Tuesday, 6 June 2017

ಕೇಂದ್ರ ಸರಕಾರದ ಗೋ ಸಂರಕ್ಷಣೆ ಕಾಯಿದೆ ಒಂದು ನೋಟ

ಆಹಾ॥ ಎಂಬಂತೆ ಈಗ ತಾನೇ ಕೇಂದ್ರ ಸರಕಾರ ಗೋ ಸಂರಕ್ಷಣೆ ಬಗ್ಗೆ ಒಂದು ದಿಟ್ಟ ಹೆಜ್ಜೆ ಇಟ್ಟಿರುತ್ತದೆ. ಗೋ ಹತ್ಯಾ ನಿಷೇಧ ಕಾಯಿದೆ ತರಲು ಹೊರಟಿದೆ. ಸದ್ಯದಲ್ಲೇ ಜಾರಿಗೆ ಬರಬಹುದು. ಅದರಿಂದ ಲೋಕಕಲ್ಯಾಣವಂತೂ ಖಂಡಿತ. ನಮ್ಮ ಕರ್ನಾಟಕದಲ್ಲಿ ಇದೇ ಗೋಹತ್ಯಾ ನಿಷೇಧ ಕಾಯಿದೆ ಜಾರಿಗೆ ತರುವ ಪ್ರಯತ್ನವಾದರೂ ಅದು ಜಾರಿಗೆ ಬರಲೇ ಇಲ್ಲ. ಈಗ ಕೇಂದ್ರ ಸರಕಾರ ತರಲು ಹೊರಟಿದೆ. ಬರಬಹುದು ಎಂಬ ಆಶಾವಾದದಿಂದ ಕಾಯೋಣ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷ ತುಂಬುತ್ತಿದೆ. ಈ ಸಂದರ್ಭದಲ್ಲಾದರೂ ಈ ಕಾಯಿದೆ ಜಾರಿಗೆ ಬಂದು ಸಮರ್ಥವಾಗಿ ಬಳಕೆಯಾದಲ್ಲಿ ಮುಖ್ಯವಾದ ಮೂರು ದೇಶೀಯ ಸಮಸ್ಯೆಗಳು ಪರಿಹಾರ ವಾಗುತ್ತದೆ ಇದು ಖಂಡಿತ. ಅವು ಯಾವುವೆಂದರೆ

೧)     ಹಿಂದೂ ಮುಸ್ಲಿಂ ಭಾವೈಕ್ಯತೆ.
೨)    ದೇಶದಲ್ಲಿಯೇ ಉತ್ತಮ ಹೈನುಗಾರಿಕೆ.
೩)    ಕೃಷಿಗೆ ಬೇಕಾದ ಉತ್ತಮ ಗೊಬ್ಬರ ಉತ್ಪಾದನೆ.

ಈ ಮೂರೂ ಅಂಶಗಳೂ ದೇಶದ ಅಭಿವೃದ್ಧಿಗೆ ಅಮೃತ ಸಮಾನವೇ ಹೌದು. ಆ ಬಗ್ಗೆ ಒಂದೊಂದಾಗಿ ಚಿಂತಿಸುತ್ತಾ ಸಮಕಾಲೀನ ಭ್ರಷ್ಟ ರಾಜಕಾರಣವೇನೆನ್ನುತ್ತದೆ ನೋಡೋಣ.

೩) ಮೊದಲಾಗಿ ಕೃಷಿಗೆ ಪೂರಕತೆ :- ಗೋ, ಎಮ್ಮೆ, ಕೋಣ, ಹೋರಿ ಇತ್ಯಾದಿ ಸಾಂಪ್ರದಾಯಿಕ ಕೃಷಿ ಉಪಯೋಗಿ ಪ್ರಾಣಿಗಳಿಂದ ಕೃಷಿಕನಿಗೆ ಅತೀ ಹೆಚ್ಚಿನ ಲಾಭವಿದೆ. ಕೃಷಿಗೆ ಬೇಕಾಗುವ ಸಾವಯವ ಗೊಬ್ಬರ ಸಹಜವಾಗಿ ದೊರೆಯುತ್ತದೆ. ಹಾಗಾಗಿ ವಿದೇಶೀ ರಾಸಾಯನಿಕ ಗೊಬ್ಬರ ಆಮದು ತಡೆಯ ಬಹುದು. ಹಾಗೂ ಕ್ರಿಮಿನಾಶಕ ಬಳಕೆಯನ್ನೂ ಕಡಿಮೆ ಮಾಡ ಬಹುದು. ಎರಡೂ ನೇರವಾಗಿ ರೈತನಿಗೆ ಸಿಗುವ ಲಾಭವಿದು. ಅದಕ್ಕೆ ಪ್ರಾಥಮಿಕವಾಗಿ ಸರಕಾರ ಸ್ವಲ್ಪ ಉತ್ತೇಜನ ಕೊಟ್ಟರೂ ಈ ಮುಖದಲ್ಲಿ ಈ ಕಾಯಿದೆಯಿಂದ ಲಾಭ ಪಡೆದ ರೈತ ಬದುಕಬಲ್ಲ. ಆತ್ಮಹತ್ಯೆ ಪ್ರಮಾಣ ಕೂಡ ತಗ್ಗಬಲ್ಲದು.

೨) ಹೈನುಗಾರಿಕೆ:- ದನ+ಎಮ್ಮೆ+ಒಂಟೆ+ಕುದುರೆ+ಕತ್ತೆ+ಆಡು ಈ ಎಲ್ಲಾ ಪ್ರಾಣಿಗಳೂ ಮಾನವನಿಗೆ ಬದುಕು ನೀಡುವ ಉತ್ತಮ ಹಾಲನ್ನು ಕೊಡಬಲ್ಲವು. ಅವುಗಳ ಹಾಲನ್ನು ಬಳಸುವುದರಿಂದ ಮಾನವ ನಿರೋಗಿಯಾಗಿ ಬದುಕಬಲ್ಲ. ಈಗಿನ ಯೂರಿಯಾ ಮಿಶ್ರಿತ ಕೃತಕ ಹಾಲು ಮಾರುಕಟ್ಟೆಯಿಂದ ಅದೃಶ್ಯವಾಗಬಹುದು. ಹಾಗೇ ರೋಗರುಜಿನಗಳೂ ಓಡಿಹೋಗಬಹುದು. ತನ್ಮೂಲಕ ವೈದ್ಯಕೀಯ ವಿಭಾಗದಲ್ಲಾಗುತ್ತಿರುವ ಮೋಸ ವಂಚನೆಗಳೂ ಕಡಿಮೆಯಾಗಬಹುದು. ಹಾಗೂ ವಿದೇಶೀ ಔಷಧ ಮಾರುಕಟ್ಟೆ ಯೆಂಬ ಲಾಭಿಗೆ ಒಂದು ಸ್ಪಷ್ಟ ಉತ್ತರ ಸಾಧ್ಯ. ಹಾಗೇ ರಾಸಾಯನಿಕ ಔಷಧದ ಹೊರತಾಗಿ ಗೋವಿನ ಮೂಲದ ಔಷಧ ಉತ್ಪಾದನೆಯಲ್ಲಿ ತೊಡಗಿಕೊಂಡಲ್ಲಿ ಇನ್ನೂ ಹೆಚ್ಚಿನ ಲಾಭ ರೈತನಿಗೆ ಖಂಡಿತ.

೧) ಇನ್ನು ಮೊದಲನೆಯದಾದ ॥ ಭಾವೈಕ್ಯತೆ ಸಿದ್ಧಿ ॥ :- ಇದೊಂದು ನಮ್ಮ ದೇಶದ ದೊಡ್ಡ ಸಮಸ್ಯೆ. ಇದರಲ್ಲಿ 70% ಭ್ರಷ್ಟ ರಾಜಕಾರಣ. 20% ಆಹಾರೋದ್ದೇಶ. 10% ಇತರೆ ಇದೆಯೆಲ್ಲ ಎಂದು ಬಳಸುವ ಕಡಿಮೆ ಖರ್ಚು, ಲಾಭದಾಯಕ ಅನ್ನ ಇತ್ಯಾದಿ ಇತ್ಯಾದಿ ಹಲವು ಕಾರಣಗಳು. ಇದರ ಹಿನ್ನೆಲೆಯಲ್ಲಿ ಈ ಅಗತ್ಯ ಚಿಂತನೆ ಆಗಬೇಕಿದೆ. ಈಗಾಗಲೇ ಕೆಲ ರಾಜಕಾರಣಿಗಳು ಕೂಗಾಡಲು ಆರಂಭಿಸಿದ್ದಾರೆ ತಿನ್ನುವ ಅನ್ನ ಕಿತ್ತುಕೊಂಡರು ಎಂದು. ಮಾಂಸವನ್ನು ಅನ್ನವೆಂದು ಎಲ್ಲಿಯೂ ಯಾರೂ ಘೋಷಿಸಿಲ್ಲ. ರಾಜಕಾರಣದಿಂದ ಮಾತ್ರ ತಿನ್ನುವ ಅನ್ನವೆಂದು ಘೋಷಿಸುತ್ತಿದೆ ಅಷ್ಟೆ. ಆದರೆ ಯಾರೂ ಅದನ್ನು ಅನ್ನವೆಂದು ಒಪ್ಪಿಲ್ಲ. ರಾಗಿ, ಜೋಳ, ಗೋಧಿ, ಅಕ್ಕಿ, ನವಣೆ, ಜವೆ, ಸಾಮೆ ಬಳಿಜಗಳೆಲ್ಲಾ ಅನ್ನದ ಹೆಸರಿನಲ್ಲಿ ಘೋಷಿಸಿದ್ದರೂ ಮಾಂಸವನ್ನು ಅನ್ನವೆಂದು ಎಲ್ಲಿಯೂ ಘೋಷಣೆಯಾಗಿಲ್ಲ. ಕೆಲವರು ತಿನ್ನುತ್ತಿದ್ದಾರೆ ಅಷ್ಟೆ. ಆದರೆ ಅದೊಂದು ವಿದೇಶೀ ವ್ಯಾಪಾರದ ವಸ್ತು. ನಮ್ಮ ದೇಶದಲ್ಲಿ ಬಳಕೆಯಾಗುವ ಗೋಮಾಂಸದ ನಾಲ್ಕು ಪಟ್ಟು ವಿದೇಶಗಳಿಗೆ ಸಾಗಾಟವಾಗುತ್ತಿದೆ. ಇದು ಒಂದು ಲಾಭದಾಯಕ ವ್ಯಾಪಾರವಷ್ಟೆ. ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಇಲ್ಲಿನ ಜನರ ಆಹಾರ ಕಿತ್ತುಕೊಂಡರು ಎನ್ನುತ್ತಿದ್ದಾರೆ. ಅದನ್ನು ಬಿಜೆಪಿ ಸರಕಾರ ಮಾಡಿದೆಯೆನ್ನುತ್ತಿದ್ದಾರೆ. ಆದರೆ ಅದರ ಹಿನ್ನೆಲೆ ಈ ಜನಕ್ಕೆ ಅರ್ಥವಾಗಲಿಕ್ಕಿಲ್ಲ. ದೇಶದಲ್ಲಿ 70 ವರ್ಷದಿಂದ ಹೆಚ್ಚಿನ ಭಾಗ ಆಳಿದ ಕಾಂಗ್ರೆಸ್ ಪಕ್ಷದ ಮೂಲ ಪ್ರಣಾಳಿಕೆಯಲ್ಲಿ ಗೋಹತ್ಯಾ ನಿಷೇಧವಿತ್ತು. ಮಹಾತ್ಮಾ ಗಾಂಧೀಜಿಯವರು ಗೋಹತ್ಯೆ ನಿಷೇಧಿಸಿ ಎಂದು ಬ್ರಿಟೀಷರನ್ನೇ ಗೋಗರೆದಿದ್ದರು. ಉತ್ತಮ ಆಡಳಿತಗಾರನೆಂದು ಪ್ರಸಿದ್ಧನಾದ ಅಕಬರ ಗೋಹತ್ಯಾ ನಿಷೇಧ ಕಾನೂನು ಜಾರಿಯಲ್ಲಿ ತಂದಿದ್ದ. ಬಂಗಾಳದ ನವಾಬನೂ ಗೋಹತ್ಯಾ ನಿಷೇಧ ಕಾನೂನು ಜಾರಿಯಲ್ಲಿ ತಂದಿದ್ದ. ಕಾಂಗ್ರೆಸ್ ಪಕ್ಷ ಈಗ ತನ್ನ ಅಸ್ತಿತ್ವಕ್ಕಾಗಿ ಮುಸ್ಲಿಮರ ಹಿತಾಕಾಂಕ್ಷಿಯೆಂದು ತೋರಿಸಿಕೊಳ್ಳಲು ಗೋಹತ್ಯಾ ನಿಷೇಧ ಕಾನೂನು ವಿರೋಧಿಸುತ್ತಿದೆ. ಆದರೆ ಖಂಡಿತವಾಗಿ ಕಾಂಗ್ರೆಸಿಗೆ ಇದರಿಂದ ಲಾಭವಿಲ್ಲ. ರಾಜಕಾರಣದ ಜ್ಞಾನವಿರುವ ಯಾರೂ ಈ ಕಾನೂನನ್ನು ವಿರೋಧಿಸಲಾರರು. ವಿರೋಧಿಸಿದಲ್ಲಿ ರಾಜಕಾರಣದಲ್ಲಿ ಪ್ರಬುದ್ಧರಲ್ಲವೆಂದೇ ತಿಳಿಯಬೇಕು. ಯಾವುದೇ ಕಾಲದಲ್ಲೂ ಮುಸ್ಲಿಮರು ಮಾತ್ರಾ ಗೋಮಾಂಸ ತಿನ್ನುವುದಲ್ಲ, ನಮ್ಮಿಂದ ನಮ್ಮ ದೇಶದಿಂದ ರಫ್ತಾಗುವ ಗೋಮಾಂಸ ಮುಸ್ಲಿಂ ರಾಷ್ಟ್ರಕ್ಕೆ ಮಾತ್ರವಲ್ಲ, ಎಲ್ಲಾ ದೇಶಗಳಿಗೂ ಮಾರಾಟವಾಗುತ್ತಿದೆ. ಆದರೆ ರಾಜಕಾರಣ ಮಾತ್ರ ಇದು ಮುಸ್ಲಿಂ ವಿರೋಧಿಯೆಂದು ಬಿಂಬಿಸುವ ಪ್ರಯತ್ನ ಮಾಡುತ್ತಿದೆ. ಇದರ ಅರಿವು ಮುಸ್ಲಿಮರಿಗೂ ಇದೆ. ಅದರಿಂದಾಗಿ ಇದರ ರಾಜಕಾರಣ ಇವರಿಗೇ ತಿರುಮಂತ್ರ ವಾಗುವುದರಲ್ಲಿ ಸಂಶಯವಿಲ್ಲ. ಇನ್ನುಳಿದ ರಾಜಕೀಯ ಪಕ್ಷಗಳಂತೂ ಅರಿವಿಲ್ಲದ ರಾಜಕೀಯ ಶಿಶುಗಳು. ಅವನ್ನು ಬಿಡಿ. ರಾಜಕಾರಣವೆಂದರೆ ಏನೆಂದೇ ಅರಿಯದ ಮೂರ್ಖರು.  

ಈ ಗೋಹತ್ಯಾ ನಿಷೇಧ ಕಾನೂನು ಇಡೀ ಭಾರತೀಯ ಜನತೆಗೆ ಬರೆ ಮುಸ್ಲಿಮರಿಗೇ ಅಲ್ಲ ಇದು ಸತ್ಯ. ಈ ಸತ್ಯದ ಅರಿವಿಲ್ಲದಷ್ಟು ಮೂರ್ಖರೂ ಮುಸ್ಲಿಮರಲ್ಲ. ಗೋಹತ್ಯೆ, ಕಳ್ಳ ಸಾಗಾಟ, ವಂಚನೆ, ಗೋವಿನ ಕಳ್ಳತನ ಎಲ್ಲವುದರಲ್ಲೂ ಇತರೆ ಧರ್ಮದವರ ಪಾಲಿದೆ. ಹಾಗಾಗಿ ಅವರೆಲ್ಲಾ ಇದನ್ನು ವಿರೋಧಿಸ ಬಹುದು. ಆದರೆ ವಿರೋಧದಿಂದ ತಮ್ಮನ್ನೇ ತಾವು ಕೊಂದು ಕೊಂಡಂತೆ ಎನ್ನುವ ಸತ್ಯ ಅರಿವಿಲ್ಲ. ಇಲ್ಲಿ ಕೃಷಿಗೆ ಬಳಕೆಯಾಗುವ ಮತ್ತು ಹಿಂದೆ ಆದ ಎಲ್ಲಾ ವಸ್ತುಗಳೂ ಪೂಜ್ಯ. ಎಷ್ಟೋ ಮನೆಗಳಲ್ಲಿ ಈಗಲೂ ಹಳೇ ನೇಗಿಲು, ನೊಗ, ಕೊಳಗ ಇತ್ಯಾದಿ ವಸ್ತುಗಳು ಪೂಜೆಗೊಳ್ಳುತ್ತವೆ. ಹಾಗೇ ಎತ್ತಿನ ಕೊಂಬು, ಕೋಣನ ಕೊಂಬು ಇವೂ ಕೂಡ ಅವು ಸತ್ತ ಮೇಲೆ ರಕ್ಷಿಸಿಕೊಂಡು ಬಂದ ಉದಾಹರಣೆ ಇದೆ. ನೋಡಿ ತಿಳಿಯಿರಿ.

ಇನ್ನು ರಾಜಕೀಯ ರಾಜಕಾರಣ ಏನೇ ಹೇಳಲಿ, ಹೇಗೆ ಇರಲಿ, ನಾವಂತೂ ಇದನ್ನು ನಂಬುವವರಲ್ಲ. ನಮ್ಮ ದೇಶದಲ್ಲಿ ಬಳಕೆಯಾಗುವಷ್ಟು ಹಾಲು ಪ್ರಪಂಚದ ಯಾವ ದೇಶದಲ್ಲೂ ಬಳಕೆಯಾಗುವುದಿಲ್ಲ. ನಮಗೆ ಹಾಲಿನ ಮಹತ್ವದ ಅರಿವಿದೆ. ಭಾರತದ ಜನಸಂಖ್ಯೆ ೧೩೦ ಕೋಟಿ ದಾಟಿರಬಹುದು. ಆದರೆ ಈಗಲೂ ಒಬ್ಬನಿಗೆ ಎರಡರಂತೆ ಅಂದಾಜು ೨೬೦ ಕೋಟಿ  ಈ ದನ ಕೋಣ, ಎತ್ತು, ಎಮ್ಮೆ, ಒಂಟೆ, ಕುದುರೆ, ಕತ್ತೆ, ಆಡುಗಳು ಇವೆ. ಅದರರ್ಥ ಕಾನೂನು ಇಲ್ಲದಿದ್ದರೂ ಅವು ಬದುಕಿವೆ. ದೇಶವನ್ನು ಕಾಯುತ್ತಿವೆ. ಆಹಾರ ರೂಪದಲ್ಲಿ ಹಾಲು, ಹಾಗೇ ಸಾಗಾಟ, ಕೃಷಿಗೆ ಗೊಬ್ಬರ, ಪರಿಸರ ಶುದ್ಧಿ ಇತ್ಯಾದಿಗಳಲ್ಲಿ ಮಾನವನಿಗೆ ಸಹಕಾರಿಯಾಗಿಯೇ ಇವೆ. ಹಾಗಾಗಿ ಕಾನೂನು ತಂದಲ್ಲಿ ಅವುಗಳಿಗೆ ನಾವು ಕೃತಜ್ಞತೆ ಸಲ್ಲಿಸಿದಂತಾಗುತ್ತದೆಯೇ ವಿನಃ ಯಾವುದೇ ದಾನವಲ್ಲ.

ಇತ್ತೀಚೆಗೆ ಒಂದು ಟಿವಿ ಮಾಧ್ಯಮದಲ್ಲಿ ಹಿಂದೆಲ್ಲಾ ಎಲ್ಲರೂ ಗೋಮಾಂಸ ತಿನ್ನುತ್ತಿದ್ದರು, ಅದರಿಂದಲೇ ಯಾಗ ಯಜ್ಞಗಳನ್ನು ಮಾಡುತ್ತಿದ್ದರು, ಇಂದ್ರನಿಗೆ ಗೋಮಾಂಸ ಅತಿ ಪ್ರಿಯವಾದ ಖಾದ್ಯ ಎಂದೆಲ್ಲಾ ಬೊಗಳೆ ಬಿಡುತ್ತಿದ್ದರು. ಅದರ ಅರಿವಿಲ್ಲದ ಪಶುಗಳವರು. ಎಲ್ಲಿ ಅಜ್ಞಾನವಿದೆ ಅದನ್ನು ಪಶು ಎಂದು ಸಂಬೋಧಿಸುವುದು ಸ್ವಾಭಾವಿಕ. ಹೆಡ್ಡರನ್ನು ಕೋಣ ಎಂದಂತೆ. ಹಾಗೇ ಆ ಮಾಧ್ಯಮದವರ ವಿಚಾರ ಬದಿಗಿಟ್ಟು ಪಶುಹತ್ಯಾ ನಿಷೇಧ ಕಾನೂನು ಚಾಲ್ತಿಯಲ್ಲಿ ಬರುವಾಗ ಈ ಕೆಲ ಅಂಶ ಗಮನಿಸಿದರೆ ಇನ್ನೂ ಹೆಚ್ಚಿನ ಲಾಭವಿದೆ. ಸಮಾಜಕ್ಕೆ ನಮ್ಮಲ್ಲಿ ಹಿಂದಿನಿಂದಲೂ ಪಶು ಎಂಬುದು ಒಂದು ಸಂಪತ್ತು. ಅದರಲ್ಲಿ ಹೆಸರಿಸಿದ ಪ್ರಾಣಿಗಳೆಲ್ಲಾ ಸಂರಕ್ಷಿಸಲ್ಪಡಬೇಕು ಎಂದೇ ಪುಣ್ಯಕಾಮನೆಂಬ ಅರ್ಥಶಾಸ್ತ್ರಜ್ಞನ ಅಭಿಪ್ರಾಯ. ಅವನ ದೃಷ್ಟಿಯಲ್ಲಿ ಇಷ್ಟು ಪ್ರಾಣಿಗಳನ್ನು ಹೆಸರಿಸಿದ್ದಾನೆ. ಅದರ ವಿವರ ಹೀಗಿದೆ.

೦೧)   ಹಸು
೦೨) ಎತ್ತು
೦೩) ಎಮ್ಮೆ
೦೪)   ಕೋಣ
೦೫)  ಆಡು
೦೬) ಕುರಿ
೦೭)  ಕತ್ತೆ
೦೮) ಕುದುರೆ
೦೯) ಆನೆ
೧೦)   ಜಿಂಕೆ
೧೧)    ಕಡವೆ
೧೨)   ಉರಗ
೧೩)   ಉಡ
೧೪)   ವ್ಯಾಘ್ರ

ಈ ಹದಿನಾಲ್ಕೂ ವಧಾರ್ಹವಲ್ಲ. ಆದರೆ ಲೋಕಕಂಟಕವಾದರೆ ಮಾನವನೂ ವಧ್ಯಾರ್ಹವೇ.  ಈ ಪ್ರಾಣಿಗಳನ್ನು ಯಾರು ಸಂರಕ್ಷಿಸಿ ಕೊಂಡು ಬರುತ್ತಾನೋ ಅವನೇ ಸಂರಕ್ಷಕ ಅಥವಾ ರಾಜನೆನಿಸಿ ತ್ತಾನೆ ಎಂದಿದ್ದಾನೆ. ಇವೆಲ್ಲಾ ಪ್ರಾಣಿಗಳು ಸತ್ತರೂ (ಸಹಜವಾಗಿ) ಸಂರಕ್ಷಣಾ ಯೋಗ್ಯವಾದವು ಎನ್ನುತ್ತಾನೆ. ಹಾಗಾಗಿ ಆನೆ ದಂತ, ಹುಲಿಚರ್ಮ, ಜಿಂಕೆ ಚರ್ಮ, ಉಡದ ಚರ್ಮ, ಹುಲಿ ಉಗುರು, ಕುದುರೆಯ ಕೇಶ, ಕತ್ತೆಯ ಗೊರಸು, ಹಸು ಇತ್ಯಾದಿ ಚರ್ಮ ಇದೆಲ್ಲಾ ಸಂರಕ್ಷಿಸಿ ಇಡಬೇಕೆಂದಿದ್ದಾನೆ. ಚಾಣಕ್ಯನು ಗೋಪಾಲಕರಿಗೆ ರಾಜಾದಾಯ ತೆರಿಗೆ ವಿಧಿಸುವಾಗ ಹಣವಲ್ಲದೆ ಚರ್ಮವನ್ನು ಇಷ್ಟು ಪ್ರಮಾಣದಲ್ಲಿ ರಾಜಭಂಡಾರಕ್ಕೆ ಒಪ್ಪಿಸಬೇಕೆಂದಿದ್ದಾನೆ. ಕಾರಣ ಲೋಕೋನ್ನತಿಗೆ ಆಡು, ಎಮ್ಮೆ ಪೂರಕವೆಂಬುದು ಈಗಿನ ವಿಜ್ಞಾನ ಓದಿದ ಮೂಢರಿಗೆ ಅರ್ಥವಾಗಲಾರದು. ಅವು ತಿನ್ನುವ ಪ್ರಾಣಿಯಲ್ಲ, ಸಂರಕ್ಷಿತ ಪ್ರಾಣಿ. ಹಾಗಾಗಿ ಕಾನೂನು ಬರಲಿ ಎಂದು ಹಾರೈಸುತ್ತೇನೆ.

-   ಬ್ರಹ್ಮರ್ಷಿ ಕೆ. ಎಸ್. ನಿತ್ಯಾನಂದ ಸ್ವಾಮೀಜಿ,
ವೇದ ವಿಜ್ಞಾನ ಮಂದಿರ,
ಚಿಕ್ಕಮಗಳೂರು