Thursday, 29 January 2015

ಸಿರಿಭೂವಲಯ : "ಜಗತ್ತಿನ ಹತ್ತನೇ ಅಚ್ಚರಿ" ಪುಸ್ತಕ ಬಿಡುಗಡೆ

ಇಂದು ೨೯-೦೧-೨೦೧೫ರಂದು ಕಾರ್ಕಳದ ಗೊಮ್ಮಟನಿಗೆ ಮಹಾಮಸ್ತಕಾಭಿಷೇಕವಾಗುವ ಸುಸಂದರ್ಭದಲ್ಲಿ ಹಾಸನದ ಸಿರಿಭೂವಲಯ ಸುಧಾರ್ಥಿಯವರ ಸರ್ವಭಾಷಾಮಯೀಭಾಷಾ ಸಿರಿಭೂವಲಯಕ್ಕೆ ಸಂಬಂಧಸಿದಂತೆ  "ಜಗತ್ತಿನ ಹತ್ತನೇ ಅಚ್ಚರಿ" ಎಂಬ ಪುಸ್ತಕವು ಡಾ. ವೀರೇಂದ್ರ ಹೆಗ್ಗಡೆ ದಂಪತಿಗಳಿಂದ ಲೋಕಾರ್ಪಣೆಗೊಂಡಿತು. ಕನ್ನಡದ ಆದಿ ಕವಿ ಕುಮುದೇಂದು ಮುನಿಯ ಸಿರಿಭೂವಲಯದ ಪ್ರಥಮ ಖಂಡದ ೫೯ ಅಧ್ಯಾಯಗಳನ್ನು ಕುರಿತ ಒಂದು ಸಂಕ್ಷಿಪ್ತ ಪರಿಚಯ ಇದಾಗಿದೆ. 

ಇದರ ಮೊದಲ ಮಾತು-೨ ಎಂಬಲ್ಲಿ ಸಿರಿಭೂಲಯದ ಬಗೆಗಿನ ನನ್ನ ಕೆಲ ವರ್ಷಗಳ ಸಂಶೋಧನಾ ಅನುಭವ ಸಾರವನ್ನು ಎರಡು ಪುಟದಲ್ಲಿ ವ್ಯಕ್ತಪಡಿಸಲು ಅವಕಾಶಕೊಟ್ಟಿದ್ದಕ್ಕಾಗಿ ಸಿರಿಭೂವಲಯ ಸುಧಾರ್ಥಿಯವರಿಗೆ ನಾನು ಆಭಾರಿ.

Tuesday, 20 January 2015

“ಪುಣ್ಯಕಾಮ”ನೆಂಬ ಅರ್ಥಶಾಸ್ತ್ರಜ್ಞನ ಮಾತಿನಂತೆ ನಾವೆಲ್ಲಿ ತಪ್ಪಿದ್ದೇವೆ?

ಹಣ! ಹಣ! ಹಣ! ದುರಾಶೆಗೆ ಬಲಿ ಬಿದ್ದ ಮಾನವ ಮಾಡುವ ದೊಡ್ಡ ತಪ್ಪು ಹಣ ಮಾಡುವುದು. ನಂತರ ಆ ಹಣದ ಬಲದಿಂದ ಅಪರಾಧ ಮಾಡುವುದು. ಹಾಗೆ ದೇಶದ್ರೋಹಿಯಾಗಿ ಬೆಳೆಯುತ್ತಾ ನಂತರ ಆಳುವ ಸರಕಾರವನ್ನೇ ಎದುರಿಸಿ ಭೂಗತನಾಗುವುದು. ನಂತರ ಭಯೋತ್ಪಾದಕನಾಗುವುದು. ಇದಕ್ಕೆಲ್ಲಾ ಕಾರಣ ಮೂಲಭೂತವಾದ ಈ ಹಣವೇ. ಹಾಗಿದ್ದರೆ ಹಣವೆಂದರೇನು? ಸ್ವಾಭಾವಿಕವಾಗಿ ತನ್ನ ಅಗತ್ಯಕ್ಕಾಗಿ, ಆಹಾರಕ್ಕಾಗಿ ದುಡಿಯುವ ಹಣ ಶ್ರಮದ್ದು. ಅದು ಸತ್ಕಾರ್ಯದಲ್ಲಿ ಮಾತ್ರಾ ಉಪಯೋಗವಾಗುತ್ತದೆ. ಆದರೆ ಅಳತೆಯಿಲ್ಲದೆ ದುಡಿಮೆಯಾಗುವ ಹಣ ಎಂದೂ ಸದ್ಬಳಕೆಯಾಗಲಾರದು. ಅದು ಮುಂದೆ ದೇಶದ್ರೋಹೀ ಕೃತ್ಯಗಳಲ್ಲಿ ತನ್ನ ಪಾತ್ರ ಮಾಡಿಯೇ ಮಾಡುತ್ತದೆ. ಹಾಗಾಗಿ ದುಡಿಮೆಯಿಂದ ನೈಜವಾದ ಶ್ರಮಕ್ಕೆ ತಕ್ಕ ಆರ್ಥಿಕ ಶಕ್ತಿ+ ಶ್ರಮವಿಲ್ಲದ ಕೇವಲ ಮೋಸ, ವಂಚನೆ, ಸಮಾಜ ದ್ರೋಹದಿಂದ ಉತ್ಪಾದನೆಯಾಗುವ ಹಣಬಲ, ಅದು ದೇಶದ್ರೋಹಿಯನ್ನು ಸೃಷ್ಟಿ ಮಾಡುತ್ತದೆ. ಸಮಕಾಲೀನ ಭಾರತದಲ್ಲಿ ಈ ರೀತಿಯ ಒಂದು ವಿಚ್ಛಿದ್ರಕಾರೀ ಬೆಳೆ ಬೆಳೆಯುತ್ತಿದೆಯೆನ್ನಿಸುತ್ತಿದೆ. ಅದರ ಬಗ್ಗೆ ಪುಣ್ಯಕಾಮನೆಂಬ ಅರ್ಥಶಾಸ್ತ್ರಜ್ಞನ ಮಾತಿನಂತೆ ನಾವೆಲ್ಲಿ ತಪ್ಪಿದ್ದೇವೆ? ಚಿಂತಿಸೋಣ.

ಮೊದಲಾಗಿ ನಮ್ಮ ದೇಶೀಯ ಅರ್ಥವ್ಯವಸ್ಥೆ ಮತ್ತು ಮೀಸಲುನಿಧಿ ಹಾಗೂ ವಿತ್ತ ಸಚಿವಾಲಯದ + ಭಾರತೀಯ ರಿಸರ್ವ್ ಬ್ಯಾಂಕಿನ ಧೋರಣೆ ಹೇಗಿದೆ? ಅದಕ್ಕೆ ಆಧರಿಸಿ ಕಾನೂನು + ನ್ಯಾಯಾಂಗ ಹೇಗೆ ವ್ಯವಹರಿಸುತ್ತದೆ? ಜೊತೆ ಜೊತೆಯಲ್ಲಿ ರಾಜಕಾರಣ ಮತ್ತು ನಮ್ಮ ಆರಕ್ಷಕ ಇಲಾಖೆ ಇದರ ಕೈವಾಡವೇನಿದೆ? ಚಿಂತಿಸೋಣ.

ಮೊದಲಾಗಿ ಭಾರತೀಯ ಹಣಕಾಸು ನಿರ್ವಹಣೆಯು ರಿಸರ್ವ್ ಬ್ಯಾಂಕ್ ಅಧಿಕೃತ ಬಾಂಡ್ ರೂಪದ ನೋಟನ್ನು ಮುದ್ರಿಸಿ ಚಲಾವಣೆಯಲ್ಲಿ ತಂದು ಜನರು ವಹಿವಾಟು ನಡೆಸಲು ಸರಳಗೊಳಿಸಿದರು. ಆ ಚಲಾವಣೆಯಲ್ಲಿರುವ ನೋಟಿನಷ್ಟು ಬೆಲೆಯ ಚಿನ್ನವೇ ಮೀಸಲು ನಿಧಿ. ಅದನ್ನು ರಿಸರ್ವ್ ಬ್ಯಾಂಕ್ (ಅಥವಾ ಮೀಸಲು ನಿಧಿ ಬ್ಯಾಂಕ್) ತನ್ನ ಸುಪರ್ದಿಯಲ್ಲಿಟ್ಟು ಕೊಂಡು ಯಾವುದೇ ಕಾರಣಕ್ಕೆ ಆ ನೋಟಿನ ಮುಖಬೆಲೆಯ ಸಮಾನ ಚಿನ್ನ ಕೊಡಲು ಬದ್ಧವಾಗಿರುತ್ತದೆ ರಿಸರ್ವ್ ಬ್ಯಾಂಕ್. ಇದು ಹಣಕಾಸು ನಿರ್ವಹಣೆಯ ಒಂದು ಸೂತ್ರ. ಅದರಡಿಯಲ್ಲಿ ಹಣಕಾಸು ನಿರ್ವಹಣೆ ನಡೆಯುತ್ತಲೇ ವ್ಯಾವಹಾರಿಕ ವೃದ್ಧಿ ಸೂತ್ರದಂತೆ ಸಾರ್ವಜನಿಕ ಕ್ಷೇತ್ರದಲ್ಲಿ ಉತ್ಪಾದಕ ವ್ಯವಹಾರ ನಡೆಸಿ ಸಾರ್ವಜನಿಕರು ಅದರ ವೃದ್ಧಿಯ ಅಂಶವನ್ನು ತೆರಿಗೆ ರೂಪದಲ್ಲಿ ಮರುಪಾವತಿಸಿ ಉಳಿಕೆ ಲಾಭಾಂಶದಿಂದ ಸಾರ್ವಜನಿಕರು ತಮ್ಮ ಉಪಜೀವನ ನಡೆಸಬೇಕು. ಅದು ವಿತ್ತೀಯ ನಿಯಮ.  ಈ ವಿತ್ತೀಯ ನಿಯಮ ಈಗ ಪೂರ್ತಿ ಗಾಳಿಗೆ ತೂರಿ ತೆರಿಗೆ ವಂಚನೆ ಮಾಡುತ್ತಾ ಹಣದುಬ್ಬರ ಹೆಚ್ಚಿಸುತ್ತಾ ದೇಶೀಯ ಆರ್ಥಿಕತೆಯಲ್ಲಿ ವಿತ್ತೀಯ ಕೊರತೆಗೆ ಕಾರಣವಾಗುತ್ತಿದೆ. ರಿಸರ್ವ್ ಬ್ಯಾಂಕ್ ನಿಂದ ಬಿಡುಗಡೆಗೊಂಡ ಒಂದು ನೂರು ರೂಪಾಯಿಯ ನೋಟು ತನ್ನ ದುಡಿಮೆಯ ಶಕ್ತಿ ಪರಮಾವಧಿ ವರ್ಷಕ್ಕೆ 16 ರೂ. ಮಾತ್ರ. ಅದರ ಅದೇ ವೃದ್ಧಿದರ ಅನುಪಾತದಲ್ಲಿ ಅರ್ಥವ್ಯವಸ್ಥೆಯಿದೆ. ಆದರೆ ನಮ್ಮ ಭಾರತದಲ್ಲಿ ಅದು ಹಲವು ಬಾರಿ ಚಲಾವಣೆಗೊಂಡು ಒಂದು ವರ್ಷಕ್ಕೆ 100 ರೂಪಾಯಿಯು 3000 ರೂಪಾಯಿಯಾಗಿ ಬದಲಾಗುತ್ತಿದೆ. ಅದೂ ಸರಕಾರಕ್ಕೆ ತೆರಿಗೆ ವಂಚನೆ ಮಾಡಿ. ಚಲಾವಣೆಯಲ್ಲಿ ಬಿಟ್ಟ 100 ರೂಪಾಯಿಯು 1 ವರ್ಷಕ್ಕೆ 16 ಆಗಬೇಕಾದ್ದು 3000 ರೂಪಾಯಿಯಾಗಿ ಪರಿವರ್ತನೆಯಾದರೆ ವಿತ್ತೀಯ ಅಭಿವೃದ್ಧಿ ದರಕ್ಕೆ ಹೊಂದುವ ಮೀಸಲು ನಿಧಿ ಎಲ್ಲಿಂದ ತರಲಿ? ಹಾಗಾಗಿ ಬೆಲೆಯೇರಿಕೆಯೆಂಬ ಕುಟಿಲ ಪ್ರಯತ್ನದಿಂದ ಸರಿದೂಗಿಸಲು ಆರಂಭಿಸುತ್ತವೆ ವಾಣಿಜ್ಯ ಕ್ಷೇತ್ರಗಳು.

ಈಗ ವಾಣಿಜ್ಯ ಕ್ಷೇತ್ರಕ್ಕೆ ಬರೋಣ. ಮೊದಲು ನಮ್ಮಲ್ಲಿ ಉತ್ಪಾದಕತೆ ಉತ್ಪಾದನಾ ಪುಷ್ಠಿ, ತುಷ್ಠಿ, ಸೃಷ್ಠಿ, ವ್ಯಷ್ಠಿಯೆಂಬ ನಾಲ್ಕು ಬಗೆಯ ಉತ್ಪಾದನೆಗಳಿವೆ. ಬೇಕಾದಷ್ಟು ಉತ್ಪಾದಿಸುವುದು ಅವುಗಳಲ್ಲಿ ವಸ್ತ್ರ, ಸಲಕರಣೆ, ಪಾತ್ರೆಗಳು, ಅಲಂಕಾರವಸ್ತುಗಳು, ಚಿನ್ನ, ಬೆಳ್ಳಿ, ಇತರೆ ಲೋಹಗಳು, ಕೃಷಿ ಉಪಯೋಗಿ ಸಲಕರಣೆ, ಜೀವನಾವಶ್ಯಕ ವಸ್ತುಗಳು, ಔಷಧಿ. ಇದು ದೇಶದ ಅಗತ್ಯ ಗುರುತಿಸಿ ಅಷ್ಟೇ ಉತ್ಪಾದಿಸಿ ಮೂಲಬೆಲೆಯ ದಶಾಂಶ ಲಾಭವಿಟ್ಟು ಒದಗಿಸಬೇಕು. ಇದು ಪುಷ್ಠಿಯೆನ್ನಿಸಿಕೊಳ್ಳುತ್ತದೆ= ಸಹಕಾರ ಪೂರಕತೆ

ಇನ್ನು ತುಷ್ಠಿ:- ಅಲ್ಪ ಪ್ರಮಾಣದಲ್ಲಿ ಉತ್ಪಾದಿಸಿ ಅಗತ್ಯವರಿತು ಪೂರೈಸುವುದು. ಇವುಗಳ ಬೇಡಿಕೆ ಶೇ.100 ರಲ್ಲಿ ಅಗತ್ಯ ಶೇ.40 ಭಾಗ ಇರುತ್ತದೆ. ಆದಷ್ಟು ಶೇ.40 ಭಾಗ ಮಾತ್ರ ಒದಗಿಸಬೇಕು. ಇದರ ಮೂಲ ಉತ್ಪಾದನೆಯ ಬೆಲೆಯ ಶೇ.40 ಭಾಗ ಲಾಭಾಂಶವಿಟ್ಟು ವ್ಯಾಪಾರ ಮಾಡಬೇಕು.

ಇನ್ನು ಮೂರನೆಯ ಸೃಷ್ಠಿ:- ಇಲ್ಲಿ ಅಗತ್ಯವನ್ನು ಪ್ರಚಾರ ಬೋಧನೆ ಇತ್ಯಾದಿಗಳಿಂದ ಸೃಷ್ಟಿಸಿ ಜನರು ಬಳಸುವಂತೆ ಮಾಡಬೇಕು. ಇಲ್ಲಿ ಲಾಭಾಂಶ ಶೇ.20 ಭಾಗ ಮೀರಿರಬಾರದು. ಇದು ಕಲಾವಸ್ತುಗಳು, ಅಧ್ಯಯನಯೋಗ್ಯ ಪುಸ್ತಕ, ಬೌದ್ಧಿಕ ಅಭಿವೃದ್ಧಿ ಸಾಧನಗಳು, ಆಟೋಟ ಉಪಕರಣಗಳು, ವಾಹನ, ಸುಲಭೀಕರಣ ಸಾಧನ ಸನ್ನೆಗಳು.

ಇನ್ನು ನಾಲ್ಕನೆಯದಾದ ವ್ಯಷ್ಠಿ:- ತೀರಾ ನಿರ್ಬಂಧಿತವಾಗಿ ಎಚ್ಚರದಿಂದ ವ್ಯವಹಾರ ನಡೆಸಬೇಕಾದ್ದು. ಲಾಭಾಂಶ ಶೇ.50 ಭಾಗ. ಆದರೆ ಮಾರಾಟವಾದ ಮೇಲೂ ಮಾರಿದವನೂ ಅದರ ಜವಾಬ್ದಾರಿ ಹೊತ್ತಿರಬೇಕಾದ, ಸೂಕ್ತ ಬಳಕೆ ಹೊರತುಪಡಿಸಿ ಇತರೆ ಬಳಕೆಯಾಗದಂತೆ ನೋಡಿಕೊಳ್ಳಬೇಕಾದ ವಸ್ತು ವಿಶೇಷ ರಾಸಾಯನಿಕಗಳು, ವಿಷ ವಸ್ತುಗಳು, ಆಯುಧಗಳು, ವಿಶೇಷ ಜ್ಞಾನಗಳು, ತೀವ್ರತರದ ಔಷಧಿಗಳು, ಇತ್ಯಾದಿ ಇತ್ಯಾದಿಗಳು. ಇವೆಲ್ಲದ ಸಮಗ್ರ ವ್ಯಾಪಾರವೇ ವಾಣಿಜ್ಯ ಕ್ಷೇತ್ರ. ಈಗ ಅಲ್ಲೆಲ್ಲಾ ಈ ನಿಯಮ ಗಾಳಿಗೆ ತೂರಲ್ಪಟ್ಟಿದೆ. ಕಚ್ಚಾವಸ್ತುವನ್ನು ಸಾರ್ವಜನಿಕವಾಗಿ ಮಾರುವಂತಿಲ್ಲ. ಉತ್ಪಾದಕನಿಗೆ ಮಾತ್ರವೆಂಬ ಸ್ಥೂಲನಿಯಮವೂ ಬಳಕೆಯಾಗುತ್ತಿಲ್ಲ. ಹಾಗಾಗಿ ದುರ್ಬಳಕೆ ಹೆಚ್ಚುತ್ತಿದೆ. ಬಾಂಬ್, ವಿಷಪ್ರಯೋಗ ಇತ್ಯಾದಿ ಸಮಾಜನಾಶಕ ವೃತ್ತಿ ಸಾಮಾನ್ಯವಾಗುತ್ತಿದೆ. ಈ ರೀತಿಯ ವಾಣಿಜ್ಯದಿಂದಲೇ ವಿಧ್ವಂಸಕಕೃತ್ಯ ಕಾರಣದ ಅನೀತಿಯುಕ್ತ ಧನಸಂಚಯನ ಬೆಳೆದು ನಿಂತಿದೆ ಭೂತಾಕಾರವಾಗಿ. ಹಾಗಾಗಿ ಸಮತೋಲನ ಮಾಡಲು ಸಾಧ್ಯವಾಗುತ್ತಿಲ್ಲ ಅರ್ಥಶಾಸ್ತ್ರಜ್ಞರಿಗೆ. ಮತ್ತು ಎರಡನೆಯದಾಗಿ ಹಣದಿಂದ ಹಣ ಮಾಡುವ ವೃತ್ತಿ. ಅಂದರೆ ಬಡ್ಡಿ ವ್ಯವಹಾರ. ಅದಕ್ಕಾಗಿಯೇ ಬ್ಯಾಂಕುಗಳು. ಆದರೆ ಈಗ ಬ್ಯಾಂಕ್ ಮೂಲಕ ನಡೆಯುವ ಲೇವಾದೇವಿಯ ನಾಲ್ಕು ಪಟ್ಟು ಹಣ ಬಡ್ಡಿ ವ್ಯವಹಾರದಲ್ಲಿ ಖಾಸಗಿಯಾಗಿ ಅನಧಿಕೃತವಾಗಿ ನಡೆಯುತ್ತಿದೆ. ಅಧಿಕೃತ ಹಣಕಾಸು ಸಂಸ್ಥೆಗಳು ರಿಸರ್ವ್ ಬ್ಯಾಂಕ್ ನಿಯಮದಂತೆ ಹುಟ್ಟುವಳಿ ಆಧರಿಸಿ ನಡೆಸುವ ಲೇವಾದೇವಿಯಲ್ಲಿ ನಷ್ಟ ಅನುಭವಿಸುತ್ತಿವೆ. ಆದರೆ ಖಾಸಗಿ ಹಣಕಾಸು ವ್ಯವಹಾರ ಮಾತ್ರ ಬಹಳ ವೇಗವಾಗಿ ಬೆಳೆಯುತ್ತಿದೆ. ಅದರ ಬಡ್ಡಿಯ ದುಡಿಮೆ ಅಗಾಧವಾದದ್ದು. ತಿಂಗಳಿಗೆ 100 ರೂ.ಗೆ 10 ರೂ.ಬಡ್ಡಿ, 15 ರೂ., 20 ರೂ. ಬಡ್ಡಿಯವರೆಗೂ ನಡೆಯುತ್ತಿದೆ. ಅದರಿಂದಾ ಖಾಸಗಿ ಸಾಲ ವ್ಯವಸ್ಥೆ ತೀರಾ ವಿಕೃತವಾಗುತ್ತಿದೆ. ಜನರೂ ಅತ್ತ ವಾಲುತ್ತಿದ್ದಾರೆ. ಕಾರಣ ನಿಯಮಾವಳಿ ಇಲ್ಲ, ಸಾಲ ಪಡೆಯಲು ನಿರ್ದಿಷ್ಟ ಕಾರಣ ಬೇಕಿಲ್ಲ. ಖಾಸಗಿ ಹಣಕಾಸು ಸಂಸ್ಥೆಯವರ ನಿಯಮ ಸರಳ, ಸುಲಭ. ಒಂದು ಗಂಟೆಯಲ್ಲಿ ಸಾಲ ಪಡೆಯಬಹುದು. ಅವರ ಬಡ್ಡಿ ನಿಬಂಧನೆಗೆ ಒಪ್ಪಿದಲ್ಲಿ ಸಾಲ ಸಿಕ್ಕಿದಂತೆ. ಆದರೆ ಇದರಿಂದಾಗಿ ಮೂಲಧನವು ದುಡಿಯಬಾರದ ರೀತಿಯಲ್ಲಿ ದುಡಿದು ವೃದ್ಧಿಸುವುದರಿಂದ ದೇಶದ ಆರ್ಥಿಕತೆ ಪ್ರಬಲ ನಷ್ಟಕ್ಕೆ ಕಾರಣವಾಗುತ್ತದೆ. ಅವರಿಗೆ ಅನಧಿಕೃತವಾದರೂ ಯಾವುದೇ ತೆರಿಗೆ ಕಟ್ಟದಿದ್ದರೂ ಕೂಡ ಸರಕಾರ, ನ್ಯಾಯಾಂಗ, ಆರಕ್ಷಕಪಡೆ ಆ ಖಾಸಗಿ ಸಂಸ್ಥೆಗಳಿಗೆ ಸಹಾಯ ಮಾಡುತ್ತಿವೆ ಆದರೆ ತಿಳಿಯದೆ. ಕೆಲವು ತಿಳಿದೂ ಕೂಡ. ಹೇಗೆಂದರೆ ಒಬ್ಬ ಸಾಲಗಾರನ ಹತ್ತಿರ ಆ ಹಣಕಾಸು ಸಂಸ್ಥೆ ಯಾ ವ್ಯಕ್ತಿ ಕೆಲವು ಖಾಲಿ ಚೆಕ್ ಪಡೆದಿರುತ್ತಾನೆ. ಸಾಲ ಮಾಡಿದವನು ಹಣ ಹಿಂತಿರುಗಿಸದಿದ್ದಲ್ಲಿ ಆ ಚೆಕ್ ತುಂಬಿ ಅಗಾಧ ಮೊತ್ತ ಬರೆದು ಕೋರ್ಟಿಗೆ ಹೋಗುತ್ತಾನೆ ಇಲ್ಲಾ ಕಂಪ್ಲೇಂಟ್ ಕೊಡುತ್ತಾನೆ. ಕಂಪ್ಲೇಂಟ್ ಕೊಟ್ಟಲ್ಲಿ ಪೋಲೀಸ್ ಸ್ಟೇಶನ್ ನಲ್ಲೇ ಅದು ತೀರ್ಮಾನವಾಗುವುದೂ ಇದೆ. ಹಣ ವಸೂಲಿ ಮಾಡಿಕೊಡುತ್ತಾರೆ ಪೋಲೀಸರು. ಅದಕ್ಕೆ ಏನಿದೆಯೊ ಗೊತ್ತಿಲ್ಲ. ಕೋರ್ಟಿಗೆ ಹೋದರೆ ಮತ್ತೆ ಕೋರ್ಟ್ ಅವರನ್ನು ಬಂಧಿಸಲು ಆದೇಶ ಕೊಡುತ್ತದೆ. ಅಲ್ಲಿಯೂ ಅವ್ಯವಹಾರವೇ. ಈ ಚೆಕ್ ಎಂಬ ಒಂದು ಕಾಗದದ ಚೂರನ್ನು ಒತ್ತೆಯಿಟ್ಟು ಕೋಟ್ಯಂತರ ಸಾಲ ಪಡೆಯಬಹುದು. ಹಣಕಾಸು ಕೊಡುವವನಿಗೆ ಯಾವುದೇ ಶುಲ್ಕವಿಲ್ಲದೇ ಪೋಲೀಸ್, ನ್ಯಾಯಾಂಗ ವಸೂಲಿ ಮಾಡಿಕೊಡುತ್ತದೆ ಸರಕಾರೀ ಖರ್ಚಿನಲ್ಲಿ. ಎಂತಹಾ ವಿಪರ್ಯಾಸ? ಅದೇ ಸರಕಾರೀ ನೆಲೆಯ ಬ್ಯಾಂಕಿನಲ್ಲಿ ಸಾಲ ಪಡೆದರೆ ವರ್ಷಗಟ್ಟಳೆಯಾದರೂ ವಸೂಲಾಗುವುದಿಲ್ಲ. ಇದಕ್ಕೆ ಚೆಕ್ ಎಂಬ ಭೂತದ ಬೆದರಿಕೆಯೇ ಕಾರಣ. ಅದಕ್ಕೆ ಸಂಬಂಧಿಸಿದ ಕಾನೂನು ಕಾರಣ. ಒಂದು ಘಟನೆಯನ್ನು ಇಲ್ಲಿ ಉದಾಹರಿಸುತ್ತೇನೆ. ನಮ್ಮ ಸ್ಟೇಶನ್ + ಕೋರ್ಟ್ ಎಷ್ಟು ಮತ್ತು ಬ್ಯಾಂಕ್ ಗಳೂ ಕೂಡ ಈ ರೀತಿಯ ಖಾಸಗಿ ವ್ಯಕ್ತಿಗಳಿಗೆ ಸಹಕರಿಸುತ್ತವೆ ಎಂಬುದಕ್ಕೆ ಉದಾಹರಣೆ ನೋಡಿ.

ಒಮ್ಮೆ ಈ ವಿಚಾರದಲ್ಲಿ ಪ್ರಯೋಗಾರ್ಥವಾಗಿ ಒಬ್ಬ ವ್ಯಕ್ತಿ 20 ಸಾವಿರ ರೂ. ಹಣವನ್ನು ಒಬ್ಬ ಮಾರ್ವಾಡಿಯಿಂದ ಸಾಲ ಪಡೆಯುತ್ತಾನೆ. ಅದಕ್ಕೆ 10 ಸಾವಿರ ರೂ.ನಂತೆ 2 ಕಂತಿನ ಚೆಕ್ ಪಡೆಯುತ್ತಾನೆ. ಆದರೆ ಸಾಲ ಪಡೆದ ವ್ಯಕ್ತಿ ಮೊದಲೇ ಯೋಜಿಸಿ ಈ ಯೋಜನೆ ಮಾಡಿಯೇ ಸಾಲ ಪಡೆದಿದ್ದರಿಂದ ಸಹಿ ಬದಲಿಸಿ ಮಾಡಿದ್ದಾನೆ. ಆತನು ಸಾಲ ಹಿಂತಿರುಗಿಸದಿದ್ದಾಗ ಬ್ಯಾಂಕಿಗೆ ಚೆಕ್ ಹಾಜರು ಪಡಿಸಲಾಗುತ್ತದೆ. ಅಲ್ಲಿ ಚೆಕ್ ಸಹಿ ನೋಡಬೇಕು ತಾನೆ? ಅದನ್ನು ನೋಡಿಲ್ಲ. ಇವರ ಖಾತೆಯಲ್ಲಿ ಹಣವಿಲ್ಲವೆಂದು ಬರೆದು ಹಿಂತಿರುಗಿಸುತ್ತಾರೆ. ಅದರಂತೆ ಪೋಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ಕೊಡುತ್ತಾನೆ ಮಾರ್ವಾಡಿ. ಆಗ ಪೋಲೀಸರು ಸಾಲಗಾರನನ್ನು ಹಿಡಿಯುವುದಕ್ಕಾಗಿ 2 ತಿಂಗಳು ಹೋರಾಡುತ್ತಾರೆ ಕೊನೆಗೂ ಅವನನ್ನು ಹಿಡಿತಂದು ತನಿಖೆ ಮಾಡುತ್ತಾರೆ. ಅವನು ಇದು ಸುಳ್ಳು, ನಾನು ಹಣ ಪಡೆದಿಲ್ಲ, ಈ ಸಹಿ ನನ್ನದಲ್ಲವೆಂದು ಎಷ್ಟು ವಾದಿಸಿದರೂ ಸ್ಟೇಶನ್ ನಲ್ಲಿ ಒಪ್ಪದೇ ಮಾರ್ವಾಡಿ ಕೇಸ್ ಹಾಕಿದ ಮೊತ್ತ ಹತ್ತು ಸಾವಿರದ ಎರಡು ಚೆಕ್ ಈಗ ಹತ್ತು ಲಕ್ಷವಾಗಿ ಪರಿವರ್ತನೆಯಾಗಿದೆ. ಅದನ್ನು ಕೊಡು ಎಂದು ಪೀಡಿಸುತ್ತಾರೆ. ಕೊನೆಗೂ ಛಲವಾದಿಯಾದ ಈ ಸಾಲಗಾರ ಕೊಡದಿದ್ದಾಗ ಹಲವಾರು ಸೆಕ್ಷನ್ ಹಾಕಿ ಅವನ ಮೇಲೆ ಕೇಸ್ ಹಾಕಿ ಕೋರ್ಟಿಗೆ ಹಾಜರು ಪಡಿಸಲಾಗುತ್ತದೆ. ಅಲ್ಲಿಯೂ ಸಾಲಗಾರನ ಕಡೆಯ ಲಾಯರ್ ಅದು ಅವನ ಚೆಕ್ ಅಲ್ಲ, ಸಹಿ ಅವನದ್ದಲ್ಲವೆಂದರೆ ಕೇಳದೇ ಮ್ಯಾಜಿಸ್ಟ್ರೇಟ್ ಅವನಿಗೆ ಜಾಮೀನು ಕೊಡದೇನೇ ಜೈಲಿಗೆ ಕಳಿಸುತ್ತಾರೆ. ನಂತರ ಆತ ಮೇಲಿನ ಕೋರ್ಟಿನಿಂದ ಜಾಮೀನು ಪಡೆದು ಬಂದು ಈ ಕೇಸಿನ ಹೋರಾಟಕ್ಕಾಗಿ ಛಲದಿಂದ ನಿಲ್ಲುತ್ತಾನೆ. ಕೊನೆಗೆ ಬ್ಯಾಂಕ್ ನವರು ಅದು ಅವನ ಖಾತೆಯ  ಚೆಕ್ ಸ್ಲಿಪ್ ಅಲ್ಲ, ಅವನ ಸಹಿಯೂ ಅಲ್ಲವೆಂದು ದೃಢೀಕರಿಸುತ್ತಾರೆ. ಆದರೆ ಅದಕ್ಕೆ ಮುಂಚೆ ಬ್ಯಾಂಕಿನವರೇನು ಮಾಡಿದ್ದು? ಸ್ಟೇಶನ್ನವರೇಕೆ ಅಷ್ಟು ಕಷ್ಟಪಟ್ಟರು? ಕಾರಣ ಬರೆಯಲಾರೆ, ನೀವೇ ತಿಳಿದುಕೊಳ್ಳಿ. ಇದರಿಂದ ನಾವು ಅರ್ಥಮಾಡಿಕೊಳ್ಳಬೇಕಾದ್ದು  ಖಾಸಗಿ ಹಣಕಾಸು ಒದಗಣೆಯೆಂಬ ಸಮಾಜ ಸುಲಿಗೆಕೋರರು ಮಾಡುತ್ತಿರುವ ದಂಧೆ. ಹಣದ ದುಡಿಮೆಯ ಶಕ್ತಿಗೆ ಮಿತಿಯಿಡದಿದ್ದಲ್ಲಿ ಮುಂದೆ ಇನ್ನೂ ಹಣದುಬ್ಬರ ಹೆಚ್ಚಬಹುದಲ್ಲವೆ?

ಹಿಂದೆ 1970ನೇ ಇಸವಿಯಲ್ಲಿ ಸರಕಾರ ಒಮ್ಮೆ ಅಡವು ಸಾಲವನ್ನು ಸಾರ್ವತ್ರಿಕವಾಗಿ ವಜಾ ಮಾಡಿತು. ಹಾಗೆ ಈಗ ಚೆಕ್ ಸಾಲವನ್ನು ನಿಷೇಧಿಸಿದಲ್ಲಿ ಈ ವ್ಯವಹಾರ ನಿಲ್ಲಿಸಲು ಸಾಧ್ಯ. ಚೆಕ್ ನಿಂದ ಕೇಸ್ ನಡೆಯಬಾರದು. ಸಾಲ ತೀರಿಸಲು ಅಥವಾ ಅದಕ್ಕೆ ಅಡವು ಚೆಕ್ ಆಧಾರವಾಗದಂತೆಯೂ ಆ ಸಂಬಂಧಿ ಕೋರ್ಟ್ ತನ್ನ ನ್ಯಾಯಾಧಿಕರಣ ಬಿಡುವಂತೆಯೂ ಕಾನೂನು ತಂದರೆ ಈ ಸರಕಾರೀ ಯಂತ್ರದ ದುರುಪಯೋಗ ನಿಲ್ಲುತ್ತದೆ. ಹಾಗೇ ಅನಧಿಕೃತ ವಹಿವಾಟು ಸಂಸ್ಥೆಗಳೂ ಹಿಡಿತಕ್ಕೆ ಬರುತ್ತವೆ. ಒಟ್ಟಾರೆ ಸರಕಾರೀ ಸೌಲಭ್ಯವನ್ನು ದುರುಪಯೋಗ ಮಾಡಿಕೊಂಡು ರಾಷ್ಟ್ರೀಕೃತ ಬ್ಯಾಂಕ್ ಗಿಂತ ಸಮರ್ಥವಾಗಿ ಸಾಲ ಕೊಟ್ಟು ಅಷ್ಟೇ ಬದ್ದವಾಗಿ ವಸೂಲು ಮಾಡಿಕೊಳ್ಳುವ ಈ ಖಾಸಗಿ ಹಣಕಾಸು ಸಂಸ್ಥೆಗಳು ದೇಶದ ಆರ್ಥಿಕತೆಯ ಮೇಲೆ ಪ್ರಬಲ ದುಷ್ಪರಿಣಾಮ ಬೀರುತ್ತವೆ. ಅದರ ಇನ್ನೊಂದು ಮುಖವೇ ಭೂಗತ ಚಟುವಟಿಕೆ. ಜನರನ್ನು ಹೆದರಿಸಿ, ಬೆದರಿಸಿ ವಸೂಲಿ ಮಾಡಿಕೊಳ್ಳಲು ಇರುವ ಬ್ರಹ್ಮಾಸ್ತ್ರಗಳು. ಹಾಗಾಗಿ ದೇಶದಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಗಳಿಗಿಂತ ಹೆಚ್ಚು ವ್ಯವಹಾರ ಮಾಡುತ್ತವೆ. ಆದರೆ ಯಾವುದೇ ಲೆಕ್ಕವಿಲ್ಲ, ತೆರಿಗೆ ಇಲ್ಲ, ಎಲ್ಲಾ ಕಪ್ಪು ಹಣವೇ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕೇಂದ್ರ ಸರಕಾರವು, ರಿಸರ್ವ್ ಬ್ಯಾಂಕೂ ಈ ನಿಟ್ಟಿನಲ್ಲಿ ಗಮನ ಹರಿಸಿ ಚೆಕ್ ಗೆ ಕೊಟ್ಟ ವಿಶೇಷ ಮಾನ್ಯತೆ ರದ್ದುಪಡಿಸಿ  ಅದೊಂದು ಬೇರರ್ ಬಾಂಡ್ ಮಾತ್ರ, ಗ್ಯಾರಂಟಿ ಪತ್ರವಲ್ಲವೆಂದು ನಿಗದಿಪಡಿಸಬೇಕಿದೆ. ಹಾಗೇ ಆಸ್ತಿಮಿತಿ ಕಾನೂನು ಪರಿಣಾಮಕಾರಿಯಾಗಿ ಜಾರಿಗೆ ತಂದಲ್ಲಿ ಈ ಅನಿಯಮಿತ ಹಣ ಸಂಚಯನ ನಿಲ್ಲಬಹುದು. ವಿದೇಶದಲ್ಲಿ ಕಪ್ಪು ಹಣ, ಇದೂ ಕೂಡ ಈ ರೀತಿಯ ಕಳ್ಳ ಚಟುವಟಿಕೆ ತೆರಿಗೆ ವಂಚನೆಯಿಂದಲೇ ಸಂಗ್ರಹಿತವಾದದ್ದು. ಅವನ್ನೆಲ್ಲಾ ಆಧರಿಸಿ ಪುಣ್ಯಕಾಮನ ಅಭಿಪ್ರಾಯವನ್ನು ತಿಳಿಯೋಣ.

ಭದ್ರಂ ತೇ ಅರ್ಥೇ ಸಹಸ್ರಂ ಅನೀಕವಂತಂ ರೋಚತೇ ರೋಹಿತಸ್ಯ
ದೃಶೇ ರುಶದೃಶೇ ಅಹರ್ನಕ್ತಯಾ ಚಿತ್ ರೂಕ್ಷಿತಂ ಆ ರೂಪೇ ಅನ್ನಮ್ || 1 ||
ಭದ್ರಂ ತೇ ಅರ್ಥೇ ಸ್ವಾ ಅನೀಕವಂತೇ ಸಂದ್ರಕ್ ಘೋರಸ್ಯ ವಿಷಣಃ ಚಾರುಃ
ವರಂತೇ ಶೋಚಂತೇ ಸ್ತನ್ವೀ ರೇಫ ತಮಸಾ ಶೋಚ ಆದುಃ ದುರ್ಯೋನಿಃ || 2 ||
ಭದ್ರಂ ನೋ ಅಪಿ ವಾತಯ ಮನಾಃ | ಶಂ ನೋ ಅಸ್ತು ದ್ವಿಪದೇ ಶಂ ಚತುಷ್ಪದೇ ||

  1. ಒಂದು ದೇಶ, ಅಲ್ಲಿಯ ರಾಜ ಮತ್ತು ಅವನ ಆಡಳಿತಾಂಗ ಅಧಿಕಾರಿಗಳು ಒಂದು ಭಾಗ. 
  2. ಹಾಗೇ ಸಮಾಜದ ಎಲ್ಲಾ ವರ್ಗದ ಸಶಕ್ತ ಜನ ಸಮೂಹ ಒಂದು ಭಾಗ. 
  3. ಇನ್ನು ಎಲ್ಲಾ ವರ್ಗದಲ್ಲಿರುವ ಅಶಕ್ತ ಜನ ಒಂದು ವರ್ಗ. 
  4. ಮತ್ತು ಆ ದೇಶದ ವ್ಯಾಪ್ತಿಯಲ್ಲಿರುವ ಎಲ್ಲಾ ರೀತಿಯ ಪ್ರಾಣಿ, ಪಕ್ಷಿ, ಗಿಡಮರ, ಓಷಧಿ, ಲತೆಗಳು, ನದೀನದಗಳು, ಕೆರೆ, ಕಟ್ಟೆ, ದೇವಾಲಯ, ಮಠಗಳೂ ಸೇರಿ ಒಂದು ವರ್ಗ. 

ಹಾಗಾಗಿ ಚತುಷ್ಪದ. ರಾಜ + ಪ್ರಜೆ = ದ್ವಿಪದ. ಇವುಗಳ ಭದ್ರತೆಯೇನು? ಏನಿದ್ದರೆ ಭದ್ರತೆ? 
ಜೀವನ ಸ್ವಾತಂತ್ರ್ಯ + ಅನ್ನ ಇದು ಇದ್ದರೆ ದ್ವಿಪಾದ ಭದ್ರತೆ
ಅನ್ನ, ಆರೋಗ್ಯ, ಶಿಕ್ಷಣ, ರಕ್ಷಣೆ, ಇವು ಚತುಷ್ಪಾದ ಭದ್ರತೆ

ಇದು ಈ ದೇಶದಲ್ಲಿ ಒದಗುತ್ತಿದೆಯೇ? ಆಲೋಚಿಸಿ. ನಿತ್ಯ ನಿರಂತರ ಅಪಾಯದಲ್ಲಿಯೇ ಬದುಕುತ್ತಿರುವ ಪ್ರಜಾವರ್ಗ ರಾಜನಿದ್ದಾನೆಯೆ? ಎಂದು ಕೇಳುವ ಸ್ಥಿತಿಯಲ್ಲಿದ್ದಾನೆ. ದೇಶದಲ್ಲಿ ಸಕಲ ಚರಾಚರ ಜೀವಿಗಳೂ ಸುಖ ಸಮಾನತೆಯಲ್ಲಿ ಬದುಕುವಂತೆ ನಿಯೋಜಿಸುವವನೇ ರಾಜ.  ಶಂ ನೋ ಅಸ್ತು ದ್ವಿಪದೇ ಶಂ ಚತುಷ್ಪದೇ ಎಂದಿದೆ. ದೇಶಕ್ಕೆ ಅತೀ ಅಗತ್ಯವಾದದ್ದು ಸಬಲ ಆರ್ಥಿಕತೆ. ಅದು ಉತ್ತಮ ಆರ್ಥಿಕ ಯೋಜನೆಯಿಂದ ಬರಬೇಕಾದ್ದೇ ವಿನಃ ತೆರಿಗೆ ಮೂಲದಿಂದಲ್ಲ. ಎಲ್ಲಾ ವಿಧದಲ್ಲೂ ತೆರಿಗೆ ವಿಧಿಸಿ ಆರ್ಥಿಕ ಮೂಲ ಹೆಚ್ಚಿಸಿಕೊಳ್ಳುವ ಸರಕಾರೀ ಅರ್ಥನೀತಿ ಸಾಧುವಲ್ಲ. ದೇಶದ ಸುಭದ್ರತೆಗೆ ಅನೀಕ ವೆಂಬ ಅರ್ಥಮೂಲ ಚಿಂತಿಸಬೇಕು. ಸಂದೃಕ, ಘೋರ, ವಿಷಣ, ಚಾರು ವೆಂಬ ನಾಲ್ಕು ರೀತಿಯಲ್ಲಿ ಸಂಗ್ರಹವಾಗುತ್ತದೆ. ತನ್ಮೂಲಕ ಖಜಾನೆ ತುಂಬುತ್ತದೆ, ಕೊರತೆಯಾಗುವುದಿಲ್ಲ. ಆದರೆ ಈಗಿನ ನಮ್ಮ ಅರ್ಥ ಶಾಸ್ತ್ರಜ್ಞರಿಗೆ ಈ ವಿಧಾನ ಅರಿವಿಲ್ಲ. ಈಗ ರಾಜಾದಾಯ ಸಂಗ್ರಹ ಪದ್ಧತಿಯು ಬ್ರಿಟಿಷರ ಪದ್ಧತಿ. ಹಿಂದೆ ತೆರಿಗೆ ಸಂಗ್ರಹ ಹೇಗಿತ್ತು? ಈ ಲೇಖಾ + ಅನುದಾನ ವ್ಯವಸ್ಥೆ ನಮ್ಮ ದೇಶಕ್ಕೆ ಅನಗತ್ಯ ಮತ್ತು ಪರಿಣಾಮವಾಗಿ ಭ್ರಷ್ಟಾಚಾರ ಕಾರಕ. ಮೂಲ ಅರ್ಥವ್ಯವಸ್ಥೆ ದೇಶಕ್ಕೆ ಶುಭಲಾಭ. ಈ ರೀತಿಯ ತೆರಿಗೆ ಸಂಗ್ರಹ ಕಾರಣದಿಂದಾಗಿ ಕಪ್ಪುಹಣವೆಂಬ ಮಹಾರಾಕ್ಷಸನ ನಾಶ ಸಾಧ್ಯ. ಅದರತ್ತ ದೃಷ್ಟಿ ಹರಿಸುವಿರೇ?

ದೃಶೇ = ರು--ದೃಶೇ 
       = ಅಹಃ + ನಕ್ತಯಾ 
       = ಚಿತ್-ರೂ-ಈಕ್ಷಿತಾ 
       = ಮಾ-ಆ 
       = ರೂಪೇ + ಅನ್ನಃ ಮಿತಿ 
ಎಂದಿದ್ದಾರೆ ಪುಣ್ಯಕಾಮರು. ಹಾಗೇ ಭದ್ರಂ ತೇ ಅರ್ಥೇ ಸಹಸ್ರಂ ಎಂದಿದ್ದಾರೆ. ದೇಶ ಭದ್ರವೂ, ಶಕ್ತವೂ, ಬೌದ್ಧಿಕ ಉನ್ನತಿಯೂ ಸಾಧಿಸಲು ಈ ಅರ್ಥನೀತಿ ಅತೀ ಅಗತ್ಯ.

ಯಾವ ರಾಜನು ತನ್ನ ಆಡಳಿತ ದೇಶ ಸುಭದ್ರವಾಗಿರ ಬೇಕೆಂದು ಬಯಸುತ್ತಾನೆ, ಅವನು ಮೊದಲು ಅನೀಕವಂತನಾಗ ಬೇಕು. ಹೇಗೆಂದರೆ ಅನೀಕವನ್ನು ಹೊಂದಿರಬೇಕು. ಭಗ = ದಾರಿ, ದಾರಿ ತಿಳಿದವನು ಭಗವಂತ ಹೇಗೋ ಹಾಗೆ ಅನೀಕವನ್ನು ಹೊಂದಿದವನು ಅನೀಕವಂತ. ಹಾಗಾಗಿ ರೋಚಕವೂ ರೋಹಿತವೂ ಆದ ಅರ್ಥವ್ಯವಸ್ಥೆಯನ್ನು ತರಲು ಸಾಧ್ಯ. ಇಲ್ಲಿ ಎಲ್ಲಿ ತಪ್ಪಿದ್ದಾರೆ ಅರ್ಥಶಾಸ್ತ್ರಜ್ಞರು? ತಿಳಿಯೋಣ.
ಮೊದಲು ಸಮಾಜ ವರಂತೀ ಅಂದರೆ ಏನನ್ನು ಸ್ವೀಕರಿಸಬೇಕು? 
ಸಃ ತತ್ ತನ್ ವೀ ವೀ ಮಿತಿ ಸ್ತನ್ವೀಃ ತತ್ಕಾರೇಣ ರೇಫಃ ತನ್ಮೂಲಕೈಃ ತಮಸಾ 
ತಮೋ ಮೂಲಾದನು ಶೋಚಃ ಆ-ದುಃ ದುಃ ರ್ಯೋನಿಃ ಇತಿ
ರೇಫ + ಶೋಚಗಳು ಉಂಟು ಮಾಡುವ ಅಸಮತೋಲನವೇ ನಾಡಿನ ದುರ್ಗತಿ. ಆ ಕಾರಣದಿಂದ ಕೆಟ್ಟ ಮನಸ್ಸಿನ ಜೀವ ಜನನ ತನ್ಮೂಲಕ ಶೋಚನೀಯ ಬದುಕು. ಹಾಗಾಗಿ ಹಗಲು ರಾತ್ರಿಗಳ ಭೇದವರಿಯದ ವೃತ್ತಿ + ಪ್ರವೃತ್ತಿ + ಅನುವೃತ್ತಿಗಳು ಹುಟ್ಟುತ್ತವೆ. ನಮ್ಮ ದೇಶದಲ್ಲಿ ಮಾನವನಿಗೆ ಪ್ರವೃತ್ತಿಕಾಲವೆಂದು ಅದರಂತೆ ಬ್ರಾಹ್ಮಿಯಲ್ಲಿ ಆರಂಭಿಸಿ ತ್ರಿಸಂಧ್ಯೆಗಳನ್ನು ಉತ್ತರಿಸಿ ಪೂರ್ವರಾತ್ರಿಯಲ್ಲಿ ಮಾತ್ರ ಮಾನವನಿಗೆ ಅವಕಾಶ. ನಂತರ ಪ್ರೇತ, ಪಿಶಾಚ, ಬ್ರಹ್ಮರಾಕ್ಷಸ ಕಾಲ. ಆದರೆ 1970 ದಶಕದಿಂದ ಈಚೆಗೆ ಹಗಲು ರಾತ್ರಿಗಳ ಪರಿವೆ ಇಲ್ಲದ ಜನಜೀವನ ಬಳಕೆಗೆ ಬಂತು. ಅದರಿಂದಾಗಿ ರೇಫದ ಪರಿವೆಯಿಲ್ಲದೆ ಜನ ದುರ್ಮಾರ್ಗದಲ್ಲಿ ತಮಗರಿವಿಲ್ಲದೇ ಓಡುತ್ತಿದ್ದಾರೆ. ಅಪಾಯದಂಚಿನಲ್ಲಿದೆ ಮಾನವ ಸಂಕುಲ. ಚಿಂತಕರು ಈ ವಿಚಾರವಾಗಿ ಚಿಂತಿಸಿದರೆ ಉತ್ತಮವಲ್ಲವೆ? ಹಿಂದೆ ತಿಳಿಸಿದಂತೆ ಒಂದು ದೇಶದ ಸಮಾಜ ವ್ಯವಸ್ಥೆ + ಉದ್ಯೋಗ + ಜೀವನ ವಿಧಾನ + ಪ್ರಜಾ ಕರ್ತವ್ಯವೆಂಬ ನೆಲೆಯಲ್ಲಿ ಪುಣ್ಯಾಕಾಮನ ವಿಚಾರದ ಬಗ್ಗೆ ತಿಳಿಯಲು ಪ್ರಯತ್ನಿಸೋಣ.

ದೇಶದಲ್ಲಿ ಸದ್ಯ ರಾಜಕಾರಣ ಅರ್ಥಶಾಸ್ತ್ರಜ್ಞರಲ್ಲಿ ಒಂದು ವಿಚಿತ್ರ ಚಿಂತನೆಯಿದೆ. ಅದೆಂದರೆ ಉದ್ಯೋಗ ಸೃಷ್ಟಿ. ಪ್ರತಿಯೊಬ್ಬ ಭಾರತೀಯನಿಗೂ ಉದ್ಯೋಗ ಅವಕಾಶ ಕೊಡುವುದು ಅವನನ್ನು ಸಬಲನನ್ನಾಗಿ ಮಾಡುವುದು. ಮೇಲ್ನೋಟಕ್ಕೆ ಇದು ಎಷ್ಟು ಚಂದ? ಆನಂದ? ಸುಖಕರ ಅಲ್ಲವೆ? ದೇಶದಲ್ಲೇ ಸೋಮಾರಿಗಳೇ ಇಲ್ಲದಂತೆ ಮಾಡಲು ಈ ಯೋಜನೆ ಸಾಧ್ಯವಾದರೆ ನಮ್ಮ ಅಂದರೆ ಭಾರತೀಯರ ಪುಣ್ಯೋದಯವೇ ಅನ್ನಿಸುವುದಿಲ್ಲವೆ? ಆದರೆ ಈ ಮುಖದಲ್ಲಿ ಸ್ವಲ್ಪ ಚಿಂತಿಸಿ. ಮೂಲ ಸಾಮಾಜಿಕ ಅರ್ಥಶಾಸ್ತ್ರರೀತ್ಯಾ ಉದ್ಯೋಗ-ದುಡಿದು ಅರ್ಥಸಂಚಯನ-ಆಶ್ರಿತ ಪೋಷಣೆ. ತನ್ಮೂಲಕ ಸಮಾಜ ನಿರ್ವಹಣೆ, ಇದೊಂದು ಚಕ್ರ. ಹಾಗಿದ್ದಾಗ ಒಬ್ಬ ದುಡಿಮೆಗಾರ, ಅವನ ನೈಜಶಕ್ತಿಗೆ ಅಳತೆಯನ್ನು ಹೇಳಿದ್ದಾರೆ. ಅದು ಹೀಗಿದೆ. ದುಡಿಮೆಗಾರ, ಅವನ ದುಡಿಯುವ ಶಕ್ತಿ 16 ಕ್ಷಪ. ಅದಕ್ಕೆ ಬೇಕಾದ ಉದ್ಯೋಗ ರಾಜಕೀಯವಾಗಿ ಆ ಉದ್ಯೋಗ ನಿರೀಕ್ಷಣೆ, 4 ಮಂದಿ ಮತ್ತು ದುಡಿಮೆಯ ವಿನಿಯೋಗ 12 ಮಂದಿ, ಇವರು ಆಶ್ರಿತರು. ಇವೆಲ್ಲಾ ಇದ್ದರೆ ದುಡಿಮೆ. ಇಲ್ಲದಿದ್ದಲ್ಲಿ ದುಡಿಮೆ ಎನ್ನಿಸಲಾರದು.

ಈಗಿನ ಕಾಲದ ಉದ್ಯೋಗಸೃಷ್ಟಿ ಯೋಜನೆಯೇ ಸರಿ ಇಲ್ಲ. ಅವರ ದೃಷ್ಟಿಯಲ್ಲಿ ಒಂದು ಫ್ಯಾಕ್ಟರಿ, ಒಂದು ಯೋಜನೆ ಆರಂಭಿಸುವುದು, ಅಲ್ಲಿ ಕೆಲಸ ಮಾಡುವ ಜನರ ಸಂಖ್ಯೆ ಆಧರಿಸಿ ಉದ್ಯೋಗ ಸೃಷ್ಟಿ ಲೆಕ್ಕಾಚಾರ ಹೇಳುತ್ತಾರೆ. ಆದರೆ ಉತ್ಪಾದನೆ + ಕಚ್ಚಾವಸ್ತು + ಬಳಕೆದಾರನ ಅಗತ್ಯ + ಸಾಮಾಜಿಕ ಅನಿವಾರ್ಯತೆ ಎಂಬ ಮಾರ್ಗಸೂಚಿಯಿಲ್ಲದ ಯೋಜನೆ ದೇಶದ ಆರ್ಥಿಕತೆಗೆ ಮಾರಕ. ಉದ್ಯೋಗ ಸೃಷ್ಟಿಯೆಂಬ ಕುರುಡು ಮಾರ್ಗಾನುಸರಣೆಯಾಗುತ್ತದೆ. ಒಂದು ಉದ್ಯೋಗದ ಮುಂದೆ ಮೂರು ರೀತಿಯ ಭೋಗ್ಯವಿರುತ್ತದೆ.
1) ಸರಕಾರ
2) ಸಮಾಜ
3) ಕಾರ್ಯಾನುಕೂಲ

ಹಿಂದೆ 7 ರೀತಿಯ ಪೂರಕವಿರುತ್ತದೆ.
1) ಉದ್ಯೋಗ ಸ್ವರೂಪ
2) ಅದರ ಸಾಮಾಜಿಕ ಲಾಭ
3) ಅದಕ್ಕೆ ಇರುವ ಪೂರಕಗಳು
4) ಉತ್ಪಾದನಾ ಸ್ವರೂಪ
5) ಅಭಿವೃದ್ಧಿ
6) ಉದ್ಯೋಗಾಶ್ರಿತ ಪರಿಕರ
7) ಉದ್ಯೋಗಾಶ್ರಿತ ಪರಿಸರ
ಹಿಂದಿನ ಮೂರೂ ಮತ್ತು ಈ ಏಳೂ ಸಮತೋಲನವಿದ್ದರೆ ಮಾತ್ರಾ ಅದು ಒಂದು ಉದ್ಯೋಗವೆನ್ನಿಸುತ್ತದೆ. ಈ ದಾಮಾಶಯ ಅರ್ಥಮಾಡಿಕೊಳ್ಳುವುದಕ್ಕಾಗಿ ಒಂದು ಉದಾಹರಣೆ ಗಮನಿಸಿ.

ಒಬ್ಬ ಡಾಕ್ಟರ್ ಕಲಿತು ಉದ್ಯೋಗಕ್ಕೆ ಬಂದರೆ ಅವನಿಗೆ ವಾರ್ಷಿಕ 36,000 ರೋಗಿಗಳು ಸಿಗಲೇಬೇಕು. ಇಲ್ಲವಾದರೆ ಅವನು ಬದುಕು ಸಾಧಿಸಲಾರ. ನಂತರ ದುರ್ಮಾರ್ಗ ಹಿಡಿಯಬಹುದು. ಕೃತಕ ರೋಗ ಸೃಷ್ಟಿಯಾಗಬಹುದು. ಹಾಗೇ ಒಬ್ಬ ಇಂಜಿನಿಯರ್ ವಿದ್ಯೆ ಮುಗಿಸಿ ಬಂದಾಗ ಅವನಿಗೆ ವಾರ್ಷಿಕ ಕೆಲಸ 6 ಕೋಟಿಯಷ್ಟಾದರೂ ಒದಗಲೇ ಬೇಕು. ಅಷ್ಟು ಆರ್ಥಿಕ ಬಲ ಸಮಾಜದಲ್ಲಿ ಸಿದ್ಧವಾಗಿರಬೇಕು. ಇಲ್ಲವಾದರೆ ಅದೇ ಸಿವಿಲ್ ಇಂಜನಿಯರ್ ಕ್ರಿಮಿನಲ್ ಇಂಜಿನಿಯರ್ ಆಗಿ ಬದಲಾವಣೆಯಾಗಬಹುದು. ಒಬ್ಬ ಐ.ಟಿ.ಇಂಜಿನಿಯರ್ ಡಿಗ್ರಿ ಮುಗಿಸಿ ಬಂದಾಗ ಮಾರುಕಟ್ಟೆಯಲ್ಲಿ ಮಾಹಿತಿಯ ಬೇಡಿಕೆ ವಿಪುಲವಾಗಿರಬೇಕು. ಇಲ್ಲವಾದರೆ ಅವನೇನು ಮಾಹಿತಿ ಮಾರಬಲ್ಲ? ಹಾಗೆ ಇನ್ನಿತರೆ ಉದ್ಯೋಗಗಳೂ ಕೂಡ. ಉದ್ಯೋಗ ಪೂರಕತೆಯ ಹಿಂದಿನ ಮುಂದಿನ ಅಂಶಗಳು ಸದೃಢವಾದರೆ ಮಾತ್ರ ಉದ್ಯೋಗ. ಇಲ್ಲವಾದರೆ ಇಲ್ಲ. 

ಹೆಚ್ಚೇಕೆ ಜಿಲ್ಲಾಧಿಕಾರಿ ಕಛೇರಿ ಮುಂದೆ ನೂರಾರು ಟೀ ಅಂಗಡಿ ಆರಂಭವಾಗಿದೆಯೆಂದರೆ ಟೀ ವ್ಯಾಪಾರ ಚೆನ್ನಾಗಿದೆಯೆಂದರೆ ಜಿಲ್ಲಾ ಕಛೇರಿಯಲ್ಲಿ ಕೆಲಸ ಸರಿಯಾಗಿ ನಡೆಯುತ್ತಿಲ್ಲವೆಂತಲೇ ಅರ್ಥ. ಜನ ಸಾಮಾನ್ಯನು ಕಛೇರಿಗೆ ಬಂದ ಕೂಡಲೇ ಅವನ ಕೆಲಸವಾದರೆ ಟೀ ಅಂಗಡಿಗೆ ವ್ಯಾಪಾರವಿಲ್ಲ. ಆದರೆ ಅಲ್ಲಿ ಬೇಗನೆ ಕೆಲಸವಾಗದಿದ್ದರೆ ಟೀ ಅಂಗಡಿಗೆ ವ್ಯಾಪಾರ ಸುಗ್ಗಿ. ಆದರೆ ಯಾವುದು ಬೇಕು? ಯಾವುದು ಉದ್ಯೋಗ? ಆಳವಾಗಿ ಚಿಂತಿಸಿ.


ಭ್ರಷ್ಟ ಜಡ್ಡುಗಟ್ಟಿರುವ ಆಡಳಿತ ವ್ಯವಸ್ಥೆ ಸರಿಯಿಲ್ಲ. ಹಾಗಾಗಿಯೇ ಪಟ್ಟಣ ವಿಕೃತವಾಗಿ ಬೆಳೆಯುತ್ತಿದೆ. ಅದಕ್ಕೆ ಹಿಂದಿನ ಉದಾಹರಣೆ ಟೀ ಅಂಗಡಿ ವಿಚಾರ ಅಳತೆಗೋಲು ಸಾಕಲ್ಲವೆ? ಅದು ಕೆಲಜನರ ಉದ್ಯೋಗ, ಅದನ್ನು ಸರಕಾರ ಸೃಷ್ಟಿಸಿದ್ದಲ್ಲ. ಹಾಗಂತ ಅದು ಉದ್ಯೋಗವೆಂತಲ್ಲ. ಹಳ್ಳಿ ಜನರ ಸುಲಭ ಜೀವನದ ಆಕಾಂಕ್ಷೆಯಿಂದ ಹುಟ್ಟಿಕೊಂಡ ಸ್ವಾಭಾವಿಕವಲ್ಲದ ಒಂದು ಉದ್ಯೋಗ ಅದು. ಅದು ಪಟ್ಟಣ ಶಿಸ್ತಿಗೆ ಭಂಗ ತರುತ್ತದೆ. ಪಟ್ಟಣದ ಅಲಂಕಾರವನ್ನೂ ಹಾಳು ಮಾಡುತ್ತದೆ. ಆದರೆ ಪರೋಕ್ಷವಾಗಿ ಈ ಬೆಳವಣಿಗೆಗೆ ಸರಕಾರವೇ ಕಾರಣ. ಅಧಿಕಾರಿಗಳನ್ನು ಸರಿಯಾಗಿ ದುಡಿಸದಿದ್ದಲ್ಲಿ ಈ ಕೆಟ್ಟ ವ್ಯವಸ್ಥೆ ಅಭಿವೃದ್ಧಿಯಾಗುತ್ತದೆ. 

ಭೂಮಿಯು ಕೃಷಿಗಾಗಿ ಬಳಸಬೇಕು. ಭೂಮಿ ಹದ ಮಾಡಿ, ಬೀಜ ಬಿತ್ತಿ, ಗೊಬ್ಬರ, ನೀರು ಕೊಟ್ಟು ಬೆಳೆಸಿದರೆ ಬೇಲಿಕಟ್ಟಿ ಬದು ಏರಿಸಿದ್ದರೆ ಅದು ಕೃಷಿ, ಉತ್ತಮ ಫಲದಾಯಕ. ಆಗ ಭೂಮಿ ಸಸ್ಯಶಾಲಿನಿ, ನಿತ್ಯ ಹರಿದ್ವರ್ಣೆ, ಅನ್ನದಾತೆ ಹೌದು. ಆದರೆ ಏನೂ ಮಾಡದೆ ರೈತ ಸುಮ್ಮನಿದ್ದರೆ ಕಸ, ಕಳೆ ಹುಟ್ಟುತ್ತದೆ, ಬೆಳೆಯುತ್ತದೆ, ಅದೂ ಹಸಿರಾಗಿಯೇ ಇರುತ್ತದೆ. ಹಾಗೆಂದು ಆಗ ಭೂಮಿಯನ್ನು ಹರಿದ್ವರ್ಣೆಯೆನ್ನ ಬಹುದೆ? ಸಸ್ಯಶಾಲಿನಿಯೆನ್ನಬಹುದೆ? ಆಲೋಚಿಸಿ. ಅನ್ನವಾಗ ಬಹುದೆ ಅದು? ಚಿಂತಿಸಿ. ರೋಗ ಹರಡಬಹುದಷ್ಟೆ ಹಾಗೇ ಸ್ವಾಭಾವಿಕತೆಯ ಕಳೆ. ಅದು ಬೆಳೆಯಲ್ಲ ಹೇಗೋ ಒಂದು ಪರಿಸ್ಥಿತಿಯ ಅಣಕವಾಚವೇ ಈ ರೀತಿಯ ಕಳೆರೂಪದ ಉಪ ಉದ್ಯೋಗಗಳು. ಅದರಿಂದ ಸರಕಾರ ಅರಿತಿರಬೇಕು ತನ್ನ ಆಡಳಿತ ವ್ಯವಸ್ಥೆ ಹದಗೆಟ್ಟಿದೆಯೆಂದು. ಆಗಲೂ ಅರ್ಥ ಮಾಡಿಕೊಳ್ಳದಿದ್ದಲ್ಲಿ ಅನಾಹುತ ಖಂಡಿತ. ಈಗಲೇ ಸರಕಾರ ಎಚ್ಚೆತ್ತುಕೊಂಡು ಆಡಳಿತ ವ್ಯವಸ್ಥೆಯನ್ನು ಆಮೂಲಾಗ್ರ ಬದಲಾವಣೆ ತರಬೇಕು. ಶ್ರೀಸಾಮಾನ್ಯನು ಕಛೇರಿಗೆ ಅಲೆಯುವುದು, ಕಾಯುವುದು, ಆಡಳಿತ ಯಂತ್ರದ ಅವ್ಯವಸ್ಥೆಯ ಪ್ರತ್ಯಕ್ಷ ದರ್ಶನ. ಇನ್ನೂ ನಮ್ಮನ್ನಾಳುವವರು ಅರ್ಥಮಾಡಿಕೊಳ್ಳಲಾರರೇ?

ಇನ್ನು ಪ್ರಸಕ್ತಕಾಲೀನ ಸಮಸ್ಯೆ ಮರಳು ವ್ಯಾಪಾರವೆಂಬ ದಂಧೆ. ಇದರ ಮೇಲೆ ಒಂದು ಓರೆನೋಟ ಬೀರೋಣ. ಸದ್ಯ ಪರಿಸ್ಥಿತಿಯಲ್ಲಿ ಸಿಮೆಂಟಿಗಿಂತಲೂ ಹೆಚ್ಚು ಮರಳು ಬೆಲೆ ಬಾಳುತ್ತಿದೆ ಕಾರಣ ಅವ್ಯವಹಾರ, ಲಾಭಿ. ಒಂದು ಲಾರಿ ಮರಳು ಅಗತ್ಯ ಆಧರಿಸಿ ಕಾಳಸಂತೆಯಲ್ಲಿ 1 ಲಕ್ಷ ರೂ.ಗೆ ಕದ್ದು ಮಾರಾಟವಾಗುತ್ತಿದೆ. ಈ ಕಾಳಸಂತೆಗೆ ಕಾರಣವೇನು? ಸರಕಾರವೇನೋ ಜನಹಿತವೆಂದು ಕಾರಣ ಕೊಟ್ಟು ಈ ವಿಚಾರದಲ್ಲಿ ಕೈಕಟ್ಟಿ ಕುಳಿತಿದೆ. ಅಧಿಕಾರೀವರ್ಗ ಇದರಲ್ಲಿ ದೊಡ್ಡ ಅವ್ಯವಹಾರವನ್ನೇ ಮಾಡುತ್ತಿದೆ. ಅಂದಾಜು 7 ತಿಂಗಳಿಂದ ಮರಳು ಪರ್ಮಿಟ್ ಇಲ್ಲ. ಆದರೆ ಕಾಳಸಂತೆಯಲ್ಲಿ ತೆರಿಗೆ ವಂಚಿಸಿ ಮರಳು ಸಾಗುತ್ತಲೇ ಇದೆ. ಕೆಲಸ ಯಾವುದೂ ನಿಂತಿಲ್ಲ. ಸಾವಿರಾರು ಲೋಡು ಮರಳು ಕದ್ದು ಸಾಗುತ್ತಿದೆ. ಸರಕಾರಕ್ಕೆ ತೆರಿಗೆ ಇಲ್ಲವಷ್ಟೆ. ಹಾಗೇ ರೆಡಿಮಿಕ್ಸ್ ಎಂಬ ಕಂಪೆನಿ ಆಧಾರಿತ ದಂಧೆಗೆ ಯಾವ ತಡೆಯೂ ಇಲ್ಲ. ಮಂಗಳೂರು ಹಾಸನ ಇತ್ಯಾದಿ ದೊಡ್ಡ ಊರುಗಳಲ್ಲಿ ರೆಡಿಮಿಕ್ಸ್ ವ್ಯಾಪಾರ ನಿರಂತರ ನಡೆಯುತ್ತಲೇ ಇದೆ. ಇವರಿಗೆ ಮರಳು ಎಲ್ಲಿಂದ ಬಂತು? ಪಾರಂಪರಿಕ ಗಾರೆ ಕೆಲಸದ ಜನರಿಗೆ ಅವರ ನೈಪುಣ್ಯತೆಗೆ ಬೇಕಾದ ಮರಳು ಸಿಗುವುದಿಲ್ಲವಷ್ಟೆ. ಇದ್ಯಾವ ವಂಚನೆ ಜಾಲ? ಸಾರ್ವಜನಿಕರೂ ಈ ವಿಚಾರದಲ್ಲಿ ಕೈಕಟ್ಟಿ ಕುಳಿತಿದ್ದಾರೆ. ಪರಿಣಾಮ ಶೂನ್ಯ.

 ಒಂದು ಉದಾಹರಣೆಗಾಗಿ ಈ ಘಟನೆ ಬರೆಯುತ್ತೇನೆ ಗಮನಿಸಿ, ಇದು ಸತ್ಯ, ನಮ್ಮ ಸಂಸ್ಥೆಯ ಒಂದು ಘಟನೆ. ನಮ್ಮ ಕಾಲಭೈರವ ಟ್ರಸ್ಟ್ ನ ಕಾರ್ಯಕ್ರಮದ ಬಗ್ಗೆ ನಿಮಗೆ ತಿಳಿದಿದೆ. ನಾವು ಯಾವುದೇ ಲಾಭ, ಹಿತಾಸಕ್ತಿ ಚಿಂತನೆ ಇಲ್ಲದೇನೇ ಗೋಸಾಕಣೆ ಮತ್ತು ಅದಕ್ಕೆ ಪೂರಕ ಕೆಲಸಗಳು, ಮೇವು ಬೆಳೆಸುವ ಉದ್ದೇಶದಿಂದ ಮಾಡುತ್ತಿರುವ ಕೃಷಿ ಕಾರ್ಯ ಚಟುವಟಿಕೆ ನಿಮಗೆ ತಿಳಿದಿದೆಯಲ್ಲವೆ, ಹಾಗೆಯೇ ಚಿಕ್ಕಮಗಳೂರಿನಲ್ಲಿ ಒಂದು ಉತ್ತಮ ಗೋಶಾಲೆ ಮಾಡುವ ಉದ್ದೇಶದಿಂದ ಚಿಕ್ಕಮಗಳೂರಿಗೆ ಸ್ವಲ್ಪ ದೂರದಲ್ಲಿ ಒಂದು ಜಾಗವನ್ನು ಆಸಕ್ತ ಗೋಭಕ್ತರ ಸಹಯೋಗದೊಂದಿಗೆ ಕೊಂಡು ಕೊಂಡು ಅಲ್ಲಿ ಗೋಶಾಲೆ ನಿರ್ಮಿಸಿ ಸದ್ಯ ದನ ಸಾಕುತ್ತಿದ್ದೇವೆ. ಅಲ್ಲಿಗೆ ಒಂದು ಸಾರ್ವಜನಿಕ ರಸ್ತೆ ಇದೆ. ಆದರೆ ಅದು ಬಳಕೆ ಯೋಗ್ಯವಾಗಿಲ್ಲ. ಅದನ್ನು ನಮ್ಮ ಟ್ರಸ್ಟ್ ವತಿಯಿಂದ ಕಾಂಕ್ರೀಟ್ ರಸ್ತೆಯಾಗಿ ಮಾಡುವರೆ ಇಲ್ಲಿನ ಪಂಚಾಯಿತಿ + ಜಿಲ್ಲಾ ಪಂಚಾಯಿತಿಯಿಂದ ಅನುಮೋದನೆ ಪಡೆದು ಕೆಲಸ ಆರಂಭಿಸಿದೆವು. ರಸ್ತೆ ಸಮತಲ ಮಾಡಿ ಬೊಲ್ಡರ್ ಜಲ್ಲಿ ಹಾಕಿ ಅಂದಾಜು 7 ತಿಂಗಳು ಆಯ್ತು, ಅದರ ಕಾಂಕ್ರೀಟ್ ಕೆಲಸಕ್ಕೆ ಬೇಕಾದ ಮರಳಿಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆವು, ಇತರೆ ಸರಕಾರೀ ಕಛೇರಿ, PWD ಅಧಿಕಾರಿಗಳು, ಮರಳು ವ್ಯಾಪಾರಿಗಳು ಎಲ್ಲರಲ್ಲೂ ತಾಕಲಾಡಿ ಈಗ ಸುಸ್ತಾಗಿ ಹೋಗಿದ್ದೇವೆ ಮರಳು ಮಾತ್ರ ಲಭ್ಯವಾಗಿಲ್ಲ. ಹಾಗೆಂದು ಮರಳು ಇಲ್ಲವೆಂದಲ್ಲ, ಕದ್ದ ಮರಳು ಇಲ್ಲಿ ರೂ.28 ಸಾವಿರ ಲಾರಿ ಲೋಡಿಗೆ (2 ಯುನಿಟ್) ಸಿಗುತ್ತದೆ. ಅದು ಕಳ್ಳ ವ್ಯಾಪಾರ. ಅದು ನನಗೆ ಇಷ್ಟವಿಲ್ಲ. ಪರವಾನಿಗಿ ಹೊಂದಿದ ಮರಳು ಇನ್ನೂ ಸಿಗಲೇ ಇಲ್ಲ. ಇದಕ್ಕೆ ಉತ್ತರ ಸಿಗಲೇ ಇಲ್ಲ. ಇದನ್ನು ಯಾರು ಕೇಳುವವರು? ಸರಕಾರಕ್ಕಾಗುವ ವಂಚನೆಯನ್ನು ಕಾಯುವವರೇ ಇಲ್ಲವೆ?

ಇನ್ನು ಸರಕಾರಿ ಸೌಲಭ್ಯ ಒದಗಣೆ;  ದೇಶದಲ್ಲಿ ಗರೀಬೀ ಹಟಾವೋ ಇದಕ್ಕಾಗಿ ಸರಕಾರ ಒದಗಿಸುವ ಸಹಾಯಧನ, ಇದು ಸದ್ಬಳಕೆಯಾಗುತ್ತಿದೆಯೇ? ಬಡತನ ರೇಖೆಯೆಂಬ ಅಳತೆ ಮಾಪನ ವ್ಯಾವುದು? ಈಗ ಸರಕಾರ ವಿಧಿಸಿದ ಆದಾಯ ಮಿತಿ ರೂ.24,000/- ವಾರ್ಷೀಕ ಉತ್ಪನ್ನ ಮಾಪನದಂತಾದರೆ ದೇಶದಲ್ಲಿ ಯಾರೂ ಬಡವರಿಲ್ಲ. ಒಬ್ಬ ಕೂಲಿ ಕೆಲಸ ಮಾಡುವವನು ದಿನಕ್ಕೆ ರೂ.400 ಕಡಿಮೆ ಕೂಲಿಗೆ ಬರುವುದಿಲ್ಲ, ವರ್ಷಕ್ಕೆ 200 ದಿನದ ಕೆಲಸವೆಂದಾದರೂ ರೂ.80,000/-  ದುಡಿಯುತ್ತಾನೆ. ಅವನು ಬಡವನೆ? ಖಂಡಿತಾ ಅಲ್ಲ ಮತ್ತು ಈಗ ಎಲ್ಲಿಯೋ ಊರಿನಲ್ಲಿ ಒಂದೆರಡು ಜನ ಮಾತ್ರ ಆಶ್ರಿತರು. ಇಲ್ಲವಾದಲ್ಲಿ ಮನೆಯ ಸದಸ್ಯರೆಲ್ಲಾ ದುಡಿಮೆಗಾರರೆ. ಹಾಗಿದ್ದ ಮೇಲೆ ಬಡತನವೆಂದರೇನು (ದುರಾಸೆಯ ಅನೈತಿಕ ಸಂತಾನ). ಅದನ್ನು ಹೇಗೆ ವಿವರಿಸಬಹುದು? ಅರ್ಥವಾಗುವುದಿಲ್ಲ. ಅಭಿಮಾನ ಹೀನರಾದವರು ಮಾತ್ರ ನಾನು ಬಡವನೆಂದು ಘೋಷಿಸಿಕೊಳ್ಳುತ್ತಿದ್ದಾನೆ ಬಿಟ್ಟರೆ ಸ್ವಾಭಿಮಾನಿಯಾದಲ್ಲಿ ಈ ಒಂದು ರೂಪಾಯಿಯ ಅಕ್ಕಿಯನ್ನು ಪಡೆಯಲಾರ. ಆದರೆ ಜನರಿಗೆ ಸ್ವಾಭಿಮಾನ ಪಾಠವೇ ಇಲ್ಲ. ಸ್ವಾಭಿಮಾನವೆಂದರೇನೆಂದೇ ಅರ್ಥವಾಗದ ಜನಸಾಮಾನ್ಯ ತನ್ನ ಆದಾಯಮಿತಿ ವಾರ್ಷಿಕ ರೂ.24 ಸಾವಿರಕ್ಕೆ ಕಡಿಮೆಯಿದೆಯೆಂದು ಸುಳ್ಳು ಸಾಧಿಸಿಬಡತನ ರೇಖೆಗಿಂತ ಕೇಳಗಿರುವವನೆಂದು ಅರ್ಹತಾ ಪತ್ರ ಪಡೆದು ಮೋಸ ಮಾಡಿ 1 ರೂ.ಗೆ ಅಕ್ಕಿ ಪಡೆದು ಉಂಡರೇ ತೃಪ್ತಿ ಅವನಿಗೆ. ಅಷ್ಟಾದರೂ ಸರಕಾರಕ್ಕೆ ಮೋಸ ಮಾಡಿದೆನೆಲ್ಲ ಎಂಬ ಸಂತೋಷ ಪಡೆಯುತ್ತಾನೆ ಅವನು. ಈಗ ಆಲೋಚಿಸಿ ಭಾರತೀಯರ ಮನಸ್ಥಿತಿ ಯಾವ ಮಟ್ಟಕ್ಕೆ ಇಳಿದಿದೆ ಅರ್ಥಮಾಡಿಕೊಳ್ಳಿರಿ. ಸ್ವಾಭಿಮಾನಿಗಳಾದ ಭಾರತೀಯರನ್ನು ಏನೇನೋ ದುರಾಸೆ ತೋರಿಸಿ ಅಭಿಮಾನ ಹೀನರನ್ನಾಗಿ ಮಾಡಬೇಡಿರಿ ಎಂದು ಪ್ರಾರ್ಥನೆ.

-      ಕೆ. ಎಸ್. ನಿತ್ಯಾನಂದ
ಅಘಸ್ತ್ಯಾಶ್ರಮ ಗೋಶಾಲೆ,
ಬೇರಿಕೆ ಬೆಂದ್ರ, ಬಂದ್ಯೋಡು,
ಕಾಸರಗೋಡು, ಕೇರಳ