Tuesday, 30 June 2015

ಸಿರಿಭೂವಲಯ ಸ್ಥೂಲ ಪರಿಚಯ : ಅಧ್ಯಾಯ ೧೧

ಹನ್ನೋಂದನೇ ಅಧ್ಯಾಯ

ಮನಸ್ಸಿನ ಬೇಡಿಕೆಯಂತೆ (ಮನಃ ಪೂರ್ವಕವಾಗಿ) ಮಂಗಲಪ್ರಾಭೃತವನ್ನು ಓದಿದರೆ, ಜಿನಧರ್ಮದ ತತ್ವಜ್ಞಾನಗಳೆಲ್ಲ ತನಗೆ ತಾನೇ ತನ್ನ ನಿಜರೂಪವನ್ನು ತೋರಿಸುವಂಥ ಘನವಿಧ್ಯಾ ಸಾಧನೆಯ ಯೋಗ ಸಿಗುವುದೆಂದು ಸೂಚಿಸುವುದರೊಂದಿಗೆ ಹನ್ನೊಂದನೇ ಅಧ್ಯಾಯವು ಪ್ರಾರಂಭವಾಗಿದೆ.  ಗ್ರಂಥ ಪ್ರಶಂಸೆಯೊ೦ದಿಗೆ ೨೪ ಜನ ತೀರ್ಥ೦ಕರರೂ ಈಶ್ವರ ಸ್ವರೂಪಿಗಳೆಂದು ಸೂಚಿಸಿದ್ದಾನೆ. 'ದೋಷಮುಕ್ತರಾಗಬೇಕೆಂಬಾಶೆ' ಇರುವವರೆಲ್ಲರ ಆಶೆಯನ್ನೂ ಗುರುತಿಸಿ, ದೇಶಜ್ಞಾನವನ್ನು ಸಂಪೂರ್ಣವಾಗಿ ಒಳಗೊಂಡ 'ದೇಸೀಯ ಭಾಷೆಯ ಅಂಕಕಾವ್ಯ' ಎಂದು ಸಿರಿಭೂವಲಯವನ್ನು ವರ್ಣಿಸಿದ್ದಾನೆ.

  ತಾನು ಕಾವ್ಯರಚನೆಗೆ ಬಳಸಿರುವ ೯ ಅಂಕಿಗಳು ಅರಹಂತರಾದಿಯಿಂದಲೂ ನವತೀರ್ಥಗಳಿದ್ದಂತೆ. ಶಾಸ್ತ್ರಾನುಸಾರವಾಗಿ ಭೂದೇವಿಯ ಪೂಜೆಗೆ ವಿನಿಯೋಗವಾಗುವ ಶಿವಪದ ಎಂದರಿಯಬೇಕು ಎಂದು ತಿಳಿಸಿದ್ದಾನೆ. ಜೈನಾಗಮದರ್ಶನವಾದ ಈ ಭೂವಲಯವು 'ಜೋಣಿಪಾಹುಡ' ಎಂಬ ಗ್ರಂಥದ ಮೂಲವೆಂದು ಸೂಚಿಸಿದ್ದಾನೆ. '' ಕಾರದಿಂದ 'ಫ್' ಕಾರದವರೆಗಿನ ೬೪ ಅಕ್ಷರಗಳೇ ಬ್ರಾಹ್ಮೀಲಿಪಿ ಎಂದರಿದು ಸುಖಿಯಾಗು ಎಂದು ಋಷಭದೇವನು ತನ್ನ ಪುತ್ರಿ ಬ್ರಾಹ್ಮಿಗೆ ಶೀರ್ವದಿಸಿ, ಅವಳ ಎಡಗೆಯ್ಯ ಹೆಬ್ಬೆರಳ ಮೂಲದಲ್ಲಿದ್ದ ಶುದ್ಧವಾದ ಅಂಕರೇಖೆಗಳ ಆದಿ; ಮಧ್ಯ; ಅಂತ್ಯ; ಸಮ; ವಿಷಮ ಸ್ಥಾನಗಳನ್ನು ವಿವರಿಸಿ, ಅವಳಿಗೆ ಅಕ್ಷರದಾನ ಮಾಡಿದನೆಂಬ ಸಂಗತಿಯನ್ನು ವಿವರಿಸಿದ್ದಾನೆ. (ಅ.೧೧,ಪದ್ಯ,೫೪-೬೦) ರೇಖಾಂಕ ಗಣಿತ, ಅಂಕಗಣಿತ, ಅಕ್ಷರ ಇವೆಲ್ಲವುಗಳ ಸಂಬಂಧವನ್ನು ವಿಸ್ತಾರವಾಗಿ ಮಗಳಿಗೆ ಬೋಧಿಸಿದ ವಿಚಾರವನು ವಿವರಿಸಿದ್ದಾನೆ. ಕೋಟಿ ಕೋಟಾ ಕೋಟಿ ಸಾಗರದಳತೆಯ ಗೂಟ ಶಲಾಕೆ ಸೂಚಿಗಳ ಮೇಟಿಯಪದ ಣವಕಾರ ಮಂತ್ರದಲಿ ಬರುವ ಆಪಾಟಿ ಅಕ್ಷರಗಳ ಲೆಕ್ಕವನ್ನು ಸೂಚಿಸುವದೆಂದು ತಿಳಿಸಿದ್ದಾನೆ. ರೇಖಾಗಮ, ವರ್ಣಾಗಮ, ಶಬ್ದಾಗಮ ಮುಂತಾದವೆಲ್ಲವೂ  ಅಂಡದಕ್ಷರದ ವಶವಾಗಿರುತ್ತವೆ. ಕಾಲಕ್ಷೇತ್ರದ ಪಿಂಡವು ನಿತ್ಯಬಾಳುತ್ತದೆ ಎಂದು ಸೂಚಿಸಿದ್ದಾನೆ.

  ಸಕಲ ಶಬ್ದಾಗಮವೂ 'ಓಂ'ಕಾರದಿಂದಲೇ ಬಂದುದೆಂದು ತಿಳಿಸುತ್ತಾನೆ. ಓಂಕಾರವೇ ಸರ್ವಸ್ವವೂ ಆಗಿದೆ ಎಂದು ಹೇಳುತ್ತಾನೆ. ಓಂಕಾರವು ಪಾಪನಾಶಕ, ಪುಣ್ಯಪ್ರಕಾಶಕ, ಲೋಪವಿಲ್ಲದ ಶುದ್ಧರೂಪ, ತಾಪವಳಿಸಿ ಮೋಕ್ಷವನ್ನು ತೋರಿಸುವ ಓಂಕಾರವೆಂಬ ಶ್ರೀಪದವು ಒಂಬತ್ತರಂಕ ಎಂದು ಹೇಳುತ್ತಾನೆ. ಸ್ವರಗಳು, ಅವುಗಳ ಹೃಸ್ವ, ದೀರ್ಘ, ಪ್ಲುತ ರೂಪಗಳು ವಿಸ್ತರಿಸಿ ೨೭ ಸ್ವರಾಕ್ಷರಗಳು, ೨೫ ವ್ಯಂಜನಾಕ್ಷರಗಳು, ಬದ್ಧಾಕ್ಷರಗಳು, ಸಿದ್ಧಾಕ್ಷರಗಳ ರೂಪತಿಳಿಸಿ, ೬೪ ಅಕ್ಷರಗಳ ಸರ್ವಭಾಷಾಮಯೀಭಾಷಾ ಕನ್ನಡ ವರ್ಣಮಾಲೆಯನ್ನು ವಿವರಿಸಿದ್ದಾನೆ. ಈ ಅಕ್ಷರಗಳು ಉಂಟಾಗುವ ಕ್ರಮ, ಅಕಾರ ಉಕಾರ ಮಕಾರಗಳ ಸಂಯೋಗದಿಂದ ಓಂಕಾರವು ಉತ್ಪತ್ತಿಯಾಗುವ ಕ್ರಮ, ಅದರಿಂದ ಮಂತ್ರಗಳು ಹುಟ್ಟುವುದನ್ನು ಸೂಚಿಸಿದ್ದಾನೆ. ಒಂದಂಕದಿಂದ ೮ ಅಂಕಗಳಾಗಿ; ಸಂಖ್ಯಾತಾಸಂಖ್ಯಾತವಾಗಿ; ವಿಶ್ವಾನಂತಾಂಕ ಬರುವುದೆಂದು ತಿಳಿಸುತ್ತಾನೆ. ಈ ಅನಂತಾಂಕದ ಅನಂತರೂಪಗಳನ್ನು ನಾನಾವಿಧವಾಗಿ ವರ್ಣಿಸತ್ತಾನೆ.

  ಣವಪದಭಕ್ತಿಯೇ ಅಣುವ್ರತಕ್ಕೆ ಆದಿಯೆಂದೂ, ಜಿನದೀಕ್ಷೆ ವಹಿಸಿದವರಿಗೆ ನವದಂಕವು ಎಂಟರಿಂದ, ಏಳರಿಂದ ಸಮಭಾಗವಾಗಿ ಸೊನ್ನೆಯನ್ನು ಕಾಣುವರೆಂದು ತಿಳಿಸಿದ್ದಾನೆ. ಮೋಹದಂಕವೆಷ್ಟು, ರಾಗದಂಕವೆಷ್ಟು, ಸಾಹಸಿ ದ್ವೇಷಾಂಕದಾಳ, ಮೋಹ; ರಾಗ; ದ್ವೇಷವಳಿದಾಗ ಆತ್ಮದ ರೂಪಿನ ಜ್ಞಾನಾಂಕವೆಷ್ಟು ಇತ್ಯಾದಿ ಹಲವಾರು ವಿಚಾರಗಳನ್ನು ಸೂಚಿಸು ವುದರೊಂದಿಗೆ ಹನ್ನೊಂದನೇ ಅಧ್ಯಾಯವು ಮುಕ್ತಾಯವಾಗಿದೆ.


ಹನ್ನೋಂದನೇ ಅಧ್ಯಾಯದ ಆಯ್ದ ಪದ್ಯಗಳು:-
ಜ್ಞಾನ ಸಾಧನೆ ಅಧ್ಯಾತ್ಮ ಯೋಗ | ಘನವಿಧ್ಯಾ ಸಾಧನೆ ಯೋಗ ||
ಕೋಶದ ಕಾವ್ಯ ಭೂವಲಯ | ದೇಸೀಯ ಭಾಷಾಂಕ ಕಾವ್ಯ | ಆನಂದ ದಾಯಕ ಕಾವ್ಯ ||
ರಾಶಿಯ ಪುಣ್ಯದ ಗಣಿತ | ಈಶನ ಭಕ್ತಿಯ ಗಣಿತ | 
ದೋಷ ಅಷ್ಟಾದಶ ಗಣಿತ | ಶ್ರೀಶನ ಸದ್ಧರ್ಮ ಗಣಿತ | ಆನಂದ ಸಾಮ್ರಾಜ್ಯ ಗಣಿತ ||
ಕರುಣೆಯಕ್ಷರವ ಕೇಳಮ್ಮ | ಅರಿಯ ಗೆಲ್ಲುವುದ ಕೇಳಮ್ಮ | 
ಪರಮನ ಅತಿಶಯವಮ್ಮ | ಧರೆಯ ಮಂಗಲದ ಕಾವ್ಯವಮ್ಮ ||
ಕೋಟಿ ಕೋಟಾಕೋಟಿ ಸಾಗರದಳತೆಯ | ಗೂಟ ಶಲಾಕೆ ಸೂಚಿಗಳ ||
ಮೇಟಿಯ ಪದ ಣವಕಾರ ಮಂತ್ರದೆ ಬಹ | ಪಾಟಿಯಕ್ಷರದ ಲೆಕ್ಕಗಳಂ ||
ಓಂಕಾರದಿಂದ ಬಂದ ಸರ್ವ ಶಬ್ದಾಗಮ | ದಂಕ ದಕ್ಷರದ ಅಂಕ ನಿತ್ಯ ||
ಶಂಕೆಗಳೆಲ್ಲವ ಪರಿಹಾರ ಮಾಡುವ | ಸಂಕರ ದೋಷ ವಿರಹಿತ ||
ವಶವಾದ ಕರ್ಮಾಟಕದೆಂಟು ಭಾಗದ | ರಸಭಂಗದ ಅಕ್ಷರದ ಸರ್ವ ||
ರಸಭಾವಗಳನ್ನೆಲ್ಲವ ಕೂಡಲು ಬಂದು | ವಶವೇಳು ನೂರು ಹದಿನೆಂಟು ಭಾಷೆ ||
ಯಾವಾಗ ಕರ್ಮ ಸಾಮಾನ್ಯವನೊಡವೆವೋ | ಆವಾಗ ಎಂಟು ರೂಪಾಗಿ ||
ತಾವದು ತುಳಿಯಲು ಸಂಖ್ಯಾತಾಸಂಖ್ಯಾತ | ದಾ ವಿಶ್ವಾನಂತಾಂಕ ಬಹುದು ||

*    *     *
                                                                                               - ಸುಧಾರ್ಥಿ, ಹಾಸನ

Saturday, 20 June 2015

ಸಿರಿಭೂವಲಯ ಸ್ಥೂಲ ಪರಿಚಯ : ಅಧ್ಯಾಯ ೧೦

ಹತ್ತನೇ ಅಧ್ಯಾಯ

ಅಂಕಿಗಳು ನಮ್ಮ ಅಭಿವೃದ್ಧಿ ಹಾಗೂ ಸಂಪತನ್ನು ಹೊಂದಿಸಿಕೊಡುತ್ತವೆ. ಕೇವಲಜ್ಞಾನವನ್ನುಳ್ಳ ಅತಿಶಯಧವಲದಲ್ಲಿ ಸಿದ್ಧವಾಗಿರುವ ಭೂವಲಯವು ಸರ್ವಜ್ಞಾನ ಸಂಪತ್ತಿನ ವನವಾಗಿದೆ ಎಂಬ ಪ್ರಶಂಸೆಯೊಂದಿಗೆ ಹತ್ತನೇ ಅಧ್ಯಾಯವು ಪ್ರಾರಂಭವಾಗಿದೆ. ವೀರಸೆನಭಟ್ಟಾರಕರುಪದೇಶ, ವರ್ಧಮಾನರ ಆದೇಶದಂತೆ, ನಾನಾರೀತಿಯಲ್ಲಿ ಬಂದಿರುವ ಎಲ್ಲ ವಿಚಾರಗಳನ್ನೂ ಕುಮುದೇಂದುಗುರುವಾದ ನಾನು ಕರ್ಣಾಟಕದ ಜನರಿಗೆ ಶ್ರೀದಿವ್ಯವಾಣಿಯ ಕ್ರಮದಲ್ಲಿ; ದಯೆ ಧರ್ಮಗಳನ್ನು ಸಮನ್ವಯಗೊಳಿಸಿ, ಹೇಳಿರುವ ಸಂತೋಷ ಭರಿತವಾದ ಕಥೆಯನ್ನು ಕೇಳಿರಿ ಎಂದು ಹೇಳುತ್ತ, ಸಿರಿಭೂವಲದ ಕಥೆಯು 
 • ಆದಿಯ ಕಥೆ
 • ಅನಾದಿಯ ಕಥೆ
 • ವೇದ ಹನ್ನೆರಡರ ಕಥೆ
 • ಹಿಂದಿನ ಕಾಲದ ಕಥೆ
 • ಅನಂತಕಾಲದ ಕಥೆ
 • ವೇದ, ಆಗಮ, ಸೂತ್ರಗಳ ಕಥೆ
 • ವೇದಗಳೆನಿಸಿದ ಹದಿನಾಲ್ಕು ಪೂರ್ವೆಗಳ ಕಥೆ
 • ಕರಣಸೂತ್ರದ ಅಂಕಗಳ ಕಥೆ
 • ಆದಿಕಾಲಕ್ಕೆ ಅನಾದಿ ಎನಿಸಿದ ಒಳ್ಳೆಯ ವಸ್ತುವನ್ನುಳ್ಳ ಕಥೆ
 • ಅಧ್ಯಾತ್ಮದ ಕಥೆ
 • ಆರ್ಥಿಕ ಸಂಪತ್ತು,
 • ಬೌದ್ಧಿಕ ಸಂಪತ್ತು
 • ಔಷಧ ಸಿದ್ಧಿ
 • ಔಷಧ ರಿದ್ಧಿ
 • ವರ್ಣಮಾಲಾಂಕ
 • ನವಮಾಂಕಬಂಧ
 • ನವಮಾಂಕದಂಗ
 • ರಳಕುಳಭಂಗ
 • ಇಪ್ಪತ್ತೇಳು ಸ್ವರಸಹಿತವಾದ ಅರುವತ್ನಾಲ್ಕಕ್ಷರದಲ್ಲಿ ಸಾಧಿಸಿರುವ ಸಿದ್ಧಕಾವ್ಯ ಭೂವಲಯ

ಎಂದು ಕಾವ್ಯ ಪ್ರಶಂಸೆಯನ್ನು ಮುಂದುವರೆಸಿದ್ದಾನೆ.

  ಗುರುವೀರಸೇನನ ಸಮ್ಮತಿಯಂತೆ ದೇವತೆಗಳು, ಮಾನವರು, ನಾಗಕುಲದವರು, ದಿಗಂತದವರು ಮುಂತಾದ ಎಲ್ಲರಿಗೂ ತಿಳಿಯುವಂತೆ ೭೧೮ ಭಾಷೆಗಳನ್ನು ಬೆರೆಸಿ ತಾನು ಕಾವ್ಯರಚನೆ ಮಾಡಿರುವುದಾಗಿ ತಿಳಿಸಿದ್ದಾನೆ. ಶುದ್ಧವಾದ ಭಂಗಾಂಕವು ವೃದ್ಧಿಹೊಂದುವ ಕ್ರಮವಿರುವ, ಅಂಕಿಗಳ ಪುನರುಕ್ತಿಯಾಗದ ಅಂಕಾಕ್ಷರಗಳ ಶುದ್ಧ ಗುಣಾಕಾರ ಮಗ್ಗಿಯಿಂದ ಕೂಡಿದ ಅರುವತ್ನಾಲ್ಕು ಅಕ್ಷರಗಳಿಂದ ಈ ಕಾವ್ಯವು ರಚನೆಯಾಗಿರುವುದನ್ನು ಗಮನಿಸಿರಿ ಎಂದು ಕಾವ್ಯಾಭ್ಯಾಸಿಗಳಿಗೆ ಕಾವ್ಯರಚನೆಯ ಕ್ರಮವನ್ನು ಕುರಿತು ಎಚ್ಚರಿಕೆಯ ಸೂಚನೆ ನೀಡಿದ್ದಾನೆ. ಈ ಮಹತ್ವದ ಸೂಚನೆನ್ನೇ ಗಮನಿಸದೆ, ಇಂದಿನ ವಿದ್ವಾಂಸರು ಗ್ರಂಥ ಸಂಶೋಧನೆಗೆ ತೊಡಗಿ, ಇನ್ನಿಲ್ಲದ ಗೊಂದಲ ಸೃಷ್ಟಿಸಿ, ತಮ್ಮ ಮುಖಕ್ಕೆ ತಾವೇ ಮಸಿಬಳಿದು ಕೊಂಡಂತಾಗಿದೆ! ಇಂದಿನ ಶಾಲಾಕಾಲೇಜುಗಳಲ್ಲಿ ನಡೆಸುವ ಪರೀಕ್ಷೆಯಲ್ಲಿ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಕ್ರಮವನ್ನು ಕುರಿತು ಪ್ರಾರಂಭದಲ್ಲೇ 'ಸೂಚನೆ' ಗಳನ್ನು ನೀಡಿರುತ್ತಾರೆ. ಅದನ್ನು ಗಮನಿಸದೇ ತನಗೆ ತೋರಿದಂತೆ ಉತ್ತರ ಬರೆಯುವ ವಿದ್ಯಾರ್ಥಿಯು ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗದಿರಬಹುದು; ಅನುತ್ತೀರ್ಣನೂ ಆಗಬಹುದು. ಇದೇ ರೀತಿಯಲ್ಲಿ ಈ ಗ್ರಂಥದ ಸಂಶೋಧನೆಗೆ ಕೈಹಾಕುವ ವಿದ್ವಾಂಸರು ಇಂಥ ಮೂಲಭೂತ ವಿಚಾರಗಳತ್ತ ಗಮನಹರಿಸದೇ ತಮ್ಮ ಪ್ರಯತ್ನದಲ್ಲಿ ಮುಗ್ಗರಿಸಿದರೆ; ಅವರ ಅಪಾರ ಶ್ರಮದ ಪ್ರಯತ್ನವು 'ಬೆಟ್ಟ ಅಗೆದು ಇಲಿಯನ್ನು ಹಿಡಿದಂತೆ' ಆಗುವುದರಲ್ಲಿ ಸಂಶಯವಿಲ್ಲ. ಸಿರಿಭೂವಲಯದ ಸಂಶೋಧನೆಗೆ ಸಂಬಂಧಿಸಿದಂತೆ ಕರ್ಲಮಂಗಲಂ ಶ್ರೀಕಂಠಯ್ಯನವರ ವಿರುದ್ಧ ಹಠ ಸಾಧನೆಗೆ ನಿಂತ ವಿದ್ವಾಂಸರೆಲ್ಲರೂ ಸಾಧಿಸಿರುವುದು ಈ ಇಲಿಹಿಡಿಯುವ ಸಾಧನೆಯನ್ನೇ! ಅದಕ್ಕಾಗಿ ಬೆಟ್ಟ ಅಗೆಯುವ ಅಗತ್ಯವಿರಲಿಲ್ಲ!!

  ತನ್ನ ಕಾವ್ಯದಲ್ಲಿ ಎಲ್ಲ ಭಾಷೆಯ ಸಾಹಿತ್ಯವನ್ನೂ ಅನುಲೋಮಾಂಕ ಪದ್ಧತಿಯಲ್ಲಿ ಗಿಡಿದು ತುಂಬಿದ್ದಾನೆಂದು ಹೇಳಿರುವ ಕವಿಯು; ಅದನ್ನು ಪ್ರತಿಲೋಮ ಕ್ರಮದಲ್ಲಿ ಬಿಡಿಸಿದರೆ, ಎಲ್ಲ ಭಾಷೆಗಳ ಸಾಹಿತ್ಯವೂ ಹೊರಬರುತ್ತದೆ, ಈ ಎಲ್ಲ ಭಾಷೆಗಳ ಸಂಯೋಗದಿಂದ ಸರಲವಾದ ಶಬ್ದಾಗಮವು ಹುಟ್ಟಿ, ಸರಮಾಲೆಯಂತಾಗಿ ಅದು ಸರಸ್ವತಿಯ ಕೊರಳಿನ ಆಭರಣವಾಗುವುದೆಂದು ಗ್ರಂಥದ ಪ್ರಶಂಸೆ ಮಾಡಿದ್ದಾನೆ. ಕನ್ನಡ ಲಿಪಿಯು ದುಂಡಾಗಿದೆ, ನುಣುಪಾಗಿದೆ ಎಂದು ಅದರ ಸೌಂದರ್ಯದ ವರ್ಣನೆ ಮಾಡಿದ್ದಾನೆ. ಶಾಸನಗಳಲ್ಲಿ ಬಳಸಿರುವ ಲಿಪಿ ಕ್ರಮವು ಈ ರೀತಿಯದಲ್ಲವೆಂಬುದು ಸರ್ವವೇದ್ಯ. ಆದ್ದರಿಂದ ಕುಮುದೇಂದುವಿನ ಕಾಲವಾದ ಕ್ರಿ.ಶ.೮೦೦ ರರ (ಕ್ರಿ.ಪೂ.೧೫೦೦ ವರ್ಷ ಪೂರ್ವ ಎಂಬ ವಾದವೂ ಇದೆ) ಸುಮಾರಿನಲ್ಲೇ ತಾಳೆಯೋಲೆಗಳ ಬರಹದಲ್ಲಿ ಸುಂದರವಾದ ಕನ್ನಡ ಲಿಪಿಯ ಬಳಕೆಯಾಗುತ್ತಿತ್ತೆಂಬುದು ಕುಮುದೇಂದುವಿನ ಹೇಳಿಕೆಯಿಂದ ಸ್ಪಷ್ಟವಾಗಿದೆ. ದೀರ್ಘ ಕಾಲಾವಧಿಯಲ್ಲಿ ಇಂಥ ಅಮೂಲ್ಯ ದಾಖಲೆಗಳು ಸರಿಯಾಗಿ ನಿಗಾವಹಿಸುವವರಿಲ್ಲದೇ ಕಣ್ಮರೆಯಾಗಿರುವುದು  ಅಚ್ಚರಿಯ ಸಂಗತಿಯೇನಲ್ಲ. ಮಹತ್ತರವಾದ ಈ ಮಾಹಿತಿಯ ವಿಚಾರದತ್ತ ಇಂದಿನ ವಿದ್ವಾಂಸರು ಗಮನಹರಿಸಿದರೆ, ನಿಜಕ್ಕೂ ಕನ್ನಡದ ಹಿತಾಸಕ್ತಿಯನ್ನು ಕಾಪಾಡಿದಂತಾಗುತದೆ.

ಗ್ರಂಥದಲ್ಲಿ ಸಕಲ ವಿಷಗಳೂ ಅಡಕವಾಗಿವೆ ಎಂದು ಕವಿಯು ವಿರಿಸಿದ್ದಾನೆ. 'ಕಕ್ಷದ ಪಿಂಚದ ಗಣಿತ' ಎಂಬುದಾಗಿ ಗಣಿತಶಾಸ್ತ್ರದ ಹೊಸದೊಂದು ಪದ್ಧತಿಯನ್ನು ಸೂಚಿಸಿದ್ದಾನೆ. ತನ್ನ ಈ ಸರ್ವಭಾಷಾಮಯೀ ಕರ್ಮಾಟದ ಅಸಮಾನವಾದ ದಿವ್ಯ ಸೂತ್ರಾರ್ಥವು, ಅಸದೃಷವಾದ ಜ್ಞಾನದ ಸಾಂಗತ್ಯವು ಈ ಕಾಲದಲ್ಲಿ ಎಲ್ಲರಿಗೂ ವಶವಾಗುವುದಿಲ್ಲ ಎಂಬುದಾಗಿ ತನ್ನ ಗ್ರಂಥದ ಪ್ರೌಢಿಮೆಯನ್ನು ಸೂಚಿದ್ದಾನೆ. ೧೨೦೦ ವರ್ಷಗಳ ಹಿಂದಿನ ವಿದ್ವಾಂಸರಿಗೇ ಇವನ ಜ್ಞಾನ ಸಾಂಗತ್ಯದ ಅರಿವಾಗುವುದು ಕಷ್ಟವಾಗಿದ್ದಲ್ಲಿ; ಇನ್ನು ಇಂದಿನ ವಿದ್ವಾಂಸರಿಗೆ ಅದು ಅರಿವಾಗುವುದಾದರೂ ಹೇಗೆ ಸಾಧ್ಯ? !  ಅಲ್ಲದೇ ಕವಿ ಕುಮುದೇಂದುವೇ 'ಅವರವರ ಶಕ್ತಿಗೆ ತಕ್ಕ ವರವಾದ ಕಾವ್ಯ' ಎಂದೂ ಸೂಚಿಸಿ, ಪ್ರತ್ನಕ್ಕೆ ತಕ್ಕ ಫಲವೆಂದೂ ಹೇಳಿಬಿಟ್ಟಿದಾನೆ! ಜಗತ್ತಿನ ಸಾಹಿತ್ಯವೆಲ್ಲವೂ ಗಣಿತಾತ್ಮಕವಾಗಿಯೇ ಸೃಷ್ಟಿಸಲ್ಪಟ್ಟಿರುವದನ್ನು ಅರಿತು ಗುರುವೀರಸೇನರ ಶಿಷ್ಯನಾದ ತಾನು ರಚಿಸಿರುವ ಆದಿಕಾವ್ಯ ಈ ಭೂವಲಯ ಎಂದು ಸಿರಿಭೂವಲಯದ ಪ್ರಾಚೀನತೆಯನ್ನು ಸ್ಪಷ್ಟವಾಗಿ ಸಾರಿ ಹೇಳಿದ್ದಾನೆ!

  ಕಾವ್ಯವು ಹಾಡಲು ಸುಲಭವಾಗಿದೆ. ಇಲ್ಲಿನ ಗಣಿತವನ್ನು ನೋಡಿ ಮೆಚ್ಚಬೇಕು. ಇಲ್ಲಿನ ಗಣಕಯಂತ್ರ ಸೂತ್ರವು ಬಹಳ ರಹಸ್ಯವಾದುದು. ಇಲ್ಲಿನ ಜೋಡಿಯಂಕದ ಕೂಟದಂಗವು ಬಹಳ ಮಹತ್ವದ್ದೆ೦ದೂ; ಕಾಡಿನಲ್ಲಿ ತಪಸ್ಸು ಮಾಡಿದವರಿಗೆ ಇದು ದೊರೆತ ಅಂಗವೆಂದೂ ಸೂಚಿಸಿದ್ದಾನೆ. ಗಣಿತದ ಮಹತ್ವವನ್ನು ವಿವರವಾಗಿ ವರ್ಣಿಸಿದ್ದಾನೆ. ಣೀಲ, ಮಹನೀಲರೆಂಬ ಪ್ರಾಚೀನ ಋಷಿಗಳಿಂದ ಬಂದ ಗಣಿತ, ಜಿನೇಂದ್ರರ ವಾಣಿಯ ಗಣಿತ, ಎಲ್ಲವನ್ನೂ ಗಣಿತಾತ್ಮಕವಾಗಿ ನಿರೂಪಿಸಿರುವ ಅಂಕಕಾವ್ಯ ಎಂದು ಸೂಚಿಸಿದ್ದಾನೆ. ಥಣ ಥಣವೆನೆ ಶ್ವೇತಸ್ವರ್ಣ ಎಂಬುದಾಗಿ ಸೂಚಿಸಿ; ಇಂದಿಗೂ ಪ್ರಚಾರದಲ್ಲಿರುವ 'ಪ್ಲಾಟಿನಂ' ಲೋಹದ ಹೆಸರು ಹೇಳಿದ್ದಾನೆ.

  ಓಂ, ಹ್ರಾಂಹ್ರೀಂ, ಹ್ರೂಂ, ಹ್ರೇಂ, ಹ್ರೈಂ, ಹ್ರೋಂ, ಹ್ರೌಂ, ಹ್ರಂ, ಹ್ರಃ ಮುಂತಾದ ಬೀಜಾಕ್ಷರಗಳಿಗೆ ಗೋಚರವಾಗುವ ವಸ್ತುಗಳೆಲ್ಲವನ್ನೂ ಶಂಕಾ ರಹಿತವಾಗಿ ತಿಳಿಸುವ ಕಾವ್ಯ ಭೂವಲಯ ಎಂದು ತಿಳಿಸಿದ್ದಾನೆ. ಕಾವ್ಯದೊಳಗಿರುವ ವಸ್ತು ವಿಷಯಗಳನ್ನು ಸೂಕ್ಷ್ಮವಾಗಿ ಸೂಚಿಸುತ್ತ, ಇದೊಂದು ವಿಶ್ವಕಾವ್ಯವೆಂದು ಹೇಳಿದ್ದಾನೆ. ಶುದ್ಧವಾದ ಜೀವದ್ರವ್ಯಗಳಿಂದ ಬಂದಿರುವುದು ಮಾತ್ರವೇ ಶಬ್ದಾಗಮವೆನಿಸುತ್ತದೆ. ಡಮರುಗದಿಂದ ಹುಟ್ಟುವ ಶಬ್ದವು ಜಡವಾದುದು. ಅದರ ಎಣಿಕೆಯು ಸಲ್ಲದು ಎಂದು ತಿಳಿಸಿದ್ದಾನೆ. ಅಕ್ಷರ ಭಂಗಗಳ ವಿವರ ಕುರಿತು ಸೂಚಿಸಿದ್ದಾನೆ.


  ನಿಜವಾದ ತತ್ತ್ವವನ್ನು ಏಳರಿಂದ ಭಾಗಿಸಿದಾಗ ಬರುವ ಬ್ರಹ್ಮನೇ ಮೊದಲಾದವರ ವಿಜಯಧವಲ, ಅತಿಶಯಧವಲ ಮುಂತಾದುವು ದೊರೆಯುವುದೆಂದು ಹೇಳಿದ್ದಾನೆ. ದೇವಾಗಮ ಸ್ತೋತ್ರ ಮುಂತಾದ ಪಾವನ ಪಾಹುಡ ಗ್ರಂಥಗಳು ಇದರಲ್ಲಿ ಬರುವುದೆಂದು ಸೂಚಿಸಿದ್ದಾನೆ. ಸಕಲ ಶುಭಗಳನ್ನೂ ಒದಗಿಸಿ, ಎಲ್ಲ ದುರಿತಗಳಿಂದಲೂ ಪಾರು ಮಾಡುವ ಮಹತ್ತರವಾದ ಕಾವ್ಯವೆಂದು ಬಹಳ ವಿವರವಾಗಿ ಸೂಚಿಸುವುದರೊಂದಿಗೆ ಹತ್ತನೇ ಅಧ್ಯಾಯವನ್ನು ಮುಕ್ತಾಯ ಗೊಳಿಸಿದ್ದಾನೆ.
*    *     *
                                                                                               - ಸುಧಾರ್ಥಿ, ಹಾಸನ