Sunday, 27 March 2016

ನಮ್ಮ ಋಷೀ ಪರಂಪರೆ - ಶತಾನಂದ - ೩

ಹಿಂದಿನ ಲೇಖನದಲ್ಲಿ ತಿಳಿಸಿದಂತೆ ವಿಚಿತ್ರರೂಪವನ್ನು ಹೊಂದಿದ್ದ ವಿಶೇಷ ಆಚ್ಛಾದನೆ ರೂಪದಲ್ಲಿ ಚರ್ಮಧಾರಿಯಾದ ಶತಾನಂದ ಮೂರನೇ ವರ್ಷದಲ್ಲಿ ಉಪನೀತಾದಿ ಸಂಸ್ಕಾರ ಪಡೆದು ತಂದೆಯ ಅನುಮತಿಯೊಂದಿಗೆ ತಪಸ್ಸಿಗಾಗಿ ಮಂದರ ಪರ್ವತ ಸೇರುತ್ತಾನೆ. ಮಂದರ ಪರ್ವತದ ಗುಹೆಯಲ್ಲಿ ಪ್ರಣವೋಪಾಸನೆ ಮಾಡುತ್ತಾ ಹತ್ತು ಸಾವಿರ ವರ್ಷಕಾಲ ನಿರಂತರ ಚಿಂತನೆಯಲ್ಲಿ ತೊಡಗುತ್ತಾನೆ. ಹೀಗಿರುತ್ತಾ ಒಂದು ದಿನ ಸಮಾಧಿಯಿಂದ ಎಚ್ಚೆತ್ತು ಹೊರಬರಲಾಗಿ ತಾನು ತಪಸ್ಸನ್ನಾಚರಿಸುತ್ತಿದ್ದ ಗುಹೆಯ ಹೊರಭಾಗದಲ್ಲಿ ಒಂದು ವಿಶಾಲವಾದ ಕೆರೆಯನ್ನೂ ಹಾಗೂ ಅದರ ದಡದಲ್ಲಿ ಕುಳಿತಿದ್ದ ಒಂದು ಬಕಪಕ್ಷಿಯನ್ನೂ ನೋಡುತ್ತಾನೆ. ಆಶ್ಚರ್ಯಭರಿತನಾಗಿ ಸುತ್ತೆಲ್ಲಾ ಪರೀಕ್ಷಿಸುತ್ತಾನೆ. ಎಲ್ಲಿಯೂ ಜನರ ಸುಳಿವೇ ಇಲ್ಲ. ಈ ಬಕಪಕ್ಷಿ ಹೊರತಾದ ಇನ್ನೊಂದು ಜೀವಿಯ ದರ್ಶನವಿಲ್ಲ. ಕೆರೆಯಲ್ಲಿ ಕೂಡ ಮೀನುಗಳ ಸುಳಿವಿಲ್ಲ. 

ಹಾಗಿದ್ದರೆ ಈ ಬಕಪಕ್ಷಿಗೆ ಇಲ್ಲೇನು ಕೆಲಸನಾನು ಗುಹಾ ಪ್ರವೇಶ ಮಾಡುವಾಗ ಇಲ್ಲಿ ಕೆರೆ ಇರಲಿಲ್ಲ. ನಂತರ ಯಾರು ನಿರ್ಮಾಣ ಮಾಡಿದರುಏಕೆ ನಿರ್ಮಾಣ ಮಾಡಿದರುಈ ಬಕನಾರುಎಂದು ಚಿಂತಿಸುತ್ತಾ ಕೆರೆಯ ಸಮೀಪಕ್ಕೆ ನೀರಿನಲ್ಲಿ ಇಳಿದು ಕೈಕಾಲು ತೊಳೆಯ ಬೇಕೆಂದುಕೊಂಡನು. ಆಗ ಆ ಬಕಪಕ್ಷಿ “ಎಲೈ ಮಾನವನೆತಡೆ, ನೀರಿಗಿಳಿಯಬೇಡ. ನೀನಾರುನಿನ್ನ ಹೆಸರೇನುಇಲ್ಲಿಗೇಕೆ ಬಂದೆಹೇಳು ಮತ್ತು ನಾನು ಕೇಳುವ ಏಳು ಪ್ರಶ್ನೆಗಳಿಗೆ ಉತ್ತರಿಸಿದಲ್ಲಿ ನೀನು ನೀರನ್ನು ಬಳಸಬಹುದು” ಎಂದಿತು. 

ಆಶ್ಚರ್ಯಚಕಿತನಾದ ಶತಾನಂದನು “ಅಯ್ಯಾ ಬಕಪಕ್ಷಿಯೇಕೇಳು, ನಾನು ಶತಾನಂದನೆಂದು ನನ್ನ ಹೆಸರು. ಈ ಲೋಕದಲ್ಲಿ ವಿಖ್ಯಾತರಾದ ವಸುಷೇಣ+ಮಾಲತಿಯರ ಪುತ್ರ. ಮೂಲಪ್ರಕೃತಿಯ ರಹಸ್ಯಾನ್ವೇಷಣೆಯಲ್ಲಿ ತಪೋನಿರತನಾಗಿದ್ದೆ. ಈ ಗುಹೆ ಸೇರಿ ಎಷ್ಟೋ ಕಾಲವಾಯ್ತು. ನಾನು ಗುಹೆಯನ್ನು ಸೇರುವಾಗ ಇದು ದೊಡ್ಡ ದಟ್ಟವಾದ ಕಾಡು. ಈ ಕೆರೆ ಇರಲಿಲ್ಲ. ಈಗ ಕೆರೆ ಇದೆ. ಆದರೆ ಕೆರೆಯ ಬಳಕೆ ಮಾಡುವ ಜನರು ಯಾರೂ ಕಾಣುವುದಿಲ್ಲ. ಕಾಡು ನಾಶವಾಗಿದೆ. ಬೆಂಗಾಡಾಗಿ ಉರಿಬಿಸಿಲ ಬೇಗೆ ಹೆಚ್ಚುತ್ತಿದೆ. ಕಾರಣವೇನುನಾನು ನಿನ್ನ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಮಾಡುತ್ತೇನೆ. ನಿನ್ನ ಪ್ರಶ್ನೆಗಳನ್ನು ಕೇಳು ಉತ್ತರಿಸುತ್ತೇನೆ. ಹಾಗೇ ನೀನ್ಯಾರುಈ ಕೆರೆ ನಿನ್ನದೇನೀನೇಕೆ ಕೆರೆ ಕಟ್ಟಿಸಿದೆಜನಸಂಸ್ಕೃತಿ ಇಲ್ಲದಲ್ಲಿ ಈ ಕೆರೆ ಏಕೆ ಕಟ್ಟಿಸಿದೆಹಾಗೂ ಅಂತಹಾ ಮೂರ್ಖತನ ನೀನೇಕೆ ಮಾಡಿದೆಇವೆಲ್ಲವನ್ನೂ ಖಂಡಿತವಾಗಿ ನೀನು ಹೇಳಿದಲ್ಲಿ ನಾನು ಈ ನೀರನ್ನು ಬಳಸುತ್ತೇನೆ. ಇಲ್ಲವಾದಲ್ಲಿ ಈ ನೀರೂ ಬೇಡ, ನೀನೂ ಬೇಡ, ನಿನ್ನ ಪ್ರಶ್ನೆಯೂ ಬೇಡ. ನಾನೊಬ್ಬ ಬ್ರಹ್ಮಕುಲದಲ್ಲಿ ಹುಟ್ಟಿದವನಾದ್ದರಿಂದ ನನ್ನ ವೃತ, ನಿಯಮಗಳೂ ಕೂಡ ನನಗೆ ಬದ್ಧವೇ ತಿಳಿದುಕೊ” ಎಂದು ಶತಾನಂದನು ಹೇಳಲಾಗಿ ಬಕವು “ಅಯ್ಯಾ, ನಿನ್ನಂತಹಾ ಖಂಡಿತವಾದಿಗಾಗಿಯೇ ನಾನು ಈ ಬಕಜನ್ಮದಲ್ಲಿ ಆರು ಸಾವಿರ ವರ್ಷಗಳಿಂದ ಕಾಯುತ್ತಿದ್ದೇನೆ. ಮೊದಲು ನನ್ನ ಪ್ರಶ್ನೆಗೆ ಉತ್ತರಿಸು. ನಂತರ ಎಲ್ಲಾ ವಿಚಾರವನ್ನೂ ಹೇಳುತ್ತೇನೆ. ಇದರಲ್ಲಿ ಯಾವುದೇ ಮೋಸವಿಲ್ಲ. ಹಾಗೂ ನನ್ನ ಬಕಜನ್ಮ ಮೋಕ್ಷವೂ ಸಾಧಿಸಲ್ಪಡುತ್ತದೆ. ದಯವಿಟ್ಟು ಉತ್ತರಿಸುವ ಕೃಪೆ ಮಾಡು ಎಂದು ತನ್ನ ಏಳು ಪ್ರಶ್ನೆಗಳು ಹೀಗಿವೆ ಕೇಳು.

1) ಬ್ರಾಹ್ಮಣ್ಯವೆಂದರೇನು?
2) ವಿಪ್ರನಾರು?
3) ವೇದವು ಹೇಗೆ ಜಗತ್ತಿನ ಜೀವ?
4) ಜಗತ್ತು ಯಾವುದರ ಆಧಾರದಲ್ಲಿ ನಿಂತಿದೆ?
5) ನಿತ್ಯ ಯಾವುದು?
6) ಸತ್ಯ ಯಾವುದು?
7) ಮಿಥ್ಯ ಯಾವುದು?

ಈ ಏಳು ಪ್ರಶ್ನಗಳಿಗೆ ನೀನು ಉತ್ತರಿಸಿದೆಯಾದರೆ ನನಗೆ ಮೋಕ್ಷ, ನಿನಗೆ ಈ ಕೆರೆ ದಾನ.  ನಿನ್ನಿಚ್ಛೆಯಂತೆ ನೀನು ಬಳಸಬಹುದು. ಈ ಮಂದರ ಪರ್ವತಶ್ರೇಣಿಯ ಎಲ್ಲಾ ಒಂದು ಸಾವಿರ ಕೆರೆಗಳನ್ನೂ ನಾನೇ ಕಟ್ಟಿಸಿದ್ದು. ಇದೊಂದು ಮಾತ್ರವಲ್ಲ, ಇದರ ಕೆಳಗೆಲ್ಲಾ ಸಮೃದ್ಧ ಜನಸಂದಣಿ ಹೊಂದಿದ ಊರಿತ್ತು. ಈಗ ಎಲ್ಲವೂ ನಾಶವಾಗಿದೆ, ಕಾರಣ ನಾನೇ, ನಾನು ಹಾಕಿದ ನಿಬಂಧನೆ, ಅದೇ ಈ ಕೆಳಗಿನ ಏಳು ಪ್ರಶ್ನೆಗಳು. ಉತ್ತರಿಸಲಾರದವರು ನನಗೆ ಆಹಾರ, ಇಲ್ಲಿಯವರೆಗೆ ಯಾರೂ ಉತ್ತರಿಸಿಲ್ಲ. ನೀನಾದರೋ ಉತ್ತರಿಸಿದೆಯಾದರೆ ಒಳ್ಳೆಯದು, ಇಲ್ಲವಾದರೆ ನನಗೆ ಆಹಾರವಾಗುತ್ತೀಯ” ಎಂದು ಹೇಳುತ್ತಾ ಆ ಬಕಪಕ್ಷಿ ಮೈಕೊಡವಿ ಎತ್ತರಕ್ಕೆ ಬೆಳೆದು ನಿಂತಿತು. ಆಗ ಆ ಪಕ್ಷಿಯ ಆಕಾರ ನೋಡಿ ಶತಾನಂದ ಬೆಚ್ಚಿಬಿದ್ದನು. ಆಕಾಶದೆತ್ತರಕ್ಕೆ ಬೆಳೆದು ನಿಂತ ಬಕನನ್ನು ನೋಡಿ “ಅಯ್ಯಾ ಬಕನೇನಿನ್ನ ಎಲ್ಲಾ ಪ್ರಶ್ನೆಗಳಿಗೂ ಸಮಂಜಸ ಉತ್ತರ ಕೊಡಬಲ್ಲೆನೆಂದೆನಿಸುತ್ತದೆ. ಆದರೆ ಈ ಮಹಾಕಾಯವನ್ನು ನೀನೂ ಸಾಮಾನ್ಯ ರೂಪಿನಲ್ಲಿ ನನ್ನ ಮುಂದೆ ಕುಳಿತುಕೊ. ನೀನು ಕೇಳಿದ ಪ್ರಶ್ನೆಗಳು ಒಂದು ಶಬ್ದದಲ್ಲಿ ಉತ್ತರಿಸುವವಲ್ಲ. ದೀರ್ಘವಾದ ವಿವರಣೆಯೊಂದಿಗೆ ಉತ್ತರಿಸಬೇಕಿದೆ. ಹಾಗಿದ್ದಾಗ ನಿನ್ನನ್ನು ನೋಡಿ ಉತ್ತರಿಸಬೇಕು. ನಾನೆಷ್ಟು ಕಾಲ ಮೇಲೆ ನೋಡುತ್ತಾ ಉತ್ತರಿಸಲಿ? “ನಿರಂತರ ಅಂಗಚೇಷ್ಟಿಕನೂ, ಮುಖ ನೋಡದೇ ಮಾತನಾಡುವವನೂ, ಅತೀ ನಿಧಾನವಾಗಿ ಮಾತನಾಡುವವನೂ, ಅಸ್ಪಷ್ಟವಾದ ಮಾತನಾಡುವವನೂ, ಅಭಿನಯಪೂರ್ವಕ ಮಾತನಾಡುವವನೂ ನಾಟಕಿ” ಗಳೆಂದು ಹೇಳುತ್ತಾರೆ. ಹಾಗಾಗಿ ನೀನು ನನ್ನ ಮುಖದ ನೇರಕ್ಕೆ ತಗ್ಗಿ ಕುಳಿತು ನನ್ನ ಉತ್ತರಗಳನ್ನು ಕೇಳು ಹೇಳುತ್ತೇನೆ” ಎಂದನು.

೧) ಬ್ರಾಹ್ಮಣ್ಯವೆಂದರೇನು?
ಋಗ್ವೇದ ಮಂಡಲ-, ಸೂಕ್ತ-, ಮಂತ್ರ-
ಸಾಮವೇದ (ಸುಬ್ರಹ್ಮಣ್ಯ ಸಾಮ)

ತ್ವಮಗ್ನೇ ದ್ರವಿಣೋದಾ ಅರಂಕೃತೇ ತ್ವಂ ದೇವಃ ಸವಿತಾ ರತ್ನಧಾ ಅಸಿ | 
ತ್ವಂ ಭಗೋ ನೃಪತೇ ವಸ್ವ ಈಶಿಷೇ ತ್ವಂ ಪಾಯುರ್ದಮೇ ಯಸ್ತೇ ವಿಧತ್ || ೭ ||
ತ್ವಾಮಗ್ನೇ ದಮ ಆ ವಿಸ್ಪತಿಂ ವಿಶಸ್ತ್ವಾಂ ರಾಜಾನಂ ಸುವಿದತ್ರಮೃಂಜತೇ | 
ತ್ವಂ ವಿಶ್ವಾನಿ ಸ್ವನೀಕ ಪತ್ಯಸೇ ತ್ವಂ ಸಹಸ್ರಾಣಿ ಶತಾ ದಶ ಪ್ರತಿ || ೮ ||
ತ್ವಾಮಗ್ನೇ ಪಿತರಮಿಷ್ಟಿಭಿರ್ನರಸ್ತ್ವಾಂ ಭ್ರಾತ್ರಾಯ ಶಮ್ಯಾ ತನೂರುಚಮ್ | 
ತ್ವಂ ಪುತ್ರೋ ಭವಸಿ ಯಸ್ತೇ ವಿಧತ್ತ್ವಂ ಸಖಾ ಸುಶೇವಃ ಪಾಸ್ಯಾಧೃಷಃ || ೯ ||

ಸುಬ್ರಹ್ಮಣ್ಯೋಂ ಸುಬ್ರಹ್ಮಣ್ಯೋಂ ಸುಬ್ರಹ್ಮಣ್ಯೋಮಿಂದ್ರಾ ಗಚ್ಛ 
ಹರಿವ ಆ ಗಚ್ಛ ಮೇಧಾತಿಥೇರ್ಮೇಷ ವೃಷಣಶ್ವಸ್ಯಮೇನೇ 
ಗೌರಾವಸ್ಕಂದಿನ್ನಹಲ್ಯಾಯೈ ಜಾರ | 
ಕೌಶಿಕ ಬ್ರಾಹ್ಮಣ ಗೌತಮ ಬ್ರುವಾಣ | ತ್ಯಹೇ | ದ್ವ್ಯಹೇ | ಶ್ವಃ | 
ಅದ್ಯ ಸುತ್ಯಾಮಾಗಚ್ಛ ಮಘವನ್ ದೇವಾ ಬ್ರಹ್ಮಾಣ ಆ ಗಚ್ಛತಾಗಚ್ಛತಾಗಚ್ಛತ ||

ಅಯ್ಯಾ ಬಕನೇಸ್ಥೂಲವಾಗಿ ಹೇಳುವುದಿದ್ದರೆ ಬ್ರಹ್ಮಪಥದಲ್ಲಿ ಅನುಷ್ಠಾನನಿರತನಾಗಿರುವ ಬ್ರಹ್ಮಜ್ಞಾನಕಾಂಕ್ಷಿ ಯಾದ ಮಾನವನೊಬ್ಬನ ಕೃತ, ಕೃತ್ಯ, ಕರ್ತವ್ಯವೇ ಬ್ರಾಹ್ಮಣ್ಯವೆನಿಸಿ ಕೊಳ್ಳುತ್ತದೆ. ಆದರೆ ಬ್ರಾಹ್ಮಣ್ಯವೆಂದರೆ ಸಾಮದ ವಿಶ್ಲೇಷಣೆ 

ಬಾ-ರಾಹಾಬ್ರಹ್ಮಾ ಆಆಯಾಈಯೇತಿಆಣಆಣೇಯೋ ಯಾ ಯಾ ಮಿತಿವರ್ತಿವರ್ತನಾವರ್ತಿಕಾವೃತಿಮಿತಿ ಬ್ರಾಹ್ಮಣ್ಯ ವೆನ್ನಿಸುತ್ತದೆ. (ಬ್ರಾಹ್ಮಿ ಭಾಷೆ)

ಅದರ ಬಗ್ಗೆ ವಿವರಿಸುತ್ತೇನೆ ಕೇಳು. ಹುಟ್ಟುತ್ತಾ ಎಲ್ಲಾ ಜೀವಿಗಳೂ ಸಮಾನ ಜಂತುಗಳೇ. ಮಾನವ ಶಿಶುಗಳಿಗೆ ಸಂಸ್ಕಾರಬಲದಿಂದ ಮಾನವ ಸಂಸ್ಕಾರ ಮೂಲಕ ಮಾನವತ್ವ ಬೆಳೆಸುತ್ತಾ ಶಮ+ದಮಾದಿ ಸದ್ಗುಣ ಮೈಗೂಡಿಸಿಕೊಂಡು ವಿಧ್ಯಾವಿಧ್ಯೆಗಳ ಪ್ರೇಷಣೆ, ಪ್ರವಚನ, ಪೂರೈಕೆ, ಬೋಧನೆ, ಅನುಷ್ಠಾನ, ಅರ್ಜನೆ, ವ್ಯಾಪ್ತಿ, ಅತಿವ್ಯಾಪ್ತಿ, ಆವಿಷ್ಕಾರ, ಅಧ್ಯಯನಗಳೆಂಬ ದಶವಿಧ ಸಂಸ್ಕಾರಮುಖೇನ ದ್ವಿಜತ್ವ ಪಡೆದು ನಿತ್ಯ ಸ್ವಾಧ್ಯಾಯನಿರತನಾಗಿದ್ದು, ತ್ಯಾಗ, ಸರಳ, ವಿನಯ, ಸಜ್ಜನಿಕೆ, ದಯೆ, ದಮ, ಶಮವರಿತು ಕ್ರಮಬದ್ಧವಾಗಿ ಬಾಳುವುದೇ “ಬ್ರಾಹ್ಮಣ್ಯ” ಎಂದು ಶತಾನಂದ ಹೇಳಲಾಗಿ “ಭಲೇಭಲೇನೀನು ಸರಿಯಾಗಿಯೇ ಹೇಳಿದ್ದೀಯ. ಈಗಲೇ ನೀರಿನಲ್ಲಿ ಕೈಕಾಲು ತೊಳೆದುಕೊ. ನಾನು ಸಂತುಷ್ಠನಾಗಿದ್ದೇನೆ, ನೀನು ಬ್ರಾಹ್ಮಣ ಹೌದು” ಎಂದನು. ಆದರೆ ಶತಾನಂದ “ಕರ್ತವ್ಯ ಮಧ್ಯದಲ್ಲಿ ಕ್ರಮಸಂಜಾತ ಸ್ವೀಕಾರವೂ ಕೂಡ ಬ್ರಾಹ್ಮಣ್ಯನಾಶಕ್ಕೆ ಕಾರಣವಾಗುತ್ತದೆ. ಬಕನೇ ನಿನ್ನ ಏಳೂ ಪ್ರಶ್ನೆಗಳಿಗೆ ಉತ್ತರಿಸಿಯೇ ನೀರು ಸ್ವೀಕರಿಸುತ್ತೇನೆ” ಎಂದು ಹೇಳುತ್ತಾ ಇಕೋ ನಿನ್ನ ಎರಡನೆಯ ಪ್ರಶ್ನೆ “ವಿಪ್ರನಾರು”?

೨) ವಿಪ್ರನಾರು?
ಸ್ಥೂಲವಾಗಿ ಹೇಳುವುದಿದ್ದರೆ ಒಂದು ವಿಚಾರವನ್ನು ಸ್ಪಷ್ಟವೂ, ನಿರ್ದಿಷ್ಟವೂ, ನಿಖರವೂ, ಪ್ರಶ್ನಾತೀತವೂ ಆಗಿ ವಿವರಿಸಬಲ್ಲ ಪ್ರವಚನಕಾರನೇ “ವಿಪ್ರ. ಆದರೆ ಅಷ್ಟು ಮಾತ್ರವಲ್ಲ, ಅದಕ್ಕೂ ಹೆಚ್ಚಿನ ವ್ಯಾಖ್ಯಾನವಿದೆ. ಅದರ ಬಗ್ಗೆ ಹೇಳುತ್ತೇನೆ ಕೇಳು ಎಂದು ಆರಂಭಿಸಿದನು. ಅಯ್ಯಾ ಬಕನೇ, ಜಗತ್ತಿನ ಆಗುಹೋಗುಗಳಲ್ಲಿ ಮೂರು ವಿಧ. ಅದು ಕರ್ಮಕಾರಣ, ಧೈವಕಾರಣ, ಮತ್ತು ರಾಜಕಾರಣ. ಈ ಮೂರರಲ್ಲಿಯೂ ವಿಪ್ರನ ಬದ್ಧತೆ ಇರುತ್ತದೆ. ಅದನ್ನು ಸಮರ್ಥವಾಗಿ ನಿರ್ವಹಿಸುವವನೇ ವಿಪ್ರ. ಅದನ್ನು ಕೇಳು, ಮೊದಲನೆಯದಾದ ಕರ್ಮಕಾರಣದಿಂದಾಗಿ ಜಗತ್ತಿನ ಎಲ್ಲಾ ಜೀವಿಗಳೂ ನಾನಾ ಸಂಕಷ್ಟಕ್ಕೆ ಸಿಲುಕುತ್ತದೆ. ಅದಕ್ಕೆ ಅವವುಗಳ ಕರ್ಮಾಧಾರಿತವಾಗಿ ನಿಷ್ಕರ್ಷೆ ನಡೆಸಿ ಕರ್ಮವಿಪಾಕ ದಾರಿ ತೋರಿಸಿ ಸನ್ಮಾರ್ಗ ದರ್ಶನ ಮಾಡಬೇಕು. ಹಾಗೆ ಧರ್ಮ ಕಾರಣದ ನಾನಾ ಸಂಕಟ ಉದ್ಭವಿಸುತ್ತದೆ. ಆಗಲೂ ಸಮಾಜವನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿ ಧರ್ಮಕ್ಲೇಶ ಮತ್ತು ಉದ್ಧರಣ ಕಾರ್ಯದಲ್ಲಿ ಜನಮಾನಸವು ತೊಡಗುವಂತೆ ಮಾಡುವವನೂ ವಿಪ್ರನೇ. ಹಾಗೇ ರಾಜಕಾರಣದಿಂದಾಗಿ ಹುಟ್ಟುವ ದೇಶೀಯ ಅಂತರ್ದೇಶೀಯವಾದ ಯುದ್ಧ, ವಿಪ್ಲವ, ದೊಂಬಿ, ವಾಣಿಜ್ಯ, ಅವ್ಯವಸ್ಥೆ, ಆರ್ಥಿಕ ಹಿಂಜರಿತ, ಉತ್ಪಾತ, ಬರಗಾಲ, ವಿದ್ರೋಹಗಳಲ್ಲೂ ವಿಪ್ರನು ಸಮಾಜವನ್ನು ಮುನ್ನೆಚ್ಚರಿಕೆ ನೀಡಿ ರಕ್ಷಣಾತ್ಮಕವಾಗಿ ನಡೆಸಬೇಕಿದೆ. ಅವನೇ “ವಿಪ್ರ” ನೆನ್ನಿಸಿಕೊಳ್ಳು ತ್ತಾನೆ. ಅಯ್ಯಾ ಬಕನೇ ನಿನ್ನ ಮೂರನೆಯ ಪ್ರಶ್ನೆ ವೇದವು ಹೇಗೆ ಜಗತ್ತಿನ ಜೀವಅವನ್ನು ಹೇಳುತ್ತೇನೆ ಕೇಳು.

೩) ವೇದವು ಹೇಗೆ ಜಗತ್ತಿನ ಜೀವ?
ವಿವಿಧ ಜ್ಞಾನರಾಶಿಯನ್ನು ಹೊಂದಿ ಸಾರ್ವಕಾಲಿಕ, ಸಾರ್ವದೇಶಿಕ, ಸಾರ್ವಜನಿಕ ವಿಚಾರಧಾರೆಯೇ ವೇದ. ಅದು ಒಂದು ಮತ, ಸಿದ್ಧಾಂತಗಳಿಗೆ ಸಂಬಂಧಿಸಿದ್ದಲ್ಲ. ಎಲ್ಲರಿಗೂ, ಎಲ್ಲಾ ಕಾಲಕ್ಕೂ, ಎಲ್ಲಾ ದೇಶಕ್ಕೂ ಸನ್ಮಾರ್ಗ ತೋರಿಸಬಲ್ಲದು. ಹಾಗೆಯೇ ಒಂದು ವಿಶಿಷ್ಠ ಶಕ್ತಿಯನ್ನೂ ಅದು ಹೊಂದಿರುತ್ತದೆ. ಅದರ ಬಗ್ಗೆ ವಿವರಿಸುತ್ತೇನೆ ಕೇಳು.

ಋಗ್ವೇದ ಮಂಡಲ-, ಸೂಕ್ತ-೧೬೪, ಮಂತ್ರ-೨೭
ಹಿಂಕೃಣ್ವತೀ ವಸುಪತ್ನೀ ವಸೂನಾಂ ವತ್ಸಮಿಚ್ಛಂತೀ ಮನಸಾಭ್ಯಾಗಾತ್ | 
ದುಹಾಮಶ್ವಿಭ್ಯಾಂ ಪಯೋ ಅಘ್ನ್ಯೇಯಂ ಸಾ ವರ್ಧತಾಂ ಮಹತೇ ಸೌಭಗಾಯ ||

(ಷರಾ: ಮೇಲಿನ ಮಂತ್ರದ ಎರಡೂ ಪಾದಗಳ ಆದಿ ಅಕ್ಷರಗಳನ್ನು ಕೂಡಿಸಿಯೇ ವೇದವು ಹಿಂದು ಶಬ್ದವನ್ನು ಮಂಡಿಸಿದೆ. ಅದನ್ನರಿಯದ ಮೂರ್ಖರು ಏನಕ್ಕೇನೋ ವ್ಯಾಖ್ಯಾನ ಮಾಡಿಕೊಂಡು ತೊಳಲಾಡುತ್ತಿದ್ದಾರೆ.)

ಒಬ್ಬ ವ್ಯಕ್ತಿಯನ್ನು ಒಂದು ವಿಶೇಷವಿಶಿಷ್ಟ, ವಿಚಾರಪ್ರದ ಭಾಗದಲ್ಲಿ ನಡೆಸುವ ಶಕ್ತಿಯೇ ಪತ್ನಿಯೆನ್ನಿಸಿಕೊಳ್ಳುತ್ತದೆ. ಹಾಗಾಗಿ ವಸು+ಪತ್ನಿ. ಅಂದರೆ ಈ ಮೂಲಪ್ರಕೃತಿಯನ್ನಾಧರಿಸಿದ ಜೈವಿಕ ವೆಲ್ಲವೂ ಗಿಡಮರ ಸಹಿತವಾದದ್ದು ವಸು. ಅದನ್ನು ಉತ್ತಮ ವಿಚಾರಧಾರೆಯೊಂದಿಗೆ ಕೊಂಡೊಯ್ಯುವ ಶಕ್ತಿಯೇ ಪತ್ನಿ. ಹಾಗಾಗಿ “ವಸುಪತ್ನಿ” ಈ ವಿಚಾರಧಾರೆಯಲ್ಲಿ ತೊಡಗಿ ವೇದವಿಚಾರವಿದೆ. ವತ್ಸಮಿಚ್ಛಂತೀ ಅಂದರೆ ಪುನರುತ್ಪಾದನೆ ಸಹಿತವಾದಂತಹ ಸಾರ್ವತ್ರಿಕ ನಿತ್ಯ ನಿರಂತರ ಬೆಳವಣಿಗೆಯನ್ನೇ “ವತ್ಸ” ಎಂದರು. ಅದೊಂದು ವಿಶೇಷ ತರಂಗಾಧಾರಿತ ಪ್ರಕೃತಿ ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ ಯಾರು ಈ ಮೂಲಪ್ರಕೃತಿಯ ನಾಡಿ ಹಿಡಿಯಬಲ್ಲರುಎಂದರೆ ಅವರು ವೇದಜ್ಞರು. ಈ ತರಂಗ ರಹಸ್ಯವೇನುಅರಿತವರು ವೇದಬ್ರಹ್ಮರು. ಅವರೇ ಲೋಕಪಿತೃಗಳು. ಬೇರೆ ಯಾವುದೇ ಸಾಹಿತ್ಯ ಸಂಪುಟಗಳಿಗೆ ಇಲ್ಲದ ಸಾರ್ವತ್ರಿಕ ವಿಚಾರಧಾರೆಯನ್ನೊಳಗೊಂಡ ವಿಶೇಷ ಮಂತ್ರಪುಂಜಗಳ ಸಮೂಹವೇ ವೇದ. ಇದು ಉಂಟು ಮಾಡುವ ಸಂವಹನ ತರಂಗ ಅಗಾಧ. ಜೀವಜಗತ್ತಿನ ಜೀವಕೋಟಿಗಳ ಸ್ಥಿರತೆ, ಬದ್ಧತೆಯನ್ನೊಳಗೊಂಡ ಧೈವೀಕ ವ್ಯವಸ್ಥೆಯನ್ನು ಕಾಪಾಡುವ ದೇಹಾಂತರ್ಗತ ತರಂಗಗಳ ಮೂಲವೇದ ತರಂಗ. ಹಾಗಾಗಿಯೇ ಜೀವಜಗತ್ತಿನ ಸತ್ವವೇ ವೇದ. 

ಋಗ್ವೇದ ಮಂಡಲ-ಸೂಕ್ತ-೧೬೪ಮಂತ್ರ-೨೦,೨೧,೨೨
ದ್ವಾ ಸುಪರ್ಣಾ ಸಯುಜಾ ಸಖಾಯಾ ಸಮಾನಂ ವೃಕ್ಷಂ ಪರಿಷಸ್ವ ಜಾತೇ | 
ತಯೋರನ್ಯಃ ಪಿಪ್ಪಲಂ ಸ್ವದ್ವತ್ತ್ಯನಶ್ನನ್ನನ್ಯೋ ಅಭಿಚಾಕಶೀತಿ ||
ಯತ್ರಾ ಸುಪರ್ಣಾ ಅಮೃತಸ್ಯ ಭಾಗಮನಿಮೇಷಂ ವಿದಥಾಭಿ ಸ್ವರಂತಿ | 
ಇನೋ ವಿಶ್ವಸ್ಯ ಭುವನಸ್ಯ ಗೋಪಾಃ ಸ ಮಾ ಧೀರಃ ಪಾಕಮತ್ರಾ ವಿವೇಶ ||
ಯಸ್ಮಿನ್ವೃಕ್ಷೇ ಮಧ್ವದಃ ಸುಪರ್ಣಾ ನಿವಿಶಂತೇ ಸುವತೇ ಚಾಧಿ ವಿಶ್ವೇ | 
ತಸ್ಯೇದಾಹುಃ ಪಿಪ್ಪಲಂ ಸ್ವಾದ್ವಗ್ರೇ ತನ್ನೋನ್ನಶದ್ಯಃ ಪಿತರಂ ನ ವೇದ ||

ಈ ಮಂತ್ರಗಳು ಜೀವಪಾರಮ್ಯ ಪಾರವಶ್ಯತೆಯನ್ನೂ, ಅಧೀನತ್ವವನ್ನೂ, ಮಂತ್ರತರಂಗ ಕಾಣದ ಅಭ್ಯುದಯವನ್ನೂ ಹೇಳುತ್ತಾ ತನ್ನ ಸ್ವಾಮ್ಯತೆಯನ್ನು ಸ್ಪಷ್ಟಪಡಿಸುತ್ತವೆ ಎಂದು ಶತಾನಂದನು ಹೇಳಲಾಗಿ ಅತ್ಯಂತ ಹರ್ಷಗೊಂಡ ಬಕನು ಸಂತೋಷದಿಂದ ಉದ್ಗರಿಸಿದನು “ಅಯ್ಯಾ ನೀನು “ವಿಪ್ರೋತ್ತಮ”, ವೇದವಿದ, ಬ್ರಹ್ಮರ್ಷಿ ಸಂತುಷ್ಠನಾದೆ” ಎಂದನು. ಆಗ “ಅಯ್ಯಾ ಬಕನೇ, ಈ ಸಕಲ ಚರಾಚರ ಜಗತ್ತು ಯಾವುದರ ಆಧಾರದಲ್ಲಿ ನಿಂತಿದೆ ಎಂದೆಯಲ್ಲಾ ಕೇಳು” ಹೇಳುತ್ತೇನೆ.

೪) ಜಗತ್ತು ಯಾವುದರ ಆಧಾರದಲ್ಲಿ ನಿಂತಿದೆ?

ಅಯ್ಯಾ ಬಕನೇ, ಈ ಜಗತ್ತು ವಿಶಾಲ ಆಕಾಶಗಂಗೆಯಲ್ಲಿ ನಿರಾಧಾರವಾಗಿ ತೇಲುತ್ತಾ ನಿಂತಿದೆಯೆಂದು ಭಾವಿಸಬೇಡ. ಇದು “ಸತ್ಯ” ವೆಂಬ ಮಹಾನ್ ಶಕ್ತಿಯ ಆಧಾರದಲ್ಲಿ ಮನೋ, ಬುದ್ಧಿ, ಚಿತ್ತಾ, ಅಹಂಕಾರ, ಜ್ಞಾನವೆಂಬ ಪಂಚೀಕರಣದಲ್ಲಿ ಆಧಾರಿತವಾಗಿದೆ. ಹಾಗಾಗಿಯೇ ಋತಂ ಚ ಸತ್ಯಂ ಚಾಭೀದ್ಧಾತ್ತಪಸೋಧ್ಯಜಾಯತ ಎಂದಿದೆ. 
ಮೂಲವಾದ ಮನೋಶಕ್ತಿ, ಅದು ಪ್ರಕೃತಿ ಪ್ರೇಷಿತವಾದ ಮೂಲಶಕ್ತಿ. ಅದರಲ್ಲಿ ನಿರ್ವ್ಯಾಜ ಪ್ರೇಮವಿದೆ, ಸರ್ವಸಮಾನತಾ ಭಾವವಿದೆ. 

ಎರಡನೆಯದು “ಬುದ್ಧಿ. ಇದು ಜೈವಿಕ ಜಗತ್ತಿನ ಚರಗಳಲ್ಲಿ ಅಡಕವಾಗಿದೆ. ಅದರ ಪ್ರತೀಕವೇ ಕೂರ್ಮ ಕಲ್ಪನೆ. ಅಲ್ಲಿ ಜಗತ್ ಧರಿಸಿದ ಕೂರ್ಮನಿಲ್ಲ. ಆದರೆ ಕೂರ್ಮವೃತ್ತಿ ಇದೆ. 

ಹಾಗೇ ಮೂರನೆಯದು “ಚಿತ್ತಾ” ಇದೇ ನಾಗಶಕ್ತಿ. ಇದು ಜಗತ್ತಿನ ಎಲ್ಲಾ ಪ್ರಪಂಚ ವ್ಯಾಪಾರ ಆಧರಿಸಿ  ಈ ಲೋಕವನ್ನು ಸ್ಥಿರಗೊಳಿಸುತ್ತದೆ. 

ಹಾಗೇ ನಾಲ್ಕನೆಯದಾದ ಅಹಂಕಾರಗಳೆಂಬ ದಿಗ್ಗಜ ಕಲ್ಪನೆ. ಮಹತ್ತು ಎನ್ನಿಸುವ ತತ್ವಗಳೆಲ್ಲವೂ ಕೂಡ ದಿಗ್ಗಜಗಳೇ. ಅದು ಅಹಂಕಾರದ ಪ್ರತೀಕ. ಆದರೆ ಪರಸ್ಪರ ಪೂರಕಶಕ್ತಿ. ಅದನ್ನಾಧರಿಸಿ ದಿಗ್ ದರ್ಶನ ವ್ಯವಸ್ಥೆ ರೂಪುಗೊಂಡಿದೆ. ಇಲ್ಲವಾದರೆ ನೀಲಾಕಾಶದಲ್ಲಿ ತೇಲುತ್ತಿರುವ ಸಕಲಲೋಕ ಮಂಡಲಗಳಿಗೆ  ದಿಕ್ಕೆಲ್ಲಿ

ಆ ದಿಕ್ಕೇ ಪ್ರಜ್ಞಾಪೂರ್ವಕವಾದ ಪ್ರಕಟಿತಜ್ಞಾನ ಐದನೆಯದು. ಹಾಗಾಗಿ ಬಕವೇ ಈ ಪ್ರಪಂಚ ಅಥವಾ ಜಗತ್ತು “ಸತ್ಯಾಧಾರಿತ” ವೆಂದು ತಿಳಿ.

ಆ ಸತ್ಯೇನ ರಜಸಾ ವರ್ತಮಾನೋ ನಿವೇಶಯನ್ನಮೃತಂ ಮರ್ತ್ಯಂ ಚ | 
ಹಿರಣ್ಯಯೇನ ಸವಿತಾ ರಥೇನಾ ದೇವೋ ಯಾತಿ ಭುವನಾನಿ ಪಶ್ಯನ್” ||

ಎಂದಿದೆ ವೇದಎಂದನು ಶತಾನಂದ. ಆಗ ಒಂದು ಅದ್ಭುತ ಘಟಿಸಿತು. ಅಲ್ಲಿರುವ ಬಕನ ರೂಪವು ಮರೆಯಾಗಿ ಶಸ್ತ್ರಾಸ್ತ್ರಧಾರಿಯಾದ ರಥಾರೂಢನಾದ ಮಾನವ ರಾಜನೊಬ್ಬ ಪ್ರತ್ಯಕ್ಷನಾಗಿದ್ದ. ಆತನು “ಅಯ್ಯಾ ವಿಪ್ರೋತ್ತಮನೇ, ನಿನ್ನಿಂದಾಗಿ ನನ್ನ ಬಕರೂಪ ಮರೆಯಾಯ್ತು. ಇನ್ನು ಮೂರು ಪ್ರಶ್ನೆಗಳಿಗೆ ಉತ್ತರಿಸಿ ನನಗೆ ಸದ್ಗತಿಯನ್ನು ನೀಡು. ನಾನು “ವಿಪ್ರಲಂಭ” ನೆಂಬ ಹೈಹಯ ಪುತ್ರನಾದ ರಾಜ ಶಾಪಗ್ರಸ್ತನಾಗಿ ಬಕನಾಗಿ ಆರುಸಾವಿರ ವರ್ಷಗಳಿಂದ ಈ ಬಕರೂಪದಲ್ಲಿದ್ದೆ” ಎಂದನು. ಆಗ ಶತಾನಂದ ಆಗಲಿ ನಿನ್ನ ಐದನೆಯ ಪ್ರಶ್ನೆ ನಿತ್ಯ ಯಾವುದು ತಾನೆ ಕೇಳು.

೬) ನಿತ್ಯ ಯಾವುದು?

ಅಯ್ಯಾ ಬಕನೇ, ಜಗತ್ತಿನಲ್ಲಿ ನಾನು ಎಂಬುದು ನಿತ್ಯ. ಆದರೆ ರೂಪ ನಾನಲ್ಲ. ಬರೇ ವಸ್ತು ನಾನು. ಅದು ನಿತ್ಯ. ರೂಪವು ಎಂದಿಗೂ ನಿತ್ಯವಲ್ಲ. ಹಾಗಾಗಿ ನಿತ್ಯವು ಅದೃಷ್ಟ. ಅದನ್ನು ವೇದ ಹೀಗೆ ಉದಾಹರಿಸಿದೆ.
ಋಗ್ವೇದ ಮಂಡಲ-ಸೂಕ್ತ-೧೯೧ಮಂತ್ರ-

ದ್ಯೌರ್ವಃ ಪಿತಾ ಪೃಥಿವೀ ಮಾತಾ ಸೋಮೋ ಭ್ರಾತಾದಿತಿಃ ಸ್ವಸಾ|
ಅದೃಷ್ಟಾ ವಿಶ್ವದೃಷ್ಟಾಸ್ತಿಷ್ಠತೇಳಯತಾ ಸು ಕಮ್ ||
ಯೇ ಅಂಸ್ಯಾ ಯೇ ಅಂಗ್ಯಾಃ ಸೂಚೀಕಾ ಯೇ ಪ್ರಕಂಕತಾಃ|
ಅದೃಷ್ಟಾಃ ಕಿಂ ಚನೇಹ ವಃ ಸರ್ವೇ ಸಾಕಂ ನಿಜಸ್ಯತ ||
ಉತ್ಪುರಸ್ತಾತ್ ಸೂರ್ಯ ಏತಿ ವಿಶ್ವದೃಷ್ಟೋ ಅದೃಷ್ಟಹಾ |
ಅದೃಷ್ಟಾನ್ತ್ಸರ್ವಾಞ್ಜಂಭಯನ್ತ್ಸರ್ವಾಶ್ಚ ಯಾತುಧಾನ್ಯಃ ||

ಹಾಗಾಗಿ ಈ ಆಧಾರದಲ್ಲಿ ಯಾವುದು ದೃಷ್ಟವಲ್ಲವೋ ಆದರೂ ಅಸ್ತಿತ್ವದಲ್ಲಿ ಪ್ರಕಟವೋ ಅದೇ “ನಾನು” ಎಂದು ತಿಳಿ. ಅದು ನಿತ್ಯವಾಗಿದೆ.

೬) ಸತ್ಯ ಯಾವುದು?

ಬ್ರಹ್ಮವೊಂದೇ ಸತ್ಯ. ದೃಷ್ಟವೆಲ್ಲವೂ ಅಸತ್ಯ. ಅದರೊಳಗಿರುವ ನಾನು ಸತ್ಯ. ಅದು ದೃಷ್ಟವಲ್ಲ. ಅದೇ ಬ್ರಹ್ಮ. ಅಂದರೆ ಸಾಮ ರೀತ್ಯಾ 

 - ಬಾರಾರಾರಾರಾಹಾ | ಮಾ ಮಾ ಮಿತಿ ಬ್ರಹ್ಮ 

ಅಸ್ತಿತ್ವವಿಲ್ಲದ ಆದರೆ ಪ್ರಕಟದಲ್ಲಿ ರೂಪುಗೊಂಡು ಭ್ರಾಂತಜಗತ್ತಿನ ಅಪ್ರಕಟಿತ ಸತ್ಯವೆಂಬ ನಾನುವಿನ ನಾಟಕರಂಗದಲ್ಲಿ ಪ್ರಹಸನ ನಡೆಸುತ್ತಾ ಪಾತ್ರ ನಿರ್ವಹಿಸುವ ಚೇತನವೇ ಬ್ರಹ್ಮ. ಅದೇ ಸತ್ಯವೆಂದು ತಿಳಿ.

೭) ಮಿಥ್ಯ ಯಾವುದು?

ಅಯ್ಯಾ ಬಕನೇ, ನಿನ್ನ ಕೊನೆಯ ಪ್ರಶ್ನೆಗೆ ಉತ್ತರಿಸುತ್ತೇನೆ ಕೇಳು ಎನ್ನಲು “ಹಾ ವಿಪ್ರನೇ, ನನ್ನನ್ನು ಮನ್ನಿಸು, ಅದಕ್ಕೆ ಉತ್ತರ ಬೇಡ. ನನಗೆ ಮೋಕ್ಷ ಕೊಡು.

ಇನ್ನು ಈ ಮಿಥ್ಯಾಜಗತ್ತಿನ ಸಹವಾಸದಿಂದ ದೂರ ಉಳಿಯುತ್ತೇನೆ ಉತ್ತರಿಸಬೇಡ. ಈ ಕೆರೆಯಾದಿಯಾಗಿ ಎಲ್ಲಾ ಕೆರೆಗಳೂ ನಿನ್ನಾಧೀನವೇ. ಮುಂದೆ ಈ ಪ್ರಶ್ನೆಗೆ ಉತ್ತರಿಸಿ ನನ್ನನ್ನು ಪುನಃ ಮಿಥ್ಯಾ ಪ್ರಪಂಚಕ್ಕೆಳೆಯ ಬೇಡವೆಂದು” ಬೇಡಿಕೊಂಡನು. ಆಗ ಶತಾನಂದ ಆಗಲಿ, “ನೀನು ನಿನ್ನ ಪೂರ್ವ ಚರಿತ್ರೆಯನ್ನೂ, ಈ ಕೊಳದ ನಿರ್ಮಾಣದ ರಹಸ್ಯವನ್ನೂ, ಇದರಲ್ಲಿ ಜೀವಜಗತ್ತು ಅಭಿವೃದ್ಧಿಯಾಗದಿರಲು ಕಾರಣವನ್ನೂ ಹಾಗೂ ಈ ಕೆರೆ ನಿರ್ಮಾಣದ ರಹಸ್ಯವನ್ನೂ ಕೂಲಂಕುಶವಾಗಿ ತಿಳಿಸುವವನಾಗು” ಎಂದು ಹೇಳಲಾಗಿ ಬಕನು ಇಂತೆಂದನು.

ಒಂದಾನೊಂದು ಕಾಲದಲ್ಲಿ ಹೈಹಯ ವಂಶದಲ್ಲಿ ವಿಪ್ಲವಗಳೆದ್ದು ಒಡಕುಂಟಾಗಿ ಕೆಲ ಮಂದಿ ಹೈಹಯರು ಈ ಮಂದರಪರ್ವತ ತಪ್ಪಲಿನಲ್ಲಿ ಬಂದು ಇಲ್ಲಿ ವಿಶಾಲ ಸಾಮ್ರಾಜ್ಯ ಕಟ್ಟಿದರು. ಅವರಲ್ಲಿ ನಾನೂ ಒಬ್ಬ. ನನ್ನ ತಂದೆ ಮಿತ್ರಂಜಯ. ಅವನ ಮಗನಾದ ನಾನು ನನ್ನ ಹೆಸರು “ವಿಪ್ರಲಂಭ. ನಾನು ಕ್ಷತ್ರಿಯನಾದರೂ ಬ್ರಹ್ಮವೃತ್ತಿಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿ ಷಡಂಗ ವೇದಾಧ್ಯಯನ ಮಾಡಿದೆ. ಕಲ್ಪಸೂತ್ರಗಳನ್ನೂ, ಚತುರ್ದಶ ವಿಧ್ಯೆಗಳನ್ನೂ ಅಧ್ಯಯನ ಮಾಡಿದೆ. 

ನನ್ನ ತಂದೆ ಮಿತ್ರಂಜಯನು ಕಾಲವಾದ ಮೇಲೆ ಪುರ, ಪರಿಜನರ ಒತ್ತಾಯದ ಮೇರೆಗೆ ಅಧಿಕಾರವನ್ನು ಹಿಡಿದೆ. ಆದರೆ ರಾಜ್ಯಾಡಳಿತದಲ್ಲಿ ಆಸಕ್ತಿ  ಕಡಿಮೆ. ವೇದ ವಿಧ್ಯಾ ಪ್ರಸಾರವಾಗಬೇಕೆಂದೂ, ಅದಕ್ಕಾಗಿ ಭಂಡಾರದ ಹಣ ವಿನಿಯೋಗವಾಗಬೇಕೆಂದೂ ನಿರ್ಣಯಿಸಿ ಈ ಮಂದರ ಪರ್ವತದ ಪ್ರಸ್ಥಭೂಮಿಯಲ್ಲಿ ಸಾವಿರ ಕೆರೆಗಳನ್ನು ಕಟ್ಟಿಸಿದೆ. ವೇದಾಧ್ಯಯನಶೀಲರಾದವರೆಲ್ಲಾ ಇಲ್ಲಿ ಬಂದು ಉಚಿತವಾಗಿ ಬಂದು ನೆಲಸಿ ಅಧ್ಯಯನ ಮಾಡಲಿ ಎಂದು ಸಾರಿದೆ. ಪರ್ವತದ ತಪ್ಪಲಿನಲ್ಲಿ ಮನೆಗಳನ್ನು ನಿರ್ಮಿಸಿದೆ. ಜನವೂ ಬಂದು ತುಂಬಿ ಹೋದರು. ಉತ್ತಮವಾದ ರೀತಿಯಲ್ಲೇ ವೇದಾಧ್ಯಯನ ಆರಂಭವಾಯ್ತು. 

ಆದರೆ ಉಚಿತ ಸೌಲಭ್ಯ ದೊರಕಿತ್ತಾದ್ದರಿಂದ ಬ್ರಾಹ್ಮಣರಲ್ಲಿ ಭ್ರಷ್ಟತೆ ಆವರಿಸಿಕೊಳ್ಳಲಾರಂಭಿಸಿತು. ಹಾಗಾಗಿ ನಿಷ್ಠ ವೇದಾಧ್ಯಯನವಿಲ್ಲದೇ ಹೋಯ್ತು. ತನ್ಮೂಲಕ ದೇಶವೂ, ಸಮಾಜವೂ ಬ್ರಾಂತಸ್ಥಿತಿಗೆ ತಲುಪಿತು. ಸಮಾಜವು ದಿಕ್ಕು ಕಾಣದೇ ನಾನಾ ಪಂಥ ಮತಗಳ ದಿಕ್ಕನ್ನೂ ಹಿಡಿದು ತೆವಳಲಾರಂಭಿಸಿತು. ಅದರಿಂದಾಗಿ ಒಟ್ಟು ಜೈವಿಕ ಜಗತ್ತೇ ಅಲ್ಲೋಲ ಕಲ್ಲೋಲವಾಗ ಲಾರಂಭಿಸಿತು. ಒಂದಿನ ನಾನು ಇದನ್ನೆಲ್ಲಾ ಅರಿತುಕೊಂಡೆ. ಇದಕ್ಕೇನು ದಾರಿ ಎಂದು ಚಿಂತಿಸುತ್ತಿರುವಾಗ ಅಲ್ಲಿಗೆ ಪುಲಹ ಮಹರ್ಷಿಗಳ ಆಗಮನವಾಯ್ತು. ಅವರು ನನ್ನ ಸಂಕಷ್ಟದ ವಿವರ ತಿಳಿದು “ರಾಜನೇ, ನೀನು ರಾಜನಾಗಿ ಕ್ಷತ್ರಿಯನಾಗಿ ನಿನ್ನ ಕರ್ತವ್ಯ ನಿರ್ವಹಿಸದ ಕಾರಣ ಈ ವೇದ ಭ್ರಷ್ಟ ಸ್ಥಿತಿ ತಲುಪಿದೆ. ಇದಕ್ಕೆ ನೀನೇ ಕಾರಣ. ಹಾಗಾಗಿ ಇದನ್ನು ಸರಿಪಡಿಸುವುದೂ ನಿನ್ನ ಕರ್ತವ್ಯ. ವೇದದರಿವು ಮರೆಯಾಗಿದೆ, ಸಮಾಜದಲ್ಲಿ ಅದರ ಪುನರುತ್ಥಾನವಾಗುವಲ್ಲಿಯವರೆಗೆ ನೀನು ಇಲ್ಲಿ ಬಕರೂಪದಿಂದ ಬದುಕುತ್ತಿರು. ನೀನು ಕಟ್ಟಿದ ಸಾಮ್ರಾಜ್ಯ ಸಹಿತವಾಗಿ ಎಲ್ಲವೂ ನಿನ್ನ ಆಹಾರವಾಗಲಿ” ಎಂದು ಶಪಿಸಿ ಹೊರಟು ಹೋದನು. 

ಅಂದಿನಿಂದ ನಾನು ಈ ಕೆರೆ ದಡದಲ್ಲಿ ಕುಳಿತು ಬ್ರಾಹ್ಮಣ್ಯವರಸುತ್ತಿದ್ದೇನೆ. ನಿಜವಾದ ಬ್ರಾಹ್ಮಣನೊಬ್ಬ ಬಂದಲ್ಲಿ ನನಗೆ ವಿಮೋಚನೆ, ಮೋಕ್ಷ. ಈ ಮಿಥ್ಯಾ ಪ್ರಪಂಚದಿಂದ ಭಿನ್ನವಾಗುಳಿದು ಸತ್ಯ ಪ್ರಪಂಚದತ್ತ ನಾನು ಹೋಗುತ್ತೇನೆ. ಅಯ್ಯಾ ಶತಾನಂದನೇ, ನಿನ್ನ ಜಾಣ್ಮೆ, ವಿದ್ವತ್, ತಪೋಶಕ್ತಿ ಅಗಾಧ. ಹಾಗೇ ನಾನೂ ಆರು ಸಾವಿರ ವರ್ಷದಿಂದ ಮಾಡಿಕೊಂಡು ಬಂದ ತಪಶ್ಶಕ್ತಿ ಹಾಗೂ ನನ್ನ ಇತರೆ ಸತ್ಕರ್ಮ ಶಕ್ತಿಯನ್ನೂ ನಿನಗೆ ಧಾರೆಯೆರೆಯುತ್ತೇನೆ. ನಾನು ಪಾಪ ಪುಣ್ಯರಹಿತವಾದ ಶೂನ್ಯನಾಗಿ ಮಹತ್ ನಲ್ಲಿ ಐಕ್ಯನಾಗುತ್ತೇನೆ ನಿನಗೆ ಶುಭವಾಗಲಿ. ಮುಂದೆ ಈ ಮಂದರ ಪರ್ವತ ಪ್ರಾಂತ್ಯದಲ್ಲಿ ನಿನ್ನ ಕಾರ್ಯಕ್ಷೇತ್ರ ಮಾಡಿಕೊಂಡು ಲೋಕಕಲ್ಯಾಣಕಾರಕನಾಗೆಂದು ಹೇಳಿ “ವಿಪ್ರಲಂಭನು ತನ್ನ ಕಾಯವನ್ನು ಬಿಟ್ಟು ತೆರಳಿದನು.

ಅಲ್ಲಿಂದ ಮುಂದೆ ಮಂದರ ಪರ್ವತ ಪ್ರದೇಶದಲ್ಲಿ ಶತಾನಂದ ನೆಲಸಿ ತನ್ನ ಕಾರ್ಯಕ್ಷೇತ್ರವಾಗಿಸಿಕೊಂಡು ಲೋಕಕಲ್ಯಾಣ ಕಾರ್ಯದಲ್ಲಿ ತೊಡಗಿಕೊಂಡನೆಂದೂ ಹಾಗೂ ಅವನ ಮುಂದಿನ ಇತಿಹಾಸ ವಿಚಾರಗಳನ್ನೂ ಮುಂದಿನ ಲೇಖನದಲ್ಲಿ ಬರೆಯುತ್ತೇನೆ.   

ಇಂತು,

ಬ್ರಹ್ಮರ್ಷಿ ಕೆ. ಎಸ್. ನಿತ್ಯಾನಂದರು
ಕಣ್ವಾಶ್ರಮ, ತಲಪಾಡಿ.