Tuesday, 11 August 2015

ಸಿರಿಭೂವಲಯ ಸ್ಥೂಲ ಪರಿಚಯ : ಅಧ್ಯಾಯ ೧೫

  
ಭವನವಾಸಿಗಳಾದ ದೇವನಿವಾಸ, ಅವರಭೇ, ಚಿಹ್ನೆ ಇತ್ಯಾದಿಗಳನು ಸವಿಸ್ತಾರವಾಗಿ ಈ ಕಾವ್ಯದಲ್ಲಿ ಕೇಳಿರಿ ಎಂಬುದಾಗಿ ೧೫ನೇ ಅಧ್ಯಾಯವು ಪ್ರಾರಂಭವಾಗುತ್ತದೆ. ತಮ್ಮ ತಪಸ್ಸಿನ ಫಲದಿಂದ ಲಾಭ ಹೊಂದಿ ಭವ್ಯಭವನ ವಾಸಿಗಳಾಗಿ ಸುಖಿಸುವ ಭವ್ಯಜನರ ವೈಭವವು ಈ ಭೂವಲಯದೊಳಗಿಹುದೆಂದು ತಿಳಿಸುತ್ತಾನೆ. ನಿರ್ಮಲವಾದ ತಪಸ್ಸಿನಿಂದ ಹಿಮ್ಮೆಟ್ಟಿದ ಜೀವರು ಹೆಮ್ಮೆಯ ಸಂಸಾರ ಸುಖವು ಒಮ್ಮೆಗೇ ಬರಬೇಕೆಂದಾಶಿಸಿ ನಿಧಾನವಾಗಿ ಈ ಭವನವಲಯವನ್ನು ಆತುಕೊಂಡಿದ್ದಾರೆ ಎಂದು ತಿಳಿಸತ್ತಾನೆ. ಕಾಮದಾಟಕೆ ಮನಸೋತು ಜಿನತಪವನು ಮಾರಿ ಬಿಟ್ಟು ಕೊನೆಗೆಬಂದಿಲ್ಲಿ ದೇವಿಯರ ಸೌಖ್ಯದೊಳಿದ್ದನ ಜಿನಭಕ್ತ ಕಾವ್ಯವಿದು ಎಂದು ಹೇಳಿದ್ದಾನೆ. ಮೋಹಪರವಶರಾದ ಈ ದೇವತಾಸ್ವರೂಪಿಗಳು ಮಡದಿಯೊಂದಿಗಿನ ರಸಿಕತೆಯನ್ನು ರಸವತ್ತಾಗಿ ವರ್ಣಿಸಿದ್ದಾನೆ. ಮೋಹಪರವಶರಾದ ಗಂಡುಹೆಣ್ಣುಗಳು ಪ್ರಣಯಭಾವದಿ೦ದ ಒಂದಾದಾಗ, ಅವರ ಮಾನಸಿಕ ಭಾವನೆಯ ಪ್ರತೀಕವಾಗಿ ನಡೆಯುವ ದೈಹಿಕ ಚಟುವಟಿಕೆಗಳನ್ನು ಬಹಳ ವಿವರವಾಗಿ; ವಿಸ್ತಾರವಾಗಿ; ಅತಿಸೂಕ್ಷ್ಮವಾಗಿ; ನವಿರಾಗಿ, ನಿರೂಪಿಸಿರುವುದನ್ನು ನಾವು ಕಾವ್ಯದಲ್ಲಿ ಕಾಣಬಹುದು. ಅವರ ಪ್ರೇಮದ ಕ್ರೀಡೆಗಳನ್ನು ನೆಲಕ್ರೀಡೆಯೆಂದು ಸೂಚಿಸಿದ್ದಾನೆ! ಅಲ್ಲಿನ ಶಯ್ಯಾಗೃಹಗಳ ವೈಭವವನ್ನು ವಿಸ್ತಾರವಾಗಿ ವರ್ಣಿಸಿದ್ದಾನೆ.


  ವಿದ್ಯುತ್ ಎಂಬದು 'ಎಲೆಕ್ಟ್ರಿಕ್' ಎಂಬ ಆಂಗ್ಲಾಶಬ್ದದ ಸಮಾನಾರ್ಥಕಪದ. ಇದು ಆಧುನಿಕ ವಿಜ್ಞಾನದ ಬೆಳವಾಣಿಗೆಯಾದ ನಂತರ ಎರಕಹೊಯ್ಯಲಾದ ಪದವೆಂದು ಎಲ್ಲರೂ ಭಾವಿಸುವುದು ಸಹಜ. ಆದರೆ ಈ ಪದವು ಕುಮುದೇಂದುವಿನ ಕಾಲದಲ್ಲೇ ಬಳಕೆಯಲ್ಲಿದ್ದು ಇ೦ದಿಗೂ ಉಳಿದುಬಂದಿದೆ! ಹಲವಾರು ಪ್ರಾಚೀನ ಕುಲಗಳ ಹೆಸರು ಸೂಚಿಸಿ, ಈ ದೇವತೆಗಳ ದೇವನಿಲಯದ ಭವನಗಳು ಗಗನದಲ್ಲಿವೆಯೆಂದು ಹೇಳುತ್ತಾ ಅವುಗಳ ವಿಸ್ತಾರವನ್ನೂ; ವೈಭವವನ್ನೂ ವರ್ಣಿಸಿದ್ದಾನೆ. ಈ ಭವನಗಳು ಕಲ್ಲು ಮಣ್ಣು ಇಟ್ಟಿಗೆಗಳ ಕಟ್ಟಡಗಳಲ್ಲ. ನವರತ್ನಗಳಿಂದ ಶೋಭಿತವಾದ ಭವನಗಳು!  ಇವುಗಳ ವಿಸ್ತಾರವು ಸಾವಿರಾರು ಯೋಜನಗಳಷ್ಟು! ( ಯೋಜನದ ಲೆಕ್ಕ ಹಲವಿವೆ; ಅದರಲ್ಲಿ ಒಂದನ್ನು ಉದಾಹರಸುವುದಾದರೆ ಸುಮಾರು ಹನ್ನೆರಡು ಮೈಲಿಗಳ ಅಳತೆ. ಸಾವಿರಾರು ಯೋಜನಗಳ ವಿಸ್ತಾರವೆಂದರೆ, ೧೨೦೦೦ ಚದರ ಮೆಲಿಗಳ ವಿಸ್ತಾರವಾಗುತ್ತದೆ. ಇಷ್ಟು ವಿಸ್ತಾರವಾದ ಕಟ್ಟಡದ ಸೊಬಗನ್ನು ಸಾಧ್ಯವಾದರೆ ಕಲ್ಪಿಸಿಕೊಳ್ಳಿ!)

  ಬೇರೆ ಬೇರೆ ದೇವತೆಗಳಿಗೆ ಬೇರೆ ಬೇರೆ ಭವನಗಳು; ಅಸುರರಿಗೆ ಬೇರೆ ಬೇರೆ ಭವನಗಳೆಂದು ಸೂಚಿಸಿ, ಅವುಗಳ ಒಟ್ಟು ಲೆಕ್ಕವನ್ನು ಏಳುಕೋಟಿ ಎಪ್ಪತ್ತೆರಡೂವರೆಲಕ್ಷಗಳೆಂದೂ ಲೆಕ್ಕವನ್ನು ಸರಿಯಾಗಿ ಪರೀಕ್ಷಿಸಬಹುದೆಂದೂ ತಿಳಿಸಿದ್ದಾನೆ. ಈ ದೇವಕುಲಕ್ಕೆಲ್ಲ ಕುಲವೊಂದಕ್ಕೆ ಇಬ್ಬರು ಇಂದ್ರರು ಎಂದು ಹೇಳುತ್ತಾನೆ.

 • ಭೂತಾನಂದ;
 • ಧರಣಾನಂದ;
 • ಸುಪಾರ್ಣವ;
 • ವೇಣು;
 • ವೇಣುಧಾರಿ;
 • ಲಕ್ಷಣದ್ವೀಪಕುಮಾರ;
 • ವಶಿಷ್ಟ;
 • ಉದಧಿಕುವರ;
 • ಜಲಪ್ರಭ;
 • ಜಲಕಾಂತ;
 • ಸ್ತನಿತಕುಮಾರ;
 • ವಿನುತ;
 • ಘೋಷೇಂದ್ರ;
 • ಮಹಾಘೋಷೇಂದ್ರ;
 • ಹರಿಷೇಣ;
 • ಹರಿಕಾಂತ;
 • ಆಮಿತಗತಿ;
 • ಅಮಿತವಾಹನದೇವ;
 • ಶ್ರೀಮಯ;
 • ಅಗ್ನಿವಾಹನ;
 • ಆನಂದ;
 • ಪ್ರಭಂಜನ

ಇತ್ಯಾದಿ ಹೆಸರುಗಳನ್ನು ಸೂಚಿಸಿ, ಇವರೆಲ್ಲರೂ ಇಂದ್ರರಾಜರುಗಳೆಂದು ಹೇಳಿದ್ದಾನೆ. ಇವರ ಇಂದ್ರಭವನಗಳ ಲೆಕ್ಕ ತಿಳಿಸಿತ್ತಾ, ಕೋಟ್ಯಾಂತರ ಭವನಗಳ ಪಟ್ಟಿ ಹೇಳಿದ್ದಾನೆ. ಇವೆಲ್ಲವೂ ಮೇಲುಲೋಕದ ವಿವರಗಳು. ಕೊನೆಯಲ್ಲಿ ಅಸುರರಿಗೆ ಮಾತ್ರ ಭವನವೆನ್ನುವ ಒಂದೇ ಒಂದು ಮನೆ ಎಂದು ಹೇಳಿದ್ದಾನೆ. ಈ ಅಸುರರ ಮನೆಗಳು ಭೂಮಂಡಲದ ಮನೆಗಳಂತೇ ಇರುವವು. ಇವರ ಲೋಕವು ಚಿತ್ರಾಪೃಥ್ವಿ. ಅಲ್ಲಿನ ಕೆಳಲೋಕದಲ್ಲಿ ಅಲ್ಪರು ಅಧಿಕವಂತೆ. ಇವುಗಳ ಅಂತರ ಸಾವಿರಾರು ಯೋಜನಗಳು! ಲಕ್ಷಾಂತರ ಯೋಜನಗಳು! ಅಲ್ಲಿನ ಕಾಡುಗಳಲ್ಲಿರುವ ಭವನಗಳೆಲ್ಲವೂ ವಿಸ್ತಾರವಾದ ಚತುಷ್ಕೋಣಾಕೃತಿಯಲ್ಲಿವೆಯಂತೆ. ಅವುಗಳ ದ್ವಾರಗಳು ವಜ್ರಖಚಿತವಾಗಿರುವುದಂತೆ. ಈ ಕಾವ್ಯದ ಮೂಲಕವಾಗಿ ಅಲ್ಲಿನ ಭವನಾಮರರನ್ನು ತಿಳಿದುಕೊಳ್ಳಿ ಎಂಬುದಾಗಿ ಸೂಚಿಸಿದ್ದಾನೆ. ಹಿಂದಿನ ರಾಜ; ಮಹಾರಾಜರ ಕತ್ತಿಯ ಹಿಡಿಯು ರತ್ನಖಚಿತವಾಗಿರುತ್ತಿತ್ತೆಂಬ ಸಂಗತಿಯನ್ನೇ ಇಂದಿನ ನಾವುಗಳು ಉತ್ಪ್ರೇಕ್ಷೆ ಎನ್ನುತ್ತೇವೆ. ಮೈಸೂರರಸರ ರತ್ನಖಚಿತವಾದ ಸ್ವರ್ಣಸಿಂಹಾಸನವು ಕಣ್ಣಿಗೆ ಕಾಣಿಸುವಂತಿರುವುದರಿಂದ ಮಾತ್ರ ಅದನ್ನು ನಂಬುತ್ತೆವೆ. ಇಲ್ಲವಾಗಿದ್ದರೆ; ಅದೂ ಕಟ್ಟು ಕಥೆ ಎನಿಸುತ್ತಿತ್ತು! ದೇವಲೋಕದವರ -
 • ಅಂಗರಕ್ಷಕ ಪಡೆ,
 • ರಕ್ಷಣಾಮಂತ್ರಾಲಯ,
 • ಮಧ್ಯಮ;
 • ಬಾಹ್ಯ;
 • ಪರಿಷ ಸಮಾನ ದೇವಸೇನೆ;
 • ಪುರಜನರು;
 • ದೇವಗಾಯಕರು;
 • ಇಂದ್ರ;
 • ಪ್ರತೀಂದ್ರ;
 • ಸೋಮ;
 • ಯಮ;
 • ವರುಣ;
 • ಕುಬೇರ

ಮುಂತಾದವರ ಹೆಸರು ಸೂಚಿಸುತ್ತಾ ಅವರ -
 • ಏಳು ರೀತಿಯ ಸೈನಿಕಪಡೆ;
 • ಮಹಿಷ;
 • ತುರಗ;
 • ಗಜ;
 • ರಥ;
 • ಪದಾತಿ;
 • ಗಂಧರ್ವರ ನೃತ್ಯ ಸಮೂಹ;
 • ದೋಣಿ;
 • ಗರುಡ;
 • ಮಕರ;
 • ಒಂಟೆ;
 • ಸಿಂಹ
 • ಮುಂತಾದುವುಗಳ ಶಿಬಿಗೆ ಇತ್ಯಾದಿಗಳು,
 • ಅವರಿಗೆಲ್ಲ ಸಾವಿರಾರು ದೇವಿಯರು,
 • ಸಾವಿರಾರು ವಲ್ಲಭೆಯರು,
 • ಪತ್ನಿಯರು


ಇತ್ಯಾದಿಗಳ ವಿವರಗಳನ್ನೊಳಗೊಂಡ ಭೂವಲಯ ಎಂದು ಸೂಚಿಸುವುದರೊಂದಿಗೆ ೧೫ನೇ ಅಧ್ಯಾಯವು ಮುಕ್ತಾಯವಾಗಿದೆ.
*    *     *
                                                                                               - ಸುಧಾರ್ಥಿ, ಹಾಸನ

Saturday, 1 August 2015

ಸಿರಿಭೂವಲಯ ಸ್ಥೂಲ ಪರಿಚಯ : ಅಧ್ಯಾಯ ೧೪


'ಳು' ಕಾರವು ಈ ಕಾವ್ಯದಲ್ಲಿ ತೀರ್ಥಂಕರನಿದ್ದಂತೆ. ಇದು ಹ್ರಸ್ವ ಸ್ವರವಲ್ಲ. ಅನಂತಗಣನೆಯ ಸುಸ್ವರ. ಸಿರಿಭೂವಲಯವು ಈ ಅತಿಶಯವಾದ ಸ್ವರದ ಅಂಗ ಎಂಬ ವಿವರಣೆಯೊಂದಿಗೆ ೧೪ನೇ ಅಧ್ಯಾಯವು ಪ್ರಾರಂಭವಾಗಿದೆ. ನಮಿ; ನೇಮಿ; ಪಾರ್ಶ್ವನಾಥ ಈ ಮೂರೂ ಜಿನರತ್ನತ್ರಯರೆಂದು ಹೇಳಿ, ಇವರು ತಪಗೈದ ವೃಕ್ಷದ ಹೆಸರು ಸೂಚಿಸಿ, ಭೂವಲಕ್ಕೆ ನಮನ ಸಲ್ಲಿಸಿದ್ದಾನೆ. ವರ್ಧಮಾನ ಜಿನೇಂದ್ರನ ವಾಣಿಯನ್ನು ಗೌತಮ ಗಣಧರನು ಹನ್ನೆರಡು ಅಂಗಗಳಾಗಿ ನಿರೂಪಿಸಿರುವುದು ಸಿರಿಭೂವಲಯಕ್ಕೆ ಆಧಾರವೆಂದೂ, ಗೌತಮನ ನಂತರ ಮುಂದೆ ಶ್ರುತಕೇವಲಿಗಳು ಇದನ್ನು ಹದಿನಾಲ್ಕು ಪೂರ್ವೆಗಳಾಗಿ ಕಟ್ಟಿರಿಸಿದರೆಂದೂ, ಅದರೊಳಗೆ ರಮಣೀಯವಾದ ಪ್ರಾಣಾವಾಯ ಪೂರ್ವೆಯಲ್ಲಿ ಹದಿಮೂರು ಕೋಟಿ ಕ್ರಮವಾದ ಸಿದ್ಧಾಂತದ ಲೆಕ್ಕದಲ್ಲಿ ಶ್ರಮಹಾರಿಯಾಯುರ್ವೇದವಿದೆಯೆಂದೂ ಸೂಚಿಸಿದ್ದಾನೆ. ಮಧ್ಯಮ ಪದದಿಂದ ಗುಣಿಸಿದ ಅಂಕಿಗಳ ವಿವರ ನೀಡಿದ್ದಾನೆ. ಪಾದರಸವನ್ನು ಪುಟವಿಟ್ಟು ಭಸ್ಮ ಮಾಡುವುದನ್ನು ಸೂಚಿಸಿ; ಕುಸುಮಾಯುರ್ವೇದದ ಮಹಿಮೆಯನ್ನುಸಾರುವ ಅಸದೃಷಕಾವ್ಯ ಎಂದು ಭೂವಲಯವನ್ನು ಪ್ರಶಂಸಿಸಿದ್ದಾನೆ. ಪುಷ್ಪಾಯರ್ವೇದ ಕ್ರಮದಿಂದ ಸಾಮಾನ್ಯ ಜನರಿಗೆ ದೊರೆಯುವ ಮಹತ್ತರವಾದ ಸೌಲಭ್ಯಗಳನ್ನು ವಿವರಿಸಿದ್ದಾನೆ. ಎಲ್ಲ ರೋಗಗಳಿಗೂ ರಾಮಬಾಣದಂಥ ಔಷಧಕ್ರಮವಿರುವುದನ್ನು ನಿರೂಪಿಸಿದ್ದಾನೆ.

  ಎಂಟು ರೀತಿಯ ಔಷಧಗಳ ಕ್ರಮವಿರುವುದನ್ನು ವಿವರಿಸಿದ್ದಾನೆ. ಇದು ಆಯುರ್ವೇದದ ಅಷ್ಟಾಂಗ ಹೃದಯದ ವಿಷಯವಿರಬಹುದು. ಜಲೌಷಧಿ; ಮಲೌಷಧಿ ಇತ್ಯಾದಿಗಳನ್ನು ವಿವರಿಸಿದ್ದಾನೆ. ಹದಿನೆಂಟುಸಾವಿರ ಶ್ಲೋಕಗಳಲ್ಲಿ ಈ ವೈದ್ಯ ಸೂತ್ರಾಂಕವು ಅಡಕವಾಗಿರುವುದನ್ನು ತಿಳಿಸಿದ್ದಾನೆ. ಪ್ರಾಣಾವಾಯದಲ್ಲಿ ಸಮಂತಭದ್ರಾಚಾರ್ಯನು ಹೇಳಿರುವ ವಿಚಾರಗಳು ಚರಕಾದಿಗಳಿಗೆ ತಿಳಿದಿಲ್ಲವೆಂದಿದ್ದಾನೆ. ಜೀವಹಿಂಸೆಯನ್ನು ಸೇರಿಸಿ ತಂದಿರುವ ಖಳರ ಕಾವ್ಯಕೆ ಧಿಕ್ಕಾರ ಹಾಕಿದ್ದಾನೆ. ಜೀವರಕ್ಷಣೆ ಮಾಡುವುದೇ ಶೀಲವೆಂದು ತಿಳಿಸಿ; ದಯೆಯನ್ನು ಪಾಲಿಸಬೇಕೆಂದು ಸೂಚಿಸಿದ್ದಾನೆ. ಕಲಿತಜೀವರನ್ನು ಕಾಯುವುದು; ಕಲಿಯದವರನ್ನು ಕೊಲ್ಲುವುದು, ಹಣವಂತರಿಗೆ ನೆರವು ನೀಡುತ್ತಿದ್ದ ಹಿಂಸಾಪರವಾದ ಸುಶ್ರುತನ ಆಯುರ್ವೇದವನ್ನು ಖಂಡಿಸಿ, ಸೋಲಿಸಿ; ಶಾರ್ಙ್ಘ್ಯಧರನ ಸಂಶೋಧಿತ ಇನ್ನೂ ಪುರಾತನ ಜ್ಯೋತಿರಾಯುರ್ವೇದದಿಂದ ಆಯ್ದ ಪ್ರಾಣಾವಾಯವು ಪ್ರಚಾರಕ್ಕೆ ಬಂದಿತೆಂಬ ಮಾಹಿತಿಯನ್ನು ನೀಡುತ್ತಾನೆ. ಹಿಂಸೆಯ ಭಾವನೆಗೂ ದಿಕ್ಕಾರ ಹಾಕಿದ್ದಾನೆ.

Medical Greed
ಪ್ರಸಿದ್ಧಿ, ಪ್ರಚಾರ, ಲಾಭದಾಶೆಯಿಂದ ಚರಕಾದಿ ನೂತನ ಗ್ರಂಥಕರ್ತರು ಬಹಳ ಪ್ರೀತಿಯಿಂದ ಹಿಂಸೆಯನ್ನು ಪ್ರೇಷಿಸಿದರೆ, ಅವರಿಗೆ ರಸವಿಧ್ಯೆಯು ಏಕೆ ಸಿದ್ಧಿಯಾಗುವುದು? ಎಂದು ಪ್ರಶ್ನಿಸಿದ್ದಾನೆ. ಸಸ್ಯಸಂತತಿಗೆ ಹಿಂಸೆಮಾಡದೇ; ಗಿಡದಲ್ಲಿ ಬಾಡಿನಿಂತ ಪುಷ್ಪಗಳನ್ನಾರಿಸಿ ತಂದು, ಔಷಧ ತಯಾರಿಸಬೇಕೆಂದು ಸೂಚಿಸುತ್ತಾನೆ. ನಾವು ಮಾಡುವ ಕರ್ಮದ ಹಿಂಸೆಯು ಎಂದಿಗೂ ಧರ್ಮವಾಗುವುದಿಲ್ಲವೆಂದು ಎಚ್ಚರಿಸಿದ್ದಾನೆ. ಪೂರ್ವಾರ್ಜಿತ ಪೀಡನ ರೋಗವನ್ನೆಲ್ಲ ಪರಿಹರಿಸಿಕೊಂಡು ನಿರ್ವಾಣಸುಖವನ್ನನುಭವಿಸಿರಿ ಎಂಬ ಮಾತನ್ನು ಹೇಳಿದವರಿಗೆ; ಪ್ರಚಾರಮಾಡಿದವರಿಗೆ ಸುಖಸಿದ್ಧಿಸುವುದೆಂದು ಹೇಳಿದ್ದಾನೆ.


  ಯಜ್ಞದ ಪಶುಹಿಂಸೆ, ಅಜ್ಞರ ಆಯುರ್ವೇದ, ಅಜ್ಞರ ಮಾರಿಬಲಿಯನ್ನು ಸುಜ್ಞರು ಪಾಪವೆಂದರಿತು ಅದನ್ನು ತ್ಯಜಿಸಿ, ಅಜ್ಞಾನವನ್ನು ಹೋಗಲಾಡಿಸಬೇಕೆಂದು ತಿಳಿಸುತ್ತಾನೆ. ಜೀವನದಲ್ಲಿ ಪಾಪಪುಣ್ಯಗಳ ವಿವೇಚನೆ ಇರಬೇಕೆಂದೂ, ಪಾಪವನ್ನು ತ್ಯಜಿಸಬೇಕೆಂದೂ, ಶ್ರೀಪದ್ಧತಿಯ ವೈದ್ಯಕೀಯ ಕ್ರಮವನ್ನು ವಿವಸಿದ್ದಾನೆ. ಗುರುಹಿರಿಯರನ್ನು, ಶಾಸ್ತ್ರಸಂಪ್ರದಾಯಗಳನ್ನು ಗೌರವಿಸುವುದರಿಂದ ರೋಗರುಜಿನಗಳು ಮಾತ್ರವಲ್ಲ ಸಾವಿನ ಹುಟ್ಟನ್ನೂ ಕೂಡ ಅಡಗಿಸಬಹುದೆ೦ದು ಹೇಳಿದ್ದಾನೆ. ಪುಷ್ಪಾಯುರ್ವೇದದ ಸಾರಸಂಗ್ರಹವನ್ನು ಸಿದ್ದಪಡಿಸಿದ ಶ್ರೀಪೂಜ್ಯಪಾದಾಚಾರ್ಯನು ಮೋಕ್ಷದ ದಾರಿಯನ್ನು ತೋರಿಸಿದ್ದಾನೆ. ಅದನ್ನು ಸಿರಿಭೂವಲಯವು ಅಡಗಿಸಿಕೊಂಡಿದೆ ಎಂದು ಸೂಚಿಸಿದ್ದಾನೆ. ಅಮೋಘರ್ಷನ ಸಭೆಯಲ್ಲಿ ಚರಕ ಮಹರ್ಷಿಯ ಹಿಂಸಾಪೂರಿತವಾದ ಆಯುರ್ವೇದ ಕ್ರಮವನ್ನು ಖಂಡಿಸಿ, ಸೋಲಿಸಿಸರ್ವಜ್ಞ ಮತದಿಂದ ಸಿವಪಾರ್ವತೀಶನ ಗಣಿತದಲ್ಲಿ ಬರುವ ಪುಷ್ಪಾಯುರ್ವೇದವು ಪ್ರಚಾರಕ್ಕೆ ಬಂದಿರುವುದನ್ನು ಸಿರಿಭೂವಲಯವು ಸೂಚಿಸಿರುವುದೆಂದು  ತಿಳಿಸಿದ್ದಾನೆ. ಬ್ರಾಹ್ಮಿ ಹಾಗೂ ಸೌಂದರಿಯರು ವೃಷಭಸೇನನಿಂದ ಪಡೆದ ಅಂಕಾಕ್ಷರದ ಮಹಿಮೆಯನ್ನು ಈ ಅಧ್ಯಾಯದ ಪಾದಪದ್ಯಗಳಲ್ಲಿ ಮುಂದುವರೆಸಿದ್ದಾನೆ. ಸೇನಗಣದ ೨೪ ಜನ ಪ್ರಮುಖರ ಹೆಸರು ಸೂಚಿಸಿದ್ದಾನೆ. ಮುಂದೆ ೨೪ ಜಿನ ತೀರ್ಥಂಕರರ ಹೆಸರು ಸೂಚಿಸಿ; ಇವರೆಲ್ಲರೂ ಭರತಖಂಡದ ಕರುನಾಡಿನ ಅತಿಶಯದ ಕುರುಹು ಎಂದು ತಿಳಿಸಿದ್ದಾನೆ. ಈ ತೀರ್ಥಂಕರರ ಜನ್ಮಭೂಮಿಯ ವಿವರ ನೀಡಿದ್ದಾನೆ. ಇವರುಗಳ ರಾಜವಂಶದ ವಿವರ ಸೂಚಿಸಿದ್ದಾನೆ. ನಾಭಿರಾಜನಿಂದ ಸಮುದ್ರ ವಿಜಯನವರೆವಿಗೆ; ಅವನಿಂದ ಸಿದ್ಧಾರ್ಥನವರೆವಿಗೆ ಹಲವಾರು ಹೆಸರುಗಳನ್ನು ಸೂಚಿಸಿದ್ದಾನೆ. ಪ್ರಸಿದ್ಧರಾದ ೨೪ಜನ ಸ್ತ್ರೀಯರ ಹೆಸರುಗಳೊಂದಿಗೆ ೧೪ನೇ ಅಧ್ಯಾಯವು ಮುಕ್ತಾಯವಾಗಿದೆ.
*    *     *
                                                                                               - ಸುಧಾರ್ಥಿ, ಹಾಸನ