Tuesday, 29 January 2019

ಪ್ರಜಾತನ್ತುವಿತಾನವಿಜ್ಞಾನೋಪನಿಷತ್: ‘ಯೇಽ ರ್ವಾಞ್ಚಸ್ತಾँ ಉ ಪರಾಚಃ (೩೬)

೩೬. ‘ಯೇಽ ರ್ವಾಞ್ಚಸ್ತಾ  ಪರಾಚಃ ()’

೮- ಯೇ ಅರ್ವಾಞ್ಚಸ್ತಾ ಉ ಪರಾಚ ಆಹುರ್ಯೇ ಪರಾಞ್ಚನ್ತಾ ಉ ಅರ್ವಾಚ ಆಹುಃ |
ಇನ್ದ್ರಶ್ಚ ಯಾ ಚಕ್ರಥುಃ ಸೋಮ ತಾನಿ ಧುರಾ ನಯುಕ್ತಾ ರಜಸೋ ವಹನ್ತಿ || ಋ ೧-೧೬೪-೧೯ ||

ಪುತ್ರ-ಪೌತ್ರ-ಪ್ರಪೌತ್ರಾದಿ ಅವರ ಪ್ರಜಾವರ್ಗವು ಹೇಳುವುದಕ್ಕಾಗಿ ‘ಅವರ’ ಆಗಿದ್ದಾರೆ. ಆದರೆ ಸಾಪಿಣ್ಡ್ಯ ಸೃಷ್ಟಿಯಿಂದ ಇವರ ಶುಕ್ರದಲ್ಲಿ ಪ್ರತಿಷ್ಠಿತ ಪಿತೃಸಹಗಳ ಚಿಂತನೆ ಮಾಡಿದರೆ, ಈ ಅರ್ವಾಞ್ಚಃ ಪುತ್ರಾದಿಗಳು ಪರಾಞ್ಚಃ ಎಂದೇ ಒಪ್ಪಬೇಕಾಗುತ್ತದೆ. ಪಿತಾ-ಪಿತಾಮಹಾದಿಗಳು ಪರಾಞ್ಚಃ ಆಗಿದ್ದಾರೆ. ಇವರುಗಳ ಸಹೋಭಾಗಗಳನ್ನು ಋಣರೂಪದಿಂದ ಆದಾನ (ಗ್ರಹಣ) ಮಾಡಿಯೇ ಈ ಪುತ್ರಾದಿಗಳೆಂಬ ಅರ್ವಾಞ್ಚರ ಸ್ವರೂಪ-ನಿಷ್ಪತ್ತಿಯಾಗಿದೆ. ಈ ಋಣದ ಸಮ್ಬನ್ಧದಿಂದ ಅರ್ವಾಞ್ಚಃ ಪುತ್ರಾದಿಗಳನ್ನು ಅವಶ್ಯವಾಗಿ ಪರಾಞ್ಚಃ ಎಂದು ಕರೆಯಬಹುದು. ಹಾಗೇ ಚನ್ದ್ರಲೋಕಗತ ಪಿತಾ-ಪಿತಾಮಹಾದಿ ಪರ ಪ್ರಜಾವರ್ಗವು ಹೇಗಿದ್ದರೂ ಪರಾಞ್ಚಃ ಎಂದು ಕರೆಯಿಸಿಕೊಂಡಿದ್ದಾರೆ. ಆದರೆ ಪೃಥಿವೀ-ಲೋಕಸ್ಥ ಪುತ್ರಾದಿಗಳಲ್ಲಿ ಸಮರ್ಪಿತ ತಮ್ಮ ಸಹೋಭಾಗಗಳ ದೃಷ್ಟಿಯಿಂದ ಇವರು ಅರ್ವಾಞ್ಚರೇ ಆಗಿದ್ದಾರೆ. ಪುತ್ರಾದಿಗಳಲ್ಲಿ ಇದೇ ಪರಾಞ್ಚಃ ಎಂಬವರ ಋಣಭಾಗವು ಪ್ರತಿಷ್ಠಿತವಾಗಿದೆ. ಆದ್ದರಿಂದಲೇ ಇವರು ಶ್ರಾದ್ಧಪಕ್ಷದಲ್ಲಿ ಅರ್ವಾಞ್ಚಃ ಎಂದಾಗುತ್ತಾರೆ. ಈ ರೀತಿ ಅರ್ವಾಞ್ಚಃ ಪುತ್ರಾದಿಗಳಿಗೆ ಋಣ ಆದಾನದಿಂದ ಪರಾಞ್ಚಃ ಆಗುತ್ತಿದ್ದಾರೆ ಹಾಗೂ ಪರಾಞ್ಚಃ ಪಿತಾದಿಗಳಾಗಿ ಋಣಪ್ರದಾನದಿಂದ ಅರ್ವಾಞ್ಚಃ ಕೂಡ ಆಗುತ್ತಿದ್ದಾರೆ. ಪುತ್ರಾದಿಗಳು ಪಿತರಭಾಗಗಳಿಂದ ಯುಕ್ತರಾಗಿದ್ದು ಪಿತಾದಿಗಳಾಗುತ್ತಿದ್ದಾರೆ, ಹಾಗೂ ಪಿತಾದಿಗಳು ಪುತ್ರರಲ್ಲಿ ಅನ್ಯ ಕಲೆಗಳನ್ನು ಸಮರ್ಪಿತಗೊಳಿಸುತ್ತಾ ಪುತ್ರಾದಿಗಳಾಗುತ್ತಿದ್ದಾರೆ.

The chart below (courtesy Dimario, Wikimedia Commons) shows the average amount of autosomal DNA inherited by all close relations up to the third cousin level.

ಇನ್ನೊಂದು ದೃಷ್ಟಿಯಿಂದ ಸಮನ್ವಯ ಮಾಡೋಣ. ಸರ್ವಸಾಧಾರಣವಾಗಿ ಪ್ರಸಿದ್ಧವಾಗಿರುವುದೇನೆಂದರೆ, ಪಿತಾ-ಪಿತಾಮಹಾದಿಗಳು ಪರಾಞ್ಚಃರೆಂದು. ಆದರೆ ವಾಸ್ತವವಾಗಿ ಈ ಪಿತಾ-ಪಿತಾಮಹಾದಿಗಳು ತಮ್ಮ ಸಹೋಭಾಗಗಳನ್ನು ಪುತ್ರಾದಿಗಳಿಗೆ ಪ್ರದಾನ ಮಾಡುವುದರಿಂದ ಪುತ್ರಾದಿ ರೂಪದಿಂದ ಪೃಥಿವಿಯಲ್ಲಿ ಪ್ರತಿಷ್ಠಿತರಾಗಿರುತ್ತಾ ಅರ್ವಾಞ್ಚಃ ಎಂದೇ ಒಪ್ಪಲ್ಪಡುತ್ತಾರೆ. ಈ ರೀತಿ ಪುತ್ರಾದಿಗಳಲ್ಲಿ ಭುಕ್ತಿ ಆಗುವುದರಿಂದ ವಸ್ತುತಃ ಅರ್ವಾಞ್ಚಃ ಆಗಿರುವ ಪಿತಾ-ಪಿತಾಮಹಾದಿಗಳನ್ನು ಲೋಕದಲ್ಲಿ ‘ಪರಾಞ್ಚಃ’ ಎಂದು ಕರೆಯಲಾಗುತ್ತಿದೆ. ಹಾಗೇ ಪುತ್ರಾದಿಗಳನ್ನು ಲೋಕವ್ಯವಹಾರದಲ್ಲಿ ‘ಅರ್ವಾಞ್ಚಃ’ ಎಂದು ಕರೆಯಲಾಗುತ್ತಿದೆ. ಆದರೆ ವಸ್ತುತಃ ಈ ಪುತ್ರ-ಪೌತ್ರಾದಿಗಳು ತಮ್ಮ ಪಿತಾ-ಪಿತಾಮಹಾದಿರೂಪೀ ಪರಾಞ್ಚರ ಋಣಭಾಗದಿಂದಲೇ ಸ್ವಸ್ವರೂಪದ ನಿರ್ಮ್ಮಾಣ ಮಾಡುವುದರಲ್ಲಿ ಸಮರ್ಥರಾಗಿರುತ್ತಾ ‘ಪರಾಞ್ಚಃ’ ಆಗಿದ್ದಾರೆ. ಈ ರೀತಿ ಪಿತಾ-ಪಿತಾಮಹಾದಿಗಳ ಪರಾಞ್ಚಃ ಭಾಗಗಳ ಭುಕ್ತಿಯಿಂದ ವಸ್ತುತಃ ಪರಾಞ್ಚಃ ಆಗಿರುವ ಪುತ್ರ-ಪೌತ್ರಾದಿಗಳನ್ನು ಲೋಕದಲ್ಲಿ ಅರ್ವಾಞ್ಚಃ ಎಂದು ಕರೆಯಲಾಗುತ್ತಿದೆ.ವಿಷಯವು ಯಥಾರ್ಥದಲ್ಲಿ ಏನೆಂದರೆ, ಯಾವ ರೀತಿ ರಥಚಕ್ರವು ತಿರುಗುತ್ತಾ ಅರ್ವಾಞ್ಚಃ-ಪರಾಞ್ಚಃ ಭಾವಗಳಿಂದ ಬದಲಾಗುತ್ತಾ ಇರುತ್ತದೆಯೋ, ಒಮ್ಮೆ ಮೇಲಿನ ಚಕ್ರವು ಕೆಳಗೆ ಬರುತ್ತದೆ, ಮತ್ತೊಮ್ಮೆ ಕೆಳಗಿನ ಚಕ್ರವು ಮೇಲಕ್ಕೆ ಹೋಗುತ್ತದೆ, ಇದೇ ರೀತಿ ಚನ್ದ್ರಗತಿಯ ಅಪೇಕ್ಷೆಯಿಂದ ಅರ್ವಾಞ್ಚಃ ಧುರ ಭಾಗವು ಕೆಲವೊಮ್ಮೆ ಪರಾಞ್ಚಃ ಆದರೆ, ಪರಾಞ್ಚಃ ಭಾಗವು ಅರ್ವಾಞ್ಚಃ ಆಗುತ್ತವೆ. ಹಾಗೇ ಇನ್ದ್ರಲಕ್ಷಣ ಆತ್ಮನಾಭಿಯಲ್ಲಿ ಪ್ರತಿಷ್ಠಿತ ಸೋಮಾತ್ಮಕ ಸಹೋಭಾಗಗಳಿಂದ ನಿಷ್ಪನ್ನವಾದಂತಹಾ ಈ ಸನ್ತಾನಚಕ್ರವು ಅರ್ವಾಞ್ಚಃದಿಂದ ಪರಾಞ್ಚಃ ರೂಪದಲ್ಲಿ, ಪರಾಞ್ಚಃದಿಂದ ಅರ್ವಾಞ್ಚಃ ರೂಪದಲ್ಲಿ ಪರಿಣತವಾಗುತ್ತಿರುತ್ತದೆ.


ಇಂತು ಸಜ್ಜನ ವಿಧೇಯ,

ಹೇಮಂತ್ ಕುಮಾರ್ ಜಿ.

Tuesday, 22 January 2019

ಪ್ರಜಾತನ್ತುವಿತಾನವಿಜ್ಞಾನೋಪನಿಷತ್: 'ಅವಃ ಪರೇಣ ಪರ ಏನಾವರೇಣ' ಹಾಗೂ ‘ಅವಃ ಪರೇಣ ಪಿತರಮ್’ (೩೪-೩೫)

೩೪. ‘ಅವಃ ಪರೇಣ ಪರ ಏನಾವರೇಣ ()’

೬- ಅವಃ ಪರೇಣ ಪರ ಏನಾವರೇಣ ಪದಾ ವತ್ಸಂ ವಿಭ್ರತೀ ಗೌರುದಸ್ಥಾತ್ |
ಸಾ ಕದ್ರೀಚೀ ಕಂತ್ಸ್ವಿದರ್ಧ ಪರಾಗಾತ್ ಕ್ವಾಚಿತ್ಸೂತೇ ನ ಹಿ ಯೂಥೇ ಅನ್ತಃ || ಋ ೧-೧೬೪-೧೭ ||

ಮಂತ್ರದ ಅರ್ಥ ಮಾಡುತ್ತಾ ಸಾಯಣಾಚಾರ್ಯರು ಹೇಳುತ್ತಾರೆ, ‘ಅತ್ರಾಗ್ನೌ ಹೂಯಮಾನಾಹುತಿರ್ಗೌರೂಪೇಣ ಸ್ತೂಯತೇ’ | ಸಾಯಣಾಚಾರ್ಯರ ಅಭಿಪ್ರಾಯ ಏನೆಂದರೆ, ವೈಧಯಜ್ಞದಲ್ಲಿ ಆಹವನೀಯ ಅಗ್ನಿಯಲ್ಲಿ ಯಾವ ವಲ್ಲಿಯಾದ ಸೋಮದ ಆಹುತಿಯು ಕೊಡಲ್ಪಡುತ್ತದೆಯೋ, ಅದು ಗೌರೂಪ (ರಶ್ಮಿರೂಪ)ದಲ್ಲಿ ಪರಿಣತವಾಗುತ್ತದೆ. ಇದೇ ಮಂತ್ರದ ಆಧಿಭೌತಿಕ ಸಮನ್ವಯವಾಗಿದೆ. ಆಧಿದೈವಿಕ ಸಮನ್ವಯದ ದೃಷ್ಟಿಯಿಂದ ಸೂರ್ಯ್ಯವು ಆಹವನೀಯ ಆಗಿದೆ, ಪಾರಮೇಷ್ಠ್ಯ ಸೋಮವು ಆಹುತಿಯ ದ್ರವ್ಯವಾಗಿದೆ. ‘ತ್ವಂ ಜ್ಯೋತಿಷಾ ವಿ ತಮೋ ವವರ್ಥ’ ಇತ್ಯಾದಿ ಋಗ್ವರ್ಣನೆಯ ಅನುಸಾರ ಸೌರಸಾವಿತ್ರಾಗ್ನಿಯಲ್ಲಿ ಹುತವಾಗುವ ಈ ಪಾರಮೇಷ್ಠ್ಯ ಸೋಮವೇ ರಶ್ಮಿರೂಪೀ ಸಪ್ತ ಗೌ-ರೂಪದಲ್ಲಿ ಪರಿಣತವಾಗುತ್ತಾ ಪ್ರಕಾಶರೂಪದಲ್ಲಿ ಪರಿಣತವಾಗುತ್ತಿರುತ್ತದೆ. ನಮಗೆ ಪ್ರಕೃತಿಯಲ್ಲಿ ಆಧ್ಯಾತ್ಮಿಕ ದೃಷ್ಟಿಯಿಂದಲೇ ಮಂತ್ರದ ಸಮನ್ವಯ ಮಾಡಬೇಕಾಗಿದೆ.

ಮಾತೃಗರ್ಭಾಶಯಸ್ಥಿತ ಶೋಣಿತಾಗ್ನಿಯು ಅಗ್ನಿಯಾಗಿದೆ, ಪಿತುಃಶುಕ್ರಸ್ಥ ಸೋಮವು ಸೋಮವಾಗಿದೆ. ಈ ಸೌಮ್ಯ ಶುಕ್ರದ ಆ ಶೋಣಿತಾಗ್ನಿಯಲ್ಲಿ ಆಹುತಿಯಾಗುತ್ತದೆ. ಈ ಆಹುತಿಯಿಂದ ಆಹುತ ಸೋಮವು ಶೋಣಿತಾಗ್ನಿಯ ಸಮನ್ವಯದಿಂದ ಗೌರೂಪದಲ್ಲಿ ಪರಿಣತವಾಗುತ್ತದೆ. ಈ ಆಧ್ಯಾತ್ಮಿಕ ರಶ್ಮಿಭಾವದಿಂದ ಈ ಸೋಮದ ಮೇಲೆ ‘ಅವರ’ವು, ಎರಡು ಭಾವಗಳಲ್ಲಿ ವಿತತವಾಗುತ್ತದೆ. ಗರ್ಭಸ್ಥಿತ ಗರ್ಭಿಯು ವತ್ಸವಾಗಿದೆ. ಪುತ್ರರೂಪೀ ಬೀಜಿಯಲ್ಲಿ ಪಿತಾ-ಪಿತಾಮಹಾದಿ ೬ ಪೀಳಿಗೆಗಳೊಂದಿಗೆ ಮೇಲಕ್ಕೆ ಸಮ್ಬಧವಿರುತ್ತದೆ, ಹಾಗೂ ಸ್ವಯಂ ಇದರ ಸೋಮಸಹಗಳು ಈತನ ಪುತ್ರ-ಪೌತ್ರಾದಿ ೬ ಪೀಳಿಗೆಗಳ ಪರ್ಯ್ಯನ್ತ ವಿತಾನವಾಗುತ್ತದೆ. ಪ್ರತ್ಯೇಕ ಪುತ್ರನು ಈ ರಶ್ಮಿಭಾವಾತ್ಮಕ ಸಾಪಿಣ್ಡ್ಯಭಾವದಿಂದ ೬ ಪರಭಾವಗಳಿಂದ, ೬ ಅವರಭಾವಗಳಿಂದ ಯುಕ್ತವಾಗಿರುತ್ತದೆ. ಈ ರಶ್ಮಿರೂಪೀ ಸೋಮಗವಿ ಪುತ್ರನ ನಿಧನವಾದಾಗ ಅಂಶತಃ ಎಲ್ಲಿಗೆ ಹೋಗಿಬಿಡುತ್ತದೆ? ಎಲ್ಲಿ ತನ್ನ ಅಂಶವನ್ನು ಸಮರ್ಪಣೆ ಮಾಡಿಬಿಡುತ್ತದೆ? ಇದು ಪರೋಕ್ಷ ವಿಷಯವಾಗಿದೆ, ಇನ್ದ್ರಿಯಾತೀತ ವಿಷಯವಾಗಿದೆ, ಇದೇ ಭಾವವನ್ನು ವ್ಯಕ್ತಗೊಳಿಸುವುದಕ್ಕಾಗಿ ‘ಕದ್ರೀಚೀ’ ಎಂಬ ಶಬ್ದವು ಪ್ರಯುಕ್ತವಾಗಿದೆ. ಸಾಪಿಣ್ಡ್ಯದೊಂದಿಗೆ ಸಮ್ಬನ್ಧವುಳ್ಳ ಈ ತನ್ತುಯೂಥದ ವಿಸ್ತಾರದ ಬಗ್ಗೆ ವಿಚಾರ ಮಾಡಲಾಗಿ, ನಾವು ಆಶ್ಚರ್ಯಚಕಿತರಾಗುತ್ತೇವೆ. ಎಲ್ಲಿಂದ ಈ ಸನ್ತಾನ ಪರಮ್ಪರೆಯು ಉಪಕ್ರಮವಾಯಿತು?, ಎಲ್ಲಿ ಇದರ ಅವಸಾನವಾಗುತ್ತದೆ?, ಸಾಪಿಣ್ಡ್ಯಭಾವವು ಆರಮ್ಭಿಸಿದಂತಹಾ ಆ ಮೂಲಪುರುಷ ಯಾರು?, ಸಾಪಿಣ್ಡ್ಯಭಾವದ ಆತ್ಯನ್ತಿಕ ವಿಶ್ರಾಮವಾಗುವ ಸ್ಥಾನವಾದ ಆ ಅಂತಿಮ ವೃದ್ಧಾತಿವೃದ್ಧಪ್ರಪೌತ್ರನು ಯಾರು?, ಸೃಷ್ಟಿಗರ್ಭದಲ್ಲಿ ಈ ಪ್ರಶ್ನೆಗಳನ್ನು ಇದಮಿತ್ಥಂ ಆಗಿ ನಿರ್ಧರಿಸುವುದು ಅಸಮ್ಭವ. ಇದನ್ನೇ ‘ಕೋ ದದರ್ಶ ಪ್ರಥಮಂ ಜಾಯಮಾನಮ್’ ಇತ್ಯಾದಿ ಮನ್ತ್ರಾರ್ಥ ಪ್ರಕರಣದಲ್ಲಿ ಹೇಳಿಯಾಗಿದೆ. ಸಾಪಿಣ್ಡ್ಯಭಾವಾನುಗತ ಇದೇ ತನ್ತು-ಆನನ್ತ್ಯದ ಶ್ರುತಿಯು – ಕ್ವಸ್ವಿತ್ ಸೂತೇ ನಹಿ ಯೂಥೇ ಅನ್ತಃ’ ಎಂಬ ಶಬ್ದಗಳಲ್ಲಿ ಅಭಿನಯಗೊಂಡಿದೆ.

೩೫. ‘ಅವಃ ಪರೇಣ ಪಿತರಮ್ ()’

೭- ಅವಃ ಪರೇಣ ಪಿತರಂ ಯೋ ಅಸ್ಯಾನುವೇದ ಪರ ಏನಾವರೇಣ |
ಕವೀಯಮಾನಃ ಕ ಇಹ ಪ್ರವೋಚದ್ದೇವಂ ಮನಃ ಕುತೋ ಅಧಿಪ್ರಜಾತಮ್ || ಋ ೧-೧೬೪-೧೮ ||

ಪಿತೃಪರಮ್ಪರೆಯೊಂದಿಗೆ ಸಮ್ಬದ್ಧ ಪರ-ಭಾವ, ಪುತ್ರಪರಮ್ಪರೆಯೊಂದಿಗೆ ಸಮ್ಬದ್ಧ ಅವ-ಭಾವ, ಎರಡರ ಇದೇ ಆನನ್ತ್ಯದ ಬಗ್ಗೆ ಇತರೆ ಶಬ್ದಗಳಲ್ಲಿ ಅಭಿನಯಗೊಳಿಸುತ್ತಾ ದೀರ್ಘತಮರು ಹೇಳುತ್ತಾರೆ, ಪುತ್ರ-ಪೌತ್ರಾದಿಗಳಲ್ಲಿ ಸ್ಥಿತ ಪಿತರವನ್ನು (ಪಿತೃ ಸಹಃ ಕಲೆಗಳನ್ನು) ಪಿತಾ-ಪಿತಾಮಹಾದಿಗಳೊಂದಿಗೆ ಯುಕ್ತ, ಹಾಗೂ ಪಿತಾ-ಪಿತಾಮಹಾದಿಗಳನ್ನು ಪುತ್ರ-ಪೌತ್ರಾದಿಗಳೊಂದಿಗೆ ಯುಕ್ತ, ಈ ರೀತಿ ಅವ-ಸ್ಥಾನೀಯ ಪುತ್ರಾದಿಗಳ ಪರ-ಸ್ಥಾನೀಯ ಪಿತಾದಿಗಳೊಂದಿಗೆ, ಹಾಗೂ ಪರ-ಸ್ಥಾನೀಯ ಪಿತಾದಿಗಳ ಅವ-ಸ್ಥಾನೀಯ (ಅವರ-ಸ್ಥಾನೀಯ) ಪುತ್ರಾದಿಗಳೊಂದಿಗೆ ಯಾವ ಸ್ವಾಭಾವಿಕ ತನ್ತು-ವಿತಾನ ಸಮ್ಬನ್ಧವಿದೆಯೋ, ಅದನ್ನು ಯಾವ ವಿದ್ವಾಂಸನು ತಿಳಿದಿದ್ದಾನೆಯೋ, ಅಂತಹಾ ವಿದ್ವಾಂಸನು ದುರ್ಲಭನು. ಇಂದಿನವರೆಗೆ ಪರೋಕ್ಷ ಅವರ-ಪರ, ಪರ-ಅವರ ಸಮ್ಬನ್ಧವನ್ನು ಕಂಡಂತಹಾ ಮತ್ತು ಕಂಡು ನಮಗೆ ವಿವರಿಸಿದಂತಹಾ ಎಷ್ಟು ವಿದ್ವಾಂಸರು ಆಗಿದ್ದಾರೆ? ಜೊತೆಗೆ ಯಾವ ಮೂಲದಿಂದ ಈ ಸಮ್ಬನ್ಧ ಸೂತ್ರವು ಆರಮ್ಭವಾಗಿದೆ?, ಎಲ್ಲಿ ಅವಸಾನವಾಗುತ್ತದೆ?, ಇವೆಲ್ಲಾ ವಿಷಯಗಳು ಸರ್ವಸಾಧಾರಣವಾಗಿ ದುರಧಿಗಮ್ಯವಾಗಿವೆ.


ಇಂತು ಸಜ್ಜನ ವಿಧೇಯ,

ಹೇಮಂತ್ ಕುಮಾರ್ ಜಿ.

Monday, 21 January 2019

ಪ್ರಜಾತನ್ತುವಿತಾನವಿಜ್ಞಾನೋಪನಿಷತ್: ‘ಸ್ತ್ರಿಯಃ ಸತೀಸ್ತಾँ ಉ ಮೇ ಪುಂಸ’ (೩೩)

೫ – ಸ್ತ್ರಿಯಃ ಸತೀಸ್ತಾँ ಉ ಮೇ ಪುಂಸ ಆಹುಃ ಪದಕ್ಷಣ್ವಾನ್ನವಿಚೇತದನ್ಧಃ |
ಕವಿರ್ಯಃ ಪುತ್ರಃ ಸ ಈಮಾಚಿಕೇತ ಯಸ್ತಾ ವಿಜಾನಾತ್ ಸ ಪಿತುಷ್ಪಿತಾಸತ್ || ಋ ೧-೧೬೪-೧೬ ||

ಅಗ್ನಿತತ್ತ್ವವು ವೃಷಾ ಆಗಿದೆ, ಇದೇ ಪುರುಷವೂ ಆಗಿದೆ. ಸೋಮತತ್ತ್ವವು ಯೋಷಾ ಆಗಿದೆ, ಇದು ಸ್ತ್ರೀ ಆಗಿದೆ. ಪುರುಷನ ಶರೀರದಲ್ಲಿ ಭೂತಾಗ್ನಿ ಪ್ರಧಾನವಾಗಿರುವುದರಿಂದ ವೃಷಾ ಆಗಿದೆ, ಹಾಗಾಗಿ ಶರೀರ ದೃಷ್ಟ್ಯಾ ಪುರುಷನು ‘ಪುರುಷ’ ಎಂದಾಗಿದ್ದಾನೆ. ಸ್ತ್ರೀಯ ಶರೀರದವು ಭೂತಸೋಮ ಪ್ರಧಾನವಾಗಿರುವುದರಿಂದ ಯೋಷಾ ಆಗಿದೆ, ಹಾಗಾಗಿ ಶರೀರ ದೃಷ್ಟ್ಯಾ ಸ್ತ್ರೀಯು ‘ಸ್ತ್ರೀ’ ಎಂದಾಗಿದ್ದಾಳೆ. ಪುರುಷನ ಶರೀರವು ಆಗ್ನೇಯವಾಗಿದೆ, ಹಾಗಾಗಿ ಅದು ಪುರುಷವಾಗಿದೆ. ಸ್ತ್ರೀಯ ಶರೀರವು ಸೌಮ್ಯವಾಗಿದೆ, ಹಾಗಾಗಿ ಅದು ಸ್ತ್ರೀಯಾಗಿದೆ. ಹಾಗೂ ಈ ಭೂತಾಗ್ನಿ, ಭೂತಸೋಮದೊಂದಿಗೆ ಸಮ್ಬದ್ಧ ಶರೀರಗಳ ದೃಷ್ಟಿಯಿಂದ ಪುರುಷನಿಗೆ ಪುರುಷನೆಂದು ಕರೆಯುವುದು, ಸ್ತ್ರೀಗೆ ಸ್ತ್ರೀ ಎಂದು ಕರೆಯುವುದು ಯಥಾರ್ಥವಾಗಿರುತ್ತದೆ. ಆದರೆ ಪ್ರತಿಷ್ಠಾಗ್ನಿ, ಹಾಗೂ ಪ್ರತಿಷ್ಠಾಸೋಮದ ದೃಷ್ಟಿಯಿಂದ ಚಿಂತನೆ ಮಾಡಿದರೆ, ಪುರುಷನು ವಾಸ್ತವದಲ್ಲಿ ಸ್ತ್ರೀಯೇ ಆಗಿದ್ದಾನೆ ಹಾಗೂ ಸ್ತ್ರೀಯು ವಾಸ್ತವದಲ್ಲಿ ಪುರುಷನೇ ಆಗಿದ್ದಾಳೆ ಎಂದು ಒಪ್ಪಲೇಬೇಕಾಗುತ್ತದೆ. ಪುರುಷನ ಆಗ್ನೇಯ ಶರೀರದ ಪ್ರತಿಷ್ಠಾವು ಶುಕ್ರವೆಂದು ನಂಬಲಾಗಿದೆ. ಶುಕ್ರಸತ್ತೆಯೇ ಪುರುಷ ಸತ್ತೆಯ ಕಾರಣವಾಗಿದೆ. ಶುಕ್ರವು ಸೌಮ್ಯವಾಗಿದೆ. ಸೋಮವು ಉಕ್ತ ಪರಿಭಾಷೆಯ ಅನುಸಾರ ಯೋಷಾ ಸ್ಥಾನೀಯವಾಗುತ್ತಾ ಸ್ತ್ರೀತತ್ತ್ವವೇ ಆಗಿದೆ. ಏಕೆಂದರೆ ಸೌಮ್ಯ ಸ್ತ್ರೀತತ್ತ್ವವು ಶುಕ್ರರೂಪದಿಂದ ಪುರುಷನ ಪ್ರತಿಷ್ಠಾ ಆಗಿದೆ, ಹಾಗೇ ಈ ಶುಕ್ರಪ್ರತಿಷ್ಠಾ ದೃಷ್ಟಿಯಿಂದ ಆಗ್ನೇಯ ಶರೀರಾವಚ್ಛಿನ್ನ ಪುರುಷನನ್ನು ಪುರುಷ ಎಂದು ಕರೆಯದೆ ಸ್ತ್ರೀ ಎಂದೇ ಕರೆಯಲಾಗುತ್ತದೆ. ಇನ್ನೊಂದು ಕಡೆ ಸ್ತ್ರೀಯ ಸೌಮ್ಯ ಶರೀರದ ಪ್ರತಿಷ್ಠಾವು ಶೋಣಿತವೆಂದು ನಂಬಲಾಗಿದೆ. ಶೋಣಿತವು ಆಗ್ನೇಯವಾಗಿದೆ. ಅಗ್ನಿಯು ಉಕ್ತ ಪರಿಭಾಷೆಯ ಅನುಸಾರ ವೃಷಾ ಸ್ಥಾನೀಯವಾಗುತ್ತಾ ಪುರುಷತತ್ತ್ವವಾಗಿದೆ. ಏಕೆಂದರೆ ಆಗ್ನೇಯ ಪುರುಷತತ್ತ್ವವು ಶೋಣಿತರೂಪದಿಂದ ಸ್ತ್ರೀಯ ಪ್ರತಿಷ್ಠಾ ಆಗಿದೆ, ಹಾಗೇ ಈ ಶೋಣಿತ ಪ್ರತಿಷ್ಠಾ ದೃಷ್ಟಿಯಿಂದ ಸೌಮ್ಯಶರೀರಾವಚ್ಛಿನ್ನಾ ಸ್ತ್ರೀಯನ್ನು ಸ್ತ್ರೀ ಎಂದು ಕರೆಯದೆ ಪುರುಷ ಎಂದೇ ಕರೆಯಲಾಗುತ್ತದೆ. ವಿಶೇಷವಾಗಿ ಮಹಾನಾತ್ಮಜನಕ ದಾಮ್ಪತ್ಯಭಾವದ ದೃಷ್ಟಿಯಿಂದ ಇದೇ ವ್ಯವಹಾರವು ಸಮೀಚೀನವೆಂದು ನಂಬಲಾಗಿದೆ. ಏಕೆಂದರೆ ಪುರುಷಶರೀರ-ಸ್ತ್ರೀಶರೀರದ ಮಿಥುನಭಾವದಿಂದ ಗರ್ಭಸ್ಥಿತಿ ಉಂಟಾಗುವುದಿಲ್ಲ. ಆದರೆ ಪೂರ್ವ ಮನ್ತ್ರ ಕಥನಾನುಸಾರ ಆಗ್ನೇಯ ಪುರುಷನ ಸೌಮ್ಯಶುಕ್ರ, ಹಾಗೂ ಸೌಮ್ಯ ಸ್ತ್ರೀಯ ಅಗ್ನೇಯ ಶೋಣಿತದ ಸಮನ್ವಯದಿಂದಲೇ ಗರ್ಭ ಸ್ಥಿತಿ ಉಂಟಾಗುತ್ತದೆ. ಈ ಪ್ರಜನನ ಕರ್ಮ್ಮದ ದೃಷ್ಟಿಯಿಂದ ಪುರುಷ ಶುಕ್ರಾವಚ್ಛೇದದಿಂದ ಸ್ತ್ರೀ ಆಗಿದ್ದು, ಇದನ್ನು ಶರೀರ ದೃಷ್ಟಿಯಿಂದ ನಾವು ಪುರುಷವೆಂದು ಕರೆಯುತ್ತೇವೆ. ಸ್ತ್ರೀ ಶೋಣಿತಾವಚ್ಛೇದದಿಂದ ಪುರುಷ ಆಗಿದ್ದು, ಇದನ್ನು ಶರೀರ ದೃಷ್ಟಿಯಿಂದ ನಾವು ಸ್ತ್ರೀ ಎಂದು ಕರೆಯುತ್ತೇವೆ. ಇದೇ ಮಧ್ಯಮ ದೃಷ್ಟಿಯನ್ನು ಲಕ್ಷ್ಯದಲ್ಲಿಟ್ಟುಕೊಂಡು ಋಷಿಗಳು ಹೇಳಿದ್ದೆ – “ಸ್ತ್ರಿಯಃ ಸತೀಸ್ತಾ ಉ ಮೇ ಪುಂಸ ಆಹುಃ”.

ಯಾವ ರೀತಿ ಆಗ್ನೇಯ ಪುರುಷಶರೀರ ಹಾಗೂ ಸೌಮ್ಯ ಸ್ತ್ರೀಶರೀರರೂಪೀ ಪುರುಷ-ಸ್ತ್ರೀಗಳ ಪ್ರಥಮ ಯುಗ್ಮವು ಗರ್ಭಸ್ಥಿತಿಯ ಕಾರಣವಲ್ಲವೋ, ಅದೇ ರೀತಿ ಪುರುಷನ ಸೌಮ್ಯಶುಕ್ರರೂಪೀ ಸ್ತ್ರೀತತ್ತ್ವವು, ಸ್ತ್ರೀಯ ಆಗ್ನೇಯ ಶೋಣಿತರೂಪೀ ಪುರುಷತತ್ತ್ವವು, ಸ್ತ್ರೀ-ಪುರುಷರ (ಯಾವುದನ್ನು ಲೋಕವ್ಯವಹಾರದಲ್ಲಿ ಶರೀರ ದೃಷ್ಟಿಯಿಂದ ಪುರುಷ ಸ್ತ್ರೀಯ) ಯುಗ್ಮ ಎಂದು ಹೇಳಲಾಗುತ್ತದೆಯೋ, ವಾಸ್ತವವಾಗಿ ಈ ದ್ವೀತೀಯ ಯುಗ್ಮದಿಂದಲೂ ಗರ್ಭಸ್ಥಿತಿ ಉಂಟಾಗುವುದಿಲ್ಲ. ಆದರೆ ಮೂರನೆಯದಾದ ‘ಯೋಷಾ-ವೃಷಾ’ ಎಂಬುದರ ಯುಗ್ಮದಿಂದ ಪ್ರಜನನಕರ್ಮ್ಮವು ಸಮ್ಪನ್ನವಾಗುತ್ತದೆ, ಇದನ್ನು ಶ್ರುತಿಯು ‘ಕವಿಪುತ್ರ’ ಎಂದಿದೆ. ಶುಕ್ರವು ಸೌಮ್ಯವಾಗಿದೆ, ಈ ದೃಷ್ಟಿಯಿಂದ ಪುರುಷನು ಸ್ತ್ರೀ ಆಗಿದ್ದಾನೆ, ಎಂದು ನಂಬೋಣ. ಆದರೆ ಸೌಮ್ಯ ಶುಕ್ರದ  ಗರ್ಭದಲ್ಲಿ ಪ್ರತಿಷ್ಠಿತವಾಗಿರುವ ‘ಪುಂಭ್ರೂಣ’ವು ಆಗ್ನೇಯ ವೃಷಾಪ್ರಾಣಪ್ರಧಾನವಾಗಿದೆ, ಇದೇ ಶುಕ್ರದ ಪ್ರತಿಷ್ಠಾ ಆಗಿದೆ. ಯಾವ ರೀತಿ ಶರೀರಪ್ರತಿಷ್ಠಾ-ದೃಷ್ಟಿಯಿಂದ ಪುರುಷನು ಸ್ತ್ರೀ ಎಂದು ಕರೆಯಲ್ಪಟ್ಟಿದೆಯೋ, ಅದೇ ಶುಕ್ರದ ಪ್ರತಿಷ್ಠಾ ದೃಷ್ಟಿಯಿಂದ ಇದನ್ನು ‘ಪುರುಷ’ ಎಂದು ಕರೆಯುವುದು ನ್ಯಾಯಸಙ್ಗತವಾಗಬಹುದು. ಶೋಣಿತವು ಆಗ್ನೇಯವಾಗಿದೆ, ಹಾಗೂ ಈ ದೃಷ್ಟಿಯಿಂದ ಸ್ತ್ರೀಯು ಪುರುಷ ಆಗಿದ್ದಾಳೆ, ಎಂದೂ ನಂಬೋಣ. ಆದರೆ ಆಗ್ನೇಯ ಶೋಣಿತದ ಗರ್ಭದಲ್ಲಿ ಪ್ರತಿಷ್ಠಿತವಾಗಿರುವ ‘ಸ್ತ್ರೀಭ್ರೂಣ’ವು ಸೌಮ್ಯಯೋಷಾಪ್ರಾಣಪ್ರಧಾನವಾಗಿದೆ, ಇದೇ ಶೋಣಿತದ ಪ್ರತಿಷ್ಠಾ ಆಗಿದೆ. ಯಾವ ರೀತಿ ಶರೀರಪ್ರತಿಷ್ಠಾ ದೃಷ್ಟಿಯಿಂದ ಸ್ತ್ರೀಯು ಪುರುಷ ಎಂದು ಕರೆಯಲ್ಪಟ್ಟಳೋ, ಅಲ್ಲಿ ಶೋಣಿತದ ಪ್ರತಿಷ್ಠಾ ದೃಷ್ಟಿಯಿಂದ ಇದನ್ನು ಸ್ತ್ರೀ ಎಂದು ಕರೆಯುವುದು ಅನ್ವರ್ಥಕವಾಗುತ್ತದೆ. ಸೌಮ್ಯಶುಕ್ರದಲ್ಲಿ ಪ್ರತಿಷ್ಠಾರೂಪದಿಂದ ಪ್ರತಿಷ್ಠಿತ ಆಗ್ನೇಯ ವೃಷಾಪ್ರಾಣಾತ್ಮಕ ಪುಂಭ್ರೂಣವು ಹಾಗೂ ಆಗ್ನೇಯ ಶೋಣಿತದಲ್ಲಿ ಪ್ರತಿಷ್ಠಾರೂಪದಿಂದ ಪ್ರತಿಷ್ಠಿತ ಸೌಮ್ಯ ಯೋಷಾಪ್ರಾಣಾತ್ಮಕ ಸ್ತ್ರೀಭ್ರೂಣವು, ಎಲ್ಲಿಯವರೆಗೆ ಇವೆರಡೂ ಭ್ರೂಣಗಳ ದಾಮ್ಪತ್ಯಭಾವ ಆಗುವುದಿಲ್ಲವೋ, ಅಲ್ಲಿಯವರೆಗೆ ಶುಕ್ರ-ಶೋಣಿತದ ಮಿಥುನಭಾವವು ವ್ಯರ್ಥ. ಹಾಗಾಗಿ ವಾಸ್ತವವಾದ ಈ ಮೂರನೆಯ ಮಿಥುನಭಾವವೇ ಗರ್ಭಸ್ಥಿತಿಯ ಕಾರಣವಾಗಿದೆ ಎಂದು ಹೇಳಬಹುದು. ಇದಕ್ಕಾಗಿಯೇ ‘ವೃಷಾ ಯೋಷಾಮನುಧಾವತಿ’ ಎಂದು ಮನ್ತ್ರದಲ್ಲಿ ಋಷಿವಾಣಿ ಇದೆ.


ಈಗ ೩ ಯುಗ್ಮಗಳಿಂದ ಅಗ್ನಿ-ಸೋಮ ಸಂಸ್ಥಾದ ಮೂರು ವಿಭಾಗಗಳು ನಮ್ಮ ಸಮ್ಮುಖದಲ್ಲಿ ಉಪಸ್ಥಿತವಾಗುತ್ತವೆ. ಸ್ತ್ರೀ-ಪುರುಷರ ಶರೀರಗಳ ಯುಗ್ಮವು ಪ್ರಥಮ ಯುಗ್ಮವಾಗಿದೆ, ಸ್ತ್ರೀ-ಪುರುಷರ ಶೋಣಿತ-ಶುಕ್ರದ ಯುಗ್ಮವು ದ್ವಿತೀಯ ಯುಗ್ಮವಾಗಿದೆ, ಹಾಗೂ ಸ್ತ್ರೀಪುರುಷರ ಸ್ತ್ರೀಭ್ರೂಣ-ಪುಂಭ್ರೂಣದ ಯುಗ್ಮವು ತೃತೀಯ ಯುಗ್ಮವಾಗಿದೆ. ಪ್ರಥಮ ಯುಗ್ಮದ ದೃಷ್ಟಿಯಿಂದ ಪುರುಷನು ಪುರುಷ ಆಗಿದ್ದಾನೆ, ಸ್ತ್ರೀಯು ಸ್ತ್ರೀ ಆಗಿದ್ದಾಳೆ. ದ್ವಿತೀಯ ಯುಗ್ಮದ ದೃಷ್ಟಿಯಿಂದ ಪುರುಷನು ಸ್ತ್ರೀ ಆಗಿದ್ದು, ಸ್ತ್ರೀಯು ಪುರುಷ ಆಗಿದ್ದಾಳೆ. ಹಾಗೂ ತೃತೀಯ ಯುಗ್ಮದ ದೃಷ್ಟಿಯಿಂದ ಪುನಃ ಪುರುಷನು ಪುರುಷ ಆಗಿದ್ದು, ಸ್ತ್ರೀಯು ಸ್ತ್ರೀ ಆಗಿದ್ದಾಳೆ. ಪುರುಷಸಂಸ್ಥಾವು ಮಧ್ಯದೃಷ್ಟಿಯಿಂದ ಎಲ್ಲಿ ಸ್ತ್ರೀಪ್ರಧಾನವಾಗಿದೆಯೋ, ಅಲ್ಲಿ ಉಪಕ್ರಮೋಪಸಂಹಾರ ದೃಷ್ಟಿಯಿಂದ ಪುರುಷಪ್ರಧಾನವೇ ಆಗಿದೆ. ಸ್ತ್ರೀಸಂಸ್ಥಾವು ಮಧ್ಯದೃಷ್ಟಿಯಿಂದ ಎಲ್ಲಿ ಪುರುಷಪ್ರಧಾನವಾಗಿದೆಯೋ, ಅಲ್ಲಿ ಉಪಕ್ರಮೋಪಸಂಹಾರ ದೃಷ್ಟಿಯಿಂದ ಸ್ತ್ರೀಪ್ರಧಾನವೇ ಆಗಿದೆ.


ಉಕ್ತ ರಹಸ್ಯವನ್ನು ತಿಳಿಯದ ಲೌಕಿಕ ಪುರುಷರು ಸರ್ವಥಾ ಅನ್ಧರು. ರಹಸ್ಯವನ್ನು ತಿಳಿಯುವವರೇ ಕಣ್ಣಿರುವವರೆಂದರ್ಥ. ಆದರೆ ‘ಕಣ್ಣಿರುವವರು ಮಾತ್ರ ಈ ರಹಸ್ಯವನ್ನು ತಿಳಿಯಬಲ್ಲರು, ಅನ್ಧರು ತಿಳಿಯರು’ ಎಂಬೀ ಕಥನದಿಂದ ಋಷಿಗೆ ಯಾವ ಆದೇಶ ನೀಡುವ ಇಚ್ಛೆ ಇದೆ?, ಚಿಂತಿಸಿರಿ! ವಿಷಯಭೋಗಪರಾಯಣ ಕಾಮಕಾಮೀ ಮನುಷ್ಯರು ದಾಮ್ಪತ್ಯಭಾವದ ಒಂದೇ ಅರ್ಥ – ಕಾಮಶಾನ್ತಿ, ಎಂದು ತಿಳಿಯುತ್ತಾರೆ, ಇವರನ್ನೇ ‘ಕಾಮಾನ್ಧ’ರೆಂದು ಕರೆದದ್ದು. ಕಾಮಾನ್ಧ ವ್ಯಕ್ತಿಗೆ, ತಾನು ನಿರರ್ಥಕವಾಗಿ ಶುಕ್ರ ವ್ಯಯ ಮಾಡುತ್ತಿದ್ದೇನೆ, ಅಥವಾ ಇದನ್ನು ಸಾರ್ಥಕ ಮಾಡುತ್ತಿದ್ದೇನೆ ಎಂಬ ಚಿಂತನೆಯ ಅಪೇಕ್ಷೆಯೂ ಇರುವುದಿಲ್ಲ. ಈ ಶುಕ್ರವು ಪಿತೃಧನಾತ್ಮಕ ಋಣವಾಗಿದೆ. ಫಲಿತವಾಗಿ ‘ಪ್ರಜಾತನ್ತುಸನ್ತಾನ’ದ ಇಂತಹಾ ವೈಷಯಿಕೆಯು ಲೌಕಿಕಪುರುಷನ ದೃಷ್ಟಿಯಲ್ಲಿ ಯಾವುದೇ ಮಹತ್ತ್ವ ಹೊಂದಿರುವುದಿಲ್ಲ. ಆದರೆ ವಿಚಾರಶೀಲರು, ವಿಜ್ಞಾನಚಕ್ಷುಷ್ಕರು, ಇಂತಹಾ ರಹಸ್ಯವನ್ನು ತಿಳಿದು, ಶುಕ್ರ-ಶೋಣಿತದ ಮಿಥುನಭಾವವು ಕೇವಲ ವಿಷಯೈಷಣೆ ಮಾತ್ರವಲ್ಲ, ಆದರೆ ಇದರಲ್ಲಿ ಋಣಮೋಚನದ ಆ ಗುಪ್ತಪ್ರಕ್ರಿಯೆಯು ಸುರಕ್ಷಿತವಾಗಿದೆ, ಇದರ ಅನುಗಮನ ಮಾಡದೆ ಬನ್ದನಮುಕ್ತಿ ಆಗುವುದಿಲ್ಲ ಎಂಬ ತಥ್ಯಕ್ಕೆ ತಲುಪುತ್ತಾರೆ. ಇದೇ ಲಕ್ಷ್ಯದಿಂದ ಅವರು ವಿವಾಹಸೂತ್ರದಲ್ಲಿ ಬದ್ಧರಾಗುತ್ತಾರೆ. ಋತುಕಾಲದಲ್ಲಿ ಯಥಾನಿಯಮ ದಾಮ್ಪತ್ಯಭಾವದ ಅನುಗಮನ ಮಾಡಿ ಋಣದಿಂದ ಅಋ೯ಣರಾಗುತ್ತಾರೆ.

ರೇತಃಸೃಷ್ಟಿ-ವಿಜ್ಞಾನದ ಅನುಸಾರ ಪುರುಷನ (ಬೀಜಿಯ) ಶುಕ್ರದಲ್ಲಿ ಪ್ರತಿಷ್ಠಿತ ಪುಂಭ್ರೂಣವೇ ೨೧ ಮಾತ್ರಾದಿಂದ ಪುತ್ರರೂಪದಲ್ಲಿ ಪರಿಣತವಾಗುತ್ತದೆ. ಶುಕ್ರವು ಸೌಮ್ಯವಾಗಿದೆ, ಸೋಮವು ಭಾರ್ಗವ ತತ್ತ್ವವಾಗಿದೆ. ಭೃಗುವೇ ಕವಿಯಾಗಿದೆ. ಈ ದೃಷ್ಟಿಯಿಂದ ಇದನ್ನು ಅವಶ್ಯವಾಗಿ ಕವಿ-ಪುತ್ರ ಎಂದು ಕರೆಯಬಹುದು. ಯಾವುದು ಕವಿಯಾಗಿದೆಯೋ (ಸೋಮಾತ್ಮಕ ರೇತ), ಅದೇ ಶೋಣಿತಾಗ್ನಿಯಲ್ಲಿ ಹೋಗಿ ಪುತ್ರರೂಪದಲ್ಲಿ ಪರಿಣತವಾಗುತ್ತದೆ. ಯಾವ ವಿದ್ವಾಂಸನು ಈ ರಹಸ್ಯವನ್ನು ತಿಳಿದು ಸಾಪಿಣ್ಡ್ಯ ದೃಷ್ಟಿಯಿಂದ ಗರ್ಭಸ್ಥಿತಿಯ ಪ್ರವರ್ತ್ತಕನಾಗುತ್ತಾನೆಯೋ, ಅವನು ತನ್ನ ಪಿತನ ಪಿತನಾಗುತ್ತಾನೆ. ಪಿತನ ೨೧ ಅಂಶವನ್ನು ಪಡೆದು ಇಂದು ಈತನು ಪುತ್ರನಾಗುತ್ತಿರುತ್ತಾನೆ. ಆದರೆ ಇದೇ ಪ್ರಜಾತನ್ತು ವಿತಾನದಿಂದ ಪಿತನಿಂದ ಪ್ರಾಪ್ತ ಆತ್ಮಧೇಯರೂಪೀ ೭ ಕಲೆಗಳ ಪ್ರತ್ಯರ್ಪಣೆಯಿಂದ ಪಿತನ ಪಿಣ್ಡದ ಪೂರಕನಾಗುತ್ತಾ, ಚಾನ್ದ್ರಲೋಕಸ್ಥ ಪಿತನ ಅಪೂರ್ಣ ಸ್ವರೂಪವನ್ನು ಪೂರ್ಣರೂಪ ನೀಡುತ್ತಾ ಸತ್ಯವಾಗಿ ‘ಪಿತುಷ್ಪಿತಾಸತ್’ ಎಂಬುದನ್ನು ಚರಿತಾರ್ಥ ಮಾಡುತ್ತಿದ್ದಾನೆ.


ಇಂತು ಸಜ್ಜನ ವಿಧೇಯ,

ಹೇಮಂತ್ ಕುಮಾರ್ ಜಿ.

Thursday, 10 January 2019

ಪ್ರಜಾತನ್ತುವಿತಾನವಿಜ್ಞಾನೋಪನಿಷತ್: ‘ಅಚಿಕಿತ್ತ್ವಾಞ್ಚಿಕಿತುಷಶ್ಚಿದತ್ರ…ಮಾತಾಪಿತರಮೃತ ಆಬಭಾಜ…' (೩೧-೩೨)

೩೧. ‘ಅಚಿಕಿತ್ತ್ವಾಞ್ಚಿಕಿತುಷಶ್ಚಿದತ್ರ…’ (ಋಗ್ವೇದ ೧-೧೬೪-೪)

೩ – ಅಚಿಕಿತ್ತ್ವಾಞ್ಚಿಕಿತುಷಶ್ಚಿದತ್ರ ಕವೀನ್ ಪೃಚ್ಛಾಮಿ ವಿದ್ಮನೇ ನ ವಿದ್ವಾನ್ |
ವಿ ಯಸ್ತಸ್ತಮ್ಭ ಷಡಿಮಾ ರಜಾಂಸ್ಯಜಸ್ಯ ರೂಪೇ ಕಿಮಪಿ ಸ್ವಿದೇಕಮ್ |
ಋಕ್.ಸಂ. ೧|೧೬೪|೮|

ಮನ್ತ್ರಾರ್ಥ ಸ್ಪಷ್ಟವಾಗಿದೆ. “ನಾನು ಸ್ವಯಂ ಈ ವಿಷಯದಲ್ಲಿ ಊಹಾಪೋಹ ಮಾಡಲು ಅಸಮರ್ಥನು, ಊಹಾಪೋಹ ಮಾಡಲು ಸಮರ್ಥರಾದ ವಿದ್ವಾಂಸರಿಂದ ಈ ವಿಷಯದ ಬಗ್ಗೆ ಸ್ವಲ್ಪ ತಿಳಿದುಕೊಳ್ಳಲಿಚ್ಛಿಸುವೆನು, ನಾನು ಸ್ವಯಂ ಈ ವಿಷಯದಿಂದ ಅನಭಿಜ್ಞನಾಗಿದ್ದೇನೆ”. ತಿಳಿದುಕೊಳ್ಳಬೇಕಾದ ವಿಷಯವೇನೆಂದರೆ – ಯಾರೊಬ್ಬನು ೬ ರಜಗಳನ್ನು ತನ್ನಲ್ಲಿ ಬದ್ಧಗೊಳಿಸಿ ಇಟ್ಟಿರುವನೋ, ಆತನ ಸ್ವರೂಪವೇನು? (ಮಹಾನಾತ್ಮದ ಸ್ವರೂಪವೇನು?). ತನ್ತುವಿತಾನ ಕರ್ಮ್ಮದಲ್ಲಿ ಒಂದು ಮೂಲಪ್ರತಿಷ್ಠಾ ಇರುತ್ತದೆ, ಇದರ ಆಧಾರ ಬದ್ಧವಾಗಿ ತನ್ತುವು ಮುಂದೆ ವಿತತವಾಗುತ್ತದೆ. ಬೀಜಿ ಪುರುಷನ ಮಹಾನಾತ್ಮವೇ ಅಂತಹದ್ದೊಂದು ಮೂಲಸ್ತಮ್ಭವಾಗಿದ್ದು ಅದನ್ನು ಆಧಾರ ಮಾಡಿಕೊಂಡು ಪುತ್ರ – ಪೌತ್ರ – ಪ್ರಪೌತ್ರ – ವೃದ್ಧಪ್ರಪೌತ್ರ – ಅತಿವೃದ್ಧಪ್ರಪೌತ್ರ -ವೃದ್ಧಾತಿವೃದ್ಧಪ್ರಪೌತ್ರ, ಎಂಬ ೬ ರಜಗಳು ಮುಂದಕ್ಕೆ ವಿತತವಾಗುತ್ತವೆ. ಸಪ್ತಪುರುಷರಲ್ಲಿ ಬೀಜಿಯು ಸ್ಥಿರ ಧನವಾಗಿರುವುದರಿಂದ ಅಸ್ಥಿರ ರಜೋಮರ್ಯ್ಯಾದೆಯಿಂದ ಬಹಿರ್ಭೂತನೆಂದು ನಂಬಲಾಗಿದೆ. ಹಾಗೂ ಸ್ಥಿರ ಬೀಜಿಯ ಆಧಾರದಿಂದ ಪ್ರಕ್ರಾನ್ತ ೬ ಪುರುಷ ಪ್ರಕ್ರಾನ್ತಿಸಮ್ಬನ್ಧದಿಂದ ‘ರಜಾಂಸಿ’ಯನ್ನು ನಂಬಲಾಗಿದೆ. 

೩೨. ‘ಮಾತಾಪಿತರಮೃತ ಆಬಭಾಜ...’ (ಋಗ್ವೇದ ೧-೧೬೪-೮)

ಮಾತಾಪಿತರಮೃತ ಆಬಭಾಜ ಧೀತ್ಯಗ್ರೇ ಮನಸಾ ಸಂ ಹಿ ಜಗ್ಮೇ |
ಸಾ ಬಿಭತ್ಸುರ್ಗರ್ಭರಸಾ ನಿವಿದ್ಧಾ ನಮಸ್ವನ್ತ ಇದುಪವಾಕಮೀಯುಃ ||
ಋಕ್.ಸಂ. ೧|೧೬೪|೮|

ಬೀಜಿಯ ಶುಕ್ರದಲ್ಲಿ ಪ್ರತಿಷ್ಠಿತ ಮಹಾನಾತ್ಮವು ೬ ರಜೋ ಭಾಗಗಳ ವೈತಾನಿಕ ರೂಪಗಳಲ್ಲಿ ಮೂಲಪ್ರತಿಷ್ಠಾ ಆಗುತ್ತದೆ ಎಂಬುದನ್ನು ಹಿಂದಿನ ಮನ್ತ್ರದಲ್ಲಿ ಹೇಳಲಾಗಿದೆ. ಈಗ ಮಹಾನಾತ್ಮದ ಆವಿರ್ಭಾವದ ಇತಿವೃತ್ತವನ್ನು ಹೇಳಲಾಗುತ್ತದೆ. ಮಾತೆಯು (ಪತ್ನಿಯು) ಪಿತನ (ಪತಿಯ) ಋತಭಾಗವನ್ನು ಅವರ ಶರೀರದಿಂದ ಚ್ಯುತಗೊಳಿಸಿ ತಮ್ಮ ಗರ್ಭಾಶಯದಲ್ಲಿ ಪ್ರತಿಷ್ಠಿತಗೊಳಿಸಿ ಗರ್ಭಸ್ವರೂಪವು ಆವಿರ್ಭಾವಿಸಲು ಸಮರ್ಥವಾಗಿರುತ್ತದೆ. ‘ಪ್ರಜೋತ್ಪಾದನಮಹಂ ಕರಿಷ್ಯೇ’ ಎಂಬ ಪ್ರಾಥಮಿಕ ಸಂಕಲ್ಪದಿಂದ ಪುರುಷನು (ಪಿತನು) ದಾಮ್ಪತ್ಯ ಕರ್ಮದಲ್ಲಿ ಪ್ರವೃತ್ತನಾಗುತ್ತಾನೆ. ಸ್ತ್ರೀಯು (ಮಾತೆಯು) ಈ ಕರ್ಮ್ಮದ ಅರ್ದ್ಧಾಙ್ಗಿನಿ ಆಗಿರುತ್ತಾಳೆ. ಮಿಥುನಭಾವ-ಪ್ರವೃತ್ತಿಯ ಪ್ರಾರಮ್ಭಿಕ ಸಙ್ಕಲ್ಪವೇ ಪ್ರಥಮ ದಾಮ್ಪತ್ಯಭಾವವಾಗಿದೆ; ಮಾನಸ ಸಂಯೋಗವಿದು. ಇದಕ್ಕಾಗಿಯೇ – ‘ಧೀತ್ಯಗ್ರೇ ಮನಸಾ ಸಂ ಹಿ ಜಗ್ಮೇ’ ಎಂದು ಹೇಳಲಾಗಿದೆ. ಈ ಪ್ರಾಥಮಿಕ ಮಾನಸಿಕ ಸಙ್ಗಮದ ಅನನ್ತರ ಇಬ್ಬರ ಭೌತಿಕ (ಶಾರೀರಿಕ) ಸಙ್ಗಮವಾಗುತ್ತದೆ. ಮಾತೃಗತ ಶೋಣಿತಾಗ್ನಿಯ ಆಕರ್ಷಣದಿಂದ ಪಿತನ ಶರೀರದಲ್ಲಿ ವಿದ್ಯುತ್-ಸಞ್ಚಾರವಾಗುತ್ತದೆ. ಫಲತಃ ಶುಕ್ರದಲ್ಲಿ ಕ್ಷೋಭೆಯು ಉತ್ಪನ್ನವಾಗುತ್ತದೆ. ಕ್ಷುಬ್ಧ ಶುಕ್ರವು ಈ ರೀತಿ ಮಾತೆಯ ಆಕರ್ಷಣದಿಂದ ಪಿತನ ಶರೀರದಿಂದ ಚ್ಯುತವಾಗುತ್ತದೆ. ಅಪ್ ತತ್ತ್ವವೇ ಋತವು. ಇದು ‘ಆಪಃ-ವಾಯುಃ-ಸೋಮಃ’ ಭೇದದಿಂದ ೩ ವಿವರ್ತ್ತಗಳನ್ನು ಹೊಂದಿದೆ ಎಂದು ನಂಬಲಾಗಿದೆ. ಶುಕ್ರದಲ್ಲಿ ಆಪೋಭಾಗವು ಪ್ರತ್ಯಕ್ಷ, ಏವಯಾಮರುತ್ ಎಂಬ ಹೆಸರಿನ ರೇತೋಧಾ ವಾಯುವು ಅನುಮೇಯವಾಗಿದೆ, ೨೮ ಸೌಮ್ಯಪ್ರಾಣಾವಚ್ಛಿನ್ನ ಸೋಮಭಾಗವು ಪ್ರತ್ಯಕ್ಷವಾಗಿದೆ. ಇದೇ ಋತಸಮ್ಪತ್ತಿನ ಕಾರಣದಿಂದ ಶುಕ್ರವನ್ನು ‘ಋತ’ ಎಂದು ಕರೆಯಲಾಗಿದೆ.

ದಾಮ್ಪತ್ಯಭಾವದಲ್ಲಿ ಕಾಮೋದ್ದೀಪನೆ ಹೊಂದಿದ ಸ್ತ್ರೀಯು ಪುರುಷ-ಶರೀರದೊಂದಿಗೆ ಐಕ್ಯ-ಭಾವದಲ್ಲಿ ಬರುತ್ತಾ ಶುಕ್ರಗ್ರಹಣ ಕಾಲದಲ್ಲಿ ಕಮ್ಪಿತಳಾಗುತ್ತಾಳೆ. ಇದೇ ಅವಳ ಗರ್ಭರಸಕಾಲವು (ಶುಕ್ರಗ್ರಹಣಕಾಲವು). ಈ ಸಮಯದಲ್ಲಿ ಶುಕ್ರ ಶೋಣಿತಗಳ ಪರಸ್ಪರ ಓತ-ಪ್ರೋತ ಭಾವಗಳಾಗುತ್ತವೆ, ಇದನ್ನೇ ಇದರ ‘ನಿತರಾಂ’-ವಿದ್ಧಕಾಲ (ನಿವಿದ್ಧಾ) ಎಂದು ಕರೆದದ್ದು. ಪುಂ-ಭೂಣಾಧಿಕ್ಯದಿಂದ ಪುರುಷ-ಸನ್ತಾನ, ಸ್ತ್ರೀ-ಭ್ರೂಣಾಧಿಕ್ಯದಿಂದ ಕನ್ಯಾ ಸನ್ತಾನ, ಉಭಯಸಾಮ್ಯದಿಂದ ನಪುಂಸಕ ಸನ್ತಾನ, ಯಾವುದೇ ಪರಿಸ್ಥಿತಿಯಲ್ಲಿ ಈ ಮೂರರಲ್ಲಿ ಒಂದು ಸನ್ತಾನವು ಗರ್ಭೀಭೂತವಾಗುತ್ತದೆ. ಗರ್ಭೀಭೂತವೀ ಸನ್ತಾನಗಳ ಪೋಷಣೆಯು ಮಾತೃಭುಕ್ತ ಅನ್ನದಿಂದ ಆಗುತ್ತದೆ, ಹಾಗಾಗಿ ಗರ್ಭಸ್ಥ ಗರ್ಭಿಗೆ ‘ನಮಸ್ವಾನ್’ (ಅನ್ನವಾನ್) ಎಂಬ ಸಂಜ್ಞೆ ಉಂಟಾಗುತ್ತದೆ. ಈ ನಮಸ್ವನ್ತಗಳು (ಗರ್ಭಸ್ಥ ಮೂರರಲ್ಲಿ ಒಂದು ಸನ್ತತಿಯು) ವಾಗ್ ವ್ಯವಹಾರಕ್ಕೆ ಯೋಗ್ಯವಾಗುತ್ತವೆ. ಅಂದರೆ ಗರ್ಭಧಾರಣಾನನ್ತರ ಲೋಕದಲ್ಲಿ ಈ ಗರ್ಭಗಳಿಂದ – ‘ಹೆಣ್ಣು/ಗಂಡು ಶಿಶಿವಿನಾ ಜನನವಾಗುತ್ತದೆ ಎಂಬ ಆಸೆಯಿದೆ’, ಇತ್ಯಾದಿ ಲೋಕೋಕ್ತಿಗಳು ಪ್ರಚಲಿತವಾಗುತ್ತವೆ. ಅಥವಾ ಸ್ಥೂಲ-ಶುಕ್ರ-ಶೋಣಿತದ ಮಿಥುನಭಾವಕ್ಕೆ ಬರುವುದೇ ಈ ಔಪಪಾತಿಕ ಆತ್ಮದ ಧಾಮಚ್ಛದ ವಾಕ್ ತತ್ತ್ವದಿಂದ ಯುಕ್ತವಾಗುವುದು ಎಂದಾಗುತ್ತದೆ. ನಿಷ್ಕರ್ಷೆ ಏನೆಂದರೆ, ಮಾತೆಯ ಶೋಣಿತಾಗ್ನಿಯ ಆಕರ್ಷಣದಿಂದ ಪಿತನ ಋತಭಾಗ (ಶುಕ್ರ)ದಲ್ಲಿ ವಿಚ್ಯುತಿ ಭಾವವು ಸಮಾವೇಶವಾಗುತ್ತದೆ. ಅದೇ ಶುಕ್ರಾಹುತಿಯು ಮಾತೃಗರ್ಭಾಶಯದಲ್ಲಿ ಪ್ರವಿಷ್ಟವಾಗಿ ಅಪತ್ಯರೂಪದಲ್ಲಿ ಪರಿಣತವಾಗುತ್ತದೆ. ಇದೇ ಅಪತ್ಯ ಮಹಾನಾತ್ಮದ ಪ್ರತಿಷ್ಠಾ ಆಗುತ್ತದೆ. ಇದರಲ್ಲಿ ಸಪಿಣ್ಡತಾ ಪ್ರವರ್ತ್ತಕ ೨೮ ಕಲೆಗಳ ಪಿತೃಸಹಃಪಿಣ್ಡವು ಸುರಕ್ಷಿತವಾಗಿರುತ್ತದೆ.


ಇಂತು ಸಜ್ಜನ ವಿಧೇಯ,

ಹೇಮಂತ್ ಕುಮಾರ್ ಜಿ.

Wednesday, 9 January 2019

ಪ್ರಜಾತನ್ತುವಿತಾನವಿಜ್ಞಾನೋಪನಿಷತ್: ‘ಪಾಕಃ ಪೃಚ್ಛಾಮಿ ಮನಸಾಽವಿಜಾನನ್…’ (೩೦)

೩೦. ‘ಪಾಕಃ ಪೃಚ್ಛಾಮಿ ಮನಸಾಽವಿಜಾನನ್…’ (ಋಗ್ವೇದ ೧-೧೬೪-೫)ಪಾಕಃ ಪೃಚ್ಛಾಮಿ ಮನಸಾಽವಿಜಾನನ್ ದೇವಾನಾಮೇನಾ ನಿಹಿತಾ ಪದಾನಿ |
ವತ್ಸೇ ಬಷ್ಕಾಯೇಽಧಿ ಸಪ್ತತನ್ತೂನ್ ವಿತತ್ನಿರೇ ಕವಯ ಓತವಾ ಉ ||
ಋಗ್ವೇದ ೧-೧೬೪-೫

ಯಾವ ವಸ್ತುತತ್ತ್ವಗಳ ಮೂಲಕಾರಣವು ವಿಶ್ವಗರ್ಭದಲ್ಲಿ ಭುಕ್ತವಾಗುವುದರಿಂದ ಚಿನ್ತ್ಯವೋ, ಅವುಗಳ ಸಮ್ಬನ್ಧದಲ್ಲಿ ಪರೀಕ್ಷಾರ್ಥವಾಗಿ ಪ್ರಶ್ನೆಯೊಂದಿಗೆ ಸಮ್ಬನ್ಧವಿರುವ ಜಲ್ಪ ಮತ್ತು ಅಸೂಯೆಯೊಂದಿಗೆ ಸಮ್ಬನ್ಧವಿರುವ ವಿತಣ್ಡಗಳನ್ನೂ ಸಮಾದರ ಮಾಡಬಹುದು. ಆದರೆ ಯಾವುದರ ಕಾರಣವು ಅಚಿನ್ತ್ಯವೋ, ಅದರೊಂದಿಗಿನ ವಸ್ತುತತ್ತ್ವಗಳ ಸಮ್ಬನ್ಧದಲ್ಲಿ ಜಿಜ್ಞಾಸಾತ್ಮಕ ವಾದಪ್ರಶ್ನೆಯೇ ಶ್ರೇಯಸ್ಕರವು. ಇಂತಹಾ ಜಿಜ್ಞಾಸಾತ್ಮಕ ಪ್ರಶ್ನೆಯೇ ವೇದಭಾಷೆಯಲ್ಲಿ ‘ಪಾಕಃ ಪ್ರಶ್ನ’ ಎಂದು ಕರೆಯಲ್ಪಟ್ಟಿದೆ. ಪೂರ್ವಮನ್ತ್ರ-ವ್ಯಾಖ್ಯೆಯಲ್ಲಿ ಸ್ಪಷ್ಟಪಡಿಸಲಾಗಿದ್ದೇನೆಂದರೆ, ‘ಪ್ರಥಮಂ ಜಾಯಮಾನಂ’ ಎಂಬ ಪ್ರಶ್ನೆಯು ಅಚಿನ್ತ್ಯವೆಂದು. ವಿಶ್ವಮರ್ಯ್ಯಾದೆಯಲ್ಲಿ ಭುಕ್ತ ಕಾರ್ಯ್ಯಾತ್ಮಕ ಸಾಪಿಣ್ಡ್ಯಭಾವದ ಸಮ್ಬನ್ಧದಲ್ಲಿ ಅವಶ್ಯವಾಗಿ ಮೀಮಾಂಸೆಯನ್ನು ಮಾಡಬಹುದು, ಆದರೆ ‘ಪಾಕೇನ ಮನಸಾ’ ದಿಂದ ಮಾತ್ರವೇ ಹೊರತು ಕುತರ್ಕಬುದ್ಧಿಯಿಂದ ಉಂಟಾಗುವ ಪ್ರಶ್ನೆಯು ಎಂದಿಗೂ ಇಂತಹಾ ತತ್ತ್ವಗಳಿಗೆ ನಿರ್ಣಾಯಕವಾಗುವುದಿಲ್ಲ ಎಂಬುದು ಇದರಿಂದಲೇ ಸಿದ್ಧವಾಗಿಬಿಡುತ್ತದೆ. ಇದೇ ಪ್ರಶ್ನಮರ್ಯ್ಯಾದೆಯನ್ನು ಲಕ್ಷ್ಯದಲ್ಲಿರಿಸಿಕೊಂಡು ಋಷಿಯು ‘ಸಪ್ತತನ್ತುವಿತಾನ’ದ ಸ್ವರೂಪವನ್ನು ನಮ್ಮ ಮುಂದೆ ಇರಿಸಿದ್ದಾರೆ.

ದೇವತೆಗಳ ನಿಗೂಢ (ಪರೋಕ್ಷ) ಪದಗಳ (ಪದವಿಗಳ) ಸಮ್ಬನ್ಧದಲ್ಲಿ ಉತ್ತರಗರ್ಭಿತ ಪ್ರಶ್ನೆ ಉಂಟಾಗಿದೆ; ಇದು ವೇದಶಾಸ್ತ್ರದ ಒಂದು ಸ್ವಾಭಾವಿಕ ಶೈಲಿಯಾಗಿದೆ. ಆಧ್ಯಾತ್ಮಿಕ ಸಂಸ್ಥಾದಲ್ಲಿ ಅಧ್ಯಕ್ಷ, ಪ್ರಜಾತನ್ತು-ವಿತಾನಕರ್ತ್ತಾ ಮಹಾನಾತ್ಮವೇ ದೇವತೆಗಳ ನಿಗೂಢ ಪದವು (ಪದವಿಯು). ಒಂದು ಪದವಲ್ಲ, ಆದರೆ ೭ ಪದ(ವಿ)ಗಳಿವೆ. ಆಗ್ನೇಯ-ಸೌಮ್ಯ, ಭೇದದಿಂದ ದೇವತೆಗಳು ಎರಡು ಭಾಗಗಳಲ್ಲಿ ವಿಭಕ್ತರಾಗಿದ್ದಾರೆ. ಇವೆರಡರ ಸಮಷ್ಟಿಯೇ ‘ಅಗ್ನಿಷೋಮೀಯದೇವತಾ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಮಹಾನಾತ್ಮದ ಆರಮ್ಭಕವು ಶುಕ್ರ ಶೋಣಿತವೆಂದು ಹೇಳಲಾಗಿದೆ. ಶುಕ್ರವು ಸೌಮ್ಯವಾಗಿದ್ದರೆ, ಶೋಣಿತವು ಆಗ್ನೇಯವಾಗಿದೆ. ಈ ದೃಷ್ಟಿಯಲ್ಲಿ ಉಭಯಮೂರ್ತ್ತಿಯಾದ ಮಹಾನಾತ್ಮವು ಶುಕ್ರದಲ್ಲಿ ಪ್ರತಿಷ್ಠಿತವಾಗಿರುವುದರಿಂದ, ಇದು ಸೋಮ ಪ್ರಾಧ್ಯಾನ್ಯವಾಗಿದೆ. ಅಗ್ನಿಗರ್ಭಿತ ಸೋಮವೇ ಮಹಾನಾತ್ಮದ ಪ್ರಧಾನ ಪ್ರತಿಷ್ಠಾ ಆಗಿದೆ. ಈ ಸೋಮವು ಸೌಮ್ಯ ಚಾನ್ದ್ರಪ್ರಾಣದಿಂದ ಯುಕ್ತವಾಗಿದೆ, ಇದನ್ನು ‘ಪಿತೃಸಹಃ’ ಎಂದು ಕರೆಯಲಾಗಿದೆ, ಹಾಗೂ ಇದರಲ್ಲಿ ೨೮ ಕಲೆಗಳಿವೆ ಎಂದು ಹೇಳಲಾಗಿದೆ. ಅಷ್ಟಾವಿಂಶತಿಕಲಾ ಅಗ್ನಿಗರ್ಭಿತ ಸೋಮಮೂರ್ತ್ತಿಯಾದ ಮಹಾನಾತ್ಮದ ೨೮ ಕಲೆಗಳಲ್ಲಿ ಬೀಜಿ-ಪುತ್ರ-ಪೌತ್ರಾದಿರೂಪೀ ೭ ತನ್ತುಗಳಲ್ಲಿ ವಿತಾನವಾಗಿದೆ. ಪ್ರಕೃತ ಮನ್ತ್ರದಲ್ಲಿ ಇದೇ ಸಪ್ತತನ್ತು ವಿತಾನದ ವಿಶ್ಲೇಷಣೆ ಮಾಡಲಾಗಿದೆ.

‘ಬಷ್ಕಯ’ ಶಬ್ದದ ಲೌಕಿಕ ಅರ್ಥವೆಂದರೆ ‘ತರುಣ’. ಸಂಸ್ಕೃತದಲ್ಲಿ ಯಾವ ಅರ್ಥದಲ್ಲಿ ತರುಣ, ಯುವಾ, ಅಪತ್ಯ, ಇತ್ಯಾದಿ ಶಬ್ದಗಳು ಪ್ರಯುಕ್ತವಾಗಿರುವವೋ, ಅದಕ್ಕಿಂತ ಭಿನ್ನವಾದ ಅರ್ಥದಲ್ಲಿ ವೈಧಿಕ ಭಾಷೆಯಾದ ಬ್ರಾಹ್ಮಿಯಲ್ಲಿ ‘ಬಷ್ಕಯ, ಬಷ್ಕಯಣ, ಬಷ್ಕಯಣೀ’ ಇತ್ಯಾದಿ ಶಬ್ದಗಳು ಪ್ರಯುಕ್ತವಾಗಿವೆ. ಪ್ರಜಾತನ್ತುವನ್ನು ವಿತತಗೊಳಿಸುವ ಶಕ್ತಿಗೆ (ಪ್ರಜನನಶಕ್ತಿಗೆ) ಬಷ್ಕಯದೊಂದಿಗೇ ಸಮ್ಬನ್ಧವಿರುತ್ತದೆ. ಅದರಲ್ಲಿಯೇ ಉತ್ಪಾದನೆಯ ಯೋಗ್ಯತೆಯು ಪ್ರತಿಷ್ಠಿತವಾಗಿರುತ್ತದೆ. ಇಂತಹಾ ಬಷ್ಕಯನು (ತರುಣನು) ವತ್ಸನಲ್ಲಿ (ಪುತ್ರನಲ್ಲಿ) ತನ್ನನ್ತಾನೇ ಪ್ರತಿಷ್ಠಿತವಾದದ್ದನ್ನು (ಪಿತೃತನ್ತುಗಳನ್ನು) ಪುನಃ ಸನ್ತತಗೊಳಿಸಲು ಕವಿಗಳು (ಬೀಜೀಪುರುಷರು) ವಿತತಗೊಳಿಸುತ್ತಿರುತ್ತಾರೆ’. ಇವರ ವಿತಾನಗಳಲ್ಲಿ ದೇವತೆಗಳ ಪದವು ನಿಹಿತವಾಗಿರುತ್ತದೆ.

ಪಿತನು ತನ್ನ ಪುತ್ರನಲ್ಲಿ ‘ಓತ ವೈ-ಉ’ ಪ್ರಯೋಜನಕ್ಕಾಗಿ ೭ ತನ್ತುಗಳನ್ನು ವಿತಾನಗೊಳಿಸುತ್ತಾನೆ. ಪಿತನು ಸ್ವಯಂ ವಿತಾನ ಮಾಡುವುದಿಲ್ಲ, ಆದರೆ ಕವಿಜನರು ವಿತಾನ ಮಾಡುತ್ತಾರೆ. ಆದರೆ ಇಲ್ಲಿ ಕವಿ ಎಂದರೇನು? ಭಾರ್ಗವತತ್ತ್ವವೇ ಕವಿಯಾಗಿದೆ. ಮಹಾನಾತ್ಮದಲ್ಲಿ ಪ್ರತಿಷ್ಠಿತ ಸೌಮ್ಯಪ್ರಾಣವು ಭಾರ್ಗವವಾಗುವುದರಿಂದ ‘ಕವಿ’ಯಾಗಿದೆ. ಇದೂ ಕೂಡ ಒಂದಲ್ಲ, ೨೮ ಸಂಖ್ಯೆಯಲ್ಲಿದೆ. ಆದ್ದರಿಂದ ಮನ್ತ್ರದಲ್ಲಿ ‘ಕವಯಃ’ ಪ್ರಯುಕ್ತವಾಗಿದೆ. ಇವುಗಳಿಂದಲೇ ೨೧-೧೫-೧೦ ಇತ್ಯಾದಿ ಕ್ರಮದಲ್ಲಿ ೭ ಪೀಳಿಗೆಯ ಪರ್ಯ್ಯನ್ತ ವಿತಾನವಾಗುತ್ತದೆ. ಕೇವಲ ಪುತ್ರನಲ್ಲಿ ಮಾತ್ರ ವಿತಾನವಾಗುವುದಲ್ಲ, ಆದರೆ ಪರಮ್ಪರಾನುಗತವಾಗಿ ಪುತ್ರ-ಪೌತ್ರ-ಪ್ರಪೌತ್ರಾದಿ ೭ ಪೀಳಿಗೆಯ ಪರ್ಯ್ಯನ್ತ ವಿತಾನವಾಗುತ್ತದೆ. ಆದ್ದರಿಂದ ಈ ಮನ್ತ್ರದ ಅನ್ತ್ಯದಲ್ಲಿ ‘ಉ’ ಎಂಬ ದೀರ್ಘೋದಾತ್ತ ಸ್ವರಾಕ್ಷರದ ಪ್ರಯೋಗವಾಗಿದೆ. ಈ ರೀತಿ ಬೀಜಿ ಪುರುಷನು ತನ್ನ ಸಹೋಭಾಗಗಳನ್ನು ಪುತ್ರನ ಮುಖೇನ ಏಳನೇ ಪೀಳಿಗೆಯ ಪರ್ಯ್ಯನ್ತ ವಿತಾನಗೊಳಿಸುತ್ತಾನೆ. ಬೀಜಿಯ ದೇವಪದವು ಈ ತನನ ಪ್ರಕ್ರಿಯೆಯಿಂದ ೭ ಸ್ಥಾನಗಳಲ್ಲಿ ನಿಗೂಢರೂಪದಲ್ಲಿ ಪ್ರತಿಷ್ಠಿತವಾಗಿರುತ್ತದೆ. ಈ ದೃಷ್ಟಿಯಿಂದ ಪ್ರಕೃತಮನ್ತ್ರವು ಸಪ್ತತನ್ತುವಿತಾನಾತ್ಮಕ ಸಾಪಿಣ್ಡ್ಯಭಾವದ ಸಮರ್ಥವೇ ಆಗುತ್ತಿದೆ ಎಂದು ಸಿದ್ಧವಾಗುತ್ತದೆ.


ಇಂತು ಸಜ್ಜನ ವಿಧೇಯ,

ಹೇಮಂತ್ ಕುಮಾರ್ ಜಿ.