Thursday, 21 April 2016

ಜ್ಯೋತಿರಾಯುರ್ವೇದ - ೬ : ಮಾನಸಿಕ ಜನ್ಯ ಸಮಸ್ಯೆಗಳು

ಇದು ಅತಿ ವಿಸ್ತಾರವಾದ ವಿಚಾರಗಳನ್ನು ಒಳಗೊಂಡಿದೆ. ಇಲ್ಲಿ ಮುಖ್ಯವಾಗಿ ವ್ಯಕ್ತಿಯ ಗುಣ, ಕರ್ಮ (ಉದ್ಯೋಗ), ಜ್ಞಾನ, ಶಕ್ತತೆ, ಧನ, ಆರೋಗ್ಯ ಇತ್ಯಾದಿ ಪರಿಣಾಮಗಳನ್ನು ಗುರುತಿಸಬಹುದು. ಇದನ್ನು ಹೆಚ್ಚಾಗಿ ನಕ್ಷತ್ರಾಧಾರಿತ ಸೂತ್ರದಂತೆ ಗುರುತಿಸಲಾಗುತ್ತದೆ.

ಚಂದ್ರನಿಗೂ ಮನಸ್ಸಿಗೂ ನೇರ ಸಂಪರ್ಕವಿರುತ್ತದೆ. ಹಾಗಾಗಿ ಜನ್ಮಕಾಲದ ಚಂದ್ರಬಲ, ಜನ್ಮನಕ್ಷತ್ರಕಾಲ; ಇವುಗಳ ಮುಖೇನ ಇದನ್ನು ಗುರುತಿಸಬೇಕು. ಪ್ರತಿಯೊಬ್ಬ ಮನುಷ್ಯನ ಜೀವನ ಯಶಸ್ಸು ಅವನ ಮಾನಸಿಕ ಸ್ಥಿತಿಯನ್ನು ಅವಲಂಬಿಸಿರುತ್ತದೆ. ಶೇ ೫೦% ಭಾಗ ಆಗುಹೋಗುಗಳು ಮನಸ್ಸಿನ ಸ್ಥಿತಿಯ ಮೇಲೆ ಅವಲಂಬಿಸಿರುತ್ತದೆ. ಈ ಕಾಲದಲ್ಲಿ ಮಾನಸಿಕ ದೃಢತೆ ಸಿಗದೆ ತೊಳಲಾಡುವ ಯುವಪೀಳಿಗೆಗೆ ಮುಖ್ಯವಾಗಿ ಮಾನಸಿಕ ದೃಢತೆ (will power) ತುಂಬುವ ಕೆಲಸವನ್ನು ಪ್ರತೀ ವೈಧ್ಯನೂ, ಜ್ಯೋತಿಷಿಯೂ ಮಾಡಬೇಕಾದ ಅನಿವಾರ್ಯತೆ ಇದೆ.

        ಮಾನಸಿಕ ಹಿಂಜರಿತ (Inferiority) ಮತ್ತು ಮಾನಸಿಕ ಹಿರಿತನೋದ್ವೇಗ (Superiority) ಇವು ಸಹಜತೆಯನ್ನು ಮೀರಿ ಸಮಾಜವನ್ನು ನಾಶ ಮಾಡುತ್ತಿದೆ. ಹಿರಿತನೋದ್ವೇಗವು ತಾನು ಹೆಚ್ಚು ಎಂಬ ಅಹಂಕಾರಜನ್ಯ ಮಾನಸಿಕ ಸಮಸ್ಯೆ. ಇದರಿಂದಾಗಿ ಸ್ವಸಂಮೋಹಿನಿಯಂತಹಾ ದೈವಾವೇಶ, ಸಂನ್ಯಾಸ, ಸಾಧಕ, ಜ್ಞಾನಿ ಇತ್ಯಾದಿ ಸೋಗಿನ ಜೀವನಕ್ಕೆ ಎಳೆಯಬಹುದು. ಅಥವಾ ಕೊಲೆಗಡುಕತನ, ರೌಡಿ, ಠಕ್ಕತನ, ಪ್ರಾಕೃತಿಕ ನಾಶ, ಇತ್ಯಾದಿ ಕ್ರೂರ ಮನೋಭಾವನೆ ಬೆಳೆಯಬಹುದು. ಆದರೆ ಅವರು ಹೋದ ಮಾರ್ಗದಲ್ಲಿ ಸೋತಲ್ಲಿ ಅವರು ಹುಚ್ಚರಾಗಿ ಪರಿವರ್ತನೆಯಾಗಬಹುದು.

        ಅದನ್ನು ಅವರ ಜನ್ಮಜಾತಕ ರೀತ್ಯಾ, ನಕ್ಷತ್ರ ರೀತ್ಯಾ ಊಹಿಸಿ ಸೂಕ್ತ ಮಾರ್ಗದರ್ಶನ, ಔಷಧಿಯ ರೀತ್ಯಾ ಮಾನಸಿಕ ಉದ್ವೇಗ ಶಮನಗೊಳಿಸುವ ಧ್ಯಾನ, ಜಪ, ಯೋಗಗಳಿಂದ ಸಂಸ್ಕರಿಸಿದಲ್ಲಿ ಉತ್ತಮ ಪ್ರಜೆಯಾಗಲು ಸಾಧ್ಯ. ಅದನ್ನು ಪ್ರಾತ್ಯಕ್ಷಿಕೆಯಾಗಿ ನೋಡಬೇಕಿದಲ್ಲಿ ನಮ್ಮ ವೇದವಿಜ್ಞಾನ ಮಂದಿರ, ಚಿಕ್ಕಮಗಳೂರು ಅಥವಾ ನಂದಗೋಕುಲ ಗೋಶಾಲೆ, ಕಲ್ಲಡ್ಕಕ್ಕೆ ಬನ್ನಿ, ಪ್ರಾಯೋಗಿಕವಾಗಿ ನೋಡಬಹುದು.        ಪ್ರಾಕೃತಿಕ ಸಮಾನತೆ, ಸಹಜತೆ, ಸ್ವಾಭಾವಿಕತೆಯು ಒಬ್ಬ ಮನುಷ್ಯನ ಮನೋಭೂಮಿಕೆಯ ಮೇಲೆ ತುಂಬಾ ಒಳ್ಳೆಯ ಪರಿಣಾಮ ಮಾಡುತ್ತದೆ ಎಂಬುದಕ್ಕೆ ಇದು ಒಂದು ಉದಾಹರಣೆ. ಇನ್ನು inferiority ಅಥವಾ ಮಾನಸಿಕ ಹಿಂಜರಿತ; ಇದೂ ಕೂಡ ಸತತ ಸೋಲು, ಹೋಲಿಕೆ (comparison), ಅತೀ ಬಯಕೆ, ಅನಗತ್ಯ ಆದರ್ಶದ ಬೆಂಬತ್ತುವಿಕೆ, ಅಲ್ಲಿ ಆಗುವ ಅಪಜಯ, ಅತೃಪ್ತ ಜೀವನವಿಧಾನ, ಪರಿಸರ, ಬಂಧುವರ್ಗ, ಇವುಗಳಿಂದಾಗಿ ಉಂಟಾಗುವ ಸಮಸ್ಯೆ. ಇದೂ ಕೂಡ ಅತಿ ಗಂಭೀರವಾದ ಮಾನಸಿಕ ಜನ್ಯ ಖಾಯಿಲೆ - ಯುವಪೀಳಿಗೆಯನ್ನು ಸತತವಾಗಿ ಕಾಡುತ್ತಿದೆ. ಯುವಪೀಳಿಗೆಯ ಕರ್ತೃತ್ವಶಕ್ತಿ ನಾಶವಾಗುತ್ತಿದೆ. ಪ್ರಪಂಚವೆಲ್ಲಾ ತುಂಬಿರುವ ಮೋಸ, ವಂಚನೆ, ದುರಾಗ್ರಹ, ದಾರ್ಷ್ಟ್ಯ, ಲಂಚ, ಸೋಮಾರಿತನದ ಪ್ರಭಾವಕ್ಕೆ ಸಿಕ್ಕಿದ ಮನುಷ್ಯ ಈ ಸಮಸ್ಯೆಗೆ ಈಡಾಗುತ್ತಾನೆ.


        ಮುಖ್ಯವಾಗಿ ಈ ಭಾಗದಲ್ಲಿ ಮಾನಸಿಕ ಹಿಂಜರಿತವು ಹಿರಿತನದ ಅಪೇಕ್ಷೆಯನ್ನು ಬಿಂಬಿಸುತ್ತದೆ. ಹಾಗಾಗಿ ಅವರಿಗೆ ಆವೇಶ ಬರುವುದು ಇತ್ಯಾದಿ ಪ್ರತಿಷ್ಠಾ ಸಂಕೇತದ ನಾಟಕದತ್ತ ಆಕರ್ಷಿಸುತ್ತದೆ. ಅದು ಒಂದು ರೀತಿಯ ಸ್ವಸಂಮೋಹನ ಅಷ್ಟೆ. ಒಟ್ಟಾರೆ ಉದ್ದೇಶ ಎಂದರೆ ಅವಕಾಶವನ್ನು ಬಳಸಿಕೊಂಡು ತನ್ನತನ ಸ್ಥಾಪಿಸುವ ಹುನ್ನಾರವಿರುತ್ತದೆ. ಹೀಗೆ ಹಲವಾರು ರೀತಿಯ ನಾಟಕ ವೇಷಗಳೂ ದೇಶದಲ್ಲಿ ಕಾಣಬಹುದು. ಆದರೆ ಇಲ್ಲಿಯೂ ಸೋತವರು ಅತೀ ಹಿಂಜರಿತಕ್ಕೊಳಗಾಗಿ ಮೌನಿಯಾಗುವುದು, ವಸ್ತುನಾಶ, ತಿಳಿಯದಂತೆ ಪರಪೀಡೆ, ಹಿಂಸೆ ಇತ್ಯಾದಿಗಳಲ್ಲಿ ತೊಡಗಬಹುದು. ಮುಂದೆ ಆತ್ಮಹತ್ಯೆಯಂತಹಾ ನಿರ್ಧಾರಕ್ಕೆ ಬರಬಹುದು. 

ಇದು ವ್ಯಕ್ತಿಯ ಮಾನಸಿಕ ಸ್ಥಿತಿಯ ಉದ್ವೇಗವೆಂದು ಗುರುತಿಸುವುದಕ್ಕೆ ಜಾತಕ, ಜನ್ಮನಕ್ಷತ್ರ, ಅತೀ ಸುಲಭಸಾಧನ. ಪರಸ್ಪರ ಸಹಕಾರವಿದ್ದಲ್ಲಿ ನಿಖರವಾಗಿ ಗುರುತಿಸಿ ಸೂಕ್ತ ಮಾರ್ಪಾಡುಗಳಿಂದ ಈ ಖಾಯಿಲೆಯನ್ನು ಸರಿಪಡಿಸಿ ಉತ್ತಮ ಪ್ರಜೆಯಾಗಿ ರೂಪಿಸಬಹುದು. ಒಟ್ಟಾರೆ ಮಾನಸಿಕ ಜನ್ಯ ಸಮಸ್ಯೆಯನ್ನು ಜ್ಯೋತಿಷದ ಮುಖೇನ ಚೆನ್ನಾಗಿ ಗುರುತಿಸಲು ಸಾಧ್ಯ.ಸರ್ವೇಂದ್ರಿಯಂಗಳಿಗೆ ಒಡೆಯನಹಂತಾ ಮನಸ್ಸು,ಆ ಮನಸ್ಸಿಗೊಡೆಯನಹಂತಾ ಪವನ,ಆ ಮನ ಪವನಂಗಳು ಸಮಾನಂಗೊಂಡುಇಂದ್ರಿಯಂಗಳನು ಸೂಸಲೀಯದೆಸ್ಥಿರಚಿತ್ತನಾಗಿಹುದೆ ಪ್ರತ್ಯಾಹಾರಯೋಗ ನೋಡಾಅಪ್ರಮಾಣಕೂಡಲಸಂಗಮದೇವಾ.

ಅಕರ:- ಬ್ರಹ್ಮರ್ಷಿ ಕೆ. ಎಸ್. ನಿತ್ಯಾನಂದ ಸ್ವಾಮೀಜಿ, ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು ಇವರ ಋತ್ವಿಕ್ ವಾಣಿ ಮಾಸಪತ್ರಿಕೆ. 
ಆಧಾರ:- ಅತೀ ಪ್ರಾಚೀನವಾದ ಲಕ್ಷಾಂತರ ಶ್ಲೋಕವುಳ್ಳ ಬ್ರಾಹ್ಮಿ ಭಾಷೆಯಲ್ಲಿರುವ ಶಾರ್ಙ್ಘ್ಯಧರ ಪ್ರಣೀತ ಜ್ಯೋತಿರಾಯುರ್ವೇದ ಸಂಹಿತಾ. 

Sunday, 17 April 2016

ಸಿರಿಭೂವಲಯ ಸ್ಥೂಲ ಪರಿಚಯ : ಅಧ್ಯಾಯ ೨೦ (ಭಾಗ ೨)

  ಈ ಅಧ್ಯಾಯದಲ್ಲಿ ಹದಿನೆಂಟು ಶ್ರೇಣಿಗಳಲ್ಲಿ ಅಂತರ್ ಸಾಹಿತ್ಯವು ದೊರೆಯುವುದನ್ನು ಸೂಚಿಸಿದ್ದಾನೆ. ಕೃಷ್ಣನು ನೇಮಿ ತೀರ್ಥಂಕರನ ಶಿಷ್ಯನಾದ ಕಾರಣದಿಂದ 'ನೇಮಿಯತಮ್ಮ ಕಾಮ' ಎಂದು ಕೃಷ್ಣನನ್ನು ಸೂಚಿಸಿದ್ದಾನೆ. ಕೃಷ್ಣನು ಮಹಾಭಾರತಯುದ್ಧದಲ್ಲಿ ಹಿಂಸೆಗೆ ಸಾಕ್ಷಿಯಾದರೂ, ಆಗಮದೊಳಗೆಲ್ಲ ಜನರಿಗೆ ಮನದೊಳಗೇ ಅಹಿಂಸೆಯನ್ನು ಬೋಧಿಸಿ, ಶಮ; ದಮ; ಇಂದ್ರಿಯ ನಿಗ್ರಹ; ವಿಜಯಾದಿಗಳನ್ನು ನೀಡಿ, ದಾರಿತಪ್ಪಿದವರನ್ನು ಹಿಂಬಾಲಿಸಿ, ಅವರನ್ನು ಬದ್ಧಿಯ ವಶಕ್ಕೆ ನೀಡಿದ ಯೋಗೀಶ್ವರನೆಂದು ಸೂಚಿಸಿದ್ದಾನೆ. ತನ್ನ ಕಾವ್ಯದಿಂದ ಹೊಸಮಾನವರ ಸೃಷ್ಟಿಗೆ ಕಾರಣವಾಯಿತೆಂದು ಹೇಳಿರುವ ಕುಮುದೇಂದುವು ದಿವ್ಯ ಪದ್ಧತಿಗ್ರಂಥಗಳ ಸಾರ ಸರ್ವಸ್ವವನ್ನೂ ಮೂರರಿಂದ ಗುಣಿಸುತ್ತ ತಿಳಿದುಕೊಂಡು ನವಮಾಂಕ ಪದ್ಧತಿಯಲ್ಲಿ, ರಸಸಿದ್ಧಿಪ್ರಕ್ರಿಯೆ, ದಾಂಪತ್ಯ ವಿಜ್ಞಾನ, ಯಶಸ್ಸು, ಆಯಸ್ಸಿನ ವೃದ್ಧಿ ಇತ್ಯಾದಿ ಸಕಲ ವಿಚಾರಗಳನ್ನೂ ಸಂಯೋಗಗೊಳಿಸಿ, ಕಾವ್ಯರಚನೆ ಮಾಡಿರುವುದಾಗಿ ತಿಳಿಸಿದ್ದಾನೆ. ವೇದಮಂತ್ರಗಳಲ್ಲಿ ಇರುವುದು, ಮಧ್ಯಮ ಸಂಖ್ಯಾತ ಬ್ರಾಹ್ಮಣಗಳಲ್ಲಿರುವುದು, ಬ್ರಾಹ್ಮಿ-ಸೌಂದರಿಯರ ಅಂಕಾಕ್ಷರಗಳ ಧವಲಗಳಲ್ಲಿರುವುದು ಎಲ್ಲವೂ ಒಂದೇ ಎಂದು ಸ್ಪಷ್ಟಪಡಿಸಿದ್ದಾನೆ. ವ್ಯಾಸ ಪ್ರಣೀತವಾದ ಜಯಕಾವ್ಯದೊಂದಿಗೆ ಋಗ್ ಮಂತ್ರಗಳೂ ಈ ಕಾವ್ಯದಲ್ಲಿ ಅಡಕವಾಗಿವೆಯೆಂದು ಸೂಚಿಸಿದ್ದಾನೆ.

  ಸಿವಪಾರ್ವತೀಶನ ಗಣಿತದ ಶ್ರೀಕಂಠದನಿಯ ತಾಳೆಯೋಲೆಗಳ ಸುವಿಶಾಲ ಪತ್ರದಕ್ಷರದ ಭೂವಲಯಕೆ, ಸವಿಸ್ತರ ಕಾವ್ಯಕೆ ನನ್ನ ನಮಹವು ಎಂದು ವಂದಿಸಿರುವುದನ್ನು ಗಮನಿಸಿದಾಗ, ಕಾವ್ಯವು ಸುಶ್ರಾವ್ಯವಾಗಿ ಹಾಡುವುದಕ್ಕೆ ಒಗ್ಗುವಂತಿದೆ, ದೊಡ್ಡದಾದ ತಾಳೆಯೋಲೆಗಳ ಪತ್ರದಲ್ಲಿ ಅಕ್ಷರಗಳ ರೂಪದಲ್ಲಿ ಇದ್ದಿತೆಂಬ ಖಚಿತವಾದ ಮಾಹಿತಿಯು ದೊರೆಯುತ್ತದೆ. ಅಕ್ಷರಲಿಪಿಯ ಪ್ರತಿಯು ಲುಪ್ತವಾಗಿ; ಅಂಕಲಿಪಿಯ ಪ್ರತಿಯು ಮಾತ್ರವೇ ಉಳಿದುಬಂದಿದ್ದು ಈಗ ಅದೂ ವಿನಾಶದ ಹಾದಿ ಹಿಡಿದಿದೆ ಎಂದು ತಿಳಿಯಬೇಕಾಗಿದೆ. ಜ್ಞಾನದ ವಿಚಾರಲ್ಲಿ ನಾವು ಕನ್ನಡಿಗರು ಹೊಂದಿರುವ ನಿರ್ಲಕ್ಷ್ಯಕ್ಕೆ ಈ ಗ್ರಂಥದ ಅವಗಣನೆಯು ಒಂದು ಅತ್ಯುತ್ತಮ ಉದಾಹರಣೆಯಾಗಿದೆ.

  ಜೈನ ಸಂಪ್ರದಾಯದವರ ಪರಮಪವಿತ್ರವಾದ ಪಂಚಧವಲಗಳೂ ಈ ಸಿರಿಭೂವಲಯದಲ್ಲಿ ಅಡಕವಾಗಿವೆಯೆಂದು ಸೂಚಿಸಿದ್ದಾನೆ. ಣವಕಾರ ಮಂತ್ರವು ಜಗತ್ತಿನಲ್ಲಿ ಅನಾದಿಯಾದುದು. ಇವು ಬಹಳ ವರ್ಣನಾತ್ಮಕವಾಗಿವೆ. ನಾನೇ ಇಂದ್ರನೆಂಬ ಪದವಿಯಿತ್ತು ಮುಕ್ತಿಗೆ ಒಯ್ಯುತ್ತದೆ. ಮಹಿಳೆಯರು ಮಹನೀಯರಾಗುತ್ತಾರೆ ಎಂದು ಘೋಷಿಸಿದ್ದಾನೆ!  

ಮಣಿಮಯ ಬಿಂಬಗಳ್ ಗೆರಗುತ ನಾನಿಂದು ಗಣಿತವ 
ಸಿದ್ಧಾಂಕಕ್ರಮದಿ ಎಣಿಸುತಲೀಗ ಭೂವಲಯಸಿದ್ಧಾಂತದ 
ಗುಣಗಳ ಕಥೆಯ ಪೇಳುವೆನಾಲಿಪುದು ಎಂದು ಸೂಚಿಸಿದ್ದಾನೆ. 

: (ಕ್:) ಎಂಬ ಅಕ್ಷರವು ಗಣಿತಕ್ಕೆ ಬರುವುದೆಂದು ತಿಳಿಸಿದ್ದಾನೆ. (ಈಗಲೂ ಬೀಜಗಣಿತದಲ್ಲಿ ಸೂತ್ರಗಳನ್ನು ಬಿಡಿಸುವಲ್ಲಿ ಇದರ ಉಪಯೋಗವಾಗುತ್ತಿರುವುದನ್ನು ಗಮನಿಸಬಹುದು) ಇದು ೬೩ನೆ ಅಕ್ಷರ. 

ಭೂವಲಯಾಗ್ರದ ಸಿದ್ಧತ್ವವಹಿಸೆ ಸಮಸ್ತಭೂವಲಯಾ; 
ಹಸಿವು ನೀರಡಿಕೆ ಇತ್ಯಾದಿಗಳ ಹದಿನೆಂಟು ಕುಸಿಯುವ 
ದೋಷಗಳನ್ನು ಇಲ್ಲವಾಗಿಸುವ ಕಾವ್ಯ ಎಂದು ಸೂಚಿಸಿದ್ದಾನೆ. • ಕಳ್ವಪ್ಪು
 • ಯಲವಭೂರು
 • ನಂದಿಯರ ಆವರ್ತ
 • ಅಯ್ದಾ
 • ಮೈದಾಳ
 • ಕೈದಾಳ
 • ಪೆನುಕೊಂಡೆ
 • ಕುಚಂಗಿ
 • ಸೈಗೊಟ್ಟಸಿವನೂರು
 • ಮಲೆಯೂರು
 • ಕುಸುಮದಪುರ
 • ಕುಂದಾಪುರ
 • ಸಿದ್ಧಾಪುರ
 • ಗೇರುಸೊಪ್ಪೆ
 • ಸಾಗರ
 • ನೀಲಗಿರಿ 

ಎಂಬುದಾಗಿ ಹಲವಾರು ಸ್ಥಳನಾಮಗಳನ್ನು ಹೇಳಿ

 • ಕೊಂಗುಣಿ
 • ಸಾಳಗುರುಗಳಚರಿಗೆ
 • ದ್ರಮಿಳರ ಅರಸೊತ್ತಿಗೆಯ ಶಿವಜಿನವಿಷ್ಣುಕಂಚಿ
 • ತಿರುಪ್ಪಳಮಾಗು
 • ತಿರುಕ್ಕುರಳಕೊಂಡ್ರಮ್
 • ಪೊನ್ನೂರ್
 • ಮೂನೂಲ್‌ತಿರುಮಲೆ
 • ಆಳ್ವಾರರೂರು
 • ಮೀನಾಕ್ಷಿ ಕಾಮಾಕ್ಷಿಕೋಯಿಲ್ 


ಎಂಬದಾಗಿ ದಕ್ಷಿಣ ಭಾರತದ ಹಲವಾರು ಸ್ಥಳಗಳ ಹೆಸರು ಸೂಚಿಸಿದ್ದಾನೆ.

  ಸ್ವಾತ್ಮನ ಧರ್ಮವೇ ನಿಜವಾದ ಹಿತ ಎನ್ನುವ ಜನರು ಬ್ರಹ್ಮನ ಪೂಜೆಯನ್ನೇಕೆ ನಿಲ್ಲಿಸಿದರು? ಎಂಬ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾನೆ! ಅಮೋಘವರ್ಷಾಂಕನು ತನ್ನ ರಾಜ್ಯದಲ್ಲಿ ಜನರೆಲ್ಲರೂ ಅಣುವ್ರತವನ್ನಾಚರಿಸಿ, ಜೈನಧರ್ಮವನ್ನು ಪರಿಪಾಲಿಸಬೇಕೆಂಬ ಆಜ್ಞೆಮಾಡಿದ್ದನ್ನು ಸೂಚಿಸಿದ್ದಾನೆ. ಬೆಳೆದ ಧಾನ್ಯಗಳನ್ನು ರಾಜನಿಗೆ ತಂದೊಪ್ಪಿಸುವುದೇ ತೆರಿಗೆ ಹಾಗೂ ಅನ್ನದಾನವಾಗಿತ್ತೆಂದು ತಿಳಿಸಿದ್ದಾನೆ. ಗಿರಿ; ಗುಹೆ; ಗಿಡದಡಿಯಲ್ಲಿ ಸೇನವನಗಳಲ್ಲಿರುತ್ತಿದ್ದ ಸಾಧುಸಂತರನ್ನೆಲ್ಲ ಗೌರವ ಪೂರ್ವಕವಾಗಿ ಸತ್ಕರಿಸಿ ಅನ್ನದಾನನೀಡುತ್ತಿದ್ದ ಕ್ರಮವನ್ನು ಸೂಚಿಸಿದ್ದಾನೆ. ಋಷಿಮುನಿಗಳಿಗೆ, ಜೈನಸಾಧು ಸಂತರಿಗೆ ಸಿಗುತ್ತಿದ್ದ ಗೌರವವನ್ನು ಕುರಿತು ವಿವರಿಸುವುದರೊಂದಿಗೆ ೨೦ನೇ ಅಧ್ಯಾಯವು ಮುಕ್ತಾಯವಾಗುತ್ತದೆ.

*    *     *

                                                            ಪುನರ್ ಅಧ್ಯಯನ ಹಾಗೂ ಪ್ರಚಾರ
- ಹೇಮಂತ್ ಕುಮಾರ್ ಜಿ.

ಆಕರ:- ಸುಧಾರ್ಥಿ, ಹಾಸನ ಇವರ "ಜಗತ್ತಿನ ಹತ್ತನೇ ಅಚ್ಚರಿ" ಹಾಗೂ "ಸಿರಿಭೂವಲಯ ಸಾರ" ಪುಸ್ತಕಗಳು.

Monday, 11 April 2016

ಜ್ಯೋತಿರಾಯುರ್ವೇದ: ೩. ವಾತಾವರಣ ಜನ್ಯ, ೪. ಪರಿಸರ ಜನ್ಯ, ೫. ದೈಹಿಕ ಅಶಕ್ತತೆ


ಹಿಂದಿನ ಲೇಖನದಲ್ಲಿ ಆಹಾರ ಜನ್ಯ ವಿಚಾರ ಸ್ಥೂಲವಾಗಿ ತಿಳಿಸಲಾಗಿದೆ. ಅದಕ್ಕೆ ಪೂರಕವಾಗಿ ಕೆಳಕಂಡ ಎರಡು ವಿಸ್ತೃತ ಲೇಖನಗಳನ್ನೂ ನೀಡಲಾಗಿತ್ತು:ಮೂರನೇಯದಾದ ವಾತಾವರಣ ಜನ್ಯವನ್ನು ಜ್ಯೋತಿರಾಯುರ್ವೇದ ರೀತ್ಯಾ ಈ ರೀತಿ ಗುರುತಿಸಬಹುದು. ಮುಖ್ಯವಾಗಿ ಋತುಮಾನ ವ್ಯತ್ಯಾಸ, ಮಳೆ, ಚಳಿ, ಸೆಕೆ ಕಾಲ ವ್ಯತ್ಯಾಸ, ಅದಕ್ಕೆ ಹೊಂದಿಕೊಂಡಂತೆ ಪ್ರಾದೇಶಿಕವಾಗಿ ಪೂರ್ವೋದಾಹರಣೆಯಂತೆ ಬರತಕ್ಕ ಖಾಯಿಲೆಗಳು ಮತ್ತು ಅದರ ಮುನ್ನೆಚ್ಚರಿಕೆ ತೆಗೆದುಕೊಳ್ಳಬಹುದು.

ಉದಾ:- ಮಲೆನಾಡು ಪ್ರಾಂತ್ಯ ಕೊಪ್ಪ. ಮಳೆಗಾಲ ಆರಂಭವಾದಾಗ ಸಹಜವಾಗಿ ಮಲೇರಿಯಾ ಜ್ವರದ ಕಾಟ ಸಹಜ. ಆ ವರ್ಷ ಆಗತಕ್ಕ ಮಳೆಯನ್ನು ಹೊಂದಿ ವಾತಾವರಣ ಅಧ್ಯಯನದಿಂದ ಖಾಯಿಲೆಯ ತೀವ್ರತೆಯನ್ನು ತಿಳಿದು ವೈಧ್ಯನು ವ್ಯವಹರಿಸಬೇಕಾಗುತ್ತದೆ. ಆದರೆ ಅದೇ ಬಯಲು ಸೀಮೆಯ ಕಡೆ ಈ ಸಮಸ್ಯೆ ಇರುವುದಿಲ್ಲ. ಋತುಮಾನ, ಮಳೆ, ಬೆಳೆ, ಪ್ರದೇಶ, ವಯಸ್ಸು (ರೋಗಿಯದ್ದು), ಲಿಂಗ, ಆಹಾರ ಪದ್ಧತಿ, ಇವೆಲ್ಲದರ ಸ್ಪಷ್ಟ ಪರಿಚಯ ವೈಧ್ಯರಿಗೆ ಇರಬೇಕಾಗುತ್ತದೆ. ಆಗ ಮಾತ್ರ ರೋಗ ಗುರುತಿಸಲು ಸಾಧ್ಯ.

        ಸಾಗರ ಪ್ರಾಂತ್ಯದ ಒಂದು ಹಳ್ಳಿಯಲ್ಲಿ ಒಂದು ದಿನ ಸಂಜೆ ೭ ಗಂಟೆ ಹೊತ್ತಿಗೆ ಹಳ್ಳಿಯ ಕೆಲವರು ಒಮ್ಮೆಗೇ ಚಿಕಿತ್ಸಾಲಯಕ್ಕೆ ಬಂದರು. ಪ್ರತಿಯೊಬ್ಬಾರೂ ಗಂಭೀರ ಸ್ಥಿತಿಯಲ್ಲಿಯೇ ಇದ್ದರು. ಅವರನ್ನು ಕರೆತಂದವರು ಏನಾಗಿದೆಯೆಂದು ಗೊತ್ತಿಲ್ಲ ಡಾಕ್ಟರೇ! ೪ ಗಂಟೆ ಹೊತ್ತಿಗೆ ವಾಂತಿ ಮಾಡಿಕೊಂಡರು, ನಂತರ ಸುಸ್ತು, ಸಂಕಟ, ನೋವು, ಅಷ್ಟು ಮಾತ್ರ ಗೊತ್ತು. ಈಗ ಪ್ರಜ್ಞಾಹೀನರಾಗಿದ್ದಾರೆ ಎಂದರು. ಆಗ ಅಲ್ಲಿನ ಅನುಭವಿ ವೈಧ್ಯರಾದ  ಮಿತ್ರರು ಆಲೋಚಿಸಿದರು. ಹಿಂದಿನ ದಿನ ಗುಡುಗು ಸಿಡಿಲಿನ ಆರ್ಭಟದ ಮಳೆ ಬಂದಿತ್ತು. ಕೂಡಲೇ ಒಬ್ಬನನ್ನು ಕರೆದು ಕೇಳಿದರು, ನಿನ್ನೆ ಅಣಬೆ ತಂದಿದ್ದೀರಾ ಊರಿಗೆ? ಎಂದು. ಹೌದೆಂದ ಹಳ್ಳಿಗನ ಮಾತಿನ ಮೇರೆಗೆ ವಿಷಯುಕ್ತ ಅಣಬೆ ತಿಂದಿರಬಹುದೆಂದು ಕೂಡಲೇ ಚಿಕಿತ್ಸೆ ಆರಂಭಿಸಿ ಎಲ್ಲರನ್ನೂ ಉಳಿಸಿಕೊಟ್ಟರು. ಇದೇ ವೈಧ್ಯ ವೃತ್ತಿಯ ಸಾರ್ಥಕತೆ. ಅವರಿಗೆ ಋತುಮಾನಗಳ ಪರಿಚಯ ಇದ್ದುದರಿಂದಾಗಿ ಅವರು ತಿಂದ ಆಹಾರದ ದೋಷವೇನೆಂದು ಗುರುತಿಸಿದರು. ಕೂಡಲೆ ಚಿಕಿತ್ಸೆ ಸಿಕ್ಕಿತು. ಬೇರೆ ಯಾವುದೇ ವಿಧಾನವೂ ಇಷ್ಟು ಕ್ಷಿಪ್ರಗತಿಯಲ್ಲಿ  ಸಾಧ್ಯವಿಲ್ಲ. ಹಾಗಾಗಿ ಜ್ಯೋತಿಷ್ಯದ ಮುಖೇನ ಪ್ರಾಕೃತಿಕ ವಾತಾವರಣ ಜನ್ಯ ಸಮಸ್ಯೆಯ ಅರಿವಿದ್ದಲ್ಲಿ ವೈಧ್ಯನು ಸಮರ್ಥನಾಗಬಹುದು.

ಈಗ ಪರಿಸರ ಜನ್ಯವೆಂಬ ೪ನೇ ವಿಚಾರ ಬರೆಯುತ್ತೇನೆ. ಈಗಿನ ಅಲರ್ಜಿ ಎನ್ನುವ ಒಗ್ಗದಿರುವಿಕೆ ಎಂಬ ಕೆಲ ರೀತಿಯ ಸಮಸ್ಯೆಗಳು ಉತ್ಪನ್ನವಾಗುತ್ತವೆ. ಅದನ್ನೇ ಅಲರ್ಜಿ ಎಂದು ಗುರುತಿಸಿದರು. ಅದರ ಬಗ್ಗೆ ತಿಳಿಯಲು ಪರಿಸರದ ಪರಿಚಯ ವೈಧ್ಯರಿಗೆ ಅತೀ ಅಗತ್ಯ. ಇದು ಈಗ ಮಾನವ ಜನ್ಯ ಎಂದಾಗಿಬಿಟ್ಟಿದೆ. ಏಕೆಂದರೆ ಪರಿಸರವನ್ನು ಮಾನವನೇ ಹೆಚ್ಚು ಹಾಳುಗೈಯ್ಯುತ್ತಿರುವುದಲ್ಲವೇ? [ಓದಿರಿ:- ಭಾರತದ ನಗರಗಳಲ್ಲೆಲ್ಲ ಕಸ ಕಸ ಕಸ]

ಇನ್ನು ದೈಹಿಕ ಅಶಕ್ತತೆ ಎಂಬ ೫ನೇ ವಿಚಾರ ನೋಡೋಣ. ಪ್ರತಿಯೊಬ್ಬನಿಗೂ ಒಂದು ಪ್ರಮಾಣದ ದೈಹಿಕ ಶಕ್ತಿ, ಸಬಲತೆ, ಜ್ಞಾನಶಕ್ತಿ, ಅಂತರ್ಯಶಕ್ತಿ, ಧಾರಣಾಶಕ್ತಿ, ಇವುಗಳ ವ್ಯತ್ಯಾಸವಿರುತ್ತದೆ. ಅದನ್ನು ಆ ವ್ಯಕ್ತಿಯ ಜಾತಕದ ಮುಖೇನ ಪರಿಹರಿಸಿಕೊಳ್ಳಬಹುದು.


ಉದಾ:- ಒಬ್ಬನಿಗೆ ತಾನೊಬ್ಬ ಪುಟ್‍ಬಾಲ್ ಆಟಗಾರನಾಗಬೇಕೆಂಬ ಬಯಕೆ ಇರುತ್ತದೆ. ಆದರೆ ಅವನಿಗೆ ಅದಕ್ಕೆ ಸೂಕ್ತ ದೇಹದಾರ್ಢ್ಯತೆ ಇರುವುದಿಲ್ಲ. ಹಾಗಾಗಿ ಅವನ ಪ್ರಯತ್ನ ನಿಷ್ಫಲವಾಗಬಹುದು. ಆದರೆ ಅವನು ನಿಷ್ಪ್ರಯೋಜಕನೆಂದು ಅರ್ಥವಲ್ಲ. ಉಳಿಕೆ ಕಲಾವಿಧ್ಯೆಯಲ್ಲಿ ಅವನು ನಿಪುಣನಾಗಬಲ್ಲ. ಅವನಿಗೆ ಸೂಕ್ತವಾದ ಪರಿಸರ ಮತ್ತು ತಿಳುವಳಿಕೆ ಕೊಟ್ಟಲ್ಲಿ ಉತ್ತಮ ಕಲಾವಿದನಾಗಬಲ್ಲ. ಯಾರಿಗೆ ದೇಹದಾರ್ಢ್ಯತೆ ಇರುವುದಿಲ್ಲವೋ ಅವರ ಬೌದ್ಧಿಕತೆ ಮತ್ತು ಗ್ರಹಣಶಕ್ತಿ ಹೆಚ್ಚಿರುತ್ತದೆ. ಅದಕ್ಕೆ ಪೂರಕವಾಗಿ ಅವನನ್ನು ರೂಪಿಸಿದಲ್ಲಿ ಉತ್ತಮವಲ್ಲವೆ? ಹಾಗಾಗಿ ದೇಹ ವಿಜ್ಞಾನಾಧಾರಿತ ಮತ್ತು ಜ್ಯೋತಷ್ಯಾಧಾರಿತ ಸಲಹೆ ಸೂಕ್ತವಾಗಿ ಕೊಟ್ಟಲ್ಲಿ ಸಾರ್ಥಕವಲ್ಲವೇ?

ಅಕರ:- ಬ್ರಹ್ಮರ್ಷಿ ಕೆ. ಎಸ್. ನಿತ್ಯಾನಂದ ಸ್ವಾಮೀಜಿ, ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು ಇವರ ಋತ್ವಿಕ್ ವಾಣಿ ಮಾಸಪತ್ರಿಕೆ. 
ಆಧಾರ:- ಅತೀ ಪ್ರಾಚೀನವಾದ ಲಕ್ಷಾಂತರ ಶ್ಲೋಕವುಳ್ಳ ಬ್ರಾಹ್ಮಿ ಭಾಷೆಯಲ್ಲಿರುವ ಶಾರ್ಙ್ಘ್ಯಧರ ಪ್ರಣೀತ ಜ್ಯೋತಿರಾಯುರ್ವೇದ ಸಂಹಿತಾ.

Saturday, 9 April 2016

ನಮ್ಮ ಋಷೀ ಪರಂಪರೆ - ಶತಾನಂದ - ೪

ಅಂದು ರಾಜನಿಂದ ಹರಸಲ್ಪಟ್ಟು ಶುಭಾಶಿಷವನ್ನು ಪಡೆದು ಶತಾನಂದನು ಮಂದಾರ ಪರ್ವತ ಪ್ರದೇಶವನ್ನೇ ತನ್ನ ಕಾರ್ಯಕ್ಷೇತ್ರವಾಗಿ ಮಾಡಿಕೊಂಡು ತನ್ನಂತಯೇ ಸಮಾನಾಸಕ್ತಿ ಗುಣಕರ್ಮಯುಕ್ತರಾದವರನ್ನು ಕೂಡಿಕೊಂಡು ಅಲ್ಲಿ ವೇದಾಧ್ಯಯನ, ಪ್ರಯೋಗ ಪಾಠಶಾಲೆಯನ್ನು ಆರಂಭಿಸಿದ. ಹೊಸ ಹೊಸ ಸಂಶೋಧನೆಗಳನ್ನು ಮಾಡಲಾರಂಭಿಸಿದ. ಸುತ್ತಲಿನ ರಾಜ ಮಹಾರಾಜರೆಲ್ಲ ಆರ್ಥಿಕ, ಸಂಬಾರ, ವಸನಾದಿಗಳ ಸಹಾಯವನ್ನಿತ್ತು ಸೌಲಭ್ಯ ಕಲ್ಪಿಸಿಕೊಟ್ಟರು. ರಕ್ಷಣೆಯನ್ನೂ ಕೊಟ್ಟರು. ಕೆಲ ವರ್ಷಗಳಲ್ಲೇ ಶತಾನಂದರ ಗುಂಪು ಲೋಕೋತ್ತರ ಕೀರ್ತಿಶಾಲಿಗಳಾದರು. ಯಾಗಯಜ್ಞಗಳ ಮುಖೇನ ಹಲವು ಮುಖದ ಲೋಕಕಲ್ಯಾಣಕರವಾದ ಸಂಶೋಧನೆಗಳನ್ನು ಮಾಡಿ ಸಮಾಜಕ್ಕೆ ಧಾರೆಯೆರೆದರು. ಇವರ ಗುಂಪು ದೊಡ್ಡದಾಗುತ್ತಾ ಹೋಯ್ತು. ಅಷ್ಟೂ ಜನರು ತಮ್ಮ ಸ್ವಂತಿಕೆ ಇಲ್ಲದೇನೇ ಕೇವಲ ಲೋಕಹಿತಕ್ಕಾಗಿಯೇ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡು ನಿರ್ಲಿಪ್ತರಾಗಿ ಉಳಿದರು. ಈಗಲೂ ಅವರೆಲ್ಲಾ ತಮ್ಮನ್ನು ಸಂಪೂರ್ಣ ಲೋಕಹಿತಕ್ಕೆ ತೊಡಗಿಸಿಕೊಂಡು ದುಡಿಯುತ್ತಿದ್ದಾರೆ. ಅವರ ಕೆಲ ಸಾಧನೆಗಳನ್ನು ಲೋಕಕ್ಕೆ ಪರಿಚಯಿಸುವುದರ ಮುಖೇನ ಶತಾನಂದರ ಪರಿಚಯ ಮಾಡಿಕೊಡುತ್ತೇನೆ.

ಒಂದಾನೊಂದು ಕಾಲದಲ್ಲಿ ದೇಶವನ್ನಾಳುವ ಕ್ಷತ್ರಿಯರೆಲ್ಲಾ ನಿರ್ವೀರ್ಯರಾಗಿ ನಿರ್ಬಲರಾಗಿ ಹೋದರು. ಸಮಾಜ ರಕ್ಷಣೆ ಅವರಿಂದ ಸಾಧ್ಯವಾಗುತ್ತಿರಲಿಲ್ಲ. ಹೆಸರಿಗೆ ಕ್ಷತ್ರಿಯರೆನ್ನಿಸಿಕೊಂಡರೂ ಅವರಲ್ಲಿ ಶೌರ್ಯ, ವೀರ್ಯ, ಸತ್ವ, ಧರ್ಮಬುದ್ಧಿ, ತ್ಯಾಗ, ಸತ್ಯಪರಿಪಾಲನೆ, ದಯಾಪರತೆ, ಕ್ಷಮಾಶೀಲತೆ, ಔದಾರ್ಯಗಳೇನೂ ಇರಲಿಲ್ಲ. ಅವರಿಂದ ಪ್ರಜೆಗಳ ಪಾಲನೆ ಅಸಾಧ್ಯವಾಯ್ತು. ದೇಶದಲ್ಲಿ ದೊಂಬಿ, ಗಲಾಟೆ, ಹೊಡೆದಾಟ, ಕೊಲೆ, ಸುಲಿಗೆ, ವಂಚನೆ, ಮೋಸ, ವಿದ್ರೋಹ, ಅನೈತಿಕತೆ, ಕಳ್ಳತನ, ಸೋಮಾರಿತನ, ಕರ್ತವ್ಯಭ್ರಷ್ಟತೆ ದೇಶದಲ್ಲಿ ತಾಂಡವವಾಡಲಾರಂಭಿಸಿತು. ಹಾಗೇ ಬರ, ರೋಗ, ಉತ್ಪಾತ, ಅನಾವೃಷ್ಠಿ, ಅತಿವೃಷ್ಟಿ, ಉಲ್ಕಾಪಾತಾದಿಗಳು ವಿಜೃಂಭಿಸಿದವು. ಇದನ್ನರಿತ ಶತಾನಂದನು ಈ ಸಮಸ್ಯೆಗೆ ಪರಿಹಾರ ಹುಡುಕಲೋಸುಗ ಪ್ರಯತ್ನಕ್ಕಿಳಿದ. ಅದಕ್ಕಾಗಿಯೇ ಸಂಶೋಧಿಸಿದ ಒಂದು ವಿಶಿಷ್ಟ  ಸಂವರ್ಧನಾ ಪ್ರಕ್ರಿಯೆಯೇ ವಿಶ್ವಂಜಯ ವೆಂಬ (ವಿಶ್ವಜಿತ್) ಯಾಗ. ಈ ಯಾಗದಲ್ಲಿ ಅಧ್ವರ್ಯುವೇ ಯಜಮಾನ. ಸ್ವಯಂ ತ್ಯಾಗಿ ಆಗಿದ್ದರೇನೇ ವಿಶ್ವಜಿತ್ ಯಾಗ ಮಾಡಲರ್ಹನಾಗುತ್ತಾನೆ. ಅದರ ವಿಧಿ, ವಿಧಾನ, ಸೂತ್ರಗಳು ಮಂತ್ರಗಳ್ಯಾವುವು ಎಂಬುದನ್ನು ತಿಳಿಸುತ್ತಾ ಶತಾನಂದರು ಹೇಗೆ ಕ್ಷತ್ರಿಯರಲ್ಲಿ ಬಲವನ್ನು ತುಂಬಿ ಸದೃಢರನ್ನಾಗಿ ಮಾಡಿ ದೇಶದ ವಿಪ್ಲವಗಳನ್ನು ಹೇಗೆ ದಮನಿಸಿದರೆಂಬ ವಿಚಾರ ತಿಳಿಸುತ್ತೇನೆ. ಯಾಗ ವಿಧಿ ಮೊದಲಾಗಿ ಪರಿಚಯಿಸುತ್ತೇನೆ. ಅದರಲ್ಲಿ ನಾಲ್ಕು ಹಂತದಲ್ಲಿ ಈ ಪ್ರಕ್ರಿಯೆ ಕಾಣುತ್ತದೆ. ಅದರಲ್ಲಿ ಯಾವುದೂ ನ್ಯೂನತೆಯಾಗದಿದ್ದಲ್ಲಿ ಖಂಡಿತವಾಗಿಯೂ ಪುನಃ ಸಂಘಟನೆ ಸಾಧ್ಯ.

1) ಕ್ಷೇತ್ರೋತ್ಪತ್ತಿ      1ನೇ ಭಾಗ        – ಪ್ರಕೃತಿ ಆಧರಿಸಿ
2) ವೀರ್ಯೋತ್ಪತ್ತಿ   2ನೇ ಭಾಗ        – ಚೈತನ್ಯ ಆಧರಿಸಿ
3) ಪ್ರಜೋತ್ಪತ್ತಿ      3ನೇ ಭಾಗ        – ಜ್ಞಾನ ಪ್ರಸರಣ ಆಧರಿಸಿ
4) ಸಂಘಟನೆ         4ನೇ ಭಾಗ        – ಚತುರೋಪಾಯ ಆಧರಿಸಿ 


ಈ ನಾಲ್ಕು ರೀತಿಯಲ್ಲಿಮೊದಲು ಕ್ಷೇತ್ರೋತ್ಪತ್ತಿ ಎಂಬುದನ್ನು ಆರಂಭಿಸಿ ಮೂಲಪ್ರಕೃತಿಯಲ್ಲಿ ಉದ್ದೀಪನ ತುಂಬಿಸಿ ಪ್ರಕೃತಿಗಾನದಿಂದ ಶಕ್ತ್ಯುತ್ಪಾದನಾ ಕ್ರಿಯೆಗೆ ಇಳಿದ. ತನ್ಮೂಲಕ ಎಲ್ಲಾ ರಜೋಶಕ್ತಿಗಳನ್ನೂ ಒಗ್ಗೂಡಿಸಿ ಅದರಲ್ಲಿ ಮೂಲಚೈತನ್ಯ ಪ್ರಸರಣವಾಗುವಂತೆ ಮಾಡುವ ಪ್ರಯತ್ನ ಮಾಡಿದ. ಆಗ ರಜೋಶಕ್ತಿಯ ಮೂಲತತ್ವ ಲಕ್ಷ್ಮಿ ಪ್ರಾದುರ್ಭಾವವಾಯ್ತು. ಶತಾನಂದನ ಬೇಡಿಕೆಯಂತೆ ತನ್ನ ಪಾತ್ರಕ್ಕೆ ಬೇಕಾದ ಭೂಮಿಕೆಯನ್ನು ಸಿದ್ಧಪಡಿಸಿಕೊಂಡು ಬರುತ್ತೇನೆ ಎಂದು ಹೇಳಿ ಹಾಗೇ ನನ್ನಲ್ಲಿ ಚೈತನ್ಯರೂಪದ ಬೀಜೋತ್ಪತ್ತಿಗೆ ನೀನು ಸಿದ್ಧತೆ ಮಾಡಿಕೊ ಎಂದು ಹರಸಿ ಹೊರಟುಹೋಯ್ತು. ಆಗ ಎರಡನೆಯ ಹಂತದ ಚೈತನ್ಯ ಬೀಜೋತ್ಪಾನೆಗೆ ಬೇಕಾದ ಚೈತನ್ಯಾರಾಧನೆ ಆರಂಭಿಸಿದ. ಮೂಲಶಕ್ತಿಯಲ್ಲಿ ಬೀಜವಾಪನ  ಮಾಡಬೇಕಾದಲ್ಲಿ ಅದಕ್ಕೆ ಸರಿಸಮನಾದ ಶಕ್ತಿಗಾಗಿ ಚಿಂತಿಸಿ ಸತತ ಹನ್ನೆರಡು ವರುಷ ಕಾಲ ನಾರಾಯಣೀ ಯಾಗ ಪ್ರಕ್ರಿಯೆ ನಡೆಸಿದ. ಅಲ್ಲಿಯೂ ಯಜ್ಞಕುಂಡದಲ್ಲಿ ಚೈತನ್ಯ ಪ್ರಕಟವಾಗಿ “ಅಯ್ಯಾ ಶತಾನಂದನೇ, ನಿನ್ನ ಸಂಕಲ್ಪವೇ ನನ್ನ ಸಂಕಲ್ಪ. ನಿನಗೆ ಎಲ್ಲಾ ರೀತಿಯಿಂದಲೂ ಸಹಕರಿಸುತ್ತೇನೆ. ನೀನು ಹಿಂದೆ ಆರಾಧಿಸಿದ ಮೂಲಪ್ರಕೃತಿಯು ನನ್ನ ಕೂಡಿ ಒಂದು ಗಂಡು ಶಿಶುವಿಗೆ ಜನ್ಮ ನೀಡುತ್ತದೆ. ಅದನ್ನು ಬೆಳೆಸಿ ಸದೃಢಗೊಳಿಸಿ ಕ್ಷಾತ್ರರಕ್ಷಣೆ ಮಾಡು. ಲೋಕಕಲ್ಯಾಣ ಮಾಡು. ಅತಿಯಾದಲ್ಲಿ ನಾನೇ ಬಂದು ನಿಗ್ರಹಿಸುತ್ತೇನೆ” ಎಂದು ನಾರಾಯಣೀಯ ಚೈತನ್ಯವು ಅಂತರ್ಧಾನವಾಯ್ತು. 

ಆಗ ಮೂರನೆಯ ಹಂತದ ಕಾರ್ಯವಾಗಿ  ಪ್ರಜೋತ್ಪತ್ತಿಯೆಂಬ ಯಾಗವಾರಂಭಿಸಿದ. ದಕ್ಷ, ತ್ವಷ್ಟೃ, ಕರ್ದಮಾದಿ ನಲವತ್ತು ಜನ ಪ್ರಜಾಪತಿಗಳನ್ನು ಕುರಿತು ಏಕಕಾಲದಲ್ಲಿ ಸಂವರಣ ಮಂತ್ರ ಪುರಸ್ಸರವಾಗಿ ಧ್ಯಾನ, ಜಪ, ಹೋಮ, ತರ್ಪಣ, ನಮಸ್ಕಾರಾದಿ ಸ್ತೋತ್ರ ಸಹಿತವಾಗಿ ನಡೆಸಲಾಗಿ ಮೂಲಪ್ರಕೃತಿಯು ಕುದುರೆಯ ರೂಪದಲ್ಲಿ ಮಂದಾರ ಪರ್ವತದ ತಪ್ಪಲಿನಲ್ಲಿ ಪ್ರತ್ಯಕ್ಷವಾಯ್ತು. ಹಾಗೇ ನಾರಾಯಣೀಯ ಶಕ್ತಿಯೂ ಕುದುರೆಯ ರೂಪದಲ್ಲಿ ಆ ಕುದುರೆಯನ್ನು ಕೂಡಿ ಒಂದು ಕುದುರೆಯ ಮುಖದ ಮಾನವ ಶಿಶುವಿಗೆ ಜನ್ಮವಿತ್ತು ಅವೆರಡೂ ಅಂತರ್ಧಾನವಾದವು. ಶತಾನಂದನು ಆ ಹಯಗ್ರೀವನನ್ನು ಸಾಕಿ ಸಲಹಿ ಪ್ರೌಢನನ್ನಾಗಿ ಮಾಡಿದ. ಅವನಿಗೆ ಹೈಹಯನೆಂದು ನಾಮಕರಣ ಮಾಡಿದ. ಮುಂದೆ ಅವನ ವಂಶವೇ ಹೈಹಯ ವಂಶ. ಶತಾನಂದನು ಹೈಹಯನನ್ನು ಸಕಲ ವಿಧ್ಯಾ ಪ್ರವೀಣನೂ, ವೀರ, ಶೂರನೂ, ಧರ್ಮನಿಷ್ಠನೂ, ಸತ್ಯ ಪರಾಯಣನೂ, ತ್ಯಾಗಿಯೂ, ಉದಾರಿಯೂ ಆಗಿ ರೂಪಿಸಿದ. ಅವನನ್ನು ಮುಂದಿಟ್ಟುಕೊಂಡು ಸಂಘಟನೆಗಾಗಿ ಐಕ್ಯಮತ್ಯವೆಂಬ ಮಹಾಯಾಗವನ್ನು ಮಾಡಿ ಲೋಕದಲ್ಲೆಲ್ಲಾ ಶಾಂತಿ ನೆಲಸುವಂತೆ ಮಾಡಿದನು. ಈ ವಿಶ್ವಜಿತ್ ಯಾಗದಲ್ಲಿ ಯಶವನ್ನೂ ಕಂಡನು. 

ಹೀಗೆ ನಾನಾರೀತಿಯ ಯಾಗಗಳನ್ನು ಮಾಡಿದ್ದನು. ಲೋಕಕಲ್ಯಾಣಕಾರಕವಾದ ಕಾರ್ಯಗಳಲ್ಲಿ ಶತಾನಂದನ ವರ್ಗವು ಅತೀ ಹೆಚ್ಚಿನ ಕಾರ್ಯಕುಶಲತೆಯನ್ನು ಹೊಂದಿದೆ. ಶತಾನಂದರ ಕೃತ್ಯವಾದ ಹೈಹಯ ವಂಶವು 12 ಲಕ್ಷ ವರ್ಷದಷ್ಟು ಕಾಲ ಆಳಿ ಬದುಕಿ ನಂತರ ಕ್ಷತ್ರಿಯರೆಲ್ಲಾ ದುಷ್ಟರಾಗುತ್ತಾ ಬಂದರು. ಅವರಿಗೆ ನಾಯಕನಂತಿರುವ ಕಾರ್ತವೀರ್ಯಾರ್ಜುನ ನ ಕಾಲದಲ್ಲಿ ಮಹಾವಿಷ್ಣುವೇ ಸ್ವತಃ ಪರಶುರಾಮನಾಗಿ ಅವತರಿಸಿ ಕ್ರೂರಿಗಳಾದ ಹೈಹಯವಂಶದ ಕ್ಷತ್ರಿಯರನ್ನೆಲ್ಲಾ ಒಂದೂ ಬಿಡದೆ ಕೊಂದು ದುಷ್ಪ್ರವೃತ್ತಿಯನ್ನು ತಡೆದ ವಿಚಾರ ಇದರ ಮುಂದಿನ ಫಲಶ್ರುತಿ ನಿಮಗೆಲ್ಲಾ ತಿಳಿದಿದೆ. ಅದರರ್ಥ ಒಂದು ಸಮಸ್ಯೆಗೆ ಪರಿಹಾರವೆಂದು ರೂಪಿಸಿದ ಸಿದ್ಧಾಂತವೇ ಮುಂದೆ ಸಮಾಜಕಂಟಕ ವಾಗಬಹುದು. ಹಾಗಾಗಿ ಮಾನವನು ತನ್ನ ಜೀವನದಲ್ಲಿ ಕೃತಕತೆ ಇಲ್ಲದೇನೇ ಸ್ವಾಭಾವಿಕ, ಸ್ವತಂತ್ರ, ಸರಳ ಜೀವನ ಆರಿಸಿಕೊಳ್ಳಬೇಕು. ಆಗ ಮಾತ್ರ ಪ್ರಕೃತಿ ನಿತ್ಯನೂತನ ನಿರಂತರವಾಗಬಹುದೆಂದು ಹೇಳುತ್ತಾ ಮುಂದಿನ ಋಷಿಮುನಿಗಳ ಲೇಖನಕ್ಕೆ ಮುನ್ನಡಿ ಇಡುತ್ತೇನೆ.

ಇಂತು,

ಬ್ರಹ್ಮರ್ಷಿ ಕೆ. ಎಸ್. ನಿತ್ಯಾನಂದರು

ಕಣ್ವಾಶ್ರಮ, ತಲಪಾಡಿ.