Sunday, 6 July 2014

ರತ್ನಾಕರವರ್ಣಿ ಕೃತ ಭರತೇಶ ವೈಭವ : ಆಸ್ಥಾನ ಸಂಧಿ - ೧


ಪರಮ ಪರಂಜ್ಯೋತಿ ಕೋಟಿ ಚಂದ್ರಾದಿತ್ಯ | 
ಕಿರಣ ಸುಜ್ಞಾನ ಪ್ರಕಾಶ |
ಸುರರ ಮಕುಟಮಣಿ ರಂಜಿತ ಚರಣಾಬ್ಜ | 
ಶರಣಾಗು ಪ್ರಥಮ ಜಿನೇಶ || ೧ ||


ಬಿನ್ನಹ ಗುರುವೆ ಧ್ಯಾನಕೆ ಬೇಸರಾದಾಗ | 
ನಿನ್ನನಾದಿಯ ಮಾಡಿಕೊಂಡು |
ಕನ್ನಡದೊಳಗೊಂದು ಕಥೆಯ ಪೇಳುವೆನದು | 
ನಿನ್ನಾಜ್ಞೆ ಕಂಡ ನನ್ನೊಡೆಯಾ || ೨ ||ಕಬ್ಬಿಗರೋಗುಗಬ್ಬನ ಹಾಡುಗಬ್ಬವ | ಕಬ್ಬದೊಳೊರೆವರಿವೆರಡು |
ಕಬ್ಬಿನಂತಿರಬೇಕು ಬಿದಿರಂತೆ ರಚಿಸಲೇ | 
ಕಬ್ಬೆ ಹೇಳೆಲೆ ಸರಸ್ವತಿಯೆ || ೩ ||


ಅಯ್ಯಯ್ಯ ಚೆನ್ನಾದುದೆನೆ ಕನ್ನಡಿಗರು | 
ರೆಯ್ಯಾ ಮಂಚಿದಿಯೆನೆ ತೆಲುಗಾ |
ಅಯ್ಯಯ್ಯ ಎಂಚಪೊರ್ಲಾಂಡೆಂದು ತುಳುವರು | ಮೈಯ್ಯುಬ್ಬಿ ಕೇಳಬೇಕಣ್ಣಾ || ೪ ||


ರಳ ಕುಳ ಶಿಥಿಲ ಸಮಾಸ ಮುಂತಾದವ | 
ರೊಳಗಿಲ್ಲಿ ಕೆಲವುಳ್ಳರುಂಟು |
ಕೆಲವಿಲ್ಲಾದರುವಿಲ್ಲವೇಕೆಂದರವರ ಕೋ | 
ಟಲೆಯೇಕೆ ಹಾಡುಗಬ್ಬದೊಳು || ೫ ||


ಸಕಲ ಲಕ್ಷಣವು ವಸ್ತುಕಕೆ, ವರ್ಣಕಕಿಷ್ಟು | 
ವಿಕಳವಾದರು ದೋಷವಿಲ್ಲ |
ಸಕಲ ಲಕ್ಷಣಕಾಗಿ ಬಿರುಸು ಮಾಡಿದರೆ ಪು | 
ಸ್ತಕದ ಬದನೆಕಾಯಹುದು || ೬ ||


ಚಂದಿರನೊಳಗೆ ಕಪ್ಪುಂಟು ಬೆಳ್ದಿಂಗಳು | 
ಕಂದಿ ಕುಂದಿಹುದೋ ನಿರ್ಮಲವೊ |
ಸಂಧಿಸಿ ಶಬ್ದದೋಷಗಳೊಮ್ಮೆ ಸುಕಥೆಗೆ | 
ಬಂದರೆ ಧರ್ಮ ಮಾಸುವುದೇ || ೭ ||


ಗಣನೆಯಿಲ್ಲದ ರಾಜ್ಯಸುಖದೊಳೋಲಾಡಿ ಧಾ | 
ರಿಣಿ ಮೆಚ್ಚಿ ಜಿನಯೋಗಿಯಾಗಿ |
ಕ್ಷಣಕೆ ಕರ್ಮವ ಸುಟ್ಟು ಜಿನನಾದ ಭೂಭುಜಾ | 
ಗ್ರಣಿಯ ವೈಭವವ ಲಾಲಿಸಿರೊ || ೮ ||


ಆಗಮವಧ್ಯಾತ್ಮವಳವಟ್ಟು ಶೃಂಗಾರ | 
ತ್ಯಾಗ ಭೋಗದ ಮೋಡಿ ಮೆರೆಯೆ |
ಭೋಗಿ ಯೋಗಿಗಳೆದೆ ಜುಮ್ಮು ಜುಮ್ಮೆನೆ ನೇಮ | 
ದಾಗಿ ಸೊಲ್ಲಿಸುವೆನಾಲಿಸಿರೊ || ೯ ||ಪ್ರಚುರದಿ ಪದಿನೆಂಟು ರಚನೆಯ ವಾಕ್ಯಕೆ | ರಚಿಸುವರಾನಂತು ಪೇಳೆ |
ಉಚಿತಕೆ ತಕ್ಕಷ್ಟು ಪೇಳ್ವೆನಧ್ಯಾತ್ಮವೆ | 
ನಿಚಿತ ಪ್ರಯೋಜನವೆನಗೆ || ೧೦ ||


ಭರತಭೂತಳಕೆ ಸಿಂಗಾರವಾದಯೋಧ್ಯಾ | 
ಪುರದೊಳು ಮೂಲೋಕ ಪೊಗಳೆ |
ಭರತ ಚಕ್ರೇಶ್ವರ ಸುಖಬಾಳುತಿರ್ದನಾ | 
ಸಿರಿಯನಿನ್ನೇನ ಬಣ್ಣಿಪೆನು || ೧೧ ||


ಪುರು ಪರಮೇಶನ ಹಿರಿಯ ಕುಮಾರನು | ನರಲೋಕಕೊಬ್ಬನೆ ರಾಯ |
ಮುರಿದು ಕಣ್ಣಿಟ್ಟರೆ ಕ್ಷಣಕೆ ಮುಕ್ತಿಯ ಕಾಂಬ | 
ಭರತ ಚಕ್ರಿಯ ಹೇಳಲಳವೇ || ೧೨ ||


ಹದಿನಾರನೆಯ ಮನು ಪ್ರಥಮಚಕ್ರೇಶ್ವರ | 
ಸುದತಿ ಜನಕೆ ರಾಜಮದನ |
ಚದುರರ ತಲೆವಣಿ ತದ್ಭವಮೋಕ್ಷ ಸಂ | 
ಪದನ ಬಣ್ಣಿಸಲೆನ್ನ ಹವಣೆ || ೧೩ ||


ಧರೆಯೊಳೆಲ್ಲವ ಸುಟ್ಟರುಂಟಲ್ಲಿ ಭಸ್ಮ ಕ | ರ್ಪುರವ ಸುಟ್ಟರೆ ಭಸ್ಮವುಂಟೆ |
ನರತತಿಗಾಹಾರ ನಿಹಾರವುಂಟೆಮ್ಮ | 
ಭರತೇಶಗಿಲ್ಲ ನಿಹಾರಾ || ೧೪ ||


ಕೋಮಲಾಂಗನು ಹೇಮವರ್ಣನು ಜಗವೆಲ್ಲ | ಕಾಮಿಸತಕ್ಕ ಚೆನ್ನಿಗನು |
ಆಮೋದವುಕ್ಕುವ ಜವ್ವನಿಗನು ಸರ್ವ | ಭೂಮೀಶರೊಡೆಯನಾ ಚಕ್ರಿ || ೧೫ ||


ಆ ವಿಭುವೊಂದಿನದುದಯದೊಳೆದ್ದು | ದೇವತಾರ್ಚನೆಯನು ಮಾಡಿ |
ಚಾವಡಿಗೈದಿ ತಾನೋಲಗವಾದೊಂದು | 
ಶ್ರೀ ವಿಲಾಸವನೇನನೆಂಬೆ || ೧೬ ||


ನವರತ್ನ ಹೇಮನಿರ್ಮಿತವೆನಿಪಾಸ್ಥಾನ | 
ಭವನದೊಳಾ ರಾಜರತ್ನ |
ಛವಿವಡೆದೆಸೆದನು ರತ್ನಪುಷ್ಪಕದೊಳು | ದಿವಿಜೇಂದ್ರನೊಪ್ಪುವಂದದೊಳು || ೧೭ ||
೧೮

ತನುಕಾಂತಿ ತುಂಬಿದ ಸಭೆಯೆಂಬ ಕೊಳದಲ್ಲಿ | ಕನಕಸಿಂಹಾಸನವೆಂಬ |
ಕನಕಾಂಬುಜದ ಮೇಲಾ ರಾಜ ನಿ | 
ದ್ದನು ರಾಜ ಹಂಸನೆಂಬಂತೆ || ೧೮ ||

ಉದಯಗಿರಿಯ ಮೇಲೆ ಮೆರೆವ ಭಾನುವಿಗೆ ಮ | ತ್ತಿದಿರಾದ ಪ್ರತಿಸೂರ್ಯನಂತೆ |
ಪದುಳದುತ್ತುಂಗ ಸಿಂಹಾಸನವೇರಿ ದೇ | 
ಹದ ಕಾಂತಿ ಮೆರೆಯೆ ಮೆರೆದನು || ೧೯ ||

ಆವ ಬಿಂಕವೊ ಎಡಗಾಲ ಗದ್ದುಗೆಯ ಮೇ | 
ಲೋವಿ ಮಡಿದು ಮತ್ತೆ ಕೆಳಗೆ |
ಹಾವುಗೆಯೊಳು ಪೆಂಡೆಯದ ಬಲಗಾಲೂರಿ | ಠೀವಿಯೊಳೆಸೆದನಾ ರಾಯ || ೨೦ ||

ಬಲಗೈಯೊಳಾಂತ ಹೊನ್ನೊರೆಯ ಕಠಾರಿಯ | 
ಕೆಲಕೂರಿ ಮತ್ತೆಡಗೈಯಾ |
ಮಲಗಿನ ಮೇಲೂರಿ ಬೀರಸಿರಿಯನಾಳ್ದ | 
ಕಲಿಗಳ ದೇವನೊಪ್ಪಿದನು || ೨೧ ||

ನರುಸುಯ್ಯಗಾಳಿಗೆ ತೇಲ್ವ ದುಕೂಲದ | 
ಸೆರಗು ಸೇರುವೆ ದೊರೆ ಹೊದೆದು |
ತರಪಿನೆದೆಯ ಹೊನ್ನ ಜನ್ನಿವಾರದ ರೇಖೆ | 
ಮೆರೆಯೆ ರಾಜೇಂದ್ರ ಮೆರೆದನು || ೨೨ ||

ಮಿರುಪ ಕಿರೀಟವುಂಟದನಂದು ಧರಿಸಿತಿ | 
ಲ್ಲುರೆ ಮನದೊಂದು ಲೀಲೆಯೊಳು |
ತುರುಬು ಚುಂಗೆಸೆಯೆ ಚಿಮ್ಮುರಿಸುತ್ತಿ ಸೊಬಗನೆ | ಕರೆವುತಿದ್ದನು ನೋಡುವರಿಗೆ || ೨೩ ||

ಜೋಕೆವಿಡಿದು ನೀಡುವೆಳೆಯ ಘಳಿಗೆಯ ಪ | ರಾಕಿನೊಳಗೆ ಕೈಕೊಳುತ |
ಏಕೆ ನುಡಿಯನೊ ಇನ್ನೊಮ್ಮೆಯೆಂಬಂತೊಂದು | ತೂಕದೊಳೆಸೆದನಾ ರಾಯಾ || ೨೪ ||

ಉಬ್ಬಿ ಬೆಳೆದು ಬಾಗಿತಿಲ್ಲ ರೇಖೆಗೆ ಬಂದು | ಹುಬ್ಬಿನಂತೆಸೆವೆಳೆ ಮೀಸೆ |
ಹುಬ್ಬು ಮೀಸೆಯ ನೋಡಿ ನಲಿವ ಬವರಿಕಣ್ಣ | 
ಹಬ್ಬವ ಮಾಳ್ಪನೆಲ್ಲರಿಗೆ || ೨೫ ||

ಕುಂಡಲಗಳ ಕಾಂತಿ, ಕಂಗಳ ಪ್ರಭೆ, ಗಂಡ | ಮಂಡಲದೊಳಗಾಡಲವನಾ |
ಮಂಡೆಯೊಲೆದರೆ ಹೆಂಗಳಿಗೆ ಮನ್ಮಥನದೊ | ಖಂಡೆಯವಲುಗಿದಂತಿಹುದು || ೨೬ ||

ಪದಕ ಕಡಗ ಕಂಠಮಾಲೆಯ ನವರತ್ನ | 
ದುದಿತಾಂಶು ದೇಹಕಾಂತಿಯೊಳು |
ಪುದಿದು ಪೊಳೆಯೆ ಕಣ್ಗೆ ತೋರಿದನಿಂದ್ರ ಚಾ | 
ಪದೊಳು ಮಾಡಿದ ನೃಪನಂತೆ || ೨೭ ||

ಶಾಲಿಯ ತೆರೆಯ ತಟ್ಟುಚ್ಚಿ ದೀಪದ ಕಾಂತಿ | ಢಾಳಿಸುವಂತೆ ಲೋಕದೊಳು |
ಆ ಲಲಿತಾಂಗನ ತನುಕಾಂತೆ ಪೊದೆದ ದು | 
ಕೂಲದ ಹೊರಗೆ ರಂಜಿಸಿತು || ೨೮ ||

ಬಳಸಿನ ನುಡಿಗಳೇನೋಲಗದೆಳೆವೆಂಗ | 
ಳೊಲಿದುಟ್ಟ ಬಿಳಿಯ ಶೀರೆಗಳೊ |
ಚೆಲುವನ ತನುಕಾಂತಿ ಸೋಂಕಿದ ರಂಗು ಮಾ | ದಲವಣ್ನವೆನಲೆಸೆದಿಹುದು || ೨೯ ||

ಹೆಂಗಳ ರೂಪು ಗಂಡರಿಗೆ ಗಂಡರ ರೂಪು | 
ಹೆಂಗಳ ಸೋಲಿಪುದೆಂಬ |
ಪಾಂಗಲ್ಲವವನ ಚೆಲ್ವಿಕೆ ಗಂಡು ಪೆಣ್ಗಳ | 
ಕಂಗಳ ಸೆರೆವಿಡಿದಿಹುದು || ೩೦ ||

ತರತರವಿಡಿದು ಢಾಳಿಸುತಿಹ ದೀರ್ಘ ಚಾ | 
ಮರಗಳ ಸಾಲೊಳೆಸೆದನು |
ಹರಿವ ಬೆಳ್ಮುಗಿಲೊಳು ತೋರಿ ಮರಸುವ ಚಂ | 
ದಿರನೋ ಭಾಸ್ಕರನೋಯೆಂಬಂತೆ || ೩೧ ||

ಬಲದೊಳು ಭೂಭುಜರೆಡದಲ್ಲಿ ಗಣಿಕೆಯ | ರೊಲುಮೆಯ ಕವಿಗಳು ಮುಂದೆ |
ನಿಲೆ ಹಿಂದೆ ಹಿತವರು ಬಳಸಿದೆಕ್ಕಡಿಗರ | 
ಬಲು ಬಜಾವಣೆಯೊಳೊಪ್ಪಿದನು || ೩೨ ||

ವಾರನಾರಿಯರು ತಾವಾರನಾರಿಯರೊ ಶೃಂ | 
ಗಾರಕೆ ಸೋತು ಭೂವರನಾ |
ಹಾರುತ್ತಿದ್ದರು ಸುರಪಶುವ ಗೋದಾನಕ್ಕೆ | 
ಹಾರುವ ಹಾರುವನಂತೆ || ೩೩ ||

ಅಂಬುಜವೆಲ್ಲವು ರವಿಯ ನೋಳ್ಪಂತೆ ನೀ | 
ಲಾಂಬುಜ ನೋಳ್ಪಂತೆ ಶಶಿಯಾ |
ತುಂಬಿದ ಸಭೆಯೆಲ್ಲ ನೃಪನ ನೋಡುತ ಮಿಕ್ಕ | 
ಹಂಬಲ ಮೆರೆದುದಲ್ಲಲ್ಲಿ || ೩೪ ||

ರೋಮಾಂಚನಸಿದ್ಧ ಜುಂಜುಂಮಾಲಪ, ಗಾ | 
ನಾಮೋದ ಚುಂಚುಮಾಲಾದ್ಯ |
ಶ್ರೀಮಂತ್ರಗಾಂಧಾರ ರಾಗವರ್ತಕರೆಂಬ | 
ರಾ ಮಹೀಪತಿಯ ಗಾಯಕರು || ೩೫ ||

ಬಳ್ಳಬಾಯ್ದೆರೆಯದೆ ಭ್ರಾಂತುಗೊಂಡಂತೆ ಮೈ | 
ಯೆಲ್ಲ ತೂಗಾಡದೊಂದಿನಿಸು |
ಅಲ್ಲಾಟವುಂಟೋಜೆವಿಡಿದು ಬಾಯ್ದೆರೆಯುಂಟು | ಸಲ್ಲಲಿತದೊಳು ಹಾಡಿದರು || ೩೬ ||

ಜೋಡು ಜೋಡಾಗಿ ತಾವರೆಯಿದಿರೊಳು ಸ್ವರ | ಮಾಡುವ ತುಂಬಿಗಳಂತೆ |
ನೋಡುತ ಭರತರಾಜನ ಮುಖಪದ್ಮವ | ಮಾಡಿದರಾಳಾಪಗಳನು || ೩೭ ||

ಭರತರಾಜನ ಮುಖಚಂದ್ರನ ಕಂಡ ಜಾ | 
ಣರಿಗೆ ಮಹಾಳಾಪವುಕ್ಕಿ |
ಬರುತಿದ್ದುವಿಂದುವ ಕಂಡ ಸಮುದ್ರದ | 
ಭರತದಂತೇನ ಬಣ್ಣಿಪೆನು || ೩೮ ||

ವೀಣೆಯ ದನಿಯಾವುದದರೊಳು ಪಾಡುವ | 
ಗಾನದ ಧ್ವನಿಯಾವುದೆಂದು |
ಕಾಣಿಸಿಕೊಳ್ಳದೆ ಜಿನಸಿದ್ಧ ಮಹಿಮೆಯ | 
ಕಾಣಿಸಿ ಪಾಡಿದರೊಲ್ದು || ೩೯ ||

ರನ್ನ ಮೂರರ ಗುಣವನು ಮುಖವೀಣೆಯ | ಸನ್ನಾಹದಿಂದ ಹಾಡಿದರು |
ಚೆನ್ನಾಯ್ತು ಸೊಬಗಾಯ್ತು ಸೊಗಸಾಯ್ತು ಲೇಸು ಲೇ | ಸಿನ್ನೊಮ್ಮೆಯೆಂದು ಕೇಳ್ವಂತೆ || ೪೦ ||

ದನಿ ಲೇಸು ಮೇಳದ ಜೋಕೆ ಲೇಸಾಳಾಪ | 
ವನುಭವ ಲೇಸು ಮತ್ತಲ್ಲಿ |
ಜಿನನಾಮ ಕೂಡಿತು ಲೇಸು ಲೇಸೆಂದು ರಾ | 
ಯನ ಮುಂದೆ ನುಡಿದರಿಚ್ಛೆಗರು || ೪೧ ||

ತುಂಬಿಯ ಗಾನವಂತಿರಲಿ ಕೋಕಿಲನಾದ | 
ವೆಂಬರ ಮಾತದಂತಿರಲಿ |
ತುಂಬುರ ನಾರದರಿನ್ನೇಕೆ ಹೋಪುರೆ | 
ಯೆಂಬಂತೆ ಸೊಗಸಿ ಹಾಡಿದರು || ೪೨ ||

ಸಮವಸರಣದೊಳು ವಿಮಲಕಿರಣದೊಳ | 
ಗಮಲ ಮುನಿಗಳ ವೃಂದದೊಳು |
ಕಮಲಕರ್ಣಿಕೆಗೆ ಸೋಂಕದೆ ನಿಂದ ದೇವನ | ಗಮಕವನೊಲ್ದು ಪಾಡಿದರು || ೪೩ ||

ಜಿನನ ಪೊಗಳಿ ಕೂಡೆ ಸಿದ್ಧರ ಕೀರ್ತಿಸಿ | 
ಮುನಿಗಳ ವಂದಿಸಿ ಮತ್ತೆ |
ತನುವಿನೊಳಿದ್ದಾತ್ಮ ತತ್ವ ವಿಚಾರವ | 
ಜನಪತಿ ಮೆಚ್ಚೆ ಹಾಡಿದರು || ೪೪ ||

ನರುಗಬ್ಬಿನೊಳಗಣ ರಸವ ಕಾಣದೆ ಪಶು | ಹೊರಗಣೆಲೆಯ ಸವಿವಂತೆ |
ಅರಿದೊಳಗಾತ್ಮಸುಖವನುಣಲರಿಯದೆ | ಹೊರಗೆಳಸುವರಂಗಸುಖಕೆ || ೪೫ ||

ತಿಳಿವೆ ಶರೀರ ತಿಳಿವೆ ರೂಪು ಬೆಳಗೆ ಮೈ | 
ಬೆಳಗೆ ತಾನಾಗಿರುತಿಹುದು |
ತಿಳಿವು ಬೆಳಗುಗಳೆ ಹಂಸನ ಕುರುಹೆಂದು | 
ತಿಳಿದು ನೋಳ್ಪವನೀಗ ಧನ್ಯ || ೪೬ ||

ನಾಲಗೆ ಕುಡುಹು ಶರೀರವೆ ವಾದ್ಯ ನಿ | 
ರಾಳಾತ್ಮನೇ ವಾದ್ಯಕಾರ |
ತಾಳಿನುಡಿಸುತಿರ್ದು ಬಿಟ್ಟು ಹೋದರೆ ದೇಹ | ಡೋಳಿನಂದದೊಳು ಬಿದ್ದಿಹುದು || ೪೭ ||

ವಾದ್ಯಗಳಾರಾರು ಪಿಡಿದು ಬಾಜಿಸಿದರೆ | 
ವೇದ್ಯವೆನಿಸಿ ದನಿಯಹವು |
ಚೋದ್ಯವೀ ತನುವಾದ್ಯ ತಾಳ್ದೋರ್ವಗಲ್ಲದೆ | ಭೇದ್ಯವಾಗದು ಧ್ವನಿಗೊಡದು || ೪೮ ||

ಲೋಹವ ಹೊಕ್ಕಗ್ನಿ ಹೊಯ್ಲಿಗಿಡುವುದಾ | ಲೋಹವನಗಲೆ ಹೊಯ್ಲುಂಟೆ |
ದೇಹವ ಹೊಕ್ಕಿದ್ದರಾತ್ಮಗೆ ಬಾಧೆಯು | 
ದೇಹವಳಿಯೆ ಬಾಧೆಯುಂಟೆ || ೪೯ ||

ಹೊತ್ತ ದೇಹವ ಬರುಮರಣದೊಳ್ಬಿಟ್ಟರೆ | 
ಮತ್ತೊಂದು ದೇಹ ಮುಂದಹುದು |
ಹೊತ್ತದೇಹವ ಬಿಟ್ಟು ಮತ್ತೊಂದು ದೇಹವ | 
ಪತ್ತದೆ ನಿಲ್ವುದು ಮುಕ್ತಿ || ೫೦ ||

ಹಿಡಿದ ದೇಹವ ಬಿಟ್ಟು ಮತ್ತೊಂದು ದೇಹವ | 
ಪಿಡಿಯದೆ ನಿಲ್ವುದೆಂತೆನಲು |
ಬಿಡದೆ ಸುಜ್ಞಾನಾಗ್ನಿಯಿಂದ ಕರ್ಮದ ಬೇರ | ಸುಡುವುದೊಂದೆಂದು ಪಾಡಿದರು || ೫೧ ||

ಹುಟ್ಟತಾಗಳೆ ನಸುನಗೆ ಮೊಗದೊಳು ಮನ | 
ದಟ್ಟತಾ ನುಡಿಯದೆ ಚಕ್ರಿ |
ಇಟ್ಟ ನವರ ಮೇಲೆ ತನ್ನ ಕೋಮಲಹಸ್ತ | 
ಮುಟ್ಟ ದೇವಾಂಗ ವಸ್ತ್ರವನು || ೫೨ ||

ಗಾನ ನಿಂದುದು ಗಾಯಕರ ಮೆಚ್ಚುಮಿಗೆ ಬಂದು | ದಾನಂದ ಸಂದುದು ಸಭೆಗೆ |
ಭೂನಾಥನಾಸ್ಥಾನದೊಳಗಿದ್ದನಿಲ್ಲಿಗಾ | 
ಸ್ಥಾನದ ಸಂಧಿ ಸುಗಂಧಿ || ೫೩ ||