Friday, 13 October 2017

ಶ್ರೀಚಕ್ರ, ಶ್ರೀವಿಧ್ಯೆ - ೩ : ಶ್ರೀವಿಧ್ಯಾ ಮತ್ತು ಚಕ್ರವಿಧ್ಯಾ ಎಂದರೇನು?

(ಋತ್ವಿಕ್ ವಾಣಿ ಪತ್ರಿಕೆ - ಫೆಬ್ರವರಿ ೧೯೯೯)

[ಸೂಚನೆ:- ಈ ಲೇಖನವು ಶ್ರೀಚಕ್ರ, ಶ್ರೀವಿಧ್ಯಾ ಲೇಖನ ಸರಣಿಯ ಭಾಗ ಮಾತ್ರ. ಸಂಪೂರ್ಣವಾಗಿ ಅರ್ಥವಾಗಬೇಕಾದರೆ ಈ ಲೇಖನಮಾಲೆಯ ಹಿಂದಿನ ಲೇಖನಗಳನ್ನು ಹಲವಾರು ಭಾರಿ ಮುಕ್ತ ಮನಸ್ಸಿನಿಂದ ಓದಿ ಮನದಟ್ಟು ಮಾಡಿಕೊಂಡರೆ ಮಾತ್ರ ವಿಷಯದ ಗಹನತೆ ಅರ್ಥವಾದೀತು. ಹಾಗೇ ಈ ಲೇಖನ ಸರಣಿಯ ಮುಂದಿನ ಲೇಖನಗಳನ್ನು ಓದಿದರೆ ಮಾತ್ರ ಒಟ್ಟು ಸಾರಾಂಶವನ್ನು ಸಮಗ್ರವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯ. ಇವು ಹಲವು ಲೇಖನಗಳಲ್ಲ, ಒಂದೇ ಲೇಖನವನ್ನು ಬಿಡಿಯಾಗಿಸಿ ಪ್ರಕಟಿಸಲಾಗಿದೆಯಷ್ಟೆ.]

ಮುಖ್ಯವಾಗಿ ಶ್ರೀವಿಧ್ಯೆ ಎಂದರೇನು? ಮೊದಲು ಪರಿಚಯ ಮಾಡಿಕೊಳ್ಳೋಣ. ಅಷ್ಟಾಂಗಯೋಗ ಪ್ರಣೀತವಾದ (ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ) ಯೋಗವಿಧ್ಯಾ ಸ್ವರೂಪವಾದ ಯೋಗ ಅಥವಾ ಚೈತನ್ಯವೇ ಶ್ರೀವಿಧ್ಯೆ. ಚೈತನ್ಯ ಸದಾ ಚೇತನ ಸ್ವರೂಪಿಯಾಗಿರಲು ಪ್ರಪಂಚದ ಸೃಷ್ಠಿ. ಅದೇ ಯೋಗ + ಮಾಯೆ. ಅಂದರೆ, ಯೋಗಮಾಯೆ ಎಂದು ಕರೆದರು. ವೇದಾಂತಿಗಳಿಗೆ ಯೋಗವೂ, ಮಾಯೆಯೂ ಬೇರೆ ಎಂಬ ತಾತ್ವಿಕ ಅರ್ಥವೇ ತಿಳಿಯದೆ ಅದನ್ನೇ ಒಂದು ಎಂದರು. ಯೋಗವೇ ಧರ್ಮ, ಮಾಯೆಯೇ ಕರ್ಮ. ಧರ್ಮ ಕರ್ಮ ಸಂಯೋಗವೇ ಪ್ರಾಪಂಚಿಕ ವ್ಯವಹಾರ, ಪ್ರಪಂಚ ಸೃಷ್ಟಿ. ಸದಾ ಚೈತನ್ಯವು ತನ್ನ ಹೆಸರಿಗೆ ಅನ್ವರ್ಥವಾಗಿರಬೇಕಾದಲ್ಲಿ ಅದು ಚೇತನವನ್ನು ಕಂಡುಕೊಳ್ಳುವುದು ಪ್ರಾಪಂಚಿಕದಲ್ಲಿಯೇ ವಿನಃ ಐಕ್ಯತೆಯಲ್ಲಿ ಅಲ್ಲ. ಆದ್ದರಿಂದ, ಯೋಗಕ್ಕೆ ಬೇಕಾದ ಚೇತನಾವಕಾಶ ಸ್ವರೂಪವಾದ ಪ್ರಪಂಚ. ಅದರಲ್ಲಿ ಸೃಷ್ಟಿ, ಸ್ಥಿತಿ, ಲಯ, ಪುನಃ ಸೃಷ್ಟಿ, ವರ್ತುಲ ಭೇಧಿಸಲ್ಪಡತಕ್ಕದಲ್ಲ ಮತ್ತು ಭೇಧಿಸಲಾಗದ್ದು.

        ಇಲ್ಲಿ ಸೈದ್ಧಾಂತಿಕವಾಗಿ ಹೇಳುವುದಿದ್ದರೆ ಯಾವುದಕ್ಕೂ ನಾಶವಿಲ್ಲ, ಆದರೆ ಯಾವುದರ ಸ್ವರೂಪವೂ ಸ್ಥಿರವಲ್ಲ, ಸದಾ ರೂಪಾಂತರ ಹೊಂದುತ್ತಿರುವ ಪ್ರಕೃತಿಯಲ್ಲಿ ನಾವು ಅಜ್ಞಾನಿಗಳು; ನಾಶವಾಯಿತು ಎಂದು ತಿಳಿಯುತ್ತೇವೆ. ಆದರೆ ಅದರ ಮೂಲವು ಖಂಡಿತಾ ನಾಶವಾಗುವುದಿಲ್ಲ. ತಾತ್ವಿಕ ಸಿದ್ಧಾಂತವನ್ನು ಸಾರಿ ಸಾರಿ ವಿವರಣಾತ್ಮಕವಾದ ರೀತಿ ಹೇಳುವುದೇ ಅದರ ಉದ್ದೇಶವಾಗಿರುತ್ತದೆ. ಸದಾ ಯೋಗವು ಮಾಯೆಯೊಂದಿಗೆ ಸಂಯೋಜಿಸುವುದೇ ಧರ್ಮ ಮತ್ತು ಪ್ರಾಪಂಚಿಕ ನಿಯಮ, ಅದನ್ನು ತಡೆಯುವುದಾಗಲೀ, ತಡೆಯುವ ಪ್ರಯತ್ನ ಮಾಡುವುದಾಗಲೀ  ಜ್ಞಾನಾಕಾಂಕ್ಷಿಗಳ ಕೆಲಸವಲ್ಲ. ಸದಾ ಚೈತನ್ಯವನ್ನು ಗುರುತಿಸುವುದಕ್ಕೂ, ಅದನ್ನೇ ಅರಿಯುವುದಕ್ಕೂ ಪ್ರಯತ್ನಿಸುವುದೇ ಪರಬ್ರಹ್ಮದ ಅನ್ವೇಷಣೆಯ ಮಾರ್ಗ. ಚೈತನ್ಯವು ಅಥವಾ ಯೋಗವು ಯಾವುದರಲ್ಲೋ ಐಕ್ಯವಾದಲ್ಲಿ, ಚೈತನ್ಯರಹಿತ ಸಮಾಜವಿದೆಯೇ? ಹಾಗಿದ್ದಲ್ಲಿ ಚೈತನ್ಯ ಸದಾ ಕಾರ್ಯಪ್ರವೃತ್ತವಾದಾಗಲೇ ಅದನ್ನು ಚೈತನ್ಯ ಎಂದು ಗುರುತಿಸಲು ಸಾಧ್ಯ. ಹಾಗಾಗಿಯೇ ನಿಜವಾದ ದಾರ್ಶನಿಕರು ಪ್ರಪಂಚದ ಅಣುರೇಣು ತೃಣಕಾಷ್ಠದಲ್ಲೂ ಪರಮಾತ್ಮನಿದ್ದಾನೆ, ಸಕಲ ಜೀವಿಗಳೂ ಪರಮಾತ್ಮಸ್ವರೂಪ, ಅದರೊಂದಿಗೆ ಒಂದಾಗಿ ಹೊಂದಿಕೊಳ್ಳುವುದೇ ಮೋಕ್ಷವೆಂದರು. ಪ್ರಕೃತಿ ಸಹಜವಾದ ಎಲ್ಲವನ್ನೂ ಪ್ರೀತಿಸುವ, ಆರಾಧಿಸುವ ಆದರ್ಶವನ್ನೇ ವೇದಗಳು ಸಾರಿ ಹೇಳಿದವೇ ವಿನಃ ಮೇಲು ಕೀಳೆಂಬ ತಾರತಮ್ಯವನ್ನಲ್ಲ!

        "ಕೃಣ್ವಂತೋ ವಿಶ್ವಮಾರ್ಯಂ" ಎಂಬ ಸಿದ್ಧಾಂತ ಆದರ್ಶ ವಾಕ್ಯವನ್ನು ಪ್ರಪಂಚಕ್ಕೆ ಕೊಟ್ಟಿದೆ. ಜ್ಞಾನಸ್ವರೂಪಿಯಾದ ಶ್ರೀವಿಧ್ಯೆ ಅರ್ಥಾತ್ ಜ್ಞಾನ, ಶ್ರೀ = ಜ್ಞಾನ, ವಿಧ್ಯಾ = ವಿವಿಧಾತ್ ಧ್ಯಾಯತೇ ಇತಿ ವಿಧ್ಯಾ = ಎಲ್ಲಾ ತಿಳುವಳಿಕೆಯನ್ನು ಕೊಡುವಂತಹುದೇ "ಶ್ರೀವಿಧ್ಯೆ". ಇಂತಹ ಪ್ರಾಪಂಚಿಕ ಸತ್ಯದರ್ಶಕವಾದ ವಿಧ್ಯೆಯು ಅಲ್ಲದೆ, ಪ್ರಪಂಚದ ಎಲ್ಲಾ ವಸ್ತುವನ್ನು ಕೂಡ ಪ್ರೀತಿಸುವ, ಆರಾಧಿಸುವ ಮಹಾವಿಧ್ಯೆಯ ದ್ಯೋತಕವೇ ಆಗಿದೆ.

        ಆದಿಯಿಂದಲೂ ಬಂದಂತಹ ವೃಕ್ಷ ಪೂಜೆ, ಪ್ರಾಣಪೂಜೆ, ನಾಗಾಧಿಪೂಜೆ, ಶಿಲಾ ಧಾತುಗಳ ಪೂಜೆ, ರತ್ನಾದಿಗಳ ಮಹತ್ವವನ್ನು ಸಾರಿದವು. ಅದನ್ನು ಬಳಕೆಯಲ್ಲಿ ತಂದವರು ಮುರ್ಖರಲ್ಲ. ಈಗ ಮಾತ್ರ ಅವರ ಉದ್ದೇಶಕ್ಕೆ ವಿರುದ್ಧವಾಗಿ ಸತ್ಯ ಮರೆಮಾಚಿ, ಪೂಜಾನಾಟಕ ಆರಂಭವಾಗಿರುವುದರಿಂದ ನಾವು ಮೂರ್ಖರಷ್ಟೇ. ಹಾಗಿದ್ದರೆ, ನಿಜವಾದ ಶ್ರೀವಿಧ್ಯೆಗೆ ಆದಿ ಇದೆಯೇ? ಇಲ್ಲ, ಖಂಡಿತವಾಗಿಯೂ ಇಲ್ಲ. ಇದು ಜ್ಞಾನ, ಹುಟ್ಟಿನಿಂದಲೇ ವಿಧ್ಯೆ ಆರಂಭ. ಮಗುವಿಗೆ ತನಗೆ ಭೂಸ್ಪರ್ಶವಾಗಿದೆ ಎಂಬ ಜ್ಞಾನವಾದಾಗಲೇ ಅಳುತ್ತದೆ. ಅಂದರೆ ಅದಕ್ಕೆ ವಿಧ್ಯೆ ಆರಂಭವಾಯಿತು ಎಂದು ಅರ್ಥ. ಅಂದರೆ, ತಾಯಿಯಿಂದ ಬೇರ್ಪಟ್ಟು ಅಭದ್ರ ಪ್ರಾಕಾರಕ್ಕೆ ತಾನು ಪ್ರವೇಶಿಸಿದ್ದೇನೆ, ತನಗೆ ಭದ್ರತೆಯಿಲ್ಲ ಎಂಬ ತಿಳುವಳಿಕೆಯು ಆರಂಭವಾಯಿತು. ಆದ್ದರಿಂದ ಶ್ರೀವಿಧ್ಯೆಯು ಪ್ರಪಂಚದ ಸೃಷ್ಟಿಯ ಆರಂಭದಲ್ಲೇ ಉದಯವಾಗಿದೆ. ಸೃಷ್ಟಿಗೆ ಆದಿ ಇದೆ ಎಂದಾದರೆ ಶ್ರೀವಿಧ್ಯೆಗೆ ಆದಿ ಇರುವಂತಹದ್ದು. ಸೃಷ್ಟಿಗೆ ಆದಿ ಇಲ್ಲ ಎಂದರೆ ಶ್ರೀವಿಧ್ಯೆಗೂ ಆದಿ ಇಲ್ಲ; ಈ ತಿಳುವಳಿಕೆ ಸಾಕು. ಪ್ರಾಪಂಚಿಕವಾಗಿ ಚೈತನ್ಯದೊಂದಿಗೆ ಕೈಗೂಡಿಸುವುದು ಅಥವಾ ಚೈತನ್ಯವನ್ನು ಅರಿತುಕೊಳ್ಳುವುದೇ ಮೋಕ್ಷ; ಅದೇ ಸಾಧನೆಯ ಉತ್ತುಂಗ. "ನಾನು ಎಂಬುದ ಬಿಟ್ಟು ದೀನನಾದೆನೋ ಹರಿಯೇ" ಎಂಬಂತೆ ನಾನು ಬಿಟ್ಟು ನಾವು, ನಮ್ಮದು ಎಂಬ ವಿಚಾರ ಬೆಳೆಸಿಕೊಂಡಲ್ಲಿ ಮತ್ತು ನನಗಾಗಿ ಎಂಬ ವಿಚಾರವನ್ನು ಮರೆತು ನಮಗಾಗಿ ಅಥವಾ ಸಮಾಜಕ್ಕಾಗಿ, ಸಮಾಜದ ಒಂದು ಅಂಗವಾಗಿ ಬದುಕುವ ಪ್ರತಿಯೊಬ್ಬನೂ ಕೂಡ ಚೈತನ್ಯದ ಪರಿಚಯವನ್ನು ಹೊಂದುತ್ತಾನೆ. ಆದ್ದರಿಂದ ಯೋಗ+ಮಾಯೆ ಒಂದಾದಲ್ಲಿ ಮಾತ್ರ ಪ್ರಪಂಚ ಮುಂದುವರಿಯುತ್ತದೆ. ಅವೆರಡೂ ಒಂದೇ ಎಂದು ತಿಳಿದಲ್ಲಿ ಮೂರ್ಖರಾಗುತ್ತೀರಿ. ಅವೆರಡನ್ನೂ ಬೇರೆ ಬೇರೆಯಾಗಿ ಗುರುತಿಸುವ ದೃಷ್ಟಿಕೋನ ಬೆಳೆಸಿಕೊಳ್ಳಿ. ಮಣ್ಣು ಯೋಗವಾದರೆ, ಅದು ಹೊಂದಿದ ರೂಪ ಮಡಕೆ, ಕುಡಿಕೆ, ಹಣತೆ - ಇದು ಮಾಯೆ. ಆ ರೂಪ ಕಳೆದು ಹೋದಲ್ಲಿ ಪುನಃ ಮಣ್ಣು ಯೋಗವೇ! ಇಷ್ಟಕ್ಕೆ ಶ್ರೀವಿಧ್ಯೆ ಅಂದರೆ ಜ್ಞಾನವಿಧ್ಯೆ, ತಿಳುವಳಿಕೆ ಕೊಡುವಂತಹದ್ದು ಎಂದು ನಿಮಗೆ ಅರ್ಥವಾಗಿರಬಹುದು. ಅದಕ್ಕೆ ಬೇಕಾದ ಮಾರ್ಗ ಅಥವಾ ನೀವು ರೂಢಿಸಿಕೊಳ್ಳಬೇಕಾದ ಅರ್ಹತೆಯೇನು ಎಂದರೆ:-

೧. ಯಮ :- ನಿಮ್ಮಲ್ಲಿರತಕ್ಕ ಕ್ರೋಧಾದಿ ಷಡ್ವೈರಿಗಳನ್ನು ನಿಗ್ರಹಿಸಿಕೊಳ್ಳುವುದು, ನಿರ್ಬಂಧಿಸಿಕೊಳ್ಳುವುದು.

೨. ನಿಯಮ :- ನಿಮ್ಮ ಜೀವನದಲ್ಲಿ ಕುಲಾಚಾರಕ್ಕೆ ಹೊಂದಿದಂತೆ ಧರ್ಮ ಸೂಕ್ಷ್ಮಗಳನ್ನು ಅರಿತು ನ್ಯಾಯಬದ್ಧವಾದ, ಪರಪೀಡೆಯಾಗದಂತಹ ಒಂದು ಗತಿ ರೂಪಿಸಿಕೊಳ್ಳುವುದು.

೩. ಆಸನ:- ನಿಮ್ಮದ್ದಾದ ಕ್ಷೇತ್ರ ಅಂದರೆ ನಿಮ್ಮ ಶಕ್ತಿ ಸಾಮರ್ಥ್ಯದ ಮೇರೆಗೆ ನಿಮಗೊಂದು ಸೀಮೆ ಅಳವಡಿಸಿಕೊಳ್ಳುವುದು. ನಿಮ್ಮ ಕಾರ್ಯಕ್ಷೇತ್ರ ಅಲ್ಲಿಗೆ ಸೀಮಿತಗೊಳಿಸಿಕೊಳ್ಳುವುದು.

೪. ಪ್ರಾಣಾಯಾಮ:- ನೀವು ಉಸಿರಾಡಿದಷ್ಟೇ ಗಾಳಿಯನ್ನು ಹೇಗೆ ಪುನಃ ಹೊರ ಬಿಡುತ್ತೀರೋ ಹಾಗೇ ಪ್ರಕೃತಿಯಿಂದ ನೀವು ಏನು ಬಳಸಿರುತ್ತೀರೋ, ಸಮಾಜದಿಂದ ಏನು ಉಪಯೋಗ ಹೊಂದಿದ್ದೀರೋ, ಅಷ್ಟೇ ನಿಮ್ಮಿಂದ ಸಮಾಜಕ್ಕೆ ಸಮರ್ಪಿಸಲ್ಪಡಬೇಕು. ಪ್ರಕೃತಿಗೆ ಸಲ್ಲಬೇಕು.

        ಈ ನಾಲ್ಕು ಸೂತ್ರಗಳನ್ನು ನೀವು ಅಳವಡಿಸಿಕೊಂಡಲ್ಲಿ ನೀವು ಪ್ರಕೃತಿಯ ಋಣಕ್ಕೆ ಸಿಗದೆ ಪ್ರತ್ಯಾಹಾರಿಯಾಗಿ ನಿಮ್ಮ ಗಮನವು ಚೈತನ್ಯ ಗುರುತಿಸುವ ಏಕಾಗ್ರತೆ ಧ್ಯಾನದತ್ತ ತಿರುಗಿ ಚೈತನ್ಯವನ್ನು ಸ್ವೀಕರಿಸುವ ಶಕ್ತಿಯನ್ನು ಹೊಂದಿ ಧಾರಣ ಮಾಡಿಕೊಳ್ಳುವುದೇ ನಾವು ಸಮಾಧಿ ಸ್ಥಿತಿ ಅಥವಾ ಯಾವುದೇ ಲೋಪವಿಲ್ಲದ ನಿಷ್ಕಲ್ಮಷರಾಗಲು ಸಾಧ್ಯವೆಂಬುದೇ ಈ ಸೂತ್ರಗಳು ಎಂದು ಅರ್ಥಮಾಡಿಕೊಳ್ಳಿ. ನಿಮ್ಮ ಜೀವನವು ನಿಮಗಾಗಿ ಮಾತ್ರವಲ್ಲ, ಪರರ ಶ್ರೇಯಸ್ಸಿಗಾಗಿಯೂ ಬದುಕಿರಿ, ಬದುಕುವುದಕ್ಕಾಗಿ ಸಮಾಜದ ಸೌಲಭ್ಯ, ಸೌಕರ್ಯ ಬಳಸಿ. ಅಂದರೆ, ಊಟ ಮಾಡಿ ಸಮಾಜದ ಸೌಕರ್ಯ ಭೋಗ ಭಾಗ್ಯಕ್ಕಾಗಿ ಬದುಕಬೇಡಿ; ಊಟಕ್ಕಾಗಿ ಬದುಕಬೇಡಿ; ಉಪಯುಕ್ತರಾಗಿ ಬದುಕಬೇಕು; ಅದು ಯೋಗಮಾರ್ಗದ ಆದರ್ಶವಾಗಿರುತ್ತದೆ. ಈ ವಿಚಾರವಾಗಿ ಎಷ್ಟೇ ಬರೆದರೂ ಮುಗಿಯಲಾರದು. ದಾರ್ಶನಿಕರು, ದಾಸವರೇಣ್ಯರು, ಯತಿಪುಂಗವರು, ಋಷಿ ಮುನಿಗಳು ಕಂಡುಕೊಂಡ ನಿಷ್ಕಾಮಯೋಗ ಮಾರ್ಗವನ್ನು ನಿಮ್ಮ ಮುಂದಿಡುತ್ತಿದ್ದೇನೆ; ಅದೇ ಜ್ಞಾನ ವಿಧ್ಯೆ ಅಥವಾ ಶ್ರೀವಿಧ್ಯೆ. ಮೂಲಾಧಾರಾದಿ ಷಟ್ಚಕ್ರ ಸ್ಥಾನವನ್ನು ಗುರುತಿಸಿ ಚೈತನ್ಯವನ್ನು ನಿರಂತರವಾಗಿ ಇಡುವ ಉದ್ದೇಶವು ಅದೇ ಆಗಿರುತ್ತದೆ. ಈಗ ಈ ಷಟ್ಚಕ್ರ ವಿಧ್ಯೆ ಅಥವಾ ಯೋಗ ವಿಧ್ಯೆಯ ಬಗ್ಗೆ ಹೇಳುತ್ತೇನೆ.


ಈ ಹಿಂದೆ ಅಷ್ಟಾಂಗ ಯೋಗವಿಧ್ಯೆಯನ್ನು ಅರಿತ ಮಾನವನು ಬ್ರಹ್ಮಾಂಡ ಮಂಡಲವೆಲ್ಲಾ ತಾನು ಎಂದು ಗುರುತಿಸುವ ಪರಿಪೂರ್ಣ ಮನದ ವಿಧ್ಯೆಯ ಆಳ ಅಗಾಧತೆಗೆ ತನ್ನ ಆಳವನ್ನು ಅಳವಡಿಸಿಕೊಂಡು ನಿರೀಕ್ಷಿಸುವುದು ಕಷ್ಟಸಾಧ್ಯವಾಗುತ್ತಿದ್ದುದರಿಂದ ಅದಕ್ಕೊಂದು ಸುಲಭೋಪಾಯವನ್ನು ಕಂಡುಹಿಡಿಯಬೇಕೆಂದು ಪ್ರಯತ್ನಿಸಿದ. ಅದೇ ಈ ಷಟ್ಚಕ್ರ ವಿಧ್ಯೆ. ಬ್ರಹ್ಮಾಂಡ ಎಲ್ಲವೂ ಒಂದರಲ್ಲಿರುವಂತೆ ಕಲ್ಪಿಸಿ ಆ ಉದ್ದೇಶದಿಂದಾಗಿ ಪ್ರಯತ್ನಿಸಿದ ಫಲವಾಗಿ ತನ್ನ ದೇಹವೇ ಅದಕ್ಕೆ ಸೂಕ್ತ ರಂಗಮಂದಿರ ಏಕಾಗಬಾರದು? ತನ್ನ ದೇಹದಲ್ಲೂ ಬ್ರಹ್ಮಾಂಡದ ಸರ್ವವೂ ಅಡಕವಾಗಿರಲೇ ಬೇಕು. ಯೋಗವು ಮಾಯೆಯೊಂದಿಗೆ ಸಂಪರ್ಕಿಸಿದಾಗ ಪ್ರಪಂಚ ಸೃಷ್ಟಿಯಾದರೆ ಮಾಯೆಯಲ್ಲಿ ಯಾವುದೇ ಯೋಗಾಂಶವಿಲ್ಲವೇ? ಇರಲೇ ಬೇಕು. ಅಣುವಿನಿಂದ ಪ್ರಪಂಚವಾದರೆ ಅಣುವಿನ ಸ್ವರೂಪವೇನು? ಅದರ ಬೀಜವೇನು? ಅಣುವೂ ಕೂಡ ಯಾವುದೇ ಒಂದು ಚೈತನ್ಯ ಹೊಂದಿರಲೇಬೇಕಲ್ಲವೆ? ಹಾಗಿ ಚಿಂತಿಸಿದ ಮಾನವನು ತನ್ನ ದೇಹದಲ್ಲಿ ಯೋಗ ಮತ್ತು ಮಾಯೆ ಇದೆ ಎಂದು ಕಂಡುಕೊಂಡ, ಹಾಗೂ ಅದು ಎಲ್ಲಿದೆ? ಎಲ್ಲಿರಬೇಕು? ಅದನ್ನು ಅಲ್ಲಿರುವಂತೆ ಮಾಡುವುದು ಹೇಗೆ? ಈ ವಿಚಾರವಾಗಿ ಚಿಂತಿಸಿದಾಗ ಮಾಯೆಯ ಆವರಣದಲ್ಲಿ ಮರೆಯಾಗಿ ಸುಷುಪ್ತಾವಸ್ತೆಯಲ್ಲಿರುವ ತನ್ನ ಚೈತನ್ಯವನ್ನು ತಾನೇ ಪ್ರಯತ್ನಿಸಿದಲ್ಲಿ ಯೋಗದರ್ಶನ ಸಾಧ್ಯವಿಲ್ಲವೇ? ಸಾಧ್ಯವಿದೆ ಎಂದು ಕಂಡುಹಿಡಿದ, ಅದೇ ಷಟ್ಚಕ್ರ ಸಿದ್ಧಾಂತ. ಅದರಲ್ಲಿ ಮೂಲಾಧಾರವೇ ಆದಿ ಮಾಯಾಸ್ಥಾನ, ಸಹಸ್ರಾರವೇ ಅಂತ್ಯ ಯೋಗಸ್ಥಾನ ಎಂದು ಗುರುತಿಸಲ್ಪಡುವ ಸ್ಥಳ. ಹಾಗಿದ್ದರೆ ಮೂಲಾಧಾರದಲ್ಲಿ ಮಾಯೆಯಿಂದ ಆವರಿಸಲ್ಪಟ್ಟ ಯೋಗ ಅಥವಾ ತನ್ನ ಮೂಲ ಚೈತನ್ಯವನ್ನು ಎಚ್ಚರಿಸುವದು ಹೇಗೆ? ಎಂದು ಚಿಂತಿಸಿದ. ಅದಕ್ಕೆ ಸಂಬಂಧಪಟ್ಟು ಈ ಹಿಂದೆ ಹೇಳಿದ ಅಷ್ಟಾಂಗ ಯೋಗವನ್ನು ತನ್ನ ದೇಹಕ್ಕೆ ಹೊಂದಿಸಿ ಯಮನಿಯಮಾಸನಗಳಿಂದ ಸಿದ್ಧನಾಗಿ ಪ್ರಾಣಾಯಾಮಪೂರ್ವಕ ಕುಂಡಲಿನೀ ಸ್ವರೂಪದ ಚೈತನ್ಯವನ್ನು ಉದ್ದೀಪನಗೊಳಿಸಿ ಸುಷುಮ್ನಾ ನಾಡಿಯ ಮೂಲಕ ಯೋಗವನ್ನು ತಂದು ಸಹಸ್ರಾರದಲ್ಲಿ ನೆಲೆಗೊಳಿಸಬಹುದು ಎಂದು ಕಂಡುಕೊಂಡು ಮತ್ತು ಪರಿಪೂರ್ಣವಾದ ಚೈತನ್ಯವನ್ನು ತಾನು ಪಡೆಯಲು ಸಾಧ್ಯ ಎಂದು ತಿಳಿದ. ಅದೇ ಷಟ್ಚಕ್ರ ಸ್ಥಾನವನ್ನು ಗುರುತಿಸಿ ಅಲ್ಲಲ್ಲಿಗೆ ಬೇರೆ ಬೇರೆ ಹೆಸರಿನಿಂದ ಸ್ಥಾನ ಗುರುತಿಸಿದ. ಅದರಲ್ಲಿ ಕೊನೆಯದಾದ ಸಹಸ್ರಾರ ಚಕ್ರವೇ ಜ್ಞಾನಚಕ್ರ. ಹಾಗಾಗಿ ಜ್ಞಾನದ ಇನ್ನೊಂದು ಸಮಾನ ಪದ "ಶ್ರೀ". ಶ್ರೀ ಶಬ್ದಕ್ಕೆ ಜ್ಞಾನವೆಂದು ಅರ್ಥವಿದೆ, ಹಾಗಾಗಿ ಈ ರೀತಿಯ ಮಾರ್ಗಕ್ಕೆ ಶ್ರೀಚಕ್ರ ಎಂದರು. ಹಾಗಾಗಿ ಶ್ರೀವಿಧ್ಯೆ, ಶ್ರೀಚಕ್ರ ಎರಡೂ ತನ್ನತನವನ್ನು ಪ್ರತ್ಯೇಕವಾಗಿ ಸೂಚಿಸುವ, ಅಲ್ಲದೆ ಶ್ರೀವಿಧ್ಯಾ ಮತ್ತು ಚಕ್ರವಿಧ್ಯಾ ಎಂದು ಪ್ರಾಚೀನ ಗ್ರಂಥಗಳಲ್ಲಿ ಪ್ರತ್ಯೇಕವಾಗಿ ಹೆಸರಿಸಲ್ಪಟ್ಟ ಎರಡು ಪ್ರಾಕಾರಗಳು.

ಮೊದಲನೆಯ ಶ್ರೀವಿಧ್ಯೆಗೆ ಚಕ್ರ ಎಂಬ ಅರ್ಥದಲ್ಲಿ ಹೇಳಿದಿದ್ದರೆ ಅದು ಪ್ರಾಪಂಚಿಕ ಚಕ್ರ. ಸೃಷ್ಟಿ, ಸ್ಥಿತಿ, ಲಯ, ಪುನಃ ಸೃಷ್ಟಿ, ಅದರೊಂದಿಗೆ ನಿರಂತರ ಚೈತನ್ಯದ ಆಟ - ಇದನ್ನು ಸೂಚಿಸುವ ಚಕ್ರ. ಅದಕ್ಕೇ ಆಚಾರ್ಯರು


"ಪುನರಪಿ ಜನನಂ, ಪುನರಪಿ ಮರಣಂ,
ಪುನರಪಿ ಜನನೀ ಜಠರೇ ಶಯನಂ"

ಎಂದರು; ಇದೇ ಚಕ್ರ. ಈ ಚಕ್ರವನ್ನು ಅರ್ಥೈಸಿಕೊಂಡರೆ ಅಲ್ಲಿ ನಿಮ್ಮ ಪಾತ್ರವನ್ನು ನೀವು ಕ್ರಮಬದ್ಧವಾಗಿ ನೆರವೇರಿಸಿದರೆ ನೀವೇ ಪರಿಪೂರ್ಣರು ಎಂದು ಅರ್ಥ. ಅಂದರೆ, ಪ್ರಾಪಂಚಿಕ ಜೀವನ ಕರ್ತವ್ಯಗಳಿಂದ ವಿಮುಖನಾಗಿ ಪಲಾಯನ ಮಾಡಬಾರದು ಎಂದು ಅರ್ಥ. ಪ್ರಾಪಂಚಿಕದಲ್ಲಿಯೇ ತಾವರೆ ಎಲೆಯ ಮೇಲಿನ ನೀರಿನಂತೆ ಪ್ರಾಪಂಚಿಕಕ್ಕೆ ಅಂಟದಂತಿರುವುದೇ ನಿಜವಾದ ಯೋಗಿಯ ಲಕ್ಷಣ. ಇಲ್ಲಿಗೆ ಸತ್ಯವಾದ ಶ್ರೀವಿಧ್ಯಾ ಮತ್ತು ಚಕ್ರವಿಧ್ಯಾ ಸ್ವರೂಪ ತಿಳಿಸಿರುತ್ತೇನೆ. ಇಲ್ಲಿಂದ ಮುಂದೆ ಈಗಿನ ವಿವಾದಗ್ರಸ್ತವಾದ ತತ್ಕಾಲದ ಶ್ರೀಚಕ್ರ ಮತ್ತು ಉಪಾಸನೆ ಮತ್ತು ಯಂತ್ರವಿಚಾರವಾಗಿ ಹೇಳುತ್ತೇನೆ. ಈ ಹಿಂದೆ ಹೇಳಿರುವ ಎಲ್ಲಾ ವಿಚಾರವೂ ಕೂಡ ವೇದಮಾನ್ಯತೆ ಇರುವಂತಹದ್ದು. ಮಾನವನಾಗಿ ಬದುಕಲು ಬೇಕಾದ ಮಾರ್ಗದರ್ಶಕವಾಗಿ ಇರುತ್ತದೆ. ಆದರೆ, ಸಮಕಾಲೀನ ಆಷಾಢಭೂತಿಗಳ ಕೈಗೆ ಸಿಕ್ಕಿದ ನಮ್ಮ ವೇದ ಕಾಲದ ವಿಧ್ಯೆಗೆ ನಾನಾ ಅರ್ಥ ಕಲ್ಪಿಸಿ, ವಿರೂಪಗೊಳಿಸಿ ಕಾಗೆ ಬಂಗಾರವನ್ನೇ ನಿಜವಾದ ಬಂಗಾರ ಎಂದು ಹೇಳುವ ಮಟ್ಟಿಗೆ ಮುಂದುವರೆದಿದೆ. ನಿಜವಾದ ಬಂಗಾರ ಅದೃಶ್ಯವಾಗಿದೆ.

(ಸಶೇಷ..)
ಕೆ. ಎಸ್. ನಿತ್ಯಾನಂದ,
ಪೂರ್ವೋತ್ತರ ಮೀಮಾಂಸಕರು,

ವೇದ-ವಿಜ್ಞಾನ ಮಂದಿರ, ಚಿಕ್ಕಮಗಳೂರು

(ಋತ್ವಿಕ್ ವಾಣಿ ಪತ್ರಿಕೆ - ಫೆಬ್ರವರಿ ೧೯೯೯)

        

ಶ್ರೀ ಚಕ್ರ, ಶ್ರೀ ವಿಧ್ಯೆ - ೪ : ಯಂತ್ರ, ಮಂತ್ರ, ತಂತ್ರಗಳ ನೈಜ ಸೂತ್ರ ಏನು? ಪ್ರಸಕ್ತ ಕೃತಕ ಪ್ರಕಟಣೆಗಳ ವಂಚನೆ ಎಷ್ಟು?

(ಋತ್ವಿಕ್ ವಾಣಿ ಪತ್ರಿಕೆ - ಫೆಬ್ರವರಿ ೧೯೯೯)

[ಸೂಚನೆ:- ಈ ಲೇಖನವು ಶ್ರೀಚಕ್ರ, ಶ್ರೀವಿಧ್ಯಾ ಲೇಖನ ಸರಣಿಯ ಭಾಗ ಮಾತ್ರ. ಸಂಪೂರ್ಣವಾಗಿ ಅರ್ಥವಾಗಬೇಕಾದರೆ ಈ ಲೇಖನಮಾಲೆಯ ಹಿಂದಿನ ಲೇಖನಗಳನ್ನು ಹಲವಾರು ಭಾರಿ ಮುಕ್ತ ಮನಸ್ಸಿನಿಂದ ಓದಿ ಮನದಟ್ಟು ಮಾಡಿಕೊಂಡರೆ ಮಾತ್ರ ವಿಷಯದ ಗಹನತೆ ಅರ್ಥವಾದೀತು. ಹಾಗೇ ಈ ಲೇಖನ ಸರಣಿಯ ಮುಂದಿನ ಲೇಖನಗಳನ್ನು ಓದಿದರೆ ಮಾತ್ರ ಒಟ್ಟು ಸಾರಾಂಶವನ್ನು ಸಮಗ್ರವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯ. ಇವು ಹಲವು ಲೇಖನಗಳಲ್ಲ, ಒಂದೇ ಲೇಖನವನ್ನು ಬಿಡಿಯಾಗಿಸಿ ಪ್ರಕಟಿಸಲಾಗಿದೆಯಷ್ಟೆ.]

ಪ್ರಸಕ್ತ ಕಾಲದಲ್ಲಿ ಶ್ರೀ ವಿಧ್ಯಾ ಎಂದರೆ ಒಂದು ಶಕ್ತಿ ದೇವತೆಯ ಉಪಾಸನೆ ಎಂದು ಅರ್ಥೈಸಿದ್ದಾರೆ. ಅಲ್ಲದೆ ಅದಕ್ಕೆ ಒಂದು ಯಂತ್ರ ಸ್ವರೂಪ ಕೊಟ್ಟಿದ್ದಾರೆ ಮತ್ತು ಅದರ ಅಧಿದೇವತೆ ಲಲಿತೆಯೆಂದು ಸಾರಿದ್ದಾರೆ.
  • ಇದರಲ್ಲಿ ಎಷ್ಟು ಸತ್ಯವಿದೆ?
  • ಈ ವಿಧ್ಯೆ ನಿಜವಾದ ಅಷ್ಟಾಂಗ ಯೋಗಯುಕ್ತವಾದ ಶ್ರೀವಿಧ್ಯೆಯೇ?
  • ಅಥವಾ ಷಟ್ಚಕ್ರಾಧಾರಿತ ಚಕ್ರವಿಧ್ಯೆಯೇ?
  • ಲಲಿತೆ ಯಾರು?
  • ಅದರ ಸ್ವರೂಪ ಏನು?
  • ಪ್ರಕಟಿತ ಗ್ರಂಥಗಳು ಏನು ಹೇಳುತ್ತವೆ?
  • ಅವು ವೇದಮಾನ್ಯವೇ ಅಥವಾ ಕಲ್ಪಿತವೇ?
  • ಇದು ಮೋಕ್ಷ ಸಾಧನ ಹೌದೇ?
  • ಈ ರೀತಿಯ ಕೋನ ರೂಪದ ಯಂತ್ರವು ಅಷ್ಟೈಶ್ವರ್ಯ ಸಾಧಕವಾಗಲು ಸಾಧ್ಯವೇ?
  • ಭೋಗವು, ಮೋಕ್ಷವು ಏಕ ಎಂದು ಹೇಳುವ ಈ ಸೂತ್ರಕಾರರು ಜನರನ್ನು ವಂಚಿಸುತ್ತಿದ್ದಾರೆಯೇ?

ಈ ವಿಚಾರವಾಗಿ ಚಿಂತಿಸೋಣ. ಮುಖ್ಯವಾಗಿ ಪ್ರಚಲಿತವಿರುವ ಶ್ರೀಚಕ್ರ, ಇದರ ಸ್ವರೂಪ ಈ ರೀತಿ ಇದೆ:-

|| ಬಿಂದು ತ್ರಿಕೋಣ ವಸುಕೋಣ ದಶಾರಯುಗ್ಮಂ
ಅನ್ವಶ್ಚ ನಾಗದಲ ಸಂಯುತ ಷೋಡಶಾರಂ ||

ಹೀಗೆ ರಚನಾ ಸೂತ್ರದಂತೆ ಶ್ರೀಯಂತ್ರ ಎಂದು ಹೇಳುತ್ತಾರೆ. ಇದು ಯಾವ ಯಂತ್ರ? ಮಂತ್ರ ಮಹಾರ್ಣವ, ಮಂತ್ರ ಮಹೋದಧಿ, ಶಾಕ್ತಪ್ರಮೋದ, ಪ್ರಪಂಚಸಾರ, ಯಂತ್ರ ಮಾತೃಕಾ, ತಾಂತ್ರಿಕಾಖ್ಯಾಯಿಕಾ, ಲಕ್ಷಣಸಂಹಿತಾ, ತಂತ್ರ ಸೂತ್ರ ದರ್ಶನ, ಯೋಗ ಪ್ರದೀಪ ಇತ್ಯಾದಿ ಗ್ರಂಥಗಳಲ್ಲೂ ಕೆಲವು ಶ್ರೀಚಕ್ರ ಎಂದು ಹೇಳುವ ಯಂತ್ರದ ಬಗ್ಗೆ ವಿವರಣೆ ಇದೆ. ಅಲ್ಲೆಲ್ಲಾ ಪರಸ್ಪರ ವಿರುದ್ಧಾತ್ಮಕವಾದ ಯಂತ್ರಸ್ವರೂಪ ಕಂಡು ಬರುತ್ತದೆ. ಈ ರೀತಿಯ ಅಭಿಪ್ರಾಯ ಭೇದಗಳಿಗೆ ಕಾರಣವೇನು? ಎಂದು ಚಿಂತಿಸುವುದು ತಪ್ಪೇ? ಹಾಗೆ ಮೇಲೆ ಉದಾಹರಿಸಿದ ಅಲ್ಲದೇ ಇನ್ನೂ ಹಲವಾರು ಗ್ರಂಥಗಳಲ್ಲಿ ಕೂಡ ಈ ವಿಚಾರ ಉಲ್ಲೇಖವಿದೆ. ಈ ಗ್ರಂಥಗಳ ಬಗ್ಗೆ ಅನುಮಾನ ಪಡಬೇಕು, ಏಕೆಂದರೆ ಒಂದಕ್ಕೊಂದು ವಿರುದ್ಧವಾದ ಅಭಿಪ್ರಾಯ ಮಂಡಿಸುವ ಈ ಗ್ರಂಥಗಳ ಉದ್ದೇಶವೇನು? ಆಶ್ಚರ್ಯವಾಗುತ್ತಿದೆ ಅಲ್ಲವೇ? ಖಂಡಿತಾ ಹೌದು. ಆ ಗ್ರಂಥಗಳೂ ಕೂಡ ಅನ್ವೇಷಕಗಳೇ. ಅವುಗಳಿಗೂ ಕೂಡ ಪೂರ್ಣ ವಿವರ ಸಿಗದ ಅಪೂರ್ಣ ಗ್ರಂಥಗಳು; ಅವು ದಾರಿ ತಪ್ಪಿಸಿವೆ. ಇದಕ್ಕೆ ಹಿನ್ನೆಲೆಯಾದ ಈ ಪ್ರಚಲಿತವಿರುವ ಈ ಯಂತ್ರ ಯಾವುದು? ಇದರ ಹಿನ್ನೆಲೆ ಏನು? ಇದರಲ್ಲಿ ಆರೋಪಿಸಿದ ದೇವತೆಯ ಸತ್ಯತೆ ಏನು? ಈ ಬಗ್ಗೆ ತಿಳಿಯುವ ಕುತೂಹಲ ಸಹಜವಲ್ಲವೇ? ಕುತೂಹಲ ಅಪರಾಧವಲ್ಲ. ಹಾಗೇ, ಲಭ್ಯ ಗ್ರಂಥಗಳಿಂದ ಸಿಕ್ಕ ಆಧಾರಗಳನ್ನೇ ಕ್ರೋಢೀಕರಿಸಿದಲ್ಲಿ, ಅವುಗಳಲ್ಲಿ ಅಲ್ಲಲ್ಲಿ ಸಿಗುವ ಕೆಲ ವಿಚಾರಗಳನ್ನು ಅಂದರೆ ಒಂದಕ್ಕೊಂದು ಪೂರಕ ವಿಚಾರವನ್ನು ಮಾತ್ರ ಸಂಗ್ರಹಿಸಿದಲ್ಲಿ ಆಗ ನಿಮಗೆ ಅರ್ಥವಾಗುತ್ತದೆ.

ಉದಾಹರಣೆಗೆ ಯಂತ್ರ ಮತ್ತು ತಂತ್ರ ಶಾಸ್ತ್ರ ವಿಚಾರ ತೆಗೆದುಕೊಳ್ಳಿ. ಈ ವಿಚಾರವಾಗಿ ಸಮಗ್ರ ಪರಿಚಯ ಇಲ್ಲಿ ಸಾಧ್ಯವಿಲ್ಲ. ಆದರೆ ಸ್ಥೂಲ ಪರಿಚಯ ಮಾಡಿಕೊಡುತ್ತೇನೆ. ಮಂತ್ರವೊಂದರ ಸಾಮರ್ಥ್ಯವನ್ನು ಕಾರ್ಯ ರೂಪಕ್ಕೆ ತರಲು ಯಂತ್ರ ಬೇಕು. ಅದೊಂದು ಸಾಧನ ಮಾತ್ರವಷ್ಟೆ. ಅದನ್ನು ಹೇಗೆ ತರಲು ಸಾಧ್ಯವೆಂದು ಹೇಳುವುದು ತಂತ್ರ. ಆದ್ದರಿಂದ ಮಂತ್ರ ಯಂತ್ರಗಳ ಕೊಂಡಿ ತಂತ್ರವಾಯ್ತು. ಹಾಗಿದ್ದಾಗ ಎರಡೂ ಕಡೆಯ ಹೊಂದಾಣಿಕೆ ಸಹಕಾರಿಯಾದ ಸೂತ್ರವನ್ನು ರೂಪಿಸಿರುವುದೇ ತಂತ್ರ. ತಂತ್ರಕ್ಕೆ ಅದರದ್ದೇ ಆದ ಒಂದು ಸೂತ್ರ ನಿಯಮವಿದೆ. ಆ ಸೂತ್ರ ಹೊರತು ಪಡಿಸಿದ ತಂತ್ರವಿಲ್ಲ.
ಉದಾಹರಣೆ ೧:- ಸೂತ್ರ ನಿಯಮ ಪ್ರಕಾರ ದೋಣಿ: ಇದು ನೀರಿನಲ್ಲಿ ತಾನು ತೇಲುವುದಲ್ಲದೆ ತನ್ನ ಶಕ್ತಿಗೆ ಹೊಂದಿಕೊಂಡು ಕೆಲ ತೂಕದ ಸಾಮಗ್ರಿಗಳನ್ನೂ ನೀರಿನಲ್ಲಿ ತೇಲಿಕೊಂಡು ಸಾಗಿಸಬಲ್ಲದು. ಆದರೆ ದೋಣಿ ತಯಾರಿಕೆಯ ನಿಯಮ ವಿರುದ್ಧವಾಗಿ ತಯಾರಿಸಿದಲ್ಲಿ ತಾನೂ ಮುಳುಗುತ್ತದೆ, ಹೇರನ್ನೂ ಮುಳುಗಿಸುತ್ತದೆ. ಆದ್ದರಿಂದ ತಂತ್ರ ಬದ್ಧವಾದ ದೋಣಿ ತಯಾರಿಕಾ ವಿಧಾನದಂತೆ ದೋಣಿ ತಯಾರಿಸಿದಲ್ಲಿ ಮಾತ್ರ ಯಾನಕ್ಕೆ ಅರ್ಹವಾಗುತ್ತದೆ ಮತ್ತು ಅದು ಯಂತ್ರವೆಂಬ ಹೆಸರು ಪಡೆಯುತ್ತದೆ. ಇಲ್ಲವಾದಲ್ಲಿ ಅದು ಉಪಯೋಗಕ್ಕೆ ಬರಲಿಕ್ಕಿಲ್ಲ. ಕಾಗದದಿಂದಲೋ ಅಥವಾ ನೀರಿನಲ್ಲಿ ನೆನೆಯುವ ಅಥವಾ ಮುಳುಗುವ ವಸ್ತುಗಳಿಂದಲೋ ದೋಣಿ ತಯಾರಿಸಲು ಸಾಧ್ಯವೇ? ತಯಾರಿಸಿದರೂ ಉಪಯುಕ್ತವೇ? ಖಂಡಿತಾ ಇಲ್ಲ. ಆಗ ತಂತ್ರ ಶಾಸ್ತ್ರ ನಿರ್ಬಂಧಿಸುತ್ತದೆ; ಅದು ಸರಿಯಲ್ಲವೆಂದು ಹೇಳುತ್ತದೆ.

ಉದಾಹರಣೆ ೨:- ಹಾಗೆಯೇ ಭೂಚರಿ ಯಂತ್ರ - ಕಾರು ಎಂದಿಟ್ಟುಕೊಳ್ಳಿ. ಅದಕ್ಕೆ ಚಲನೆಗೆ ಚಕ್ರವೇ ಪ್ರಧಾನ. ಚಕ್ರಕ್ಕೆ ಶಕ್ತಿಯು ಪೂರಕವಾದರೆ ಉರುಳುತ್ತದೆ. ಇದು ತಂತ್ರಶಾಸ್ತ್ರದ ರೀತಿಯ ಸುಲಭ ಯಂತ್ರ ವಿಧಾನ. ಹಾಗೆಂದು ಈ ವಿಧಾನ ಬಿಟ್ಟು ಬೇರೆ ಏನೋ ರೀತಿಯಲ್ಲಿ ಯಂತ್ರ ರೂಪಿಸಿದಲ್ಲಿ ಅದು ಚಲಿಸಲು ಸಾಧ್ಯವೇ? ಆಲೋಚಿಸಿ.

ಉದಾಹರಣೆ ೩:- ಆಕಾಶದಲ್ಲಿ ಹಾರುವುದಕ್ಕೆ ಅದರದ್ದೇ ಆದ ನಿಯಮವಿರಬೇಕು. ಗಾಳಿಯ ಒತ್ತಡವು ತೂಕದ ಪ್ರಮಾಣಕ್ಕಿಂತ; ಅಂದರೆ ಆಧುನಿಕ ಮಾನದಲ್ಲಿ ಗುರುತ್ವಾಕರ್ಷಣ ಶಕ್ತಿಗೆ ಚಲನೆಕೊಡುವ ಹಂತಕ್ಕೆ ತಲುಪಿದಾಗ ಮನುಷ್ಯ ಹಾರಬಲ್ಲ. ಹಾರುವ ಬಲವೂ, ಗಾಳಿಯ ಒತ್ತಡವೂ ಸಮಾನವಾದರೆ ಗಾಳಿಯು ಯಾವ ಮುಖಕ್ಕೆ ಒತ್ತಡವನ್ನು ಹುಟ್ಟಿಸುತ್ತದೆಯೋ ಅದರಂತೆ ಹಾರಬಲ್ಲ; ಹಾಗಿಲ್ಲದಿದ್ದಲ್ಲಿ ಹಾರಲಾರ. ಅದು ತಂತ್ರ ನಿಬಂಧನೆಯಂತೆಯೇ ಇರುತ್ತದೆ.

ಉದಾಹರಣೆ ೪:- ಮನುಷ್ಯ ಅಡುಗೆ ಮಾಡುವುದು, ನಡೆದಾಡುವುದು ಅಥವಾ ಇನ್ಯಾವುದೇ ಕೆಲಸ ಮಾಡುವುದೂ ಕೂಡಾ ಯಾವುದೇ ಒಂದು ತಂತ್ರ ನಿಬಂಧನೆಗೆ ಒಳಪಟ್ಟಿರುತ್ತದೆ.

ಇವೆಲ್ಲಾ ಬಾಹ್ಯ ದೃಗ್ಗೋಚರವಾದ ತಂತ್ರಗಳು. ತಂತ್ರವು ಇಷ್ಟೇ ಅಲ್ಲ. ಇನ್ನು ಹೆಚ್ಚಿನ ಅಗೋಚರ ಶಕ್ತಿಯ ಕಾರ್ಯವನ್ನು ಮಾಡುವ ಸೂತ್ರಗಳನ್ನು ಹೇಳಿದೆ. ಅದೇ ಈಗ ಬಳಕೆಯಲ್ಲಿರುವ ಸಾವಿರಾರು ಯಂತ್ರಗಳು. ಅವು ಯಾವ ಲೋಹದ ಹಾಳೆಯ ಮೇಲೆ ಅಥವಾ ಮರದ ತೊಗಟೆ ಅಥವಾ ವರ್ಣಸಂಯೋಜಿತ ಚಿತ್ರ ಪಟಗಳು ಅಥವಾ ಪ್ರತಿಮಾ ಸ್ವರೂಪಗಳಾಗಿರಬಹುದು. ಅಂದಾಜು ತಂತ್ರ ಶಾಸ್ತ್ರದಲ್ಲಿ ೧೦,೦೦೦ ಯಂತ್ರಗಳಿವೆ. ಅವುಗಳು ಹೇಗೆ ಕೆಲಸ ಮಾಡುತ್ತವೆ? ಅದು ಸಾಧ್ಯವೇ? ನೋಡೋಣ. ಯಂತ್ರಗಳು ಎಂದಾಗ ಮುಖ್ಯವಾಗಿ ಜಲಚರಿ, ಭೂಚರಿ, ಖೇಚರಿ ಯಂತ್ರಗಳು; ಇವು ಸಾಮಾನ್ಯ ಯಂತ್ರಗಳು. ಅವುಗಳಿಗೆ ಸ್ವರೂಪಗಳು ಇರುತ್ತವೆ. ಅವು ಆ ರೂಪಕ್ಕೆ ಬದ್ಧವಾಗಿರಬೇಕು. ಅಗೋಚರವಾಗಿ ಕೆಲಸ ಮಾಡುವ ಯಂತ್ರಗಳ ವಿಚಾರ ಮಾತ್ರಾ ಈಗ ಹೇಳುತ್ತೇನೆ.

ಈ ರೀತಿಯ ಯಂತ್ರಗಳು ಕೆಲ ರೇಖಾ ವಿನ್ಯಾಸದಲ್ಲಿರುತ್ತವೆ. ಅವಕ್ಕೆ ಸೀಮಿತ ಅಳತೆ, ಸೀಮಿತ ಕೋನ ಅಥವಾ ವೃತ್ತಗಳಿರುತ್ತವೆ. ದಳಾಕಾರದಲ್ಲೂ ಇರಬಹುದು. ಆದರೆ ಮೂಲವಾಗಿ ಆದಿ ತ್ರಿಕೋಣದಿಂದ ಆರಂಭಿಸಿ ಚತುಷಷ್ಠಿ ಕೋಣದವರೆಗೆ ಈ ಯಂತ್ರದ ಸ್ವರೂಪವಿರುತ್ತದೆ. ಆದರೆ ಆ ಕೋಣಗಳಿಗೆ ಒಂದು ಶಾಸ್ತ್ರಬದ್ಧವಾದ ನಿಯಮವಿದೆ. ಇನ್ನು ವೃತ್ತಗಳು - ಒಂದರಿಂದ ಇಪ್ಪತ್ನಾಲ್ಕರವರೆಗೆ ವೃತ್ತಗಳ ಸಂಯೋಜನೆ ಇದೆ. ವೃತ್ತಗಳಲ್ಲೂ ಕೂಡಾ ದೀರ್ಘ ವೃತ್ತಗಳೂ, ಅಂಡಾಕಾರ ವೃತ್ತಗಳೂ ಕೂಡಾ ಇವೆ. ಅಣುವಿನ ಸಂಯೋಜನೆಯಲ್ಲಿ ಎಲೆಕ್ಟ್ರಾನ್, ನ್ಯೂಟ್ರಾನ್‍ಗಳ ಪ್ರವಾಹವು ಅಣುವಿನ ಸಂಯೋಜನಾ ವಿಧಾನದಂತೆ ಹೇಗೆ ದೀರ್ಘ ಲಂಬ ಗೋಲವಾಗಿ ಕಂಡು ಬರುತ್ತದೋ, ಭೂಚಲನೆಯಲ್ಲಿ ಹೇಗೆ ವೃತ್ತ ಗುರುತಿಸಲ್ಪಟ್ಟಿದೆಯೋ, ಹಾಗೇ ವೃತ್ತ ಸಂಯೋಜನೆ ಮತ್ತು ದಳಾಕಾರ ಪತ್ರಾಕಾರದಲ್ಲಲ್ಲದೆ ಇನ್ನೂ ಕೆಲ ಆಕಾರದ ಸಂಯೋಜನೆ ಕೂಡಾ ಈ ವಿಧಾನದ ರೇಖಾ ವಿನ್ಯಾಸದಲ್ಲಿದೆ. ಅಲ್ಲಿ ಮುಖ್ಯವಾಗಿ ತಂತ್ರ ಶಾಸ್ತ್ರ ನಿಬಂಧನೆಗೊಳಿಸಲ್ಪಟ್ಟಿರುತ್ತದೆ. ಇದು ಯಂತ್ರದ ಸ್ವರೂಪವಾಯ್ತು.

ಆದರೆ ಯಂತ್ರದ ಚಲನೆಗೆ ಅಥವಾ ಕಾರ್ಯವೈಖರಿಗೆ ಒಮ್ದು ಶಕ್ತಿಯ ಪೂರೈಕೆ ಅಗತ್ಯವೇ ತಾನೇ? ಈ ರೀತಿಯ ಯಂತ್ರಕ್ಕೆ ಶಕ್ತಿಯ ಪೂರೈಕೆ ಎಲ್ಲಿಂದ? ಇದು ಕೆಲಸ ಮಾಡುವ ವಿಧಾನ ಹೇಗೆ? ಸಾಮಾನ್ಯ ಯಂತ್ರಗಳಿಗೆ ಇಂಧನ ಎಂಬ ಯಾವುದು ಶಕ್ತಿ ಮೂಲವಿರುತ್ತದೆಯೋ ಹಾಗೇ ಈ ಯಂತ್ರಗಳಿಗೆ ಮಂತ್ರವೆಂಬ ಶಕ್ತಿ ಮೂಲವಿರುತ್ತದೆ. ಮಂತ್ರವನ್ನು ಉಚ್ಚಾರಣಾ ವಿಧಾನದಂತೆ ಉಚ್ಚರಿಸಿದಾಗ ಅದರಿಂದ ಹೊರಡತಕ್ಕ ನಾದ ತರಂಗವೇ ಅದಕ್ಕೆ ಶಕ್ತಿಮೂಲ ಅಥವಾ ಅದೇ ಮಂತ್ರವು ಬೀಜರೂಪವಾದ ಬೀಜಾಕ್ಷರಗಳನ್ನು ಅದರಲ್ಲಿ ಲೇಖಿಸಿದಾಗ ನಿರಂತರವಾಗಿ ಅದರಿಂದ ಶಕ್ತಿ ಪೂರೈಕೆಯಾಗುತ್ತದೆ. ಮುಖ್ಯವಾಗಿ ಈ ರೀತಿಯ ಯಂತ್ರಗಳಲ್ಲಿ ಎರಡು ವಿಧವಿರುತ್ತದೆ. ಒಂದು ಕಿರಣ, ಅಂದರೆ ಬೆಳಕಿನ ಪ್ರತಿಫಲನ ಹೊಂದಿ ಕಿರಣವು ವಿಭಜಿಸಿ ವೃದ್ಧಿ ಹೊಂದುತ್ತಾ ಶಕ್ತಿ ರೂಪವಾಗಿ ಪರಿವರ್ತನೆ ಹೊಂದಿ ಕಾರ್ಯ ಸಾಧಿಸುತ್ತದೆ. ಇನ್ನೊಂದು ನಾದ ಸ್ವರೂಪವಾದ್ದು, ಶಬ್ದ ತರಂಗಗಳನ್ನು ಸೃಷ್ಟಿಸಿ ಸೂಕ್ಷ್ಮಾತಿಸೂಕ್ಷ್ಮ ತರಂಗ ರೂಪದಲ್ಲಿ ತನ್ನ ಶಕ್ತಿ ವೃದ್ಧಿಸಿಕೊಂಡು ಕಾರ್ಯ ಸಾಧಿಸುತ್ತದೆ.

ಈ ಎರಡು ಬಗೆಯಲ್ಲದೇ ಬೇರೇ ರೀತಿಯ ಅಗೋಚರ ಯಂತ್ರಗಳಿಲ್ಲ. ಈ ಎರಡು ಎಂದರೆ, ಕಿರಣ ಪ್ರಧಾನ ಯಂತ್ರ ಮತ್ತು ಶಬ್ದ ಪ್ರಧಾನ ಯಂತ್ರ. ಇವೆರಡೂ ಪ್ರತ್ಯೇಕವಾದ ತಂತ್ರಶಾಸ್ತ್ರ ನಿಬಂಧನೆಗೊಳಪಟ್ಟಿರುತ್ತದೆ. ಅದು ಕಿರಣ ವಿಭಜನೆಯ ಸೂತ್ರದಂತೆ ಮತ್ತು ಪರಸ್ಪರ ಪೂರಕವಾಗಿರುತ್ತದೆ. ನಾದ ಸ್ವರೂಪದ ಯಂತ್ರವು ನಾದ ಮತ್ತು ತರಂಗ ನಿಯಮಕ್ಕೆ ಒಳಪಟ್ಟಿರುತ್ತದೆ. ಇದಕ್ಕೆ ವಿರುದ್ಧವಾದಲ್ಲಿ ಅವು ಕೆಲಸ ಮಾಡಲಾರವು. ತಂತ್ರಶಾಸ್ತ್ರವು ಈ ಸೂತ್ರವನ್ನು ನಿಖರವಾಗಿ ತಿಳಿಸಿರುತ್ತದೆ. ಇನ್ನು ಶಕ್ತಿಯ ಪೂರೈಕೆಗೆ ಒಂದು ಮಂತ್ರವೋ ಅಥವಾ ಬೀಜಾಕ್ಷರ ವೋ ಇರುತ್ತದೆ ಎಂದು ಹೇಳಿದೆನಲ್ಲ, ಅದರ ರಹಸ್ಯವನ್ನು ತಿಳಿಸುತ್ತೇನೆ.

ಮಂತ್ರವೆಂದಾಗ ವೇದ, ಬ್ರಾಹ್ಮಣ, ಅರಣ್ಯಕಗಳಲ್ಲಿ ಇರದ ಯಾವುದೇ ಬೇರೆ ಮಂತ್ರವಿಲ್ಲ. ಆ ಮಂತ್ರಗಳ ಉಚ್ಚಾರಣಾ ವ್ಯತ್ಯಾಸದಿಂದ ಮಂತ್ರಗಳು ಬೇರೆ ಬೇರೆ ರೀತಿಯಲ್ಲಿ ಬಳಸಬಹುದು. ಸಾಮಾನ್ಯವಾಗಿ ಋಗ್ವೇದದಲ್ಲಿರುವ ಹೆಚ್ಚಿನ ಮಂತ್ರವೇ ಉಳಿದ ವೇದಗಳಲ್ಲಿ ಕೆಲ ವ್ಯತ್ಯಾಸಗಳಿಂದ ಕಂಡುಬರುತ್ತದೆ. ಹಾಗಿದ್ದಾಗ ವೇದಗಳೆಲ್ಲಾ ಸಮಾನವೆಂದಾಯ್ತು. ಹೇಳುವ ಧಾಟಿ ವ್ಯತ್ಯಾಸದಿಂದ ಮಂತ್ರವು ಬೇರೆ ಬೇರೆ ಕೆಲಸ ಮಾಡಲು ಸಾಧ್ಯ. ಹೇಗೆ ಎಂದರೆ, ಋಗ್ವೇದವು ಸ್ತುತಿ ಪ್ರಧಾನವಾದ ಮಂತ್ರ ಭಾಗವಾದರೆ ಯಜುರ್ವೇದವು ಯಜ್ಞ ಯಾಗಾದಿಗಳ ಸ್ವರೂಪ ವಿಧಾನವನ್ನು ಪ್ರಧಾನವಾಗಿ ತಿಳಿಸುತ್ತದೆ. ಹಾಗಾಗಿ ಸಾಮವು ಸಂಗೀತ ಪ್ರಧಾನವಾಗಿ ರಂಜನೀಯವಾಗಿ ದೇವತಾ ಕಾರ್ಯ ಸಾಧ್ಯಗೊಳಿಸುತ್ತದೆ.

ಇಲ್ಲಿ ಮುಖ್ಯವಾಗಿದ್ದು ಈ ಮೂರು ವೇದಗಳಲ್ಲಿ ಅಥರ್ವ ವೇದ, ಅಂದರೆ ನಾಲ್ಕನೆಯದಾಗಿ ಮಹರ್ಷಿ ವೇದವ್ಯಾಸರಿಂದ ವಿಭಜಿಸಲ್ಪಟ್ಟಿದ್ದು ಎಂದು ಗುರುತಿಸಲ್ಪಟ್ಟ ಭಾಗ. ಇದು ಅರ್ಥ ವೇದ ಎಂದು ಕೂಡಾ ಬಳಕೆಯಲ್ಲಿದೆ. ಈ ಭಾಗದ ಮಂತ್ರಗಳು ಈಗಿನ ಋಗ್ಯಜುಃಸ್ಸಾಮದಲ್ಲಿರುವ ಮಂತ್ರಗಳೇ, ಆದರೆ ಅಲ್ಲಿ ಉಚ್ಚಾರಣಾ ವ್ಯತ್ಯಾಸದಿಂದಾಗಿ ಅದು ಪರಿಣಾಮಕಾರೀ ಶಕ್ತಿಯಾಗಿ ಅಥವಾ ಸ್ಫೋಟಕವಾಗಿ ಧ್ವಂಸಕ ರೂಪುಗೊಳ್ಳುತ್ತದೆ. ಅಥರ್ವದಲ್ಲಿ ಅಥರ್ವ ಶಾಖೋಕ್ತ ಮಂತ್ರಗಳು ಬಿಟ್ಟರೆ ಬೇರೆ ಮಂತ್ರಗಳಿಗೆ ದ್ವ್ಯಕ್ಷರೀ ಪದ್ಧತಿ, ತ್ರ್ಯಕ್ಷರೀ ಪದ್ಧತಿ, ಏಕಾಕ್ಷರೀ, ಪಂಚಾಕ್ಷರೀ, ಅಷ್ಟಾಕ್ಷರೀ, ಸಂಯುಕ್ತಾಕ್ಷರೀ, ಷಡಕ್ಷರೀ ಪದ್ಧತಿ, ಅರ್ಧಾಕ್ಷರಿ ಪದ್ಧತಿ, ಹೀಗೆ ಅನುಲೋಮ ವಿಲೋಮ ಗತಿ ವಿಧಾನಗಳೂ, ಉಚ್ಚಾರಣಾ ವ್ಯತ್ಯಾಸ ಉಂಟುಮಾಡಲು ಮತ್ತು ಆ ಮಂತ್ರಗಳ ಮೇಲೆ ಭಾರ ಹಾಕಲು; ಅಂದರೆ ಅಥರ್ವ ಮಂತ್ರೋಚ್ಚಾರಣೆಯು ಕೆಲ ಉದ್ದೇಶಗಳಿಗೆ ಮಂತ್ರಕ್ಕೆ ಪೀಡನ, ಮರ್ಧನ, ತಾಡನ, ಛೇದನ, ಮೋಹನ, ಮಂಥನಗಳೆಂಬ ಆರು ವಿಧ ಉಚ್ಚಾರಣಾ ವಿಧಾನವಿದೆ. ಈ ಮೇಲ್ಕಂಡ ವಿಧಾನಗಳಿಂದ ಮಂತ್ರಗಳನ್ನು ಉಪಯೋಗಿಸುವ ವಿಧಾನ ಬಳಕೆಯಲ್ಲಿದೆ. ಹಾಗಾಗಿ ಅಥರ್ವವು ಒಂದು ಮಡಿವಂತಿಕೆಯವರಿಗೆ ಭಯಾನಕವಾದ ಭಾಗವಾಗಿ ಕಂಡಿದ್ದರಲ್ಲಿ ಅಪರಾಧವಿಲ್ಲ. ಯಾವುದೇ ಒಂದು ಮಂತ್ರವನ್ನು ಸ್ತೋತ್ರರೂಪವಾಗಿಯೇ ಅಥವಾ ಗಾನರೂಪವಾಗಿ ಬಳಸಿದಲ್ಲಿ ಅಥವಾ ಬಳಸಿದಾಗ ಬೇಕಾದ ತಕ್ಕ ಶ್ರಮ ಮತ್ತು ಸಮಯ ಗಣಿಸಿದರೆ ಅದರಲ್ಲಿ ಶತಾಂಶದಲ್ಲಿ ಅಥರ್ವ ರೀತ್ಯಾ ಅದೇ ಮಂತ್ರವನ್ನು ಬಳಸಿದರೆ ಅದರ ನೂರು ಪಟ್ಟು ಕಾರ್ಯ ಸಾಧ್ಯವಾಗುತ್ತದೆ ಎಂದಾದರೆ; ಆ ಪೀಡನ, ಮರ್ಧನ, ತಾಡನ, ಛೇದನ, ಮೋಹನ, ಮಂಥನಗಳ ಮಹತ್ವ ನಿಮಗೆ ಅರಿವಾದೀತು. ಆ ರೀತಿಯ ಪಾಠಕ್ರಮದಂತೆ ಪಾಠವಾದವರಿಗೆ ಮಾತ್ರ ಈ ವಿಚಾರ ಅರ್ಥವಾದೀತು.

ಇಲ್ಲಿ ಮುಖ್ಯ ಉದ್ದೇಶವು ಧ್ವನಿ ತರಂಗ ಉತ್ಪಾದಿಸುವುದಾಗಿರುತ್ತದೆ. ಈ ರೀತಿಯ ವಿಶೇಷ ತಂತ್ರಜ್ಞಾನವು ಅಥರ್ವದಲ್ಲಿದೆ. ಆದರೆ, ಈ ವಿಚಾರ ತಿಳಿದ ನೀವು ತಕ್ಷಣ ಅಥರ್ವ ವೇದದಲ್ಲಿ ಹುಡುಕಿದರೆ ನಿಮಗೆ ಸುಲಭ ಸಾಧ್ಯವಾಗಬಾರದೆಂದು ಎಲ್ಲಾ ಕಡೆ ಹಂಚಿದ್ದಾರೆ. ಅದಕ್ಕೆ ಒಂದು ಮುಖ್ಯ ಸೂತ್ರವಿಟ್ಟಿರುತ್ತಾರೆ. ಯಾವುದೇ ಒಂದು ಯಂತ್ರ ವಿಚಾರ ತೆಗೆದುಕೊಳ್ಳಿ. ಅದರ ರಚನಾ ವಿಧಾನ ಮತ್ತು ಕಾರ್ಯಕುಶಲತೆ, ಸಾಮರ್ಥ್ಯ, ಅದಕ್ಕೆ ಶಕ್ತಿಯ ಪೂರೈಕೆ ಎಂಬ ನಾಲ್ಕು ವಿಭಾಗ ಮಾಡಿದ್ದಾರೆ. ಅದು ಬೇರೆ ಬೇರೆ ಶಾಖೆಯ ಸಂಹಿತೆಯಲ್ಲೋ, ಬ್ರಾಹ್ಮಣದಲ್ಲೋ ಸೇರಿಸಿದ್ದಾರೆ. ಏಕೆಂದರೆ, ಈ ರೀತಿಯ ಮಹಾಸ್ತ್ರಗಳು, ಮಹಾಶಕ್ತಿಗಳು ಸಾರ್ವಜನಿಕವಾಗಿ ಸುಲಭದಲ್ಲಿ ದೊರಕಿದಲ್ಲಿ ಅನಾಹುತವಾದೀತು ಎಂದು ಅರ್ಥ.


(ಸಶೇಷ..)

ಇಂತು ಸಜ್ಜನ ವಿಧೇಯ,
ಕೆ. ಎಸ್. ನಿತ್ಯಾನಂದ,
ಪೂರ್ವೋತ್ತರೀಯ ಮೀಮಾಂಸಕರು,
ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು

(ಋತ್ವಿಕ್ ವಾಣಿ ಪತ್ರಿಕೆ - ಫೆಬ್ರವರಿ ೧೯೯೯)

Sunday, 8 October 2017

ಶ್ರೀಚಕ್ರ, ಶ್ರೀವಿಧ್ಯೆ - ೨ : ಜ್ಯೋತಿಷ್ಯ, ವಾಸ್ತು, ವೈಧ್ಯ, ಆಗಮಿಕ, ತಾಂತ್ರಿಕರ ಸಾಮಾಜಿಕ ಬದ್ಧತೆ ಏನು?

(ಋತ್ವಿಕ್ ವಾಣಿ ಪತ್ರಿಕೆ - ಫೆಬ್ರವರಿ ೧೯೯೯)

[ಸೂಚನೆ:- ಈ ಲೇಖನವು ಶ್ರೀಚಕ್ರ, ಶ್ರೀವಿಧ್ಯಾ ಲೇಖನ ಸರಣಿಯ ಭಾಗ ಮಾತ್ರ. ಸಂಪೂರ್ಣವಾಗಿ ಅರ್ಥವಾಗಬೇಕಾದರೆ ಈ ಲೇಖನಮಾಲೆಯ ಹಿಂದಿನ ಲೇಖನಗಳನ್ನು ಹಲವಾರು ಭಾರಿ ಮುಕ್ತ ಮನಸ್ಸಿನಿಂದ ಓದಿ ಮನದಟ್ಟು ಮಾಡಿಕೊಂಡರೆ ಮಾತ್ರ ವಿಷಯದ ಗಹನತೆ ಅರ್ಥವಾದೀತು. ಹಾಗೇ ಈ ಲೇಖನ ಸರಣಿಯ ಮುಂದಿನ ಲೇಖನಗಳನ್ನು ಓದಿದರೆ ಮಾತ್ರ ಒಟ್ಟು ಸಾರಾಂಶವನ್ನು ಸಮಗ್ರವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯ. ಇವು ಹಲವು ಲೇಖನಗಳಲ್ಲ, ಒಂದೇ ಲೇಖನವನ್ನು ಬಿಡಿಯಾಗಿಸಿ ಪ್ರಕಟಿಸಲಾಗಿದೆಯಷ್ಟೆ.]

ಮಾನ್ಯರೇ,

ನಾನು ಇನ್ನು ಮುಂದೆ ತಿಳಿಸುವ ವಿಚಾರವು ಯಾವುದೇ ಕಾರಣಕ್ಕೆ ಪೂರ್ವಾಗ್ರಹ ಪೀಡಿತವಾಗಿರುವುದಿಲ್ಲ. ನಾನು ತಿಳಿದ ಮಟ್ಟಿಗೆ ನನ್ನ ಜೀವನ ಅನುಭವದಲ್ಲಿ ಕಂಡ ಸತ್ಯವಾಗಿರುತ್ತದೆ. ಅಲ್ಲದೇ ಈ ವಿಚಾರ ತಿಳಿಸುವಾಗ ಉದಾಹರಿಸುವ ವಿಚಾರ ಮತ್ತು ವ್ಯಕ್ತಿಗಳ ಮೇಲೆ ನನಗೆ ಯಾವುದೇ ದ್ವೇಷ, ಅಸೂಯೆಯೂ ಕೂಡಾ ಇರುವುದಿಲ್ಲ. ನಾನೊಬ್ಬ ಕಟ್ಟಾ ಧರ್ಮಾಭಿಮಾನಿಯೇ ವಿನಃ ದುರಭಿಮಾನಿಯಲ್ಲ. ನಾನು ಕಲಿತ ವಿಧ್ಯೆಯ ಮೇಲೆ ಪ್ರಮಾಣವಿಟ್ಟು ಹೇಳುತ್ತೇನೆ. ನನಗೆ ಯಾರ ಮೇಲೂ ದ್ವೇಷ ಸಾಧಿಸುವ ಅಥವಾ ಯಾರನ್ನೂ ಹೀಗೆಳೆಯುವ ಅಗತ್ಯವಿಲ್ಲ ಮತ್ತು ಯಾವುದೇ ಲಾಭವೂ ಇಲ್ಲ. ಯಾವ ಒತ್ತಡವೂ ನನ್ನ ಮೇಲಿರುವುದಿಲ್ಲ. ಪ್ರಪಂಚಕ್ಕೆ ಸತ್ಯ ಒಂದೇ ಎಂದು ಸಾರಿದ ಆಚಾರ್ಯ ಶಂಕರರ ಪಾದರೇಣುವನ್ನು ಅಪೇಕ್ಷಿಸುವ ಭಕ್ತಸಮುದಾಯದಲ್ಲಿ ನಾನೂ ಒಬ್ಬ. ಆಚಾರ್ಯರಿಂದ ಸ್ಥಾಪಿಸಲ್ಪಟ್ಟ ಅದ್ವೈತ ಪೀಠಗಳನ್ನು ನಾನು ಅನನ್ಯಭಾವದಿಂದ ಪೂಜಿಸುತ್ತೇನೆ, ಗೌರವಿಸುತ್ತೇನೆ.

        ಆದರೆ ಈಗ ಶಂಕರ ಭಗವತ್ಪಾದರ ಹೆಸರಿನಲ್ಲಿ ಸಾವಿರಾರು ಮಠಗಳು ಹುಟ್ಟಿಕೊಂಡಿವೆ. ಅವರ ಅನುಪಸ್ಥಿತಿಯನ್ನು ತಮ್ಮ ಲಾಭಕ್ಕಾಗಿ ಬಳಸುವ ಈ ಜನರನ್ನು ನಾನು ಉದ್ದೇಶಪೂರ್ವಕವಲ್ಲದಿದ್ದರೂ ಸಂದರ್ಭವಶಾತ್ ಅವರಿಗೆ, ಅವರ ಸಿದ್ಧಾಂತಗಳಿಗೆ ವಿರೋಧವಾಗಿ ಬರೆದಿದ್ದಲ್ಲಿ ಅದು ಖಂಡಿತಾ ಆಚಾರ್ಯರಿಗೆ ಅವಮಾನವೆಂದು ತಿಳಿಯಬೇಡಿ. ಶೃಂಗೇರಿ, ಕಂಚಿ, ಪುರೀ, ದ್ವಾರಕಾದಿ ಆಮ್ನಾಯ ಪೀಠಗಳಿಗೆ ವಂದಿಸಿ ಈ ಭಾಗಕ್ಕೆ ಧರ್ಮ ಸಾಮ್ರಾಜ್ಯಾಧಿಕಾರಿಗಳಾದ ಶೃಂಗೇರಿ ಪೀಠಸ್ಥರಾದ ಭಗವತ್ಪಾದರಲ್ಲಿ ಪ್ರಾರ್ಥಿಸಿ ಈ ನನ್ನ ಹೇಳಿಕೆಯನ್ನು ಮುಂದಿಡುತ್ತಿದ್ದೇನೆ.

        ೧೯೯೭ರಲ್ಲಿ ನಾವು ಚಿಕ್ಕಮಗಳೂರಿನ ಋತ್ವಿಕ್ ಭಾಂದವರು ನಮ್ಮಲ್ಲಿರತಕ್ಕ ಕೆಲ ಧಾರ್ಮಿಕ ಸಮಸ್ಯೆಗಳಿಗೆ ಸೈದ್ಧಾಂತಿಕವಾದ ನಿರ್ಣಯಗಳನ್ನು ಪಡೆಯಲು ಮತ್ತು ಆಸ್ತಿಕ ಜನರಿಗೂ, ಪುರೋಹಿತ ವರ್ಗಕ್ಕೂ ಇರುವ ತಪ್ಪು ಅಭಿಪ್ರಾಯಗಳನ್ನು ಹೋಗಲಾಡಿಸಲು ಶುದ್ಧ ಕರ್ಮಗಳನ್ನು ಆಚರಿಸಲು ಬೇಕಾದ ಕೆಲ ಮಾರ್ಗದರ್ಶನಕ್ಕಾಗಿ ನಾವೆಲ್ಲರೂ ಅಂದರೆ ಧರ್ಮಾಭಿಮಾನಿಗಳು ಒಂದಾಗಿ ನಮ್ಮಲ್ಲಿರುವ ಕೆಲ ತಪ್ಪು ಅಭಿಪ್ರಾಯ ಭೇದಗಳನ್ನು ಪರಸ್ಪರ ಚರ್ಚಿಸಿ ಧರ್ಮಶಾಸ್ತ್ರಕ್ಕನುಸಾರವಾಗಿ ಸೂಕ್ತ ಮಾರ್ಗವನ್ನು ಕಂಡುಕೊಳ್ಳುವುದಕ್ಕಾಗಿ "ಋತ್ವಿಕ್ ಮಂಡಳಿ" ಎಂಬ ಸಂಸ್ಥೆಯನ್ನು ಸ್ಥಾಪಿಸಿಕೊಂಡು ಅದರ ಅಡಿಯಲ್ಲಿ ಕೆಲ ಗೋಷ್ಠಿಗಳನ್ನು ನಡೆಸಲಾಯಿತು.

        ಆ ಗೋಷ್ಠಿಯಲ್ಲಿ ನಡೆದ ಸಭಾ ಕಲಾಪಗಳು, ಕೆಲ ಹಿರಿಯರ ಸ್ವಾನುಭವ ವಾಕ್ಯಗಳು, ಧರ್ಮಶಾಸ್ತ್ರ ನಿಬಂಧನೆ, ನಿರ್ಣಯಗಳು ನಿಜವಾಗಿಯೂ ತುಂಬಾ ಉಪಯುಕ್ತವಾದ್ದರಿಂದಲೂ ಇದು ಚಿಕ್ಕಮಗಳೂರಿನ ಹೊರಗಿನ ಧಾರ್ಮಿಕಾಸಕ್ತರಿಗೂ ತಲುಪಲಿ ಎನ್ನುವ ಉದ್ದೇಶದಿಂದ "ಋತ್ವಿಕ್ ವಾಣಿ" ಎಂಬ ಹೆಸರಿನಲ್ಲಿ ಪುಸ್ತಕ ರೂಪವಾಗಿ ಹೊರತರಲು ನಿಶ್ಚಯಿಸಿ ಅದಕ್ಕೆ "ಓಂಕಾರ್ ಪಬ್ಲಿಕೇಷನ್ಸ್" ಎಂಬ ಸಂಸ್ಥೆಯನ್ನು ಹುಟ್ಟುಹಾಕಿದೆವು. ಈ ಸಂಸ್ಥೆಯ ಅಡಿಯಲ್ಲಿ ಈ ಲೇಖನ ಬರೆಯುವ ಸಂದರ್ಭಕ್ಕೆ ಅಂದರೆ ಫೆಬ್ರವರಿ ೧೯೯೯ರಲ್ಲಿ ಆರು ಸಂಚಿಕೆಗಳು ಹೊರಬಂದಿರುತ್ತವೆ.

     ಅದರಲ್ಲಿ ಪ್ರಸಕ್ತ ನಮ್ಮ ಕೆಲ ಲೇಖನಗಳು ವಿಚಾರವಾದಿಗಳಿಗೆ ಸವಾಲಾಗಿಯೂ, ಆಷಾಢಭೂತಿಗಳಿಗೆ ಕಿರಿಕಿರಿಯಾಗಿಯೂ ಅನಿಸಿ, ಅದು ದಿನಾ ಹಲವಾರು ಪತ್ರ ರೂಪದಲ್ಲಿ ಪ್ರತಿಕ್ರಿಯಿಸುತ್ತಿದ್ದವು. ಆ ಎಲ್ಲಾ ಪತ್ರಗಳಿಗೂ ಪ್ರತ್ಯೇಕವಾಗಿ ಉತ್ತರಿಸಲು ನಾನು ಅಸಮರ್ಥನಾದ್ದರಿಂದ ಈ ಲೇಖನರೂಪದಲ್ಲಿ ಉತ್ತರಿಸುತ್ತಿದ್ದೇನೆ. ನನ್ನ ಲೇಖನಗಳಲ್ಲಿ ಮುಖ್ಯವಾಗಿ ವಾಸ್ತು ಶಾಸ್ತ್ರ, ಜ್ಯೋತಿಷ್ಯ, ಆಗಮ ಮತ್ತು ತಂತ್ರಶಾಸ್ತ್ರ, ಕರ್ಮವಿಪಾಕ ಸಿದ್ಧಾಂತ, ಶ್ರೀವಿಧ್ಯೆ, ಶ್ರೀ ಚಕ್ರೋಪಾಸನೆ, ವಿವಾಹ ಪದ್ಧತಿ ಮತ್ತು ಪೂರ್ವೋತ್ತರ ಷೋಡಶದ್ವಯ ಕರ್ಮಗಳು. ಈ ವಿಚಾರವಾಗಿ ಈ ಹಿಂದೆ ಪ್ರಕಟಿಸಲ್ಪಟ್ಟ ಲೇಖನಗಳ ಬಗ್ಗೆ ಹಲವಾರು ಸಾವಿರಕ್ಕೂ ಹೆಚ್ಚು ಪ್ರಶಂಸಾ ಪತ್ರಗಳೂ, ದೂಷಣಾ ಪತ್ರಗಳೂ ಬಂದಿವೆ. ಅಲ್ಲದೆ ಬಾಯ್ದೆರೆಯಾಗಿಯೂ ಕೆಲ ವಿಚಾರ ಪ್ರಕಟವಾಗಿದೆ. ಇವುಗಳಿಗೆ ಉತ್ತರಿಸುವುದು ನನ್ನ ಕರ್ತವ್ಯವಾದರೂ ನನ್ನ ಶಕ್ತತೆಯ ಅಳತೆಯಲ್ಲಿ ಉತ್ತರಿಸಲು ಪ್ರಯತ್ನಿಸಬೇಕಾದ್ದೂ ನನ್ನ ಕರ್ತವ್ಯವಲ್ಲವೇ?

        ಅದರಲ್ಲಿ ಹೆಚ್ಚಾಗಿ ವಾಸ್ತು ಮತ್ತು ಶ್ರೀವಿಧ್ಯೆಯ ಬಗ್ಗೆ ಹೆಚ್ಚಿನ ಆರೋಪ ಪ್ರಶಂಸೆಗಳು ಬಂದಿರುತ್ತವೆ. ಅದಕ್ಕೆ ಈ ರೀತಿ ಪ್ರತಿಸ್ಪಂದಿಸುತ್ತಿದ್ದೇನೆ. ಇದಕ್ಕೆ ನಿಮ್ಮ ಪರ, ವಿರೋಧವಾಗಿದ್ದಲ್ಲಿ ನೀವು ಸಾರವಾದದ್ದನ್ನು ಗ್ರಹಿಸಿ ಅದರಲ್ಲಿ ನಿಮ್ಮ ಆತ್ಮ ಒಪ್ಪಿದಂತೆ ಆಚರಿಸಿ ಎಂದು ಹೇಳುತ್ತಾ, ನಾನು ಹೇಳುವ ವಿಭಾಗಗಳಲ್ಲಿ ಧರ್ಮದ ಮೂಲ ಸ್ಥಂಭವಾದ ವೇದ, ಸ್ಮೃತಿ, ಸದಾಚಾರ, ಆತ್ಮಸಂತೋಷವೆಂಬ ನಾಲ್ಕು ಸ್ಥಂಭವೂ ಸರಿಯಿರುವಂತೆ ವೇದ ಮಾನ್ಯತೆಗೆ ಹೆಚ್ಚಿನ ಒತ್ತುಕೊಟ್ಟು ವಿಚಾರ ಮಂಡನೆ ಮಾಡುತ್ತಿದ್ದೇನೆ. ಆಗ ಪುರಾಣ, ಉಪನಿಷತ್ತುಗಳಲ್ಲಿ ಕೆಲ ವಿರೋಧಗಳು ಕಂಡು ಬರಬಹುದು. ಅಲ್ಲಿ ವೇದ ಪ್ರಾಮಾಣ್ಯವೇ ವಿನಃ ಪುರಾಣೋಪನಿಷತ್ತುಗಳಲ್ಲ ಎಂದು ಘೋಷಿಸುತ್ತೇನೆ.

        ಮುಖ್ಯವಾಗಿ ವಾಸ್ತು ತೆಗೆದುಕೊಳ್ಳಿ. ಪ್ರಖ್ಯಾತವಾದ -
೧. ಲಕ್ಷಣ,
೨. ರೇಖಾ,
೩. ವರ್ಣ
೪. ವಿನ್ಯಾಸ
೫. ಪ್ರಕೃತಿ
೬. ಪರಿಸರ
೭. ಸಮಾಜ
೮. ಧರ್ಮ
ಎಂಬ ಅಷ್ಟಾಂಗ ಲಕ್ಷಣ ಸಹಿತವಾಗಿ ಜ್ಯೋತಿಷ್ಯದ ಒಂದು ಅಂಗವಾದ ವಾಸ್ತುಶಾಸ್ತ್ರವು ಈಗ್ಗೆ ದುರುಪಯೋಗವಾಗುತ್ತಿದ್ದುದನ್ನು ಕಂಡಾಗ ಆ ವಿಚಾರವಾಗಿ ಖಂಡಿಸಿ ನಾನು ಲೇಖನ ಬರೆದಿರುತ್ತೇನೆ. ಆಗ ವಾಸ್ತುಶಾಸ್ತ್ರಜ್ಞರು ಈ ಬಗ್ಗೆ ಸ್ಪಷ್ಟೀಕರಣ ಕೇಳಿರುವುದರಿಂದ ಅದಕ್ಕೆ ಲಿಖಿತ ಉತ್ತರವನ್ನು ಬರೆದಿರುತ್ತೇನೆ. ಆದರೆ ಪ್ರಶ್ನೆ ಕೇಳಿದ ವಾಸ್ತುಶಾಸ್ತ್ರಜ್ಞರು ಲೇಖನವನ್ನು ಓದಿ ಅರ್ಥ ಮಾಡಿಕೊಂಡಲ್ಲಿ ಅದು ಪ್ರಶ್ನಾತೀತವಾಗಿತ್ತು ಎಂಬುದು ಎಲ್ಲಾ ಪೂರ್ವಾಗ್ರಹ ಪೀಡಿತರಿಗೂ ಅನ್ನಿಸಲಿಕ್ಕೆ ಸಾಧ್ಯ.

        ಅಲ್ಲದೇ ವಾಸ್ತುಶಾಸ್ತ್ರವು ಮನುಷ್ಯನ ಜೀವನ ಸೌಲಭ್ಯಕ್ಕಾಗಿ ಸೃಷ್ಟಿಸಲ್ಪಟ್ಟಿದೆಯೇ ವಿನಃ ತೊಂದರೆ ಕೊಡುವುದಕ್ಕಲ್ಲ. ಅದರಲ್ಲಿರತಕ್ಕ ಆದರ್ಶಗಳನ್ನು ಗಮನಿಸಿದಲ್ಲಿ ಪ್ರಕೃತಿಯೊಂದಿಗೆ ಮನುಷ್ಯ ಹೇಗೆ ಸಹಜವಾಗಿ ಬದುಕಲು ಸಾಧ್ಯ? ಅಲ್ಲದೇ ಪ್ರಕೃತಿಗೆ ತನ್ನ ಋಣವನ್ನು ಹೇಗೆ ತೀರಿಸಲು ಸಾಧ್ಯ? ಜೀವನದ ವಾಸ್ತವಿಕತೆ ಏನು? ಸುಲಭ ಜೀವನ ವಿಧಾನ ಯಾವುದು? ಎಂದೆಲ್ಲಾ ತಿಳಿಸುವ ಈ ವಾಸ್ತು ಶಾಸ್ತ್ರವು ವಾತಾವರಣ, ಪ್ರಕೃತಿ, ಪರಿಸರ, ಭೂ ಮೇಲ್ಮೈ ಲಕ್ಷಣ, ಜನಜೀವನ ಪದ್ಧತಿ, ಆಹಾರ ವಿಹಾರ ವ್ಯತ್ಯಾಸ, ಧರ್ಮ ವ್ಯತ್ಯಾಸಗಳಿಂದ ವ್ಯತ್ಯಾಸ ಹೊಂದುತ್ತದೆ ಎಂಬ ಸಣ್ಣ ವಿಚಾರವನ್ನೂ ಅರ್ಥಮಾಡದೆ ಕೇವಲ ದಿಕ್ಕನ್ನೇ ಗಮನಿಸಿ ಹೇಳುವ ವಾಸ್ತುಶಾಸ್ತ್ರ ಸಮಂಜಸವೆಂದರೆ ಅದು ಸರಿಯಾದ ರೀತಿಯೇ?

        ಅಡಿಗೆ ಮನೆ ಆಗ್ನೇಯಕ್ಕೆ, ಮಲಗುವ ಮನೆ ನೈಋತ್ಯಕ್ಕೆ ಎಂಬ ನಿಯಮ ಸಾರ್ವತ್ರಿಕವಾಗಿ ಎಲ್ಲಾ ಸ್ಥಳಗಳಿಗೂ ಹೊಂದುತ್ತದೆ ಎಂದರೆ ಮತ್ತೆ ಮನೆ ಕಟ್ಟುವ ಭಾಗಕ್ಕೆ ಆ ಕಡೆಯೇ ಇಳಿಜಾರಿರಬೇಕು, ಈ ಕಡೆಯೇ ಎತ್ತರವಿರಬೇಕು ಎಂಬ ನಿರ್ಧಿಷ್ಟ ನಿಯಮ ಹೇಳಿದರೆ ಅದಕ್ಕೆ ವಿರುದ್ಧ ಸ್ಥಳದಲ್ಲಿ ಮನೆಕಟ್ಟಿ ವಂಶಪಾರಂಪರ್ಯವಾಗಿ ಬಾಳುತ್ತಿದ್ದ ಉದಾಹರಣೆಗೆ ಏನು ಹೇಳುತ್ತಾರೆ? ಅಲ್ಲದೇ ವಾಸ್ತುವೇ ಮನುಷ್ಯನ ಜೀವನದ ಎಲ್ಲವೂ ಎಂದು ಹೇಳುವುದು ತಪ್ಪಲ್ಲವೇ? ಅವನ ವೈಯಕ್ತಿಕ ಕರ್ಮಗಳು, ವಂಶಾರಿಷ್ಟ, ಗೋಚಾರ ಗ್ರಹಬಲ, ಸಂಚಿತ, ಪ್ರಾಪ್ತಿ, ಆಗಾಮಿ ಕರ್ಮಗಳು, ಅವನು ಜೀವಿಸುತ್ತಿದ್ದ ವಿಧಾನ, ಧರ್ಮ ಇವೆಲ್ಲ ಏನೂ ಅಲ್ಲವೆ? ಇವುಗಳೆಲ್ಲಾ ಮಾರಕವಾಗಿದ್ದಲ್ಲಿ ವಾಸ್ತುವೊಂದೆ ಏನು ಮಾಡಲು ಸಾಧ್ಯ? ಇವುಗಳೆಲ್ಲವನ್ನು ಗಮನಿಸದೆ ಜ್ಯೋತಿಷ್ಯ ಶಾಸ್ತ್ರದ ಒಂದು ಅಂಗವಾದ ವಾಸ್ತುವೇ ಪ್ರಧಾನವೆಂದಲ್ಲಿ ನಿಖರ ಉದಾರಹಣೆಗೆ ಉತ್ತರವಿಲ್ಲ. ಯಾಕೋ ಗೊತ್ತಿಲ್ಲ.

        (ಸೂಚನೆ:- ಸ್ವಾಮೀಜಿಯವರು ಮೂಲತಃ ಆಂಧ್ರದಲ್ಲಿ ಹುಟ್ಟಿ ಕಾಶಿಯಲ್ಲಿ ವಿಧ್ಯಾಭ್ಯಾಸ ಮಾಡಿ ದೇಶ ವಿದೇಶಗಳನ್ನು ಕಾಲ್ನಡಿಗೆಯಲ್ಲೇ ನಡೆದು ನಿರಂತರ ವೇದಾಧ್ಯಯನ, ಯಜ್ಞ-ಯಾಗಾದಿಗಳು, ತಪೋನುಷ್ಠಾನ ಮಾಡುತ್ತಾ ಬಂದ ನಾಥ ಸಂಪ್ರದಾಯದ ಪರಿವ್ರಾಜಕರು.   ಈಗ ಗೃಹಸ್ಥರು.)

ನಾನು ಈ ಕರ್ನಾಟಕ ಪ್ರಾಂತದಲ್ಲಿ ಹನ್ನೆರಡು ವರ್ಷ ಸಂಚರಿಸಿ ಅಧ್ಯಯನ ಮಾಡಿದ ಪ್ರಕಾರ ಸ್ನೇಹ ಜೀವಿಗಳೂ, ಅಮಾಯಕರೂ ಆದ ಕನ್ನಡಿಗರು ನಾನಾ ರೀತಿಯ ಶೋಷಣೆಗೆ ಒಳಗಾಗುತ್ತಿರುವುದು ಕಂಡುಬರುತ್ತದೆ. ಅದಕ್ಕೆ ಕಾರಣ ಅವರಲ್ಲಿರುವ ಅಲ್ಪಜ್ಞತೆ. ನಾನಾ ರೀತಿಯ ಧಾರ್ಮಿಕ ಆಧ್ಯಾತ್ಮಿಕ ಕೇಂದ್ರಗಳು ಇಲ್ಲಿದ್ದರೂ, ಇಲ್ಲಿ ಧರ್ಮಶಾಸ್ತ್ರ, ವೇದ, ವೇದಾಂಗಗಳು, ಪರಿಪೂರ್ಣ ಜ್ಯೋತಿಷ್ಯ, ದೈವ, ದೇವರ ಕಲ್ಪನೆ ಇವುಗಳ ಬಗ್ಗೆ ಯಾವುದೇ ಅಧ್ಯಯನ ನಡೆಯುತ್ತಿಲ್ಲ. ಹಾಗಾಗಿ ಹಾಳೂರಿಗೆ ಉಳಿದವನೆ ಯಜಮಾನ ಎಂಬಂತೆ ಏನೋ ಅಲ್ಪ ಸ್ವಲ್ಪ ತಿಳಿದ ದಾರ್ಶನಿಕರು, ಪುರೋಹಿತರು, ವೇದಾಂತಿಗಳು ಆಕರ್ಷಕವಾಗಿ ಮಾತನಾಡಿ ಅವರ ಬೇಳೆ ಬೇಯಿಸಿಕೊಳ್ಳುತ್ತಿದ್ದರು.

ಹಲವಾರು ಪಂಥಭೇಧಗಳು, ಜಾತಿಭೇಧಗಳು, ಧರ್ಮ, ಮಠ, ಗುರು ಪರಂಪರಾ ಭೇಧಗಳು ಇಲ್ಲಿ ಜಾಸ್ತಿ. ಹಾಗಾಗಿ ತಮ್ಮ ತಪ್ಪನ್ನು ಎತ್ತಿ ತೋರಿಸುವಲ್ಲಿ ಬಹಳ ಸುಲಭದಲ್ಲಿ ಧರ್ಮಾಂತರ, ಮತಾಂತರ ಇವುಗಳ ಉದಾಹರಣೆ ಕೊಟ್ಟು ಜಾತಿ ಪದ್ಧತಿಯಿರುವ ರಾಜಕೀಯ ಬೆರೆಸಿ ಸುಲಭದಲ್ಲಿ ಮುಚ್ಚಿಹಾಕುತ್ತಾರೆ. ತಾವು ಹೇಳುವ ವಿಚಾರಕ್ಕೆ ಅಥವಾ ಮಾಡುವ ಕಾರ್ಯಕ್ಕೆ ಬದ್ಧರಾಗಿಲ್ಲ. ಇದು ಎಲ್ಲೆಲ್ಲೂ ಕಂಡುಬರುತ್ತದೆ.

ಉದಾಹರಣೆ:- ನಾನು ಒಮ್ಮೆ ಪರೀಕ್ಷಾರ್ಥವಾಗಿ ಒಬ್ಬ ಜ್ಯೋತಿಷಿಯಲ್ಲಿಗೆ ಹೋಗಿದ್ದೆ. ಅಂದರೆ ಶಾಸ್ತ್ರನಿಂದನೆಯ ಉದ್ದೇಶದಿಂದಲ್ಲ. ಅವರ ಖ್ಯಾತಿ ಕೇಳಿ ನೋಡೋಣವೆಂದು ನಾನು ಬೆಳಿಗ್ಗೆ ೯:೦೦ ಘಂಟೆಗೆ ಅವರಲ್ಲಿ ತಲುಪಿದ್ದೆ. ಅಲ್ಲಿ ಕ್ಯೂ ಸಿಸ್ಟಂ ಇತ್ತು. ನಾನು ೧೪ನೇ ನಂಬರ್ ಟೋಕನ್ ಹೊಂದಿದ್ದೆ. ಆ ನನ್ನ ವೇಷ-ಭೂಷಣ ತೀರಾ ಸಾಮಾನ್ಯವಾಗಿತ್ತು. ಅವರು ೧೨:೦೦ ಘಂಟೆಗೆ ವಿಶ್ರಾಂತಿಗೆ ತೆರಳುವ ಸಮಯವಾಯ್ತು. ೧೩ ಜನರನ್ನು ವಿಚಾರಿಸಿ ಅವರಿಗೆ ಏನೋ ಹೇಳಿಕೆಯೋ ಕೆಳಿಕೆಯೋ ಮುಗಿಸಿದ್ದರು. ನನ್ನನ್ನು ಈಗ ವಿಶ್ರಾಂತಿಯ ಸಮಯ, ೩:೦೦ ಘಂಟೆಗೆ ಬನ್ನಿ ಎಂದರು, ಊಟಕ್ಕೆ ತೆರಳಿದರು.

ಊಟ ಮುಗಿಸಿ ಬಂದು ತಮ್ಮ ಹೆಚ್ಚುಗಾರಿಕೆ ಹೇಳಿಕೊಳ್ಳುವ ಭರದಲ್ಲಿ ತಾನು ನಿತ್ಯವೂ ಬ್ರಾಹ್ಮಣರಿಗೆ ಅನ್ನದಾನ ಮಾಡದೇ ಊಟ ಮಾಡುವುದಿಲ್ಲ, ಬ್ರಾಹ್ಮಣರು ಯಾರಾದರು ಬಂದರೆ ನಮ್ಮಲ್ಲಿ ಮುಕ್ತ ಪ್ರವೇಶ ಎಂದು ಏನೇನೋ ಹೇಳಿದರು. ಆದರೆ ಬ್ರಾಹ್ಮಣನಾದ ನಾನು ಬೆಳಿಗ್ಗೆ ೯:೦೦ ಘಂಟೆಯಿಂದ ಅಲ್ಲಿದ್ದರೂ ವಿಚಾರಿಸಿಲ್ಲ, ಊಟವೂ ಇಲ್ಲ, ನನಗೆ ಹಸಿವೇ ಇಲ್ಲ ಬಿಡಿ. ಮಧ್ಯಾಹ್ನ ೩ಕ್ಕೆ ಪುನಃ ಆರಂಭ. ಆಗ ಯಾರೋ ಒಂದು ಕಾಯಿಲೆ ಹೆಂಗಸಿನ ಆಗಮನವಾಯಿತು. ಹಾಗಾಗಿ ನಾನು ಎರಡನೆಯವನಾದೆ, ತೊಂದರೆಯಿಲ್ಲ. ಎರಡನೆಯವನಾಗಿ ನನಗೆ ಪ್ರವೇಶ. ಹೋಗಿ ಕುಳಿತಾಗಲೆ ನನ್ನನ್ನು ಏನೂ ವಿಚಾರಿಸದೇನೇ ನನ್ನ ಬಗ್ಗೆ ಹೇಳಲು ಆರಂಭಿಸಿದರು. ಕೆಲವೊಂದು ನಿರ್ಧಿಷ್ಟ ಪದಗಳ ಜೋಡಣೆಯಿಂದ ಒಂದು ೨೦-೩೦ ಕಷ್ಟಗಳ ಸರಮಾಲೆ ಹೇಳಿದರು. ನಂತರ ಅದಕ್ಕಾಗಿ ಒಂದು ಯಂತ್ರ ಮಾಡಿಕೊಡುತ್ತೇನೆ, ೨೫೦ ರೂ. ಆಗುತ್ತದೆ. ಅದನ್ನು ಮನೆಯಲ್ಲಿ ಇಡಿ, ಪರಿಹಾರವಾಗುತ್ತದೆ, ಯಂತ್ರಕ್ಕೆ ನಾಳೆ ಬನ್ನಿ ಎಂದರು. ಆಗ ನಾನು, ಸ್ವಾಮಿ, ನಾನು ಸ್ವಲ್ಪ ಮಾತನಾಡಲು ಅವಕಾಶ ಕೊಡಿ, ಏಕೆಂದರೆ ನನಗೆ ಯಾವುದೇ ಕಷ್ಟವಿಲ್ಲ. ನಾನು ಪರಿವ್ರಾಜಕ ವ್ರತದಿಂದ ಊರೂರು ತಿರುಗುತ್ತಾ ಇಲ್ಲಿಗೆ ಬಂದವನು. ನನಗೆ ಸಂಸಾರವಾಗಲಿ, ಮನೆಯಾಗಲಿ ಇಲ್ಲ. ನೀವು ಕೊಡುವ ಯಂತ್ರವನ್ನು ಎಲ್ಲಿಡಲಿ? ನಿಮ್ಮ ಜ್ಯೋತಿಷ್ಯ ಪದ್ಧತಿ ತುಂಬಾ ಆಕರ್ಷಕವಾಗಿದೆ. ಆದರೆ, ಪೃಚ್ಛಕನಿಂದ ಪ್ರಶ್ನೆ ಇಲ್ಲದೆ ಜ್ಯೋತಿಷ್ಯ ಹೇಳಬಾರದು. ನಿಮಗೆ ನನ್ನ ಬಗ್ಗೆ ಎಲ್ಲವೂ ತಿಳಿಯಲು ಸಾಧ್ಯವಾದರೆ ನಾನೊಬ್ಬ ಕೇವಲ ಬ್ರಾಹ್ಮಣ ಎಂಬ ವಿಚಾರವೂ ನಿಮಗೆ ತಿಳಿಯಲಿಲ್ಲವಲ್ಲಾ? ನಾನಿನ್ನು ಬರುತ್ತೇನೆ ಎಂದು ಅಲ್ಲಿಂದ ಹೊರಟು ಬಂದೆ.

ಈ ರೀತಿಯ ಆಡಂಭರದ ಜ್ಯೋತಿಷಿಗಳೇ ಹೆಚ್ಚು. ಜ್ಯೋತಿಷಿಯಲ್ಲಿಗೆ ಬರುವ ವ್ಯಕ್ತಿ ನನ್ನಂತಹವನನ್ನು ಬಿಟ್ಟರೆ ಹೆಚ್ಚಾಗಿ ಬರುವವರು ಸಮಸ್ಯೆ ಏನೋ ಇದ್ದೇ ಬರುತ್ತಿದ್ದರು ಎಂದ ಮೇಲೆ, ೨೦-೩೦ ಸಮಸ್ಯೆಗಳ ಅಸ್ಪಷ್ಟ ಹೊಂದಾಣಿಕೆಯೇ ಜ್ಯೋತಿಷ್ಯದ ಮುಖ್ಯ ಸೂತ್ರವಾಗಿ ಬಳಸಲು ಸಾಧ್ಯವಾಗುತ್ತದೆ. ಆದರೆ ನಿಜವಾಗಿ ಇದು ಜ್ಯೋತಿಷ್ಯವಲ್ಲ, ಜ್ಯೋತಿಷ್ಯವೆಂದರೆ ಸಮಸ್ಯೆಯನ್ನು ಹೇಳುವುದಲ್ಲ. ಸಮಸ್ಯೆಯ ಆಳ, ಅರ್ಥವನ್ನು ಅರಿತು, ಅದನ್ನು ಪರಿಹರಿಸಿ ಅಥವಾ ಸರಳೀಕರಿಸಿ ಬಂದ ಆರ್ತನಿಗೆ ಸಹಾಯ ಮಾಡುವ ಪರಿಯನ್ನು ಕಂಡುಕೊಳ್ಳುವುದು, ಉತ್ತಮ ಮಾರ್ಗದರ್ಶನ ಮಾಡುವುದು ಜ್ಯೋತಿಷ್ಯವಾಗಿರಬೇಕು. ಬರೇ ಒಬನ ಕಷ್ಟದ ಪರಂಪರೆಯ ಬಗ್ಗೆ ಹೇಳಿದಾಗ ಏನೂ ಪ್ರಯೋಜನವಿಲ್ಲ. ಪರಿಹಾರ ಸೂತ್ರವನ್ನು ಮತ್ತು ತನ್ನ ಅಳವಿಯ ಮೇರೆಗೆ ಅದರ ಪರಿಹಾರದ ಜವಾಬ್ದಾರಿಯನ್ನು ಹೊತ್ತು ಇನ್ನೊಬ್ಬರ ಕಷ್ಟಕ್ಕಾಗಿ ಸ್ಪಂದಿಸುವವನೆ ನಿಜವಾದ ಜ್ಯೋತಿಷಿ ಅಥವಾ ದೈವಜ್ಞ.

ಈ ಕಡೆಯಲ್ಲಿ ಒಂದು ಕ್ರಮ ಚಾಲ್ತಿಯಲ್ಲಿದೆ. ಏನಾದರು ಕಷ್ಟವೆಂದು ಗ್ರಾಮೀಣ ಜನರು ಬಂದರೆ ಅವರಿಂದ ೧೦೦-೨೦೦ ರೂ.ಗಳನ್ನು ತೆಗೆದುಕೊಂಡು ಹಲವಾರು ನಿಯಮಗಳನ್ನು ಹಾಕಿ ಕಟ್ಲೆ ಮಾಡಿಕೊಡುತ್ತಾರೆ. ಅದು ಫಲಕಾರಿಯಾಗದಿದ್ದಲ್ಲಿ ತಾವು ಈ ಮೊದಲು ತಿಳಿಸಿದ ನಿಯಮಗಳಲ್ಲಿ ಯಾವುದಾದರೂ ಒಂದನ್ನು ನೀವು ತಪ್ಪಿದ್ದೀರಿ ಎಂದು ಹೇಳಿ ತಪ್ಪಿಸಿಕೊಳ್ಳುವುದು. ಫಲಕಾರಿಯಾದರೆ ನಾನು ಮಾಡಿದ್ದು ಎಂದು ಹೇಳಿಕೊಳ್ಳುವುದು. ಈ ರೀತಿಯ ಜ್ಯೋತಿಷಿಗಳನ್ನು ಖಂಡಿಸಿ ಬರೆದಿರುತ್ತೇನೆ. ತಾನು ತಿಳಿಸಿದ ವಿಚಾರ, ಮಾಡಿದ ಪರಿಹಾರಕ್ಕಾಗಿ ಪ್ರಯತ್ನಿಸುವ ಮತ್ತು ಅದಕ್ಕಾಗಿ ನಿಷ್ಕಾಮನಾಗಿ ಹೋರಾಟ ಮಾಡಬೇಕೆಂಬ ಬುದ್ಧಿ ಬೆಳಸಿಕೊಳ್ಳದಿದ್ದಲ್ಲಿ ಮುಂದೆ ಜ್ಯೋತಿಷ್ಯವೂ ಕೂಡ ಇನ್ನೂ ಅವನತಿಗೆ ಇಳಿಯುತ್ತದೆ. ಜ್ಯೋತಿಷಿಯು ಸಮಾಜದ ಒಂದು ಜವಾಬ್ದಾರಿಯುತ ಸ್ಥಾನದಲ್ಲಿ ಇರುತ್ತಾನೆ ಎಂಬುದನ್ನು ಅರಿತಿರಬೇಕು. ಅವನು ಹೇಳಿದ ಫಲಭಾಗದಲ್ಲಿ ಒಂದು ವೇಳೆ ಸೋಲಾದರೆ, ಆ ಸೋಲನ್ನು ತಾನೇ ಒಪ್ಪಿಕೊಳ್ಳಬೇಕೇ ವಿನಃ ಯಾವುದೋ ನೆವ ಹೇಳುವುದು ಸಮಂಜಸವಲ್ಲ. ಹಾಗೆಯೇ ವಾಸ್ತುಶಾಸ್ತ್ರಿಗಲು, ವೈದ್ಯರು, ಪುರೋಹಿತರು, ವೇದಾಂತಿಗಳು ಸ್ವಲ್ಪ ಸಮಾಜದ ಬಗ್ಗೆ ಜವಾಬ್ದಾರಿಯುತವಾಗಿ ವ್ಯವಹರಿಸಿದಲ್ಲಿ ಸ್ವಲ್ಪ ಉತ್ತಮ ಸಮಾಜ ರೂಪಗೊಳ್ಳಬಹುದು ಎಂದು ಹೇಳುತ್ತೇನೆ.

ಇನ್ನು ಆಗಮ, ತಂತ್ರಶಾಸ್ತ್ರ ವಿಚಾರದಲ್ಲಿ ಹೇಳುವುದಿದ್ದರೆ, ಯಾವುದೇ ಯಂತ್ರ, ಯಾವುದೋ ಪೂಜೆ, ಯಂತ್ರ ಸ್ವರೂಪದ ಬಗ್ಗೆ ತಿಳುವಳಿಕೆಯಿಲ್ಲ, ತಾಂತ್ರಿಕ ಯಂತ್ರಗಳು; ಸ್ಥಂಭನ, ಮೋಹನ, ಆಕರ್ಷಣ, ವಿದ್ವೇಷಣ, ಉಚ್ಚಾಟನ, ಮಾರಣಾದಿಗಳಲ್ಲಿ ಬಳಸುವ ಕೆಲ ತಾಂತ್ರಿಕ ರೇಖಾ ವಿನ್ಯಾಸಗಳೇ ಯಂತ್ರಗಳು. ಅವುಗಳಿಂದ ಕೆಲ ಮಂತ್ರ ಸಹಾಯದಿಂದ ಶ್ರವಣಾತೀತ ಧ್ವನಿ ತರಂಗ, ದೃಶ್ಯಾತೀತ ಕಿರಣಗಳನ್ನು ಹೊರಡಿಸಿ ಉದ್ದೇಶಿತ ಕಾರ್ಯ ನಡೆಸುವ ಪದ್ಧತಿ ತಾಂತ್ರಿಕವಾಗಿ ಸಿದ್ಧಪಡಿಸಲ್ಪಟ್ಟು ಅದು ಬಹಳ ಗೌಪ್ಯವಾಗಿ ಸಂಗ್ರಹಿಸಲ್ಪಟ್ಟಿರುತ್ತದೆ. ಅದು ಸುಲಭ ಸಾಧ್ಯವಾದ ವಿಧ್ಯೆಯಲ್ಲ.

ಆದರೆ, ಈಗ ಇಲ್ಲಿ ಎಲ್ಲರೂ ತಾಂತ್ರಿಕರೇ, ಎಲ್ಲರೂ ಆಗಮಿಕರೇ, ಪ್ರತಿಯೊಬ್ಬರೂ ದೇವತಾ ಪ್ರತಿಷ್ಠೆ, ಕಲಾವೃದ್ಧಿ ಮಾಡುತ್ತಾರೆ. ಅಷ್ಟಬಂಧ ಹಾಕುತ್ತಾರೆ. ಆದರೆ, ಅಷ್ಟಬಂಧವೆಂದರೆ ದೇವತಾ ಪ್ರತಿಮೆಗೆ ಮತ್ತು ಪೀಠಕ್ಕೆ ಹಾಕುವ ಅಂಟುದ್ರವ ಅಥವಾ ಅರಗು ಎಂದು ತಿಳಿದಿರುವ ತಾಂತ್ರಿಕರೇ ಹೆಚ್ಚು. ೮ ಮಂತ್ರಗಳಿಂದ ದೈವೀಸ್ವರೂಪ, ೪೦ ಕಲೆಗಳನ್ನು ಧನಾಂಶ ರೂಪವಾದ - ಋಣಾಂಶ ಸ್ವರೂಪದ ೧೨೮ ಪ್ರಕೃತಿ ಕಲೆಯೊಂದಿಗೆ ಬೆಸೆಯುವ ವಿಧಾನ ಎಂದಾಗಲೀ ಅಥವಾ ಅದರ ತತ್ಸಂಬಧವಾಗಿ ಶಿಲಾರೂಪಿಯಾದ ವಿಗ್ರಹದಲ್ಲಿ ಚೈತನ್ಯವೇರ್ಪಡುವುದೆಂದಾಗಲೀ ತಿಳಿದವರಿಲ್ಲದ, ಈ ತಾಂತ್ರಿಕ ಸಮಾಜದಲ್ಲಿ ಗೌಪ್ಯವಾಗಿ ಸ್ಥಾಪಿಸಲ್ಪಟ್ಟ ಉಳಿಕೆ ತಾಂತ್ರಿಕ ಸೂತ್ರಗಳಾಗಲೀ, ಯಂತ್ರ ನಿಬಂಧನೆಯಾಗಲೀ, ಅದು ಹೇಗೆ ಕಿರಣ ಪ್ರಸಾರ ಮಾಡುತ್ತದೆ? ಅಥವಾ ನಾದಸ್ವರೂಪವಾಗುತ್ತದೆ? ಎಂದರೆ ಅದರ ಕಲ್ಪನೆಯೇ ಇಲ್ಲದ ಆಗಮಿಕರಾಗಲೀ, ತಾಂತ್ರಿಕರಾಗಲಿ ಏನು ಉತ್ತರಿಸಿಯಾರು? ಆದ್ದರಿಂದ, ಈಗ ಸಧ್ಯದಲ್ಲಿ ಯಂತ್ರ-ಮಂತ್ರ-ತಂತ್ರವು ನಗೆಪಾಟಲಿಗೆ ಈಡಾಗಿರುತ್ತದೆ. ಇದಕ್ಕೆ ಯಾರು ಕಾರಣರು? ಇವೆಲ್ಲವನ್ನೂ ವಿಮರ್ಶಿಸಿ ಬರೆದರೆ ತಪ್ಪೇನು? ಅದೂ ಕೂಡ ಅವರನ್ನು ದೂಷಿಸುವ ಉದ್ದೇಶದಿಂದಲ್ಲ. ಮುಂದಾದರೂ ಹೆಚ್ಚಿನ ಅಧ್ಯಯನ ಮಾಡಲಿ ಎಂದು. ದೈವ, ದೇವರ ಕಲ್ಪನೆಗಳಿಗೆ ಒಂದು ನೈಜ ಅರ್ಥಕಲ್ಪನೆಯಾಗಲಿ. ಕ್ಷುದ್ರ ದೇವತೋಪಾಸನೆ ಕಡಿಮೆಯಾಗಲಿ ಎಂಬ ಉದ್ದೇಶವಾಗಿರುತ್ತದೆ.

ಒಬ್ಬನಿಗೆ ಯಾವುದೋ ಕಾರಣಕ್ಕೆ ಒಂದು ಗಾಯವಾಗುತ್ತದೆ. ಅದು ವಿಪರೀತ ಭಾದೆಯೂ, ನೋವೂ ಆಗುತ್ತದೆ. ಆ ನೋವನ್ನು ಮರೆಯಲು ಸಹಜವಾಗಿ ರೋಗಿ ಅಪೇಕ್ಷಿಸುತ್ತಾನೆ. ಆಗ ಸಮರ್ಥ ವೈಧ್ಯರಲ್ಲಿ ಹೋದರೆ ನೋವು ಉಪಶಮನವಾಗುವಂತಹಾ ಚಿಕಿತ್ಸೆಗಳನ್ನು ಕೊಟ್ಟು ಸಮಾಧಾನಿಸುತ್ತಾರೆ. ಹಾಗಿಲ್ಲದೆ, ಸಾರಾಯಿ ಅಂಗಡಿಗೆ ಹೋದರೆ ಅಲ್ಲಿ ಸಿಗುವ ಸಲಹೆ "ಹೊಟ್ಟೆ ತುಂಬಾ ಕುಡಿ, ನೋವು ಕಾಣಿಸುವುದಿಲ್ಲ"; ಎಂಬ ಸಲಹೆ ಸಹಜವಾಗಿ ಬರುತ್ತದೆ. ಆದರೆ ಅದು ಸೂಕ್ತವೇ? ಖಂಡಿತಾ ಅಲ್ಲ. ಇನ್ನೊಬ್ಬನಲ್ಲಿ ಹೋದಾಗ ಭಂಗಿ ಕುಡಿಯುವ ಸಲಹೆ ಬರಬಹುದು. ಇದು ಸೂಕ್ತ ಮಾರ್ಗವಲ್ಲ. ಆದರೆ, ಚಿಕಿತ್ಸೆಯ ದೃಷ್ಟಿಯಿಂದ ಗಮನಿಸಿದರೆ ಅಲ್ಲೂ ಕೂಡ ಬಳಸಲ್ಪಡುವ ರಾಸಾಯನಿಕಗಳು ಅಮಲು ಬರಿಸುವುದಾಗಿರುತ್ತದೆ. ಆದರೆ, ಅಲ್ಲಿ ವೈಧ್ಯರು ಸೂಕ್ತವಾಗಿ, ಸಮಂಜಸ ರೀತಿಯಲ್ಲಿ ರೋಗಿಯ ದೈಹಿಕ ಶಕ್ತಿಯ ಅಳತೆಯಂತೆ ನೋಡಿ, ನೋವಿನ ಮರೆವು ಉಂಟಾಗುವಂತೆ ಚಿಕಿತ್ಸೆ ನೀಡುವುದರೊಂದಿಗೆ ಗಾಯ ವಾಸಿಯಾಗುವುದಕ್ಕೂ ಚಿಕಿತ್ಸೆ ಕೊಡುತ್ತಾರೆ. ಅದು ಕ್ಷಿಪ್ರವಾಗಿ ಗುಣವಾಗುವುದರೊಂದಿಗೆ ರೋಗಿಗೆ ಕ್ಷೇಮಕರವಲ್ಲವೇ? ಆದ್ದರಿಂದ ವಿವೇಚನಾರಹಿತವಾದ ಜೀವನ ನಿಮ್ಮದಾದಲ್ಲಿ, ನಿಮಗೆ ಯಾವ ದಾರ್ಶನಿಕನೂ ಸನ್ಮಾರ್ಗ ತೋರಿಸಲಾರ. ಒಬ್ಬನ ಹೇಳಿಕೆ, ಮಾರ್ಗದರ್ಶನದ ಮೇಲೆ ನಿಮ್ಮದೇ ಆದ ವಿವೇಚನೆ ಸೇರಿದಲ್ಲಿ ಖಂಡಿತಾ ನೀವು ಮಾನವರಾಗುತ್ತೀರಿ. ಹೀಗೆ ಭೋದಕವಾದ ಸಾವಿರಾರು ಉದಾಹರಣೆ ಕೊಡಬಹುದು, ಬುದ್ಧಿವಂತರಿಗೆ ಒಂದೇ ಸಾಕು. ಆದ್ದರಿಂದ, ಬುದ್ಧಿವಂತರಾಗಿ ಎಂದು ಆಶಿಸುತ್ತೇನೆ.

ಇನ್ನು ಇತ್ತೀಚೆಗೆ ಪ್ರಕಟಿಸಿದ ಶ್ರೀಚಕ್ರ, ಶ್ರೀವಿಧ್ಯೆಯ ಬಗ್ಗೆ ಬರೆಯುತ್ತೆನೆ. ಈಗ ಸಾರ್ವತ್ರಿಕವಾಗಿರುವ ಎಲ್ಲಾ ಕಡೆಯಲ್ಲಿಯೂ ಲಭ್ಯವಿರುವ ಶ್ರೀವಿಧ್ಯೆಯ ಒಂದು ಸ್ವರೂಪ ಎಂದು ಹೇಳುವ ಯಂತ್ರ ಪಟವೊಂದು ಮಾರಾಟಕ್ಕೆ ಸಿಗುವ ಮಟ್ಟಕ್ಕೆ ಬರುತ್ತಿದೆ. ಸಧ್ಯದಲ್ಲೇ ಸಂತೆಯಲ್ಲೂ ಮಾರಾಟವಾಗುವ ಸ್ಥಿತಿಗೆ ಬರುತ್ತದೆ ಎಂದರೆ ಹೆಚ್ಚಲ್ಲ. (೧೯೯೯ರಲ್ಲಿ ಲೇಖನ ಬರೆಯುವ ಕಾಲಕ್ಕೆ ಶ್ರೀಚಕ್ರ ಸಂತೆಯಲ್ಲಿರಲಿಲ್ಲ. ಆದರೆ ಈಗ ಹಾದಿ-ಬೀದಿಯಲ್ಲೂ ಮಾರಟಕ್ಕಿದೆ. ಆನ್ಲೈನಲ್ಲಿ ಏನಕ್ಕೇನೂ ಸಿಗುತ್ತದೆ. ದುಡ್ಡು ಸುರಿದು ಯಾರೂ ಏನನ್ನೂ ಕೊಂಡುಕೊಳ್ಳಬಹುದು ಎಂಬ ಸ್ಥಿತಿ ನಿರ್ಮಾಣವಾಗಿದೆ). ಈ ರೀತಿಯಲ್ಲಿ ಶ್ರೀಚಕ್ರ ಎಂಬ ಒಂದು ಯಂತ್ರವು ಕೆಲ ರೇಖಾ ವಿನ್ಯಾಸದ ತಾಂತ್ರಿಕ ಯಂತ್ರಸ್ವರೂಪವೊಂದು ಸಂತೆ ಸಂತೆಯಲ್ಲೂ ಪತ್ರಿಕೆಯ ಜಾಹೀರಾತು ನೀಡಿ ಮಾರಾಟವಾಗುವ ಸ್ಥಿತಿಗೆ ಬಂದಾಗ ನಿಜವಾದ ಧಾರ್ಮಿಕ ನಿಷ್ಠೆಯುಳ್ಳ ಪ್ರತಿಯೊಬ್ಬನೂ ಆಲೋಚಿಸಬೇಕಾದ್ದೆ. ಏಕೆಂದರೆ, ಶ್ರೀಚಕ್ರ ಎಂಬ ಯಂತ್ರಕ್ಕೆ ಸಿಕ್ಕಿದ ಮಾನ್ಯತೆ ಮತ್ತು ಅದಕ್ಕೆ ಕೆಲ ಸ್ಥಾಪಿತ ಹಿತಾಸಕ್ತಿಗಳು ತೋರಿಸಿದ ವೇದ ಸ್ವರೂಪ ಮತ್ತು ವೇದ ಮಾನ್ಯತೆ. ಈ ವಿಚಾರವಾಗಿ ಆಲೋಚಿಸಿದ ಬುದ್ಧಿವಂತರು ನಾನು ಕೇಳುವ ಈ ಕೆಳಗಿನ ಕೆಲ ಪ್ರಶ್ನೆಗಳಿಗೆ ಆತ್ಮಪೂರ್ವಕ ನಿಮ್ಮ ಆತ್ಮವಿಮರ್ಶೆ ಮಾಡಿಕೊಂಡು ಸರಿಯೆಂದು ಕಂಡ ರೀತಿಯಲ್ಲಿ ಉತ್ತರಿಸಬಹುದು. ಆ ಪ್ರಶ್ನೆ ಕೇಳಿಕೆ ಮೊದಲು ಶ್ರೀಚಕ್ರ ಮತ್ತು ಶ್ರೀವಿಧ್ಯಾ ಸ್ವರೂಪ ಅಲ್ಲದೆ, ಯಂತ್ರ ಮತ್ತು ಈ ಸಂಬಂಧವಾಗಿ ಇರತಕ್ಕ ಗ್ರಂಥಾಧಾರಗಳು, ಅವುಗಳ ವಿವರಣೆ, ಹೊಸದಾಗಿ ಹುಟ್ಟಿದ ಹಲ ಕೆಲವು ಪ್ರಸಕ್ತ ಗ್ರಂಥಗಳು, ಇವುಗಳ ವಿಚಾರವಾಗಿ ಸವಿವರವಾಗಿ ತಿಳಿಸುತ್ತಿದ್ದೇನೆ.
(ಸಶೇಷ..)
ಕೆ. ಎಸ್. ನಿತ್ಯಾನಂದ,
ಪೂರ್ವೋತ್ತರ ಮೀಮಾಂಸಕರು,

ವೇದ-ವಿಜ್ಞಾನ ಮಂದಿರ, ಚಿಕ್ಕಮಗಳೂರು

(ಋತ್ವಿಕ್ ವಾಣಿ ಪತ್ರಿಕೆ - ಫೆಬ್ರವರಿ ೧೯೯೯)