Friday, 8 December 2017

ಶ್ರೀ ಚಕ್ರ, ಶ್ರೀ ವಿಧ್ಯೆ - ೭ : ದಶಮಹಾವಿಧ್ಯೆಗಳ ನೈಜತೆ, ವೇದೋಕ್ತವಾಗಿ ಇವೆಲ್ಲದರ ದುಷ್ಪರಿಣಾಮಗಳು

(ಋತ್ವಿಕ್ ವಾಣಿ ಪತ್ರಿಕೆ - ಫೆಬ್ರವರಿ ೧೯೯೯)

[ಸೂಚನೆ:- ಈ ಲೇಖನವು ಶ್ರೀಚಕ್ರ, ಶ್ರೀವಿಧ್ಯಾ ಲೇಖನ ಸರಣಿಯ ಭಾಗ ಮಾತ್ರ. ಸಂಪೂರ್ಣವಾಗಿ ಅರ್ಥವಾಗಬೇಕಾದರೆ ಈ ಲೇಖನಮಾಲೆಯ ಹಿಂದಿನ ಲೇಖನಗಳನ್ನು ಹಲವಾರು ಭಾರಿ ಮುಕ್ತ ಮನಸ್ಸಿನಿಂದ ಓದಿ ಮನದಟ್ಟು ಮಾಡಿಕೊಂಡರೆ ಮಾತ್ರ ವಿಷಯದ ಗಹನತೆ ಅರ್ಥವಾದೀತು. ಹಾಗೇ ಈ ಲೇಖನ ಸರಣಿಯ ಮುಂದಿನ ಲೇಖನಗಳನ್ನು ಓದಿದರೆ ಮಾತ್ರ ಒಟ್ಟು ಸಾರಾಂಶವನ್ನು ಸಮಗ್ರವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯ. ಇವು ಹಲವು ಲೇಖನಗಳಲ್ಲ, ಒಂದೇ ಲೇಖನವನ್ನು ಬಿಡಿಯಾಗಿಸಿ ಪ್ರಕಟಿಸಲಾಗಿದೆಯಷ್ಟೆ.]


ಪ್ರಸಕ್ತ ಕಾಲದ ಶ್ರೀವಿಧ್ಯೋಪಾಸಕರು ಬಳಸುವ ಮುಖ್ಯ ಶಬ್ದ "ದಶ ಮಹಾವಿಧ್ಯೆಗಳು". ಇದ್ಯಾವುದು ಆಲೋಚಿಸಿದ್ದೀರಾ? ಈ ಹಿಂದೆ ತಿಳಿಸಿದ ೧೦,೦೦೦ ಯಂತ್ರದ ಸೂತ್ರ ಮತ್ತು ಬಳಕೆ ವಿಧಾನ ಮತ್ತು ಉಪಸಂಹಾರ ವಿಧ್ಯೆಗಳೇ ದಶಮಹಾವಿಧ್ಯೆಗಳು. ಅದರಲ್ಲಿ ನಾದ ಸ್ವರೂಪ ೭,೦೦೦ ಕ್ಕೆ ಸಪ್ತಶತಿ ಎಂದು ಹೆಸರು. ಅಂದರೆ, ಒಂದು ಹತ್ತರ ಸಂಯುಕ್ತರೂಪದ ಏಳುನೂರು ಬೀಜಗಣನೆ. ಅವು ಹಿಂದೆ ತಿಳಿಸಿದಂತೆ ಏಕಾಕ್ಷರೀ, ದ್ವ್ಯಕ್ಷರೀ, ಸಂಯುಕ್ತಾಕ್ಷರೀ ಅಥವಾ ಇನ್ಯಾವುದೇ ಆಗಿರಬಹುದು. ಆ ಬೀಜದಲ್ಲಿ ಮುಖ್ಯವಾಗಿ ಅದರ ಹಿಂದಿನ ಮಂತ್ರದ ಎಲ್ಲಾ ಸಾರವಿರುತ್ತದೆ, ಅದೇ ಸಪ್ತಶತಿ. ಹಾಗೆಯೇ ಕಿರಣ ಪ್ರಧಾನವಾದ ೩,೦೦೦ ಮಂತ್ರವಿದೆ ಎಂದು ತಿಳಿಸಿದೆ. ಇದೂ ಕೂಡ ಒಂದು ಹತ್ತರ ೩೦೦ ಸಂಯುಕ್ತ ಸ್ವರೂಪವೇ ತ್ರಿಶತಿ ಎಂಬುದು. ಈ ಹತ್ತು ಕೂಟವೇ ದಶಮಹಾವಿಧ್ಯೆ, ಒಟ್ಟು ೧೦೦೦ ಸೂತ್ರಗಳ ಹತ್ತು ಕೂಟವೇ ದಶಮಹಾವಿಧ್ಯೆಯೇ ವಿನಃ ಈಗ ಪ್ರಸಕ್ತ ಕಾಲದಲ್ಲಿ ಚಾಲ್ತಿಯಲ್ಲಿರುವ ಆಭಿಚಾರ ಪ್ರಕ್ರಿಯೆಯ ಛಿನ್ನಮಸ್ತಾ, ಧೂಮಾವತ್ಯಾದಿ ಹತ್ತು ತಂತ್ರಗಳಲ್ಲ, ಆದರೆ ನಮ್ಮ ಅಜ್ಞಾನವು ಅದನ್ನೇ ದಶಮಹಾವಿಧ್ಯಾ ಎಂದು ರೂಪಿಸಲ್ಪಟ್ಟಿದೆ.

        ಈಗ ದುರ್ಗಾ, ಚಂಡಿಕಾ ಇತ್ಯಾದಿಗಳಿಗೆ ಬಂದ ಪ್ರಾಧಾನ್ಯತೆಗೂ ಕೂಡ ಕಾರಣ ಇದೆ, ಏಕೆಂದರೆ "ಸಪ್ತಶತೀ ಸೂತ್ರಗಳು" ಎಂಬ ವಿಚಾರ ಎಲ್ಲಿಯೋ, ಯಾವುದೋ ಅನ್ವೇಷಕನಿಗೆ ಕಂಡುಬಂದಾಗ ಆತನಿಗೆ ಕಂಡುಬಂದದ್ದು ಸಪ್ತಶತೀ ಎಂಬ ದೇವೀ ಭಾಗವತದ ಈ ಭಾಗ. ಆಗ ಅದರಲ್ಲಿ ಎಲ್ಲಾ ವಿಧ್ಯೆಯೂ ಅಡಕವಾಗಿರಬಹುದು ಎಂದು ಅನ್ವೇಷಣೆ ಪ್ರಾರಂಭವಾಯಿತು. ಹಾಗಾಗಿ ಸಪ್ತಶತೀ ಎಂಬ ದೇವೀ ಭಾಗವತವು ಪ್ರಚಲಿತ ಕಾಲದಲ್ಲಿ ನಾನಾರ್ಥಕೋಶ ಸಿದ್ಧಪಡಿಸುವಷ್ಟು ಬೆಳೆದಿದೆ ಎಂದು ನಿಮಗೆ ಗೊತ್ತಿರಬಹುದು. ಆದರೆ ದೇವೀ ಭಾಗವತವು ಮೂಲ ಪ್ರಕೃತಿಯನ್ನು ಹೊಂದಿದ ಪ್ರಕೃತಿಯ ಸೃಷ್ಟಿಗೆ ಕಾರಣವಾದ ಪಂಚಭೂತಾತ್ಮಕವಾದ ತತ್ವ ಎಂಬ ಸಿದ್ಧಾಂತಕ್ಕೆ ಬರಲಿಲ್ಲ, ಅದು ನಮ್ಮ ದುರ್ದೈವ.

        ಶ್ರೀಯಂತ್ರ ಪೂಜೆಯಲ್ಲಿ ಪಂಚಕೋಣಗಳು, ಶಕ್ತಿ ಚಕ್ರ ಎಂದು ಉದಾಹರಿಸಿದವರು, ಅದು ಪ್ರಕೃತಿ, ಪಂಚತತ್ವಗಳು ಎಂಬ ಸತ್ಯ ಮಾತ್ರ ಒಪ್ಪುವುದಿಲ್ಲ. ಹಾಗೆಯೇ ದಶಮಹಾವಿಧ್ಯೆಯ ಒಟ್ಟು ಸಂಗ್ರಹ ೧೦,೦೦೦ ಯಂತ್ರಗಳು. ಅವುಗಳಿಗೆ ಸಂಬಂಧಪಟ್ಟ ಬೀಜಾಕ್ಷರ, ಕೀಲಕ ಅಂದರೆ ವಿಧಾನ, ಉಪಯೋಗ, ಪ್ರಯೋಗ ಅಂದರೆ ಅಸ್ತ್ರ - ಅಸ್ತ್ರ ಮೂಲವೆಂದರೆ ಶಕ್ತಿ - ಮಂತ್ರಭಾಗ; ಅವುಗಳ ವಿನ್ಯಾಸ ಇವುಗಳೆಲ್ಲಾ ಅಡಕವಾಗಿರುವ ಷಡ್ತಂತ್ರ ಸಹಿತವಾಗಿರುವ ತಂತ್ರಶಾಸ್ತ್ರಾಂತರ್ಗತ ವಿಧ್ಯೆಯೇ ವಿನಃ ಕೇವಲ ಶಕ್ತಿ ಪೂಜಾದ್ಯೋತಕವಾದ ಈ ಆಭಿಚಾರೀ ದೇವತೆಗಳಲ್ಲ. ಛಿನ್ನಮಸ್ತವಾಗಲೀ ಅಥವಾ ಧೂಮಾವತೀ, ಕಾಳಿಕಾ, ಕುಮಾರಿಯಾಗಲೀ ಎಲ್ಲವೂ ಕೂಡ ತಾಂತ್ರಿಕರಿಂದ ಆಯಾ ಸಂದರ್ಭ ಉಪಯೋಗಗಳಿಗಾಗಿ ಬಳಸಲ್ಪಡುವ ತತ್ವಗಳಷ್ಟೆ. ಅದನ್ನೇ ಮಹತ್ತು ಎಂದು ತಿಳಿಯಬೇಡಿ. ಈಗ ನಿಮಗೆ ಅರ್ಥವಾಗಿರಬಹುದು ಯಂತ್ರವೆಂದರೇನು ಎಂದು? ತಂತ್ರಶಾಸ್ತ್ರಕ್ಕೆ ವಿರುದ್ಧವಾದ ಒಂದು ರೇಖಾ ವಿನ್ಯಾಸವು ಯಂತ್ರವಾಗುವುದಿಲ್ಲ, ನೆನಪಿರಲಿ.

        ಇನ್ನು ಮಂತ್ರ ವಿಚಾರ ತೆಗೆದುಕೊಳ್ಳಿ, ಅದರ ಪೂಜಾವಿಧಾನದ ಪ್ರಕಟಿತ ಗ್ರಂಥದ ಉದಾಹರಣೆ ನೋಡಿ. ಹಳೇ ಪ್ರಕಟಣೆ ಮತ್ತು ಹೊಸ ಪ್ರಕಟಣೆ ಎರಡನ್ನೂ ವಿಮರ್ಶಿಸಿ ಕಾಲ ಕಾಲಕ್ಕೆ ಅದರ ಕೆಲಸ ಕಾರ್ಯಗಳಲ್ಲಿ ಅಪಾಯಕಾರೀ ವರ್ತನೆ ಉಂಟಾಗಿರುವುದು ಕಂಡುಬರುತ್ತದೆ. ಪುಸ್ತಕವನ್ನು ಸಮಗ್ರವಾಗಿ ಅಧ್ಯಯನ ಮಾಡಿ, ಆಗ ನಿಮಗೆ ಅರ್ಥವಾಗುತ್ತದೆ. ಈ ರೀತಿಯ ಪ್ರಕಟಿತ ಗ್ರಂಥಗಳು ಈ ವಿಚಾರವಾಗಿ ನಾನಾ ಅಭಿಪ್ರಾಯವನ್ನು ಏಕೆ ಹೇಳುತ್ತಿವೆ? ಎಲ್ಲವೂ ಒಂದೇ ರೀತಿಯಾಗಿ ಏಕೆ ಹೇಳುತ್ತಿಲ್ಲ? ಕಾರಣ ಆ ವಿಚಾರವಾಗಿ ಇರತಕ್ಕ ಅಲ್ಪಜ್ಞತೆ - ಅಂದಾಜು ಪ್ರಕಟಿತ ಪ್ರಸಕ್ತ ಕಾಲದ ಶ್ರೀವಿಧ್ಯಾ ಶ್ರೀಚಕ್ರ ಪೂಜಾ ಪದ್ಧತಿಯ ಬಗ್ಗೆ ಅಂದಾಜು ೪೦೦ ಪುಸ್ತಕಗಳು ನನ್ನಲ್ಲಿವೆ. ಅವುಗಳೆಲ್ಲಾ ಪ್ರತಿಯೊಂದು ಕೂಡಾ ಒಂದಕ್ಕೊಂದು ವ್ಯತಿರಿಕ್ತವಾಗಿವೆ. ಬೇರೆ ಬೇರೆ ರೀತಿಯಲ್ಲಿ ಹೇಳುತ್ತಿವೆ, ಅದಕ್ಕೆ ಕಾರಣ ಆ ಪ್ರಕಟನಾಕಾರ ತಿಳಿದಿದ್ದು ಅಷ್ಟೇ ಅಂತ ವಿನಃ ಅದು ಸತ್ಯವಾಗಲು ಸಾಧ್ಯವಿಲ್ಲ. ಅದಕ್ಕೇ ಪೂರ್ವಜರು ಎಲ್ಲಾ ಗ್ರಂಥಗಳಿಗೂ ಆಧಾರವಾಗಿ ವೇದ ಪ್ರಾಮಾಣ್ಯವನ್ನು ನಿರ್ದೇಶಿಸಿದರು. ವೇದವು ಅಂಗೀಕರಿಸದ ಯಾವುದೇ ವಿಚಾರವೂ ಮಾನ್ಯವಲ್ಲ, ಇದು ಖಂಡಿತ.

        ಈಗ ಇನ್ನೊಂದು ಪ್ರಶ್ನೆ ಉದ್ಭವಿಸುತ್ತದೆ. ಈ ತಾಂತ್ರಿಕ ಯಂತ್ರ ಸೂತ್ರಗಳನ್ನು ಖಂಡಿಸುತ್ತಿದ್ದರು ವೈದಿಕರು. ವೇದದಲ್ಲಿ ಇದಕ್ಕೆ ಪ್ರಮಾಣ ಇರಲು ಹೇಗೆ ಸಾಧ್ಯ? ಇದ್ದರೆ ಅದು ಪರಿಪೂರ್ಣವೆಂದು ನಂಬುವುದು ಹೇಗೆ? ವೇದದಲ್ಲಿ ಇವೆಯಾ ಈ ವಿಚಾರಗಳು? ಖಂಡಿತಾ ಇವೆ. ಅದನ್ನೇ ಹಿಂದೆ ವೇದವ್ಯಾಸರು ವಿಂಗಡಿಸಿದರು ಎಂದಾಗ ಉದಾಹರಿಸಿದ್ದು. ವೇದದಲ್ಲಿ ಈಗಿನ ಪ್ರಸಕ್ತ ಕಾಲದ ಎಲ್ಲಾ ಜ್ಞಾನವಿಧ್ಯೆಗಳೂ ಅಡಕವಾಗಿದೆ. ಅಲ್ಲದೇ, ವೇದದಲ್ಲಿ ಇಲ್ಲದ ತಿಳುವಳಿಕೆ ಎಂದು ಬೇರೆ ಇಲ್ಲ. ಸರ್ವವೂ ಅಡಕವಾಗಿರುವ ವೇದವು, ಅದರ ಶಬ್ದಾರ್ಥ ಗಮನಿಸಿದರೇ ಗೊತ್ತಾಗುತ್ತದೆ. ವಿದ್ ಧಾತುವಿನಿಂದ ಹುಟ್ಟಿದ ವೇದ ಶಬ್ದವು ವಿವಿಧ ಜ್ಞಾನವನ್ನು ಏಕರೂಪದಲ್ಲಿ ನಿಮಗೆ ಹೇಳಬಲ್ಲ ಒಂದು ಸಾಹಿತ್ಯ. ಆದರೆ ನಿಮಗೆ ಅರ್ಹತೆ ಇರಬೇಕು ಅಷ್ಟೆ, ವೇದ ಶಬ್ದದ ಅರ್ಥವೇ ಇದು. ಈ ತಂತ್ರ-ಮಂತ್ರ-ಯಂತ್ರಶಾಸ್ತ್ರದ ಎಲ್ಲಾ ನಿಬಂಧನೆಗಳೂ ಕೂಡಾ ವೇದೋಕ್ತವೇ. ಅದರಲ್ಲಿ ಇಲ್ಲ ಎಂದು ತಿಳಿದದ್ದು ನಿಮ್ಮ ಅಜ್ಞಾನ.

        ಉದಾಹರಣೆಗೆ ಈ ಹಿಂದೆ ಉದಾಹರಿಸಿದ ಶ್ರೀಚಕ್ರವೆಂಬ ಯಂತ್ರ ಹೇಗೆ ಕಾರ್ಯವೆಸಗಲು ಸಾಧ್ಯವಿಲ್ಲ ಎಂಬುದನ್ನು ವೇದ ಉದಾಹರಿಸಿದೆ. ಆದರೆ ಹೇಗೆ ಅದಕ್ಕೆ ಶ್ರೀಚಕ್ರದ ವಿಚಾರ ಬೇಕಿಲ್ಲ, ಆದರೆ ಅಲ್ಲಿ ಉದಾಹರಿಸಿದ ಸೂತ್ರವು ೩ ಸಂಖ್ಯೆಯ ಅಥವಾ ೩ನ್ನು ಏನೇನಾಗಿ ಮೂರರ ಅನುಪಾತ ರೂಪವನ್ನು ತಿಳಿಸುತ್ತಾ

ತ್ರಿಶ್ಚಿನ್ನೋ ಅದ್ಯಾ ಭವತಂ ನ ವೇದಸಾ ವಿಭುರ್ವಾಂ ಯಾಮ ಉತ ರಾತಿರಶ್ವಿನಾ |
ಯುವೋರ್ಹಿ ಯನ್ತ್ರಂ ಹಿಮ್ಯೇಮ ವಾಸಸೋಭ್ಯಾಯಂಸೇನ್ಯಾ ಭವತಂ ಮನೀಷಿಭಿಃ ||

ಎಂದು ಆರಂಭವಾಗುವ ಈ ಮಂತ್ರವು ಸ್ಪಷ್ಟವಾಗಿ ಮೂರನ್ನು ಯಾವುದೇ ಕಾರಣಕ್ಕೂ ಸ್ಥಂಬಕ ಬೀಜ ಸತ್ವದಿಂದ ಯಾವುದೇ ಕಾರಣಕ್ಕೂ ಮೂರನ್ನು ಎಂಟಾಗಿ ವಿಭಜಿಸಬಾರದು.

ತ್ರಿಃ ಸೌಭಗತ್ವಂ ತ್ರಿರುತ ಶ್ರವಾಂಸಿ ನಸ್ತ್ರಿಂಷ್ಠಂ ವಾಂ ಸೂರೇ ದುಹಿತಾ ರುಹದ್ರಥಮ್ ||

ಎಂದರು. ಇದನ್ನು ವಿವರಿಸಲಾರೆ, ಏಕೆಂದರೆ ಇದು ನೀವೇ ಅಧ್ಯಯನದಿಂದ ತಿಳಿಯಬೇಕೇ ವಿನಃ ವರ್ಣಿಸಲಾಗದ್ದು. ಇದು ಅಥರ್ವದ ಒಂದು ಯಂತ್ರ ವಿನ್ಯಾಸಕ್ಕೆ ಸಂಬಂಧಪಟ್ಟ ವಿವರದ ಬಗ್ಗೆ ಸ್ಪಷ್ಟ ಬೆಳಕು ನೀಡುವ ಆದರೆ ಕೇವಲ ಸಂಕೇತ ರೂಪವಾಗಿರುವ ಮಂತ್ರ, ಇದು ಋಗ್ವೇದದಲ್ಲಿದೆ. ಆದರೆ ಅಥರ್ವದ ಋಷಿಗಳಾದ ಆಂಗೀರಸ ಗಣವೇ ಈ ಮಂತ್ರದ ದೃಷ್ಟಾರರು. ಅಲ್ಲದೇ ಇದರಲ್ಲೂ ಕೂಡ ಪರಿಪೂರ್ಣವಾಗಿಲ್ಲ. ಉಳಿಕೆ ವಿಚಾರ ಯಾವ ಭಾಗದಲ್ಲಿದೆ ಎಂಬ ವಿಚಾರ ತಿಳಿಸುತ್ತದೆ ಮಾತ್ರ. ಹೀಗೆ ಹಲವು ಉದಾಹರಣೆಗಳಿವೆ. ಹಿಂದೆ ಉದಾಹರಿಸಿದ "ತಂತ್ರಿಪೃಷ್ಠೇ" ಮಂತ್ರವೂ ಕೂಡಾ ಹಾಗೇ ಇಲ್ಲಿ "ತ್ರಿಪೃಷ್ಠೇ" ಮೂರನೇ ಭಾಗ ಎಂದರ್ಥ. ಹಾಗಿದ್ದಾಗ ಅದು ಇದ್ದಿದ್ದು ಮೊದಲನೆಯ ಭಾಗ, ಎರಡನೆಯದು ಅದರ ಸ್ವರೂಪವೇ ಆದ ಬ್ರಾಹ್ಮಣ, ಮೂರನೆಯದು ಅರಣ್ಯಕ ಎಂದರ್ಥ. ಅರಣ್ಯಕದಲ್ಲಿ ಹುಡುಕಿದಲ್ಲಿ ಮುಂದಿನ ವಿವರ ಸಿಗಬಹುದು ಎಂದು ಅರ್ಥೈಸಿಕೊಳ್ಳಬೇಕು. ಹೀಗೆ ಮಹಾವಿಧ್ಯೆಯನ್ನು ಮಹರ್ಷಿ ವೇದವ್ಯಾಸರು ಗೋಪ್ಯವಾಗಿ ಸಂರಕ್ಷಿಸುವುದಕ್ಕಾಗಿ ವಿಂಗಡಿಸಿದರೇ ವಿನಃ ನಾಲ್ಕು ಪಂಗಡ ಸೃಷ್ಟಿಸಿ ಸಮಾಜದಲ್ಲಿ ಗೊಂದಲವೇರ್ಪಡುವುದಕ್ಕಲ್ಲ. ಆಗ ನಾಲ್ಕೂ ಶಾಖೆಯು ಒಂದುಗೂಡಿದರೆ ಮತ್ತು ನಾಲ್ಕು ಭಾಗದ ಅಧ್ಯಯನ ಮಾಡಿದರೆ ಮಾತ್ರ ಈ ಸೂತ್ರ ತಿಳಿಯಬಹುದು, ಬಳಸಬಹುದ ಎಂಬುದೇ ಇದರ ಅರ್ಥ. ಅದನ್ನು ತಿಳಿಸಲೆಂದೇ ಯಜ್ಞ-ಯಾಗಾದಿಗಳಲ್ಲಿ ನಾಲ್ಕು ಶಾಖೆಯವರೂ ಇದ್ದು ನಡೆಸಬೇಕೆಂದು ಸೂತ್ರಕಾರರು ರಚಿಸಿದರು. ಆದರೆ ಇಲ್ಲಿ ಶಾಖಾ ಭೇದದಿಂದಾಗಿ ಪರಸ್ಪರ ಸಂಬಂಧ ಕೂಡ ಬೆಳೆಸದ ಮಟ್ಟಿಗೆ ತೀರಾ ಕ್ಷುಲ್ಲಕವಾದ ಲೌಕಿಕ ಜೀವನದಲ್ಲಿ ಬೇರಾಗಿದ್ದಾರೆ, ಎಂದರೆ ಈ ಜನರು ಆಧ್ಯಾತ್ಮಿಕವಾಗಿ ಒಂದಾಗಲು ಸಾಧ್ಯವೇ? ಇವರು ಈ ವೇದ ರಹಸ್ಯ ಅರಿಯುತ್ತಾರೆಯೇ? ಇವರಲ್ಲಿರತಕ್ಕ ಆಷಾಢಭೂತಿತನಕ್ಕೆ ಏನೆಂದು ಹೇಳಲಿ? ತಾವೂ ಮಾಡುವುದಿಲ್ಲಾ, ಇನ್ನೊಬ್ಬರಿಗೂ ಬಿಡಲಾರರು, ಇಂತಹಾ ಜನರ ಮಧ್ಯೆ, ನಿರ್ದೇಶಕರ ಮಧ್ಯೆ ನಾವು ಸಿಕ್ಕಿದ್ದೇವ, ಆ ಸತ್ಯವೇ ನಮ್ಮನ್ನು ಕಾಪಾಡಬೇಕು.

ಇನ್ನೊಂದು ಕಡೆ ಕುತ್ಸ ಆಂಗೀರಸನು ಖಗೋಲ ವಿಜ್ಞಾನದ ಬಗ್ಗೆ ಹೇಳುತ್ತಾ

ಇದಂ ಶ್ರೇಷ್ಠಂ ಜ್ಯೋತಿಷಾಂ ಜ್ಯೋತಿರಾಗಾಚ್ಚಿತ್ರಃ ಪ್ರಕೇತೋ ಅಜನಿಷ್ಟ ವಿಭ್ವಾ |

ಹೀಗೆ ಮುಂದುವರೆಯುತ್ತದೆ. ನಮ್ಮಲ್ಲಿಯ ಜ್ಯೋತಿಷಿಗಳು ಈ ವಿಚಾರ ಎಲ್ಲಿ ನೋಡಿದ್ದಾರೆ? ಅವರಿಗೆ ನಿಜವಾಗಿ ಜ್ಯೋತಿಷ್ಯವೆಂದರೆ ನವಗ್ರಹ ಮತ್ತು ಗಣಿತವೆಂದು ತಿಳಿದಿದ್ದಾರೆಯೇ ವಿನಃ ವೇದೋಕ್ತವಾದ ವಿಚಾರ ಏನು ಬಲ್ಲರು? ಪ್ರಸಕ್ತಕಾಲದ ಜ್ಯೋತಿಷಿಗಳು ಎಷ್ಟು ವಿಚಾರ ತಿಳಿದಿದ್ದಾರೆ?

ಅಸ್ಯ ವಾಮಸ್ಯ ಪಲಿತಸ್ಯ ಹೋತುಸ್ತಸ್ಯ ಭ್ರಾತಾ ಮಧ್ಯಮೋ ಅಸ್ತ್ಯಶ್ನಃ |
ತೃತೀಯೋ ಭ್ರಾತಾ ಘೃತಪೃಷ್ಠೋ ಅಸ್ಯಾತ್ರಾಪಶ್ಯಂ ವಿಶ್ವತಂ ಸಪ್ತಪುತ್ರಮ್ ||

ಸಪ್ತ ಮತ್ತು ಅದರ ಅನುಪಾತಗಳು ಕಾಲ, ಕಾಲಚಕ್ರ, ಸೌರಶಕ್ತಿ, ಧ್ವನಿ, ಶಬ್ದವಿಜ್ಞಾನ ಈ ಬಗ್ಗೆ ಹೇಳಿದ್ದಾನೆ. ಇದರ ಬಗ್ಗೆ ತಿಳಿದವರೇ ಇಲ್ಲವೆಂದು ಖಂಡಿತಾ ಹೇಳಬಲ್ಲೆ. ಔಚಥ್ಯವೆಂಬ ಹೆಸರು ಅನ್ವರ್ಥ ನಾಮವಾಗಿದೆ ಅಂದರೆ ಉಚಿತವಾದುದನ್ನೇ ಹೇಳುವವ ಎಂದರ್ಥ. ಇಂತಹ ಋಷಿ ಮುನಿಗಳು ತಮ್ಮ ಸಾರ್ಥಕ ಸಂಶೋಧನೆಯನ್ನು ಉಪಯೋಗಿಸಲೆಂದು ಬರೆದಿಟ್ಟಾಗ ಅದನ್ನು ಅರಿಯದೇ, ಮೂರ್ಖರಾದ ಸಮಾಜದ ಗಣ್ಯರು ತಮ್ಮ ಹಿತಾಸಕ್ತಿಗಾಗಿ ಏನೇನೋ ಬರೆದು ಪ್ರಕಟಿಸಿದಾಗ ಅದನ್ನೇ ನಂಬಬೇಕೆಂದು ಒತ್ತಡ ತಂದಾಗ ಅನಿವಾರ್ಯವಾಗಿ ನಂಬಿದ್ದೇ ಸತ್ಯವಾಗುವುದಿಲ್ಲ. ಈ ಋಷಿಯೇ ಹೇಳಿದ ಗೌರೀರ್ಮಿಮಾಯ ಎಂಬ ಮಂತ್ರ ಎಷ್ಟು ಆದರ್ಶ? ಎಷ್ಟು ಸತ್ಯ? ಎಷ್ಟು ಆದರ್ಶಪೂರ್ಣ? ಎಷ್ಟು ರಕ್ಷಣಾತ್ಮಕ? ಆದರೆ, ಸಮಾಜ ಅದನ್ನು ಬಿಟ್ಟು ಯಾವುದೋ ಕ್ಷುದ್ರೋಪಾಸನೆಯನ್ನು ಅವಲಂಭಿಸಿದೆಯಲ್ಲಾ? ಇದಕ್ಕೆ ಕಾರಣರಾರು? - ನಾವೇ, ಏಕೆಂದರೆ, ನಮ್ಮಲ್ಲಿರುವ ಮಹತ್ವಾಕಾಂಕ್ಷೆ. ಶ್ರಮವಿಲ್ಲದೆ ಸಂಪತ್ತು ಒದಗಬೇಕೆಂಬ ದುರಾಸೆ. ತನ್ನ ಅಕ್ಕಪಕ್ಕದವರ ನಾಶಕ್ಕಾಗ ಪ್ರಯತ್ನಿಸುವ ದುರ್ಬುದ್ಧಿ, ಅಧಿಕಾರಲಾಲಸೆ, ಭೋಗಾಪೇಕ್ಷೆ, ಇವೆಲ್ಲಾ ಮಾನವ ಲಕ್ಷಣವಲ್ಲ. ಹಿಂದೆ ಹೇಳಿದ ಸಮಾಜಕ್ಕಾಗಿ ಬದುಕುವ ಆದರ್ಶ ರೂಢಿ ಮಾಡಿಕೊಂಡಲ್ಲಿ ಮಾತ್ರ ಪ್ರಪಂಚ ಉಳಿದೀತು. ಹೀಗೆ ಋಗ್ಯಜುಸ್ಸಾಮಾಥರ್ವದ ಮಂತ್ರಗಳ ರಹಸ್ಯ ಸ್ಫೋಟ ಮಾಡುತ್ತಾ ಹೋದರ ಏನೂ ಸಾಧಿಸಿದಂತಾಗಲಿಕ್ಕಿಲ್ಲ. ಮುಖ್ಯವಾಗಿ ಬೇಕಾದ್ದು ನಮ್ಮ ಸಂಸ್ಕಾರ, ವಿಧ್ಯೆ ಉತ್ತಮಗೊಳ್ಳಬೇಕು. ಆಗ ಈ ಮಾಯಾ ವೇಷಧಾರಿಗಳ, ಸುಳ್ಳು ವೇದಾಂತ ಪ್ರಚಾರಕರ, ಸ್ಥಾಪಿತ ಹಿತಾಸಕ್ತಿಗಳ ಬಣ್ಣ ಬಯಲಾಗಲು ಸಾಧ್ಯ, ಸತ್ಯವು ಹೊರ ಬರಲು ಸಾಧ್ಯ.
 (ಸಶೇಷ..)

ಇಂತು ಸಜ್ಜನ ವಿಧೇಯ,
ಕೆ. ಎಸ್. ನಿತ್ಯಾನಂದ,
ಪೂರ್ವೋತ್ತರೀಯ ಮೀಮಾಂಸಕರು,
ವೇದ ವಿಜ್ಞಾನ ಮಂದಿರಚಿಕ್ಕಮಗಳೂರು

(ಋತ್ವಿಕ್ ವಾಣಿ ಪತ್ರಿಕೆ - ಫೆಬ್ರವರಿ ೧೯೯೯)