Tuesday, 27 March 2018

ಶ್ರೀರಾಮನ ಜನ್ಮ ದಿನ ಕ್ರಿ.ಪೂ. 10 ಜನವರಿ 5114 ಎಂಬ ಸುಳ್ಳು ಸುದ್ದಿಯ - ಗಣಿತ ವಿಶ್ಲೇಷಣೆ

ಈ ಲೇಖನದ ಮೊದಲನೆಯ ಭಾಗ:- ಶ್ರೀರಾಮನ ಜನ್ಮ ದಿನ ಕ್ರಿ.ಪೂ. 10 ಜನವರಿ 5114 ಎಂಬ ಸುಳ್ಳು ಸುದ್ದಿಯ ಬಹಿರಂಗ
        
ಸೂರ್ಯ ಹಾಗೂ ಚಂದ್ರರು ಒಂದೇ ರೇಖಾಂಶದಲ್ಲಿದ್ದರೆ ಅಮಾವಾಸ್ಯ ತಿಥಿ ಉಂಟಾಗುತ್ತದೆ. ಅಮಾವಾಸ್ಯೆಯ ನಂತರ ಶುಕ್ಲ ಪಕ್ಷ ಆರಂಭವಾಗುತ್ತದೆ. ಸೂರ್ಯನಿಗೆ ಹೋಲಿಸಿದರೆ ಚಂದ್ರನ ಗತಿಯು ವೇಗವಾಗಿರುತ್ತದೆ. ಸೂರ್ಯನ ತುಲನೆಯಲ್ಲಿ ಚಂದ್ರನು 120 ಮುಂದಕ್ಕೆ ಹೋದರೆ ಒಂದು ತಿಥಿಯು  ಕಳೆಯುತ್ತದೆ. ಶುಕ್ಲಪಕ್ಷದ ಅಷ್ಟಮೀ ಸಮಾಪ್ತಿಯಾಗಿ ನವಮೀ ಆರಂಭವಾಗಲು ಚಂದ್ರ ಹಾಗೂ ಸೂರ್ಯರ ಪರಸ್ಪರ ಅಂತರವು 160 ಇಂದ 1080 ಒಳಗೆ ಇರಬೇಕಾಗುತ್ತದೆ.

ಕರ್ಕ ರಾಶಿಯ ವ್ಯಾಪ್ತಿಯು 90 ರಿಂದ 120 ಅಂಶದವರೆಗೆ ಇರುತ್ತದೆ. ಹಾಗೇ ಪುನರ್ವಸು ನಕ್ಷತ್ರದ ವ್ಯಾಪ್ತಿಯು 80 ಅಂಶದಿಂದ 930:20| (93 ಅಂಶ 20 ಕಲೆ ಅಥವಾ ಮಿನಿಟ್-ಅರ್ಕ)ದ ವರೆಗೆ ಇರುತ್ತದೆ. ಆದರೆ ವಾಲ್ಮೀಕಿ ರಾಮಾಯಣದ ಪ್ರಕಾರ ಚಂದ್ರನು 900 ಇಂದ 930:20| ಒಳಗೆ ಇರಬೇಕಾಗುತ್ತದೆ.

ತಿಥಿಯು ನವಮಿ ಆಗಬೇಕು ಎನ್ನುವುದರ ಅರ್ಥ ಏನೆಂದರೆ ಸೂರ್ಯನಿಂದ ಚಂದ್ರನು ಕಡಿಮೆಯೆಂದರೆ 96 ಅಂಶ ಮುಂದಕ್ಕೆ ಹಾಗೂ ಅಧಿಕವೆಂದರೆ 108 ಅಂಶ ಮುಂದಕ್ಕೆ ಇತ್ತು. ಏಕೆಂದರೆ ಚಂದ್ರನು ಒಂದುವೇಳೆ ಸೂರ್ಯನಿಂದ 12 ಅಂಶ ಮುಂದಕ್ಕೆ ಇದ್ದರೆ ಮಾತ್ರ ಒಂದು ತಿಥಿಯು ಪೂರ್ಣವಾಗುತ್ತದೆ. ಅಷ್ಟಮಿಯು ಸಮಾಪ್ತಿಯಾಗುವ ಸಮಯದಲ್ಲಿ ಚಂದ್ರನಿಂದ 96 ಅಂಶ ಹಿಂದೆ ಸೂರ್ಯನಿದ್ದ. ಆದರೆ ಚಂದ್ರನು ಯಾವುದೇ ಪರಿಸ್ಥಿತಿಯಲ್ಲಿ 930:20|  ಇದಕ್ಕಿಂತ ಅಧಿಕವಾಗಲು ಸಾಧ್ಯವಿಲ್ಲ. ಏಕೆಂದರೆ 930:20| ಇದಕ್ಕಿಂತ ಮುಂದಕ್ಕೆ ಪುಷ್ಯ ನಕ್ಷತ್ರ ಉಂಟಾಗುತ್ತದೆಯೇ ಹೊರತು ಪುನರ್ವಸು ನಕ್ಷತ್ರವಲ್ಲ. 930:20|  ಇಲ್ಲಿಂದ 96 ಅಂಶ ಹಿಂದಕ್ಕೆ ಹೋದರೆ ಸೂರ್ಯನು ಮೀನದಲ್ಲಿ 270:20| ಇಲ್ಲಿರುತ್ತದೆ. ಅಗ ಅಷ್ಟಮಿಯು ಕೊನೆಗೊಂಡು ನವಮಿಯ ಆರಂಭವಾಗುತ್ತದೆ.

ನವಮಿಯ ಅಂತ್ಯವು ಅದಕ್ಕಿಂತಲೂ 12 ಅಂಶ ಹಿಂದಕ್ಕೆ ಸೂರ್ಯನನ್ನು ಮೀನದಲ್ಲಿ 15 ಡಿಗ್ರಿ : 20 ಮಿನಟ್ಟಿಗೆ ಕರೆದೊಯ್ಯುತ್ತದೆ. ಒಂದುವೇಳೆ 93ಡಿಗ್ರಿ:20ಮಿನಟ್‍ನ ಸ್ಥಾನದಲ್ಲಿ  ಚಂದ್ರನನ್ನು 90 ಅಂಶದಲ್ಲಿಯೇ ಇದ್ದಾನೆಂದು ಭಾವಿಸಿದರೆ ಸೂರ್ಯನು 3ಡಿಗ್ರಿ:20ಮಿನಟ್ ಹಿಂದೆ ಹೋಗುತ್ತದೆ. ಆದರೆ ಸೂರ್ಯನು ಮೀನದಲ್ಲಿ 12 ಅಂಶದಿಂದ 27ಡಿಗ್ರಿ:20ಮಿನಟ್ ಒಳಗೆ ಯಾವುದೋ ಬಿಂದುವಿನಲ್ಲಿ  ಇರುತ್ತದೆ. ಯಾವುದೇ ಪರಿಸ್ಥಿತಿಯಲ್ಲಿ ಸೂರ್ಯನು ಮೇಷದಲ್ಲಿರಲು ಇದ್ದಿರಲು ಸಾಧ್ಯವಿಲ್ಲ, ಏಕೆಂದರೆ ಆಗ ಚಂದ್ರನಿಂದ ಸೂರ್ಯನ ಅಂತರವು ಕಡಿಮೆಯಾಗಿಬಿಟ್ಟು ತಿಥಿಯು ಅಷ್ಟಮಿಯಾಗುತ್ತದೆ.

ಆದರೆ I-SERVE ಸಂಸ್ಥೆಯ ಶೋಧಕರ ಮಂಡನೆ ಏನೆಂದರೆ ಸೂರ್ಯನು ಮೇಷದಲ್ಲಿದ್ದು ವಾಲ್ಮೀಕಿ ರಾಮಾಯಣದಲ್ಲಿದ್ದ ಗ್ರಹಸ್ಥಿತಿಯನ್ನು “Planetarium Gold” ಎಂಬ ಸಾಪ್ಟ್‍ವೇರಿಗೆ ಕೊಟ್ಟಾಗ ಕ್ರಿ.ಪೂ. 10 ಜನವರಿ 5114ರ ಮಧ್ಯಾಹ್ನ ಕಾಲ 12:25 ಸಿಕ್ಕಿತು. (ಇದು “ವೈದಿಕ್ ಯುಗ್ ಏವಂ ರಾಮಾಯಣ್ ಕಾಲ್ ಕೀ ಐತಿಹಾಸಿಕತಾ” ಎಂಬ ಪುಸ್ತಕದಲ್ಲಿ ಶ್ರೀ ಅಶೋಕ್ ಭಟ್ನಾಗರ್ ಎಂಬುವರ ಲೇಖನದಲ್ಲಿ ಈ ಕಾಲವನ್ನು ಹೇಳಲಾಗಿದೆ. ಇದನ್ನೇ ಘಟಿಯಾಗಿ ಪರಿವರ್ತಿಸಿ ಈ ಜನರು ತಮ್ಮ ಸಮ್ಮೇಳನದಲ್ಲಿ ಹಂಚಿದರು).

ಇದನ್ನೇ ಪ್ರಚಾರ ಮಾಡುತ್ತಾ ಹೋದರು. ಇವರಿಗೆ ಮುಹೂರ್ತದ ಕೊಂಚವೂ ಜ್ಞಾನವಿಲ್ಲ ಎಂದು ಕಂಡುಬರುತ್ತದೆ. ಇಲ್ಲದಿದ್ದರೆ ರಾಮಚರಿತಮಾನಸದಲ್ಲಿ ವರ್ಣಿತ ಅಭಿಜಿನ್ ಮುಹೂರ್ತದ ಗಣನೆ ಮಾಡಿದ್ದರೆ 12:25 ಎಂಬ ತಪ್ಪು ಸಮಯ ಹೇಳುತ್ತಿರಲಿಲ್ಲ. ಅಭಿಜಿನ್ ಮುಹೂರ್ತವು ಆ ಸ್ಥಾನೀಯ ಸ್ಪಷ್ಟ ಮಧ್ಯಾಹ್ನದಿಂದ ಒಂದು ಘಟೀ ಮೊದಲು ಆರಂಭವಾಗುತ್ತದೆ ಹಾಗೂ ಒಟ್ಟು ೨ ಘಟಿ ಇರುತ್ತದೆ. ಆದರೆ ಇವರ ಲೆಕ್ಕವು ಸರಾಸರಿ ಮಧ್ಯಾಹ್ನ ಸಮಯದ ಮೇಲೆ ಆಧಾರಿತವಾಗಿದೆ. ಇದರಿಂದ ಇವರು ಮುಹೂರ್ತದ ಗಣನೆಯನ್ನು ಮಾಡಿಯೇ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಒಂದುವೇಳೆ ಮಾಡಿದ್ದರೆ ಅವರಿಗೆ ಭಾರತೀಯ ಸರಾಸರಿ ಸಮಯ 12:25ಕ್ಕೆ ಬಹಳ ಹಿಂದೆಯೇ ಅಭಿಜಿತ್ ಕಳೆದು ಹೋಗಿದೆ ಹಾಗೂ ಆ ದಿನ ಸರಾಸರಿ 12 ಘಂಟೆಗೂ ಬಹಳ ಹಿಂದೆಯೇ ಸ್ಪಷ್ಟ ಮಧ್ಯಾಹ್ನ ಇತ್ತು. ಚಕ್ರವರ್ತಿ ಹಾಗೂ ಅವತಾರದ ಜನ್ಮ ಹೇತು ಅಭಿಜಿತ್ ಅಥವಾ ಅದಕ್ಕೆ ಸರಿ ವಿಪರೀತ ಮಧ್ಯರಾತ್ರಿಯ ಮುಹೂರ್ತವು ಉಚಿತವೆಂದು ನಂಬಿಕೆ ಇದೆ. ಆದರೆ ವಾಲ್ಮೀಕಿ ರಾಮಾಯಣದಲ್ಲಿ ಈ ಮುಹೂರ್ತದ ಉಲ್ಲೇಖವಿಲ್ಲ. ಪ್ರಸ್ತುತ ಲೇಖನದಲ್ಲಿ ಈ ವಿಷಯದ ಮೇಲೆ ಇನ್ನು ಹೆಚ್ಚು ಚರ್ಚಿಸುವುದು ವಿಷಯಾಂತರವಾಗುತ್ತದೆ.

ಸೂರ್ಯನನ್ನು ಮೇಷದಲ್ಲಿಟ್ಟು ವಾಲ್ಮೀಕಿ ರಾಮಾಯಣದಲ್ಲಿ ವರ್ಣಿತ ಗ್ರಹಸ್ಥಿತಿಯನ್ನು ಹಾಕಿದರೆ ಯಾವುದೇ ರೀತಿಯ ಪರಿಣಾಮ ಕೊಡುವ ಅಂತಹಾ ಯಾವುದೇ ಸಾಫ್ಟ್‍ವೇರ್ ಈ ಪ್ರಪಂಚದಲ್ಲೇ ಇರಲು ಸಂಭವವಿಲ್ಲ. ಏಕೆಂದರೆ ವಾಲ್ಮೀಕಿ ರಾಮಾಯಣದಲ್ಲಿ ವರ್ಣಿತ ಗ್ರಹಸ್ಥಿತಿಯ ಅನುಸಾರ ಸೂರ್ಯನು ಮೀನದಲ್ಲಿದ್ದನು. ಸೂರ್ಯನನ್ನು ಮೇಷದಲ್ಲಿದ್ದನೆಂದು ತಿಳಿದಾಗ ತಿಥಿಯು ಅಷ್ಟಮಿಯಾಯಿತು, ಇದನ್ನು ಮೇಲೆ ಲೆಕ್ಕ ಮಾಡಿ ತೋರಿಸಲಾಗಿದೆ. ವಾಸ್ತವದಲ್ಲಿ ಏನಾಯಿತೆಂದರೆ ಇವರು ಸೂರ್ಯನನ್ನು ಮೇಷದಲ್ಲಿ ಇರಿಸುವ ಭಂಡತನವನ್ನು ಬಿಡಲಿಲ್ಲ. ಇದರಿಂದ ಶುಕ್ಲ ಪಕ್ಷದ ನವಮಿಯಂತೂ ಇವರಿಗೆ ಸಿಕ್ಕಿತು. ಆದರೆ ಆಗ ಚಂದ್ರನು ಪುಷ್ಯದ ಕೊನೆ ಚರಣದಲ್ಲಿದ್ದನು. ಆದರೆ ವಾಲ್ಮೀಕಿ ರಾಮಾಯಣದ ಪ್ರಕಾರ ಚಂದ್ರನು ಸರಿಯಾಗಿ ಒಂದು ನಕ್ಷತ್ರ ಹಿಂದೆ ಇರಬೇಕಿತ್ತು. ಆದರೆ ಒಂದು ದಿನ ಹಿಂದೆ ಚಂದ್ರನು ಸರಿಯಾಗಿ ಪುನರ್ವಸು ನಕ್ಷತ್ರದಲ್ಲಿದ್ದು, ತಿಥಿಯು ಅಷ್ಟಮಿ ಇತ್ತು. ನವಮಿಯಲ್ಲಿ ಪುನರ್ವಸುವಿನ ಯೋಗವಾಗುತ್ತಿಲ್ಲ ಮತ್ತೆ ಸೂರ್ಯನನ್ನು ಮೀನದಲ್ಲಿರಿಸಿದರೆ ಇವರು ಹುಡುಕಿರುವ ದಿನಾಂಕವೇ ತಪ್ಪಾಗುತ್ತದೆ ಎಂದು ಅರಿತ ಈ ಜನರು ಅರ್ಥವಾಗದಂತೆ ಜನರಿಗೆ ಕಾಗಕ್ಕ-ಗುಬ್ಬಕ್ಕನ ಕಥೆ ಹೇಳಿಕೊಂಡು ಸಂಭಾಳಿಸೋಣ ಎಂದು ನಿರ್ಧರಿಸಿದರು. ಇದೇ ಕಾರಣಕ್ಕಾಗಿ ಈ ಸಂಸ್ಥೆಯ ಯಾವುದೇ ವ್ಯಕ್ತಿಯು ತಮ್ಮ ಯಾವುದೇ ಲೇಖನದಲ್ಲಿ ಕ್ರಿ.ಪೂ. 10 ಜನವರಿ 5114 ಮಧ್ಯಾಹ್ನ ೧೨.೩೦, ಅಯೋಧ್ಯೆಯಲ್ಲಿ ಯಾವ ಗ್ರಹವು ಯಾವ ಅಂಶ:ಕಲೆ:ವಿಕಲೆಯಲ್ಲಿತ್ತು (ಡಿಗ್ರಿ:ಮಿನಟ್:ಸೆಕೆಂಡ್) ಎಂಬುದನ್ನು ಪ್ರಕಟಿಸಿಯೇ ಇರಲಿಲ್ಲ. ಯಾರಾದರೂ ಗ್ರಹಗಣಿತದ ಬಗ್ಗೆ ಇವರಲ್ಲಿ ಸ್ಪಷ್ಟೀಕರಣ ಕೇಳಿದರೆ ಉತ್ತರವನ್ನೇ ನೀಡುವುದಿಲ್ಲ. ವೈಜ್ಞಾನಿಕ ಶೋಧವೆಂಬ ಹೆಸರಿನಲ್ಲಿ ಈ ಜನರು ಸರ್ಕಾರೀ ಹಾಗೂ ಸಾಮಾಜಿಕ ಧನಕ್ಕಾಗಿ ಚಂದಾ ಎತ್ತುತ್ತಾರೆ ಹಾಗೂ ಶಾಲೆಯ ಮಕ್ಕಳಿಗಾಗಿ ತಯಾರಿಸಿರುವ ಸ್ಥೂಲ ಸಾಫ್ಟ್‍ವೇರ್ ಬಳಸಿ ಗೋಲ್ಮೋಲ್ ಪರಿಣಾಮ ಹೇಳುತ್ತಾ ಈಗ್ಗೆ ೧೪ ವರ್ಷಗಳಿಂದ ಜನರನ್ನು ಮಂಗ ಮಾಡುತ್ತಿದ್ದಾರೆ.

ಇಂತಹಾ ತಪ್ಪು ನಿಷ್ಕರ್ಷೆಯ ಆಧಾರದಲ್ಲಿ ಈ ಜನರು ಭಾರತ ಹಾಗೂ ವಿಶ್ವದ ಸಂಪೂರ್ಣ ಪ್ರಾಚೀನ ಇತಿಹಾಸವನ್ನು ಪುನಃ ಲೇಖಿಸುವ ಅವಶ್ಯಕತೆಯ ಮೇಲೆ ಬಲ ಹಾಕುತ್ತಿದ್ದಾರೆ. ಇಂತಹಾ ಮಹತ್ವಪೂರ್ಣ ನಿಷ್ಕರ್ಷೆಯನ್ನು ಮಾಡಿರುವ ಇವರ ಆಧಾರವನ್ನು ಕಿಂಚಿತ್ ಅವಲೋಕಿಸದೆ ಇವರ ಮಾತುಗಳನ್ನು ನಂಬುವುದು ಉಚಿತವೇ? ಆದರೆ ಎಷ್ಟೋ ಸುಪ್ರಸಿದ್ಧ ಜನರ ವರ್ಗವು ಈ ಗ್ರಹಗಣಿತದ ಭೇಟೆಗಾರರ ಬಲೆಗೆ ಸಿಕ್ಕಿಹಾಕಿಕೊಂಡಿದ್ದಾರೆ. ಅವರನ್ನೂ ನಿರ್ದೋಷಿಗಳೆಂದು ಕರೆಯುವುದು ಉಚಿತವಲ್ಲ, ಏಕೆಂದರೆ ಭಾರತ ಹಾಗೂ ವಿಶ್ವದ ಸಂಪೂರ್ಣ ಪ್ರಾಚೀನ ಇತಿಹಾಸವನ್ನು ಪುನಃ ರಚಿಸಬೇಕೆಂದು ದಾವೆ ಹಾಕುವವರ ಶೋಧನೆಯನ್ನು ಅದೇ I-SERVE ಸಂಸ್ಥೆಯೊಂದಿಗೆ ಕೂಡಿಕೊಂಡಿರುವ ಸುಪ್ರಸಿದ್ಧರೆಂಬ ಜನರ ವರ್ಗವು ಏಕೆ ಪರಿಶೀಲಿಸಿಲ್ಲ? ಜಾಲೀಯ ಶೋಧದ ಹೆಸರಿನಲ್ಲಿ ಈ ಜನರು ಎಷ್ಟು ಸಾರ್ವಜನಿಕ ಧನದ ಗೋಲ್ಮಾಲ್ ಮಾಡಿದ್ದಾರೆ ಎಂಬುದರ ತನಿಖೆಯೂ ಆಗಬೇಕು. ಏಕೆಂದರೆ ಇವರ ವಾಸ್ತವಿಕ ಉದ್ದೇಶವು ಗ್ರಹಗಣಿತವಲ್ಲ. ಇಲ್ಲದಿದ್ದರೆ ಇವರು ಸರಿಯಾದ ಗ್ರಹಗಣಿತ ಪದ್ಧತಿಯನ್ನು ಅನುಸರಿಸುತ್ತಿದ್ದರು. ಒಂದುವೇಳೆ ಅದನ್ನು ಮಾಡುವ ತಲೆ ಇಲ್ಲದಿದ್ದರೆ ಇನ್ನೊಬ್ಬರಿಂದಾದರೂ ಮಾಡಿಸುತ್ತಿದ್ದರು. ಸಮಸ್ಯೆ ಏನೆಂದರೆ ತಿಳುವಳಿಕೆಯಲ್ಲಿ ಕೊರತೆಯಿದ್ದರೆ ತಿಳಿಸಬಹುದು, ಆದರೆ ನಿಯತ್ತಿನಲ್ಲಿ ಕೊರತೆಯಿದ್ದರೆ ಸಾರ್ವಜನಿಕ ತನಿಖೆಯೇ ಇದಕ್ಕೆ ಚಿಕಿತ್ಸೆ!

Ref. ಇತಿಹಾಸ್ ಕಾ ಉಪಹಾಸ್: 
http://vedicastrology.wikidot.com/mockery-of-history:horoscope-of-lord-ram

ವಿನಯ್ ಜಾ
ಸಂರಕ್ಷಕರು,
ಅಖಿಲ ಭಾರತೀಯ ವಿದ್ವತ್ ಪರಿಷದ್

Monday, 26 March 2018

ಶ್ರೀರಾಮನ ಜನ್ಮ ದಿನ ಕ್ರಿ.ಪೂ. 10 ಜನವರಿ 5114 ಎಂಬ ಸುಳ್ಳು ಸುದ್ದಿಯ ಬಹಿರಂಗ

ಕ್ರಿ.ಪೂ. 10 ಜನವರಿ 5114 ಈ ದಿನದ ಗ್ರಹಸ್ಥಿತಿ
ಮಧ್ಯಾಹ್ನ ೧೨.೩೦, ಅಯೋಧ್ಯಾ

ಡೀಟರ್ ಕೋಚ್ ವಿಶ್ವದ ಶ್ರೇಷ್ಠ ಗಣಿತಜ್ಞರಲ್ಲಿ ತಮ್ಮ ಸ್ಥಾನವನ್ನು ಗಳಿಸಿಕೊಂಡಿದ್ದಾರೆ. ಸ್ವಿಸ್ ಎಫಿಮರೀಸ್ ಇಂದ ಅನೇಕ ಸಾಫ್ಟ್‍ವೇರ್‍ಗಳು ತಯಾರಾಗಿವೆ. ನೀವು ನಾಸಾದ ಪ್ರಮುಖ ವೈಜ್ಞಾನಿಕ ಡಾ.ಸ್ಟೈಂಡಿಶ್ ಇವರ ಸಂಪರ್ಕದಲ್ಲಿ ನಿರಂತರ ಇದ್ದೀರಿ. ನೀವು ಸಂಸ್ಕೃತದ ಒಳ್ಳೆಯ ಮಾಹಿತಿ ಹೊಂದಿರುವ ಕಾರಣ ವಿಶ್ವದಲ್ಲಿ ಪ್ರಸಿದ್ಧರಾಗಿದ್ದೀರಿ. ನಿಮ್ಮಿಂದ ಪ್ರಕಟಿಸಲ್ಪಟ್ಟ ಕ್ರಿ.ಪೂ. 10 ಜನವರಿ 5114 ಈ ದಿನ ಮಧ್ಯಾಹ್ನ ೧೨.೩೦, ಅಯೋಧ್ಯೆಯ ಗ್ರಹಸ್ಥಿತಿಯು ejplde431 ಇದರಿಂದ ಲೆಕ್ಕಿಸಿದ ನಿರಯನ ಗ್ರಹಸ್ಫುಟವು ನಿಮ್ನೋಕ್ತ ರೀತಿಯಲ್ಲಿದೆ:-

ಗ್ರಹ
ಡಿಗ್ರಿ, ಮಿನಿಟ್, ಸೆಕೆಂಡ್
ರಾಶಿ
ಶನಿ
211-17-17.2163
ವೃಶ್ಚಿಕ
ಬೃಹಸ್ಪತಿ
104-01-15.8886
ಕರ್ಕ (ಉಚ್ಚ)
ಮಂಗಳ
283-34-33.1025
ಮಕರ (ಉಚ್ಚ)
ಸೂರ್ಯ
006-55-20.5085
ಮೇಷ (ಉಚ್ಚ)
ಶುಕ್ರ
357-16-07.6590
ಮೀನ (ಉಚ್ಚ, ಆದರೆ ಭಂಗ)
ಬುಧ
351-14-11.6923
ಮೀನ (ನೀಚ)
ಚಂದ್ರಮಾ
105-22-53.5895
ಕರ್ಕದಲ್ಲಿ ಪುಷ್ಯ ೪ನೇ ಪಾದ
ತಿಥಿ
8.20493243
ನವಮಿಯಲ್ಲಿ 20.4932% ವ್ಯತೀತ

ಇದರಿಂದ ಸ್ಪಷ್ಟವಾಗುವುದೇನೆಂದರೆ ಚಂದ್ರನು ಪುಷ್ಯದ ೪ನೇ ಚರಣದಲ್ಲಿ ಹಾಗೂ ಶನಿಯು ವೃಶ್ಚಿಕ ರಾಶಿಯಲ್ಲಿ ಇದ್ದಾರೆ. ಐದು ಉಚ್ಚಗ್ರಹಗಳು ಹಾಗೂ ಪುನರ್ವಸು ನಾಲ್ಕನೆಯ ಚರಣದಲ್ಲಿ ಚಂದ್ರನಿದ್ದನೆಂಬ ರಾಮಾಯಣದ ಉಲ್ಲೇಖವನ್ನೇ ಇದು ಉಲ್ಲಂಘಿಸಿದೆ. I-SERVE ಎಂಬ ಸಂಸ್ಥೆಯ ಲೇಖಕರು ಶ್ರೀರಾಮನ ಜನ್ಮ ಕಾಲವನ್ನು ಮರೆಮಾಚಿ ಇಟ್ಟಿದ್ದಾರೆ. ಒಂದುವೇಳೆ ಇತಿಹಾಸ ಲೇಖನದತ್ತ ಇವರು ನೈತಿಕವಾಗಿದ್ದುದ್ದಲ್ಲಿ ಗ್ರಹಗಳ ಅಂಶಾದಿ ಸ್ಥಿತಿಯನ್ನು ಮುಚ್ಚಿಡುವ ಅವಶ್ಯಕತೆ ಇರಲಿಲ್ಲ. ಕ್ರಿ.ಪೂ. 10 ಜನವರಿ 5114 ಇದು ಶ್ರೀರಾಮನ ಜನ್ಮಕಾಲವಲ್ಲ. ಇದೊಂದು ಅಶುದ್ಧ ಲೆಕ್ಕಾಚಾರ ಹಾಗೂ ಅಪ್ರಾಮಾಣಿಕ ಪ್ರಕಟಣೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.

Ref. ಇತಿಹಾಸ್ ಕಾ ಉಪಹಾಸ್ : 
http://vedicastrology.wikidot.com/mockery-of-history:horoscope-of-lord-ram

ವಿನಯ್ ಜಾ
ಸಂರಕ್ಷಕರು,
ಅಖಿಲ ಭಾರತೀಯ ವಿದ್ವತ್ ಪರಿಷದ್

Sunday, 25 March 2018

ರಾಮ ಜಿಜ್ಞಾಸೆ


ಈ ದಿನ (ಈಗಿನ ಆಧುನಿಕ ಪಂಚಾಂಗಗಳ ಪ್ರಕಾರ) ವಿಶೇಷವಾಗಿ ರಾಮನವಮಿ. ಚೈತ್ರ ಶುದ್ಧ ನವಮಿಯು ರಾಮಜನ್ಮದಿನ. ಈ ದಿನ ರಾಮನು ಹುಟ್ಟಿದ್ದಾನೆ ಎನ್ನುವ ಕಲ್ಪನೆಯಲ್ಲಿ ಆಚರಣೆ ಮಾಡಲಾಗುತ್ತದೆ.

ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ |
ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ ||

ಇವು ರಾಮನ ೧೦ ಹೆಸರುಗಳು. ಈ ೧೦ ಹೆಸರುಗಳೂ ಕೂಡ ರಾಮನಿಗೆ ಅನ್ವರ್ಥಕವಾಗಿವೆ. ಬೇರೆ ಬೇರೆ ಚರ್ಯೆಗಳಿಂದ ಅರ್ಹತೆಯ ಆಧಾರದಲ್ಲಿ ಈ ಹೆಸರುಗಳು ಬರುತ್ತವೆ. ಅವನು ಪುರಾಣಪುರುಷೋತ್ತಮ, ಶ್ರೇಷ್ಠ ಎಂದೂ ಹೇಳುತ್ತಾರೆ. ಹೀಗೆ ಅರ್ಹತೆಯ ಆಧಾರದಲ್ಲಿ ಹೆಸರುಗಳನ್ನು ಗುರುತಿಸುವುದರ ಜೊತೆಗೆ ಸೀತೆಯ ಗಂಡ ಎಂದೂ ಹೇಳಿದರು. ಇದನ್ನು ಹೇಳಿದವರು ಜನಕನ ಕಡೆಯವರು. ಅವರು ಗುರುತಿಸುವುದು ಸೀತೆಯ ಗಂಡನೆಂದೇ. ಅಂತೆಯೇ ಅರ್ಹತೆಯು – ಶ್ರೇಷ್ಠ ಅರ್ಹತೆಯ ಜೊತೆಯಲ್ಲಿ ಕನಿಷ್ಠ ಅರ್ಹತೆಯೂ ಗುರುತಿಸಲ್ಪಡುತ್ತದೆ. ಒಬ್ಬ ವ್ಯಕ್ತಿ ಎಷ್ಟೇ ಎತ್ತರಕ್ಕೆ ಏರಿರಲಿ, ಅದರ ಜೊತೆಗೆ ಕೊನೆಯಲ್ಲಿ ಅವನ ಕನಿಷ್ಠ ಅರ್ಹತೆಯೂ ಗುರುತಿಸಲ್ಪಡುತ್ತದೆ. ಇದು ಆಧ್ಯಾತ್ಮದ ಗುರಿ. ರಾಮನು ರಾವಣನನ್ನು ಕೊಂದ, ಪ್ರಪಂಚದ ಎಲ್ಲರನ್ನೂ ಜಯಿಸಿದ, ಆದರೆ ಸೀತೆಯ ಗಂಡ ಎಂಬ ಹೆಸರನ್ನು ಮಾತ್ರ ಜಯಿಸಲಿಕ್ಕಾಗಲಿಲ್ಲ. ಜನಕನ ಕಡೆಯವರಿಗೆ ಯಾವತ್ತಿಗೂ ಸೀತಾಯಾಃ ಪತಯೇ ನಮಃ – ಸೀತೆಯ ಗಂಡನಾಗಿಯೇ ಉಳಿದ. ಯಾರು ಎಷ್ಟು ಎತ್ತರಕ್ಕೇರಿದರೂ ಅವನದ್ದಾದ ಕೆಲವು ಕುರುಹುಗಳು ಉಳಿದೇ ಉಳಿಯುತ್ತದೆ. ಅದನ್ನು ಸ್ವೀಕರಿಸಲೇಬೇಕಾಗುತ್ತದೆ. ಏಕೆಂದರೆ ಸಮಾಜ ಒಳಿತು ಕೆಡಕುಗಳು ಎರಡೂ ಸಮಾನವಾಗಿ ಸ್ವೀಕರಿಸಬೇಕೆನ್ನುವ ಸಲುವಾಗಿ.

ರಾಮ ಶಬ್ದವು ಸಂಸ್ಕೃತದಲ್ಲಿ ಬಹಳ ಸುಲಭವಾಗಿ ವಿವರಿಸುತ್ತಾರೆ. ಆದರೆ ರಾಮ ಎಂದರೇನು? ದಾಸರು ಹೇಳಿದರು –

ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮದ ಬಲವೊಂದೇ ಸಾಕು

ರಾಮನ ನಾಮಬಲ ನಮಗೆ ಸಾಕು; ರಾಮ ಬೇಕಿಲ್ಲ. ಕೇವಲ ಹೆಸರು ಸಾಕು, ವ್ಯಕ್ತಿಯು ಬೇಕಿಲ್ಲ ಎಂದಾಗ ರಾಮನಾಮದ ಮಹತ್ವವೇನು ಎಂದು ಚಿಂತಿಸಿದಾಗ ಅದಕ್ಕೆ ಆಧರಿಸಿದ ಒಂದು ಕಥೆ ಸಿಗುತ್ತದೆ.
        
          ಆರ್ಯಾವರ್ತ ಪ್ರದೇಶದಲ್ಲಿ ಬಹಳ ಬುದ್ಧಿವಂತರೂ, ಶ್ರೇಷ್ಠರೂ ಆಗಿದ್ದಂತಹಾ ವಿಶ್ರಾವಸು ಎಂಬ ಬ್ರಾಹ್ಮಣರು ಇದ್ದರು. ಅವರನ್ನು ದೇವತೆಗಳೂ ಸಹ ಗುರುತಿಸುತ್ತಿದ್ದಂತಹಾ ಕಾಲ. ಆ ಕಾಲದಲ್ಲಿ ರಾಕ್ಷಸರು ಪ್ರತಿಯೊಂದು ಹಂತದಲ್ಲೂ ಸೋಲನ್ನು ಕಾಣುತ್ತಿದ್ದರು. ಇದರಿಂದ ಚಿಂತಿತರಾದ ರಕ್ತಾಕ್ಷ, ಪುರೋಚನ, ಮಯ ಇತ್ಯಾದಿ ಬುದ್ಧಿವಂತ ರಾಕ್ಷಸರು, ಎಷ್ಟೇ ವಿಧದಲ್ಲಿ ರಕ್ಷಣೆಯ ಚಿಂತನೆ ಮಾಡಿದರೂ ಅಳಿದು ಹೋಗುತ್ತಲೇ ಇದ್ದೇವೆ. ಹುಟ್ಟಿಬಂದ ರಾಕ್ಷಸರಲ್ಲಿ ಬುದ್ಧಿವಂತರು ಎನಿಸಿಕೊಂಡ ಎಲ್ಲರೂ ವರ ಪಡೆದರೂ ಸಾಯುವ ವರವನ್ನೇ ಕೇಳುತ್ತಾರೆ ವಿನಃ ಉಳಿಯುವ ವರವನ್ನು ಯಾರೂ ಕೇಳಲೇ ಇಲ್ಲ.

        ಹಿರಣ್ಯಕಶಿಪು ವರ ಕೇಳುತ್ತಾನೆ – ಹಗಲಲ್ಲೂ ಸಾಯಬಾರದು, ರಾತ್ರಿಯಲ್ಲೂ ಸಾಯಬಾರದು, ಮನೆಯ ಹೊರಗೂ, ಮನೆಯ ಒಳಗೂ, ಯಾವ ಅಸ್ತ್ರಗಳಿಂದಲೂ, ಯಾವ ಶಸ್ತ್ರಗಳಿಂದಲೂ, ಬ್ರಹ್ಮನು ಸೃಷ್ಟಿಸಿದ ಯಾವ ಜೀವಿಗಳಿಂದಲೂ ತನಗೆ ಮರಣ ಬರಬಾರದೆಂದು. ಇದರ ಇಂಗಿತಾರ್ಥವು ಸಾವಿನ ದಾರಿಯನ್ನು ಅವನೇ ಗುರುತಿಸಿ ಮುಹೂರ್ತವನ್ನೇ ಹೇಳುತ್ತಿದ್ದಾನೆ ಎಂದು. ಈ ರೀತಿ ಬುದ್ಧಿವಂತರೆನಿಸಿಕೊಂಡು ವರವನ್ನು ಪಡೆದು, ಅದೇ ರೀತಿಯಲ್ಲಿ ಮೂರ್ಖರಂತೆ ಸಾಯುತ್ತಿದ್ದರಿಂದ, ಅಳಿದು ಹೋಗುತ್ತಿರುವ ರಾಕ್ಷಸ ಕುಲವನ್ನು ಉದ್ಧರಿಸಲು ಚಿಂತನೆ ನಡೆಸಿದರು. ಯಾವ ರೀತಿಯಲ್ಲೂ ಸೋಲದಂತಹಾ ವರ ಪಡೆದು ಎತ್ತರಕ್ಕೆ ಬೆಳೆಯುವ ಬಗೆಯನ್ನು ಚಿಂತಿಸಿದರು.

        ಸುಮಾಲಿ ಮತ್ತು ಆತನ ಹೆಂಡತಿ ಕೇತುಮತಿಯ ಮಗಳಾದ ಕೈಕಸಿಯನ್ನು ಮುಂದಿಟ್ಟುಕೊಂಡು ಬುದ್ಧಿವಂತರೆನಿಸಿಕೊಂಡ ಜನರು ಇರುತ್ತಿದ್ದ ಆರ್ಯಾವರ್ತ ಪ್ರದೇಶಕ್ಕೆ ಬಂದು ವಿಶ್ರಾವಸು ಬ್ರಾಹ್ಮಣನಿಗೆ ಕೊಟ್ಟು ಮದುವೆ ಮಾಡಿದರು. ಅವಳಿಗೆ ಹೇಳಿದರು – ನೀನು ವಿಶ್ರಾವಸುವಿನಲ್ಲಿ ಬುದ್ಧಿವಂತ ಮಕ್ಕಳನ್ನು ಪಡೆ. ಅವರಿಂದ ನಾವು ಅಭಿವೃದ್ಧಿ ಹೊಂದಬಹುದು. ಹಾಗೆಯೇ ಕೈಕಸಿಯು ವಿಶ್ರಾವಸುವಿನಿಂದ ಮೊದಲನೆಯ ಮಗುವನ್ನು ಪಡೆಯುತ್ತಾಳೆ. ಅವನೇ ರಾವಣ. ಎರಡನೆಯ ಮಗು ಕುಂಭಕರ್ಣ, ಮೂರನೆಯದು ವಿಭೀಷಣ, ನಾಲ್ಕನೆಯದು ಶೂರ್ಪನಖಿ. ಈ ನಾಲ್ಕು ಮಕ್ಕಳನ್ನು ಪಡೆದು ಪುನಃ ಹಿಂತಿರುಗಿ ದಕ್ಷಿಣಕ್ಕೆ ಬರುತ್ತಾರೆ. ಇದೇ ರಾಕ್ಷಸರ ನೇತೃತ್ವದಲ್ಲಿ ಅಲ್ಲಿ ವಿಧ್ಯಾಭ್ಯಾಸ ಕೊಟ್ಟು ತಪಸ್ಸು ಮಾಡಿ ಎಂದು ಕಳುಹಿಸಿಕೊಡುತ್ತಾರೆ. ಅವರಿನ್ನೂ ಬಾಲಕರಾಗಿದ್ದರೂ ಬುದ್ಧಿವಂತರು. ಅದರಂತೆ ಹೋಗಿ ತಪಸ್ಸು ಮಾಡುತ್ತಾರೆ. ಬ್ರಹ್ಮನು ಪ್ರತ್ಯಕ್ಷನಾಗಿ ವರ ಕೇಳುವಂತೆ ಹೇಳಿದಾಗ, ರಾವಣ ಕೇಳಿದ್ದು – ಈ ಪ್ರಕೃತಿಯಲ್ಲಿರುವ ಯಾವ ಜೀವಿಗಳಿಂದಲೂ ಮನುಷ್ಯರನ್ನು ಬಿಟ್ಟು ಉಳಿದ ಯಾರಿಂದಲೂ ತನಗೆ ಮರಣ ಬರಬಾರದು ಎಂದು. ಹಿಂದಿನ ರಾಕ್ಷಸರ ಉದಾಹರಣೆಗಳನ್ನು ತಿಳಿದಿದ್ದ. ಹಾಗಾಗಿ ಈ ರೀತಿ ವರ ಕೇಳಿದ. ತನ್ನ ದೈಹಿಕ ಬಲದ ಮೇಲೆ ಅವನಿಗೆ ಅಪಾರ ನಂಬಿದೆ. ಮನುಷ್ಯರನ್ನು ಹಾಗೇ ತಿನ್ನುತ್ತಿದ್ದ. ಹಾಗಾಗಿ ಮನುಷ್ಯರು ಅವನಿಗೆ ತೀರಾ ಕ್ಷುಲ್ಲಕರು. ಅವರಿಂದೇನೂ ಸಾಧ್ಯವಿಲ್ಲ. ಹಾಗಾಗಿ ವರ ಕೇಳುವಾಗ ಮನುಷ್ಯರನ್ನು ಬಿಟ್ಟ. ಆಗಲೇ ಚಿಂತಿಸಿದ ಬ್ರಹ್ಮ – ಈತನು ಸಾವಿನ ವರವನ್ನು ಕೇಳುತ್ತಿದ್ದಾನೆ ಎಂದು; ತಥಾಸ್ತು ಎಂದ. ಕುಂಭಕರ್ಣ ನಿದ್ರೆ ಮಾಡುವ ವರ ಕೇಳಿದರೆ, ವಿಭೀಷಣು ವಿಷ್ಣುಭಕ್ತಿಯನ್ನು ಕೇಳಿದ. ಈ ರೀತಿಯಲ್ಲಿ ವರಗಳನ್ನು ಪಡೆದು ಹಿಂತಿರುಗಿದರು.

        ಅವರ ದೈಹಿಕ ಶಕ್ತಿ, ಬುದ್ಧಿ ಶಕ್ತಿ ಮತ್ತು ವರದ ಶಕ್ತಿ ಇವು ಮೂರನ್ನೂ ಸೇರಿಸಿಕೊಂಡು ಬಹಳ ಕಂಟಕಪ್ರಾಯರಾಗಿ ಬೆಳೆದರು. ಪ್ರಪಂಚವನ್ನೆಲ್ಲಾ ಅಲುಗಾಡಿಸಲು ಆರಂಭಿಸಿದರು. ಎಲ್ಲಾ ದೇವತೆಗಳನ್ನೂ ತನ್ನ ಅಧೀನದಲ್ಲಿಟ್ಟುಕೊಂಡ. ರಾವಣನ ಸಿಂಹಾಸನಕ್ಕೆ ನವಗ್ರಹಗಳೇ ಮೆಟ್ಟಿಲುಗಳು, ದೇವತೆಗಳು ಸೇವಕರು, ಬೃಹಸ್ಪತಿಯೇ ಪಂಚಾಂಗ ಹೇಳುವವನು, ಅಗ್ನಿಯು ಅಡುಗೆ ಮಾಡುವವನು, ವಾಯುವು ಕಸ ಗುಡಿಸುವವನು, ಹೀಗೆ ದೇವತೆಗಳಿಗೆಲ್ಲಾ ಒಂದೊಂದು ಕೆಲಸ ಹಂಚಿದ. ಎಲ್ಲರಿಗೂ ಬಹಳ ಕಷ್ಟವಾಯಿತು. ಇದಕ್ಕೆ ಪರಿಹಾರವೇನು ಎಂದು ಚಿಂತಿಸಲು ಆರಂಭಿಸಿದರು.

       ಇದಕ್ಕೆ ಪರಿಹಾರ ನಾರಾಯಣನಿಂದಲೇ ಸಾಧ್ಯ ಎಂದು ರಾವಣನಿಗೆ ಗೊತ್ತಾಗದಂತೆ ಅವನು ವಿಧಿಸಿದ್ದ ಕೆಲಸಗಳನ್ನು ಪೂರೈಸಿ ಅರ್ಧರಾತ್ರಿಯ ವೇಳೆ ವೈಕುಂಠವನ್ನು ಸೇರಿ ನಾರಾಯಣನನ್ನು ಸ್ತುತಿಸಿದರು. ರಾವಣನಿಗೆ ಗೊತ್ತಾದರೆ ಇವರಿಗೆ ಬಿಡುಗಡೆಯೇ ಸಿಗುವುದಿಲ್ಲ. ಮತ್ತೂ ಕ್ರೂರನಾಗಿ ಕೆಲಸ ವಿಧಿಸುತ್ತಾನೆ. ಹಾಗಾಗಿ ಗೊತ್ತಾಗದಂತೆ ನಾರಾಯಣನಲ್ಲಿಗೆ ಬಂದರು. ರಾವಣನ ಭಯದಿಂದ ನಾರಾಯಣನನ್ನು ಕೂಗುವ ಭರದಲ್ಲಿ ನಾಯಣ, ನಾಯಣ ಎಂದರು. ಅಲ್ಲಿ ನಾರಾಯಣ ಎಂಬ ಶಬ್ದದಿಂದ ರಾ ಬಿಟ್ಟು ಹೋಯಿತು. ಆಗ ವಿಷ್ಣು ತಥಾಸ್ತು ಎಂದ. ಆದರೆ ದೇವತೆಗಳಿಗೆ ಏಕೋ ಸಂಶಯವಾಯಿತು, ಇಷ್ಟು ಬೇಗ ವಿಷ್ಣು ತಥಾಸ್ತು ಎಂದನಲ್ಲ ಏಕೆ? ಎಂದು. ಹಾಗಾಗಿ ಅವರಿಗೆ ನಂಬಿಕೆ ಬರಲಿಲ್ಲ. ನೇರ ಕೈಲಾಸಕ್ಕೆ ಹೋದರು. ಅಲ್ಲೂ ಗಡಿಬಿಡಿಯಿಂದ ನಮಃಶಿವಾಯ ಹೇಳುವ ಬದಲು ನಃಶಿವಾಯ ಎಂದರು. ಅಲ್ಲಿ ಬಿಟ್ಟು ಹೋಯಿತು. ಇದನ್ನರಿತ ಈಶ್ವರನು ಇಲ್ಲಿ ಯಾವುದಿಲ್ಲವೋ, ಅದು ಅಲ್ಲಿ ನಿಮ್ಮ ಕೆಲಸ ಮಾಡುತ್ತದೆ, ರಕ್ಷಣೆ ಕೊಡುತ್ತದೆ, ನಿಮ್ಮ ಕೆಲಸ ನೆರವೇರುತ್ತದೆ ಹೋಗಿ ಎಂದನು. ಅಷ್ಟು ಹೊತ್ತಿಗೆ ರಾವಣ ಏಳುವ ಹೊತ್ತಾಯಿತು. ಸಮಯದ ಅಭಾವದಿಂದ ಕೂಡಲೇ ಏನೂ ಮಾತಾಡದೇ ಹಿಂತಿರುಗಿ ಬಂದು ತಮ್ಮತಮ್ಮಯ ಕೆಲಸಗಳಲ್ಲಿ ತೊಡಗಿಕೊಂಡರು.


ಅಲ್ಲಿ ಬಿಟ್ಟು ಹೋದ ನಾರಾಯಣನ ರಾ ಮತ್ತು ನಮಃಶಿವಾಯದ ಸೇರಿ ಭೂಮಿಯಲ್ಲಿ ಅವತಾರವಾಗಿ ರಾಮ ಆಯಿತು. ನಾಮಬಲ ಎಂದರೆ ಇದೇ ಈಶ್ವರ ಮತ್ತು ನಾರಾಯಣನ ಅಂಶಗಳು ಸೇರಿದ ರಾಮ ಎಂದು ಹೇಳುವುದೇ ಆಗಿದೆ. ಈ ನಾಮಬಲವನ್ನು ಹೊಂದಿ ರಾಮನು ರಾವಣನನ್ನು ಜಯಿಸಿದ. ಹಾಗಾಗಿ ರಾಮನೂ ನಾಮಬಲದಿಂದ ರಾವಣನನ್ನು ಗೆದ್ದನೇ ವಿನಃ ರಾಮನಾಗಿ ಗೆದ್ದದ್ದಲ್ಲ. ನಾಮಬಲದಿಂದಾಗಿ ರಾಮನಿಗೆ ರಾಮ ಪ್ರಾಪ್ತವಾದದ್ದು ಎನ್ನುವುದು ಐತಿಹಾಸಿಕ ಸತ್ಯ.  


ಶಿವ ಮತ್ತು ವಿಷ್ಣು ಎಂದು ಹೇಳತಕ್ಕಂತಹಾ ಎರಡು ತತ್ವಗಳು ಒಂದು ಕಡೆ ಸಂಯೋಗವಾದ್ದರಿಂದಾಗಿ ರಾವಣನಂತಹಾ ಮಹಾಪರಾಕ್ರಮಿಯನ್ನು ಗೆಲ್ಲುವುದಕ್ಕೆ ಸಾಧ್ಯವಾಯಿತು. ಅದಕ್ಕಾಗಿ ಮುಂದೆ ಶಿವ+ವಿಷ್ಣುವಿನ ಸಂಯೋಗದಿಂದ ಮಹತ್ತರ ಶಕ್ತಿ ಉತ್ಪನ್ನವಾಗುತ್ತದೆ, ಅದರಿಂದ ಅಸಾಧ್ಯವಾದ ಕೆಲಸವೂ ಕೂಡ ಸಾಧಿಸಲ್ಪಡುತ್ತದೆ ಎಂಬುದನ್ನು ನಿರೂಪಿಸುವ ಎಷ್ಟೋ ಕಥೆಗಳು ಬರುತ್ತವೆ. ಉದಾ:- ಅಯ್ಯಪ್ಪನ ಕಥೆ. ಅದರ್ಥ ಎಲ್ಲಿ ರಾಮ ಸಂಯೋಜನೆಯಾಗುತ್ತದೋ (ರಾ+ ಸೇರುತ್ತದೋ) ಅಲ್ಲಿ ಪ್ರಬಲ ಶಕ್ತಿ ಉತ್ಪನ್ನವಾಗುತ್ತದೆ ಎಂದರ್ಥ. ಹಾಗಾದರೆ ರಾಮ ಯಾವುದೆಂದು ಚಿಂತಿಸಿದಾಗ ಮೊದಲಿಗೆ ನಾಮಬಲವಾದಂತಹಾ ನಾರಾಯಣನಲ್ಲಿರುವ ರಾ ಎಂಬ ಅಕ್ಷರವು. ನಾರಾಯಣ = ನೀರು. ನಾರಾಯಣದಲ್ಲಿ ರಾ ಎಂದರೆ ನೀರಿನಲ್ಲಿರುವ ಅಗ್ನಿಸ್ವರೂಪವಾದಂತಹಾ ಅಂಶ. ಎರಡನೆಯ ಅಕ್ಷರ ನಮಃಶಿವಾಯದಲ್ಲಿರುವ ಕಾರವು ಪ್ರಕೃತಿ. ನಾನು, ನನ್ನದ್ದು ಎಂದು ಹೇಳುವ ಎಲ್ಲವೂ ಪ್ರಕೃತಿ.

        ಅಗ್ನಿಯು ಪ್ರಕೃತಿಯೊಂದಿಗೆ ಸಂಯೋಗವಾದಾಗ ಉತ್ಪನ್ನವಾಗತಕ್ಕಂತಹಾ ಅಂದರೆ ಪರಿಶುದ್ಧತೆಯುಳ್ಳ ಪ್ರಬಲಶಕ್ತಿಯು ರಾಮ. ಹಾಗಾಗಿ ರಾಮನು ಪರಿಪೂರ್ಣ, ಪಾವಿತ್ರ್ಯತೆ ಉಳ್ಳವ, ಪುರಾಣ ಪುರುಷೋತ್ತಮ, ಶ್ರೇಷ್ಠ ಎಂದರು. ಹಾಗಾಗಿ ಈ ಪ್ರಕೃತಿಯೊಂದಿಗೆ ಅಗ್ನಿ ಸಂಯೋಜನೆಯಾದರೆ ಪ್ರಪಂಚದ ಎಲ್ಲವನ್ನೂ ಸಾಧಿಸಬಹುದು ಎಂದು ಸಿದ್ಧಾಂತವಾಯಿತು. ಹಾಗಾಗಿ ಪ್ರಕೃತಿಯ ಮೂಲವಾದ ಸೌದೆ, ಹಾಗೆ ದೇವಮೂಲವಾದ ಅಗ್ನಿಯನ್ನು ಸಂಯೋಜಿಸಿ  ಹೋಮ, ಹವನ, ಯಜ್ಞ, ಯಾಗಾದಿಗಳನ್ನು ಮಾಡುತ್ತೇವೆ. ಏಕೆಂದರೆ ಕೆಲಸವನ್ನು ಸಾಧಿಸಲು ಸಾಧ್ಯತೆಯಿದೆ. ಹಾಗಾಗಿ ನೀವು ಹೋಮದಲ್ಲಿ ಉತ್ಪನ್ನ ಮಾಡತಕ್ಕಂತಹಾ ಅಗ್ನಿಯೂ ರಾಮನೇ. ಹಾಗೇ ಪ್ರಪಂಚದಲ್ಲಿ ರಾಮವಲ್ಲದ ಯಾವುದೂ ಇಲ್ಲ. ಅದು ಆಧ್ಯಾತ್ಮ.

        ಹಾಗಾಗಿ ನೀವು ರಾಮವನ್ನು ಸ್ವೀಕರಿಸಿ ರಾಮರಾದರೆ ನೀವು ವಿರಾಮವಾಗಿ, ಆರಾಮವಾಗಿ ಬದುಕಲು ಸಾಧ್ಯ. ಇದು ಆಧ್ಯಾತ್ಮಿಕ ಸತ್ಯ. ಹಾಗಾಗಿ ನಿಮ್ಮ ಜೀವನದಲ್ಲಿ ಇಂಜಿನಿಯರ್, ಡಾಕ್ಟರ್, ಇತ್ಯಾದಿ ಏನೇ ವಿಧ್ಯೆ ಓದಿದರೂ ರಾಮವನ್ನು ಬಿಡಬೇಡಿ. ರಾಮವನ್ನು ಬಿಟ್ಟರೆ ನೀವು ಕಲಿತ ವಿಧ್ಯೆಯು ಉಪಯೋಗಕ್ಕೆ ಬರುವುದಿಲ್ಲ. ಎಲ್ಲಿಯವರೆಗೆ ನೀವು ರಾಮವನ್ನು ಹಿಡಿದಿರುತ್ತೀರಿ, ಅಲ್ಲಿಯವರೆಗೆ ನೀವು ಯಾವುದೇ ವಿಧ್ಯೆಯನ್ನು ಕಲಿಯಿರಿ, ಹೇಗೇ ಬದುಕಿ, ಆನಂದವಾಗಿ ಬದುಕಲು ಸಾಧ್ಯವಾಗುತ್ತದೆ ಎನ್ನುವುದು ಈ ರಾಮನವಮಿಯ ವಿಶೇಷ.

        ಹಾಗಾಗಿ ರಾಮ ಈ ದಿನ ಹುಟ್ಟಿದ ಎನ್ನುವುದು ಮುಖ್ಯವಲ್ಲ. ರಾಮನವಮಿಯ ಆಚರಣೆಯು ರಾಮನ ಪರಿಚಯವಾಗಲಿಕ್ಕೆ ಎಂದು. ಈಗ ಚೈತ್ರಮಾಸ, ಎಂದರೆ ಚಿತ್ರಾ ನಕ್ಷತ್ರದಲ್ಲಿ ಹುಣ್ಣಿಮೆಯಾದರೆ ಚೈತ್ರಮಾಸ. ನವಮಿ ಎಂದರೆ ಚಂದ್ರನ ೯ನೇ ಕಲೆಯಾದ ಚಂದ್ರಿಕೆ. ಹಾಗಾಗಿ ಚಿತ್ರಾ ನಕ್ಷತ್ರದಿಂದ ಪ್ರೇಷಿತವಾಗುವ ಚಂದ್ರಿಕಾ ಕಲೆಯು ಪ್ರಕೃತಿಯಲ್ಲಿ ಚಿಗುರು, ಹೊಸತು, ನವಚೈತನ್ಯ, ನವನವೀನ ಚಿಂತನೆಯನ್ನು ಹಚ್ಚುತ್ತದೆ. ವಸಂತನಾಗಮನದಿಂದ ಸಂತನಾಗುವ ಪರಿಯನ್ನು ಪ್ರಕಟಿಸುತ್ತದೆ. ರಾಮನಂತೆ ಆದರ್ಶಪುರುಷನಾಗುವ ಆ ರಾಮ ದರ್ಶನವನ್ನು ಮಾಡಿಸುತ್ತದೆ.

ಇನ್ನು  ಸೌರಮಾನದ ರೀತಿ ಸರಿಯಾಗಿ ಗಣಿಸಿದರೆ ಸೂರ್ಯನು ಮೇಷ ಪ್ರವೇಶಿಸಿದಾಗ ಚೈತ್ರಮಾಸವು ಆರಂಭವಾಗುತ್ತದೆ. ಆಗ ನಿಮಗೆ ಸಹಜ ಪ್ರಾಕೃತಿಕ ರಾಮದ ಪರಿಚಯ ಆಗುತ್ತದೆ. ರಾಮ ಎಲ್ಲಿದೆ ಎಂದು ನಿಮಗೆ ಗೊತ್ತಾಗುತ್ತದೆ. ಈ ದಿನದಿಂದ ಚೈತ್ರಮಾಸ ಆರಂಭ. ಈ ದಿನದಿಂದ ಆರಂಭಿಸಿ ನೀವು ರಾಮನನ್ನು ಪರಿಚಯ ಮಾಡಿಕೊಳ್ಳುವುದೆಂದರೆ, ನಿಮ್ಮ ಜೀವನದ ಪ್ರತಿಯೊಂದು ಚರ್ಯೆಯಲ್ಲೂ ಆಧ್ಯಾತ್ಮಿಕತೆಯನ್ನು ಸೇರಿಸಿಕೊಳ್ಳಬೇಕು. ಅಂದರೆ ಸಹಜತೆಯನ್ನು ಸೇರಿಸಿಕೊಳ್ಳಬೇಕು. ಅಲ್ಲಿ ದುರುದ್ದೇಶ ಬರಬಾರದು, ದುರ್ಭಾವ ಬರಬಾರದು, ದುಷ್ಟತನ ಇಣುಕಬಾರದು, ಸಿಟ್ಟು ಬರಬಾರದು, ಇನ್ನೊಬ್ಬರ ಮೇಲೆ ದ್ವೇಷ ಬರಬಾರದು, ಅಸೂಯೆ ಹುಟ್ಟಬಾರದು. ಇವೆಲ್ಲಾ ಬಂದರೆ ರಾಮ ಬಿಟ್ಟು ಹೋಗುತ್ತದೆ. ಇವನ್ನೆಲ್ಲಾ ಬಿಡುತ್ತಾ ಬಂದರೆ ಅಲ್ಲಿ ರಾಮ ಸೇರುತ್ತಾ ಬರುತ್ತದೆ. ಆಗ ನೀವೆಲ್ಲ ರಾಮರಾಗುತ್ತೀರಿ. ರಾಮರಾದರೆ ನೀವು ಇಂಜನಿಯರ್, ಡಾಕ್ಟರ್ ಇತ್ಯಾದಿ ಯಾವುದೂ ಆಗಬೇಕಾದುದಿಲ್ಲ. ಎಲ್ಲಾ ನೀವೇ ಆಗಿರುತ್ತೀರಿ. ಆದ್ದರಿಂದ ಮೊದಲು ಆಧ್ಯಾತ್ಮವನ್ನು ಸೇರಿಸಿಕೊಂಡು ರಾಮರಾಗಲು ಪ್ರಯತ್ನಮಾಡಿ. ಆಗ ನಮ್ಮ ದೇಶ ರಾಮರಾಜ್ಯವಾಗುತ್ತದೆ. ಗಾಂಧೀಜಿಯವರು ಹೇಳಿದ್ದು ಇದನ್ನೇ. ನಮ್ಮ ದೇಶ ಪ್ರಜಾಪ್ರಭುತ್ವದಿಂದ ಎಲ್ಲರೂ ರಾಮರಾದರೆ ರಾಮರಾಜ್ಯವೇ ಆಗುತ್ತದೆ. ಯಾರೋ ಒಬ್ಬ ರಾಮನಾದರೆ ದೇಶ ರಾಮರಾಜ್ಯವಾಗುವುದಿಲ್ಲ. ಎಲ್ಲರೂ ರಾಮರಾದರೆ ಮಾತ್ರ ರಾಮರಾಜ್ಯವಾಗುತ್ತದೆ. ಆದ್ದರಿಂದ ನೀವೆಲ್ಲರೂ ಈ ವೇದಶಿಕ್ಷಣದಿಂದ ಪ್ರಯೋಜನವನ್ನು ಪಡೆದು ರಾಮರಾಗುವ ಪ್ರಯತ್ನದಲ್ಲಿ ಯಶಸ್ವಿಯಾಗಿರಿ ಎಂದು ಹಾರೈಸುತ್ತಾ ಈ ಪ್ರವಚನವನ್ನು ಮುಗಿಸುತ್ತೇನೆ.

14-04-2008, ಶಾಲಾ ಮಕ್ಕಳಿಗಾಗಿ ವೇದ ಶಿಕ್ಷಣ ಶಿಬಿರ.

ಬ್ರಹ್ಮ ಋಷಿ ಕೆ. ಎಸ್. ನಿತ್ಯಾನಂದರು
ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು

Thursday, 15 March 2018

ಶಿವ ಜಿಜ್ಞಾಸೆ

೨೦೧೮ನೇ ಇಸವಿಯ ಶಿವರಾತ್ರಿ ಪರ್ವ ನಿಮಿತ್ತ ಅಧ್ಯಯನ ಮಾಡಿದ ಶಿವನ ವಿಚಾರಗಳನ್ನು ಪ್ರಸ್ತುತಪಡಿಸಲಾಗುತ್ತಿದೆ.

(೧) ಗಾಯತ್ರೀ ಮಂತ್ರದಲ್ಲಿ ಖಂಡವು ಗಾಯತ್ರೀ ಮಂತ್ರದ ೩ ಪಾದಗಳಾಗಿವೆ. ಆ ೩ ಪಾದಗಳು – ಸ್ರಷ್ಟಾ ರೂಪ ಬ್ರಹ್ಮಾ, ತೇಜ ರೂಪದಲ್ಲಿ ದೃಶ್ಯ ವಿಷ್ಣು – ಇದರ ರೂಪವೇ ಸೂರ್ಯ ಹಾಗೂ ಜ್ಞಾನ ರೂಪ ಶಿವ. ಅದೇ ರೀತಿ ಓಂಕಾರದಲ್ಲಿಯೂ ೩ ಭಾಗಗಳಿವೆ, ನಾಲ್ಕನೇಯದಾದ ಅರ್ಧಮಾತ್ರಾ ಅವ್ಯಕ್ತವಾಗಿದೆ.

(೨) ಪೂರ್ಣ ಗಾಯತ್ರೀಯು ಕೇವಲ ಶಿವ ರೂಪದಲ್ಲಿದೆ. ಗಾಯತ್ರೀಯ ಮೊದಲನೆಯ ಪಾದವು ಮೂಲಸಂಕಲ್ಪವಾಗಿದೆ. ಇದರಿಂದಲೇ ಸೃಷ್ಟಿಯಾಯಿತು, ಎರಡನೇಯ ಪಾದವು ತೇಜದ ಅನುಭವವಾಗಿದೆ. ಮೂರನೇಯ ಪಾದವು ಜ್ಞಾನ. ತೀವ್ರ ತೇಜವೇ ರುದ್ರ, ಶಾಂತ ರೂಪವೇ ಶಿವ. ಸೌರ ಮಂಡಲದಲ್ಲಿ ೧೦೦ ಸೂರ್ಯ ವ್ಯಾಸ (ಯೋಜನ)ದವರೆಗೆ ತಾಪ ಕ್ಷೇತ್ರ ಅಥವಾ ರುದ್ರವಿದೆ. ತದನಂತರ ಚಂದ್ರ ಕಕ್ಷೆಯಿಂದ ಶಿವಕ್ಷೇತ್ರ ಆರಂಭವಾಗುತ್ತದೆ, ಇದರಿಂದಲೇ ಪೃಥ್ವಿಯಲ್ಲಿ ಜೀವನವಿರುವುದು. ಆದರೆ ಶಿವನ ಲಲಾಟದಲ್ಲಿ ಚಂದ್ರನಿದ್ದಾನೆ, ಮೂಲ ಸ್ಥಾನವು ಶಿರ ಅಥವಾ ಶೀರ್ಷ ಎನ್ನಲ್ಪಡುತ್ತದೆ. ಶನಿ ಕಕ್ಷೆಯವರೆಗೆ ಅಥವಾ ೧೦೦೦ ವ್ಯಾಸ ದೂರದವರೆಗೆ ಶಿವ, ತದನಂತರ ೧ ಲಕ್ಷ ವ್ಯಾಸದವರೆಗೆ ಶಿವತರ ಮತ್ತು ಸೌರಮಂಡಲದ ಸೀಮಾ ೧೫೭ ಲಕ್ಷ ವ್ಯಾಸದವರೆಗೆ ಶಿವತಮ ಕ್ಷೇತ್ರವಿದೆ. ಇದು ವಿಷ್ಣುವಿನ ತಾಪ, ತೇಜ ಮತ್ತು ಪ್ರಕಾಶ ಕ್ಷೇತ್ರಗಳೆಂಬ ೩ ಪದಗಳೂ ಹೌದು. ಅದನ್ನು ಅಗ್ನಿ-ವಾಯು-ರವಿ ಎಂದೂ ಕರೆಯಲಾಗಿದೆ. ತತ್ಪಶ್ಚಾತ್ ಬ್ರಹ್ಮಾಂಡವೇ ಸೂರ್ಯಪ್ರಕಾಶದ ಸೀಮೆಯಾಗಿದೆ. ಅಂದರೆ ಈ ಸೀಮೆಯಲ್ಲಿ ಸೂರ್ಯ ಬಿಂದು ಮಾತ್ರ ಕಂಡುಬರುತ್ತದೆ, ನಂತರ ಅದೂ ಕಾಣುವುದಿಲ್ಲ. ಈ ಸೂರ್ಯ ರೂಪವು ವಿಷ್ಣುವಿನ ಪರಮ-ಪದವಾಗಿದೆ.

ಯಾ ತೇ ರುದ್ರ ಶಿವಾ ತನೂರಘೋರಾಽಪಾಪಕಾಶಿನೀ | ತಯಾ ನಸ್ತನ್ವಾ ಶನ್ತಮಯಾ ಗಿರಿಶನ್ತಾಮಿ ಚಾಕಶೀಹಿ || (ವಾಜಸನೇಯೀ ಸಂ. ೧೬/೨, ಶ್ವೇತಾಶ್ವತರ ಉಪನಿಷದ್ ೩/೫)

ನಮಃ ಶಿವಾಯ ಚ ಶಿವತರಾಯ ಚ (ವಾಜಸನೇಯೀ ಸಂ. ೧೬/೪೧, ತೈತ್ತಿರೀಯ ಸಂ. ೪/೫/೮/೧, ಮೈತ್ರಾಯಣೀ ಸಂ. ೨/೯/೭)

ಯೋ ವಃ ಶಿವತಮೋ ರಸಃ, ತಸ್ಯ ಭಾಜಯತೇಹ ನಃ | (ಅಘಮರ್ಷಣ ಮಂತ್ರ, ವಾಜಸನೇಯೀ ಸಂ. ೧೧/೫೧)

ಸದಾಶಿವಾಯ ವಿದ್ಮಹೇ, ಸಹಸ್ರಾಕ್ಷಾಯ ಧೀಮಹಿ ತನ್ನೋ ಸಾಮ್ಬಃ ಪ್ರಚೋದಯಾತ್ | (ವನದುರ್ಗಾ ಉಪನಿಷದ್ ೧೪೧)

ಶತ ಯೋಜನೇ ಹ ವಾ ಏಷ (ಆದಿತ್ಯ) ಇತಸ್ತಪತಿ (ಕೌಷೀತಕಿ ಬ್ರಾಹ್ಮಣ ಉಪನಿಷದ್ ೮/೩)

ಸ ಏಷ (ಆದಿತ್ಯಃ) ಏಕ ಶತವಿಧಸ್ತಸ್ಯ ರಶ್ಮಯಃ | ಶತವಿಧಾ ಏಷ ಏವೈಕ ಶತತಮೋ ಯ ಏಷ ತಪತಿ (ಶತಪಥ ಬ್ರಾಹ್ಮಣ ೧೦/೨/೪/೩)

ಯುಕ್ತಾ ಹ್ಯಸ್ಯ (ಇಂದ್ರಸ್ಯ) ಹರಯಃ ಶತಾದಶೇತಿ | ಸಹಸ್ರಂ ಹೈತ ಆದಿತ್ಯಸ್ಯ ರಶ್ಮಯಃ (ಇಂದ್ರಃ = ಆದಿತ್ಯಃ) (ಜೈಮಿನೀಯ ಉಪನಿಷದ್ ಬ್ರಾಹ್ಮಣ ೧/೪೪/೫)

ಅಸೌ ಯಸ್ತಾಮ್ರೋ ಅರುಣ ಉತ ಬಭ್ರುಃ ಸುಮಙ್ಗಲಃ | ಯೇ ಚೈನಂ ರುದ್ರಾ ಅಭಿತೋ ದಿಕ್ಷು ಶ್ರಿತಾಃ ಸಹಸ್ರೋಽವೈಷಾಂ ಹೇಡ್ದ ಈಮಹೇ || (ವಾ. ಯಜು. ೧೬/೬)

ಇದಂ ವಿಷ್ಣುರ್ವಿಚಕ್ರಮೇ ತ್ರೇಧಾ ನಿದಧೇ ಪದಮ್ | ಸಮೂಳ್ಹಮಸ್ಯ ಪಾಂಸುರೇ || (ಋಕ್ ೧/೨೨/೧/೭)

ತದ್ ವಿಷ್ಣೋಃ ಪರಮಂ ಪದಂ ಸದಾ ಪಶ್ಯನ್ತಿ ಸೂರಯಃ | ದಿವೀವ ಚಕ್ಷುರಾತತಮ್ | (ಋಕ್ ೧/೨೨/೨೦)

ಖ ವ್ಯೋಮ ಖತ್ರಯ ಖ-ಸಾಗರ ಷಟ್‍ಕ-ನಾಗ ವ್ಯೋಮಾಷ್ಟ ಶೂನ್ಯ ಯಮ-ರೂಪ-ನಗಾಷ್ಟ-ಚಂದ್ರಾಃ |
ಬ್ರಹ್ಮಾಂಡ ಸಮ್ಪುಟಪರಿಭ್ರಮಣಂ ಸಮನ್ತಾದಭ್ಯನ್ತರಾ ದಿನಕರಸ್ಯ ಕರ-ಪ್ರಸಾರಾಃ | (ಸೂರ್ಯ ಸಿದ್ಧಾಂತ ೧೨/೧೦)

ಜ್ಞಾನ ರೂಪದಲ್ಲಿ ಗುರು-ಶಿಷ್ಯ ಪರಂಪರೆಯ ಪ್ರತೀಕವೇ ವಟ. ಹೇಗೆ ವಟ ವೃಕ್ಷದ ಶಾಖೆಗಳು ನೆಲದ ಮೇಲೆ ಆಳವಾಗಿ ಹಬ್ಬುತ್ತಾ ತಮ್ಮಂತಹಾ ವೃಕ್ಷಗಳನ್ನೇ ಸೃಷ್ಟಿಸುತ್ತದೋ, ಅದೇ ರೀತಿ ಗುರುವು ತನ್ನ ಜ್ಞಾನಧಾರೆಯಿಂದ ಶಿಷ್ಯನನ್ನು ತನ್ನಂತಹಾ ಮನುಷ್ಯನನ್ನಾಗಿ ರೂಪಿಸುತ್ತಾನೆ. ಮೂಲ ವೃಕ್ಷ ಶಿವ. ಅದರಿಂದಲೇ ಹೊರಟ ಅನ್ಯ ವೃಕ್ಷಗಳು ಲೋಕಭಾಷೆಯಲ್ಲಿ ದುಮದುಮಾ (ದ್ರುಮದಿಂದ ದ್ರುಮ) ಆಗಿವೆ. ಇದು ಹನುಮಂತನ ಪ್ರತೀಕವೂ ಹೌದು.

ವಟವಿಟಪಸಮೀಪೇ ಭೂಮಿಭಾಗೇ ನಿಷಣ್ಣಂ, ಸಕಲಮುನಿಜನಾನಾಂ ಜ್ಞಾನದಾತಾರಮಾರಾತ್ |(೩) ಮನುಷ್ಯ ರೂಪದಲ್ಲಿ ಶಿವ – ಕೂರ್ಮ, ವಾಯು, ಬ್ರಹ್ಮಾಂಡ ಇತ್ಯಾದಿ ಪುರಾಣಗಳಲ್ಲಿ ಜ್ಞಾನ ಅವತಾರ ರೂಪದಲ್ಲಿ ಶಿವನ ೨೮ ಅವತಾರ ವರ್ಣಿತವಾಗಿದೆ. ಮೊದಲಿನ ಸ್ವಾಯಂಭುವ ಮನುವನ್ನು ಮೊದಲು ವೇದವನ್ನು ಸಂಕಲಿಸಿದ ಬ್ರಹ್ಮನೆಂದೂ ಕರೆಯಲಾಗಿದೆ. ಎಲ್ಲಾ ಅವತಾರಗಳೂ ೨೮ ವ್ಯಾಸರೇ. ಕೊನೆಯದ್ದು ಮಹಾಭಾರತ ಕಾಲದಲ್ಲಿ ಕಂಡುಬರುವ ದ್ವೈಪಾಯನ ವ್ಯಾಸರು. ಕೂರ್ಮ ಪುರಾಣದಲ್ಲಿ ಇವರನ್ನು ಶಿವನ ಅವತಾರ ಎನ್ನಲಾಗಿದೆ. ೧೧ನೇ ಋಷಭದೇವನನ್ನು ಜಲ ಪ್ರಲಯದ ನಂತರ ಪುನಃ ಸಭ್ಯತೆಯನ್ನು ಸ್ಥಾಪಿಸಲು ವಿಷ್ಣುವಿನ ಅವತಾರ ಎಂದೂ ಹೇಳಲಾಗಿದೆ.

(೪) ಕಾಲ ರೂಪ – ಅವ್ಯಕ್ತ ವಿಶ್ವದಿಂದ ವ್ಯಕ್ತ ವಿಶ್ವವಾದ ನಂತರ ತಾಪ, ತೇಜ ಇತ್ಯಾದಿ ಯಾವ ಭೇದಗಳಾದವೋ ಅವು ಇದರ ಕಾಲ. ಭೇದಗಳಲ್ಲಿ ಪರಿವರ್ತನೆಯ ಅನುಭವವೇ ಕಾಲ. ಪರಿವರ್ತನೆಯ ಕ್ರಿಯೆಯು ವಿಷ್ಣು, ಹಾಗೂ ಅದರ ಅನುಭವ ಅಥವಾ ಅಳತೆಗೋಲು ಶಿವ. ನಿರ್ಮಾಣ ಅಥವಾ ಪರಿವರ್ತನೆಯು ಯಜ್ಞವಾಗಿದೆ. ಆದ್ದರಿಂದ ಶಿವ ಹಾಗೂ ವಿಷ್ಣು ಇಬ್ಬರನ್ನೂ ಯಜ್ಞವೆನ್ನಲಾಗಿದೆ. ಪರಿವರ್ತನೆಯ ಅನುಸಾರ ೪ ರೀತಿಯ ಕಾಲ ಹಾಗೂ ೪ ಪುರುಷಗಳಿವೆ -

(ಅ) ಕ್ಷರ ಪುರುಷ – ನಿತ್ಯ ಕಾಲ – ಯಾವ ಸ್ಥಿತಿಯು ಒಮ್ಮೆ ಹೊರಟು ಹೋದರೆ ಹಿಂತಿರುಗಿ ಬರಲಾರದೋ ಅದು. ಉದಾ:- ಬಾಲಕನು ವೃದ್ಧನಾಗಬಹುದು, ಆದರೆ ವೃದ್ಧನು ಬಾಲಕನಾಗುವುದಿಲ್ಲ. ಇದನ್ನು ಮೃತ್ಯುವೆಂದೂ ಕರೆಯಲಾಗಿದೆ.

(ಬ) ಅಕ್ಷರ ಪುರುಷ – ಜನ್ಯ ಕಾಲ – ಕ್ರಿಯಾತ್ಮಕ ಪರಿಚಯವೇ ಅಕ್ಷರ. ಯಜ್ಞ ಚಕ್ರದಿಂದ ಕಾಲದ ಅಳತೆಯಾಗುತ್ತದೆ. ಆದ್ದರಿಂದ ಇದನ್ನು ಜನ್ಯ ಎನ್ನಲಾಗಿದೆ. ಪ್ರಾಕೃತಿಕ ಚಕ್ರಗಳಾದ ದಿನ, ಮಾಸ, ವರ್ಷಾದಿಗಳಿಂದ ಕಾಲಗಣನೆ ಮಾಡಲಾಗುತ್ತದೆ.

(ಕ) ಅವ್ಯಯ ಪುರುಷ - ಪುರುಷದಲ್ಲಿ ಪರಿವರ್ತನೆಯ ಕ್ರಮವೇ ಅವ್ಯಯ. ಏಕೆಂದರೆ ಒಟ್ಟಾರೆ ಒಗ್ಗೂಡಿಸಿದಾಗ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಒಂದು ಕಡೆ ವೃದ್ಧಿಯಾದರೆ ಅಷ್ಟೇ ಪ್ರಮಾಣದಲ್ಲಿ ಇನ್ನೊಂದು ಕಡೆ ಕ್ಷಯವಾಗುತ್ತದೆ. ಆದ್ದರಿಂದ ಇದನ್ನು ಅಕ್ಷಯ ಕಾಲ ಎನ್ನಲಾಗಿದೆ.

ಕಾಲೋಽಸ್ಮಿ ಲೋಕಕ್ಷಯಕೃತ್ಪ್ರವೃದ್ಧೋ (ಗೀತಾ ೧೧/೩೨)

ಸಹಯಜ್ಞಾಃ ಪ್ರಜಾಃ ಸೃಷ್ಟ್ವಾ ಪುರೋವಾಚ ಪ್ರಜಾಪತಿಃ | ಅನೇನ ಪ್ರಸವಿಷಧ್ವಮೇಷವೋಽಸ್ತ್ವಿಷ್ಟ ಕಾಮಧುಕ್ || ೧೦ ||

ಏವಂ ಪ್ರವರ್ತಿತಂ ಚಕ್ರಂ ನಾನುವರ್ತಯತೀಹ ಯಃ …. || ೧೬ || (ಗೀತಾ, ೩)
ಕಾಲಃ ಕಾಲಯತಾಮಹಮ್ || (ಗೀತಾ, ೧೦/೩೦)

(ಡ) ಅತಿಸೂಕ್ಷ್ಮ ಅಥವಾ ಅತಿ ವಿರಾಟ್ಇದು ನಮ್ಮ ಅನುಭವಕ್ಕೆ ಮೀರಿದ್ದು. ಆದ್ದರಿಂದ ಅದು ಪರಾತ್ಪರ ಪುರುಷ ಹಾಗೂ ಅದರ ಕಾಲವು ಪರಾತ್ಪರ ಕಾಲ ಎನ್ನಲಾಗಿದೆ. (ಭಾಗವತ ಪುರಾಣ ೩/೧೧)

(೫) ಕಾಲದ ಶಿವ ರುದ್ರ ರೂಪ – ವಿಶ್ವದ ಕ್ರಿಯೆಗಳ ಸಮನ್ವಯವೇ ನೃತ್ಯ. ಕ್ರಿಯೆಗಳ ಪರಸ್ಪರ ಮೇಳವಾದರೆ ಲಾಸ್ಯ. ಅದರಿಂದ ರಾಸ ರೂಪೀ ಸೃಷ್ಟಿಯಾಗುತ್ತದೆ. ಕ್ರಿಯೆಗಳಲ್ಲಿ ತಾಳ-ಮೇಳ ಇಲ್ಲದಿದ್ದರೆ ಅದು ಶಿವ (ರುದ್ರ) ತಾಂಡವ ಆಗುತ್ತದೆ. ಇದರಿಂದ ಪ್ರಲಯವಾಗುತ್ತದೆ. ವರ್ಷದಲ್ಲಿ ಸಂವತ್ಸರವನ್ನು ಅಗ್ನಿ ರೂಪ ಎನ್ನಲಾಗಿದೆ. ಇದರ ಆರಂಭವು ಸಂವತ್ ಉರಿಯುವುದರಿಂದ ಉಂಟಾಗುತ್ತದೆ. ನಿಧಾನವಾಗಿ ಅಗ್ನಿಯು ಖರ್ಚಾಗುತ್ತಾ ಇರುತ್ತದೆ. ಪೂರ್ಣ ಖಾಲಿಯಾದರೆ ಫಲ್ಗುನ ಮಾಸ ಬರುತ್ತದೆ. ಫಲ್ಗು = ಖಾಲಿ (ಫಲ್ಗವ್ಯಾ ಚ ಕಲಯಾ ಕೃತಾಃ = ಅಸತ್ತಿನಿಂದ ಸತ್ತಿನ ಸೃಷ್ಟಿಯಾಯಿತು – ಗಜೇಂದ್ರ ಮೋಕ್ಷ). ಇದು ಖಾಲಿ ಬಾಟ್ಲಿಯಂತೆ ಇರುತ್ತದೆ. ಆದ್ದರಿಂದ ಇದನ್ನು ದೋಲ ಪೂರ್ಣಿಮಾ ಎಂದು ಕರೆಯುತ್ತಾರೆ. ಸಂವತ್ಸರ ರೂಪೀ ಸೃಷ್ಟಿಯ ಅಂತವೇ ಶಿವನ ಶ್ಮಶಾನ. ಇದರ ನಂತರ ಪುನಃ ಸಂವತ್ ಉರಿದು ಹೊಸ ವರ್ಷ ಆರಂಭವಾಗುತ್ತದೆ. ಆದ್ದರಿಂದ ಫಾಲ್ಗುನ ಮಾಸವನ್ನು ಶಿವಮಾಸ ಎನ್ನಲಾಗಿದೆ.

(೬) ಲಿಂಗ – ಲೀನಂ + ಗಮಯತಿ = ಲಿಂಗ. ೩ ಪ್ರಕಾರದ ಲಿಂಗವಿದೆ –

ಮೂಲ ಸ್ವರೂಪ ಲಿಙ್ಗತ್ವಾನ್ಮೂಲಮನ್ತ್ರ ಇತಿ ಸ್ಮೃತಃ | ಸೂಕ್ಷ್ಮತ್ವಾತ್ಕಾರಣತ್ವಾಚ್ಚ ಲಯನಾದ್ ಗಮನಾದಪಿ |
ಲಕ್ಷಣಾತ್ಪರಮೇಶಸ್ಯ ಲಿಙ್ಗಮಿತ್ಯಭಿಧೀಯತೇ || (ಯೋಗಶಿಖೋಪನಿಷದ್, ೨/೯, ೧೦)

(ಅ) ಸ್ವಯಂಭೂ ಲಿಂಗ:- ಲೀನಂ ಗಮಯತಿ ಯಸ್ಮಿನ್ ಮೂಲ ಸ್ವರೂಪೇ - ಅಂದರೆ ಮೂಲ ಸ್ವರೂಪದಲ್ಲಿ ವಸ್ತು ಲೀನವಾಗುತ್ತದೆ ಹಾಗೂ ಅದರಿಂದಲೇ ಪುನಃ ಉತ್ಪನ್ನವಾಗುತ್ತದೆ. ಅದೇ ಸ್ವಯಂಭೂ ಲಿಂಗ. ಇದು ಒಂದೇ ಆಗಿದೆ.

(ಬ) ಬಾಣ ಲಿಂಗ:- ಲೀನಂ ಗಮಯತಿ ಯಸ್ಮಿನ್ ದಿಶಾಯಾಮ್ – ಅಂದರೆ ಯಾವುದು ದಿಕ್ಕಿನಲ್ಲಿ ಗತಿ ಉಳ್ಳದ್ದಾಗಿರುತ್ತದೋ ಅದು ಬಾಣ ಲಿಂಗ. ಬಾಣ ಚಿಹ್ನೆಯಿಂದ ಗತಿಯ ದಿಕ್ಕನ್ನೂ ಸೂಚಿಸಲಾಗಿರುತ್ತದೆ. ೩ ಆಯಾಮದ ಆಕಾಶವಿದೆ. ಹಾಗಾಗಿ ಬಾಣ ಲಿಂಗವೂ ೩ ಇದೆ.

(ಕ) ಇತರ ಲಿಂಗ:- ಲೀನಂ ಗಮಯತಿ ಯಸ್ಮಿನ್ ಬಾಹ್ಯ ಸ್ವರೂಪೇ – ಯಾವ ಬಾಹ್ಯ ರೂಪ ಅಥವಾ ಆವರಣದಲ್ಲಿ ವಸ್ತು ಇದೆಯೋ ಅದು ಇತರ (other) ಲಿಂಗ. ಇದು ಅನಂತ ಪ್ರಕಾರದಲ್ಲಿದೆ. ಆದರೆ ೧೨ ಮಾಸಗಳಲ್ಲಿ ಸೂರ್ಯನ ೧೨ ಪ್ರಕಾರದ ಜ್ಯೋತಿಗಳ ಅನುಸಾರ ೧೨ ಸ್ವಯಂ ಪ್ರಕಾಶವುಳ್ಳ ಜ್ಯೋತಿರ್ಲಿಂಗಗಳಲ್ಲಿ ವಿಭಕ್ತಗೊಳಿಸಲಾಗಿದೆ.
        
ಆಕಾಶದಲ್ಲಿ ವಿಶ್ವದ ಮೂಲ ಸ್ರೋತವೇ ಅವ್ಯಕ್ತ ಲಿಂಗ. ಬ್ರಹ್ಮಾಂಡಗಳ ಸಮೂಹದ ರೂಪದಲ್ಲಿ ವ್ಯಕ್ತ ಸ್ವಯಂಭೂ ಲಿಂಗವಿದೆ. ಬ್ರಹ್ಮಾಂಡ ಅಥವಾ ಆಕಾಶಗಂಗೆಯಿಂದ ಗತಿಯ ಆರಂಭವಾಗುತ್ತದೆ, ಹಾಗಾಗಿ ಇದು ಬಾಣ ಲಿಂಗವಾಗಿದೆ. ಸೌರಮಂಡಲದಲ್ಲೇ ವಿವಿಧ ಸೃಷ್ಟಿ ಉಂಟಾಗುತ್ತದೆ, ಹಾಗಾಗಿ ಇದು ಇತರ ಲಿಂಗ ಎಂದು ಕರೆಯಲ್ಪಟ್ಟಿದೆ.

        ಭಾರತದಲ್ಲಿ ಅವ್ಯಕ್ತ ಸ್ವಯಂಭೂ ಲಿಂಗವು ಭುವನೇಶ್ವರದ ಲಿಂಗರಾಜವಾಗಿದೆ. ಇದೇ ಜಗನ್ನಾಥ ಧಾಮದ ಸೀಮೆಯೂ ಆಗಿದೆ. ವೇದದ ಉಷಾ ಸೂಕ್ತದಲ್ಲಿ ಪೃಥ್ವೀ ಪರಿಧಿಯ ೧/೨ ಅಂಶ = ೫೫.೫ ಕಿಲೋಮೀಟರ್ ಧಾಮವಿದೆ. ಜಗನ್ನಾಥ ಮಂದಿರದಿಂದ ಅಷ್ಟೇ ದೂರದಲ್ಲಿ ಏಕಾಮ್ರ ಕ್ಷೇತ್ರ ಹಾಗೂ ಲಿಂಗರಾಜವಿದೆ. ವ್ಯಕ್ತ ಸ್ವಯಂಭೂ ಲಿಂಗ ಬ್ರಹ್ಮನ ಪುಷ್ಕರ ಕ್ಷೇತ್ರದ ಸೀಮೆಯಲ್ಲಿ ಮೇವಾಡದ ಏಕಲಿಂಗವಾಗಿದೆ. ತ್ರಿಲಿಂಗ ಕ್ಷೇತ್ರವು ತೆಲಂಗಾನಾ ಆಗಿದ್ದು ಈಗ ಹೊಸ ರಾಜ್ಯವಾಗಿದೆ. ಜನಮೇಜಯನ ಕಾಲದಲ್ಲಿ ಈ ತ್ರಿಕಲಿಂಗದ (ತ್ರಿಕಳಿಂಗದ) ಭಾಗವಿತ್ತು. ೧೨ ಜ್ಯೋತಿರ್ಲಿಂಗ ಭಾರತದ ೧೨ ಸ್ಥಾನಗಳಲ್ಲಿವೆ.

(೭) ಶಬ್ದ ಲಿಂಗ:-  ಅವ್ಯಕ್ತ ಶಬ್ದಗಳನ್ನು ವ್ಯಕ್ತ ಅಕ್ಷರಗಳಿಂದ ಪ್ರಕಟಗೊಳಿಸುವ ಲಿಂಗ (Lingua = language) ಇದಾಗಿದೆ. ಪುರಾಣದಲ್ಲಿ ವಿವಿಧ ಉದ್ದೇಶಗಳಿಗೆ ಭಿನ್ನ ಭಿನ್ನ ಲಿಪಿಗಳ ಉಲ್ಲೇಖವಿದೆ –

ಶುದ್ಧ ಸ್ಫಟಿಕ ಸಂಕಾಶಂ ಶುಭಾಷ್ಟಸ್ತ್ರಿಂಶದಾಕ್ಷರಮ್ | 
ಮೇಧಾಕರಮದಭೂದ್ ಭೂಯಃ ಸರ್ವಧರ್ಮಾರ್ಥ ಸಾಧಕಮ್ || ೮೩ ||
ಗಾಯತ್ರೀ ಪ್ರಭವಂ ಮನ್ತ್ರಂ ಹರಿತಂ ವಶ್ಯಕಾರಕಮ್ | 
ಚತುರ್ವಿಂಶತಿ ವರ್ಣಾಢ್ಯಂ ಚತುಷ್ಕಲಮನುತ್ತಮಮ್ || ೮೪ ||
ಅಥರ್ವಮಸ್ತಿತಂ ಮನ್ತ್ರಂ ಕಲಾಷ್ಟಕ ಸಮಾಯುತಮ್ | 
ಅಭಿಚಾರಿಕಮತ್ಯರ್ಥಂ ತ್ರಯಸ್ತ್ರಿಂಶಚ್ಛುಭಾಕ್ಷರಮ್ || ೮೫ ||
ಯಜುರ್ವೇದ ಸಮಾಯುಕ್ತಮ್ ಪಂಚತ್ರಿಶಚ್ಛುಭಾಕ್ಷರಮ್ | 
ಕಲಾಷ್ಟಕ ಸಮಾಯುಕ್ತಮ್ ಸುಶ್ವೇತಂ ಶಾಂತಿಕಂ ತಥಾ || ೮೬ ||
ತ್ರಯೋದಶ ಕಲಾಯುಕ್ತಮ್ ಬಾಲಾದ್ಯೈಃ ಸಹ ಲೋಹಿತಮ್ | 
ಸಾಮೋದ್ಭವಂ ಜಗತ್ಯಾದ್ಯಂ ಬೃದ್ಧಿಸಂಹಾರ ಕಾರಕಮ್ || ೮೭ ||
ವರ್ಣಾಃ ಷಡಧಿಕಾಃ ಷಷ್ಟಿರಸ್ಯ ಮನ್ತ್ರವರಸ್ಯ ತು | 
ಪಂಚ ಮನ್ತ್ರಾಸ್ತಥಾ ಲಬ್ಧ್ವಾ ಜಜಾಪ ಭಗವಾನ್ ಹರಿಃ || ೮೮ || (ಲಿಂಗ ಪುರಾಣ ೧/೧೭)  • ಗಾಯತ್ರೀಯ ೨೪ ಅಕ್ಷರ – ೪ ರೀತಿಯ ಪುರುಷಾರ್ಥಕ್ಕಾಗಿ.
  • ಕೃಷ್ಣ ಅಥರ್ವದ ೩೩ ಅಕ್ಷರ – ಅಭಿಚಾರಕ್ಕಾಗಿ.
  • ೩೮ ಅಕ್ಷರ – ಧರ್ಮ ಹಾಗೂ ಅರ್ಥಕ್ಕಾಗಿ (ಮಯ ಲಿಪಿಯ ೩೭ ಅಕ್ಷರ = ಅವಕಹಡಾ ಚಕ್ರ + ಓಂ )
  • ಯಜುರ್ವೇದದ ೩೫ ಅಕ್ಷರ – ಶುಭ ಹಾಗೂ ಶಾಂತಿಗಾಗಿ – ೩೫ ಅಕ್ಷರಗಳ ಗುರುಮುಖೀ ಲಿಪಿ. 
  • ಸಾಮದ ೬೬ ಅಕ್ಷರ – ಸಂಗೀತ ಹಾಗೂ ಮಂತ್ರಕ್ಕಾಗಿ.

(೮) ದಿಗಮ್ಬರ – ಜ್ಞಾನವು ಅವ್ಯಕ್ತವಾಗಿರುತ್ತದೆ. ಹಾಗಾಗಿ ಶಿವನನ್ನು ದಿಗಂಬರನೆಂದು ಕರೆಯಲಾಗಿದೆ. ಕ್ರಿಯೆಯು ವ್ಯಕ್ತವಾಗುತ್ತದೆ – ಅದರಲ್ಲಿ ಆಂತರಿಕ ಗತಿಯು ಕೃಷ್ಣ ಹಾಗೂ ನೋಡಲು ಸಿಕ್ಕುವ ಬಾಹ್ಯ ಗತಿಯು ಶುಕ್ಲ. ಹಾಗಾಗಿ ಕ್ರಿಯಾ ಅಥವಾ ಯಜ್ಞ ರೂಪ ವಿಷ್ಣುವಿನ ಶರೀರವಾದ ಕೃಷ್ಣನಲ್ಲಿ ಅದರ ವಕ್ತ್ರವು ಶ್ವೇತ. ನಾವು ಜ್ಞಾನ ಅಥವಾ ಕ್ರಿಯಾ ರೂಪವನ್ನೇ ಉಪಾಸಿಸುತ್ತೇವೆ (೨ ರೀತಿಯ ನಿಷ್ಠೆಗಳು), ಪದಾರ್ಥ ರೂಪವು ಬ್ರಹ್ಮವಲ್ಲ. ಹಿಂದುಗಳಲ್ಲಿ ಶೈವ ಹಾಗೂ ವೈಷ್ಣವರಿದ್ದಂತೆ ಸಮಾನವಾಗಿ ದಿಗಂಬರ ಹಾಗೂ ಶ್ವೇತಾಂಬರ ಮಾರ್ಗಗಳು ಜೈನಧರ್ಮದಲ್ಲೂ ಇವೆ.

ಲೋಕೇಸ್ಮಿನ್ ದ್ವಿವಿಧಾ ನಿಷ್ಠಾ ಪುರಾ ಪ್ರೋಕ್ತಾ ಮಯಾನಘ | 
ಜ್ಞಾನಯೋಗೇನ ಸಾಂಖ್ಯಾನಾಂ ಕರ್ಮಯೋಗೇನ ಯೋಗಿನಾಮ್ | (ಗೀತಾ ೩/೩)
ನಿತ್ಯಾಯ ಶುದ್ಧಾಯ ದಿಗಂಬರಾಯ ತಸ್ಮೈ ನಕಾರಾಯ ನಮಃ ಶಿವಾಯ | ೧ |
ದಿವ್ಯಾಯ ದೇವಾಯ ದಿಗಂಬರಾಯ ತಸ್ಮೈ ಯ ಕಾರಾಯ ನಮಃ ಶಿವಾಯ | ೫ | (ಶಿವ ಪಂಚಾಕ್ಷರ ಸ್ತೋತ್ರ)
ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ | 
ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ || (ವಿಷ್ಣು ಸ್ತೋತ್ರ)

(೯) ಮಹಾದೇವ:- ಯಾವುದೇ ಪುರ ಅಥವಾ ವಸ್ಥುವಿನ ಪ್ರಭಾವ ಕ್ಷೇತ್ರವು ಮಹರ್ ಎಂದಾಗುತ್ತದೆ. ಆಕಾಶದಲ್ಲಿ ಇದು ಸೌರ ಮಂಡಲದ ಹೊರ ಆವರಣವಾಗಿದೆ. ಇದರ ದೇವತಾ ಮಹಾದೇವ. ಯಾವ ಯಜ್ಞದಲ್ಲಿ ಮನುಷ್ಯ ರೂಪೀ ವೃಷಭವು ರವ ಮಾಡುತ್ತದೋ, ಅದು ಮಹಾದೇವನ ಸಮಾನ ಪೂಜನೀಯವಾಗಿರುತ್ತದೆ. ಹಾಗಾಗಿ ಯಜ್ಞ ಸಂಸ್ಥಾ ಆರಂಭ ಮಾಡಿದ ಪುರೂವಿಗೂ ಗೌರವ ಸೂಚಕವಾಗಿ ಪುರೂ-ರವಾ ಎಂದು ಸಂಬೋಧಿಸಲಾಗಿದೆ. ಭೋಜ್ಪುರೀಯಲ್ಲಿ ಈಗಲೂ ಸನ್ಮಾನಕ್ಕೆ “ರವಾ” ಎಂದೇ ಸಂಬೋಧಿಸುತ್ತಾರೆ. ಮನುಷ್ಯ ರೂಪದಲ್ಲಿ ಶಿವನ ೧೧ ಅವತಾರಗಳನ್ನೂ ಋಷಭದೇವನೆಂದು ಕರೆಯಲಾಗಿದೆ (ಕೂರ್ಮ ಪುರಾಣ, ಅಧ್ಯಾಯ ೧೦). ಯಾರು ೩ ರೀತಿಯ ಯಜ್ಞಗಳಾದ ಅಸಿ-ಮಸಿ-ಕೃಷಿ ಇವುಗಳ ಪುನರುದ್ಧಾರ ಮಾಡುತ್ತಾರೋ ಅವರೇ ಸ್ವಾಯಂಭುವ ಮನುವಿನ (ಬ್ರಹ್ಮನ) ವಂಶಜರೆಂದು ಕರೆಯಲ್ಪಟ್ಟಿದೆ. ಹಾಗಾಗಿ ಈ ಯುಗದಲ್ಲಿ ಜೈನರು ಇವರನ್ನು ಪ್ರಥಮ ತೀರ್ಥಂಕರರೆಂದು ಸ್ವೀಕರಿಸಿದರು. ಮಹರ್ ಇದರ ಸೀಮೆಯು ಮಹಾವೀರ ಎಂದಾಯಿತು. ಇದು ಹನುಮಂತನ ರೂಪದಲ್ಲಿ ಶಿವನ ಪುತ್ರನ ಅವತಾರವಾಗಿದೆ ಎಂದು ನಂಬುಗೆ ಇದೆ. ತನ್ನ ಯುಗ ಸಮಾಪ್ತಿಯಾದ ಮೇಲೆ ತತ್ ಪುತ್ರನ ಯುಗಾರಂಭವಾಗುತ್ತದೆ. ಹಾಗಾಗಿ ವರ್ತಮಾನ ತೀರ್ಥಂಕರರ ಪರಂಪರೆಯ ಅಂತಿಮವನ್ನು ಮಹಾವೀರ ಎಂದು ಕರೆಯಲಾಗಿದೆ. ಶಿವನು ಅಭಿಷೇಕ ಪ್ರಿಯನೆಂದು ಎಲ್ಲರಿಗೂ ತಿಳಿದ ವಿಷಯ. ಹಾಗಾಗಿ ಬಾಹುಬಲಿಗೂ ೧೨ ವರ್ಷಕ್ಕೊಮ್ಮೆ ಅಭಿಷೇಕ ಮಾಡುವ ಪರಿಪಾಠ ಬೆಳೆದುಬಂದಿತು. ಈಗ ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕ ನಡೆಯುತ್ತಿದೆ. ಶಿವ-ವಿಷ್ಣು-ಜಿನ-ಬ್ರಹ್ಮ ಬೇರೆಯಲ್ಲವೆಂದು ಲಭ್ಯ ಅತೀ ಪುರಾತನ ಅಂಕಕಾವ್ಯ ಸಿರಿಭೂವಲಯವು ಹೇಳಿದೆ.

(೧೦) ಪ್ರಾಣರೂಪ – ಯಾವುದೇ ಪಿಂಡದಲ್ಲಿ ಸ್ಥಿತ ಬ್ರಹ್ಮವು “ಓಂ” ಆಗಿದೆ. ಪ್ರಾಣ ರೂಪದಲ್ಲಿ ಗತಿ ಇರುವುದರಿಂದ ಅದು “ರಂ” ಎಂದಾಗುತ್ತದೆ. ತತ್ಕಾರಣ ಕ್ರಿಯೆ ಆಗುವುದರಿಂದ ಅದು “ಕಂ” (ಕರ್ತಾ) ಎಂದಾಗುತ್ತದೆ. ಶಾಂತಾವಸ್ಥೆಯಲ್ಲಿ “ಶಂ” ಆಗಿದ್ದು, ಅದರಲ್ಲೇ ಸೃಷ್ಟಿಯು ಸಮ್ಮಿಲಿತವಾಗಿರುತ್ತದೆ. ಈ ಮೂರು ಬೀಜಾಕ್ಷರಗಳ ಸಂಯೋಗವೇ “ಶಂಕರ = ಶಂ + ಕಂ + ರಂ”. ಬ್ರಹ್ಮನನ್ನು ಓಂ ತತ್ಸತ್ ಎಂದು ಕರೆಯಲಾಗಿದೆ (ಗೀತಾ ೧೭/೨೩). ಓಂ ಎಂಬುದು ಗತಿಶೀಲವಾದರೆ ರಂ ಎಂದಾಗುತ್ತದೆ. ವ್ಯಕ್ತಿಯ ನಿರ್ದೇಶ (ತತ್) ನಾಮದಿಂದ ಉಂಟಾಗುತ್ತದೆ. ಹಾಗಾಗಿ ವ್ಯಕ್ತಿಯ ಪ್ರಾಣ ಹೋದ ಮೇಲೂ ಆತನಿಗೆ ಓಂ ತತ್ಸತ್ ಎಂಬ ಸ್ಥಾನದಲ್ಲಿ ರಾಮ (ರಂ) ನಾಮ ಸತ್ ಎಂದು ಕರೆಯುತ್ತಾರೆ. (ರಾಮ್ ನಾಮ್ ಸತ್ ಹೈ).

(೧೧) ಮೃತ್ಯುಂಜಯ – ನಿತ್ಯ ಕಾಲದ ರೂಪದಲ್ಲಿ ಈಶ್ವರವು ಮೃತ್ಯುವೂ ಆಗಿದೆ. ಹಾಗಾಗಿ ಮೃತ್ಯುವನ್ನು ಗೆಲ್ಲುವುದಕ್ಕಾಗಿ

ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಮ್ | 
ಉರ್ವಾರುಕಮಿವ ಬಂಧನಾನ್ ಮೃತ್ಯೋರ್ಮುಕ್ಷೀಯ ಮಾಮೃತಾತ್ ||
(ಋಗ್ವೇದ ೭/೫೯/೧೨, ಅಥರ್ವ ೧೪/೧/೧೭, ವಾಜಸನೇಯೀ ಯಜುರ್ವೇದ ೩/೬೦, ತೈತ್ತಿರೀಯ ಸಂ. ೧/೮/೬/೨)

ನಾವು ೩ ಅಂಬಕ (ಸೃಷ್ಟಿಯ ೩ ಸ್ರೋತ, ಪೃಥ್ವೀ – ಆಕಾಶಗಳ ೩ ಬೆಸುಗೆ) ರೂಪದಲ್ಲಿ ಶಿವನ ಪೂಜೆ ಮಾಡುತ್ತೇವೆ. ಇದರಲ್ಲಿ ನಮಗೆ ಸುಗಂಧಿ (ಪೃಥ್ವಿ ತತ್ವದ ಗುಣವು ಗಂಧವಾಗಿದೆ, ಭೌತಿಕ ಸಂಪತ್ತಿನ ವೃದ್ಧಿಯು ಸುಗಂಧಿಯಾಗಿದೆ) ಸಿಕ್ಕಲಿ ಹಾಗೂ ಅದರಿಂದ ನಮ್ಮ ಪುಷ್ಟಿಯಾಗಲಿ. ವಟ ವೃಕ್ಷದಿಂದ ಹೇಗೆ ಫಲವು ತಾನಾಗಿಯೇ ಬಿದ್ದು ಹೋಗುತ್ತದೋ ಹಾಗೆಯೇ ಶಿವನ ಜ್ಞಾನ ಹಾಗೂ ಪ್ರಸಾದದಿಂದ ಮನುಷ್ಯನು ಮೃತ್ಯುವಿನ ಬಂಧನದಿಂದ (ಮೃತ್ ಸ್ವರೂಪದ ಬಂಧನದಿಂದ) ಮುಕ್ತರಾಗಬಹುದು. ೩ ಅಂಬಕಗಳ (ಪೂರ್ಣ ವಿಶ್ವ, ಬ್ರಹ್ಮಾಂಡ, ಸೌರಮಂಡಲ) ಕ್ಷೇತ್ರವೇ ಗೌರೀ, ಇದನ್ನೇ ತ್ರ್ಯಂಬಕ ಎನ್ನಲಾಗಿದೆ –

ಸರ್ವಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ |
ಶರಣ್ಯೇ ತ್ರ್ಯಂಬಕೇ ಗೌರೀ ನಾರಾಯಣೀ ನಮೋಸ್ತುತೇ || (ದುರ್ಗಾ ಸಪ್ತಶತೀ ೧೧/೧೦)

**ಉಪಸಂಹಾರ**

ಅಂಗದವದು ಚಂದ್ರಕಲೆಯು ಚತುರ್ದಶಿಯೆಂಬರು
ಇಂದುವಿನ ಅಂದಕಾಣದ ರಿಕ್ತ ತಿಥಿಯದು
ಪ್ರಪಂಚಕೆ ವ್ಯವಹಾರದಲಿ ಅಶುಭವೆಂಬರು
ಶಂಕರನು ಶುಭಕರನು ಆತ್ಮೋನ್ನತಿಗೆ 
ಶಿವರಾತ್ರಿ ಪ್ರತಿಮಾಸ ವ್ರತವದು 
ಚಂದಿರನ ಪ್ರೀತಿಯಂತ್ಯದಿಂ ಭದ್ರದಾರಂಭವನಕ ಉಪಾಸಿತವು ||  ||

ಶಿವನುಡಿ:-

ಮಾಘ ಕಾಲವೇ ಪುಣ್ಯಕರ ಲೋಕಾನಂದಕರ ಈ 
ಮಾಘ ಪುಷ್ಕರವೆಂದು ಪೇಳಲು ಮಾತೆ ಪುಣ್ಯಕರ
ಮಾಘದಾ ಆದಿಯಲಿ ನೈಮಿಶಾರಣ್ಯದಲಿ ಯಾಗಾಗ್ನಿ ತಂಪಾಗಿ ಚಂದ್ರನೂ ನೆರೆಯುವನೂ |
ಮಾಘವೇ ಪೇಳುತಿದೆ ಅಘವೆಮಗೆ ಬೇಡ ಮಾ +
ಅಘವೆಂಬ ಶಬ್ದಾರ್ಥವೇ ಮಾಘದ ಅಂತರಾರ್ಥವು ನಿಜ
ಮಾಘದಲಿ ಸಾಧಿಸದ ಸಾಧನೆಯಿಲ್ಲ ಅಲ್ಲಿ ನಾ ಮೃತ್ಯುಂಜಯನಾದೆ ಕೇಳು ಲಲನೆ ||  || - ತಿರುಕ

ಪುಣ್ಯಕರ ಮಾಸವದು ಈ ಮಾಸದಲಿ ತೀರ್ಥಯಾತ್ರೆಯಲಿ
ಪುಣ್ಯಪ್ರದ ಫಲವು ವಿಶೇಷ ಸಂಕ್ರಾಂತಿ ಘಟಿಸಲಾನುಗ್ರಹ
ಪುಣ್ಯವನಂತವೈ ಮಾಘದ ಮಹಿಮೆ ವರ್ಣಿಸಲಸದಳವು ಶಿವ ತಾ ಮೃತ್ಯುಂಜಯನಾದ ಕಾಲಾ ||
ಪುಣ್ಯವನಂತ ಕೋಟಿ ಲಭಿಸುವುದು ಸ್ನಾನದಲಿ ಹರಿನಾಮ ಸ್ಮ
ರಣೆಯೇ ತೀರ್ಥಸ್ನಾನವೇ ಆರ್ತ ಭೋಜನ ಸ್ಮಾರ್ತ
ಪುಣ್ಯಕರ್ಮಗಳೆಲ್ಲ ಅತುಲ ಅನಂತಫಲದಾಯಕವು ಕೇಳೆಂಬೆ ಲಲನೆ ||  || - ತಿರುಕ

ಇಲ್ಲೊಂದು ರಹಸ್ಯವಡಗಿದೆ ಕೇಳು ಈ ಭವವು
ಇನ್ನೆಂದು ಬೇಡವೆಂಬಾ ಲೋಗರಿಗೆ ಮಾಘವೆಂಬಾ
ಇದೊಂದೆ ನಾಮಸ್ಮರಣೆ ಸಾಕೈ ಮಾ+ಘ ದೊಳು ಸಕಲ ಅಘ ನೀಗುವುದೂ |
ಇಂದು ಈ ಲೋಗರರಿಯದೆ ಅಘವ ಬೇಕೆಂದು
ಎಂದೆಂದು ಬೇಡುವರು ಅಘವವರ ಬಿಡದು
ಎಂದಿಗೂ ಮುಕ್ತಿ ಸಂಪದವಿಲ್ಲ ಸುಖವಿಲ್ಲ ಈ ಅಜ್ಞಾನಿಲೋಗರಿಗೆ ಬುದ್ಧಿ ಪೇಳಲಾರೂ ||  || - ತಿರುಕ

ಇದುವೆ ಕೇಳೈ ಶಿಶಿರದಲಿ ಮಾಘ ಫಾಲ್ಗುಣರ ವೃತ್ತಿ
ಯದು ಶತಭಿಷವು ಆದಿಯಾಗಿಹುದು ರೇವತ್ಯಂತ
ವಿದು ಶಿಶಿರದಾಕಾಲ ಕೋಶಗಳು ಬೆಳೆಯುವವು ದೇಹದಲಿ ಶೇಷನಾಸನದೀ
ಇದು ಕಾಲವಿದು ಕಾಲ ವಿದುವೆ ಕಾಲವು ಭೂತ
ವಿದು ಭವ್ಯವಿದು ವರ್ತಮಾನವೆಂದೆಂಬ ಕಾಲ
ವಿದುವೇ ಮಾರ್ತಾಂಡನೆಂದೆಂಬ ಮೃತ್ಯುಹರ ಕಾಲ ಜೀವಿಗಳಿಗೆ ಮರುಜನ್ಮವೀವ ಕಾಲಾ ||  || - ತಿರುಕ

- ಹೇಮಂತ್ ಕುಮಾರ್ ಜಿ.

ಆಕರ:- 
೧. ಅರುಣ್ ಕುಮಾರ್ ಉಪಾಧ್ಯಾಯ, ಒಡಿಶಾ ಇವರ ಶಿವ ಸಂಬಂಧಿ ಲೇಖನ.
೨. ಮಹಾಕಾಲನ ಸಾಕ್ಷಾತ್ಕಾರ ಪಡೆದಿರುವ ಪರಿವ್ರಾಜಕ ಕೆ. ಎಸ್. ನಿತ್ಯಾನಂದ ಸ್ವಾಮೀಜಿ, ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು, ಇವರ ಪಂಚವಾರ್ಷಿಕ ಅಗ್ಯಾವೈಷ್ಣವೀ ಯಾಗದಲ್ಲಿ ಕಂಡ ಸತ್ಯ ವಿಚಾರಗಳನ್ನು ದಾಖಲಿಸಿದ ತಿರುಕ ಸಂಹಿತಾ ಗ್ರಂಥ.