Monday, 13 August 2018

ಓಂ ನಮೋ ಭಗವತೇ ರುದ್ರಾಯ - ಒಂದು ಮೀಮಾಂಸೆ


ಓಂ ನಮೋ ಭಗವತೇ ರುದ್ರಾಯ ಎಂಬ ಮಂತ್ರವು ವೇದದ್ದಲ್ಲ ಎಂದು ವಾದಿಸುವವರ ಅಜ್ಞಾನಕ್ಕೆ ಮರುಕಪಟ್ಟು ಕಿಂಚಿತ್ತಾದರೂ ಸುಜ್ಞಾನ ಉದಯಿಸಲಿ ಎಂದು ಬೋಧನಾತ್ಮಕವಾಗಿ ಈ ಲೇಖನವನ್ನು ಬರೆಯಲಾಗುತ್ತಿದೆ. ಓಂ ನಮೋ ಭಗವತೇ ರುದ್ರಾಯ ಎಂಬುದು ಪ್ರಸಿದ್ಧ ರುದ್ರ ಮಂತ್ರ. ಈ ಮಂತ್ರದಿಂದಲೇ ರುದ್ರ ಪಾರಾಯಣ, ರುದ್ರಾಭಿಷೇಕ, ರುದ್ರ ಹೋಮಾದಿಗಳಂತಹಾ ರುದ್ರ ಉಪಾಸನಾ ಭಾಗ ವಿಸ್ತಾರವಾಗಿದೆ. ಮೇಲ್ನೋಟಕ್ಕೆ ಇದು ಹತ್ತು ಅಕ್ಷರವುಳ್ಳದ್ದಾಗಿ ಕಾಣುವುದರಿಂದ ದಶಾಕ್ಷರೀ ಎಂದು ಪ್ರಚಲಿತವಿದೆ. ಆದರೆ ವೇದ ಭಾಗದಲ್ಲಿ ಇದು ಏಕಾದಶಾಕ್ಷರೀ ಮಂತ್ರ. ಇದಕ್ಕೆ ಪ್ರಯೋಗಾನುಸಾರ ಅನುದಾತ್ತ, ಉದಾತ್ತ, ಸ್ವರಿತಾದಿ ವೇದಸ್ವರಗಳ ಸಂಯೋಜನೆ ಇದೆ. ಅದರ ಒಟ್ಟು ಸಂಯೋಗ ಭಂಗಗಳು ೩೨೧೧. ಅಂದರೆ ಈ ಒಂದು “ಓಂ ನಮೋ ಭಗವತೇ ರುದ್ರಾಯ” ಎಂಬ ಮಂತ್ರವು ೩೨೧೧ ಬೇರೆ ಬೇರೆ ಅರ್ಥಗಳನ್ನು ಕೊಡುತ್ತದೆ. 

ಇದು ವೇದೋಕ್ತ ರುದ್ರಪಾರಾಯಣ ವಿಧಿಯಲ್ಲಿ ಆದ್ಯ ಮಂತ್ರ. ಆದರೆ ತೈತ್ತಿರೀಯ ಸಂಹಿತೆ ಎಂಬ ಯಜುರ್ವೇದದ ಸಂಹಿತಾ ಭಾಗದಲ್ಲಿ ಇದು ಕಂಡುಬರುವುದಿಲ್ಲ, ಹಾಗಾಗಿ ಇದು ವೇದ ಮಂತ್ರವಲ್ಲ ಎಂದು ವಾದಿಸುವುದು ತೀರಾ ಬಾಲಿಶ. ಹೇಗೆ ಎನ್ನುತ್ತೀರಾ? ಬಾಣ ಭಟ್ಟನು ಯಜುರ್ವೇದವನ್ನು ಕಲಿತು ಲೋಕಕಂಟಕನಾಗಿ ಬಾಣಾಸುರನಾದ ಪ್ರಕರಣದ ಹಿನ್ನೆಲೆಯಲ್ಲಿ ಮೂಲ ಯಜುರ್ವೇದವು ಅನಿವಾರ್ಯವಾಗಿ ಸುಪ್ತಗೊಳಿಸಲ್ಪಟ್ಟಿತು. ತೈತ್ತಿರೀಯ ಸಂಹಿತೆಯು ಗದ್ಯ ರೂಪದ ಭಾಷ್ಯ ಭಾಗ ಮಾತ್ರ. ಮೂಲ ಯಜುರ್ವೇದ ಮಂತ್ರ ಭಾಗ ಪ್ರಕಟಣೆಯಲ್ಲಿಲ್ಲ, ಋಷಿ ಮುನಿಗಳಿಂದ ಸುಪ್ತಗೊಳಿಸಲ್ಪಟ್ಟಿದೆ. ಆದರೆ ಮೂಲ ಯಜುರ್ವೇದವನ್ನು ತಮ್ಮ ಉಪಾಸನೆಯಿಂದ ಪಡೆದುಕೊಂಡಿರುವ ಬ್ರಹ್ಮ ಋಷಿಗಳ ಪ್ರಕಾರ ಮೂಲ ಯಜುರ್ವೇದದಲ್ಲಿ ಓಂ ನಮೋ ಭಗವತೇ ರುದ್ರಾಯ ಎಂಬ ಮಂತ್ರವು ಸೇರಿದೆ. 

ಇನ್ನು ತೈತ್ತಿರೀಯ ಸಂಹಿತೆಯ ವಿಚಾರಕ್ಕೆ ಬರೋಣ. ಕೃಷ್ಣ ಯಜುರ್ವೇದ ಎಂದು ಖ್ಯಾತಿ ಹೊಂದಿರುವ ಈ ಶಾಖೆಯ ಪುರಾತನ ಹಿರಿಯ ತಲೆಗಳನ್ನು ಕೇಳಿದರೆ ತೈತ್ತಿರೀಯ ಸಂಹಿತೆ ಮಾತ್ರ ಪೂರ್ಣ ಯಜುರ್ವೇದವಲ್ಲ, ಅದರೊಂದಿಗೆ ಬ್ರಾಹ್ಮಣ ಮತ್ತು ಅರಣ್ಯಕಗಳನ್ನು ಸೇರಿಯೇ ಯಜುರ್ವೇದ ಎಂದಾಗುತ್ತದೆ ಎಂದು ಹೇಳುತ್ತಿದ್ದರು. ಪ್ರಯೋಗ ಸೂತ್ರಗಳಲ್ಲೂ ತೈತ್ತಿರೀಯ ಅಥವಾ ಶತಪಥ ಅಥವಾ ಇತರೆ ಬ್ರಾಹ್ಮಣ ಗ್ರಂಥಗಳಿಲ್ಲದೆ ಪೂರ್ಣವಾಗುವುದಿಲ್ಲ ಎಂಬ ಧೋರಣೆಯೇ ಬೆಳೆದು ಬಂದಿದೆ. ಆದರೆ ದುರಾದೃಷ್ಟವೆಂದರೆ ಮೂಲ ಬ್ರಾಹ್ಮಣ ಗ್ರಂಥಗಳಲ್ಲೂ ಎಷ್ಟೆಷ್ಟೋ ವ್ಯತ್ಯಾಸಗಳಾಗಿವೆ. ಮೂಲ ಬ್ರಾಹ್ಮಣ ಗ್ರಂಥಗಳಲ್ಲಿ ಓಂ ನಮೋ ಭಗವತೇ ರುದ್ರಾಯದಿಂದಲೇ ರುದ್ರೋಪಾಸನೆ ಮತ್ತು ಪ್ರಯೋಗಗಳು ನಿರೂಪಿತವಾಗಿವೆ ಎಂಬುದು ಮೂಲ ಶ್ರೌತ ಪರಂಪರೆಯ ಸತ್ಯ ವಿಚಾರ.

ಎಲ್ಲೋ ೨೦೦-೩೦೦ ವರ್ಷದ ಈಚೆಗೆ ರಚನೆಯಾದ ಮಂತ್ರಮಹೋದಧಿ ಎಂಬ ಗ್ರಂಥವು ಪೂರ್ವಾಗ್ರಹ ಉಳ್ಳದ್ದಾಗಿದ್ದು, ಅದು ವೇದಕ್ಕೆ ಆಧಾರ ಎಂದು ಹೇಳಿಸಿಕೊಳ್ಳುವ ಯಾವುದೇ ಮಾನ್ಯತೆ ಪಡೆದಿರುವುದಿಲ್ಲ. ಅದರಲ್ಲಿ ಈ ರುದ್ರ ಮಂತ್ರಕ್ಕೆ “ಬೋಧಾಯನ ಮುನಿ” ಎಂದು ಹೇಳಿದ್ದಾರೆ. ಆದರೆ ವ್ಯಾಖ್ಯಾನಕಾರರು ಋಷಿ ಎಂದು ತಪ್ಪು ವ್ಯಾಖ್ಯಾನ ಮಾಡಿದ್ದಾರೆ. ಬೋಧಾಯನರು ಋಷಿಯಲ್ಲ, ಅವರು ಮಂತ್ರದ್ರಷ್ಟಾರರಲ್ಲ, ಅವರು ಮುನಿ ಅಥವಾ ಸೂತ್ರಕಾರರು. ಅವರೂ ಸಹ ಬಳಸಿಕೊಂಡದ್ದು ರಾವಣನ ಸೂತ್ರವನ್ನೇ. ರಾವಣನು ಇದೇ ಮಂತ್ರವನ್ನು ವಿಸ್ತಾರವಾಗಿ ಬಳಸಿಕೊಂಡು ಉಪಾಸನೆ ಮಾಡಿ ಶಿವ ಸಾರೂಪ್ಯವನ್ನು ಪಡೆದು ರಾವಣೇಶ್ವರನೆಂದೇ ಖ್ಯಾತನಾದನು. ಆದರೂ ಆತನು ಈ ಮಂತ್ರದ ದ್ರಷ್ಟಾರನಲ್ಲ! ರಾವಣನಿಗಿಂತಲೂ ಹಿಂದೆಯೇ ಈ ಮಂತ್ರ ವೇದದಲ್ಲಿತ್ತು. ಆತನು ಚತುರ್ವೇದ ಪಾರಂಗತನಾದ್ದರಿಂದ ಈ ರುದ್ರ ಮಂತ್ರ, ತನ್ನ ತಲೆ ಮತ್ತು ನರಗಳನ್ನೇ ರುದ್ರವೀಣೆಯನ್ನಾಗಿಸಿ, ಶತರುದ್ರೀಯ ಸಾಮಾದಿಗಳಿಂದ ಶಿವನನ್ನೇ ಮೆಚ್ಚಿಸಿ ಸಾರೂಪ್ಯ ಸಿದ್ಧಿಸಿಕೊಂಡನು. ಆತನ ಸೂತ್ರವನ್ನು ಹಲವರು ಬಳಸಿಕೊಂಡರು. ಅಂತಹವರಲ್ಲಿ ಇತ್ತೀಚಿನ ಕಾಲದಲ್ಲಿ ಬೋಧಾಯನರೂ ಒಬ್ಬರು. ಬೋಧಾಯನ ಸೂತ್ರವು ಬಹಳ ಪ್ರಖ್ಯಾತವಾಯಿತು. ಅತ್ಯಂತ ಕಠಿಣವಾಗಿತ್ತು. ನಿತ್ಯಾಗ್ನಿಯನ್ನು ಇಟ್ಟು ಅಗ್ನಿಹೋತ್ರಿಯಾಗಿ ನಿರಂತರ ಉಪಾಸನೆ ಮಾಡುವುದು ಕರ್ತವ್ಯವಾಗಿತ್ತು. ಹಾಗಾಗಿ ಬೋಧಾಯನ ಸೂತ್ರದವನು ಮಾತ್ರ ಅಧ್ವರ್ಯುವಾಗಬಲ್ಲನು ಎಂಬ ಧರ್ಮಶಾಸ್ತ್ರ ನಿಯಮವೇ ಇತ್ತು. ಆಗ ಕಾಠಕರ ಗುಂಪು, ಔಧಾಯನೇಯ ಗುಂಪು, ಶಾಲಂಕಾಯನ ಗುಂಪು, ಅಂಧರ ಗುಂಪು ಇತ್ಯಾದಿಯವರು ಬೋಧಾಯನ ಸೂತ್ರದ ಅಧ್ವರ್ಯು ಇಲ್ಲದೆ ಯಜ್ಞ ಯಾಗಗಳನ್ನು ಮಾಡುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಅವರವರ ಶಾಖೆಗೆ ಬೇಕಾದಷ್ಟು ವಿಚಾರಗಳನ್ನು ಮಾತ್ರ ಉಳಿಸಿಕೊಂಡು, ಅದಕ್ಕೆ ಸೂಕ್ತವಾದ ತಮ್ಮ ಪಾಠಗಳನ್ನೇ ಸಂಹಿತಾ, ಬ್ರಾಹ್ಮಣ, ಆರಣ್ಯಕ ಭಾಗದಲ್ಲಿ ಬಳಸಿಕೊಂಡರು. ಆಗ ಕಾಠಕ ಸಂಹಿತೆ, ಶಾಲಂಕಾಯನ ಸಂಹಿತೆ ಇತ್ಯಾದಿಗಳು ರೂಪುಗೊಂಡವು. ವೇದಶಾಖೆಯ ಉಗಮ ಮತ್ತು ವಿಕಾಸಕ್ಕೆ ಈ ರೀತಿಯ ಹಲವಾರು ಕಾರಣಗಳಿರುತ್ತವೆ. ಅವುಗಳ ಜ್ಞಾನವಾಗಲಿ ಅಧ್ಯಯನವಾಗಲೀ ಈಗ ಬಹಳ ಕಡಿಮೆಯಾಗಿದೆ. ಹಾಗಾಗಿ ಮೂಲ ವಿಚಾರಗಳನ್ನು ತಿಳಿಯದೆ ಪಾಠಕರು ಕಣ್ಣಿಗೆ ಕಾಣುವ ವಿಚಾರವೇ ಸತ್ಯ ಎಂದು ನಂಬಿಕೊಳ್ಳುತ್ತಾರೆ. ನಿತ್ಯಾಗಿಹೋತ್ರವಿಲ್ಲದೆ ಜೀವನವೇ ಇಲ್ಲವೆಂಬಷ್ಟು ನಿರ್ಬಂಧಗಳನ್ನು ಹೊಂದಿ ಯಜುರ್ವೇದಿಗಳಲ್ಲಿ ಬೋಧಾಯನ ಸೂತ್ರವು ಕಟ್ಟುನಿಟ್ಟಾಗಿತ್ತು. ಬೋಧಾಯನರ ಶಿಷ್ಯರೇ ಆಪಸ್ತಂಭರು. ಅವರು ಬೋಧಾಯನ ಸೂತ್ರವನ್ನು ಸಡಿಲಗೊಳಿಸಿದರು. ಅದೇ ಮುಂದೆ ಆಪಸ್ತಂಭ ಸೂತ್ರವೆಂದು ಬಳಕೆಗೆ ಬಂದಿತು. ಸ್ವಲ್ಪ ಸರಳವೆಂದೆನಿಸಿಕೊಂಡಿತು. ಕಾಲಕ್ರಮೇಣ ಬೋಧಾಯನ ಸೂತ್ರದವರು ಜೀವನ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಆ ಎಲ್ಲಾ ನಿಯಮಗಳನ್ನು ಬಿಡುತ್ತಾ ಬಂದರು. ಎರಡೂ ಸೂತ್ರಗಳ ಬಹಳಷ್ಟು ಮೂಲ ವಿಚಾರಗಳು ಮೂಲೆಗುಂಪಾದವು.

ರಾವಣನ ಮಹಾನ್ಯಾಸ ಸೂತ್ರದ ಎಲ್ಲೆಡೆಯೂ ಓಂ ನಮೋ ಭಗವತೇ ರುದ್ರಾಯ ಎಂಬುದರ ಪ್ರಯೋಗವಿದೆ. ಇನ್ನು ಸ್ವಾಹಾಕಾರದಲ್ಲಿ ಈ ಮಂತ್ರದ ವಿನಿಯೋಗವಿಲ್ಲ ಎಂಬುದು ಕೆಲವರ  ವಾದ. ಅವರು ಕಲಿತ ಪಾಠದಲ್ಲಿ ಅದು ಇಲ್ಲದಿರಬಹುದು. ಆದರೆ ಈಗಲೂ ಹಲವಾರು ಪಾಠಾಂತರ ವ್ಯತ್ಯಾಸಗಳನ್ನು ಹೊಂದಿದ್ದು ಬೇರೆ ಬೇರೆ ಅಗ್ನಿಮುಖ ಪ್ರಯೋಗಗಳಿವೆ. ವಿವಿಧ ಅಗ್ನಿಗಳನ್ನು ಮತ್ತು ವಿವಿಧ ಅಗ್ನಿಮುಖ ಪ್ರಯೋಗವನ್ನು ತಿಳಿಯದೆ ಅಧ್ವರ್ಯು ಆಗಲು ಸಾಧ್ಯವಿಲ್ಲ. ಈಗಲೂ ರುದ್ರಹೋಮದ ಪೂರ್ವಾಜ್ಯ ಮತ್ತು ಉತ್ತರಾಜ್ಯಗಳಲ್ಲಿ ಓಂ ನಮೋ ಭಗವತೇ ರುದ್ರಾಯದ ವಿನಿಯೋಗವಿದೆ. ಇನ್ನು ಕೆಲವು ರುದ್ರ ಹೋಮ ಪ್ರಯೋಗಗಳಲ್ಲಿ ಇದನ್ನು ಸೇರಿಸಿಯೇ ಆಹುತಿ ಇದೆ. ಆಶ್ಚರ್ಯವೆಂದರೆ ೩೨೧೧ ಆವರ್ತನೆಯಲ್ಲಿ ಈ ಓಂ ನಮೋ ಭಗವತೇ ರುದ್ರಾಯ ಎಂಬ ರುದ್ರ ಮಂತ್ರದ ಆಹುತಿ ವಿಧಾನ ಹಿಂದೆಯೇ ಸಂಶೋಧನೆಯಾಗಿದೆ. ಇದು ರುದ್ರಾಧ್ಯಾಯವನ್ನು ಬಳಸಿ ರುದ್ರಹೋಮ ಮಾಡಿದಷ್ಟೇ ಫಲದಾಯಕ. ಆದರೆ ಈಗ ರುದ್ರಾಧ್ಯಾಯದ ಆಹುತಿ ಕ್ರಮದಲ್ಲಿ ೩೨೧೧ ಆಹುತಿಗಳಿಲ್ಲ, ಅಲ್ಲಲ್ಲಿಯ ಪಾಠಾಂತರಗಳನ್ನು ಗಮನಿಸಿದಾಗ ೧೭೦ ಆಸುಪಾಸಿನಷ್ಟು ಆಹುತಿಗಳಿವೆ. ಆದರೆ ರುದ್ರಾಧ್ಯಾಯದ ಸ್ವಾಹಾಕಾರ ಕ್ರಮವ್ ೩೨೧೧ ಆಹುತಿಗಳನ್ನು ಹೊಂದಿತ್ತು, ಅಂದರೆ ಇನ್ನೂ ಹೆಚ್ಚು ಮಂತ್ರಗಳನ್ನು ಹೊಂದಿತ್ತು. ಈಗ ಬಿಟ್ಟು ಹೋಗಿದೆಯಷ್ಟೆ. ಸಸ್ವರವಾದ ಓಂ ನಮೋ ಭಗವತೇ ರುದ್ರಾಯ ಎಂಬುದು ೧೧ ಅಕ್ಷರಗಳವರೆಗೆ ವ್ಯಾಪ್ತವಾಗಿ ಏಕಾದಶ ರುದ್ರರನ್ನು ಸಂಯೋಜಿಸುವ ಏಕಾದಶಾಕ್ಷರೀ ಮಂತ್ರ ಎಂದು ಮೂಲದಲ್ಲಿ ಪಾಠವಿದೆ. ಅಧ್ವರ್ಯು ಆಗದವನಿಗೆ ಇದೆಲ್ಲ ಅರ್ಥವೂ ಆಗುವುದಿಲ್ಲ. 

ಒಟ್ಟಾರೆ ೩೨೧೧ರ ಒಟ್ಟು ಸಂಯೋಜನೆಯೇ “ಮಹಾಕಾಲ” ಆಗುತ್ತದೆ. ಕಾಲನೊಂದಿಗೆ ಚರಿಸುವವನು ಸ್ವಯಂ ಕಾಲನೇ ಆಗಿರುತ್ತಾನೆ. ಆತನು ಸಾರೂಪ್ಯವೋ, ಸಾಲೋಕ್ಯವೋ, ಸಾಯುಜ್ಯವೋ ಅವರವರ ಹಂತಕ್ಕೆ ಆಧರಿಸಿದ ಮಾರ್ಗವನ್ನು ಹೊಂದಿತ್ತಾರೆ. ಆಗ ಕರ್ಮಬಂಧನದಿಂದ ಬಿಡಿಸಿಕೊಂಡು ಕಾಲನ ನಿರ್ದೇಶನದಲ್ಲಿ ವ್ಯವಹರಿಸುತ್ತಾರೆ. ಇದಕ್ಕೆಲ್ಲ ಮೂಲವೇ ಈ ಏಕಾದಶಾಕ್ಷರಿಯಾದ ಓಂ ನಮೋ ಭಗವತೇ ರುದ್ರಾಯ ಎಂಬ ವೇದ ಮಂತ್ರ.

ಓಂ ನಮೋ ಭಗವತೇ ರುದ್ರಾಯ ಎಂಬಲ್ಲಿ ರುಕಾರಕ್ಕೆ ಉದಾತ್ತ ಬಂದಾಗ ಬ್ರಾಹ್ಮಿ ಭಾಷೆಯಲ್ಲಿ ೠತ್ ಆಯಮಿತೀತಿ ರುದ್ರಃ, ಅಂದರೆ ಸತ್ಯದರ್ಶನ ಮಾಡಿಸುವಂತಹದ್ದು ಎಂದರ್ಥ. ಹಾಗೇ ದ್ರಾಕಾರಕ್ಕೆ ಉದಾತ್ತ ಹಾಗೂ ಸ್ವರಿತ ಪ್ರಯೋಗಗಳೂ ಬರುತ್ತದೆ. ೧೧ ಅಕ್ಷರಗಳು ಬೇರೆ ಬೇರೆ ನಡೆಯನ್ನು ಪಡೆಯುವುದರಿಂದ ೩೨೧೧ ವಿಭಾಗ ಆಗುತ್ತದೆ. ಆ ಏಕಾದಶ ಅಕ್ಷರಿಯೇ ಏಕಾದಶ ರುದ್ರ ಆಗುವುದು. ಬೇರೆ ಬೇರೆ ಅಭಿಪ್ರಾಯದ ಪ್ರಯೋಗಗಳಿವೆ. ಓಂ ನಮೋ” ಭಗವತೇ ರುದ್ರಾಯ – ಅಂದರೆ ಮೋಕಾರವು ಸ್ವರಿತವನ್ನು ಪಡೆಯುತ್ತದೆ. ಆಗ ಏಕಾದಶಾಕ್ಷರಿ ಆಗುತ್ತದೆ. ಇನ್ನು ಕೆಲವುದರಲ್ಲಿ ಓಂ ನಮೋ ಭಗವತೇ’ ರುದ್ರಾಯ ಎಂದು ತೇಕಾರಕ್ಕೆ ಯಜುರ್ವೇದ ರೀತ್ಯಾ ದೀರ್ಘ ಉದಾತ್ತ ಬರುತ್ತದೆ. ಆಗಲೂ ಏಕಾದಶಾಕ್ಷರಿಯಾಗುತ್ತದೆ. ಬ್ರಾಹ್ಮಿಯ ತಾತಾತ್ಯೇತಿ ಸೂತ್ರ ಅಲ್ಲಿ ಅನ್ವಯವಾಗುತ್ತದೆ. ಒಟ್ಟಾರೆ ೧೧ ಅಕ್ಷರವಾಗುತ್ತದೆ. ಇನ್ನು ನಮೋ ಎಂಬ ಶಬ್ದದಲ್ಲಿ ಮೋಕಾರವನ್ನು ಪ್ರತ್ಯೇಕಿಸಿದಾಗ ಮೋ – ಮಾಮಹಂತೀತಿ ರುದ್ರ ಎಂದು ಬ್ರಾಹ್ಮಿಯಲ್ಲಿ ವಿವರಿಸುತ್ತಾರೆ. ಇನ್ನೂ ಹಲವು ವಿಭಾಗಗಳಿವೆ. ಅವೆಲ್ಲವೂ ಅರ್ಥಬದ್ಧ. ಈಗಿನ ಪಾಖಂಡಿ ವಿದ್ವಾಂಸರಿಗೆ ಇದು ನೋಡಲು ಸಿಕ್ಕಿಲ್ಲ. ಹಾಗಾಗಿ ಸುಮ್ಮನೆ ಅದಿಲ್ಲ ಇದಿಲ್ಲ ಎಂದು ಬೊಗಳುತ್ತಾರೆಯಷ್ಟೆ. ಮಹಾನ್ಯಾಸದಲ್ಲಿ ಓಂ ನಮೋ ಭಗವತೇ ರುದ್ರಾಯ ಎಂಬುದನ್ನೇ ನ್ಯಾಸ ಮಾಡಿದ್ದೇ ಹೊರತು ರುದ್ರಾಧ್ಯಾಯದ ಉಳಿದ ಮಂತ್ರಗಳನ್ನನ್ನಲ್ಲ. ಅಂದರೆ ಓಂ ನಮೋ ಭಗವತೇ ರುದ್ರಾಯ ಎಂಬುದನ್ನೇ ವಿಭಾಗಿಸುತ್ತಾ ನ್ಯಾಸ ಮಾಡಿಕೊಂಡು ಹೋದದ್ದೇ ಮಹಾನ್ಯಾಸ. ಅಲ್ಲಿಯೂ ಕೆಲವೆಡೆ ಮಾ ಮಾ ಮಾ ಹಿಗ್೦ಸೀಃ ಎಂದು ಬರುತ್ತದೆ. ಹಲವೆಡೆ ಆದ್ಯಂತದಲ್ಲಿ ಓಂ ನಮೋ ಭಗವತೇ ರುದ್ರಾಯ ಬರುತ್ತದೆ.

ಈ ಓಂ ನಮೋ ಭಗವತೇ ರುದ್ರಾಯ ಎಂಬ ಏಕಾದಶಾಕ್ಷರಿಯು ಪಂಚಾಕ್ಷರಿಯಾಗುತ್ತದೆ. ಅದೇ “ಶಿವಾಯ ನಮಃ”. ಮೇಲ್ನೋಟಕ್ಕೆ ಈ ಪಂಚಾಕ್ಷರಿಯು ಸಾಮಾನ್ಯ ಅರ್ಥವೆಂದು ಕಾಣುತ್ತದೆ. ಆದರೆ ಅಕ್ಷರಗಳನ್ನು ಬಿಡಿಸುತ್ತಾ ಹೋದರೆ ರಾಶಿ ರಾಶಿ ಸಾಹಿತ್ಯ ಉತ್ಪತ್ತಿಯಾಗುತ್ತದೆ. ಕೇವಲ ಈ ೫ ಅಕ್ಷರಗಳ ವಿಸ್ತಾರದಿಂದಲೇ ಶಿವ ಪುರಾಣವು ಉತ್ಪತ್ತಿಯಾಯಿತು. ಅದು ಮೂಲ ಶಿವ ಪುರಾಣ. ಈಗಿರುವ ಎಲ್ಲಾ ಪುರಾಣಗಳಲ್ಲಿ ಬಹುತೇಕ ವಿಚಾರಗಳು ಪ್ರಕ್ಷಿಪ್ತವಾಗಿವೆ. ಏಕೆಂದರೆ ಮೂಲ ವಿಚಾರಗಳ ಅಸ್ಪಷ್ಟತೆ.

“ಶಿವಾಯ ನಮಃ” ಎಂಬುದು ಸರಿಯಾದ ಭಾಗ ಅಥವಾ ಆದ್ಯಾತ್ಮಿಕ ಭಾಗ. “ನಮಃ ಶಿವಾಯ” ಎಂಬುದು ಮಿಥ್ಯಾ ಭಾಗ ಅಥವಾ ಪ್ರಾಪಂಚಿಕ ಭಾಗ ಎಂದು ಮೂಲದಲ್ಲಿ ಸ್ಪಷ್ಟವಿದೆ. ಆದರೆ ಪ್ರಾಪಂಚಿಕರು ಬದುಕಬೇಕು, ಜೀವನ ನಡೆಸಬೇಕು. ಹಾಗಾಗಿ ನಮಃ ಶಿವಾಯ ಹೇಳಿದರೆ ತಪ್ಪಿಲ್ಲ ಎಂದು ಬಳಕೆಗೆ ಬಂದಿದೆ. ಶಿವಾಯ ನಮಃ ಅಥವಾ ನಮಃ ಶಿವಾಯ ಎಂದಾಗ ಶಿವನನ್ನು ತೀರಾ ಪ್ರಾಪಂಚಿಕ ಮಟ್ಟದಲ್ಲಿ ವಂದಿಸುತ್ತೇನೆ ಎಂಬ ಒಂದೇ ಅರ್ಥವಲ್ಲ. ಆ ಅರ್ಥಕ್ಕೆ ಮಹತ್ವವೂ ಇಲ್ಲ. ಪಂಚಾಕ್ಷರಿ ಮಂತ್ರಕ್ಕೆ ೩೨೧೧ ಅರ್ಥಗಳಿವೆ!!! ಅದೇ ಶಿವನ ಪೂರ್ಣ ಸ್ವರೂಪ = ಅದೇ ಮಹಾಕಾಲ. ಅದನ್ನು ಈಗಿನ ಪೂರ್ವಾಗ್ರಹ ಪೀಡಿತ ವಿದ್ವಾಂಸರು ಅರ್ಥ ಮಾಡಿಕೊಂಡಿಲ್ಲ. ಅಂತಹವರಿಗೆ ಅರ್ಥವಾಗುವುದೂ ಬೇಡ! ಅದು ಇವರೆಲ್ಲರ ಕಲ್ಪನೆಗೂ ಮೀರಿದ ಅತೀ ಎತ್ತರದಲ್ಲಿರುವ ವಿಚಾರ. ಈ ಕಾಲದಲ್ಲಿ ಅವರಿಗೆ ಅರ್ಥವಾಗುವುದೂ ಇಲ್ಲ.

ಪ್ರಸಕ್ತ ರುದ್ರಾಭಿಷೇಕ, ರುದ್ರ ಪಾರಾಯಣಕ್ಕೆ ಬಳಕೆಯಲ್ಲಿರುವ ಮಂತ್ರ ಭಾಗವು ಕಾಲ ಕಾಲಕ್ಕೆ ಅಧ್ಯಯನಗೊಂಡು ಸೇರ್ಪಡೆ, ಬಿಡುಗಡೆಗಳನ್ನು ಹೊಂದಿ ಪರಿಷ್ಕರಣೆಯಾಗುತ್ತಾ ಬಂದಿದೆ. ಆದರೆ ನಮಕ ಮತ್ತು ಚಮಕ ಮಂತ್ರಗಳನ್ನು ಹೇಳಿದರೆ ಅಲ್ಲಿಗೆ ಮುಗಿಯಲಿಲ್ಲ. ಇನ್ನೂ ಮುಂದಕ್ಕೆ ಅದಕ್ಕೆ ಸಂಬಂಧಪಟ್ಟ ಸೂಕ್ತವು ವ್ಯಾಪಿಸಿರುತ್ತದೆ. ಆದರೆ ಇಷ್ಟು ಹೇಳಿದರೆ ಸಾಕು ಎಂಬ ಪ್ರಾಪಂಚಿಕ ಒಡಂಬಡಿಕೆ ಮಾತ್ರ ಬಂದಿದೆಯಷ್ಟೆ. ಅದಕ್ಕೆ ಕೆಲವರು ಪದ, ಜಟಾದಿ ಕ್ರಮಗಳನ್ನು ಹೊಂದಿಸಲು ಪ್ರಯತ್ನಿಸಿದರು. ಏಕೆಂದರೆ ಅಲ್ಲಲ್ಲಿ ಈ ೩೨೧೧ ಆಹುತಿಗಳಾಗಬೇಕೆಂಬ ವಿಚಾರ ಕೆಲ ಕೆಲವರಿಗಾದರೂ ತಿಳಿದಿತ್ತು. ಹಾಗಾಗಿ ಅದನ್ನು ಪೂರೈಸುವ ನಿಟ್ಟಿನಲ್ಲಿ ಬೇರೆ ಬೇರೆ ಸಂಶೋಧನೆಗಳು ನಡೆದವು. ಆದರೆ ನಿಜವಾಗಿಯೂ ಅದ್ಯಾವುದೂ ಅಲ್ಲ. ರಹಸ್ಯ ಬೇರೆಯೇ ಇದೆ. ಈ ಕಾಲಕ್ಕೆ ಸೂಕ್ತವಲ್ಲ. ಸದ್ಯಕ್ಕಂತೂ ರಾಕ್ಷಸರಾರೂ ಇಲ್ಲ. ಈ ರಹಸ್ಯಗಳನ್ನು ತಿಳಿದುಕೊಂಡು ಮಾನವರು ರಾಕ್ಷಸರಾಗುವುದೂ ಬೇಡ.

ರಾವಣನೋ, ಬಾಣನೋ ಇದನ್ನೆಲ್ಲ ಕಲಿತುಕೊಂಡೇ ದೇಶ ಹಾಳುಮಾಡಲು ಯತ್ನಿಸಿದ್ದು. ಈ ಸಾಧನೆಯಿಂದ ತೀವ್ರಶಕ್ತಿ ಸಂಗ್ರಹವಾಗುತ್ತದೆ. ಆಗ ಕೆಟ್ಟದರತ್ತವೇ ಕೊಂಡೊಯ್ಯುತ್ತದೆ. ಕೈಲಾಗದಿದ್ದರೆ ಸುಮ್ಮನಿರುತ್ತಾರೆ. ಕೈಲಾದರೆ ಒಂದು ಕೈ ನೋಡೋಣವೆಂದು ಸಡ್ಡು ಹೊಡೆದು ನಿಲ್ಲುತ್ತಾರೆ. ಅನಾಹುತ ಮಾಡಿಬಿಡುತ್ತಾರೆ; ಈ ಜನ. ಆ ಪ್ರವೃತ್ತಿಯು ಅವರನ್ನು ಮೃತ್ಯುವಿನತ್ತಲೇ ತೆಗೆದುಕೊಂಡು ಹೋಗುತ್ತದೆ. ರಾಕ್ಷಸರೆಲ್ಲ ಸಾವನ್ನು ಬಯಸಿಯೇ ವರವನ್ನು ಕೇಳಿದರು. ಬದುಕುವುದಕ್ಕಾಗುವ ವರವನ್ನು ಯಾರೂ ಕೇಳಲಿಲ್ಲ, ಸಾವನ್ನು ಬಯಸಿಯೇ ವರ ಪಡೆದರು. ಅದು ಮೃತ್ಯುವಿನ ಹಿಂದೆಯೇ ಕೊಂಡೊಯ್ಯುತ್ತದೆ. ನಮ್ಮ ಗುರಿ ಇರುವುದು ಅಮೃತತ್ವದ ಕಡೆಗೆ. ಆದರೆ ರಾಕ್ಷಸರ ಗುರಿಯು ಮೃತ್ಯುವಿನತ್ತ ಹೋಯಿತು. ಏಕೆ ಬೇಕದು? ಅತಿಶಕ್ತನಾದವನು ಹೋಗುವುದು ಮೃತ್ಯುವಿನತ್ತಲೇ! ಅಮೃತತ್ವದ ಕಡೆಗೆ ಆತನ ಮನಸ್ಸು ಎಳೆಯುವುದೇ ಇಲ್ಲ. ಪ್ರಾಪಂಚಿಕ ಮಾಯೆಯು ಒಂದಿಷ್ಟು ಆತನನ್ನು ಆವರಿಸುತ್ತದೆ. ನನ್ನನ್ನು ಕೊಲ್ಲುತ್ತಾರೆ ಎಂಬ ಭಯ ಉತ್ಪತ್ತಿಯಾಗುತ್ತದೆ. ಹಾಗಾಗಿ ಸಾವಿಲ್ಲದ ವರ ಕೇಳುವುದಕ್ಕೆ ಪ್ರಯತ್ನಿಸುತ್ತಾರೆ. ಪ್ರಕೃತಿಯ ನಿಯಮಕ್ಕೆ ವಿರುದ್ಧವಾಗಿ ಸಾವಿಲ್ಲದ ವರವನ್ನು ಪಡೆಯಲು ಬರುವುದಿಲ್ಲ. ಚಿರಂಜೀವಿತ್ವವು ಪ್ರಾಪ್ತವಾಗುವುದೇ ಹೊರತು ವರದಿಂದ ಪಡೆಯುವುದಲ್ಲ. ಹಾಗಾಗಿ ಹಾಗೆ ಕೊಲ್ಲಿ, ಹೀಗೆ ಕೊಲ್ಲಿ ಎಂದು ಒಟ್ಟಾರೆ ಮೃತ್ಯುವಿನ ವರವನ್ನೇ ರಾಕ್ಷಸರೆಲ್ಲ ಬೇಡಿದರು. ಅದೇ ಮಾಯೆ ಆವರಿಸಿತ ಮೂರ್ಖತನ. ವಿಪರೀತ ಶಕ್ತಿಯೇ ರಾಕ್ಷಸತ್ವಕ್ಕೆ ಕಾರಣವಾದದ್ದು.

ಆದ್ಯಂತ ರಹಿತವಾದದ್ದು ಕಾಲ. ಜೀವಿಗಳೂ ಮಹಾಕಾಲನಾದರೆ ಅವೂ ಮಹಾಕಾಲವೇ! ಹೇಗೆ ನಾಶವಾಗುತ್ತವೆ? ಜೀವಿ ಎನ್ನತಕ್ಕಂತಹಾ ಆತ್ಮೈಕ ವಾದವನ್ನು ಹೇಳಿದರೆ ಸಮಸ್ಯೆಯಾಗುತ್ತದೆ. ಆತ್ಮ ಭಿನ್ನತೆಯ ವಾದಕ್ಕೆ ಹೋದರೆ ಆಗ ಮಹಾಕಾಲನನ್ನು ಉಪಾಸಿಸುವಂತಹ ಆತ್ಮವೂ ಮಹಾಕಾಲವೇ ಆಗಿರುತ್ತದೆ. ಎಲ್ಲ ಜಪ, ತಪ, ಅನುಷ್ಠಾನಗಳ ಕೊನೆಯ ಗುರಿಯು ತುರೀಯವಾದ ಸಾಲೋಕ್ಯ, ಸಾರೂಪ್ಯ, ಸಾಮೀಪ್ಯಗಳಲ್ಲಿ ಒಂದು ಮೋಕ್ಷವನ್ನಾದರೂ ಪಡೆಯುವುದು. ಸಾರೂಪ್ಯವೆಂದರೆ ಕಾಲನ ರೂಪದಲ್ಲಿ ಅಸ್ಥಿತ್ವದಲ್ಲಿರುತ್ತದೆ, ಆದರೆ ಪ್ರಾಪಂಚಿಕ ದೃಷ್ಟಿಯಲ್ಲಿ ಇರುವುದಿಲ್ಲ. ಸಾಕ್ಷಾತ್ ಶಿವನೇ ಆದರೆ ಆ ಜೀವಿಗೆ ಪ್ರಾಪಂಚಿಕದಲ್ಲಿ ಪ್ರತ್ಯೇಕ ಅಸ್ಥಿತ್ವ ಬೇಕೇ? ಬೇಕಿಲ್ಲ! ಆತ್ಮೈಕ ವಾದ ಎಂದರೆ ಒಂದು ಆತ್ಮ ಎಂಬ ಸಿದ್ಧಾಂತವಲ್ಲ. ನಾನು ಆತ್ಮ ಎಂಬ ಸಿದ್ಧಾಂತವದು. ಅದು ನಾನು ಎಂಬ ಪ್ರತ್ಯೇಕತೆಯನ್ನು ಬೆಳೆಸುತ್ತಾ ಹೋಗುತ್ತದೆ. ಅದು ಈ ಮೃತ್ಯುವಿಗೆ ಹೆದರುತ್ತದೆ. ಅಂದರೆ ನಾನು ಮೃತ್ಯು ರಹಿತವಾದ ಜೀವನವನ್ನು ಪಡೆಯಬೇಕು ಎಂದು ಪ್ರತ್ಯೇಕವಾಗಿಯೇ ಉಳಿಯುತ್ತದೆ. ಐಕ್ಯತೆಗೆ ಅಪೇಕ್ಷೆ ಪಡುವುದಿಲ್ಲ. ಐಕ್ಯತೆಯಲ್ಲಿ ಮೇಲ್ತಿಳಿಸಿದ ಸಮಸ್ಯೆ ಇಲ್ಲ. ಕಾಲನೊಂದಿಗಿದ್ದರೂ ಪ್ರತ್ಯೇಕತೆಯನ್ನು ಹೊಂದಿರುತ್ತದೆ. ಹಾಗಾಗಿ ಅದನ್ನು ಸಾರೂಪ್ಯ ಎಂದದ್ದು. ಅಂದರೆ ಸಹ ರೂಪವನ್ನು ಪಡೆಯುತ್ತದೆಯೇ ಹೊರತು ಒಂದಾಗುವುದಿಲ್ಲ. ಸಾಲೋಕ್ಯ ಪದವಿಯನ್ನು ಒಂದು ಆತ್ಮ ಪಡೆಯುತ್ತದೆ ಎಂದರೆ ಕೈಲಾಸ ಲೋಕದಲ್ಲಿ ವಾಸದ ಯೋಗ್ಯತೆಯನ್ನು ಪಡೆಯುತ್ತದೆ ಎಂದರ್ಥ. ಅದಕ್ಕೊಂದು ಮಿತಿ ಇರುತ್ತದೆ ಅಥವಾ ಶಿವನದ್ದೇನಾದರೂ ಆಜ್ಞೆ ಇರುತ್ತದೆ. ಇಂತಹಾ ಜಾಗದಲ್ಲಿ ಹುಟ್ಟು ಎಂಬ ನಿರ್ದೇಶನವಿರಬಹುದು. ಹುಟ್ಟಿದ ನಂತರ ಮರೆತು ಹೋಗಬಹುದು. ಆದರೆ ಸಾಧನೆಯಿಂದ ತನ್ನ ಗುರಿ ತಲುಪಿ ಪುನಃ ಶಿವಲೋಕವನ್ನು ಪಡೆಯುತ್ತದೆ. ಇವೆಲ್ಲ ಸೃಷ್ಟಿ, ಸ್ಥಿತಿ, ಲಯದಲ್ಲಿ ಬರುವುದಿಲ್ಲ. ಇವೆಲ್ಲ ತಿರೋಧಾನ ಮತ್ತು ಅನುಗ್ರಹದಲ್ಲಿ ಬರುವಂತಹದ್ದು.


ರಾವಣನೋ ಕುಂಭಕರ್ಣನೋ ಅಥವಾ ಹಿರಣ್ಯಾಕ್ಷ-ಹಿರಣ್ಯಕಶಿಪು ಇವರೂ ಇದೇ ಪ್ರಕ್ರಿಯೆಯಲ್ಲಿ ಜನ್ಮ ಪಡೆದದ್ದು. ಎಲ್ಲರೂ ಅವರನ್ನು ಬೈಕೊಂಡು ಇರುತ್ತಾರೆ. ಆದರೆ ಅವರು ವಿಷ್ಣುವಿನ ಆಜ್ಞೆಯ ಮೇರೆಗೆ ೩ ಜನ್ಮ ಪಡೆದರು. ಆಗ ತಪ್ಪು ಯಾರದ್ದು? ಜಯ ವಿಜಯರು ಬಾಗಿಲು ಕಾಯ್ದುಕೊಂಡು ಇದ್ದರು. ಅಚ್ಚುಕಟ್ಟಾಗಿ ತಮ್ಮ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರು. ಸನಕಾದಿ ಮಕ್ಕಳು ಬಂದಾಗ ಮಕ್ಕಳಿಗೆಲ್ಲ ವೈಕುಂಠದ ಒಳಗೆ ಏನು ಕೆಲಸ ಎಂದು ಒಳಗೆ ಬಿಡಲಿಲ್ಲ. ಅದಕ್ಕೆ ಅವರಿಗೆ ಶಾಪ ಕೊಟ್ಟರು. ಅದನ್ನು ಸರಿಪಡಿಸಲು ವಿಷ್ಣುವು ಅವರಿಗೆ ಇಂತಲ್ಲಿ ಹುಟ್ಟಿ, ಬಂದು ಬಿಡುಗಡೆ ಕೊಡುತ್ತೇನೆ ಎಂದನು. ಅಂದರೆ ವಿವೇಕವಿಲ್ಲದ ವರ್ತನೆಯು ಇಂತಹಾ ಸಮಸ್ಯೆಗೆ ಕಾರಣವಾಯಿತು. ಹಾಗಾಗಿ ಮರ್ತ್ಯರು ರಾವಣಾದಿಗಳನ್ನು ಬೈಯ್ಯುವುದರಲ್ಲಿ ಅರ್ಥವಿಲ್ಲ. ರಾವಣ ಇದ್ದುದ್ದರಿಂದಲೇ ಹರಿಯು ರಾಮಾವತಾರ ಎತ್ತಿ ಬಂದು ನಮಗೆ ಮನಸ್ಸಿಗೆ ಸಂತೋಷ ಕೊಡುವಂತಹಾ ರಾಮಾಯಣದಂತಹಾ ಶ್ರೇಷ್ಠ ಕಾವ್ಯ ದೊರಕುವಂತಾಯಿತು. ಏಕಚಕ್ರಾಧಿಪತ್ಯ ಸ್ಥಾಪನೆ ಮಾಡಲು ಶ್ರಮಿಸಿದನು. ರಾವಣನನ್ನು ರಾಕ್ಷಸ ಎಂದು ಮೂಲ ಸಾಹಿತ್ಯದಲ್ಲಿ ಹೇಳಿಲ್ಲ. ರಾವಣನೊಬ್ಬ ಸಮರ್ಥ, ಬ್ರಾಹ್ಮಣ, ಚತುರ್ವೇದ ಪಾರಂಗತ, ರಾವಣೇಶ್ವರ ಎಂದೇ ಇತ್ತು. ಕಡೆಗೆ ಪುರಾಣದಲ್ಲಿ ವಿಶ್ಲೇಷಣೆಗಳಲ್ಲಿ ರಾಕ್ಷಸ ಎಂದು ಬಿಂಬಿಸಿದರು. ಆದರೆ ರಾವಣನು ನಮ್ಮಂತಹಾ ಮರ್ತ್ಯರ ಸುದ್ದಿಗೇ ಬಂದಿಲ್ಲ. ಆತನು ೫೦ ಲಕ್ಷ ವರ್ಷ ಪ್ರಪಂಚವನ್ನು ಏಕಚಕ್ರಾಧಿಪತ್ಯದಲ್ಲಿ ಆಳಿಕೊಂಡು ಬದುಕಿದ್ದ. ಆತನಿಗೊಂದು ಇತಿಶ್ರೀ ಹಾಡಲು ಆತನೇ ಹುಡುಕಿಕೊಂಡ ಉಪಾಯವೇ ಸೀತಾಪಹರಣ ಪ್ರಕರಣ. ಆಗ ರಾಮಾವತಾರ. ರಾಮನೇನು ನಮಗೆ ಆಸ್ತಿ ಮನೆ ಮಠ ಮಾಡಿಕೊಟ್ಟಿದ್ದಾನೆಯೇ? ಇಲ್ಲವಲ್ಲ. ಆ ರೀತಿಯ ಪ್ರಾಪಂಚಿಕ ರಾಜವಿಕ ದೃಷ್ಟಿಕೋನದಲ್ಲಿ ಅವರಿಬ್ಬರೂ ಒಂದೇ! ಇನ್ನು ಆಧ್ಯಾತ್ಮಿಕವಾಗಿ ನೋಡಿದರೆ ವಿಷ್ಣುವಿನ ದ್ವಾರಪಾಲಕರೇ ಆಗಿದ್ದ ರಾವಣ ಕುಂಭಕರ್‍ಣರು ವಿಷ್ಣುವನ್ನೇ ಸೇರಿದರು. ವಿಷ್ಣುವು ಯಾರನ್ನೇ ಲಯಗೊಳಿಸುವ ಸಲುವಾಗಿ ಅವತಾರ ಎತ್ತಬೇಕಾದರೆ ಅಲ್ಲಿ ರುದ್ರಾಂಶ ಸಂಯೋಜನೆ ಆಗಲೇಬೇಕು. ಇಲ್ಲದಿದ್ದರೆ ಸ್ಥಿತಿ ಸ್ಥಾಪಕತ್ವ ಮಾತ್ರವಿರುತ್ತದೆಯೇ ಹೊರತು ರಾಕ್ಷಸಾದಿಗಳ ಅಂತ್ಯ ಸಾಧ್ಯವಿಲ್ಲ. ಹಾಗಾಗಿ ದಶಾವತಾರಗಳೆಲ್ಲದರಲ್ಲೂ ಹರಿ+ಹರ ಸಂಯೋಗವಿರುವುದು ಅಕ್ಷರಶಃ ಸತ್ಯ.  ನಮ್ಮಯ ಋಣ ಕರ್ಮಗಳೇನಿವೆಯೋ ಅದಕ್ಕನುಗುಣವಾಗಿ ನಮಗೆ ಪ್ರಾಪ್ತಗಳು ನಿರ್ಣಯವಾಗುತ್ತದೆ. ಈ ಎಲ್ಲಾ ಪ್ರಕರಣಗಳ ಮೂಲದಲ್ಲಿರುವುದು ವೇದ ಮಂತ್ರವಾದ ಓಂ ನಮೋ ಭಗವತೇ ರುದ್ರಾಯ ಎಂಬಲ್ಲಿಂದ ಹೊರಟ ರುದ್ರೋಪಾಸನೆ. ರುದ್ರೋಪಾಸನೆಯ ಮೂಲಕ ಶಿವನು ಬೇಗ ಒಲಿಯುತ್ತಾನೆ. ಆದರೆ ತಪ್ಪಿ ನಡೆದರೆ ಶಿಕ್ಷಿಸುವ ಕೊಂಡಿಯನ್ನೂ ಇಟ್ಟಿರುತ್ತಾನೆ ಎಂಬುದನ್ನು ಮರೆಯಬಾರದು ಎಂದು ಎಚ್ಚರಿಸಲಾಗಿದೆ. 

ನೀಲಾಂಬರದೊಳು ಹೊಳೆಯುವ ನಕ್ಷತ್ರ
ಮಾಲಿನ್ಯವಾಗದವರೆಗೆ |
ಶೀಲ ವ್ರತಂಗಳೊಳು ಬಾಳ್ದು ಜನರೆಲ್ಲ
ಕಾಲನ ಜಯಿಸಲೆತ್ನಿಸಲಿ || ಸಿರಿಭೂವಲಯ ||

- ಬ್ರಹ್ಮ ಋಷಿ ಕೆ.ಎಸ್. ನಿತ್ಯಾನಂದರು

No comments:

Post a Comment

Note: only a member of this blog may post a comment.