Monday, 25 February 2019

ವೇದದ ಮೌಲಿಕ ಸ್ವರೂಪ : ವೇದಗಳು ಅನಂತವೇ? ಪರಿಪೂರ್ಣತೆಯ ಸಾಧನಾ ಮಾರ್ಗ ಯಾವುದು? (೧)

|| ಶ್ರೀ ಗುರುಭ್ಯೋ ನಮಃ ||

ವೇದಶಾಸ್ತ್ರದಲ್ಲಿ ಪ್ರತಿಪಾದಿತ ಅನನ್ತ ವಿಷಯಗಳಲ್ಲಿ ಒಂದುವೇಳೆ ಎಲ್ಲಕ್ಕಿಂತ ಜಟಿಲ ವಿಷಯವೇನೆಂದು ಕೇಳಿದರೆ, ಅದು ಏಕಮಾತ್ರ ಇದೇ ‘ವೇದಪದಾರ್ಥ’ವಾಗಿದೆ. ವೇದದ (ವೇದಶಾಸ್ತ್ರದ) ವೇದವನ್ನು (ವೇದಪದಾರ್ಥವನ್ನು) ಯಾರು ತಿಳಿಯುವರೋ, ಅವರೇ ಸರ್ವವಿತ್ ಎಂದಾಗುತ್ತಾರೆ. ಯಾರು ವೇದದ ವೇದವನ್ನು ತಿಳಿಯಲಿಲ್ಲವೋ ಅವರಿಗೆ ‘ನ ಸ ವೇದ, ನ ಸ ವೇದ’ ಎಂಬುದು ಅನ್ವಯವಾಗುತ್ತದೆ. ಪ್ರಸ್ತುತ ಪ್ರಕರಣದಲ್ಲಿ ಈ ವೇದಪದಾರ್ಥದ ಸಮ್ಬನ್ಧದಲ್ಲಿ ನಾವೇನು ಹೇಳುತ್ತೇವೆಯೋ, ವೇದಪ್ರೇಮಿ ಓದುಗರು ಅದನ್ನು ಇನ್ನೇನನ್ನಾಗಿಯೋ ತಿಳಿಯುತ್ತಾರೆ, ಒಂದು ಕಾಲ್ಪನಿಕ ವಸ್ತು ಎಂದು ತಿಳಿಯುವ ಭ್ರಮೆಯಲ್ಲಿರುತ್ತಾರೆ. ಏಕೆಂದರೆ ಯಾವ ಶೈಲಿಯಲ್ಲಿ, ಯಾವ ದೃಷ್ಟಿಕೋಣದಲ್ಲಿ ವೇದದ ಯಾವ ತಾತ್ತ್ವಿಕ ಸ್ವರೂಪವನ್ನು ನಾವು ಹೇಳಲು ಉಪಕ್ರಮಿಸಿದ್ದೇವೆಯೋ, ಅದರ ಉಪಲಬ್ಧಿಯು ವರ್ತ್ತಮಾನ ಯುಗದಲ್ಲಿ ಉಪಲಬ್ಧವಿರುವ ವೇದಭಾಷ್ಯಗಳು, ವೇದವ್ಯಾಖ್ಯೆಗಳಲ್ಲಿ ಸರ್ವಥಾ ಅನುಪಲಬ್ಧವಾಗಿದೆ. ‘ನಿನ್ದನ್ತು ನೀತಿನಿಪುಣಾ ಯದಿ ವಾ ಸ್ತುವನ್ತು’ ಎಂಬುದನ್ನು ತಮ್ಮ ಆರಾಧ್ಯ ಮನ್ತ್ರವನ್ನಾಗಿಸಿ ಸರ್ವಥಾ ನವೀನದೃಷ್ಟಿಯಿಂದ, ಅಲ್ಲ! ಪ್ರಾಚೀನತಮದೃಷ್ಟಿಯಿಂದ ವೇದದ ಮೌಲಿಕ ಸ್ವರೂಪವನ್ನು ಓದುಗರ ಸಮ್ಮುಖದಲ್ಲಿ ಇಡಲಾಗುತ್ತಿದೆ.

ನೂರಿನ್ನೂರು ವರ್ಷಗಳಿಂದ ಪ್ರಚಲಿತ ರೂಢಿವಾದಗಳನ್ನೇ ‘ಪರಮ್ಪರೆ’ ಎಂಬ ಹೆಸರಿನಿಂದ ವ್ಯವಹೃತಗೊಳಿಸುವ, ಇತ್ಥಂಭೂತ ಪರಮ್ಪರಾನುಗಾಮೀ ಅನರ್ಥಾತ್ಮಕ ಅರ್ಥಗಳಿಂದಲೇ ಸನ್ತುಷ್ಟರಾಗುವ, ವೈದಿಕ ಸಾಹಿತ್ಯದ ತಾತ್ತ್ವಿಕ ಪರಿಶೀಲನೆಯಿಂದ ಸರ್ವಥಾ ಅತಿಕ್ರಾನ್ತ ಯಾವ ಮಹಾನುಭಾವರು, ‘ಪರಮ್ಪರಾ ಸಿದ್ಧ ಅರ್ಥವೇ ಮಾನ್ಯ’ ಎಂಬ ವಾಕ್ಯವನ್ನು ಉದ್ಘೋಷಿಸುತ್ತಿರುವರೋ, ಅವರಿಗೆ ಆಂಶಿಕರೂಪದಲ್ಲಿ ಇಲ್ಲಿ ಸಮಾಧಾನ ಸಿಗುತ್ತದೆ. ಇದನ್ನು ಹೊರತುಪಡಿಸಿ ಸ್ವಯಂ ಶ್ರುತಿಪ್ರಮಾಣದ ಆಧಾರದಲ್ಲಿ ಆರ್ಷಪರಮ್ಪರಾಸಿದ್ಧ ಯಾವ ವೇದಾರ್ಥದ ಸ್ವರೂಪವನ್ನು ಮುಂದೆ ಹೇಳಲಾಗುವುದೋ, ಒಂದುವೇಳೆ ಶುಷ್ಕ ತಟಸ್ಥ ಸಮಾಲೋಚನೆಯನ್ನು ಬಿಡುತ್ತಾ, ದೋಷದೃಷ್ಟಿಯಿಂದಲಾದರೂ ಈ ವೇದಸ್ವರೂಪದ ಮೇಲೆ ದೃಷ್ಟಿ ಹಾಯಿಸಲು ಸಮಯ ಮಾಡಿಕೊಂಡರೆ, ನಮಗಿರುವ ಭರವಸೆ ಮಾತ್ರವಲ್ಲ, ದೃಢ ವಿಶ್ವಾಸವೇನೆಂದರೆ, ಚಿರಕಾಲದಿಂದ ವಿಲುಪ್ತಪ್ರಾಯ ವೇದಪರಮ್ಪರೆಯ ತಾತ್ತ್ವಿಕ ಸ್ವರೂಪದತ್ತ ನಿಮ್ಮ ಧ್ಯಾನವು ಆಕರ್ಷಿತವಾಗುತ್ತದೆ. ಈ ಸಾಮಯಿಕ ಉದ್ಗಾರದ ಆವಶ್ಯಕತೆ ಏಕಿದೆಯೆಂದರೆ, ವೇದಪ್ರಚಾರ ಸಮ್ಬನ್ಧಿನೀ ಅತೀತ ಯಾತ್ರೆಗಳಲ್ಲಿ ಎಷ್ಟೋ ಬಾರಿ ಕೇಳಲಿಕ್ಕೆ ಸಿಗುವುದೇನೆಂದರೆ - “ಉಪಲಬ್ಧ ವೇದಭಾಷ್ಯಗಳಲ್ಲಿ ಇಂತಹಾ ಅರ್ಥವು ಉಪಲಬ್ಧವಿಲ್ಲ, ಹೀಗಿರುವಾಗ ಇದನ್ನು ಪರಮ್ಪರಾಸಮ್ಮತ ಎಂದು ಹೇಗೆ ಹೇಳಲು ಸಾಧ್ಯ?”. ಇಷ್ಟೇ ಅಲ್ಲ, ಒಂದು ಶತಮಾನದ ಹಿಂದೆ ಒಂದು ಬಾರಿ ಭಾರತವರ್ಷದ ಒಂದು ಸಮ್ಮಾನ್ಯ, ಸಮ್ಪನ್ನ, ಗೃಹಸ್ಥನ ಆಶ್ರಮದಲ್ಲಿ ಉಂಟಾಗುವ ವೇದವ್ಯಾಖ್ಯೆಯ ಸಮ್ಬನ್ಧದಲ್ಲಿ- ‘ವೇದಗಳು ಅನನ್ತ’ ಎಂಬ ವಾಕ್ಯವನ್ನು ಪಡೆದು ಇಲ್ಲಿ ಉಪಸ್ಥಿತ, ಗೃಹಸ್ಥರ ಸಮ್ಪರ್ಕದಲ್ಲಿ ಬಂದಿರುವ ಓರ್ವ ವೇದಭಕ್ತ ಮಹಾಶಯರು ಪರೋಕ್ಷವಾಗಿ ಬಹಳ ಉಪಹಾಸದೊಂದಿಗೆ ತಮ್ಮ ಈ ಉದ್ಗಾರ ಪ್ರಕಟಗೊಳಿಸಿದರು – “ಇಗೋ, ಇಲ್ಲಿಯವರೆಗೆ ಸನಾತನಧರ್ಮ್ಮಿಗಳು ವೇದದ ೧೧೩೧ ಶಾಖೆಗಳೆಂದು ನಂಬುತ್ತಿದ್ದರು, ದಯಾನನ್ದ ಸರಸ್ವತಿಗಳು ನಾಲ್ಕೇ ವೇದಗಳೆಂದರು, ಆದರೆ ಈಗ ವೇದಗಳು ಅನನ್ತವಾಗಿವೆ”! ಏಕೆಂದರೆ ಈ ಮಹಾಶಯರು ಆ ಗೃಹಸ್ಥನ ಯಾವುದೋ ಒಂದು ಪ್ರಮುಖ ವ್ಯಕ್ತಿಯ ದೃಷ್ಟಿಯಲ್ಲಿ ವೇದಗಳ ಪರಪಾರದರ್ಶೀ ಆಗಿದ್ದರು. ಹಾಗಾಗಿ ಅವರ ಉಕ್ತ ಕಥನವೇ ಈ ವಿಚಾರದಲ್ಲಿ ದೃಢ ಪ್ರಮಾಣವಾಯಿತು, ಅದೇನೆಂದರೆ -“ಸತ್ಯವಾಗಿ ನಾವು ವೇದಾರ್ಥದ ಸಮ್ಬನ್ಧದಲ್ಲಿ ಏನೇನು ಹೇಳುತ್ತಿದ್ದೆವೋ, ಅದು ಒಂದು ಸಾರಹೀನವಾದ ಭ್ರಾನ್ತ ಕಲ್ಪನಾಮಾತ್ರವಾಗಿದೆ. ಹಾಗೂ ಇಂತಹಾ ಭ್ರಾನ್ತ ಸಾಹಿತ್ಯದ ಪ್ರಚಾರ-ಪ್ರಸಾರದಲ್ಲಿ ನಮಗಾರೂ ಸಹಯೋಗ ಕೊಡಬಾರದು”.

ಉಕ್ತ ನಿದರ್ಶನದಿಂದ ಕೇವಲ ನಮ್ಮ ಅಭಿಪ್ರಾಯವು ಏನೆಂದರೆ, ವೈಧಿಕ ಸಾಹಿತ್ಯದ ಪರಿಜ್ಞಾನವು ಸ್ವಾಧ್ಯಾಯ ವೈಮುಖ್ಯದಿಂದ ನಮ್ಮಿಂದ ಎಷ್ಟೋ ದೂರ ಹೋಗಿಬಿಟ್ಟಿದೆಯಲ್ಲವೇ? ಇದಕ್ಕಾಗಿ ಈ ಒಂದೇ ನಿದರ್ಶನವು ಪರ್ಯ್ಯಾಪ್ತವಾಗಿದೆ. ಯಾರು ವೈಧಿಕ ಸಾಹಿತ್ಯದೊಂದಿಗೆ ಪ್ರೇಮ ಹೊಂದಿಲ್ಲವೋ, ಅವರ ಮಾತಂತೂ ಹೊರಗಿರಲಿ. ಆದರೆ ಯಾರು ಹಗಲು-ರಾತ್ರಿ ವೇದಭಕ್ತಿಯ ಡಿಣ್ಡಿಮಘೋಷ ಮಾಡುತ್ತಾರೆಯೋ, ಅಂತಹವರಿಗೆ ಯಾವಾಗ ‘ಅನನ್ತಾ ವೈ ವೇದಾಃ’ ವಾಕ್ಯವು ಒಂದು ಉಪಹಾಸದ ಸಾಮಗ್ರಿಯಾಗುತ್ತದೆಯೋ, ಆವಾಗ ಅವಶ್ಯವಾಗಿ ವೇದನೆಯು ಆವಿರ್ಭಾವವಾಗುತ್ತದೆ. ಏಕೆಂದರೆ ನಮ್ಮ ಈ ವೇದಸ್ವರೂಪದಲ್ಲಿ ಅನನ್ತತೆಯೊಂದಿಗೆ ಘನಿಷ್ಟ ಸಮ್ಬನ್ಧವಿದೆ. ಆದ್ದರಿಂದ, ಜೊತೆಗೆ ಇರುವ ಭ್ರಾನ್ತ ಪಥಿಕರ ಭ್ರಾನ್ತಿಯ ನಿರಾಕರಣೆಗಾಗಿಯೂ ಪ್ರಸಙ್ಗೋಪಾತ್ತ ವೇದದ ಅನನ್ತತೆಯ ಪ್ರತಿಪಾದನೆ ಮಾಡುವ ಸ್ವಯಂ ವೇದದ್ದೇ ಆದ ಒಂದು ಆಖ್ಯಾನವನ್ನು ಮೊತ್ತಮೊದಲು ವೇದಪ್ರೇಮಿಗಳ ಮುಂದೆ ಪ್ರಸ್ತುತಪಡಿಸಲಾಗುತ್ತಿದೆ.

ಮಹರ್ಷಿ ಭರದ್ವಾಜರ ಅನನ್ತವೇದ -

“ಸುಪ್ರಸಿದ್ಧ ವೇದನಿಷ್ಠ ಮಹರ್ಷಿ ಭರದ್ವಾಜರು ತಮ್ಮ ವೇದಸ್ವಾಧ್ಯಾಯವಿಷಯಿಣೀ ಜಿಜ್ಞಾಸೆಯನ್ನು ಪೂರ್ತಿಗೊಳಿಸಲಿಕ್ಕಾಗಿ ಆಯುಃಪ್ರವರ್ತ್ತಕ ಇನ್ದ್ರದ ಉಪಸಾನೆ ಮಾಡಿದರು. ಇಂದ್ರವು ಪ್ರಸನ್ನವಾಗಿ ಇವರಿಗೆ ೩೦೦ ವರ್ಷದ ಆಯು ಪ್ರದಾನ ಮಾಡಿತು. ತಮ್ಮ ಆಯಸ್ಸಿನ ಈ ೩೦೦ ವರ್ಷಗಳಲ್ಲಿ ಅನನ್ಯಯೋಗದಿಂದ ವೇದಸ್ವಾಧ್ಯಾಯ ಮಾಡಿದರು. ಕೊನೆಯಲ್ಲಿ ಸಮಯ ಬಂದಾಗ ಭರದ್ವಾಜರ ಶರೀರವು ಸರ್ವಥಾ ಜೀರ್ಣ-ಶೀರ್ಣವಾಯಿತು, ವೃದ್ಧಾವಸ್ಥೆಯು ಮನೆಮಾಡಿತು, ಭರದ್ವಾಜರು ಶಯ್ಯಾಶ್ರಯಿಗಳಾದರು. ಭರದ್ವಾಜರು ಈ ಜೀರ್ಣಾವಸ್ಥೆಯಿಂದ ಹಾಸಿಗೆಯಲ್ಲಿ ಬಿದ್ದಿದ್ದು ಅನ್ತಿಮ ಸಮಯದ ಪ್ರತೀಕ್ಷೆಯಲ್ಲಿದ್ದರು. ಒಂದು ದಿನ ಇನ್ದ್ರದೇವತೆಯು ಸೂಕ್ಷ್ಮ ರೂಪದಲ್ಲಿ ಅಲ್ಲಿ ಪ್ರಕಟವಾಯಿತು. ಅದು ಭರದ್ವಾಜರನ್ನು ಕುರಿತು ಹೇಳಿತು – “ಭರದ್ವಾಜನೇ! ಒಂದುವೇಳೆ ನಾನು ನಿನಗೆ ೧೦೦ ವರ್ಷದ ಆಯಸ್ಸನ್ನು ನೀಡಿದರೆ, ನೀನು ನಿನಗೆ ಪ್ರಾಪ್ತ ಆಯುವಿನ ಉಪಯೋಗವನ್ನು ಯಾವ ಕಾರ್‍ಯ್ಯದಲ್ಲಿ ತೊಡಗಿಸುವೆ?” ವೇದಾನನ್ಯಭಕ್ತ ಭರದ್ವಾಜರ ಮುಖದಿಂದ ಹೊರಟದ್ದೇನೆಂದರೆ – “ನನಗೆ ನಿಮ್ಮಿಂದ ಪ್ರಾಪ್ತವಾಗುವ ಈ ಆಯಸ್ಸಿನಿಂದ ವೇದಸ್ವಾಧ್ಯಾಯವನ್ನೇ ಮುಂದುವರೆಸುತ್ತೇನೆ, (ಏಕೆಂದರೆ ಈಗಲೂ ನನ್ನ ವೇದಜ್ಞಾನವು ಅಪೂರ್ಣವೇ ಆಗಿದೆ).” (ಮನದಲ್ಲಿಯೇ ನಸುನಗುತ್ತಾ ಇನ್ದ್ರವು ಭರದ್ವಾಜರ ಈ ತೃಷ್ಣದ ನಿರಾಕರಣೆ ಮಾಡಲಾರಂಭಿಸಿತು) ಭರದ್ವಾಜರ ದೃಷ್ಟಿಯ ಮುಂದೆ ಹಿಂದೆಂದೂ ಅವರು ಕಂಡಿರದ ಪರ್ವತಾಕಾರದ ವೇದದ ಮೂರು ವಿಶಾಲ ಸ್ತೂಪಗಳು ಪ್ರಕಟವಾದವು. ಆ ಮೂರೂ ವೇದಪರ್ವತಗಳಿಂದ ಇಂದ್ರವು ಒಂದೊಂದು ಮುಷ್ಠಿ ಭರ್ತಿ ವೇದವನ್ನು ತೆಗೆದಿಟ್ಟು, ಭರದ್ವಾಜರಲ್ಲಿ ಕೇಳಿತು – “ಭರದ್ವಾಜ! ನೋಡಿದೆಯಾ, ನನ್ನ ಮುಷ್ಠಿಯಲ್ಲಿ ಏನಿದೆ? ಇದು ವೇದವು. ಭರದ್ವಾಜನೇ! “ವೇದಗಳು ಅನನ್ತ”, ನಿನ್ನ ಆಯಸ್ಸಿನ ಭುಕ್ತ ಮುನ್ನೂರು ವರ್ಷಗಳಲ್ಲಿ ನೀನು ಈ ಮೂರು ಮುಷ್ಠಿಯಲ್ಲಿ ಎಷ್ಟು ವೇದತತ್ತ್ವವು ಪ್ರಾಪ್ತವಾಗೆದೆಯೆಂದು ನೋಡು. ಈಗಲೂ ಆ ಅನನ್ತ ಪರ್ವತಾಕಾರ ಅನನ್ತ ವೇದವು ನಿನಗಾಗಿ ಅವಿಜ್ಞಾತವೇ ಆಗಿದೆ. ಆದ್ದರಿಂದ ಇನ್ನೂ ೧೦೦ ವರ್ಷಗಳು ಸಿಕ್ಕಿದರೆ ನಾನು ಸಮ್ಪೂರ್ಣ ವೇದವನ್ನು ತಿಳಿದುಕೊಳ್ಳುತ್ತೇನೆ ಎಂಬೀ ಆಸೆಯನ್ನು ಬಿಟ್ಟುಬಿಡು”


ಸ್ಪಷ್ಟವಾಗಿ ‘ಅನನ್ತಾ ವೈ ವೇದಾಃ’ ಘೋಷಣೆಯ ಮಾಧ್ಯಮದಿಂದ ದೇವೇನ್ದ್ರವು ನಿಮ್ನಲಿಖಿತ ರೂಪದಿಂದ ವೇದದ ಅನನ್ತತೆಯ ಸಮರ್ಥನೆ ಮಾಡುತ್ತಿದೆ –

“ಭರದ್ವಾಜೋ ಇ ವೈ ತ್ರಿಭಿರಾಯುರ್ಭಿರ್ಬ್ರಹ್ಮಚರ್ಯ್ಯಮುವಾಸ | 
ತಂ ಹ ಜೀರ್ಣಂ, ಸ್ಥವಿರಂ, ಶಯಾನಂ-ಇನ್ದ್ರ ಉಪವ್ರಜ್ಯ ಉವಾಚ | 
ಭರದ್ವಾಜ ! ಯತ್ತೇ ಚತುರ್ಥಮಾಯುರ್ದದ್ಯಾಂ, ಕಿಮೇನೇನ ಕುರ್ಯ್ಯಾ ಇತಿ? | ಬ್ರಹ್ಮಚರ್ಯ್ಯಮೇವೈನೇನ ಚರೇಯಮಿತಿ ಹೋವಾಚ | 
ತಂ ಹ ತ್ರೀನ್ ಗಿರಿರೂಪಾನವಿಜ್ಞಾತಾನಿವ ದರ್ಶಯಾಞ್ಚಕಾರ | 
ತೇಷಾಂ ಹೈಕೈಕಸ್ಮಾನ್ಮುಷ್ಟಿಮಾದದೇ | 
ಸ ಹೋವಾಚ, ಭರದ್ವಾಜೇತ್ಯಾಮನ್ತ್ರ್ಯ | 
ವೇದಾ ವಾ ಏತೇ | 
“ಅನನ್ತಾ ವೈ ವೇದಾಃ” | 
ಏತದ್ವಾ ಏತೈಸ್ತ್ರಿಭಿರಾಯುರ್ಭಿರನ್ವವೋಚಥಾಃ | 
ಅಥ ತ ಇತರದನೂಕ್ತಮೇವ’  | (ತೈ.ಬ್ರಾಂ ೩|೧೦|೧೧)

ಕೃತಯುಗದಂತಹಾ ಶಾನ್ತಯುಗದ ಶಾನ್ತ ವಾತಾವರಣದಲ್ಲಿ ಸತತ ಬ್ರಹ್ಮಚರ್ಯ್ಯದ ಅನುಗಮನ ಮಾಡುವಂತಹಾ ತಪಃಪೂತ ಮೇಧಾವೀ ಭರದ್ವಾಜರಂತಹಾ ಸರ್ವಸಮರ್ಥ ಮಹರ್ಷಿಗಳು ನಿರನ್ತರ ಮುನ್ನೂರು ವರ್ಷಗಳ ಪರ್ಯ್ಯನ್ತ ವೇದಸ್ವಾಧ್ಯಾಯ ಮಾಡಿದರು, ಹಾಗೂ ಪರಿಣಾಮದಲ್ಲಿ ಪರ್ವತಾಕಾರ ಅನನ್ತ ತ್ರಯೀವೇದಗಳಿಂದ ಮುಷ್ಠಿ ಭರ್ತಿಯಷ್ಟು ವೇದಜ್ಞಾನವು ಪ್ರಾಪ್ತವಾಗಿತ್ತು, ಹಾಗಾಗಿ ಅವರಿಗೆ ಇನ್ನೂ ವೇದಜ್ಞಾನ ಬೇಕೆಂಬ ಲಾಲಸೆ ಉಳಿದಿತ್ತು. ಇಂತಹಾ ದಶೆಯಲ್ಲಿ ಕಲಿಯುಗದಂತಹಾ ಅಶಾನ್ತಯುಗದ ಅಶಾನ್ತ ವಾತಾವರಣದಲ್ಲಿ ಬ್ರಹ್ಮಚರ್ಯ್ಯ, ತಪಃ, ಸತ್ಯ, ಇತ್ಯಾದಿ ಸ್ವಾಧ್ಯಾಯೋಪಯಿಕ ಸಾಧನಗಳಿಂದ ವಞ್ಚಿತ ಸ್ವಲ್ಪಾಯುವುಳ್ಳ ಇಂದಿನ ದ್ವಿಜಾತಿಯ ಅನ್ತರ್ಜಗತ್ತಿನಲ್ಲಿ ತಾನಾಗಿಯೇ ಈ ಭಾವನೆಯ ಉದ್ರೇಕವು ಸಹಜವಾಗಿರುತ್ತದೆ. ಅದೇನೆಂದರೆ ಕೃತಯುಗದಲ್ಲಿ ಭರದ್ವಾಜರಂತಹಾ ಮಹರ್ಷಿಯೇ ವೇದದ ಪೂರ್ಣ ಜ್ಞಾನವನ್ನು ಪ್ರಾಪ್ತಗೊಳಿಸಿಕೊಳ್ಳಲಾಗದಿರುವಾಗ, ಈ ಘೋರಯುಗದಲ್ಲಿ ನಮ್ಮಂತಹಾ ಹೀನಶಕ್ತಿಗಳಿಗೆ ವೇದಸ್ವಾಧ್ಯಾಯದತ್ತಣ ಪ್ರವೃತ್ತರಾಗುವುದೇ ನಿರರ್ಥಕ ಎಂಬ ಭಾವನೆ. ಪ್ರಶ್ನೆ ಉಂಟಾಗುವುದೇನೆಂದರೆ, ವೇದಗಳು ಅನನ್ತವಾಗಿರುವಾಗ, ಅದರ ಜ್ಞಾನವನ್ನು ಪಡೆಯಲು ಸಾಧ್ಯವಿಲ್ಲ, ಸಮಸ್ತ ಆಯಸ್ಸನ್ನು ತೊಡಗಿಸಿದರೂ ಯಾವುದರ ಕಣಮಾತ್ರದ ಬೋಧ ಉಂಟಾಗಬೇಕಾದರೆ, ಇಂತಹಾ ಅನನ್ತವೇದದ ಪ್ರವೃತ್ತಿಯ ಆದೇಶವನ್ನೇ ಶ್ರುತಿಯು ಏಕೆ ಹೇಳಿತು? ಏಕೆಂದರೆ ಪರಿಪೂರ್ಣತೆಯ ಹೊರತು ಯಾವುದೇ ವಿಷಯದಲ್ಲಿ ಕೌಶಲ್ಯವನ್ನು ಪಡೆಯಲು ಸಾಧ್ಯವಿಲ್ಲ. ಇದರ ಹೊರತು ಅನ್ಯ ಶ್ರುತಿಗಳು ಬಹಳ ಸ್ಥಳಗಳಲ್ಲಿ ಬಹಳ ಮಹರ್ಷಿಗಳಿಗಾಗಿ - “ಈ ಮಹರ್ಷಿಯು ವೇದದ ಪರಪಾರದರ್ಶೀ, ಈತನು ವೇದವಿತ್, ಇವನು ಸರ್ವವಿತ್” ಹೀಗೆ ಘೋಷಿಸಿದಾಗ ಉಕ್ತ ತೈತ್ತಿರೀಯ ಶ್ರುತಿಯ – “ವೇದಜ್ಞಾನದ ಪರಿಪೂರ್ಣತೆಯು ಅಸಮ್ಭವ” ಎಂಬ ವಿರೋಧೀ ಸಿದ್ಧಾನ್ತದ ಸಮನ್ವಯವಾದರೂ ಹೇಗೆ ಮಾಡುವುದು? ಸತ್ಯವಾಗಿ ತೈತ್ತಿರೀಯ ಶ್ರುತಿಯ ಉಕ್ತ ಆಖ್ಯಾನವು ವೇದಸ್ವಾಧ್ಯಾಯ ಪ್ರವೃತ್ತಿಯಿಂದ ನಮ್ಮನ್ನು ಉದಾಸೀನರನ್ನಾಗಿಸುತ್ತದೆ. ಈಗ ನಮಗಿರುವ ಉಪಾಯವೇನು? ಯಾವುದರ ಅನುಗಮನದಿಂದ ನಾವೂ ವೇದದ ಪರಿಪೂರ್ಣತೆಯ ಅನುಗಾಮಿಗಳಾಗಲು ಸಾಧ್ಯ ಎಂಬ ವಿಶ್ವಾಸ ಮೂಡುತ್ತದೆ? ಇದೆ, ಅವಶ್ಯವಾಗಿ ಇದೆ! ಯಾವ ತೈತ್ತಿರೀಯ ಶ್ರುತಿಯು ತನ್ನ ಪೂರ್ವಾಙ್ಗದಿಂದ ವೇದಗಳ ಅನನ್ತತೆಯನ್ನು ಪ್ರದರ್ಶಿಸಿದೆಯೋ, ಅದು ಒಂದು ದೃಷ್ಟಿಕೋನದಲ್ಲಿ ನಿರಾಸೆ ಮೂಡಿಸುತ್ತದೆ, ಆದರೆ ಅದೇ ತೈತ್ತಿರೀಯ ಶ್ರುತಿಯು ತನ್ನ ಉತ್ತರಾಙ್ಗದಲ್ಲಿ ಒಂದು ಉಪಾಯವಿಶೇಷದಿಂದ ಉಪಾಧಿಭೇದದಿಂದ ಅನನ್ತವೇದವನ್ನು ಸಾದಿ, ಸಾನ್ತವನ್ನಾಗಿಸುತ್ತಾ ಎರಡನೇ ದೃಷ್ಟಿಕೋನದಿಂದ ನಮಗೆ ಒಂದು ಆಶಾಮಯ ವಿಶ್ವಾಸವನ್ನೂ ಕೊಡುತ್ತಿದೆ. ಆ ಉಪಾಯದಿಂದ ನೀವು ವೇದವಿದರೂ ಆಗಬಹುದು, ಅಮೃತತ್ತ್ವವನ್ನೂ ಪಡೆಯಬಹುದು, ಸಮ್ಪೂರ್ಣ ವಿಶ್ವದ ವೈಭವವನ್ನೂ ಪ್ರಾಪ್ತಗೊಳಿಸಿಕೊಳ್ಳಬಹುದು, ಕೃತಕೃತ್ಯರಾಗಬಹುದು. ಶ್ರುತಿಯ ಆ ಉಪಾಯವೇ ಸುಪ್ರಸಿದ್ಧ ‘ಸಾವಿತ್ರಾಗ್ನಿ’. ಇದರ ಮೌಲಿಕ ಸ್ವರೂಪ-ಪರಿಚಯದಿಂದ ಸತೃಷ್ಣ ಭರದ್ವಾಜರು ಕೊನೆಯಲ್ಲಿ ಸನ್ತುಷ್ಟರಾಗಿದ್ದರು. ಇದರ ಪರಿಜ್ಞಾನದಿಂದ ವಿಶ್ವೋಪಾದಿಕ ಸಾದಿ, ಸಾನ್ತ ವೇದಸ್ವರೂಪದ ಪರಿಪೂರ್ಣತೆಯು ಗತಾರ್ಥವಾಗಿದೆ. ಇದರ ಸಂಕ್ಷಿಪ್ತ ಸ್ವರೂಪ-ಪ್ರದರ್ಶನವೇ ಪ್ರವೃತ್ತ ವೇದಸ್ವರೂಪ ನಿರೂಪಣಾ ಪ್ರಕರಣದ ಮುಖ್ಯ ಲಕ್ಷ್ಯ.

ಸಾವಿತ್ರಾಗ್ನಿಯ ತಟಸ್ಥ ಲಕ್ಷಣ –

ಸಾವಿತ್ರಾಗ್ನಿಯು ಎಂತಹಾ ಅಗ್ನಿ ಎಂದರೆ, ಅದು ತನ್ನ ಮರ್ತ್ಯರೂಪದಿಂದ ಯಾವ ಪ್ರಜಾಪತಿಯ ಮರ್ತ್ಯಭಾಗದ ಮೇಲೆ ತನ್ನ ಪ್ರಭುತ್ವವನ್ನು ಸ್ಥಾಪಿಸಿಟ್ಟಿದೆಯೋ, ಅಲ್ಲಿ ತನ್ನ ಅಮೃತರೂಪದಿಂದ ಪ್ರಜಾಪತಿಯ ಅಮೃತಭಾಗವನ್ನು ಸ್ವಾಯತ್ತಗೊಳಿಸಿಟ್ಟಿದೆ.

ಸಾವಿತ್ರಾಗ್ನಿಯು ಎಂತಹಾ ಅಗ್ನಿ ಎಂದರೆ, ಅದು ತನ್ನ ಮರ್ತ್ಯಭಾಗದಿಂದ ವೇದಮೂಲಕ ಪ್ರವೃತ್ತಿಲಕ್ಷಣ ಯಜ್ಞ-ತಪ-ದಾನಕರ್ಮ್ಮಗಳಿಂದ ಲೌಕಿಕ ವೈಭವದ ರಕ್ಷಣೆ ಮಾಡುತ್ತಲಿದೆ, ಹಾಗೂ ತನ್ನ ಅಮೃತಭಾಗದಿಂದ ವೇದಮೂಲಕ ನಿವೃತ್ತಿಲಕ್ಷಣ ಯಜ್ಞ-ತಪ-ದಾನಕರ್ಮ್ಮಗಳಿಂದ ಆತ್ಮವೈಭವವನ್ನು ಸುರಕ್ಷಿತವಾಗಿರಿಸಿದೆ.

ಸಾವಿತ್ರಾಗ್ನಿಯು ಎಂತಹಾ ಅಗ್ನಿ ಎಂದರೆ, ಅದು ತನ್ನ ಜ್ಯೋತಿರ್ಭಾಗದಿಂದ ವಿಶ್ವಮರ್ಯ್ಯಾದೆಯ ಸಞ್ಚಾಲನಗೊಳಿಸುವ ಪ್ರಾಣದೇವತೆಗಳ ಸ್ವರೂಪವನ್ನು ಸುರಕ್ಷಿತವಾಗಿರಿಸಿದೆ, ತನ್ನ ಗೌಭಾಗದಿಂದ ವಿಶ್ವದ ಪಾಞ್ಚಭೌತಿಕ ವರ್ಗದ ಸ್ವರೂಪ ಸಮ್ಪಾದನೆ ಮಾಡಿಟ್ಟಿದೆ, ಹಾಗೂ ತನ್ನ ಆಯುರ್ಭಾಗದಿಂದ ಚರ-ಅಚರದ ಆತ್ಮಪ್ರತಿಷ್ಠಾ ಆಗಿದೆ.

ಸಾವಿತ್ರಾಗ್ನಿಯು ಎಂತಹಾ ಅಗ್ನಿ ಎಂದರೆ, ಅದು ತನ್ನ ಊರ್ಧ್ವಲಕ್ಷಣ ಅಮೃತಭಾಗದಿಂದ ಬ್ರಹ್ಮನಿಃಶ್ವಸಿತ, ಹಾಗೂ ಬ್ರಹ್ಮಸ್ವೇದವೇದವನ್ನು ಸ್ವಸ್ವರೂಪದಿಂದ ಪ್ರತಿಷ್ಠಿತಗೊಳಿಸಿದೆ, ತನ್ನ ಪ್ರಾತಿಸ್ವಿಕ (ಅಮೃತಮೃತ್ಯುಲಕ್ಷಣ ಉಭಯವಿಧ) ರೂಪದಿಂದ ಗಾಯತ್ರೀ-ಮಾತ್ರಿಕವೇದವನ್ನು ಸ್ವಸ್ವರೂಪದಿಂದ ಪ್ರತಿಷ್ಠಿತಗೊಳಿಸಿದೆ, ಹಾಗೂ ಅಧೋಲಕ್ಷಣ ತನ್ನ ಮರ್ತ್ಯಭಾಗದಿಂದ ಚಾನ್ದ್ರವೇದ ಮತ್ತು ಯಜ್ಞಮಾತ್ರಿಕವೇದದ ಸ್ವರೂಪರಕ್ಷಣೆ ಮಾಡಿಟ್ಟಿದೆ.

ಸಾವಿತ್ರಾಗ್ನಿಯು ಎಂತಹಾ ಅಗ್ನಿ ಎಂದರೆ, ಅದು ತನ್ನ ವಾಜಿರೂಪದಿಂದ ತನ್ನ ಉಪಾಸಕ ಮಹರ್ಷಿ ಯಾಜ್ಞವಲ್ಕ್ಯರಿಗೆ ಶುಕ್ಲಯಜುರ್ವೇದದ ವರಪ್ರದಾನ ಮಾಡಿತು.

ಸಾವಿತ್ರಾಗ್ನಿಯು ಎಂತಹಾ ಅಗ್ನಿ ಎಂದರೆ, ಅದು ಅಗ್ನಿಮಯೀ ಪೃಥಿವೀ, ವಾಯುಮಯ ಅನ್ತರಿಕ್ಷ, ಇನ್ದ್ರಮಯ ದ್ಯುಲೋಕ, ಬೃಹಸ್ಪತಿಮಯ ಬೃಹನ್ಮಣ್ಡಲ, ಪ್ರಜಾಪತಿಮಯ ಪರಮೇಷ್ಠೀಲೋಕ, ಬ್ರಹ್ಮಮಯ ಸ್ವಯಮ್ಭೂಲೋಕ, ಈ ಆರರ ಸ್ವರೂಪ-ರಕ್ಷಣೆ ಮಾಡುತ್ತಾ – ಆ ಅನನ್ತವೇದವಿಭೂತಿಯನ್ನು ಈ ಷಟ್ಪರ್ವದ ವಿಶ್ವದಲ್ಲಿ ಸೀಮಿತಗೊಳಿಸಿಟ್ಟಿದೆ.

ಸಾವಿತ್ರಾಗ್ನಿಯು ಎಂತಹಾ ಅಗ್ನಿ ಎಂದರೆ, ಅದಕ್ಕೆ (ಚಿತ್ಯಾಗ್ನಿಯಂತೆ) ಪಕ್ಷವೂ ಇಲ್ಲ, ಪುಚ್ಛವೂ ಇಲ್ಲ. ಆದರೆ ಪಕ್ಷಪುಚ್ಛವುಳ್ಳ ಚಿತ್ಯಾಗ್ನಿಯು ಅದರ ಮುಖ (ಪ್ರವೃತ್ತಿದ್ವಾರ) ಆಗಿದೆ, ಪ್ರತ್ಯಕ್ಷದ್ರಷ್ಟ ಆದಿತ್ಯವು ಅದರ ಮಸ್ತಕವಾಗಿದೆ. ಹೇಗೆ ಮಹಾವಸ್ತ್ರದಲ್ಲಿ ಅನ್ಯ ವಸ್ತುಗಳನ್ನು ಸೂಜಿಯಿಂದ ಹೊಲಿಯಬಹುದೋ, ಅದೇ ರೀತಿ ಪೂರ್ವೋಕ್ತ ಆರೂ ದೇವತೆಗಳು ಈ ಸಾವಿತ್ರಾಗ್ನಿಯಿಂದ ಬದ್ಧರಾಗುತ್ತಿರುತ್ತಾರೆ. ಆದ್ದರಿಂದಲೇ ಈ ಸರ್ವಮೂರ್ತ್ತಿ ಅಗ್ನಿಯು ‘ಸಾವಿತ್ರ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ.

ಸಾವಿತ್ರಾಗ್ನಿಯೇ ವಾಸ್ತವಿಕ ಅಗ್ನಿಯು, ಅಗ್ನಿಯೇ ವಿಶ್ವವು, ವಿಶ್ವವೇ ವೇದವು, ಈ ವೇದಾತ್ಮಕ ವಿಶ್ವದ ಸಾವಿತ್ರಾಗ್ನಿರಹಸ್ಯವನ್ನು ತಿಳಿಯುವುದೇ ವೇದದ ಮೌಲಿಕ ಸ್ವರೂಪವನ್ನು ಸಾಕ್ಷಾತ್ಕರಿಸಿಕೊಳ್ಳುವುದು ಎಂದರ್ಥ.

ಸಾವಿತ್ರಾಗ್ನಿಯ ಈ ಸರ್ವವ್ಯಾಪ್ತಿಯನ್ನು ಸ್ಪಷ್ಟೀಕರಿಸುತ್ತಾ ಇನ್ದ್ರವು ಭರದ್ವಾಜರಿಗೆ ಇಂತೆಂದಿತು –

೧ – “ಏಹಿ ! ಇಮಂ ವಿದ್ಧಿ | ಅಯಂ ವೈ ‘ಸರ್ವವಿಧ್ಯಾ’ – ಇತಿ | ತಸ್ಮೈ ಹೇತಮಗ್ನಿಂ ಸಾವಿತ್ರಮುವಾಚ | ತಂ ಸ ವಿದಿತ್ವಾ, ಅಮೃತೋ ಭೂತ್ವಾ, ಸ್ವರ್ಗ ಲೋಕಮಿಯಾಯ-ಆದಿತ್ಯಸ್ಯ ಸಾಯುಜ್ಯಮ್ | ಅಮೃತೋ ಹೈವ ಭೂತ್ವಾ ಸ್ವರ್ಗ ಲೋಕಮೇತಿ, ಆದಿತ್ಯಸ್ಯ ಸಾಯುಜ್ಯಂ, ಯ ಏವಂ ವೇದ |”

೨ – “ಏಷಾ ಉ ತ್ರಯೀವಿಧ್ಯಾ | ಯಾವನ್ತಂ ಹ ವೈ ತ್ರಯ್ಯಾ ವಿಧ್ಯಯಾ ಲೋಕಂ ಜಯತಿ, ತಾವನ್ತಂ ಲೋಕಂ ಜಯತಿ, ಯ ಏವಂ ವೇದ |”

೩ – “ಅಗ್ನೇರ್ವಾ ಏತಾನಿ ನಾಮಧೇಯಾನಿ | 
ಅಗ್ನೇರೇವ ಸಾಯುಜ್ಯಂ ಸಲೋಕತಾಮಾಪ್ನೋತಿ, ಯ ಏವಂ ವೇದ |
ವಾಯೋರ್ವಾ ಏತಾನಿ ನಾಮಧೇಯಾನಿ | 
ವಾಯೋರೇವ ಸಾಯುಜ್ಯಂ ಸಲೋಕತಾಮಾಪ್ನೋತಿ, ಯ ಏವಂ ವೇದ |
ಇನ್ದ್ರಸ್ಯ ವಾ ಏತಾನಿ ನಾಮಧೇಯಾನಿ | 
ಇನ್ದ್ರಸ್ಯೈವ ಸಾಯುಜ್ಯಂ ಸಲೋಕತಾಮಾಪ್ನೋತಿ, ಯ ಏವಂ ವೇದ |
ಬೃಹಸ್ಪತಿರ್ವಾ ಏತಾನಿ ನಾಮಧೇಯಾನಿ | 
ಬೃಹಸ್ಪತೇರೇವ ಸಾಯುಜ್ಯಂ ಸಲೋಕತಾಮಾಪ್ನೋತಿ, ಯ ಏವಂ ವೇದ |
ಪ್ರಜಾಪತೇರ್ವಾ ಏತಾನಿ ನಾಮಧೇಯಾನಿ | 
ಪ್ರಜಾಪತೇರೇವ ಸಾಯುಜ್ಯಂ ಸಲೋಕತಾಮಾಪ್ನೋತಿ, ಯ ಏವಂ ವೇದ |
ಬ್ರಹ್ಮಣೋ ವಾ ಏತಾನಿ ನಾಮಧೇಯಾನಿ | 
ಬ್ರಹ್ಮಣ ಏವ ಸಾಯುಜ್ಯಂ ಸಲೋಕತಾಮಾಪ್ನೋತಿ, ಯ ಏವಂ ವೇದ |”

೪ – “ಸ ವಾ ಏಷೋಽಗ್ನಿರಪಕ್ಷಪುಚ್ಛೋ ವಾಯುರೇವ | ತಸ್ಯ-ಅಗ್ನಿರ್ಮುಖಂ, ಅಸಾವಾದಿತ್ಯಃ – ಶಿರಃ | ಸ ಯದೇತೇ ದೇವತೇ ಅನ್ತರೇಣ, ತತ್ ಸರ್ವ್ವಂ ಸೀವ್ಯತಿ | ತಸ್ಮಾತ್ ಸಾವಿತ್ರಃ” |

- ತೈತ್ತಿರೀಯಬ್ರಾಹ್ಮಣ ೩ ಕಾಣ್ಡ | ೧೦೩ ಪ್ರಪಾಠಕ | ೨೧ ಅನುವಾಕ |

ಸಾವಿತ್ರಾಗ್ನಿಮೂಲಕ ಗ್ರಹೋಪಗ್ರಹಭಾವ -

ಇಲ್ಲಿಯವರೆಗೆ ತಟಸ್ಥಲಕ್ಷಣದೃಷ್ಟಿಯಿಂದ ಸಾವಿತ್ರಾಗ್ನಿಯ ಸಾಮಾನ್ಯ ವಿಚಾರವಾಯಿತು. ಈಗ ಸ್ವರೂಪಲಕ್ಷಣದೃಷ್ಟಿಯಿಂದ ಇದರ ವಿಶೇಷ ಚಿಂತನೆ ಮಾಡಬೇಕಾಗಿದೆ. ಯಾವ ಸಾವಿತ್ರಾಗ್ನಿಯು ಅಗ್ನಿ, ವಾಯು, ಇನ್ದ್ರ, ಬೃಹಸ್ಪತಿ, ಪ್ರಜಾಪತಿ, ಬ್ರಹ್ಮ, ಎಂಬೀ ೬ ದೇವತೆಗಳನ್ನು ತನ್ನಲ್ಲಿ ಹೊಲಿದಿಟ್ಟಿದೆಯೋ; ಯಾವ ಸಾವಿತ್ರಾಗ್ನಿಯು ಸ್ವಯಂ ತ್ರಯೀವಿಧ್ಯಾಮಯವಾಗುತ್ತಾ ಈ ಆರೂ ವೇದಸಂಸ್ಥಾಗಳ ಪ್ರತಿಷ್ಠಾ ಆಗುತ್ತಿದೆಯೋ; ಆ ಸಾವಿತ್ರಾಗ್ನಿಯ, ಹಾಗೂ ಆ ಸಾವಿತ್ರಾಗ್ನಿಯ-ಯಾವುದರ ಪರಿಜ್ಞಾನದಿಂದ ಭರದ್ವಾಜರ ಪ್ರವೃದ್ಧ ವೇದತೃಷ್ಣೆಯು ಶಾನ್ತವಾಯಿತೋ; ಅದು ಯಾವ ಸ್ವರೂಪ?, ಮೊದಲು ಸಂಕ್ಷೇಪದಿಂದ ಈ ಪ್ರಶ್ನೆಗಳನ್ನು ವಿಚಾರ ಮಾಡಲಾಗುತ್ತದೆ. ಅನನ್ತರ ಕ್ರಮವಾಗಿ ಇದಕ್ಕೆ ಸಮ್ಬನ್ಧಿಸಿದ ೬ ವೇದಸಂಸ್ಥಾಗಳ ಸ್ಪಷ್ಟೀಕರಣ ಮಾಡಲಾಗುತ್ತದೆ.

‘ಸಾವಿತ್ರಾಗ್ನಿ’ ಎಂಬ ಶಬ್ದದಿಂದ ಸ್ಪಷ್ಟವಾಗಿ ಪ್ರತೀತವಾಗುತ್ತಿರುವುದೇನೆಂದರೆ, ಈ ಅಗ್ನಿಯ ಮತ್ತು ಸವಿತಾಪ್ರಾಣದ ಘನಿಷ್ಟ ಸಮ್ಬನ್ಧ. ಸವಿತಾಪ್ರಾಣದ ಸಮ್ಬನ್ಧದಿಂದಲೇ ಈ ಅಗ್ನಿಯು ‘ಸಾವಿತ್ರ’ ಎಂದು ಕರೆಯಲ್ಪಟ್ಟಿದೆ. ಹಾಗಾಗಿ ಇದರ ಸ್ವರೂಪ ಪರಿಚಯಕ್ಕಾಗಿ ನಮಗೆ ಮೊದಲು ತದಭಿನ್ನ, ಆದರೆ ತದ್ರೂಪ ‘ಸವಿತಾಪ್ರಾಣ’ದ ವಿಚಾರ ಮಾಡಬೇಕಾಗುತ್ತದೆ. ಹಾಗೂ ಇದಕ್ಕಾಗಿ ‘ಗ್ರಹೋಪಗ್ರಹ ವಿಜ್ಞಾನ’ದ ಆಶ್ರಯ ಪಡೆಯಬೇಕಾಗುತ್ತದೆ. ಯಾವ ವಸ್ತು ಪಿಣ್ಡವು ತನ್ನ ಅನೇಕ ಅನುಯಾಯಿಗಳನ್ನು ಜೊತೆಯಲ್ಲಿ ಸೇರಿಸಿಕೊಂಡು ಸ್ವಸ್ವರೂಪದಿಂದ ಪ್ರತಿಷ್ಠಿತವಾಗಿರುತ್ತದೆಯೋ, ಅದೇ ‘ಗ್ರಹ’ ಎಂದು ಕರೆಯಲ್ಪಡುತ್ತದೆ, ಹಾಗೂ ಈ ಗ್ರಹದ್ದೇ ಆದ ಪ್ರವರ್ಗ್ಯಾಂಶಗಳಿಂದ ಉತ್ಪನ್ನ, ಈ ಗ್ರಹದಿಂದ ನಿತ್ಯಯುಕ್ತ ಗ್ರಹಾನುಯಾಯಿಯು ‘ಉಪಗ್ರಹ’ (ಗ್ರಹದ ಸಮೀಪ, ಅನುವರ್ತ್ತೀ ಗ್ರಹ) ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಗ್ರಹವು ಸದಾ ಒಂದೇ ಆಗಿರುತ್ತದೆ, ಆದರೆ ಉಪಗ್ರಹವು ಸದಾ ಅನೇಕವಿರುತ್ತದೆ. ವೈಧಿಕವಿಜ್ಞಾನದ ಪರಿಭಾಷೆಯ ಅನುಸಾರ ಮುಖ್ಯಾಧಿಷ್ಠಾತಾರೂಪ ಗ್ರಹವನ್ನು ‘ಇನ್ದ್ರ’ ಎಂದು ಕರೆಯಲಾಗುತ್ತದೆ, ಹಾಗೂ ತದನುವರ್ತ್ತೀ ಉಪಗ್ರಹಗಳನ್ನು ‘ಜನತಾ’ ಎಂದು ಕರೆಯಲಾಗುತ್ತದೆ. ‘ಏಕೈಕೋ ವೈ ಜನತಾಯಾಮಿನ್ದ್ರಃ’ (ತೈ.ಬ್ರಾಂ. ೧|೪|೬|೧) ಈ ನಿಗಮ ವಚನದ ಅನುಸಾರ ಉಪಗ್ರಹಭೂತಾ ಜನತಾದಲ್ಲಿ (ಸಮೂಹ, ರಾಶಿ, ಸಂಘ) ಅವಶ್ಯವಾಗಿ ಒಂದೊಂದು ಗ್ರಹಲಕ್ಷಣವುಳ್ಳ ಇನ್ದ್ರವಿರುತ್ತದೆ. ಇನ್ದ್ರದ ಹೊರತು ಜನತಾ ಅಪ್ರತಿಷ್ಠಿತವಾಗಿರುತ್ತದೆ, ಜನತಾದ ಹೊರತು ಇನ್ದ್ರವೂ ಅಪ್ರತಿಷ್ಠಿತವಾಗಿರುತ್ತದೆ. ಇಬ್ಬರಲ್ಲಿಯೂ ಪರಸ್ಪರ ಉಪಕಾರ್ಯ್ಯ, ಉಪಕಾರಕ ಸಮ್ಬನ್ಧವಿದೆ. ವೈಧಿಕಯಜ್ಞಪರಿಭಾಷೆಯ ಅನುಸಾರ ಮುಖ್ಯಾಧಿಷ್ಠಾತಾರೂಪ ಗ್ರಹವನ್ನು ‘ಪ್ರತಿಪತ್’ ಎಂದು ಕರೆಯಲಾಗಿದೆ. ಉಪಗ್ರಹವು ಇದರಲ್ಲಿಯೇ ಪ್ರಪನ್ನವಾಗಿರುತ್ತದೆ, ಗ್ರಹವೇ ಉಪಗ್ರಹಗಳ ಉಪಕ್ರಮೋಪಸಂಹಾರಭೂಮಿಯಾಗಿದೆ, ಹಾಗಾಗಿ ಇದನ್ನು ಪ್ರತಿಪತ್ ಎಂದು ಕರೆಯುವುದು ಅನ್ವರ್ಥಕ. ಹಾಗೂ ಉಪಗ್ರಹಗಳನ್ನು ‘ಅನುಚರ’ರೆಂದು ಕರೆಯಲಾಗಿದೆ. ಗ್ರಹದ ಮೂಲವಾಗಿದ್ದು ಈ ಉಪಗ್ರಹಗಳು ಅದರ ಅನುಗತವಾಗಿಯೇ ಇರುತ್ತವೆ, ಹಾಗಾಗಿ ಇವನ್ನು ‘ಅನುಚರ’ರೆಂದು ಕರೆಯುವುದು ಅನ್ವರ್ಥಕ. ಈ ರೀತಿ ಗ್ರಹ, ಇನ್ದ್ರ, ಪ್ರತಿಪತ್, ಇತ್ಯಾದಿ ಹೆಸರುಗಳಿಂದ ವ್ಯವಹೃತ ಮುಖ್ಯಾಧಿಷ್ಠಾತಾ, ಹಾಗೂ ಉಪಗ್ರಹ, ಜನತಾ, ಅನುಚರ, ಇತ್ಯಾದಿ ಹೆಸರುಗಳಿಂದ ಪ್ರಸಿದ್ಧ ಅನುಯಾಯಿ, ಇವೆರಡರ ಸಮನ್ವಿತ ರೂಪದ ಹೆಸರೇ ಈಶ್ವರ. ಈ ಈಶ್ವರಮರ್ಯ್ಯಾದೆಯು ಇದೇ ರೂಪದಿಂದ ಈಶ್ವರೀಯ ಗರ್ಭದಲ್ಲಿ ಪ್ರತಿಷ್ಠಿತ ಆಧಿಭೌತಿಕ, ಆಧ್ಯಾತ್ಮಿಕ, ಆಧಿದೈವಿಕ, ಆಧಿಯಾಜ್ಞಿಕ, ಆಧಿನಾಕ್ಷತ್ರಿಕ, ಇತ್ಯಾದಿ ಆಯಾಯ ವಿವರ್ತ್ತಗಳಲ್ಲಿ ಅದರದರಂತೆಯೇ ವ್ಯವಸ್ಥಿತವಾಗಿದೆ.

ಒಂದು ಗೃಹಸ್ಥ ಪರಿವಾರವನ್ನು ವಿಶ್ಲೇಷಣೆಗೆ ತೆಗೆದುಕೊಳ್ಳೋಣ. ಗೃಹಸ್ಥನ ಯಾವ ವೃದ್ಧಪುರುಷನು ಸಮ್ಪೂರ್ಣ ಗೃಹ್ಯಧರ್ಮ್ಮಗಳ ಸಞ್ಚಾಲಕನೋ, ಆತನ ಆದೇಶದ ಮೇಲೆ ಗೃಹಸ್ಥನ ಅನ್ಯ ವ್ಯಕ್ತಿಗಳು ಸ್ವಸ್ವಕರ್ಮ್ಮಗಳಲ್ಲಿ ಪ್ರವೃತ್ತರಾಗುತ್ತಾ ಈ ವೃದ್ಧಪುರುಷನ ಅನುಗಾಮಿಗಳಾಗಿರುತ್ತಾರೆಯೋ ಅಲ್ಲಿ ಗ್ರಹೋಪಗ್ರಹ ಸಮ್ಬನ್ಧವಿದೆ. 
 • ವೃದ್ಧಪುರುಷ = ಗ್ರಹ, ಇನ್ದ್ರ, ಪ್ರತಿಪತ್; ಪರಿವಾರ = ಉಪಗ್ರಹ, ಜನತಾ, ಅನುಚರರು.
 • ಜಾತೀಯ ವ್ಯವಸ್ಥೆಗಳ ನಿರ್ಣಾಯಕ ಪಞ್ಚ (ಚೌಧರೀ) ಗ್ರಹ, ಇನ್ದ್ರ, ಪ್ರತಿಪತ್ ಆಗಿದೆ; ತದನುಗತಾ ಸಮ್ಪೂರ್ಣ ಜಾತಿಯು ಉಪಗ್ರಹ, ಜನತಾ, ಅನುಚರರು.
 • ಗ್ರಾಮಾಧ್ಯಕ್ಷ = ಗ್ರಹ, ಪ್ರತಿಪತ್; ತದನುಗತ ಗ್ರಾಮಪ್ರಜೆಗಳು = ಉಪಗ್ರಹ, ಜನತಾ, ಅನುಚರರು.
 • ಕರ್ಮ್ಮಾತ್ಮಾ = ಗ್ರಹ, ಇನ್ದ್ರ, ಪ್ರತಿಪತ್; ತದನುಗತ ಶರೀರ, ಇನ್ದ್ರಿಯಗಳು, ಮನ, ಬುದ್ಧಿ ಎಲ್ಲವೂ ಉಪಗ್ರಹ, ಜನತಾ, ಅನುಚರರು.
 • ೧. ವಾಕ್, ೨. ಪ್ರಾಣ, ೩. ಚಕ್ಷು, ೪. ಶ್ರೋತ್ರ, ೫. ಮನ, ೬. ಬುದ್ಧಿ, ೭. ಶರೀರ, ಎಲ್ಲವೂ ಒಂದೊಂದು ಸ್ವತನ್ತ್ರ ಗ್ರಹ, ಇನ್ದ್ರ, ಪ್ರತಿಪತ್ ಆಗಿವೆ ಹಾಗೂ ವಿವಿಧಭಾವಾಪನ್ನ
೧. ಶಬ್ದಪ್ರಪಞ್ಚ,

೨. ಪ್ರಾಣಾಪಾನಸಮಾನವ್ಯಾನೋದಾನಾದಿ ಪ್ರಾಣಪ್ರಪಞ್ಚ,
೩. ವಿವಿಧಭಾವಾಪನ್ನ ರೂಪಪ್ರಪಞ್ಚ, 
೪. ವಿವಿಧಭಾವಾಪನ್ನ ಸತ್-ಅಸತ್ ಶಬ್ದಶ್ರುತಿಗಳು,
೫. ಕಾಮ, ಸಂಕಲ್ಪ, ವಿಚಿಕಿತ್ಸಾ, ಸುಖ, ದುಃಖಾದಿ ಮಾನಸಪ್ರಪಞ್ಚ,
೬. ವಿಧ್ಯಾ, ಅವಿಧ್ಯಾ, ವೃತಿ (ಆವರಣ), ಮಾಲ್ವ್ಯ (ಮೂರ್ಖತನ), ಇತ್ಯಾದಿ ವಿವಿಧ ಬೌದ್ಧಪ್ರಪಞ್ಚ, ಹಾಗೂ
೭. ರಸಾಸೃಙ್ಮಾಂಸಾದಿ ಧಾತುಪ್ರಪಞ್ಚ, ಎಲ್ಲವೂ ಈ ಗ್ರಹಗಳ ಕ್ರಮವಾಗಿ ಉಪಗ್ರಹ, ಜನತಾ, ಅನುಚರರು. 
 • ಬ್ರಾಹ್ಮಣವರ್ಣ ಗ್ರಹ, ಪ್ರತಿಪತ್ ಇನ್ದ್ರ; ಇತರೆ ವರ್ಣ ಉಪಗ್ರಹ, ಜನತಾ, ಅನುಚರರು.
 • ೧೫ ದಿನಗಳ ಪ್ರಪತ್ತಿಯು ಯಾವ ತಿಥಿಯಿಂದ ಆರಮ್ಭವಾಗುತ್ತದೆಯೋ, ಆ ತಿಥಿಯನ್ನೂ ಇದೇ ಪರಿಭಾಷಾನುಸಾರ ‘ಪ್ರತಿಪತ್’ (ಪಾಡ್ಯ) ಎಂದು ಕರೆಯಲಾಗಿದೆ. ಇದೇ ಪರಿಭಾಷೆಯ ಅನುರೋಧದಿಂದ ಉಳಿದ ತಿಥಿಗಳು ‘ಅನುಚರ’ರೆಂದು ಕರೆಯಲ್ಪಡುತ್ತವೆ.
 • ರಾಜಾ ಗ್ರಹಾದಿ, ಪ್ರಜಾ ಉಪಗ್ರಹಾದಿ.
 • ಚಕ್ರವರ್ತ್ತಿ ಗ್ರಹಾದಿ, ಸಾಮನ್ತರಾಜಾಗಣ ಉಪಗ್ರಹಾದಿ.
 • ಗುರು ಗ್ರಹಾದಿ, ಶಿಷ್ಯಮಣ್ಡಳೀ ಉಪಗ್ರಹಾದಿ.
 • ಭೋಕ್ತಾ ಗ್ರಹಾದಿ, ಭೋಗ್ಯ ಉಪಗ್ರಹಾದಿ.
 • ಶಾಸ್ತಾ ಗ್ರಹಾದಿ, ಶಾಸಿತ ಉಪಗ್ರಹಾದಿ.
 • ಹಾಗೂ ಇದೇ ರೀತಿ ಭೋಕ್ತೃ-ಭೋಗ್ಯಲಕ್ಷಣಾ ಈ ಗ್ರಹೋಪಗ್ರಹಮರ್ಯ್ಯಾದೆಯು ಕೇವಲ ಮಾನವಸಮಾಜದಲ್ಲಿ ಮಾತ್ರವಲ್ಲ, ಚರ-ಅಚರ ಸರ್ವತ್ರ ವ್ಯಾಪ್ತವಾಗಿದೆ.
 • ಜೇನುನೊಣಗಳು ಎಲ್ಲಿ ಉಪಗ್ರಹವೋ, ಜೇನುರಾಣಿಯಲ್ಲಿ ಗ್ರಹವು.
 • ಇದೇ ರೀತಿ, ಪಶು-ಪಕ್ಷಿ-ಕೃಮಿ-ಕೀಟ-ಓಷಧಿವನಸ್ಪತಿ-ಪರ್ವತ-ನದ-ನದೀ-ನಕ್ಷತ್ರಾದಿ ಸರ್ವತ್ರ ಸರ್ವ ಜನತಾಗಳಲ್ಲಿ (ಮಣ್ಡಳಿಗಳಲ್ಲಿ) ನೀವು ಒಂದೊಂದು ಇನ್ದ್ರದ (ಮುಖ್ಯಾಧಿಷ್ಠಾತನ) ಸಾಮ್ರಾಜ್ಯವನ್ನು ಕಣುವಿರಿ.
(ಸಶೇಷ..)

-       ಹೇಮಂತ್ ಕುಮಾರ್ ಜಿ.

Saturday, 2 February 2019

ಪ್ರಜಾತನ್ತುವಿತಾನವಿಜ್ಞಾನೋಪನಿಷತ್: ಮಹರ್ಷಿಬೃಹದುಕ್ಥರ ಪ್ರಜಾತನ್ತುವಿತಾನ ವಿಜ್ಞಾನ (೩೭-೪೨)

ಮಹರ್ಷಿ ಬೃಹದುಕ್ಥರ ಪ್ರಜಾತನ್ತು ವಿತಾನ ವಿಜ್ಞಾನ
ಮಹರ್ಷಿ ದೀರ್ಘತಮರಿಂದ ಹಿಂದಿನ ಲೇಖನಗಳಲ್ಲಿ ಉಕ್ತ ಮನ್ತ್ರವರ್ಣನೆಗಳಿಂದ ನಮಗೆ ಒಪ್ಪಲೇಬೇಕಾದಂತಹಾ ಪ್ರಾಮಾಣ್ಯಭೂತ ವಾಸ್ತವವೇನೆಂದರೆ ಶುಕ್ರಸ್ಥ ಮಹಾನಾತ್ಮದ ಆಧಾರದಲ್ಲಿ ಪ್ರತಿಷ್ಠಿತ ಚತುರಶೀತಿ ಕಲೋಪೇತ ಪಿತೃಸಹಃಪಿಣ್ಡದ ಆತ್ಮಧೇಯ-ತನ್ಯ ಭೇದದಿಂದ ಎರಡು ವಿವರ್ತ್ತಗಳಾಗುತ್ತವೆ. ಆತ್ಮಧೇಯ ಪಿಣ್ಡದ ೨೮ ಕಲೆಗಳು ಸ್ವಪ್ರತಿಷ್ಠಾದಲ್ಲಿ ಉಪಯುಕ್ತವಾಗಿವೆ, ಹಾಗೇ ತನ್ಯ ಪಿಣ್ಡದ ೫೬ ಕಲೆಗಳು ತನ್ತುವಿತಾನದಲ್ಲಿ ಉಪಯುಕ್ತವಾಗಿವೆ. ವೈದಿಕಯುಗದಲ್ಲಿ ಋಷಿಗಳ ಪ್ರಧಾನ ಲಕ್ಷ್ಯವು ಯಜ್ಞಕಾಣ್ಡವೇ ಆಗಿದ್ದರಿಂದ ಈ ‘ಪಿಣ್ಡಪಿತೃವಿಜ್ಞಾನ’ವನ್ನು ತಿಳಿದುಕೊಂಡವರು ಸ್ವಲ್ಪ ಸಂಖ್ಯೆಯಲ್ಲಿಯೇ ಇದ್ದರೇನೋ ಎಂಬ ಅನುಮಾನ ವ್ಯಕ್ತವಾಗುತ್ತದೆ. ಯಜ್ಞೀಯ ತತ್ತ್ವಗಳ ಸಮನ್ವಯವೇ ಋಷಿಗಳ ಪ್ರಧಾನ ದೃಷ್ಟಿಕೋಣವಾಗಿತ್ತು. ಇದೇ ಕಾರಣದಿಂದ ಬ್ರಾಹ್ಮಣಗ್ರಂಥಗಳಲ್ಲಿ ಬಹಳ ಸಂಕ್ಷೇಪದಲ್ಲಿ ಪರಿಗಣಿತ ಸ್ಥಾನಗಳಲ್ಲಿಯೇ ‘ಪಿಣ್ಡ ಪಿತೃಯಜ್ಞ’ ರೂಪದಿಂದ ಈ ಪಿತೃ-ವಿಧ್ಯೆಯ ವಿಶ್ಲೇಷಣೆಯಾಗಿದೆ. ಈ ರೀತಿಯಾಗಲು ಪ್ರಧಾನವಾಗಿ ಇನ್ನೊಂದು ಕಾರಣವೂ ಇತ್ತು. ಸೂರ್ಯ್ಯಮೂಲವಾದಂತಹಾ ತ್ರಯೀವಿಧ್ಯೆಯ ಆಧಾರದಲ್ಲಿ ವಿತತ ಯಜ್ಞವಿಧ್ಯೆಯೊಂದಿಗೆ ಸಮ್ಬನ್ಧವುಳ್ಳ ವೈಧಯಜ್ಞಕರ್ಮ್ಮವು ಅಪೂರ್ವ ಆವಿಷ್ಕಾರಗಳ ಜನಕವಾಗಿದೆ. ಇದರಿಂದ ವಿಶೇಷ-ಫಲಸಿದ್ಧಿಗಳು ಸಮ್ಭವವಾಗಿದೆ. ಅಲ್ಲಿ ಪರಮೇಷ್ಠೀಮೂಲಕ, ಅಥರ್ವಾ ಸೂತ್ರದಲ್ಲಿ ಪ್ರತಿಷ್ಠಿತ ಶ್ರಾದ್ಧಕರ್ಮ್ಮವು ಕೇವಲ ಪಿತರಪ್ರಾಣತೃಪ್ತಿಯ ಕಾರಣವಾಗಿದೆ. ಇದರಿಂದ ಯಜ್ಞವತ್ ಲೌಕಿಕ ಪಾರಲೌಕಿಕವಾದ ಯಾವುದೇ ಅತಿಶಯವಿಶೇಷವನ್ನು ಪಡೆಯಲು ಆಗುವುದಿಲ್ಲ ಎಂಬುದು ನಾಸ್ತಿಕರ ವಾದ. ನಿತ್ಯಕಾಮ್ಯಲಕ್ಷಣ ಶ್ರಾದ್ಧಕರ್ಮ್ಮವನ್ನು ಮಾಡುವುದರಿಂದ ನಾಸ್ತಿಕರ ದೃಷ್ಟಿಯಲ್ಲಿ ವಿಶೇಷ ಅತಿಶಯವೇನೋ ಆಗದಿದ್ದರೂ, ಅದನ್ನು ಮಾಡದಿದ್ದರೆ ನಾಸ್ತಿಕನಾಗಿರಲಿ ಆಸ್ತಿಕನಾಗಿರಲಿ, ಹಾನಿಯಂತೂ ಅವಶ್ಯವಾಗಿ ಆಗುತ್ತದೆ. ಅಷ್ಟೇ ಅಲ್ಲ, ಶ್ರಾದ್ಧ ಮಾಡದಿದ್ದರೆ ಆತ್ಮಮುಕ್ತಿಯು ಅಸಮ್ಭವ! ಇದೇ ಆಧಾರದಲ್ಲಿ – ‘ದೇವಕಾರ್ಯ್ಯಾದ್ ದ್ವಿಜಾತೀನಾಂ ಪಿತೃಕಾರ್ಯ್ಯಂ ವಿಶಿಷ್ಯತೇ’ ಎಂದು ಹೇಳಲಾಗಿದೆ.

ದೇವಕಾರ್ಯ್ಯಾತ್ಮಕ ಯಜ್ಞಕರ್ಮ್ಮಕ್ಕೆ ಎಲ್ಲಿ ಸಮಷ್ಟಿಯೊಂದಿಗೆ ಸಮ್ಬನ್ಧವಿದೆಯೋ, ಅಲ್ಲಿ ಪಿತೃಕಾರ್ಯ್ಯಾತ್ಮಕ ಶ್ರಾದ್ಧಕರ್ಮ್ಮಕ್ಕೆ ವ್ಯಷ್ಟಿಯೊಂದಿಗೆ ಸಮ್ಬನ್ಧವಿದೆ. ಅನ್ಯ ಕರ್ಮ್ಮಠರಿಂದ ಸಮ್ಪಾದಿತ ಯಜ್ಞಕರ್ಮವು ದೇವತತ್ತ್ವದ ಸಂಗ್ರಾಹಕವಾಗಬಲ್ಲದು. ಒಂದುವೇಳೆ ಯಾವುದೇ ‘ಕಾರೀರೀ ಇಷ್ಟಿ’ ಮಾಡಿದರೆ, ವೃಷ್ಟಿ ಆಗುತ್ತದೆ, ಹಾಗೂ ಎಲ್ಲಾ ಪ್ರಜಾವರ್ಗವೂ ಈ ಫಲದ ಭೋಕ್ತರಾಗಬಹುದು, ಆದರೆ ಶ್ರಾದ್ಧಕರ್ಮ್ಮ ಹಾಗಿಲ್ಲವಲ್ಲ! ಎಲ್ಲಿಯವರೆಗೆ ಪ್ರೇತಾತ್ಮದ ಪುತ್ರಾದಿ ವಂಶಜರು ಶ್ರಾದ್ಧಸೂತ್ರದಿಂದ ಸ್ವಪ್ರೇತಪಿತರರಿಗೆ ಪಿಣ್ಡದಾನಾದಿ ಲಕ್ಷಣವಾದ ಶ್ರಾದ್ಧಕರ್ಮ್ಮವನ್ನು ಮಾಡುವುದಿಲ್ಲವೋ, ಅಲ್ಲಿಯವರೆಗೆ ಅವರಿಗೆ ತೃಪ್ತಿ, ಬನ್ಧನ-ವಿಮೋಕ, ಇವರ ವಂಶ ವಿತಾನ, ಅಸಮ್ಭವ! ಇದೇ ಪ್ರಾತಿಸ್ವಿಕ-ವೈಯ್ಯಕ್ತಿಕ ಭಾವದ ಕಾರಣದಿಂದ, ದೇವಕಾರ್ಯ್ಯದ ಅಪೇಕ್ಷೆಯಲ್ಲಿ ಪಿತೃಕಾರ್ಯ್ಯಕ್ಕೆ ವಿಶೇಷ ಮಹತ್ತ್ವವಿದೆ ಏಕೆಂದರೆ ಅದು ಪ್ರಾತಿಸ್ವಿಕ ಕರ್ಮ್ಮವಾಗಿದೆ – ಆದ್ದರಿಂದ, ಜೊತೆಗೆ ವಿಶೇಷಾತಿಶಯ ಪ್ರವರ್ತ್ತಕ ದೇವಯಜ್ಞದಂತೆ ತತ್ತ್ವಾವಿಷ್ಕಾರಗಳ ದೃಷ್ಟಿಯಿಂದ ಯಾವುದೇ ಸಮ್ಬನ್ಧ ಇಟ್ಟುಕೊಳ್ಳದ ಕಾರಣ ಪಿತೃವಿಜ್ಞಾನ ವಿಷಯಕ ಪರಾಮರ್ಶೆಯು ವಿರಳ ವಿದ್ವಾಂಸರ ಪರ್ಯ್ಯನ್ತ ಮಾತ್ರ ಸೀಮಿತವಾಯಿತು; ಎಂಬೀ ಅನುಮಾನದ ಸಮರ್ಥನೆ ಮಾಡಬಹುದು.

ಮಹರ್ಷಿ ‘ಬೃಹದುಕ್ಥ-ವಾಮದೇವ’ ರವರು ಈ ಪಿತೃವಿಧ್ಯೆಯ ಆ ಯುಗದ ಮಹಾಪಣ್ಡಿತರೆಂದು ಪ್ರಖ್ಯಾತರಾಗಿದ್ದರು. ಇವರ ಜೀವಿತಾವಧಿಯಲ್ಲಿ ಸಮಯ ಸಮಯಕ್ಕೆ ಸರಿಯಾಗಿ ಈ ವಿಷಯವನ್ನು ಕುರಿತು ಪ್ರಶ್ನೋತ್ತರಗಳು ನಡೆಯುತ್ತಿದ್ದವು. ಮಹರ್ಷಿ ದೀರ್ಘತಮರು – ‘ಪಾಕಃ ಪೃಚ್ಛಾಮಿ…’ ರೂಪದಿಂದ ಯಾವ ಪ್ರಶ್ನೆಗಳನ್ನು ಎತ್ತಿದ್ದಾರೆಯೋ, ಅವುಗಳ ಸಮ್ಯಕ್ ಸಮಾಧಾನವು ನಮಗೆ ಬೃಹದುಕ್ಥರ ಮನ್ತ್ರಗಳಿಂದ ಉಪಲಬ್ಧವಾಗುತ್ತಿದೆ. ಇದೇ ಆಧಾರದಲ್ಲಿ ಬೃಹದುಕ್ಥರನ್ನು ಈ ವಿಧ್ಯೆಯ ಪರಪಾರಗಾಮೀ ವಿದ್ವಾನ್ ಎನ್ನಬಹುದು. ದೀರ್ಘತಮರು ‘ಪಾಕಃ ಪೃಚ್ಛಾಮಿ…’ ರೂಪದಿಂದ ಈ ವಿಷಯದಲ್ಲಿ ಯಾವ ಪ್ರಶ್ನೆಗಳನ್ನು ಮಾಡಿದ್ದಾರೆಯೋ, ಮೊದಲು ಅವುಗಳ ಮೀಮಾಂಸೆ ಮಾಡಿಕೊಳ್ಳಿ, ಅನನ್ತರ ಬೃಹದುಕ್ಥ-ಸಮಾಜವು ಆ ಪ್ರಶ್ನೆಗಳಿಗೆ ಯಾವ ವೈಜ್ಞಾನಿಕ ಸಮಾಧಾನವನ್ನು ಕೊಟ್ಟಿದ್ದಾರೆಯೋ, ಅದರ ಮೇಲೆ ದೃಷ್ಟಿ ಹಾಯಿಸಿರಿ; ಆಗ ಪಿತೃವಿಧ್ಯೆಯ ಬಗ್ಗೆ ಇರುವ ಸನ್ದೇಹಗಳು ಒಂದೇ ಭಾರಿಗೆ ನಿವೃತ್ತಿಯಾಗುವವು.

“ನಮ್ಮ ಪಾಞ್ಚಭೌತಿಕ ಶರೀರದಲ್ಲಿ ‘ಪಿತರ’ ಎಂದು ಹೇಳಿ ವ್ಯವಹೃತಗೊಳ್ಳಲು ಯೋಗ್ಯವಾದ ಯಾವುದೋ ತತ್ತ್ವವಿಶೇಷವು ಪ್ರತಿಷ್ಠಿತವಾಗಿದೆ. ಶರೀರ ತ್ಯಾಗಾನನ್ತರ ಈ ಪಿತರವು ಪರಲೋಕಕ್ಕೆ ಹೋಗುತ್ತದೆ. ತದ್ವಂಶಧರರಿಂದ ಪ್ರದತ್ತ ಪಿಣ್ಡವು ಪರಲೋಕಗತ ಪಿತರರ ತೃಪ್ತಿಯ ಕಾರಣವಾಗುತ್ತದೆ”.

ಮೊದಲು ನಮಗೆ ಶರೀರದಲ್ಲಿ ಇಂತಹಾ ಸ್ಥಾನದಲ್ಲಿ ಪಿತರವಿದೆ, ಇಂತಹಾ ಆಕಾರದಿಂದ ಪ್ರಜಾ ತನ್ತು ವಿತಾನ ಮಾಡುತ್ತಾ ಅದು ಪರಲೋಕಕ್ಕೆ ಹೋಗುತ್ತದೆ, ಹಾಗೂ ಇಂತಿಂತಹಾ ಸೂತ್ರದಿಂದ ಅದರ ಸ್ವವಂಶಧರರಿಂದ ಅವಿಚ್ಛಿನ್ನ ಸಮ್ಬನ್ಧವು ಸದಾ ಉಂಟಾಗಿರುತ್ತದೆ; ಎಂಬಂತಹಾ ವಿಷಯಗಳ ಮೇಲೆ ಮೊದಲು ನಮಗೆ ವಿಶ್ವಾಸ ಮೂಡಿದರೆ ಮಾತ್ರ ನಮ್ಮ ಶ್ರದ್ಧೆಯು ಅದರ ಮೇಲೆ ಕೇಂದ್ರೀಕೃತವಾಗಲು ಸಾಧ್ಯವಾಗುತ್ತದೆ. ಇದೇ ಸ್ಥಿತಿಯನ್ನು ಲಕ್ಷ್ಯದಲ್ಲಿರಿಸಿಕೊಂಡು ದೀರ್ಘತಮರು ನಿಮ್ನ ಲಿಖಿತ ಪ್ರಶ್ನೆಯನ್ನು ಬೃಹದುಕ್ಥ ಸಮಾಜದಲ್ಲಿ ಪ್ರಸ್ತಾಪಿಸುತ್ತಾರೆ –

“ನಮಗೆ ನಮ್ಮ ಶರೀರದಲ್ಲಿ ಸರ್ವತ್ರ ದೇವತತ್ತ್ವದ ಸಾಮ್ರಾಜ್ಯವು ಕಂಡುಬರುತ್ತದೆ. ದೇವತತ್ತ್ವಕ್ಕೆ ಅತಿರಿಕ್ತವಾಗಿ, ‘ಪಿತೃತತ್ತ್ವ’ ಎಂದು ಹೇಳಲು ಯೋಗ್ಯವಾದಂತಹಾ ತತ್ತ್ವಾನ್ತರವು ಶರೀರದಲ್ಲಿ ಸರ್ವಥಾ ಅನುಪಲಬ್ಧವಾಗಿದೆ. ಇದೇ ಮೊದಲ ಪ್ರಶ್ನೆಯ ಭೂಮಿಕೆಯಾಗಿದೆ. ಇದರ ವಿಶ್ಲೇಷಣೆಯನ್ನು ಹೀಗೆ ಮಾಡಬಹುದು – ಬಸ್ತಿಗುಹಾ, ಉದರಗುಹಾ, ಉರೋಗುಹಾ, ಶಿರೋಗುಹಾ’ ಎಂಬ ಭೇದದಿಂದ ಆಪಾದ-ಮಸ್ತಕಾವಚ್ಛಿನ್ನ ಪಾಞ್ಚಭೌತಿಕ ಶರೀರದಲ್ಲಿ ನಾಲ್ಕು ಗುಹಾಗಳಿವೆ ಎಂದು ನಂಬಲಾಗಿದೆ. ಈ ನಾಲ್ಕರಲ್ಲೂ ಪ್ರತ್ಯೇಕವಾಗಿ ಅಗ್ನಿಷೋಮೀಯ ದೇವತಾ ಪ್ರತಿಷ್ಠಿತವಾಗಿದೆ. ಪ್ರತ್ಯೇಕ ಗುಹಾದಲ್ಲಿ ಪ್ರತಿಷ್ಠಿತ ಈ ದೇವತತ್ತ್ವವು ಏಳೇಳು ಸಂಖ್ಯೆಯಲ್ಲಿ ವಿಭಕ್ತವಾಗಿದೆ. ಹಾಗಾಗಿ ಸಪ್ತಪ್ರಾಣಸಮಷ್ಟಿರೂಪವಾದಂತಹ್ ಈ ದೇವಸಪ್ತಕವನ್ನು ‘ಸಾಕಞ್ಜ’ ಎಂದು ಕರೆಯಲಾಗಿದೆ. “ಅಗ್ನಿ, ವಾಯು, ಆದಿತ್ಯ, ದಿಕ್‍ಸೋಮ, ಭಾಸ್ವರಸೋಮ” ಎಂಬ ಐದು ಪ್ರಾಣದೇವತಾ ಸುಪ್ರಸಿದ್ಧವಾಗಿವೆ. ಐದರಲ್ಲಿ ಆರಂಭಿಕ ಮೂರು ಆಗ್ನೇಯ ದೇವತಾ ಆಗಿವೆ, ಅನ್ತ್ಯದಲ್ಲಿ ಎರಡು ಸೌಮ್ಯ ದೇವತಾ ಆಗಿವೆ. ಜೊತೆಗೆ ‘ಭಾಸ್ವರ’ ಸೋಮಾತ್ಮಕ ಮನೋದೇವಾತ್ಮಕ ದೇವತಾ ಸರ್ವಾಙ್ಗ ಶರೀರವನ್ನು ಆಶಯ, ಹೃದವನ್ನು ಪ್ರತಿಷ್ಠಾ, ಅನ್ನವನ್ನು ಪ್ರಭವ, ಎಂಬುದಾಗಿ ಉಂಟುಮಾಡುತ್ತಾ ಶರೀರದಲ್ಲಿ ಪ್ರತಿಷ್ಠಿತವಾಗಿದೆ ಎಂಬುದನ್ನೂ ಸ್ಪಷ್ಟಪಡಿಸಿಕೊಳ್ಳಬೇಕು. ಇದು ಆ ದೇವಸಪ್ತಕದಿಂದ ಭಿನ್ನವಾಗಿದೆ. ದೇವಸಪ್ತಕಕ್ಕೆ ಕೇವಲ ಅಗ್ನಿ-ವಾಯು-ಆದಿತ್ಯ-ದಿಕ್‍ಸೋಮ, ಎಂಬ ದೇವತಾ ಸಮ್ಬನ್ಧವಿದೆ. ನಾಲ್ಕರಲ್ಲಿಯೂ ಆರಂಭದ ಅಗ್ನಿದೇವತೆಯ ಒಂದು ವಿವರ್ತ್ತವಿದೆ, ಶೇಷ ಮೂರರ ಎರಡೆರಡು ವಿವರ್ತ್ತಗಳಿವೆ. ಫಲಿತಾಂಶ ಏನೆಂದರೆ ೪ರ ೭ ಪ್ರಾಣದೇವತಾ ಆಗುತ್ತವೆ. ಇವೇ ಸಾಕಞ್ಜ (ಸಹೋತ್ಪನ್ನ) ಏಳು ದೇವಪ್ರಾಣಗಳ ಸ್ಥಾನವನ್ನು ಶ್ರುತಿಯು ತಿಳಿಸಿದೆ –

ಸಾಕಞ್ಜಾನಾಂ ಸಪ್ತಥಮಾಹುರೇಕಜಂ ಷಡಿದ್ಯಮಾ ಋಷಯೋ ದೇವಜಾ ಇತಿ |
ತೇಷಾಮಿಷ್ಟಾನಿ ವಿಹಿತಾನಿ ಧಾಮಶಃ ಸ್ಥಾತ್ರೇ ರೇಜನ್ತೇ ವಿಕೃತಾನಿ ರೂಪಶಃ || (ಋ ೧|೧೬೪|೧೫)
“ಅಗ್ನಿರ್ವಾಗ್ ಭೂತ್ವಾ ಮುಖಂ ಪ್ರಾವಿಶತ್, ವಾಯುಃ ಪ್ರಾಣೋ ಭೂತ್ವಾ ನಾಸಿಕೇ ಪ್ರಾವಿಶತ್, ಆದಿತ್ಯಶ್ಚಕ್ಷುರ್ಭೂತ್ವಾಽಕ್ಷಿಣೀ ಪ್ರಾವಿಶತ್, ದಿಶಃ ಶ್ರೋತ್ರಂ ಭೂತ್ವಾ ಕರ್ಣೌ ಪ್ರಾವಿಶತ್” (ಐ.ಉ. ೨|೪|) ಇತ್ಯಾದಿ ಉಪನಿಷಚ್ಛ್ರುತಿಯ ಅನುಸಾರ ಅರ್ವಾಗ್ಬಿಲ-ಊರ್ಧ್ವಚಮಸವು ‘ಶಿರೋಗುಹಾ’ದಲ್ಲಿ ಪ್ರತಿಷ್ಠಿತ ವಾಕ್-ಪ್ರಾಣ-ಚಕ್ಷು-ಶ್ರೋತ್ರ, ಎಂಬ ಹೆಸರಿನ ಇನ್ದ್ರಿಯ ದೇವತೆಗಳು ಕ್ರಮವಾಗಿ ಅಗ್ನಿ, ವಾಯು, ಆದಿತ್ಯ, ದಿಕ್‍ಸೋಮ ಎಂಬೀ ದೇವತೆಗಳದ್ದೇ ಪ್ರವರ್ಗ್ಯಾಂಶವಾಗಿದೆ. ವಾಗಾಧಾರವು ಮುಖವು ಒಂದು; ಹಾಗಾಗಿ ವಾಙ್ಮಯ ಅಗ್ನಿರ್ದೇವತಾ ಒಂದೇ ಸ್ವರೂಪದಲ್ಲಿ ಪರಿಣತವಾಗಿರುತ್ತದೆ. ಉಳಿದ ಮೂರಾದ ನಾಸಿಕಾ, ಚಕ್ಷು, ಕರ್ಣ ಇವು ಎರಡೆರಡು ವಿವರಗಳಲ್ಲಿ ವಿಭಕ್ತವಾಗಿವೆ, ಹಾಗಾಗಿ ಅಲ್ಲಿ ಪ್ರತಿಷ್ಠಿತ ಪ್ರಾಣಮಯ ವಾಯು, ಚಕ್ಷುರ್ಮ್ಮಯ ಆದಿತ್ಯ, ಶ್ರೋತ್ರಮಯ ದಿಕ್‍ಸೋಮ ಎಂಬ ಮೂರೂ ದೇವತೆಗಳು ಎರಡೆರಡು ವಿವರ್ತ್ತಭಾವಗಳಲ್ಲಿ ಪರಿಣತವಾಗುತ್ತಿದ್ದಾರೆ. ಈ ರೀತಿ ಎರಡು ಶ್ರೋತ್ರಪ್ರಾಣ, ಎರಡು ಚಕ್ಷುಃ ಪ್ರಾಣ, ಎರಡು ನಾಸಾಪ್ರಾಣ ಎಂಬ ಮೂರಂತೂ ಯಮಜ (ಜೋಡಿ) ಆದವು. ಏಳನೆಯದಾದ ಮುಖಪ್ರಾಣವು ಏಕಜವಾಗಿದೆ, ಏಕಾಕೀ ಆಗಿದೆ. ಇದೇ ಪ್ರಥಮಸಪ್ತಕವು ಈ ರೂಪದಲ್ಲಿ ಶಿರೋಗುಹಾದಲ್ಲಿ ಪ್ರತಿಷ್ಠಿತವಾಗಿದೆ. ಸಪ್ತಧಾ ವಿಭಕ್ತ ಅಗ್ನಿಷೋಮೀಯ ದೇವತೆಗಳದ್ದೇ ಸಾಮ್ರಾಜ್ಯವು ಶಿರೋಗುಹಾದಲ್ಲಿದೆ.

ಇದೇ ಸ್ಥಿತಿಯು ‘ಉರೋಗುಹಾ’ ಎಂಬುದಕ್ಕೂ ಇದೆ. ದಿಕ್‍ಸೋಮಾನುಗತ ೨ ಭುಜಾ, ಆದಿತ್ಯಾನುಗತ ೨ ಸ್ತನ, ವಾಯ್ವಾನುಗತ ೨ ಫುಪ್ಫುಸ, ಅಗ್ನ್ಯಾನುಗತ ೧-ಹೃದಯ, ಈ ರೀತಿ ಉರೋಗುಹಾದಲ್ಲಿಯೂ ಅಗ್ನಿಷೋಮೀಯ ದೇವಸಪ್ತಕದ್ದೇ ಸಾಮ್ರಾಜ್ಯವಿದೆ. ‘ಉದರಗುಹಾ’ದಲ್ಲಿ ಯಕೃತ್-ಪ್ಲೀಹಾ ಎಂಬೆರಡು ದಿಕ್‍ಸೋಮಾನುಗತವಾಗಿವೆ. ೨-ಕ್ಲೋಮಗಳು ಆದಿತ್ಯಾನುಗತವಾಗಿವೆ, ೨-ವೃಕ್ಕಗಳು ವಾಯ್ವಾನುಗತವಾಗಿವೆ, ೧-ನಾಭಿ ಅಗ್ನ್ಯಾನುಗತವಾಗಿದೆ. ಫಲಿತಾಂಶವೇನೆಂದರೆ ಉದರಗುಹಾದಲ್ಲಿಯೂ ಈ ರೂಪದಲ್ಲಿ ದೇವಸಪ್ತಕದ್ದೇ ಅನನ್ಯ ಪ್ರಭುತ್ವವು ಸುರಕ್ಷಿತವಾಗಿದೆ. ಸರ್ವಾನ್ತದ ‘ಬಸ್ತಿಗುಹಾ’ದಲ್ಲಿ ೨-ಶ್ರೋಣೀ ದಿಕ್‍ಸೋಮಾನುಗತವಾಗಿವೆ, ೨-ಮೂತ್ರ-ರೇತಸೀ (ನಾಲಿಕಾ ದ್ವಯೀ) ಆದಿತ್ಯಾನುಗತವಾಗಿವೆ, ೨-ಆಣ್ಡಗಳು ವಾಯ್ವನುಗತವಾಗಿವೆ, ೧-ಮೂತ್ರದ್ವಾರವು ಅಗ್ನ್ಯನುಗತವಾಗಿದೆ. ಈ ರೀತಿ ಬಸ್ತಿಗುಹಾದಲ್ಲಿಯೂ ಸಪ್ತಕಾತಿರಿಕ್ತ ಅನ್ಯ ಪ್ರಾಣವಿಶೇಷದ ಪ್ರಭಾವವಿದೆ. ನಾಲ್ಕು ಗುಹಾಗಳಲ್ಲಿ ಸಮಷ್ಟಿಯಾಗಿರುವುದೇ ಶರೀರ. ನಾಲ್ಕೂ ಗುಹಾ ಸ್ಥಾನಗಳು ದೇವಪ್ರಾಣದಿಂದ ನಿತ್ಯ ಆಕ್ರಾನ್ತವಾಗಿವೆ –
ಸಪ್ತ ಪ್ರಾಣಾಃ ಪ್ರಭವನ್ತಿ ತಸ್ಮಾತ್ ಸಪ್ತಾರ್ಚಿಷಃ ಸಮಿಧಃ ಸಪ್ತಹೋತಾಃ |
ಸಪ್ತ ಇಮೇ ಲೋಕಾ ಯೇಷು ಚರನ್ತಿ ಪ್ರಾಣಾ ಗುಹಾಶಯಾ ನಿಹಿತಾಃ ಸಪ್ತ ಸಪ್ತ || (ಮುಣ್ಡಕೋಪನಿಷತ್ ೨|೧|೮)
ಈ ಅಗ್ನೀಷೋಮೀಯ ದೇವತೆಗಳ ಪದವು (ಸ್ಥಾನವು) ಸರ್ವಥಾ ನಿಹಿತ (ನಿಶ್ಚಿತ, ಸುವ್ಯವಸ್ಥಿತ) ಆಗಿದೆ. ದೇವಪ್ರಾಣವು ವ್ಯಾಪ್ತವಾಗಿರದ ಯಾವುದೇ ಪ್ರದೇಶವಿಲ್ಲ. ಇಂತಹಾ ಸ್ಥಿತಿಯಲ್ಲಿ ದೀರ್ಘತಮರ – “ಸಂಪೂರ್ಣ ಶರೀರವು ದೇವಪದಗಳಿಂದ ಆಕ್ರಾನ್ತವಾಗಿರಬೇಕಾದರೆ, ಸಪ್ತತನ್ತು ವಿತಾನಗೊಳಿಸುವ ಪಿತರ ಪ್ರಾಣವು ಪ್ರತಿಷ್ಠಿತವಾಗಿರುವ ರಿಕ್ತ ಸ್ಥಾನ ಯಾವುದು?” ಎಂಬ ಪ್ರಶ್ನೆಯು ಸ್ವಾಭಾವಿಕವಾಗುತ್ತದೆ. ಈ ರೀತಿ ‘ದೇವಾನಾಮೇನಾ ನಿಹಿತಾ ಪದಾನಿ’ ಎಂಬುದರಿಂದ, ಮೇಲ್ಕಂಡ ಪ್ರಶ್ನೆಯು ಬೃಹದುಕ್ಥ-ವಾಮದೇವರ ಸಮ್ಮುಖದಲ್ಲಿ ಉಪಸ್ಥಿತವಾಯಿತು.

ಈ ಒಂದು ಪ್ರಶ್ನೆಯೊಂದಿಗೆ ಇನ್ನೆರಡು ಪ್ರಶ್ನೆಗಳು ತಾವಾಗಿಯೇ ಉಪಸ್ಥಿತವಾಗುತ್ತವೆ. “ಅಗ್ನಿಃ ಸರ್ವಾ ದೇವತಾಃ, ವಾಯುಃ ಸರ್ವಾ ದೇವತಾಃ, ಇನ್ದ್ರಃ ಸರ್ವಾ ದೇವತಾಃ” ಎಂಬೀ ಬ್ರಾಹ್ಮಣವಚನಗಳನುಸಾರ ಪ್ರಾಣಾಗ್ನಿದೇವತೆಯು ಸೋಮಗರ್ಭಿತ ಅಗ್ನಿಪ್ರಧಾನವಾಗಿದ್ದು, ಅಗ್ನಿಮಯವೇ ಆಗಿದೆ. ಅಗ್ನಿಯು ಅನ್ನಾದವಾಗಿದ್ದರೆ, ಸೋಮವು ಅನ್ನವಾಗಿದೆ. ಅನ್ನಾದ ಅಗ್ನಿಯ ಗರ್ಭದಲ್ಲಿ ಭುಕ್ತ ಅನ್ನಸೋಮವು ಅನ್ನಾದಾಗ್ನಿರೂಪದಲ್ಲಿ ಪರಿಣತವಾಗುತ್ತಾ ತನ್ನ ಸೋಮಭಾವವನ್ನು ಬಿಡುತ್ತದೆ. ಇದು ‘ಅತ್ತೈವಾಖ್ಯಾಯತೇ ನಾದ್ಯಮ್’ (ಶತಪಥ) ಇತ್ಯಾದಿ ಬ್ರಾಹ್ಮಣ ಶ್ರುತಿಯಿಂದ ಪ್ರಮಾಣಿತವಾಗಿದೆ. ಇದೇ ಆಧಾರದಲ್ಲಿ ಅಗ್ನಿಯ ಘನ-ತರಲ-ವಿರಲ ಎಂಬ ೩ ಅವಸ್ಥೆಗಳೊಂದಿಗೆ ಸಮ್ಬನ್ಧ ಹೊಂದುವ ಅಗ್ನಿ-ವಾಯು-ಆದಿತ್ಯ, ಎಂಬ ೩ ಪ್ರಧಾನ ಅನ್ನಾದ ದೇವತೆಗಳ ಸೀಮೆಯಲ್ಲಿ ಪ್ರವಿಷ್ಟವಾದಂತಹಾ ದಿಕ್‍ಸೋಮದೇವತೆಯು ಅಗ್ನಿಪ್ರಧಾನವಾಗುತ್ತಾ ತದ್ರೂಪವೇ ಆಗುತ್ತಿರುತ್ತದೆ. ಫಲಿತಾಂಶ ರೂಪದಲ್ಲಿ ಸರ್ವಾಙ್ಗಶರೀರದಲ್ಲಿ ಸಮಾನಜಾತೀಯ ಆಗ್ನೇಯ ದೇವತೆಗಳದ್ದೇ ಅನ್ಯತಮ ಪ್ರಭುತ್ತ್ವವು ಸಿದ್ಧವಾಗುತ್ತಿದೆ. ಅಲ್ಲಿ ಪಿತರ ಪ್ರಾಣವು ‘ಆಯನ್ತು ನಃ ಪಿತರಃ ಸೋಮ್ಯಾಸಃ’ (ಯಜುಃ ಸಂ) ಇತ್ಯಾದಿ ಮನ್ತ್ರವರ್ಣನಾನುಸಾರ ಸೌಮ್ಯವಾಗುತ್ತಾ ಈ ಶಾರೀರವು ಆಗ್ನ್ಯೇಯ ಪ್ರಾಣದೇವತೆಗಳ ಹೋಲಿಕೆಯಲ್ಲಿ ‘ವಿಜಾತೀಯ’ ಆಗಿದೆ. ಒಂದು ವಿಜಾತೀಯ ತೃಣವೂ ದನ್ತಚ್ಛಿದ್ರಗಳಲ್ಲಿ ಸಿಕ್ಕಿಕೊಂಡರೂ ಅಲ್ಲಿಯೇ ಸ್ಥಾನ ಪಡೆಯಲು ಸಾಧ್ಯವಿಲ್ಲ. ಏಕೆಂದರೆ ಹಲ್ಲಿನ ರಂಧ್ರದಲ್ಲಿ ಸಿಕ್ಕಿಹಾಕಿಕೊಂಡಿರುವ ಹುಲ್ಲನ್ನು ಕಿತ್ತೊಗೆಯುವತನಕ ಇನ್ದ್ರಿಯ ದೇವತೆಗಳು ಶಾನ್ತರಾಗುವುದಿಲ್ಲ. ಹೀಗಿರುವಾಗ ಸರ್ವಥಾ ವಿಜಾತೀಯರಾದ ಒಂದಲ್ಲ, ೮೪ ಸೌಮ್ಯ ಪಿತರಪ್ರಾಣಗಳು ಶರೀರದಲ್ಲಿ ಆಗಮನವೂ ಆಗಿ, ಪ್ರತಿಷ್ಠಿತರೂ ಆಗುವುದು, ಹೇಗೆ ಸಮ್ಭವ? ‘ವಿಜಾತೀಯತ್ತ್ವದ ಕಾರಣ ಇರಬೇಕಾದರೆ ಪಿತರಪ್ರಾಣದ ಆಗಮನವು ಹೇಗಾಗಲು ಸಾಧ್ಯ?’ ಎಂಬುದೇ ಎರಡನೆಯ ಪ್ರಶ್ನೆಯು.

ಅಭ್ಯುಪಗಮವಾದದ ಆಶ್ರಯ ಪಡೆಯುತ್ತಾ ಸ್ವಲ್ಪ ಸಮಯದವರೆಗೆ, ವಿಜಾತೀಯವಾಗಿದ್ದಾಗ್ಯೂ ಶರೀರದಲ್ಲಿ ಸೌಮ್ಯ ಪಿತರಪ್ರಾಣಗಳ ಆಗಮನವಾಯಿತು ಎಂದು ಭಾವಿಸೋಣ. ಜೊತೆಗೆ ದೇವತೆಗಳು ತಮ್ಮ ಸ್ಥಾನ ಸಂಕುಚಿತಗೊಳಿಸುತ್ತಾ ಪಿತರಪ್ರಾಣಕ್ಕೆ ಸ್ಥಾನವನ್ನೂ ಕೊಡುತ್ತಾರೆ ಎಂದು ಭಾವಿಸೋಣ. ಇವೆಲ್ಲವನ್ನು ಸ್ವೀಕರಿಸಿದ ಮೇಲೆಯೂ, ಶಾರೀರ ಪಿತರರು ಮುಂದಿನ ೭ ಪೀಳಿಗೆಗಳ ಪರ್ಯ್ಯನ್ತ ತಮ್ಮ ಸಹೋಭಾಗದ ವಿತಾನ ಮಾಡುತ್ತಾರೆ ಎಂಬ ಆ ತನ್ತುವಿತಾನಧರ್ಮ್ಮವು ಸರ್ವಥಾ ಪರೋಕ್ಷವಾಗಿಯೇ (ಅವಿಜ್ಞಾತವಾಗಿಯೇ) ಉಳಿಯುತ್ತದೆ. ಈ ರೀತಿಯಲ್ಲಿ ದೀರ್ಘತಮರಿಂದ ನಿಮ್ನ ಲಿಖಿತ ಮೂರು ಪ್ರಶ್ನೆಗಳ ಉದ್ಗಮವಾದಂತಾಯಿತು –

೧ – ವಿಜಾತೀಯವಾದ್ದರಿಂದ ಪಿತರಪ್ರಾಣವು ಶರೀರದಲ್ಲಿ ಹೇಗೆ ಆಗಮನ ಮಾಡುತ್ತದೆ?
೨ – ಶರೀರದಲ್ಲಿ ಬಂದರೂ (ಸ್ಥಾನದ ಅಭಾವದಿಂದ) ಅವರು ಎಲ್ಲಿ ಪ್ರತಿಷ್ಠಿತರಾದರು?
೩ – ಪ್ರತಿಷ್ಠಿತವಾದರೂ ಅವರು ತನ್ತುವಿತಾನ ಹೇಗೆ ಮಾಡಿದರು?

ದೀರ್ಘತಮಾ ಋಷಿಯಿಂದ ‘ಪಾಕಃ ಪೃಚ್ಛಾಮಿ ಮನಸಾ-ಅವಿಜಾನನ್’ ರೂಪದಿಂದ ಉಪಸ್ಥಿತವಾಗುವ ಪಿತರ-ವಿಷಯಕ ಇದೇ ಪ್ರಶ್ನೆಗಳ ಸಮಾಧಾನಕ್ಕಾಗಿ ಮಹರ್ಷಿ ಬೃಹದುಕ್ಥರು ಹೇಳುತ್ತಾರೆ –

“೧ – ಮಹಿಮ್ನ ಏಷಾಂ ಪಿತರಶ್ಚ ನೇಶಿರೇ ದೇವಾ ದೇವೇಷ್ವದಧುರಪಿ ಕ್ರತುಮ್ |
ಸಮವಿವ್ಯಚುರುತ ಯಾನ್ಯತ್ವಿಷುರೈಷಾಂ ತನೂಷು ನಿ ವಿವಿಶುಃ ಪುನಃ ||

೨ – ಸಹೋಭಿರ್ವಿಶ್ವಂ ಪರಿ ಚಕ್ರಮ್ ರಜಃ ಪೂರ್ವಾ ಧಾಮಾನ್ಯಮಿತಾ ವಿಮಾನಾಃ |
ತನೂಷು ವಿಶ್ವಾ ಭುವನಾನಿ ಯೇಮಿರೇ ಪ್ರಾಸಾರಯನ್ತ ಪುರುಧ ಪ್ರಜಾ ಅನು ||

೩ – ದ್ವಿಧಾ ಸೂನವೋಽಸುರಂ ಸ್ವರ್ವಿದಮಾಸ್ಥಾಪಯನ್ತ ತೃತೀಯೇನ ಕರ್ಮ್ಮಣಾ |
ಸ್ವಾಂ ಪ್ರಜಾಂ ಪಿತರಃ ಪಿತ್ರ್ಯಂ ಸಹ ಆವರೇಷ್ವದಧುಸ್ತನ್ತುಮಾತತಮ್ ||

೪ – ನಾವಾ ನ ಕ್ಷೋದಃ ಪ್ರದಿಶಃ ಪೃಥಿವ್ಯಾಃ ಸ್ವಸ್ತಿಭಿರತಿ ದುರ್ಗಾಣಿ ವಿಶ್ವಾ |
ಸ್ವಾಂ ಪ್ರಜಾಂ ಬೃಹದುಕ್ಥೋ ಮಹಿತ್ವಾವರೇಷ್ವದಧಾದಾ ಪರೇಷು ||
(ಋಕ್ ಸಂಹಿತಾ ೧೦|೫೬|೪,೫,೬,೭ ಮಂತ್ರಗಳು)

ಯಾವ ಋಕ್‍ಸಂಹಿತೆಯಿಂದ ಈ ಮನ್ತ್ರಗಳು ಉದ್ಧೃತವಾಗಿವೆಯೋ, ಆ ಋಕ್‍ಸಂಹಿತಾ ಗ್ರನ್ಥವೂ ದುರ್ಲಭವೇನಲ್ಲ. ಜೊತೆಗೆ ಸನಾತನ ಧರ್ಮ್ಮಾವಲಮ್ಬಿಗಳ ಪ್ರಾಣಭೂತ ಸರ್ವಶ್ರೀ ಸಾಯಣಾಚಾರ್ಯ್ಯರೂ ಈ ಸಂಹಿತೆಯ ಮೇಲೆ ವಿಸ್ತೃತ ಭಾಷ್ಯ ಬರೆದಿದ್ದಾರೆ, ಅದೂ ದುಷ್ಪ್ರಾಪ್ಯವೇನಲ್ಲ. ಎಲ್ಲಾ ಭಾರತೀಯ ವಿದ್ವಾಂಸರು ಅಥದಿಂದ ಇತಿ ಪರ್ಯ್ಯನ್ತ ಸಾಯಣ ಭಾಷ್ಯದ ಪಾರಾಯಣ ಮಾಡದಿರಬಹುದು, ಇದೂ ಸಮ್ಭವ. ಆದರೆ ………… ! ‘ಆದರೆ’ ಏಕೆಂದರೆ, ಸಾಯಣಭಾಷ್ಯವು ನಮ್ಮ ಆ ಪಿತೃನಿಷ್ಠೆಯ ರಕ್ಷಣೆ ಮಾಡಲಾಗಲಿಲ್ಲ; ಅದರ ಮೇಲೆ ಅಜ್ಞಜನರ ಕುತರ್ಕಪೂರ್ಣ ಆಕ್ಷೇಪವಾಗುತ್ತಿದೆ. ಅವಶ್ಯವಾಗಿ ವಿಜ್ಞಾನ-ಪರಮ್ಪರೆಯ ಉಚ್ಛೇದದಿಂದ ವಿಜ್ಞಾನಪ್ರಧಾನ ಮನ್ತ್ರಗಳ ಭಾಷ್ಯವು ನಮ್ಮ ತುಷ್ಟಿಯ ಕಾರಣವಾಗಲು ಸಾಧ್ಯವಿಲ್ಲ. ಹಾಗೇ ಇಂತಹಾ ಭಾಷ್ಯಸಹಸ್ರಗಳನ್ನು ಮುಂದಿಟ್ಟುಕೊಂಡು ನಾವು ನಮ್ಮ ಮೌಲಿಕ ಸಿದ್ಧಾನ್ತಗಳನ್ನು ಪರಾಲೋಚನೆಯಿಂದ ಉಳಿಸಿಕೊಳ್ಳಲಾಗುವುದಿಲ್ಲ. ಯಾವ ತತ್ತ್ವದೃಷ್ಟಿಯಿಂದ ವಿಸ್ಪಷ್ಟ ಶಬ್ದಗಳಲ್ಲಿ ಮನ್ತ್ರಗಳು ಪಿತೃವಿಜ್ಞಾನದ ವಿಶ್ಲೇಷಣೆ ಮಾಡಿರುವವೋ, ಅದು ನಮ್ಮೊಂದಿಗಿರುವಾಗ, ಸಾಪಿಣ್ಡ್ಯ ಭಾವದೊಂದಿಗೆ ಸಮ್ಬನ್ಧವಿರುವ ‘ಶ್ರಾದ್ಧಕರ್ಮ’ದ ಮೇಲೆ ಆಕ್ಷೇಪಣೆ ಮಾಡುವ ಸಾಮರ್ಥ್ಯವಾದರೂ ಯಾರಿಗೆ ತಾನೇ ಇರಲು ಸಾಧ್ಯ? ಅಥವಾ ಇದನ್ನು ವೇದೋಕ್ತವಲ್ಲವೆಂದು ಹೇಳುವ ದಾರ್ಷ್ಟ್ಯತೆಯು ಹೇಗೆ ಸಾಧ್ಯ? ಸಾಯಣನಿಷ್ಠಾನುಗತ (ಭಾವುಕತಾನುಗತ) ಮಹಾನುಭಾವರ ನಿಷ್ಠೆಯನ್ನು (ಉಪನಾಮ ಭಾವುಕತಾ) ಸುರಕ್ಷಿತವಾಗಿರಿಸಲಿಕ್ಕೆ ಮೊದಲಿಗೆ ಭಾಷ್ಯದೃಷ್ಟಿಯಿಂದಲೇ ಮನ್ತ್ರಾರ್ಥದ ಸಮನ್ವಯವಾಗುತ್ತದೆ, ತದನಂತರ ವಿಜ್ಞಾನಪ್ರಧಾನ ಆರ್ಷದೃಷ್ಟಿಯಿಂದ ಮನ್ತ್ರಾರ್ಥದ ವಿಶ್ಲೇಷಣೆ ಆಗುತ್ತದೆ. ಎರಡರಲ್ಲಿ ಯಾವುದು ಉಪಾದೇಯವೋ ಎಂಬ ಪ್ರಶ್ನೆಯ ನಿರ್ಣಯವು ಸ್ವಯಂ ಆರ್ಷಪ್ರಜೆಗಳ ಸಹಜನಿಷ್ಠೆಯ ಮೇಲೆ ನಿರ್ಭರವಾಗಿರುತ್ತದೆ.

೧ – ಮಹಿಮ್ನ ಏಷಾಮ್ … (ಭಾಷ್ಯಕಾರರು) –
“ನಮ್ಮ ಅಙ್ಗಿರಾದಿ ಪಿತರರು ಈ ದೇವತೆಗಳ ಮಹಿಮೆಯಿಂದ ಸಮರ್ಥರಾಗುತ್ತಿದ್ದಾರೆ. ದೇವತಾ ಸಮ್ಬನ್ಧದಿಂದ ದೇವತ್ತ್ವಭಾವವನ್ನು ಪ್ರಾಪ್ತಗೊಳಿಸುತ್ತಾ ಈ ನಮ್ಮ ಪಿತರರು ಇನ್ದ್ರಾದಿ ದೇವತೆಗಳಲ್ಲಿ ಸಂಕಲ್ಪವನ್ನು ಪ್ರತಿಷ್ಠಾಪಿಸಿದರು. ಆದರೆ ಈ ಪಿತರರು ಯಾವ ತೇಜ ಪ್ರದೀಪ್ತವಾಗುತ್ತಿದೆಯೋ, ಆ ತೇಜೋಭಾವಗಳಲ್ಲಿ ಪರಿಣತರಾದರು. ಈ ದೇವತೆಗಳ ಶರೀರದಲ್ಲಿ ಈ ಪಿತರರು ಪುನಃ ಪ್ರವಿಷ್ಟರಾದರು”.

೨ – ಸಹೋಭಿರ್ವಿಶ್ವಮ್ … (ಭಾಷ್ಯಕಾರರು) -
“ನಮ್ಮ ಪಿತರರು ತಮ್ಮ ಬಲಗಳಿಂದ ಸಮ್ಪೂರ್ಣ ಲೋಕಗಳಲ್ಲಿ ವ್ಯಾಪ್ತರಾಗಿದ್ದಾರೆ. (ಸರ್ವಲೋಕ-ಪರಿಕ್ರಮದ ಜೊತೆಜೊತೆಗೆ) ನಮ್ಮ ಈ ಪಿತರರು ಪರರಿಂದ ಅಮಿತ (ಅನಾಕ್ರಾನ್ತ) ಪೂರ್ವ ಸ್ಥಾನಗಳನ್ನು ನಾಲ್ಕೂ ಕಡೆಯಿಂದ ಆಕ್ರಮಿಸುತ್ತಾ, ಜೊತೆಗೆ (ಆಯಾ ಸ್ಥಾನಗಳಲ್ಲಿ) ಸಮ್ಪೂರ್ಣ ಭೂತಗಳನ್ನು ಆವರಿಸುತ್ತಾ (ಭೂತಗಳಲ್ಲಿ ವ್ಯಾಪ್ತರಾಗುತ್ತಾ), ಆಯಾಯ ಲೋಕ-ಭೂತ ಮಾತ್ರಾಗಳನ್ನು ತಮ್ಮ ಶರೀರಗಳಲ್ಲಿ ಪ್ರತಿಷ್ಠಿತಗೊಳಿಸುತ್ತಾ ತಮ್ಮ ಪ್ರಜೆಗಳನ್ನು ಲಕ್ಷ್ಯವಾಗಿಸಿಕೊಂಡು ಜ್ಯೋತಿಗಳು ಹಾಗೂ ನೀರನ್ನು ಹರಡಿದರು. ಅಂದರೆ ನಮ್ಮ ಅಙ್ಗಿರಾ ನಾಮಕ ಪೂರ್ವ ಪಿತರರು ತಮ್ಮ ಶಕ್ತಿಯಿಂದ ಸಂಪೂರ್ಣ ಲೋಕವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು, ಅತಿ ದೂರ ಗ್ರಹ-ನಕ್ಷತ್ರಾದಿಗಳನ್ನು ತಮ್ಮ ಸೀಮೆಯಿಂದ ಪರಿಚ್ಛಿನ್ನವಾಗಿಸಿ, ಸಮ್ಪೂರ್ಣ ಭೂತಗಳ ನಿಯಮನ ಮಾಡಿ ಪ್ರಜಾ ಪ್ರತಿ ಜಲ ಹಾಗೂ ತೇಜಗಳನ್ನು ಎಲ್ಲೆಡೆ ಹರಡಿದರು.”

೩ – ದ್ವಿಧಾ ಸೂನವಃ … (ಭಾಷ್ಯಕಾರರು)-
“ಸ್ವರ್ಗವನ್ನು ತಿಳಿದಿರುವ, ಸ್ವರ್ಗಸ್ಥಾನವನ್ನು ಪ್ರಾಪ್ತಗೊಳಿಸಿಕೊಳ್ಳುವ ಬಲವಾನ್ ಆದಿತ್ಯನನ್ನು ಆದಿತ್ಯನ ಪುತ್ರರಾದ ಅಙ್ಗಿರರು ಪ್ರಜೋತ್ಪಾದನ ರೂಪೀ ಮೂರನೇ ಕರ್ಮ್ಮದಿಂದ ಉದಯ-ಅಸ್ತರೂಪ ಎರಡೂ ಅವಸ್ಥೆಗಳಲ್ಲಿ ಪರಿಣತಗೊಳಿಸಿದರು. ಹಾಗೂ ಅಙ್ಗಿರಾ ಎಂಬ ಪಿತರರು ತಮ್ಮ ಪ್ರಜೆಗಳನ್ನು ಉತ್ಪನ್ನಗೊಳಿಸಿ ಸ್ವಭಾಗದೊಂದಿಗೆ ತಮ್ಮ ಪಿತಾ ಆದಿತ್ಯನ ಬಲವನ್ನು ನಿಕೃಷ್ಟ ಪ್ರಜಾರೂಪ ಮನುಷ್ಯರಲ್ಲಿ ಸ್ಥಾಪಿತಗೊಳಿಸುತ್ತಾರೆ. ಹೇಗೆ ಪಿತ್ರ್ಯ ಧನದ ಸರ್ವಾತ್ಮನಾ ರಕ್ಷಣೆ ಮಾಡುತ್ತಾ ಈ ಧನವು ಪುತ್ರರಲ್ಲಿ (ದಾಯಾ ಎಂಬ ರೂಪದಿಂದ) ಹಂಚಲ್ಪಡುತ್ತದೆಯೋ, ಅದೇ ರೀತೆ ಅಙ್ಗಿರಾ-ಪಿತರರು ಸರ್ವಥಾ ಸುರಕ್ಷಿತ ಪಿತ್ರ್ಯ ಧನ ರೂಪೀ ಆದಿತ್ಯ ಪಿತನ ಬಲವನ್ನು ಮನುಷ್ಯ ಪ್ರಜೆಗಳಲ್ಲಿ ಹಂಚುತ್ತಾರೆ. ಹಾಗಾಗಿ ‘ಅಯಂ ಹ್ಯಾತತಂ ತನ್ತುರ್ಯತ್‍ಪ್ರಜಾ’ – ‘ಪ್ರಜಾತನ್ತುಂ ಮಾ ವ್ಯವಚ್ಛೇತ್ಸೀಃ’ ‘ಪ್ರಜಾ ವೈ ತನ್ತುಃ’ ಇತ್ಯಾದಿ ಶ್ರುತಿಗಳ ಅನುಸಾರ ತನ್ತು ಎಂಬ ಹೆಸರಿನಿಂದ ಪ್ರಸಿದ್ಧ ಮನುಷ್ಯಪ್ರಜೆಗಳನ್ನು ಅದೇ ಪಿತರರಲ್ಲಿ ಆದಿತ್ಯನ ಬಲದಿಂದ ವಿತಾನಗೊಳಿಸಲಾಗಿದೆ.”

೪ – ನಾವಾ ನ ಕ್ಷೋದಃ… (ಭಾಷ್ಯಕಾರರು)-
“ಹೇಗೆ ಒಂದು ನೌಕೆಯಿಂದ ಸಮುದ್ರದ ಸನ್ತರಣ ಮಾಡಲಾಗುತ್ತದೆಯೋ, ಅಂತೆಯೇ ಸ್ವಸ್ತಿಭಾವಗಳಿಂದ (ಮಙ್ಗಲಗಳಿಂದ) ವಿಘ್ನ-ಬಾಧಾರೂಪೀ ದುರ್ಗಮಗಳನ್ನು (ಅಮಙ್ಗಲಗಳನ್ನು) ದಾಟಿಸಬಹುದು. ಇದೇ ರೀತಿ ಬೃಹದುಕ್ಥ ಎಂಬ ಹೆಸರಿನ ತತ್ತ್ವವಿಶೇಷವು ತನ್ನ ಪ್ರಜೆಗಳ, ‘ವಾಜೀ’ ಎಂಬ ಹೆಸರಿನಿಂದ ಪ್ರಸಿದ್ಧವಾದ ತನ್ನ ಮೃತ ಪುತ್ರನಿಗೆ ಸ್ವಶಕ್ತಿಯಿಂದ ಅಗ್ನ್ಯಾದಿ ಅವರ-ಪ್ರಜಾವರ್ಗದಲ್ಲಿ, ಹಾಗೂ ಸೂರ್ಯಾದಿ ಪರ-ದೇವತೆಗಳಲ್ಲಿ ಸ್ಥಾಪಿತಗೊಳಿಸಿದರು.”
         
ಭಾಷ್ಯಕಾರರ ಉಕ್ತ ಮನ್ತ್ರಾರ್ಥಗಳನ್ನು ಏಕೆ ಸ್ವಾಗತಿಸಬೇಕೆಂದರೆ, ಅವರ ಅನುಗ್ರಹದಿಂದ ನಮಗೆ ಇಂದು ‘ವೇದಭಾಷ್ಯ’ದ ದರ್ಶನಗಳ ಸೌಭಾಗ್ಯವಾದರೂ ಪ್ರಾಪ್ತವಾಗಿದೆ. ಇದೇ ಮಾತು ವೇದಾಕ್ಷರಗಳ ಆಪ್ಯಾಯನವಾಗಿವೆ. ಈ ಸಮ್ಬನ್ಧದಲ್ಲಿ – ‘ವೃದ್ಧಾಸ್ತೇನ ವಿಚಾರಣೀಯಚರಿತಾಃ’ ಎಂಬುದರ ಅನುಗಮನವೇ ಶ್ರೇಯಃಪ್ರನ್ಥಾಃ ಆಗಿದೆ. ಈಗ ವೈಜ್ಞಾನಿಕ ಅರ್ಥದತ್ತ ವೈಜ್ಞಾನಿಕರ ಧ್ಯಾನ ಆಕರ್ಷಿಸಲಾಗುತ್ತದೆ. ಇದರ ಯಥಾವತ್-ಸ್ವರೂಪ ಪರಿಚಯದಿಂದ ಪ್ರಶ್ನತ್ರಯಿಗಳ ಯಥಾವತ್ ಸಮಾಧಾನವು ಗತಾರ್ಥವಾಗುತ್ತಿದೆ.

೩೮. ‘ಮಹಿಮ್ನ ಏಷಾಂ ಪಿತರಃ ()’ (ವಿಜ್ಞಾನ ಭಾಷ್ಯ)

‘ವಿಜಾತೀಯ ಪಿತರರು ಆಗ್ನೇಯದೇವತಾ-ಪ್ರಧಾನ ಶರೀರದಲ್ಲಿ ಹೇಗೆ ಪ್ರವಿಷ್ಟರಾದರು?

ಮಹಿಮ್ನ ಏಷಾಂ ಪಿತರಶ್ಚ ನೇಶಿರೇ ದೇವಾ ದೇವೇಷ್ವದಧುರಪಿ ಕ್ರತುಮ್ |
ಸಮವಿವ್ಯಚುರುತ ಯಾನ್ಯತ್ವಿಷುರೈಷಾಂ ತನೂಷು ನಿ ವಿವಿಶುಃ ಪುನಃ ||

ಪ್ರಕೃತ ಮನ್ತ್ರವು ಇದೇ ಪ್ರಶ್ನೆಗೆ ಸಮಾಧಾನ ನೀಡುತ್ತಿದೆ. ಅಗ್ನಿ-ವಾಯು-ಆದಿತ್ಯ ಎಂಬ ಭೇದವುಳ್ಳ ಆಧ್ಯಾತ್ಮಿಕ ಆಗ್ನೇಯ-ಪ್ರಾಣದೇವತೆಗಳು ಸೌಮ್ಯ ಪಿತರರ ವಿರೋಧಿಗಳಲ್ಲ, ಆದರೆ ಇವುಗಳನ್ನು ಅಗ್ನಿಯ ಅನ್ಯತಮ ಸಖರೆಂದು ನಂಬಲಾಗಿದೆ. ಅಗ್ನಿ-ಸೋಮ, ಇವರೀರ್ವರು ಸಯುಕ್ (ಒಟ್ಟಿಗೇ ಇರುವ) ಸಖರಾಗಿದ್ದಾರೆ. ಇದರ ಸಮ್ಬನ್ಧವಾಗಿ ಶ್ರುತಿಯು ಏನು ಹೇಳುತ್ತಿದೆ ಎಂದು ನೋಡಿರಿ –

ಅಗ್ನಿರ್ಜಾಗಾರ ತಮೃಚಃ ಕಾಮಯನ್ತೇ, ಅಗ್ನಿರ್ಜಾಗಾರ ತಮು ಸಾಮಾನಿ ಯನ್ತಿ |
ಅಗ್ನಿರ್ಜಾಗಾರ ತಮಯಂ ಸೋಮ ಆಹ, ತವಾಹಮಸ್ತಿ ‘ಸಖ್ಯೇ’ ನ್ಯೋಕಾಃ || (ಋ ೫-೪೪-೧೫)

ಪ್ರತಿಯೊಂದು ವಸ್ತುತತ್ತ್ವವು ‘ಆತ್ಮಾ, ಪದಂ, ಪುನಃಪದಮ್’ ಭೇದದಿಂದ ಮೂರು ಸಂಸ್ಥಾಗಳಲ್ಲಿ ಪರಿಣತವಾಗಿಯೇ ಸ್ವಸ್ವರೂಪದಿಂದ ಪ್ರತಿಷ್ಠಿತವಾಗಿರುತ್ತದೆ. ಹೃದಯಾವಚ್ಛಿನ್ನಭಾವ ‘ಆತ್ಮಾ’ ಆಗಿದೆ, ಇದನ್ನು ‘ಪ್ರಜಾಪತಿಶ್ಚರತಿ ಗರ್ಭೇ’ ಎಂಬುದರ ಅನುಸಾರ ‘ಪ್ರಜಾಪತಿ’ ಎಂದೂ ಕರೆಯಲಾಗಿದೆ. ಹೃದಯಾಧಾರದಿಂದ ಪ್ರತಿಷ್ಠಿತ ಸ್ಪೃಶ್ಯ-ವಸ್ತುಪಿಣ್ಡವು ಆತ್ಮಪ್ರಪತ್ತಿ ಸ್ಥಾನವಾಗುತ್ತಾ ‘ಪದಮ್’ ಆಗಿದೆ. ಹೃದಯಸ್ಥ ಆತ್ಮೋಕ್ಥದಿಂದ ಅರ್ಕರೂಪದಿಂದ ವಿನಿಃಸೃತ, ವಸ್ತುಪಿಣ್ಡದಿಂದಲೂ ಹೊರಗೆ ಬಹಳ ದೂರದವರೆಗೆ ಸಾಮರೂಪದಿಂದ ತನ್ನ ವ್ಯಾಪ್ತಿ ಹೊಂದಿರುವ ಪ್ರಾಣಮಣ್ಡಲವು ‘ಪುನಃಪದಮ್’ ಆಗಿದೆ. ಇದೇ ‘ಪುನಃಪದಮ್’ ಎಂಬುದು ‘ಮಹಿಮಾ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಉದಾಹರಣೆಗಾಗಿ ಸೂರ್ಯ್ಯಕೇನ್ದ್ರಾವಚ್ಛಿನ್ನ ಆದಿತ್ಯಪುರುಷವು ಆತ್ಮಾ ಆಗಿದೆ, ಸ್ವಯಂ ಸೂರ್ಯ್ಯಗೋಳವು ‘ಪದಮ್’ ಆಗಿದೆ, ಹಾಗೂ ಸೌರ-ಪ್ರಕಾಶಮಣ್ಡಲವು ‘ಪುನಃಪದಮ್’ ಆಗಿದೆ. ‘ಸ್ವೇ ಮಹಿಮ್ನಿ ಪ್ರತಿಷ್ಠಿತಃ’ ಇತ್ಯಾದಿ ಔಪನಿಶದ ಸಿದ್ಧಾನ್ತದ ಅನುಸಾರ ಪ್ರತಿಯೊಂದು ವಸ್ತುಪಿಣ್ಡದ ಹೃದ್ಯ ಆತ್ಮವು ಪುನಃಪದರೂಪೀ ತನ್ನ ಮಹಿಮಮಣ್ಡಲದ ಕೇನ್ದ್ರದಲ್ಲಿ ಪ್ರತಿಷ್ಠಿತವಾಗಿರುತ್ತದೆ. ಹೇಗೆ ದೇವಘನವಾದಂತಹಾ ಸೌರಜಗತ್ತಿನ ಮಹಿಮಮಣ್ಡಲದಲ್ಲಿ ಪೃಥಿವ್ಯಾದಿ ಎಲ್ಲವೂ ಪ್ರತಿಷ್ಠಿತವಾಗಿರುತ್ತವೆಯೋ, ಹಾಗೆಯೇ ಆಧ್ಯಾತ್ಮಿಕ ಪ್ರಾಣಾಗ್ನಿತ್ರಯಿಯ ಮಹಿಮಾ-ಮಣ್ಡಲದಲ್ಲಿ ಸೌಮ್ಯ ಪಿತರಪ್ರಾಣವು ಪ್ರತಿಷ್ಠಿತವಾಗುತ್ತಿರುತ್ತದೆ. ದೇವಪ್ರಾಣದ ಮಹಿಮೆಯಲ್ಲಿ ಪಿತರರು ಅವಶ್ಯವಾಗಿ ಪ್ರತಿಷ್ಠಿತರಾಗಲು ಸಾಧ್ಯ. ಇದೇ ಅಭಿಪ್ರಾಯದಲ್ಲಿ – ‘ಮಹಿಮ್ನ ಏಷಾಂ ಪಿತರಶ್ಚ ನೇಶಿರೇ’ (ಪಿತರಃ – ಅಪಿ ಏಷಾಂ – ಆಧ್ಯಾತ್ಮಿಕ ಪ್ರಾಣದೇವಾನಾಂ, ಮಹಿಮ್ನಃ – ಸಕಾಶಾತ್ – ಈಶಿರೇ).

ಉಳಿದಿರುವುದು ವಿಜಾತೀಯತೆಯ ವಿಚಾರ. ಇದರ ಸಮ್ಬನ್ಧದಲ್ಲಿ ಉತ್ತರ ನೀಡಿಯಾಗಿದೆ. ಸೋಮವು ಅನ್ನವಾಗಿದೆ; ಅಗ್ನಿಯು ಅನ್ನಾದವಾಗಿದೆ. ಅನ್ನವು ಅನ್ನಾದದ ವಿರೋಧಿಯಲ್ಲ, ಆದರೆ ಅನ್ನಾದದ ಪ್ರತಿಷ್ಠಾ ಆಗಿದೆ. ವಿರೋಧದ ಮಾತು ವಿದೂರ; ಎರಡೂ ಸೇರಿ ‘ಅತ್ತೈವಾಖ್ಯಾಯತೇ’ ನ್ಯಾಯದಿಂದ ಏಕರೂಪವಾಗುತ್ತವೆ. ಪಿತರ-ದೇವತಾ ಆಗಿಬಿಡುತ್ತಾರೆ, ದೇವತಾ ಪಿತರರಾಗುತ್ತಾರೆ. ವಿಕಾಸ ಧರ್ಮಾವಚ್ಛಿನ್ನ ಅಗ್ನಿತತ್ತ್ವದ ವಿಕಾಸದ ಚರಮಾವಸ್ಥೆಯಲ್ಲಿ (ಅಧಿ-ಪರಿಧಿ-ಸ್ಥಾನದಲ್ಲಿ) ತಲುಪಿ ಸಂಕೋಚ ಧರ್ಮಾವಚ್ಛಿನ್ನ ಸೋಮತತ್ತ್ವ ರೂಪದಲ್ಲಿ ಪರಿಣತವಾಗುತ್ತಾರೆ, ಹಾಗೂ ಸಂಕೋಚಧರ್ಮ್ಮಾ ಸೋಮವು ಸಂಕೋಚದ ಚರಮಾವಸ್ಥೆಯಲ್ಲಿ (ಕೇನ್ದ್ರದಲ್ಲಿ) ತಲುಪಿ ವಿಕಾಸಧರ್ಮ್ಮಾ ಅಗ್ನಿರೂಪದಲ್ಲಿ ಪರಿಣತವಾಗುತ್ತದೆ. ಕೇನ್ದ್ರ-ಪರಿಧಿಗಳ ಸಮತುಲನೆಯಿಂದ ಎರಡೂ ಅಭಿನ್ನವಾಗಿವೆ. ಕೇನ್ದ್ರದಲ್ಲಿ ಪ್ರತಿಷ್ಠಿತ ಅಗ್ನಿ, ಹಾಗೂ ಪರಿಧಿಯ ಹೊರಗೆ ಪ್ರತಿಷ್ಠಿತ ಸೋಮ, ಇವೆರಡರ ಮಧ್ಯಕ್ಷೇತ್ರದಲ್ಲಿ ಯಜನದ ಸಮ್ಬನ್ಧವಾಗುತ್ತಿದೆ. ಈ ಪಾರಸ್ಪರಿಕ ಸಮ್ಬನ್ಧದಿಂದ ಅಗ್ನಿ-ಸೋಮದಲ್ಲಿ ಪ್ರೋತವಾಗಿದ್ದರೆ, ಸೋಮ-ಅಗ್ನಿಯಲ್ಲಿ ಓತವಾಗಿದೆ, ಇದೇ ಅವೆರಡರ ಓತಪ್ರೋತಭಾವ ಸಮ್ಬನ್ಧವಾಗಿದೆ. ಇದೇ ಯಾಜ್ಞಿಕ ಸಮ್ಬನ್ಧವನ್ನು ಲಕ್ಷ್ಯದಲ್ಲಿಟ್ಟುಕೊಂಡು – ‘ದೇವಾ ದೇವೇಷ್ವದಧುರಪಿಕ್ರತುಂ – ಸಮವಿವ್ಯಚುಃ’ ಎಂದು ಹೇಳಲಾಗಿದೆ.

ಯಾಜ್ಞಿಕ ಸಮ್ಬನ್ಧದ ತಾತ್ಪರ್ಯ್ಯವು ಇದೇ ಆಗಿದೆ, ಪ್ರಾಕೃತಿಕ-ಆಧಿದೈವಿಕ ಯಜ್ಞದಲ್ಲಿ ಅಗ್ನ್ಯಾದಿ ಪ್ರಾಣದೇವತೆಗಳಲ್ಲಿ ಭೌತಿಕ ಸೋಮಾಹುತಿ ಆಗುವುದರಿಂದ ‘ಸುತ್ಯಾ’ ನಾಮಕ ಸೋಮಯಜ್ಞವು ಸಮ್ಪನ್ನವಾಗುತ್ತದೆ. ಆದರೆ ನಮ್ಮ ಈ ಆಧ್ಯಾತ್ಮಿಕ ಸುತ್ಯಾಯಜ್ಞದಲ್ಲಿ ದೇವತಾ (ಪ್ರಾಣೇನ್ದ್ರಿಯವರ್ಗ) ದೇವರೂಪ ಸೋಮಮಯ ಪಿತೃಪ್ರಾಣದ್ದೇ ಆದ ಸ್ತ್ರೀಯ ಶೋಣಿತಾಗ್ನಿಯಲ್ಲಿ ಆಹುತಿ ನೀಡುತ್ತಿದ್ದಾರೆ. ಮನುಷ್ಯರು (ದ್ವಿಜಾತಿ) ಪ್ರಾಕೃತಿಕ ಸುತ್ಯಾಯಜ್ಞದಿಂದ ಸಮತುಲಿತ ತಮ್ಮ ವೈಧಯಜ್ಞದಲ್ಲಿ ಎಲ್ಲಿ ಭೌತಿಕ ಸೋಮದಲ್ಲಿ ಆಹುತಿ ನೀಡುತ್ತಾರೆಯೋ, ಪ್ರಾಣದೇವತೆಗೆ ತನ್ನ ಪ್ರಾಕೃತಿಕ ಸುತ್ಯಯಜ್ಞದಲ್ಲಿ ಅಲ್ಲೇ ಭೌತಿಕ ಸೋಮದ ಆಹುತಿ ನೀಡುತ್ತಿದ್ದಾರೆಯೋ, ಅಲ್ಲಿ ಆಧ್ಯಾತ್ಮಿಕ ಯಜ್ಞದಲ್ಲಿ – ‘ದೇವಾಃ ಇನ್ದ್ರಿಯದೇವಾಃ – ದೇವೇಷು- ಪಿತೃಪ್ರಾಣಾತ್ಮಕೇಷು ದೇವೇಷು-ಕ್ರತುಂ-ಸುತ್ಯಾಯಜ್ಞಂ-ಅದಧುಃ-ಸಮ್ಪಾದಯಾಞ್ಚಕ್ರುಃ’ ಎಂಬುದರ ಅನುಸಾರ ಪ್ರಾಣದೇವತೆಯು ಅನ್ಯ ಸೌಮ್ಯ ಪ್ರಾಣದೇವಗಳ ಯಜ್ಞಸ್ವರೂಪವನ್ನು ಪ್ರತಿಷ್ಠಿತಗೊಳಿಸುತ್ತಿದ್ದಾರೆ. ಮನ್ತ್ರಗತ ‘ಯಾನಿ’ ಪದವು ಸಾಕಾಙ್‍ಕ್ಷ ಆಗಿದೆ. ಹಾಗೂ ಪಿತೃಪ್ರಾಣದಿಂದ ಈ ಪದವು ‘ಪಿತ್ರ್ಯಸಹಾಂಸಿ’ ಎಂಬುದರದ್ದೇ ಸಂಗ್ರಾಹಕವಾಗುತ್ತಿದೆ.

ಪಿತ್ರ್ಯಸಹಃ ಪರಸ್ಪರ ಸಂಶ್ಲಿಷ್ಟವಾಗಿಯೇ (ಶೋಣಿತಾಗ್ನಿಯಲ್ಲಿ ಹುತವಾಗಿ) ವ್ಯಕ್ತರೂಪ (ಗರ್ಭರೂಪ)ದಲ್ಲಿ ಪರಿಣತವಾಗುತ್ತದೆ. ಎಲ್ಲಿಯವರೆಗೆ ಶುಕ್ರದಲ್ಲಿ ೨೮ ಚಾನ್ದ್ರ ಪಿತ್ರ್ಯಸಹಗಳು ಪಿಣ್ಡರೂಪದಲ್ಲಿ ಪರಿಣತವಾಗುವುದಿಲ್ಲವೋ, ಅಲ್ಲಿಯವರೆಗೆ (೧೬ ವರ್ಷ ಪರ್ಯ್ಯನ್ತ) ಸ್ವಯಂ ಬೀಜಿಯಲ್ಲಿ ಪ್ರಜನನಶಕ್ತಿಯೇ ವ್ಯಕ್ತವಾಗುವುದಿಲ್ಲ, ಹಾಗೂ ಪುತ್ರಾದಿಗಳ ಅಭಿವ್ಯಕ್ತಿಯಾಗುವುದಿಲ್ಲ. ಇದೇ ಅಭಿಪ್ರಾಯದಿಂದ ‘ಯಾನಿ-ಸಮವಿವ್ಯಚುಃ’ (ಪಿತೃಸಹಾಂಸಿ ಪ್ರಥಮಂ ಸಹ ಸಂಗಮ್ಯ, ಮೂಲಪುರುಷಸ್ಯಾಭಿವ್ಯಞ್ಜಕಾನಿ ಭವನ್ತಿ, ಅನನ್ತರಂ ಚ ಶೋಣಿತಾಗ್ನೌ ಸಂಗಮ್ಯ ಪುತ್ರಾದಿರೂಪೇಣ ವ್ಯಕ್ತಿಭಾವಮಗಚ್ಛನ್) ಎಂದು ಪ್ರಸಕ್ತ ಮಂತ್ರದಲ್ಲಿ ಹೇಳಲಾಗಿದೆ.

ಶುಕ್ರಗತ ಪಿತ್ರ್ಯಸಹವು ಪರಸ್ಪರ ಸಂಶ್ಲಿಷ್ಟವಾಗಿಯೇ ಪುತ್ರಾದಿ ವ್ಯಕ್ತಿಗಳಲ್ಲಿ (ಪುತ್ರಾದಿಗಳ ಸ್ವರೂಪ ನಿಷ್ಪತ್ತಿಗಾಗಿ) ಶೋಣಿತಾಗ್ನಿಯಲ್ಲಿ ಆಹುತವಾಗುತ್ತವೆ. ಒಂದೇ ವ್ಯಕ್ತಿಯಯಲ್ಲಿ (ಪುತ್ರನಲ್ಲಿ) ಹೋಗಿ ಈ ಪಿತ್ರ್ಯಸಹದ ಗತಿಯು ಉಪರತವಾಗುವುದಿಲ್ಲ, ಆದರೆ ಎಲ್ಲಿಯವರೆಗೆ ಈ ಪಿತೃಪಿಣ್ಡದ ಅಪತ್ಯವು ಭೂಪಿಣ್ಡದ ಮೇಲೆ ಪ್ರತಿಷ್ಠಿತವಾಗಿರುತ್ತದೆಯೋ, ಅಲ್ಲಿಯವರೆಗೆ (ಏಳನೇ ಪೀಳಿಗೆ ಪರ್ಯ್ಯನ್ತ) ಆ ಪಿಣ್ಡವು ಅಂಶಾತ್ಮನಾ ಪ್ರದೀಪ್ತವಾಗಿರುತ್ತದೆ. ಇದೇ ಅಭಿಪ್ರಾಯದಲ್ಲಿ ‘ಉತ ಯಾನಿ ಆತ್ತ್ವಿಷುಃ’ ಎಂದು ಹೇಳಲಾಗಿದೆ. ಏಳನೇ ಪೀಳಿಗೆ ಪರ್ಯ್ಯನ್ತ ಋಣದಾನ-ಸಮ್ಬನ್ಧದಿಂದ ಪ್ರದೀಪ್ತವಾದಂತ?ಾ ಈ ಪಿತರರು ಅಪತ್ಯಗಳಲ್ಲಿ ಭುಕ್ತರಾಗಿರುತಲಿದ್ದು ತಮ್ಮ ತನ್ಯಭಾಗಗಳನ್ನು ಪಡೆಯಲಿಕ್ಕಾಗಿ ಸಪಿಣ್ಡೀಕರಣ-ಕಾಲದಲ್ಲಿ ಪುನಃ ಈ ಅಪತ್ಯಗಳಲ್ಲಿ ಪ್ರವಿಷ್ಟರಾಗುತ್ತಾರೆ. ಏಳೂ ಪಿತರರ ಸಹೋಭಾಗವು ಒಂದೇಕಡೆ ಸಮವೇತವಾಗಿ ಪುತ್ರ-ಪೌತ್ರಾದಿ ತನ್ತುರೂಪದಿಂದ ಅಭಿವ್ಯಕ್ತವಾಗುತ್ತದೆ. ಆಯಾಯ ತನ್ತುವಿನ (ಸನ್ತಾನದ) ಮೃತ್ಯುವಿನ ನನ್ತರ ಆಯಾಯ ತನ್ತುವಿನಲ್ಲಿ ಋಣರೂಪದಲ್ಲಿ ಪ್ರತಿಷ್ಠಿತವಾಗುವ ಅಷ್ಟಷ್ಟು ಸಂಖ್ಯೆಯ ಸಹೋಭಾಗವು ಆವಾಪಕರ್ತ್ತಾ ಪಿತರರಲ್ಲಿ ಸಮಾನ ರೂಪದಲ್ಲಿ ಪ್ರವಿಷ್ಟವಾಗುತ್ತವೆ. ಇದೇ ‘ಪ್ರತ್ಯರ್ಪಣ’ ಆಗಿದೆ. ಯಾವ ಸಂಖ್ಯಾಕ್ರಮದಿಂದ ಅರ್ಪಣವಾಗುತ್ತದೆಯೋ, ಅದೇ ಸಂಖ್ಯಾಕ್ರಮದಿಂದ (ಸಮ ಸಂಖ್ಯೆಯಿಂದ) ಆ ಅಂಶವು ಅವರಲ್ಲಿ ಪ್ರವಿಷ್ಟವಾಗುತ್ತವೆ. ಇದೇ ಅಭಿಪ್ರಾಯದಲ್ಲಿ – ‘ನಿ ವಿವಿಷುಃ ಪುನಃ’ ಎಂದು ಹೇಳಲಾಗಿದೆ. ‘ಆ ಏಷಾಂ ತನೂಷು ಪುನರ್ವಿವಿಷುಃ’ ಎಂಬುದೇ ನಿಷ್ಕರ್ಷಾರ್ಥವಾಗಿದೆ.

ಶರೀರದ ಆಗ್ನೇಯ ದೇವತೆಯೂ ಪ್ರಾಣಾತ್ಮಕವಾಗಿದೆ, ಸೌಮ್ಯ ಪಿತರರೂ ಪ್ರಾಣಮೂರ್ತ್ತಿಗಳು. ಪ್ರಾಣತತ್ತ್ವವು ಸರ್ವಥಾ ಅಧಾಮಚ್ಛದವಾಗಿದೆ. ಸ್ಥಾನಾವರೋಧ ಮಾಡುವುದು ಭೂತದ ಧರ್ಮ್ಮವಾಗಿದೆಯೆ ಹೊರತು ಪ್ರಾಣದ್ದಲ್ಲ. ಇಂತಹಾ ಸ್ಥಿತಿಯಲ್ಲಿ ಪ್ರಾಣಾತ್ಮಕ ಪಿತರರಿಗೆ ಅವಕಾಶದ ಮೀಮಾಂಸೆಯನ್ನು ಮಾಡುವುದೇ ವ್ಯರ್ಥ. ಆದರೆ ಈ ಎರಡು ತತ್ತ್ವಗಳು ಅಭಿನ್ನ ಸಖರಾಗಿದ್ದಾರೆ. ಅಗ್ನಿಮಹಿಮಾ ಇವರ ಆಶ್ರಯ ಭೂಮಿಯಾಗಿದೆ, ಇಲ್ಲಿ ಬಂದು ಅವರು ಒಗ್ಗೂಡುತ್ತಾರೆ. ಒಗ್ಗೂಡಿ ತನ್ತುವಿತಾನ ಮಾಡುತ್ತಾರೆ. ಫಲಿತಾಂಶವಾಗಿ ಮೊದಲ ಪ್ರಶ್ನೆಗೆ – ‘ಸರ್ವಥಾ ಸಮಾಹಿತರಾಗುತ್ತಾರೆ’ ಎಂಬುದೇ ಉತ್ತರವಾಗುತ್ತದೆ.

೩೯. ‘ಸಹೋಭಿರ್ವಿಶ್ವಂ ಪರಿಚಕ್ರಮ್ ()’ (ವಿಜ್ಞಾನ ಭಾಷ್ಯ)

ಸಹೋಭಿರ್ವಿಶ್ವಂ ಪರಿ ಚಕ್ರಮ್ ರಜಃ ಪೂರ್ವಾ ಧಾಮಾನ್ಯಮಿತಾ ವಿಮಾನಾಃ |
ತನೂಷು ವಿಶ್ವಾ ಭುವನಾನಿ ಯೇಮಿರೇ ಪ್ರಾಸಾರಯನ್ತ ಪುರುಧ ಪ್ರಜಾ ಅನು ||

ಭಾಷ್ಯಕಾರರು ಸಹೋಭಿಃ ಎಂಬುದರ ಅರ್ಥವು ‘ಬಲೈಃ‘ ಎಂದಿದ್ದಾರೆ. ಇದು ವಿಜ್ಞಾನ ಮರ್ಯಾದೆಯಲ್ಲಿ ಸರ್ವಥಾ ಬಹಿಷ್ಕೃತವಾಗಿದೆ. ಪುತ್ರ-ಪೌತ್ರಾದಿಯಲ್ಲಿ ಅಭಿಷುತವಾಗಿ ಪ್ರಜಾರೂಪದಿಂದ ವಿತತವಾಗುವ, ಸಾಹಸದ ಪ್ರದಾತಾ, ಪುರುಷ ಶುಕ್ರದಲ್ಲಿ ಪ್ರತಿಷ್ಠಿತ, ನಕ್ಷತ್ರಾವಚ್ಛಿನ್ನ ಚಾನ್ದ್ರರಸಾತ್ಮಕ, ನಕ್ಷತ್ರಸಂಖ್ಯಾ-ಭೇದದಿಂದ ೨೮ ಕಲಾ ಸೌಮ್ಯ ಪಿತೃಪ್ರಾಣಮಯ ತತ್ತ್ವ ವಿಶೇಷವೇ ‘ಸಹಃ’ ಆಗಿದೆ. ಇದಕ್ಕೆ ಇದರ ವಿವರಣೆಯ ಪೂರ್ವದಲ್ಲಿ ಪ್ರತ್ಯೇಕ ನಿರೂಪಣೆ ಇದೆ. ಸಹವು ಒಂದಲ್ಲ ೨೮ ಇವೆ. ಹಾಗಾಗಿ ‘ಸಹೋಭಿಃ’ ಎಂದು ಹೇಳಲಾಗಿದೆ. ‘ವಿ ಯಸ್ತಸ್ತಮ್ಭ ಷಡಿಮಾ ರಜಾಂಸಿ’ ಇತ್ಯಾದಿ ದೀರ್ಘತಮೋಕ್ತ ಮನ್ತ್ರವ್ಯಾಖ್ಯಾನದಲ್ಲಿ ಹಿಂದೆಯೇ ಹೇಳಲ್ಪಟ್ಟಿರುವುದೇನೆಂದರೆ ೬ ರಜಗಳಿಂದ ಪ್ರಕೃತದಲ್ಲಿ ಬೀಜೀ ಪುರುಷದ ಪುತ್ರಾದಿ ೬ ಸನ್ತಾನಗಳು ಅಭಿಪ್ರೇತವಾಗಿವೆ. ‘ರಜಃ’ ಶಬ್ದವು ಸಾಮಾನ್ಯತಃ ‘ಲೋಕ’ದ ವಾಚಕ ಎಂದು ಒಪ್ಪಲಾಗಿದೆ. ‘ಲೋಕಸ್ತು ಭುವನೇ ಜನೇ’ ಇದರ ಅನುಸಾರ ‘ಜನ’ವೂ ಲೋಕ ಆಗಿದೆ. ಹಾಗೇ ‘ಪ್ರಜಾಸ್ಯಾತ್ ಸನ್ತತೌ ಜನೇ’ ಇದರ ಅನುಸಾರ ಪ್ರಜಾ ಕೂಡ ‘ಜನ’ ಎಂದಾಗಿದೆ. ಫಲಿತಾಂಶ ರೂಪದಲ್ಲಿ ‘ರಜಾಂಸಿ’ ಎಂಬುದರ ಅರ್ಥವು ‘ಅಪತ್ಯಾನಿ’ ಎಂದು ಹೇಳಲು ಯಾವುದೇ ಅಡಿಯಿಲ್ಲ. ಶ್ರುತಿಪಠಿತ ‘ಪೂರ್ವ’ ಶಬ್ದವು ಪುತ್ರಾದಿಗಳಲ್ಲಿ ಆಹುತವಾಗುವ ಪಿಣ್ಡಭಾಗದ ಆಹುತಿಯಿಂದ ಪೂರ್ವಕಾಲದ ದ್ಯೋತಕವಾಗಿದೆ. ‘ಧಾಮ’ ಶಬ್ದವು ‘ಪಿತೃಸಹಃಪಿಣ್ಡ’ದ ಸೂಚಕವಾಗಿದೆ. ‘ಅಮಿತಾನಿ’ ಎಂಬುದರ ಅರ್ಥವು – ವ್ಯವಚ್ಛೇದರಹಿತ, ಅವಿಚ್ಛಿನ್ನ ರೂಪದಿಂದ ಸನ್ತತ ಎಂದು. ‘ತನೂಷು’ ಎಂಬುದರ ಅರ್ಥ – ‘೭-೬-೫-೪-೩-೨-೧’ ಈ ಕ್ರಮದಿಂದ ವಿಭಕ್ತವಾಗಿರುವ ‘ಪಿತೃಸಹಃ’ ಎಂಬ ಪಿಣ್ಡಾಂಶ. ‘ಭುವನ’ದ ಅರ್ಥ – ’೨೧-೧೫-೧೦-೬-೩-೧-‘ ಈ ಕ್ರಮದಲ್ಲಿ ಸೂನು ರೂಪದಲ್ಲಿ ಪರಿಣತವಾಗುವ ಪ್ರತ್ಯಂಶ. ‘ಪುರುಧಾ’ ಎಂಬುದರ ಅರ್ಥವು – ಬಹುಶಃ ಎಂದು. ಈ ಪರಿಭಾಷೆಗಳ ಸಾಮನ್ವಯದ ಅನಂತರವೇ ಪ್ರಕೃತ ಮನ್ತ್ರಾರ್ಥದ ಯಥಾವತ್ ಸಮನ್ವಯವು ಸಮ್ಭವ.

ಸಹೋಭಿಃ – ಶುಕ್ರಸ್ಥಿತಾಃ ೨೮ ಕಲೋಪೇತಾಃ ಪಿತೃಭಾಗಾಃ |
ರಜಃ – ಪುತ್ರಪೌತ್ರಾದಯಃ |
ಪೂರ್ವಾ – ಆಹುತೇಃ ಪೂರ್ವಕಾಲಮ್
ಧಾಮಾನಿ – ಪಿತೃಪಿಣ್ಡಃ
ತನೂಷು – ಪಿತರಃ
ಭುವನಾ – ಸೂನವಃ
ಪುರುದಾ – ಬಹುಶಃ

“ಪತ್ನೀಶರೀರಸ್ಥ ಯೋಷಾಪ್ರಾಣಪ್ರಧಾನ ಶೋಣಿತಾಗ್ನಿಯಲ್ಲಿ ಆಹುತಿಯಾಗುವ ಮೊದಮೊದಲು ‘೭-೬-೫-೪-೩-೨೧-‘ ಎಂಬ ಆತ್ಮಧೇಯರೂಪೀ ವ್ಯವಚ್ಛೇದಗಳನ್ನು ಹೊರತುಪಡಿಸಿ, ಹಾಗೆಯೇ ಅಮಿತ (ಏಕರಸಾತ್ಮಕ) ಪುರುಷಶರೀರಸ್ಥ ವೃಷಾಪ್ರಾಣಪ್ರಧಾನ-ಮಹದಾತ್ಮಾವಚ್ಛಿನ್ನ ಶುಕ್ರಸ್ಥ ಅಷ್ಟಾವಿಂಶತಿಕಲಾತ್ಮಕ ಪಿತರಪಿಣ್ಡವು ಆಹುತವಾಗುತ್ತದೆ. ಈ ಆಹುತಿ ಸಮ್ಬನ್ಧದಿಂದ ಮುಂದುಮುಂದಕ್ಕೆ ತನ್ನ ತನ್ಯ ಭಾಗಗಳಿಂದ ಪುತ್ರಾದಿಗಳ ಉತ್ಪತ್ತಿಯ ಕಾರಣವಾಗುತ್ತಾ, ಸ್ವಪಿಣ್ಡವನ್ನು ೭-೬-ಇತ್ಯಾದಿ ಪೂರ್ವೋಕ್ತ ಕ್ರಮಾನುಸಾರ ವಿಭಕ್ತಗೊಳಿಸುತ್ತಾ, ಹಾಗೆಯೇ ತನ್ನ ಸಹೋಮಾತ್ರಾವನ್ನು ಉತ್ತರೋತ್ತರ ಪರಿಮಿತಗೊಳಿಸುತ್ತಾ ಸ್ವಸಹಃಸನ್ತನನದಿಂದ ಏಳು ತಲೆಮಾರಿನ ತನಕ ಅಪತ್ಯಗಳಲ್ಲಿ ವ್ಯಾಪ್ತವಾಗಿಸುತ್ತದೆ. ತನ್ನ ಸಹೋಭಾಗಗಳನ್ನು ‘ಪಿತರಃ-ಸೂನವಃ’ ಎಂಬ ೨ ಭಾಗಗಳಲ್ಲಿ ವಿಭಕ್ತಗೊಳಿಸುತ್ತಾ ಈ ಸಹೋಭಾಗಗಳನ್ನು ಅಪತ್ಯ ಕ್ರಮಾನುಸಾರ ನಿಯತಗೊಳಿಸುತ್ತದೆ.”

೨೧ ಸೂನು ಭಾಗಗಳ ಜೊತೆಗೆ ೭ ಪಿತೃಭಾಗಗಳನ್ನು, ೧೫ ಸೂನು ಭಾಗಗಳ ಜೊತೆಗೆ ೬ ಪಿತೃಭಾಗಗಳನ್ನು, ಹೀಗೆಯೇ ಪೂರ್ವಪ್ರದರ್ಶಿತ ಕ್ರಮಾನುಸಾರ ಉತ್ತರೋತ್ತರವಾಗಿ ಉತ್ಪನ್ನವಾಗುವ ಯೋನಿ-ಶರೀರಗಳಲ್ಲಿ ತನ್ನ ಮಾತ್ರಾಗಳನ್ನು ಕೊಡುತ್ತಾ, ಈ ಮಾತ್ರಾಗಳನ್ನು ಆಯಾಯ ಯೋನಿಶರೀರಗಳ ಆಧೀನಗೊಳಿಸುತ್ತಾ ಹೋಗುತ್ತದೆ. ಪುತ್ರಪೌತ್ರಾದಿಗತ ಪಿತೃಸಹಗಳ ಮೂಲವು ಸ್ವಯಂ ಮೂಲ ಪುರುಷ (ಬೀಜೀ)ಯಲ್ಲಿ ಬದ್ಧವಾಗಿರುತ್ತದೆ. ಇಲ್ಲಿ ಬದ್ಧವಾಗಿ ಆ ಸಹಃಕಲೆಗಳು ವೃದ್ಧಾತಿವೃದ್ಧಪ್ರಪೌತ್ರ ಪರ್ಯ್ಯನ್ತ ವ್ಯಾಪ್ತವಾಗಿರುತ್ತವೆ. ಈ ರೀತಿ ಸೂನುರೂಪ-ಪುತ್ರ-ಪೌತ್ರಾದಿ ಸಮ್ಪೂರ್ಣ ಭುವನಗಳಲ್ಲಿ ಆ ಬೀಜೀ ಪಿತರವು ತನ್ನ ಅಪತ್ಯ ಭಾಗಗಳನ್ನು (ಆತ್ಮಧೇಯ ಕಲೆಗಳನ್ನು) ವ್ಯಾಪ್ತಗೊಳಿಸುತ್ತದೆ. ಪಿತರರ ಈ ಪ್ರಸಾರ ಕರ್ಮ್ಮವು ಸಮಾನಧಾರೆಯಲ್ಲಿ ಪ್ರವಹಿತವಾಗುವುದಿಲ್ಲ. ಆದರೆ ಬೀಜೀಯಲ್ಲಿ ೭, ಪುತ್ರದಲ್ಲಿ ೬, ಪೌತ್ರದಲ್ಲಿ ೫, ಈ ರೀತಿ ನ್ಯೂನಾಧಿಕರೂಪದಿಂದಲೇ ಇದರ ಪ್ರಸಾರ ಆಗುತ್ತದೆ. ಇದು ಮುಂದಿನ ಮಂತ್ರಗಳಲ್ಲಿ ಸ್ಪಷ್ಟವಾಗುತ್ತದೆ.

೪೦. ‘ದ್ವಿಧಾ ಸೂನವೋಽಸುರಮ್ ()’ (ವಿಜ್ಞಾನ ಭಾಷ್ಯ)-

ದ್ವಿಧಾ ಸೂನವೋಽಸುರಂ ಸ್ವರ್ವಿದಮಾಸ್ಥಾಪಯನ್ತ ತೃತೀಯೇನ ಕರ್ಮ್ಮಣಾ |
ಸ್ವಾಂ ಪ್ರಜಾಂ ಪಿತರಃ ಪಿತ್ರ್ಯಂ ಸಹ ಆವರೇಷ್ವದಧುಸ್ತನ್ತುಮಾತತಮ್ ||

ಎರಡನೆಯ ಮನ್ತ್ರದ ವ್ಯಾಖ್ಯಾನದಲ್ಲಿ ಹೇಳಿದ್ದೇನೆಂದರೆ, ಬೀಜೀ ತಂದೆಯ ಪಿತೃಸಹೋಭಾಗವು ಶೋಣಿತಾಗ್ನಿಯಲ್ಲಿ ಆಹುತವಾಗಿ ಎರಡು ಸ್ವರೂಪಗಳನ್ನು ಧಾರಣೆ ಮಾಡುತ್ತದೆ. ದ್ವಿಧಾ ವಿಭಕ್ತ ಅದೇ ‘ಸೂನವಃ’ ಎಂಬುದು ಪ್ರಕೃತ ಮನ್ತ್ರದಲ್ಲಿ ವಿಶ್ಲೇಷಣೆಯಾಗಿದೆ. ಬೀಜೀ ಪಿತನ ೨೮ ಪಿತೃಸಹಗಳು ಪುತ್ರ-ಪೌತ್ರಾದಿ ಕ್ರಮದಿಂದ ೨೧-೧೫-೧೦-೬-೩-೧ ಈ ರೀತಿಯಲ್ಲಿ ವಿಭಾಗವಾಗಿವೆ. ಈ ೬ ಪಿತೃಸಹಗಳನ್ನು ಋಣರೂಪದಿಂದ ಪಡೆದು ಪುತ್ರ-ಪೌತ್ರ-ಪ್ರಪೌತ್ರ-ವೃದ್ಧಪ್ರಪೌತ್ರ-ಅತಿವೃದ್ಧಪ್ರಪೌತ್ರ-ವೃದ್ಧಾತಿವೃದ್ಧಪ್ರಪೌತ್ರರು ಉತ್ಪನ್ನರಾಗಿದ್ದಾರೆ. ಈ ಮೂರನೆಯ ಕರ್ಮ್ಮದಿಂದ ಉತ್ಪನ್ನರಾಗುವ ಪುತ್ರಪೌತ್ರಾದಿ ಎಂಬ ೬ ಸೂನು ಪುತ್ರೋತ್ಪಾದನರೂಪೀ ಸೌಮ್ಯಸಹೋರೂಪೀ ಬಲಪ್ರದ ಪಿತ್ರ್ಯಭಾಗವನ್ನು ಆತ್ಮನೀನ ಅಂದರೆ ಆತ್ಮಧೇಯ, ಹಾಗೂ ತನ್ಯ, ಎಂಬ ಎರಡು ಭಾಗಗಳಲ್ಲಿ ವಿಭಕ್ತಗೊಳಿಸುತ್ತದೆ. ಸ್ವಯಂ ಪುತ್ರಾದಿಗಳ ಮಹಾನಾತ್ಮದಲ್ಲಿ ಸ್ವ-ಪ್ರತಿಷ್ಠಾ ಹೇತು ಪ್ರತಿಷ್ಠಿತವಾಗಿ ಉಳಿಯುವ ಸಹೋಭಾಗವು ‘ಅಸವನೀಯ-ಅತ್ಯಾಜ್ಯ’ ಆಗಿದೆ, ಹಾಗೂ ಪುತ್ರಾದಿಗಳ ಪುತ್ರಾದಿಗಳಲ್ಲಿ ಶುಕ್ರದಿಂದ ಆಹುತವಾಗುವ ಸಹೋಭಾಗವು ‘ಸವನೀಯ-ತ್ಯಾಜ್ಯ’ ಆಗಿದೆ.

ತಾತ್ಪರ್ಯವೇನೆಂದರೆ, ಮೂಲಪುರುಷನಲ್ಲಿ ತನ್ನ ಯಾವ ಶ್ರಮದಿಂದ ೨೮ ಸಹಾಂಸಿ ಬಂದವೋ, ಅವುಗಳೇ ಸೂನವಃ ಎಂದು ಕರೆಯಲ್ಪಟ್ಟವು. ಇದರಲ್ಲಿ ಏಳಂತೂ ಇಲ್ಲಿಯೇ ಪ್ರತಿಷ್ಠಿತವಾದವು, ಇನ್ನುಳಿದ ೨೧ ಸಹಗಳು ಪುತ್ರರಲ್ಲಿ ಸೇರಿದವು. ಸ್ವಪ್ರತಿಷ್ಠ ಸಪ್ತಕವು ಅತ್ಯಾಜ್ಯ ಆತ್ಮಧೇಯ ಎಂದು ಕರೆಯಲ್ಪಟ್ಟು, ಪುತ್ರಗತ ತ್ಯಾಜ್ಯ ೨೧ ಭಾಗಗಳು ತನ್ಯ ಎಂದು ಕರೆಯಲ್ಪಟ್ಟವು. ಈ ರೀತಿ ೨೮ ವಿಧ ಸೂನವಃ ‘೭-೨೧’ ಕ್ರಮದಿಂದ ಆತ್ಮಧೇಯ-ತನ್ಯ ಭೇದದಿಂದ ಎರಡು ಭಾಗಗಳಲ್ಲಿ ವಿಭಕ್ತವಾದವು. ಬೀಜೀ ಪುರುಷದಲ್ಲಿ ಸ್ವಯಂ ತನ್ನ ಶ್ರಮದಿಂದ ೨೮ ಇದ್ದದ್ದು, ಅಲ್ಲಿ ಇದರ ಪಿತಾ-ಪಿತಾಮಹ-ಪ್ರಪಿತಾಮಹ-ವೃದ್ಧಪ್ರಪಿತಾಮಹ-ಅತಿವೃಧಪ್ರಪಿತಾಮಹ-ವೃದ್ಧಾತಿವೃದ್ಧಪ್ರಪಿತಾಮಹ ಎಂಬ ಆರರ ಋಣರೂಪೀ ೨೧-೧೫-೧೦-೬-೩-೧ ಎಂಬ ಇನ್ನೂ ಹೆಚ್ಚು ಕಲೆಗಳು ಪ್ರತಿಷ್ಠಿತವಾಗಿರುತ್ತವೆ. ಇವುಗಳ ಸಂಕಲನವು ೫೬ ಸಹೋಭಾಗ ಎಂದಾಗುತ್ತದೆ. ಇದರಲ್ಲಿ ವೃದ್ಧಾತಿವೃದ್ಧಪ್ರಪಿತಾಮಹನ ೧ ಕಲೆಯಂತೂ ಆತ್ಮಧೇಯರೂಪದಿಂದ ಬೀಜಿಯಲ್ಲಿಯೇ ಪ್ರತಿಷ್ಠಿತವಾಗಿರುತ್ತದೆ. ವಿತಾನಮಾತ್ರಾಭಾವದಿಂದ ಇದರ ಸಮ್ಬನ್ಥದಲ್ಲಿ – ‘ದ್ವಿಧಾ ಸೂನವಃ’ ನಿಯಮ ಸಮನ್ವಿತವಾಗುವುದಿಲ್ಲ. ಶೇಷ ೫ರ ಸ್ವಾತ್ಮಧನವತ್ (೨೮ವತ್) ಆತ್ಮಧೇಯ-ತನ್ಯ, ಭೇದದಿಂದ ಎರಡೆರಡು ಭೇದವಾಗುತ್ತದೆ. ೫೬ರಲ್ಲಿ ಬೀಜಿಯ ಏಳನೇ ಪೀಳಿಗೆಯ ಪರ್ಯ್ಯನ್ತ ೩೫ ಋಣಕಲೆಗಳ ಭೋಗವಾಗುತ್ತದೆ, ೨೧ ಕಲೆಗಳು ಆತ್ಮಧೇಯ ರೂಪದಿಂದ ಬೀಜಿಯಲ್ಲಿ ಪ್ರತಿಷ್ಠಿತವಾಗಿರುತ್ತದೆ. ೨೧ ಆತ್ಮಧೇಯ ಋಣಾತ್ಮಕ, ೭ ಆತ್ಮಧೇಯ ಧನಾತ್ಮಕ, ಈ ರೀತಿ ಬೀಜಿಯಲ್ಲಿ ೨೮ ಆತ್ಮಧೇಯಕಲೆಗಳು ಉಳಿಯುತ್ತವೆ. ಸ್ವಧನದ ೨೧ ಕಲೆಗಳು, ಋಣ ಭಾಗದ ೩೫ ಕಲೆಗಳು, ಇವೆರಡರ ಸಮಷ್ಟಿರೂಪೀ ೫೬ ಕಲೆಗಳು ತನ್ಯ-ರೂಪದಲ್ಲಿ ಪರಿಣತವಾಗಿರುತ್ತವೆ.

ಈ ರೀತಿ ಮೂಲಪುರುಷಸ್ಥ ಪಿತರವು ತನ್ನ ಆತ್ಮಧನರೂಪ ೨೮ ಸೂನುಗಳನ್ನು, ಪಿತಾ-ಪಿತಾಮಹಾದಿಗಳಿಂದ ಋಣರೂಪದಲ್ಲಿ ಆಗತವಾಗಿ ೫೬ ಸೂನುಗಳನ್ನು, ಎರಡು ಭಾಗಗಳಲ್ಲಿ ವಿಭಕ್ತ ಆತ್ಮಧೇಯ ೨೮ ಕಲೆಗಳನ್ನಂತೂ ತನ್ನಲ್ಲಿಯೇ ಪ್ರತಿಷ್ಠಿತಗೊಳಿಸುತ್ತವೆ, ಹಾಗೂ ಏಕವಿಂಶತಿಕಲ ಆತ್ಮಧನರೂಪ ತನ್ಯಭಾಗವನ್ನು, ೩೫ ಕಲಾ ಆತ್ಮಋಣರೂಪ ತನ್ಯ-ಭಾಗವನ್ನು, ಸಮ್ಭೂಯ ೫೬ ಕಲಾ ತನ್ಯ ಭಾಗವನ್ನು ತನ್ನ ಅವರ-ಪ್ರಜಾರೂಪೀ ಏಳನೇ ಪೀಳಿಗೆಯ ಪರ್ಯ್ಯನ್ತ ವಿತತಗೊಳಿಸುತ್ತದೆ. ತನ್ನ ತನ್ಯಾತ್ಮಕ ೫೬ ಸೂನುಭಾಗಗಳನ್ನು ಅವರ-ಪುತ್ರಾದಿ ಪ್ರಜೆಗಳಲ್ಲಿ ವಿತತಗೊಳಿಸುವುದೇ ತೃತೀಯ ಕರ್ಮ್ಮವಾಗಿದೆ. ಇದು ಮುಂದಿನ ಮನ್ತ್ರದಲ್ಲಿ ಸ್ಪಷ್ಟವಾಗುತ್ತಿದೆ.

೪೧. ‘ನಾವಾನಕ್ಷೋದಃ ಪ್ರದಿಶಃ ()’ (ವಿಜ್ಞಾನ ಭಾಷ್ಯ) –

ನಾವಾ ನ ಕ್ಷೋದಃ ಪ್ರದಿಶಃ ಪೃಥಿವ್ಯಾಃ ಸ್ವಸ್ತಿಭಿರತಿ ದುರ್ಗಾಣಿ ವಿಶ್ವಾ |
ಸ್ವಾಂ ಪ್ರಜಾಂ ಬೃಹದುಕ್ಥೋ ಮಹಿತ್ವಾವರೇಷ್ವದಧಾದಾ ಪರೇಷು ||

ಮೂಲಪುರುಷಸ್ಥ ಪಿತರ ಪ್ರಾಣಾತ್ಮಕ ಪಿತ್ರ್ಯಸಹಃಪಿಣ್ಡವು ಉಕ್ತ ಕಥನಾನುಸಾರ (ತೃತೀಯಕರ್ಮ್ಮದಿಂದ) ಅವರ-ಪ್ರಜಾ-ರೂಪ ಪುತ್ರ-ಪೌತ್ರಾದಿಗಳಲ್ಲಿ ಪ್ರತಿಷ್ಠಿತವಾಗುತ್ತದೆ. ಈ ಕ್ರಮವು ವೃದ್ಧಾತಿವೃದ್ಧಪ್ರಪೌತ್ರರವರೆಗೆ ಹೋಗಿ ಸಮಾಪ್ತಿಯಾಗುತ್ತದೆಯೇ? ಋಷಿಗಳು ಉತ್ತರಿಸುತ್ತಾರೆ – ‘ಇಲ್ಲ’! ಎಂದು. ಆಗತಿಯೊಂದಿಗೆ ಗತಿಯ ನಿತ್ಯ ಸಮ್ಬನ್ಧವಿದೆ, ಸಮ್ಭೂತಿಯೊಂದಿಗೆ ವಿನಾಶದ ಅವಿನಾಭಾವ ಸಮ್ಬನ್ಧವಿದೆ, ಸರ್ಗದ ಜೊತೆಜೊತೆಯಲ್ಲಿ ಲಯಧಾರಾ ಪ್ರಕ್ರಾನ್ತವಾಗಿದೆ. ಸ್ಥಿತಿಯ ಹೊರತು ಗತಿಯನ್ನು ಆಶ್ರಯ ಮಾಡಿಕೊಂಡು ಪ್ರತಿಷ್ಠಿತವಾಗಿಸಿಯೇ ಇರಲು ಸಾಧ್ಯವಿಲ್ಲ. ಪ್ರಕೃತಮನ್ತ್ರವು ಇದೇ ಗತಿಭಾವದಮೂಲಕ ಪ್ರತ್ಯರ್ಪಣದ ರಹಸ್ಯವನ್ನು ಬಿಚ್ಚಿಡುತ್ತಿದೆ.

ಶರೀರೋತ್ಕ್ರಾನ್ತಿಯ ನನ್ತರ ಪುತ್ರ-ಪೌತ್ರಾದಿಗಳ ಸಹೋರೂಪೀ ಪಿತೃಭಾಗವು ಮಹಾನಾತ್ಮದೊಂದಿಗೆ ಅನ್ತರ್ಯ್ಯಾಮ ಸಮ್ಬನ್ಧವಿಟ್ಟುಕೊಂಡು ಚನ್ದ್ರಲೋಕಕ್ಕೆ ಹೋಗುತ್ತದೆ. ಅದಕ್ಕೆ “ಯೇ ವೈ ಕೇಚಾಸ್ಮಾಲ್ಲೋಕಾತ್ ಪ್ರಯನ್ತಿ, ಚನ್ದ್ರಮಸಮೇವ ತೇ ಸರ್ವೇ ಗಚ್ಛನ್ತಿ” ಇತ್ಯಾದಿ ವಚನಗಳ ಪ್ರಮಾಣವಿದೆ. ಈಕಡೆ ಭೂಪಿಣ್ಡವಿದೆ, ಆಕಡೆ ಅನ್ತರಿಕ್ಷದಲ್ಲಿ ತನ್ನ ದಕ್ಷವೃತ್ತದಲ್ಲಿ ಚನ್ದ್ರನು ಪರಿಕ್ರಮ ಮಾಡುತ್ತಿದ್ದಾನೆ. ಎರಡರ ಅನ್ತರಾಳದಲ್ಲಿ ‘ಅರ್ಣವ’ ಎಂಬ ಹೆಸರಿನಿಂದ ಪ್ರಸಿದ್ಧವಾದ ರೋದಸೀ ಸಮುದ್ರವು ಪ್ರತಿಷ್ಠಿತವಾಗಿದೆ. ಭೂಪಿಣ್ಡದಿಂದ ಚನ್ದ್ರಲೋಕಕ್ಕೆ ಹೋಗುವ ಪ್ರೇತಪಿತರ-ಲಕ್ಷಣವಾದ ಪ್ರೇತಾತ್ಮವು ಈ ಅರ್ಣವಸಮುದ್ರದ ಸನ್ತರಣ ಮಾಡಬೇಕಾಗುತ್ತದೆ. ಇದೇ ಸ್ಥಿತಿಯನ್ನು ದೃಷ್ಟಾನ್ತದಿಂದ ಸ್ಪಷ್ಟಪಡಿಸಲಾಗಿದೆ.

ಸಮುದ್ರದ ಅವಾರ ಪಾರ (ಈಕಡೆಯ ದಡದಿಂದ ಆಕಡೆಯ ದಡದವರೆಗೆ, ಹಾಗೂ ಆಕಡೆಯಿಂದ ಈಕಡೆಯವರೆಗೆ) ಬಂದು-ಹೋಗುವ ನೌಕೆಯಿಂದ ಹೇಗೆ ಮನುಷ್ಯರು ಸಮುದ್ರ ಸನ್ತರಣದಲ್ಲಿ ಸಮರ್ಥರಾಗುತ್ತಾರೆಯೋ, ಹಾಗೆಯೇ ಈ ರೀತಿ ತನ್ನ ಜೀವನ ಸೂತ್ರಗಳಿಂದ (ಜೀವನಸೂತ್ರವು ‘ಶ್ರದ್ಧಾಸೂತ್ರ’ ಎಂದು ಪ್ರಸಿದ್ಧವಾಗಿದೆ, ಜೀವನ ಪ್ರತಿಷ್ಠಾದ ಕಾರಣವಾಗುತ್ತಾ ಯಾವ ಸೂತ್ರವು ‘ಸ್ವಸ್ತಿ’ ಎಂದು ವ್ಯವಹೃತವಾಗಿದೆಯೋ ಅದು) ಅವಾರ ರೂಪ ಭೂಪಿಣ್ಡದಿಂದ ಪಾರರೂಪ ಚನ್ದ್ರನ ಮಧ್ಯದಲ್ಲಿ ಬರುವ ಶ್ಯಾವ-ಶಬಲಾದಿ ಕ್ರೂರ ಪ್ರಾಣಯುಕ್ತ ಅತಿಶಯ ದುರ್ಗಮಸ್ಥಾನಗಳನ್ನು ದಾಟಿ ಚನ್ದ್ರಲೋಕದಲ್ಲಿ ಈ ಪ್ರೇತಾತ್ಮವನ್ನು ಇದರ ಪ್ರತಿಷ್ಠಾರೂಪವಾದ ‘ಬೃಹದುಕ್ಥ’ ಎಂಬ ಹೆಸರಿನಿಂದ ಪ್ರಸಿದ್ಧವಾದ ಮಹಾನಾತ್ಮವು ಸ್ವಶಕ್ತಿಯಿಂದ (ಚಾನ್ದ್ರಾಕರ್ಷಣದಿಂದ) ಏಕವಿಂಶತ್ಯಾದಿ ಯುಕ್ತ ಪುತ್ರ-ಪೌತ್ರಾದಿ ಪ್ರಜೆಗಳ ಚಾನ್ದ್ರಮಣ್ಡಲಸ್ಥ ಪಿತಾ-ಪಿತಾಮಹಾದಿ ಪರ ಪಿತರರಲ್ಲಿ ಪ್ರತಿಷ್ಠಿಸುತ್ತಾ ಹೋಗುತ್ತದೆ.

ಅಥವಾ ಮಹಾನಾತ್ಮವೇ ಸ್ವಯಂ ಗನ್ತಾ ಆಗಿದೆ. ಪಿತೃಸಹವು ಇದರಲ್ಲಿಯೇ ಪ್ರತಿಷ್ಠಿತವಾಗಿರುವುದೇ ಅದಕ್ಕೆ ಕಾರಣ. ವಿಜ್ಞಾನ, ಪ್ರಜ್ಞಾನ, ಭೂತಾತ್ಮಾ, ಮಹಾನಾತ್ಮಾ, ಇತ್ಯಾದಿ ಎಲ್ಲಾ ಶಾರೀರ-ಖಣ್ಡಾತ್ಮಗಳು ತಮ್ಮತಮ್ಮ ಭಾವಗಳ ಉಕ್ಥವಾಗಿವೆ. ಆದರೆ ಪೂರ್ವಪ್ರತಿಪಾದಿತ ‘ಮಹದಾತ್ಮೋಪನಿಷತ್ತಿನ’ ಅನುಸಾರ ಚಿತ್ ಎಂಬ ಯೋನಿಸ್ಥಾನೀಯ ಮಹಾನಾತ್ಮವು ಇಲ್ಲಿ ಎಲ್ಲ ಖಣ್ಡಾತ್ಮ-ವಿವರ್ತ್ತಗಳ ಉಕ್ಥವೂ ಆಗಿದೆ. ಇಷ್ಟಲ್ಲದೆ, ಸರ್ವಥಾ ಅಖಣ್ಡ ಚಿದಾತ್ಮದ (ಅವ್ಯಯದ)ವರೆಗೆ ಇದರ ಗರ್ಭದಲ್ಲಿ ಬಂದುಹೋಗಬೇಕಾಗುತ್ತದೆ. ಇಂತಹಾ ಸ್ಥಿತಿಯಲ್ಲಿ ಇದಕ್ಕಿಂತ ಹೆಚ್ಚಿನ ಉಕ್ಥ ಇನ್ನೇನಿರಲು ಸಾಧ್ಯ? ಹಾಗಾಗಿ ಈ ಆತ್ಮವಿವರ್ತ್ತಕ್ಕೆ ‘ಮಹಾನಾತ್ಮಾ’ ಎಂದು ಹೇಳುವುದು ನ್ಯಾಯಸಙ್ಗತವಾಗುತ್ತದೆ. ಮಹಾನಾತ್ಮದ ಇದೇ ಬೃಹದುಕ್ಥತೆಯನ್ನು ಲಕ್ಷ್ಯದಲ್ಲಿಟ್ಟುಕೊಂಡು ಋಷಿಯು ಇದನ್ನು ‘ಬೃಹದುಕ್ಥ’ ಎಂದು ವಿಭೂಷಿತಗೊಳಿಸಿದ್ದಾರೆ. ಇದೇ ಚನ್ದ್ರಲೋಕದಲ್ಲಿ ಗಮನ ಮಾಡುತ್ತಾ, ಇದರಿಂದಲೇ ಪಿತೃಸಹಗಳ ಪ್ರತ್ಯರ್ಪಣವಾಗುತ್ತದೆ. ಪುತ್ರನ ಮಹಾನ್ ಪಿತನ ೬ರ, ಪೌತ್ರನ ಮಹಾನ್ ಪಿತಾಮಹನ ೫ರ, ಪ್ರಪೌತ್ರನ ಮಹಾನ್ ಪ್ರಪಿತಾಮಹನ ೪ರ, ವೃದ್ಧಪ್ರಪೌತ್ರನ ಮಹಾನ್ ವೃದ್ಧಪ್ರಪಿತಾಮಹನ ೩ರ, ಅತಿವೃದ್ಧಪ್ರಪ್ರೌತ್ರನ ಮಹಾನ್ ಅತಿವೃದ್ಧಪ್ರಪಿತಾಮಹನ ೨ರ, ಹಾಗೂ ವೃದ್ಧಾತಿವೃದ್ಧಪ್ರಪೌತ್ರನ ಮಹಾನ್ ವೃದ್ಧಾತಿವೃದ್ಧಪ್ರಪಿತಾಮಹನ ೧ರ ಪ್ರತ್ಯರ್ಪಣ ಮಾಡುತ್ತದೆ. ಈ ಅರ್ಪಣದಿಂದ ಅನ್ತಿಮ ಮಹಾನ್ (ವೃದ್ಧಾತಿವೃದ್ಧಪ್ರಪಿತಾಮಹನ ಮಹಾನ್) ಸಾಪಿಣ್ಡ್ಯಭಾವವನ್ನು ಪ್ರಾಪ್ತಗೊಳಿಸಿಕೊಳ್ಳುತ್ತದೆ. ಆದ್ದರಿಂದಲೇ ‘ಪಿಣ್ಡದಃ ಸಪ್ತಮಸ್ತ್ವೇಷಾಮ್’ ಎಂದು ಹೇಳಲಾಗಿದೆ. ಪಿತರ ಪ್ರಾಣಾತ್ಮಕ ಸೌಮ್ಯ ಸಹೋಭಾಗವು ಏಳು ಭಾಗಗಳಲ್ಲಿ ವಿಭಕ್ತವಾಗಿ ಕೆಲ ಕಾಲ ಪರ್ಯ್ಯನ್ತ (ಯಾವದಾಯುರ್ಭೋಗಪರ್ಯ್ಯನ್ತ) ಪೃಥಿವಿಯಲ್ಲಿಯೇ ಇರುತ್ತದೆ.  ಅನನ್ತರ ಚನ್ದ್ರಲೋಕಕ್ಕೆ ಹೋಗಿ ಆ ಋಣ ಭಾಗಗಳ ಪ್ರತ್ಯರ್ಪಣ ಮಾಡಿಬಿಡುತ್ತವೆ ಎಂಬುದೇ ನಿಷ್ಕರ್ಷವು. ಪಿತೃಸಹಕ್ಕೆ ಪೃಥಿವೀ ಹಾಗೂ ಚನ್ದ್ರನನ್ನು ಹೊರತುಪಡಿಸಿ ಅನ್ಯತ್ರ ಸ್ಥಿತಿ ಇಲ್ಲ. ಆದರೆ ಪೃಥಿವೀ ಮತ್ತು ಚನ್ದ್ರ ಎಂದರೇನು? ಅದರ ವಿಶಾಲ ವ್ಯಾಪ್ತಿಯನ್ನು ತಪೋನುಷ್ಠಾನಗಳಿಂದ ಅರ್ಥಮಾಡಿಕೊಳ್ಳಬೇಕಾಗುತ್ತದೆ.”

ಉಕ್ತ ಮನ್ತ್ರಾರ್ಥಗಳಿಂದ ವಿಜ್ಞ ಓದುಗರಿಗೆ ಒಂದಂತೂ ಸ್ಪಷ್ಟವಾಗಿ ವಿದಿತವಾಗಿರಬೇಕು. ಅದೇನೆಂದರೆ ಪಿತೃಕರ್ಮವು ಚತುರ್ಧಾ ವಿಭಕ್ತವಾಗಿದೆ. ಬೀಜೀ ಪಿತನ ಶುಕ್ರದಲ್ಲಿ ಪ್ರತಿಷ್ಠಿತ ೨೮ ಸ್ವಾತ್ಮಧನದಲ್ಲಿ ೨೧ ಧನ, ಹಾಗೂ ಬೀಜೀ ಪಿತನದ್ದೇ ಶುಕ್ರದಲ್ಲಿ ಪ್ರತಿಷ್ಠಿತ ೫೬ ಋಣಾತ್ಮಕ ಧನದಲ್ಲಿ ೩೫ ಋಣ, ಈ ೫೬ ತನ್ಯಾತ್ಮಕ ಸೂನವರನ್ನು ಹೊಂದಿ ಜನ್ಮ ಗ್ರಹಣ ಮಾಡುವುದು ಪಿತೃಸಹದ ಮೊದಲ ಕರ್ಮ್ಮವಾಗಿದೆ.

ಜನ್ಮ ಪಡೆದ ನನ್ತರ ತನ್ನ ಶುಕ್ರದಲ್ಲಿ ಸ್ವತನ್ತ್ರ ರೂಪದಲ್ಲಿ ೨೮ ಕಲಾತ್ಮಕ ಚಾನ್ದ್ರಸಹಗಳನ್ನು ಗ್ರಹಿಸುವುದು ಎರಡನೆಯ ಕರ್ಮ್ಮ. ಇದರ ನನ್ತರ ಸವನೀಯ ತ್ಯಾಜ್ಯ ಷಟ್ಪಞ್ಚಾಶತ್ ಕಲಾ (೫೬) ತನ್ಯ ಭಾಗವನ್ನು ಅವರ-ಪ್ರಜಾರೂಪೀ ತನ್ನ ಪುತ್ರಾದಿಗಳಲ್ಲಿ ಆಹುತಗೊಳಿಸುವುದೇ ತೃತೀಯ ಕರ್ಮ್ಮವಾಗಿದೆ. ಇದು ಮನ್ತ್ರದಲ್ಲಿ ವಿಶ್ಲೇಷಣೆಗೊಂಡಿದೆ. ಹಾಗೂ ಋಣರೂಪದಿಂದ ಪ್ರಾಪ್ತ ಕಲೆಗಳ (ಶರೀರವಿಚ್ಯುತಿಯ ನನ್ತರ) ಪ್ರತ್ಯರ್ಪಣ ಮಾಡುವುದೇ ಚತುರ್ಥ ಕರ್ಮ್ಮವಾಗಿದೆ.

೧ – ಷಟ್‍ಪಞ್ಚಾಶತ್‍ಸಂಖ್ಯಂ ಪಿತ್ರ್ಯಂ ಸಹಃ – ಉಪಾದಾಯ ಜನ್ಮಗ್ರಹಣಮ್ -- ತದಿದಂ ಪ್ರಥಮಂ ಕರ್ಮ್ಮ
೨ – ಅಷ್ಟಾವಿಂಶತಿಸಂಖ್ಯಂ ನವೀನಂ ನಿಜಂ ಸಹ ಉಪಾದತ್ತೇ – ತದಿದಂ ದ್ವಿತೀಯಂ ಕರ್ಮ್ಮ
೩ – ಷಟ್‍ಪಞ್ಚಾಶತ್‍ಸಂಖ್ಯಸ್ಯ ಸವನೀಯಭಾಗಸ್ಯಾವರೇಷ್ವಾಧಾನಮ್ – ತದಿದಂ ತೃತೀಯಂ ಕರ್ಮ್ಮ
೪ – ಅಷ್ಟಾವಿಂಶತಿಸಂಖ್ಯಸ್ಯಾತ್ಮನೀನಭಾಗಸ್ಯ ಪರೇಷ್ವಾಧಾನಮ್ – ತದಿದಂ ಚತುರ್ಥಂ ಕರ್ಮ್ಮ

೪೨. ಪ್ರಕರಣೋಪಸಂಹಾರ

ಪಿತರಪ್ರಾಣಮೂರ್ತ್ತಿ ಸರ್ವಾತ್ಮಾಧಿಷ್ಠಾತಾ, ಹಾಗೂ ‘ಬೃಹದುಕ್ಥ’ ಎಂಬ ಹೆಸರಿನಿಂದ ಪ್ರಸಿದ್ಧ ಮಹಾನಾತ್ಮದ್ದೇ ಆದ ಉಕ್ತ ನಾಲ್ಕು ಕರ್ಮ್ಮಗಳಿವೆ. ಇಂತಹಾ ಮಹಾನಾತ್ಮವನ್ನು, ಮಹಾನಾತ್ಮದ ಉಕ್ತ ವೈಜ್ಞಾನಿಕ ಸ್ವರೂಪವನ್ನು ಮೊತ್ತಮೊದಲು ಯಾವ ಋಷಿಯು ಅರ್ಥಮಾಡಿಕೊಂಡು, ತಮ್ಮ ಶಬ್ದಗಳಿಂದ ಪ್ರಕಟಗೊಳಿಸಿದರೋ, ಅವರೂ ತತ್ಕಾಲೀನ ‘ಯಶೋನಾಮ’ ಪದ್ಧತಿಯ ಅನುಸಾರ ‘ಬೃಹದುಕ್ಥ’ ಎಂಬ ಹೆಸರಿನಿಂದಲೇ ಪ್ರಸಿದ್ಧರಾಗಿದ್ದಾರೆ. ಬೃಹದುಕ್ಥ ಮಹರ್ಷಿಯ ಪರಿಷತ್ತಿನಲ್ಲಿ ಬೃಹದುಕ್ಥ ವಿಜ್ಞಾನಕ್ಕೇ (ಪಿತೃವಿಜ್ಞಾನಕ್ಕೇ) ಪ್ರಾಧಾನ್ಯತೆ ಇದೆ. ಇದೇ ಪರಿಷತ್ತಿನಿಂದ ದೀರ್ಘತಮ ಋಷಿಗಳ ಪ್ರಶ್ನೆಗಳಿಗೆ ಯಥಾವತ್ ಸಮಾಧಾನ ಸಿಕ್ಕಿದೆ. ಕಲ್ಪಕಲ್ಪಾಂತರಗಳಿಂದ ಇಂದಿನವರೆಗೂ ದೀರ್ಘವಾದ ಕತ್ತಲೆ ಹಾಗೂ ಸ್ವಲ್ಪಕಾಲ ಬೆಳಕು ಉಳ್ಳ ಪ್ರದೇಶದಲ್ಲಿಯೇ ಇದ್ದುಕೊಂಡು ನಿರಂತರ ಸಂಶೋಧನೆ ಮಾಡುತ್ತಾ ಯೌಗಿಕ ಮರ್ಯ್ಯಾದೆಯಿಂದ ‘ದೀರ್ಘತಮಾ’ ಎಂಬ ಹೆಸರಿನಿಂದ ಕರೆಯಲ್ಪಟ್ಟಿರುವ ಋಷಿಗಡಣವು ತಮ್ಮ ಸಂಶೋಧನಾ ಕಾಲದಲ್ಲಿ ಕಂಡುಬಂದಂತಹಾ ಪ್ರಶ್ನೆಯನ್ನು ಆದಿನಾದವಾದ ವೇದತರಂಗದ ಮುಖೇನ ದ್ರಷ್ಟಿಸಿ ಋಗ್ವೇದ ಸಂಹಿತೆಯ ಬ್ರಾಹ್ಮಿ ಭಾಷೆಯ ಮಂತ್ರದಲ್ಲಿ ಪ್ರಶ್ನೆಯಂತೆ ದಾಖಲಿಸುತ್ತಾರೆ. ಸ್ಪಷ್ಟವಾದ ಬೆಳಕೆಂಬ ದೇವ, ಅಸ್ಪಷ್ಟವಾದ ಕತ್ತಲೆಯೆಂಬ ರಾಕ್ಷಸ, ಹಾಗೂ ಅವೆರಡರ ಮಿಶ್ರ ಸ್ಥಿತಿಯಾದ ಸ್ಪಷ್ಟಾಸ್ಪಷ್ಟದಲ್ಲಿ ವ್ಯವಹರಿಸುವ ಪಿತರ ಎಂಬ ಮೂರನ್ನೂ ಆಳವಾಗಿ ಸಂಶೋಧಿಸಿದವರು ದೀರ್ಘತಮರು. ಅವರು ದಾಖಲಿಸಿದ ಪ್ರಶ್ನೆಯು ಸಂಶೋಧನಾಮುಖಿಯಾಗಿದೆ. ದೀರ್ಘತಮರೇ ಯೋಗ್ಯ ವರ್ತ್ತಮಾನ ಯುಗದ ದೀರ್ಘಕಾಲದ ಅವಿಧ್ಯಾರೂಪ ತಮದಿಂದ ಅಭಿಭೂತರಾದ ಅಭಿನಿವಿಷ್ಟರ ಮೋಹನಿದ್ರಾ ಭಂಗಪಡಿಸಲು ಬೃಹದುಕ್ಥರ (ಶ್ರೀಗುರವಃ) ಅರ್ಕದ ಮುಖೇನ ಸಾಪಿಣ್ಡ್ಯ ವಿಜ್ಞಾನದೊಂದಿಗೆ ಸಮ್ಬನ್ಧವುಳ್ಳ ಪ್ರಕೃತ ಪ್ರಜಾತನ್ತುವಿತಾನವಿಜ್ಞಾನವನ್ನು ಉಪಸ್ಥಿತಗೊಳಿಸಲು ಕಾರಣರಾಗಿದ್ದಾರೆ. ಬೃಹದುಕ್ಥಸ್ಥಾನೀಯ ಶ್ರೀಗುರುಚರಣಗಳು ಯಾವ ಶಬ್ದಗಳಲ್ಲಿ ಈ ರಹಸ್ಯವನ್ನು ಪ್ರಕಟಪಡಿಸಿದರೋ, ಮಙ್ಗಲ ಭಾವನೆಯಿಂದ ಅವುಗಳಲ್ಲಿ ಒಂದೆರಡು ವಚನ ಉದ್ಧೃತಗೊಳಿಸುತ್ತಾ, ಜೊತೆಗೆ ಸನ್ತಾನಪರಮ್ಪರೆಯ ಸ್ಪಷ್ಟೀಕರಣ ಮಾಡುವ ಪರಿಲೇಖಗಳ ಸುವಿಧತೆಗಾಗಿ ವ್ಯವಸ್ಥಿತ ರೂಪದಲ್ಲಿ ಉದ್ಧೃತಗೊಳಿಸುತ್ತಾ ಪ್ರಸ್ತುತ ಅವಾನ್ತರ ಪ್ರಕರಣವು ಉಪರತವಾಗುತ್ತಿದೆ.

ಅಯಮತ್ರ ಮಾಙ್ಗಲಿಕ ಸಙ್ಗ್ರಹಃ –

೧- ದೈವಂ ಸಹೋ ಯನ್ನಿಹಿತಂ ಹಿ ತಸ್ಮಿನ್ ಪಿತ್ರ್ಯಂ ಸಹೋಽಪ್ಯೋತಮಿತೀಮಮರ್ಥಮ್ |
ಸಂಕ್ಷಿಪ್ತಮಾದೌ ಭಗವಾನ್ ಮಹರ್ಷಿಃ ಸ ವಾಮದೇವ್ಯೋ ಬೃಹದುಕ್ಥ ಊಚೇ ||

೨- ಏಷಾಂ ಬಲಾನಾಂ ಪಿತರಶ್ಚ ದೇವಾಶ್ಚಾಪೀಶತೇ ತೇ ಸಮವಿವ್ಯಚುಶ್ಚ |
ಕ್ರತುಂ ಚ ದೇವೇಷ್ವದಧುಃ ಪೃಥಕಸ್ಥಾನಿಮಾನ್ ಪ್ರಮೀತಾಃ ಪ್ರವಿಶನ್ತಿ ಪಶ್ಚಾತ್ ||

೩- ಲೋಕಾನ್ ಸಹೋಭಿರ್ನಿಖಿಲಾನಟನ್ತಿ ಪೂರ್ವಾಣಿ ಧಾಮಾನ್ಯಮಿತಾನಿ ಮಾತ್ವಾ |
ಯಚ್ಛನ್ತಿ ತನ್ವಾಂ ಭುವನಾನಿ ತಾನಿ ಪ್ರಸಾರಯನ್ತೇ ಬಹುಧಾ ಪ್ರಜಾಶ್ಚ ||

೪- ಯೇ ಸ್ವರ್ವಿದೋ ಯೇಽಪ್ಯಥ ರಾಕ್ಷಸಾ ಇತಿ ದ್ವೈಧಾಽಸುರಾಃ ಸ್ವರ್ವಿದಶುಕ್ಲಚನ್ದ್ರಮಾಃ |
ಮಾಸೇನ ಸೌಮ್ಯಾಂಶವ ಆತ್ಮನಿ ಕ್ರಮಾದಾಶೇರತೇ ವಿಂಶತಿರಷ್ಟಚಾಹ್ನಿಕಾಃ ||

೫- ಇತ್ಥಂ ಪಿತೃಸ್ತೋಮಗತಿಃ ಸಪಿಣ್ಡತಾ ಪರೇಷು ಸಪ್ತಸ್ವವರೇಷು ಚೋದಿತಾ |
ಭೂತಾತ್ಮದಿವ್ಯಾತ್ಮಯುಜೋಽನ್ತರಾತ್ಮನಃ ಸೌಮ್ಯಸ್ಯ ನಾತಃ ಪರಿತಃ ಸ್ಥಿತಿಃ ಕ್ವಚಿತ್ ||

೬- ಯದಾತತಂ ಸಪ್ತಸು ಪೂರುಷೇಷು ಶ್ರದ್ಧಾನಸೂತ್ರಂ ಪ್ರವದಾಮಿ ತಾಂ ಗಾಮ್ |
ಪ್ರತ್ಯರ್ಪಣಾತ್ ಸೋದ್‍ಧ್ರಿಯತೇ ತದಾಸೌ ಸ್ವಯೋನಿಮಾಯಾತಿ ಜಹಾತಿ ಯೂಥಮ್ ||

೭- ನಾಕ್ಷತ್ರಿಕದ್ವಾದಶಮಾಸರೂಪಃ ಸಮ್ವತ್ಸರಃ ಸೋಽಸ್ತಿ ಪಿತಾ ಸ ಗರ್ಭೇ |
ದೇಹಂ ವಿನಿರ್ಮ್ಮಾತಿ ತದೇವಮರ್ಥಂ ಕೌಷೀತಕೀಯಾ ಭಗವನ್ತ ಆಹುಃ ||”
(ಶ್ರೀಗುರುಪ್ರಣೀತೇ-ಅಹೋರಾತ್ರವಾದೇ-ಆರ್ತ್ತವಾಧಿಕರಣೇ)

“ಆಪ್ತೋಪದೇಶಾಃ ಪ್ರಮಾಣಮ್”-“ತಸ್ಮಾಚ್ಛಾಸ್ತ್ರಂ ಪ್ರಮಾಣಂ ತೇ ಕಾರ್ಯ್ಯಾಕಾರ್ಯ್ಯವ್ಯವಸ್ಥಿತೌ”-“ಯಚ್ಛಬ್ದ ಆಹ, ತದಸ್ಮಾಕಂ ಪ್ರಮಾಣಮ್” ಇತ್ಯಾದಿರೂಪದಿಂದ ಪ್ರಕ್ಷಿಪ್ತವಲ್ಲದ, ನಿಜವಾದ, ಮೂಲವಾದ, ಋಷಿಪ್ರಣೀತ ಶಾಸ್ತ್ರಪ್ರಾಮಾಣ್ಯ-ನಿಷ್ಠೆಯನ್ನೇ ತಮ್ಮ ಮಾನ್ಯತೆಗಳಲ್ಲಿ ಪ್ರಧಾನ ಅವಲಮ್ಬ ಎಂದು ನಂಬುವ ಆಸ್ಥಾ-ಶ್ರದ್ಧಾನುಗತ ಧರ್ಮ್ಮಾಚರಣಶೀಲ ಮಾನವರ ಪರಿತೋಷಕ್ಕಾಗಿ ಒಂದುವೇಳೆ “ಪಿತರಃ-ಸೂನವಃ-ತನ್ತವಃ-ಪಿಣ್ಡಾಃ-ಸಹಾಂಸಿ-ತನ್ತುವಿತಾನಮ್” ಇತ್ಯಾದಿ ಪ್ರಜಾತನ್ತುವಿತಾನವಿಜ್ಞಾನೋಪನಿಷತ್ತಿನ ಸಮ್ಬನ್ಧದಲ್ಲಿ ಆಯಾಯ ವಿಶೇಷ ಪ್ರಸಙ್ಗಾವಸರಗಳಲ್ಲಿಯೇ ಪ್ರಮಾಣಗಳನ್ನು ಉದ್ಧೃತಗೊಳಿಸಲಾಗಿದೆ. ಹಾಗೇ ‘ದ್ವಿರ್ಬದ್ಧ’ ನ್ಯಾಯದಿಂದ ಸರ್ವಾನ್ತದಲ್ಲಿ ಪುನಃ ಕೆಲವೊಂದು ಹೆಚ್ಚುವರಿ ವಚನ ಉದ್ಧೃತಗೊಳಿಸಲಾಗಿದೆ, ಅವು ವಿಸ್ಪಷ್ಟರೂಪದಿಂದ ಈ ‘ತನ್ತು-ತತ್ತ್ವ-ಪರಮ್ಪರೆ’ಗಳ ಸಮರ್ಥನೆ-ಪ್ರತಿಪಾದನೆ-ಸ್ವರೂಪವಿಶ್ಲೇಷಣೆ ಮಾಡುತ್ತಿವೆ. ವಸ್ತುತಃ ಈ ಪ್ರಾಮಾಣ್ಯವಾದದಿಂದ ಧರ್ಮ್ಮಶೀಲ ಸನಾತನ ಪ್ರಜೆಗಳ ಆಸ್ಥಾ-ಶ್ರದ್ಧೆಗಳು ಎಲ್ಲಿ ಶ್ವೋವಸೀಯಸ್ ಬ್ರಹ್ಮಾನುಗತಾ ಆಗುತ್ತದೆಯೋ, ಅಲ್ಲಿ ಇದೇ ಪ್ರಾಮಾಣ್ಯವಾದಿಗಳ ಅಭಿನಿವೇಶದ ವಾಗ್ಬನ್ಧನವನ್ನೂ ಮಾಡಬಲ್ಲದು, ನಿಶ್ಚಯದಿಂದ ಮಾಡಬಲ್ಲದು, ಇದೇ ಮಾಙ್ಗಲಿಕ ಅನುಭೂತಿಯೊಂದಿಗೆ ಕ್ರಮಪ್ರಾಪ್ತ ಎರಡನೆಯದಾದ ‘ಋಣಮೋಚನೋಪಯೋಪನಿಷತ್’ ಇದರತ್ತ ಶ್ರದ್ಧಾಶೀಲ ಪ್ರಜೆಗಳ ಧ್ಯಾನ ಆಕರ್ಷಿತಗೊಳಿಸಲಾಗುತ್ತಿದೆ.

೧- ಅವಸ್ಪೃಧಿ ಪಿತರಂ ಯೋಽಧಿವಿದ್ವಾನ್ ಪುತ್ರೋ ಯಸ್ತೇ ಸಹಸಃ ಸೂನ ಊಹೇ |
ಕದಾಚಿಕಿತ್ವೋ ಅಭಿಚಕ್ಷಸೇ ನೋಽಗ್ನೇ ಕದಾ ಋತಚಿದ್ಯಾತಯಾಂಸೇ || ಋ ೫-೩-೯ ||

೨- ನಾಹಂ ತನ್ತುಂ ನ ವಿಜಾನಾಮ್ಯೋತುಂ ನ ಯಂ ವಯನ್ತಿ ಸಮರೇಽತಮಾನಾಃ |
ಕಸ್ಯ ಸ್ವಿತ್ ಪುತ್ರ ಇಹ ವಕ್ತ್ವಾನಿ ಪರೋ ವದಾತ್ಯವರೇಣ ಪಿತ್ರಾ || ಋ ೬-೯-೨ ||

೩- ಸ ಇತ್ತನ್ತುಂ ಸ ವಿಜಾನಾತ್ಯೋತುಂ ಸ ವಕ್ತ್ವಾನ್ಯೃತುಥಾ ವದಾತಿ |
ಯ ಈಂ ಚಿಕೇತದಮೃತಸ್ಯ ಗೋಪಾ ಅವಶ್ಚರನ್ ಪರೋ ಅನ್ಯೇನ ಪಶ್ಯತ್ || ಋ ೬-೯-೩ ||

೪- ತೇ ಸೂನವಃ ಸ್ವಯಸಃ ಸುದಂಸಸೋ ಮಹೀ ಜಜ್ಞುರ್ಮಾತರಾ ಪೂರ್ವಚಿತ್ತಯೇ |
ಸ್ಥಾತುಶ್ಚ ಸತ್ಯಂ ಜಗತಶ್ಚ ಧರ್ಮ್ಮಾಣಿ ಪುತ್ರಸ್ಯ ಪಾಥಃ ಪದಮದ್ವಯಾವಿನಃ || ಋ ೧-೧೫೯-೩ ||

೫- ತೇ ಮಾಯಿನೋ ಮಮಿರೇ ಸುಪ್ರಚೇತಸೋ ಜಾಮೀ ಸ ಯೋನೀ ಮಿಥುನಾ ಸಮೋಕಸಾ |
ನವ್ಯನ್ನವ್ಯಂ ತನ್ತುಮಾ ತನ್ವತೇ ದಿವಿ ಸಮುದ್ರೇ ಅನ್ತಃ ಕವಯಃ ಸುದೀತಯಃ || ಋ ೧-೧೫೯-೪ ||

೬- ವಿತನ್ವತೇ ಧಿಯೋ ಅಪಾಂಸಿ ವಸ್ತ್ರಾ ಪುತ್ರಾಯ ಮಾತರೋ ವಯನ್ತಿ |
ಉಪಪ್ರಕ್ಷೇ ವೃಷಣೇ ಮೋದಮಾನಾ ದಿವಸ್ಪಥಾ ವಧ್ವೋ ಯನ್ತ್ಯಚ್ಛ || ಋ ೫-೪೭-೬ ||

೭- ಸಪ್ತ ಕ್ಷರನ್ತಿ ಶಿಶವೇ ಮರುತ್ವತೇ ಪಿತ್ರೇ ಪುತ್ರಾಸೋ ಅಪ್ಯವೀವತನ್ನೃತಮ್ |
ಉಭೇ ಇದಸ್ಯೋಭಯಸ್ಯ ರಾಜತ ಉಭೇ ಯತೇತೇ ಉಭಯಸ್ಯ ಪುಷ್ಯತಃ || ಋ ೧೦-೧೩-೫ ||

೮- ಏಕಸ್ತ್ವಷ್ಟುರಶ್ವಸ್ಯಾ ವಿಶಸ್ತಾ ದ್ವಾ ಯನ್ತಾರಾ ಭವತಸ್ತಥ ಋತುಃ |
ಯಾ ತೇ ಗಾತ್ರಾಣಾಮೃತುಥಾ ಕೃಣೋಮಿ ತಾತಾ ಪಿಣ್ಡಾನಾಂ ಪ್ರಜುಹೋಮ್ಯಗ್ನೌ || ಋ ೧-೧೬೨-೧೯ ||

೯- ತಪೋಷ್ಪವಿತ್ರಂ ವಿತತಂ ದಿವಸ್ಪದೇ ಶೋಚನ್ತೋ ಅಸ್ಯ ತನ್ತವೋ ವ್ಯಸ್ಥಿರನ್ |
ಅವನ್ತ್ಯಸ್ಯ ಪವೀತಾರಮಾಶವೋ ದಿವಸ್ಪೃಷ್ಠಮಧಿ ತಿಷ್ಠನ್ತಿ ಚೇತಸಾ || ಋ ೯-೮೩-೨ ||

೧೦- ಅರುರುಚದುಷಸಃ ಪೃಶ್ನಿರಗ್ರಿಯ ಉಕ್ಷಾ ಬಿಭರ್ತ್ತಿ ಭುವನಾನಿ ವಾಜಯುಃ |
ಮಾಯಾವಿನೋ ಮಮಿರೇ ಅಸ್ಯ ಮಾಯಯಾ ನೃಚಕ್ಷಸಃ ಪಿತರೋ ಗರ್ಭಮಾದಧುಃ || ಋ ೯-೮೩-೩ ||

೧೧- ಯೋ ಯಜ್ಞೋ ವಿಶ್ವತಸ್ತನ್ತುಭಿಸ್ತತ ಏಕಶತಂ ದೇವಕರ್ಮ್ಮೇಭಿರಾಯತಃ |
ಇಮೇ ವಯನ್ತಿ ಪಿತರೋ ಯ ಆಯಯುಃ ಪ್ರ ವಯಾಪ ವಯೇತ್ಸಾಸತೇ ಸತೇ || ಋ ೧೦-೧೩೦-೧ ||

೧೨- ಪುಮಾ ಏನಂ ತನುತ ಉತ್‍ಕೃಣೋತ್ತಿ ಪುಮಾನ್ ವಿ ತತ್ನೇ ಅಧಿನಾಕೇ ಅಸ್ಮಿನ್ |
ಇಮೇ ಮಯೂಖಾ ಉಪ ಸೇದುರೂ ಸದಃ ಸಾಮಾನಿ ಚಕ್ರುಸ್ತಸರಾಣ್ಯೋತವೇ || ಋ ೧೦-೧೩೦-೨ ||
ಇತಿ – ಸಾಪಿಣ್ಡ್ಯವಿಜ್ಞಾನೋಪನಿಷದಿ
ಪ್ರಜಾತನ್ತುವಿತಾನವಿಜ್ಞಾನೋಪನಿಷತ್
ಪ್ರಥಮಾ

- ೧ -
ಇಂತು ಸಜ್ಜನ ವಿಧೇಯ,

ಹೇಮಂತ್ ಕುಮಾರ್ ಜಿ.