Wednesday, 28 February 2018

ಸತ್ಯಾನ್ವೇಷಣೆಯ ದಾರಿ – ಸಾಮ ನೀತಿ (Lyrics and Audio)ಸತ್ಯವು ಒಂದೇ. ಆದರೆ ಚಿಂತಕನ ಹಂತದಲ್ಲಿ ಅಲ್ಲಲ್ಲಿ ಪ್ರಕಟವಾಗುತ್ತಾ, ಅವನನ್ನು ಮುಂದೆ ಮುಂದೆ ಕರೆದುಕೊಂಡು ಹೋಗುತ್ತದೆ. ಒಮ್ಮೆ ಗೋಚರಿಸಿದ ವಿಚಾರ ಕಾಲಕ್ಕೆ ಸತ್ಯ. ಅದು ಮುಂದುವರಿದರೆ ಹಿಂದಿನ ವಿಚಾರ ಸುಳ್ಳಲ್ಲ. ಹಂತಕ್ಕೆ ಸತ್ಯ ಮುಂದಿನ ಸತ್ಯದ ಇನ್ನೊಂದು ರೂಪ ಪ್ರಕಟವಾಗುತ್ತದೆ ಅಷ್ಟೆ. ಅಂತಹಾ ಸತ್ಯಾನ್ವೇಷಣೆ ಸ್ವಾತ್ಮಸಿದ್ಧಾಂತ ರೂಪುಗೊಂಡಿರುತ್ತದೆ. ಯಾವಾಗ ತಾನು ಇನ್ನೊಂದರಲ್ಲಿ ಲೀನವಾಗುವುದೊ, ಐಕ್ಯವಾಗುವುದೋ, ನಂತರದಲ್ಲೇ ಪರಿಪೂರ್ಣ ಸತ್ಯ ಗೋಚರ

ವಿಶ್ವವೇ ಕೂಗುತಿದೆ ವಿಜ್ಞಾನವೆಂದು ಆದರೇನ್ ವೈಜ್ಞಾನಿಕತೆಯು ಹೇಗೆ ಹುಟ್ಟಿತು
ಶಾಶ್ವತವನರಿಯದಾ ಈ ಜನರು ಅಸ್ಥಿರದ ವಿಜ್ಞಾನದೊಲವಿನಲಿ ತಮ್ಮ ಜೀವನವಿಂದು
ನಶ್ವರವೆಂದರಿಯದೆ ವ್ಯರ್ಥ ಹೋರಾಡುವರು, ಕೂಗಾಡುವರು, ಪ್ರಮಾಣಕ್ಕೆ ಪ್ರತ್ಯಕ್ಷವೇ ಎಂದು ಸುಳ್ಳು ಪೇಳುವರೂ ||
ವಿಶ್ವವೇ ಮಾಯೆ ಮಾಯೆಯಲಿ ಜೀವಸೃಷ್ಟಿ ಮಾಯೆಯಿಂದಲಿ ಜೀವನವು
ಶಾಶ್ವತದ ಹಂಬಲವೇ ಮಾಯೆ ಕಣ್ಣಿಗೆ ಗೋಚರಿಪುದೆಲ್ಲ ಅಶಾಶ್ವತ ಮಾಯೆಯಾ ಆಟ
ವಿಶ್ವದೆಲ್ಲೆಡೆ ವ್ಯಾಪಿಸಿದೆ ದೃಗ್ಗೋಚರವು ಸತ್ಯವೆಂಬಾ ಪರಮ ಸುಳ್ಳಿನ ಮಾಯೆಯದು ಗೋಚರವೆಲ್ಲ ಅಸತ್ಯವಯ್ಯಾ || ೧ ||ಸತ್ಯವ್ಯಾವುದು ಅರಿಯಬೇಕೆಂಬ ತುಡಿತದಲಿ ಜಿಜ್ಞಾಸುಗಳು ಹುಡುಕುತ ತೆರಳಿದರು
ಸತ್ಯಾನ್ವೇಷಣೆಗಾಗಿ ತಿರುಗಿ ಬರಲಿಲ್ಲ ಅವರಿಲ್ಲಿದ್ದ ಕಾಲದ ಬಡಬಡಿಕೆಯೀಗ
ಸತ್ಯ ಗೋಚರಿಪ ದಾರಿಯೆಂದು ಭ್ರಮೆಯಲಿ ಹೋರಾಡುವೆವು, ಹೊರಳಾಡುವೆವು, ಬಡಿದಾಡುವೆವು ನಾವೂ ||
ಸತ್ಯವೇ ನಮ್ಮ ತಾಯಿತಂದೆಯು ಸತ್ಯವೇ ನಮ್ಮ ಬಂಧುಬಳಗವು ಇದು ನಂಬಿಕೆಯ ನೆಲೆ
ಸತ್ಯವಾಕ್ಯವು ನೆಚ್ಚಿಗೆಯದಾಗಲು ಬಿಚ್ಚು ಮಾತಿನ ಸತ್ಯವಿರಬೇಕು ಇಲ್ಲದಿರೆ ತಾಯಿತಂದೆಯೇ ಅ
ಸತ್ಯ ಕಾಣೆಲೊ ಮೂರ್ಖ ನಿನ್ನಯ ಹೆಸರೇನು ನೀನಾರು ನಿನಗರಿವಿಲ್ಲ ಇಂದು ನೀವಿರುವ ತಾಣವು ಬಾಡಿಗೆಯದೂ || ೨ ||ಸುಮ್ಮನಿರುವುದು ಇಲ್ಲಿ ನಿನ್ನ ಪಾಪಕರ್ಮವು ಹೊಣೆ ಆ ದೇವನಲ್ಲ ನಿನ್ನ ತಾಯಿತಂದೆಗಳಲ್ಲ
ಸುಮ್ಮನೆಯಾಕಳುವೆ ಹುಟ್ಟಿ ಬಂದಾ ಮೇಲೆ ಮೆಟ್ಟಿ ಬಂದಾ ಕರ್ಮ ಉಣಬೇಕು ಕಾಣೆಲೊ
ಬೊಮ್ಮ ಬರೆದಿಹ ಕರ್ಮದಾ ಲೆಕ್ಕ ಅರಿತವರಾರೊ ಅದು ಪ್ರತ್ಯಕ್ಷವಲ್ಲ ಲೇಖನವಿಲ್ಲ ದಾಖಲೆಯಿಲ್ಲ ಆದರದು ಸತ್ಯವಹುದೂ ||
ಭಿಮ್ಮನೆ ಬೀಗದಿರು ಸತ್ಯವರಿತೆವು ಎಂದು ಜಿಜ್ಞಾಸುಗಳು ಹುಡುಕುವ ಸತ್ಯವಿದಲ್ಲ ಇದು ಆತ್ಮದಾ
ಬೊಮ್ಮ ಸಂಬಂಧಕೊಂಡಿಯು ಋಣ ಕರ್ಮ ಅದರ ಗ್ರಂಥಿಯು ಅದನು ಬಿಡಿಸಿಕೊ ಬೊಮ್ಮನರಿತು
ಸುಮ್ಮನಿರಬೇಡ ನೀ ಋಣಕರ್ಮಗಳ ಮೂಲವನರಸು ಕಳಚುವುದು ಆತ್ಮಬಂಧವು ತೋರುವುದು ಪರಮಾತ್ಮ ಬಂಧಾ || ೩ ||ತಾನು ತನ್ನವು ಇಲ್ಲದೆ ಬದುಕುವಾ ಮನುಜನು ಋಣಕರ್ಮಕನುಸರಿಸಿ ಹೆಸರಗೊಂಬನು
ತಾನು, ಶಿಶುವೆಂದು, ಮಗುವೆಂದು, ಬಾಲ ಮತ್ತೆಂದು, ಯುವಕನೂ, ಪ್ರೌಢನೂ ಅಹುದು
ತಾನು ಅಣ್ಣನಾದನು ತಮ್ಮನಾದನು ಮತ್ತೆ ಸೋದರಮಾವನಾದನು ಸತಿಗೆ ಪತಿಯಾದ ಮೇಲೇನು ಅಪ್ಪನಾದನು ಬೊಪ್ಪನಾದನೂ ||
ತಾನು ತಾನಾಗಿ ಬೆಳೆಯುತ ಆತ್ಮನಾದನು ಮಹಾತ್ಮನಾದನು ಪರಮಾತ್ಮನಾಗಲು
ತಾನು ಈ ಹಿಂದಿನಾ ಪದವಿ ಬಿಡಬೇಕೆಂಬ ಸತ್ಯವನರಿಯದೆ ಪ್ರತ್ಯಕ್ಷದಾ ಮೋಹದಲಿ
ತಾನು ಸಿಕ್ಕಿ ನರಳುತಿಹ ಇದನೆಲ್ಲ ಬಿಟ್ಟು ತನ್ನತನವನು ಇನ್ನೊಂದರೊಳಗೆ ಲೀನಗೊಳಿಸಲು ಕಾಣುವುದು ಸತ್ಯ || ೪ ||-      ತಿರುಕ

(ಬ್ರಹ್ಮರ್ಷಿ ಕೆ.ಎಸ್. ನಿತ್ಯಾನಂದರು, ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು)

ಪಂಚವಾರ್ಷಿಕ ಅಗ್ಯಾವೈಷ್ಣವೀ ಯಾಗದಲ್ಲಿ ಅಗ್ನಿ + ದೇವ + ಋಷಿಮುನಿಗಳಿಂದ ಮಥಿಸಲ್ಪಟ್ಟು ಕಂಡುಕೊಂಡ ಸತ್ಯ ವಿಚಾರಗಳ ಪ್ರಕಟಣೆ – ಗ್ರಂಥ - ತಿರುಕ ಸಂಹಿತಾ ಭಾಗ -

Tuesday, 27 February 2018

"ನ ತಸ್ಯ ಪ್ರತಿಮಾ ಅಸ್ತಿ" - ಎಂಬ ಮಂತ್ರ ಭಾಗದ ಬೇಕಾ ಬಿಟ್ಟಿ ವ್ಯಾಖ್ಯಾನಕ್ಕೆ ಒಂದು ಕಡಿವಾಣ!

ತಸ್ಯ ಪ್ರತಿಮಾ ಅಸ್ತಿ ಯಸ್ಯ ನಾಮ ಮಹದ್ಯಶಃ |
ಹಿರಣ್ಯಗರ್ಭಸ ಇತ್ಯೇಷ ಮಾ ಮಾ ಹಿಂಸೀದಿತ್ಯೇಷಾ ಯಸ್ಮಾನ್ ಜಾತಃ ಇತ್ಯೇಷಃ | | ಶುಕ್ಲ ಯಜುರ್ವೇದ ಅಧ್ಯಾಯ ೩೨, ಮಂತ್ರ ||
ತಸ್ಯ ಪ್ರತಿಮಾ ಅಸ್ತಿ = ಇಲ್ಲಿ ತಸ್ಯ ಎಂದರೆ ಪರಮಾತ್ಮನ ಎಂದು ಯಾರು ನಿಮಗೆ ಹೇಳಿಕೊಟ್ಟದ್ದು ಸ್ವಾಮಿ? ಝಾಕೀರ್ ನಾಯಕ್ ಎಂಬ ದೇಶವಿರೋಧಿ, ಹಿಂದೂವಿರೋಧಿ ತಾನೇ? ಆತನಿಗೆ ಪುಷ್ಠಿ ಕೊಟ್ಟವರು ಕೆಲ ಮೂರ್ತಿ ಪೂಜಾ ವಿರೋಧಿಗಳಾಗಿದ್ದ ವ್ಯಾಖ್ಯಾನಕಾರರ ವಿಚಾರಗಳು.
ಆತ ಉದಾಹರಿಸುವುದೇ ಸತ್ಯವೆಂದು ಆತನ ಚೇಲಾಗಳು ಪ್ರಚಾರ ಮಾಡಿದ್ದಾರೆ. ನಿಗಮದಿಂದಲೇ ಕವಲೊಡೆದು ನಿಗಮಬದ್ಧತೆಯಲ್ಲೇ ವ್ಯವಹರಿಸುತ್ತಿರುವ ಉನ್ನತ ಪ್ರಾಯೋಗಿಕ ಭಾಗವಾದ ಆಗಮವಾಗಲೀ, ಪ್ರತಿಮಾ ಕಲ್ಪದ ಅರಿಯದವರು ಮಾತ್ರ ಅದನ್ನು ವಿರೋಧಿಸಬಹುದು.
ಯಾವುದನ್ನೋ ಎಲ್ಲೋ ಏಕೆ ಸಮೀಕರಿಸುತ್ತೀರ? ಯಜುರ್ವೇದ ಯಜ್ಞ ಪ್ರಧಾನವಾಗಿ ಹೋಗುತ್ತದೆ. ಯಜ್ಞಕಾಂಡದಲ್ಲಿ ಅಗ್ನಿಗೆ ಪ್ರತಿಮೆ ಇದೆಯಾ?
ಮಂತ್ರ ಯಾಗ ಯಜ್ಞಭಾಗಕ್ಕೇ ಸಂಬಂಧಪಟ್ಟದ್ದೆಂದು ಮೊದಲು ಅರ್ಥಮಾಡಿಕೊಳ್ಳಬೇಕು.
ಯಾಗಗಳಲ್ಲಿ ಏನಕ್ಕೇನೂ ಆಗಬಹುದು. ಏಕೆಂದರೆ ಯಾ ಯಾ ಗತಿರ್ ಇತಿ ಯಾಗಃ. ಗತಿಯನ್ನು ಆಧರಿಸಿ ಹೇಗೇಗೆ ಪ್ರಯೋಗವು ರೂಪು ಪಡೆಯುತ್ತಾ ಹೋಗುತ್ತದೋ ಹಾಗಾಗೆ ಪ್ರಕ್ರಿಯೆಗಳು ಬದಲಾಗುತ್ತಾ ಮುನ್ನಡೆಯುತ್ತಾ ಸಾಗುತ್ತವೆ.
ಯಜ್ಞವೆಂದರೆ ಯತ್ ಜ್ಞಾಯತೇ ಇತಿ ಯಜ್ಞಃ. ಇದು ಹೀಗೇ ಎಂದು ತಿಳಿದು ಮಾಡುವಂತಹದ್ದು ಯಜ್ಞ. ಅಲ್ಲಿ ಸೂತ್ರಗಳ ಮತ್ತು ಪ್ರಕ್ರಿಯೆಗಳ ನಿರ್ಧಿಷ್ಟತೆ ಇರುತ್ತದೆ.
ತದಂಗವಾಗಿ ಇರುವ ಉನ್ನತ ವೈಜ್ಞಾನಿಕ ಪರೀಕ್ಷಾ ವಿಧಾನವೇ "ಪೂಜೆ". ಇಲ್ಲಿ ಪರಿಕರ, ಪ್ರಯೋಗ, ಪರೀಕ್ಷೆ, ಫಲಿತಾಂಶಗಳೆಲ್ಲವೂ ಇವೆ.
ಇಂಜಿನಿಯರಿಂಗ್, ವರ್ಕ್ಶಾಪ್, ಫಿಸಿಕ್ಸ್, ಕೆಮಿಸ್ಟ್ರಿ, ಬಯೋಲಜಿ, ಇತ್ಯಾದಿ ಲ್ಯಾಬುಗಳು ಅವುಗಳಕ್ಸ್ಪಿರಿಮೆಂಟುಗಳ ಅಭಿರುಚಿ ಇದ್ದವರಿಗೆ ಹೊಂದಾಣಿಕೆ ಮಾಡಿ ನೋಡಿದರೆ ಇದು ಸುಲಭವಾಗಿ ಅರ್ಥವಾಗಬಹುದು.
ಇದನ್ನೆಲ್ಲ ತೆಗೆದುಕೊಂಡು ಸಾಕಾರ ನಿರಾಕಾರ ಎಂಬ ಜೊಳ್ಳು ವಾದಗಳ ಸುಳಿಯಲ್ಲಿ ಏಕೆ ಬೀಳಬೇಕು? ಬೇರೆ ಬೇರೆ ವಿಚಾರಗಳು, ಬೇರೆ ಬೇರೆ ಪ್ರಕ್ರಿಯೆಗಳು ಎಂದು ಅರ್ಥಮಾಡಿಕೊಳ್ಳುವುದು ಶ್ರೇಯಸ್ಕರ.
ಅಲ್ಲಿ ನಿಮಗೆ ದೇವಸ್ಥಾನದಲ್ಲಿ ಅಥವಾ ಮನೆಯಲ್ಲಿ ಪ್ರತಿಮಾ ಪೂಜೆ ಮಾಡಬೇಡಿ ಎಂದು ಹೇಳಿತಾ ಮಂತ್ರ?
ನೀವು ಮಾಡುತ್ತಿರುವ ಪೂಜೆಯನ್ನು ವಾಕ್ಯವು ನಿಷೇಧಿಸುತ್ತದೆ ಎನ್ನುವುದು ಹಿಂದೂ ಧರ್ಮವನ್ನು ಬುಡಮೇಲಾಗಿಸುವ ದಾರ್ಷ್ಟ್ಯವಷ್ಟೆ, ಅರ್ಥಮಾಡಿಕೊಳ್ಳಿ.
ವಿತಂಡವಾದಿಗಳಿಗೆ ಒಂದು ವಿಡಂಬನೆ :-
ಹೋಗಲಿ ಬಿಡಿ.. ನಿಮಗೇಕೆ ಬೇಜಾರು ತಸ್ಯ ಪ್ರತಿಮಾ ಅಸ್ತಿ ಎನ್ನುವುದು ಪರಮಾತ್ಮನಿಗೇ ಹೇಳಿದ್ದು ಎಂದುಕೊಂಡರೆ ಪರಮಾತ್ಮನ ಪ್ರತಿಮೆ ಯಾವುದು? ನಮಗೆ ಗೊತ್ತಿರುವ ಹಾಗೆ ಲಿಂಗ, ಶಿವ, ದುರ್ಗಾ, ಗಣಪತಿ, ದೇವಿ, ವಿಷ್ಣು, ಇತ್ಯಾದಿ ಪ್ರತಿಮಾ ಪೂಜೆಗಳಿವೆ.
ಪರಮಾತ್ಮ ಎಂಬ ಪ್ರತಿಮೆಯನ್ನು ಇಟ್ಟು ಹಿಂದುಗಳು ಪೂಜಿಸುತ್ತಿದ್ದಾರಾ? ತಸ್ಯ ಪ್ರತಿಮಾ ಎಂದರೆ ಪರಮಾತ್ಮ ಅಥವಾ ಭಗವಂತನ ಪ್ರತಿಮೆ ಎಂದು ನಿಮಗೆ ಪಾಠ ಮಾಡಿದವರನ್ನು ಒಮ್ಮೆ ಪ್ರಶ್ನಿಸಿ - ಪ್ರಪಂಚವನ್ನೇ ಪ್ರತಿಮೆಯಾಗಿ ಉಳ್ಳವನಿಗೆ ಪ್ರತಿಮೆ ಮಾಡುವುದರಲ್ಲಿ ತಪ್ಪೇನಿದೆ?
ಅಣು ರೇಣು ತೃಣ ಕಾಷ್ಠಗಳಲ್ಲೆಲ್ಲಾ ಭಗವಂತನಿದ್ದಾನೆ ಎಂದು ಎಂದೋ ಹಿರಿಯರು ಹೇಳಿಲ್ಲವೇ?
ಪರಮಾತ್ಮ ಅಥವಾ ಭಗವಂತ ಅಥವಾ ದೇವರು ಎಂದರೆ ಅಣು ಅಥವಾ ಅಣುವನ್ನು ಚಾಲನೆ ಮಾಡುವ ಅತೀ ಸೂಕ್ಷ್ಮ ಶಕ್ತಿ ಎಂಬ ವೈಜ್ಞಾನಿಕತೆ ನಿಮಗೆ ಏಕೆ ಅರ್ಥವಾಗಲಿಲ್ಲ?
ಹೋಗಲಿ ಬಿಡಿ.. ಈಗ ನಿಮ್ಮ ಮನೆಯಲ್ಲಿ ವೈರಿನಲ್ಲಿ ಕರೆಂಟ್ ಹರಿಯುತ್ತಿಲ್ಲವೇ? ಅದು ಬೇರೆ ಬೇರೆ ಜಾಗದಿಂದ ಉತ್ಪಾದನೆಯಾಗಿ ಬಂದಿಲ್ಲವೇ? ಆದರೆ ನೀವು ಅದರ ಸ್ರೋತವನ್ನು ಕಂಡುಹಿಡಿಯಲು ಸಾಧ್ಯವೇ?
ಕರೆಂಟ್ ಒಂದು ಥರಾ ಭಗವಂತನಿದ್ದಂತೆ ಅಲ್ಲವೇ? ಅಲ್ಲಿ ಚೈತನ್ಯವಾಹಕ ಸೂತ್ರವೇ ಕೆಲಸ ಮಾಡುವುದಲ್ಲವೇ? ವೇದದಲ್ಲಿ ವಿದ್ಯುತ್ತನ್ನೂ ದೇವತೆ ಎಂದಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ.
ಎಲೆಕ್ಟ್ರಿಸಿಟಿಯಲ್ಲಿ ಚೈತನ್ಯ ಪ್ರವಾಹವಿರಬೇಕಾದರೆ ಅದನ್ನು ತಿಳಿಯುವುದು ಹೇಗೆ? ಮುಟ್ಟಿ ನೋಡಬೇಕು; ಶಾಕ್ ಹೊಡೆದಾಗ ತಿಳಿಯುತ್ತದೆ. ಇಲ್ಲವಾದರೆ ಬಲ್ಬು, ಟಿ.ವಿ., ಫ್ಯಾನು, ಫೋನು ಇತ್ಯಾದಿ ವಿದ್ಯುನ್ಮಾನ್ ಯಂತ್ರಗಳಿಂದ ಪ್ರಕಟಗೊಳ್ಳುತ್ತದೆ.
ಹಾಗೇ ಪರಮಾತ್ಮನು ಚೈತನ್ಯವಲ್ಲವೇ? ಅದು ಆಗಮ ಬದ್ಧವಾದ ಪ್ರತಿಮಾ ಸ್ವರೂಪದಲ್ಲಿ ರೂಪು ಪಡೆಯಲು ಸಾಧ್ಯವಲ್ಲವೇ? ಅಲ್ಲಿರುವುದು ಏಕಮೇವ ಅದ್ವಿತೀಯವಾದ ಬ್ರಹ್ಮವೇ ಅಂದರೆ ಎಲ್ಲಾ ವೈರುಗಳಲ್ಲಿ ಹರಿಯುವ ವಿದ್ಯುತ್ತಿನಂತೆ ಒಂದೇ ಚೈತನ್ಯವಾದರೂ ಅದು ಪ್ರಕಟಗೊಳ್ಳುವುದು ಆಯಾ ಕಪಾಲ ಅಥವಾ ಪಾತ್ರೆ ಅಥವಾ ದೇವತಾ ಪ್ರತಿಮಾ ರೂಪದಲ್ಲಿ ಅದೂ ಕೂಡ ಕಾರ್ಯಾನುಕೂಲತೆಗಾಗಿ. ಅದೇ ಜಗನ್ನಿಯಾಮಕ ಸೂತ್ರ ಅಥವಾ ಕಪಟನಾಟಕ ಸೂತ್ರ. ಪ್ರಪಂಚ ನಡೆಯಲು ಅದು ಬೇಕು. ಭಗವಂತ ಸಾಕಾರನಾಗಿದ್ದರೆ ಮಾತ್ರ ಪ್ರಪಂಚ ನಡೆಯುತ್ತದೆ, ನಿರಾಕಾರವಾದರೆ ಪ್ರಪಂಚವೆಲ್ಲ ಬ್ರಹ್ಮ ಅಥವಾ ಮಹಾಕಾಲನಲ್ಲೇ ಲೀನ! ಯಜುರ್ವೇದದ ವಿವಿಧ ಭಾಗದಲ್ಲಿ "ಪ್ರತಿಮಾ" ಶಬ್ದಕ್ಕೆ ಏನೆಲ್ಲ ಅನ್ವಯವಾಗಿದೆ ಎಂದು ಅರ್ಥ ಮಾಡಿಕೊಳ್ಳುವ ಬುದ್ಧಿವಂತರಿಗಾಗಿ ಮಾತ್ರ ಮುಂದಿನ ಮಂತ್ರಗಳನ್ನು ಉದಾಹರಿಸಲಾಗಿದೆ, ವಿವರಿಸಲಾರೆ, ಅರ್ಥಮಾಡಿಕೊಳ್ಳುವುದು ಅವರವರಿಗೆ ಬಿಟ್ಟದ್ದು -
ಯಸ್ಯ ರಾತ್ರ್ಯಃ ಪ್ರಾತರ್ ಅಗ್ನಿಂ ಆಧಾಸ್ಯಮಾನಃ ... ದ್ವಾದಶ ವೈ ರಾತ್ರ್ಯಃ ಸಂವತ್ಸರಸ್ಯ "ಪ್ರತಿಮಾ" ಸಂವತ್ಸರೇ ವೃದ್ಧಾ ಗರ್ಭಾಃ ಪ್ರಜಾಯಂತೇ ಪ್ರಜಾತಮ್.... || ಯಜುರ್ವೇದ ಮೈತ್ರಾಯಣೀ ಸಂಹಿತಾ --೧೨ ||
ಸಜೂರ್ಜಾತವೇದೋ ದಿವಾ ಪೃಥಿವ್ಯಾ ..... ದ್ವಾದಶ ರಾತ್ರೀಃ ಸಾಯಂ ಸಾಯಂ ಜುಹುಯಾದ್ ದ್ವಾದಶ ವೈ ರಾತ್ರ್ಯಃ ಸಂವತ್ಸರಸ್ಯ "ಪ್ರತಿಮಾ" ಸಂವತ್ಸರೋ ವಾ ಅಗ್ನಿರ್ ವೈಶ್ವಾನರಸ್ತಂ ಆಹಿತಾಗ್ನ್ಯೋ ದರ್ಶಪೂರ್ಣಮಾಸಿನಾ ಇಂಧತೇ ತೇಷಾಂ ವಾರ್ಥವಾ.... || ಯಜುರ್ವೇದ ಮೈತ್ರಾಯಣೀ ಸಂಹಿತಾ -- ||
ಅಗ್ನಿರ್ ಏಕಾಕ್ಷರಮ್ ಉದಜಯದ್, ಅಶ್ವಿನೌ ದ್ವ್ಯಕ್ಷರಮ್, ವಿಷ್ಣುಸ್ತ್ರಯಕ್ಷರಮ್ .......... ವಿಷ್ಣುಸ್ತ್ರಯಕ್ಷರಯಾ "ಪ್ರತಿಮಾಮ್" ಸ್ವರ್ಗಂ ಲೋಕಂ ಸೋಮಶ್ಚತುರಕ್ಷರಯಾಶ್ರೀವೀರ್ ನಕ್ಷತ್ರಾಣಿ ಸವಿತಾ ಪಂಚಾಕ್ಷರಯಾಕ್ಷರ ಪಂಕ್ತಿಮ್ ಉದಜಯದ್ ..... || ಯಜುರ್ವೇದ ಮೈತ್ರಾಯಣೀ ಸಂಹಿತಾ -೧೧-೧೦ ||
ಅಗ್ನಯೇ ವೈಶ್ವಾನರಾಯ ದ್ವಾದಶಕಪಾಲಮ್ .... ಹಿ ಸಂವತ್ಸರಸ್ಯ "ಪ್ರತಿಮಾಗ್ನಯೇ" ವೈಶ್ವಾನರಾಯ ದ್ವಾದಶಕಪಾಲಂ ನಿರ್ವಪೇದ್ .... || ಯಜುರ್ವೇದ ಮೈತ್ರಾಯಣೀ ಸಂಹಿತಾ -- ||
ಇನ್ನು ಕಿರಣ ವಿಜ್ಞಾನದಲ್ಲಿ ವರ್ಣಗಳ ಬಗ್ಗೆ ಹೇಳುತ್ತಾ -
ಸೌಮ್ಯಮ್ ಬಭ್ರುಮ್ ಲೋಮಶಾಂ ಪಿಂಗಲಾಂ ಆಲಭೇತ ... ತತ್ರ ದ್ವಾದಶದ್ವಾದಶ ವರಾನ್ ದದೌ ಯದ್ ದ್ವಾದಶ ದೀಯಂತೇ ತಸ್ಯೈಷಾ "ಪ್ರತಿಮಾ" ಶ್ವೇತಮ್ ವಾಯವಾ ಆಲಭೇತಾ .... || ಯಜುರ್ವೇದ ಮೈತ್ರಾಯಣೀ ಸಂಹಿತಾ -- ||
ಆದಿತ್ಯಮ್ ಗರ್ಭಮ್ ಪಯಸಾ ಸಮಂಗ್ಧಿ ಸಹಸ್ರಸ್ಯ "ಪ್ರತಿಮಾಮ್" ವಿಶ್ವರೂಪಮ್ | .. || ಯಜುರ್ವೇದ ಮೈತ್ರಾಯಣೀ ಸಂಹಿತಾ --೧೭ ||
ಪ್ರತಿಮಾ ಬರೇ ಬಿಂಬವಾ, ಮೂರ್ತಿಯಾ, ಬೊಂಬೆಯಾ? ಅಲ್ಲ ಅದು ಛಂದಸ್ ಶಾಸ್ತ್ರದಲ್ಲಿ ಒಂದು ರೀತಿಯ ಅಳತೆಗೋಲು
.... ಮಾ ಛಂದಃ ಪ್ರಮಾ ಛಂದಃ "ಪ್ರತಿಮಾ ಛಂದೋ" ... || ಯಜುರ್ವೇದ ಮೈತ್ರಾಯಣೀ ಸಂಹಿತಾ -- ||
... ಸಹಸ್ರಸ್ಯ ಪ್ರಮಾಸಿ "ಸಹಸ್ರಸ್ಯ ಪ್ರತಿಮಾಸಿ" ಸಹಸ್ರಸ್ಯ ಸಮ್ಮಾಸಿ ... || ಯಜುರ್ವೇದ ಮೈತ್ರಾಯಣೀ ಸಂಹಿತಾ --೧೪ ||
... ಪ್ರತಿಮಾ ಛಂದಸ್ ತದ್ ದ್ಯೌಃ ಸೂರ್ಯೋ ದೇವತಾ ... || ಯಜುರ್ವೇದ ಮೈತ್ರಾಯಣೀ ಸಂಹಿತಾ -೧೩-೧೪ || --> ಇಲ್ಲಿ ಪ್ರತಿಮಾ ಛಂದಸ್ಸಿನಿಂದ ದ್ಯೌಃ ತತ್ವ ಹಾಗೂ ಸೂರ್ಯ ದೇವತಾ ಹೇಗಾಗುತ್ತದೆ ಎಂಬ ವಿವರವಿದೆ.
ಹೆಚ್ಚಿನ ವಿವರಗಳು http://veda-vijnana.blogspot.in/2017/01/blog-post_95.html ಲೇಖನದಲ್ಲಿದೆ.
ಇನ್ನು ಪ್ರತಿಮಾ ಕಲ್ಪಕ್ಕೆ ಆಧಾರಭೂತವಾದ ಬೇಕಾದಷ್ಟು ವಿವರಗಳು ವೇದದಲ್ಲೇ ಇದೆ.
ಮಖಸ್ಯ ಶಿರೋ ... ಇಮೇ ಲೋಕಾ ಏಷಾಂ ವಾ ಏಷಾ ಲೋಕಾನಾಮುಖಾ "ಪ್ರತಿಮಾ" ಕ್ರಿಯತೇ ... ಗಾಯತ್ರ್ಯಾ ರೂಪಮ್ .... || ಯಜುರ್ವೇದ ಮೈತ್ರಾಯಣೀ ಸಂಹಿತಾ -- ||
ಪ್ರತಿಮೇಮಾನ್ ಏವ ಲೋಕಾನ್ ಉಪಧತ್ತೇ || ಯಜುರ್ವೇದ ಮೈತ್ರಾಯಣೀ ಸಂಹಿತಾ -- ||
ಆಗ್ನಾವೈಷ್ಣವಮ್ ಏಕಾದಶಕಪಾಲಮ್ ... ಪುರುಷಸ್ಯೇವ ಹ್ಯ ಏಷಾ "ಪ್ರತಿಮಾ" ಯತ ಇವ ಹಿ ರೂಪಮ್ ತಸ್ಮಾಚ್ಚತುರೇವ ಕಾರ್ಯೋ ವೇದಿಮತಿ ದೀಕ್ಷತೇ .... || ಯಜುರ್ವೇದ ಮೈತ್ರಾಯಣೀ ಸಂಹಿತಾ -- ||
ಕಾರು, ಬಸ್ಸು, ಲಾರಿ, ಹಡಗು, ರೈಲು, ವಿಮಾನ ಇತ್ಯಾದಿ ತಯಾರು ಮಾಡುವ ಸೂತ್ರವೂ ವೇದದಲ್ಲಿದೆ. ಅಲ್ಲಿ ಕಾರು, ಬಸ್ಸು, ಲಾರಿ ಶಬ್ದ ಸಿಗದಿರಬಹುದು. ಆದರೆ ತಯಾರಿಕಾ ಸೂತ್ರವಿದೆ. ವೇದವು ವಿವಿಧಾ ಧ್ಯಾಸತೇ ಇತಿ ವಿಧ್ಯಾ ಎಂಬ ಸೂತ್ರದಲ್ಲಿದೆ.
ವೇದಗಳಲ್ಲಿ ಇಲ್ಲದಿರುವುದು ಏನೂ ಇಲ್ಲ. ಪ್ರಸಕ್ತ ಕಾಲಕ್ಕೆ ಸಪ್ತಲೋಕಗಳಲ್ಲಿ ೧೧೧೨೨೨ ಇಷ್ಟು ವೇದಮಂತ್ರಗಳಿವೆ. ಅದರಲ್ಲಿ ನಮಗೆ ಲಭ್ಯವಾಗಿರುವುದು ಬಹಳ ಕಡಿಮೆ.
ಅದರಲ್ಲಿ ಮೂರ್ತಿಸ್ವರೂಪವೂ ಇದೆ, ನಿರಾಕಾರ ಸ್ವರೂಪವೂ ಇದೆ.
ವೇದಗಳನ್ನಾಧರಿಸಿಯೇ ಈ ರೀತಿಯ ೧೮೦೦೦ ದರ್ಶನಶಾಸ್ತ್ರಗಳು ಉಂಟಾದವು.
ಉದಾಹರಣೆಗೆ ವೇದಗಳಲ್ಲಿ ಈ ಕೆಳಕಂಡ ವಾದ/ಸಿದ್ಧಾಂತಗಳೆಲ್ಲ ಕಂಡುಬರುತ್ತದೆ:
೧. ಕರ್ಮ ಸಿದ್ಧಾಂತ
೨. ನಿರೀಶ್ವರ ವಾದ
೩. ಸುಗುಣ ವಾದ
೪. ನಿರ್ಗುಣ ವಾದ
೫. ಈಶ್ವರೀಯ ವಾದ
೬. ಏಕೋಪಾಸನ
೭. ಬಹುದೇವತಾ ತತ್ವ
೮. ಬೀಜ ಸಿದ್ಧಾಂತ
೯. ಶೂನ್ಯ ಸಿದ್ಧಾಂತ
೧೦. ಅದೈತ ಸಿದ್ಧಾಂತ
೧೧. ದ್ವೈತ ಸಿದ್ಧಾಂತ
೧೨. ಶಕ್ತಿ ಸಿದ್ಧಾಂತ
೧೩. ವಿಶಿಷ್ಟಾದ್ವೈತ ಸಿದ್ಧಾಂತ
೧೪. ಸಗುಣೋಪಾಸನ
೧೫. ನಿರ್ಗುಣೋಪಾಸನ
೧೬. ಮೂರ್ತಿ ಸ್ವರೂಪ
೧೭. ನಿರಾಕಾರ ಸ್ವರೂಪ
೧೮. ಜ್ಞಾನಸ್ವರೂಪ
ಇತ್ಯಾದಿಗಳು.
ಪ್ರಪಂಚದ ಎಲ್ಲವೂ ಕಿರಣ+ನಾದ ಸಂಯೋಗದಿಂದಲೇ ವ್ಯವಹರಿಸುವಂತಹದ್ದು. ಪರಮಾತ್ಮ ಅಥವಾ ಮೂಲಚೈತನ್ಯವು ಪ್ರಕಟವಾಗುವುದು ಯೋಗ+ಮಾಯ ಅಥವಾ ಕಿರಣ+ನಾದ ಎಂಬ ರೂಪದಲ್ಲಿ. ಅದರ ಎಲ್ಲ ವ್ಯವಹಾರವನ್ನು ವಿವರವಾಗಿ ಇದಮಿತ್ಥಂ ಎಂದು ವಿವರಿಸುವುದೇ ವೈಧಿಕ ಭೌತಶಾಸ್ತ್ರ. ವೈಧಿಕ ಭೌತಶಾಸ್ತ್ರದ ನಿಯಮವನ್ನು ಬಳಸಿ ಇನ್ನೂ ಎತ್ತರಕ್ಕೆ ಏರಿದ್ದೇ ತಂತ್ರ. ಅಸಾಧ್ಯವನ್ನು ಸಾಧ್ಯಗೊಳಿಸಿಕೊಡುತ್ತದೆ.
ಅಣುವಿನ ಮೂಲ ಶಕ್ತಿಯೇ ಚೈತನ್ಯ ಅಥವಾ ಪರಮಾತ್ಮ. ಎಲ್ಲಾ ವಸ್ತುಗಳೂ ಅಣುವಿನಿಂದಾಗಿವೆ. ಹಾಗಾಗಿ ಎಲ್ಲದರಲ್ಲೂ ಪರಮಾತ್ಮನಿದ್ದಾನೆ.
ಪ್ರತಿಮಾಕಲ್ಪದ ರೀತ್ಯಾ ಪರಮಾತ್ಮನ ಯಾವುದಾದರೂ ವಿಶೇಷ ಸ್ವರೂಪವನ್ನು ಶಿಲ್ಪಶಾಸ್ತ್ರ ಮುಖೇನ ಆಕಾರ ಕೊಟ್ಟುದೇವಾಲಯದಲ್ಲಾದರೆ ಖಗೋಳ ವ್ಯಾಪಿ ಚೈತನ್ಯವನ್ನು ವೇದದ ಖಗೋಳಶಾಸ್ತ್ರ ನಿಯಮದಂತೆ ಗಣಿಸಿ ಗುಣಿಸಿ ಕಿರಣ ರೂಪದಲ್ಲಿ ತಂತ್ರಶಾಸ್ತ್ರದ ನಿಯಮದಂತೆ ನ್ಯಾಸಗೊಳಿಸಿ, ಕಾರ್ಯಾನುಕೂಲತೆಗೆ ತಕ್ಕಂತೆ ಪ್ರಾಣಪ್ರತಿಷ್ಠಾಪಿಸಿ, ಉದ್ದೇಶಿತ ಕಾರ್ಯಸಾಫಲ್ಯತೆಗೆ ದಾರಿ ಮಾಡುಕೊಡುವುದೇ ನಿಗಮಾಗಮಗಳ ಅಂಬೋಣ.
ಇದನ್ನು ದೇವರು + ದೇವತೆಗಳು + ತತ್ವಗಳು + ಉಪಾಂಶುಗಳು (ಪರಿಕರಗಳು) ಎಂಬ ಪ್ರಾಚೀನ ಪಾಠ ವಿಧಾನದಲ್ಲಿ ಅರ್ಥಮಾಡಿಕೊಳ್ಳಬೇಕಾಗುತ್ತದೆ.
ಅಗ್ನಯೇ ಎಂಬ ಶಬ್ದವು ಒಂದೆಡೆ ಯಜುರ್ವೇದದಲ್ಲಿ ಬರುತ್ತದೆ. ಅದನ್ನು ಹುಡುಕಿಕೊಳ್ಳುವುದು ಸಂಶೋಧಕರಿಗೆ ಬಿಟ್ಟಿದ್ದು. ಆ ಶಬ್ದದ ವಿಸ್ತಾರವನ್ನು ವೈಧಿಕ ಭೌತಶಾಸ್ತ್ರವು ಋಗ್ವೇದ ಆಧರಿಸಿ
"ಚತ್ವಾರಿ ಶೃಂಗಾ ತ್ರಯೋ ಅಸ್ಯ ಪಾದಾ ದ್ವೇ ಶೀರ್ಷೇ ಸಪ್ತ ಹಸ್ತಾಸೋ ಅಸ್ಯ |
ತ್ರಿಧಾ ಬದ್ಧೋ ವೃಷಭೋ ರೋರವೀತಿ ಮಹೋ ದೇವೋ ಮರ್ತ್ಯಾಙ್ ಆವಿವೇಶ || ಋ ೪-೫೮-೩ ||

ಎಂದು ವಿಸ್ತರಿಸುತ್ತದೆ.
ಅಂದರೆ ೪-೩-೨-೭ / ೩ ಎಂಬ ಗಣಿತ ಸಮೀಕರಣವನ್ನು ನೀಡುತ್ತದೆ. ಈ ಗುಣಾಂಕವು ವೃಷಭವನ್ನು ಆರೋಹಿಸುತ್ತದೆ. ಅಂದರೆ ತಲೆಯು ತಯಾರಾಯ್ತು ಎಂದು ಅರ್ಥ. ಇಡೀ ತಲೆಯ ವಿವರಣೆ ಈ ಸಾಂಖ್ಯಸೂತ್ರದಲ್ಲಿದೆ. ಹಾಗಾಗಿ ಇಲ್ಲಿ ಅಗ್ನಿ ಎಂದರೆ ತಲೆ ಎಂದು ತೆಗೆದುಕೊಳ್ಳುತ್ತದೆ. ಇದೇ ಅಗ್ನಿ ಮಂತ್ರವನ್ನು ಧ್ಯಾನಿಸಿ ವಿಶ್ವಕರ್ಮರ ಸೂತ್ರಗಳ ಆಧಾರದಲ್ಲಿ ಕೆಳಕಂಡಂತೆ ಅಗ್ನಿ ಮೂರ್ತಿಯು ಸಿದ್ಧವಾಗುತ್ತದೆ.

ವೇದವನ್ನೇ ಬಳಸಿಕೊಂಡು ತಂತ್ರಶಾಸ್ತ್ರವು ನಾದ + ಕಿರಣದಿಂದ ತಯಾರಾದ ಅಗೋಚರ ಬೌದ್ಧಿಕ ಪುರುಷದ ತಲೆ ನಿರ್ಮಾಣ ಹೇಳುತ್ತದೆ. ಶಿಲ್ಪಶಾಸ್ತ್ರವು ಇದೇ ವೇದದ ಆಧಾರದಲ್ಲಿ ಬೆಳೆದು ಬಂದಿರುತ್ತದೆ. ಅದು ಇದೇ ಗಣಿತ + ಆಗಮಗಳನ್ನು ಬಳಸಿಕೊಂಡು ಬೌದ್ಧಿಕ ಪುರುಷದ ತಲೆಗೆ ನಿರ್ಧಿಷ್ಟ ಆಕಾರ ಕೊಡುತ್ತದೆ. ತಲೆಯ ಬಿಂಬ ತಯಾರಾಗುತ್ತದೆ. ಬರೇ ತಲೆಯು ಮೂರ್ತಿಯಾಗುವುದಿಲ್ಲ. ಅದಕ್ಕೆ ಪೂರ್ಣ ದೇಹ ಕೊಡಬೇಕು. ಅದಕ್ಕೆ ಪುನಃ ವೇದದ ದೇಹಶಾಸ್ತ್ರಾಧಾರಿತ ನಿಯಮದಂತೆ ರೂಪು ಕೊಡಲಾಗುತ್ತದೆ. ಅದರಲ್ಲಿ ವಿಶೇಷವಾದಂತಹಾ ಗ್ರಹಿಸುವ ಶಕ್ತಿ ಇದ್ದರೆ ವಿಗ್ರಹವಾಗುತ್ತದೆ. ವೇದ ಮಂತ್ರಗಳಿಂದ ಹಿಂಜಿ ತೆಗೆದ ಬೀಜಾಕ್ಷರಗಳು, ಕಿರಣ ವ್ಯವಹಾರ ನಡೆಸುವ ಮುದ್ರಾದಿಗಳಿಂದ ಆ ವಿಗ್ರಹದಲ್ಲಿ ಚೈತನ್ಯ ಸೇರುವಂತೆ ಮಾಡುವುದೇ ತಂತ್ರಿಯ ಕೆಲಸ. ಪ್ರತಿಮಾ ಕಲ್ಪ, ಶಿಲ್ಪಶಾಸ್ತ್ರ, ನಿಗಮಾಗಮ ಕೊಂಡಿ ಇತ್ಯಾದಿಗಳನ್ನರಿಯದೆ ಸುಖಾ ಸುಮ್ಮನೆ ವೇದದಲ್ಲಿ ಪ್ರತಿಮಾ ಪೂಜೆ ಇಲ್ಲವೆಂದು ಹಳಿಯುವ ಜನ ಪ್ರಚಾರ ಪ್ರಿಯತೆಯ ಸೋಗಲಾಡಿಗಳಷ್ಟೆ.
ಹೀಗೆ ನಿಗಮವು ಹೇಳಿದ್ದನ್ನು, ಅದರಿಂದಲೇ ಪ್ರಯೋಗಾತ್ಮಕವಾಗಿ ಉದಿಸಿದ ಆಗಮವನ್ನು ಬಳಸಿ ತಂತ್ರವು ಕಾರ್ಯಪ್ರವೃತ್ತವಾಗುತ್ತದೆ. ಸಮಾಜದಲ್ಲಿ ಕಾರ್ಯಪ್ರವೃತ್ತವಾಗುತ್ತದೆ. ಇದು ಮ್ಯಾಕ್ಸ್ ಮುಲ್ಲರ್, ಗ್ರಿಫಿತ್, ದಯಾನಂದರು, ಸಾಯಣರು ಇತ್ಯಾದಿ ಯಾರು ಹೇಳಲಿಲ್ಲ ಎಂದ ಮಾತ್ರಕ್ಕೆ ಸುಳ್ಳು ಎಂದಾಗುವುದಿಲ್ಲ.
ವೇದದಿಂದಲೇ ಉದ್ಭವಿಸಿದ ಒಟ್ಟು ೬೪ ತಂತ್ರಸಮುಚ್ಚಯಗಳು, ೩೨ ಜ್ಞಾನಸಮುಚ್ಚಯಗಳು, ೨೪ ಕರ್ಮಸಮುಚ್ಚಯಗಳಿವೆ.
ವೇದಗಳು ಸಂಸ್ಕೃತದಲ್ಲಿ ಇದ್ದರೆ ತಾನೇ ಅವುಗಳನ್ನು ವಿಕೃತಾರ್ಥ ಮಾಡುವುದು. ಅದು ಅದರದ್ದೇ ಆದ ಸಂಕೀರ್ಣ ಸಮೀಕರಣಗಳನ್ನು ಒಳಗೊಂಡ ಬ್ರಾಹ್ಮಿ ಭಾಷೆಯಲ್ಲಿ ಅಕ್ಷ ವಿಧ್ಯೆಯಂತೆ ಉಪಾಸನೆಯಿಂದ ಮಾತ್ರ ವೇದ್ಯವಾಗುವಂತಹದ್ದು. ಎಲ್ಲಕ್ಕೂ ಸರಿಯಾದ ಮಾರ್ಗದರ್ಶನಕ್ಕೆ ಗುರುಕೃಪೆ ಬೇಕು.
ವೇದವು ಹೇಗೆ ಕಾರ್ಯಪ್ರವೃತ್ತವಾಗಬಲ್ಲದು ಎನ್ನುವುದಕ್ಕೆ ಈಗಾಗಲೇ "ಸಾಮವೇದ ಭಾಷ್ಯ ಸಂಹಿತಾ" ಎಂಬ ಗ್ರಂಥದಲ್ಲಿ ಅದ್ಭುತವಾದ ಗಾನವಿಧಿಗಳು, ಭಾವಾರ್ಥಗಳೊಂದಿಗೆ ಪ್ರಕಟಣೆ ಆಗಿಯಾಗಿದೆ. ಇದರಲ್ಲಿ ಸ್ವಲ್ಪವಾದರೂ ವೇದ ಮೂಲದ ಆಶಯಗಳನ್ನು ಅನಾವರಣಗೊಳಿಸಲಾಗಿದೆ.
ಇನ್ನು ನಿಗಮಾಗಮಗಳ ಕೊಂಡಿಯನ್ನು ಸಾಧಾರವಾಗಿ ವೇದ-ವಿಜ್ಞಾನ ಮಂದಿರದಿಂದ ಪ್ರಕಟಣೆಯಾಗಲಿಕ್ಕಿರುವ ಭಾಗವತ ಸಂಪ್ರದಾಯದ "ತಂತ್ರಸಮುಚ್ಚಯ" ಎಂಬ ಗ್ರಂಥದಲ್ಲಿ ಬರಲಿಕ್ಕಿದೆ. ಕೊಂಡು ಓದಿರಿ. ತದನಂತರ ಬರುವ ವರ್ಷಗಳಲ್ಲಿ ಭಾಗವತ ಸಂಪ್ರದಾಯದ "ಕರ್ಮಸಮುಚ್ಚಯ" ಹಾಗೂ "ಜ್ಞಾನಸಮುಚ್ಚಯ"ಗಳೂ ಪ್ರಕಟಣೆಯಾಗಲಿಕ್ಕಿವೆ.
ಭಿನ್ನ ಭಿನ್ನ ವಿಚಾರಗಳಿವೆ. ಎಲ್ಲವೂ ಇವೆ. ಹಾಗಂತ ಯಾವುದಕ್ಕೋ ಇನ್ಯಾವುದನ್ನೋ ಸಮೀಕರಿಸಿ ಗೋಜಲು ಗೋಜಲಾಗಿ ಮಾಡಿಕೊಳ್ಳಬಾರದು. ಸಮಾಜವನ್ನು ತಪ್ಪು ದಾರಿಗೆ ಎಳೆಯುವುದು ಅಷ್ಟೇ ಕುಕೃತ್ಯ. ಧರ್ಮ ಶಿಕ್ಷಿಸುತ್ತದೆ ಎಂಬ ಅರಿವು ಪಡೆದು ಎಚ್ಚರಿಕೆಯಿಂದ ನಡೆಯುವುದು ಒಳಿತು.
|| ಲೋಕಾ ಸಮಸ್ತಾ ಸುಖಿನೋ ಭವಂತು ||
- ಹೇಮಂತ್ ಕುಮಾರ್ ಜಿ.