Sunday, 31 March 2019

ವೇದದ ಮೌಲಿಕ ಸ್ವರೂಪ : ವೇದದ ಋಷಿ ಪದಾರ್ಥ : ೩. ದ್ರಷ್ಟೃಲಕ್ಷಣ ಋಷಿ ಮತ್ತು ೪. ವಕ್ತೃಲಕ್ಷಣ ಋಷಿ

[ಹಿಂದಿನ ಲೇಖನದ ಕೊಂಡಿ:- https://veda-vijnana.blogspot.com/2019/03/blog-post_30.html]

ವೇದದ ಋಷಿ ಪದಾರ್ಥ : (೩) ದ್ರಷ್ಟೃಲಕ್ಷಣ ಋಷಿ

ನಿತ್ಯಸಿದ್ಧ ವೇದತತ್ತ್ವದ ದ್ರಷ್ಟಾ ಋಷಿಯೇ ಸುಪ್ರಸಿದ್ಧ ದ್ರಷ್ಟಾ ಋಷಿಯಾಗಿದ್ದಾರೆ. ಸರ್ವಜ್ಞ-ಸರ್ವವಿತ್-ಸರ್ವಶಕ್ತಿಯು, ಅವ್ಯಯಕ್ಷರಾನುಗೃಹೀತ ಅಕ್ಷರಪ್ರಜಾಪತಿಯ ವಿಷಯ, ಸಂಸ್ಕಾರ, ಶಬ್ದೋಪಾಧಿ ಎಂಬ  ಭೇದದಿಂದ ಬ್ರಹ್ಮ-ವಿಧ್ಯಾ-ವೇದ, ಭಾವಗಳಲ್ಲಿ ಪರಿಣತವಾಗುತ್ತಿರುತ್ತದೆ.

ಪ್ರಾಣ, ದೇವತಾ, ಭೂತ, ಭೌತಿಕಾದಿ ಪದಾರ್ಥಗಳ ನಿಯತ ಕಾರ್ಯ್ಯ-ಕಾರಣಭಾವವೇ ‘ವಿಧ್ಯಾ’. ನಿಯತಿಃಸತ್ಯದ ಯಥಾರ್ಥ ಸ್ವರೂಪಪರಿಜ್ಞಾನವೇ ‘ವಿಧ್ಯಾ’. ಗೃಹೀತ ಪೂರ್ವಾಹಿತ ಸಂಸ್ಕಾರದಿಂದ ಅಭಿನಯದಲ್ಲಿ ಬರುವಂತಹಾ (ವ್ಯಕ್ತವಾಗುವಂತಹಾ) ನಿಯತಿಃಸತ್ಯವು ‘ವಿಧ್ಯಾ’ ಆಗಿದೆ, ಗೃಹ್ಯಮಾಣ ಧರ್ಮ್ಮದಿಂದ (ವಿಷಯದಿಂದ) ವ್ಯಕ್ತವಾಗುವ ನಿಯತಿಃಸತ್ಯವೇ ‘ಬ್ರಹ್ಮ’ವಾಗಿದೆ. ವಾಕ್ಕಿನಿಂದ ವ್ಯಕ್ತವಾಗುವ ಆ ನಿಯತಿಃಸತ್ಯವೇ ‘ವೇದ’ವಾಗಿದೆ. ಸಂಸ್ಕಾರಾವಚ್ಛಿನ್ನ ಅದೇ ಸತ್ಯಜ್ಞಾನವು ವಿಧ್ಯೆಯಾಗಿದೆ, ವಿಷಯಾವಚ್ಛಿನ್ನ ಅದೇ ಸತ್ಯಜ್ಞಾನವು ಬ್ರಹ್ಮವಾಗಿದೆ, ಹಾಗೂ ಶಬ್ದಾವಚ್ಛಿನ್ನ ಅದೇ ಸತ್ಯಜ್ಞಾನವು ವೇದವಾಗಿದೆ. ಅಕ್ಷರಪ್ರಜಾಪತಿಯ ಈ ಮೂರೂ ವಿವರ್ತ್ತಗಳಲ್ಲಿ ಈಗ  ಶಬ್ದಾವಚ್ಛಿನ್ನ ವೇದವಿವರ್ತ್ತದತ್ತಲೇ ಓದುಗರ ಧ್ಯಾನವನ್ನು ಆಕರ್ಷಿಸಲಾಗುತ್ತದೆ.

ಸರ್ವಸಾಧಾರಣ ದೃಷ್ಟಿಯಲ್ಲಿ ವೇದ ಹಾಗೂ ಮನ್ತ್ರ ಶಬ್ದಗಳು ಪರಸ್ಪರ ಪರ್ಯ್ಯಾಯವೆಂದಾಗಿದ್ದಾಗ್ಯೂ, ಇದೇ ಸಾಧಾರಣ ದೃಷ್ಟಿಯ ಆಧಾರದಲ್ಲಿ ಮನ್ತ್ರಸಮಷ್ಟಿಲಕ್ಷಣ ಸಂಹಿತಾಗ್ರನ್ಥವನ್ನು ‘ವೇದ’ವೆಂದು ನಂಬಲಾಗಿದೆ. ಆದರೆ ವಸ್ತುತಃ ವೇದಶಬ್ದವು ಸಂಜ್ಞೀ ಆಗಿದೆ ಹಾಗೂ ಮನ್ತ್ರಶಬ್ದವು ಸಂಜ್ಞಾ ಆಗಿದೆ. ವೇದವು ಮನ್ತ್ರವಲ್ಲ, ಆದರೆ ವೇದದ ಹೆಸರು ಮನ್ತ್ರವಾಗಿದೆ. ಯಾವ ಮನ್ತ್ರಗಳಲ್ಲಿ ಯಾವ ದೇವತಾ ವಿಜ್ಞಾನದ ಪ್ರತಿಪಾದನೆಯಾಗಿದೆಯೋ, ಆ ನಿತ್ಯಸಿದ್ಧ ವಿಜ್ಞಾನತತ್ತ್ವವು ವೇದವಾಗಿದೆ. ಹಾಗೂ ಈ ದೇವತಾವಿಜ್ಞಾನದ ಸ್ಪಷ್ಟೀಕರಣ ನೀಡುವಂತಹಾ ಶಬ್ದರಾಶಿಯು ಮನ್ತ್ರವಾಗಿದೆ. ಶಬ್ದಾತ್ಮಕ ಮನ್ತ್ರವು ವಾಚಕವಾಗಿದೆ, ತತ್ತ್ವಾತ್ಮಕ ವೇದವು ವಾಚ್ಯವಾಗಿದೆ. ಈ ರೀತಿ ಸಂಜ್ಞಾ-ಸಂಜ್ಞೀ ಭೇದದಿಂದ ಹೇಗೆ ಮನ್ತ್ರ ಹಾಗೂ ವೇದ ಶಬ್ದಗಳು ಭಿನ್ನ ಭಿನ್ನ ಅರ್ಥಗಳಲ್ಲಿ ವ್ಯವಸ್ಥಿತವಾಗಿವೆಯೋ, ಹಾಗೆಯೇ ಎರಡರ (ಶಬ್ದಾರ್ಥದ) ತಾದಾತ್ಮ್ಯಸಮ್ಬನ್ಧವನ್ನು ಲಕ್ಷ್ಯದಲ್ಲಿರಿಸಿಕೊಂಡು ಮನ್ತ್ರವನ್ನು ವೇದವೆಂದು ಹೇಳಲಾಗುತ್ತದೆ, ವೇದವನ್ನು ಮನ್ತ್ರ ಶಬ್ದದಿಂದ ವ್ಯವಹೃತಗೊಳಿಸಲಾಗುತ್ತದೆ; ಇದು ನಿಮ್ನಲಿಖಿತ ವಚನದಿಂದ ಸ್ಪಷ್ಟವಾಗುತ್ತದೆ-

ಪ್ರತ್ಯಕ್ಷೇಣಾನುಮಿತ್ಯಾ ವಾ ಯಸ್ತೂಪಾಯೋ ನ ಬುದ್ಧ್ಯತೇ |
ಏತಂ ವಿದನ್ತಿ ವೇದೇನ ತಸ್ಮಾದ್ವೇದಸ್ಯ ವೇದತಾ ||

ಪ್ರತ್ಯಕ್ಷ, ಅನುಮಾನ, ಶಬ್ದ ಭೇದದಿಂದ ಪ್ರಮಾಜ್ಞಾನಕ್ಕೆ ೩ ಸಾಧಕಗಳೆಂದು ನಂಬಲಾಗಿದೆ. ಎಲ್ಲಿ ಪ್ರತ್ಯಕ್ಷ ಹಾಗೂ ಅನುಮಾನ ಪ್ರಮಾಣಗಳ ಗತಿಯು ಅವರುದ್ಧವಾಗುತ್ತದೆಯೋ, ಇಂತಹಾ ಅತೀನ್ದ್ರಿಯ ತತ್ತ್ವಗಳ ಸಮ್ಬನ್ಧದಲ್ಲಿ ಮೂರನೆಯ ಶಬ್ದಪ್ರಮಾಣದ (ಆಪ್ತಪ್ರಮಾಣದ) ಆಶ್ರಯವನ್ನು ಪಡೆಯಲಾಗುತ್ತದೆ. ಉಕ್ತ ವಚನವು - ‘ಏತಂ ವಿದನ್ತಿ ವೇದೇನ’; ಈ ಶಬ್ದಪ್ರಮಾಣದ ದಿಗ್ದರ್ಶನ ಮಾಡುತ್ತಿದೆ. ಈ ರೀತಿ ಇಲ್ಲಿನ ವೇದಶಬ್ದವು ಶಬ್ದರೂಪೀ ಮನ್ತ್ರಪ್ರಮಾಣದ ಅಭಿಪ್ರಾಯದಿಂದಲೇ ಪ್ರಯುಕ್ತವಾಗಿದೆ. ಇಲ್ಲಿ ಎಲ್ಲವೂ ಸರಿಯಾದರೂ, ಸಿದ್ಧಾನ್ತ-ಪಕ್ಷವೇನೆಂದರೆ, ಶಬ್ದೋಪಪಾದಿತ ದೇವತಾವಿಜ್ಞಾನವು ‘ವೇದ’ವಾಗಿದೆ, ಹಾಗೂ ದೇವತಾವಿಜ್ಞಾನೋಪಪಾದಕ ಶಬ್ದವು ಮನ್ತ್ರವಾಗಿದೆ. ಇದೇ ಭೇದದೃಷ್ಟಿಯನ್ನು ಲಕ್ಷ್ಯದಲ್ಲಿರಿಸಿಕೊಂಡು ದ್ರಷ್ಟೃಲಕ್ಷಣ-ಋಷಿಯ ವಿಚಾರವನ್ನು ಪ್ರಸ್ತುತಪಡಿಸಲಾಗುತ್ತಿದೆ.

ಯಾವ ರೀತಿ ವೇದಶಬ್ದವು ಮನ್ತ್ರಾಭಿಪ್ರಾಯದಿಂದ ಪ್ರಯುಕ್ತವಾಗುತ್ತದೆಯೋ, ಅದೇ ರೀತಿ ಮನ್ತ್ರಶಬ್ದವು ವೇದಾಭಿಪ್ರಾಯದಿಂದಲೂ ಪ್ರಯುಕ್ತವಾಗಿದೆ. ಇದು “ಋಷಿರ್ವೇದಮನ್ತ್ರಃ” ಇತ್ಯಾದಿ ವ್ಯವಹಾರಗಳಿಂದ ಪ್ರಮಾಣಿತವಾಗಿದೆ. “ಋಷಯೋ ಮನ್ತ್ರದ್ರಷ್ಟಾರಃ”-“ಸಾಕ್ಷಾತ್ಕೃತಧರ್ಮ್ಮಾಣ ಋಷಯೋ ಬಭೂವುಃ’ ಎಂಬಲ್ಲಿ ಪಠಿತ ‘ಮನ್ತ್ರ’ ಶಬ್ದವು ವೇದಾತ್ಮಕ ವಿಜ್ಞಾನತತ್ತ್ವದ ಸಂಗ್ರಾಹಕವಾಗುತ್ತಿದೆ. ಋಷಿಗಳು ವೇದತತ್ತ್ವವನ್ನು ನೋಡಿದರು, ವೇದತತ್ತ್ವದ ಸಾಕ್ಷಾತ್ಕಾರದಿಂದಲೇ ಅವರು ‘ಆಪ್ತ-ಋಷಿ’ಗಳೆಂದು ಕರೆಯಲ್ಪಟ್ಟರು. ಈ ರೀತಿ ವೇದವಿಧ್ಯೆ ಹಾಗೂ ಶಬ್ದಾತ್ಮಕ ಮನ್ತ್ರ, ಇವೆರಡರಲ್ಲಿಯೂ (ಶಬ್ದಾರ್ಥ ತಾದಾತ್ಮ್ಯದಿಂದ) ಸಙ್ಕರವ್ಯವಹಾರವು ಪ್ರಚಲಿತವಾಗಿದೆ. ಅಥವಾ ಸ್ವಯಂ ‘ಮನ್ತ್ರ’ ಶಬ್ದವನ್ನೇ ಶಬ್ದ ಹಾಗೂ ಅರ್ಥ, ಎರಡರ ವಾಚಕವೆಂದು ತಿಳಿಯುತ್ತಾ ಇನ್ನೊಂದು ದೃಷ್ಟಿಯಿಂದ ವಿಚಾರ ಮಾಡೋಣ. ವರ್ಣಾನುಪೂರ್ವ್ವೀಲಕ್ಷಣವುಳ್ಳ ಶಬ್ದ, ಹಾಗೂ ಶಬ್ದಪ್ರತಿಪಾದ್ಯ ತಾತ್ತ್ವಿಕ ದೇವತಾವಿಜ್ಞಾನಾತ್ಮಕ ಅರ್ಥ, ಇವೆರಡಕ್ಕೂ ಮನ್ತ್ರಶಬ್ದವು ನಿಯತವಾಗಿದೆ. ತತ್ತ್ವವನ್ನೂ ಮನ್ತ್ರವೆಂದು ಹೇಳಬಹುದು, ತತ್ತ್ವಪ್ರತಿಪಾದಕ ಶಬ್ದವನ್ನೂ ಮನ್ತ್ರವೆಂದು ಕರೆಯಬಹುದು. ಶಬ್ದಾತ್ಮಕ ಮನ್ತ್ರವು ಮನ್ತ್ರಸಂಹಿತಾರೂಪದಿಂದ ಪ್ರಸಿದ್ಧವಾಗಿದೆ. ಹಾಗೂ ತತ್ತ್ವಾತ್ಮಕ ಮನ್ತ್ರವನ್ನು ಪೂರ್ವದ ‘ವೇದವಿಧ್ಯೆಯ ಸಂಸ್ಥಾವಿಭಾಗ’ ಪ್ರಕರಣದಲ್ಲಿ ದಿಗ್ದರ್ಶನಗೊಳಿಸಿಯಾಗಿದೆ. ತತ್ತ್ವ ಹಾಗೂ ಶಬ್ದ ಎರಡರಲ್ಲಿಯೂ ‘ವ್ಯಾಸಜ್ಯವೃತ್ತಿ’ಯಿಂದ ಪ್ರತಿಷ್ಠಿತವಾಗಿರುವ ಮನ್ತ್ರಶಬ್ದವು ‘ಸಮುದಾಯೇ ದೃಷ್ಟಾಃ ಶಬ್ದಾ ಅವಯವೇಷ್ವಪಿ ವರ್ತ್ತನ್ತೇ’ ಎಂಬ ನ್ಯಾಯದ ಅನುಸಾರ ತತ್ತ್ವವೇದದ ವಾಚಕವೂ ಆಗಬಹುದು ಹಾಗೂ ಶಬ್ದವೇದದ ವಾಚಕವೂ ಆಗಬಹುದು. ಇನ್ನೊಂದು ರೀತಿಯಲ್ಲಿ ವಿವರಿಸುವುದಾದರೆ, ಶಬ್ದೋಪದಿಷ್ಟ ವಿಜ್ಞಾನದಲ್ಲಿ ನಿರೂಢವಾಗಿರುವ ಮನ್ತ್ರಶಬ್ದವು ಶಬ್ದರಾಶಿಗಾಗಿ ಪ್ರಯುಕ್ತವಾಗಬಹುದು, ಹಾಗೂ ಶಬ್ದರಾಶಿ-ಪ್ರತಿಪಾದಿತ ವಿಜ್ಞಾನಕ್ಕಾಗಿಯೂ ಪ್ರಯುಕ್ತವಾಗಬಹುದು. ‘ಬ್ರಹ್ಮ ವೈ ಮನ್ತ್ರಃ’ (ಶತಪಥ ೭-೧-೧-೫) ಈ ಶ್ರುತಿಯನುಸಾರ ಮನ್ತ್ರಸಮಾನಾರ್ಥಕವೇ ‘ಬ್ರಹ್ಮ’ ಶಬ್ದವಾಗಿದೆ. ಹಾಗೂ ಈ ಬ್ರಹ್ಮಶಬ್ದವು ವ್ಯಾಸಜ್ಯವೃತ್ತಿಯಿಂದ ಪರಲಕ್ಷಣ ಅರ್ಥಪ್ರಪಞ್ಚ ಹಾಗೂ ಅಪರಲಕ್ಷಣ ಶಬ್ದಪ್ರಪಞ್ಚ, ಇವೆರಡರಿಂದಲೂ ಯುಕ್ತವಾಗಿರುತ್ತಾ ಪ್ರತಿಯೊಂದಕ್ಕೂ ಪ್ರಯುಕ್ತವಾಗುವುದನ್ನು ಕಾಣುತ್ತೇವೆ. ಇದು ನಿಮ್ನಲಿಖಿತ ವಚನದಿಂದ ಸ್ಪಷ್ಟವಾಗಿದೆ-

ದ್ವೇ ಬ್ರಹ್ಮಣಿ ವೇದಿತವ್ಯೇ ಶಬ್ದಬ್ರಹ್ಮ ಪರಂ ಚ ಯತ್ |
ಶಾಬ್ದೇ ಬ್ರಹ್ಮಣಿ ನಿಷ್ಣಾತಃ ಪರಂ ಬ್ರಹ್ಮಾಧಿಗಚ್ಛತಿ ||

ನಿಷ್ಕರ್ಷೆ ಏನಾಯಿತೆಂದರೆ ವಾಕ್ಯಸಂಗ್ರಹವನ್ನೂ ಮನ್ತ್ರವೆನ್ನಲುಬಹುದು, ಹಾಗೂ ತತ್ಪ್ರತಿಪಾದ್ಯ ವಿಧ್ಯಾತತ್ತ್ವವನ್ನೂ ಮನ್ತ್ರವೆನ್ನಬಹುದು. ವಿಧ್ಯಾತ್ಮಕ (ತತ್ತ್ವಾತ್ಮಕ) ಮನ್ತ್ರಗಳನ್ನು ಋಷಿಗಳು ತಮ್ಮ ಆರ್ಷದೃಷ್ಟಿಯಿಂದ ಸಾಕ್ಷಾತ್ಕಾರಿಸಿಕೊಂಡರು; ಇದೇ ಅಭಿಪ್ರಾಯದಿಂದ ಇವರು ‘ಮನ್ತ್ರದ್ರಷ್ಟಾ’ ಎಂದು ಕರೆಯಲ್ಪಟ್ಟರು. ಹಾಗೂ ತಮ್ಮ ದೃಷ್ಟ ಅರ್ಥದ ಆಧಾರದಲ್ಲಿ ದೃಷ್ಟ ಅರ್ಥದ ಸ್ಪಷ್ಟೀಕರಣಕ್ಕಾಗಿ ಅವರು ಬುದ್ಧಿಪೂರ್ವಕವಾಗಿ ವಾಕ್ಯರಚನೆಯನ್ನು ಮಾಡಿದರು. ಈ ವಾಕ್ಯರಚನಾತ್ಮಕ ಮನ್ತ್ರಗಳ ಅಭಿಪ್ರಾಯದಿಂದ ಇವರನ್ನು ‘ಮನ್ತ್ರಕೃತ್’ ಎಂದೂ ನಂಬಲಾಯಿತು. ಯಾವ ಋಷಿಯು ಮನ್ತ್ರದ್ರಷ್ಟಾರರಾದರೋ (ತತ್ತ್ವದ್ರಷ್ಟಾರರಾದರೋ), ಅವರೇ ಮನ್ತ್ರಕೃತರೆಂದು ಕರೆಯಲ್ಪಟ್ಟರು, ಯಾರು ಮನ್ತ್ರಗಳ (ಶಬ್ದಾತ್ಮಕ ಮನ್ತ್ರಗಳ) ತಾತ್ಪರ್ಯ್ಯವನ್ನು ಚೆನ್ನಾಗಿ ತಿಳಿದುಕೊಂಡರೋ, ಅವರು ‘ಮನ್ತ್ರವಿತ್’ ಎಂದು ಕರೆಯಲ್ಪಟ್ಟರು. ಹಾಗೂ ಯಾವ ಮನ್ತ್ರದಲ್ಲಿ ಯಾವ ಋಷಿಪ್ರಾಣದ ನಿರೂಪಣೆಯಾಗಿದೆಯೋ, ಅಂತಹಾ ಪ್ರಾಣಾತ್ಮಕ ಋಷಿಯೇ ‘ಮನ್ತ್ರಪತಿ’ ಎಂದು ಕರೆಯಲ್ಪಟ್ಟರು. ಈ ರೀತಿ ದರ್ಶನ, ನಿರ್ಮ್ಮಾಣ, ವೇದನ, ಆಧಿಪತ್ಯಾದಿ ಭಾವಗಳ ಭೇದದಿಂದ ಪ್ರಾಣವಿಧ ಹಾಗೂ ಪ್ರಾಣೀ-ವಿಧ ಋಷಿಗಳ ‘ಮನ್ತ್ರದ್ರಷ್ಟಾ’-‘ಮನ್ತ್ರಕೃತ್’-‘ಮನ್ತ್ರಪತಿ’-‘ಮನ್ತ್ರವಿತ್’ ಇತ್ಯಾದಿ ಅನೇಕ ಭೇದಗಳಾದವು. ಇವುಗಳನ್ನು ನಿಮ್ನಲಿಖಿತ ವೇದಮನ್ತ್ರಗಳು ಸ್ಪಷ್ಟಪಡಿಸುತ್ತಿವೆ –

೧-ಯಾಮೃಷಯೋ ಮನ್ತ್ರಕೃತೋ ಮನೀಷಿಣ ಅನ್ವೈಚ್ಛನ್ ದೇವಾಸ್ತಪಸಾ ಶ್ರಮೇಣ |
ತಾಂ ದೇವೀಂ ವಾಚಂ ಹವಿಷಾ ಯಜಾಮಹೇ ಸಾ ನೋ ದಧಾತು ಸುಕೃತಸ್ಯ ಲೋಕೇ ||

೨-ನಮೋ ಋಷಿಭ್ಯೋ ಮನ್ತ್ರಕೃದ್ಭೋ ಮನ್ತ್ರಪತಿಭ್ಯಃ |
ಮಾ ಮಾ ಋಷಯೋ ಮನ್ತ್ರಕೃತೋ ಮನ್ತ್ರವಿದಃ ಪ್ರಾಹುರ್ದೈವೀಂ ವಾಚಮ್ ||

೩-ಋಷೇ ಮನ್ತ್ರಕೃತಾಂ ಸ್ತೋಮೈಃ ಕಶ್ಯಪೋದ್ವರ್ಧಯನ್ ಗಿರಃ |
ಸೋಮಂ ನಮಸ್ಯ ರಾಜಾನಂ ಯೋ ಜಜ್ಞೇ ವೀರುಧಾಂ ಪತಿಃ ಇನ್ದ್ರಾಯೇನ್ದೋ ಪರಿ ಸ್ರವ||
- ಋಕ್ಸಂ ೯-೧೧೪-೨

ಒಂದುವೇಳೆ ಮನುಷ್ಯ-ಋಷಿಯೇ ವೇದಮನ್ತ್ರಗಳ ಕರ್ತ್ತನಾಗಿದ್ದರೆ, ‘ಅನಾದಿನಿಧನಾ ನಿತ್ಯಾ ವಾಗುತ್ಸೃಷ್ಟಾ ಸ್ವಯಮ್ಭುವಾ’ ಇತ್ಯಾದಿ ಸ್ಮೃತಿಗಳ ಸಮನ್ವಯ ಹೇಗಾಗುತ್ತದೆ?, ಈ ಪ್ರಶ್ನೆಯ ವಿಶದ-ಮೀಮಾಂಸೆಯನ್ನು ಮುಂದಿನ ಪ್ರಕರಣಗಳಲ್ಲಿ ಮಾಡಲಾಗುತ್ತದೆ. ಪ್ರಕೃತದಲ್ಲಿ ಕೇವಲ ವಕ್ತವ್ಯವೇನೆಂದರೆ, ಯಾವ ಮನುಷ್ಯವಿಧ, ಆಪ್ತ, ಮಹರ್ಷಿಗಳು ತತ್ತ್ವಾತ್ಮಕ ವೇದದ ಸಾಕ್ಷಾತ್ಕಾರ ಮಾಡಿಕೊಂಡರೋ ಅಥವಾ ಯಾವ ನಿತ್ಯವೇದವು ಸ್ವಯಂ ಜಗದೀಶ್ವರನ ಪ್ರೇರಣೆಯಿಂದ ಈ ತಪಃಪೂತ ಮಹರ್ಷಿಗಳ ಪವಿತ್ರ ಅನ್ತಃಕರಣಗಳಲ್ಲಿ ಪ್ರಸ್ಫುಟಿತಗೊಂಡಿತೋ, ಅದೇ ವೇದತತ್ತ್ವವು ಋಷಿ-ದ್ರಷ್ಟ ವೇದವೆಂದು ಕರೆಯಲ್ಪಟ್ಟಿತು, ಹಾಗೂ ಇದೇ ಅಭಿಪ್ರಾಯದಿಂದ ಇವರನ್ನು ‘ಮನ್ತ್ರದ್ರಷ್ಟಾ’ರರೆಂದು ಕರೆಯಲಾಯಿತು. ನಿಮ್ನಲಿಖಿತ ಶ್ರುತಿ-ಸ್ಮೃತಿವಚನಗಳು ಇದೇ ದ್ರಷ್ಟೃಲಕ್ಷಣ ಋಷಿಯ ಸ್ಪಷ್ಟೀಕರಣ ನೀಡುತ್ತಿವೆ-

೧-ತದ್ವಾ ಋಷಯಃ ಪ್ರತಿಬುಬುಧಿರೇ, ಯ ಉ ತರ್ಹಿ ಋಷಯ ಆಸುಃ |

೨-ಯೇ ಸಮುದ್ರಾನ್ನಿರಖನನ್ ದೇವಾಸ್ತೀಕ್ಷ್ಣಾಭಿರಭ್ರಿಭಿಃ |
ಸುದೇವೋ ಅದ್ಯ ತದ್ವಿಧ್ಯಾದ್ ಯತ್ರ ನಿರ್ವಪಣಂ ದಧುಃ ||

೩-ಅಜಾನ್ ಹ ವೈ ಪೃಶ್ನೀನ್ ತಪಸ್ಯಮಾನಾನ್ ಬ್ರಹ್ಮ ಸ್ವಯಮ್ಭೂ ಅಭ್ಯಾನರ್ಷತ್ | ತದ್ ಋಷೀಣಾಂ ಋಷಿತ್ತ್ವಮ್ |

೪-ಯಜ್ಞೇನ ವಾಚಃ ಪದವೀಮಾಯಂಸ್ತಾಮನ್ವವಿನ್ದನ್ ಋಷಿಷು ಪ್ರವಿಷ್ಟಾಮ್ |

೫-ಯುಗಾನ್ತೇಽನ್ತರ್ಹಿತಾನ್ ವೇದಾನ್ ಸೇತಿಹಾಸಾನ್ ಮಹರ್ಷಯಃ |
ಲೇಭಿರೇ ತಪಸಾ ಪೂರ್ವಮನುಜ್ಞಾತಾಃ ಸ್ವಯಮ್ಭುವಾ ||

ಯಾರು ಯಾವ ವಿಷಯದ ಸಾಕ್ಷಾತ್ಕಾರ ಪಡೆಯುತ್ತಾರೋ, ಅವರು ಆ ವಿಷಯದ ‘ದ್ರಷ್ಟಾ’ ಎಂದು ಕರೆಯಲ್ಪಡುತ್ತಾರೆ. ವಿಷಯವಿಭಾಗವು ಸ್ವಯಂ ದೃಷ್ಟ-ಅದೃಷ್ಟ ಭೇದದಿಂದ ೨ ಭಾಗಗಳಲ್ಲಿ ವಿಭಕ್ತವಾಗಿದೆ. ಯಾವ ವಿಷಯಗಳನ್ನು ನಾವು ನಮ್ಮ ಇನ್ದ್ರಿಯಗಳಿಂದ ನೋಡಬಲ್ಲೆವೋ, ಆ ಎಲ್ಲಾ ಲೌಕಿಕ ವಿಷಯಗಳು ‘ದೃಷ್ಟ-ಅರ್ಥ’ವಾಗಿವೆ. ಹಾಗೂ ಆತ್ಮಾ, ಪರಮಾತ್ಮಾ, ಸ್ವರ್ಗ, ಋಷಿ, ಪಿತರ, ದೇವತಾ, ಇತ್ಯಾದಿ ಯಾವ ವಿಷಯಗಳನ್ನು (ಭೂತಮರ್ಯ್ಯಾದೆಯಿಂದ ಅತೀತವಾಗಿರುವ ಕಾರಣದಿಂದ) ನಾವು ನಮ್ಮ ಇನ್ದ್ರಿಯಗಳಿಂದ ಪ್ರತ್ಯಕ್ಷಗೊಳಿಸಿಕೊಳ್ಳಲು ಸಾಧ್ಯವಿಲ್ಲವೋ, ಆ ಎಲ್ಲಾ ಅತೀನ್ದ್ರಿಯ ವಿಷಯಗಳು ಅಲೌಕಿಕ, ಅಂದರೆ ಪಾರಲೌಕಿಕವಾಗುತ್ತಾ ‘ಅದೃಷ್ಟ-ಅರ್ಥ’ವಾಗಿವೆ. ಪದಾರ್ಥಗಳು ೨ ಜಾತಿಗಳಲ್ಲಿ ವಿಭಕ್ತವಾಗಿರುವುದರಿಂದ, ದ್ರಷ್ಟಾ ಕೂಡ ೨ ಭಾಗಗಳಲ್ಲಿಯೇ ವಿಭಕ್ತನೆಂದು ನಂಬಬೇಕಾಗುತ್ತದೆ. ಲೌಕಿಕ ವಿಷಯಗಳ ದ್ರಷ್ಟರು ಎಲ್ಲಿ ‘ಲೌಕಿಕ’ರೆಂದು ಕರೆಯಲ್ಪಡುತ್ತಾರೆಯೋ, ಅಲ್ಲಿ ಅಲೌಕಿಕ ವಿಷಯಗಳ ದ್ರಷ್ಟಾರರು ‘ಋಷಿ’ ಎಂಬ ಹೆಸರಿನಿಂದ ವ್ಯವಹೃತಗೊಂಡಿದ್ದಾರೆ.

ದ್ರಷ್ಟರ ದೃಶ್ಯ ಪ್ರಪಞ್ಚವನ್ನು ‘ಭೌತಿಕ, ದೈವಿಕ, ಅತೀನ್ದ್ರಿಯ’ ಭೇದದಿಂದ ೩ ಭಾಗಗಳಲ್ಲಿ ವಿಭಕ್ತಗೊಳಿಸಬಹುದು. ಯಾವ ಮನುಷ್ಯರು ಇನ್ದ್ರಿಯಗಳಿಂದ ಭೌತಿಕ ಪದಾರ್ಥಗಳ ದ್ರಷ್ಟಾರರಾಗುತ್ತಾರೆಯೋ, ಭೌತಿಕ ವಿಜ್ಞಾನದ ಅನ್ವೇಷಕರಾಗುತ್ತಾರೆಯೋ, ಅವರನ್ನು ‘ಆಪ್ತ’ರೆಂದು ಅವಶ್ಯವಾಗಿ ಕರೆಯಬಹುದು; ಆದರೆ ಋಷಿ ಎಂದು ಕರೆಯಲಾಗುವುದಿಲ್ಲ. ಅದೇ ಆಪ್ತ ದ್ರಷ್ಟಾರರು ಋಷಿ ಎಂದು ಕರೆಯಲ್ಪಡುತ್ತಾರೆ; ಯಾವಾಗ? ತಮ್ಮ ಆರ್ಯದೃಷ್ಟಿಯಿಂದ ದೈವಿಕ ಹಾಗೂ ಅತೀನ್ದ್ರಿಯಭಾವಗಳ ಪ್ರತ್ಯಕ್ಷಗೊಳಿಸಿಕೊಂಡರೆ ಮಾತ್ರ. ಈ ಆರ್ಷದೃಷ್ಟಿಯೇ ‘ಋಷಿದೃಷ್ಟಿ’  ಎಂದು ಕರೆಯಲ್ಪಡುತ್ತದೆ; ಇದು ಸರ್ವಸಾಧಾರಣದವಾಗಿ ಉಂಟಾಗುವುದಿಲ್ಲ. ಪೂರ್ವಜನ್ಮದ ತಪೋಽನುಷ್ಠಾನದಿಂದ ಅಥವಾ ಐಹಿಕ ತಪೋಽನುಷ್ಠಾನದಿಂದ ಈ ಋಷಿದೃಷ್ಟಿಯು ಸ್ವತಃ ಪ್ರಾದುರ್ಭೂತವಾಗುತ್ತದೆ. ಇದನ್ನೇ ಅಲೌಕಿಕ ದೃಷ್ಟಿ ಎಂದು ಕರೆಯಲಾಗುತ್ತದೆ. ಮನುಷ್ಯೇತರ ಪ್ರಾಣಿಗಳಲ್ಲಿಯೂ (ಆಯಾಯ ವಿಶೇಷ ಪ್ರಾಣಿಗಳಲ್ಲಿಯೂ) ಈ ಅಲೌಕಿಕದೃಷ್ಟಿಯು ಕಂಡು-ಕೇಳಿ ಬರುತ್ತದೆ. ಐನ್ದ್ರಿಯಕಜ್ಞಾನದ ಅಭಿಮಾನವುಳ್ಳ ಮನುಷ್ಯನು ಯಾವ ಅತೀನ್ದ್ರಿಯಭಾವಗಳ ಅನುಭವ ಪಡೆಯಲು ಅಸಮರ್ಥನಾಗಿರುತ್ತಾನೆಯೋ, ಅದೇ ಸಾಧಾರಣ ಪ್ರಾಣಿಯು ಈಶ್ವರ-ಪ್ರದತ್ತ ದೃಷ್ಟಿಯಿಂದ ಅವುಗಳ ಅನುಭವ ಹಾಗೂ ಪ್ರದರ್ಶನ ಮಾಡುವುದನ್ನು ಕೇಳಿದ್ದೇವೆ. ಕೇವಲ ಸುಸೂಕ್ಷ್ಮ ಗನ್ಧಾದಿಗಳ ಆಧಾರದಲ್ಲಿ ಕಳ್ಳರನ್ನು ಪತ್ತೆಹಚ್ಚುವುದು, ವಿಷಸಂಪೃಕ್ತಾನ್ನವನ್ನು ಗುರುತಿಸುವುದು ಶ್ವಾನದ ಗುಣದಿಂದ ಕಂಡುಬರುತ್ತದೆ. ನಕುಲವು ವಿಷನಾಶಕ ಔಷಧಿಗಳ ಪರಿಜ್ಞಾತೃವಾಗಿದೆ. ವೃಷ್ಟಿಯ ಪರಿಜ್ಞಾನವು ಮಣ್ಡೂಕಗಳಿಗೆ ಉಂಟಾಗುತ್ತದೆ. ಶ್ವಾನ-ಶೃಗಾಲ-ಕಾಕ-ಪಿಙ್ಗಲಾದಿಗಳು ಭಾವೀ ಅರ್ಥದ ಪರಿಜ್ಞಾತೃ ಹಾಗೂ ಸೂಚಕಗಳೆಂದು ನಂಬಲಾಗಿದೆ. ಆರಣ್ಯಪಶುವು ತಮ್ಮ ತಮ್ಮಯ ರೋಗಗಳ ಔಷಧಿಗಳನ್ನು ಗುರುತಿಸುವುದರಲ್ಲಿ ಸ್ವಯಂ ಸಮರ್ಥವಾಗಿರುತ್ತವೆ. ಯಾವ ರೀತಿ ಈ ಪ್ರಾಣಿಗಳಲ್ಲಿ ಈ ವಿಚಿತ್ರ ಗುಣ ಸ್ವಭಾವತಃ ಪಡೆದಿರುವುದನ್ನು ಕಾಣುತ್ತೇವೆಯೋ ಹಾಗೂ ಅಪೂರ್ವ ಸರ್ವಥಾ ಅತೀನ್ದ್ರಿಯಾರ್ಥಜನಕ ಧರ್ಮ್ಮವು ಕೆಲವೊಂದು ವಿಶೇಷ ಮನುಷ್ಯರಲ್ಲಿಯೂ ಕಂಡುಬರುತ್ತದೆ. ಇಂತಹಾ ಅತೀನ್ದ್ರಿಯಾರ್ಥ-ದ್ರಷ್ಟಾರರಿಗೆ ಭೂತ-ಭವಿಷ್ಯದರ್ಥಗಳು ವರ್ತಮಾನದಂತೆಯೇ ಉಂಟಾಗುತ್ತದೆ. ಇಂತಹಾ ಅತೀನ್ದ್ರಿಯಾರ್ಥದ್ರಷ್ಟಾರರಾದಂತಹಾ ಅಲೌಕಿಕ ಆಪ್ತ ಪುರುಷರನ್ನೇ ದ್ರಷ್ಟಾ-ಋಷಿ ಎಂದು ಕರೆಯಲಾಗುತ್ತದೆ. ಹಾಗೂ ಇದೇ ಋಷಿಶಬ್ದದ ದ್ರಷ್ಟೃಲಕ್ಷಣವಾದ ಮೂರನೆಯ ಪ್ರವೃತ್ತಿಯಾಗಿದೆ. ಏಕೆಂದರೆ ಈ ದ್ರಷ್ಟಾ ಋಷಿಗಳೇ ವೇದಶಾಸ್ತ್ರದ ಪ್ರವರ್ತ್ತಕರಾಗಿದ್ದಾರೆ, ಹಾಗಾಗಿ ಇವರನ್ನು ‘ವೇದಪ್ರವರ್ತ್ತಕ’ರೆಂದೂ ಕರೆಯಬಹುದು.

ಆವಿರ್ಭೂತ ಪ್ರಕಾಶಾನಾಮನಭಿಪ್ಲುತ ಚೇತಸಾಮ್ |
ಅತೀತಾನಾಗತಜ್ಞಾನಂ ಪ್ರತ್ಯಕ್ಷಾನ್ನ ವಿಶಿಷ್ಯತೇ || ೧ ||
ಅತೀನ್ದ್ರಿಯಾನಸಂವೇದ್ಯಾನ್ ಪಶ್ಯನ್ತ್ಯಾರ್ಷೇಣ ಚಕ್ಷುಷಾ |
ಯೇ ಭಾವಾ ವಚನಂ ತೇಷಾಂ ನಾನುಮಾನೇನ ಬಾಧ್ಯತೇ || ೨ ||


ವೇದದ ಋಷಿ ಪದಾರ್ಥ : () ವಕ್ತೃಲಕ್ಷಣ ಋಷಿ:-

ಮಾನ್ತ್ರವರ್ಣಿಕ ಋಷಿಯನ್ನೇ ‘ವಕ್ತೃಲಕ್ಷಣ ಋಷಿ’ ಎನ್ನಲಾಗಿದೆ. ಶಬ್ದಾತ್ಮಕ ಮನ್ತ್ರವು ಯಾವುದರ ವಾಕ್ಯವಾಗಿದೆಯೋ, ಅದು ಆ ಮನ್ತ್ರದ ಋಷಿಯಾಗಿದೆ, ಹಾಗೂ ಮನ್ತ್ರದಲ್ಲಿ ಯಾವ ದೇವತೆಯ (ತತ್ತ್ವದ) ಪ್ರತಿಪಾದನೆ ಆಗುತ್ತದೆಯೋ, ಅದು ಆ ಮನ್ತ್ರದ ದೇವತೆಯಾಗಿದೆ. ಯಾವ ಋಷಿಗಳು ತಾತ್ತ್ವಿಕ ಅರ್ಥವನ್ನು ಆರ್ಷದೃಷ್ಟಿಯಿಂದ ನೋಡಿ ವಾಕ್ಯರೂಪದಿಂದ ಶಬ್ದಾತ್ಮಕ ಮನ್ತ್ರದ ಉಪದೇಶ ನೀಡಿದ್ದಾರೋ, ಅವರೇ ಆ ವಾಕ್ಯಾತ್ಮಕ ಮನ್ತ್ರಗಳ ಪ್ರವಕ್ತಾರರೆಂದು ನಂಬಲಾಗಿದೆ. ಏಕೆಂದರೆ ಋಷಿಗಳೇ ಈ ಮನ್ತ್ರಗಳ ಉಪದೇಶ ನೀಡಿದರು, ಹಾಗಾಗಿ ಅವರೇ ಈ ಮನ್ತ್ರಗಳ ವಕ್ತಾರ ಋಷಿಗಳೆಂದು ಒಪ್ಪಲಾಗಿದೆ.

ಕೆಲ ಕೆಲ ಅನೃಷಿಗಳನ್ನೂ ಋಷಿಯೆಂದು ನಂಬಲಾಗಿದೆ. ಇದಕ್ಕೆ ಕಾರಣ ವಿವಕ್ಷಾ ಆಗಿದೆ. ಯಾರು ಮನ್ತ್ರವನ್ನು ಹೇಳದಿದ್ದರೂ, ಇವರು ಇಂತಿಂತಹಾ ಮನ್ತ್ರದ ವಕ್ತಾರರೆಂದು ನಂಬಲಾಗಿರುತ್ತದೆ. ಈ ವಿವಕ್ಷಾಮಾತ್ರದಿಂದ ಅನೃಷಿಯೂ ಋಷಿ ಎಂಬ ಹೆಸರಿನಿಂದ ಕರೆಯಲ್ಪಡುವುದು ಕೇಳಿಬರುತ್ತದೆ. ‘ಬೃಹದ್ದೇವತಾ’ ಗ್ರನ್ಥದ ಅನುಸಾರ ಮನ್ತ್ರವರ್ಗವು ‘ದೇವಸ್ತವ-ಸಂವಾದ-ಆತ್ಮಸ್ತವ-ಭಾವವೃತ್ತ’ ಭೇದದಿಂದ ನಾಲ್ಕು ಭಾಗಗಳಲ್ಲಿ ವಿಭಕ್ತವಾಗಿದೆ. ಒಂದುವೇಳೆ ಭಾವವೃತ್ತ-ವರ್ಗವು ದೇವಸ್ತವವರ್ಗದಲ್ಲಿ ಅನ್ತರ್ಭಾವವೆಂದು ನಂಬಲಾಗುತ್ತದೆ ಎಂದರೆ, ಮೂರೇ ವರ್ಗಗಳು ಉಳಿಯುತ್ತವೆ.

ಅಸದ್ವಾಽಇದಮಗ್ರಽಆಸೀತ್ | ತದಾಹುಃ – ‘ಕಿಂ ತದಸದಾಸೀತ್’ ಇತಿ?, ‘ಋಷಯೋ’ ವಾವ ತೇಽಗ್ನೇಽಸದಾಸೀತ್ | ತದಾಹುಃ – ‘ಕೇ ತಽಋಷಯಃ’ ಇತಿ?, ಪ್ರಾಣ ವಾಽಋಷಯಃ | ತೇ ಯತ್ ಪುರಾಸ್ಮಾತ್ ಸರ್ವಸ್ಮಾದಿದಮಿಚ್ಛನ್ತಃ ಶ್ರಮೇಣ ತಪಸಾ ‘ಅರಿಷನ್’, ತಸ್ಮಾತ್-‘ಋಷಯಃ’ |
-ಶತಪಥ ೬-೧-೧-೧

ಅಸಲ್ಲಕ್ಷಣ, ಹಾಗಾಗಿ ಸದಾತ್ಮಕ ಪ್ರಾಣರೂಪೀ ಋಷಿತತ್ತ್ವವೇ ಮೌಲಿಕವೇದದ ಸ್ವರೂಪಲಕ್ಷಣವಾಗಿದೆ. ಇನ್ನೊಂದು ರೀತಿಯಲ್ಲಿ ವಿವರಿಸುವುದಾದರೆ ಪ್ರಾಣರೂಪೀ ‘ಋಷಿ’ ತತ್ತ್ವವೇ ಮೌಲಿಕವೇದವಾಗಿದೆ, ಇದರ ಅವಿಜ್ಞೇಯ-ದುರ್ವಿಜ್ಞೇಯ-ವಿಜ್ಞೇಯ-ಹಾಗೂ ಸುವಿಜ್ಞೇಯ-ಚಿರನ್ತನ ಇತಿಹಾಸಗಳನ್ನು ಪೂರ್ವ-ಪರಿಚ್ಛೇದಗಳಲ್ಲಿ ಕ್ರಮವಾಗಿ ದಿಗ್ದರ್ಶನ ಮಾಡಿಸುವ ಪ್ರಯತ್ನ ಮಾಡಲಾಗಿದೆ.

 1. ಮಾಯಾತೀತ, ಹಾಗಾಗಿ ವಿಶ್ವಾತೀತ ಪರಾತ್ಪರ ಪರಮೇಶ್ವರನಿಂದ ಅಭಿನ್ನವಾದ ಅನನ್ತಭಾವಾಪನ್ನ ಅದೇ ಮೌಲಿಕ ವೇದವು ಅವಿಜ್ಞೇಯ ವೇದವಾಗಿದೆ.
 2. ಮಾಯಾಮಯ, ಹಾಗಾಗಿ ಸಹಸ್ರಬಲ್ಶೇಶ್ವರಾತ್ಮಕ ಅಶ್ವತ್ಥಬ್ರಹ್ಮಲಕ್ಷಣವುಳ್ಳ ಮಹೇಶ್ವರನಿಂದ ಅಭಿನ್ನವಾದ ಸಹಸ್ರಭಾವಾಪನ್ನ ಅದೇ ಮೌಲಿಕವೇದವು ದುರ್ವಿಜ್ಞೇಯ ವೇದವಾಗಿದೆ.
 3. ಯೋಗಮಾಯಾವಚ್ಛಿನ್ನ, ಹಾಗಾಗಿ ಏಕಬಲ್ಶೇಶ್ವರಾತ್ಮಕ ಅಶ್ವತ್ಥ-ಶಾಖಾತ್ಮಕ ಉಪೇಶ್ವರನಿಂದ ಅಭಿನ್ನವಾದ ಅದೇ ಮೌಲಿಕವೇದವು ವಿಜ್ಞೇಯವೇದವಾಗಿದೆ.
 4. ಹಾಗೂ ಭೂತಮಾಯಾವಚ್ಛಿನ್ನ, ಹಾಗಾಗಿ ಬಲ್ಶಾಗ್ರಭಾಗಾತ್ಮಕ ಅಶ್ವತ್ಥಶಾಖಾನುಗತ ಸುಪರ್ಣಾನುಗತ ಈಶ್ವರನಿಂದ ಅಭಿನ್ನವಾದ ಅದೇ ಮೌಲಿಕವೇದವು ಸುವಿಜ್ಞೇಯವೇದವಾಗಿದೆ.


ಈ ನಾಲ್ಕು ವೇದಸ್ಥಾನಗಳಲ್ಲಿ ಅನ್ತಿಮ ಚತುರ್ಥ ವಿಜ್ಞೇಯವೇದದ ಮೌಲಿಕ ಸ್ವರೂಪವೇ ಭರದ್ವಾಜಮಹರ್ಷಿಯಿಂದ ದೃಷ್ಟ ಆ ‘ಸಾವಿತ್ರಾಗ್ನಿ’ಯಾಗಿದೆ. ಇದರ ಪರಿಜ್ಞಾನದಿಂದ, ಉಪಾಸನೆಯಿಂದ ವೇದಸ್ವರೂಪವು ಗತಾರ್ಥವಾಗುತ್ತದೆ. ಇದೇ ಚತುರ್ದ್ಧಾ ವಿಭಕ್ತ ಮೌಲಿಕ ವೇದದ ಸಂಕ್ಷಿಪ್ತ ಚಿರನ್ತನ ಇತಿವೃತ್ತವಾಗಿದೆ. ಇದರ ಮೌಲಿಕತೆಯು ‘ಋಷಿ’ ಪದಾರ್ಥದ ಮೇಲೆ ಪ್ರತಿಷ್ಠಿತವಾಗಿದೆ. ಈ ವೇದಾತ್ಮಕ ಋಷಿ ಪದಾರ್ಥವು ಅಸತ್-ರೋಚನಾ-ದ್ರಷ್ಟೃ-ವಕ್ತೃ ಭೇದದಿಂದ ನಾಲ್ಕು ಸಂಸ್ಥಾನಗಳಲ್ಲಿ ಪರಿಗೃಹೀತವಾಗಿದೆ.

೧-ಮಾಯಾತೀತಃ
ಪರಮೇಶ್ವರಃ
ಸರ್ವಾತೀತಃ ಸರ್ವಗಃ
ತದಭಿನ್ನಃ
‘ಅವಿಜ್ಞೇಯ ವೇದಃ’
೨-ಮಾಯಾಮಯಃ
ಮಹೇಶ್ವರಃ
ಸಹಸ್ರಬಲ್ಶೇಶ್ವರಃ
ತದಭಿನ್ನಃ
‘ದುರ್ವಿಜ್ಞೇಯ ವೇದಃ’
೩-ಯೋಗಮಾಯೀ
ಉಪೇಶ್ವರಃ
ಏಕಬಲ್ಶೇಶ್ವರಃ
ತದಭಿನ್ನಃ
‘ವಿಜ್ಞೇಯ ವೇದಃ’
೪-ಭೂತಮಾಯೀ
ಈಶ್ವರಃ
ಬಲ್ಶಾಪ್ರತಿಷ್ಠಿತಃ
ತದಭಿನ್ನಃ
‘ಸುವಿಜ್ಞೇಯ ವೇದಃ’

೧-ಅಸಲ್ಲಕ್ಷಣ ಋಷಿಃ
ವೇದತತ್ತ್ವ ಸ್ವರೂಪಃ
ತತ್ತ್ವರ್ಷಿಃ
೨-ರೋಚನಾಲಕ್ಷಣ ಋಷಿಃ
ವೇದತತ್ತ್ವ ಸ್ವರೂಪಃ
ತತ್ತ್ವರ್ಷಿಃ
೩-ದ್ರಷ್ಟೃಲಕ್ಷಣ ಋಷಿಃ
ವೇದತತ್ತ್ವದ್ರಷ್ಟಾ
ಮಾನವ ಋಷಿಃ
(ತತ್ತ್ವರ್ಷಿನಾಮ್ನಾ ಪ್ರಸಿದ್ಧಃ)
೪-ವಕ್ತೃಲಕ್ಷಣ ಋಷಿಃ
ವೇದತತ್ತ್ವವಕ್ತಾ
ಮಾನವ ಋಷಿಃ
(ತತ್ತ್ವರ್ಷಿನಾಮ್ನಾ ಪ್ರಸಿದ್ಧಃ)

ಸನಾತನ ಆರ್ಷನಿಷ್ಠೆಯಿಂದ ಅನುಪ್ರಾಣಿತ ಅಪೌರುಷೇಯ ವೇದಕ್ಕೆ ಸಮ್ಬನ್ಧಿಸಿದ ಮೌಲಿಕ ವೇದದ ಇತಿವೃತ್ತವು ವೇದಪ್ರೇಮಿಗಳ ಸಮ್ಮುಖದಲ್ಲಿ ಉಪಸ್ಥಿತಗೊಳಿಸಲಾಯಿತು. ಸ್ವಯಂ ವೇದದ ಮೌಲಿಕ ಇತಿವೃತ್ತವೇ ವೇದತತ್ತ್ವದ ಅಪೌರುಷೇಯತ್ವಕ್ಕೆ ಸ್ವತಃಪ್ರಮಾಣವೆಂದು ಪ್ರಮಾಣಿತವಾಗುತ್ತಿದೆ. ಯಾವ ತತ್ತ್ವಾತ್ಮಕ ಅಪೌರುಷೇಯವೇದಪ್ರಾಮಾಣ್ಯದಿಂದ ಎಲ್ಲವೂ ಪ್ರಮಾಣಿತವಾಗಿವೆಯೋ, ಅಂತಹದ್ದನ್ನು ಪ್ರಮಾಣೀಕರಿಸಲು ಇನ್ನೊಂದು ಪ್ರಮಾಣದ ಸ್ವಲ್ಪವೂ ಅಪೇಕ್ಷೆ ಇರುವುದಿಲ್ಲ. ಹಾಗೆಯೇ ಲಕ್ಷಣೈಕಚಕ್ಷುಷ್ಕ ಆಸ್ತಿಕ ಭಾರತೀಯ ಮಾನವರ ಶಬ್ದಪ್ರಮಾಣೋ ವಯಮ್ | ಯದಸ್ಮಾಕಂ ಶಬ್ದ ಆಹ, ತದಸ್ಮಾಕಂ ಪ್ರಮಾಣಮ್’ ಈ ಆಪ್ತೋಪದೇಶಶಬ್ದಾತ್ಮಿಕಾ ಸಹಜ ಪ್ರಮಾಣನಿಷ್ಠೆಯ ಅನುರೋಧದಿಂದ ಮೌಲಿಕವೇದಕ್ಕೆ ಸಮ್ಬನ್ಧಿಸಿದ ಆಪ್ತಪ್ರಮಾಣಗಳ ಅನುಗಮನವು ಅನಿವಾರ್ಯ್ಯಕೋಟಿಯಲ್ಲಿಯೇ ಸಮಾವಿಷ್ಟವಾಗುತ್ತಿದೆ. ಇದೇ ಅನಿವಾರ್ಯ್ಯತೆಯ ಪೂರ್ತ್ತಿಗಾಗಿ ‘ತಾತ್ತ್ವಿಕವೇದಾನುಗತ ಪ್ರಮಾಣವಾದ’ ರೂಪದಿಂದ ಎರಡನೆಯ ಸ್ತಮ್ಭವನ್ನು ಮುಂದಿನ ಲೇಖನದಿಂದ ಓದುಗರ ಸಮ್ಮುಖದಲ್ಲಿ ಉಪಸ್ಥಿತಗೊಳಿಸಲಾಗುತ್ತದೆ.

|| ಇಲ್ಲಿಗೆ ‘ವೇದದ ಮೌಲಿಕಸ್ವರೂಪ’ವೆಂಬ
ಮೊದಲನೆಯ ಸ್ತಮ್ಭವು ಮುಕ್ತಾಯವಾಯಿತು ||

ಇಂತು ಸಜ್ಜನ ವಿಧೇಯ,

ಹೇಮಂತ್ ಕುಮಾರ್ ಜಿ.

Saturday, 30 March 2019

ವೇದದ ಮೌಲಿಕ ಸ್ವರೂಪ : ವೇದದ 'ಋಷಿ' ಪದಾರ್ಥ : ೨. ರೋಚನಾಲಕ್ಷಣ ಋಷಿ (೧೦)

[ಹಿಂದಿನ ಲೇಖನದ ಕೊಂಡಿ:- https://veda-vijnana.blogspot.com/2019/03/blog-post_26.html]

ಸುಪ್ರಸಿದ್ಧ ನಾಕ್ಷತ್ರಿಕ ಋಷಿಯೇ ರೋಚನಾಲಕ್ಷಣ ಋಷಿ. ಖಗೋಳದಲ್ಲಿ ಎಷ್ಟು ನಕ್ಷತ್ರಗಳಿವೆಯೋ, ಅವೆಲ್ಲ ಭಿನ್ನ ಭಿನ್ನ ಪ್ರಾಣಗಳ ಪ್ರತಿಕೃತಿಗಳು. ಭೂತಪಿಣ್ಡಾತ್ಮಕ ಯಾವ ನಕ್ಷತ್ರದಲ್ಲಿ ಯಾವ ಪ್ರಾಣದ ಪ್ರಧಾನತೆ ಇರುತ್ತದೆಯೋ, ಆ ನಕ್ಷತ್ರವು ಅದೇ ಪ್ರಾಣದ ಹೆಸರಿನಿಂದ ಪ್ರಸಿದ್ಧವಾಗುತ್ತಿದೆ. ಸೃಷ್ಟಿಪ್ರವರ್ತ್ತಕತ್ತ್ವದಿಂದ ಇವುಗಳ ಒಂದುವೇಳೆ ಅಸಲ್ಲಕ್ಷಣ ಪ್ರಾಣಗಳಲ್ಲಿ ಅನ್ತರ್ಭಾವವೆಂದು ತಿಳಿದರೆ, ಇವೆರಡರ ಎರಡು ಸ್ವತನ್ತ್ರ ವಿಭಾಗವಾಗದೆ ಒಂದೇ ವಿಭಾಗ ಉಳಿಯುತ್ತದೆ. ಅಸಲ್ಲಕ್ಷಣ ಪ್ರಾಣವು ಯಾವ ರೀತಿ ವಿವಿಧ ಸೃಷ್ಟಿಗಳ ಪ್ರವರ್ತ್ತಕವಾಗುತ್ತದೆಯೋ, ಹಾಗೆಯೇ ನಾಕ್ಷತ್ರಿಕ ಪ್ರಾಣವೂ ಸೃಷ್ಟಿಕರ್ಮ್ಮದಲ್ಲಿ ಪ್ರಧಾನ ಸಹಾಯಕವಾಗುತ್ತದೆ. ‘ನಿದಾನವಿಧ್ಯೆ’ಯ ಮೂಲಪ್ರತಿಷ್ಠಾವು ಇವೇ ನಾಕ್ಷತ್ರಿಕ ಋಷಿಗಳು. ‘ಭಚಕ್ರ’ದಲ್ಲಿ ಪ್ರತಿಷ್ಠಿತ ಆಯಾಯ ನಕ್ಷತ್ರಗಳ ಆಯಾಯ ಪ್ರಾಣಧರ್ಮ್ಮಗಳ ಆಧಾರದಲ್ಲಿ ಕಲ್ಪಿತ ಆಖ್ಯಾನಗಳಾಗಿವೆ. ಈ ನಾಕ್ಷತ್ರಿಕ-ಆಖ್ಯಾನವು ಪುರಾಣೋಕ್ತ ಅಷ್ಟವಿಧ ಆಖ್ಯಾನಗಳಲ್ಲಿ ‘ಅಸದಾಖ್ಯಾನ’ (ಕಲ್ಪಿತ ಕಥೆಗಳು) ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ.

ಯಾವ ಮಹಾನುಭಾವರು ಪೌರಾಣಿಕ ಆಖ್ಯಾನಗಳನ್ನು ಏಕಾಂತವಾಗಿ ಕಾಲ್ಪನಿಕ ಎಂದು ತಿಳಿಯುತ್ತಾರೋ, ಅವರು ಭ್ರಾನ್ತಿಯಲ್ಲಿರುತ್ತಾರೆ. ಅವರಿಗೆ ಸ್ಮರಣೆ ಇರಬೇಕಾದ್ದೇನೆಂದರೆ –

೧. ಆಧ್ಯಾತ್ಮಿಕ
೨. ಆಧಿದೈವಿಕ
೩. ಆಧಿಭೌತಿಕ
೪. ಆಧ್ಯಾತ್ಮಿಕಾಧಿದೈವಿಕ
೫. ಆಧ್ಯಾತ್ಮಿಕಾಧಿಭೌತಿಕ
೬. ಆಧಿದೈವಿಕಾಧಿಭೌತಿಕ
೭. ಆಧ್ಯಾತ್ಮಿಕಾಧಿದೈವಿಕಾಧಿಭೌತಿಕ

ಎಂಬೀ ೭ ಆಖ್ಯಾನಗಳಂತೂ ಸರ್ವಥಾ ಸದಾಖ್ಯಾನಗಳು. ಕೇವಲ ಒಂದು ವಿಭಾಗವು ಅವಶ್ಯವಾಗಿ ಎಂಥಹದ್ದೆಂದರೆ, ಅದರ ಪಾತ್ರ, ಚರಿತ್ರೆ, ಇತ್ಯಾದಿಗಳೆಲ್ಲಾ ಕಲ್ಪಿತಗಳು. ಸ್ವಯಂ ಪುರಾಣಾಚಾರ್ಯ್ಯರೂ ಈ ಕಲ್ಪಿತ ಕಥೆಗಳ ಸಮ್ಬನ್ಧದಲ್ಲಿ ಸ್ಪಷ್ಟಪಡಿಸಿರುವುದೇನೆಂದರೆ, ಇವುಗಳ ಪಾತ್ರಾದಿಗಳು ಕಲ್ಪಿತ. ಯಾವುದನ್ನು ಈಗಿನ ಯುಗವು ಮಿಥ್ಯಾಶಾಸ್ತ್ರ (Mythology) ಎಂದು ಕರೆಯುತ್ತಾರೋ, ಅದೇ ನಮ್ಮ ಅಸದಾಖ್ಯಾನ ವಿಭಾಗವಾಗಿದೆ (ಮಿಥ್ಯಾಕಥೆಗಳು = ಮೈಥಾಲಜಿ = ಮಿಥ್ಯಾಜ್ಞಾನ = ಕಲ್ಪಿತ ಜ್ಞಾನ). ದೇವಪ್ರತಿಮೆಗಳು, ಉಪಾಸನೆಯ ವಿವಿಧ ಪ್ರಕಾರಗಳು, ವೈಧಿಕ ನಿದಾನವಿಧ್ಯೆ, ಇತ್ಯಾದಿಗಳು ಈ ವಿಭಾಗಕ್ಕೆ ಸಮ್ಬನ್ಧಿಸಿದ್ದು.

ಕಾಲ್ಪನಿಕ ಕಥೆಗಳು ಅವಶ್ಯವಾಗಿ ಕಾಲ್ಪನಿಕವಾಗಿವೆ. ಆದರೆ ಇವುಗಳಿಂದ ಯಾವ ಸತ್ಯ ತಾತ್ತ್ವಿಕ ರಹಸ್ಯದ ಬೋಧ ಮಾಡಿಸಲಾಗುತ್ತದೆಯೋ, ಅದೊಂದು ಅಲೌಕಿಕ ವಸ್ತುವಾಗಿದೆ. ‘ಅಸತ್ಯೇ ವರ್ತ್ಮನಿ ಸ್ಥಿತ್ವಾ ತತಃ ಸತ್ಯಂ ಸಮೀಹತೇ’ ಶಿಕ್ಷಣ-ಪದ್ಧತಿಯ ಈ ಸರ್ವೋಚ್ಚ ಸಿದ್ಧಾನ್ತದ ಮೊದಲ ಆವಿಷ್ಕಾರಕ ಮಹರ್ಷಿಗಳು ಬಾಲಬುದ್ಧಿಗಳ ಪ್ರರೋಚನೆ ಮಾಡುತ್ತಾ ಅಞ್ಜಸಾ ತತ್ತ್ವಬೋಧ ಶಿಕ್ಷಣಕ್ಕಾಗಿಯೇ ಈ ಕಥೆಗಳನ್ನು ಸೃಷ್ಟಿಸಿದರು. ಪ್ರರೋಚನೆಯೊಂದಿಗೆ (ಮನ-ವಿನೋದ) ನಾಕ್ಷತ್ರಿಕ ವಿಧ್ಯಾಪರಿಜ್ಞಾನ, ಲೋಕ-ರಾಜನೀತಿಗಳ ಸ್ಪಷ್ಟೀಕರಣ, ಇತ್ಯಾದಿ ಅನೇಕ ಪ್ರಯೋಜನ ಈ ಕಥೆಗಳ ಗರ್ಭದಲ್ಲಿ ಇನ್ನೂ ಪ್ರತಿಷ್ಠಿತವಾಗಿದೆ. ಉದಾಹರಣೆಗಾಗಿ ಒಂದು ಆಖ್ಯಾನವನ್ನು ಓದುಗರ ಮುಂದೆ ಇಡಲಾಗುತ್ತದೆ. ಇದರಿಂದ ಓದುಗರಿಗೆ ತಿಳಿದುಬರುವುದೇನೆಂದರೆ, ಅವಶ್ಯವಾಗಿ ಈ ನಾಕ್ಷತ್ರಿಕ ಆಖ್ಯಾನವು ಬಹಳ ಸರಳತೆಯಿಂದ ಗಹನತಮ ತತ್ತ್ವಗಳ ಸ್ಪಷ್ಟೀಕರಣ ಮಾಡುತ್ತಿದೆ.

ಪ್ರಜಾಪತಿರ್ವೈ ಸ್ವಾಂ ದುಹಿತರಮಭ್ಯದ್ಯಾಯತ್-ದಿವಮಿತ್ಯನ್ಯೇ ಆಹುಃ, ಉಷಸಮಿತ್ಯನ್ಯೇ | 
ತಾಮೃಶ್ಯೋ ಭೂತ್ವಾ ರೋಹಿತಂ ಭೂತಾಮಭ್ಯೈತ್ | 
ತಂ ದೇವಾ ಅಪಶ್ಯನ್-ಅಕೃತಂ ವೈ ಪ್ರಜಾಪತಿಃ ಕರೋತಿ, ಇತಿ | 
ತೇ ತಮೈಚ್ಛನ್-ಯ ಏನಮಾರಿಷ್ಯತಿ | 
ಏತಮನ್ಯೋಽನ್ಯಸ್ಮಿನ್ನಾವನ್ದನ್ | 
ತೇಷಾಂ ಯಾ ಏವ ಘೋರತಮಾಸ್ತನ್ವ ಆಸನ್, ತಾ ಏಕಧಾ ಸಮಭರನ್ | 
ತಾಃ ಸಮ್ಭೃತಾ ಏಷ ದೇವೋಽಭವತ್, ತದಸ್ಯೈತದ್ ಭೂತವನ್ನಾಮ | 
ತಂ ದೇವಾ ಅಬ್ರುವನ್-ಅಯಂ ವೈ ಪ್ರಜಾಪತಿರಕೃತಮಕಃ, ಇಮಂ ವಿಧ್ಯೇತಿ | 
ಸ ತಥೇತ್ಯಬ್ರವೀತ್ | ಸ ವೈ ವೋ ವರಂ ವೃಣಾ ಇತಿ | ವೃಣೀಷ್ವೇತಿ | 
ಸ ಏತಮೇವ ವರಮವೃಣೀತ-ಪಶೂನಾಮಾಧಿಪತ್ಯಮ್ | 
ತದಸ್ಯೈತತ್ ಪಶುಮನ್ನಾಮ | ತಮಭ್ಯಾಯತ್ಯಾವಿಧ್ಯತ್ | 
ಸ ವಿದ್ಧ ಊರ್ಧ್ವ ಉದಪ್ರಪತತ್ | ತಮೇತಂ ಮೃಗ ಇತ್ಯಾಚಕ್ಷತೇ | 
ಯ ಉ ಏವ ಮೃಗವ್ಯಾಧಃ, ಸ ಉ ಏವ ಸಃ | ಯಾ ರೋಹಿತ್, ಸಾ ರೋಹಿಣೀ | ಯಾ ಉ ಏವೇಷುರಿಸ್ತ್ರಿಕಾಣ್ಡಾ, ಸಾ ಉ ಏವೇಷುಸ್ತ್ರಿಕಾಣ್ಡಾ” ಇತಿ |
(ಐತರೇಯ ಬ್ರಾಹ್ಮಣ ೧೩-೧೦)

ಭೋಗಾರ್ಥ:- ಒಮ್ಮೆ ಪ್ರಜಾಪತಿಯು ತನ್ನ ಕನ್ಯೆಯ ಹಿಂದೆ ಓಡಿದನು. ಹರಿಣಿಯಾಗಿ ಓಡುವ ತರುಣಿಯನ್ನು ಪ್ರಜಾಪತಿಯು ಹರಿಣವಾಗಿ ಹಿಂಬಾಲಿಸಿದನು. ದೇವತೆಗಳು ಈ ದೃಶ್ಯವನ್ನು ನೋಡಿದರು. ಪ್ರಜಾಪತಿಯು ಅನುಚಿತ ಕರ್ಮ್ಮವನ್ನು ಮಾಡುತ್ತಿದ್ದಾನೆ ಎಂದು ನಿಶ್ಚಯ ಮಾಡಿಕೊಂಡರು. ದೇವತೆಗಳು ತಮ್ಮ ಮಣ್ಡಲಿಯಲ್ಲಿ ಪ್ರಜಾಪತಿಯನ್ನು ದಣ್ಡಿಸಲು ಶಕ್ತನಾದಂತಹಾ ವ್ಯಕ್ತಿಯನ್ನು ಹುಡುಕಿದರು. ಆದರೆ ಅವರಲ್ಯಾರೂ ಇದಕ್ಕೆ ಯೋಗ್ಯರೆಂದು ಪ್ರತೀತವಾಗಲಿಲ್ಲ. ಕೊನೆಗೆ ದೇವತೆಗಳು ತಮ್ಮ ಘೋರತಮಭಾಗವನ್ನು (ಕ್ರೋಧಾಗ್ನಿಯ) ಒಂದು ಸ್ಥಾನದಲ್ಲಿ ಸಞ್ಚಯಿಸಿದರು. ಅದೇ ಸಞ್ಚಿತ ತೇಜೋಭಾಗವು ‘ನೀಲಕಣ್ಠ’ ಎಂಬ ರುದ್ರದೇವತೆ ಎಂದು ಕರೆಯಲ್ಪಟ್ಟಿತು. ಇದೇ ‘ಭೂತಪತಿ’ (ಭೂತವಾನ್) ಎಂದು ಪ್ರಸಿದ್ಧವಾಯಿತು. ಈ ದೇವತೆಯನ್ನು (ತಮ್ಮ ಸಞ್ಚಿತ ಕ್ರೋಧದಿಂದ ಉತ್ಪನ್ನವಾದ ಕ್ರೋಧಮೂರ್ತ್ತಿಯನ್ನು) ಕುರಿತು ದೇವತೆಗಳು ಇಂತೆಂದರು, ಪ್ರಜಾಪತಿಯು ಅನುಚಿತ ಕರ್ಮ್ಮ ಮಾಡುತ್ತಿದ್ದಾನೆ, ನೀವು ಇವನಿಗೆ ನಿಮ್ಮ ಶರದಿಂದ ಶಿಕ್ಷಿಸಿರಿ. “ಈ ಕರ್ಮ್ಮವನ್ನು ಮಾಡಿದರೆ, ನಾನು ಪಶುಪತಿ ಎಂದು ಕರೆಯಲ್ಪಡುತ್ತೇನೆ” ಎಂದು ರುದ್ರನು ಸದೃಢನಾಗಿ ನಿಂತು ತನ್ನ ಶರದಿಂದ ಪ್ರಜಾಪತಿಯನ್ನು ಶಿಕ್ಷಿಸಿದನು. ಪ್ರಜಾಪತಿಯ ಮಸ್ತಕವು ಕತ್ತರಿಸಿ ಬೇರೆಯಾಗಿ ಬಿದ್ದಿತು. ಅದೇ ‘ಮೃಗ’ (ಮೃಗಶಿರಾ) ಎಂದು ಪ್ರಸಿದ್ಧವಾಯಿತು. ಸ್ವಯಂ ರುದ್ರದೇವನೂ ‘ಮೃಗವ್ಯಾಧ’ (Deer hunter, ಮೃಗವನ್ನು ಕೊಲ್ಲುವ ಶಿಕಾರೀ) ಎಂದು ಪ್ರಸಿದ್ಧನಾಗಿದ್ದಾನೆ. ರೋಹಿಣಿಯೇ ಪ್ರಜಾಪತಿಯ ದುಹಿತಾ. ತ್ರಿಕಾಣ್ಡ ನಕ್ಷತ್ರವೇ ರುದ್ರನ ಕೈಯಿಂದ ಹೊರಟ ಶರ”.

ಗೂಢಾರ್ಥ / ನೈಜಾರ್ಥ :- 
ನಕ್ಷತ್ರಸಂಸ್ಥಾವನ್ನು ಗುರುತಿಸಲು ಶಕ್ತರಾದ ಓದುಗರಿಗೆ ದ್ಯುಪ್ರದೇಶದಲ್ಲಿ ‘ಕೃತ್ತಿ’ಯ ಆಕಾರದ (ನಾಪಿತನ ಕತ್ತರಿಯ ಆಕಾರದ) ಸುಪ್ರಸಿದ್ಧ ಆಗ್ನೇಯ ‘ಕೃತ್ತಿಕಾ ನಕ್ಷತ್ರ’ (Pleiades) ಇರುವುದು ತಿಳಿದಿರುತ್ತದೆ. ಈ ಕೃತ್ತಿಕಾ ನಕ್ಷತ್ರಕ್ಕೂ ಹಿಂದೆ ‘ಲುಬ್ಧಕ’ ಎಂಬ ಪ್ರಸಿದ್ಧವಾದಂತಹಾ ನೀಲಕಣ್ಠ ಮಹಾದೇವನಿಂದ ಪಶ್ಚಿಮದಲ್ಲಿ,  ಶಶ ಲಾಞ್ಛನ ಲಕ್ಷಣವುಳ್ಳ ‘ಚನ್ದ್ರಮಾ ನಕ್ಷತ್ರ’, ಹಾಗೂ ಶ್ಯಾವ-ಶಬಲ ಎಂಬ ಹೆಸರಿನ ಶ್ವಾನನಕ್ಷತ್ರದಿಂದ (Dog star or Sirius) ಉತ್ತರದಲ್ಲಿ, ‘ಪುನರ್ವಸು’ ಎಂಬ ೨ ನಕ್ಷತ್ರಗಳಿಂದ ಉತ್ತರದಲ್ಲಿ, ಇಷ್ಟು ದ್ಯುಪ್ರದೇಶಗಲ್ಲಿ ಎಷ್ಟು ಅವಾನ್ತರ ನಕ್ಷತ್ರಗಳಿವೆಯೋ, ಅವೆಲ್ಲವನ್ನೂ ಆಧಾರವಾಗಿಸಿಕೊಂಡೇ ಪೂರ್ವಾಖ್ಯಾನದ ಸೃಷ್ಟಿಯಾಗಿದೆ. ದ್ಯುಪ್ರದೇಶದಿಂದ ಉಪಲಕ್ಷಿತ ಸುಪ್ರಸಿದ್ಧ ರೋಹಿಣೀ ನಕ್ಷತ್ರವನ್ನು ಆರೋಪಿಸಿಯೂ ಈ ಕಥೆಯನ್ನು ಸಮನ್ವಯ ಮಾಡಬಹುದು. ಹಾಗೂ ಉಷಃಕಾಲೋಪಲಕ್ಷಿತ ‘ಔಷಸೀ’ಯನ್ನು ಆರೋಪಿಸಿಯೂ ಸಮನ್ವಯಗೊಳಿಸಲು ಸಾಧ್ಯ. ಇದೇ ಆಧಾರದಲ್ಲಿ ಶ್ರುತಿಯು ಹೇಳಿದೆ – ‘ದಿವಮಿತ್ಯನ್ಯೇ ಆಹುಃ, ಉಷಸಮಿತ್ಯನ್ಯೇ’.


ಕೃತ್ತಿಕಾ ನಕ್ಷತ್ರದಿಂದ (ಸ್ವಲ್ಪವೇ) ಪೂರ್ವ ದಿಕ್ಕಿನಲ್ಲಿ ಶಕಟಾಕಾರ (ಆಂಗ್ಲದ A ಅಥವಾ V ಅಕ್ಷರದಂತಹಾ) ರಕ್ತವರ್ಣಾತ್ಮಕ ಪಞ್ಚತಾರಾತ್ಮಕ ಒಂದು ನಕ್ಷತ್ರವಿದೆ. ರೋಹಿತ (ಲೋಹಿತ) ವರ್ಣ ಹೊಂದಿರುವುದರಿಂದ ಇದನ್ನು ‘ರೋಹಿಣೀ’ (Aldebaran) ಎಂದು ಕರೆಯಲಾಗಿದೆ. ತನ್ತ್ರಶಾಸ್ತ್ರದ ಮತಾನುಸಾರ ಇದೇ ದಶಮಹಾವಿಧ್ಯಾಪ್ರಕರಣದ ‘ಕಮಲಾ’ (ಲಕ್ಷ್ಮೀ) ಆಗಿದೆ. ಇದರ ದರ್ಶನದಿಂದ ಭಾಗ್ಯವೃದ್ಧಿ ಎಂದು ನಂಬಿಕೆ ಇದೆ. ಅಭ್ಯುತ್ಥಾನಲಕ್ಷಣವುಳ್ಳ ಆರೋಹಣಧರ್ಮ್ಮದಿಂದಲೂ ಇದನ್ನು ‘ರೋಹಿಣೀ’ ಎನ್ನುವುದು ಅನ್ವರ್ಥಕವೇ ಆಗುತ್ತದೆ. ಈ ರೋಹಿಣೀ ನಕ್ಷತ್ರದಿಂದ ಸರಿಯಾಗಿ ಷಡ್ಭಾನ್ತರದಲ್ಲಿ (೧೮೦ ಅಂಶದಲ್ಲಿ) ಸಮಸಮ್ಮುಖ ದಕ್ಷಿಣಾಕಾಶದಲ್ಲಿ ವೃಶ್ಚಿಕ ರಾಶಿಗೆ ಸಮ್ಬನ್ಧಿಸಿದ ಇನ್ನೊಂದು ಜ್ಯೋತಿರ್ಮ್ಮಯ ನಕ್ಷತ್ರವಿದೆ, ಅದು ‘ಜ್ಯೇಷ್ಠಾ’ ಎಂದು ಪ್ರಸಿದ್ಧವಾಗಿದೆ. ತನ್ತ್ರಶಾಸ್ತ್ರವು ಇದನ್ನೇ ‘ಧೂಮಾವತೀ’ (ಅಲಕ್ಷ್ಮೀ) ಎಂದು ನಂಬಿದೆ. ಇದೇ ಅವರೋಹಿಣೀಲಕ್ಷಣವುಳ್ಳ ನಿಋ೯ತಿದೇವತೆ, ದರಿದ್ರಾ ಆಗಿದೆ. ಇದರ ದರ್ಶನವು ಅಶುಭದಾಯಕವೆಂದು ನಂಬಿಕೆ ಇದೆ. ಯಾರು ಈ ನಕ್ಷತ್ರದಲ್ಲಿ ಉತ್ಪನ್ನರಾಗುವರೋ, ಅವರು ಭಾಗ್ಯಹೀನರೆಂಬ ನಂಬಿಕೆ ಇದೆ. (ಸೂ:- ಸಾರ್ವತ್ರಿಕವಾಗಿ ಈ ಫಲಜ್ಯೋತಿಷ್ಯದ ನಂಬಿಕೆಗಳೆಲ್ಲ ಸತ್ಯವೆಂದು ಕಂಡುಬರುವುದಿಲ್ಲ, ವೈಯಕ್ತಿಕ ನೆಲೆಘಟ್ಟಿನಲ್ಲಿ ಮಾತ್ರ ಚಿಂತನೀಯ!)ರೋಹಿಣೀ ನಕ್ಷತ್ರದಿಂದ ಈಶಾನಕೋಣದತ್ತ ‘ಬ್ರಹ್ಮಹೃದಯ’ (Capella) ಎಂಬ ಯಾವ ನಕ್ಷತ್ರವಿರುವುದೋ, ಅದು ಪ್ರಜಾಪತಿಯ ಭಗ್ನಶರೀರವಾಗಿದೆ. ರೋಹಿಣೀ ನಕ್ಷತ್ರದ ಪೂರ್ವದಲ್ಲಿ ಮೃಗಪಶುಮಸ್ತಕಾಕೃತಿರೂಪೀ ಮೃಗಶಿರಾ ನಕ್ಷತ್ರವು ಪ್ರಜಾಪತಿಯ ಭಗ್ನ ಮಸ್ತಕವಾಗಿದೆ. ಈ ಮಸ್ತಕ ರೂಪೀ ಮೃಗಶಿರಾ ನಕ್ಷತ್ರದಲ್ಲಿ ೩ ತೇಜಸ್ವೀ ತಾರೆಗಳ ಸಮ್ಬನ್ಧವಿದೆ (Sirius B, A, C). ಅದೇ ರುದ್ರನ ಹಸ್ತದಿಂದ ಹೊರಟ ಶರವಾಗಿದೆ. ರೋಹಿಣೀ ನಕ್ಷತ್ರದ ಹಿಂದೆ ಅಗ್ನಿಕೋಣದತ್ತ ಮಹಾತೇಜಸ್ವೀ, ನೀಲವರ್ಣದ ಯಾವ ಒಂದು ಚಮತ್ಕಾರಪೂರ್ಣವಾದಂತಹಾ ನಕ್ಷತ್ರವಿರುವುದೋ, ಅದು ‘ಲುಬ್ಧಕ’ವೆಂದು (Siriyas) ಪ್ರಸಿದ್ಧವಾಗಿದೆ. ಇದೇ ನೀಲಕಣ್ಠ ಮಹಾದೇವವು. ಸೂರ್ಯ್ಯತಾಪವು ಯಾವ ವಸ್ತುವನ್ನು ೨೪ ಘಣ್ಟೆಯಲ್ಲಿ ದ್ರುತಗೊಳಿಸುತ್ತದೆಯೋ, ಲುಬ್ಧಕತಾಪವು ಅದನ್ನು ಕ್ಷಣಮಾತ್ರದಲ್ಲಿ ಭಸ್ಮಗೊಳಿಸುವ ಶಕ್ತಿ ಹೊಂದಿರುತ್ತದೆ. ದೌರ್ಭಾಗ್ಯವಶಾತ್ ಒಂದುವೇಳೆ ಸೂರ್ಯ್ಯವು ಲುಬ್ಧಕ ಸನ್ನಿಕಟ ತಲುಪಿದರೆ, ಸೂರ್ಯ್ಯನೂ ಕ್ಷಣಮಾತ್ರದಲ್ಲಿ ಬಾಷ್ಪರೂಪವಾಗಿ ಉತ್ಕ್ರಾನ್ತವಾಗುತ್ತದೆ. ಯಾವ ರೀತಿ ಉದುಮ್ಬರ ಫಲದಲ್ಲಿ ಸಮ್ಪೂರ್ಣ ಓಷಧಿಗಳ ತತ್ತ್ವವು ಸಂಗೃಹೀತವಾಗಿರುತ್ತದೆಯೋ, ಹಾಗೆಯೇ ಲುಬ್ಧಕ ನಕ್ಷತ್ರದಲ್ಲಿ ಭಚಕ್ರಸ್ಥ ಸಮ್ಪೂರ್ಣ ನಕ್ಷತ್ರಗಳ ತತ್ತ್ವವು ಸಂಗೃಹೀತವಾಗಿರುತ್ತದೆ. ಆದ್ದರಿಂದ ಇದನ್ನು ‘ಪಶುಪತಿ’ ಎಂದು ಕರೆಯುವುದು ಅನ್ವರ್ಥಕವಾಗುತ್ತದೆ.ಈ ರೀತಿ ದ್ಯುಪ್ರದೇಶೋಪಲಕ್ಷಿತ್ರ ರೋಹಿಣೀ ನಕ್ಷತ್ರದ ಆಧಾರದಲ್ಲಿ ಪ್ರತಿಷ್ಠಿತ ಈ ನಾಕ್ಷತ್ರಿಕ ಆಖ್ಯಾನ ಆದೇಶ ಶಿಕ್ಷಾದೊಂದಿಗೆ ನಕ್ಷತ್ರವಿಧ್ಯೆಯನ್ನು ಚೆನ್ನಾಗಿ ಸ್ಪಷ್ಟೀಕರಿಸುತ್ತಿದೆ. ಇದರ ವಿಶದ ತಾತ್ತ್ವಿಕ ವಿವೇಚನೆಯು ಅನ್ಯತ್ರ ನೋಡಬಹುದು. ಪ್ರಕೃತದಲ್ಲಿ ವಕ್ತವ್ಯಾಂಶವೇನೆಂದರೆ, ನಕ್ಷತ್ರಗಳಲ್ಲಿರುವ ಪ್ರಾಣವೂ ಸೃಷ್ಟಿಪ್ರವರ್ತ್ತಕ ಋಷಿ ಎಂದೇ ನಂಬಲಾಗಿದೆ. ಈ ನಾಕ್ಷತ್ರಿಕ ಋಷಿಪ್ರಾಣಗಳಲ್ಲಿ ಸುಪ್ರಸಿದ್ಧ ‘ಸಪ್ತರ್ಷಿಮಣ್ಡಲ’ವಂತೂ ಪ್ರಸಿದ್ಧವಾಗಿಯೇ ಇದೆ, ಏಕೆಂದರೆ ಇದು ಧ್ರುವ ನಕ್ಷತ್ರದ ನಾಲ್ಕೂ ಕಡೆ ಅಹೋರಾತ್ರಿಯಲ್ಲಿ ಒಂದು ಪರಿಕ್ರಮಣ ಮಾಡುತ್ತದೆ. ಇದೇ ಸಪ್ತರ್ಷಿಗಳನ್ನು (ಕರಡಿಯ ಆಕೃತಿಯಂತಿರುವುದರಿಂದ) ‘ಋಕ್ಷ’ ಎಂದೂ ವ್ಯವಹೃತಗೊಳಿಸಲಾಗಿದೆ. ಯಾವ ಸಮಯದಲ್ಲಿ ಆಗ್ನೇಯ ಕೃತ್ತಿಕಾ ನಕ್ಷತ್ರದ ಮೇಲೆ ಅಯನ-ಸಮ್ಪಾತವಿತ್ತೋ, ಆ ಸಮಯದಲ್ಲಿ ಈ ಕೃತ್ತಿಕಾನಕ್ಷತ್ರಗಳನ್ನು (ಸಂಖ್ಯೆಯಲ್ಲಿ ೭ ಇರುವ) ಸಪ್ತರ್ಷಿಗಣದ ಪತ್ನೀ ಎಂದು ನಂಬಲಾಗುತ್ತಿತ್ತು. ಇದು ನಿಮ್ನಲಿಖಿತ ಬ್ರಾಹ್ಮಣ-ಶ್ರುತಿಯಿಂದ ಪ್ರಮಾಣಿತವಾಗಿದೆ –

ಏಕಂ, ದ್ವೇ, ತ್ರೀಣಿ, ಚತ್ತ್ವಾರೀತಿ ವಾಽನ್ಯಾನಿ ನಕ್ಷತ್ರಾಣಿ | ಅಥೈತಾ ಏವ-ಭೂಯಿಷ್ಠಾಃ, ಯತ್ ಕೃತ್ತಿಕಾಃ | ಏತಾ ಹ ವೈ ಪ್ರಾಚ್ಯೈ ದಿಶೋ ನ ಚ್ಯವನ್ತೇ | ಸರ್ವಾಣಿ ಹ ವಾಽನ್ಯಾನಿ ನಕ್ಷತ್ರಾಣಿ ಪ್ರಾಚ್ಯೈ ದಿಶಶ್ಚ್ಯಾವನ್ತೇ | ಋಕ್ಷಾಣಾಂ ಹ ವಾಽಏತಾ ಅಗ್ರೇ ಪತ್ನ್ಯ ಆಸುಃ | ಸಪ್ತರ್ಷೀ ನು ಹ ಸ್ಮ ವೈ ಪುರರ್ಕ್ಷಾ ಇತ್ಯಾಚಕ್ಷತೇ | ಅಮೀ ಹ್ಯುತ್ತರಾ ಹಿ ಸಪ್ತರ್ಷಯ ಉದ್ಯನ್ತಿ, ಪುರ ಏತಾಃ” |
ಶತಪಥ ಬ್ರಾಹ್ಮಣ ೨-೨-೧-೩ಈ ಸಪ್ತರ್ಷಿಮಣ್ಡಲವನ್ನು ಹೊರತುಪಡಿಸಿ ಇನ್ನೊಂದು ಸಣ್ಣ ಸಪ್ತರ್ಷಿಮಣ್ಡವೂ ಇದೆ. ಇದರ ಸಮ್ಬನ್ಧವು ಧ್ರುವಸಪ್ತಕದೊಂದಿಗಿದೆ. ಈ ಸಪ್ತರ್ಷಿಗಣವು ‘ಸಪ್ತಮಾತಾ’ (Pleiades star system) ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ, ಹಾಗೂ ಇದೇ ಧ್ರುವದ ಗುರುತಾಗಿದೆ. ಈ ಏಳರಲ್ಲಿ ೬ ನಕ್ಷತ್ರಗಳು ತಿರುಗುತ್ತಿರುತ್ತವೆ, ಒಂದು ನಕ್ಷತ್ರವು ತಿರುಗುವಂತೆ ಕಾಣುವುದಿಲ್ಲ. ಹಾಗಾಗಿ ಇದನ್ನು ‘ಧ್ರುವ’ ಎಂದು ಕರೆದರು. ವಾಸ್ತವಿಕವಾಗಿ ಧ್ರುವ ಎಂಬುದು ಯಾವುದೇ ನಕ್ಷತ್ರದ ಹೆಸರಲ್ಲ. ಆದರೆ ಧ್ರುವ ಎಂಬುದು ಒಂದು ನಿರಾಕಾರ ವಿದ್ಯುತ್ಪ್ರಾಣವಾಗಿದೆ. ಇದರ ಆಕರ್ಷಣೆಯಿಂದ ಆಕರ್ಷಿತ ಭೂಪಿಣ್ಡವು ಸ್ವಾಕ್ಷಪರಿಭ್ರಮಣದಿಂದ ದೈನಂದಿನಗತಿಯ ಪ್ರವರ್ತ್ತಕವಾಗುತ್ತಿದೆ. ಈ ವಿದ್ಯುತ್ಪ್ರಾಣವು ಪಾರ್ಥಿವ ವಿಷ್ವದ್ವೃತ್ತದ ಆಧಾರಭೂಮಿಯಾಗುತ್ತಾ ನಾಕಸ್ಥ ವಿಷ್ಣುವಿನ ನಾಲ್ಕೂ ಕಡೆ ಪರಿಕ್ರಮ ಮಾಡುತ್ತಿರುತ್ತದೆ. ಹಾಗೂ ಇದರ ಒಂದು ಪರಿಕ್ರಮವು ೨೫ ಸಾವಿರ ವರ್ಷದಲ್ಲಿ ಸಮಾಪ್ತವಾಗುತ್ತದೆ. ಯಾವ ಸಮಯದಲ್ಲಿ ಯಾವ ಸ್ಥಾನದಲ್ಲಿ ಈ ಧ್ರುವ ವಿದ್ಯುತ್‍ಪ್ರಾಣವು ಪ್ರತಿಷ್ಠಿತವಾಗಿರುತ್ತದೆಯೋ, ಅಲ್ಲಿನ ಸ್ಥೂಲ ನಕ್ಷತ್ರವನ್ನು (ಪರಿಚಯಕ್ಕಾಗಿ) ಧ್ರುವ ಎಂಬ ಹೆಸರನ್ನು ಕೊಡಲಾಗುತ್ತದೆ. ಇದೇ ಸಾಮಾನ್ಯ ಪರಿಭಾಷಾನುಸಾರ ಇಂದು ನಾವು ಧ್ರುವನಕ್ಷತ್ರವೆಂಬ ಹೆಸರಿನ ಒಂದು ನಕ್ಷತ್ರವನ್ನು ಕಲ್ಪಿಸಿಕೊಂಡಿದ್ದೇವೆ. ವಾಸ್ತವದಲ್ಲಿ ಧ್ರುವನಕ್ಷತ್ರವು ಈ ಏಳರಿಂದಲೂ ಭಿನ್ನವಾದಂತಹಾ, ಏಳನೇ ನಕ್ಷತ್ರದಿಂದ ಉಪಲಕ್ಷಿತ್ರ ಧ್ರುವಪ್ರಾಣವಾಗಿದೆ. ಏಳನೆಯ ಸ್ಥೂಲನಕ್ಷತ್ರವೇ ಇದರ ಉಪಾಸನೆಯ ಮಹಾದ್ವಾರವು. ಒಂದುವೇಳೆ ನಿಯಮಪೂರ್ವಕ ಧ್ರುವದ ಉಪಾಸನೆ ಮಾಡಿದರೆ, ನಮ್ಮ ಮೇಧಾ, ಶ್ರೀ, ಸಮ್ಪತ್ ಎಲ್ಲದರ ವೃದ್ಧಿಯಾಗುತ್ತದೆ. ನಿಯಮಬದ್ಧವಾಗಿ ಧ್ರುವದರ್ಶನ ಮಾಡುವುದೇ ಧ್ರುವೋಪಾಸನೆಯಾಗಿದೆ. ಇದನ್ನು ನಿಮ್ನಲಿಖಿತ ಮನ್ತ್ರವರ್ಣನೆಯು ಸ್ಪಷ್ಟಪಡಿಸುತ್ತಿದೆ –

ಜಜ್ಞಾನಃ ಸಪ್ತ ಮಾತೃಭಿರ್ಮೇಧಾಮಾಶಾಸತ ಶ್ರಿಯೇ |
ಅಯಂ ಧ್ರುವೋ ರಯೀಣಾಂ ಚಿಕೇತದಾ ||
ಸಾಮಸಂಹಿತಾ ಪೂ. ೨-೧

ಇದನ್ನು ಹೊರತುಪಡಿಸಿ ಜಮದಗ್ನಿ, ಅಪಾಂವತ್ಸ, ನಾರದ, ತುಮ್ಬುರು, ಯಾಮ್ಯಮತ್ಸ್ಯ, ಭೃಗು, ಅಙ್ಗಿರಾ, ಆದಿತ್ಯ, ಅಗ್ನಿ, ವರುಣ, ಯಮ, ನಿಋ೯ತಿ, ಬೃಹಸ್ಪತಿ, ಸವಿತಾ, ಇತ್ಯಾದಿ ಇನ್ನೂ ಅನನ್ತ ನಾಕ್ಷತ್ರಿಕ ಋಷಿಪ್ರಾಣಗಳಿವೆ. ಇವುಗಳು ಭಿನ್ನ ಭಿನ್ನ ಸೃಷ್ಟಿಕರ್ಮ್ಮಗಳಲ್ಲಿ ವ್ಯವಸ್ಥಿತ ರೂಪದಿಂದ ಉಪಯೋಗವಾಗುತ್ತಿವೆ. ಇದೇ ರೋಚನಾಲಕ್ಷಣ-ಋಷಿಯ ಎರಡನೇ ವಿಭಾಗವಾಗಿದೆ. ಹಾಗೂ ಇದೇ ಋಷಿಶಬ್ದದ ಎರಡನೆಯ ವ್ಯಾಪ್ತಿಯಾಗಿದೆ.

ಇಂತು ಸಜ್ಜನ ವಿಧೇಯ,
ಹೇಮಂತ್ ಕುಮಾರ್ ಜಿ.

Tuesday, 26 March 2019

ವೇದದ ಮೌಲಿಕ ಸ್ವರೂಪ : ವೇದದ ‘ಋಷಿ’ ಪದಾರ್ಥ : ೧. ಅಸಲ್ಲಕ್ಷಣ ಋಷಿ (೯)

ಋಷಿ, ಪಿತರ, ದೇವ, ಅಸುರ, ಗನ್ಧರ್ವ, ಪಶು ಆದಿ ಎಲ್ಲಾ ವೈಧಿಕ ಪದಾರ್ಥಗಳು ವರ್ತ್ತಮಾನ ಯುಗದಲ್ಲಿ ಒಂದು ಒಗಟಾಗುತ್ತಿರುವುದು ಏಕೆಂದರೆ, ಇವುಗಳ ತಾತ್ತ್ವಿಕ, ಪ್ರಾಣಾತ್ಮಕ ಸ್ವರೂಪವಾದ ವೇದಸ್ವಾಧ್ಯಾಯಪರಮ್ಪರೆಯ ವಿಲುಪ್ತಿಯಿಂದ ವಿಲುಪ್ತವಾಗಿಬಿಟ್ಟಿದೆ. ಈ ತತ್ತ್ವಾತ್ಮಕ ಋಷಿ-ಪಿತರ-ದೇವಾದಿ ಪ್ರಾಣವಿಶೇಷಗಳ ಸ್ವರೂಪಜ್ಞಾನಾಭಾವದಿಂದಲೇ ತತ್ತ್ವಾತ್ಮಕ ವೇದಶಾಸ್ತ್ರವು ಕೇವಲ ಪುಣ್ಯಪಾಠದ ಸಾಮಗ್ರಿಯಾಗಿ ಉಳಿದಿದೆ, ಪರಲೋಕದ ಪ್ರಮಾಣಪತ್ರಪ್ರದಾತಾ ಆಗಿಸಿಬಿಟ್ಟಿದ್ದಾರೆ. ಇದೇ ಕಾರಣದಿಂದ, ಇಂದಿನ ಈ ತತ್ತ್ವಾನ್ವೇಷಣೆ ಯುಗದಲ್ಲಿ ನಾವು ಎಂದು ಪ್ರಪಂಚದ ಮುಂದೆ ವೇದಶಾಸ್ತ್ರದ ಚರ್ಚೆ ಇಡುತ್ತೇವೆಯೋ, ಆಗ ಶಿಕ್ಷಿತ ಸಮಾಜದ ಅನ್ತರ್ಜಗತ್ತು ಕ್ಷುಬ್ಧವೆಂಬಂತೆ ವರ್ತಿಸುತ್ತದೆ. ಅವರ ದೃಷ್ಟಿಯಲ್ಲಿ ವೇದಶಾಸ್ತ್ರ, ತದನುಗತ ಸ್ಮೃತಿಶಾಸ್ತ್ರ, ಪುರಾಣಶಾಸ್ತ್ರ, ಇತ್ಯಾದಿಯ ಸಮಷ್ಟಿರೂಪ ಭಾರತೀಯ ಶಾಸ್ತ್ರವು ತತ್ತ್ವವಾದಶೂನ್ಯವಾಗಿದ್ದು ಕೇವಲ ಪಾರಲೌಕಿಕ ಸುಖಾನುಗತ ಸ್ವಾಪ್ನಜಗತ್ತಾಗಿದೆ, ಇದರಿಂದ ಐಹಲೌಕಿಕ ಕರ್ಮ್ಮಕಲಾಪದಲ್ಲಿ ಯಾವುದೇ ಉಪಯೋಗವಾಗಲಿ, ಲಾಭವಾಗಲಿ ಇಲ್ಲ. ಸುಸೂಕ್ಷ್ಮ ಪ್ರಾಣಜಗತ್ತಿನ ಮೊದಲ ಆವಿಷ್ಕಾರಕ ಭಾರತವರ್ಷವು ಈ ರೀತಿ ಸ್ಥೂಲ ಜಗತ್ತಿನ ಉಪಾಸಕವಾಗುತ್ತದೆ, ಪ್ರಾಣವಿಧ್ಯೆಯ ಸ್ಥಾನವನ್ನು ಪ್ರಾಣಿ-ವಿಧ್ಯೆಯು ಗ್ರಹಿಸುತ್ತದೆ, ತತ್ತ್ವವಾದದ ಆಸನವನ್ನು ರೂಢಿಮೂಲಕ ಕಲ್ಪನಾವಾದವು ಕಿತ್ತುಕೊಳ್ಳುತ್ತದೆ, ಹಾಗೂ ಇವೇ ವಿಡಮ್ಬನೆಗಳಿಂದ ನಾವು ಸತ್ಯವಾಗಿ ನಮ್ಮ ಮೌಲಿಕ, ತಾತ್ತ್ವಿಕ ಸಾಹಿತ್ಯದಿಂದ ವಞ್ಚಿತರಾಗುತ್ತೇವೆ, ಈ ದೋಷವನ್ನು ಯಾರಿಗೆ ಕೊಡುವುದು? ನಾವು ನಮ್ಮ ದೋಷವನ್ನು ಇನ್ನೊಬ್ಬರ ವ್ಯಾಜದಿಂದ ಹೇಗೆ ಮುಚ್ಚಿಡುವುದು? ಅವಶ್ಯವಾಗಿ ನಾವು ನತಮಸ್ತಕರಾಗಿ ಸ್ವೀಕರಿಸಬೇಕಾದ್ದೇನೆಂದರೆ, ಏಕಮಾತ್ರ ನಮ್ಮ ಪ್ರಜ್ಞಾಪರಾಧದಿಂದಲೇ ಈ ಎಲ್ಲಾ ವಿಡಮ್ಬನೆಗಳು ಉಪಸ್ಥಿತವಾಗಿವೆ, ಇದರ ಪರಿಶೋಧದ ಏಕಮಾತ್ರ ಉಪಾಯವೆಂದರೆ – ‘ತಾತ್ತ್ವಿಕ ದೃಷ್ಟಿಗೆ ಸಮ್ಬನ್ಧಿಸಿದ ವಿಲುಪ್ತಪ್ರಾಯ ವೇದಸ್ವಾಧ್ಯಾಯಪರಮ್ಪರೆಯ (ಆರ್ಷಪರಮ್ಪರೆಯ) ಪುನರುಜ್ಜೀವನ, ಇದರ ಮೂಲದಲ್ಲಿ ಋಷಿತತ್ತ್ವವು ಪ್ರತಿಷ್ಠಿತವಾಗಿದೆ. ಹಾಗೂ ಋಷಿತತ್ತ್ವಪ್ರತಿಷ್ಠಾದಿಂದಲೇ ಈ ಪರಮ್ಪರೆಯು ‘ಆರ್ಷಪರಮ್ಪರೆ’ ಎಂದು ಕರೆಯಲ್ಪಟ್ಟಿದೆ. ಆರ್ಷಪರಮ್ಪರೆಯ ಸರ್ವಸ್ವಭೂತ ಈ ಋಷಿತತ್ತ್ವವನ್ನು ಸಂಕ್ಷೇಪವಾಗಿ ಪರಿಚಯ ಮಾಡಿಸುವುದೇ ಪ್ರಕೃತ ಪರಿಚ್ಛೇದದ ಮುಖ್ಯ ಉದ್ದೇಶ್ಯವಾಗಿದೆ.

ಶಾಸ್ತ್ರಗಳಲ್ಲಿ ಪ್ರತಿಪಾದಿತ ‘ಋಷಿ’ ತತ್ತ್ವವು ಯಾವ ಋಷಿಗಳ ಮುಖೇನ ಆರ್ಷದೃಷ್ಟಿಯ ವಿಷಯವಾಗಿದೆಯೋ, ಯಾವ ಋಷಿತತ್ತ್ವದ ಸಾಕ್ಷಾತ್ಕಾರದಿಂದ ಶಾಸ್ತ್ರಕಾರರು ಸ್ವಯಂ ‘ಋಷಿ’ ಎಂಬ ಉಪಾಧಿಯ ಅಧಿಕಾರೀ ಆಗಿದ್ದಾರೆಯೋ, ತತ್ತ್ವಾತ್ಮಕ ಋಷಿಗಳ ಯಾವ ಪ್ರಾಕೃತಿಕ ಕರ್ಮ್ಮವು ಈ ಮನುಷ್ಯ-ಋಷಿಗಳೊಂದಿಗೆ ಅಭೇದಬುದ್ಧಿಯಿಂದ (ಪುರಾಣಗಳಲ್ಲಿ) ಪ್ರತಿಪಾದಿತವಾಗಿದೆಯೋ, ಆ ತತ್ತ್ವ ಋಷಿಯು ಹೇಗೆ ಪ್ರಕೃತ ಪರಿಚ್ಛೇದದ ಮುಖ್ಯ ಉದ್ದೇಶ್ಯವಾಗಿದೆಯೋ, ಹಾಗೆಯೇ ಪ್ರಸಙ್ಗತಃ ಮನುಷ್ಯ-ಋಷಿಗಳ ಬಗ್ಗೆಯೂ ವಿಚಾರ ಮಾಡುವುದು ಅಪ್ರಾಸಙ್ಗಿಕವೇನಲ್ಲ. ಋಷಿ ಶಬ್ದವು ಅನೇಕ ಸ್ಥಾನಗಳಲ್ಲಿ ವ್ಯಾಪ್ತವಾಗಿರುವುದರಿಂದ ಇದನ್ನು ನಾವು ನಾಲ್ಕು ಭಾಗಗಳಲ್ಲಿ ವಿಭಕ್ತವೆಂದು ಪರಿಗಣಿಸಬೇಕಾಗುತ್ತದೆ. ಹಾಗೂ ಈ ನಾಲ್ಕೂ ಋಷಿಗಳನ್ನು ಕ್ರಮವಾಗಿ
೧-ಅಸಲ್ಲಕ್ಷಣ ಋಷಿ
೨-ರೋಚನಾಲಕ್ಷಣ ಋಷಿ
೩-ದ್ರಷ್ಟೃಲಕ್ಷಣ ಋಷಿ
೪-ವಕ್ತೃಲಕ್ಷಣ ಋಷಿ
ಎಂಬ ಹೆಸರುಗಳಿಂದ ವ್ಯವಹೃತಗೊಳಿಸಬೇಕಾಗಿದೆ.

೧-ಅಸಲ್ಲಕ್ಷಣ ಋಷಿ-

ಪೂರ್ವದ ಸೃಷ್ಟಿಪ್ರಕರಣದಲ್ಲಿ ಸಾವಿತ್ರಾಗ್ನಿಯ ಸ್ವರೂಪವನ್ನು ತಿಳಿಸುತ್ತಾ ಬ್ರಹ್ಮಃನಿಶ್ವಸಿತವೇದದ ಯಜುರ್ಭಾಗದ ಯಾವ ‘ಯತ್’ ಎಂಬ ಪ್ರಾಣತತ್ತ್ವದ ವಿಶ್ಲೇಷಣೆಯಾಗಿದೆಯೋ, ಅದೇ ಮೌಲಿಕ ವೇದಪ್ರಾಣದ (ಯಜುಃಪ್ರಾಣದ) ಹೆಸರು ಅಸಲ್ಲಕ್ಷಣ ಋಷಿ ಆಗಿದೆ. ಇದೇ ತತ್ತ್ವಾತ್ಮಕ ಮೊದಲ ಋಷಿಯು. ಈ ಋಷಿಪ್ರಾಣವನ್ನು, ಅಂದರೆ ಪ್ರಾಣಾತ್ಮಕ ಋಷಿಯನ್ನು ‘ವೇದ’-‘ಅಸತ್’ ಇತ್ಯಾದಿ ಹೆಸರುಗಳಿಂದ ವ್ಯವಹೃತಗೊಳಿಸಲಾಗಿದೆ. ಯಾವ ಪ್ರಾಣದಿಂದ ಸೃಷ್ಟಿಯ ಉಪಕ್ರಮವಾಗುತ್ತದೆಯೋ, ಯಾವ ಪ್ರಾಣಗಳ ರಾಸಾಯನಿಕ ಸಮ್ಮಿಶ್ರಣದಿಂದ ಮೈಥುನೀ ಸೃಷ್ಟಿಯ ಆರಮ್ಭವಾಗುತ್ತದೆಯೋ, ಸರ್ವಮೂಲಭೂತ, ಸದ್ರೂಪ, ಹಾಗಾಗಿ ‘ಅಸತ್’ ಎಂಬ ಹೆಸರಿನಿಂದ ಪ್ರಸಿದ್ಧವಾದಂತಹ ಆಯಾಯ ಪ್ರಾಣಗಳ ಹೆಸರೇ ‘ತತ್ತ್ವ-ಋಷಿ’ ಆಗಿದೆ. ‘ವಿರೂಪಾಸ ಇದ್ ಋಷಯಸ್ತ ಇದ್ ಗಮ್ಭೀರವೇಪಸಃ’ (ಋಕ್ಸಂ ೧೦-೬೨-೫) ಈ ಮನ್ತ್ರವರ್ಣನೆಯ ಅನುಸಾರ ಈ ಋಷಿಪ್ರಾಣಗಳ ಅನೇಕ ವಿಭಾಗಗಳಿವೆ. ಈ ಪ್ರಾಣಾನನ್ತ್ಯದಿಂದಲೇ ತದ್ರೂಪ ವೇದವು ಅನನ್ತವೆಂದು ನಂಬಲಾಗಿದೆ. ಇದೇ ಪ್ರಾಣಾನನ್ತ್ಯದಿಂದ ವಿಶ್ವ-ಪದಾರ್ಥಗಳಲ್ಲಿ ವೈಚಿತ್ರ್ಯವು ಉಪಲಬ್ಧವಾಗುತ್ತಿದೆ. ಪ್ರಾಣಾತ್ಮಿಕಾ ಈ ಋಷಿವಿಧ್ಯೆಯ ಹೆಸರೇ ವೇದವಿಧ್ಯೆ ಆಗಿದೆ, ಇದನ್ನೇ ಶಬ್ದಾತ್ಮಕ ವೇದಶಾಸ್ತ್ರದಲ್ಲಿ ವಿಶ್ಲೇಷಿಸಲಾಗಿದೆ. ಇದೇ ಸಮ್ಬನ್ಧವಾಗಿ ಸ್ಮರಣೆಯಲ್ಲಿಡಬೇಕಾದ್ದು ಏನೆಂದರೆ, ಒಂದೊಂದು ಪ್ರಾಣವು ಎಲ್ಲಿ ‘ಋಷಿ’ ಶಬ್ದದಿಂದ ವ್ಯವಹೃತವಾಗುತ್ತದೆಯೋ ಅಲ್ಲಿ ಅನೇಕ ಪ್ರಾಣಗಳ ಸಮಷ್ಟಿಯನ್ನು ‘ಪುರುಷ’ ಎಂಬ ಹೆಸರಿನಿಂದ ವ್ಯವಹೃತಗೊಳಿಸಬಹುದು – ‘ಸಪ್ತಪುರುಷ ಪುರುಷಾತ್ಮಕ ಪ್ರಜಾಪತಿ’ಯ ಸ್ವರೂಪವನ್ನು ಹೇಳುತ್ತಾ ಪೂರ್ವಪರಿಚ್ಛೇದಗಳಲ್ಲಿ ಸ್ಪಷ್ಟಪಡಿಸಿಯಾಗಿದೆ.ಇದೇ ಸೃಷ್ಟಿಪ್ರವರ್ತ್ತಕ ತತ್ತ್ವಾತ್ಮಕ ಋಷಿಗಳನ್ನು ‘ದಿವ್ಯರ್ಷಿ’-‘ವೇದರ್ಷಿ’-‘ದೇವರ್ಷಿ’-ಪುರಾಣರ್ಷಿ’ ಇತ್ಯಾದಿ ವಿವಿಧ ಹೆಸರುಗಳಿಂದ ವ್ಯವಹೃತಗೊಳಿಸಲಾಗಿದೆ. ಪ್ರಾಣಾತ್ಮಕ ಋಷಿಯ ಆಧಿಭೌತಿಕ, ಆಧಿದೈವಿಕ, ಆಧ್ಯಾತ್ಮಿಕ ಭೇದದಿಂದ ಮೂರು ವಿವರ್ತ್ತಗಳಾಗುತ್ತವೆ. ಆಧಿದೈವಿಕ ಮಣ್ಡಲೋಪಲಕ್ಷಿತ ಹಿರಣ್ಯಗರ್ಭಮಣ್ಡಲದಲ್ಲಿ ಈ ಋಷಿಪ್ರಾಣವು ‘ಮನು’ ತತ್ತ್ವವನ್ನು ಕೇನ್ದ್ರವಾಗಿರಿಸಿಕೊಂಡು ಇತಸ್ತತಃ ರಶ್ಮಿರೂಪದಿಂದ ವ್ಯಾಪ್ತವಾಗಿರುತ್ತದೆ. ಹಿರಣ್ಯಗರ್ಭಮಣ್ಡಲಕ್ಕೆ ಸಮ್ಬನ್ಧಿಸಿದ ಈ ಮಾನವಪ್ರಾಣವು ೧೦ ಭಾಗಗಳಲ್ಲಿ ವಿಭಕ್ತವಾಗುವುದರಿಂದ ವಿರಾಟ್‍ಪುರುಷದ ಸ್ವರೂಪ-ಸಮ್ಪಾದಕವಾಗುತ್ತದೆ. ಇದೇ ರೀತಿ ಅಧ್ಯಾತ್ಮಜಗತ್ತಿನಲ್ಲಿ ಇವೇ ಪ್ರಾಣಗಳು ಮನವನ್ನು ಆಧಾರವಾಗಿಸಿಕೊಂಡು ಸರ್ವಾಙ್ಗ-ಶರೀರದಲ್ಲಿ ವ್ಯಾಪ್ತವಾಗಿರುತ್ತವೆ. ಹಾಗೆಯೇ ಆಧಿಭೌತಿಕ ಪದಾರ್ಥಗಳಲ್ಲಿ ಭೂತಾಗ್ನಿಯಿಂದ ಉಪಲಕ್ಷಿತ ಅಙ್ಗಿರೋಽಗ್ನಿಯನ್ನು ಆಧಾರವಾಗಿಸಿಕೊಂಡು ಈ ಋಷಿಪ್ರಾಣಗಳು ವಿತತವಾಗಿರುತ್ತವೆ. ಆಧಿಭೌತಿಕ ಪದಾರ್ಥಗಳೊಂದಿಗೆ ಸಮ್ಬನ್ಧಿಸಿದ, ಅಙ್ಗಿರಾ ಎಂಬ ಹೆಸರಿನ ಪ್ರಾಣಾಗ್ನಿಯನ್ನು ಆಧಾರವಾಗಿಸಿಕೊಂಡು ರಶ್ಮಿವತ್ ಇದರ ನಾಲ್ಕೂ ಕಡೆ ವಿತತವಾಗಿರುವ ಇವೇ ಪ್ರಾಣಗಳನ್ನು ಲಕ್ಷ್ಯದಲ್ಲಿರಿಸಿಕೊಂಡು – ‘ತಾಽಙ್ಗಿರಸಃ ಸೂನವಃ, ತೇಽಗ್ನೇಃ ಪರಿ ಜಜ್ಞಿರೇ (ಋಕ್ಸಂ ೧೦-೬೨-೫) ಎಂದು ಹೇಳಲಾಗಿದೆ.

ಈ ಮೂರೂ ವಿವರ್ತ್ತಗಳಿಗೆ ಸಮ್ಬನ್ಧಿಸಿದ ಅನನ್ತ ಋಷಿಪ್ರಾಣಗಳನ್ನು ಪ್ರಕೃತ ಪರಿಚ್ಛೇದದಲ್ಲಿ ಪರಿಚಯ ಮಾಡಿಕೊಡಲು ಮಾತ್ರ ಸಾಧ್ಯವೇ ಹೊರತು ವೇದಪ್ರಕರಾಣದಲ್ಲಿ ಈ ಋಷಿಗಾಥೆಯ ಯಾವುದೇ ವಿಶೇಷ ಪ್ರಸಙ್ಗವನ್ನು ತೆಗೆದುಕೊಳ್ಳಲಾಗುವುದಿಲ್ಲ. ಈ ವಿಷಯದ ವಿಶೇಷ ಜಿಜ್ಞಾಸುಗಳಿಗಂತೂ ‘ವೈಧಿಕ ಪ್ರಾಣವಿಧ್ಯಾ’ ಎಂಬ ಹೆಸರಿನ ಸ್ವತನ್ತ್ರ ನಿಬನ್ಧವನ್ನು ನೋಡಬೇಕಾಗುವುದು. ಪ್ರಕೃತದಲ್ಲಿ ಈ ಸಮ್ಬನ್ಧವಾಗಿ ಕೇವಲ ವಕ್ತವ್ಯವೇನೆಂದರೆ, ‘ಋಷಿ’ ಶಬ್ದದ ಮುಖ್ಯ ವ್ಯಾಪ್ತಿಯು ಅಸಲ್ಲಕ್ಷಣ ಆ ಮೌಲಿಕ ಪ್ರಾಣಕ್ಕೆ ಸಮ್ಬನ್ಧಿಸಿದ್ದಾಗಿದೆ. ಈ ಮೌಲಿಕ ಪ್ರಾಣವು ಪಞ್ಚತನ್ಮಾತ್ರಾಗಳ ಉತ್ಪಾದಕವಾಗುತ್ತದೆ. ಭೌತಿಕ ಧಾತುವರ್ಗವು ಉತ್ಪನ್ನವಾಗುತ್ತದೆ, ತೇಜೋಮಾತ್ರಾಗಳ ವಿಕಾಸವಾಗುತ್ತದೆ, ಸರ್ವವಿಧ ಬಲಗಳ ವಿಕಾಸವಾಗುತ್ತದೆ, ಯಚ್ಚಯಾವತ್ ಸಂಜ್ಞಾಕರ್ಮ್ಮ, ಹಾಗೂ ಚೇಷ್ಟಾಕರ್ಮ್ಮಗಳ ಸಞ್ಚಲನವಾಗುತ್ತದೆ, ಪ್ರಜ್ಞಾಮಾತ್ರದ ಉದಯವಾಗುತ್ತದೆ, ಜ್ಞಾನಕರ್ಮ್ಮೇನ್ದ್ರಿಯಗಳ ಉದ್ಗಮವಾಗುತ್ತದೆ, ಇನ್ದ್ರಿಯಗಳ ಕರ್ಮ್ಮಗಳ ಉದಯವಾಗುತ್ತದೆ, ಪಿತರ-ದೇವತಾ-ಅಸುರ, ಎಲ್ಲಿಯವರೆಗೆ ಎಣಿಸಬೇಕು, ‘ಅಸ್ತಿ’ ಎಂಬ ಹೆಸರಿನಿಂದ ವ್ಯವಹೃತಗೊಳಿಸಲು ಯೋಗ್ಯ ವಿಶ್ವದಲ್ಲಿ ಏನೆಲ್ಲ ಇರುವವೋ, ಎಲ್ಲದರ ಮೂಲಪ್ರತಿಷ್ಠಾ, ಎಲ್ಲದರ ಪ್ರಭವ-ಪ್ರತಿಷ್ಠಾ-ಪರಾಯಣವು ಇದೇ ಋಷಿಪ್ರಾಣವಾಗಿದೆ. ಪ್ರಾಣದಿಂದಲೇ ಸೃಷ್ಟಿಯ ವಿಕಾಸವಾಗಿದೆ, ಪ್ರಾಣಾಧಾರದ ಮೇಲೆಯೇ ವಿಶ್ವವು ಪ್ರತಿಷ್ಠಿತವಾಗಿದೆ, ಪ್ರಾಣವೇ ಎಲ್ಲದರ ಲಯಭೂಮಿಯಾಗಿದೆ. ಈ ಪ್ರಾಣವು ಋಕ್-ಸಾಮಾವಚ್ಛಿನ್ನ ಯಜುಃ-ಪ್ರಾಣವೇ ಆಗಿದೆ. ಇದುವೇ ಉಪಾಧಿಭೇದದಿಂದ ಅನನ್ತರೂಪಗಳಲ್ಲಿ ಪರಿಣತವಾಗುತ್ತಾ ವೈಚಿತ್ರ್ಯೋಪಲಕ್ಷಿತ ಆನನ್ತ್ಯದ ಆಧಾರವಾಗುತ್ತಿದೆ. ಭೃಗು – ವಸಿಷ್ಠ – ಕಶ್ಯಪ – ಜಮದಗ್ನಿ – ಅತ್ರಿ – ಮರೀಚಿ – ಪುಲಸ್ತ್ಯ – ಪುಲಹ – ಕ್ರತು – ದಕ್ಷ – ಅಙ್ಗಿರಾ – ಬೃಹಸ್ಪತಿ – ಅಗಸ್ತ್ಯ – ವಿಶ್ವಾಮಿತ್ರ’ ಇತ್ಯಾದಿ ಯಾವ ಋಷಿನಾಮಗಳನ್ನು ನಾವು ಕೇಳುತ್ತಾ ಬಂದಿರುವೆವೋ, ಅವೆಲ್ಲವೂ ಮುಖ್ಯರೂಪದಿಂದ ಪ್ರಾಣಾತ್ಮಕ ಋಷಿತತ್ತ್ವಕ್ಕೇ ಸಮ್ಬನ್ಧಿಸಿದ್ದಾಗಿವೆ. ಈ ಪ್ರಾಣಗಳ ಸನ್ನಿವೇಶತಾರತಮ್ಯದಿಂದಲೇ ಆಧಿದೈವಿಕ, ಆಧ್ಯಾತ್ಮಿಕ, ಆಧಿಭೌತಿಕ ವಿವರ್ತಗಳಲ್ಲಿ ಸ್ವರೂಪ-ಪರಿವರ್ತ್ತನೆ ಆಗುತ್ತಿರುತ್ತದೆ. ಒಂದುವೇಳೆ ನೀವು ಈ ಪ್ರಾಣಗಳನ್ನು ಗುರುತಿಸಿದರೆ, ಗುರುತಿಸಬಹುದು, ಆಗ ನೀವೂ ಸೃಷ್ಟಿಕರ್ಮ್ಮದ ಸಞ್ಚಾಲಕರಾಗಲು ಸಾಧ್ಯ. ಜಡಪದಾರ್ಥಗಳನ್ನು ಚೇತನಗೊಳಿಸುವುದು, ಮೂರ್ಖನನ್ನು ವಿದ್ವಾಂಸನನ್ನಾಗಿಸುವುದು, ವಿದ್ವಾಂಸನನ್ನು ಮೂರ್ಖನನ್ನಾಗಿಸುವುದು, ಅಶ್ವವನ್ನು ಮನುಷ್ಯನನ್ನಾಗಿಸುವುದು, ಮನುಷ್ಯನನ್ನು ಪಶುವಾಗಿಸುವುದು, ಘನ ಪದಾರ್ಥವನ್ನು ತರಲ, ತರಲವನ್ನು ಬಾಷ್ಪಾವಸ್ಥೆಯಲ್ಲಿ ಪರಿಣತಗೊಳಿಸುವುದು, ಇಂತಹಾ ಅಸಮ್ಭವ ಕಲ್ಪನೆಗಳೆಲ್ಲಾ ಈ ಪ್ರಾಣವಿಜ್ಞಾನಾತ್ಮಿಕಾ ‘ಬ್ರಹ್ಮವಿಧ್ಯಾ’ದಿಂದ ಸರ್ವಥಾ ಸಮ್ಭವ. ಈ ಸಮ್ಭಾವನೆಯನ್ನು – ‘ಬ್ರಹ್ಮವಿಧ್ಯಯಾ ಹಿ ಸರ್ವಂ ಭವಿಷ್ಯನ್ತೋ ಮನ್ಯನ್ತೇ ಮನುಷ್ಯಾಃ’ (ಶತಪಥ ಬ್ರಾಹ್ಮಣ) ಇತ್ಯಾದಿ ಶ್ರುತಿಗಳು ಬಹಳ ಆವೇಶದೊಂದಿಗೆ ಸಮರ್ಥನೆ ಮಾಡುತ್ತಿದೆ.

ಆಧಿದೈವಿಕ-ಆಧ್ಯಾತ್ಮಿಕ-ಆಧಿಭೌತಿಕ ಸಂಸ್ಥಾಗಳಿಗೆ ಸಮ್ಬನ್ಧಿಸಿದ ಭೃಗ್ವಙ್ಗಿರಾದಿ ಪ್ರಾಣಗಳ ಕೆಲವೊಂದು ಉದಾಹರಣೆಗಳನ್ನು ಇಲ್ಲಿಯೂ ಉದ್ಧೃತಗೊಳಿಸಲಾಗುತ್ತದೆ. ಸ್ಥಾಲೀಪುಲಾಕನ್ಯಾಯದ ಆಧಾರದಲ್ಲಿ ಓದುಗರು ಅವಶ್ಯವಾಗಿ ಋಷಿಶಬ್ದದ ವ್ಯಾಪ್ತಿಯು ಪ್ರಾಣತತ್ತ್ವದೊಂದಿಗೇ ಸಮ್ಬನ್ಧಿಸಿದ್ದೆಂದು ಸ್ವೀಕರಿಸಬೇಕಾಗುತ್ತದೆ. ‘ಮತ್ಸ್ಯ, ವಸಿಷ್ಠ, ಅಗಸ್ತ್ಯ’, ಎಂಬೀ ೩ ಪ್ರಾಣಗಳದ್ದು ಒಂದು ಸ್ವತನ್ತ್ರ ವಿಭಾಗವೆಂದು ನಂಬಲಾಗಿದೆ, ಹಾಗೂ ‘ಭೃಗು, ಅಙ್ಗಿರಾ, ಅತ್ರಿ’, ಎಂಬೀ ೩ ಪ್ರಾಣಗಳದ್ದು ಮತ್ತೊಂದು ಸ್ವತನ್ತ್ರ ವಿಭಾಗವೆಂದು ನಂಬಲಾಗಿದೆ. ಮತ್ಸ್ಯಾದಿ ಮೊದಲ ಪ್ರಾಣತ್ರಯಿಯ ವಿಕಾಸವು ‘ದ್ರೋಣಕಲಶ’ದಿಂದ ಉಂಟಾಗಿರುವ ಕಾರಣ, ಇವುಗಳನ್ನು ‘ಕುಮ್ಭೋದ್ಭವ’ (ಘಟ-ಸೋಮಕಲಶ-ದಿಂದ ಉತ್ಪನ್ನವಾಗುವವ)ರೆಂದು ಕರೆಯಲಾಗಿದೆ. ಕುಮ್ಭವು ಒಂದು ರೀತಿಯ ‘ಮಾನ’ (ಪರಿಮಾಣ) ಆಗಿದೆ, ಇದೇ ಆಧಾರದಲ್ಲಿ ಇವುಗಳನ್ನು ‘ಮಾನ್ಯ’ ಎಂದು ಕರೆಯಲಾಗಿದೆ. ಕುಮ್ಭದ ಯಾವ ಪ್ರದೇಶವನ್ನು ಮೂಲವೆಂದು ಪರಿಗಣಿಸಿ ಈ ಮೂರೂ ಪ್ರಾಣಗಳ ವಿಕಾಸವಾಗಿದೆಯೋ, ಅಲ್ಲಿಯೇ ಮಿತ್ರಾ-ವರುಣ ಎಂಬ ಹೆಸರಿನ ಪ್ರಾಣವು ಪ್ರತಿಷ್ಠಿತವಾಗಿದೆ, ಹಾಗಾಗಿ ಇವುಗಳನ್ನ್ ‘ಮೈತ್ರಾವರುಣ’ ಎಂದು ಕರೆಯಲಾಗಿದೆ. ಇದೇ ಕುಮ್ಭಪ್ರದೇಶದಲ್ಲಿ ಆಪೋಮಯ ಸೌಮ್ಯ ಅಪ್ಸರಾಪ್ರಾಣವು ಪ್ರತಿಷ್ಠಿತವಾಗಿದೆ, ಇದೇ ಆಧಾರದಲ್ಲಿ ‘ಅಪ್ಸರಾಪುತ್ರ’ರೆಂದು ಕರೆಯಲಾಗಿದೆ. ಈ ರೀತಿ ‘ಕುಮ್ಭೋದ್ಭವ-ಮಾನ್ಯ-ಮೈತ್ರಾವರುಣ-ಅಪ್ಸರಾಪುತ್ರ’ ಎಂಬೀ ೪ ಹೆಸರುಗಳಿಂದ ಪ್ರಸಿದ್ಧವಾದ ಈ ಪ್ರಾಣತ್ರಯಿಯು ಭಿನ್ನ ಭಿನ್ನ ಕರ್ಮ್ಮಗಳ ಅಧಿಷ್ಠಾತ್ರೀ ಆಗುತ್ತಿದೆ.

ಇದೇ ಪ್ರಾಣತ್ರಯಿಯ ಉದ್ಗಮದ ಸಮ್ಬನ್ಧವಾಗಿ ಪುರಾಣದಲ್ಲಿ ಈ ಆಶಯದ ಒಂದು ಆಖ್ಯಾನವು ಬರುತ್ತದೆ – “ಒಂದು ಬಾರಿ ಪ್ರಜಾಪತಿಯು ಸೋಮಯಜ್ಞವನ್ನು ಮಾಡುತ್ತಿದ್ದನು. ಯಜ್ಞ ಆರಮ್ಭವಾಗಿತು, ಯಜ್ಞಾಹುತಿಸಾಧಕ ಸೋಮರಸವು ದ್ರೋಣಕಲಶದಲ್ಲಿ ಸಮ್ಪನ್ನವಾಗಿತ್ತು. ಈ ಯಜ್ಞವನ್ನು ನೋಡುವುದಕ್ಕಾಗಿ ಉರ್ವಶೀ ಅಪ್ಸರೆಯೂ ಬಂದಿದ್ದಳು. ಸಂಯೋಗವಶದಿಂದ ಮಿತ್ರ ಹಾಗೂ ವರುಣ ದೇವತೆಗಳೂ ಯಜ್ಞ ನೋಡಲು ಉಪಸ್ಥಿತರಾಗಿದ್ದರು. ಉರ್ವಶೀಯನ್ನು ನೋಡಿ ಇವರ ರೇತಃ-ಸ್ಖಲನೆಯಾಯಿತು. ಮಿತ್ರಾವರುಣರ ಸ್ಖಲಿತ ರೇತವು ದ್ರೋಣಕಲಶದ ಒಳ-ಹೊರಗೆ ಹೋಗಿ ಬಿದ್ದಿತು. ಯಾವ ರೇತಭಾಗವು ಕಲಶದ ಒಳಗೆ ಬಿದ್ದಿತೋ, ಅದರಿಂದ ‘ಮತ್ಸ್ಯಋಷಿ’ಯು ಉತ್ಪನ್ನವಾದರು. ಯಾವ ಭಾಗವು ಕಲಶದ ಉತ್ತರಭಾಗದಲ್ಲಿ ಬಿದ್ದಿತೋ, ಅದರಿಂದ ‘ವಸಿಷ್ಠಋಷಿ’ಯು ಉತ್ಪನ್ನವಾದರು. ಹಾಗೂ ಯಾವ ಭಾಗವು ಕಲಶದ ದಕ್ಷಿಣಭಾಗದಲ್ಲಿ ಬಿದ್ದಿಯೋ, ಅದರಿಂದ ‘ಅಗಸ್ತ್ಯಋಷಿ’ಯು ಉತ್ಪನ್ನವಾದರು. ಈ ರೀತಿ ಉರ್ವಶೀ ವೇಶ್ಯೆಯ ನಿಮಿತ್ತದಿಂದ ಸ್ಖಲಿತ ಮಿತ್ರಾವರುಣರ ರೇತದಿಂದ ಸೋಮಕಲಶದಲ್ಲಿ ಮೂರು ಋಷಿಗಳು ಉತ್ಪನ್ನವಾದರು”.

ಪ್ರಾಣದ ಉಕ್ತ ಆಖ್ಯಾನದ ನೈದಾನಿಕ ರಹಸ್ಯ ತಿಳಿಯದ ಕಾರಣ, ಒಂದುವೇಳೆ ಪಾಶ್ಚಿಮಾತ್ಯ ವಿದ್ವಾಂಸರು ಆಖ್ಯಾನದ ಸಮ್ಬನ್ಧವಾಗಿ ತಮ್ಮ ಭ್ರಾನ್ತ ಕಲ್ಪನೆ ಮಾಡಿದರೆ, ನಮಗೇನೂ ಆಶ್ಚರ್ಯವಲ್ಲ. ಆಶ್ಚರ್ಯ್ಯವು ಯಾವಾಗ ಆಗುತ್ತದೆ ಎಂದರೆ, ವೈಧಿಕಸಾಹಿತ್ಯದ ಅನನ್ಯನಿಷ್ಠೆಯ ಅನುಗಮನವುಳ್ಳ ಭಾರತೀಯರೂ ಈ ಪೌರಾಣಿಕ ರಹಸ್ಯಾತ್ಮಕ ಆಖ್ಯಾನಗಳನ್ನು ‘ಕಟ್ಟುಕಥೆ’ ಎಂದು ಹೇಳುತ್ತಾರೆಯೋ ಆವಾಗ. ಸಮ್ಭವತಃ ಈ ಮಹಾಶಯರಿಗೆ ಗೊತ್ತಿಲ್ಲದಿರುವುದು ಏನೆಂದರೆ ಪ್ರಾಣತ್ರಯೀಯ ಉತ್ಪತ್ತಿಯ ಸಮ್ಬನ್ಧವಾಗಿ ಪುರಾಣವು ಏನು ರಂಜನೀಯ ಕಥೆ ಹೇಳಿರುವುದೋ, ಆ ಆಖ್ಯಾನವು ಅದೇ ಶಬ್ದಗಳಲ್ಲಿ ಸೂತ್ರರೂಪದಿಂದ ಸ್ವಯಂ ವೇದಸಂಹಿತೆಯಲ್ಲಿ ಉಪವರ್ಣಿತವಾಗಿದೆ. ಒಂದುವೇಳೆ ಪುರಾಣದ ಆಖ್ಯಾನವು ಅಸತ್-ಕಲ್ಪನೆ ಎಂದಾದರೆ, ವೇದವೂ ಇಂತಹಾ ಕಲ್ಪನೆಗಳಿಂದ ಹೊರತಾಗಿಲ್ಲ ಎಂದಾಗುತ್ತದೆ ಎಂದು ಕೆಲ ಆಧುನಿಕ ವಿದ್ವಾಂಸರು ಹೇಳುತ್ತಾರೆ.

೧-ವಿದ್ಯುತೋ ಜ್ಯೋತಿಃ ಪರಿ ಸಞ್ಜಿಹಾನಂ ಮಿತ್ರಾವರುಣಾ ಯದಪಶ್ಯತಾಂ ತ್ವಾ |
ತತ್ತೇ ಜನ್ಮೋತೈಕಂ ವಸಿಷ್ಠಾಗಸ್ತ್ಯೋ ಯತ್ತ್ವಾ ವಿಶ ಆಜಭಾರ ||

೨-ಉತಾಸಿ ಮೈತ್ರಾವರುಣೋ ವಸಿಷ್ಠೋರ್ವಶ್ಯಾ ಬ್ರಹ್ಮನ್ ಮನಸೋಽಧಿಜಾತಃ |
ದ್ರಪ್ಸಂ ಸ್ಕನ್ನಂ ಬ್ರಹ್ಮಣಾ ದೈವ್ಯೇನ ವಿಶ್ವೇದೇವಾಃ ಪುಷ್ಕರೇ ತ್ವಾದದನ್ತ ||

೩-ಸ ಪ್ರಕೇತ ಉಭಯಸ್ಯ ಪ್ರವಿದ್ವಾನ್ತ್ಸಹಸ್ರದಾನ ಉತ ವಾ ಸದಾನಃ |
ಯಮೇನ ತತಂ ಪರಿಧಿಂ ವಯಿಷ್ಯನ್ನಪ್ಸರಸಃ ಪರಿಜಜ್ಞೇ ವಸಿಷ್ಠಃ ||

೪-ಸತ್ರೇ ಹ ಜಾತಾವಿಷಿತಾ ನಮೋಭಿಃ ಕುಮ್ಭೇ ರೇತಃ ಸಿಷಿಚತುಃ ಸಮಾನಮ್ |
ತತೋ ಹ ಮಾನ ಉದಿಯಾಯ ಮಧ್ಯಾತ್ ತತೋ ಜಾತಮೃಷಿಮಾಹುರ್ವಸಿಷ್ಠಮ್ ||
- ಋಕ್ಸಂ ೭:೩೩:೧೦-೧೩

ಮನ್ತ್ರಗಳ ಸಾಮಾನ್ಯ ತಾತ್ಪರ್ಯ್ಯವು ಪೂರ್ವದ ಆಖ್ಯಾನಭಾಷೆಯಿಂದ ಗತಾರ್ಥವಾಗಿದೆ. ವಿಶೇಷ (ವೈಜ್ಞಾನಿಕ) ತಾತ್ಪರ್ಯ್ಯವು ವೈಧಿಕ ಪ್ರಾಣವಿಧ್ಯೆಯ ಆ ಪ್ರಕರಣದಲ್ಲಿ ದ್ರಷ್ಟವ್ಯ. ಇಲ್ಲಿ ಈ ಸಮತುಲನೆಯಿಂದ ನಮ್ಮಿಂದ ಹೇಳಬೇಕಾಗಿರುವುದು ಏನೆಂದರೆ, ಯೋಚಿಸದೆ-ತಿಳಿಯದೆ, ತಾತ್ತ್ವಿಕ ಪಾರಿಭಾಷಿಕ ಜ್ಞಾನ ಪ್ರಾಪ್ತಗೊಳಿಸಿಕೊಳ್ಳದೆ ಸಹಸಾ ಪೌರಾಣಿಕ ಆಖ್ಯಾನಗಳ ಮೇಲೆ ಟೀಕೆ-ಟಿಪ್ಪಣಿ ಬರೆಯಲು ಆರಂಭಿಸುವುದು ಸರ್ವಥೈವ ಅನುಚಿತವಾಗಿದೆ. ಪ್ರಕೃತ ಆಖ್ಯಾನದ ಮೀಮಾಂಸೆ ಮಾಡೋಣ. ಸೌರ ಸಮ್ವತ್ಸರಯಜ್ಞವೇ ಸಮ್ವತ್ಸರಪ್ರಜಾಪತಿಯ ಮಹಾಯಜ್ಞವಾಗಿದೆ. ಸಮ್ವತ್ಸರಯಜ್ಞಮಣ್ಡಲಾವಚ್ಛಿನ್ನ ಖಗೋಳವೇ ದ್ರೋಣಕಲಶ (ಸೋಮಕಲಶ) ಆಗಿದೆ. “ತ್ವಮಾ ತತನ್ಥೋರ್ವನ್ತರಿಕ್ಷಮ್” (ಋಕ್ಸಂ ೧೯-೧-೨೨) ಇತ್ಯಾದಿ ಮನ್ತ್ರದಲ್ಲಿ ಉಪವರ್ಣಿತ, ವಿಶಾಲ ಖಗೋಳ (ಅನ್ತರಿಕ್ಷ)ದಲ್ಲಿ ವ್ಯಾಪ್ತ ದಿಕ್-ಸೋಮದಿಂದ ಈ ಕಲಶವು ಪರಿಪೂರ್ಣವಾಗಿದೆ. ಅಹೋರಾತ್ರಿ ಭೇದದಿಂದ ಈ ಖಗೋಲದ ಪೂರ್ವಕಪಾಲ, ಪಶ್ಚಿಮಕಪಾಲ ಭೇದದಿಂದ ಎರಡು ವಿಭಾಗಗಳಾಗುತ್ತಿವೆ. ಇದರ ವಿಭಾಜಕವು ಯಾಮ್ಯೋತ್ತರವೃತ್ತವಾಗಿದೆ. ಉಭಯಕಪಾಲಾವಚ್ಛಿನ್ನ ಸಾಮ್ವತ್ಸರಿಕ ಸೌರಪ್ರಾಣದ ಅಹಃ, ಹಾಗೂ ರಾತ್ರಿಭೇದದಿಂದ ‘ಮಿತ್ರಾ-ವರುಣ’ ಎಂಬ ಹೆಸರಿನ ಎರಡು ಅವಸ್ಥೆಗಳಾಗುತ್ತವೆ. ಅಹಃಕಾಲಾವಚ್ಛಿನ್ನ ಅದೇ ಸೌರಪ್ರಾಣವು ಪಾರ್ಥಿವಪ್ರಜೆಗಳಿಂದ ಯುಕ್ತವಾಗಿರುತ್ತಾ ‘ಮಿತ್ರ’ ಎಂದು ಕರೆಯಲ್ಪಡುತ್ತದೆ, ಹಾಗೂ ರಾತ್ರಿಕಾಲಾವಚ್ಛಿನ್ನ ಅದೇ ಸೌರಪ್ರಾಣವು ಪಾರ್ಥಿವಪ್ರಜೆಗಳಿಂದ ವಿಯುಕ್ತವಾಗುತ್ತಾ ‘ವರುಣ’ ಎಂದು ಕರೆಯಲ್ಪಡುತ್ತದೆ. ಈ ಅಹೋರಾತ್ರವು ಸೂರ್ಯ್ಯೋದಯಾಸ್ತದೊಂದಿಗೆ ಸಮ್ಬನ್ಧ ಹೊಂದಿರದೆ, ಯಾಮ್ಯೋತ್ತರವೃತ್ತಕ್ಕೇ ಸಮ್ಬನ್ಧಿಸಿದ್ದಾಗಿರುತ್ತವೆ.ಯಾಮ್ಯೋತ್ತರವೃತ್ತವನ್ನೇ ‘ಧ್ರುವಪ್ರೋತವೃತ್ತ’ ಎನ್ನಲಾಗಿದೆ. ಏಕೆಂದರೆ ದಕ್ಷಿಣ-ಉತ್ತರ ಧ್ರುವದಿಂದಲೇ ಈ ಭಾತಿಸಿದ್ಧ ವೃತ್ತಗಳ ಕಲ್ಪನೆಯಾಗಿದೆ. ಸಂಖ್ಯೆಯಲ್ಲಿ ಈ ವೃತ್ತವು ೩೬೦ ಎಂದು ಒಪ್ಪಲಾಗಿದೆ. ಈ ವೃತ್ತಗಳ ಪ್ರತಿಷ್ಠೆಯು ಆನ್ತರಿಕ್ಷ್ಯ ಆಪೋಮಯ ಸಮುದ್ರವಾಗಿದೆ. ಆಪೋಮಯ ಸಮುದ್ರದಲ್ಲಿ ಸಞ್ಚಾರ ಮಾಡುವುದರಿಂದಲೇ ಈ ವೃತ್ತಗಳನ್ನು ‘ಅಪ್ಸರಾ’ (ಅಪ್ಸು ಸರನ್ತಿ) ಎನ್ನಲಾಗಿದೆ. ಇವೇ ಅಪ್ಸರಾವೃತ್ತಗಳಿಂದ ದಿಕ್ಕಿನ ವಿಭಾಜನೆಯಾಗುತ್ತದೆ, ಹಾಗಾಗಿ ದಿಕ್ಕುಗಳನ್ನೂ ಅಪ್ಸರಾ ಎಂದು ನಂಬಲಾಗಿದೆ. ಮಾಹಿತ್ಥಿಯ ಮತಾನುಸಾರ ದಿಕ್ಕು-ಉಪದಿಕ್ಕುಗಳೇ ಅಪ್ಸರಾ. ಇದು ನಿಮ್ನಲಿಖಿತ ‘ಪಞ್ಚಚೂಡಬ್ರಾಹ್ಮಣ’ ವಚನದಿಂದ ಸ್ಪಷ್ಟವಾಗುತ್ತದೆ –

“ಪುಞ್ಜಿಕಸ್ಥಲಾ ಚ, ಕ್ರತುಸ್ಥಲಾ ಚಾಪ್ಸರಸೌ-ಇತಿ ದಿಕ್- ಚೋಪದಿಶಾ ಚೇತಿ ಸ್ಮಾಹ ಮಾಹಿತ್ಥಿಃ” || ಶತಪಥ ೮-೬-೧-೧೬

ಯಾಮ್ಯೋತ್ತರವೃತ್ತಾತ್ಮಕ ಈ ಆಪ್ಯ ಅಪ್ಸರೆಗಳು ದ್ರೋಣಕಲಶಾತ್ಮಕ ಉರುವು ಅನ್ತರಿಕ್ಷದೊಂದಿಗೆ ಘನಿಷ್ಠ ಸಮ್ಬನ್ಧ ಹೊಂದಿದೆ. ಪೂರ್ವಕಥನಾನುಸಾರ ಉರ್ವಾನ್ತರಿಕ್ಷದಲ್ಲಿ ದಿಕ್ಸೋಮವು ವ್ಯಾಪ್ತವಾಗಿದೆ. ಈ ದಿಕ್ಸೋಮವು ತನ್ನ ಆಹುತಿಧರ್ಮ್ಮದಿಂದ ಯಜ್ಞಾತ್ಮಕ ವಿಷ್ಣುವಿನ ಸ್ವರೂಪರಕ್ಷಣೆ ಮಾಡುತ್ತಾ ‘ವೈಷ್ಣವ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ವೈಷ್ಣವಸೋಮವು ಒಂದುವೇಳೆ ರಾಜನೆಂದಾದರೆ, ಈ ಅಪ್ಸರೆಗಳು ಇದರ ಪ್ರಜೆಗಳು –

“ಸೋಮೋ ವೈಷ್ಣವೋ ರಾಜೇತ್ಯಾಹ | ತಸ್ಯಾಪ್ಸರಸೋ ವಿಶಃ | ತಾ ಇಮಾ ಆಸತ ಇತಿ – ಯುವತಯಃ ಶೋಭನಾ ಉಪಸಮೇತಾ ಭವನ್ತಿ” (ಶತಪಥ ೧೩-೪-೩-೮)

ಇದೇ ಆಹುತಿಧರ್ಮ್ಮದ ಸಮ್ಬನ್ಧವಾಗಿ ಯಾಜ್ಞವಲ್ಕ್ಯರು ಅಪ್ಸರೆಗಳನ್ನೂ ‘ಆಹುತಿ’ ಎಂಬ ಶಬ್ದದಿಂದ ವ್ಯವಹೃತಗೊಳಿಸಿದ್ದಾರೆ. ಪಞ್ಚಚೂಡೋಪಧಾನದಲ್ಲಿ ಋತುರೂಪದಿಂದಲೂ ಈ ಅಪ್ಸರೆಗಳನ್ನು ಗ್ರಹಿಸಲಾಗಿದೆ. ಆ ಪ್ರಕರಣದಲ್ಲಿ ವಸನ್ತ-ಗ್ರೀಷ್ಮ-ವರ್ಷಾ-ಶರತ್-ಹೇಮನ್ತ, ಈ ೫ ಋತುಗಳಿಗೆ ಎರಡೆರಡು ಅಪ್ಸರೆಗಳ ಭೋಗವೆಂದು ಹೇಳಲಾಗಿದೆ. ಅದರ ಪ್ರಕಾರ ೧೦ ಅಪ್ಸರೆಗಳು ಇಂತಿವೆ:-

೧- ಪುಞ್ಜಿಕಸ್ಥಲಾ
೨- ಕ್ರತುಸ್ಥಲಾ               
೧- ಮೇನಕಾ
೨-ಸಹಜನ್ಯಾ
೧-ಪ್ರಮ್ಲೋಚನ್ತೀ
೨-ಅನುಮ್ಲೋಚನ್ತೀ
೧-ವಿಶ್ವಾಚೀ
೨-ಘೃತಾಚೀ
೧-ಉರ್ವಶೀ
೨-ಪೂರ್ವಚಿತಿ

(ಶತಪಥ ಬ್ರಾಹ್ಮಣ ೮-೬-೧)

ಇದರಲ್ಲಿ ‘ಉರ್ವಶೀ’ ಎಂಬುದು ಎಂಥಹಾ ಅಪ್ಸರೆ (ಯಾಮ್ಯೋತ್ತರವೃತ್ತ) ಎಂದರೆ, ಇದು ಅದ್ಯತನ-ಅನದ್ಯತನದ ವಿಭಾಗವನ್ನು ಮಾಡಿಟ್ಟಿದೆ. ರಾತ್ರಿಯ ೧೨ ಘಂಟೆಯಿಂದ ದಿನದ ೧೨ ಘಂಟೆಯವರೆಗೆ ಅದ್ಯತನ ಕಾಲವು, ಹಾಗೂ ದಿನದ ೧೨ ಘಂಟೆಯಿಂದ ರಾತ್ರಿ ೧೨ ಘಂಟೆಯವರೆಗೆ ಅನದ್ಯತನ ಕಾಲವೆಂದು ನಂಬಲಾಗಿದೆ. ಉದಯಾಸ್ತದಿಂದ ಅಹೋರಾತ್ರದ ವಿಭಾಗ ಮಾಡುವುದು ಒಂದು ಪ್ರಕಾರ ಹಾಗೂ ಅದ್ಯತನ-ಅನದ್ಯತನದಿಂದ ಅಹೋರಾತ್ರದ ವಿಭಾಗ ಮಾಡುವುದು ಇನ್ನೊಂದು ಪ್ರಕಾರ. ಮಧ್ಯರಾತ್ರಿಯ ಹಿಂದಿನಿಂದ ಸೌರಪ್ರಾಣವು ಪಾರ್ಥಿವ ಪ್ರಜೆಗಳೊಂದಿಗೆ ಯುಕ್ತವಾಗುತ್ತಿರುತ್ತದೆ. ಇದೇ ಅಹಃಕಾಲದ ಆರಮ್ಭವು. ಇಲ್ಲಿಂದ ಆರಮ್ಭವಾಗಿ ಮಧ್ಯಾಹ್ನ ೧೨ ಘಂಟೆಯವರೆಗೆ ಈ ಪ್ರಾಣವು ನಿರನ್ತರ ನಮ್ಮೊಂದಿಗೆ ಯೋಗವಾಗುತ್ತಿರುತ್ತದೆ. ಅನನ್ತರ ಸೌರಪ್ರಾಣವು ನಮ್ಮಿಂದ ವಿಯುಕ್ತಿ ಹೊಂದಲಾರಂಭಿಸುತ್ತದೆ ಹಾಗೂ ಇದರ ವಿಯುಕ್ತಿಯು ಮಧ್ಯರಾತ್ರಿಯವರೆಗೆ ಪ್ರಕ್ರಾನ್ತವಾಗಿರುತ್ತದೆ. ಸೌರಪ್ರಾಣಸತ್ತೆಯು ಅಹಃಕಾಲದಲ್ಲಿ ಹಾಗೂ ಸೌರಪ್ರಾಣವಿಯುಕ್ತಿಯು ರಾತ್ರಿಕಾಲದಲ್ಲಿ ಸ್ವರೂಪಸಮರ್ಪಿಕಾ ಆಗಿರುತ್ತದೆ. ಅಹೋರಾತ್ರದ ಈ ಸಾಮಾನ್ಯ ಪರಿಭಾಷೆಯ ಅನುಸಾರ ಮಧ್ಯರಾತ್ರಿಯಿಂದ ಮಧ್ಯಾಹ್ನ ಪರ್ಯ್ಯನ್ತದ ೧೨ ಘಂಟೆಯ ಕಾಲವನ್ನು ಅಹಃಕಾಲ ಎನ್ನಲಾಗಿದೆ ಹಾಗೂ ಮಧ್ಯಾಹ್ನದ ೧೨ ಘಂಟೆಯಿಂದ ಮಧ್ಯರಾತ್ರಿಯ ಪರ್ಯ್ಯನ್ತದ ಕಾಲವನ್ನು ರಾತ್ರಿಕಾಲ ಎಂದು ಕರೆಯಲಾಗಿದೆ. ಈ ಎರಡರಲ್ಲಿಯೂ ಪ್ರತಿಷ್ಠಿತ ಸೌರಪ್ರಾಣವು ‘ಮಿತ್ರ-ವರುಣ’ ಎಂದು ಕರೆಯಲ್ಪಡುತ್ತದೆ. ಮಿತ್ರಪ್ರಾಣಾವಚ್ಛಿನ್ನ ಅಹಃಕಾಲವು ಪೂರ್ವಕಪಾಲವೆಂದು ಕರೆಯಲ್ಪಡುತ್ತದೆ, ವರುಣಪ್ರಾಣಾವಚ್ಛಿನ್ನ ರಾತ್ರಿಕಾಲವು ಪಶ್ಚಿಮಕಪಾಲ ಎಂದು ಕರೆಯಲ್ಪಡುತ್ತದೆ. ಇವೆರಡೂ ಕಪಾಲಗಳ ವಿಭಾಜಕ ಮಧ್ಯಾಹ್ನವೃತ್ತವೇ ಉರ್ವಶೀ ಅಪ್ಸರಾ ಎಂದು ಕರೆಯಲ್ಪಡುತ್ತದೆ. ಇದೇ ಮಧ್ಯಾಹ್ನವೃತ್ತದಿಂದ ಮಿತ್ರಾವರುಣಾತ್ಮಕ ಪೂರ್ವ-ಪಶ್ಚಿಮ ಕಪಾಲೋಪಲಕ್ಷಿತ ಅಹೋರಾತ್ರದ ವಿಭಜನೆಯಾಗುತ್ತಿದೆ. ಸ್ವಯಂ ಉರ್ವಶೀ ಅಪ್ಸರಾದೊಂದಿಗೆ ಮಿತ್ರ-ವರುಣ, ಎರಡೂ ಪ್ರಾಣಗಳ ಸಮನ್ವಯವಾಗುತ್ತಿರುತ್ತದೆ. ಎಲ್ಲಿ ಎರಡೂ ಕಪಾಲಗಳು ಸೇರುತ್ತವೆಯೋ, ಅದೇ ಉರ್ವಶೀ! ಫಲಿತಾಂಶವಾಗಿ ಉರ್ವಶೀಯೊಂದಿಗೆ ಇವೆರಡರ ಸಮನ್ವಯವು ಸಿದ್ಧವಾಗುತ್ತದೆ.

ಅಹಃಕಾಲದಲ್ಲಿ ವ್ಯಾಪ್ತ ಮಿತ್ರಪ್ರಾಣವು ಆಙ್ಗಿರಸವಾಗಿರುವುದರಿಂದ ‘ಆಗ್ನೇಯ’ವಾಗಿದೆ, ಹಾಗೂ ರಾತ್ರಿಕಾಲದಲ್ಲಿ ವ್ಯಾಪ್ತ ವರುಣಪ್ರಾಣವು ಭಾರ್ಗವವಾಗಿರುವುದರಿಂದ ‘ಆಪ್ಯ’ವಾಗಿದೆ. ಸಮ್ವತ್ಸರಾತ್ಮಕ ಪ್ರಾಜಾಪತ್ಯ ಯಜ್ಞಮಣ್ಡಲದಲ್ಲಿ ಪೂರ್ವ-ಪಶ್ಚಿಮ ಕಪಾಲದ ಸನ್ಧಿಯಲ್ಲಿ ಇವೆರಡೂ ಆಗ್ನೇಯ-ಆಪ್ಯ ಪ್ರಾಣಗಳು ಪ್ರತಿಷ್ಠಿತವಾಗಿರುತ್ತವೆ. ಕಪಾಲದ್ವಯಾವಚ್ಛಿನ್ನ ಖಗೋಳವೇ (ಸಮ್ವತ್ಸರಮಣ್ಡಲವೇ) ಪೂರ್ವಕಥನಾನುಸಾರ ಸೋಮಪರಿಪೂರ್ಣ ಕಲಶವಾಗಿದೆ. ಮಧ್ಯಾಹ್ನವೃತ್ತವು ಉರ್ವಶೀ ಆಗಿದೆ. ಇದನ್ನು ನಿಮಿತ್ತವಾಗಿಸಿಕೊಂಡು ಇದೇ ಕಲಶದಲ್ಲಿ ಮಿತ್ರದ ಆಗ್ನೇಯ ವೀರ್ಯ್ಯದ, ಹಾಗೂ ವರುಣದ ಆಪ್ಯವೀರ್ಯ್ಯದ ಆಹುತಿಯಾಗುತ್ತದೆ. ಆಹುತ ಪ್ರಾಣದ್ವಯಿಯಿಂದ ಈ ಕುಮ್ಭದಲ್ಲಿ ಶೀತವೀರ್ಯ್ಯ, ಉಷ್ಣವೀರ್ಯ್ಯ, ಅನುಷ್ಣಾಶೀತವೀರ್ಯ್ಯ ಭೇದದಿಂದ ೩ ನವೀನ ಪ್ರಾಣಗಳು ಉತ್ಪನ್ನವಾಗುತ್ತವೆ. ಶೀತವೀರ್ಯ್ಯಪ್ರಾಣವು ಸೋಮಪ್ರಧಾನವಾಗಿದೆ, ಕುಮ್ಭದ ಉತ್ತರಭಾಗದಲ್ಲಿ ಇದರ ಪ್ರತಿಷ್ಠಾ ಇರುತ್ತದೆ. ಇದೇ ಪ್ರಾಣವು ‘ವಸಿಷ್ಠ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಇದಕ್ಕಾಗಿ ‘ಆಪವಾಃ’-‘ಅಪ್ಸವಾಃ’-‘ವಸಿಷ್ಠಾಃ’ ಮೂರು ಶಬ್ದಗಳಿಂದ ಪ್ರಯುಕ್ತವಾಗಿದೆ. ವೃಷ್ಟಿ ಮಾಡುವುದು, ನೀರು ಮತ್ತು ಮಣ್ಣಿನ ರಾಸಾಯನಿಕ ಸಮ್ಮಿಶ್ರಣವನ್ನು ದೃಢಮೂಲಗೊಳಿಸುತ್ತಾ, ನೀರನ್ನು ಘನಾವಸ್ಥೆಯಲ್ಲಿ ಪರಿಣತಗೊಳಿಸುತ್ತಾ ನೀರನ್ನು ಕಾಲಾನ್ತರದಲ್ಲಿ ಮಣ್ಣಾಗಿಸುವುದು ಇದೇ ವಸಿಷ್ಠಪ್ರಾಣದ ಮಹಿಮೆಯಾಗಿದೆ, ಏಕೆಂದರೆ ಇದರ ಪ್ರಧಾನತೆಯು ಉತ್ತರ ಭಾಗದಲ್ಲಿದೆ. ಆದ್ದರಿಂದ ಉತ್ತರ ಪ್ರದೇಶದಲ್ಲಿ ಕ್ರಮವಾಗಿ ಭೂಭಾಗವು ವೃದ್ಧಿಯಾಗುತ್ತಾ ಸಾಗುತ್ತಿದೆ.

ಉಷ್ಣವೀರ್ಯ್ಯವು ಅಗ್ನಿಪ್ರಧಾನವಾಗಿದೆ, ಹಾಗೂ ಕುಮ್ಭದ ದಕ್ಷಿಣ ಭಾಗದಲ್ಲಿ ಇದರ ಪ್ರಧಾನತೆ ಇದೆ. ಇದೇ ಉಗ್ರ ಆಗ್ನೇಯ ಪ್ರಾಣವು ‘ಅಗಸ್ತ್ಯ’ ಎಂದು ಪ್ರಸಿದ್ಧವಾಗಿದೆ. ನೀರನ್ನು ಶೋಷಿಸುವುದು ಅಗಸ್ತ್ಯಪ್ರಾಣದ ಮುಖ್ಯ ಕಾರ್ಯ್ಯವಾಗಿದೆ, ಇದರ ಸಮ್ಬನ್ಧವಾಗಿ ಪುರಾಣದಲ್ಲಿ ಅಗಸ್ತ್ಯಸಮ್ಬನ್ಧೀ ‘ಸಮುದ್ರಶೋಷಣ’ ಆಖ್ಯಾನವು ಸರ್ವಪ್ರಸಿದ್ಧವಾಗಿದೆ. ಅನುಷ್ಣಾಶೀತವೀರ್ಯ್ಯಪ್ರಾಣವು ಕುಮ್ಭದ ಮಧ್ಯದಲ್ಲಿ (ಮಧ್ಯಾಕಾಶದಲ್ಲಿ) ತನ್ನ ಪ್ರಧಾನತೆಯನ್ನು ಸ್ಥಾಪಿಸಿರುತ್ತದೆ. ಇದನ್ನೇ ‘ಮತ್ಸ್ಯ’ ಎಂದು ಕರೆಯಲಾಗಿದೆ. ಇದನ್ನೇ ‘ಯಾಮ್ಯಮತ್ಸ್ಯ’ ಎಂದೂ ಕರೆಯಲಾಗಿದೆ. ಮಣ್ಣನ್ನು ಸ್ವಸ್ವರೂಪದಿಂದ ಪ್ರತಿಷ್ಠಿತವಾಗಿರಿಸುವುದೇ ಇದರ ಮುಖ್ಯ ಕರ್ಮ್ಮವಾಗಿದೆ.

ವಸಿಷ್ಠವು ಮಣ್ಣಿನ ಪ್ರವರ್ತ್ತಕವಾಗಿದೆ, ಮತ್ಸ್ಯವು ಮಣ್ಣಿನ ರಕ್ಷಕವಾಗಿದೆ, ಅಗಸ್ತ್ಯವು ಮಣ್ಣನ್ನು ಸಂಹತವಾಗಿರಿಸಿಕೊಂಡು ಇದಕ್ಕೆ ಘನ (ಪಾಷಾಣ) ರೂಪವನ್ನು ಪ್ರದಾನ ಮಾಡುವಂತಹದ್ದು. ಇದು ಏಕೆಂದರೆ ಅಗಸ್ತ್ಯದ ಪ್ರಧಾನ ಸತ್ತೆಯು ದಕ್ಷಿಣದಲ್ಲಿದೆ, ಹಾಗಾಗಿ ದಕ್ಷಿಣ ಭಾಗದಲ್ಲಿ ಪರ್ವತ ವಿಶೇಷರೂಪದಿಂದ ಘನಾವಯವವಾಗಿರುತ್ತದೆ. ರಸಶೋಷಣೆಯಿಂದ ಇವುಗಳ ವರ್ಣವೂ ಆತ್ಯನ್ತಿಕ ರೂಪದಿಂದ ಕೃಷ್ಣವಾಗಿರುತ್ತದೆ, ಗುರುತ್ತ್ವಾಕರ್ಷಣೆಯೂ ಅತಿಶಯರೂಪದಿಂದ ಪ್ರತಿಷ್ಠಿತವಾಗಿರುತ್ತದೆ. ನಿಷ್ಕರ್ಷೆ ಏನಾಯಿತೆಂದರೆ ಮಿತ್ರಾವರುಣದ ಆಗ್ನೇಯ-ಆಪ್ಯವೀರ್ಯ್ಯಗಳ ಸಮನ್ವಯದಿಂದ ಆಧಿದೈವಿಕ ಮಣ್ಡಲೋಪಲಕ್ಷಿತ ಸಮ್ವತ್ಸರಜಗತ್ತಿನಲ್ಲಿ ವಸಿಷ್ಠ, ಅಗಸ್ತ್ಯ, ಮತ್ಸ್ಯ, ಎಂಬ ಹೆಸರಿನ ೩ ಪ್ರಾಣಗಳು ಆವಿರ್ಭೂತವಾಗುತ್ತವೆ.

ಈಗ ಆಧಿಭೌತಿಕ ಅಸತ್-ಪ್ರಾಣದ ಉದಾಹರಣೆಯ ಮೇಲೆ ದೃಷ್ಟಿ ಹಾಯಿಸೋಣ. ‘ಭೃಗು-ಅಙ್ಗಿರಾ-ಅತ್ರಿ’ ಎಂಬೀ ಮೂರರ ಆಧಿದೈವಿಕ ಸ್ವರೂಪವು ಎಲ್ಲಿ ಸ್ನೇಹತೇಜ-ಧಾಮಚ್ಛದಭಾವಗಳ ಪ್ರವರ್ತ್ತಕವಾಗಿದೆಯೋ, ಅಲ್ಲಿ ಇವುಗಳ ಆಧಿಭೌತಿಕ ರೂಪದಿಂದ ಅರ್ಚಿ-ಅಙ್ಗಾರ-ಪಾರದರ್ಶಕಾಪ್ರತಿಬನ್ಧಕತ್ವ, ಎಂಬೀ ೩ ಭಾವಗಳ ಸ್ವರೂಪ ರಕ್ಷಣೆಯಾಗುತ್ತಿದೆ. ಒಂದು ಪ್ರಜ್ವಲಿತ ಕಾಷ್ಠವನ್ನು ತೆಗೆದುಕೊಳ್ಳೋಣ. ಇದರ ‘ಜ್ವಾಲೆಯ’ ಭಾಗವು ಭೃಗುಪ್ರಾಣಮಯವಾಗಿರುತ್ತದೆ. ಭೃಗುಪ್ರಾಣದ (ಸ್ನೇಹಾತ್ಮಕ ಸೌಮ್ಯಪ್ರಾಣದ) ಸಹಯೋಗದಿಂದಲೇ ಜ್ವಾಲೆಯ ಸ್ವರೂಪವು ಸುರಕ್ಷಿತವಾಗಿರುತ್ತದೆ. ಉರಿಯುತ್ತಿರುವ ಅಙ್ಗಾರವು ಅಙ್ಗಿರಾಪ್ರಾಣಮಯವಾಗಿದೆ. ಜ್ವಾಲೆ ಮತ್ತು ಅಙ್ಗಾರದ ಪ್ರತಿಷ್ಠಾರೂಪವು ಸ್ವಯಂ ಕಾಷ್ಠಪಿಣ್ಡವಾದ ಅತ್ರಿಪ್ರಾಣಮಯವಾಗಿದೆ. ಇನ್ನೊಂದು ಚಮತ್ಕಾರವನ್ನು ನೋಡೋಣ. ಮೊದಲ ಸರ್ತಿ ನೀವು ಕಟ್ಟಿಗೆಯನ್ನು ಉರಿಸಿದಾಗ, ಮೊದಲ ಅಙ್ಗಾರದ ಪ್ರಾಣವು ಅಙ್ಗಿರಾ ಎಂದು ಕರೆಯಲ್ಪಡುತ್ತದೆ. ಒಂದುವೇಳೆ ನೀವು ಆ ಅಙ್ಗಾರವನ್ನು ಆರಿಸಿ ಪುನಃ ಎರಡನೆಯ ಸರ್ತಿ ಪ್ರದೀಪ್ತಗೊಳಿಸಿದರೆ, ಅದು ದ್ವಿತೀಯಾವಸ್ಥೆಗೆ ಬರುತ್ತಾ ‘ಬೃಹಸ್ಪತಿ’ ಎಂದು ಕರೆಯಲ್ಪಡುತ್ತದೆ. ಈ ರೀತಿ ಸ್ವಲ್ಪ ತಾರತಮ್ಯದಿಂದ ಪ್ರಾಣವಿಪರ್ಯ್ಯಯವಾಗುತ್ತದೆ. ಅಙ್ಗಿರಾ ಹಾಗೂ ಭೃಗುಗಳ ಇದೇ ಆಧಿಭೌತಿಕ ವ್ಯಾಪ್ತಿಯನ್ನು ಲಕ್ಷ್ಯದಲ್ಲಿರಿಸಿಕೊಂಡು ಋಷಿಗಳು ಹೇಳುತ್ತಾರೆ –

ಅರ್ಚಿಷಿ ಭೃಗುಃ ಸಮ್ಬಭೂವ, ಅಙ್ಗಾರೇಷ್ವಙ್ಗಿರಾಃ ಸಮ್ಬಭೂವ | 
ಅಥ ಯದಙ್ಗಾರಾ ಅವಶಾನ್ತಾಃ ಪುನರುದದೀದಪ್ಯನ್ತ, ಅಥ ಬೃಹಸ್ಪತಿರಭವತ್” 
(ಐತರೇಯಬ್ರಾಹ್ಮಣ ೩-೩೪)

ಈಗ ಕ್ರಮಪ್ರಾಪ್ತ ಆಧ್ಯಾತ್ಮಿಕ ಅಸತ್ ಪ್ರಾಣಗಳನ್ನೂ ಉದಾಹರಣೆಯ ವಿಧಿಯಿಂದ ಪ್ರತ್ಯಕ್ಷಗೊಳಿಸಿಕೊಳ್ಳೋಣ. ಕೇವಲ ಶಿರಃಪ್ರದೇಶದಲ್ಲಿ ಸಪ್ತರ್ಷಿಪ್ರಾಣಗಳು ವ್ಯಾಪ್ತವಾಗಿರುತ್ತವೆ. ಈ ೭ ಋಷಿಪ್ರಾಣಗಳಲ್ಲಿ ೬ ಋಷಿಪ್ರಾಣಗಳಂತೂ ಯಮಜ (ಅವಳಿ) ಆಗಿವೆ, ಹಾಘೂ ಒಂದು ಪ್ರಾಣವು ಏಕಾಂಗಿಯಾಗಿದೆ. ೨ ಶ್ರೋತ್ರಪ್ರಾಣ, ೨ ನಾಸಾಪ್ರಾಣ, ೨ ಚಕ್ಷುಃ ಪ್ರಾಣ, ಈ ೬ ಯಜಳವಾಗಿವೆ, ಏಳನೆಯ ವಾಙ್ಮಯ ಪ್ರಾಣವು ಏಕಾಂಗಿಯಾಗಿದೆ. ಶಿರಃಕಪಾಲವು ಎಂತಹಾ ಚಮಸ (ಸೌಟು) ಎಂದರೆ, ಇದರ ಹುಟ್ಟು ಮೇಲಿದೆ, ಬಿಲವು ಕೆಳಗಿದೆ. ಈ ಚಮಸದ ತೀರಭಾಗದಲ್ಲಿ (ಪ್ರಾನ್ತಗಳಲ್ಲಿ) ಉಕ್ತ ಏಳು ಋಷಿಗಳು ಪ್ರತಿಷ್ಠಿತರಾಗಿದ್ದಾರೆ. ನಿಮ್ನಲಿಖಿತ ಮನ್ತ್ರ-ಶ್ರುತಿಗಳು ಇದೇ ಪ್ರಾಣಸಪ್ತಕದ ಸ್ಪಷ್ಟೀಕರಣ ಮಾಡುತ್ತಿವೆ.

೧-ಸಾಕಞ್ಜಾನಾಂ ಸಪ್ತಥಮಾಹುರೇಕಜಂ ಷಡಿದ್ಯಮಾ ಋಷಯೋ ದೇವಜಾಃ |
ತೇಷಾಮಿಷ್ಟಾನಿ ವಿಹಿತಾನಿ ಧಾಮಶಃ ಸ್ಥಾತ್ರೇ ರೇಜನ್ತೇ ವಿಕೃತಾನಿ ರೂಪಶಃ ||
- ಋಕ್ಸಂ ೧-೧೬೪-೧೫

೨-ಅರ್ವಾಗ್ಬಿಲಶ್ಚಮಸ ಊರ್ಧ್ವಬುಧ್ನಸ್ತಸ್ಮಿನ್ ಯಶೋ ನಿಹಿತಂ ವಿಶ್ವರೂಪಮ್ |
ತಸ್ಯಾಸತಽಋಷಯಃ ಸಪ್ತತೀರೇ ವಾಗಷ್ಟಮೀ ಬ್ರಹ್ಮಣಾ ಸಂವಿದಾನಾ ||
-       ಶತಪಥ ೧೪-೫-೨-೪

೩-ಇಮಾವೇವ ಗೋತಮ-ಭರದ್ವಾಜೌ | ಅಯಮೇವ ಗೋತಮಃ, ಅಯಂ ಭರದ್ವಾಜಃ | ಇಮಾವೇವ-ವಿಶ್ವಾಮಿತ್ರಜಮದಗ್ನೀ | ಅಯಮೇವ ವಿಶ್ವಾಮಿತ್ರಃ, ಅಯಂ ಜಮದಗ್ನಿಃ | ಇಮಾವೇವ ವಸಿಷ್ಠಕಶ್ಯಪೌ | ಅಯಮೇವ ವಸಿಷ್ಠಃ, ಅಯಂ ಕಶ್ಯಪಃ | ವಾಗೇವಾತ್ರಿಃ | ವಾಚಾ ಹ್ಯನ್ನಮದ್ಯತೇ | ‘ಅತ್ತಿ’ ರ್ಹ ವೈ ನಾಮೈತದ್ಯದತ್ರಿರಿತಿ | ಸರ್ವಸ್ಯಾತ್ತಾ ಭವತಿ, ಸರ್ವಮಸ್ಯಾನ್ನಂ ಭವತಿ, ಯ ಏವಂ ವೇದ” (ಶತಪಥ ೧೪-೫-೨-೬) ||

ಇದನ್ನು ಹೊರತುಪಡಿಸಿ ಆಧ್ಯಾತ್ಮಿಕ ಜಗತ್ತಿನಲ್ಲಿ ಪ್ರತಿಷ್ಠಿತ ವಿವಿಧ ವೃತ್ತಿಗಳ ಸಞ್ಚಾಲನೆಯೂ ಇದೇ ಅಸತ್-ಪ್ರಾಣಗಳ ಆಧಾರದಲ್ಲಿ ಪ್ರತಿಷ್ಠಿತವಾಗಿದೆ. 

 1. ಅಙ್ಗಿರಾಪ್ರಾಣದಿಂದ ‘ಕರ್ಮ್ಮಪ್ರವಣತಾ’ ಉತ್ಪನ್ನವಾಗುತ್ತದೆ. ಯಾರ ಅಙ್ಗಿರಾಪ್ರಾಣವು ಮೂರ್ಚ್ಛಿತವಾಗಿರುತ್ತದೆಯೋ, ಅವರು ಸರ್ವಥಾ ಅಕರ್ಮ್ಮಣ್ಯರೂ, ಆಲಸಿಗಳೂ ಆಗಿರುತ್ತಾರೆ.
 2. ವಸಿಷ್ಠಪ್ರಾಣದಿಂದ ‘ಓಜಸ್ವಿತಾ’ದ ಉದಯವಾಗುತ್ತದೆ. ಯಾರ ವಸಿಷ್ಠ ಪ್ರಾಣವು ಮೂರ್ಚ್ಛಿತವಾಗಿರುತ್ತದೆಯೋ, ಅವರ ಮುಖವು ಕಾನ್ತಿಹೀನ, ಉದಾಸೀನವಾಗಿರುತ್ತದೆ.
 3. ಅತ್ರಿಪ್ರಾಣದಿಂದ ‘ಅನಸೂಯಾ’ ವೃತ್ತಿಯ ಉದಯವಾಗುತ್ತದೆ. ಯಾರಲ್ಲಿ ಅತ್ರಿಪ್ರಾಣವು ಮೂರ್ಚ್ಛಿತವಾಗಿರುತ್ತದೆಯೋ, ಅವರು ಸದಾ ಇನ್ನೊಬ್ಬರ ನಿನ್ದೆಯನ್ನು ಮಾಡುತ್ತಿರುತ್ತಾರೆ, ಪರದೋಷದರ್ಶನದ ಅನುಗಾಮೀ ಆಗಿರುತ್ತಾರೆ.
 4. ಪುಲಸ್ತ್ಯಪ್ರಾಣದಿಂದ ‘ಘಾತಕ’ ವೃತ್ತಿಯ ಸಾಮ್ರಾಜ್ಯವಿರುತ್ತದೆ.
 5. ಕ್ರತುಪ್ರಾಣದಿಂದ ‘ಅಧ್ಯವಸಾಯ’ ವೃತ್ತಿಯು ಜಾಗೃತವಾಗಿರುತ್ತದೆ.
   
 6. ದಕ್ಷಪ್ರಾಣವು ‘ವ್ಯವಸಾಯಬುದ್ಧಿ’ಯ ಪ್ರವರ್ತ್ತಕವಾಗುತ್ತದೆ.
   
 7. ಕಶ್ಯಪಪ್ರಾಣವು ‘ಪುರನ್ಧ್ರಿತಾ’ ಹಾಗೂ ‘ಪ್ರಜಾವಾತ್ಸಲ್ಯ’ದ ಪ್ರವರ್ತ್ತಕವಾಗಿರುತ್ತದೆ. ಯಾರ ಕಶ್ಯಪಪ್ರಾಣವು ಮೂರ್ಚ್ಛಿತವಾಗಿರುತ್ತದೆಯೋ, ಅವರು ಪ್ರಜಾಸನ್ತತಿಗೆ ಅಪಾತ್ರರು, ಅವರ ವೃತ್ತಿಯಲ್ಲಿ ಯಾವುದೇ ವಾತ್ಸಲ್ಯವು ಉದಯಿಸುವುದಿಲ್ಲ.
 8. ವಿಶ್ವಾಮಿತ್ರಪ್ರಾಣದಿಂದ ‘ಆಯುಃಸ್ವರೂಪರಕ್ಷಾ’ ಹಾಗೂ ‘ದೃಢತಾ’ದ ಉದಯವಾಗುತ್ತದೆ.
 9. ಭೃಗುಪ್ರಾಣದಿಂದ ‘ವಿಧ್ಯಾಪ್ರವಣತಾ’ದ ಆವಿರ್ಭಾವವಾಗುತ್ತದೆ.
 10. ಅಗಸ್ತ್ಯಪ್ರಾಣದಿಂದ ‘ಪರೋಪಕಾರವೃತ್ತಿ’ಯು ಜಾಗೃತವಾಗಿರುತ್ತದೆ.
 11. ಮರೀಚಿಪ್ರಾಣದಿಂದ ‘ಸ್ವೇದೋತ್ಪತ್ತಿ’ ಹಾಗೂ ‘ಸ್ವಭಾವಮಾರ್ದ್ದವ’ದ ಉದಯವಾಗುತ್ತದೆ.

ಇವೆಲ್ಲ ನಿದರ್ಶನಮಾತ್ರವಾಗಿವೆ. ನಮ್ಮ ಆಧ್ಯಾತ್ಮಿಕ ಸಂಸ್ಥಾದಲ್ಲಿ ಎಷ್ಟು ಉಚ್ಚಾವಚ ಭಾವಗಳು ಪ್ರತಿಷ್ಠಿತವಾಗಿವೆಯೋ, ಅವೆಲ್ಲದರ ಮೂಲಪ್ರತಿಷ್ಠಾವು ಇದೇ ಅಸತ್-ಪ್ರಾಣಗಳಾಗಿವೆ. ಪ್ರಾಣಗಳ ತಾರತಮ್ಯದಿಂದ, ವಿಶೇಷತೆಯಿಂದಲೇ ಪ್ರಾಣಿಗಳ ವೃತ್ತಿಯಲ್ಲಿ ತಾರತಮ್ಯ, ವಿಶೇಷತೆಯು ಉತ್ಪನ್ನವಾಗುತ್ತದೆ. ಹಾಗೂ ಅಸಲ್ಲಕ್ಷಣ-ಋಷಿಪ್ರಾಣದ ಸಂಕ್ಷಿಪ್ತ ನಿದರ್ಶನವಾಗಿದೆ.


(ಸೂಚನೆ:- ಅಕ್ಷರದೋಷ, ವಾಕ್ಯ ಜೋಡಣೆಯ ದೋಷ, ವ್ಯಾಕರಣದೋಷಗಳಿಗೆ ಕ್ಷಮೆ ಇರಲಿ. ತಿದ್ದಿಕೊಂಡು ಓದಬೇಕಾಗಿ ವಿನಂತಿ. ಇದು ಏಕವ್ಯಕ್ತಿಯ ದುಸ್ಸಾಹಸವಾದ್ದರಿಂದ ಪುನಃ ಓದಿ ಪರಿಷ್ಕರಿಸಲೂ ಸಮಯಾವಕಾಶವಿಲ್ಲ, ಏಕೆಂದರೆ ಈ ಲೇಖನ ಮುಗಿಸುವುದರೊಳಗೆ ಮುಂದಿನ ಲೇಖನದ ವಿಚಾರಗಳ ಚಿಂತನೆ ನಡೆಯುತ್ತಿದ್ದು ಸಂಗ್ರಹಕ್ಕಾಗಿ ಬರವಣಿಗೆ ಆರಂಭಿಸುವ ಅನಿವಾರ್ಯತೆ ಇರುತ್ತದೆ.)


ಇಂತು ಸಜ್ಜನ ವಿಧೇಯ,
ಹೇಮಂತ್ ಕುಮಾರ್ ಜಿ.