Tuesday, 25 November 2014

ಕುಮುದೇಂದುಮುನಿಯ ಸಿರಿಭೂವಲಯದ ಕೆಲವು ಸಾಂಗತ್ಯ ಪದ್ಯಗಳು

ಸಿರಿಭೂವಲಯದ ಕವಿಕಾವ್ಯಸಾರ (ಒಂದು ಕಿರು ಕಥನಕಾವ್ಯ) 

ರಚನೆ: ಸಿರಿಭೂವಲಯದ ಸುಧಾರ್ಥಿ 

ಒರೆಯುತಿಹೆ ನಾನೀಗ| ಧರೆಯಸೌಭಾಗ್ಯವನು||
ಗುರು ಕುಮುದೇಂದು ರಚಿಸಿರುವ| ಸಿರಿಪಾದ ಕಾವ್ಯವನು||ಪ||

ಆದಿನಾಥರಕಾವ್ಯ| ಭೇದವಳಿಸುವಕಾವ್ಯ||
ಬೋಧಿಸಿದ ಗೊಮ್ಮಟನ| ಸುಧೆಯಸಾಗರಕಾವ್ಯ||೧||

ಅಜಿತನಾಥರಕಾವ್ಯ| ಶಂಭವನಶುಭಕಾವ್ಯ||
ಅಭಿನಂದನರು ಸುಮತಿ| ಸಮ್ಮತಿಸಿದಕಾವ್ಯ||೨||

ಪದುಮಪ್ರಭತುಂಬಿರುವ| ಸುಪಾರ್ಶ್ವನಾಥರಕಾವ್ಯ||
ಚಂದ್ರಪ್ರಭದೇವ| ಪುಷ್ಪದಂತರಕಾವ್ಯ||೩||

ಶೀತಲಶ್ರೇಯಾಂಸವಾಸುಪೂಜ್ಯ| ವಿಮಲಾನಂತಧರ್ಮ||
ಶಾಂತಿಕುಂತುವುಮತ್ತೆ| ಅರನೊರೆದಸಿರಿಕಾವ್ಯ||೪||

ಮಲ್ಲಿನಾಥರುಇತ್ತ|  ಸುವ್ರತರುನಮಿನೇಮಿ||
ಪಾರ್ಶ್ವನಾಥರನುಡಿಯು| ಮಹವೀರವಾಣಿ||೫||

ಯದುನಂದನನಗೀತೆ| ಭೂವಲಯಸಂಜಾತೆ||
ವ್ಯಾಸರುಸುರಿದವಾಣಿ| ಪರಬೊಮ್ಮನಾರಾಣಿ||೬||

ಅದ್ವೈತಸಾಗರಕೆ| ಮೇರೆಇರಿಸದಕಾವ್ಯ||
ಸ್ಯಾದ್ವಾದದಾಸಿರಿಯು| ತುಂಬಿಗರಿಯುವಕಾವ್ಯ||೭||

ಧಾರಿಣಿಯಗುರುಫಣನ| ಮೀರಿಬೆಳೆದಿಹಕಾವ್ಯ||
ಧರೆಯಮಾನವರೆಲ್ಲ| ಒಂದೆನುವಸಿರಿಕಾವ್ಯ||೮||

ಧರಸೇನ ಗುಣಸೇನ| ಕುಂದಕುಂದರಜ್ಞಾನ||
ಸಿಂಧುಶಯನನಸಿರಿಯು| ಕುಮುದೇಂದುಧ್ಯಾನ||೯||

ವೀರಸೇನರ ವಿವರ| ಜಿನಸೇನರಾ ಪ್ರವರ||
ಗುರುಪರಂಪರೆವಾಣಿ| ಭೂವಲಯರಾಣಿ||೧೦||

ಕರಕಮಲದಲಗಳಲಿ| ವೈರಾಗ್ಯವರಿತವರು||
ಧರೆಯಜನಗಳಿಗೆಲ್ಲ| ಧರುಮವರುಹುತಲಿಹರು||೧೧||

ಸಕಲವನುಬಲ್ಲವನು| ಸುತನೆಂಬಪ್ರೇಮದಲಿ||
ಜಕಿಲಕಿಯಬ್ಬೆತಾ| ಬರೆಸಿರುವಸಿರಿಕಾವ್ಯ||೧೨||

ಮಲ್ಲಿಕಬ್ಬೆಯಭಕ್ತಿ| ಗುರುಶಕ್ತಿ ಮುಕ್ತಿ||
ಹರಿದುಬಂದಿಹಭವ್ಯ| ಕುಮುದೇಂದುಕಾವ್ಯ||೧೩||

ಅಷ್ಟಕರ್ಮವಕೆಡಿಪ| ಶಿಷ್ಟರುಸುರಿದಕಾವ್ಯ||
ಅಷ್ಟಮಜಿನತಾನು| ಸೃಷ್ಟಿಸಿದಸಿರಿಕಾವ್ಯ||೧೪||

ಕನ್ನಡಿಯಕನ್ನಡವು| ಆದಿಜಿನನುಸಿರೆಂಬ||
ಅಚ್ಚರಿಯತೆರೆದಿಡುವ| ಕನ್ನಡದಸಿರಿಕಾವ್ಯ||೧೫||

ವೇದಸಾರುತಿಹಯಜ್ಞಯಾಗಗಳು| ಹಿಂಸೆಯೆನುವಭಾವ||
ವೇದವಾಕ್ಯಗಳಸತ್ಯಸತ್ವಗಳ| ಅರಿತಜಿನನಕಾವ್ಯ||೧೬||

ಸರಸತಿಯ ಸಿರಿಮುಡಿಯ| ಸೇರಿಪಾವನವಾದ||
ಸಿರಿಕಂಠತೆರೆದಿಟ್ಟ| ಸುರವಂದ್ಯಸಿರಿಕಾವ್ಯ||೧೭||

ಮೋಡದಲಿಮಂತ್ರಗಳ| ನೋಡಿತಿಳಿಯುತಲಿದ್ದ||
ದೇವರಾತರುಸವಿದ| ದಿಕ್ಕುಧರಿಸಿದಕಾವ್ಯ||೧೮||

ಸಿಗದಕಾವ್ಯವಿದೆಂದು| ರಾಜೇಂದ್ರರಕ್ಷಿಸಿದ||
ಜಗದಅಚ್ಚರಿತಾನು| ಯುಗಯುಗದಕಾವ್ಯ||೧೯||

ಕಬ್ಬಿಣದಕಡಲೆಯನು| ಕಬ್ಬಿನಾರಸದಂತೆ||
ಜಗದಜನಗಳಿಗಿತ್ತ| ಗಿರಿಜೆಯೊಲವಿನಕಾವ್ಯ||೨೦||

ಸುಧೆಯನರ್ಥಿಸುವವನ| ಹೃದಯಕಮಲದಕಾವ್ಯ||
ಪದುಮಾವತಿಯರಸ| ಮುದದಿರಚಿಸಿದಕಾವ್ಯ||೨೧||

ಬೆಂದಕಾಳೂರ್ಸನಿಹ| ನಂದಿಗಿರಿತಪ್ಪಲಲಿ||
ಯಲವಭೂರಿಸಿಬರೆದ| ಸಿರಿಭೂವಲಯಕಾವ್ಯ||೨೨||

ಚೆನ್ನಿರುವಕಾವ್ಯವಿದು| ಹೊನ್ನುಡಿಯಹೆಮ್ಮೆಯಿದು||
ಕಸವರದಕಂಠದಲಿ|ಹಾಡಬೇಕಿಹಕಾವ್ಯ||೨೩||
******************************************************

***ಕುಮುದೇಂದುಮುನಿಯ ಸಿರಿಭೂವಲಯದ ಕೆಲವು ಸಾಂಗತ್ಯ ಪದ್ಯಗಳು***ಅಷ್ಟಮಹಾಪ್ರಾತೀಹಾರ್ಯವೈಭವದಿಂದ| ಅಷ್ಟಗುಣಂಗಳೊಳ್ಓಂದಮ್||
ಸೃಷ್ಟಿಗೆ ಮಂಗಲಪಯರ್ಯಾಯದಿನಿತ್ತ| ಅಷ್ಟಮಜಿನಗೆರಗುವೆನು ||
*  *  *
ಟವಣೆಯಕೋಲುಪುಸ್ತಕಪಿಂಛಪಾತ್ರೆಯ|ಅವತಾರದಕಮಂಡಲದ||
ನವಕಾರಮಂತ್ರಸಿದ್ಧಿಗೆಕಾರಣವೆಂದು|ಭುವಲಯದೊಳುಪೇಳ್ದಮಹಿಮಾ
*  *  *
ಆದಿದೇವನುಆದಿಯಕಾಲದಿಪೇಳ್ದ|ಸಾಧನೆಯಧ್ಯಾತ್ಮಯೋಗ||
ದಾದಿಯಅಜ್ಞಾನವಳಿವಧರ್ಮಧ್ಯಾನ|ಸಾಧಿತಕಾವ್ಯಭೂವಲಯ
*  *  *
ಲಾವಣ್ಯದಂಗಮೈಯ್ಯಾದಗೊಮ್ಮಟದೇವ|ಆವಾಗತನ್ನಅಣ್ಣನಿಗೆ||
ಈವಾಗಚಕ್ರಬಂಧದಕಟ್ಟಿನೊಳ್ಕಟ್ಟಿ|ದಾವಿಶ್ವಕಾವ್ಯಭೂವಲಯ
*  *  * 
ಯಶಸ್ವತೀದೇವಿಯಮಗಳಾದಬ್ರಾಹ್ಮಿಗೆ|ಅಸಮಾನಕರ್ಮಾಟಕದ||
ರಿಸಿಯುನಿತ್ಯವುಅರುವತ್ನಾಲ್ಕಕ್ಷರ|ಹೊಸೆದಂಗೈಯ್ಯಭೂವಲಯ||
*  *  *
ಕರ್ಮಟಕಮಾತಿನಿಂದಲಿಬಳಸಿಹ|ಧರ್ಮಮೂರ್ನೂರರವತ್ಮೂರಂ||
ನಿರ್ಮಲವೆನ್ನುತಬಳಿಯಸೇರಿಪಕಾವ್ಯ|ನಿರ್ಮಲಸ್ಯಾದ್ವಾದಕಾವ್ಯ
*  *  *
ಹದಿನೆಂಟುಭಾಷೆಯುಮಹಭಾಷೆಯಾಗಲು| ಬದಿಯಭಾಷೆಗಳ್ಏಳ್ನೂರಮ್||
ಹೃದಯದೊಳಡಗಿಸಿಕರ್ಮಾಟಲಿಪಿಯಾಗಿ| ಹುದುಗಿಸಿದಂಕಭೂವಲಯ ||
*  *  *
ಸಾವಿರದೆಂಟುಭಾಷೆಗಳಿರಲವನೆಲ್ಲ|ಪಾವನಮಹಾವೀರವಾಣಿ||
ಕಾವಧರ್ಮಾಂಕವುಓಂಬತ್ತಾಗಿರ್ಪಾಗ|ತಾವುಏಳ್ನೂರ್ಹದಿನೆಂಟು
*  *  *
ವರಪದ್ಮಮಹಾಪದ್ಮದ್ವೀಪಸಾಗರಬಂಧ|ಪರಮಪಲ್ಯದಅಂಬುಬಂಧ|
ಸರಸಶಲಾಕೆಯಶ್ರೇಣಿಯಂಕಬಂಧ|ಸೀಮಾತೀತದಲೆಕ್ಕಬಂಧ||
*  *  *
ತರುಣನುದೋರ್ಬಲಿಯವರಕ್ಕಬ್ರಾಹ್ಮಿಯು|ಕಿರಿಯಸೌಂದರಿಅರಿತಿರ್ದ||
ಅರವತ್ನಾಲ್ಕಕ್ಷರನವಮಾಂಕಸೊನ್ನೆಯ|ಪರಿಯಿಹಕಾವ್ಯಭೂವಲಯ||
*  *  *
ಭಾರತದೇಶದಮೋಘವರ್ಷನರಾಜ್ಯ|ಸಾರಸ್ವತವೆಂಬಂಗ||
ಸಾರಾತ್ಮಗಣಿತದೊಳಕ್ಷರಸಕ್ಕದ|ನೂರುಸಾವಿರಲಕ್ಷಕೋಟಿ||
*  *  *
ಜನಿಸಲುಸಿರಿವೀರಸೇನರಶಿಷ್ಯನ|ಘನವಾದಕಾವ್ಯದಕಥೆಯ||
ಜಿನಸೇನಗುರುಗಳತನುವಿನಜನ್ಮದ|ಘನಪುಣ್ಯವರ್ಧನವಸ್ತು||
*  *  *
ವೋದಿನೊಳಂತರ್ಮುಹೂರ್ತದಿಸಿದ್ಧಾಂತ|ದಾದಿಅಂತ್ಯವನೆಲಚಿತ್ತ||
ಸಾದಿಪರಾಜಅಮೋಘವರ್ಷನಗುರು|ಸಾಧಿತಶ್ರಮಸಿದ್ಧಕಾವ್ಯ||
*  *  *
ಗಣಿತಶಾಸ್ತ್ರವದೆಲ್ಲಮುಗಿದರುಮಿಕ್ಕುವ| ಗಣಿತವನಣುರೂಪಮ್ಗೈದು||
ಕ್ಷಣವೆನೆಸಮಯಓಂದರೊಳಸಂಖ್ಯಾತದ| ಗುಣಿತದಿಕೆಡಿಸುವಕ್ರಮವು
*  *  *
ಅಂಕವಿಜ್ಞಾನವಿರುವಗಣಿತಯೋಗ| ದಂಕೆಒಂದೊಂದಲೊಂದು||
ಶಂಕೆಯಿಲ್ಲದೆನೋಡಲಾದಿಯಾದೊಂದನು| ಪೆಂಕನೆಂತರಿವೆನೆನುವನು||
*  * *
ಅಣುವುನೀರೊಳಗೆಷ್ಟುಅನಲವಾಯುಗಳೆಷ್ಟು| ನೆನೆದುಸುಡದಅಣುವೆಷ್ಟು||
ತನಿವರ್ಣನಾಲ್ಕರಿಮ್ಪೂರಣಗಲನದೆ| ಮಿನುಗುವಪರಮಾಣುವೆಷ್ಟು ||
*  *  *
ಕರುನಾಡತಣ್ಪಿನನೆಲದೊಳುಹುಟ್ಟಿದ| ಕುರುಹರಿಪುರುವಂಶವೆರೆದು||
ಪೊರೆದುಹೊತಿಸಿದಅಂಕಜ್ವಾಲೆಯಬೆಳಕಿನ| ಪರಿಯಚಿಜ್ಯೋತಿಇದರಿಯಾ ||
*   *   *
ತನುವನಾಕಾಶಕೆಹಾರಿಸಿನಿಲಿಸುವ| ಘನವೈಮಾನಿಕದಿವ್ಯಕಾವ್ಯ||
ಪನಸಪುಷ್ಪದಕಾವ್ಯವಿಶ್ವಂಭರಕಾವ್ಯ| ಜಿನರೂಪಿನಭದ್ರಕಾವ್ಯ ||
*   *  *
ಯವೆಯಕಾಳಿನಕ್ಷೇತ್ರದಳತೆಯೊಳಡಗಿಸಿ| ಅವರೊಳನಂತವಸಕಲಾನ್||
ಕವನವದೊಳ್ಸವಿಯಾಗಿಸಿಪೇಳುವ| ನವಸಿರಿಇರುವಭೂವಲಯ ||
*   *   *
ಕರುಣೆಯಧವಲವರ್ಣದಪಾದಗಳಿಹ| ಪರಮಾತ್ಮಪಾದದ್ವಯದೆ||
ಸಿರವಿಹನಾಲ್ಕಂಕವೆರಸಿಸಿಂಹದಮುಖ| ಭರತಖಂಡದಶುಭಚಿಹ್ನೆ ||
*   *   *
ಋಷಿಗಳೆಲ್ಲರುಎರಗುವತೆರದಲಿ| ಋಷಿರೂಪಧರಕುಮುದೇಂದು||
ಹಸನಾದಮನದಿಂದಮೋಘ| ವರ್ಷಾಂಕಗೆಹೆಸರಿಟ್ಟುಪೇಳ್ದಶ್ರೀಗೀತೆ ||
*   *   *
ಮಿಗಿಲಾದತಿಶಯದೇಳ್ನೂರಹದಿನೆಂಟು|ಅಗಣಿತದಕ್ಷರಭಾಷೆ||
ಶಗಣಾದಿಪದ್ಧತಿಸೊಗಸಿನಿಮ್ರಚಿಸಿಹೆ|ಮಿಗುವಭಾಷೆಯುಹೊರಗಿಲ್ಲ||
*  *  *
ವರವಿಶ್ವಕಾವ್ಯದೊಳಡಗಿರ್ಪಕಾರಣ|ಸರಣಿಯನರಿತವರ್ಶುಭದ||
ಗುರುವರವೀರಸೇನರಶಿಷ್ಯಕುಮುದೇಂದು|ಗುರುವಿರಚಿತದಾದಿಕಾವ್ಯ
*  *  *
ಓದಿಸಿದೆನುಕರ್ಮಾಟದಜನರಿಗೆ|ಶ್ರೀದಿವ್ಯವಾಣಿಯಕ್ರಮದೆ||
ಶ್ರೀದಯಾಧರ್ಮಸಮನ್ವಯಗಣಿತದ|ಮೋದದಕಥಯನಾಲಿಪುದು||
*  *  *
ಮೇರುವಬಲಕ್ಕಿಂತಿರುಗುತನೆಲೆಸಿರ್ಪ| ಭೂರಿವೈಭವಯುತರಾದ||
ಸಾರದಬೆಳಕಬೀರುವಚಂದ್ರಸೂರ್ಯರು| ಧಾರುಣಿಯೊಳ್ತೋರ್ಪವರೆಗೆ ||
*   *   *
ನೀಲಾಂಬರದೊಳುಹೊಳೆಯುವನಕ್ಷತ್ರ| ಮಾಲಿನ್ಯವಾಗದವರೆಗೆ||
ಶೀಲವ್ರತಂಗಳೊಳುಬಾಳ್ದುಜನರೆಲ್ಲ| ಕಾಲನಜಯಿಸಲೆತ್ನಿಸಲಿ || 

******************************************************

ಸಂಕ್ಷಿಪ್ತ ಸಂಗ್ರಹ: ಸಿರಿಭೂವಲಯದ ಸುಧಾರ್ಥಿ. ದೂರವಾಣಿ: 9449946280.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: sudharthyhassan@gmail.com

Wednesday, 12 November 2014

ಸರ್ವಭಾಷಾಮಯೀಭಾಷಾ ಸಿರಿಭೂವಲಯ ಒಂದು ಪರಿಚಯ


ಆತ್ಮೀಯ ಬಂಧುಗಳೆ, ಕನ್ನಡ ಭಾಷೆ; ಸಾಹಿತ್ಯ; ಸಂಸ್ಕೃತಿಯ ವಿಚಾರದಲ್ಲಿ ನಿಮಗೆ ಸಾಕಷ್ಟು ಪರಿಚಯವಿರಬಹುದು. ಆದರೆ, ಅವುಗಳಿಗೆಲ್ಲವಕ್ಕೂ ಕಸವರದ ಕಳಶವಿಟ್ಟಂತೆ ನೀವೀಗ ಜಗತ್ತಿನ ಹತ್ತನೆಯ ಅಚ್ಚರಿಯನ್ನು ಕರ್ಣಾಟಕ ರಾಜ್ಯೋತ್ಸವದ ಸುಸಂದರ್ಭದಲ್ಲಿ ಕಾಣಲಿರುವಿರಿ!
ವಿಶ್ವಭಾಷೆಯ ಸರಪಳಿಯಲ್ಲಿ ಬರುವ ೭೧೮ ಭಾಷೆಗಳಿಗೆ ಸೇರಿದ ಸಾಹಿತ್ಯದಸಾರ, ೩೬೩ ಮತಧರ್ಮಗಳಿಗೆ ಸಂಬಂಧಿಸಿದ ವಿಚಾರಗಳು; (ಸರ್ವಧರ್ಮ ಸಮನ್ವಯ) ಇತಿಹಾಸ, ಪಶುಪಾಲನೆಯಿಂದ ಮೊದಲ್ಗೊಂಡು ಅಣುವಿಜ್ಞಾನ; ಆಕಾಶಗಮನ; ಅಂಕಗಣಿತ; ಆಯುರ್ವೇದ; ಗಣಕಯಂತ್ರಕ್ರಮ; ಜ್ಯೋತಿಷ್ಯ; ಭೌತಶಾಸ್ತ್ರ; ಲೋಹಶಾಸ್ತ್ರ; ರಸಾಯನಶಾಸ್ತ್ರ; ಸಂಗೀತಶಾಸ್ತ್ರ; ನಾಟ್ಯಶಾಸ್ತ್ರ; ದಾಂಪತ್ಯವಿಜ್ಞಾನ ಮುಂತಾದ ೬೪ ವಿಧ್ಯೆಗಳ ವಿಚಾರಗಳು ಮಾತ್ರವಲ್ಲ; ರಾಮಾಯಣ; ಭಾರತ; ಭಾಗವತ; ಭಗವದ್ಗೀತೆ; ಸಹಸ್ರನಾಮ ಮುಂತಾದ ಭಾರತದ ಪ್ರಾಚೀನ ಸಾಹಿತ್ಯವೆಲ್ಲವೂ ಕನ್ನಡದ ಒಂದೇ ಗ್ರಂಥದಲ್ಲಿ ಅಡಕವಾಗಿದೆ ಎಂದರೆ ನಂಬುತ್ತೀರಾ?
ಇಂಥ ಅದ್ಭುತವಾದ ಪ್ರಾಚೀನ ಕನ್ನಡ ಗ್ರಂಥ ಇರುವುದು ನಿಜವೇ? ಇದ್ದರೆ ಅದು ಯಾವುದು? ಅದನ್ನು ಬರೆದವನಾರು? ಯಾವ ಕಾಲದಲ್ಲಿ ಬರೆದದ್ದು? ಇದುವರೆವಿಗೂ ಅದು ಜನಪ್ರಿಯತೆಗಳಿಸದೆ ಇರುವುದೇಕೆ? ಈಗಲೂ ಅದು ಓದಲು ಲಭ್ಯವಿದೆಯೇ? ಮುಂತಾದ ಹಲವಾರು ಪ್ರಶ್ನೆಗಳು ಇಲ್ಲಿ ಹುಟ್ಟುತ್ತವೆ. ಅವುಗಳಿಗೆ ಸಮರ್ಪಕವಾದ ಉತ್ತರದ ಚಿಂತನೆಯೇ ಲೇಖನಮಾಲೆ.
ಸಿರಿಭೂವಲಯವೆಂಬ ಅಂಕಕಾವ್ಯವು ರಿಂದ ೬೪ರವರೆಗಿನ ಕನ್ನಡ ಅಂಕಿಗಳನ್ನು ಬಳಸಿ ರಚಿಸಲಾಗಿರುವ ಕಾವ್ಯವಾಗಿದೆ. ಇದರ ವ್ಯಾಪ್ತಿಯು ೧೬,೦೦೦ ಪುಟಗಳು! ಇವುಗಳನ್ನು 'ಚಕ್ರ' ಎಂದು ಕರೆಯಲಾಗುತ್ತದೆ. ಪ್ರತಿಯೊಂದು ಪುಟದಲ್ಲಿಯೂ ಸುಮಾರು ಆರು ಅಂಗುಲಗಳಷ್ಟು ಉದ್ದಗಲದ ಒಂದು ದೊಡ್ಡದಾದ ಚೌಕಾಕೃತಿ. ಅದನ್ನು ಉದ್ದಸಾಲಿನಲ್ಲಿ ೨೭; ಅಡ್ಡಸಾಲಿನಲ್ಲಿ ೨೭ ಚಿಕ್ಕಚಿಕ್ಕ ಮನೆಗಳಿರುವಂತೆ ೭೨೯ ಚೌಕಗಳಾಗಿ ರೂಪಿಸಲಾಗುತ್ತದೆ. ಇವುಗಳಲ್ಲಿ ೧ರಿಂದ ೬೪ರ ವರೆಗಿನ ಕನ್ನಡ ಅಂಕಿಗಳನ್ನು ಸೂತ್ರಬದ್ಧವಾಗಿ ತುಂಬಲಾಗಿದೆ. ಸರ್ವಭಾಷಾಮಯೀಭಾಷಾ ಕನ್ನಡವರ್ಣಮಾಲೆಯ ೬೪ ಅಕ್ಷರಗಳನ್ನು ೬೪ ಅಂಕಿಗಳಿಗೆ ಅಳವಡಿಸಿಕೊಳ್ಳಬೇಕು. ಆಗ ಗ್ರಂಥದ ಅಕ್ಷರಚಕ್ರ ದೊರೆಯುತ್ತದೆ. ಅಕ್ಷರಚಕ್ರಗಳಲ್ಲಿ ಜಗತ್ತಿನ ೭೧೮ ಭಾಷೆಗಳ ಸಾಹಿತ್ಯವು ದೊರೆಯುತ್ತದೆ. ಗ್ರಂಥವನ್ನು ಖಂಡಗಳಾಗಿ ವಿಭಾಗಿಸಲಾಗಿದೆ. ಪ್ರತಿಯೊಂದು ಖಂಡದಲ್ಲೂ ಹಲವಾರು ಅಧ್ಯಾಯಗಳಿರುತ್ತವೆ. ಅಕ್ಷರಚಕ್ರವನ್ನು ಗ್ರಂಥದಲ್ಲಿ ಸೂಚಿಸಿರುವ ಸುಮಾರು ೪೦ ಬೇರೆ ಬೇರೆ ಬಂಧಗಳಲ್ಲಿ ಜೋಡಿಸಿಕೊಂಡು ಓದಿದಾಗ, ಬೇರೆ ಭಾಷೆಗಳ ಸಾಹಿತ್ಯವು ಹುಟ್ಟುತ್ತದೆ. ಇದು ಗ್ರಂಥದ ಬಾಹ್ಯರೂಪ!

ಚಿತ್ರ:- ಒಂದು ಅಂಕ ಚಕ್ರದಿಂದ ಬಿತ್ತಿದ ಅಕ್ಷರ ಚಕ್ರದ ಪ್ರತಿ
ಹುಟ್ಟು ಸಾವಿನ ಜೀವನದ ಜಂಜಡದಿಂದ ಪಾರಾದವನು 'ಜಿನ' ಎನಿಸಿಕೊಳ್ಳುತ್ತಾನೆ. ಜಿನನಿಂದ ಜೈನ ಸಂಪ್ರದಾಯವು ಪ್ರಾರಂಭವಾಗಿದೆ. ಜೈನ ಸಂಪ್ರದಾಯಕ್ಕೆ ಸ್ಯಾದ್ವಾದ ಎಂಬ ಹೆಸರೂ ಇದೆ. 'ಸ್ಯಾದ್' ಎಂದರೆ; 'ಬಹುಷಃ' (probable) ಎಂದರ್ಥ. 'ಅದ್ವೈತ' ಸಂಪ್ರದಾಯದಲ್ಲಿ ಪರಬ್ರಹ್ಮವನ್ನು ಕುರಿತು ಹುಡುಕಾಟ ನಡೆಸುವಾಗ ಇದಲ್ಲ; ಇದಲ್ಲ; (ನೇತಿ ನೇತಿ) ಎಂಬ ಒಂದೇ ಹಾದಿಯಲ್ಲಿ ಸಾಗಬೇಕು. ಕಾರಣದಿಂದಾಗಿ ಅದ್ವೈತಸಿದ್ಧಾಂತಕ್ಕೆ ಏಕಾಂತವಾದವೆಂದೂ; 'ನೇತಿವಾದ' ಎಂದೂ ಹೆಸರಿದೆ.
ಸ್ಯಾದ್ವಾದದಲ್ಲಿ ಪರಬ್ರಹ್ಮದ ಹುಡುಕಾಟ ನಡೆಸುವಾಗ; 'ಸಾದ್' ಶಬ್ದದ ದಾರಿಗಳನ್ನು ಬಳಸಲಾಗುತ್ತದೆ. ಇದನ್ನು 'ಸಪ್ತಭಂಗಿ' ಗಳೆಂದು ಸೂಚಿಸಲಾಗುತ್ತದೆ: ಸ್ಯಾದಸ್ತಿ, ಸ್ಯಾದ್ನಾಸ್ತಿ, ಸ್ಯಾದಸ್ತಿನಾಸ್ತಿ, ಸ್ಯಾದಸ್ತಿಅವ್ಯಕ್ತಃ, ಸ್ಯಾದ್ನಾಸ್ತಿವ್ಯಕ್ತಃ, ಸ್ಯಾದಸ್ತಿನಾಸ್ತಿವ್ಯಕ್ತಃ, ಸ್ಯಾದ್ಅಸ್ತಿನಾಸ್ತಿಅವ್ಯಕ್ತಃ.
ಅದ್ವೈತ ಸಿದ್ಧಾಂತವು ಕೇವಲ ಕೆಲವೇ ಜನಗಳಿಗೆ ರುಚಿಸಿದರೆ; 'ಸ್ಯಾದ್ವಾದ' ಸಿದ್ಧಾಂತವು ಒಂದು ರೀತಿಯಲ್ಲಿ ಅನುಕೂಲಸಿಂಧು ನೀತಿಯಾಗಿರುವ ಕಾರಣದಿಂದ ಸಮಯಾನುಸಾರವಾಗಿ ಹೆಚ್ಚು ಜನಗಳ ಮೆಚ್ಚುಗೆಗಳಿಸುವುದಾಗಿದೆ. ಸಹನೆ ಹಾಗೂ ಅಹಿಂಸೆಯು ಜೈನ ಸಂಪ್ರದಾಯದ ಪ್ರಮುಖ ನೀತಿ. ೨೪ ಜನ ತೀರ್ಥಂಕರರು ಜೈನ ಸಂಪ್ರದಾಯದ ಆಧಾರ ಸ್ತಂಭವಾಗಿದ್ದಾರೆ. ಆದಿತೀರ್ಥಂಕರ ಋಷಭದೇವನು ಸ್ಯಾದ್ವಾದದ ಮೂಲಪುರುಷ ಎಂದು ತಿಳಿಯಲಾಗಿದೆ. ಜಗತ್ತಿನ ಸೃಷ್ಟಿಚಕ್ರದ ಒಂದು ಸುತ್ತಿನಲ್ಲಿ ೧೪ ಜನ ಮನುಗಳು ಅಧಿಕಾರಿಗಳಾಗಿರುತ್ತಾರೆ. ಮೊದಲನೆಯ ಮನು ಸ್ವಾಯಂಭೂ. ಇವನ ಮಗ ಪ್ರಿಯವ್ರತ. ಇವನ ಮಗ ಅಗ್ನೀಧ್ರ. ಇವನ ಮಗ ನಾಭಿರಾಜ. ಇವನ ಮಗ ಋಷಭದೇವ. ಇವನ ಮಕ್ಕಳು ಭರತ; ಬಾಹುಬಲಿ; ಬ್ರಾಹ್ಮಿ; ಸೌಂದರಿ. ಇವರುಗಳೆಲ್ಲರೂ ಬಹಳ ಪ್ರಾಚೀನ ಕಾಲದವರು. ಅವರುಗಳ ಜೀವನಾವಧಿ ಲಕ್ಷಾಂತರ ವರ್ಷಗಳು ಎಂದು ಪ್ರಾಚೀನ ಗ್ರಂಥಗಳ ಹೇಳಿಕೆ.
        ಭೂಮಂಡಲವು ಮೊದಲು ಅರ್ಧಭಾಗ ಸಮುದ್ರ ಹಾಗೂ ಉಳಿದರ್ಧ ಭೂಭಾಗದಿಂದ ಕೂಡಿ ಅಖಂಡಭೂಮಂಡಲ ಎಂದು ಹೆಸರಾಗಿತ್ತು. ಪ್ರಿಯವ್ರತನು ಅಖಂಡಭೂಮಂಡಲಕ್ಕೆ ಅಧಿಪತಿಯಾಗಿದ್ದನು. ಮೇರುಪರ್ವತದ ಒಂದು ಪಾರ್ಶ್ವದಲ್ಲಿ ಸೂರ್ಯನ ಬೆಳಕೇ ಕಾಣಿಸದೆಂಬ ದೂರನ್ನು ಪರಿಶೀಲಿಸಲು ಈತನು ತನ್ನ ರಥವೇರಿ ಸೂರ್ಯನ ಚಲನೆಯ ಹಾದಿಯಲ್ಲೇ ಸಾಗಿದನಂತೆ. ಇವನ ರಥದ ಚಕ್ರಗಳು ಉರುಳಿದ ಜಾಡಿನಲ್ಲಿ ಸಮುದ್ರದ ನೀರು ನುಗ್ಗಿ, ಅಖಂಡಭೂಮಂಡಲವು ದ್ವೀಪಗಳಾಗಿ ಮಾರ್ಪಟ್ಟಿತೆಂದು ಪ್ರಾಚೀನ ಗ್ರಂಥಗಳ ಹೇಳಿಕೆ. ಮಹಾನ್ ಸಮ್ರಾಟನಾಗಿದ್ದ ಋಷಭದೇವನು ವೈರಾಗ್ಯ ವಶನಾಗಿ ಕಾಡಿಗೆ ತೆರಳಿ; ದಿಗಂಬರನಾಗಿ ಸಂಚರಿಸಿ, ಯೋಗಸಮಾಧಿಯಲ್ಲಿ ನಿಂತು ಸಕಲ ಜೀವಸಂಕುಲಕ್ಕೂ ಜೀವನದ ಸನ್ಮಾರ್ಗ ಸೂಚಿಸುವ 'ದಿವ್ಯಧ್ವನಿ' ಯನ್ನು ಉಪದೇಶಿಸಿದನು. ಇವೆಲ್ಲವೂ ಕೋಟ್ಯಂತರ ವರ್ಷಗಳ ಪ್ರಾಕ್ಚಾರಿತ್ರ ಕಾಲದ ಸಂಗತಿಗಳು. ಋಷಭದೇವನಾದ ಮೇಲೆ ೨೩ ಜನ ತೀರ್ಥಂಕರರು ಜೈನ ಸಂಪ್ರದಾಯವನ್ನು ಮುನ್ನಡೆಸಿ ಆಧಾರ ಸ್ತಂಭವಾಗಿದ್ದಾರೆ.
        ಆದಿತೀರ್ಥಂಕರ ಋಷಭದೇವನಿಂದ ಆರಂಭಿಸಿ; ತನ್ನ ಗುರು ವೀರಸೇನಾಚಾರ್ಯನವರೆವಿಗೂ ಹರಿದು ಬಂದ ಸ್ಯಾದ್ವಾದದ ಜ್ಞಾನ ಗಂಗೆಯನ್ನು ಸಂಗ್ರಹಿಸಿ ಕುಮುದೇಂದು ಮುನಿಯು ರಚಿಸಿದ ಒಂದು ಮಹೋನ್ನತ ಸಾಹಿತ್ಯಕೃತಿ 'ಸರ್ವಭಾಷಾಮಯೀಭಾಷಾ ಸಿರಿಭೂವಲಯ'. ಜಗತ್ತಿನಲ್ಲಿ ಪ್ರತಿಯೊಂದೂ ಗಣಿತಾತ್ಮಕವಾಗಿ ರಚನೆಯಾಗಿವೆ; ಯಾವುದೂ ಆಕಸ್ಮಿಕವಾಗಿ ಸೃಷ್ಟಿಯಾಗಿಲ್ಲ, ಜೀವನದಲ್ಲಿ ಕಾಣಬರುವ ಸುಖ-ದುಃಖ; ಲಾಭ-ನಷ್ಟ; ಸತ್ಯ-ಮಿಥ್ಯ; ಒಳಿತು-ಕೆಡಕು; ಹಗಲು-ರಾತ್ರಿ; ಪಾಪ-ಪುಣ್ಯ ಇತ್ಯಾದಿ ದ್ವಂದ್ವಗಳೆಲ್ಲವೂ ಸಮವಾಗಿವೆ; ಇವುಗಳು ಎಲ್ಲರಿಗೂ ಸಮಪಾಲು, ಜಗತ್ತಿನ ಮಾನವ ಕುಲಕ್ಕೆಲ್ಲ ಒಂದೇ ಧರ್ಮ; ಅದು ಮಾನವಧರ್ಮ ಎಂಬ ಮೂಲಭೂತ ಸಂಗತಿಗಳನ್ನು ಸಿರಿಭೂವಲಯವು ಪ್ರತಿಪಾದಿಸುತ್ತದೆ.
        ಭರತಖಂಡದ ಒಂದು ವಿಸ್ತಾರವಾದ ಭೂಭಾಗ ಕರ್ಣಾಟಕ. ಕ್ರಿ.. ೮೦೦ರರ ಸುಮಾರಿನಲ್ಲಿ ಕರ್ಣಾಟಕ ಸಾಮ್ರಾಜ್ಯದ ನೂತನ ರಾಜಧಾನಿಯಾಗಿ ನಿರ್ಮಾಣವಾದ ಮಾನ್ಯಖೇಟದ ಅರಸು ಅಮೋಘವರ್ಷನಿಗೆ ಗುರುವಾಗಿದ್ದನು ಕುಮುದೇಂದುವೆಂಬ ಜೈನ ಯತಿ. ಇವರನ್ನು ಮಾರ್ಜಾಲ ಸನ್ಯಾಸಿಗಳೆಂದು ಕರೆಯುತ್ತಾರೆ. ಅಂದರೆ ಬೆಕ್ಕಿನಂತೆ ನಿಷ್ಕಲ್ಮಷ ಮನಸ್ಸುಳ್ಳವರು ಎಂದರ್ಥ. ಜೈನ ಸಂಪ್ರದಾಯದಲ್ಲಿ ಈಗ ದಿಗಂಬರ ಹಾಗೂ ಶ್ವೇತಾಂಬರವೆಂಬ ಪಂಗಡಗಳಿವೆ. ಹಿಂದೆ ಹಲವಾರು ಉಪಪಂಗಡಗಳಿದ್ದವು. ಅವುಗಳ ಪೈಕಿ 'ಯಾಪನೀಯ' ಎಂಬುದೂ ಒಂದು ಪಂಗಡ. ದಿಗಂಬರ ಸಂಪ್ರದಾಯದ ಜೈನರು ಯಾಪನೀಯರನ್ನು ಜೈನರೆಂದು ಮಾನ್ಯಮಾಡಿರಲಿಲ್ಲ. ಕುಮುದೇಂದುವು ಯಾಪನೀಯ ಜೈನ ಸಂಪ್ರದಾಯದವನು. ಸಂಪ್ರದಾಯದವರು ಬಹಳ ಉದಾರ ವಾದಿಗಳಾಗಿದ್ದವರು. ಸನಾತನ ಸಂಸ್ಕೃತಿಯ ವೇದೋಪನಿಷತ್ತುಗಳೂ ಇವರಿಗೆ ಮಾನ್ಯವಾಗಿದ್ದವು. ಇವರು ಸರ್ವಧರ್ಮ ಸಮನ್ವಯಿಗಳು.
        ಅಂದಿನ ಜೈನ ಸಂಪ್ರದಾಯದವರು ಯಾಪನೀಯರನ್ನು ಜೈನರೆಂದು ಮಾನ್ಯ ಮಾಡಲಿಲ್ಲ. ಕಾರಣದಿಂದಾಗಿ ಜೈನರಿಗೆ ಪರಮ ಪೂಜ್ಯವಾದ ಪಂಚಧವಳಗಳ ವಿಚಾರವು ಸಿರಿಭೂವಲಯದಲ್ಲಿ ಅಡಕವಾಗಿದ್ದರೂ ಜೈನರು ಕುಮುದೇಂದುವಿನ ಕಾವ್ಯವನ್ನು ಮಾನ್ಯ ಮಾಡಲಿಲ್ಲ! ಹಿಂದಿದ್ದ ಪರಿಸರವೇ ಇಂದಿಗೂ ಮುಂದುವರೆದಿದೆ!! ಜೈನ ಸಂಪ್ರದಾಯದವರಿಗೆ ವೇದೋಪನಿಷತ್ತುಗಳ ವಿಚಾರವು ಏನು ತಿಳಿದೀತು? ಎಂಬ ಉಪೇಕ್ಷೆಯಿಂದ ಸನಾತನ ಸಂಪ್ರದಾಯದವರು ಕುಮುದೇಂದುವಿನ ಕಾವ್ಯವನ್ನು ಕಡೆಗಣಿಸಿದರು!! ಹೀಗಾಗಿ ಕನ್ನಡದ ಅನರ್ಘ್ಯರತ್ನ ಎನಿಸಿದ 'ಸಿರಿಭೂವಲಯ'ವು ಕಳೆದ ಶತಮಾನದ ಕೊನೆಯವರೆವಿಗೂ ಹೆಚ್ಚು ಪ್ರಚಾರವಿಲ್ಲದೇ ಉಳಿದು ಬಂದಿರುವುದಂತೂ ಸತ್ಯಸಂಗತಿಯಾಗಿದೆ! ಇದುವರೆವಿಗೂ ಯಾರೊಬ್ಬ ಸಾಹಿತ್ಯಚರಿತ್ರೆ ಕಾರನಾಗಲೀ; ಕವಿಚರಿತ್ರೆಕಾರನಾಗಲೀ ಸಿರಿಭೂವಲಯದ ಅಥವಾ ಕುಮುದೇಂದುವಿನ ಹೆಸರನ್ನು ತನ್ನ ಬರಹದಲ್ಲಿ ಸೂಚಿಸುವ ಜೌದಾರ್ಯ ತೋರಿಸಿಲ್ಲ!
        ಸಿರಿಭೂವಲಯದ ಮೂಲವನ್ನು ಹುಡುಕುತ್ತ ಹೋದರೆ, ನಮ್ಮ ಇತಿಹಾಸದ ಪುಟಗಳಲ್ಲಿ ಕಾಣಲಾಗದಷ್ಟು ಪ್ರಾಚೀನ ಕಾಲಾವಧಿಗೆ ತಲುಪಬೇಕಾಗುತ್ತದೆ! ಜೈನ ಸಂಪ್ರದಾಯದಲ್ಲಿ ಪರಮಪೂಜ್ಯರಾದ ೨೪ ಜನ ತೀರ್ಥಂಕರರ ಪರಂಪರೆಯು ಗ್ರಂಥದ ಮೂಲ. ಇದು ಜಗತ್ತಿನಲ್ಲಿ ಉಪಲಬ್ಧವಿರುವ ಅತ್ಯಂತ ಪ್ರಾಚೀನ ಗ್ರಂಥಗಳಲ್ಲಿ ಒಂದೆನಿಸಿದೆ. ಇದು ಕೇವಲ ಕನ್ನಡಿಗರಿಗೆ ಅಥವಾ ಭಾರತೀಯರಿಗೆ ಮಾತ್ರ ಸಂಬಂಧಿಸಿದ ಸಾಹಿತ್ಯವಾಗದೇ ವಿಶ್ವದ ಸಮಸ್ತ ಮಾನವಕುಲಕ್ಕೆ ಸೇರಿದ ಅಮೂಲ್ಯ ಜ್ಞಾನನಿಧಿಯಾಗಿದೆ.
        ಆದಿತೀರ್ಥಂಕರ ಋಷಭದೇವನು ಬ್ರಾಹ್ಮಿ ಮತ್ತು ಸುಂದರಿ ಎಂಬ ಹೆಸರಿನ ತನ್ನ ಕುವರಿಯರಿಬ್ಬರಿಗೆ ತಿಳಿಸಿಕೊಟ್ಟ ಕನ್ನಡದ ೬೪ ಮೂಲಾಕ್ಷರಗಳ ವರ್ಣಮಾಲೆ ಹಾಗೂ ಸೊನ್ನೆಯಿಂದ ಹುಟ್ಟಿದ ರಿಂದ ವರೆಗಿನ ಹತ್ತು ಅಂಕಿಗಳೇ ಮುಂದೆ ಬ್ರಾಹ್ಮಿ, ಸೌಂದರಿ ಹೆಸರಿನ ಲಿಪಿಯೆಂದು ಪ್ರಸಿದ್ಧವಾದವು. ಲಭ್ಯವಿರುವ ಸಾಹಿತ್ಯಕ ಮಾಹಿತಿಗಳ ಆಧಾರದಲ್ಲಿ ಲೆಕ್ಕಹಾಕಿದರೆ, ಇದು ಕೋಟ್ಯಂತರ ವರ್ಷಗಳ ಹಿಂದಿನ ಇತಿಹಾಸವಾಗುತ್ತದೆ! ಕನ್ನಡದ ಹುಟ್ಟು ಹಾಗೂ ಬೆಳವಣಿಗೆ ಇಷ್ಟು ಪ್ರಾಚೀನತೆ ಹೊಂದಿದೆ ಎಂಬುದು ಸತ್ಯಸಂಗತಿ. ಇಷ್ಟೊಂದು ಪ್ರಾಚೀನವಾದ ಐತಿಹಾಸಿಕ ದಾಖಲೆಗಳು ಯಾವುದೂ ಇಲ್ಲವೆಂದು ಇಂದಿನ ವಿದ್ವಾಂಸರ ದೃಢನಂಬಿಕೆ!
        ಸುಮಾರು ೧೫೦೦ ವರ್ಷಗಳ ಹಿಂದೆ ಕನ್ನಡಭಾಷೆಯು ಲಿಪಿಬದ್ಧವಾಗಿರಲಿಲ್ಲವೆಂದೇ ಕನ್ನಡ ವಿದ್ವಾಂಸರು (ವಿಧ್ವಂಸಕರು) ನಿರ್ಧರಿಸಿದ್ದರು. ಈಗ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನದ ಗೊಂದಲ ಉಂಟಾದಾಗ, ಕನ್ನಡ ಭಾಷೆಗೆ ೨೦೦೦ ವರ್ಷಗಳ ಶಿಲಾಶಾಸನಗಳ ಇತಿಹಾಸದ ಆಧಾರವಿದೆ ಎಂದು ತಿದ್ದುಪಡಿ ಮಾಡಿದ್ದಾರೆ! ಆದರೆ, ಕನ್ನಡ ಭಾಷೆಗೆ ಕೋಟ್ಯಂತರ ವರ್ಷಗಳ ಪರಂಪರೆ ಇದೆ ಎಂಬುದಕ್ಕೆ ಕುಮುದೇಂದು ಮುನಿಯ ಸಿರಿಭೂವಲಯವು ಜೀವಂತಸಾಕ್ಷಿಯಾಗಿ ಉಳಿದಿದೆ! ಇದನ್ನು ಒಪ್ಪಿಕೊಳ್ಳುವ ಆತ್ಮಸಾಕ್ಷಿ ನಮ್ಮಲ್ಲಿರಬೇಕು! ಅದನ್ನೀಗ ಹುಡುಕಬೇಕಿದೆ! ವಿಚಾರವನ್ನು ನಮ್ಮ ವಿದ್ವಾಂಸರು ಇನ್ನೂ ಗಮನಿಸಬೇಕಾಗಿದೆ!
        ಆದಿ ತೀರ್ಥಂಕರ ಋಷಭದೇವನು ಸುಂದರಿಗೆ ಬೋಧಿಸಿದ ಕೇವಲಜ್ಞಾನವನ್ನು ಗ್ರಹಿಸಿದ ಬಾಹುಬಲಿಯು ಮುಂದೆ ಗೊಮ್ಮಟನೆನಿಸುತ್ತಾನೆ. ಪಶು ಪಕ್ಷಿ ಸಹಿತವಾದ ಸಕಲ ಜೀವರಾಶಿಗಳಿಗೂ ಅರ್ಥವಾಗುವಂತೆ ತಿಳಿಯ ಹೇಳಿದ ಕೇವಲಜ್ಞಾನವೇ 'ದಿವ್ಯಧ್ವನಿ' ಎನಿಸಿ, ಪ್ರತಿಯೊಬ್ಬ ತೀರ್ಥಂಕರನ ಗಣಧರರ ಮೂಲಕ ಮುಂದಿನ ತೀರ್ಥಂಕರರಿಗೆ ತಲುಪಿ, ೨೨ನೇ ತೀರ್ಥಂಕರನಾದ ನೇಮಿಯವರೆವಿಗೂ ಇದು ಹರಿದು ಬಂದಿತು. ಬಹಳ ಪ್ರಾಚೀನಕಾಲದ ತೀರ್ಥಂಕರರ ಜೀವನಾವಧಿಯು ಲಕ್ಷಾಂತರ ವರ್ಷಗಳ ಅವಧಿ ಎಂಬುದು ಪ್ರಾಚೀನ ಜೈನಗ್ರಂಥಗಳ ಹೇಳಿಕೆಯಾಗಿದೆ.
        ೨೨ನೇ ತೀರ್ಥಂಕರ ನೇಮಿಯಿಂದ ದಿವ್ಯವಾಣಿಯು ಶ್ರೀಕೃಷ್ಣನಿಗೆ ಉಪದೇಶವಾಯಿತು. ಕೃಷ್ಣನು ಇದನ್ನು ವ್ಯಾಸಮಹರ್ಷಿಗೆ ತಿಳಿಸಿಕೊಟ್ಟ. ವ್ಯಾಸರು ತಮ್ಮ ಜಯಕಾವ್ಯದಲ್ಲಿ ಇದನ್ನೇ ೧೬೨ ಶ್ಲೋಕಗಳ ಭಗವದ್ಗೀತೆಯಾಗಿ ನಿರೂಪಿಸಿದರು. ಯುದ್ಧವಿಮುಖನಾಗಲಿದ್ದ ಪಾರ್ಥನಿಗೂ ಶ್ರೀಕೃಷ್ಣನು ಗೀತೋಪದೇಶ ರೂಪದಲ್ಲಿ ದಿವ್ಯವಾಣಿಯನ್ನು ಉಪದೇಶಿಸಿದ. ಮುಂದೆ ೨೩ನೇ ತೀರ್ಥಂಕರ ಪಾರ್ಶ್ವನಾಥನ ಶಿಷ್ಯನಾದ ಗೌತಮನು ಬುದ್ಧನಾಗಿ ಬೌದ್ಧಮತವನ್ನು ಸ್ಥಾಪಿಸಿದ (ಕ್ರಿ.ಪೂ. ೪೫೦ ಸುಮಾರು). ೨೪ನೇ ತೀರ್ಥಂಕರ ಮಹಾವೀರ. ಇವನಿಂದ ದೇವವಾಣಿಯು ಅವನ ಗಣಧರ ಗೌತಮನಿಗೆ ಉಪದೇಶವಾಯಿತು. ಇದನ್ನು ಗೌತಮನು ಪೂರ್ವೇಕಾವ್ಯವೆಂಬ ಹೆಸರಿನಿಂದ ಗ್ರಂಥಸ್ಥಗೊಳಿಸಿದ (ಕ್ರಿ.ಪೂ.೨೦೧). ಇದು ಶ್ರೇಣಿಕನೆಂಬ ರಾಜನಿಗೆ ಉಪದೇಶವಾಯಿತು (ಕ್ರಿ.ಪೂ.೧೩೦). ಇದನ್ನೇ ಪ್ರಭಾವಸೇನನೆಂಬ ಗುರುವು ಕನ್ನಡ, ಸಂಸ್ಕೃತ, ಪ್ರಾಕೃತ ಪ್ರಧಾನವಾಗಿ 'ಮಂಗಳಪಾಹುಡ' ಎಂಬ ಹೆಸರಿನಿಂದ ಗ್ರಂಥಸ್ಥಗೊಳಿಸಿದ. (ಕ್ರಿ.ಪೂ.೫೦) ಭೂತಬಲಿಯು ಇದನ್ನು 'ಭೂವಲಯ' ಎಂಬ ಹೆಸರಿನಿಂದ ನಿರೂಪಿಸಿದನು. (ಕ್ರಿ..೪೦೦) ಖಂಡಗಳಾಗಿ ರೂಪುಗೊಂಡಿದ್ದ ದೇವವಾಣಿಗೆ ವೀರಸೇನನು ವ್ಯಾಖ್ಯಾನ ರಚಿಸಿದನು. (ಕ್ರಿ..೭೮೦) ೨೪ನೇ ತೀರ್ಥಂಕರ ಮಹಾವೀರನು ನಿರ್ವಾಣ ಹೊಂದಿದ ,೫೦೦ ವರ್ಷಗಳ ನಂತರ ಕುಮುದೇಂದು ಮುನಿಯು ನೂತನ-ಪ್ರಾಕ್ತನ ಎಂಬ ಎರಡು ಕ್ರಮಗಳಲ್ಲಿದ್ದ ಭಗವದ್ವಾಣಿಯನ್ನು ಕನ್ನಡ ಅಂಕಿಗಳಲ್ಲಿ ನವಮಾಂಕ ಗಣಿತ ಪದ್ಧತಿಯಲ್ಲಿ 'ಸರ್ವಭಾಷಮಯೀಭಾಷಾ ಸಿರಿಭೂವಲಯ' ಎಂಬ ಹೆಸರಿನ ಬಹುಭಾಷಾ ಸಾಂಗತ್ಯ ಕಾವ್ಯವಾಗಿ ನಿರೂಪಿಸಿದನು. (ಕ್ರಿ..೮೦೦) ಮುಂದೆ ಸೇನಗಣದಲ್ಲಿ ದಂಡಾಧೀಶನೊಬ್ಬನ ಪತ್ನಿಯಾಗಿದ್ದ ಮಲ್ಲಿಕಬ್ಬೆಯು ಸಿರಿಭೂವಲಯ ಗ್ರಂಥವನ್ನು ಕೋರಿಕಾಗದದಲ್ಲಿ ಪ್ರತಿಮಾಡಿಸಿ; ತನ್ನ ಗುರು ಮಾಘಣನಂದಿ ಎಂಬುವವನಿಗೆ ಶಾಸ್ತ್ರದಾನ ಮಾಡಿದಳು.
        ಪ್ರತಿಗಳ ಪೈಕಿ ಒಂದು ಪ್ರತಿಯು ದೊಡ್ಡಬೆಲೆ ಎಂಬ ಗ್ರಾಮದಲ್ಲಿ ನೆಲೆಸಿದ್ದ ಧರಣೇಂದ್ರ ಪಂಡಿತರೆಂಬುವವರಲ್ಲಿ ವಂಶಪರಂಪರ್ಯವಾಗಿ ಉಳಿದುಬಂದಿತ್ತು. ಸಿರಿಭೂವಲಯ ಗ್ರಂಥದ ಅಧ್ಯಯನದಿಂದ ಮಹಾನ್ ಮೇಧಾವಿಯೂ; ಬಹಳ ಜನಾನುರಾಗಿಯೂ ಆಗಿದ್ದ ಧರಣೇಂದ್ರ ಪಂಡಿತರೂ, ಅವರ ಮಿತ್ರ ಚಂದಾಪಂಡಿತರೂ ಅಂಕಕಾವ್ಯವನ್ನು ಅಕ್ಷರಗಳಿಗೆ ಪರಿವರ್ತಿಸುವ ಅಗತ್ಯವೂ ಇಲ್ಲದೇ ಅಂಕಿಗಳಲ್ಲೇ ಓದಿ, ವ್ಯಾಖ್ಯಾನ ಮಾಡುತ್ತಿದ್ದರಂತೆ! ಇದು ಕಳೆದ ಶತಮಾನದ ಅಂತ್ಯದಲ್ಲಿದ್ದ ಅವರ ಪಾಂಡಿತ್ಯದ ಪರಿಧಿಯಾಗಿತ್ತು! ೧೯೧೩ರರ ಸುಮಾರಿನಲ್ಲಿ ಧರಣೇಂದ್ರ ಪಂಡಿತರು ಕಾಲವಶರಾದ ನಂತರ; ಜ್ಞಾನಸಂಪತ್ತು ಸರಿಯಾದ ವಾರಸುದಾರರಿಲ್ಲದೇ ಅನಾಥವಾಯಿತು. ಮುಂದೆ ಇವರ ದೂರದ ಸಂಬಂಧಿಯೂ ಬೆಂಗಳೂರಿನಲ್ಲಿ ಆಯುರ್ವೇದ ಔಷಧದ ಮಾರಾಟದ ಪ್ರತಿನಿಧಿಯೂ ಆಗಿದ್ದ ಎಲ್ಲಪ್ಪಶಸ್ತ್ರಿ ಎಂಬುವವರು ಸಿರಿಭೂವಲಯವನ್ನು ತಮ್ಮ ಪತ್ನಿಯ ಮೂಲಕ ಪಡೆದರು. ಗ್ರಂಥದಲ್ಲಿ ಚಿನ್ನ ತಯಾರಿಸುವ ರಸಶಾಸ್ತ್ರದ ವಿವರವಿದೆ ಎಂಬುದೇ ಇವರಿಗೆ ಪ್ರಮುಖ ಆಕರ್ಷಣೆಯಾಗಿತ್ತು!
        ಆದರೆ ಅಂಕ ಕಾವ್ಯವನ್ನು ಓದಿ ತಿಳಿಯುವ ಸಾಮರ್ಥ್ಯವು ಶಾಸ್ತ್ರಿಗಳಿಗೆ ಇರಲಿಲ್ಲ. ೧೯೨೮ ಸುಮಾರಿನಲ್ಲಿ ಶಾಸ್ತ್ರಿಗಳಿಗೆ ಕರ್ಲಮಂಗಲಂ ಶ್ರೀಕಂಠಯ್ಯನೆಂಬ ಬಹುಭಾಷಾ ವಿಶಾರದರೊಬ್ಬರ ಪರಿಚಯವಾಯಿತು. ಇದೇ ಸನ್ನಿವೇಶದಲ್ಲಿ ಕನ್ನಡ ಶ್ರೀಘ್ರಲಿಪಿ ರೂಪಿಸಿದ್ದ ಕೆ. ಅನಂತಸುಬ್ಬರಾಯರು ನೀಡಿದ ಸುಳಿವಿನ ಮೇರೆಗೆ ಇದೊಂದು ಪ್ರಾಚೀನ ಕನ್ನಡ ಕಾವ್ಯವಿರಬೇಕು ಎಂಬ ನಿರ್ಧಾರವಾಯಿತು. ಕನ್ನಡ ಭಾಷೆಯ ಮೇಲಿನ ಅನನ್ಯವಾದ ಅಭಿಮಾನದಿಂದ ಕರ್ಲಮಂಗಲಂ ಶ್ರೀಕಂಠಯ್ಯನವರು ಸಿರಿಭೂವಲಯ ಗ್ರಂಥದ ೬೪ ಅಂಕಿಗಳಿಗೆ ಅನ್ವಯವಾಗುವ ೬೪ ಅಕ್ಷರಗಳ ವರ್ಣಮಾಲೆಯನ್ನು ಅನ್ವೇಷಿಸಲು ತಮ್ಮ ಜೀವನವನ್ನು ಮುಡುಪಾಗಿರಿಸಿದರು. ಯಾವುದೇ ಗೊತ್ತುಗುರಿಯಿರದೇ ಕನ್ನಡ; ಸಂಸ್ಕೃತ; ಪ್ರಾಕೃತ ಭಾಷೆಗಳ ಪ್ರಾಚೀನ ಗ್ರಂಥಗಳಲ್ಲಿ ಹುಡುಕಾಟ ನಡೆಸಿದರು!
        ವರ್ಷಗಟ್ಟಲೆ ನಡೆಸಿದ ಪ್ರಯತ್ನದ ಫಲವಾಗಿ ೬೪ ಮೂಲಾಕ್ಷರಗಳ ಸರ್ವಭಾಷಾಮಯೀಭಾಷಾ ಕನ್ನಡ ವರ್ಣಮಾಲೆಯ ಸಾಕ್ಷಾತ್ಕಾರವಾಯಿತು! ಸತತವಾದ ತಪಸ್ಸಿನ ರೂಪದ ಪ್ರಯತ್ನದಿಂದಾಗಿ ಅಂಕಿಗಳ ಕಾವ್ಯವು ಅಕ್ಷರಗಳ ರೂಪವನ್ನು ಪಡೆದು; ಸಾಂಗತ್ಯ ಪದ್ಯಗಳಾಗಿ ಪರಿವರ್ತನೆ ಹೊಂದಿ ಕನ್ನಡ ನಾಡಿನ ಕೆಲವಾರು ವಿದ್ವಾಂಸರ ಗಮನ ಸೆಳೆಯಿತು. ಹಲವಾರು ಅಧ್ಯಾಯಗಳನ್ನೊಳಗೊಂಡ ಖಂಡಗಳ ವ್ಯಾಪ್ತಿಯ ಕಾವ್ಯದಲ್ಲಿ ಸುಮಾರು ಲಕ್ಷ ಮೂಲ ಕನ್ನಡ ಪದ್ಯಗಳಿವೆ. ಅವುಗಳಲ್ಲಿ ಅಕ್ಷರಕ್ಕೆ ಲಕ್ಷದಂತೆ ಅಂತರ್ಸಾಹಿತ್ಯವಾಗಿ ೭೧೮ ಭಾಷೆಗಳಿಗೆ ಸೇರಿದ ಅಮೂಲ್ಯವೂ ಅಗಾಧವೂ ಆದ ಸಾಹಿತ್ಯರಾಶಿಯು ಕಾವ್ಯದಲ್ಲಿ ಅಡಗಿರುವ ಸಂಗತಿಯು ಜಗಜ್ಜಾಹಿರಾಯಿತು.
        ಮಂತ್ರದ್ರಷ್ಟಾರರೆಂದು ಪ್ರಸಿದ್ಧಿ ಪಡೆದಿದ್ದ ಮಹರ್ಷಿ ದೇವರಾತರ ಆಸಕ್ತಿಯಿಂದಾಗಿ, ರಾಷ್ಟ್ರಪತಿ ಡಾ|| ರಾಜೇಂದ್ರ ಪ್ರಸಾದರ ಆಣತಿಯ ಮೇರೆಗೆ ಅಚ್ಚರಿಯ ವಿಶ್ವಕಾವ್ಯದ ಕೆಲವು ಭಾಗವು ಭಾರತ ಸರ್ಕಾರದ ಪ್ರಾಚ್ಯಪತ್ರಾಗಾರ ಇಲಾಖೆಯಲ್ಲಿ ಮೈಕ್ರೋಫಿಲಂ ರೂಪದಲ್ಲಿ ಸಂರಕ್ಷಿಸಲ್ಪಟ್ಟಿತು. ೧೯೫೩ರರ ನಂತರ ಒಟ್ಟು ೧೭೦ ಪುಟಗಳ ವ್ಯಾಪ್ತಿಯಲ್ಲಿ ಎರಡು ಸಂಪುಟಗಳಾಗಿ ಅಚ್ಚರಿಯ ಗ್ರಂಥವು ಮುದ್ರಣವಾಗಿ ಪ್ರಕಟವಾಯಿತು. ಯಾವುದೇ ವಿಶ್ವವಿದ್ಯಾಲಯದ ಪದವಿ ಪಡೆಯದೆ, ಇಂಥ ಅದ್ಭುತ ಗ್ರಂಥದ ಸಂಶೋಧನೆ ಮಾಡಿ, ಜಗತ್ತಿನಾದ್ಯಂತ ಪ್ರಚಾರ; ಪ್ರಸಿದ್ಧಿ ಪಡೆದ ಕರ್ಲಮಂಗಲಂ ಶ್ರೀಕಂಠಯ್ಯನವರ ವಿರುದ್ಧ ಅಂದಿನ ವಿದ್ಯಾವಂತ ವಿದ್ವಾಂಸರು ಕೆಂಗಣ್ಣು ಹಾಯಿಸಿದರು. ಸಿರಿಭೂವಲಯವು ಪ್ರಾಚೀನ ಗ್ರಂಥವಲ್ಲ ಎಂಬ ವಿವಾದ ಹುಟ್ಟುಹಾಕಿದರು!
        ಅಸೂಯಾಗ್ರಸ್ಥ ವಿದ್ವಾಂಸರು ಸೃಷ್ಟಿಸಿದ ಇಂಥ ಗೊಂದಲದ ಪರಿಶೀಲನೆಗೆ ಹಾಗೂ ನಿವಾರಣೆಗಾಗಿ ಸುಪ್ರಸಿದ್ಧ ಇತಿಹಾಸ ಪ್ರಾಧ್ಯಾಪದ ಡಾ|| ಎಸ್. ಶ್ರೀಕಂಠಶಾಸ್ತ್ರಿಯವರು ಪ್ರಕಟಿತ ಗ್ರಂಥದ ಸಮರ್ಪಕವಾದ ಅಧ್ಯಯನ ಮಾಡಿ, ಸಿರಿಭೂವಲಯದ ಹಾಗೂ ಸಂಶೋಧಕ ಶ್ರೀಕಂಠಯ್ಯನವರ ಮಹೋನ್ನತಿಯನ್ನು ಎತ್ತಿಹಿಡಿದು; ಹಲವಾರು ಸಂಶೋಧನಾ ಲೇಖನಗಳನ್ನು ಬರೆದರು. ' ಅಚ್ಚರಿಯ ಲೋಕಸಾಹಿತ್ಯವು ಸಮಗ್ರವಾಗಿ ಮುದ್ರಣಗೊಂಡು; ಅಲ್ಲಿನ ಮಾಹಿತಿಗಳ ಆಧಾರದಲ್ಲಿ ಸಂಶೋಧನೆಯ ಪ್ರಯತ್ನವು ಆಧಾರ ರಹಿತವೆಂದು ಖಚಿತವಾಗಿ ಸ್ಪಷ್ಟವಾಗುವವರೆವಿಗೂ ಪ್ರಯತ್ನವನ್ನು ಅಲ್ಲಗಳೆಯಲು ಸಾಧ್ಯವಿಲ್ಲ' ಎಂದು ದೃಢೀಕರಿಸಿದ್ದಾರೆ!
        ಇವೆಲ್ಲ ಗೊಂದಲಗಳೂ ಮುಗಿದು ಸುಮಾರು ೬೦ ವರ್ಷಗಳು ಕಳೆದುಹೋದರೂ, ನಮ್ಮ ಕನ್ನಡ ವಿದ್ವಾಂಸರ ಲೋಕವು ಗ್ರಂಥಕ್ಕೆ ಸಂಬಂಧಿಸಿದ ಸತ್ಯ ಸಂಗತಿಗಳನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳುವ ಸೌಜನ್ಯ ತೋರಿಸಿಲ್ಲ! ಕವಿಯ ಜನ್ಮಸ್ಥಳ; ತಂದೆ-ತಾಯಿ, ಗುರುಗಳು ಮುಂತಾದವು ಖಚಿತ ಪಡಬೇಕು; 'ಸಾಂಗತ್ಯ' ಛಂದಸ್ಸಿನ ಕಾಲ, ಬಳಸಿರುವ ಭಾಷೆಯ ಸ್ವರೂಪ ಅದು-ಇದು ಎಂದು ಇಲ್ಲಸಲ್ಲದ ಅಸಂಬದ್ಧ ನೆಪಗಳನ್ನು ಮುಂದಿರಿಸುತ್ತ ಕನ್ನಡಭಾಷೆಯ ಮಹತ್ವವನ್ನೂ ಮುನ್ನಡೆಯನ್ನೂ ಯಶಸ್ವಿಯಾಗಿ ಕುಂಠಿತಗೊಳಿಸಿರುವುದು ಒಂದು ಚಾರಿತ್ರಿಕ ಸತ್ಯಸಂಗತಿಯಾಗಿದೆ.
        ಸಿರಿಭೂವಲಯದ ಅಂಕಚಕ್ರಗಳಿಗೆ ೬೪ ಅಕ್ಷರಗಳ ವರ್ಣಮಾಲೆಯನ್ನು ಹುಡುಕುವ ಕಾರ್ಯವು ಕರ್ಲಮಂಗಲಂ ಶ್ರೀಕಂಠಯ್ಯನವರಿಗೆ ಬಹಳ ಜಟಿಲವಾದ ಕಾರ್ಯವಾಗಿತ್ತು. ಕೇಶೀರಾಜನ ಸುಪ್ರಸಿದ್ಧ ಶಬ್ದಮಣಿದರ್ಪಣವಾಗಲೀ; ನಾಗವರ್ಮನ ಕಾವ್ಯಾವಲೋಕನವಾಗಲೀ; ನೃಪತುಂಗನ ಕಾಲದಲ್ಲಿ ರಚನೆಯಾದ ಕವಿರಾಜಮಾರ್ಗವಾಗಲೀ ಉಪಯೋಗಕ್ಕೆ ಬರಲಿಲ್ಲ. ಕುಂದಕುಂದನ ಕಾಷಾಯಪಾಹುಡ; ತುಂಬುಲೂರಾಚಾರ್ಯನ ಚೂಡಾಮಣಿ; ಅಕಳಂಕನ ತತ್ವಾರ್ಥರಾಜವಾರ್ತಿಕ; ಕುಮಾರಸೇನನ (ಯತಿವೃಷಭ) ತಿಲೋಯಪಣ್ಣತ್ತಿ ಮತ್ತು ಚೂಡಾಮಣಿ; ಸಮಂತಭದ್ರನ ಗಂಧಹಸ್ತಿಮಹಾಭಾಷ್ಯ; ವೀರಸೇನನ ಧವಳಟೀಕಾ; ಜಿನಸೇನನ ಮಹಾಪುರಾಣ; ಚಾವುಂಡರಾಯನ ತ್ರಿಷಷ್ಠಿಶಲಾಕಾಪುರಾಣ; ಭಟ್ಟಾಕಳಂಕನ ಶಬ್ದಾನುಶಾಸನ; ಪದ್ಮಣಾಂಕನ ಪೂಜ್ಯಪಾದಚರಿತ ಮುಂತಾದ ಪ್ರಾಚೀನ ಗ್ರಂಥಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ; ಕನ್ನಡದಲ್ಲಿ ೬೪ ಅಕ್ಷರಗಳ ವರ್ಣಮಾಲೆಯೂ, ಸರ್ವವಿಷಯಾತ್ಮಕವಾದ 'ಪರಮಾಗಮ' ಎಂಬ ಕೃತಿಯೂ ಇರುವ ವಿಚಾರವು ಇವರಿಗೆ ೧೯೩೧ರ ವೇಳೆಗೇ ಖಚಿತವಾಗಿ ಮನದಟ್ಟಾಯಿತು. ಇಂಥ ಅಚ್ಚರಿಯ ಮಾಹಿತಿಯನ್ನು ಹುಡುಕಿ ಬೆಳಕಿಗೆ ತಂದ ಕೀರ್ತಿವಂತರು ಸಿರಿಭೂವಲಯದ ಶ್ರೀಕಂಠಯ್ಯನವರು.
        ಬೇಲೂರು ತಾ|| ಹಲ್ಮಿಡಿಯ ಶಾಸನದಲ್ಲಿ ಯಾವುದೇ ಕಾಲ ನಿರ್ದೇಶನವು ಇಲ್ಲದಿದ್ದರೂ ಕೇವಲ ಕದಂಬ ಕುಲದ ಮೃಗೇಶವರ್ಮನ ಹೆಸರಿನ ಆಧಾರದಲ್ಲಿ ಇದು ಕ್ರಿ.. ೪೬೬ರರ ಶಾಸನವೆಂದು ನಮ್ಮ ವಿದ್ವಾಂಸರು ನಿರ್ಧರಿಸಿದ್ದಾರೆ! ಚಾಲುಕ್ಯವಂಶದ ವಿಜಯಾದಿತ್ಯನ ಸೂಳೆ ವಿನಾಪೋಟಿಯ ಮಹಾಕೂಟದ ಶಾಸನದ (ಕ್ರಿ.. ೪೭೫. ಇಂಡಿಯನ್ ಆಂಟಿಕ್ವರಿ ಸಂ.೧೦.೧೦೩) ವಿವರಗಳನ್ನು ಶ್ರೀಕಂಠಯ್ಯನವರು ನೀಡಿದ್ದಾರೆ. ಹಲ್ಮಿಡಿ ಶಾಸನಕ್ಕಿಂತಲೂ ಹಳೆಯದಾದ ಗಂಗರಾಜ ೧ನೇ ಮಾಧವನ (ತಡಂಗಾಲಮಾಧವ) ಶಾಸನ; (ನಂಜನಗೂಡು ಶಾಸನ ಸಂ. ೧೧೧. ಕಾಲ. ಶಾ.ಶಕ. ೮೦); ನಂಜನಗೂಡು ತಾ| ಹೆಡತಲೆ ಹೋಬಳಿ, ಗಟ್ಟವಾಡ ಗ್ರಾಮದಲ್ಲಿ ೧ನೇ ಮಾಧವನ ಮಗ ಹರಿವರ್ಮನ ಶಿಲಾಶಾಸನದ (ಕಾಲ. ಶಾ. ಶಕ. ೧೧೧) ವಿವರಗಳನ್ನು ನೀಡಿ ಸಿರಿಭೂವಲಯದ ಶ್ರೀಕಂಠಯ್ಯನವರು ಕನ್ನಡ ವಿದ್ವತ್ ಲೋಕದ ದಿಗ್ಗಜಗಳ ದಿಕ್ಕು ಕೆಡಿಸಿರುವುದುಂಟು! ಆದರೂ ಅವರುಗಳಾರೂ ಇವರ ಒಂಟಿ ಹೋರಾಟಕ್ಕೆ ಸೊಪ್ಪುಹಾಕಲೇ ಇಲ್ಲ ಎಂಬುದು ಚಾರಿತ್ರಿಕ ಸತ್ಯವಾಗಿದೆ!!
        ಸಿರಿಭೂವಲಯದ ಶ್ರೀಕಂಠಯ್ಯನವರು ಕನ್ನಡದ ಪ್ರಾಚೀನತೆಯನ್ನು ಶಾಸನಗಳ ಆಧಾರದಲ್ಲಿ ಎಷ್ಟೇ ಪ್ರತಿಪಾದಿಸಿದರೂ, ಅವರ ಯಾವುದೇ ಪ್ರಯತ್ನವನ್ನೂ ಕನ್ನಡ ವಿದ್ವಾಂಸರು ತಮ್ಮ ಜೀವಮಾನ ಪೂರ್ತಿ ಮಾನ್ಯ ಮಾಡಲೇಯಿಲ್ಲ. ಅಮೋಘವರ್ಷ ನೃಪತುಂಗನಿಗಿಂತಲೂ ಹಿರಿಯನಾದ ಸೈಗೊಟ್ಟ ಸಿವಮಾರನ ಕಾಲದಲ್ಲಿ ಬೆಳಗಾಂ ಜಿಲ್ಲೆಯ ಕಲ್ಬಾವಿ ರಾಮಲಿಂಗ ದೇವಾಲಯದ ಶಿಲಾಶಾಸನ (ಇಂಡಿಯನ್ ಆಂಟಿಕ್ವರಿ. ಸಂ. ೧೮.೨೭೪) ದಲ್ಲಿರುವ ಅಂದಿನ ಕನ್ನಡ ಪದ್ಯಗಳ ರಚನಾ ಶೈಲಿಯನ್ನು ಸಿರಿಭೂವಲಯದ ಶ್ರೀಕಂಠಯ್ಯನವರು ತೋರಿಸಿಕೊಟ್ಟಿದ್ದಾರೆ.
        ಸಾಂಗತ್ಯ ಛಂದಸ್ಸು ೧೫ನೇ ಶತಮಾನದಿಂದೀಚೆಗೆ ಪ್ರಚಾರಕ್ಕೆ ಬಂದುದೆಂದು ಹಿಂದಿನಿಂದಲೂ ಕನ್ನಡ ವಿದ್ವಾಂಸರು ನಿರ್ಧರಿಸಿದ್ದಾರೆ. ಕುಮುದೇಂದು ಮುನಿಯು ತನ್ನ ಕಾವ್ಯದಲ್ಲಿ ಪೂರ್ವಕವಿ ಮಾನ್ಯವಾದ ಶುದ್ಧ ಕನ್ನಡದ ಶಬ್ದಗಣಗಳಾಗ ಚತ್ತಾಣ; ಬೆದಂಡೆಗಳನ್ನು ಬಳಸಿದ್ದಾನೆ ಎಂಬ ವಿಚಾರವನ್ನು ಶ್ರೀಕಂಠಯ್ಯನವರು ಖಚಿತವಾಗಿ ಸ್ಪಷ್ಟಪಡಿಸಿದ್ದಾರೆ. ಚತ್ತಾಣವೇ ನಾಲ್ಕುಸಾಲಿನ ಸಾಂಗತ್ಯರೂಪ. ಕವಿರಾಜಮಾರ್ಗಕಾರನು ಚತ್ತಾಣ ಹಾಗೂ ಬೆದಂಡೆಯ ಹೆಸರನ್ನು ಸೂಚಿಸಿದ್ದರೂ ಅದರ ವಿವರಣೆಯನ್ನು ಬರೆಯಲಿಲ್ಲವೆಂಬ ಅಂಶವನ್ನೂ ಕರ್ಲಮಂಗಲಂ ಶ್ರೀಕಂಠಯ್ಯನವರು  ಸೂಚಿಸಿದ್ದಾರೆ. ಚತ್ತಾಣವು ಚತುಸ್ಥಾನ ಅಧವಾ ಚೌಪದಿಯ ಸಾಂಗತ್ಯವೆಂದೂ; ಬೆದಂಡೆಯು ಪದ್ಯಮಿಶ್ರಿತ ಗದ್ಯರೂಪವೆಂದೂ ಇವರು ವಿವರಿಸಿದ್ದಾರೆ. ಇಡೀ ಕಾವ್ಯವೇ ಚತ್ತಾಣದಲ್ಲಿದೆ.
        ಕನ್ನಡಲಿಪಿಯು ದುಂಡಾಗಿದೆ; ಮುದ್ದಾಗಿದೆ ಎಂದು ಅದರ ಸೌಂದರ್ಯವನ್ನು ವರ್ಣಿಸಿದ್ದಾನೆ ಕುಮುದೇಂದು. ಶಾಸನಗಳಲ್ಲಿ ಬಳಸಿರುವ ಲಿಪಿಕ್ರಮವು ರೀತಿಯದಲ್ಲವೆಂಬುದು ಸರ್ವವಿದಿತ. ಆದ್ದರಿಂದ ಕುಮುದೇಂದುವಿನ ಕಾಲವಾದ ಕ್ರಿ.. ೮೦೦ ರರ ಸುಮಾರಿಗೆ ಹಿಂದಿನಿಂದಲೂ ತಾಳೆಯೋಲೆಗಳ ಬರಹದಲ್ಲಿ ಸುಂದರವಾದ ಕನ್ನಡ ಲಿಪಿಯು ಬಳಕೆಯಾಗುತ್ತಿತ್ತು ಎಂಬುದು ಸಂಶಯಾತೀತವಾದ ಸಂಗತಿಯಾಗಿದೆ. ೧೨೦೦ ವರ್ಷಗಳ ದೀರ್ಘ ಕಾಲಾವಧಿಯಲ್ಲಿ ಇಂಥ ಅಮೂಲ್ಯ ದಾಖಲೆಗಳು ಸರಿಯಾಗಿ ನಿಗಾವಹಿಸುವವರಿಲ್ಲದೇ ಕಣ್ಮರೆಯಾಗಿರುವುದು ಸಹಜ. ಮಹತ್ವದ ಇಂಥ ಮಾಹಿತಿಗಳತ್ತ ಇಂದಿನ ವಿದ್ವಾಂಸರು ಗಮನಹರಿಸಿದರೆ; ನಿಜಕ್ಕೂ ಕನ್ನಡದ ಹಿತಾಸಕ್ತಿಯನ್ನು ಕಾಪಾಡಿದಂತಾಗುತ್ತದೆ!
        ದೇಶೀಅಂಕಗಳ ದೇಶೀಕಾವ್ಯವೆಂದು ಕನ್ನಡದ ಮಹತ್ವವನ್ನು ಸಾರಿದ್ದಾನೆ ಕವಿ. ಇಂದ್ರಪದವಿಯ ಕಾಲಾವಧಿಯು ದೀರ್ಘವಾದುದು. ಇಂಥ ೧೦೦ ಇಂದ್ರರ ಕಾಲದಿಂದಲೂ ಮಾತುಗಳು (ಧ್ವನಿಗಳು, ಅಕ್ಷರಗಳು) ಇರುವುದಾಗಿಯೂ ಅವು ಸವೆದು ಹೋಗಿರುವವೆಂದೂ ಕನ್ನಡಲಿಪಿಯ ಪ್ರಾಚೀನತೆಯನ್ನು ಸ್ಪಷ್ಟಪಡಿಸಿದ್ದಾನೆ. ಇಷ್ಟು ಖಚಿತವಾದ ಮಾಹಿತಿಯನ್ನು ಮೂಲೆಗುಂಪುಮಾಡಿ, '೧೫೦೦ ವರ್ಷಗಳ ಹಿಂದೆ ಕನ್ನಡ ಭಾಷೆಯು ಲಿಪಿಬದ್ಧವಾಗಿರಲೇ ಇಲ್ಲ' ಎಂದು ನಿರ್ಧರಿಸುವುದು ಎಷ್ಟರಮಟ್ಟಿಗೆ ಸೂಕ್ತವೆಂಬುದನ್ನು ಓದುಗರೇ ನಿರ್ಧರಿಸಬೇಕು!
        ಕುಮುದೇಂದುವಿನ ರಕ್ತದ ಕಣಕಣದಲ್ಲೂ ಅಡಕವಾಗಿದ್ದ ಅನನ್ಯವಾದ ಕನ್ನಡಾಭಿಮಾನವನ್ನು ವರ್ಣಿಸುವುದಕ್ಕೆ ನನಗೆ ನಿಶ್ಚಯವಾಗಿಯೂ ಸಮರ್ಪಕವಾದ ಪದಗಳೇ ದೊರೆಯುವುದಿಲ್ಲ ಎಂದು ಸಂಕೋಚವಿಲ್ಲದೆ ಒಪ್ಪಿಕೊಳ್ಳಬೇಕಾಗಿದೆ. 'ಕರುನಾಡ ತಣ್ಪಿನ ನೆಲದೊಳು ಹುಟ್ಟಿದ ಕುರು ಹರಿ ಪುರುವಂಶವೆರೆದು ಪೊರೆದು ಹೊತಿಸಿದ ಅಂಕಜ್ವಾಲೆಯ ಬೆಳಕಿನ ಪರಿಯ ಚಿಜ್ಯೋತಿ ಇದರಿಯಾ' ಎಂಬುದಾಗಿ ಕನ್ನಡ ಅಂಕಾಕ್ಷರವು ಬಹಳ ಪ್ರಾಚೀನವಾದುದೆಂಬ ಜೀವಂತ ಸಾಕ್ಷಿಯನ್ನು ಒದಗಿಸಿದ್ದಾನೆ. ಅಂದರೆ ಕನ್ನಡಭಾಷೆಗೆ ಕನಿಷ್ಟಪಕ್ಷ ಕೌರವ ಪಾಂಡವರ ಕಾಲದಿಂದ ಹಿಂದಿನ ೭೬,೦೦೦ ವರ್ಷಗಳ ಇತಿಹಾಸವಾದರೂ ಇರುವುದೆಂಬುದು ಸ್ಪಷ್ಟವಾಗುತ್ತದೆ!
        ಶಗಣಾದಿ ಪದ್ಧತಿಯಲ್ಲಿ (ಶಬ್ದಗಣದಲ್ಲಿ) ತಾನು ಕಾವ್ಯರಚನೆ ಮಾಡಿರುವ ವಿಚಾರವನ್ನು ಕಾವ್ಯದಲ್ಲಿ ಕುಮುದೇಂದುವೇ ಸ್ವತಃ ಸೂಚಿಸಿರುವುದರಿಂದ ಸಾಂಗತ್ಯ ಛಂದಸ್ಸು ರೂಢಿಗೆ ಬಂದ ಕಾಲದ ವಿಚಾರವಾಗಿ ಇಂದಿನ ವಿದ್ವಾಂಸರು ತಲೆಕೆಡಿಸಿಕೊಳ್ಳುವುದು ಎಷ್ಟು ಸಮಂಜಸ? ಎಂಬುದನ್ನು ಮುಂದಿನ ಸಂಶೋಧಕರಾದರೂ ಗಮನಿಸಬೇಕಾಗಿದೆ. ಸಿರಿಭೂವಲಯವು ಜಗತ್ತಿನ ಆದಿಕಾವ್ಯವೆಂಬ ವಿಚಾರವನ್ನು ಕವಿಯು ಸ್ಪಷ್ಟವಾಗಿ ಸೂಚಿಸಿರುವುದನ್ನು ಕಾವ್ಯದಲ್ಲಿ ಕಾಣಬಹುದಾಗಿದೆ. ಪ್ರಚಲಿತವಿರುವ ಛಂದಶಾಸ್ತ್ರದಲ್ಲಿ ಅಕ್ಷರಗಣ ಹಾಗೂ ಮಾತ್ರಾಗಣದ ಸಾಂಗತ್ಯವನ್ನು ಮಾತ್ರವೇ ಗುರುತಿಸಲಾಗುತ್ತದೆ. ಕಾರಣದಿಂದ ಕುಮುದೇಂದುವು ಸೂಚಿಸಿರುವ 'ಶಗಣ'ವು ಒಂದು ವಿನೂತನ ಸಂಗತಿಯಾಗಿದೆ. ವಿದ್ವಾಂಸರು ಇದರ ವಿವರಗಳನ್ನು ಗುರುತಿಸಬೇಕಾಗಿದೆ.
        ರಾಷ್ಟ್ರಕವಿ ಮಂಜೇಶ್ವರಗೋವಿಂದಪೈ; ಸೇಡಿಯಾಪು ಕೃಷ್ಣಭಟ್ಟ; ಆಲೂರುವೆಂಕಟರಾವ್; . ವೆಂಕಟಸುಬ್ಬಯ್ಯ; ಬಿ.ಎಂ. ಶ್ರೀಕಂಠಯ್ಯ; ಡಿ.ವಿ.ಜಿ; .ಆರ್. ಕೃಷ್ಣಶಾಸ್ತ್ರಿ; ಎಂ.ಆರ್. ಶ್ರೀನಿವಾಸಮೂರ್ತಿ; ತಿ.ನಂ.ಶ್ರೀ; ದೇವುಡುನರಸಿಂಹಶಾಸ್ತ್ರೀ; ಸಿ.ಕೆ. ವೆಂಕಟಸುಬ್ಬಯ್ಯ; ಡಿ.ಎಲ್. ನರಸಿಂಹಾಚಾರ್; ತಿ.ತಾ.ಶರ್ಮ; ಕೆ. ಸಂಪದ್ಗಿರಿರಾವ್; ಬಿ. ಶಿವಮೂರ್ತಿಶಾಸ್ತ್ರೀ; ಕೆ.ವಿ. ಪುಟ್ಟಪ್ಪ (ಕುವೆಂಪು); ..ಕೃ; .ರಾ.ಸು; ಕೆ. ಶಿವರಾಮಕಾರಂತ; ಜೆ.ಪಿ. ರಾಜರತ್ನಂ; ಮುಂತಾದ ಕನ್ನಡ ಸಾಹಿತ್ಯ ದಿಗ್ಗಜರೆಲ್ಲರಿಗೂ ಸಿರಿಭೂವಲಯದ ಸಂಶೋಧನೆಯ ವಿಚಾರ ತಿಳಿಯದ್ದೇನಲ್ಲ.
        ಸಿರಿಭೂವಲಯದ ವಿಚಾರವಾಗಿ ಮಹಾನ್ ಜ್ಞಾನಿಯಾಗಿದ್ದ ಶ್ರೀಕಂಠಯ್ಯನವರು ತಮ್ಮಿಂದ ಯಾವುದೇ ಪುರಸ್ಕಾರವನ್ನೂ ಪಡೆಯಲು ಸಮ್ಮತಿಸದಿದ್ದಾಗ; 'ಭಾರತದಲ್ಲಿರುವ ಇಂಥ ಮಹಾನ್ ಜ್ಞಾನಿಗಳಿಗೆ ಮುಂದಾದರೂ ಸೂಕ್ತ ಪುರಸ್ಕಾರ ದೊರೆಯುವಂತಾಗಲೀ' ಎಂಬ ಮಹತ್ವಾಕಾಂಕ್ಷೆಯೊಂದು ಕಲ್ಕತ್ತೆಯ ಕೋಟ್ಯಾಧಿಪತಿ ಶಾಂತಿಪ್ರಸಾದ್ ಜೈನ್ ಅವರ ಆಂತರ್ಯದಲ್ಲಿ ಅಂಕುರಿಸಿದ ಪರಿಣಾಮವೇ ಇಂದಿನ ಭಾರತೀಯ ಜ್ಞಾನಪೀಠ ಪ್ರಶಸ್ತಿ ಮೂಲಕಾರಣವೆಂಬ ಅಚ್ಚರಿಯ ಸಂಗತಿ ಹೆಚ್ಚುಜನಗಳಿಗೆ ತಿಳಿದಿಲ್ಲ!
      ಕುಮುದೇಂದುವಿನ ಸರ್ವಭಾಷಾಮಯೀಭಾಷಾ ಸಿರಿಭೂವಲಯ ಎಂಬ ಕೃತಿಯನ್ನು ಕರ್ಲಮಂಗಲಂ ಶ್ರೀಕಂಠಯ್ಯನವರು ಸಂಶೋಧಿಸಿ; ಬೆಂಗಳೂರಿನ ಸರ್ವಾರ್ಥ ಸಿದ್ಧಿಸಂಘದವರು ೧೯೫೩ರಲ್ಲಿ ಪ್ರಕಟಿಸಿದ್ದಾರೆ. ಬೆಂಗಳೂರಿನ ಪುಸ್ತಕಶಕ್ತಿ ಪ್ರಕಾಶನದಿಂದ ೨೦೦೩ರರಲ್ಲಿ ಇದರ ಭಾಗಶಃ ಪುನರ್ಮುದ್ರಣವಾಗಿದೆ. ಹಾಸನದ ಸುಧಾರ್ಥಿಯವರು ೨೭ ವರ್ಷಗಳ ಸುದೀರ್ಘ ಸಂಶೋಧನೆಯಿಂದ ಇದಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಸೂಕ್ತವಾಗಿ ಕ್ರೋಢೀಕರಿಸಿ ಹಲವು ಹೊತ್ತಿಗೆಗಳನ್ನು ಪ್ರಕಟಿಸಿದ್ದಾರೆ.
    'ಈಗ ಪ್ರಕಟವಾಗಿರುವಷ್ಟು ಸಿರಿಭೂವಲಯದ ಭಾಗವನ್ನು ಓದಿ; ಅರ್ಥಮಾಡಿಕೊಳ್ಳಲು ಅದಕ್ಕೆ ಮಹತ್ತರವಾದ ತಾಳ್ಮೆ ಇರಬೇಕು. ಅಧ್ಯಯನ ಹಾಗೂ ಮನನಕ್ಕೆ ಸಾಕಷ್ಟು ಸಮಯಾವಕಾಶವಿರಬೇಕು. ಗ್ರಂಥವನ್ನು ಕುರಿತು ಹೆಚ್ಚಿನ ಶ್ರದ್ಧಾಭಕ್ತಿ ಇರಬೇಕು. ಹಲವಾರು ವಿಚಾರಗಳ ಪರಿಚಯವಿರಬೇಕು. ಹಾಗಿಲ್ಲದೇ ಇದು ಕೇವಲ ಮನರಂಜನೆಗಾಗಿ ಓದುವ ಸರಳ ಸಾಹಿತ್ಯವಲ್ಲ' ಎಂಬ ಸ್ಪಷ್ಟವಾದ ಸಂದೇಶದ ಸಾರವನ್ನು ಡಾ| ಎಸ್. ಶ್ರೀಕಂಠಶಾಸ್ತ್ರಿಯವರು ೫೦ ವರ್ಷಗಳಿಗೆ ಮೊದಲೇ ನೀಡಿದ್ದಾಗಿದೆ! ಇದೊಂದು ಸಾರ್ವಕಾಲಿಕ ಸಂದೇಶ ಎಂಬುದನ್ನು ಕನ್ನಡ ವಿದ್ವಾಂಸರೂ, ಸಂಶೋಧಕರೂ ಮರೆಯದೇ ನೆನಪಿಡಬೇಕಾಗಿದೆ!
ಸಿರಿಭೂವಲಯದ ಆಯ್ದ ಕೆಲ ಸಾಂಗತ್ಯ ಪದ್ಯಗಳನ್ನು ದೃಷ್ಟಾಂತಕ್ಕಾಗಿ ನೀಡಲಾಗಿದೆ:
ಆಯ್ದ ಕನ್ನಡ ಸಾಂಗತ್ಯ ಪದ್ಯಗಳು:-
ಅಷ್ಟಮಹಾಪ್ರಾತೀಹಾರ್ಯವೈಭವದಿಂದ | ಅಷ್ಟಗುಣಂಗಳೊಳ್ಓಂದಮ್ ||
ಸೃಷ್ಟಿಗೆ ಮಂಗಲಪರ್ಯಾಯದಿನಿತ್ತ | ಅಷ್ಟಮಜಿನಗೆರಗುವೆನು || ||
ಅಂಕ ವಿಜ್ಞಾನ ಸಂವೃದ್ಧಿಯ ಕಾವ್ಯದ | ಅಂಕದೊಳರವತ್ನಾಲ್ಕು ಅಂಕಿ ||
ಯಂಕಿತವಾಗಿದೆ ಅಕ್ಷರ | ದಂಕವೆ ಸರ್ವಭೂವಯಂ || ||
ಕರುನಾಡ ತಣ್ಪಿನ  ನೆಲದೊಳು ಹುಟ್ಟಿದ | ಕುರು ಹರಿ ಪುರುವಂಶವೆರೆದು ||
ಪೊರೆದು ಹೊತಿಸಿದ ಅಂಕ ಜ್ವಾಲೆಯ ಬೆಳಕಿನ | ಪರಿಯ ಚಿಜ್ಯೋತಿ ಇದರಿಯಾ || ||
ಪುಳಕಿನಾಥ ತನ್ನಂಕದೊಳ್ ಬ್ರಾಹ್ಮಿಗೆ | ಅರವತ್ನಾಲ್ಕಕ್ಷರವಿತ್ತ ||
ವರ ಕುವರಿಯು ಸೌಂದರಿಗೊಂಬತ್ತನು | ಕರುಣಿಸಿದನು ಸೊನ್ನೆ ಸಹಿತ || ||
ಅಣುವೆಂದು ಪರಮಾಣುವೆಂದು ಪುದ್ಗಲವನು | ಗಣಿಸುವಾಗಿರುವಂಕವೆಷ್ಟು ಅಣುವಿನ ಗುಣವೇನು ||
ಅಣುವಿನ ಕ್ಷಣವೇನು ಅಣುವು ನೀರೊಳಗೆಷ್ಟು | ಅನಲ ವಾಯುಗಳೆಷ್ಟು ಸುಡದಣುವೆಷ್ಟು || ||
ತನುವನಾಕಾಶಕೆ ಹಾರಿಸಿ ನಿಲಿಸುವ | ಘನ ವೈಮಾನಿಕ ದಿವ್ಯಕಾವ್ಯ ||
ಪನಸ ಪುಷ್ಪದ ಕಾವ್ಯ ವಿಶ್ವಂಭರಕಾವ್ಯ | ಜಿನರೂಪಿನ ಭದ್ರಕಾವ್ಯ || ||
ಯವೆಯ ಕಾಳಿನ ಕ್ಷೇತ್ರದಳತೆಯೊಳಡಗಿಸಿ | ಅವರೊಳನಂತವಸಕಲಾನ್ ||
ಕವನವದೊಳ್ ಸವಿಯಾಗಿಸಿ ಪೇಳುವ | ನವಸಿರಿ ಇರುವ ಭೂವಲಯ || ||
ಸರ್ವಜ್ಞದೇವನು ಸರ್ವಾಂಗದಿಂ ಪೇಳ್ದ | ಸರ್ವಭಾಷೆಯ ಸರಣಿ ||
ಪರ್ವದಂದದಲಿ ಹಬ್ಬುತ ಹೋಗಿ ಲೋಕಾಗ್ರ | ಸರ್ವಾರ್ಥ ಸಿದ್ಧಿಯ ಬಳಸಿ || ||
ಹದಿನೆಂಟು ಭಾಷೆಯು ಮಹಾಭಾಷೆಯಾಗಲು | ಬದಿಯ ಭಾಷೆಗಳ್ ಏಳ್ನೂರಮ್ ||
ಹೃದಯದೊಳಡಗಿಸಿ ಕರ್ಮಾಟ ಲಿಪಿಯಾಗಿ | ಹುದುಗಿಸಿದಂಕ ಭೂವಲಯ || ||
ಆದಿದೇವನು ಆದಿಯ ಕಾಲದಿ ಪೇಳ್ದ | ಸಾಧನೆಯಧ್ಯಾತ್ಮಯೋಗ ||
ದಾದಿಯ ಅಜ್ಞಾನವಳಿವ ಧರ್ಮಧ್ಯಾನ | ಸಾಧಿತ ಕಾವ್ಯ ಭೂವಲಯ || ೧೦ ||
ರಸವನು ಹೂವಿನಿಮ್ಮರ್ಧಿಸಿ ಪುಟವಿಟ್ಟು | ಹೊಸ ರಸ ಘುಟಿಕೆಯ ಕಟ್ಟಿ ||
ರಸ ಸಿದ್ಧಿಯಾಗೆ ಸಿದ್ಧಾಂತ ರಸಾಯನ | ಹೊಸ ಕಲ್ಪ ಸೂತ್ರ ವೈದ್ಯವದ || ೧೧ ||
ವಶಗೊಳಿಸಿದ ಶ್ರೀಸಮಂತಭದ್ರಾಚಾರ್ಯ | ಋಷಿಯು ಪ್ರಾಣಾವಾಯದಿಂದ ||
ಹೊಸೆದ ಕಾವ್ಯವು ಚರಕಾದಿಗಳರಿಯದ | ಅಸದೃಷ ವೈದ್ಯಾಗಮಕರು || ೧೨ ||
ಖ್ಯಾತಿಪೂಜಾಲಾಭದಾಶೆಯಿಮ್ ಚರಕಾದಿ | ನೂತನ ಗ್ರಂಥಕರ್ತಾರರ್ ||
ಪ್ರೀತಿಯಿಂ ಹಿಂಸೆಯ ಪೊರೆಯಲು ರಸವಿದ್ಯೆಯೆ | ಯಾತಕೆ ಸಿದ್ಧಿಯಾಗುವನಮ್ || ೧೩ ||
ನೀಲಾಂಬರದೊಳು ಹೊಳೆಯುವ ನಕ್ಷತ್ರ | ಮಾಲಿನ್ಯವಾಗದವರೆಗೆ ||
ಶೀಲ ವ್ರತಂಗಳೊಳು ಬಾಳ್ದು ಜನರೆಲ್ಲ | ಕಾಲನ ಜಯಿಸಲೆತ್ನಿಸಲಿ || ೧೪ ||

ಪ್ರಾಕೃತ:-
ಸುದಣಾಣಸ್ಸ ಆವರಣೀಯಂ ಸುದಣಾಣಾವರಣೀಯಂ |
ತತ್ಥ ಸುದಣಾಣಂ ಣಾಮ ಇಂದಿ ಏಹಿ ಗಹಿ ದತ್ಥಾದೋ ತದೋ ||

ಗೀರ್ವಾಣ:-
ದಿವ್ಯ ಗೀಹಿ ದಿವ್ಯಾ ಅಮಾನುಷೀ ಗೀರ್ವಾಣೀ ಯಸ್ಯ |
ಸದಿವ್ಯ ಗೀಹಿ ದಿವ್ಯ ಧ್ವನಿಹಿ ದಿವ್ಯೋಂ ಮಾನುಷೋ ಧ್ವನಿಹಿ ||

ತೆಲುಗು:-
ಸಕಲ ಭೂವಲಯ ಮುನುಕು ಪ್ರಭೂಷಣ ಪ್ರಬುವುನ್ಡು |
ಮನ ಸುದಣಾಣಾವರಣ ಕ್ಷಯಕಾರಣ ಮನಿ ನೇನು ನಮಸ್ಕಾರಂಬು ಚೇಸಿ ||

ತಮಿಳು:-
ಅಘರ ಮುದಲ್ ಎಳತ್ತಲ್ಲಾಮ್ ಆದಿಭಗವನ್ |
ಉಲಘುಕ್ಕು ಮುದಲ್ ಕುರಳ್ ಕಾವ್ಯತ್ತಿಲ್ ಪಕ್ಕಾನ್ ||

ಅಪಭ್ರಂಶ:-
ವಂದಿತ್ತು ಸವ್ವಸಿದ್ದೇ ಧುವ ಮಚಲಮ್ ಅಣೋದಮಮ್ ಇಮ್ಪತ್ತೇ  |
ವೋಚ್ಛಾಮಿ ಸಮಯಪಾಹುಡಮ್ ಣಮೋ ನುಯ ಕೇವಲೀ ಭಣಿಯಂ ||

ಶೂರಸೇನಿ:-
ಜೀವೋ ಚರಿತ್ತ ದಂಸಣ ಣಾಣ ಟ್ಠಿಉ ತಮ್ಹಿ ಸಸಮಯಂ |
ಜಾಣ ಪುಗ್ಗಲ ಕಮ್ಮಪದೇಸ ಟ್ಠಯಮ್ ತಮ್ ಜಾಣ  ಪರಸಮಯಮ್ ||

ಅರ್ಧಮಾಗಧಿ:-
ಣಮೋ ಅರಹನ್ತಾಣಂ ಣಮೋ ಸಿದ್ಧಾಣಂ ಣಮೋ ಅಇರಿಯಾಣಮ್ |
ಣಮೋ ಉವಜ್ಝಾಯಾಣಂ ಣಮೋಳ್ಳೋ ಸವ್ವ ಸಾಹೂಣಮ್ ||

ಮಾಗಧಿ:-
ಸಿದ್ಧ ಮಣಂತ ಮಣಿಂದಿಯ ಮಣುವಮ ಮಪ್ಪತ್ಥ ಸೋಕ್ಖ ಮಣವಜ್ಝಮ್ |
ಕೇವಲ ಪಹೋಹ ಣಿಜ್ಝಿಯ ದುಣ್ಣಯ ತಿಮಿರಂ ಜಿಣಂ ಣಮಹ ||

ಪಾಲಿ:-
ಬಾರಹ ಅಂಗಾಂಗೀಜಾ ವಿಯಲಿಯ ಮಲ ಮೂಢ ದಂಸಣುತ್ತಲಿಯಾ |
ವಿವಿಅಹ ಪರಚರಣ ಭೂಷಾ ಪಸಿಯವು ಸುಯದೇ ದಯಾ ಸು ಇರಮ್ ||

ಸಂಸ್ಕೃತ:-
"... ಅಥವಾ ಮಾಗಧ, ಪಿಶಾಚ, ಪ್ರಾಕೃತ, ಸಂಸ್ಕೃತ, ಭಾಷಾಶ್ಚ, ಶೂರಸೇನೀ ಷಷ್ಟೋತ್ರ ಭೇದೋ ದೇಶವಿಶೇಷಾ ವಿಶೇಷಾದಪಭ್ರಂಶಃ | ಕರ್ಣಾಟ, ಮಾಗಧ, ಮಾಲವ, ಲಾಟ, ಗೌಡ, ಗುರ್ಜರ, ಪ್ರತ್ಯೇಕ ತ್ರಯಮಿತಿ ಅಷ್ಟಾದಶಮಹಾಭಾಷಾ | ಸರ್ವಭಾಷಾಮಯೀ ಭಾಷಾ, ವಿಶ್ವವಿದ್ಯಾವಭಾಸಿನೇ, ತ್ರಿಷಷ್ಟಿಃ ಚತುಃಷಷ್ಟಿರ್ವಾ ವರ್ಣಾಃ ಶುಭಮತೆ, ಮಾತಾಃ, ಪ್ರಾಕೃತೇ ಸಂಸ್ಕೃತೇಚಾಪಿ, ಸ್ವಯಂ, ಪ್ರೋಕ್ತಾಃ ಸ್ವಯಂಭುವಾ - ಅಕಾರಾದಿ, ಹಕಾರಾಂತಾಂ, ಶುದ್ಧಾಂ, ಮುಕ್ತಾವಲೀಮಿವ, ಸ್ವರ, ವ್ಯಂಜನ ಭೇದೇನ, ದ್ವಿಧಾ, ಭೇದ ಮುಪೈಯುಷೀಂ, ಅಯೋಗವಾಹ ಪರ್ಯಂತಂ, ಸರ್ವ ವಿದ್ಯಾಸುಸಂಗತಾಂ, ಅಯೋಗಾಕ್ಷರ ಸಂಭೂತಿಂ, ನೈಕ ಬೀಜಾಕ್ಷರೈಶ್ಚಿತಾಂ, ಸಮವಾದೀ ದಧತ್ ಬ್ರಾಂಹೀ ಮೇಧಾವಿನ್ಯತಿ ಸುಂದರೀ-ಸುಂದರೀಗಣಿತಂ, ಸ್ಥಾನಂ, ಕ್ರಮೈಹಿ ಸಂಯೋಗಧಾಸ್ಯತ್, ತತೋ ಭವತೋ ವಕ್ತ್ರನಿಃಸೃತಾಕ್ಷರಾವಲೀಂ ಸಿದ್ಧೌಃ, ನಮ ಇತಿ - ವ್ಯಕ್ತ ಸುಮಂಗಲಾಂ ಸಿದ್ಧ ಮಾತೃಕಾಂ, ಭೂವಲಯ ||

ಆಕರ ಗ್ರಂಥಗಳು:-
. ಸರ್ವಭಾಷಾಮಯೀಭಾಷ ಸಿರಿಭೂವಲಯಸಾರ, ಸುಧಾರ್ಥಿ, ಹಾಸನ.
. ಸಿರಿಭೂವಲಯದ ಒಂದು ಮಿಂಚುನೋಟ, ಸುಧಾರ್ಥಿ, ಹಾಸನ.
. ಸಿರಿಭೂವಲಯ - ಅಧ್ಯಾಯಗಳು, ಪುಸ್ತಕಶಕ್ತಿ ಪ್ರಕಾಶನ, ಬೆಂಗಳೂರು.
ಇಂತು,
ಹೇಮಂತ್ ಕುಮಾರ್ ಜಿ.