಉತ್ತರಕ್ಕೆ ಕಷ್ಟದಂಕಿ ೮ನ್ನು ಕೂಡಿದರೆ ಬಿಂದು ೧೩ ಮತ್ತು ಶ್ರೀ ೨೩ ಎಂದು ಉತ್ತರ ಸಿಗುತ್ತದೆ.

"ತಾಳಿಗೆ ಸಿಗೆ ತಾಳೈ ಸಿರಿ ತಾನೆಂದಳು": ಈ ಲೆಕ್ಕ ಮಾಡಿದರೂ ತಾನು ತಾಳಿ ಕಟ್ಟಿಸಿಕೊಳ್ಳುವುದಕ್ಕೆ ಸಿಗುವವಳಲ್ಲ ಎಂಬ ಘಾಟಿ ನುಡಿಯಿಲ್ಲಿದೆ. ಇದು ಪ್ರಾಸಕ್ಕೆ ಬದ್ಧವಾಗಿ ತಾಳಿ, ತಾಳೈ, ತಾನೆಂ.. ಸಿಗೆ, ಸಿರಿ.. ಹೀಗೆ ಶ್ರೀಯ ತದ್ಭವ ಸಿರಿ ಎಂಬ ಸಂದೇಶವೂ ಇದೆ. ಶ್ರೀ ಎಂಬುದು ಅತ್ಯುತ್ಕೃಷ್ಟ ಸಂಯುಕ್ತಾಕ್ಷರ. ಶ್ + ರ + ಈ = ಶ್ರೀ = ಪ್ರಕೃತಿ / ಮಾಯೆ. ಶ್ರೀವಿಧ್ಯೆ ಎಂಬುದು ಅತ್ಯುನ್ನತ ವಿಧ್ಯೆ. ಸರಿಯಾಗಿ ಗೊತ್ತಿಲ್ಲದೆ ಅದರ ಸುದ್ದಿಗೆ ಹೋದರೆ ಅಷ್ಟೇ ಅಪಾಯಕಾರಿಯೂ ಹೌದು. ಬಿಂದು ಎಂದರೆ ಪ್ರತಿಯೊಂದು ರೇಖಾಕೃತಿಯ ಮೂಲ. ಇನ್ನು ಸಿರಿ-ಕುಮಾರರ ವರ್ಣನೆಯು ತುಳು ಪಾಡ್ದನಗಳಲ್ಲಿ ಹೇರಳವಾಗಿ ಕಾಣಸಿಗುತ್ತದೆ. ನಂದಳಿಕೆಯಲ್ಲಿ ಸಿರಿಯ ಜಾತ್ರೆಯಂತೂ ಬಹಳ ಪ್ರಖ್ಯಾತಿ ಹೊಂದಿದೆ. ಸಿರಿಭೂವಲಯವು ಲಭ್ಯ ಕನ್ನಡದ ಪ್ರಪ್ರಥಮ ಕೃತಿ. ಅದರ ಸಿರಿಯೇನೆಂಬೆ - ೭೧೮ ಭಾಷೆಗಳಲ್ಲಿ ಕೇವಲ ಕನ್ನಡದ ಅಂಕಿಗಳು ಡೀಕೋಡ್‍ಗೊಂಡು ರಾಶಿ ರಾಶಿ ಜ್ಞಾನ ಭಂಡಾರವನ್ನೇ ಎಲ್ಲಾ ಭಾಷೆಗಳಲ್ಲಿ ತೆರೆದಿಡುತ್ತದೆ. ಹಾಗಾಗಿ ಈ ಶ್ರೀ = ಸಿರಿ = ಸರ್ವಭಾಷಾಮಯೀ ಭಾಷಾ = ೬೭ ಲಕ್ಷ ಕೋಟಿ ಶಬ್ದಗಳುಳ್ಳ ಕನ್ನಡ.  "ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ".

ಹೆಣ್ಣಿನ ವಯಸ್ಸು ಕೇಳಬೇಡ ಎಂಬ ನಾಣ್ನುಡಿ ಇದೆ. ಕೇಳಿದಾಗ ಕ್ಷಣದಲ್ಲಿ ಜಟಿಲವಾದ ಗಣಿತದ ಒಗಟನ್ನು ಒಡ್ಡಿ ಜಾರಿಕೊಳ್ಳುತ್ತಿದ್ದರು ಭಾರತೀಯ ಯುವತಿಯರು. ಪ್ರಸಕ್ತ ಲೆಕ್ಕವು ಅದರ ಒಂದು ಉದಾಹರಣೆಯಷ್ಟೆ. ಆದರೆ ಹೆಂಗೆಳೆಯರು ಒಡ್ಡುತ್ತಿದ್ದ ಶಬ್ದ ಚಮತ್ಕಾರದಲ್ಲಿ ಬೆಸೆದ ಗಣಿತ ಸಮೀಕರಣವನ್ನು ಸಿದ್ಧಪಡಿಸುವುದು ಪುರುಷರಿಗೆ ಅಷ್ಟು ಸುಲಭಸಾಧ್ಯವಲ್ಲ. ಏಕೆಂದರೆ ಹೆಣ್ಣಿನ ಚಿಂತನಾ ಶೈಲಿಗೂ, ಗಂಡಿನ ಚಿಂತನಾ ಶೈಲಿಗೂ ಅಜಗಜಾಂತರ ವ್ಯತ್ಯಾಸವಿದೆ. ಬಳೆತೊಟ್ಟ ಕೈಯಿಗೆ ಇಳೆಯಾಧಿಪತ್ಯವದು ಪಥ್ಯವಲ್ಲ ಎಂದು ನಾಣ್ನುಡಿ ಇದೆ. ಅವರವರ ದೈಹಿಕ, ಮಾನಸಿಕ, ಸಾಮಾಜಿಕ ಕ್ಷಮತೆಗೆ ಸೂಕ್ತವಾದ ಕೆಲಸಗಳು ಹಿಂದೆ ನಿಗಧಿತವಾಗಿರುತ್ತಿದ್ದವು. ಆದರೆ ಬಳೆತೊಡುವುದರಿಂದ ಹೆಂಗೆಳೆಯರಲ್ಲಿ ಧೀಶಕ್ತಿ ಪ್ರಚೋದಿಸಲ್ಪಡುತ್ತದೆ ಎಂಬುದು ದೇಹಶಾಸ್ತ್ರೀಯ ಸತ್ಯ.

ಇಂತಹಾ ವಯಸ್ಸಿನ ಸಮೀಕರಣಗಳಲ್ಲಿ ಕಾಲ ಗಣನೆಯ ಲೆಕ್ಕವಿದೆ. ಬಿಡಿಸುವವನು ತನ್ನ ಚಿಂತನೆಯನ್ನು ಲೆಕ್ಕದಲ್ಲಿ ಹೇಳಿದಷ್ಟು ಕಾಲ ಹಿಂದೆಯೋ, ಮುಂದೆಯೋ ತೆಗೆದುಕೊಂಡು ಹೋಗಬೇಕಾಗುತ್ತದೆ. ಅಲ್ಲಿಗೆ ತಲುಪಿದಾಗ ಅದು ಇನ್ಯಾವುದೋ ಕಾಲದ ಭಾಗಾಂಶವನ್ನು ಸಮೀಕರಣ ಬಿಡಿಸಲಿಕ್ಕೆ ಬಳಸಬೇಕಾಗುತ್ತದೆ. ಒಂದು ವೇಳೆ ಯುವತಿಯು ತನ್ನ ವಯಸ್ಸನ್ನು ಹೇಳಲಿಚ್ಛಿಸದಿದ್ದರೆ ನಾಗನಂತೆ ಸುರುಳಿಯಾಕಾರದಲ್ಲಿ ಸುತ್ತಿ ಮೇಲೇಳಲಾರದಂತಹಾ ಸಮೀಕರಣವನ್ನು ನೀಡಿಬಿಡುತ್ತಿದ್ದಳು. ಕೈ-ಕೈಹಿಡಿದು ಸುತ್ತುವ ಭಂಗಿಯನ್ನು ಭಾರತೀಯ ಹೆಣ್ಣುಮಕ್ಕಳು ತಮ್ಮ ಆಟದಲ್ಲಿ ಸಹಜವಾಗಿ ಬಳಸುತ್ತಾರೆ. ಹಸ್ತಗಳ ಮಧ್ಯದಲ್ಲಿ ಉಂಟಾಗುವ ಅನಂತ ಚಿಹ್ನಯೇ ಮನೋತರಂಗದ ಆವರ್ತನಾ ಚಿಹ್ನೆ. ಅದನ್ನು ಕಿಕ್ಲೀ ಎಂಬ ಪಂಜಾಬೀ ಜಾನಪದೀಯ ನೃತ್ಯದಲ್ಲಿಯೂ ಅಳವಡಿಸಿಕೊಂಡಿದ್ದಾರೆ. ಇದನ್ನು ನಮ್ಮ ಮಲೆನಾಡಿನಲ್ಲಿ ಈ ಕೆಳಗಿನ ಜಾನಪದ ಪದ್ಯ ಹಾಡಿಕೊಂಡು ಸುತ್ತುತ್ತಾರೆ:
" ರತ್ತೋ ರತ್ತೋ ರಾಯನ ಮಗಳೇ, 
ಬಿತ್ತೋ ಬಿತ್ತೋ ಭೀಮನ ಮಗಳೇ,
ಹದಿನಾರೆಮ್ಮೆ ಕಾಯಿಸಲಾರೆ,
ಬೈಟು ಕಂಬ ಬಾಳೆಕಂಬ
ಕ್ಕುಕ್ಕರ  ಬಸವಿ ಕೂರೆ ಬಸವಿ "

ರತ್ತೋ x ಬಿತ್ತೋ + ಕುಕ್ಕರ x ಕೂರೆ ಎಂಬ ಎರಡೆರಡು ಎಳೆದಾಟಗಳಿವೆ. ಎರಡು ಸ್ಥಿರತೆಗಳ ನಡುವೆ ಒಂದು ಚಲನೆ ಉಂಟಾದಾಗ "ವಿದ್ಯುತ್" ಉತ್ಪನ್ನವಾಗುತ್ತದೆ ಎಂದು ಅಥರ್ವವೇದ ಹೇಳುತ್ತದೆ. ಕಿಕ್ಲಿ ಗಿರಕಿಲ್ಲಿ ಸ್ಥಿತಿಸ್ಥಾಪಕತ್ವ ಉಂಟಾಗುತ್ತದೆ. ಅದು ಎರಡು ಹಿಮ್ಮುಕ ಬಲಗಳ ಸೆಣಸಾಟವು ಒಂದು ಕೇಂದ್ರಸ್ಥಿತ ಬಲವನ್ನು ಹೇಗೆ ಉಂಟುಮಾಡುತ್ತದೆ ಎಂಬುದರ ಪ್ರಾತ್ಯಕ್ಷತೆ.


(೩ನೇ ಆಯಾಮದಲ್ಲಿ ಕಂಬುಕಂಠೀಯ ಸುರುಳಿಯಾಕಾರದಲ್ಲಿ ಕೇಂದ್ರಾಪಗ ಹಾಗೂ ಕೇಂದ್ರಾಭಿಗ ಬಲಗಳ ಬಂಧುರವು; ಜೀವ ವೇಗದಲ್ಲಿ)


(ಬಳೆಗಳೊಳಗೆ ಬಳೆಗಳಿದ್ದಂತೆ, ವಿಶ್ವ ವಿದ್ಯುತ್ಕಾಂತೀಯ ಪ್ರವೃತ್ತಿಯಲ್ಲಿ ಕೇಂದ್ರಾಪಗ ಮತ್ತು ಕೇಂದ್ರಾಭಿಗ ಬಲಗಳಿಂದ ಕ್ಷೇತ್ರಗಳ ಉತ್ತರಂಗ)
ಸೃಷ್ಟಿಯಲ್ಲಿನ ಎಲ್ಲಾ ಶಕ್ತಿಗಳು ಲಾಗರಿದಮಿಕ್ ಸುರುಳಿಯಲ್ಲಿವೆ.

ಇಲ್ಲಿ ಖಗೋಳದಿಂದ ಆರಂಭಿಸಿ ಭೂಪ್ರಕೃತಿಯವರೆಗಿನ ರಹಸ್ಯವೇ ಅಡಗಿದೆ. ಕಿಕ್ಲೀಯಲ್ಲಿ ಹಾಗೇ ಸುತ್ತುತ್ತಾ ಅಕ್ಕ-ತಂಗಿಯರು ಮುಂದೆ ಸಾಗಿದಾಗ ಬರುವ ಪಥವೇ ಈ ಖಗೋಳದಲ್ಲಿನ ಗ್ರಹಮಂಡಲ ಮಾದರಿ. ಎರಡು ಬಿಂದುಗಳ ಪರಸ್ಪರ ಕರ್ಷಣಾ ಬಲವೇ ಗ್ರಹಗತಿಗೆ ಕಾರಣ. ಇಲ್ಲಿ ಶ್ರೀ ಎಂದರೆ ಸೂರ್ಯನೇ ಎಂದು ಗಣಿಸಿದರೆ, ಅವನಿಂದ ಮಾಡಲ್ಪಟ್ಟ ಪಥವನ್ನು ಈ ಮನೋ ಆವರ್ತನಾ ಶೈಲಿಯಲ್ಲಿ ೭ ಆಕಾಶ ಕಾಯಗಳು ತಮ್ಮದ್ದೇ ಆದ ಪರಿಮಾಣದ ಕಾರಣ ತಮ್ಮದ್ದೇ ಆದ ಪಥದಲ್ಲಿ ಹಿಂಬಾಲಿಸುತ್ತಾ ಸಾಗುತ್ತವೆ. ಉದಾಹರಣೆಗೆ ಇಲ್ಲಿ ಅಕ್ಕಳಾದ ಶ್ರೀಯು ಭಾರವಾಗಿದ್ದು ತಂಗಿ ಬಿಂದುವು ಕೃಶಳಾಗಿದ್ದಲ್ಲಿ ಅಕ್ಕಳೇ ನೃತ್ಯದಲ್ಲಿ ಎಳೆದುಕೊಂಡು ಹೋಗುತ್ತಿರುತ್ತಾಳೆ. ಹಾಗೆಯೇ ಈ ಗ್ರಹಮಂಡಲ ವ್ಯವಸ್ಥೆ ಇದೆ. ಆದರೆ ಇದು ಪ್ರಸಕ್ತ ವಿಜ್ಞಾನ ಹೇಳುವ ಗುರುತ್ವಾಕರ್ಷಣ ಬಲವಲ್ಲವೇ ಅಲ್ಲ!! ಹೇಗೆ ಅಕ್ಕ-ತಂಗಿಯರು ಸುತ್ತುತ್ತಾ ಮುನ್ನಡೆಯುತ್ತಾರೆಯೋ ಹಾಗೆಯೇ ಎರಡು ಕಾಯಗಳು ಪರಸ್ಪರ ಜೋಡಿ ಓಟದಲ್ಲಿ ಹೆಲಿಕಲ್ ಹೆಲಿಕ್ಸ್‍ಗೆ ಹೋಲಿಸಬಹುದಾದ ಮಾಧರಿಯಲ್ಲಿ ಚಲಿಸುತ್ತವೆ.

ಇನ್ನು ಈ ಕೈ-ಕೈ ಹಿಡಿದು ಸುತ್ತುವ ನೃತ್ತವೇ ಅದ್ವೈತವನ್ನೂ ತನ್ಮೂಲಕ ಅಣು ವಿಜ್ಞಾನವನ್ನೂ ಈ ಮಧುರ ಭಜನೆಯು ವಿವರಿಸುತ್ತದೆ:

ಒಂದು ಅಂಡವು ಬಿಂದುವಿನ || ಕೇಂದ್ರದೊ || ಳು ಚಂದದಿಂ ಸುತ್ತುತಿದೆ
ಹಿಂದು ಮುಂದಾಗಿ ಬೆಳೆಯುತಿದೆ || ಲೋಕವೃಕ್ಷವು || ಆಧಾನವದು ಚೇತನಾ || ಪಲ್ಲವಿ ||
ಒಂದು ಬೊಮ್ಮವದು ಕೇಳು || ನರನೇ || ಲೋಕದೊಳು ವ್ಯವಹರಿಪ ಚೇತನವು
ಇಂದದನು ಅರಿಯದಾ ಮಾನವನು || ಬಹುಭಿನ್ನ || ತೆಯೊಳಗೆ ಸಿಲುಕಿ ನಲುಗಿ ಹೋಗಿಹನೂ || ೧ ||
ಒಂದನರಿತುಕೊ ಮನುಜ ನೀನು || ನಂತರದಿ || ಭಿನ್ನವದು ಅರಿಯಬಹುದೈ ಕೇಳು
ಹಿಂದು ಮುಂದಿಲ್ಲದೆ ವ್ಯರ್ಥಗಳಹುವೆಯೇಕೆ || ಲೋಕಭಿನ್ನ || ವೆಂದು ಬೊಮ್ಮವೊಂದೇ ಸತ್ಯ ಕಾಣಯ್ಯ || ೨ ||

           (ದೇಹವೇ ಬ್ರಹ್ಮಾಂಡ ಅದರೊಳಗೆಲ್ಲ ತಂತ್ರವೂ ಸಿದ್ಧವೂ)

ದೇಹದಲ್ಲಿ ಉಸಿರಾಟವೇ ಪ್ರಾಣಸಂಚಾರ. ವಿಶ್ವದಲ್ಲದೇ ಶಕ್ತಿಸಂಚಾರ. ಸೃಷ್ಟಿಯ ಪ್ರತಿಯೊಂದು ಸುರುಳಿಯಲ್ಲಿ ಉತ್ತರಿಸುವ ಕ್ರಮಾವಳಿಯೇ (ಅಲ್ಗೋರಿದಮ್) ವಿಶ್ವದಲ್ಲಿ "ಓಂಕಾರ" ನಾದದಿಂದ ವಿಭಜನೆಯಾಗಿ ಎರಡಾಗಿ ಗೋಚರಕ್ಕೆ ಬರುವ "ಸೋಹಂ" ಅಥವಾ "ಹಂಸಃ". ಇವುಗಳಿಂದಲೇ ಚೈತನ್ಯ ಪ್ರವಹನೆಯು ವಿಶ್ವದೆಲ್ಲೆಡೆ ಹಿಂದುಮುಂದಾದ ಸುರುಳಿಯಲ್ಲಿ ಬೆಸೆದಿವೆ. ಅವೇ ಆಕುಂಚನ x ವಿಕಸನಗೊಳ್ಳುವ ಅಗ್ನಿ ಮತ್ತು ಜಲ ತತ್ವಗಳು.


ಇದನ್ನು ಮೇಲಿನ ಪದ್ಯದಲ್ಲಿ ಎಷ್ಟು ಸೂಚ್ಯವಾಗಿ ಚಿತ್ರಿಸಿದ್ದಾರೆ ಎಂದರೆ:

"ರಾಯನ ಮಗಳೇ" : ರಾಯ ಎಂದರೆ ರಾ ಪ್ರಧಾತ್ತಮಿತಿ, ಅಂದರೆ ಅಗ್ನಿ. ಅಗ್ನಿಯ ಮಗಳೆಂದರೆ ಆಪ, ಅಂದರೆ ನಾರಾಯಣ ಎಂಬ ೪ ಅಂಶಗಳ ಫಾರ್ಮುಲಾ ಉಳ್ಳ ಜಲ.

"ಭೀಮನ ಮಗಳೇ" : ಭೀಮನೆಂದರೆ ಮಹಾಬಲ, ಅಂದರೆ ವಾಯು. ವಾಯುವಿನ ಮಗಳೆಂದರೆ ಅಗ್ನಿ.
ರಾಯನ ಮಗಳೇ, ಭೀಮನ ಮಗಳೇ ಎಂದು ಕಿನ್ನರಿಯರು ಹಾಡುತ ಆಡುತಿರೆ ಅಲ್ಲಿ ಲಯದ ರಹಸ್ಯವೇ ಅಡಗಿದೆ. ಏಕೆಂದರೆ ಅಗ್ನಿ ಮತ್ತು ಜಲ ತತ್ವಗಳ ಸೆಣಸಾಟದಲ್ಲಿ ಪ್ರಪಂಚ ವ್ಯವಹಾರ.

"ಹದಿನಾರೆಮ್ಮೆ ಕಾಯಿಸಲಾರೆ": ಶಿವನು ಡಮರು ಹಿಡಿದು ತಾಂಡವ ನೃತ್ಯ ಮಾಡಿದಾಗ ಅಲ್ಲಿ ಹೊರಟ ೧೬ ನಾದ ತರಂಗಗಳೇ ಪ್ರಪಂಚದಲ್ಲಿ ೧೬ ಸ್ವರಗಳಾದವು ಎಂಬ ಚಿತ್ರಣವಿದೆ.

ಡಮರುವಿನ ಆಕಾರವೇ ದೇವಾಲಯದ ಆಗಮದಲ್ಲಿ ಅಡಿಪಾಯದಲ್ಲಿ ಸ್ಥಾಪಿಸಲ್ಪಡುವ ಷಢಾಧಾರ. ಪ್ರಪಂಚಕ್ಕೆ ಷಢಾಧಾರವೇ ಸರ್ವಾಧಾರ ಎಂದು ಅಥರ್ವವೇದದ ವಾಕ್ಯ. ಅದರಲ್ಲಿ ೬ ಋತುಗಳು, ೨ ಅಯನಗಳು, ಸಂಧಿಯಲ್ಲಿ ಸಂವತ್ಸರ, ದಿವಾ-ರಾತ್ರಿ, ಸೂರ್ಯ-ಚಂದ್ರ, ಇತ್ಯಾದಿ ಕಾಲಗಣನೆಗಳ ಆಧಾರವಿದೆ.

ಎಲ್ಲವೂ ಎರಡೆರಡಾಗಿ ವ್ಯವಹರಿಸಿದರೂ ಅದರ ಕೇಂದ್ರಸ್ಥಿತ ಬಲವು ಒಂದೇ ಸತ್ಯ, ಅದುವೇ ಬ್ರಹ್ಮ. "ಒಂದು ಕೆಲಸ ಮಾಡಕ್ಕಾಗಲ್ಲ, ಒಂದು ಸುಳ್ಳು ಹೇಳಕ್ಕಾಗಲ್ಲ" ಎಂಬ ಗಾದೆ ಇದೆ. ಹಾಗಾಗಿ ಗಿರಕಿ ಹೊಡೆಯುವ ವಸ್ತುಗಳಾಗಲೀ ಅಥವಾ ಜೀವಿಗಳಾಗಲೀ ಪೊಳ್ಳು, ಕರ್ಷಣ X ವಿಕರ್ಷಣಗಳಿಂದ ಅವುಗಳ ನಡುವೆ ಏರ್ಪಡುವ  ಸ್ಥಿತಿಸ್ಥಾಪಕತ್ವ ಎಂಬ ಬ್ರಹ್ಮವೊಂದೇ ಸತ್ಯ.

ಜೀವಿಗಳಲ್ಲಿ ಡಿ.ಎನ್.ಎ ಸ್ಟ್ರ್ಯಾಂಡ್‍ನ ಆಕಾರವು ಇದೇ ನಾಗಗಳ ಎಣೆಯಾಟದಂತೆ ಹೆಲಿಕಲ್ ಮಾಧರಿಯಲ್ಲಿಯೇ ಮಧುರವಾಗಿ ಬೆಸೆದಿರುವುದು ಸೋಜಿಗವೇ ಸರಿ:
"ಬೈಟುಕಂಭ, ಬಾಳೆಕಂಭ": ಪ್ರತಿಯೊಂದು ಆಟಕ್ಕೆ ಒಂದು ಆಧಾರ, ಇತಿ-ಮಿತಿ ಇರಬೇಕು. ಸುಮ್ಮನೇ ಅಡುವುದೇ, ಇನ್ನೊಬ್ಬರನ್ನು ಆಡಿಸುವುದೇ ಜೀವನವಲ್ಲ. ತಮ್ಮ ಮನೋಭಿಲಾಷೆ ಪೂರೈಕೆಗಾಗಿ ಇನ್ನೊಬ್ಬರ ಜೀವನದಲ್ಲಿ ಕುಹಕ ಆಟವಾಡಬೇಡಿ. ಜೀವನದ ಆಟವು ಶುದ್ಧತೆಯತ್ತ ಇರಲಿ. ಜೀವನದಲ್ಲಿ ಆಟ-ಪಾಠಗಳು ಜೊತೆಯಾಗಿ ಸಾಗಬೇಕು. ಇಲ್ಲಿ ಈ ಕಂಭಗಳೇ ಅವರಿಗೆ ಗಡಿ. ಉರಿಗೂ ಒಂದು ಗಡಿಯಾಗಿ ಗರಡುಗಂಭ, ಹೇರುಗಂಭ, ದೀಪಕಂಭ, ಕೈಮರ ಇತ್ಯಾದಿ ಇರುತ್ತದೆ. ತೋಟಕ್ಕೂ ಒಮ್ದು ಬಾಳೆಕಂಭವೋ ಗಡಿ ಇರಬಹುದು. ಅಂದರೆ ಪ್ರತಿಯೊಂದಕ್ಕೂ ಒಂದು ಇತಿ-ಮಿತಿ ಇದೆ. ಅದನ್ನು ಮೀರಬಾರದು. ಮೀರಿದರೆ ಆಪತ್ತು ಖಂಡಿತಾ!

"ಕುಕ್ಕರ ಬಸವಿ, ಕೂರೆ ಬಸವಿ": ಈ ವಾಕ್ಯವನ್ನು ಉಚ್ಛರಿಸುತ್ತಾ ಅಕ್ಕತಂಗಿಯರಿಬ್ಬರೂ ಪರಸ್ಪರ ಕೈ ಜೋಡಿಸಿ ಕೆಳಗೆ ಕೂರುತ್ತಾರೆ. ಹೆಚ್ಚಾಗಿ ಉದ್ದ ಲಂಗ ಧರಿಸಿದಾರ ಅದು ಇವರೊಂದಿಗೆ ಸುರುಳಿಯಾಕಾರದಲ್ಲಿ ಸುತ್ತುತ್ತಿದ್ದು ಕುಳಿತಾಗ ನೆಲದಲ್ಲಿ ಕಮಲ ಅರಳಿದಂತೆ ಹರಡುತ್ತದೆ. ಮಕ್ಕಳಿಗೆ ಅದೇನೋ ಸಂತೋಷ ಸಿಗುತ್ತದೆ. ಇಲ್ಲಿ ಸುತ್ತಿ ಸುತ್ತಿ ನಂತರ ಅದನ್ನು ಸ್ಥಿಮಿತತೆಗೆ ತರಲು ಕೂರುವುದು. ಯಾವುದೇ ವಸ್ತುವಿರಲಿ ಬಾಹ್ಯ ಚಲನೆ ಆರಂಭವಾಗಿ ತನ್ನ ಕಾರ್ಯಸಾಧನೆ ಆದ ಮೇಲೆ ವೇಗ ಕಡಿಮೆಗೊಳಿಸುತಾ ಸ್ಥಿರತೆಗೆ ಬರಬೇಕು. ಹಾಗೇ ಮಾನವನೂ ಜೀವನ ಚಕ್ರದಲ್ಲಿ ಸುತ್ತಿ ಸುತ್ತಿ ಸುಣ್ಣವಾಗಿ, ಜೀವನ ಬಣ್ಣವನ್ನರಿತ ಅಣ್ಣನಾಗಿ, ಮಣ್ಣಾಗುವ ಮುನ್ನ ಪಕ್ವತೆಯನ್ನು ಪಡೆಯಬೇಕು. ಎಷ್ಟು ಬೇಗೆ ಜೀವನದಲ್ಲಿ ಪಕ್ವತೆಯನ್ನು ಸಾಧಿಸುತ್ತಾರೊ ಅಷ್ಟರಿಂದ ಮುಂದಿನ ಜೀವನವು ಸುಗಮ. ಸಮಾಜಕ್ಕೂ ದಾರಿ ದೀಪವಾಗಬಹುದು. ಅನುಭವದ ಮೂಸೆಯಲ್ಲಿ ಖಾಯಿಸಿದ ಸುಖ-ಕಷ್ಟಗಳೆಂಬ ಬೆಸುಗೆ ಉಳ್ಳ ಲೋಹಗಳು ಒಳ್ಳೇ ಆಭರಣವಾಗುತ್ತವೆ.

ಬಸವಿ ಎಂಬುದು ಬಸವದ ಸ್ತ್ರೀಲಿಂಗ ವಾಚಕವಾಗಿ ಬಳಸಲಾಗಿದೆಯಷ್ಟೆ. ಬಸವ ತತ್ವದ ಬಗ್ಗೆ ಹಲವಾರು ಶಿವಶರಣರು ತಮ್ಮ ವಚನ ಸಾಹಿತ್ಯದಲ್ಲಿ ಬೆಳಕು ಚೆಲ್ಲಿದ್ದಾರೆ. ಈ 'ಬ' 'ಸ' 'ವ' ಎಂಬ ೩ ಅಕ್ಷರಗಳನ್ನು ಅರಿತವನೇ ನಿಜವಾದ ಶರಣನಾಗಬಹುದು. ಹಿಂದೆ ಪೋಷಕರ ಒಂದು ನಾಣ್ನುಡಿ ಇತ್ತು: "ಮಗ/ಮಗಳು ಮೂರಕ್ಷರ ಕಲಿಯಲಿ ಅಂಥ ಶಾಲೆಗೆ ಹಾಕಿದ್ದೇವೆ". ಹಾಗಾಗಿ ಮಕ್ಕಳೇ, ಪ್ರಯತ್ನ ಪಟ್ಟು ೩ ಅಕ್ಷರಗಳನ್ನು ಸಾಧಿಸಿ ಕೃತಕೃತ್ಯರಾಗಿರಿ.

ಪ್ರಶ್ನೆಯಲ್ಲಿನ ಪದ್ಯದಲ್ಲಿ ಬೆಸೆದ ಶಬ್ದಗಳು ಅಷ್ಟೇ ಛಂದೋಬದ್ಧವಾಗಿರುತ್ತಿದ್ದವು. ಒಂದು ವೇಳೆ ಕೇಳಿದ ಯುವಕನನ್ನು ಅಲ್ಲಿಂದ ಓಡಿಸಬೇಕೆಂದು ಅನ್ನಿಸಿದರೆ ವಿದ್ವೇಷಣಾ ತರಂಗ ಪರಿಣಾಮ ಮಾಡುವ ಅಕ್ಷರಗಳನ್ನು ಜೋಡಿಸಿ ಆತನಿಗೆ ಬಿಡಿಸಲು ಹೇಳಿ, ಅದಕ್ಕೆ ಉತ್ತರ ಸಿಗದೆ ಅವಮಾನಿತನಾಗಿ ಹೊರಟು ಹೋಗುತ್ತಿದ್ದನು.

ಈಗಿನ ಹಾಗೆ ಪುಸ್ತಕ ಪೆನ್ನು ಹಿಡಿದು ಲೆಕ್ಕ ಬಿಡಿಸುತ್ತಿರಲಿಲ್ಲ. ಎಲ್ಲ ಲೆಕ್ಕಾಚಾರಗಳು ತಲೆಯಲ್ಲಿಯೇ ಮಾಡಬೇಕಿತ್ತು. ಅಲ್ಲಿ ಇಂತಹಾ ಪರಿಣಾಮಕಾರೀ ಅಕ್ಷರ ಸಂಯೋಜಿತ ಸಮಸ್ಯಾ ನಿರೂಪಣೆ ಮಾಡಿದಾಗ ಮಿದುಳಿನಲ್ಲಿ ಗೊಂದಲ ಉಂಟಾಗುತ್ತದೆ. ಏಕೆಂದರೆ ಅಲ್ಲಿ ಸಮೀಕರಣವನ್ನು ಬಿಡಿಸುವುದು ಮಿದುಳಿನಲ್ಲಿನ ನ್ಯೂರಾನ್‍ಗಳ ಅಂತರ್ಜಾಲ. ಅವುಗಳಿಗೆ ಸರಿಯಾದ ಸಂಪರ್ಕ ಸಿಗದಿದ್ದರೆ ಉತ್ತರ ಸಿಗುವುದಿಲ್ಲ. ಹಾಗಾಗಿ ಯಾವುದೇ ಗಣಿತ ಸಮಸ್ಯೆಯನ್ನು ಬಿಡಿಸಲು ಮೊದಲು ಅದು ಮನದಟ್ಟಾಗಬೇಕು ಎನ್ನುತ್ತಾರೆ. ಅದರ ಉದ್ದೇಶವೇನು? ಸಾಫಲ್ಯತೆಯೇನು? ಬಳಕೆಯೇನು? ಋಣವೇನು? ಗುಣವೇನು? ಸವಕಳಿಯೇನು? ಇತ್ಯಾದಿ ದಶಮುಖಗಳಿಂದ ಚಿಂತಿಸಬೇಕು.


ಇತ್ತೀಚಿನ ವರ್ಷಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಈ ರೀತಿಯ ವಯೋಮಾನ ಆಧರಿತ ಪ್ರಶ್ನೆಗಳನ್ನು ಸಾಮಾನ್ಯವಾಗಿ ಕೇಳುತ್ತಾರೆ. ಒಂದೆರಡು ಕಠಿಣ ಲೆಕ್ಕಗಳನ್ನು ನೋಡಿ ಬಿಡಿಸಿ ಪುನಃ ಕೆಲವಾರು ಲೆಕ್ಕಗಳನ್ನು ಸ್ವಂತ ಪರಿಶ್ರಮದಿಂದ ಬಿಡಿಸಿದರೆ ಉಪಯುಕ್ತತೆ ಪಡೆಯಬಹುದು. 

- ಹೇಮಂತ್ ಕುಮಾರ್ ಜಿ

Wednesday, 28 May 2014

ಬೀಜಗಣಿತದ ಏಕವರ್ಣ ಸಮೀಕರಣ: ಸೇನಾತುಕುಡಿ ಲೆಕ್ಕ

ನಗರದಲೊಂದು ಸೇನಾ ತುಕುಡಿಯು ಗಸ್ತು ತಿರುಗುತಿರಲೊಬ್ಬ
ಜವರನು ಬಂದು ಕೇಳಿದ ನೀವೆಷ್ಟು ಮಂದಿಗಳು? ನುಡಿದ
ಸವಾರನೀ ತುಕುಡಿಯ ದುಪ್ಪಟ್ಟು ಮುಂದಿದೆ ಮೂರ್ಪಟ್ಟು ಹಿಂದಿದೆಯೆಂದು ನಸುನಗುತ |
ಮೂರ್ತುಕಡಿಗಳ ಯೋಗದ ದಶಮಾಂಶ ಪದಾಧಿಕಾರಿಗಳಿರೆ
ಇವರೆಲ್ಲ ಸೇರಿ ೧೯೮ ಮಂದಿಗಳಿರೆ, ಬೇಗ ಲೆಕ್ಕಿಸು ತರಳ
ಜವಾನರೆಷ್ಟು? ಪದಾಧಿಕಾರಿಗಳೆಷ್ಟು? ಬುದ್ಧಿವೈಶದ್ಯಕಿದು ಸಂಬದ್ಧ ಲೆಕ್ಕವು || ೧ ||

ಲೆಕ್ಕ:- J = ಪ್ರತಿ ತುಕುಡಿಯಲ್ಲಿನ ಜವಾನರು, P = ಪದಾಧಿಕಾರಿಗಳು, J' = ಎಲ್ಲಾ ತುಕುಡಿಯಲ್ಲಿನ ಜವಾನರು.
3J + J + 2J = 198 => J = 33
ತಾಳೆ:-           99 + 33 + 66 = 198
ದಶಮಾಂಶ P:- 9.9 + 3.3 + 6.6 = 18.18 = 18 (ಅಭಿನ್ನ ಮಾನವ ಲೆಕ್ಕವಾದ್ದರಿಂದ ಭಿನ್ನರಾಶಿ ಬಿಡಿರಿ)
J' = 198 - P
  = 198 - 18
ಜವಾನರು = 180, ಪದಾಧಿಕಾರಿಗಳು = 18ವಿಶ್ಲೇಷಣೆ:- ಮೇಲ್ನೋಟಕ್ಕೆ ಇದೊಂದು ಬೀಜಗಣಿತದ ಏಕವರ್ಣ ಸಮೀಕರಣ ಎಂದು ಕಂಡುಬರುತ್ತದೆ. ಆದರೆ ಇಲ್ಲಿನ ಪ್ರತಿಯೊಂದು ವಿಚಾರವು ಗಮನಾರ್ಹ. ಜವಾನರ ಸೇನಾ ಲೆಕ್ಕವನ್ನು ಬಾಲ್ಯದಲ್ಲಿ ಉದಾಹರಣೆಯಾಗಿ ನೀಡಿದರೆ ದೇಶಪ್ರೇಮ ವೃದ್ಧಿಯಾಗಿ ಸೇನೆಗೆ ಸೇರುವ ಜವಾನರ ಸಂಖ್ಯೆ ಹೆಚ್ಚಿಸಲು ಒಂದು ಪ್ರಯತ್ನ. ಇನ್ನು ರಾಜ್ಯಶಾಸ್ತ್ರದಲ್ಲಿ ಸೇನಾ ಪಡೆ ಹೇಗೆ ಗಸ್ತು ತಿರುಗುತ್ತದೆ ಎಂಬ ಜ್ಞಾನವೂ ಇಲ್ಲಿ ಲಭ್ಯ. ಆದಿ, ಮಧ್ಯ, ಅಂತ್ಯಗಳೆಂಬ ೩ ತುಕುಡಿ ಮಾಡಿಕೊಂಡು ಗಸ್ತು ತಿರುಗುವುದು ಒಂದು ವ್ಯೂಹ ರಹಸ್ಯ. ಇನ್ನು ಮಧ್ಯ ವ್ಯೂಹವು ಮಾತ್ರ ಗೋಚರಕ್ಕೆ ಬರುತ್ತದೆ. ಅಲ್ಲಿ ಸೇನಾ ಬಲವು ಕಡಿಮೆಯೆಂದು ಕಂಡುಬರುತ್ತದೆ. ಆದರೂ ಅದಕ್ಕೆ ಪೂರಕವಾದ ಹಿಮ್ಮುಖ ಮತ್ತು ಮುಮ್ಮುಖ ಸೇನಾ ಬಲಗಳಿರುತ್ತವೆ. ಇಲ್ಲಿ ಕನಕದಾಸರು ಹೇಳಿದ "ಮುಳ್ಳು ಮೊನೆಯ ಮೇಲೆ ಮೂರು ಕೆರೆಯ ಕಟ್ಟೆ" ಎಂಬ ಗಣಿತ ಸೂತ್ರವೂ ಬಳಕೆಯಾಗಿದೆ: 
ಯಾವುದೇ ಕಾರ್ಯವು ಘಟಿಸುವುದಕ್ಕೆ ಒಂದು ಕಾರಣವಿರುತ್ತದೆ. ಅದು ಭೂತ ಮತ್ತು ಭವಿಷ್ಯಗಳ ಸಂಬಂಧವನ್ನು ವರ್ತಮಾನದಲ್ಲಿ ಬೆಸೆಯುತ್ತದೆ. ಹಾಗಾಗಿ ವರ್ತಮಾನದಲ್ಲಿ ಪರಿಣಾಮ ಗೋಚರಿಸಲು ಪ್ರಾರಂಭವಾಗಿ, ತಕ್ಷಣದಲ್ಲಿಯಾಗಲೀ ಅಥವಾ ಭವಿಷ್ಯದಲ್ಲಿಯಾಗಲೀ ಫಲಿತಾಂಶ ನೀಡುತ್ತದೆ.
ಭೂತವು ೩ ಋಣ ಅಥವಾ ೩ ಕರ್ಮಗಳ ಬುತ್ತಿಯನ್ನಿಟ್ಟುಕೊಂಡು ಒಳ್ಳೆಯದು-ಕೆಟ್ಟದ್ದು, ಸ್ವರ್ಗ-ನರಕ, ಹುಟ್ಟು-ಸಾವು, ಪಕ್ವ-ಅಪಕ್ವ, ಇತ್ಯಾದಿ ಎರಡೆರಡಾಗಿ ವ್ಯವಹರಿಸುವ ಪರಿಣಾಮಗಳನ್ನು ಭವಿಷ್ಯದಲ್ಲಿ ಗೋಚರಿಸುವಂತೆ ಮಾಡುತ್ತದೆ.

ಈ ಲೆಕ್ಕದಲ್ಲಿ ತಾಳೆ ನೋಡುವಾಗ ೯೯ + ೩೩ + ೬೬ ಎಂದು ಬಂದಿತು. ಸಹಜ ಪ್ರಕೃತಿಯೆಂದರೆ ೩೩ ಭಾಗ, ಅದರಿಂದ ಮುಂದೆ ೬೬ ಭಾಗಗಳು ದೈವೀಕತೆ, ಒಟ್ಟು ೯೯. ಇಲ್ಲಿ ದಶಮಾಂಶ ಬಿಂದುಗಳಿದ್ದರೂ ಅದು ನೂರಾಗುವುದಿಲ್ಲ ಏಕೆಂದರೆ ಒಂದಂಶ ಚೈತನ್ಯವು ಇವುಗಳಲ್ಲಿದ್ದೂ ಇಲ್ಲದಂತೆ ವ್ಯವಹರಿಸುತ್ತದೆ. ಹಾಗಾಗಿ ೯.೯, ೬.೬, ೩.೩ ಎಂದರೂ ೦.೯, ೦.೬, ೦.೩ = ೦.೧೮ ಎಂಬುದು ಚೈತನ್ಯಕ್ಕೆ ಆರೋಪಿಸಲ್ಪಡುತ್ತದೆ. ಚೈತನ್ಯವು ಏಕೆ ಸಂಖ್ಯೆ. ಹಾಗಾಗಿ ದಶಮಾಂಶ ಬಿಂದುವಿನ ನಂತರದ ಅಂಕಿಗಳನ್ನು ಒಂದಾಗಿಸಲಾಗುತ್ತದೆ.

ಈ ಸೇನಾ ತುಕುಡಿಯ ಲೆಕ್ಕದಲ್ಲಿ ೯, ೩, ೬ ಪದಾಧಿಕಾರಿಗಳ ಅಂಕಿಯ ಸಹಜ ತಿಳುವಳಿಕೆ ಏನೆಂದರೆ ಆ ಸೇನಾ ತುಕುಡಿಗಳನ್ನು ಆಯಾ ಪದಾಧಿಕಾರಿಗಳು ನಡೆಸುತ್ತಾರೆ ಎಂದು. ಆದರೆ ಸತ್ಯವೆಂದರೆ ಈ ಎಲ್ಲಾ ತುಕುಡಿಗಳನ್ನು ನಡೆಸುವುದು ಸೇನಾಧಿಪತಿ ಒಬ್ಬನೇ. ಅವನಿಲ್ಲಿ ಅಗೋಚರ.

ಇನ್ನು ೯ + ೩ + ೬ = ೧೮ ದಾರಿಗಳಿವೆ. ಅದರಲ್ಲಿ ಒಂದನ್ನಾದರೂ ಮಾನವನು ಅರಿತು ಬಾಳಬೇಕು. ಅಂದರೆ ಒಂದು ಸತ್ಯವನ್ನು ಬಿಡದೆ ಪಾಲಿಸಬೇಕು, ಅದುವೇ ನಿಮ್ಮಯ ಧೈವ. ಅದೇನೆಂದರೆ ಆದಿನಾದದ ಮೂಲದಿಂದ ಉದಯಿಸಿದ ೧೮ ಜೀವಕಲೆಗಳು, ಅವೇ ೧೮ ವೇದಗಳು, ಮುಂದೆ ೧೮ ಸ್ಮೃತಿಗಳ ರೂಪದಲಿ ಚರ್ಯೆಯಲಿ ಬಂದವು.

ಹಾಗೆ ಕರ್ಮಸಿದ್ಧಾಂತಕ್ಕೆ ಬಂದರೆ ಪ್ರಾಪ್ತಿ, ಆಗಾಮಿ, ಸಂಚಿತ ಎಂಬ ಮೂರು ಕರ್ಮಗಳು ಮೂರಾಗಿ ವ್ಯವಹರಿಸುತ್ತವೆ. ಅವು ೩ x ೩ = ೯ ರೀತಿಯಲ್ಲಿ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ ಎಂದು ಮನಃಶಾಸ್ತ್ರ ಹೇಳುತ್ತದೆ.

ಅಗ್ರದಲ್ಲಿ ೬ ಪದಾಧಿಕಾರಿಗಳುಳ್ಳ ಸೇನೆಯು ಮುಂಬರುವ ಕಾಮಾದಿ ೬ ವೈರಿಗಳನ್ನು ಮಟ್ಟ ಹಾಕಲು ಇರುವ ೬ ಸದ್ಗುಣಗಳು. ಅದನ್ನು ಸಾಧಿಸಲು ಬೇಕು ಷಟ್ಕರ್ಮಗಳು. ಆಗ ಜೀವನದಿ ಜಯವು ಖಂಡಿತ. ಮಧ್ಯದಲ್ಲಿ ಇರುವ ೩ ಪದಾಧಿಕಾರಿಗಳೆಂದರೆ ಪ್ರತಿ ಜೀವಿಗೆ ಇರುವ ೩ ಪೂರಕ ಬಲಗಳು. ಅದು ತಂದೆ, ತಾಯಿ, ಗುರು ಎಂದೂ ಗಣಿಸಬಹುದು. ಇನ್ನೂ ಹಿಂದಕ್ಕೆ ಹೋದರೆ ಆದಿಯಲ್ಲಿ ೯ ಪದಾಧಿಕಾರಿಗಳು ಎಂದರೆ ನವಮಾಸ ಗರ್ಭದಲ್ಲಿಟ್ಟು ಗೈದ ಪೋಷಣೆ. ತತ್ಕಾರಣದಿಂದಲೇ ಆತ್ಮವು ಗರ್ಭಸ್ಥ ಶಿಶುವಿನಲ್ಲಿ ಪ್ರವೇಶಿಸಲು ಸಾಧ್ಯವಾಗುತ್ತದೆ.

ಇನ್ನು ವೈಧಿಕ ಭೌತಶಾಸ್ತ್ರಾಧಾರಿತ ಜೀವಶಾಸ್ತ್ರದಲ್ಲಿ ಚಂದ್ರನೇ ಧಾತುವಿಗೆ ಮೂಲ ಎಂದಿದೆ. ಚಂದ್ರಕಲೆಯ ಪರಿಣಾಮ ಕೆಳಕಂಡ ಭಾಗಗಳಲ್ಲಿದೆ:

·        ಸಹಜ ಜೀವಿಗಳಲ್ಲಿನ ಧಾತುಗಳು = ೭
·        ಚರಗಳಲ್ಲಿ = ೧೪
·        ರಸಾಂಶ ಜೀವಿಗಳಲ್ಲಿನ ಧಾತುಗಳು = ೧೫ + ೧
·        ಖನಿಜಗಳಲ್ಲಿ = ೨೭
·        ಜಡ ಪರಿಣಾಮ = ೩೩
·        ಲೋಹಗಳಲ್ಲಿ = ೪೮
·        ವನಸ್ಪತಿಗಳಲ್ಲಿ = ೫೬

ಒಟ್ಟು = ೨೦೧ ರೀತಿಯಲ್ಲಿ ಧಾತುವು ಪ್ರಪಂಚದಲ್ಲಿ ವ್ಯವಹರಿಸುತ್ತದೆ. ಈ ೨೦೧ ಧಾತುಗಳು ೧೧ ಭಾಗವಾಗುತ್ತದೆ. ಅದನ್ನೇ ಯಜುರ್ವೇದದ ರುದ್ರಪಶ್ನದಲ್ಲಿ ೧೧ ರುದ್ರರು ಎಂದರು. ಆಗ ೨೦೧ / ೧೧ = ಭಾಗಲಬ್ದ: ೧೮, ಶೇಷ: ಎಂಬ ತ್ರಿಗುಣಗಳು ಬಂದಿತು. ಪ್ರಸಕ್ತ ಲೆಕ್ಕದಲ್ಲಿ ೨೦೧ - ೧೯೮ = ೩. ಈ ಸತ್ವ, ರಜ, ತಮ ಎಂಬ ೩ ಗುಣಗಳೇ ಎಲ್ಲಾ ಜೀವಿಗಳಲ್ಲಿ ಇರುತ್ತದೆ. ಸಕಲ ಪ್ರಾಪಂಚಿಕ ವ್ಯವಹಾರವು ತ್ರಿಗುಣಾತ್ಮಕವಾಗಿಯೇ ವ್ಯವಹರಿಸುತ್ತದೆ.

ಈ ೧೧ ರುದ್ರಗಳು x ಪೃಥಿವೀ ೫ = ೫೫
೫೫ x ಅಂತರಿಕ್ಷ ೩ = ೧೬೫
೧೬೫ x ದಿವಿ ೩ = ೪೯೫
೪೯೫ x ಅನ್ನ ೪ = ೧೯೮೦.

ಅಂದರೆ ಈ ೧೯೮ ರಸಗಳು ದಶಾಂಶ ಗುಣಿತವಾಗಿ ೧೯೮೦ ಆಗಿ ಪ್ರಪಂಚಕ್ಕೆ ಅನ್ನ ಪೂರೈಕೆ ಮಾಡುತ್ತದೆ.

೧೮ ಎಂಬ ಭಾಗಲಬ್ಧವನ್ನು ೯ ಇಹ + ೯ ಪರ = ೧೮ ಭೌತಿಕ ನಿಯಮಗಳು . ಆ ೯ರ ಕಾರಣದಿಂದ ಉತ್ಪನ್ನವಾದ ೧೦ನೇಯದೇ ವಸ್ತು. ೯ + ೯ ಇರುವ ಸಂಖ್ಯೆಯು ವ್ಯತ್ಯಾಸವಾದರೆ ಸ್ವರೂಪ ವಿಕೃತವಾಗುತ್ತದೆ.


ಇನ್ನು ಅರ್ಥಶಾಸ್ತ್ರದಲ್ಲಿ ಹಿರಿಯರ ೯ ಅಂಶದ ಬಲ ಎಂಬ ಆಸ್ತಿ, ತನ್ನ ದುಡಿಮೆಯ ೩ ಅಂಶವನ್ನು ವರ್ತಮಾನಕ್ಕೆ, ಅದರಲ್ಲಿ ಒಂದಂಶ ಮಾತ್ರ ಭವಿಷ್ಯಕ್ಕೆ ಆಪದ್ಧನವಾಗಿ ಕಾಯ್ದಿರಿಸಿಟ್ಟು ಮುಂದೆ ಬರುವ ೬ ಅಂಶಗಳ ಲಾಭಾಂಶವನ್ನು ಭವಿಷ್ಯದ ಲೆಕ್ಕದಲ್ಲಿ ಭೂತದ ಲೆಕ್ಕವನ್ನು ಸರಿದೂಗಿಸಿಕೊಂಡು ಹೋಗಲು ಸಹಾಯವಾಗುತ್ತದೆ. ಈ ರೀತಿಯಲ್ಲಿ ಸೂಕ್ತ ಅರ್ಥನೀತಿ ಬಳಸಿದರೆ ವ್ಯವಹಾರ, ವ್ಯಾಪಾರಗಳನ್ನು ಸರಿದೂಗಿಸಿಕೊಂಡು ಹೋಗಬಹುದು.

Thursday, 22 May 2014

ಋಗ್ವೇದ ವಾಮದೇವ ಮಂಡಲದ ಜೈವಿಕ-ತಂತ್ರಜ್ಞಾನ ಗಣಿತ -2

ಸಕಲ ಪ್ರಾಣಿಗಳಿಗೂ ಅನ್ನ ಮುಖ್ಯ. ಹಾಗೆ ಅದು ಬುದ್ಧಿ ಪ್ರಚೋದಕ, ಅಹಂಕಾರ ವಿಮೋಚಕ, ಚಿತ್ತ ನಿರೋಧಕ ಮತ್ತು ಹೇಗೆ ಜ್ಞಾನ ಪ್ರದಾಯಕವೆಂಬುದನ್ನು ಗೌತಮರು ವಿವರಿಸುತ್ತಾರೆ ಗಮನಿಸಿ.

ಋಗ್ವೇದ ಮಂಡಲ-, ಸೂಕ್ತ-೧೫, ಮಂತ್ರ ೧-೧೦

अ॒ग्निर्होता॑ नो अध्व॒रे वा॒जी सन्परि॑ णीयते । दे॒वो दे॒वेषु॑ य॒ज्ञिय॑: ॥
परि॑ त्रिवि॒ष्ट्य॑ध्व॒रं यात्य॒ग्नी र॒थीरि॑व । आ दे॒वेषु॒ प्रयो॒ दध॑त् ॥
परि॒ वाज॑पतिः क॒विर॒ग्निर्ह॒व्यान्य॑क्रमीत् । दध॒द्रत्ना॑नि दा॒शुषे॑ ॥
अ॒यं यः सृञ्ज॑ये पु॒रो दै॑ववा॒ते स॑मि॒ध्यते॑ । द्यु॒माँ अ॑मित्र॒दम्भ॑नः ॥
अस्य॑ घा वी॒र ईव॑तो॒ऽग्नेरी॑शीत॒ मर्त्य॑: । ति॒ग्मज॑म्भस्य मी॒ळ्हुष॑: ॥
तमर्व॑न्तं॒ न सा॑न॒सिम॑रु॒षं न दि॒वः शिशु॑म् । म॒र्मृ॒ज्यन्ते॑ दि॒वेदि॑वे ॥
बोध॒द्यन्मा॒ हरि॑भ्यां कुमा॒रः सा॑हदे॒व्यः । अच्छा॒ न हू॒त उद॑रम् ॥
उ॒त त्या य॑ज॒ता हरी॑ कुमा॒रात्सा॑हदे॒व्यात् । प्रय॑ता स॒द्य आ द॑दे ॥
ए॒ष वां॑ देवावश्विना कुमा॒रः सा॑हदे॒व्यः । दी॒र्घायु॑रस्तु॒ सोम॑कः ॥
तं यु॒वं दे॑वावश्विना कुमा॒रं सा॑हदे॒व्यम् । दी॒र्घायु॑षं कृणोतन ॥


ಮಾನವ ಮನಸ್ಸನ್ನೇ ಮುಖ್ಯವಾಗಿ ತೆಗೆದುಕೊಂಡಲ್ಲಿ ಅದು ಸದಾ ಮೂರು ಕಾರಣಗಳಿಂದ ಅತೃಪ್ತವಾಗಿಯೇ ಇರುತ್ತದೆ. ಇತರೆ ಪ್ರಾಣಿಗಳು ಆಹಾರ ಕಾರಣದಿಂದ ಮಾತ್ರ ಅತೃಪ್ತವಾಗಿರುತ್ತವೆ. ಆದರೆ ಮಾನವ ಹಾಗಲ್ಲ. ಹೊಟ್ಟೆ ತುಂಬಿದರೆ ನಂತರ ಸ್ವೇಚ್ಛೆ + ದುರಾಸೆಗೆ ಬಲಿಬಿದ್ದು ಹಲವು ರೀತಿಯ ಅದಮ್ಯ ಬೇಡಿಕೆಗಳನ್ನು ಹಾರೈಸುತ್ತಾ ನಿರಂತರ ಅತೃಪ್ತನಾಗಿಯೇ ಇರುತ್ತಾನೆ. ಅಧಿಕಾರ + ದ್ವೇಷಗಳಿಂದ ತೊಳಲುತ್ತಲೇ ಇರುತ್ತಾನೆ. ನಿತ್ಯ ಅತೃಪ್ತನಾಗಿರುತ್ತಾ ತನ್ನ ಕಣ್ಣೆದುರಿಗಿರುವ ಎಲ್ಲವೂ ಬೇಕೆಂಬ ತುಡಿತದಲ್ಲಿ ಅತೃಪ್ತನಾಗಿರುತ್ತಾನೆ. ಲೋಭ+ಮೋಹಗಳಿಗೆ ಒಳಗಾಗಿ ನಿರಂತರ ಮಾನಸಿಕ ಕ್ಷೋಭೆಗೊಳಗಾಗಿ ಅತೃಪ್ತನಾಗಿರುತ್ತಾನೆ. ಇವಕ್ಕೆಲ್ಲಾ ಕಾರಣ ಅನ್ನವೇ ಎಂಬುದು ಸತ್ಯ. ಹಿಂದೆ ವಿವರಿಸಿದ ಕಾರಣದಿಂದಾಗಿ ಮಾನವನು ತನ್ನ ಅತೃಪ್ತ ಜೀವನ ಮತ್ತು ಮನೋಕ್ಲೇಷ ಕಾರಣದಿಂದಾಗಿ ಆಯುಃ ಪ್ರಮಾಣ ಕಡಿಮೆ ಮಾಡಿಕೊಳ್ಳುತ್ತಿದ್ದಾನೆ. ನಾನಾ ರೋಗಗಳಿಗೆ ಕಾರಣವಾಗಿ ವ್ಯರ್ಥ ಸಾಯುತ್ತಿದ್ದಾನೆ. ಮಾನವನಲ್ಲಿ ಮೂಲಭೂತವಾಗಿರಬೇಕಾದ ಮಾನವೀಯತೆ ಅರ್ಥಾತ್ "ಸಾಹದೇವ್ಯತೆ" ನಿರ್ಮೂಲವಾಗುತ್ತಿದೆ. ಮರೆತೇ ಹೋಗುತ್ತಿದೆ. ಹಾಗಾಗಿಯೇ ಅನ್ನ ಕಾರಣದಿಂದಾಗಿ ಕ್ಷೋಭೆಗೊಂಡ ಮನಸ್ಸು ತನ್ನ ಸಹಜೀವಿಗಳಿಗೇ ಮೋಸ ವಂಚನೆ ಮಾಡಿ ಅಸತ್ಯ ನುಡಿಯುತ್ತಾ ಕೊಲೆ ಸುಲಿಗೆ ದರೋಡೆ ಬಲಾತ್ಕಾರಗಳಿಗೆ ಇಳಿಯುತ್ತಿದ್ದಾನೆ. ಅದರಿಂದಲೇ ಸುಖ ಸಂತೋಷವೆಂಬ ಭ್ರಾಂತಿಗೆ ಒಳಗಾಗಿರುತ್ತಾನೆ. ಅದೇ ಒಂದು ರೀತಿಯ "ಅನ್ನ ಬಂಧನ" ವೆಂಬ ಋಣಕಾರೀ ಪ್ರತಿಬಂಧಕವಾಗಿರುತ್ತದೆ.

ಹಾಗಾಗಿ ಬುದ್ಧಿ ಪ್ರಚೋದಕವು ವಿಕೃತವಾಗಿ ಜೀವಿಯ ಹುಟ್ಟು+ಸಾವುಗಳ ನಿರಂತರತೆಗ ಪೂರಕವಾಗಿರುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ ಈ ಅನ್ನವೆಂಬ ಬಂಧನವು ಜೀವಿಯನ್ನ ನಿರಂತರ ಹುಟ್ಟು ಸಾವುಗಳ ಸರಪಳಿಯಲ್ಲಿ ನಿರಂತರ ಸೇರಿಸುವ ಹುನ್ನಾರವೆಂದು ಅರ್ಥವಾಗುತ್ತದೆ. ಹಾಗಾಗಿ ಆ ಹುಟ್ಟು+ಸಾವುಗಳ ಮಧ್ಯದ ಜೀವನವೆಂಬ ಸಾರ್ಥಕಭಾಗ ಇಲ್ಲವಾಗಿದೆ. ಅದಕ್ಕೆ ಕಾರಣವು ಅನ್ನವೇ ಎಂದಾಗ ನಾವು ತಿನ್ನುವ ಅನ್ನದ ಪರಿಶುದ್ಧತೆ ಎಷ್ಟಿರಬೇಕು ಅಲ್ಲವೆ? ಆದರೆ ಈಗ ಋಣ ರಾಹಿತ್ಯವಾದ ಅನ್ನ ದೊರೆಯುವುದೇ? ನಾವು ತಿನ್ನುವ ಅನ್ನದ ದೊರಕುವಿಕೆಯಲ್ಲಿ ನಮ್ಮ ಶ್ರಮವೇನಿದೆ? ನಿರ್ದಿಷ್ಟ ಶ್ರಮವಿಲ್ಲದೇನೇ ದುಡಿಮೆಯ ನೆಪದಲ್ಲಿ ದೊರೆತ ಹಣ ವಿಷ ಸಮಾನವಲ್ಲವೆ? ನಮಗೆ ದೊರೆತ ಒಂದು ರೂಪಾಯಿಯೂ ನಿಜವಾದ ನಮ್ಮ ಶ್ರಮದ ದುಡಿಮೆಯಾದರೆ ಅದರಿಂದ ದೊರಕಿದ ಅನ್ನ ಖಂಡಿತಾ ಜ್ಞಾನಪ್ರದ, ಅಮೃತೋಪಮ. ಅದೇ ಹಣ ಕಳ್ಳತನ, ಮೋಸ, ವಂಚನೆಗಳಿಂದ ಬಂದದ್ದಾದರೆ ಆ ಅನ್ನವು ಅದೇ ರೀತಿಯ ಬುದ್ಧಿ ಪ್ರಚೋದಕವಲ್ಲವೆ? ಆ ಸಂಬಂಧಿಯಾಗಿ ಒಂದು ಕಥೆ ಉದಾಹರಿಸುತ್ತೇನೆ ಗಮನಿಸಿ.

ಒಂದೂರಿನಲ್ಲಿ ಒಬ್ಬ ಧರ್ಮಾತ್ಮನಾದ ಧನಿಕ ವ್ಯಾಪಾರಿಯಿದ್ದನು. ಆತನು ನಿತ್ಯವೂ ಯಾರಾದರೂ ಅತಿಥಿಗಳಿಗೆ ಅನ್ನ ದಾನ ಮಾಡದೇ ತಾನು ಊಟ ಮಾಡಲಾರೆನೆಂಬ ವೃತನಿಷ್ಠನು. ಹಾಗೇ ಒಂದಿನ ಎಂದಿನಂತೆ ಮಧ್ಯಾಹ್ನದ ಹೊತ್ತಿಗೆ ದಾರಿಹೋಕರಾದ ಅತಿಥಿಗಳಿಗೆ ಕಾಯುತ್ತಿರಲು ಎಷ್ಟು ಹೊತ್ತಾದರೂ ಯಾರೂ ಬರಲಿಲ್ಲ. ಆಗ ವ್ಯಾಪಾರಿಯು ನಿಧಾನವಾಗಿ ಮನೆಯಿಂದ ಹೊರಬಂದು ಊರ ಮುಂದಿನ ಕಟ್ಟೆಯ ಬಳಿಗೆ ಬರಲಾಗಿ ಅಲ್ಲೇ ತಪೋನಿಷ್ಠನಾದ ತಪಸ್ವಿಯನ್ನು ಕಂಡನು ಮತ್ತು ಅವರನ್ನು ಈ ದಿನ ತನ್ನ ಮನೆಗೆ ಆರೋಗಣೆಗೆ ಬರಬೇಕೆಂದು ಪ್ರಾರ್ಥಿಸಿದನು. ಅದನ್ನು ಕೇಳಿ ಆ ಸಾಧುವು ಸ್ವಲ್ಪ ಹೊತ್ತು ಕಣ್ಣು ಮುಚ್ಚಿ ಧ್ಯಾನಿಸಿ ಆಗಲಿ "ಧೈವಚಿತ್ತ" ವೆಂದು ವ್ಯಾಪಾರಿಯ ಜೊತೆಯಲ್ಲಿ ಹೊರಟು ಬಂದನು. ವ್ಯಾಪಾರಿಯು ಆದರದಿಂದ ಮನೆಗೆ ಕರೆತಂದು ಕಾಲು ತೊಳೆದು ಸತ್ಕರಿಸಿ ಉಚಿತಾಸನದಲ್ಲಿ ಕುಳ್ಳಿರಿಸಿ ಊಟ ಬಡಿಸಿ ಬ್ರಹ್ಮಾರ್ಪಣವೆನ್ನಲು ಸಾಧುವು ಊಟ ಮಾಡಿದನು. ನಂತರ ಸಾಧುವಿನ ಕೈತೊಳೆದು ವ್ಯಾಪಾರಿ ತಾಂಬೂಲಾದಿಗಳನ್ನಿತ್ತು ವಿಶ್ರಾಂತಿಗಾಗಿ ಹಾಸಿಗೆ ಸಿದ್ಧಪಡಿಸಿ ಒಂದು ಲೋಟ ಹಾಲನ್ನಿತ್ತು ವಿಶ್ರಾಂತಿ ಪಡೆಯಿರಿ ಎಂದು ಪ್ರಾರ್ಥಿಸಿ ತಾನು ಊಟ ಮಾಡಿ ತನ್ನ ವ್ಯಾಪಾರ ವ್ಯವಹಾರ ನಿಮಿತ್ತ ಹೊರಟು ಹೋದನು. ನಂತರ ಸಂಜೆಯ ಹೊತ್ತಿಗೆ ಮನೆಗೆ ಬಂದು ನೋಡಲಾಗಿ ಸಾಧುವು ಹೊರಟು ಹೋಗಿದ್ದ. ಕೆಲಸದವರು ಹಾಸಿಗೆ ಸುತ್ತಿಟ್ಟಿದ್ದರು. ಮನೆಯಾಕೆ ವ್ಯಾಪಾರಿಯಲ್ಲ ನೀವು ಸಾಧುವಿಗೆ ಹಾಲು ಕೊಟ್ಟ ಬೆಳ್ಳಿ ಲೋಟ ಕಾಣುವುದಿಲ್ಲವೆಂದಳು. ಚಕಿತನಾದ ವ್ಯಾಪಾರಿ ಯಾವುದಕ್ಕೂ ಇರಲೆಂದು ಊರ ಮುಂದಿನ ಕಟ್ಟೆಯ ಸಮೀಪ ಹೊರಟು ಬಂದನು.

ಅಷ್ಟೊತ್ತಿಗಾಗಲೇ ಸಾಧುವು ಆ ಮಂಟಪಕ್ಕೆ ಬಂದು ಕುಳಿತು ಚಿಂತಿಸ ಹತ್ತಿದನು. ತಾನೇಕೆ ಈ ಬೆಳ್ಳಿ ಲೋಟ ತೆಗೆದುಕೊಂಡು ಬಂದೆ? ಎಂದು ಚಿಂತಿಸಿದನು. ತನ್ನ ಚೀಲದಲ್ಲಿರುವ ಬೆಳ್ಳಿ ಲೋಟವನ್ನು ತೆಗೆದು ದೂರ ಎಸೆದನು. ಹಾಗೇ ಧ್ಯಾನಮಗ್ನನಾದನು. ಆಗ ಅಲ್ಲಿಗೆ ಬಂದ ವ್ಯಾಪಾರಿಯು ಲೋಟ ಎತ್ತಿಕೊಂಡು ಸಾಧುವನ್ನು ಸಮೀಪಿಸಿ ಅಯ್ಯಾ ಸಾಧುಗಳೇ! ಎಂದು ಕರೆದನು. ಆಗ ಎಚ್ಚೆತ್ತುಕೊಂಡ ಸಾಧುವು ಅವನನ್ನು ದುರುಗುಟ್ಟಿ ನೋಡಿ "ಎಂತಹಾ ಊಟ ಹಾಕಿದಿಯಯ್ಯಾ ನೀನು? ವಿರಕ್ತನಾದವನನ್ನೂ ಕಳ್ಳನಾಗುವಂತೆ ಮಾಡಿದೆಯಲ್ಲಾ. ಆ ಬೆಳ್ಳಿ ಲೋಟ ನಾನೇ ಕದ್ದು ತಂದದ್ದು; ನಿನ್ನ ಮನೆಯಿಂದ. ಇಂತಹಾ ಕೆಟ್ಟ ಕೆಲಸಕ್ಕೆ ಕಾರಣವನ್ನು ಹುಡುಕಲೇ ಬೇಕು. ನಾನು ಕಳ್ಳನಾಗಿದ್ದೇನೆ. ಕೊತ್ವಾಲನಲ್ಲಿಗೆ ಕರೆದೊಯ್ಯಿ ನನ್ನ" ಎಂದು ಹೇಳಿದನು ಸಾಧು.

ವ್ಯಪಾರಿಯೂ ಏನು ಮಾಡುವುದೆಂದು ತಿಳಿಯದೇ ಕೊತ್ವಾಲನಲ್ಲಿಗೆ ಸಾಧುವನ್ನು ಕರೆದೊಯ್ದನು. ಕೊತ್ವಾಲನು ಇವರನ್ನು ಕಂಡು ವ್ಯಾಪಾರಿಯು ಪರಿಚಯಸ್ಥನಾದ್ದರಿಂದ ನಗುಮುಖದಿಂದಲೇ ಸ್ವಾಗತಿಸಿ 'ಏನು ಬಂದಿರೆಂದು' ಕೇಳಲು ವ್ಯಾಪಾರಿಯು ಅಲ್ಲಿಯವರೆಗಿನ ಎಲ್ಲಾ ಕಥೆಯನ್ನೂ ಕೂಲಂಕುಷವಾಗಿ ವಿವರಿಸಿದನು ಹಾಗೂ ಬೆಳ್ಳಿ ಲೋಟವನ್ನು ಮುಂದಿಟ್ಟನು. ಸಾಧುವು 'ನಾನು ಆ ಲೋಟವನ್ನು ಕದ್ದದ್ದು ಹೌದು. ಅದಕ್ಕೆ ತಕ್ಕ ಶಿಕ್ಷೆಗೆ ನಾನು ಬದ್ಧನೆಂದು ಆದರೆ ಈ ಮಹಾಶಯ ನನಗೆ ಹಾಕಿದ ಊಟದ ಅಕ್ಕಿ ಎಲ್ಲಿಂದ ಬಂತೆಂದು ವಿಚಾರಿಸಬೇಕೆಂದೂ' ವಿನಯದಿಂದ ಪ್ರಾರ್ಥಿಸಿದನು. ಆಗ ವ್ಯಾಪಾರಿಯು 'ರಾಮನೆಂಬ ಕಾರ್ಮಿಕ ತನ್ನ ಮಾಸಿಕ ಕೂಲಿಯ ಕಾಳೆಂದು ತಂದು ಮಾರಿದ್ದ' ನೆಂದ. ಕೂಡಲೇ ಆ ರಾಮನನ್ನು ಕರೆಸಿರೆಂದು ಸಾಧುವು ಬಿನ್ನವಿಸಲಾಗಿ ಭಟರು ರಾಮನನ್ನು ಕರೆ ತಂದು ಕೊತ್ವಾಲನ ಮುಂದೆ ನಿಲ್ಲಿಸಿದರು. ಆಗ ರಾಮನಿಗೆ ಹಿಂದಿನ ದಿನ ವ್ಯಾಪಾರಿಗೆ ಮಾರಿದ ಅಕ್ಕಿಯ ಬಗ್ಗೆ ಕೇಳಲಾಗಿ ಹೆದರುತ್ತಾ 'ತಾನು ಪಕ್ಕದೂರಿನ ಬಂಡಸಾಲೆಯಿಂದ ಕದ್ದದ್ದೆಂದು' ಒಪ್ಪಿಕೊಂಡನು. ಆಗ ಸಾಧುವು ನಸುನಕ್ಕು "ಅಯ್ಯಾ ಕೊತ್ವಾಲನೇ! ಈ ವ್ಯಾಪಾರಿ ನನ್ನ ಊರಿನ ಹೊರ ಮಂಟಪದಿಂದ ಅವನೇ ಕರೆದುಕೊಂಡು ಹೋಗಿ ಊಟವಿಕ್ಕಿದ ಪುಣ್ಯಾತ್ಮ. ಆದರೆ ಊಟದ ಅಕ್ಕಿ ಮಾತ್ರ ಕಳ್ಳತನದ್ದು. ಅದನ್ನು ಉಂಡ ನನಗೆ ಈ ಕಳ್ಳ ಬುದ್ಧಿ ಬಂತು. ಅದಕ್ಕಾಗಿಯೇ ವ್ಯಾಪಾರಿಗೂ ಈ ವಿಷಯ ಅರ್ಥವಾಗಲಿ ಎಂಬ ಉದ್ದೇಶದಿಂದ ನಾನು ಹೀಗೆ ಮಾಡಿದೆ. ಹಾಗೇ ಊರಿನಲ್ಲಿ ಕಳ್ಳತನ ಅಪರಾಧ ಹಾಗೇ ಕಳ್ಳ ಸರಕನ್ನು ಕೊಳ್ಳುವುದೂ ಅಪರಾಧವೇ. ಆದರೆ ಸತ್ಯ ಧರ್ಮಿಷ್ಠನಾದ ವ್ಯಾಪಾರಿಗೆ ಈ ಹೊಳಹು ಗೊತ್ತಿರಲಿಲ್ಲ. ಹಾಗಾಗಿ ಮೋಸ ಹೋದ. ಆದರೆ ನಿಜವಾಗಿ ಕಳ್ಳತನ ಮಾಡಿದ ರಾಮ ಸಿಕ್ಕಿ ಬಿದ್ದ. ಈಗ ತಮಗೆ ಸರಿ ಕಂಡಂತೆ ಶಿಕ್ಷೆ ವಿಧಿಸಬಹುದು" ಎಂದನು ಸಾಧು.

ಆಗ ಕೊತ್ವಾಲನು ರಾಮನಿಗೆ ಅಕ್ಕಿಯ ಹಣದಷ್ಟು ದಂಡವನ್ನೂ, ೨೫ ಚಾಟಿ ಏಟನ್ನೂ ವಿಧಿಸಿ, ವ್ಯಾಪಾರಿಗೆ ಎಚ್ಚರಿಸಿ, ಇನ್ನು ಮುಂದೆ ಹೀಗಾಗದಂತೆ ವ್ಯಾಪಾರ ಮಾಡಬೇಕೆಂದು ವಿಧಿಸಿ, ಕೆಟ್ಟ ಅನ್ನ ತಿಂದೂ ತಾಳ್ಮೆಯಿಂದ ಅರಗಿಸಿಕೊಂಡ ಸಾಧುವಿಗೆ "ಊರ ಸನ್ಮಾನ"  ಏರ್ಪಡಿಸಿ ಗೌರವದಿಂದ ಬೀಳ್ಕೊಟ್ಟನು. "ಇದು ಅನ್ನದ ಮಹಿಮೆ". ಹಾಗಾಗಿ ಮುಖ್ಯವಾಗಿ ಗಮನಿಸಬೇಕು ನಾವು ತಿನ್ನುವ ಅನ್ನವೆಷ್ಟು ಪರಿಶುದ್ಧವೆಂದು. ಹಾಗೆ ಪರಿಪೂರ್ಣ ಆಹಾರವೆಂದರೆ ನಮ್ಮ ಸ್ವಂತ ಶ್ರಮಕ್ಕೆ ತಕ್ಕ ಕೂಲಿಯ ಅನ್ನ. ಅದಕ್ಕೆ ಯಾವುದೇ ಬಾಧಕವಿರುವುದಿಲ್ಲ. ಅದನ್ನೇ ಗೌತಮರು ವಿವರಿಸುತ್ತಾ "ಕುಮಾರಂ ಸಾಹದೇವ್ಯಮ್" ಎಂದರು. ನಾವು ಮಾನವರಾಗಿ ಹುಟ್ಟಿ ದೇವತ್ವಕ್ಕೇರುವ ಮೊದಲ ಸೋಪಾನವೇ ಅನ್ನ ಮೂಲ, ಅನ್ನ ಶುದ್ಧಿ, ನಿರಂತರ ದುಡಿಮೆಗಾರರಾಗಿ ದುಡಿಯುತ್ತಾ ನಾವು ದುಡಿದ ಅನ್ನವನ್ನೇ ತಿನ್ನುತ್ತಾ ಅಲ್ಪ ತೃಪ್ತರಾಗಿ ಬಾಳಿದರೆ ಅವರೇ "ದೇವತೆಗಳು".

ಹಾಗೇ ವಾಮದೇವರು ಇನ್ನೊಂದು ಅನ್ನದ ವಿಶೇಷವನ್ನೂ ಕಂಡು ಹಿಡಿದಿದ್ದಾರೆ. ಹಾಗೇ ಅದರ ವಿವರಣೆ ಸಹಿತ ಸೂತ್ರೀಕರಿಸಿದ್ದಾರೆ. ಅದೇನೆಂದರೆ ಹಸಿದಿದ್ದಾಗ ಜೀವಿಗಳಲ್ಲಿರುವ ಅನಿರ್ವಾರ್ಯತೆಯ ವಿಧೇಯತೆ, ಹೊಟ್ಟೆ ತುಂಬಿದ ಮೇಲೆ ಇರುವುದಿಲ್ಲ. ಅದರಲ್ಲೂ ಮಾನವ ಜೀವಿಯಲ್ಲಿ ಅದು ಅಹಂಕಾರವಾಗಿ ಮಾರ್ಪಡುತ್ತದೆ ಎಂದಿದ್ದಾರೆ. ಅದನ್ನು ವಿವರಿಸುತ್ತಾ ಅದಕ್ಕೆ ಕಾರಣ, ಕರ್ತಾ, ಹಾಗೆ ಪರಿಣಾಮ ಫಲಗಳನ್ನೂ ವಿವರಿಸಿದ್ದಾರೆ ಗಮನಿಸಿ.

ಋಗ್ವೇದ ಮಂಡಲ-೪, ಸೂಕ್ತ-೨೬, ಮಂತ್ರ ೧-೭
अ॒हं मनु॑रभवं॒ सूर्य॑श्चा॒हं क॒क्षीवाँ॒ ऋषि॑रस्मि॒ विप्र॑: ।
अ॒हं कुत्स॑मार्जुने॒यं न्यृ॑ञ्जे॒ऽहं क॒विरु॒शना॒ पश्य॑ता मा ॥  
अ॒हं भूमि॑मददा॒मार्या॑या॒हं वृ॒ष्टिं दा॒शुषे॒ मर्त्या॑य ।
अ॒हम॒पो अ॑नयं वावशा॒ना मम॑ दे॒वासो॒ अनु॒ केत॑मायन् ॥ 
अ॒हं पुरो॑ मन्दसा॒नो व्यै॑रं॒ नव॑ सा॒कं न॑व॒तीः शम्ब॑रस्य ।
श॒त॒त॒मं वे॒श्यं॑ स॒र्वता॑ता॒ दिवो॑दासमतिथि॒ग्वं यदाव॑म् ॥  
प्र सु ष विभ्यो॑ मरुतो॒ विर॑स्तु॒ प्र श्ये॒नः श्ये॒नेभ्य॑ आशु॒पत्वा॑ ।
अ॒च॒क्रया॒ यत्स्व॒धया॑ सुप॒र्णो ह॒व्यं भर॒न्मन॑वे दे॒वजु॑ष्टम् ॥
भर॒द्यदि॒ विरतो॒ वेवि॑जानः प॒थोरुणा॒ मनो॑जवा असर्जि ।
तूयं॑ ययौ॒ मधु॑ना सो॒म्येनो॒त श्रवो॑ विविदे श्ये॒नो अत्र॑ ॥ 
ऋ॒जी॒पी श्ये॒नो दद॑मानो अं॒शुं प॑रा॒वत॑: शकु॒नो म॒न्द्रं मद॑म् ।
सोमं॑ भरद्दादृहा॒णो दे॒वावा॑न्दि॒वो अ॒मुष्मा॒दुत्त॑रादा॒दाय॑ ॥  
आ॒दाय॑ श्ये॒नो अ॑भर॒त्सोमं॑ स॒हस्रं॑ स॒वाँ अ॒युतं॑ च सा॒कम् ।
अत्रा॒ पुरं॑धिरजहा॒दरा॑ती॒र्मदे॒ सोम॑स्य मू॒रा अमू॑रः ॥ 


ಮಾನವನು ತಾನು ತಿನ್ನುವ ಯಾವುದೇ ಆಹಾರವನು ಅನ್ನವೆಂದೇ ಕರೆಯಲ್ಪಡುತ್ತದೆ. ಅವುಗಳಲ್ಲಿ ಮುಖ್ಯವಾಗಿ:

೧. ರಸ
೨. ಸತ್ವ
೩. ಸ್ನೇಹ
೪. ಧಾತು
೫. ರುಚಿ
೬. ಪಿಷ್ಠ
೭. ಪ್ಲೀಹ
ಎಂಬ ೭ ರೀತಿಯ ಪ್ರತ್ಯೇಕ ಗುರುತಿಸಲಾಗುವ ವಸ್ತು ವಿಶೇಷಗಳಿರುತ್ತವೆ. ಅವುಗಳಲ್ಲಿ ನಮ್ಮ ದೇಹಕ್ಕೆ ಪೂರಕ ಮತ್ತು ಅಗತ್ಯವಾದವು ಬೇಕು. ಆದರೆ ಅನಗತ್ಯವಾದವೂ ಅವುಗಳಲ್ಲಿ ಸೇರಿರುತ್ತವೆ. ಹಾಗಾಗಿ ಅದೆಲ್ಲಾ ರಜೋ ಸತ್ವಗಳಾಗಿ ಪರಿವರ್ತನೆ ಹೊಂದುವುದರಿಂದ ಒಂದು ರೀತಿಯ ಕರ್ಷಣ ತರಂಗಗಳಾಗಿ ರೂಪುಗೊಂಡು ಮೆದುಳನ್ನು ಸೇರಿ ಮಾನವನನ್ನು ಪ್ರಚೋದಿಸುತ್ತದೆ. ಆ ಪ್ರಚೋದಕವೇ ಅರ್ಥಾತ್ ಅದರ ಪರಿಣಾಮವೇ ಅಹಂಕಾರ, ಅವಿವೇಕ, ಸೋಮಾರಿತನ, ಜಾಡ್ಯಾದಿಗಳು, ಅಕಾಲಿಕ ವೃದ್ಧಾಪ್ಯ ಮತ್ತು ಮರಣ ಕಾರಣವಾಗುತ್ತವೆ. (ಅದನ್ನು ಈಗಿನ ವಿಜ್ಞಾನ ಬ್ರೈನ್ ಹೆಮೊರ್ಹೇಜ್ ಎಂದು ಗುರುತಿಸಿದೆ) ನೀವು ತಿನ್ನುವ ಅನ್ನ ನಿಮಗಾಗಿರಲಿ, ನಿಮ್ಮದಾಗಿರಲಿ. ಅದು ಬಿಟ್ಟು
·        "ಕುತ್ಸವಾಗದಂತೆ,
·        ಕವಿರುಶನವಾಗದಂತೆ,
·        ಭೂಮದವಾಗದಂತೆ,
·        ಅನುಕೇತವಾಗದಂತೆ,
·        ಮಂದಸತ್ಯವಾಗದಂತೆ,
·        ಆಶುಪತ್ವವಾಗದಂತೆ,
·        ಮಂದ್ರಮದವಾಗದಂತೆ" ಆಹಾರವಿರಬೇಕು.ಇಲ್ಲವಾದಲ್ಲಿ:
"ನವಸಾಕಂ ನವತೀ ಶಂಬರಸ್ಯ"
"ಶತತಮಂ ವೇಶ್ಯಂ ಸರ್ವತಾತಾ"
"ವಿರಸ್ತು ಪ್ರಶ್ನೇನ ಶ್ಯೇನೀಭ್ಯ ಆಶುಪತ್ವಾ"
ಇತ್ಯಾದಿ ನಿಮ್ಮಂಕೆಗೆ ಮೀರಿದ ಹಲವು ರೀತಿಯ ಉಪಪರಿಣಾಮಗಳಿಗೆ ಕಾರಣವಾಗುತ್ತದೆ ಎಂದರು ವಾಮದೇವರು. ಹಾಗೇ "ಪುರಂಧೀರಜಹಾದರಾತಿಃ" ಯಾಗಿರಬೇಕು ಅನ್ನ. ಅದೇ ಸತ್ಯವೆಂದರು. ಹಾಗೇ ಮುಂದುವರಿದು ಅನ್ನವು ಹೇಗೆ ಸೃಜನಶೀಲ, ಪ್ರತ್ಯುತ್ಪಾದಕ, ರೋಚಕ, ವಿರೇಚನ ಎನ್ನುವುದನ್ನು ತಿಳಿಸುತ್ತಾ ಈ ಸೂತ್ರಗಳಲ್ಲಿ ವಿವರಿಸಿದ್ದಾರೆ. ಅದು ಹೀಗಿದೆ:

ಋಗ್ವೇದ ಮಂಡಲ-೪, ಸೂಕ್ತ-೨೭, ಮಂತ್ರ ೧-೫
गर्भे॒ नु सन्नन्वे॑षामवेदम॒हं दे॒वानां॒ जनि॑मानि॒ विश्वा॑ ।
श॒तं मा॒ पुर॒ आय॑सीररक्ष॒न्नध॑ श्ये॒नो ज॒वसा॒ निर॑दीयम् ॥
न घा॒ स मामप॒ जोषं॑ जभारा॒भीमा॑स॒ त्वक्ष॑सा वी॒र्ये॑ण ।
ई॒र्मा पुरं॑धिरजहा॒दरा॑तीरु॒त वाताँ॑ अतर॒च्छूशु॑वानः ॥
अव॒ यच्छ्ये॒नो अस्व॑नी॒दध॒ द्योर्वि यद्यदि॒ वात॑ ऊ॒हुः पुरं॑धिम् ।
सृ॒जद्यद॑स्मा॒ अव॑ ह क्षि॒पज्ज्यां कृ॒शानु॒रस्ता॒ मन॑सा भुर॒ण्यन् ॥
ऋ॒जि॒प्य ई॒मिन्द्रा॑वतो॒ न भु॒ज्युं श्ये॒नो ज॑भार बृह॒तो अधि॒ ष्णोः ।
अ॒न्तः प॑तत्पत॒त्र्य॑स्य प॒र्णमध॒ याम॑नि॒ प्रसि॑तस्य॒ तद्वेः ॥
अध॑ श्वे॒तं क॒लशं॒ गोभि॑र॒क्तमा॑पिप्या॒नं म॒घवा॑ शु॒क्रमन्ध॑: ।
अ॒ध्व॒र्युभि॒: प्रय॑तं॒ मध्वो॒ अग्र॒मिन्द्रो॒ मदा॑य॒ प्रति॑ ध॒त्पिब॑ध्यै॒ शूरो॒ मदा॑य॒ प्रति॑ ध॒त्पिब॑ध्यै ॥

ಅನ್ನ ವಿಷಯವಾಗಿ ಚಿಂತನೆಯೇ ಒಂದು ವಿಶೇಷ. ಏಕೆಂದರೆ ಈ ಲೇಖನ ಬರೆಯುವಾಗ ತಿಂದ ಅನ್ನವೂ ಚಿಂತನಾ ವಿಷಯದ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ೨ ದಿನದಿಂದ ಏನನ್ನೂ ತಿನ್ನದೆ ಬರೇ ನೀರು ಕುಡಿದು ಶುದ್ಧನಾಗಿ ಈ ವಿಚಾರ ಬರೆಯುತ್ತಿದ್ದೇನೆ (ಬ್ರಹ್ಮರ್ಷಿ ಕೆ ಎಸ್ ನಿತ್ಯಾನಂದರು). ಏಕೆಂದರೆ ಈ ಕಾಲದಲ್ಲಿ ಶ್ರಮಿಕನಿಗೆ ಸಿಗುವ ಅನ್ನ ದೂಷಿತವಾಗಿರುತ್ತದೆ. ಅದನ್ನೇ ಗೌತಮರು ಉದಾಹರಿಸಿದ್ದಾರೆ: "ಕೃಶಾನುರಸ್ತಾಮನಸಾ" - ನಿರಂತರ ಅನ್ನ ವ್ಯವಸ್ಥೆಯೂ ಒಂದಲ್ಲಾ ಒಂದು ಕಾರಣದಿಂದ ದೂಷಿತವೇ ಆಗಿರಲು ಸಾಧ್ಯ. ಹಾಗಾಗಿ ವಿವೇಚಿತ ಅನ್ನ ಬೇಕೆಂದರೆ ಮುಂದೆ ಹೇಳುವ ವಿಧಾನದಲ್ಲಿ ಅನ್ನವನ್ನು ಹೊಂದಿಸಿಕೊ ಎಂದಿದ್ದಾರೆ. ಅದನ್ನು ಒಂದು ಚೌಪದಿಯ ರೀತಿಯಲ್ಲಿ ಬರೆಯುತ್ತೇನೆ. ಅದಕ್ಕೆ ಮಾತ್ರ ನಾನು ಶಕ್ತನೆಂದು ಹೇಳಬಲ್ಲೆ.

ಇಂದುಧರ ತಾನೊಂದು ಜಟೆಯಲಿ ಸೃಜಿಸಿದ
ನಂದು ವೀರಭದ್ರನ ಕೊಂದು ಕಳೆದನೇ ದಕ್ಷನಾ
ಎಂದಿಗೂ ಕೊಲಲಾರ ಶಿವ ಕಾರಣನಾತನೇ ಕಾಲ
ನೆಂದರಿತೆಯೆಲ್ಲವೊ ಮನುಜ ಹರ ಒಲಿವನಲ್ಲದೆ ಕೊಲುವನಲ್ಲ ಮರುಳೇ || ೧ ||

ಮುನಿ ಮೃಕಂಡುವಿಗಿತ್ತ ವರವನು ಅಂದು ಶಿಶು
ಮುನಿಯಾದ ಮಾರ್ಕಂಡೇಯ ಸತ್ತನೆ ಸುಳ್ಳೆಂದ
ತನ್ನ ವರ ಹದಿನಾರು ತನ್ನಳತೆಯಲ್ಲೆಂದು ಉಳಿಸಿ
ತನ್ನ ಭಕುತನ ಕಾದನೇ ಹೊರತು ಕೊಲೆಗೈಸಲಿಲ್ಲ ಧರ್ಮನ ತಡಕಿ ನಿಲ್ಲಿಸಿದಾ || ೨ ||

ಅನ್ನ ಓಷಧಿಗಳಿಗೆ ಪಶುಪತಿ ರುದ್ರನೇ ಮೊತ್ತ
ಇನ್ನುಳಿದ ಜೀವನವೇನು ತನ್ನವರ ಸಲಹುವ
ಹುನ್ನಾರವಿದು ಕಾಣು ತನ್ನಕ್ಷಿಯೊಳುದಿಸಿದ ಬಾಧೆ
ಯನು ತಾನೇ ಸುಟ್ಟು ಭಕುತರ ಕಾವ ಭಕ್ತರ ಪೊರೆವನೈ ಶಂಕರನು ಕಾಣಿರೊ || ೩ ||

ಅನ್ನವೆಂದರೆ ಶಿವನು ಕುಡಿವೆನೆಂದರೆ ಗಂಗೆ
ಇನ್ನು ತಾನಟ್ಟು ಬಡಿಸುವಳು ಅನ್ನಪೂರ್ಣೆ
ಅನ್ನವೇ ಜ್ಞಾನ ಸುಬ್ರಹ್ಮಣ್ಯ ಬಯಕೆಯೇ
ವಿನಾಯಕ ಶಿವಸುತ ಅನ್ನ ತಿನ್ನೆಲೊ ಮನುಜ ನೀ ಮಣ್ಣ ತಿನ್ನದಿರು ಎಂದಿಗೂ || ೪ ||

ಶಿವಾರ್ಪಣವೆಂದು ಭುಂಜಿಸಲು ವಿಷವೆಲ್ಲ
ಶಿವಧರಿಸಿ ಅಮೃತವನ್ನುಣ್ಣಿಸುತ ತಾ
ಶಿವ ನೀಡುವನು ಭಕುತರಿಗೆ ನಿರಂತರ
ಶಿವ ಶಿವಾ ತನ್ನಯ ಕರುಣಾ ಜಲಧಿಯ ಮುಚ್ಚಿ ಮೃಢನಾದೆಯಲ್ಲಾ || ೫ ||

ಈ ಪಂಚ ಸೂತ್ರದಲಿ ಹೊಂಚಿ ನಿಂತಿದೆ ಲೋಕ
ಈ ಪ್ರಪಂಚದ ಎಲ್ಲ ಜೀವಿಗಳು ಪಶುಪತಿಯಾಧೀನ
ಈ ಪುರಾತನ ಸತ್ಯವರಿತ ಗೌತಮ ತಾನು ಶಿವ ಸೂತ್ರದೊಳಗಳವಡಿಸಿ ಬರೆದ |
ಈತಿ ಬಾಧೆಗಳೆಲ್ಲ ತೀರ್ಚುವ ಸುಲಭದನ್ನವ ಕೊಟ್ಟು
ಈಶನೇ ಸಕಲ ಲೋಕಕೆ ಬಾಧ್ಯನೆಂದೆಂಬ ರೀತಿಯೊಳು
ಈಶೇಷ ಗಣಿತ ಸೂತ್ರವ ನೊರೆವೆ ಮನುಜ ನೀನರಿತೊಡೆ ನಿನಗೆ ಅನ್ನ ಋಣವಿಲ್ಲಾ ||ತ್ವಕ್ಷಸಾ ಪುರಂಧಿರಜಹಾದರಾತೀ
ಹಕ್ಷಿಪಜ್ಯಾ ಕೃಶಹಾನುರಸ್ತಾಂ ಮನ
ಸಾಕ್ಷಿಯೊಳು ನಿಜವಿದೆ ಮೂರರಾ ಗಂಟಿದೆ ನಂಟಿದೆ ನೊಂದೆನೆನ ಬೇಡ |
ಅಕ್ಷಿಯನು ತೆರೆದು ನೀ ಅವಧರಿಸು
ಈಕ್ಷಿಸುವುದು ಸುಲಭವು ಶ್ರೀಶಸಖ
ರಕ್ಷಿಸುವ ನಿರಂತರ ಅನ್ನ ನೀರನು ಒದಗಿಸುವ ನಿರಂತರ ಪಶುಪತಿಯಾತ || ೧ ||

ಅಂತಃಪತತ್ ಪತತ್ರ್ಯಸ್ಯ ಪರ್ಣಂ
ಅದಃ ಯಾಮನಿ ಪ್ರಸಿತಸ್ಯ ತದ್ವೇ
ಮದಃ ಮದಂಕರೇ ನೀಚರೆ ನಿಶ್ಚಲಾ ನಿರ್ವಿಕಾರೇ |
ಅಧಃ ಶ್ವೇತ ಕಲಶಂ ಗೋಭಿರಕ್ತಂ
ತದಃ ಶುಕ್ರಮಂಧ ಮಘವಾ ವಿಪ್ಸತಿಂ
ಊಹುಃ ಪಿಬಧ್ಯೈ ಶೂರೋ ಮದಾಯ ಪ್ರತಿ ಶ್ವೇತಕಲಶಂ || ೨ ||

ಈಯೆರಡು ಗೂಡಸೂತ್ರಗಳರಿತವನೆ
ಈ ಯಾಗಾದಿ ಜೀವ ಸೂತ್ರಗಳನರಿವ ಜೀವ
ನ ಯೋಗವೆಲ್ಲವು ಅಡಕವಿದೆ ಚಿಂತಿಸದಿರೈ ಮಾನವನೆ ನೀನೂ
ಹರ ಕಾಯ್ವನೀ ನಿನ್ನ ಕಾಯಕದೊಳಿರಲು
ಬರಿದೆ ಕಾಲ ಕಳೆಯದಿರು ಕಾಯಕವೇ ಕೈಲಾಸ
ವರಿತು ನೀ ತೊಡಗಿರಲು ನಿರಂತರ ಅನ್ನವೊದಗುವುದು ಅಮೃತವಾಗೀ || ೩ ||

ಇದರ ರಹಸ್ಯವಿದು ಕೇಳು ಯುಗಸಂಖ್ಯೆ
ಮೊದಲಾಗಿ ಇಪ್ಪತ್ತೆರಡು ನೂರರೊಳಾರು
ಪದುಮದಳ ಸಂಖ್ಯೆ ಜೀವರ ಉಸಿರಿನಾ ದಿನ ಸಂಖ್ಯೆಯೊಳಗೆ ಮೊತ್ತವಿಸು |
ಉದಯಿಸುವ ರವಿಕಿರಣ ಸಂಖ್ಯೆಯಲಿ
ಒದಗಿ ಕೂಡಲು ಮೊತ್ತವೇಳರ ಮೇಲೆ
ಬದಿಗಿಟ್ಟ ಶೇಷವೇ ನಿನ್ನರಿವು ಸುಜ್ಞಾನ ಅನ್ನವೇ ಬ್ರಹ್ಮ ನನ್ನಿಯಾ ಮಾತಿದು ಕೇಳೆಂಬೆ || ೪ ||

ಈ ರೀತಿಯಲ್ಲಿ ವಾಮದೇವರ ಅನ್ನ ಸಂಶೋಧನೆಯನ್ನು ನನ್ನ ಇತಿಮಿತಿಯಲ್ಲಿ ಬರೆದಿದ್ದೇನೆ. ಓದಿ ಅರ್ಥಮಾಡಿಕೊಂಡು ಬ್ರಹ್ಮಜ್ಞಾನ ಹೊಂದಿರೆಂದು ಹಾರೈಸುತ್ತೇನೆ. ಹಾಗೆ ಮುಂದಿನ ಲೇಖನದಲ್ಲಿ ಆತ್ರೇಯ ಮಂಡಲಕ್ಕೆ ಸಾಗೋಣ.

ಇಂತು ಸಜ್ಜನ ವಿಧೇಯ

ಕೆ. ಎಸ್. ನಿತ್ಯಾನಂದ