Thursday, 26 July 2018

೨೮ ವ್ಯಾಸರು


ಬೇರೆ ಬೇರೆ ಸಂದರ್ಭದಲ್ಲಿ ಜಗತ್ತಿನ ಉಳಿವಿಗಾಗಿ ಹೋರಾಡಿದ ಮಹನೀಯರು. ಹಾಗೂ ಲೋಕದ ನಡೆ ರೂಪಿಸುವ ಧೀಮಂತರೂ, ಅಧಿಕಾರಿಗಳೂ ಹೌದು. ಈ ಲೋಕ ನಡೆಯುವುದೇ ವ್ಯಾಸರ ನ್ಯಾಸದಿಂದ. ವಾಯು, ಬ್ರಹ್ಮಾಂಡ, ಕೂರ್ಮ, ಇತ್ಯಾದಿ ಪುರಾಣಗಳು ಹಾಗೂ ಇತರೆ ಕೆಲ ಪ್ರಬಂಧಗಳ ಆಧಾರದಲ್ಲಿ ಇಲ್ಲಿಯವರೆಗೆ ಆಗಿರುವ ವ್ಯಾಸರಲ್ಲಿ ೨೮ ಮಹನೀಯರ ಹೆಸರನ್ನು ಸಂಗ್ರಹಿಸಲಾಗಿದೆ.


೧. ಸ್ವಾಯಂಭುವ ಮನು (ಬ್ರಹ್ಮ):- ಸ್ವಾರೋಚಿಷ, ತಾಮಸ, ರೈವತ ಮನ್ವಂತರದವರೆಗೆ ಆಳ್ವಿಕೆ.

೨. ಕಶ್ಯಪ (ಬ್ರಹ್ಮ ಸಾವರ್ಣಿ ಮನು):- ಚಾಕ್ಷುಷ, ಮತ್ತಿತರೆ ಸಾವರ್ಣಿ ಮನುಗಳು. ಇವರ ಕಾಲದಲ್ಲಿ ವೇನನ ಪುತ್ರ ಪೃಥುವು ಭೂಮಿಯನ್ನೆಲ್ಲ ಉತ್ತು ಪೃಥ್ವಿಯಾಗಿಸಿದ. ಅಲ್ಲಿ ಗಣಿಗಾರಿಕೆಯೂ ನಡೆದ ಉಲ್ಲೇಖವಿದೆ. ಕಶ್ಯಪರ ಕಾಲದಲ್ಲಿ ದೇವಾಸುರರು ಸೇರಿ ಸಮುದ್ರ ಮಂಥನವನ್ನು ಮಾಡಿ ಹಲವಾರು ಖನಿಜಗಳನ್ನು ಪರಿಚಯಿಸಿದರು. ವೇನನು ಜೈನ ತೀರ್ಥಂಕರನಾಗಿರಬಹುದು ಏಕೆಂದರೆ ಆತನನ್ನು ಜಿನನೆಂದು ತೆಗಳಿದ ಉದಾಹರಣೆಯು ಪುರಾಣಗಳಲ್ಲಿ ಸಿಗುತ್ತದೆ.

೩. ಉಷನಾ ಕಾವ್ಯ/ಶುಕ್ರಾಚಾರ್ಯ:- ಭೃಗುವಿನ ಪುತ್ರ. ಅಸುರ, ದೈತ್ಯ, ದಾನವರ ಗುರು. ಅಥರ್ವವೇದವು ಭೃಗು-ಅಂಗಿರರ ಕೊಡುಗೆ. ರಾಜನೀತಿ, ಧನುರ್ವೇದ, ಆಯುರ್ವೇದ, ಪುರಾಣಗಳ ಸಂಕಲನವಾದ ಕಾಲ. ಕಾರ್ತಿಕೇಯನ ಗಣಿತದಂತೆ ರವಿಯು ಧನಿಷ್ಠೆಯಲ್ಲಿ ಪ್ರವೇಶಿಸುವ ಕಾಲವನ್ನು ಗಣಿಸಿ ಹೊಸ ಪಂಚಾಂಗ ಗಣಿತದ ಪ್ರಚಾರವಾಯಿತು.

೪. ಬೃಹಸ್ಪತಿ/ಬ್ರಹ್ಮಣಸ್ಪತಿ:- ವೇದದ ಸಂಪೂರ್ಣ ಸಂಗ್ರಹ ಹಾಗೂ ರಕ್ಷಣಾ ವಿಧಾನಗಳ ಚಾಲಕರು. ಪ್ರತಿ ಶಬ್ದಕ್ಕೂ ವಿವಿಧ ವ್ಯಾಕರಣಗಳಿವೆ ಎಂದು ತಿಳಿಸಿಕೊಟ್ಟರು. ಬ್ರಾಹ್ಮಿ ಭಾಷೆ, ಚೀನೀ ಭಾಷೆ, ಇತ್ಯಾದಿ ಚಿಹ್ನೆಗಳನ್ನು ಆಧರಿಸಿದ ಭಾಷೆಗಳು ಇವರ ಅಕ್ಷ ಸೂತ್ರದಂತೆ ರಚಿಸಲ್ಪಟ್ಟವು.

೫. ವಿವಸ್ವಾನ್ (ಸವಿತಾ):- ಸೂರ್ಯ ಸಿದ್ಧಾಂತ ಆಧರಿತ ಹೊಸ ಪಂಚಾಂಗದ ಚಾಲನೆ. ರವಿಯು ಮೇಷ ರಾಶಿಯ ಪ್ರವೇಶದಿಂದ ಅಶ್ವಿನಿ ಮಾಸದೊಂದಿಗೆ ವರ್ಷಾರಂಭ. ಜೈನ ರೀತ್ಯಾ ಸತ್ಯ ಯುಗದೊಂದಿಗೆ ಅವಸರ್ಪಿಣಿ ಯುಗಾರಂಭ. ತ್ರೇತಾ, ದ್ವಾಪರಗಳೂ ಕಳೆಯುತ್ತವೆ.

೬. ವೈವಸ್ವತ-ಯಮ:- ಇವರು ಅಸುರ ಮಹಾದೇವ ಎಂದೇ ಖ್ಯಾತರು. ಇವರ ಕಾಲದಲ್ಲಿ ಒಂದು ದೊಡ್ಡ ಪ್ರವಾಹ ಉಂಟಾಗಿತ್ತಂತೆ. ನಚೀಕೇತನಿಗೆ ಮೃತ್ಯು ರಹಸ್ಯವನ್ನು ಬೋಧಿಸಿ, ಶ್ರಾದ್ಧ ದೇವನೆಂದೂ ಖ್ಯಾತನಾದ. ವಾಡಿಕೆಯಲ್ಲಿ ವೈವಸ್ವತ ಮನುವಿನ ತಮ್ಮ. ಈತನ ಲೋಕವನ್ನು ಯಮಲೋಕವೆಂದು, ಸಂಯಮಿನೀ ಪುರವೆಂಬ ರಾಜಧಾನಿ ಹೊಂದಿದ್ದೆಂದು ಉಲ್ಲೇಖವಾಗಿದೆ. ಈಗ ಭೂವಾದದಂತೆ ಯಮನ್, ಅಮನ್, ಸನಾ, ಮೃತ ಸಮುದ್ರ ಇತ್ಯಾದಿಯಾಗಿ ಕರೆಯಲ್ಪಟ್ಟಿದೆ.

೭. ಇಂದ್ರ-ಶತಕ್ರತು:- ನೂರು ಕ್ರತುಗಳನ್ನು ಮಾಡಿ ಚಕ್ರಾವರ್ತುಲದಲ್ಲಿ ಕಾಮಿತವನ್ನು ಪಡೆದೇ ತೀರುವುದು. ಈ ಕಾಲದಲ್ಲಿ ದೇವತೆಗಳದ್ದೇ ಮೇಲುಗೈ. ಆಗ ಹಲವು ಇಂದ್ರರು ಆಗಿ ಹೋಗಿದ್ದಾರೆ. ಅವರಲ್ಲಿ ೧೪ ಇಂದ್ರರು ಶತಕ್ರತುಗಳೆಂದೇ ಖ್ಯಾತರಾಗಿದ್ದು, ತಮ್ಮ ಕಾಲಮಾನದಲ್ಲಿ ಸಂಪೂರ್ಣ ೧೦೦ ವರ್ಷಗಳ ಆಳ್ವಿಕೆ ಮಾಡಿರುತ್ತಾರೆ. ಹಲವು ಋಗ್ವೇದದ ಸೂಕ್ತಗಳು ನೇ ಇಂದ್ರನಾದ ಇಂದ್ರಾ-ವೈಕುಂಠನ ಕಾಲದಲ್ಲಿ ಲೇಖಿಸಲ್ಪಟ್ಟಿವೆ. ಇಂದ್ರನು ಲೋಕಪಾಲನೆಂದು, ಭಾರತದ ಕೇಂದ್ರದಿಂದ ಪೂರ್ವಭಾಗದಲ್ಲಿ ಆಳುತ್ತಿದ್ದನೆಂಬುದು ಭೂವಾದಿಗಳ ಅಂಬೊಣ. ಪಶ್ಚಿಮೋತ್ತರದ ಲೋಕಪಾಲಕರಾದ, ಶಬ್ದ ತರಂಗ ವಿಜ್ಞಾನದಲ್ಲಿ ನಿಸ್ಸೀಮರಾದ, ಮರುತ್ತುಗಳ ಸಹಾಯದೊಂದಿಗೆ, ೪೯ ಮರುತ್ತುಗಳ ಸಂಶೋಧನೆಯಿಂದ, ೪೯ ಅಕ್ಷರಗಳುಳ್ಳ ದೇವನಾಗರೀ ಲಿಪಿಯನ್ನು ಚಾಲ್ತಿಗೆ ತರುತ್ತಾರೆ. ಇದು ಈಗಲೂ ಉತ್ತರ ಭಾರತದಲ್ಲಿ ಪೂರ್ವ (ಇಂದ್ರ)ದಿಂದ ಪಶ್ಚಿಮದವರೆಗೆ (ಮರುತ್ತು) ವಿವಿಧ ಲಿಪಿಗಳಾಗಿ ಬಳಕೆಯಲ್ಲಿದೆ.

೮. ವಸಿಷ್ಠ:- ಮಿತ್ರಾವರುಣರ ಪುತ್ರ ಎಂದು ಪುರಾಣ ವಾಕ್ಯ. ಆದರೆ ಪಂಚಭೌತಿಕ ಸೃಷ್ಟಿಗೂ ಮುನ್ನವೇ ಇವರ ಅಸ್ಥಿತ್ವ ಕಂಡುಬರುತ್ತದೆ. ಭೂವಾದಿಗಳ ಪ್ರಕಾರ ಮಿತ್ರ = ಇರಾನ್ ಪ್ರದೇಶ, ವರುಣ = ಅರಬ್ಬಿನ ಅಹೂರ್-ಮಜ್ದ. ಇವೆರಡೂ ಪ್ರದೇಶಗಳ ವ್ಯಾಸದಲ್ಲಿ ಸಂಪರ್ಕ ಸೇತು. ಋಗ್ವೇದದ ನೇ ಮಂಡಲದ ದ್ರಷ್ಟಾರರು.

. ಅಪಾಂತರಾತ್ಮ / ಸಾರಸ್ವತ:- ಸರಸ್ವತಿ+ಅಲಂಬುಷರ ಪುತ್ರ, ದಧ್ಯನ್-ಅಥರ್ವಣ ಗೋತ್ರಜ. ಗೌತಮೀ (ಗೋದಾವರೀ) ತೀರದಲ್ಲಿ ವಾಸವಾಗಿದ್ದರು. ಇವರಿಂದಾಗಿ ಈ ಪ್ರದೇಶದಲ್ಲಿ ಈಗಲೂ ಸ್ವಯಂ ಮೂಲ ಬ್ರಾಹ್ಮಿ ಭಾಷೆಯ ಲಿಪಿಯೇ (ಅಶೋಕನ ಬ್ರಾಹ್ಮಿಯಲ್ಲ!) ಕನ್ನಡ ಮಾತ್ತು ತೆಲುಗು ಲಿಪಿಗಳಾಗಿ ಪ್ರಚಲಿತಗೊಂಡಿದೆ.

೧೦. ತ್ರಿಧಾಮ (ದತ್ತಾತ್ರೇಯರು) / ಮಾರ್ಕಾಂಡೇಯ:- ದತ್ತಾತ್ರೇಯರು ಯೋಗ-ತಂತ್ರಗಳು ಹಾಗೂ ಮಾರ್ಕಾಂಡೇಯರು ಪುರಾಣಗಳನ್ನು ನೀಡಿದರು.

೧೧.  ಋಷಭ ದೇವರು:- ಪ್ರವಾಹದ ನಂತರ ಭಾರತದ ಚಕ್ರಾಧಿಪತ್ಯವನ್ನು ಪುನಾರಚಿಸಿದರು. ಪ್ರಸಕ್ತ ಅವಸರ್ಪಿಣಿಯ ಪ್ರಥಮ ಜೈನ-ತೀರ್ಥಂಕರರೂ ಹೌದು. ಇವರ ಕಾಲದಲ್ಲಿ ಮಯಾಸುರನು ಈಗಿನ ಮೆಕ್ಸಿಕೋ ಹತ್ತಿರ ಸಂಶೋಧಿಸುತ್ತಾ ವಿವಸ್ವಾನನ ಸೂರ್ಯ ಸಿದ್ಧಾಂತವನ್ನು ಪರಿಷ್ಕರಿಸುತ್ತಾನೆ.

೧೨. ಅತ್ರಿ:- ಭೌಮ-ಅತ್ರಿಯು ಇಂದ್ರನ ಲೋಕಗಳಲ್ಲಿ ಭೂಮಿ ಅಥವಾ ಭೂಲೋಕದಲ್ಲಿದ್ದು ಆಯುರ್ವೇದದ ಆಚಾರ್ಯರೂ ಹೌದು. ಸೂರ್ಯ ಗ್ರಹಣ ಗಣಿತವನ್ನು ಸರಳೀಕರಿಸಿದರು. ಸಾಂಖ್ಯ-ಅತ್ರಿಯು ಉತ್ತರ-ಪಶ್ಚಿಮಕ್ಕೆ ಚಲಿಸಿ ಸಂಶೋಧನೆ ಗೈದ ಪರಿಣಾಮದಿಂದಾಗಿ ಸಾಂಖ್ಯದ ೨೫ ತತ್ತ್ವಕ್ಕೆ ಸರಿಯಾಗಿ ರೋಮನ್ ಲಿಪಿಯಲ್ಲಿ ೨೫ ಅಕ್ಷರಗಳು ( ಮುಂದೆ ಕ್ಷ ಸೇರಿ ೨೬) ಇಂದಿಗೂ ಬಳಕೆಯಲ್ಲಿವೆ.

೧೩.  ಧರ್ಮ / ನರ-ನಾರಾಯಣ:- ಬದ್ರಿಕಾಶ್ರಮದಲ್ಲಿ ವೇದ ಪಾಠ ಮಾಡಿದರು. ಶಂಕರಾಚಾರ್ಯರ ಗುರು ಪರಂಪರೆಯು ಈ ನಾರಾಯಣರಿಂದಲೇ ಪ್ರಾರಂಭವಾಗುತ್ತದೆ. ಕಾಣ್ವ-ಮೇಧಾತಿಥಿ ಋಷಿವರ್ಯರು, ರಾಜ ದುಶ್ಯಂತ ಮತ್ತವನ ಪುತ್ರನು ಭರತನ ಕಾಲದಲ್ಲಿ ವ್ಯವಹರಿಸಿದ್ದಿದೆ.
೧೪. ಸುಚಕ್ಷಣ / ಸುಚಕ್ಷು:- ಮರುತ್ತ, ಅವಿಕ್ಷಿತ, ಕರಂಧಮ ರಾಜರು ಮತ್ತು ಗೌತಮ, ವಾಮದೇವ ಋಷಿಗಳ ಕಾಲದಲ್ಲಿ ವ್ಯವಹರಿಸಿದ್ದು ಕಂಡುಬರುತ್ತದೆ.

೧೫. ತ್ರ್ಯಾರುಣ:- ಇಕ್ಷ್ವಾಕು ವಂಶದ ರಾಜ ಮಾಂಧಾತಾ ಮತ್ತು ಗಾಂಧಾರದ ರಾಜ ಅಂಗಾರರ ಆಳ್ವಿಕೆಯ ಕಾಲದಲ್ಲಿ ವ್ಯವಹಾರಿಸಿದ್ದು ಕಂಡುಬರುತ್ತದೆ.

೧೬. ಧನಂಜಯ

೧೭. ಕೃತಂಜಯ

೧೮. ಋತಂಜಯ

೧೯. ಭರದ್ವಾಜ:- ಪರ್ಷಿಯಾದ ಚಾಯಮಾನ ಸಂಸ್ಥಾನ ಮತ್ತು ಕಾಶಿಯ ದಿವೋದಾಸರಿಬ್ಬರಿಗೂ ಪುರೋಹಿತರಾಗಿದ್ದರು. ಇವರು ದಾಶ-ರಾಜ ಯುದ್ಧದ ಕಾಲದಲ್ಲೂ ಇದ್ದರು. ಇದು ನಡೆದು ಎಷ್ಟೋ ಲಕ್ಷ ವರ್ಷವಾಗಿದೆ. ಮತ್ತೆ ಈ ಘಟನೆಯ ನಂತರ ವೇದ ರಚನೆಯಾದದ್ದಲ್ಲ. ದಿವೋದಾಸ ಎಂಬ ಶಬ್ದ ವೇದದಲ್ಲಿ ಬಂದೊಡನೆ ಅರ್ಥವಾಗದ ಬ್ರಾಹ್ಮಿ ಭಾಷೆಯಲ್ಲಿರುವ ವೇದವನ್ನು ತಮಗೆ ಅರ್ಥವಾಗುವ ಸಂಸ್ಕೃತದಿಂದ ವ್ಯಾಖ್ಯಾನಿಸಲು ಹೋಗಿ ವೇದವು ದಾಶರಾಜ ಯುದ್ಧವನ್ನು ವರ್ಣಿಸಿದೆ ಎಂದು ದುರ್ವಾಖ್ಯಾನ ಮಾಡಿಕೊಳ್ಳುತ್ತಾರೆ; ನಮ್ಮ ಪ್ರಕಾಂಡ ಇತಿಹಾಸಕಾರರು. ವೇದವು ಯುದ್ಧವನ್ನು ವರ್ಣಿಸಲು ಬರೆದ ಇತಿಹಾಸ ಅಥವಾ ಪುರಾಣ ಗ್ರಂಥವಲ್ಲ ಎಂಬ ಮೂಲಭೂತ ಸಿದ್ಧಾಂತವೇ ತಿಳಿಯದ ಇವರು ಏನು ತಾನೇ ಸಂಶೋಧನೆ ಮಾಡಿಯಾರು? ವೇದವು ಇತಿಹಾಸವನ್ನು ದಾಖಲಿಸಿದ ಗ್ರಂಥ ಅಲ್ಲವೇ ಅಲ್ಲ. ವೇದದಲ್ಲಿ ರಾಮ, ಕೃಷ್ಣ ಶಬ್ದಗಳು ಬಂದಿವೆ. ಹಾಗೆಂದು ದಶಾವತಾರಗಳಲ್ಲಿನ  ರಾಮ ಕೃಷ್ಣರು ಹುಟ್ಟಿದ ಮೇಲೆ ಆ ವೇದ ಮಂತ್ರಗಳು ರಚನೆಯಾದದ್ದಲ್ಲ. ಕಾಕತಾಳಿಯವಾಗಿ ಇತಿಹಾಸದಲ್ಲಿ ವೇದವು ಉಲ್ಲೇಖಿಸಿದ ಪದಗಳು ಆವರ್ತನೆಯಾಗಿವೆ. ತಾಳಮೇಳ ಮಾಡಲು ಒಂದು ತರ್ಕವಿರಬೇಕು.

೨೦. ಗೌತಮ:- ಗೌತಮೀ ನದಿ ತಟದಲ್ಲಿ ನ್ಯಾಯ-ದರ್ಶನ ಬರೆದರು. ಜಮದಗ್ನಿ, ಹರಿಶ್ಚಂದ್ರ, ಪರಷುರಾಮ, ಕಾರ್ತವೀರ್ಯಾರ್ಜುನನ ಕಾಲದಲ್ಲೂ ಕಾಣಸಿಗುತ್ತಾರೆ.

೨೨. ವಾಚಸ್ಪತಿ / ನಿರ್ಯಂತರ:- ಸಗರ ರಾಜನಿಂದ ಯವನರು ಬಹಿಷ್ಕೃತರಾಗುತ್ತಾರೆ. ಸಗರನ ಮೊಮ್ಮಗ ಭಗೀರಥನು ಗಂಗಾವತರಣ ಮಾಡಿದ ಕಾಲದಲ್ಲಿಯೂ ಉಲ್ಲೇಖಿಸಲ್ಪಟ್ಟಿದ್ದಾರೆ.

೨೨.  ಸುಕಲ್ಯಾಣ / ಸೂಮಸೂಷ್ಣ:- ಪುಲಸ್ತ್ಯ ಮತ್ತು ವಿಶ್ರವ ಋಷಿಗಳು. ತ್ರೇತೆಯೊಂದಿಗೆ ಪರಷುರಾಮಾವತಾರ ಸಮಾಪ್ತಿಯಾಗುವ ಕಾಲದಲ್ಲೂ ಇವರ ಪ್ರಸ್ತಾಪವಿದೆ.

೨೩.  ತೃಣಬಿಂದು: ರಾಜರಾಗಿದ್ದರು. ಇವರ ಸುತೆ ಕೈಕಸೆಯು ಪುಲಸ್ತ್ಯರನ್ನು ವಿವಾಹವಾಗಿ ರಾವಣ, ಕಬೇರರ ಜನನವಾಯಿತು.

೨೪.  ವಾಲ್ಮೀಕಿ:-  ದಾಶರಥೀ ರಾಮ, ರಾವಣ, ಹನುಮರ ಪ್ರವರ್ತನಾ ಕಾಲ.
೨೫. ಶಕ್ತಿ-ವಾಸಿಷ್ಠ:- ವೇದ ಪಾಠ ವಿಧಾನ.

೨೬. ಜಾತೂಕರ್ಣ್ಯ:- ಪರಾಶರರ ಶಿಷ್ಯ, ಆದರೆ ಪರಾಶರರಿಗೂ ಹಿಂದಿನ ವ್ಯಾಸ. ಈ ಕಾಲದಲ್ಲಿ ಕಣಾದರು ವೈಶೇಷಿಕ-ಸೂತ್ರಗಳನ್ನು ರಚಿಸುತ್ತಾರೆ.

೨೭. ಪರಾಶರ:- ವಿಷ್ಣು ಪುರಾಣ ಬೋಧಿಸಿದ ಗುರು. ೧೦೦ ಕೋಟಿ ಶ್ಲೋಕಗಳುಳ್ಳ ಪುರಾಣ-ಸಂಹಿತೆಯನ್ನು ಲಕ್ಷ ಶ್ಲೋಕವುಳ್ಳ ೧೮ ಪುರಾಣಗಳಾಗಿ ವಿಭಾಗಿಸಿದರು. ಖಗೋಳಶಾಸ್ತ್ರದ ಪಿತಾಮಹ ಮತ್ತು ಪರಾಶರ ಎಂಬ ವಿಭಾಗಗಳು ಈ ಕಾಲದಲ್ಲಿ ಕಂಡುಬರುತ್ತದೆ.

೨೮.  ವೇದ-ವ್ಯಾಸ:- ಸತ್ಯವತಿ + ಪರಾಶರ ಪುತ್ರ. ಭಾಗವತ ಪುರಾಣ, ಬ್ರಹ್ಮ ಸೂತ್ರ, ಯೋಗ ಸೂತ್ರ ಭಾಷ್ಯ, ವೇದ ವಿಭಜನೆ. ಇಂದಿಗೂ ಇವರೇ ವ್ಯಾಸರು. ಹಾಗಾಗಿ ಇದು ೨೮ನೇ ಕಲಿಯುಗ.

- ಹೇಮಂತ್ ಕುಮಾರ್ ಜಿ.

Wednesday, 25 July 2018

ಭಗವದ್ಗೀತೆಯ ಕೆಲ ರಹಸ್ಯಗಳ ಅನಾವರಣ - ೨ಮಂಡನೆ ೩:- ಹಿಂದಿನ ಲೇಖನದಲ್ಲಿನ ಮಂಡನೆಗಳಿಗೆ ಪದ್ಮಪುರಾಣದ ಸಾಕ್ಷ್ಯಾಧಾರಗಳು

ಸಾತ್ವಿಕ ಪುರಾಣವೆಂದು ಪ್ರಸಿದ್ಧವಾಗಿರುವ ಪದ್ಮಪುರಾಣವು ತನ್ನ ಉತ್ತರ ಖಂಡದಲ್ಲಿ ಭಗವದ್ಗೀತೆಯ ಮಹತ್ವದ ಬಗ್ಗೆ ಚರ್ಚಿಸುವ "ಗೀತಾ ಮಾಹಾತ್ಮ್ಯಮ್" ಎಂಬ ಅಧ್ಯಾಯವನ್ನು ಹೊಂದಿದೆ. ಅದು ಶಿವ ಪಾರ್ವತೀ ಸಂವಾದ ರೂಪದಲ್ಲಿದೆ. ಹಿಂದೊಮ್ಮೆ ವಿಷ್ಣುವು ಲಕ್ಷ್ಮಿಗೆ ವಿವರಿಸಿದಂತೆಯೇ ಶಿವನು ಪಾರ್ವತಿಗೆ ವಿವರಿಸಿದನೆಂದು ಆರಂಭವಾಗುತ್ತದೆ. ಇಲ್ಲಿ ೩ ಮಹತ್ತರ ವಿಚಾರಗಳ ಅನಾವರಣವಾಗುತ್ತದೆ.

* ವಿಷ್ಣುವು ತನ್ನ ಮೂಲ ಶಕ್ತಿಯೇ ಮಹೇಶ್ವರ ಮತ್ತು ಆತನನ್ನೇ ಯೋಗದ ಮುಖೇನ ಧ್ಯಾನಿಸುವೆನು ಎಂದಿರುವನು.
* ಭಗವದ್ಗೀತೆಯ ಪ್ರಭುವು ಪಂಚಮುಖವುಳ್ಳ ಶಿವನೇ ಎಂಬ ವಿಷ್ಣುವಿನ ಹೇಳಿಕೆ.

* ಭಗವದ್ಗೀತೆಯ ರೂಪವು ಶಿವನ ರೂಪವೇ ಆಗಿದೆ ಎಂಬ ಘೋಷಣೆ.

೩.೧ ವಿಷ್ಣುವಿನ ನಿದ್ರೆಯು ಆಂತರ್ಯದಲ್ಲಿ ಮಹೇಶ್ವರನ (ಸಂ)ಯೋಗವೇ ಆಗಿದೆ

ಈ ನಿಟ್ಟಿನಲ್ಲಿ ವಿಷ್ಣುವನ್ನು ಶೇಷಶಾಯಿಯಾಗಿ ತನ್ನೊಳಗೆ ತಾನು ಲೀನವಾದಂತೆ ನಿದ್ರಿಸುವ ಭಂಗಿಯನ್ನು ಚಿತ್ರಿಸಲಾಗಿದೆ. ಕಾಲ ಬುಡದಲ್ಲಿ ಕುಳಿತಿದ್ದ ಲಕ್ಷ್ಮಿಯು ತನ್ನ ಪತಿಯಾದ ವಿಷ್ಣುವಿನಲ್ಲಿ ಕೇಳುತ್ತಾಳೆ - "ಜಗತ್ತಿನ ಸ್ಥಿತಿಸ್ಥಾಪಕನಾಗಿರುವ ನೀನೇಕೆ ಹಾಲ್ಗಡಲಲ್ಲಿ ಶೇಷನನ್ನು ಹಾಸಿಗೆ ಮಾಡಿಕೊಂಡು ಉದಾಸೀನನಾಗಿ  ಮಲಗಿರುತ್ತೀಯ?" ಆ ಶ್ಲೋಕ ನೋಡಿ -

ಶ್ರೀರುವಾಚ -

ಶಯಾಲುರಸಿ ದುಗ್ಧಾಬ್ಧೌ ಭಗವನ್ಕೇನ ಹೇತುನಾ |

ಉದಾಸೀನ ಇವೈಶ್ವರ್ಯಂ ಜಗಮ್ತಿ ಸ್ಥಾಪಯನ್ನಿವ || (ಪದ್ಮ ಪುರಾಣ: ಉ.ಖ: ೧೭೫-೫)

ಅದಕ್ಕೆ ವಿಷ್ಣುವು ಹೀಗೆ ಉತ್ತರಿಸುತ್ತಾನೆ - "ಸುಮುಖಿಯೇ ನಾನು ಮಲಗಿರಲಿಲ್ಲ, ಆದರೆ ನಿಜ ತತ್ವದ ಅನುವರ್ತಿಯಾಗಿರುವ ದೃಷ್ಟಿಯ ಮುಖೇನ ನಾನು ನನ್ನ ನಿಜರೂಪವಾದ ಮಹೇಶ್ವರನಲ್ಲಿ ಆಂತರಿಕವಾಗಿ ನಿಮಗ್ನನಾಗಿದ್ದೇನೆ". ಆ ಶ್ಲೋಕ ಗಮನಿಸಿ -

ಶ್ರೀಭಗವಾನುವಾಚ -

ನಾಹಂ ಸುಮುಖಿ ನಿದ್ರಾಲುರ್ನಿಜಂ ಮಾಹೇಶ್ವರಂ ವಪುಃ |

ದೃಶಾ ತತ್ವಾನುವರ್ತಿನ್ಯ ಪಶ್ಯಾಮ್ಯಂತರ್ನಿಮಗ್ನಯಾ ||

ಈ ಶ್ಲೋಕವೂ ಪ್ರಮುಖ ಪಾತ್ರ ವಹಿಸುತ್ತದೆ. ಏಕೆಂದರೆ ಇದು ಮಹಾಭಾರತ ಹಾಗೂ ಕೂರ್ಮ ಪುರಾಣದ ದೃಷ್ಟಾಂತಗಳಿಗೆ ಪುಷ್ಟಿ ಒದಗಿಸುತ್ತದೆ. ಮಹಾಭಾರತದಲ್ಲಿ ಕೃಷ್ಣನು ಹೇಗೆ ಯೋಗದ ಮುಖೇನ ಶಿವೈಕ್ಯನಾಗಿ ಭಗವದ್ಗೀತೆಯನ್ನು ಉಪದೇಶಿಸಿದನೋ, ಕೂರ್ಮಪುರಾಣದಲ್ಲಿ ಹೇಗೆ ನಾರಾಯಣನು ಯೋಗದ ಧ್ಯಾನದಿಂದ ಶಿವನನ್ನು ಆಹ್ವಾನಿಸಿ ಪೃಚ್ಛಕರಿಗೆ ಶಿವಗೀತೆಯನ್ನು ಉಪದೇಶಿಸುವಂತೆ ಕೇಳಿಕೊಂಡನೋ, ಹಾಗೆಯೇ ಇಲ್ಲಿ ವಿಷ್ಣುವು ಮತ್ತೊಮ್ಮೆ ಯೋಗದಲ್ಲಿ ಶಿವೈಕ್ಯನಾಗಿದ್ದಾಗಲೇ ಲಕ್ಷ್ಮಿಯ ಪ್ರಶ್ನೆಗಳಿಗೆ ಉತ್ತರಿಸಲು ಉಪಕ್ರಮಿಸುತ್ತಾನೆ. ಮಹಾಭಾರತದ ಭಗವದ್ಗೀತೆಯಲ್ಲಿ ಅರ್ಜುನನ ಪ್ರಶ್ನೆಗಳಿಗೆ ಹೇಗೆ ಕೃಷ್ಣನು ಉತ್ತರಿಸಲು ಉದ್ಯುಕ್ತನಾದನೋ ಅಂತೆಯೇ ಈ ಸಂದರ್ಭವಿದೆ.

ವಿಷ್ಣುವಿನ ಮೊದಲ ಉತ್ತರಕ್ಕೆ ಲಕ್ಷ್ಮಿಯುಇನ್ನೂ ಕುತೂಹಲ ಉಳ್ಳವಳಾಗಿಮತ್ತಷ್ಟು ಪ್ರಶ್ನೆ ಕೇಳುತ್ತಾಳೆ - "ನೀನು ಒಬ್ಬಂಟಿಯಾಗಿ ಯಾವಾಗಲೂ ಯಮಿಗಳನ್ನು ಧ್ಯಾನಿಸುತ್ತೀಯ. ಲೋಕಗಳ, ಚರಾಚರಗಳ ಕರ್ತನೂ, ಹರ್ತನೂ, ಸ್ವಯಂ ಪ್ರಭುವೂ ಆಗಿರುವ ಇನ್ಯಾರಾದರೂ ಇದ್ದಾರೆಯೇ? ಇದ್ದರೆ ಅದನ್ನು ನನಗೆ ಬೋಧಿಸು ಅಚ್ಯುತ". ಆ ಶ್ಲೋಕ ಗಮನಿಸಿ-

ಶ್ರೀರುವಾಚ -

ಭವಾನೇವ ಹೃಷೀಕೇಶ ಧ್ಯೇಯೋಸಿ ಯಮಿನಾಂ ಸದಾ |

ತಸ್ಮಾತ್ತ್ವತ್ತಃ ಪರಂ ಯತ್ತಚ್ಛ್ರೋತುಂ ಕೌತೂಹಲಂ ಹಿ ಮೇ || ೧೪ ||

ಚರಾಚರಾಣಾಂ ಲೋಕಾನಾಂ ಕರ್ತ್ತಾ ಹರ್ತ್ತಾ ಸ್ವಯಂ ಪ್ರಭುಃ |

ಯಥಾಸ್ಥಿತಸ್ತತೋನ್ಯತ್ವಂ ಯದಿ ಮಾಂ ಬೋಧಯಾಚ್ಯುತ || (ಪದ್ಮ ಪುರಾಣ:ಉ.ಖ:೧೭೫:೧೪-೧೫)


೩.೨ ವಿಷ್ಣುವಿನ ಈಗಿನ ರೂಪವು ಮಾಯೆ, ನಿಜ ರೂಪದಲ್ಲಿ ಆತ ಪಂಚಮುಖೀ ಶಿವನೇ!

ಲಕ್ಷ್ಮಿಯ ಪ್ರಶ್ನೆಗಳಿಗೆ ಉತ್ತರಿಸುತ್ತ ತನ್ನ ವಿಷ್ಣುವೆಂಬ ರೂಪವು ಸತ್ಯವಲ್ಲ, ಬರೇ ಮಾಯೆ (ಭ್ರಮೆ). ಅದಕ್ಕೆ ಸೃಷ್ಟಿ, ಸ್ಥಿತಿ, ಲಯಗಳ ಕೆಲಸ ಕೊಡಲಾಗಿದೆ. ತನ್ನ ಅಂತರಾತ್ಮದ ಗುಣವು ದೇಹಕ್ಕಿಂತ ಭಿನ್ನವಾಗಿದೆ. ಆತ್ಮವು ದ್ವೈತಾದ್ವೈತವಿಲ್ಲದ, ಭಾವಾಭಾವವಿಲ್ಲದ, ಕೊನೆಮೊದಲಿಲ್ಲದ, ಶುದ್ಧ ಚೇತನವು ಪರಮಾನಂದವನ್ನು ಕೊಡುವ ಸಲುವಾಗಿ ಸುಂದರ ಈಶ್ವರ ರೂಪವಾಗಿದೆ. ಅದನ್ನು ತಿಳಿಯಲು, ಅದರೊಂದಿಗೆ ತನ್ನಾತ್ಮ ಯೋಗವಾದರೆ ಮಾತ್ರ ಸಾಧ್ಯ. ಇದನ್ನೇ ಭಗವದ್ಗೀತೆಯಲ್ಲಿ ಹೇಳಿರುವುದು ಎಂದು ಹೇಳುತ್ತಾನೆ. ಶ್ಲೋಕಗಳನ್ನು ಗಮನಿಸಿ -

ಶ್ರೀ ಭಗವಾನುವಾಚ -

ಮಾಯಾಮಯಮಿದಂ ದೇವೀ ವಪುರ್ಮೇ ನ ತು ತಾತ್ವಿಕಮ್ |

ಸೃಷ್ಟಿ ಸ್ಥಿತ್ಯೋಪ ಸಂಹಾರ ಕ್ರಿಯಾ ಜಾಲೋಪಬೃಂಹಿತಮ್ || ೧೬

ಅತೋನ್ಯದಾತ್ಮನೋ ರೂಪಂ ದ್ವೈತಾದ್ವೈತ ವಿವರ್ಜಿತಂ |

ಭಾವಾಭಾವ ವಿನಿರ್ಮುಕ್ತಂ ಆದ್ಯಂತ ರಹಿತಂ ಪ್ರಿಯೇ || ೧೭

ಶುದ್ಧ ಸಂವಿತ್ ಪ್ರಭಾ ಲಾಭಂ ಪರಾನಂದೈಕ ಸುಂದರಮ್ |

ರೂಪಮೈಶ್ವರಮಾತ್ಮೈಕ್ಯ ಗಮ್ಯಂ ಗೀತಾಸು ಕೀರ್ತಿತಮ್ || (ಪದ್ಮ ಪುರಾಣ:ಉ.ಖ:೧೭೫:೧೬-೧೮)

ಆಗ ತದ್ವಿರುದ್ಧ ವಾಕ್ಯಗಳನ್ನು ಗಮನಿಸಿದ ಲಕ್ಷ್ಮಿಯು ಪುನಃ ವಿಷ್ಣುವನ್ನು ಕುರಿತು ಪ್ರಶ್ನಿಸುತ್ತಾಳೆ - ನೀನೇ ಪರಮಾನಂದನಾಗಿದ್ದು, ಮಾತು ಹಾಗೂ ಮನಸ್ಸಿಗೆ ನಿಲುಕದವನು. ಹೀಗಿರಬೇಕಾದರೆ ಗೀತೆಯು ನಿನ್ನನ್ನು ಹೇಗೆ ತಾನೇ ಬೋಧಿಸಲು ಸಾಧ್ಯ? ಶಂಕೆ ಪರಿಹರಿಸು ಎಂದು ಕೇಳುತ್ತಾಳೆ. ಶ್ಲೋಕ ಗಮನಿಸಿ -

ಇತ್ಯಾಕರ್ಣ್ಯ ವಚೋ ದೇವೀ ದೇವಸ್ಯಾಮಿತತೇಜಸಃ |

ಶಂಕಮಾನಾ ಹ ವಾಕ್ಯೇಷು ಪರಸ್ಪರ ವಿರೋಧಿಷು || ೧೯ ||

ಸ್ವಯಂ ಚೇತ್ಪರಮಾನಂದಮವಾಙ್ಮನಸ ಗೋಚರಮ್ |

ಕಥಂ ಗೀತ ಬೋಧಯತಿ ಇತಿ ಮೇ ಚ್ಛಿಂಧಿ ಸಂಶಯಮ್ ||  (ಪದ್ಮ ಪುರಾಣ:ಉ.ಖ: ೧೭೫: ೧೯-೨೦)

ನಂತರ ಪುರಾಣ ನಿರೂಪಕರು ಶಿವ-ಪಾರ್ವತಿಯರ ಸಂವಾದಕ್ಕೆ ಹಿಂತಿರುಗಿ, ವಿಷ್ಣುವು ಲಕ್ಷ್ಮಿಗೆ ಏನು ಉತ್ತರ ನೀಡಿದನು ಎಂದು ವಿವರಿಸುತ್ತಾರೆ. ವಿಷ್ಣುವು ತನ್ನ ಬಗೆಗಿನ ಮಹತ್ತರವಾದ ರಹಸ್ಯವನ್ನು ಪ್ರಕಟಿಸುತ್ತಾನೆ. ಹಿಂದಿನ ಶ್ಲೋಕಗಳಲ್ಲಿ ವಿಷ್ಣುವು ತನ್ನ ರೂಪವು ಮಾಯೆ ಎಂದು ಹೇಳಿದ್ದನ್ನು ನೆನಪಿಸಿಕೊಳ್ಳಿ. ಈಗ ತನ್ನ ನಿಜ ರೂಪವೇನೆಂದು ಹೇಳುತ್ತಾನೆ! ತಾನು ನಿಜವಾಗಿ ಆತ್ಮನೇ ಆಗಿದ್ದೇನೆ. ಅದನ್ನು ಎರಡು ವಿಧದಲ್ಲಿ ನೋಡಬಹುದು - ಒಂದು ಪರ (ನಿರ್ಗುಣ ಶಿವ, ಜಡ, ಬ್ರಹ್ಮನ್ ಎಂಬುದಕ್ಕೆ ಸಾಕ್ಷಿ ) ಮತ್ತೊಂದು ಅಪರ (ಈಶ್ವರ, ಚರ ಬ್ರಹ್ಮ). ಮುಂದುವರೆದು ವಿಷ್ಣುವು ಹೇಳುತ್ತಾನೆ - ತನ್ನ ಈಶ್ವರ (ಚರ) ರೂಪವು ಎರಡು ಬಗೆಯಲ್ಲಿದೆ. ಅವೆರಡು ಯಾವುದೆಂದರೆ  ಪಂಚವಕ್ತ್ರ (ಸದಾಶಿವ) ಮತ್ತು ಮಹೇಶ್ವರ (ಕೈಲಾಸ-ಪತಿ).

ಈ ವಿಚಾರವು ಶಿವಪುರಾಣದೊಂದಿಗೂ ಮೇಳೈಸುತ್ತದೆ. ಶಿವನು ನಿಜವಾದ ನಿರ್ಗುಣ-ಬ್ರಹ್ಮನ್. ಅವನು ಕ್ರಿಯಾಶೀಲನಾಗಿ ಐದು ಮೊಗವುಳ್ಳ ಸದಾಶಿವನ (ವೇದಾಂತದ ಈಶ್ವರ) ರೂಪವನ್ನು  ಧರಿಸುತ್ತಾನೆ. ಬ್ರಹ್ಮಾಂಡದ ಸೃಷ್ಟಿಯ ನಂತರ ಅದರೊಳಗೆ ಚರಿಸುತ್ತಾ ಕೈಲಾಸದಲ್ಲಿ ಸ್ಥಿತನಾಗಿ ಮಹೇಶ್ವರನೆಂದು ನಾಮಾಂಕಿತನಾಗುತ್ತಾನೆ. ಈ ಮಹೇಶ್ವರನು ಸದಾಶಿವ ರೂಪದಿಂದ ಭಿನ್ನವಲ್ಲ. ಶಾಕ್ತ ಪುರಾಣಗಳಲ್ಲಿ ಇವೆರಡೂ ರೂಪಗಳು ಮಣಿದ್ವೀಪ (ಸದಾಶಿವ) ಹಾಗೂ ಕೈಲಾಸದಲ್ಲಿ (ಮಹೇಶ್ವರ) ನೆಲೆಸಿದ್ದಾರೆ ಎಂದು ವಿವರಿಸುತ್ತವೆ.

ಮುಂದುವರೆದು ವಿಷ್ಣುವು - "ನನ್ನ ಪಂಚವಕ್ತ್ರ ರೂಪದ ಗುಣದ ಅನುಭವವು ಗೀತೆಯ ಅಧ್ಯಯನದ ಮೇಲೆ ಅವಲಂಬಿಸಿದೆ" ಎಂದು ಹೇಳುತ್ತಾ ಲಕ್ಷ್ಮಿಗೆ ಪೂರ್ಣ ಭಗವದ್ಗೀತೆಯನ್ನು ಉಪದೇಶಿಸುತ್ತಾನೆ. ಲಕ್ಷ್ಮಿಯೊಂದಿಗಿನ ಈ ಸಂವಾದದ ಪೂರ್ವದಲ್ಲಿ ವಿಷ್ಣುವು ತನ್ನ ಅಂತರಾತ್ಮವಾದ ಶಿವನಲ್ಲಿ ಐಕ್ಯಗೊಂಡಿರುತ್ತಾನೆ ಎಂಬುದನ್ನು ನೆನಪಿಸಿಕೊಳ್ಳಿ. ಹಾಗಾಗಿ ಯೋಗದಲ್ಲಿ ಶಿವನೊಂದಿಗಿನ ತಾದಾತ್ಮ್ಯದಿಂದ ಕೃಷ್ಣನು ಅರ್ಜುನನಿಗೆ ಉಪದೇಶಿಸಿದಂತೆಯೇ ವಿಷ್ಣುವು ಇಲ್ಲಿಯೂ ಲಕ್ಷ್ಮಿಗೆ ಉಪದೇಶಿಸಿದ್ದು. ಹಾಗಾಗಿ ಇಲ್ಲಿ ಯಾವುದೇ ಅಸಮಂಜಸ ಅಥವಾ ವೈರುದ್ಧ್ಯವಿಲ್ಲ. ವಿಷ್ಣು ಮತ್ತು ವಿಷ್ಣುವಿನ ಅವತಾರಗಳು ಶಿವನೊಂದಿಗೆ ಯೋಗೈಕ್ಯವಾದಾಗ ಮಾತ್ರ ಭಗವದ್ಗೀತೆಯಂತಹಾ ಉನ್ನತ ವೇದಾಂತವನ್ನು ಬೋಧಿಸಲು ಸಾಧ್ಯವಾಗಿದೆ ಎಂದು ದೃಷ್ಟಾಂತಗಳಿಂದ ನಿರೂಪಿತವಾಗಿದೆ.

ಕೆಳಕಂಡ ಶ್ಲೋಕಗಳಲ್ಲಿ ವಿಷ್ಣುವು ಭಗವದ್ಗೀತೆಯ ಅಧ್ಯಯನ ಅಥವಾ ಜ್ಞಾನವು ವಿಷ್ಣುವಿನ ನಿಜ ಸ್ವರೂಪಗಳಾದ ಮಹೇಶ್ವರ ಮತ್ತು ಸದಾಶಿವನ ತಿಳುವಳಿಕೆಯೇ ಆಗಿದೆ. ತನ್ನ ವಿಷ್ಣು ರೂಪವು ಮಾಯೆ ಎಂದು ಆಗಲೇ ಹೇಳಿಯಾಗಿದೆ. ಈಗ ತನ್ನ ನಿಜ ರೂಪವನ್ನು ವಿಶದಪಡಿಸುತ್ತಿದ್ದಾನೆ. ಹೌದು, ವಿಷ್ಣುವೆಂದರೆ ಬ್ರಹ್ಮಾಂಡದ ದಿವ್ಯ ಕಾರ್ಯಗಳಿಗಾಗಿ ಶಿವನೇ ಧರಿಸಿರುವ ಮಾಯಾ ರೂಪವಲ್ಲದೆ ಇನ್ನೇನೂ ಅಲ್ಲ! ಯಜುರ್ವೇದವು ರುದ್ರಾಧ್ಯಾಯದಲ್ಲಿ ಶಿವನೇ ವಿಷ್ಣುವಿನ ರೂಪಧಾರಿ ಎಂಬ ಭಾವವನ್ನು ಬಿಂಬಿಸಿದೆ -

ನಮೋ ಗಿರಿಶಾಯ ಚ ಶಿಪಿವಿಷ್ಟಾಯ ಚ || (ಕೃಷ್ಣ ಯಜುರ್ವೇದ ೪-೫-೫)


ಇದರ ಸಹಜ ಸಾಹಿತ್ಯಕ ಅರ್ಥ - "ಗಿರಿಗಳಿಗೊಡೆಯನಾದ ಮತ್ತು ಶಿಪಿವಿಷ್ಟ (ವಿಷ್ಣು) ರೂಪನಾದ ರುದ್ರನಿಗೆಮ್ಮ ನಮನ". ತನ್ನ ಈ ಸತ್ಯವನ್ನೇ ವಿಷ್ಣುವು ಪದ್ಮಪುರಾಣದಲ್ಲಿ ವಿಶದೀಕರಿಸುತ್ತಾನೆ. ಅದರ ಶ್ಲೋಕ ಗಮನಿಸಿ -


ಈಶ್ವರ ಉವಾಚ -

ಶ್ರಿಯಃ ಶ್ರುತ್ವಾ ವಚೋಯುಕ್ತಂ ಇತಿಹಾಸ ಪುರಃಸರಮ್ |

ಆತ್ಮಾನುಗಾಮಿನೀಂ ದೃಷ್ಟಿಂ ಗೀತಾಂ ಬೋಧಿತವಾನ್ ಪ್ರಭುಃ || ೨೦ ||

ಅಹಮಾತ್ಮಾ ಪರೇಶಾನಿ ಪರಾಪರ ವಿಭೇದತಃ |

ದ್ವಿಧಾ ತತಃ ಪರಃ ಸಾಕ್ಷೀ ನಿರ್ಗುಣೋ ನಿಷ್ಕಲಃ ಶಿವಃ || ೨೧ ||

ಅಪರಃ ಪಂಚವಕ್ತ್ರೋಹಂ ದ್ವಿಧಾ ತಸ್ಯಾಪಿ ಸಂಸ್ಥಿತಿಃ |

ಶಬ್ದಾರ್ಥ ಭೇದತೋ ವಾಚ್ಯೋ ಯಥಾತ್ಮಾಹಂ ಮಹೇಶ್ವರಃ || ೨೨ ||

ಗೀತಾನಾಂ ವಾಕ್ಯ ರೂಪೇಣ ಯನ್ನಿರುಚ್ಛಿದ್ಯತೇ ದೃಢಃ |

ಮದೀಯ ಪಾಶ ಬಂಧೋಯಂ ಸಂಸಾರ ವಿಷಯಾತ್ಮಕಃ || ೨೩ ||

ಯದಾಭ್ಯಾಸ ಪರಾಧೀನೌ ಪಂಚವಕ್ತ್ರ ಮಹೇಶ್ವರೌ |

ಇತಿ ತಸ್ಯ ವಚಃ ಶೃತ್ವಾ ಗೀತಾಸಾರ ಮಹೋದಧೇಃ || ೨೪ ||

ಇದಂ ಪರವಿಭೇದೇನ ಬುಧ್ಯತೇ ಭವಭೀರುಭಿಃ |

ತಮಪೃಚ್ಛದಿದಂ ಲಕ್ಷ್ಮೀರಂಗ ಪ್ರತ್ಯಂಗ ಸಂಸ್ಥಿತಮ್ || ೨೫ ||

ಮಾಹಾತ್ಮ್ಯಂ ಸೇತಿಹಾಸಂ ಚ  ಸರ್ವಂ ತಸ್ಯೈ ನ್ಯವೇದಯತ್ | ೨೬.೫ (ಕೂರ್ಮ ಪುರಾಣ:ಉ.ಖ:೧೭೫:೨೦-೨೬.೫)


ಈ ಶ್ಲೋಕಗಳ ಸಾರಾಂಶವೇನೆಂದು ನೋಡೋಣ. ಶಿವನು ಹೇಳುತ್ತಾನೆ - ಲಕ್ಷ್ಮಿಯು ಹೇಳಿದ ಸರಿಯಾದ ವಾಕ್ಯಗಳನ್ನು ಕೇಳಿಸಿಕೊಂಡ ವಿಷ್ಣುವು, ಅವಳಿಗೆ ಗೀತೆಯನ್ನು ಬೋಧಿಸಿದನು. ಅದು ಐತಿಹಾಸಿಕ ಮತ್ತು ಪೌರಾಣಿಕ ದೃಷ್ಟಾಂತಗಳ ಮುಖೇನ ತನ್ನತನವನ್ನು ಅರ್ಥಮಾಡಿಕೊಳ್ಳುವ ಒಂದು ದೃಷ್ಟಿಕೋನ. ಓ ದೇವಿಯೇ, ನಾನೇ "ಆತ್ಮ"ನಾಗಿದ್ದು ಪರಾಪರ ಭೇದಗಳಲ್ಲಿ ತಿಳಿಯಲ್ಪಡುತ್ತೇನೆ. ಪರವು ನಿರ್ಗುಣ ಮತ್ತು ನಿಷ್ಕಲ ಶಿವನಿಗೆ ಸಾಕ್ಷಿ. ಅಪರವು ಪಂಚವಕ್ತ್ರ (ಐದು ಮುಖಗಳ ಭೌತಶಾಸ್ತ್ರೀಯ) ರೂಪವೂ ಎರಡು ವಿಧ. ನಾನು ಮಹೇಶ್ವರ, ನಾನು ಆತ್ಮ; ಶಬ್ದ ಮತ್ತು ಅರ್ಥ ಭೇದದಿಂದ ನನ್ನನ್ನು ತಿಳಿಯಬಹುದು; ಗೀತೆಯ ವಾಕ್ಯ ರೂಪವನ್ನು ಶಬ್ದಗಣಾದಿ ಪದ್ಧತಿಯಲ್ಲಿ ಬಿಡಿಸಿಕೊಂಡು ನಿಧಿಧ್ಯಾಸನಗೊಳಿಸಕೊಂಡರೆಸಂಸಾರ ವಿಷಯಾತ್ಮಕವಾದ ಪಾಶದಿಂದ ಬಿಡುಗಡೆ ಹೊಂದಬಹುದು. ನನ್ನ ಮಹೇಶ್ವರ ಮತ್ತು ಸದಾಶಿವ ಎಂಬ ರೂಪಗಳನ್ನು ಅರ್ಥ ಮಾಡಿಕೊಳ್ಳಲು ಗೀತೆಯು ಸಹಾಯಕ. ತನ್ನಾತ್ಮದ ಬಗೆಗಿನ ನುಡಿಗಳೆಂಬ ಈ ಮಹೋದಧಿಯಲ್ಲಿ ಗೀತಾ ಸಾರಾಂಶವನ್ನು ಕೇಳಿಸಿಕೊಂಡು, ಯಾರು ತಮ್ಮ ಭೌತಿಕ ಅಸ್ಥಿತ್ವದ ಬಗ್ಗೆ ಭಯ ಹೊಂದಿರುತ್ತಾರೆಯೋ ಅವರುಇಹ ಮಾತ್ರವೇ ಜೀವನವಲ್ಲಪರವೆಂಬುದರೊಂದಿಗೆ ಎಂಬಇಹ-ಪರ ಅಥವಾ ಪರಾಪರಗಳ ಭೇದವರಿತು ಜಯಶಾಲಿಗಳಾಗಬಹುದು. ಲಕ್ಷ್ಮಿ ಕೇಳಿದ್ದಕ್ಕಾಗಿ ಅದರ ಮಹತ್ವವನ್ನು ಇತಿಹಾಸ ಸಹಿತ ಸಂಪೂರ್ಣ ಮಾಹಿತಿಯನ್ನು ಒದಗಿಸಿದನು.


೩.೩ ಭಗವದ್ಗೀತೆಯೇ ಸ್ವಯಂ ಶಿವನ ದೇಹ - ಅಂದರೆ  - ಭಗವದ್ಗೀತೆಯು ಶಿವನ ಸಾರೂಪ್ಯ ಜ್ಞಾನ ಬೋಧಕ

ನಂತರ ವಿಷ್ಣುವು ಭಗವದ್ಗೀತೆಯ ಸ್ವರೂಪವನ್ನೇ ವಿವರಿಸುತ್ತಾನೆ. ವಿಷ್ಣುವು ಹೇಳುತ್ತಾನೆ - ಸುಶ್ರೋಣಿಯೇ ನನ್ನ ಗೀತೆಯಲ್ಲಿ ನನ್ನ ದೃಢ ಸ್ಥಿತಿಯನ್ನು ವಿವರಿಸುತ್ತೇನೆ; ಕೇಳಿಸಿಕೊ. ೧೮ ಅಧ್ಯಾಯಗಳು ಶಿವನ ದೇಹವೇ ಆಗಿವೆ. ಮೊದಲೈದು ಅಧ್ಯಾಯಗಳು ಶಿವನ ಪಂಚವಕ್ತ್ರಗಳಾದರೆ, ಮುಂದಿನ ದಶಾಧ್ಯಾಯಗಳು ದಶಭುಜಗಳು. ಹದಿನಾರದು ಉದರವಾದರೆ, ಉಳಿದೆರಡು ಪಾದದ್ವಯಗಳು. ಅದರ ಶ್ಲೋಕ ಇಂತಿದೆ -

ಶೃಣು ಸುಶ್ರೋಣಿ ವಕ್ಷ್ಯಾಮಿ ಗೀತಾಸು ಸ್ಥಿತಿಮಾತ್ಮನಃ || ೨೬ ||

ವಕ್ತ್ರಾಣಿ ಪಂಚ ಜಾನೀಹಿ ಪಂಚಾಧ್ಯಾಯಾನ್ ಅನುಕ್ರಮಾತ್ |

ದಶಾಧ್ಯಾಯಾ ಭುಜಶ್ಚೈಕ ಉದರಂ ದ್ವೌ ಪದಾಂಬುಜೇ || ೨೭ ||

ಏವಂ ಅಷ್ಟಾದಶಾಧ್ಯಾಯಾ ವಾಙ್ಮಯೀ ಮೂರ್ತಿರೈಶ್ವರೀ |

ವಿಜ್ಞೇಯಾ ಜ್ಞಾನ ಮಾತ್ರೇಣ ಮಹಾಪಾತಕ ನಾಶಿನೀ || ೨೮ ||

ಅತೋಧ್ಯಾಯಂ ತದರ್ಧಂ ವಾ ಶ್ಲೋಕಮರ್ಧಂ ತದರ್ಧಕಮ್ |

ಅಭ್ಯಸ್ಯತಿ ಸುಮೇಧಾ ಯಃ ಸುಶರ್ಮೇವ ಸಮುಚ್ಯತೇ || (ಪದ್ಮ ಪುರಾಣ:ಉ.ಖ:೧೭೫-೨೬.೫-೨೯)


ಕಡೆಗೆ ಫಲಶೃತಿಯನ್ನು ಹೇಳುತ್ತಾ, ಈ ೧೮ ಅಧ್ಯಾಯಗಳು ದಿವ್ಯ ರೂಪದ ಶಬ್ದಗಳಾಗಿವೆ (ದಿವ್ಯಧ್ವನಿ). ಇದು ಮಹಾಪಾತಕ ನಾಶಿನಿಯಾಗಿದೆ. ಹಾಗಾಗಿ ಇದನ್ನು ಜ್ಞಾನ ಮಾರ್ಗದಿಂದ ಮಾತ್ರ ತಿಳಿಯಲು ಸಾಧ್ಯ. ಬುದ್ಧಿವಂತಿಕೆಯ ಮಟ್ಟ ಆಧರಿಸಿ ೧ ಅಧ್ಯಾಯವೋ ಅಥವಾ ಅರ್ಧ ಅಧ್ಯಾಯವೋ ಅಥವಾ ೧ ಶ್ಲೋಕವೋ ಅಥವಾ ಅರ್ಧ ಶ್ಲೋಕವೋ ಅವರವರ ಬುದ್ಧಿಮತ್ತೆಗೆ ತಕ್ಕಂತೆ ಅಧ್ಯಯನ ಅಭ್ಯಾಸಗಳನ್ನು ಮಾಡಿದರೆ ಸುಶರ್ಮರಾಗುತ್ತಾರೆ. ಅಂದರೆ ತನ್ನತನವನ್ನು ನಿರ್ಧಿಷ್ಟವಾಗಿ ಪ್ರಕಟಪಡಿಸಲು ಶಕ್ಯರಾಗುತ್ತಾರೆ.

ಮೇಲ್ಕಂಡ ಚರ್ಚೆಗಳಿಂದ ತಿಳಿದು ಬರುವುದೇನೆಂದರೆ ವಿಷ್ಣುವು ತನ್ನ ನಿಜ ರೂಪವು ಶಿವನದ್ದೇ ಎಂದು ಅರ್ಥ ಮಾಡಿಕೊಂಡಿದ್ದಾನೆ. ವಿಷ್ಣುವು ಪಂಚಬ್ರಹ್ಮ ರೂಪಗಳಲ್ಲಿ ವ್ಯಕ್ತವಾಗುವ ಶಿವನೇ ಆಗಿದ್ದಾನೆ. ವಿಷ್ಣುವು ತನ್ನ ಪ್ರಕಟ ರೂಪವು ಮಾಯೆ ಮತ್ತು ನಿಜ ರೂಪವು ಪಂಚವಕ್ತ್ರ (ಜಾಗೃತ ಸಗುಣ ರೂಪ) ಮತ್ತು ಶಿವ (ಜಡ ನಿರ್ಗುಣ ಬ್ರಹ್ಮನ್) ಎಂದು ಸ್ಪಷ್ಟವಾಗಿ ಹೇಳಿದ್ದಾನೆ. ವಿಷ್ಣುವೇ ಹೇಳುವುದೇನೆಂದರೆ ಭಗವದ್ಗೀತೆಯ ಎಲ್ಲಾ ಅಧ್ಯಾಯಗಳು ಪರಬ್ರಹ್ಮ ಎನಿಸಿಕೊಂಡಂತಹಾ ಸದಾಶಿವನ ದೇಹದ ಅವಯವಗಳೇ ಆಗಿವೆ. ಹಾಗಾಗಿ ಸ್ಪಷ್ಟವಾಗಿ ಭಗವದ್ಗೀತೆಯು ಶಿವ ಸ್ವರೂಪವನ್ನೇ ವಿವರಿಸುತ್ತಿದೆ ಎಂದು ವಿಷ್ಣುವಿನ ಅಂಬೊಣ.

ಮುಂದುವರೆದು ವಿಷ್ಣುವು ಭಗವದ್ಗೀತೆಯ ಇನ್ನೂ ಕೆಲವು ಫಲಶೃತಿಯನ್ನು ಹೇಳುತ್ತಾನೆ. ಹೇಗೆ ಸುಶರ್ಮನೆಂಬ ಶಾಪಗ್ರಸ್ಥನು ಗೀತೆಯ ಮೊದಲನೆಯ ಅಧ್ಯಾಯದ ಶ್ರವಣ ಮಾತ್ರದಿಂದ ಪಾಪಮುಕ್ತನಾಗುತ್ತಾನೆ, ಇತ್ಯಾದಿ ಕಥೆ ಇದೆ. ಉಳಿಕೆ ಶ್ಲೋಕಗಳಲ್ಲಿ ಗೀತೆಯ ಪ್ರತಿಯೊಂದು ಅಧ್ಯಾಯಕ್ಕೆ ಒಂದು ಸಮಸ್ಯೆಯುಳ್ಳ ಕಥೆಯನ್ನು ಹೇಳಿ, ಹೇಗೆ ಗೀತೆಯ  ಆಯಾಯ ಅಧ್ಯಾಯದ ಮುಖೇನ ಬಿಡುಗಡೆ ಹೊಂದಿದರು ಎಂದು ವಿವರಿಸುತ್ತದೆ. ಪ್ರಸಕ್ತ ಚಿಂತನೆಗೆ ಅದರಲ್ಲಿ ಅಂತಹಾ ಉಪಯುಕ್ತ ವಿಷಯವೇನಿಲ್ಲ. ಹಾಗಾಗಿ ಪದ್ಮ ಪುರಾಣಕ್ಕೆ ಸಂಬಂಧಿಸಿದ ಚರ್ಚೆಯನ್ನು ಇಲ್ಲಿಗೆ ಮುಗಿಸಲಾಗುತ್ತಿದೆ.

ಮಂಡನೆ ೪:- ಭಗವದ್ಗೀತೆಯ ಸಂದರ್ಭದ ವಿಶ್ವರೂಪ ದರ್ಶನವು ಮಹಾಕಾಲನ ವಿಶೇಷ ರೂಪವೇ ಆಗಿದೆ


ಹಿಂದಿನ ಭಾಗಗಳನ್ನು ಓದಿದವರ ಮನಸ್ಸಿನಲ್ಲಿ ಒಂದು ಪ್ರಶ್ನೆ ಮೂಡಬಹುದು. ಕೃಷ್ಣನು ಭಗವದ್ಗೀತೆಯ ಮೂಲ ಕರ್ತೃ ಆಗಿರದೆ, ಶಿವನೇ ತನ್ನ ದಿವ್ಯ ರೂಪದಲ್ಲಿ ಕೃಷ್ಣನಿಂದ ನುಡಿಸಿದ್ದರೆ, ಹಸ್ತಿನಾಪುರದ ಸಭೆಯಲ್ಲಿ ಮತ್ತು ನಂತರದ ಉತ್ತಂಕನೆಂಬ ಋಷಿಯ ಪ್ರಕರಣದಲ್ಲಿ ಹೇಗೆ ವಿರಾಟ್ ಸ್ವರೂಪವನ್ನು ತೋರಿಸಿದ?

ಇದಕ್ಕೆ ಉತ್ತರವೇನೆಂದರೆ ಕೃಷ್ಣನು ತನ್ನ ತುರೀಯ ವೈಷ್ಣವ ರೂಪವನ್ನು ತೋರಿದನೇ ಹೊರತು ವಿರಾಟ್ ಸ್ವರೂಪವನ್ನಲ್ಲ! ಭಗವದ್ಗೀತೆಯಲ್ಲಿ ಕಂಡುಬಂದ ವಿಶ್ವರೂಪವನ್ನು ಕೇವಲ ಭೌತಿಕ ಅಂಗಾಂಶವುಳ್ಳ ಸಾಮಾನ್ಯ ಕಣ್ಣುಗಳಿಂದ ನೋಡಲು ಸಾಧ್ಯವಿಲ್ಲ. ಅದಕ್ಕೆ ಉಪನಯನ ಅಥವಾ ಸುನೇತ್ರವಿರಬೇಕು. ಆ ದಿವ್ಯ ವಿಶ್ವರೂಪವನ್ನು ಕಂಡವನು ಅರ್ಜುನ ಮತ್ತು ಸಂಜಯ; ಇವರಿಬ್ಬರು ಮಾತ್ರ. ಅವರಿಬ್ಬರಿಗೂ ದಿವ್ಯನೇತ್ರ ಪ್ರಾಪ್ತಿಯಾಗಿತ್ತು. ಅರ್ಜುನನು ಸುನೇತ್ರವನ್ನು ಕೃಷ್ಣನಿಂದ ಪಡೆದಿದ್ದರೆ, ಸಂಜಯನು ವ್ಯಾಸರಿಂದ ಬಳುವಳಿಯಾಗಿ ಪಡೆದಿದ್ದ.

ಇಲ್ಲಿ ಮಹಾಭಾರತವನ್ನು ಅಧ್ಯಯನ ಮಾಡಿದವರಿಂದ ವಿಶ್ವರೂಪಕ್ಕೆ ಸಂಬಂಧಪಟ್ಟ ಮೇಲ್ಕಂಡ ವಿಚಾರಗಳ ಮೇಲೆ ಎರಡು ಪ್ರಶ್ನೆಗಳು ಅಥವಾ ಆಕ್ಷೇಪಣೆಗಳು ಬರಬಹುದು.

೧. ಹಸ್ತಿನಾಪುರದ ಸಭೆಯಲ್ಲಿ ಕೃಷ್ಣನು ದಿವ್ಯನೇತ್ರವನ್ನು ಕರುಣಿಸಿ, ತನ್ನ ದಿವ್ಯ ರೂಪವನ್ನು ತೋರಿದ. ಹೀಗಿರುವಾಗ ಭಗವದ್ಗೀತೆಯ ಸಂದರ್ಭದ ದಿವ್ಯರೂಪವು ಕೃಷ್ಣನದ್ದಲ್ಲ ಶಿವನದ್ದೆಂದು ಹೇಗೆ ಹೇಳುವಿರಿ?


೨. ಉತ್ತಂಕನಿಗೆ ದಿವ್ಯರೂಪದ ದರ್ಶನ ನೀಡುವಾಗ ದಿವ್ಯನೇತ್ರವನ್ನೇನೋ ಕರುಣಿಸಲಿಲ್ಲ, ಆದರೆ ವೈಶಂಪಾಯನರು ಸ್ಪಷ್ಟವಾಗಿ ಹೇಳುತ್ತಾರೆ - ಕೃಷ್ಣನು ಅರ್ಜುನನಿಗೆ ತೋರಿದ ತನ್ನ ದಿವ್ಯವಾದ "ವೈಷ್ಣವ" ರೂಪವನ್ನು ಉತ್ತಂಕನಿಗೆ ತೋರಿಸಿದ. ಇದನ್ನು ಹೇಗೆ ವಿವರಿಸುತ್ತೀರಿ?ಮಹಾಭಾರತದ ಅಧ್ಯಾಯಗಳನ್ನು ಪರಾಮರ್ಷಿಸಿದರೆ ಇವೆರಡೂ ಆಕ್ಷೇಪಣೆಗಳು ಹುರುಳಿಲ್ಲದವಾಗುತ್ತದೆ. ಒಂದೊಂದಾಗಿ ಇವೆರಡನ್ನೂ ಉತ್ತರಿಸೋಣ.


೪.೧ ಉದ್ಯೋಗ ಪರ್ವದಲ್ಲಿ ಕುರುಸಭೆಯಲ್ಲಿ ತೋರಿದ ದಿವ್ಯರೂಪ


ಹಸ್ತಿನಾಪುರದ ಸಭೆಯಲ್ಲಿ ಕೃಷ್ಣನು ತೋರಿದ ದಿವ್ಯರೂಪವು ಕುರುಕ್ಷೇತ್ರದಲ್ಲಿ ಗೀತೆಯ ಉಪದೇಶದ ಸಂದರ್ಭದಲ್ಲಿ ತೋರಿದ ರೂಪವಲ್ಲ. ಅಲ್ಲಿ ತೋರಿದ ರೂಪವು ತನ್ನಲ್ಲಿರುವ ಬ್ರಹ್ಮಾಂಡದ ಸಹಾಯಕ್ಕಿರುವ ಒಗ್ಗೂಡಿಸಿದ ರೂಪ. ಕೃಷ್ಣನನ್ನು ಹಿಡಿಯಬೇಕೆಂಬ ಷಡ್ಯಂತ್ರಕ್ಕೆ ಉತ್ತರ ರೂಪದಲ್ಲಿ ಕೃಷ್ಣನಾರೆಂದು ತಿಳಿಯದ ದುರ್ಯೋಧನನ ಮೂರ್ಖತನಕ್ಕೆ ಪ್ರತಿಯಾಗಿ, ತನ್ನನ್ನು ಬಂಧಿಸಲು ಶಕ್ತನಲ್ಲವೆಂಬ ಎಚ್ಚರಿಕೆ ನೀಡುವುದಕ್ಕಾಗಿ ದಿವ್ಯ ರೂಪವನ್ನು ಪ್ರದರ್ಶಿಸಿದನು. ಶ್ಲೋಕ ಗಮನಿಸಿ -


ವೈಶಂಪಾಯನ ಉವಾಚ -

ವಿದುರೇಣೈವಂ ಉಕ್ತೇ ತು ಕೇಶವಃ ಶತ್ರುಪೂಗಃ |
ದುರ್ಯೋಧನಂ ಧಾರ್ತರಾಷ್ಟ್ರಂ ಅಭ್ಯಭಾಷತ ವೀರ್ಯವಾನ್ || ||

ಏಕೋಹಮಿತಿ ಯನ್ಮೋಹಾನ್ ಮನ್ಯಸೇ ಮಾಂ ಸುಯೋಧನಾ |

ಪರಿಭೂಯ ಚ ದುರ್ಬುದ್ಧೇ ಗ್ರಹೀತುಂ ಮಾಂ ಚಿಕೀರ್ಷಸಿ || ||

ಇಹೈವ ಪಾಂಡವಾಃ ಸರ್ವೇ ತಥೈವಾಂಧಕ ವೃಷ್ಣಯಃ |

ಇಹಾದಿತ್ಯಶ್ಚ ರುದ್ರಶ್ಚ ವಸವಶ್ಚ ಮಹರ್ಷಿಭಿಃ || ||

ಏವಂ ಉಕ್ತ್ವಾ ಜಹಾಸೋಚ್ಛೈಃ ಕೇಶವಃ ಪರವೀರಹಾ | (ಮ.ಭಾ. ೫:೧೩೧:೧-೪.೫)


ಭಾವಾರ್ಥ:- ವೈಶಂಪಾಯನರು ಹೇಳುತ್ತಾರೆ - ಜನಮೇಜಯನೇ! ವಿದುರನ ವಾಕ್ಯಗಳನ್ನು ಕೇಳಿಸಿಕೊಂಡ ಶತ್ರುಸಮೂಹವನ್ನು ಸಂಹಾರ ಮಾಡುವ ಶಕ್ತಿಶಾಲಿ ಕೃಷ್ಣನು ಧೃತರಾಷ್ಟ್ರ ಪುತ್ರನಾದ ದುರ್ಯೋಧನನಿಗೆ ಇಂತೆಂದನು - ದುರ್ಬುದ್ಧಿಯುಳ್ಳ ದುರ್ಯೋಧನನೇ! ಮೋಹವಶನಾಗಿ ನನ್ನನ್ನು ಒಬ್ಬಂಟಿ ಎಂದುಕೊಂಡಿರುವೆ. ಹಾಗಾಗಿ ನನ್ನನ್ನು ತಿರಸ್ಕರಿಸುವ ನಾಟಕವಾಡಿ ನೀನು ನನ್ನನ್ನು ಹಿಡಿಯಲು ಪ್ರಯತ್ನಿಸುತ್ತಿದ್ದೀಯಾ. ಇದು ನಿನ್ನ ಅಜ್ಞಾನ. ನೋಡು, ಎಲ್ಲಾ ಪಾಂಡವರು ಇಲ್ಲೇ ಇದ್ದಾರೆ. ಅಂಧಕ ಹಾಗೂ ವೃಷ್ಣಿ ವಂಶದ ವೀರರೂ ಇಲ್ಲಿದ್ದಾರೆ. ಆದಿತ್ಯಗಣ, ರುದ್ರಗಣ ಹಾಗೂ ಮಹರ್ಷಿಗಳ ಸಹಿತ ವಸುಗಣಗಳೂ ಇಲ್ಲೇ ಇದ್ದಾರೆ! ಹೀಗೆನ್ನುತ ವಿಪಕ್ಷೀಯ ವೀರರ ವಿನಾಶ ಮಾಡುವ ಕೇಶವನು ಉಚ್ಚಸ್ವರದಿಂದ ಅಟ್ಟಹಾಸ ಮಾಡಲಾರಂಭಿಸಿದನು.


ನಗುತ್ತಿರುವ ಸಮಯದಲ್ಲಿ ಮಹಾತ್ಮನಾದ ಕೃಷ್ಣನ ಅಂಗಗಳಲ್ಲಿ ಸ್ಥಿತ ವಿದ್ಯುತ್ತಿನ ಸಮಾನ ಕಾಂತಿಯುಳ್ಳ ಹಾಗೂ ಅಂಗುಷ್ಠ ಮಾತ್ರವುಳ್ಳ ಸಣ್ಣ ದೇಹವುಳ್ಳ ೧೩ ದೇವತೆಗಳು ಬೆಂಕಿಯನ್ನು ಉಗುಳಲಾರಂಭಿಸಿದರು. ಕೃಷ್ಣನ ಹಣೆಯಲ್ಲಿ ಬ್ರಹ್ಮ ಹಾಗೂ ವಕ್ಷಸ್ಥಳದಲ್ಲಿ ರುದ್ರದೇವರು ವಿರಾಜಿಸಿದರು. ಸಮಸ್ತ ಲೋಕಪಾಲರು ಭುಜಗಳಲ್ಲಿ ಹಾಗೂ ಮುಖದಿಂದ ಬೆಂಕಿಚೆಂಡು ಹೊರಡುತಲಿತ್ತು. ಆದಿತ್ಯ, ಸಾಧ್ಯ, ವಸು, ಅಶ್ವಿನೀ ಕುಮಾರರು, ಇಂದ್ರಸಹಿತ ಮರುದ್ಗಣ, ವಿಶ್ವೇದೇವ, ಯಕ್ಷ, ಗಂಧರ್ವ, ನಾಗ ಮತ್ತು ರಾಕ್ಷಸರೂ ಬೇರೆ ಬೇರೆ ಅಂಗಗಳಿಂದ ಪ್ರಕಟವಾದರು. ಭುಜದ್ವಯದಿಂದ ಬಲರಾಮ ಹಾಗೂ ಅರ್ಜುನರು ಪ್ರಾದುರ್ಭವಿಸಿದರು. ಎಡಗಡೆ ಧನುರ್ಧರ ಅರ್ಜುನ ಮತ್ತು ಬಲಗಡೆ ಹಲಧರ ಬಲರಾಮರು ಸಜ್ಜಾಗಿ ನಿಂತರು. ಭೀಮಸೇನ, ಯುಧಿಷ್ಠಿರ ಹಾಗೂ ಮಾದ್ರೀನಂದನ ನಕುಲ-ಸಹದೇವರು ಕೃಷ್ಣನ ಪೃಷ್ಠ ಭಾಗದಲ್ಲಿ ಬಂದರು. ಪ್ರದ್ಯುಮ್ನಾದಿ ವೃಷ್ಣಿವಂಶೀ ಹಾಗೂ ಅಂಧಕವಂಶೀ ಯೋಧರು ಕೈಯ್ಯಲ್ಲಿ ವಿಶಾಲ ಆಯುಧ ಧರಿಸಿ ಕೃಷ್ಣನ ಅಗ್ರಭಾಗದಲ್ಲಿ ಪ್ರಕಟವಾದರು. ಶಂಖ, ಚಕ್ರ, ಗದಾ, ಶಕ್ತಿ, ಶಾರ್ಙ್ಘಧನುಷ, ಹಲ ಹಾಗೂ ನಂದಕವೆಂಬ ಖಡ್ಗಗಳನ್ನು ಮೇಲೆತ್ತಿರುವಂತೆಯೇ ಸಮಸ್ತ ಆಯುಧಗಳು ಕೃಷ್ಣನ ಭುಜಗಳಲ್ಲಿ ದೇದೀಪ್ಯಮಾನವಾಗಿ ಕಂಡುಬಂದವು. ಅವನ ಕಣ್ಣುಗಳಿಂದ, ಮೂಗಿನ ಹೊಳ್ಳೆಗಳಿಂದ ಹಾಗೂ ಕಿವಿಕುಹರಗಳಿಂದ ಎಲ್ಲೆಡೆ ಅತ್ಯಂತ ಭಯಂಕರ ಧೂಮಯುಕ್ತ ಬೆಂಕಿಯ ಚೆಂಡುಗಳು ಪ್ರಕಟವಾಗುತ್ತಿದ್ದವು. ಸಮಸ್ತ ರೋಮಕೂಪಗಳಿಂದ ಮರೀಚಿ ಸೂರ್ಯನ ಸಮಾನ ದಿವ್ಯ ಕಿರಣಗಳು ಹೊರಹೊಮ್ಮುತ್ತಿದ್ದವು. ಮಹಾತ್ಮನಾದ ಕೃಷ್ಣನ ಆ ಭಯಂಕರ ಸ್ವರೂಪವನ್ನು ನೋಡಿ ಸಮಸ್ತ ರಾಜರ ಮನದಲ್ಲಿ ಭಯ ಆವರಿಸಿತು ಹಾಗೂ ಅವರು ತಮ್ಮ ಕಣ್ಣು ಮುಚ್ಚಿಕೊಂಡರು. ದ್ರೋಣಾಚಾರ್ಯ, ಭೀಷ್ಮ, ಪರಮ ಬುದ್ಧಿವಂತ ವಿದುರ, ಮಹಾಭಾಗ ಸಂಜಯ ಹಾಗೂ ತಪಸ್ಸಿನ ಘನೀ ಮಹರ್ಷಿಗಳನ್ನು ಬಿಟ್ಟು ಉಳಿದವರೆಲ್ಲರ ಕಣ್ಣುಗಳು ಮುಚ್ಚಿಕೊಂಡವು. ಈ ದ್ರೋಣಾದಿಗಳಿಗೆ ಸ್ವಯಂ ಆ ಜನಾರ್ದನನೇ ದಿವ್ಯಚಕ್ಷುವನ್ನು ಕೊಟ್ಟಿದ್ದನು. ಹಾಗಾಗಿ ಅವರು ಕಣ್ತೆರೆದು ನೋಡಲು ಶಕ್ತರಾಗಿದ್ದರು. ಆ ಸಭಾ ಭವನದಲ್ಲಿ ಮಾಧವನ ಮಹದಚ್ಚರಿಯ ರೂಪು ಕಂಡು ದೇವತೆಗಳ ದುಂದುಭಿ ಮೊಳಗಿತು ಹಾಗೂ ಪುಷ್ಪ ವೃಷ್ಟಿಯಾಯಿತು. (ಮ.ಭಾ. ೫:೧೩೧: ೪.೫ ೧೬)


ಇದರ ವಿಸ್ತೃತ ವಿವರಣೆಯನ್ನು ಮಹಾಭಾರತದ ಉದ್ಯೋಗ ಪರ್ವದ ಶ್ಲೋಕಗಳಲ್ಲಿ ಕಾಣಬಹುದು.


ಈ ಪರ್ವದಲ್ಲಿ ವಿವರಿಸಿರುವ ವಿಶ್ವರೂಪವು ಅರ್ಜುನನು ಕಂಡ ವಿಶ್ವರೂಪವು ಒಂದೇ ಎಂಬ ತಪ್ಪು ಮಾಹಿತಿಯು ಜನಮಾನಸದಲ್ಲಿದೆ. ಸತ್ಯ ತಿಳಿಯಲಿಕ್ಕಾಗಿ ಈ ಉದ್ಯೋಗ ಪರ್ವದ ಮುಂದಿನ ಶ್ಲೋಕಗಳನ್ನು ಗಮನವಿಟ್ಟು ಅಧ್ಯಯನ ಮಾಡಬೇಕಾಗುತ್ತದೆ.

ಆ ದಿವ್ಯ ರೂಪವು ನಿಃಸಂಶಯವಾಗಿ ಮಹತ್ತರವಾದದ್ದು. ಆದರೆ ಅದನ್ನು ನೋಡಲು ದಿವ್ಯಚಕ್ಷುವಿನ ಅನಿವಾರ್ಯತೆ ಇರುವುದಿಲ್ಲ. ಭೌತಿಕ ಕಣ್ಣುಗಳಿಂದಲೇ ಎಲ್ಲರೂ ಆ ದಿವ್ಯ ರೂಪವನ್ನು ನೋಡಲು ಸಾಧ್ಯವಾಗಿತ್ತು. ಆದರೆ ಪಾಪಿಗಳಿಗೆ ಆ ದಿವ್ಯರೂಪವು ಘೋರರೂಪವಾಗಿ ಕಂಡು ಬಂದುದ್ದರಿಂದ ಹೆದರಿ ಕಣ್ಣು ಮುಚ್ಚಿಕೊಂಡರು. ಅಲ್ಲಿದ್ದ ಸಾತ್ವಿಕ ಮನಸ್ಸುಳ್ಳ ಭೀಷ್ಮ, ದ್ರೋಣ, ಸಂಜಯ, ವಿದುರ ಹಾಗೂ ಹಲವಾರು ಶೃದ್ಧಾಳುಗಳು ಮತ್ತು ಋಷಿಮುನಿಗಳು -  ಇವರಿಗೆಲ್ಲ ಕೃಷ್ಣನು ದಿವ್ಯಚಕ್ಷುವನ್ನು ಕರುಣಿಸಿದ್ದ ಕಾರಣ ಘೋರವಲ್ಲದ ಅಘೋರವಾದ  ದಿವ್ಯರೂಪವನ್ನು ಸಾಕ್ಷಾತ್ಕರಿಸಿಕೊಂಡರು. ಶ್ಲೋಕ ಗಮನಿಸಿ:-

ತಂ ದೃಷ್ಟ್ವಾ ಘೋರಮಾತ್ಮಾನಂ ಕೇಶವಸ್ಯ ಮಹಾತ್ಮನಃ ||೧೩||

ನ್ಯಮೀಲಯನ್ತ ನೇತ್ರಾಣಿ ರಾಜಾನಸ್ತ್ರಸ್ತಚೇತಸಃ |

ಋತೇ ದ್ರೋಣಂ ಚ ಭೀಷ್ಮಂ ಚ ವಿದುರಂ ಚ ಮಹಾಮತಿಂ ||೧೪||

ಸಂಜಯಂ ಚ ಮಹಾಭಾಗಂ ಋಷೀಂ ಚೈವ ತಪೊಧನಾನ್ |

ಪ್ರಾದಾತ್ತೇಷಾಂ ಸ ಭಗವಾನ್ ದಿವ್ಯಂ ಚಕ್ಷುರ್ಜನಾರ್ದನಃ || ಮ.ಭಾ. ೫:೧೩೧:೧೩.೫-೧೫ ||


ಈ ಶ್ಲೋಕಗಳನ್ನು ಹಿಂದಿನ ಕುರುಸಭೆಯ ಶ್ಲೋಕಗಳೊಂದಿಗೆ ಹೋಲಿಸಿದಾಗ ಸ್ಪಷ್ಟವಾಗಿ ತಿಳಿದು ಬರುವುದೇನೆಂದರೆ ಕುರುಸಭೆಯಲ್ಲಿದ್ದ ಎಲ್ಲರೂ ದಿವ್ಯಚಕ್ಷುವಿಲ್ಲದೆ ಕೇವಲ ಸಹಜವಾದ ಭೌತಿಕ ಕಣ್ಣಿನಿಂದಲೇ ದಿವ್ಯ ರೂಪವನ್ನು ನೋಡಲು ಶಕ್ತರಾಗಿದ್ದರು. ಆದರೆ ದಿವ್ಯಚಕ್ಷುವು ಲಭ್ಯವಾಗಿಲ್ಲದವರಿಗೆ ಆ ದಿವ್ಯರೂಪವು ಘೋರರೂಪವಾಗಿ ಕಂಡುಬಂದಿತ್ತು. ಹಾಗೇ ಸಜ್ಜನರಿಗೆ ಕೃಷ್ಣನು ದಿವ್ಯಚಕ್ಷುವನ್ನು ಕರುಣಿಸಿದ್ದನು. ಹಾಗಾಗಿ ಭಯಭೀತರಾಗದೆ ಆ ದಿವ್ಯರೂಪದ ಸಾದೃಶ್ಯವನ್ನು ಪಡೆದು ಧನ್ಯರಾದರು.


ಈಗ ಭಗವದ್ಗೀತೆಯಲ್ಲಿ ಕಂಡುಬರುವ ದಿವ್ಯ ರೂಪವನ್ನು ನೆನಪಿಸಿಕೊಳ್ಳೋಣ. ಅಲ್ಲಿ ಅರ್ಜುನನು ಕೃಷ್ಣನಿಗೆ ದಿವ್ಯವಾದ ಯೌಗಿಕ ಈಶ್ವರ ರೂಪವನ್ನು ತೋರೆಂದು ಬೇಡಿದನು. ಆಗ ಕೃಷ್ಣನು ಅರ್ಜುನನಿಗೆ ಭೌತಿಕ ಚಕ್ಷುವಿನಿಂದ ಆ ಯೋಗದಲ್ಲಿರುವ ಈಶ್ವರನ ದಿವ್ಯರೂಪವನ್ನು ನೋಡಲು ಸಾಧ್ಯವಿಲ್ಲ, ಹಾಗಾಗಿ ದಿವ್ಯಚಕ್ಷುವನ್ನು ಕರುಣಿಸುವೆನು ಎಂದನು. ಆ ಶ್ಲೋಕ ಗಮನಿಸಿ:-


ನ ತು ಮಾಂ ಶಕ್ಯಸೇ ದ್ರಷ್ಟುಮನೇನೈವ ಸ್ವಚಕ್ಷುಸಾ |

ದಿವ್ಯಂ ದದಾಮಿ ತೇ ಚಕ್ಷುಃ ಪಶ್ಯ ಮೇ ಯೋಗಮೈಶ್ವರಮ್ || ಮ.ಭಾ. ೬:೩೫:೮, ಭ.ಗೀ. ೧೧:೮ ||


ಇದು ಕುರುಸಭೆಗಿಂತಲೂ ಭಿನ್ನವಾದ ಪ್ರಕರಣವಾಗಿದೆ. ಏಕೆಂದರೆ ಕುರುಸಭೆಯಲ್ಲಿ ಎಲ್ಲರೂ ತಮ್ಮ ಭೌತಿಕ ಚಕ್ಷುವಿನಿಂದ ಆ ದಿವ್ಯರೂಪವನ್ನು ನೋಡಲು ಸಾಧ್ಯವಾಗಿತ್ತು. ಆದರೆ ಘೋರರೂಪ ಕಂಡು ಭಯಭೀತರಾಗದಿರಲಿ ಎಂದೇ ಸಾತ್ವಿಕರಿಗೆ ಮಾತ್ರ ದಿವ್ಯಚಕ್ಷುವನ್ನು ಕರುಣಿಸಲಾಗಿತ್ತು. ಆದರೆ ಕುರುಕ್ಷೇತ್ರ ಯುದ್ಧದ ಭಗವದ್ಗೀತಾ ಬೋಧನೆಯ ಈ ಪ್ರಕರಣದಲ್ಲಿ ಅರ್ಜುನನಿಗೆ ದಿವ್ಯಚಕ್ಷುವನ್ನು ಕೊಟ್ಟ ನಂತರವೇ ದಿವ್ಯವಾದ ಯೌಗಿಕ ಈಶ್ವರ ರೂಪವನ್ನು ನೋಡಲು ಸಾಧ್ಯವಾಯಿತು. ಇಲ್ಲದಿದ್ದರೆ, ಕೃಷ್ಣಾರ್ಜುನರು ಕುರುಕ್ಷೇತ್ರದ ಮಧ್ಯದಲ್ಲಿ ರಥವನ್ನು ಸ್ಥಾಪಿಸಿಕೊಂಡು ಯುದ್ಧವನ್ನು ಆರಂಭಿಸದೆ ಕಥಾಕಾಲಕ್ಷೇಪದಲ್ಲಿ ಏಕೆ ತೊಡಗಿಕೊಂಡಿದ್ದಾರೆ ಎಂದು ಎಲ್ಲಾ ಪಾಂಡವರು ಮತ್ತು ಕೌರವರು ಆಶ್ಚರ್ಯಚಕಿತರಾಗಿ ನೋಡಬೇಕಾಗಿರಲಿಲ್ಲ ಎಲ್ಲರಿಗೂ ಆ ದಿವ್ಯರೂಪವು ಕಂಡುಬರಬೇಕಿತ್ತು!


ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಚಾರವಿದೆ – ನಿರ್ವತ್ಕವಚರೆಂಬ ರಾಕ್ಷಸರನ್ನು ಧ್ವಂಸ ಮಾಡಿದ, ಕಿರಾತಾರ್ಜುನ ಪ್ರಸಂಗದಲ್ಲಿ ಕಂಡುಬಂದಂತಹಾ ಮಹಾದೇವನೊಂದಿಗೇ ಸೆಣೆಸಾಡಿ ಒಲಿಸಿಕೊಂಡಂತಹಾ ಶೂರನೂ ಧೀರನೂ ಪರಾಕ್ರಮಿಯೂ ಆದ ಅರ್ಜುನನಂತಹಾ ಕೆಚ್ಚೆದೆಯ ಯೋಧನಿಗೇ ಆ ದಿವ್ಯ ರೂಪವನ್ನು ಕಂಡು; ಚಂಡಮಾರುತದ ಹೊಡೆತಕ್ಕೆ ತತ್ತರಿಸಿ ನಡುಗುವ ವೃಕ್ಷದಂತೆ ಭಯವು ಆವರಿಸಿತು!!


ನಭಸ್ಪೃಶಂ ದೀಪ್ತಮನೇಕ ವರ್ಣಂ ವ್ಯಾತ್ತಾನನಂ ದೀಪ್ತ ವಿಶಾಲ ನೇತ್ರಮ್
ದೃಷ್ಟ್ವಾ ಹಿ ತ್ವಾಂ ಪ್ರವ್ಯಥಿತಾನ್ತರಾತ್ಮಾ ಧೃತಿಂ ನ ವಿಂದಾಮಿ ಶಮಂ ಚ ವಿಷ್ಣೋ || ಮ.ಭಾ. ೬:೩೫:೨೪ ||


ಭಾವಾರ್ಥ:- ಆಗಸದ ಉದ್ದಗಲಗಳನ್ನು ವ್ಯಾಪಿಸಿ, ಅನೇಕ ವರ್ಣದ ದೀಪ್ತಿಯಿಂದ ಕಂಗೊಳಿಸಿ, ಎಲ್ಲವನ್ನೂ ಕಬಳಿಸುವಂತೆ ತೆರೆದ ಬಾಯಿ ಹಾಗೂ ವಿಶಾಲ ನೇತ್ರದ ದೀಪ್ತಿಯನ್ನು ನೋಡಿದ ಅರ್ಜುನನು ತನ್ನ ಮನಸ್ಸು ಅಲ್ಲೋಲ ಕಲ್ಲೋಲವಾಗಿ, ಧೃತಿಗೆಟ್ಟು, ಅಂತರಾತ್ಮವೇ ನಡುಗಿ ಹೋಯಿತು ಎಂದು ಆ ವಿಷ್ಣುವಿಗೆ ಹೇಳಿದನು.

ಕುರುಸಭೆಯ ದಿವ್ಯರೂಪದಲ್ಲಿ ಜನರು ಹೆದರಿದ್ದರು ಎಂಬುದು ನಿರ್ವಿವಾದ. ಆದರೆ ಆ ರೂಪವನ್ನು ಹಿಂಪಡೆಯಬೇಕು ಎಂದು ಕೃಷ್ಣನನ್ನು ಮೊರೆಯಿಡುವಷ್ಟು ಆ ದಿವ್ಯರೂಪವು ಘೋರವಾಗಿರಲಿಲ್ಲ. ಕೃಷ್ಣನು ಆ ದಿವ್ಯರೂಪವನ್ನು ಯಾರ ಬೇಡಿಕೆಯೂ ಇಲ್ಲದೆ ತಾನಾಗಿಯೇ ಹಿಂಪಡೆದನು. ಆದರೆ, ಭಗವದ್ಗೀತೆಯ ಪ್ರಕರಣದಲ್ಲಿ, ನಮಗೆ ತಿಳಿದು ಬಂದಿರುವುದೇನೆಂದರೆ ಅರ್ಜುನನು ಕೃಷ್ಣನಿಗೆ ಆ ಘೋರ ರೂಪನ್ನು ತ್ಯಜಿಸಿ ಶಾಂತ ರೂಪದಲ್ಲಿ ಕಾಣಿಸಿಕೊಳ್ಳಬೇಕೆಂದು ಮೊರೆಯಿಟ್ಟನು. ಹಾಗಾಗಿ, ಈ ಎಲ್ಲಾ ಕಾರಣಗಳು ಅರ್ಜುನನು ಕಂಡ ಘೋರವಾದ ದಿವ್ಯರೂಪವು ಕುರುಸಭೆಯಲ್ಲಿ ಕಂಡ ದಿವ್ಯರೂಪವು ಒಂದೇ ಅಲ್ಲ ಎಂದು ನಿರೂಪಿಸುವುದು.

ಶ್ಲೋಕ ದಾಖಲೆಗಳನ್ನು ನೀಡಿದರೂ ಈ ವಾದವನ್ನು ಒಪ್ಪದ ಹಲವು ಮೊಂಡರಿದ್ದಾರೆ. ಹಾಗಾಗಿ ಮೊಂಡುತನಕ್ಕೆ ಮದ್ದು ನೀಡಲು ಹಾಗೂ ಪ್ರಸಕ್ತ ವಾದ ಪುಷ್ಟಿಗಾಗಿ, ಭಗವದ್ಗೀತೆಯ ಭಗವಂತನೇ ಭಗವದ್ಗೀತೆಯಲ್ಲಿ ಒಂದು ಶಾಸನವನ್ನು ನೀಡಿದ್ದಾನೆ. ಅದೇನೆಂದರೆ ಭಗವದ್ಗೀತೆಯ ಸಂದರ್ಭದಲ್ಲಿ ಕಂಡುಬಂದಂತಹಾ ದಿವ್ಯರೂಪವು ಹಿಂದೆಂದೂ  ಪ್ರದರ್ಶಿಸಲ್ಪಟ್ಟಿಲ್ಲ ಎಂದು:-

ಶ್ರೀ ಭಗವಾನುವಾಚ

ಮಯಾ ಪ್ರಸನ್ನೇನ ತವಾರ್ಜುನೇದಂ ರೂಪಂ ಪರಂ ದರ್ಶಿತಮಾತ್ಮಯೋಗಾತ್
ತೇಜೋಮಯಂ ವಿಶ್ವಮನಂತಮಾದ್ಯಂ ಯನ್ಮೇ ತ್ವದನ್ಯೇನ ನ ದೃಷ್ಟಪೂರ್ವಂ ||(ಮ.ಭಾ. ೬:೩೫:೪೭, ಭ.ಗೀ. ೧೧:೪೭

ಭಾವಾರ್ಥ:- ಅರ್ಜುನನು ಪ್ರಾರ್ಥಿಸಿಕೊಂಡಿದ್ದನ್ನು ಕೇಳಿ ಭಗವಂತನು ಇಂತೆಂದನು ಅರ್ಜುನ! ನಿನಗೆ ಅನುಗ್ರಹಿಸಲೆಂದು ನನ್ನ ಯೋಗಶಕ್ತಿಯ ಪ್ರಭಾವದಿಂದ ನನ್ನ ಪರಮ ತೇಜೋಮಯವಾದ, ಸಕಲಕ್ಕೂ ಆದಿಯೂ ಮತ್ತು ಕೊನೆಯೇ ಇಲ್ಲದಂತಹ ವಿಶ್ವರೂಪವನ್ನು ನಿನಗೆ ತೋರಿಸಿದ್ದೇನೆ. ಈ ರೂಪವನ್ನು ನಿನ್ನ ವಿನಹ ಬೇರಾರೂ ಹಿಂದೆ ನೋಡಲಿಲ್ಲ. ಈ ಶ್ಲೋಕವು ಎಲ್ಲಾ ಸಂಶಯಗಳನ್ನು ಹಾಗೂ ವಾದಗಳನ್ನು ಉಪಶಮನ ಮಾಡುತ್ತದೆ. ಭಗವದ್ಗೀತೆಯ ೧೧ನೇ ಅಧ್ಯಾಯದಲ್ಲಿ ಇದಕ್ಕೆ ಸಂಬಂಧಿಸಿದ ವಿಸ್ತೃತ ವಿವರಣೆ ಇದೆ. ಆಸಕ್ತರು ಅಧ್ಯಯನ ಮಾಡಬಹುದು. ಇನ್ನು ನಾವು  ಮುಂದುವರೆಯೋಣ.


೪.೨ ಅಶ್ವಮೇಧಿಕಾ ಪರ್ವದಲ್ಲಿ ಉತ್ತಂಕನಿಗೆ ತೋರಿದ ದಿವ್ಯರೂಪ


ಉತ್ತಂಕ ಋಷಿಯು ಕೃಷ್ಣನಿಗೆ ದಿವ್ಯ ರೂಪವನ್ನು ತೋರಬೇಕೆಂದು ಮೊರೆಯಿಟ್ಟನು. ಭಕ್ತನ ಬೇಡಿಕೆಗೆ ಮನ್ನಣೆ ನೀಡಿ ಕೃಷ್ಣನು ತನ್ನ ದಿವ್ಯ ರೂಪವನ್ನು ಪ್ರದರ್ಶಿಸಿದನು. ಇಲ್ಲಿ ಗಮನಿಸಬೇಕಾದ ಮುಖ್ಯ ವಿಚಾರವೆಂದರೆ ಕೃಷ್ಣನು ಇಲ್ಲಿ ಉತ್ತಂಕನಿಗೆ ಯಾವುದೇ ದಿವ್ಯಚಕ್ಷುವನ್ನು ಕೊಡಲಿಲ್ಲ. ಉತ್ತಂಕ ಕೇಳಿದ, ಕೃಷ್ಣ ತೋರಿದ. ಆದರೆ, ಈ ಅಧ್ಯಾಯವನ್ನು ವರ್ಣಿಸುತ್ತಿದ್ದ ವೈಶಂಪಾಯನರು, ಒಂದು ಪ್ರತಿಕ್ರಿಯೆ ನೀಡುತ್ತಾರೆ-

ತತಃ ಸ ತಸ್ಮೈ ಪ್ರೀತಾತ್ಮಾ ದರ್ಶಯಾಮಾಸ ತದ್ವಪುಃ |

ಶಾಶ್ವತಂ ವೈಷ್ಣವಂ ಧೀಮಾನ್ದದೃಶೇ ಯದ್ಧನಂಜಯಃ || (ಮ.ಭಾ. ೧೪:೫೫:೪)

ಭಾವಾರ್ಥ:- ಮುಂದುವರೆದು ವೈಶಂಪಾಯನರು ಹೇಳಿದರು ಮಹಾಬುದ್ಧಿವಂತನಾದ  ಧನಂಜಯನು ನೋಡಿದ್ದ ಆ ಶಾಶ್ವತ ವೈಷ್ಣವ ರೂಪವನ್ನು, ಉತ್ತಂಕನ ಮೇಲೆ ಪ್ರೀತನಾದ ಕೃಷ್ಣನು ಪ್ರದರ್ಶಿಸಿದನು.


ಈ ಪ್ರಕರಣವು ಶಿವದ್ವೇಷಿಗಳಿಗೆ ಭಗವದ್ಗೀತೆ ಮತ್ತು ವಿಶ್ವರೂಪವು ವಿಷ್ಣುವಿನದ್ದೇ ಎಂದು ನಿರ್ಧರಿಸಲು ಬಳಕೆಯಾಗಬಹುದು. ಆದರೆ ವೈಶಂಪಾಯನರ ವಾಕ್ಯಗಳೆಡೆಯಲ್ಲೊಂದು ರಹಸ್ಯವಡಗಿದೆ. ಅವರು ವೈಷ್ಣವ ರೂಪ (ವೈಷ್ಣವಂ) ಎಂಬ ಪದ ಬಳಸಿ, ಅದನ್ನು ಧನಂಜಯನು ದೃಷ್ಟಿಸಿದ್ದನು ಎಂಬ ಪೂರ್ವೋದಾಹರಣೆ ನೀಡಿದ್ದಾರೆ.


ವಿಷ್ಣುವಿಗೆ ಯಾವುದೇ ದಿವ್ಯರೂಪವಿಲ್ಲವೆಂದು ಈ ಲೇಖನವು ಮಂಡಿಸುತ್ತಿಲ್ಲ ಎಂಬುದನ್ನು ನೆನಪಿಡಿ. ಈ ಲೇಖನದ ಉದ್ದೇಶವೇನೆಂದರೆ ಭಗವದ್ಗೀತೆಯು ಸಂಪೂರ್ಣವಾಗಿ ಶಿವನ ಮಹಿಮೆಯನ್ನು ಸಾರುವಂತಹದ್ದು ಮತ್ತು ಭಗವದ್ಗೀತೆಯ ವಿಶ್ವರೂಪವು ಮಹಾಕಾಲನ ರೂಪವೇ ಆಗಿದೆ. ವಿಷ್ಣು ಎಂದರೇನೇ ಎಲ್ಲವನ್ನೂ ವ್ಯಾಪಿಸಿರುವಂತಹದ್ದು ಎಂಬರ್ಥ ಕೊಡುತ್ತದೆ ಎಂಬುದನ್ನು ನಾವು ಮರೆಯಬಾರದು. ವಿಷ್ಣುವೇ ಈ ಸಂಪೂರ್ಣ ಬ್ರಹ್ಮಾಂಡ. ಹಾಗಾಗಿ ವಿಷ್ಣುಸಹಸ್ರನಾಮವು ವಿಶ್ವಂ - ಅಂದರೆ ಎಲ್ಲೆಲ್ಲೂ ವ್ಯಾಪ್ತನಾಗಿರುವುದರಿಂದ ವಿಷ್ಣುವನ್ನೇ ಈ ಸಂಪೂರ್ಣ ವಿಶ್ವವೆಂದು ಎಂದು ಸಂಬೋಧಿಸಿದೆ. ಆದ್ದರಿಂದ ವಿಷ್ಣುವಿಗೆ ವಿಶ್ವವನ್ನು ವ್ಯಾಪಿಸತಕ್ಕಂತಹಾ ದಿವ್ಯರೂಪ ಇರುವುದೆಂಬುದು ಸತ್ಯ. ಅದಕ್ಕೆ ಪೂರಕವಾಗಿ ಪುರಾಣಗಳಲ್ಲಿ ಬ್ರಹ್ಮನು ವಿಷ್ಣುವಿನ ದೇಹವನ್ನು ಪ್ರವೇಶಿಸಿ ಸಂಪೂರ್ಣ ಸೃಷ್ಟಿಯ ಉಪಸ್ಥಿತಿಯನ್ನು ಕಂಡನು. ಅದೇ ರೀತಿ ವಿಷ್ಣುವಿಗೂ ಬ್ರಹ್ಮನ ದೇಹವನ್ನು ಪ್ರವೇಶಿಸಿದಾಗ ಅನುಭವವಾಯಿತು. ಇವರೀರ್ವರೂ ಕ್ಷುಲ್ಲಕ ಜೀವಿಗಳಲ್ಲ, ಅವರು ಶಿವನಿಂದ ಕಲ್ಪಿತವಾದ ಪ್ರಮುಖ ರೂಪಗಳು. ಆದ್ದರಿಂದ ಈ ವಿಭೂತಿಗಳಲ್ಲಿ ಮಹಾದೇವನ ಗುಣವೇ ಪ್ರಕಾಶಿಸುತ್ತದೆ.


ಈಗ, ಭಗವದ್ಗೀತೆಯ ದಿವ್ಯ ರೂಪದ ವಿಚಾರಕ್ಕೆ ಹಿಂತಿರುಗೋಣ. ವಿಷ್ಣುವಿನ ಅವತಾರನಾಗಿದ್ದ ಕೃಷ್ಣನಿಗೆ, ಅರ್ಜುನನು ನೂರಾರು ಬಾರಿ ಬೇಡಿಕೊಂಡರೂ, ತನ್ನ ಸ್ವಂತ ದಿವ್ಯರೂಪವನ್ನು ತೋರಲು ಸಾಧ್ಯವಾಗುತ್ತಿರಲಿಲ್ಲ ಎಂದೇನಿಲ್ಲ. ಆದರೂ ಅರ್ಜುನನು ಪುನಃ ಕೇಳಿದಾಗ, ಕೃಷ್ಣನು ಕುರುಕ್ಷೇತ್ರದಲ್ಲಿ ಬೋಧಿಸಿದ್ದ ಭಗವದ್ಗೀತೆಯನ್ನು (ತನ್ನ ದಿವ್ಯರೂಪ ಪ್ರದರ್ಶನದೊಂದಿಗೆ) ಮತ್ತೊಮ್ಮೆ ಹೇಳಲು ಸಾಧ್ಯವಾಗಲಿಲ್ಲ. ಇದಕ್ಕೆ ಕಾರಣವೇನೆಂದು ನೋಡೋಣ. ಭಗವದ್ಗೀತೆಯ ದಿವ್ಯ ರೂಪದಲ್ಲಿ, ಎರಡು ವಿಧದ ರೂಪಗಳ ಉಲ್ಲೇಖವಿದೆ.


೧. ಸರ್ವ ವ್ಯಾಪ್ತವಾದ ಸಹಸ್ರ ಶೀರ್ಷ, ಸಹಸ್ರ ಪಾದಾದಿ ರೂಪ. ಇದು ದಿವ್ಯರೂಪ ತೋರುವ  ಎಲ್ಲಾ ದೇವರುಗಳು ತೋರುವ ಸಾಮಾನ್ಯವಾದ ರೂಪವಾಗಿದೆ. ಉದಾ:- ಸ್ಕಂದ, ವಿಷ್ಣು, ಇತ್ಯಾದಿ.


೨. ಕೌರವರನ್ನು ದಾಡೆಯಲ್ಲಿ ಜಗಿದು ನುಂಗುತ್ತಿದ್ದ ಭಯಭೀತಗೊಳಿಸುವ ಘೋರರೂಪ. ಭಯವನ್ನು ಉದ್ದೀಪಿಸುವ ಕಾಲದ ಈ ಲಯ ರೂಪವು ಶಿವನದ್ದು (ಮಹಾಕಾಲನಾಗಿ).


ಅರ್ಜುನನು ಸಕಲ ದಿಕ್ಕುಗಳನ್ನೂ ವ್ಯಾಪಿಸಿದ ರೂಪವನ್ನು ಸ್ಥಿರವಾಗಿ ನೋಡಿದ್ದಲ್ಲದೆ, ಪರಮೋನ್ನತ ಮಹಾಕಾಲನ ಜಾಗೃತವಾಗಿ ನಿಂತ ಘೋರ ದಿವ್ಯ ರೂಪವನ್ನು, ಪಾಂಡವರ ಸರ್ವಶತ್ರುಗಳನ್ನು ದಾಡೆಯಲ್ಲಿ ನುರಿದು ನುಂಗುವುದನ್ನು ನೋಡಿದ. ಈ ರೂಪವು ಸರ್ವ ವ್ಯಾಪ್ತವಾಗಿತ್ತು, ಹಾಗಾಗಿ ಶಿವನು ಮೂಲತಃ ಸರ್ವವ್ಯಾಪ್ತನಾಗಿದ್ದರೂ;  ಸರ್ವವ್ಯಾಪಕತ್ವವನ್ನು ವಿಷ್ಣುವಿಗೂ ಆರೋಪಿಸಬಹುದು. ಹಾಗಾಗಿ ಶಿವನ ಮಹಾಕಾಲ ರೂಪವು ಮೂಲತಃ ಸರ್ವವ್ಯಾಪಕವಾದ ವೈಷ್ಣವ ರೂಪದ ಮೇಲೆ ಹಿಡಿತ ಸಾಧಿಸಿ ಆರೋಹಣ ಮಾಡಿತು.


ಈ ವಿಚಾರದ ಸ್ಪಷ್ಟತೆಗಾಗಿ ಒಂದು ಉಪಮೆ ನೀಡಬೇಕೆಂದರೆ ಬೋಳನೋರ್ವನು ನಾಚಿಕೆಯಿಂದ ವಿಧ ವಿಧದ ಚೌಲಿಗಳನ್ನು (ಕೃತಕ ಕೂದಲುಗಳನ್ನು) ಧರಿಸುತ್ತಾನೆ. ಬಣ್ಣದ ಚೌಲಿ, ಗುಂಗುರು ಚೌಲಿ, ಉದ್ದುದ್ದ ಚೌಲಿ, ಹೀಗೆ ಒಂದೊಂದು ಚೌಲಿಯನ್ನು ಧರಿಸಿದಾಗ ಒಂದೊಂದು ರೂಪದಲ್ಲಿ ಕಂಗೊಳಿಸುತ್ತಾನೆ. ಆದರೆ ಚೌಲಿ ತೆಗೆದರೆ ಮಾತ್ರ ಬೋಳನೆಂಬ ತನ್ನ ಮೂಲ ರೂಪದಲ್ಲಿ ಕಾಣಸಿಗುತ್ತಾನೆ. ಹಾಗೇ, ಓರ್ವ ಕುರೂಪೀ ಸ್ತ್ರೀಯು ವಿವಿಧ ಅಲಂಕಾರ ಸಾಮಗ್ರಿಗಳ ಲೇಪನದಿಂದ ಬೇರೆ ಬೇರೆ ಮನಮೋಹಕ ರೂಪದಲ್ಲಿ ಕಂಡುಬರುತ್ತಾಳೆ. ಆದರೆ ಅಲಂಕಾರ ಲೇಪವನ್ನು ತೆಗೆದರೆ ಮೂಲ ರೂಪವು ಅಚಲವಾಗಿರುತ್ತದೆ. ಚೌಲಿಗಳು ಬದಲಾದವು; ಅಲಂಕಾರಗಳು ಬದಲಾದವು; ಆದರೆ ಬೋಳತನ ಅಥವ ಕುರೂಪಿಯೆಂಬ  ಮೂಲ ರೂಪಗಳು ಹಾಗೇ ಇರುತ್ತವೆ.


ಹಾಗೆಯೇ ಸಹಸ್ರ ಶೀರ್ಷ ಹಾಗೂ ಸಹಸ್ರ ಪಾದಗಳ ಸರ್ವವ್ಯಾಪ್ತ ದಿವ್ಯರೂಪವು ಮೂಲತಃ ವೈಷ್ಣವ ರೂಪವೇ ಆಗಿದ್ದಾಗ್ಯೂ ಅದನ್ನು ಮಹಾಕಾಲನು ಆರೋಹಿಸಿದ್ದರಿಂದ ಅದು ಘೋರ ರೂಪವಾಗಿ ಬದಲಾಯಿಸಿ ಅರ್ಜುನನನ್ನು ಘಡ ಘಡ ನಡುಗಿಸಿತು. ಇದೊಂದು ರೀತಿಯ ಈಗಿನ ಕಾಲದ 3D ಚಿತ್ರಪಟವಿದ್ದಂತೆ.


ಇಲ್ಲಿ ಉತ್ತಂಕನ ಪ್ರಕರಣದಲ್ಲಿ, ಅರ್ಜುನನಿಗೆ ಪ್ರದರ್ಶಿಸಲ್ಪಟ್ಟ ಸರ್ವವ್ಯಾಪ್ತವಾದ ವೈಷ್ಣವ ಎಂಬ ಮೂಲ ರೂಪವನ್ನು ತಿಳಿಸಿರುವ ವೈಶಂಪಾಯನರ ವಾಕ್ಯಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಕೆಳಕಂಡ ಸಾಂದರ್ಭಿಕ ಕಾರಣಗಳು ಹಾಗೂ ಈ ಸಾಲುಗಳ ಕೊನೆಯಲ್ಲಿ ನೀಡಲ್ಪಡುವ ಸ್ವಯಂ ಭಗವಂತನೇ ಗೀತೆಯಲ್ಲಿ ಉಲ್ಲೇಖಿಸಿರುವ ಉತ್ತರವು ನಿಮ್ಮ ಎಲ್ಲಾ ಆಕ್ಷೇಪಣೆಗಳಿಗೆ ಸ್ಪಷ್ಟೀಕರಣ ನೀಡುತ್ತದೆ.


ಉತ್ತಂಕನು ದಿವ್ಯರೂಪ ದರ್ಶನವನ್ನು ಪಡೆದ ನಂತರ, ಕೃಷ್ಣನನ್ನು ಕುರಿತು ಸ್ತೋತ್ರ ಗೈಯುವಾಗ ಅದನ್ನು ವರ್ಣಿಸುತ್ತಾನೆ. ಆ ದಿವ್ಯರೂಪವನ್ನು ಕಂಡ ನಂತರ ಉತ್ತಂಕನು ವ್ಯಕ್ತಪಡಿಸಿದ ಪ್ರತಿಕ್ರಿಯೆಯನ್ನು ಮಹಾಭಾರತವು ಸ್ಪಷ್ಟವಾಗಿ ದಾಖಲಿಸಿದೆ. ಈಗ ಉತ್ತಂಕನು ಭಯಭೀತನಾದನು. ಅವನಲ್ಲಿ ವಿಸ್ಮಯವೇ ತುಂಬಿ ಹೋಯಿತು. ಅವನ ನುಡಿಗಳಲ್ಲಿ ಏಕಮಾತ್ರವಾದ ಸರ್ವವ್ಯಾಪ್ತ ರೂಪವೇ ಕೇಳಿಬರುತ್ತಿತ್ತೇ ಹೊರತು, ಭಯಾನಕತೆಯ ಕೊಂಚ ಸುಳಿವೂ ಇರಲಿಲ್ಲ. ಅವನು ವಿಷ್ಣುವಿನ ಸೌಮ್ಯ ರೂಪವನ್ನು ನೋಡಿದ್ದನು, ಹಾಗಾಗಿ ಅದು ವೈಷ್ಣವ ರೂಪ. ಈ ವಿಚಾರಕ್ಕೆ ಸ್ಪಲ್ಪ ಸಮಯದಲ್ಲೇ ಹಿಂತಿರುಗೋಣವಂತೆ. ಈಗ ಕೆಲ ಸಂದರ್ಭಗಳನ್ನು ವಿಶ್ಲೇಷಿಸೋಣ.


ಉತ್ತಂಕನ ಈ ಸ್ತೋತ್ರವು ಎರಡು ಆವೃತ್ತಿಗಳಲ್ಲಿ ಸಿಗುತ್ತದೆ. ಅದು ಪಾಠ-ಭೇದವೋ ಅಥವಾ ಇನ್ನೇನೋ ಆಗಿರಬಹುದು. ಅದು ಹೇಗೆಂದು ನೋಡೋಣ. ಮಹಾಭಾರತದ ಕುಂಭಕೋಣಂ ಆವೃತ್ತಿ ಹಾಗೂ ನೀಲಕಂಠನು ಬಳಸಿದ್ದ ಆವೃತ್ತಿ (ಅದನ್ನೇ ಶ್ರೀ ಕೆ.ಎಂ. ಗಂಗೂಲಿಯವರು ಆಂಗ್ಲ ಭಾಷಾಂತರದಲ್ಲಿ ಬಳಸಿಕೊಂಡಿದ್ದಾರೆ); ಇವೆರಡೂ ಆವೃತ್ತಿಗಳಲ್ಲಿ, ವೈಷ್ಣವ ರೂಪವನ್ನು ಕಂಡಂತಹಾ ಉತ್ತಂಕನ ಸ್ತೋತ್ರದಲ್ಲಿ ಕೆಲ ಶ್ಲೋಕಗಳು ಇಲ್ಲದಿರುವುದು ಗಣನೀಯ. ಮಹಾಭಾರತದ ಈ ಆವೃತ್ತಿಯು ಕೃಷ್ಣನ ವಿಷ್ಣುರೂಪವನ್ನು ಹೀಗೆ ವರ್ಣಿಸುತ್ತದೆ:


ವಿಶ್ವಕರ್ಮನ್ ನಮಸ್ತೇಸ್ತು ಯಸ್ಯ ತೇ ರೂಪಂ ಈದೃಶಮ್

ಪದ್ಭ್ಯಾಂ ತೇ ಪೃಥಿವೀ ವ್ಯಾಪ್ತಾ ಶಿರಸಾ ಚಾವೃತಂ ನಭಃ || ||

ದ್ಯಾವಾಪೃಥಿವ್ಯೋರ್ ಯನ್ ಮಧ್ಯಂ ಜಠರೇಣ ತದ್ ಆವೃತಮ್

ಭುಜಾಭ್ಯಾಂ ಆವೃತಾಶ್ ಚಾಶಾಸ್ ತ್ವಂ ಇದಂ ಸರ್ವಂ ಅಚ್ಯುತ || ||

ಸಂಹರಸ್ವ ಪುನರ್ ದೇವರೂಪಂ ಅಕ್ಷಯ್ಯಂ ಉತ್ತಮಮ್

ಪುನಸ್ ತ್ವಾಂ ಸ್ವೇನ ರೂಪೇಣ ದ್ರಷ್ಟುಂ ಇಚ್ಛಾಮಿ ಶಾಶ್ವತಮ್ || ಮ.ಭಾ. ೧೪:೫೫:೬-೮ ||

ಆದರೆ ವವಿಲ್ಲ ರಾಮಸ್ವಾಮಿ ಶಾಸ್ತ್ರಿಗಳು ಮತ್ತು ಪುತ್ರರು, ಮದ್ರಾಸ್ ಇವರಿಂದ ಪ್ರಕಟಿತ  ಮಹಾಭಾರತದ ದಾಕ್ಷಿಣಾತ್ಯ ಪಾಠ ಮತ್ತು ಗೀತಾ ಪ್ರೆಸ್, ಗೋರಖ್ಪುರ್ ಇವರ ಮಹಾಭಾರತ ಪ್ರಕಟಣೆಗಳಲ್ಲಿ ಉತ್ತಂಕನ ಸ್ತೋತ್ರದಲ್ಲಿ ವ್ಯತ್ಯಾಸಗಳಿವೆ. ಇವುಗಳಲ್ಲಿರುವ ಕೆಲ ಹೆಚ್ಚಿನ ಶ್ಲೋಕಗಳನ್ನು ಈ ಸಾಲಿನ ನಂತರ ನೀಡಲಾಗುತ್ತದೆ. ಗಮನಿಸಬೇಕಾದ ವಿಚಾರವೆಂದರೆ ಬೋರಿ ಎಂಬ ಪ್ರಕಟಣೆಯಲ್ಲೂ ಹೆಚ್ಚಿನ ಶ್ಲೋಕಗಳಿವೆ, ಆದರೆ ಅಲ್ಲಿ ಕೆಳಕಂಡ ಶ್ಲೋಕಗಳ ನಂತರ ಮೇಲ್ಕಂಡ ಶ್ಲೋಕಗಳು ಬಂದಿವೆ.

ಉತ್ತಂಕ ಉವಾಚ

(ನಮೋ ನಮಸ್ತೇ ಸರ್ವಾತ್ಮನ್ನಾರಾಯಣ ಪರಾತ್ಪರ |

ಪರಮಾತ್ಮನ್ ಪದ್ಮನಾಭ ಪುಂಡರೀಕಾಕ್ಷ ಮಾಧವ ||

ಹಿರಣ್ಯಗರ್ಭರೂಪಾಯ ಸಂಸಾರೋತ್ತರಣಾಯ ಚ |

ಪುರುಷಾಯ ಪುರಾಣಾಯ ಚಾಂತರ್ಯಾಮಾಯ ತೇ ನಮಃ ||

ಅವಿದ್ಯಾತಿಮಿರಾದಿತ್ಯಂ ಭವವ್ಯಾಧಿ ಮಹೌಷಧಿಮ್ |

ಸಂಸಾರಾರ್ಣವ ಪಾರಂ ತ್ವಾಂ ಪ್ರಣಮಾಮಿ ಗತಿರ್ಭವ ||

ಸರ್ವವೇದೈಕವೇದ್ಯಾಯ ಸರ್ವದೇವಮಯಾಯ ಚ |

ವಾಸುದೇವಾಯ ನಿತ್ಯಾಯ ನಮೋ ಭಕ್ತಪ್ರಿಯಾಯ ತೇ ||

ದಯಯಾ ದುಃಖ ಮೋಹಾನಾಂ ಸಮುದ್ಧರ್ತುಮಿಹಾರ್ಹಸಿ |

ಕರ್ಮಭಿರ್ಬಹುಭಿಃ ಪಾಪೈರ್ಬದ್ಧಂ ಪಾಹಿ ಜನಾರ್ದನ ||) (ಮ.ಭಾ. ೧೪:೫೫:೭-೯
ವಿಶ್ವಕರ್ಮನ್ನಮಸ್ತೇಸ್ತು ವಿಶ್ವಾತ್ಮನ್ವಿಶ್ವಸಂಭವ |

ಪದ್ಭ್ಯಾಂ ತೇ ಪೃಥಿವೀ ವ್ಯಾಪ್ತಾ ಶಿರಸಾ ಚಾವೃತಂ ನಭಃ || ||

ದ್ಯಾವಾಪೃಥಿವ್ಯೋರ್ಯನ್ಮಧ್ಯಂ ಜಠರೇಣ ತವಾವೃತಮ್ |

ಭುಜಾಭ್ಯಾಮಾವೃತಾಶ್ಚಾಶಾಸ್ತ್ವಮಿದಂ ಸರ್ವಮಚ್ಯುತ || ||

ಸಂಹರಸ್ವ ಪುನರ್ದೇವ ರೂಪಮಕ್ಷಯ್ಯಮುತ್ತಮಮ್ |

ಪುನಸ್ತ್ವಾಂ ಸ್ವೇನ ರೂಪೇಣ ದ್ರಷ್ಟುಮಿಚ್ಛಾಮಿ ಶಾಶ್ವತಮ್ ||


ಇವೆರಡೂ ಆವೃತ್ತಿಗಳ ಶ್ಲೋಕಗಳು ಸಂಪೂರ್ಣವಾಗಿ ಎರಡೇ ಮುಖ್ಯ ವಿಚಾರಗಳನ್ನು ಪ್ರತಿಪಾದಿಸುತ್ತಿವೆ. ಒಂದು, ಸರ್ವವ್ಯಾಪಕ ಗುಣವುಳ್ಳ ರೂಪ. ಎರಡು, ವಿಷ್ಣುವಿನ ಪದ್ಮನಾಭಾದಿ ನಾಮಗಳಿಂದ ಗೈದ ಸ್ತುತಿ. ಇದು ಶುದ್ಧವಾದ ವಿಷ್ಣು ಸ್ವರೂಪ, ಹಾಗೂ ಇಲ್ಲಿ ಚೂಪು ಕೋರೆ, ದೊಡ್ಡ ದವಡೆ ಮತ್ತು ಭೂವ್ಯೋಮ ವ್ಯಾಪಿಸಿರುವ ತೆರೆದ ಬಾಯಿಗಳಿಂದ ಸಂಪೂರ್ಣ ಸೃಷ್ಟಿಯನ್ನು ಅರೆದರೆದು ನುಂಗುವಂತಹಾ ಭಯಾನಕವಾದ ಚಿತ್ರಣವಿಲ್ಲ.


ಈ ವಿಚಾರವು ಈ ಲೇಖನದ ವಿಚಾರ ಮಂಡನೆಗೆ ಮತ್ತೊಂದು ಬಲವಾದ ಸಾಕ್ಷ್ಯಾಧಾರವಾಗಿದೆ ಉತ್ತಂಕನು ದಿವ್ಯವಾದ ವೈಷ್ಣವ ರೂಪವನ್ನು ನೋಡಿದೊಡನೆಯೇ, ಅದನ್ನು ವಿಷ್ಣುವೆಂದು ಗುರುತಿಸಿ; ನಾರಾಯಣ, ಪದ್ಮನಾಭ, ಮಾಧವ, ವಾಸುದೇವ ಇತ್ಯಾದಿ  ವಿಷ್ಣುವಿಗೆ ಸಂಬಂಧಿಸಿದ ಹೆಸರುಗಳಿಂದ ಗುಣಗಾನ ಮಾಡುತ್ತಾನೆ. ಇದರೊಂದಿಗೆ ಭಗವದ್ಗೀತೆಯಲ್ಲಿ ತೋರಿಸಿರುವ ದಿವ್ಯರೂಪವನ್ನು ಹೋಲಿಸಿದಾಗ ಕಂಡುಬರುವುದೇನೆಂದರೆ, ಅರ್ಜುನನು ತಾನಾರನ್ನು ನೋಡುತ್ತಿರುವೆನೋ ಎಂದು ಅರ್ಥವೇ ಆಗದೆ ಕಣ್ಣನ್ನು ಉಜ್ಜಿಕೊಂಡು ಮತ್ತೊಮ್ಮೆ ಮಗದೊಮ್ಮೆ ನೋಡುವ ಪ್ರಯತ್ನ ಮಾಡುತ್ತಿರುತ್ತಾನೆ. ಅರ್ಜುನನು ಭಗವಂತನಲ್ಲಿ ತಾನಾರೆಂದು ತನ್ನ ನಿಜರೂಪವಾವುದೆಂದು ತೋರಬೇಕೆಂದು ಬೇಡಿಕೊಳ್ಳುತ್ತಾನೆ:-


ಆಖ್ಯಾಹಿ ಮೇ ಕೋ ಭವಾನುಗ್ರರೂಪೋ ನಮೋಸ್ತು ತೇ ದೇವವರ ಪ್ರಸೀದ
ವಿಜ್ಞಾತುಮಿಚ್ಛಾಮಿ ಭವಂತಮಾದ್ಯಂ ನ ಹಿ ಪ್ರಜಾನಾಮಿ ತವ ಪ್ರವೃತ್ತಿಮ್ ||ಮ.ಭಾ. ೬:೩೫:೩೧, ಭ.ಗೀ. ೧೧:೩೧ ||


ಭಾವಾರ್ಥ:- ಈ ಭಯಂಕರ ರೂಪವನ್ನು ತಾಳಿದ ನೀನಾರು? ಎಂಬುದನ್ನು ಹೇಳು, ಎಲೆ ದೇವವರ್ಯ! ನಿನಗೆ ನಮಸ್ಕಾರ, ನೀನು ಪ್ರಸನ್ನನಾಗು. ಆದಿ ಸ್ವರೂಪನೇ! ನಿನ್ನನ್ನು ಚೆನ್ನಾಗಿ ತಿಳಿಯಬೇಕೆಂದು ನನ್ನಾಸೆ. ನೀನಾರು? ನಿನ್ನುದ್ದೇಶವೇನು? ಏಕೆಂದರೆ ನಿನ್ನ ಪ್ರವೃತ್ತಿ ಪ್ರಯತ್ನಗಳೊಂದೂ ಅರ್ಥವಾಗುತ್ತಿಲ್ಲ. ಅದಕ್ಕೆ ಶಿವನೊಂದಿಗೆ ಯೋಗೈಕ್ಯನಾಗಿದ್ದ ಕೃಷ್ಣನ ಬಾಯಿಯಿಂದ ಭಗವಂತನಾದ ಶಿವನು ತಾನೇ ಕಾಲನು ಎಂಬ ಸತ್ಯವನ್ನು ಕೃಷ್ಣನ ಮುಖೇನ ಹೇಳಿಸಿದನು.
ಶ್ರೀಭಗವಾನುವಾಚ

ಕಾಲೋಸ್ಮಿ ಲೋಕಕ್ಷಯಕೃತ್ ಪ್ರವೃದ್ಧೋ ಲೋಕಾನ್ ಸಮಾಹರ್ತುಮಿಹ ಪ್ರವೃತ್ತಃ ||

(ಮ.ಭಾ. ೬:೩೫:೩೨.೫, ಭ.ಗೀ. ೧೧:೩೨.೫)

ಭಾವಾರ್ಥ:- ಅರ್ಜುನ! ನಾನು ಲೋಕವನ್ನೆಲ್ಲ ನಾಶಗೊಳಿಸಲು ಮುನ್ನುಗ್ಗುತ್ತಿರುವ ಕಾಲನು!!! ಈಗ ಈ ಲೋಕಗಳನ್ನು ನಾಶಪಡಿಸಲು ಉದ್ಯತನಾಗಿರುವೆ.


ಆದ್ದರಿಂದ ಈ ಲೇಖನದಲ್ಲಿ ಮಂಡಿಸಿದ - ಭಗವದ್ಗೀತೆಯಲ್ಲಿ ತೋರಿರುವ ದಿವ್ಯರೂಪವು ಮಹಾಕಾಲನ ಭಯಾನಕವಾದ ಘೋರ ರೂಪವೇ ಆಗಿದ್ದು, ಅದು ವಿಷ್ಣುವಿನ ಸರ್ವವ್ಯಾಪಕವಾದ ಸೌಮ್ಯ ರೂಪವನ್ನು ಆರೋಹಿಸಿತು ಎಂಬುದನ್ನು ಪುಷ್ಟೀಕರಿಸುತ್ತದೆ. ಹಾಗಾಗಿ ಅರ್ಜುನನು ನಿಜವಾಗಿಯೂ ವೈಷ್ಣವ ರೂಪವನ್ನು ನೋಡಿದ್ದರೂ, ಅದನ್ನು ಮಹಾಕಾಲನ ರೂಪವು ಆರೋಹಿಸಿದ್ದರಿಂದ, ಅದನ್ನು ನೋಡಿ ಘಡ ಘಡ ನಡುಗಿ ತತ್ತರಿಸಿ ಹೋದನು.  

(ಸಶೇಷ..)

ಹೇಮಂತ್ ಕುಮಾರ್ ಜಿ.