Saturday, 25 February 2017

ಜ್ಯೋತಿರಾಯುರ್ವೇದ - ೭ : ವಯೋಜನ್ಯ ಸಮಸ್ಯೆಗಳುಹಿಂದಿನ ಲೇಖನದಲ್ಲಿ ಮಾನಸಿಕ ಜನ್ಯ ವಿಚಾರ ಸ್ಥೂಲವಾಗಿ ತಿಳಿಸಿದ್ದೇನೆ (http://veda-vijnana.blogspot.in/2016/04/blog-post_21.html). ಈಗ ವಯೋಜನ್ಯವೆಂಬ ೭ನೆಯ ವಿಚಾರ ಬರೆಯುತ್ತೇನೆ.

        ಪ್ರತೀ ಒಂದು ಜೀವಿಗೂ ಶೈಶವ್ಯ, ಬಾಲ್ಯ, ಕೌಮಾರ್ಯ, ಯೌವನ ಮತ್ತು ವೃದ್ಧಾಪ್ಯ ಎಂಬ ಬಗೆಯ ಅವಸ್ಥೆ ಇರುತ್ತದೆ.

. ಶೈಶವ್ಯ:- ಇಲ್ಲಿ ಹುಟ್ಟಿದ ಶಿಶು ಅದಕ್ಕೆ ಇಲ್ಲಿನ ವಾತಾವರಣ, ಬೆಳಕು, ತಾಯಿಯ ಆಹಾರಪದ್ಧತಿ, ಮನೆಮಂದಿಯ ಜೀವನ ವಿಧಾನ, ಜನಿಸಿದ ಋತುಮಾನ ಮತ್ತು ಕಾಲ. ಇವೆಲ್ಲಾ ಕೂಡಾ ಮಗುವಿನ ಮೇಲೆ ಪರಿಣಾಮ ಬೀರಲು ಸಾಧ್ಯವಿರುವುದರಿಂದ ಹುಟ್ಟಿದ ಮಗು ಅದಕ್ಕೆ ಹೊಂದುವಲ್ಲಿಯವರೆಗೆ ನಾನಾ ರೀತಿಯ ಸಮಸ್ಯೆಗಳು ಉದ್ಭವಿಸಬಹುದು. ಅದು ಶೈಶವಾವಸ್ಥೆಗೆ ಸಂಬಂಧ ಪಡುತ್ತದೆಯೇ ವಿನಃ ಬಾಲ್ಯಾವಸ್ಥೆಯ ಮಗುವಿಗಲ್ಲ. ವಯೋಮಾನ ರೀತ್ಯಾ ಮೇಲ್ಕಂಡ ಕಾರಣದಿಂದಾಗಿ ಹಲವಾರು ರೀತಿಯ ತೊಂದರೆಗಳು ಉಂಟಾಗಬಹುದು. ಆಗ ಸೂಕ್ತ ಚಿಕಿತ್ಸಾ ಸಲಹೆ ಪಡೆದು ಮುನ್ನೆಚ್ಚರಿಕೆ ಪಡೆಯುವುದರಿಂದ ವಯೋಜನ್ಯವಾದ ಶೈಶವ ಸಮಸ್ಯೆ ನಿವಾರಿಸಬಹುದು. ಇಲ್ಲವಾದಲ್ಲಿ ಅದರೊಂದಿಗೆ ಹೋರಾಡಿ ಜರ್ಜರಿತವಾದ ಶಿಶುವು ಬಾಲ್ಯಾವಸ್ಥೆಯಲ್ಲಿ ಬೇರೆ ರೀತಿಯ ಖಾಯಿಲೆಗೆ ಈಡಾಗಬಹುದು. ಹಾಗಾಗಿ ಒಂದು ಮನೆಯಲ್ಲಿ ಅಥವಾ ಪರಿಸರದಲ್ಲಿ ಒಂದು ಶಿಶು ಜನನವಾಗಿದೆ ಎಂದಾಗ ನಾವು ನಮ್ಮ ಜೀವನ ವಿಧಾನ, ಆಹಾರ ವಿಹಾರ, ಅವಶ್ಯಕತೆಯನ್ನು ಮಗುವಿನ ಆರೋಗ್ಯ ದೃಷ್ಟಿಯಿಂದ ಆಲೋಚಿಸಿ ಪರಿವರ್ತಿಸಬೇಕು. ಇದು ಕರ್ತವ್ಯವೂ ಹೌದು.

. ಬಾಲ್ಯ:- ವಯಸ್ಸಿಗೆ ಸಿಕ್ಕಿದ್ದನ್ನು ಕಚ್ಚುವ, ನೆಕ್ಕುವ, ಅತೀವ ಕುತೂಹಲಜನ್ಯ ವಿಕೋಪಗಳು ಅದರಿಂದಾಗಿ ಶೀತ, ಉಷ್ಣ, ಜ್ವರ, ಭೇದಿ ಇತ್ಯಾದಿಗಳು ಸಾಮಾನ್ಯ. ಹಾಗಾಗಿ ಇತರೆ ಖಾಯಿಲೆಯಂತೆ ಅದನ್ನು ಗುರುತಿಸಬಾರದು. ಅದಕ್ಕೆ ಬೇಕಾಗಿರುವುದು ಮುಂಜಾಗ್ರತೆ ಬಾಲ್ಯಾವಸ್ಥೆಯಲ್ಲಿ ಎಚ್ಚರಿಕೆ ವಹಿಸಿದಲ್ಲಿ ಮುಂದಿನ ಜೀವಿತಕಾಲ ಭದ್ರವೂ ಆರೋಗ್ಯದಾಯಕವೂ ಆಗಿರುತ್ತೆ. ಹಾಗಾಗಿ ವಯಸ್ಸಿನ ಪರಿಣಾಮ ಅರ್ಥ ಮಾಡಿಕೊಂಡ ಪೋಷಕರು ತಮ್ಮ ಆಹಾರ ಪದ್ಧತಿಯಲ್ಲಿಯೇ ಮಾರ್ಪಾಡು ಮಾಡಿಕೊಂಡು ಎಚ್ಚರಿಕೆ ವಹಿಸಬೇಕು. ಅದರಿಂದಾಗಿ ಉಂಟಾಗುವ ದೃಢತೆ, ರೋಗನಿರೋಧಕ ಶಕ್ತಿ, ಶಾಂತಚಿತ್ತತೆ, ತೀಕ್ಷ್ಣಮತಿತ್ವ ಇವು ಮಗುವಿನಲ್ಲಿ ಸೃಷ್ಟಿಯಾಗುತ್ತದೆ. ಹಾಗಾಗಿ ಬಾಲ್ಯವೆಂಬುದು ಒಂದು ಜೀವಿಯ ಜೀವನ ವಿಧಾನದ ಅಡಿಗಲ್ಲು.

. ಕೌಮಾರ್ಯ:- ಇಲ್ಲಿ ಚಂಚಲ ಮನಸ್ಸಿನ ತೀವ್ರತೆ ಗುರುತಿಸಬಹುದು. ಅದರಿಂದಾಗಿ ಆಟೋಟಗಳಲ್ಲಿ ಉಂಟಾಗುವ ತೀವ್ರ ಆಸಕ್ತಿಯೇ ಕೆಲ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. ತೀವ್ರ ಆಸಕ್ತಿಯನ್ನು ಸೂಕ್ತ ಮಾಗದಲ್ಲಿ ತಿರುಗುವಂತೆ ಮಾಡುವುದರಿಂದ ಒಂದು ಉತ್ತಮ ಚೇತನ ರೂಪುಗೊಳ್ಳಬಹುದು. ಅದನ್ನು ಅದರಂತೆ ಬಿಟ್ಟಲ್ಲಿ ತೀವ್ರ ಅಸ್ವಸ್ಥತೆ ಉಂಟಾಗಬಹುದು. ಅನಾರೋಗ್ಯಕರ ಪರಿಸರ ನಿರ್ಮಾಣವಾಗಬಹುದು. ಹಾಗಾಗಿ ಇಲ್ಲಿ ಉತ್ತಮ ತಿಳುವಳಿಕೆಯನ್ನು ಹೊಂದಿದವರ ಸಲಹೆ ಮಾರ್ಗದರ್ಶನ ಕೂಡ ವಯಸ್ಸಿಗೆ ಬೇಕಾಗುತ್ತದೆ. ಇಲ್ಲಿಯವರೆಗೂ ಜೀವಿಯು ಜೀವಿ ಅಥವಾ ಮನುಷ್ಯ ಎಂದು ಕರೆಸಿಕೊಳ್ಳುತ್ತಾನೆ. ಲಿಂಗ ಭೇದವಿರುವುದಿಲ್ಲ. ಕೌಮಾರ್ಯದ ಹಂತದ ಕೊನೆಯೇ ಲಿಂಗಭೇದ ನಿರ್ಣಯ. ಅಂದರೆ ತಾನು ಗಂಡು, ತಾನು ಹೆಣ್ಣು ಎಂಬ ಒಂದು ಭಾವನೆ ಹುಟ್ಟುವ ಕಾಲ. ಅದೇ ದೈಹಿಕ ಪರಿವರ್ತನಾ ಕಾಲ. ಅಲ್ಲಿಂದ ಮುಂದೆ ವಯೋಜನ್ಯ ಸಮಸ್ಯೆಗಳು ವಿಧದಲ್ಲಿ ಪ್ರವಹಿಸುತ್ತವೆ. ಅಲ್ಲಿಂದ ಮುಂದೆ ಇದನ್ನು ಪ್ರೌಢ, ಹರೆಯ ಅಥವಾ ಯೌವನವೆಂದು ಹೆಸರಿಸಬಹುದು.

. ಯೌವನ:- ಇಲ್ಲಿ ವಯೋಜನ್ಯ ವಿಚಾರಗಳು ಮಾರ್ಗದಲ್ಲಿ ಪ್ರವಹಿಸುತ್ತವೆ. ಸಂಬಂಧಿ ಖಾಯಿಲೆಗಳೂ ಕೂಡ ವಿಧದಲ್ಲಿ ಗುರುತಿಸಲು ಸಾಧ್ಯ. ಗಂಡಿಗೆ ಹೆಚ್ಚಾಗಿ ಸಂದರ್ಭದಲ್ಲಿ ಉಷ್ಣ, ಪಿತ್ತ ಸಂಬಂಧಿ ಖಾಯಿಲೆಗಳೂ ಕೂಡ ಹೆಚ್ಚಾಗಿ ಇರುತ್ತದೆ. ಹೆಣ್ಣಿಗೆ ಶೀತ ವಾತ ಸಂಬಂಧಿ ಖಾಯಿಲೆಗಳು ಜಾಸ್ತಿ ಇರುತ್ತವೆ. ಅಲ್ಲದೆ ಲಿಂಗಸಹಜವಾದ ಕೆಲ ಇತರೆ ಸಮಸ್ಯೆಗಳೂ ಪರಿಸರ ಕಾರಣದಿಂದಾಗಿ ಉತ್ಪನ್ನವಾಗುತ್ತವೆ. ಇಲ್ಲಿ ಯೌವನದ ಅವಿವೇಕತನವೇ ಹೆಚ್ಚಾಗಿ ಕಾರಣವಾಗಿರುತ್ತದೆ. ಸಂದರ್ಭದಲ್ಲಿ ವಿವೇಕಿಯಾದ ಜೀವಿಯು ಯಾವುದೇ ಸಮಸ್ಯೆಯನ್ನೂ ಸಮರ್ಥವಾಗಿ ನಿಭಾಯಿಸಬಲ್ಲನು. ಹೆಣ್ಣು ತನ್ನ ವಯೋ ಸಹಜವಾದ ಆಕರ್ಷಣೆ, ವಾತ ಕಾರಣದಿಂದಾಗಿ ಉತ್ಪನ್ನವಾಗುವ ಆಕಾಂಕ್ಷೆ ಆಕರ್ಷಣೆಗೆ ಸಿಕ್ಕಿ ಅದನ್ನು ವ್ಯಕ್ತಪಡಿಸಲಾಗದ ಸಂಕೋಚ ಪ್ರವೃತ್ತಿಯಿಂದ ನಾನಾ ಸಮಸ್ಯೆಗೆ ಸಿಗುತ್ತಾಳೆ. ಹೆಚ್ಚಾಗಿ ಶೀತ ವಾತದಿಂದಾಗಿ ಉತ್ಪನ್ನವಾಗುವ ಹಾರ್ಮೋನ್ ಘಟಕ ಪ್ರವರ್ತನೆ, ಸ್ತನ, ಗರ್ಭಕೋಶ ಬೆಳವಣಿಗೆ ಮಾಸಿಕ ಋತುಚಕ್ರ ಇವೆಲ್ಲಾ ಕಾಲಘಟ್ಟದಲ್ಲಿ ಆಗುವ ಸಹಜ ಪರಿವರ್ತನೆಯಾದರೂ ತನಗೇನೋ ಆಗುತ್ತಿದೆ ಎಂಬ ಸಂಕೋಚಮಿಶ್ರಿತ ಭಯದಿಂದಾಗಿ ಸಮಸ್ಯೆಯನ್ನು ಹುಟ್ಟಿಸಿಕೊಳ್ಳುತ್ತಾಳೆ. ಹಾಗಾಗಿ ಕೀಳರಿಮೆ ಬೆಳಿಸಿಕೊಳ್ಳುತ್ತಾ ಅಬಲೆ ಪಟ್ಟಕ್ಕೆ ಬರುತ್ತಾಳೆ. ಗಂಡು ಅದನ್ನೇ ಟ್ರಂಪ್ ಆಗಿ ಬಳಸಿ ತಾನು ಶ್ರೇಷ್ಠ ಎಂಬ ಭಾವನೆ ಉದ್ವೇಗಕ್ಕೆ ಸಿಕ್ಕಿ ಬೀಗುತ್ತಾ ತನ್ನದಲ್ಲದ ಶ್ರೇಷ್ಠತ್ವದ ಭಾವನಾಲೋಕದಲ್ಲಿ ಮೋಸಹೋಗಿ ಭ್ರಮಾನಿರಸನ ಹೊಂದುತ್ತಾನೆ.

. ಪ್ರೌಢ:- ಆಗ ಅಂದಾಜು ೧೮ ರಿಂದ ೨೮ನೇ ವಯಸ್ಸಿನ ಕಾಲದಲ್ಲಿ ಉತ್ಪನ್ನವಾಗುವ ವಯೋಜನ್ಯ ಮಾನಸಿಕ ಮತ್ತು ಉಷ್ಣ ಪಿತ್ತ ಸಂಬಂಧಿ ಖಾಯಿಲೆಗಳಿಂದ ನರಳುತ್ತಾನೆ. ಅದು ಗ್ಯಸ್ಟ್ರಿಕ್ ಇರಬಹುದು, ಜಾಂಡೀಸ್ ಇರಬಹುದು, ಭಾವನೋದ್ವೇಗದ ಹತಾಶೆಯಿಂದ ಹುಟ್ಟುವ ಮಾರಿ ಜ್ವರಗಳಿರಬಹುದು. ಇದಕ್ಕೆಲ್ಲಾ ಕಾರಣ ವಯಸ್ಸು. ಹೆಣ್ಣು ಶೀತ ವಾತ ಪ್ರಕೃತಿಯಿಂದ ತಾನು ಕಡಿಮೆ ಎಂಬ ಭಾವನೆ ಹುಟ್ಟಿಸಿಕೊಂಡು ತಾನು ಚೆನ್ನಾಗಿ ಕಾಣಬೇಕು, ಶ್ರೇಷ್ಠಳಾಗಬೇಕು, ಆಕರ್ಷಕಳಾಗಬೇಕು ಎಂಬ ಆಕಾಂಕ್ಷೆಗೆ ಸಿಕ್ಕಿ ನಾನಾ ಸಮಸ್ಯೆಗಳನ್ನು ಹೊಂದುತ್ತಾಳೆ. ಒಂದು ಭಾಗದಲ್ಲಿ ದೈಹಿಕ ಬೆಳವಣಿಗೆಯ ವ್ಯತ್ಯಾಸ, ಅದಕ್ಕಾಗಿ ಉಂಟಾಗುವ ಅಶಕ್ತತೆ, ಅಜ್ಞಾನದಿಂದಾಗಿ ಸೂಕ್ತವಲ್ಲದ ಚಿಕಿತ್ಸಾ ವಿಧಾನ ಬಳಸುವುದು. ಅನಗತ್ಯವಾದ ಸೌಂದರ್ಯವರ್ಧಕವೆಂದು ರಾಸಾಯನಿಕ ಬಳಕೆ ಇವುಗಳಿಂದಾಗಿ ಆರೋಗ್ಯ ಕೆಡಬಹುದು. ಗಂಡು ತನ್ನ ಶ್ರೇಷ್ಠತೆಯ ಸಂಕೇತವೆಂದು ಭಾವಿಸುವ ಕುಡಿತ, ತಂಬಾಕು ಸೇವನೆ, ಜೂಜು ಇತ್ಯಾದಿಗಳಿಗೆ ದಾಸರಾಗಬಹುದು. ಅಲ್ಲದೇ ಪ್ರದರ್ಶನ ದೃಷ್ಟಿಯಿಂದ ಉತ್ಪನ್ನವಾಗುವ ಜಗಳ, ಹೊಡೆದಾಟಗಳೂ ಕೂಡಾ ಮಾನಸಿಕ ಸ್ಥಿತಿಯ ಪ್ರವರ್ತನೆಯಾಗಿರುತ್ತದೆ. ಇವೆಲ್ಲಾ ವಿವೇಚನಾರಹಿತ ಯುವಜನಾಂಗದ ವರ್ತನೆ ಮುಂದೆ ಜವಾಬ್ದಾರಿಯುತ ಪ್ರಜೆಯಾದ ಮೇಲೆ ಶೇಕಡಾ ೯೫ ಭಾಗ ಜನರು ತಮ್ಮ ಯೌವನದ ಹುಚ್ಚಾಟಕ್ಕೆ ಪಶ್ಚಾತ್ತಾಪ ಪಡುವವರೇ ಜಾಸ್ತಿ. ಆದರೆ ಕೈ ಮೀರಿರುತ್ತದೆ. ಏನೂ ಮಾಡುವಂತಿಲ್ಲ, ಅನುಭವಿಸುವಂತಿಲ್ಲ. ಚಿಂತೆಯಿಂದಲೇ ಬರುತ್ತದೆ ವೃದ್ಧಾಪ್ಯ.
 

  ಇಲ್ಲಿಯವರೆಗೆ ಮಾನವನ ಜೀವನ ವಿಧಾನ, ಅದರಿಂದಾಗತಕ್ಕ ಅನಾರೋಗ್ಯ, ಅದಕ್ಕೆ ಕಾರಣ ಹೇಳುತ್ತಾ ಬಂದು ಈಗ ಮರಣಪ್ರಶ್ನವೆಂಬ ಕೊನೆಯ ಅನಾರೋಗ್ಯ ಕಾರಣ ವಿವರಿಸಲಾಗುತ್ತದೆ. ಅಲ್ಲಿ ಪ್ರತಿಯೊಬ್ಬ ಮನುಷ್ಯನೂ ಸಾಧಿಸಬೇಕಾದ ಸುಖಮರಣವೆಂಬ ಸೂತ್ರ ಮಂಡಿಸಲಾಗಿದೆ. ಆ ಸುಖಮರಣ ಹೇಗೆ ಎಂಬುದನ್ನು ತಿಳಿಸುತ್ತೇನೆ.

        ಮೊದಲನೆಯದಾಗಿ, ಮಾನವ ಹುಟ್ಟುವಾಗಲೇ ತನಗೆ ಸಾವಿದೆ ಎನ್ನುವ ಸತ್ಯ ತಿಳಿದಿದೆ ತಾನೆ? ಹಾಗಿದ್ದಾಗ ಸಾವು ನಿಶ್ಚಿತವೆಂದ ಮೇಲೆ ಸಾಯುವಲ್ಲಿಯವರೆಗೆ ಮಾತ್ರ ನಮ್ಮ ಸಾಧನೆ, ಯಶಸ್ಸಿಗೆ ಪೂರಕವೆಂಬ ಸತ್ಯ ಅರಿತಿರಬೇಕು.

        ಎರಡನೆಯದಾಗಿ, ಸಾವು ಭಯಾನಕವೆಂಬ ಕಲ್ಪನೆ ಹುಟ್ಟುವುದು ಬಾಂಧವ್ಯದ ಪ್ರಬಲ ಬೆಸುಗೆಯಿಂದ ಮಾತ್ರ. ಸಂಬಂಧ ಬೆಸುಗೆಯು ಕರ್ತವ್ಯಪ್ರಜ್ಞೆಯೊಂದಿಗೆ ಹೊಂದಿಸಿಕೊಂಡಲ್ಲಿ ನಿಮ್ಮ ಮಾನವ ಸಂಬಂಧೀ ಬಾಂಧವ್ಯ ಮತ್ತು ವಸ್ತು ಸಂಬಂಧೀ ಬಾಂಧವ್ಯ ಸುಧಾರಿಸಿಕೊಳ್ಳಲು ಸಾಧ್ಯ. ಆಗ ಸಾವು ಭಯಾನಕವೆನಿಸುವುದಿಲ್ಲ.

        ಮೂರನೆಯದಾಗಿ, ಸಾವು ತ್ರಾಸದಾಯಕವೆಂಬ ಕಲ್ಪನೆ, ನೋವು, ದುಃಖ, ರೋಗಬಾಧೆ, ಕರ್ತವ್ಯ ಲೋಪದ ಪ್ರಜ್ಞೆ, ಪಾಪಪ್ರಜ್ಞೆ ಇವೆಲ್ಲಾ ಕಾಡುವುದು ಅಲ್ಲಿ ನ್ಯೂನತೆ ಇದ್ದಾಗ ಮಾತ್ರ. ಆದ್ದರಿಂದ ಪರಿಶುದ್ಧ ಜೀವನ ನಡೆಸಿ. ಆಗ ಈ ಪಾಪಪ್ರಜ್ಞೆ ನಿಮ್ಮನ್ನು ಕಾಡಲಾರವು, ತ್ರಾಸದಾಯಕ ಮರಣ ಪ್ರಾಪ್ತವಾಗಲಾರದು.

        ನಾಲ್ಕನೆಯದಾಗಿ, ಹಂಚಿ ತಿನ್ನುವ ಪ್ರವೃತ್ತಿ ನಿಮ್ಮದಾಗಿದ್ದರೆ, ನಿಮ್ಮ ಎಲ್ಲಾ ಸಂದರ್ಭಗಳಲ್ಲೂ ಈ ಹಂಚುವಿಕೆಯ ಕಾರ್ಯ ನಿರ್ವಹಿಸುತ್ತದೆ. ಹಾಗಾಗಿ ನಮ್ಮ ನಂತರ ಮುಂದೇನು ಎನ್ನುವ ಪ್ರಶ್ನೆ ಉದ್ಭವಿಸುವುದಿಲ್ಲ. ಹಾಗಾಗಿ ಸರ್ವಜ್ಞ ವಚನದ "ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ, ಕೊಟ್ಟು ನಾ ಕೆಟ್ಟನೆಂದೆನ ಬೇಡ ಸರ್ವಜ್ಞ" ಎಂಬಂತೆ ಎಲ್ಲವನ್ನೂ ಹಂಚಿಕೊಳ್ಳುವ ಪ್ರವೃತ್ತಿ ಬೆಳೆಸಿಕೊಳ್ಳಿ. ಆಗ ಅನಾಥ ಪ್ರಜ್ಞೆ ಹುಟ್ಟುವುದಿಲ್ಲ.

        ಈ ನಾಲ್ಕು ವಿಧಾನಗಳನ್ನು ತುಲನೆ ಮಾಡಿದಾಗ ನಮಗೆ ಮರಣವೆಂದರೇನು ಎಂದು ಅರ್ಥವಾಗುತ್ತದೆ. ದೇಹ ಆತ್ಮಗಳ ಸಂಬಂಧ ಕಡಿದುಕೊಳ್ಳುವುದು ಮರಣವಲ್ಲ. ದೇಹ ನಾಶವಾದರೂ ಈ ಭುವಿಯ ಬಂಧದಿಂದ ಬಿಡಿಸಿಕೊಂಡು ಸ್ವತಂತ್ರತೆಯನ್ನು ಪಡೆಯುವುದು. ಅಲ್ಲಿ ಕಲಂಕವಿರದೇ ಇರುವಂತೆ ಬದುಕಿರುವುದು. ಕಲಂಕಿತನಾಗಿದ್ದು ದೇಹದೊಂದಿಗೇ ಇದ್ದರೂ ಕೂಡ ಅದು ಮರಣವೆಂದು ಕರೆಯಲ್ಪಡುತ್ತದೆ. ಹಾಗಾಗಿ ತನ್ನ ಜೀವನದಲ್ಲಿ ಶುದ್ಧತೆ, ಬದ್ಧತೆ, ತ್ಯಾಗ, ಸಹನೆ, ಧರ್ಮನಿಷ್ಠೆ, ದೇಶಭಕ್ತಿ, ಮಾತೃಭಕ್ತಿ, ಪಿತೃಭಕ್ತಿ, ಗುರುಭಕ್ತಿ, ಸಮಾಜಪ್ರೇಮ, ಪ್ರಕೃತಿಪ್ರೇಮ, ಕರ್ತವ್ಯ, ಸತ್ಯ, ನ್ಯಾಯ ಇವನ್ನು ರೂಢಿಸಿಕೊಂಡಲ್ಲಿ "ಮಾನವನಿಗೆ ಮರಣವೇ ಬಾರದು". ದೇಹ ಬಿಡುವುದು ಅನಿವಾರ್ಯ. ಆದರೆ ಆತನಿಗೆ ಸಾವಿಲ್ಲ ಅರ್ಥಾತ್ "ಮರಣವಿಲ್ಲ".

        ಆದ್ದರಿಂದ ಮನುಷ್ಯ ಮಿತಾಹಾರಿಯಾಗಿ ಸಮಾಜಕ್ಕೆ ತನ್ನ ಋಣವನ್ನು ತೀರಿಸುತ್ತಾ ನಿಷ್ಕಳಂಕನಾಗಿ ಬದುಕುವುದೇ ಗುರಿ. ಹಾಗೆ ಬದುಕಿದಲ್ಲಿ ಮರಣಕ್ಕೆ ಹೆದರಬೇಕಾದ್ದಿಲ್ಲ. ಅಂದರೆ ಸಾವಿನ ಭಯವಿಲ್ಲ. ಜ್ಯೋತಿರಾಯುರ್ವೇದ ಎಂದರೆ ಮನುಷ್ಯ ಜೀವನದ ಮೇಲೆ ಬೆಳಕು ಚೆಲ್ಲಿ ಸನ್ಮಾರ್ಗದರ್ಶನ ಮಾಡುವ ಒಂದು ಸಿದ್ಧಾಂತ. ಅಲ್ಲಿ ಬದುಕುವ ಬಗೆಯನ್ನು ವಿವರವಾಗಿ ವಿವರಿಸಿದೆ. ಅದನ್ನು ಮುಂದಿನ ಲೇಖನದಲ್ಲಿ ವಿವರಿಸುತ್ತೇನೆ.
-      ಬ್ರಹ್ಮರ್ಷಿ ಕೆ. ಎಸ್. ನಿತ್ಯಾನಂದರು
ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು.