Saturday, 27 April 2019

೧೫-ಸ್ವಾಯಮ್ಭುವೀ ವಾಕ್ ಮತ್ತು ತ್ರಯೀವೇದ(ಗಾಯತ್ರೀಮಾತ್ರಿಕವೇದಃ)

೨೪- ಸಾ ವಾ ಏಷಾ ವಾಕ್ ತ್ರೇಧಾ ವಿಹಿತಾ-ಋಚೋ, ಯಜೂಂಷಿ, ಸಾಮಾನಿ |
ಮಣ್ಡಲಮೇವಾರ್ಚಃ, ಅರ್ಚಿಃ ಸಾಮಾನಿ, ಪುರುಷೋ ಯಜೂಂಷಿ |
ಅಥೈತದಮೃತಂ, ಯದೇತದರ್ಚಿರ್ದೀಪ್ಯತೇ |
ಇದಂ ತತ್ ಪುಷ್ಕರಪರ್ಣಮ್ |
- ಶತಪಥ ಬ್ರಾಹ್ಮಣ ೧೦-೫-೧-೫

“ಆ ವಾಕ್ ಋಕ್-ಯಜುಃ-ಸಾಮ ಭೇದದಿಂದ ೩ ಭಾಗಗಳಲ್ಲಿ ವಿಭಕ್ತವಾಯಿತು.
೧. ಮಣ್ಡಲಾತ್ಮಿಕಾ ವಾಕ್ ಋಚೆಗಳಾಗಿವೆ,
೨. ಅರ್ಚಿರೂಪಾ ವಾಕ್ ಸಾಮಗಳಾಗಿವೆ,
೩. ಪುರುಷಾತ್ಮಿಕಾ ವಾಕ್ ಯಜುಃ ಆಗಿದೆ.
ಇಲ್ಲಿ ಯಾವ ಜ್ಯೋತಿರ್ಮ್ಮಣ್ಡಲವು (ರಶ್ಮಿಮಣ್ಡಲವು) ಪ್ರದೀಪ್ತವಾಗುತ್ತಿದೆಯೋ, ಅದೇ ಅಮೃತವಾಗಿದೆ. ಇದನ್ನೇ (ಯಜ್ಞಪರಿಭಾಷೆಯಲ್ಲಿ) ಪುಷ್ಕರಪರ್ಣ ಎಂದು ಕರೆಯಲಾಗಿದೆ”.


ಶ್ರುತಿಯು ಯಾವ ವಾಙ್ಮಯೀ ವೇದತ್ರಯಿಯ ದಿಗ್ದರ್ಶನ ಮಾಡಿಸಿದೆಯೋ, ಅದು ಆದಿತ್ಯಾಗ್ನಿರೂಪವೇ ಆಗಿದೆ. ‘ಪ್ರಾಣ-ಆಪ-ವಾಕ್-ಅನ್ನ-ಅನ್ನಾದ’ ಭೇದದಿಂದ ೫ ಭಾಗಗಳಲ್ಲಿ ವಿಭಕ್ತ ಪ್ರಕೃತಿಯು ಕ್ರಮವಾಗಿ ‘ಸ್ವಯಮ್ಭೂ-ಪರಮೇಷ್ಠೀ-ಸೂರ್ಯ್ಯ-ಚನ್ದ್ರಮಾ-ಪೃಥಿವೀ’ ಈ ೫ ವಿಶ್ವಪುರಗಳೊಂದಿಗೆ ಸಮ್ಬನ್ಧ ಹೊಂದಿರುತ್ತದೆ. ಮೂರನೆಯ ‘ವಾಕ್’ ಪ್ರಕೃತಿಯೇ ಸೂರ್ಯ್ಯದ ಪ್ರತಿಷ್ಠಾಭೂಮಿ ಆಗಿದೆ. ಈ ವಾಕ್‍ತತ್ತ್ವವೇ ಸುಪ್ರಸಿದ್ಧ ಸೌರ-ಸಾವಿತ್ರಾಗ್ನಿ ಆಗಿದೆ. ಇದನ್ನು ಪೂರ್ವ ಪ್ರಕರಣದಲ್ಲಿ ವಿಸ್ತಾರವಾಗಿ ನಿರೂಪಿಸಿಯಾಗಿದೆ. ಸೌರಸಾವಿತ್ರಾಗ್ನಿಯೇ ಈ ವೇದಮಯೀ ವಾಕಿನ ಉಪನಿಷತ್ ಆಗಿದೆ. ವಾಕ್ ನಿಷದ್ರೂಪೀ ಆಗಿದೆ. ಇದೇ ವಾಕಿನ ಋಕ್-ಸಾಮ-ಯಜುಃ ರೂಪದಿಂದ ಚಯನವಾಗುತ್ತದೆ. ಇದೇ ನಿತ್ಯಾ ವಾಕ್. ಈ ಚಿತಿಭಾವದ ಕಾರಣದಿಂದ ಮುಂದುವರೆದು ತ್ರಯೀವೇದರೂಪದಲ್ಲಿ ಪರಿಣತವಾಗುತ್ತದೆ. ಇದು ಉಕ್ತ ಬ್ರಾಹ್ಮಣದ ನಿಮ್ನಲಿಖಿತ ವಚನಗಳಲ್ಲಿ ಸ್ಪಷ್ಟವಾಗಿದೆ-

೧-ತಸ್ಯ ವಾಽಏತಸ್ಯಾಗ್ನೇರ್ವಾಗೇವೋಪನಿಷತ್ | ವಾಚಾ ಹಿ ಚೀಯತೇ ಋಚಾ-ಯಜುಷಾ-ಸಾಮ್ನಾ | ಇತಿ ನು ದೈವ್ಯಾ | (ಶತಪಥ ೧೦-೫-೧-೧)

೨-ಸಾ ವಾ ಏಷಾ ವಾಕ್ ತ್ರೇಧಾ ವಿಹಿತ- ಋಚೋ, ಯಜೂಂಷಿ, ಸಾಮಾನಿ | ತೇನಾಗ್ನಿಸ್ತ್ರೇಧಾ ವಿಹಿತಃ | ಏತೇನ ಹಿ ತ್ರಯೇಣ ಚೀಯತೇ | (ಶತಪಥ ೧೦-೫-೧-೨)

೩-ಸಾ ಯಾ ಸಾ ವಾಕ್- ಅಸೌ ಸ ಆದಿತ್ಯಃ | ಸ ಏಷ ಮೃತ್ಯುಃ | ತದ್ಯತ್ ಕಿಞ್ಚಾರ್ವಾಚೀನಮಾದಿತ್ಯಾತ್, ಸರ್ವಂ ತನ್ಮೃತ್ಯುನಾಽಪ್ತಮ್ | (ಶತಪಥ ೧೦-೫-೧-೪)

ವಾಗಗ್ನಿರೂಪೀ ಆದಿತ್ಯವನ್ನು, ಅಂದರೆ ಆದಿತ್ಯಾಗ್ನಿರೂಪಾ ವಾಕನ್ನು ತ್ರಯೀವೇದಮಯೀ ಎಂದು ಹೇಳುತ್ತಾ ಉಕ್ತ ಶ್ರುತಿಗಳು ಎಷ್ಟನ್ನು ಸಿದ್ಧಪಡಿಸಲು ಪರ್ಯ್ಯಾಪ್ತ ಪ್ರಮಾಣವೆಂದರೆ, ಋಕ್-ಸಾಮ-ಯಜುಃ, ಎಂಬ ಹೆಸರಿನ ವೇದತ್ರಯಿಯು ವಿಶುದ್ಧ ತತ್ತ್ವಾತ್ಮಿಕವಾಗಿದೆ. ಇದಕ್ಕೆ ಆಧಿದೈವಿಕ ಸಂಜ್ಞಕ ಪ್ರಕೃತಿಮಣ್ಡಲದೊಂದಿಗೆ ಸಮ್ಬನ್ಧವಿದೆ. ‘ವಾಕ್ ಅಗ್ನಿಯಾಗಿದೆ, ಅಗ್ನಿಯು ವೇದಮಯವಾಗಿದೆ’, ಎಂಬೀ ಶ್ರೌತ ಸಿದ್ಧಾನ್ತವನ್ನು ಶಬ್ದಾತ್ಮಿಕಾ ವೇದಭಕ್ತಿಯ ಆಧಾರದಲ್ಲಿ ಹೇಗೂ ಸಮನ್ವಯ ಮಾಡಲಾಗುವುದಿಲ್ಲ. ಕೇವಲ ತತ್ತ್ವಾತ್ಮಿಕಾ ವೇದಸತ್ಯದ ಆಧಾರದಲ್ಲಿ ಮಾತ್ರ ಸಮನ್ವಯ ಮಾಡಬಹುದು ಎಂದು ಈ ಲೇಖನದಲ್ಲಿ ಸ್ಪಷ್ಟಪಡಿಸಲಾಗಿದೆ.ಇಂತು ಸಜ್ಜನ ವಿಧೇಯ,
ಹೇಮಂತ್ ಕುಮಾರ್ ಜಿ.

Saturday, 20 April 2019

೧೪-ಸಮ್ವತ್ಸರಪ್ರಜಾಪತಿ ಮತ್ತು ತ್ರಯೀವೇದ


(ಬ್ರಹ್ಮನಿಃಶ್ವಸಿತವೇದಃ)

(ಕ)-ಸಮ್ವತ್ಸರೋ ವೈ ಪ್ರಜಾಪತಿರಗ್ನಿಃ |
ಅಥ ಸ ಸರ್ವಾಣಿ ಭೂತಾನಿ ಪರ್ಯ್ಯೈಕ್ಷತ್ |
ಸ ತ್ರಯ್ಯಾಮೇವ ವಿಧ್ಯಾಯಾಂ ಸರ್ವಾಣಿ ಭೂತಾನ್ಯಪಶ್ಯತ್ |
ಅತ್ರ ಹಿ ಸರ್ವೇಷಾಂ ಛನ್ದಸಾಮಾತ್ಮಾ, ಸರ್ವೇಷಾಂ ಸ್ತೋಮಾನಾಂ, ಸರ್ವೇಷಾಂ ಪ್ರಾಣಾನಾಂ, ಸರ್ವೇಷಾಂ ದೇವಾನಾಮ್ |
ಏತದ್ವಾ ಅಸ್ತಿ, ಏತದ್ಧಿ ಅಮೃತಮ್ |
ಯದ್ಧಿ ಅಮೃತಂ, ತದ್ಧಿ ಅಸ್ತಿ |
ಏತದು ತದ್ಯನ್ಮರ್ತ್ತ್ಯಮ್ |
ಸ ಐಕ್ಷತ್ ಪ್ರಜಾಪತಿಃ-ತ್ರಯ್ಯಾಂ ವಾವ ವಿಧ್ಯಾಯಾಂ ಸರ್ವಾಣಿ ಭೂತಾನಿ, ಹನ್ತ ತ್ರಯೀಮೇವ ವಿಧ್ಯಾಮಾತ್ಮಾನಮಭಿಸಂಸ್ಕರವಾಽಇತಿ ||

(ಕ)- ಅಗ್ನಿಯೇ ಸಮ್ವತ್ಸರ ಪ್ರಜಾಪತಿಯಾಗಿತ್ತು. ಆ ಸಮ್ವತ್ಸರ ಪ್ರಜಾಪತಿಯು ಸಮ್ಪೂರ್ಣ ಭೂತಗಳನ್ನು ನಾಲ್ಕೂ ಕಡೆಯಿಂದ ದಿಟ್ಟಿಸಿತು. ಅದು ಮೂರೂ ವೇದಗಳ ಗರ್ಭದಲ್ಲಿ ಸಮ್ಪೂರ್ಣ ಭೂತಗಳನ್ನು ನೋಡಿತು. ಇದೇ ತ್ರಯೀವೇದದ ಗರ್ಭದಲ್ಲಿ ಪ್ರಜಾಪತಿಯು ಸಮ್ಪೂರ್ಣ ಛನ್ದಸ್ಸುಗಳ ಆತ್ಮವನ್ನು ನೋಡಿತು, ಸಮ್ಪೂರ್ಣ ಸ್ತೋಮಗಳ ಆತ್ಮವನ್ನು ನೋಡಿತು, ಸಮ್ಪೂರ್ಣ ಪ್ರಾಣಗಳ ಆತ್ಮವನ್ನು ನೋಡಿತು, ಸಮ್ಪೂರ್ಣ ದೇವತೆಗಳ ಆತ್ಮವನ್ನು ನೋಡಿತು. ಈ ತ್ರಯೀವೇದವು ‘ಅಸ್ತಿ’ ಲಕ್ಷಣವಾಗಿದೆ, ಇದೇ ಅಮೃತವಾಗಿದೆ. ಯಾವುದು ಅಮೃತವಾಗಿದೆಯೋ, ಅದೇ ಅಸ್ತಿ (ಸತ್ತೆ) ಆಗಿದೆ. ಇದೇ ಅದಾಗಿದೆ, ಅಂದರೆ ಮರ್ತ್ಯವಾಗಿದೆ. ಪ್ರಜಾಪತಿಯು ಈ ರೀತಿ ತ್ರಯೀವಿಧ್ಯೆಯ ಗರ್ಭದಲ್ಲಿ ಛನ್ದ-ಸ್ತೋಮಾದಿಗಳು ಆತ್ಮದಲ್ಲಿ ಪ್ರತಿಷ್ಠಿತವಾಗಿರುವುದನ್ನು ಕಂಡು ಹೀಗೆ ಸಂಕಲ್ಪಿಸಿತು – “ನಾನು ಈ ತ್ರಯೀವಿಧ್ಯೆಯಿಂದಲೇ ನನ್ನ ಆತ್ಮದ ಸಂಸ್ಕಾರವನ್ನು ಮಾಡುವೆ”.

(ಖ)- ಸ ಋಚೋ ವ್ಯೌಹತ್-ದ್ವಾದಶ ಬೃಹತೀಸಹಸ್ರಾಣಿ | ಏತಾವತ್ಯೋಹಽರ್ಚ್ಚೋ ಯಾಃ ಪ್ರಜಾಪತಿಸೃಷ್ಟಾಃ |
ತಾಸ್ತ್ರಿಗ್‍ಂಶತ್ತಮೇ ವ್ಯೂಹೇ ಪಙ್ಕ್ತಿಷ್ವತಿಷ್ಠನ್ತ |
ತಾ ಯತ್ ತ್ರಿಗ್‍ಂಶತ್ತಮೇ ವ್ಯೂಹೇಽತಿಷ್ಠನ್ತ, ತಸ್ಮಾತ್ ತ್ರಿಗ್‍ಂಶನ್ಮಾಸಸ್ಯ ರಾತ್ರಯಃ |
ಅಥ ಯತ್ ಪಙ್ಕ್ತಿಷು, ತಸ್ಮಾತ್ ಪಾಂಕ್ತಃ ಪ್ರಜಾಪತಿಃ |
ತಾ ಅಷ್ಟಾಶತಗ್‍ಂ ಶತಾನಿ ಪಂಕ್ತಯೋಽಭವನ್ |

(ಖ)- (ತಮ್ಮ ಸಂಕಲ್ಪವನ್ನು ಕಾರ್ಯ್ಯರೂಪದಲ್ಲಿ ಪರಿಣತಗೊಳಿಸಲಿಕ್ಕಾಗಿ) ಪ್ರಜಾಪತಿಯು ೧೨ ಬೃಹತೀಸಹಸ್ರ ಸಂಖ್ಯೆಯಿಂದ ಋಚೆಗಳ ವ್ಯೂಹನ ಮಾಡಿತು. ಬೃಹತೀ ಛನ್ದಸ್ಸಿನಲ್ಲಿ ೩೬ ಅಕ್ಷರಗಳಿವೆ. (ಹಾಗಾಗಿ ಋಗ್ವೇದದಲ್ಲಿ ೩೬ x ೧೨೦೦೦ = ೪,೩೨,೦೦೦ ಅಕ್ಷರಗಳಾದವು). ಮೊದಲಿಗೆ ಪ್ರಜಾಪತಿಯಿಂದ ಉತ್ಪನ್ನವಾದ ಋಚೆಗಳು ಇಷ್ಟೇ (೧೨೦೦೦) ಸಂಖ್ಯೆಯಲ್ಲಿದ್ದವು. ಈ ಋಚೆಗಳು ೩೦ನೇ ವ್ಯೂಹದಲ್ಲಿ ಪ್ರತಿಷ್ಠಿತವಾದವು, ಹಾಗಾಗಿ ಒಂದು ತಿಂಗಳಿಗೆ ೩೦ ರಾತ್ರಿಗಳಾದವು. ಜೊತೆಗೆ ಋಚೆಗಳು ಪಙ್ಕ್ತಿಗಳಲ್ಲಿ ಪ್ರತಿಷ್ಠಿತವಾದವು, ಹಾಗಾಗಿ ಪ್ರಜಾಪತಿಯು ಪಾಂಕ್ತ (ಐದುಪಟ್ಟು, ಪಞ್ಚಾವಯವ) ಎಂದೆನಿಸಿಕೊಂಡಿತು. ಈ ಪಙ್ಕ್ತಿಗಳು ೧೦೮ x ೧೦೦ = ೧೦,೮೦೦ ಸಂಖ್ಯೆಯಲ್ಲಿ ಸಮ್ಪನ್ನವಾದವು. ಪಙ್ಕ್ತಿ ಛನ್ದಸ್ಸು ೫ ಪಾದಗಳು, ಪ್ರತಿಯೊಂದು ಪಾದದಲ್ಲಿ ೮ ಅಕ್ಷರಗಳನ್ನು ಹೊಂದಿರುತ್ತದೆ. ಒಟ್ಟು ೫ x ೮ = ೪೦ ಅಕ್ಷರಗಳು. (ಹಾಗಾಗಿ ಪಙ್ಕ್ತಿಯ ಲೆಕ್ಕದಂತೆಯೂ ಋಗ್ವೇದದಲ್ಲಿ ೧೦,೮೦೦ x ೪೦ = ೪,೩೨,೦೦೦ ಅಕ್ಷರಗಳಾದವು).

(ಗ)- ಅಥೈತರೋ ವೇದೌ ವ್ಯೌಹತ್-ದ್ವಾದಶೈವ ಬೃಹತೀ ಸಹಸ್ರಾಣ್ಯಷ್ಟೌ ಯಜುಷಾಂ, ಚತ್ತ್ವಾರಿ ಸಾಮ್ನಾಮ್ |
ಏತಾವದ್ದೈ ತಯೋಃ ವೇದಯೋಃ ಯತ್ ಪ್ರಜಾಪತಿ ಸೃಷ್ಟಮ್ |
ತೌ ತ್ರಿಗ್‍ಂಶತ್ತಮೇ ವ್ಯೂಹೇ ಪಙ್ಕ್ತಿಷ್ವತಿಷ್ಠೇತಾಮ್ |
ತೌ ಯತ್ ತ್ರಿಗ್‍ಂಶತ್ತಮೇ ವ್ಯೂಹೇಽತಿಷ್ಠೇತಾಂ, ತಸ್ಮಾತ್ ತ್ರಿಗ್‍ಂಶನ್ ಮಾಸಸ್ಯ ರಾತ್ರಯಃ |
ಅಥ ಯತ್ ಪಙ್ಕ್ತಿಷು, ತಸ್ಮಾತ್ ಪಾಙ್ಕ್ತಃ  ಪ್ರಜಾಪತಿಃ |
ತಾ ಅಷ್ಟಾಶತಮೇವ ಶತಾನಿ ಪಙ್ಕ್ತಕ್ತಯೋಽಭವನ್ |

(ಗ)- (೧೨ ಬೃಹತೀಸಹಸ್ರ ಋಗ್‍ವ್ಯೂಹನದ ಅನನ್ತರ ಪ್ರಜಾಪತಿಯು) ಕ್ರಮವಾಗಿ ೮ ಬೃಹತೀಸಹಸ್ರ ಸಂಖ್ಯೆಯಲ್ಲಿ ಯಜುವಿನ, ಹಾಗೂ ೪ ಬೃಹತೀಸಹಸ್ರ ಸಂಖ್ಯೆಯಲ್ಲಿ ಸಾಮದ ವ್ಯೂಹನ ಮಾಡಿತು. (ಯಜು : ೮೦೦೦ x ೩೬ = ೨,೮೮,೦೦೦, ಸಾಮ : ೪೦೦೦ x ೩೬ = ೧,೪೪,೦೦೦, ಒಟ್ಟು ೨,೮೮,೦೦ + ೧,೪೪೦೦ = ೪,೩೨,೦೦೦ ಅಕ್ಷರಗಳಾದವು).  ಎರಡೂ ವೇದಗಳು ೩೦ನೇ ವ್ಯೂಹದಲ್ಲಿ ಪ್ರತಿಷ್ಠಿತವಾದವು. ಇವೆರಡೂ ೩೦ನೇ ವ್ಯೂಹದಲ್ಲಿ ಪ್ರತಿಷ್ಠಿತವಾದ್ದರಿಂದ, ಒಂದು ತಿಂಗಳಿಗೆ ೩೦ ರಾತ್ರಿಗಳಾದವು. ಯಜುಃ-ಸಾಮಗಳು ಪಙ್ಕ್ತಿಗಳಲ್ಲಿ ಪ್ರತಿಷ್ಠಿತವಾದವು, ಹಾಗಾಗಿ ಪ್ರಜಾಪತಿಯು ಪಾಂಕ್ತ (ಐದುಪಟ್ಟು, ಪಞ್ಚಾವಯವ) ಎಂದಾಯಿತು. ಈ ಪಙ್ಕ್ತಿಗಳು ಸಂಖ್ಯೆಯಲ್ಲಿ ೧೦೮ x ೧೦೦ = ೧೦,೮೦೦ ಆದವು. ಯಜುಃ-ಸಾಮಗಳಲ್ಲಿ ಪಙ್ಕ್ತಿಯ ಲೆಕ್ಕದ ಪ್ರಕಾರವೂ ೧೦,೮೦೦ x ೪೦ = ೪,೩೨,೦೦೦ ಅಕ್ಷರಗಳಾದವು.

(ಘ)- ತೇ ಸರ್ವೇ ತ್ರಯೋ ವೇದಾ ದಶ ಚ ಸಹಸ್ರಾಣ್ಯಷ್ಟೌ ಚ ಶತಾನ್ಯಶೀತೀನಾಮಭವನ್ |
ಸ ಮುಹೂರ್ತ್ತೇನ ಮುಹೂರ್ತ್ತೇನಾಶೀತೀನ್ ಪ್ರಾಪ್ನಾತ್, ಮುಹೂರ್ತ್ತೇನ ಮುಹೂರ್ತ್ತೇನಾಶೀತಿಃ ಸಮಪದ್ಯತ |
ಸ ಏಷು ತ್ರಿಷು ಲೋಕೇಷೂಖಾಯಾಂ ಯೋನೌ ರೇತೋಭೂತಮಾತ್ಮಾನಮಾಸಞ್ಚತ್ – ಛನ್ದೋಮಯಗ್‍ಂ, ಸ್ತೋಮಮಯಂ, ಪ್ರಾಣಮಯಂ, ದೇವತಾಮಯಮ್ |
ತಸ್ಯಾರ್ಧಮಾಸೇ ಪ್ರಥಮ ಆತ್ಮಾ ಸಮಸ್ಕ್ರಿಯತ, ದವೀಯಸಿ ಪರೋ, ದವೀಯಸಿ ಪರಃ |
ಸಮ್ವತ್ಸರಽಏವ ಸರ್ವ ಕೃತ್ಸ್ನಃ ಸಮಸ್ಕ್ರಿಯತ |
- ಶತಪಥ ಬ್ರಾಹ್ಮಣ ೧೦:೪:೨:೨೧-೨೬ 

(ಘ)- ಈ ರೀತಿ ಋಕ್ : ೧೨೦೦೦ + ಯಜುಃ : ೮೦೦೦ + ಸಾಮ : ೪೦೦೦, ಮೂರೂ ವೇದಗಳನ್ನು ಒಗ್ಗೂಡಿಸಿ ೨೪ ಬೃಹತೀಸಹಸ್ರ ಸಂಖ್ಯೆಯಾಯಿತು. ಅಂದರೆ ತ್ರಯೀವೇದಗಳಲ್ಲಿ ೨೪೦೦೦ x ಬೃಹತೀ ೩೬ = ೮,೬೪,೦೦೦ ಅಕ್ಷರಗಳಾದವು. ಇದು ಬೃಹತೀ ಲೆಕ್ಕ. ಇನ್ನು ಪಙ್ಕ್ತಿಯ ಲೆಕ್ಕ ನೋಡೋಣ. ಎರಡು ಪಙ್ಕ್ತಿಗಳಿಗೆ ೪೦ x ೨ = ೮೦ (ಅಶೀತಿ) ಅಕ್ಷರಗಳು. ಮೂರೂ ವೇದಗಳ ಅಕ್ಷರಗಳು ೧೦,೮೦೦ x ೮೦ = ೮,೬೪,೦೦೦ ಸಂಖ್ಯೆಯಲ್ಲಿದ್ದವು ಎಂದು ಈ ಶತಪಥ ಶ್ರುತಿವಾಕ್ಯ. ಒಂದು ದಿನಕ್ಕೆ ೩೦ ಮುಹೂರ್ತ್ತಗಳು, ಒಂದು ಮುಹೂರ್ತ್ತಕ್ಕೆ ೪೮ ನಿಮಿಷ ಅಥವಾ ಒಂದು ಘಂಟೆಯ ೪/೫ನೇ ಭಾಗ. ಪ್ರಜಾಪತಿಯು ಒಂದೊಂದು ಮುಹೂರ್ತ್ತದಿಂದ ಒಂದೊಂದು ೮೦ನ್ನು (ಎರಡು ಪಙ್ಕ್ತಿ = ಅಶೀತಿಯನ್ನು) ಪಡೆಯಿತು, ಒಂದೊಂದು ಮುಹೂರ್ತ್ತದಿಂದ ಒಂದೊಂದು ಎಂಭತ್ತರ ಸ್ವರೂಪವು ಸಮ್ಪನ್ನವಾಯಿತು. ಅಂದರೆ ಒಂದು ಮುಹೂರ್ತ್ತದಲ್ಲಿ ಮಹಾಕಾಲನ ೮೦ ಸೂಕ್ಷ್ಮ ಕಾಲ ವಿಭಾಗಗಳನ್ನು ಹೊಂದಿತು. ೧ ಮುಹೂರ್ತ್ತ = ೪೮ ನಿಮಿಷ = ೨೮೮೦ ಸೆಕೆಂಡುಗಳು. ಇಲ್ಲಿ ಪ್ರಜಾಪತಿಯು ೨೮೮೦ / ೮೦ = ೩೬ ಸೆಕೆಂಡಿಗೆ ಒಂದು ಸಲ ಮಹಾಕಾಲನಿಂದ ಸಂಜ್ಞೆಯನ್ನು ಸ್ವೀಕರಿಸುತ್ತಿದ್ದನು (Instruction reception in terms of waves bound to time). ಅಂದರೆ ಒಂದು ಸಮ್ವತ್ಸರದಲ್ಲಿ ಕಾಲಗಣಿತದ ಆಧಾರದಲ್ಲಿ ಮುಹೂರ್ತ್ತ ಸಂಖ್ಯೆಯನ್ನು ಆಧಾರವಾಗಿಸಿಕೊಂಡು ಪ್ರತಿ ಮುಹೂರ್ತ್ತಕ್ಕೆ ಪಡೆದ ದ್ವಿಪಙ್ಕ್ತಿ ಅಥವಾ ಅಶೀತಿಯನ್ನು ಲೆಕ್ಕಿಸಿದರೆ ೮೦ x ೩೦ x ೩೬೦ = ೮,೬೪,೦೦೦ ತ್ರಯೀವೇದಾಕ್ಷರಗಳು ಸಿಗುತ್ತವೆ. (ಈ ರೀತಿ ತ್ರಯೀವಿಧ್ಯೆಯಿಂದ ತನ್ನ ಆತ್ಮದ ಸಂಸ್ಕಾರ ಮಾಡಿ) ಪ್ರಜಾಪತಿಯು ಈ ಮೂರೂ ಲೋಕಗಳಲ್ಲಿ ವ್ಯಾಪ್ತ ತ್ರೈಲೋಕ್ಯಾತ್ಮಿಕಾ ಉಖಾ ಯೋನಿಯಲ್ಲಿ ರೇತೋರೂಪೀ ತನ್ನ ಆ ಆತ್ಮವೀರ್ಯ್ಯದ ಆಹುತಿ ನೀಡಿತು. ಆ ಆತ್ಮವೀರ್ಯ್ಯವು ಛನ್ದೋಮಯ, ಸ್ತೋಮಮಯ, ಪ್ರಾಣಮಯ, ಹಾಗೂ ದೇವತಾಮಯವಾಗಿತ್ತು. ಈ ಸಿಕ್ತ ರೇತವನ್ನು ಪಕ್ಷ ಪಕ್ಷದಲ್ಲಿ ಸಂಸ್ಕಾರ ಮಾಡಿತು, ಮುಂದುವರೆದು ಮಾಸ-ಋತು-ಅಯನ, ಈ ಕ್ರಮದಿಂದ ಉತ್ತರೋತ್ತರ ಪ್ರವೃದ್ಧ ಪರಿಮಾಣದಿಂದ ಸಂಸ್ಕಾರ ಮಾಡುತ್ತಾ ಪ್ರಜಾಪತಿಯು ಸಮ್ಪೂರ್ಣ ಸಮ್ವತ್ಸರದ ಸಂಸ್ಕಾರ ಮಾಡಿತು.”ಉಕ್ತ ಶ್ರುತಿಗಳ ತಾತ್ತ್ವಿಕ ಅರ್ಥವನ್ನು ಓದುಗರು ಮುಂದಿನ ಪರಿಚ್ಛೇದಗಳಲ್ಲಿ ನೋಡೋಣ. ಈಗ ಅಕ್ಷರಾರ್ಥದ ಆಧಾರದಲ್ಲಿ ಕೇವಲ ಎಷ್ಟು ತಿಳಿದುಕೊಳ್ಳುವುದು ಪರ್ಯ್ಯಾಪ್ತವೆಂದರೆ, ಶ್ರುತಿಯು ಅಗ್ನಿಮೂರ್ತ್ತಿ ಸಮ್ವತ್ಸರಪ್ರಜಾಪತಿಯ ಸಮ್ಬನ್ಧವಾಗಿ ಯಾವ ತ್ರಯೀವಿಧ್ಯೆಯೊಂದಿಗೆ ಹೇಳಲ್ಪಟ್ಟಿದೆಯೋ, ಹಾಗೂ ತ್ರಯೀವಿಧ್ಯೆಯ ಯಾವ ಸಂಸ್ಥಾ-ವಿಭಾಗವನ್ನು ಹೇಳಲಾಗಿದೆಯೋ, ಅದರ ಏಕಮಾತ್ರ ತಾತ್ಪರ್ಯ್ಯವು ತಾತ್ತ್ವಿಕ ವೇದತ್ರಯಿಗೇ ಸಮ್ಬನ್ಧಿಸಿರುತ್ತದೆ. ಆಧಿದೈವಿಕ, ನಿತ್ಯ ವೇದದ, ಹಾಗೂ ನಿತ್ಯ ವೇದದ ವಿತಾನದ ಬಗ್ಗೆಯೇ ಶ್ರುತಿಯು ಇಲ್ಲಿ ಸ್ಪಷ್ಟೀಕರಣ ನೀಡಿರುವಂತಹದ್ದು. ಇದನ್ನು ಶಬ್ದಾತ್ಮಕ ವೇದದ ಆಧಾರದಲ್ಲಿ ಪ್ರಯತ್ನ-ಸಹಸ್ರಗಳಿಂದಲೂ ಸಮನ್ವಯಗೊಳಿಸಲು ಸಾಧ್ಯವಿಲ್ಲ.


ಇಂತು ಸಜ್ಜನ ವಿಧೇಯ,
ಹೇಮಂತ್ ಕುಮಾರ್ ಜಿ.

Friday, 19 April 2019

೧೩-ಉದೂಢತ್ರಿಲೋಕೀ ಮತ್ತು ತ್ರಯೀವೇದ


(ಉದೂಢವೇದಃ)
೧೨-ಸಾಮಾಹಂ ಅಸ್ಮೈ ಋಕ್ ತ್ವಂ, ದ್ಯೌರಹಂ ಪೃಥಿವೀ ತ್ವಂ |
ತಾವಿಹ ಸಮ್ಭವಾವ ಪ್ರಜಾಮಾ ಜನಯಾವಹೈ ||
- ಅಥರ್ವ ಸಂ ೧೪-೨-೭೧

(ಉದೂಢ = ಒಟ್ಟು, gross)

ಲೌಕಿಕಾರ್ಥದಲ್ಲಿ ನೋಡಿದರೆ - “ನಾನು ಸಾಮವಾಗಿದ್ದೇನೆ, ನೀನು ಋಕ್ ಆಗಿದ್ದೀಯ. ನಾನು ದ್ಯೌ ಆಗಿದ್ದೇನೆ, ನೀನು ಪೃಥಿವೀ ಆಗಿದ್ದೀಯ. ನಾವೀರ್ವರೂ ದಾಮ್ಪತ್ಯಭಾವವನ್ನು ಪಡೆಯೋಣ. ಪ್ರಜಾ ಉತ್ಪನ್ನ ಮಾಡೋಣ”. ಇದೂ ಕೂಡ ಸ್ಪಷ್ಟವಾಗಿ ಋಕ್ಸಾಮದ ತತ್ತ್ವರೂಪತೆಯನ್ನೇ ವಿಶ್ಲೇಷಿಸುತ್ತಿದೆ. ಸ್ತ್ರೀಯು ಪೃಥಿವಿಯ ರೂಪವೆಂದು, ಪುರುಷನು ದ್ಯುರೂಪವೆಂದು ನಂಬಲಾಗಿದೆ. ಅಲ್ಲಿ ಪೃಥಿವಿಯು ಋಗಾತ್ಮಿಕವಾಗಿದೆ, ದ್ಯುಲೋಕವು ಸಾಮಮಯವಾಗಿದೆ. ಎರಡರ ದಾಮ್ಪತ್ಯಭಾವದಿಂದಲೇ ಪ್ರಜೋತ್ಪತ್ತಿಯು ಸಮ್ಭವ. ಪ್ರಕೃತ ಮನ್ತ್ರವು ಇದೇ ‘ತನ್ತುವಿತಾನವಿಧ್ಯೆ’ಯ ಸ್ಪಷ್ಟೀಕರಣ ಮಾಡಿದೆ.

ಪ್ರಜಾತನ್ತುವಿತಾನವು ಹೇಗಾಗುತ್ತದೆ ವೇದೋಕ್ತ, ಶಾಸ್ತ್ರೋಕ್ತ ಮತ್ತು ವೈಜ್ಞಾನಿಕವಾಗಿ ಮಂಡಿಸುವ ಲೇಖನ ಸರಣಿಯು ಈ https://veda-vijnana.blogspot.com/2018/10/blog-post_15.html ಕೊಂಡಿಯಲ್ಲಿದೆ. ಇಲ್ಲಿಂದ ಆರಂಭವಾಗುವ ಲೇಖನಗಳ ವಿಷಯಸೂಚೀ ಇಂತಿದೆ:-

. ಮಹಾಮಾಙ್ಗಲಿಕ ಪಿತೃಸ್ವರೂಪಸಂಸ್ಮರಣೆ (ಸ್ತ್ಯುತ್ಯಾತ್ಮಕ ತಥಾಸ್ವರೂಪವರ್ಣನಾತ್ಮಕ)
. ವಿಷಯೋಪಕ್ರಮ
. ಮಹಾನಾತ್ಮಾನುಗತ ಪಿತೃತತ್ತ್ವ
. ಪ್ರಜಾತನ್ತುಪ್ರತಿಷ್ಠಾಲಕ್ಷಣ ಮಹಾನಾತ್ಮಾ
. ಮಹಾನಾತ್ಮದ ಆವಿರ್ಭಾವಕ
. ರೇತೋಮಯ ಕರ್ಮ್ಮಾತ್ಮಾ
. ಪ್ರಪದಪ್ರತಿಷ್ಠ ಕರ್ಮ್ಮಾತ್ಮಾ
. ಕರಾರವಿನ್ದೇನ ಪದಾರವಿನ್ದಮ್
. ಕರ್ಮ್ಮಾತ್ಮದ ಮೂರು ಜನ್ಮ
೧೦ರೇತ-ಯೋನಿ-ರೇತೋಧಾ
೧೧. ಕೌಷೀತಕಿಯ ವಿಚಕ್ಷಣೆ
೧೨. ಮಾಸಿ ಮಾಸಿ ವೋಽಶನಮ್
೧೩. ದಧಿ-ಮಧು-ಘೃತಲಕ್ಷಣ ಕರ್ಮ್ಮಾತ್ಮಾ
೧೪. ಆತ್ಮವಿವರ್ತ್ತಸಮ್ಪರಿಷ್ವಕ್ತಿ
೧೫. ಚನ್ದ್ರಲೋಕಾನುಗತ ಮಹಾನಾತ್ಮಾ
೧೬. ಗಮನಸ್ಥಿತಿ ವಿಶ್ಲೇಷಣೆ
೧೭. ಗೋತ್ರಸೃಷ್ಟಿಮೀಮಾಂಸೆ
೧೮. ಪಿತೃಸಹಃ ಸ್ವರೂಪವಿಜ್ಞಾನ
೧೯. ಸಹಸ್ತತ್ತ್ವದ ಆಹ್ನಿಕಾದಿ ನಾಲ್ಕು ಪಿಣ್ಡಗಳು
೨೦. ಸಹೋಭಾಗದ ಪಿತೃಪ್ರಾಣಾತ್ಮಕತ್ತ್ವ
೨೧. ಶುಕ್ರಕ್ಷಯಮೀಮಾಂಸೆ
೨೨. ಅಪತ್ಯ-ಪತ್ಯಪುರುಷ ಮೀಮಾಂಸೆ
೨೩. ಪಿತೃಸೋಮಯಜ್ಞದಿಂದ ಋಣಪ್ರವೃತ್ತಿ
೨೪. ಪಿತೃಧನಾವಾಪ ಮೀಮಾಂಸೆ
೨೫. ಆವಾಪಪಿಣ್ಡ-ಬೀಜಪಿಣ್ಡ ಮೀಮಾಂಸೆ
೨೬. ನಿವಾಪ-ಪಿತೃ-ತನ್ಯ-ಪಿಣ್ಡತ್ರಯೀ ಮೀಮಾಂಸೆ
೨೭. ಆತ್ಮಧನ-ಆತ್ಮಋಣ-ಸ್ವರೂಪಮೀಮಾಂಸೆ
೨೮. ‘ಕೋ ದದರ್ಶ ಪ್ರಥಮಂ ಜಾಯಮಾನಮ್ ()’
೨೯. ‘ಪಾಕಃ ಪೃಚ್ಛಾಮಿ ಮನಸಾಽವಿಜಾನನ್ ()’
೩೦. ‘ಅಚಿಕಿತ್ತ್ವಾಞ್ಚಿಕಿತುಷಶ್ಚಿದತ್ರ ()’
೩೧. ‘ಮಾತಾಪಿತರಮೃತ ಆಬಭಾಜ ()’
೩೨. ‘ಸ್ತ್ರಿಯಃ ಸತೀಸ್ತಾ  ಮೇ ಪುಂಸ ()’
೩೩. ‘ಅವಃ ಪರೇಣ ಪರ ಏನಾವರೇಣ ()’
೩೪. ‘ಅವಃ ಪರೇಣ ಪಿತರಮ್ ()’
೩೫. ‘ಯೇಽ ರ್ವಾಞ್ಚಸ್ತಾ  ಪರಾಚಃ ()’
೩೬. ಮಹರ್ಷಿಬೃಹದುಕ್ಥರ ಪ್ರಜಾತನ್ತುವಿತಾನ
೩೭. ‘ಮಹಿಮ್ನ ಏಷಾಂ ಪಿತರಃ ()’
೩೮. ‘ಸಹೋಭಿರ್ವಿಶ್ವಂ ಪರಿಚಕ್ರಮ್ ()’
೩೯. ‘ದ್ವಿಧಾ ಸೂನವೋಽಸುರಮ್ ()’
೪೦. ‘ನಾವಾನಕ್ಷೋದಃ ಪ್ರದಿಶಃ ()’
೪೧. ಪ್ರಕರಣೋಪಸಂಹಾರಇಂತು ಸಜ್ಜನ ವಿಧೇಯ,
ಹೇಮಂತ್ ಕುಮಾರ್ ಜಿ.

Wednesday, 17 April 2019

೧೨-ಅಧ್ಯಾತ್ಮಸಂಸ್ಥಾ ಮತ್ತು ತ್ರಯೀವೇದ


(ಸಾಂಸ್ಕಾರಿಕವೇದಃ)

೧೧-ವಿಧ್ಯಾಶ್ಚ ವಾ ಅವಿಧ್ಯಾಶ್ಚ ಯಚ್ಚಾನ್ಯದುಪದೇಶ್ಯಮ್ |
ಶರೀರಂ ಬ್ರಹ್ಮ ಪ್ರಾವಿಶತ್-ಋಚಃ ಸಾಮಾಥೋ ಯಜುಃ ||
- ಅಥರ್ವ ಸಂ ೧೧-೮-೨೩

“ಆಧ್ಯಾತ್ಮಿಕ ಸಂಸ್ಥಾದ ನಿರ್ಮ್ಮಾಣವು ಹೇಗಾಯಿತು?, ಇದರಲ್ಲಿ ಯಾವ್ಯಾವ ತತ್ತ್ವಗಳ ಸಮಾವೇಶವಾಗಿದೆ?, ಇತ್ಯಾದಿ ಪ್ರಶ್ನೆಗಳ ಸಮಾಧಾನ ಮಾಡುವಂತಹಾ ಅಥರ್ವವೇದೀಯ ಪ್ರಕರಣದಲ್ಲಿ ಉಕ್ತ ಮನ್ತ್ರವು ಪಠಿತವಾಗಿದೆ. ಇದರ ತಾತ್ಪರ್ಯ್ಯವೇನೆಂದರೆ “ಅಧ್ಯಾತ್ಮಸಂಸ್ಥಾದಲ್ಲಿ ವಿಧ್ಯೆ, ಅವಿಧ್ಯೆಗಳ ಪ್ರವೇಶವಾಯಿತು, ಋಕ್-ಸಾಮ-ಯಜುಃಗಳ ಪ್ರವೇಶವಾಯಿತು”.

ಇಲ್ಲಿ ವಿಧ್ಯೆ ಎಂದರೆ ಆಧ್ಯಾತ್ಮಿಕ ಉನ್ನತಿಯ ದ್ಯೋತಕವಾದ ಅಗ್ನಿ ವಿಧ್ಯೆ ಹಾಗೂ ಅವಿಧ್ಯೆ ಎಂದರೆ ಪ್ರಾಪಂಚಿಕ ಜೀವನ ವ್ಯಾಪಾರ ನಡೆಸಲು ಬೇಕಾದಂತಹಾ  ಮೃತ್ಯು ವಿಧ್ಯೆ. ಬ್ರಾಹ್ಮಿ ಭಾಷೆಯಲ್ಲಿ ವ್ಯುತ್ಪತ್ತಿ ಗಮನಿಸಿದರೆ “ವಿವಿಧಾ ಧ್ಯಾಸ(ಯ)ತೇ ಇತಿ ವಿಧ್ಯಾ” ಎಂದಿದೆ. ಹಲವು ದೃಷ್ಟಿಕೋನಗಳಿಂದ ಹಲವು ವಿಷಯಗಳನ್ನು ಧ್ಯಾನಿಸುವುದು ಹಾಗೂ ಆ ವಿಚಾರಗಳು ಕಲಿಯುವವರಲ್ಲಿ ತಾನೇ ತಾನಾಗಿ ಧ್ಯಾಸಗೊಳ್ಳುವುದು ವಿಧ್ಯೆಯ ನೈಜವಾದ ಸ್ವರೂಪ.

ಶಬ್ದಾತ್ಮಕ ವೇದಭಕ್ತರಿಂದ ಈ ಸಮ್ಬನ್ಧವಾಗಿ, ಆಧ್ಯಾತ್ಮಿಕ ಸಂಸ್ಥಾದ ಸ್ವರೂಪ ನಿರ್ಮ್ಮಾಣದಲ್ಲಿ ಶಬ್ದಾತ್ಮಕ ಮನ್ತ್ರಗಳು ಪ್ರವಿಷ್ಟವಾದವೇ ಎಂದು ಕೇಳಬಾರದೇ? ವಿವಶರಾಗಿ ಅವರು ತತ್ತ್ವಾತ್ಮಕ ವೇದತ್ರಯಿಯ ಆಶ್ರಯವನ್ನೇ ಪಡೆಯಬೇಕಾಗುತ್ತದೆ.

ಇಂತು ಸಜ್ಜನ ವಿಧೇಯ,
ಹೇಮಂತ್ ಕುಮಾರ್ ಜಿ.

Monday, 15 April 2019

೧೦-ನವಾಹಯಜ್ಞ ಮತ್ತು ತ್ರಯೀವೇದ


(ನವಾಹಯಜ್ಞವೇದಃ)

೯-ಯತ್ರ ಋಷಯಃ ಪ್ರಥಮಜಾ ಋಚಃ ಸಾಮ ಯಜುರ್ಮ್ಮಹೀ |
ಏಕರ್ಷಿರ್ಯಸ್ಮಿನ್ನಾರ್ಪಿತಃ ಸ್ಕಮ್ಭಂ ತಂ ಬ್ರೂಹಿ ಕತಮಃ ಸ್ವಿದೇವ ಸಃ ||
- ಅಥರ್ವ ಸಂ ೧೦-೭-೧೪


“ಯಾರಲ್ಲಿ ಪ್ರಥಮಜ ಋಷಿಯು ಅರ್ಪಿತವೋ, ಋಕ್-ಸಾಮ-ಯಜು ಅರ್ಪಿತವೋ, ಮಹೀ (ಮಹಾಪೃಥಿವೀ) ಅರ್ಪಿತವೋ, ಏಕರ್ಷಿ (ಸೂರ್ಯ್ಯ) ಅರ್ಪಿತವೋ, ಆ ಸ್ಕಮ್ಭದ ಸ್ವರೂಪವು ಹೇಗಿದೆ? ಎಂದು ವಿವರಿಸು." ಈ ಅಥರ್ವ ಮನ್ತ್ರದೊಂದಿಗೆ ವೇದತ್ರಯಿಯ ಸಮ್ಬನ್ಧ ಹೇಳಲ್ಪಟ್ಟಿದೆ. ಪೃಥಿವಿಯ ೧೭ನೇ ಅಹರ್ಗಣದಿಂದ ಆರಮ್ಭವಾಗಿ ೨೫ನೇ ಅಹರ್ಗಣ ಪರ್ಯ್ಯನ್ತ (೧/೧೭ – ೨/೧೮ – ೩/೧೯ – ೪/೨೦ – ೫/೨೧ – ೬/೨೨ – ೭/೨೩ – ೮/೨೪ – ೯/೨೫) “ನವಾಹಯಜ್ಞ”ವು ಪ್ರತಿಷ್ಠಿತವಾಗಿರುತ್ತದೆ. ಈ ನವಾಹಯಜ್ಞದ 

 • ೧೭ನೇ ಅಹರ್ಗಣವು ‘ಬ್ರಹ್ಮವಿಷ್ಟಪ್’ ಆಗಿದೆ, 
 • ೨೧ನೇ ಅಹರ್ಗಣವು ‘ವಿಷ್ಣುವಿಷ್ಟಪ್’ ಆಗಿದೆ ಹಾಗೂ 
 • ೨೫ನೇ ಅಹರ್ಗಣವು ‘ಇನ್ದ್ರವಿಷ್ಟಪ್’ ಆಗಿದೆ. 


ವಿಷ್ಣುವಿಷ್ಟಪಾತ್ಮಕ ೨೧ನೇ ಅಹರ್ಗಣದಲ್ಲಿ ಸೂರ್ಯ್ಯವು ಪ್ರತಿಷ್ಠಿತವಾಗಿದೆ. ೧೭ರಿಂದ ೨೫ರ ಪರ್ಯ್ಯನ್ತ ಸೌರ-ತೇಜವು ಪ್ರಖರರೂಪದಿಂದ ವ್ಯಾಪ್ತವಾಗಿರುತ್ತದೆ. ನವಾಹಯಜ್ಞಾತ್ಮಕ ಇದೇ ತೇಜೋಮಣ್ಡಲವು ‘ಸ್ಕಮ್ಭ’ (ಸ್ತಮ್ಭ=ಖಮ್ಭಾ) ಆಗಿದೆ, ಇದನ್ನೇ ಅಥರ್ವವೇದದ ‘ಸ್ಕಮ್ಭವಿಧ್ಯೆ’ಯಲ್ಲಿ ವಿಸ್ತಾರವಾಗಿ ನಿರೂಪಿಸಲಾಗಿದೆ. ಸಾಕಞ್ಜ ಸಪ್ತರ್ಷಿಪ್ರಾಣ, ಮಹೋಕ್ಥರೂಪೀ ಋಚೆಗಳು, ಮಹಾವ್ರತರೂಪೀ ಸಾಮ, ಪುರುಷಲಕ್ಷಣ ಯಜುಃ, ಪಾರಾವತಪೃಷ್ಠಾತ್ಮಿಕಾ ಮಹೀ ಪೃಥಿವೀ, ಸೂರ್ಯ್ಯಾತ್ಮಕ ಏಕರ್ಷಿಪ್ರಾಣ, ಎಲ್ಲವೂ ಇದೇ ಸ್ಕಮ್ಭದ ಆಧಾರದಲ್ಲಿ ಪ್ರತಿಷ್ಠಿತವಾಗಿವೆ. ಈ ಸ್ಕಮ್ಭಕ್ಕೆ ಸಮ್ಬನ್ಧಿಸಿದ ವೇದತ್ರಯಿಯು ನಿಮ್ಮ ವೇದಗ್ರನ್ಥವಲ್ಲ. ಇದನ್ನು ಒಪ್ಪಿಕೊಳ್ಳುವುದರಲ್ಲಿ ಸಮ್ಭವತಃ ನಿಮಗೆ ಯಾವುದೇ ವಿಪ್ರತಿಪತ್ತಿಯಾಗುವುದಿಲ್ಲ.

ಇಂತು ಸಜ್ಜನ ವಿಧೇಯ,
ಹೇಮಂತ್ ಕುಮಾರ್ ಜಿ.

Friday, 12 April 2019

೯-ಗರುತ್ಮಾನ್ ಸುಪರ್ಣ ಮತ್ತು ತ್ರಯೀವೇದ


(ಗಾಯತ್ರವೇದಃ)
೮-ಸುಪರ್ಣೋಽಸಿ ಗರುತ್ಮಾನ್, ತ್ರಿವೃತ್ತೇ ಶಿರಃ,
ಗಾಯತ್ರಂ ಚಕ್ಷುಃ, ಬೃಹದ್ರಥನ್ತರೇ ಪಕ್ಷೌ |
ಸ್ತೋಮ ಆತ್ಮಾ, ಛನ್ದಾಂಸ್ಯಙ್ಗಾನಿ,
ಯಜೂಂಷಿ ನಾಮ, ಸಾಮ ತೇ ತನೂಃ  |
ವಾಮದೇವ್ಯಂ ಯಜ್ಞಾಯಜ್ಞಿಯಂ ಪುಚ್ಛಂ, ಧಿಷ್ಣ್ಯಾಃ ಶಫಾಃ |
ಸುಪರ್ಣೋಽಸಿ ಗರುತ್ಮಾನ್ ದಿವಂ ಗಚ್ಛ, ಸ್ವಃ ಪತ ||
- ಯಜುಃ ಸಂ ೧೨-೪

“ಭೂಕೇನ್ದ್ರದಿಂದ ಹೊರಟು ಪಾರ್ಥಿವ ೨೧ ಸ್ತೋಮಪರ್ಯ್ಯನ್ತ ವ್ಯಾಪ್ತವಾಗಿರುವ ಪಾರ್ಥಿವ ಗಾಯತ್ರಾಗ್ನಿಯೇ ಪಾರಮೇಷ್ಠ್ಯಸೋಮದ ಅಪಹರಣ ಮಾಡುವಂತಹಾ ಸುಪರ್ಣವಾಗಿದೆ. ಇದು ಬ್ರಾಹ್ಮಣಗ್ರನ್ಥೋಕ್ತ ಸುಪರ್ಣಾಖ್ಯಾನಗಳಲ್ಲಿ ವಿಸ್ತಾರವಾಗಿ ನಿರೂಪಣೆಯಾಗಿದೆ. ಭೂಪೃಷ್ಠದಿಂದ ಆರಮ್ಭವಾಗಿ ೨೧ನೇ ಅಹರ್ಗಣ ಪರ್ಯ್ಯನ್ತ ವ್ಯಾಪ್ತವಾಗಿರುವ ಇದೇ ಸುಪರ್ಣದ ತಾತ್ತ್ವಿಕ ಸ್ವರೂಪವನ್ನು ಹೇಳುತ್ತಾ ಶ್ರುತಿಯು ಹೇಳುತ್ತದೆ – ಹೇ ಗಾಯತ್ರಾಗ್ನೇ! ನೀನು ಗರುಡ ಪಕ್ಷಿಯ ಸಮಾನ ಆಕಾರವುಳ್ಳದ್ದಾಗಿದ್ದೀಯ. ವಾಸವಾಗ್ನ್ಯವಚ್ಚಿನ್ನ ತ್ರಿವೃತ್‍ಸ್ತೋಮವು ನಿನ್ನ ಮಸ್ತಕವಾಗಿದೆ, ಗಾಯತ್ರತೇಜವು ನಿನ್ನ ಚಕ್ಷುವಾಗಿದೆ, ೨೧ ಸ್ತೋಮಾವಚ್ಛಿನ್ನ ರಥನ್ತರಸಾಮ ಹಾಗೂ ನಿಮ್ಮ ರಾಥನ್ತರಮಣ್ಡಲದಲ್ಲಿ (ಅತಿಮಾನ ಸಮ್ಬನ್ಧದಿಂದ) ಪ್ರವಿಷ್ಟ ಸೌರ ಬೃಹತ್‍ಸೋಮ, ಇವೆರಡು ನಿನ್ನ ಎರಡು (ರೆಕ್ಕೆ) ಪಕ್ಷಗಳಾಗಿವೆ. ಮಧ್ಯಸ್ಥಾನೀಯ ಪಞ್ಚದಶಸ್ತೋಮವು ನಿನ್ನ ಆತ್ಮವಾಗಿದೆ. ಗಾಯತ್ರ್ಯಾದಿ ೭ ಛನ್ದಸ್ಸುಗಳು (೭ ಪೂರ್ವಾಪರವೃತ್ತ) ನಿನ್ನ ಶರೀರಾವಯವ ಆಗಿವೆ, ರಸಾತ್ಮಕ ಯಜುರೂಪದಿಂದ ನಿನ್ನ ನಮನವಾಗುತ್ತದೆ, ಗಮನವಾಗುತ್ತದೆ, ಹಾಗಾಗಿ ನೀನು (ಅಗ್ನಿ) ಯಜುಃ ಎಂದು ಪ್ರಸಿದ್ಧವಾಗಿದ್ದೀಯ. ವಯೋನಾಧಾತ್ಮಕ (ಬಾಹ್ಯ ಆಕಾರಾತ್ಮಕ) ಸಾಮವೇ ನಿನ್ನ ಶರೀರ (ಬಾಹ್ಯಪೃಷ್ಠ) ಆಗಿದೆ. ವಾಮದೇವ್ಯ ಹಾಗೂ ಯಜ್ಞಾಯಜ್ಞೀಯ ಎಂಬ ೨ ವಿಶೇಷ ಸಾಮಗಳನು ನಿನ್ನ ಪುಚ್ಛವಾಗಿವೆ. ಅನ್ತರಿಕ್ಷದಲ್ಲಿ ವಾಸಿಸುವ ೮ ನಾಕ್ಷತ್ರಿಕ ಸರ್ಪಗಳಿಂದ ೮ ಭಾಗಗಳಲ್ಲಿ ವಿಭಕ್ತ ಮಾರ್ಜಾಲೀಯ, ಅಚ್ಛಾವಾಕಾದಿ ಹೆಸರುಗಳಿಂದ ಪ್ರಸಿದ್ಧವಾದ ಧಿಷ್ಣ್ಯಾಗ್ನಿಗಳು (ನಾಕ್ಷತ್ರಿಕಾಗ್ನಿಗಳು) ನಿನ್ನ ಶಫ (ಗೊರಸು) ಆಗಿವೆ. ಈ ರೀತಿ ನೀನು ಈ ಪಕ್ಷಿ-ಸಮ ಅವಯವವಿಶೇಷಗಳಿಂದ ಸತ್ಯವಾಗಿ ಗರುತ್ಮಾನ್ ಸುಪರ್ಣ ಆಗುತ್ತಿದ್ದೀಯೆ. ನೀನು ನಿನ್ನ ಈ ರೂಪದಿಂದ ಅಲ್ಲಿಯಂತೂ ಪಾರ್ಥಿವಮಹಿಮೆಯ ಅನ್ತಿಮ ಪರಿಧಿರೂಪವಾದಂತಹಾ ದ್ಯುಲೋಕ ಪರ್ಯ್ಯನ್ತ ವ್ಯಾಪ್ತವಾಗಿದ್ದೀಯೆ. ಹಾಗೇ ಇಲ್ಲಿ ಭೂಪಿಣ್ಡದ ಕೇನ್ದ್ರರೂಪೀ ಸ್ವರ್ಲೋಕ ಪರ್ಯ್ಯನ್ತ ವ್ಯಾಪ್ತವಾಗಿದೆ”.

ಪ್ರಕೃತ ಶ್ರುತಿಯಲ್ಲಿ – “ಯಜೂಂಷಿ ನಾಮ, ಸಾಮ ತೇ ತನೂಃ” ಎಂಬ ವಾಕ್ಯದತ್ತ ಓದುಗರ ಧ್ಯಾನವು ಆಕರ್ಷಿತವಾಗಬೇಕಿದೆ. ತ್ರೈಲೋಕ್ಯವ್ಯಾಪಕ ಗಾಯತ್ರಾಗ್ನಿಯ ಹೆಸರಂತೂ ಯಜುಃ ಹಾಗೂ ಶರೀರವು ಸಾಮವಾಗಿದೆ.  ಅವಶ್ಯವಾಗಿ ಇದು ಯಜುಃ-ಸಾಮ ತತ್ತ್ವಾತ್ಮಕವಾಗಿದೆ. ಶಬ್ದಾತ್ಮಕ ಯಜುಃ, ಹಾಗೂ ಸಾಮಮನ್ತ್ರಗಳ ಮುಖೇನ ಹೇಗಾದರೂ ಮನ್ತ್ರಾರ್ಥದ ಸಮನ್ವಯ ಮಾಡಲಾಗುವುದಿಲ್ಲ.

ಇಂತು ಸಜ್ಜನ ವಿಧೇಯ,
ಹೇಮಂತ್ ಕುಮಾರ್ ಜಿ.

Wednesday, 10 April 2019

೮-ಮನೋಮಯ ಗನ್ಧರ್ವ ಮತ್ತು ಋಕ್‍ಸಾಮರೂಪಾ ಅಪ್ಸರಾ


(ಮನೋವೇದಃ)
೭-ಪ್ರಜಾಪತಿರ್ವಿಶ್ವಕರ್ಮ್ಮಾ ಮನೋ ಗನ್ಧರ್ವಸ್ತಸ್ಯ 
ಋಕ್‍ಸಾಮಾನ್ಯಪ್ಸರಸ ಏಷ್ಟಯೋ ನಾಮ||
- ಶುಕ್ಲಯಜುಃಸಂ ೧೮-೪೩

“ಮನಃಪ್ರಾಣವಾಙ್ಮಯ, ಯಜುರ್ಮ್ಮೂರ್ತ್ತಿ, ಮನಃಪ್ರಧಾನ ಪ್ರಜಾಪತಿಯೇ ವಿಶ್ವಕರ್ಮ್ಮಾ (ಸರ್ವಕರ್ಮ್ಮಪ್ರವರ್ತ್ತಕ) ಆಗಿದೆ. ಈ ಯಜುರೂಪೀ ಪ್ರಾಜಾಪತ್ಯ ಮನವು ಗನ್ಧರ್ವವಾಗಿದೆ. ವಾಙ್ಮಯೀ ಋಕ್ ಹಾಗೂ ಪ್ರಾಣಮಯ ಸಾಮಗಳು ಈ ಗನ್ಧರ್ವವನ್ನು ಅಭೀಷ್ಟ ಫಲ ಕೊಡುವುದರಿಂದ ‘ಏಷ್ಟಯಃ’ ಎಂಬ ಹೆಸರಿನಿಂದ ಪ್ರಸಿದ್ಧವಾದ ಅಪ್ಸರಾ ಆಗಿದೆ”.

ಋಕ್-ಸಾಮಲಕ್ಷಣವುಳ್ಳ ವಾಕ್-ಪ್ರಾಣದ ಆಧಾರದಲ್ಲಿಯೇ ಯಜುರ್ಮ್ಮೂರ್ತ್ತಿ ಮನವು ವಿಶ್ವಕರ್ಮ್ಮದಲ್ಲಿ ಸಮರ್ಥವಾಗುತ್ತದೆ. ಸ್ವಸ್ವರೂಪದಿಂದ ಇಚ್ಛಾಶಕ್ತಿ ಪ್ರಕಟಿಸುತ್ತದೆ, ಪ್ರಾಣದ ಮುಖೇನ ತಪಃಕರ್ಮ್ಮದ ಪ್ರವರ್ತ್ತಕವಾಗುತ್ತದೆ ಹಾಗೂ ವಾಕ್ಕಿನ ಮುಖೇನ ಶ್ರಮದ ಅಧಿಷ್ಠಾತೃವಾಗುತ್ತದೆ. ಒಂದುವೇಳೆ ಋಕ್-ಸಾಮಮಯ ವಾಕ್-ಪ್ರಾಣಗಳು ಇಲ್ಲದಿದ್ದರೆ ಮನದ ಯಾವುದೇ ಕಾಮನೆಯು ಸಿದ್ಧವಾಗುವುದಿಲ್ಲ. ಯಜುರ್ಮ್ಮನವು ತನ್ನ ಕಾಮನಾಸಿದ್ಧಿಗಾಗಿ ಋಕ್-ಸಾಮಮಯ ವಾಕ್-ಪ್ರಾಣದಿಂದಲೇ, ನನ್ನ ಈ ಕೆಲಸ ಪೂರ್ತಿಯಾಗಲಿ, ಆ ಕೆಲಸ ಪೂರ್ತಿಯಾಗಲಿ, ಎಂದು ಸತತ ಇಚ್ಛೆ ಪಡುತ್ತಿರುತ್ತದೆ. ಬ್ರಾಹ್ಮಣ ಶ್ರುತಿಯು ಇದೇ ಅರ್ಥವನ್ನು ಹೀಗೆ ಸ್ಪಷ್ಟೀಕರಿಸುತ್ತದೆ –

“ಮನೋ ಹ ಗನ್ಧರ್ವ ಋಕ್‍ಸಾಮೈರಪ್ಸರೋಭಿರ್ಮಿಥುನೇನ ಸಹೋಚ್ಚಕ್ರಾಮ, ಏಷ್ಟಯೋ ನಾಮ | ಋಕ್-ಸಾಮಾನಿ ವಾ ಏಷ್ಟಯಃ | ಋಕ್-ಸಾಮೈರ್ಹ್ಯಾಶಾಸತೇ-ಇತಿ ನೋಽಸ್ತು, ಇತ್ಥಂ ನೋಽಸ್ತು” ||
- ಶತಪಥ ಬ್ರಾಹ್ಮಣ ೯-೪-೧-೧೨

ಇಂತು ಸಜ್ಜನ ವಿಧೇಯ,
ಹೇಮಂತ್ ಕುಮಾರ್ ಜಿ.

Tuesday, 9 April 2019

೬-ಮನಃಪ್ರಾಣವಾಙ್ಮಯ ಆತ್ಮಾ, ೭-ಸರ್ವೇನ್ದ್ರಿಯಮನ ಮತ್ತು ತ್ರಯೀವೇದ

೬-ಮನಃಪ್ರಾಣವಾಙ್ಮಯ ಆತ್ಮಾ ಮತ್ತು ತ್ರಯೀವೇದ

(ಆತ್ಮವೇದಃ)
೫-ಋಚಂ ವಾಚಂ ಪ್ರಪದ್ಯೇ, ಮನೋ ಯಜುಃ ಪ್ರಪದ್ಯೇ
ಸಾಮ ಪ್ರಾಣಃ ಪ್ರಪದ್ಯೇ ||
- ಶುಕ್ಲಯಜುಃಸಂ ೩೬-೧


“ನಾನು ಋಗ್‍ರೂಪೀ ವಾಕ್ಕನ್ನು ಆಶ್ರಯಿಸುತ್ತೇನೆ, ಯಜುರೂಪೀ ಮನವನ್ನು ಆಶ್ರಯಿಸುತ್ತೇನೆ, ಪ್ರಾಣರೂಪೀ ಸಾಮವನ್ನು ಆಶ್ರಯಿಸುತ್ತೇನೆ” ಎಂಬ ಲೌಕಿಕ ಸಂಸ್ಕೃತದ ಮಹೀಧರಭಾಷ್ಯದ ಆಧ್ಯಾತ್ಮಿಕ ತಾತ್ಪರ್ಯ್ಯವೇನೆಂದರೆ, ಆತ್ಮದ ವಾಗ್‍ಭಾಗವು ಉಕ್ಥವಾಗುತ್ತಾ ಋಕ್‍ಸಮುದ್ರವಾಗಿದೆ, ಮನೋಭಾಗವು ಬ್ರಹ್ಮವಾಗುತ್ತಾ ಯಜುಃಸಮುದ್ರವಾಗಿದೆ, ಹಾಗೂ ಪ್ರಾಣಭಾಗವು ಪೃಷ್ಠವಾಗುತ್ತಾ ಸಾಮಸಮುದ್ರವಾಗಿದೆ. ಈ ರೀತಿ ಪ್ರಕೃತ ಶ್ರುತಿಯು ವಿಸ್ಪಷ್ಟ ಶಬ್ದಗಳಲ್ಲಿ ಅಧ್ಯಾತ್ಮಸಂಸ್ಥಾವನ್ನು ತ್ರಯೀವಿಧ್ಯಾಮಯೀ ಎಂದು ಹೇಳುತ್ತಾ, ತ್ರಯೀವಿಧ್ಯೆಯು ತತ್ತ್ವಾತ್ಮಿಕವಾಗಿದೆ ಎಂದು ಸಿದ್ಧಪಡಿಸುತ್ತಿದೆ. ಯಾರ ದೃಷ್ಟಿಯಲ್ಲಿ ವೇದಗ್ರನ್ಥವೇ ವೇದವಾಗಿದೆಯೋ, ಅವರು ಹೇಗೆ ಈ ಶ್ರುತಿಯ ಸಮನ್ವಯ ಮಾಡಿಯಾರು?, ಇದನ್ನು ಅದೇ ವೇದಗ್ರನ್ಥ ಭಕ್ತರಲ್ಲಿ ಕೇಳಬೇಕಾಗಿದೆ. 

೭-ಸರ್ವೇನ್ದ್ರಿಯಮನ ಮತ್ತು ತ್ರಯೀವೇದ(ಪ್ರಜ್ಞಾನವೇದಃ)
೬-ಯಸ್ಮಿನ್ನೃಚಃ ಸಾಮ ಯಜೂಂಷಿ ಯಸ್ಮಿನ್ ಪ್ರತಿಷ್ಠಿತಾ ರಥನಾಭಾವಿವಾರಾಃ |
ಯಸ್ಮಿಂಶ್ಚಿತ್ತಂ ಸರ್ವಮೋತಂ ಪ್ರಜಾನಾಂ ತನ್ಮೇ ಮನಃ ಶಿವಸಂಕಲ್ಪಮಸ್ತು||
- ಶುಕ್ಲಯಜುಃಸಂ ೩೪-೫

ಲೌಕಿಕ ಸಂಸ್ಕೃತದಲ್ಲಿ ಭಾವಾರ್ಥ - “ಹೇಗೆ ರಥನಾಭಿಯಲ್ಲಿ ಆರೆಗಳು ಪ್ರತಿಷ್ಠಿತವಾಗಿರುತ್ತವೆಯೋ, ಹಾಗೆಯೇ ಯಾವ (ಪ್ರಜ್ಞಾನ) ಮನದಲ್ಲಿ ಋಚೆಗಳು, ಸಾಮ, ಹಾಗೂ ಯಜುವು ಪ್ರತಿಷ್ಠಿತವಾಗಿರುತ್ತದೆಯೋ, ಯಾವ (ಸರ್ವೇನ್ದ್ರಿಯಲಕ್ಷಣವುಳ್ಳ ಅತೀನ್ದ್ರಿಯ) ಮನದಲ್ಲಿ ಪ್ರಾಣಿಗಳ (ಮಹತ್-ರೂಪ) ಚಿತ್ತ ಸಂಲಗ್ನವಾಗಿರುತ್ತದೆಯೋ, ಆ ಮನವು ಶುಭ ಸಂಕಲ್ಪ ಹೊಂದಲಿ”. 

ಮನಃಪ್ರಾಣವಾಙ್ಮಯ ಆತ್ಮದಲ್ಲಿ ಮನವೇ ಆತ್ಮದ ಪ್ರಧಾನ ಸ್ವರೂಪವೆಂದು ನಂಬಲಾಗಿದೆ. ಈ ಮನವು ಅನ್ತರ್ಮ್ಮನ, ಬಹಿರ್ಮ್ಮನ, ಭೇದದಿಂದ ೨ ಅವಸ್ಥೆಗಳನ್ನು ಹೊಂದುತ್ತದೆ. 

 1. ಅನ್ತರ್ಮ್ಮನವು ‘ಶ್ವೋವಸೀಯಸ್’ ಎಂದು ಪ್ರಸಿದ್ಧವಾಗಿದೆ ಹಾಗೂ ಇದು ‘ಆನನ್ದ-ವಿಜ್ಞಾನ-ಮನೋ’ ರೂಪದಿಂದ ವಿಕಾಸವಾಗುತ್ತದೆ. ಇದೇ ಮುಕ್ತಿಸಾಕ್ಷೀ ಆತ್ಮಾ ಆಗಿದೆ.
 2. ಬಹಿರ್ಮ್ಮನವು ‘ಪ್ರಜ್ಞಾನಮನ’ ಎಂದು ಪ್ರಸಿದ್ಧವಾಗಿದೆ, ಹಾಗೂ ಇದರ ರಸ-ಬಲಚಿತಿಯ ತಾರತಮ್ಯದಿಂದ ‘ಮನಃ-ಪ್ರಾಣ-ವಾಗ್’ ರೂಪದಿಂದ ವಿಕಾಸವಾಗುತ್ತದೆ. ಇದೇ ಸೃಷ್ಟಿಸಾಕ್ಷೀ ಆತ್ಮಾ ಆಗಿದೆ. 


ಯಜುರ್ವೇದೀಯ ‘ಮನಃಸೂಕ್ತ’ದಲ್ಲಿ ಇದೇ ಬಹಿರ್ಮ್ಮನದ ಪ್ರತಿಪಾದನೆಯಾಗಿದೆ. ಈ ಬಹಿರ್ಮ್ಮನವು ಎಲ್ಲಾ ಇನ್ದ್ರಿಯಗಳ ಸಂಚಾಲಕವಾಗುತ್ತಿದೆ –

ಯತ್ ಪ್ರಜ್ಞಾನಮುತ ಚೇತೋ ಧೃತಿಶ್ಚ ಯಜ್ಜ್ಯೋತಿರನ್ತರಮೃತಂ ಪ್ರಜಾಸು |
ಯಸ್ಮಾನ್ನ ಋತೇ ಕಿಞ್ಚನ ಕರ್ಮ್ಮ ಕ್ರಿಯತೇ ತನ್ಮೇ ಮನಃ ಶಿವಸಂಕಲ್ಪಮಸ್ತು ||೧||
ಸುಷಾರಥಿರಶ್ವಾನಿವ ಯನ್ಮನುಷ್ಯಾನ್ನೇನಾಯತೇಽಭೀಷುಭಿರ್ವಾಜಿನ ಇವ |
ಹೃತ್‍ಪ್ರತಿಷ್ಠಂ ಯದಜಿರಂ ಜವಿಷ್ಠಂ ತನ್ಮೇ ಮನಃ ಶಿವಸಂಕಲ್ಪಮಸ್ತು || ೨ || ಯಜುಃ ೩೪:೩-೪

 • ಮನಃಪ್ರಾಣವಾಙ್ಮಯ ಆತ್ಮದ ಮನವೂ ಮನೋಮವಾಗಿದೆ, 
 • ಪ್ರಾಣವೂ ಮನೋಮಯವಾಗಿದೆ, ಹಾಗೂ 
 • ವಾಕ್ ಕೂಡ ಮನೋಮಯೀ ಆಗಿದೆ. 
 • ಮನೋಮಯ ಮನವು ಯಜುಃಸಮುದ್ರವಾಗಿದೆ, 
 • ಮನೋಮಯ ಪ್ರಾಣವು ಸಾಮಸಮುದ್ರವಾಗಿದೆ, ಹಾಗೂ 
 • ಮನೋಮಯೀ ವಾಕ್ ಋಕ್‍ಸಮುದ್ರವಾಗಿದೆ. 
ಮೂರೂ ವೇದಗಳ ಸಮಷ್ಟಿಲಕ್ಷಣವು ಇದೇ ಪ್ರಜ್ಞಾನಮನದಲ್ಲಿ ಅರ್ಪಿತವಾಗಿದೆ.

ಇಂತು ಸಜ್ಜನ ವಿಧೇಯ,
ಹೇಮಂತ್ ಕುಮಾರ್ ಜಿ.

Monday, 8 April 2019

೫-ಪಾಞ್ಚಜನ್ಯ ಅಗ್ನಿ ಮತ್ತು ತ್ರಯೀವೇದ


(ಚಯನವೇದಃ)
೪-ಋಚೋ ನಾಮಾಸ್ಮಿ ಯಜೂಂಷಿ ನಾಮಾಸ್ಮಿ ಸಾಮಾನಿ ನಾಮಾಸ್ಮಿ |
ಯೇ ಅಗ್ನಯಃ ಪಾಞ್ಚಜನ್ಯಾ ಅಸ್ಯಾಂ ಪೃಥಿವ್ಯಾಮಧಿ |
ತೇಷಾಮಸಿ ತ್ವಮುತ್ತಮಃ ಪ್ರ ನೋ ಜೀವಾತವೇ ಸುವ ||
- ಶುಕ್ಲಯಜುಃಸಂ ೧೮-೬೭


ಯಜ್ಞಕರ್ತ್ತಾ ಯಜಮಾನನು ಚಯನಯಜ್ಞದ ಮುಖೇನ ಪಞ್ಚಚಿತಿಕ ಅಗ್ನಿಯನ್ನು ತನ್ನ ಆತ್ಮಾಗ್ನಿಯಲ್ಲಿ ಆಧಾನಗೊಳಿಸುತ್ತಾ ಆಧ್ಯಾತ್ಮಿಕ ವೇದತ್ರಯಿಯನ್ನೂ ಆಧಾನ ಮಾಡುತ್ತಾನೆ. ವೈಧಯಜ್ಞದ ಮುಖೇನ ದಿವ್ಯತ್ರಯಿಯ ಆಧಾನವೇ ಚಯನದ ಸರ್ವೋತ್ಕೃಷ್ಟ ಫಲವಾಗಿದೆ. ಪ್ರಕೃತ ಮನ್ತ್ರವು ಇದೇ ಆಧ್ಯಾತ್ಮಿಕ ವೇದತ್ರಯಿಯ ಸ್ಪಷ್ಟೀಕರಣ ನೀಡುತ್ತಾ ಹೇಳುತ್ತಿರುವುದೇನೆಂದರೆ – “ಋಚೆಗಳು ನನ್ನ ಹೆಸರು, ಯಜುವು ನನ್ನ ಹೆಸರು, ಸಾಮವು ನನ್ನ ಹೆಸರಾಗಿದೆ”. ಅಂದರೆ ಯಜ್ಞದಿಂದ ಸಂಸ್ಕೃತವಾದ ನನ್ನ ಮನಃಪ್ರಾಣವಾಙ್ಮಯ ಭೂತಾತ್ಮವು ಇಂದು ಋಕ್-ಯಜುಃ-ಸಾಮಮಯವಾಗಿದೆ. ಪೃಥಿವೀ, ಅನ್ತರಿಕ್ಷ, ದ್ಯೌ, ೨ ಸನ್ಧಿಗಳು, ಈ ರೀತಿ ೫ ಭಾಗಗಳಲ್ಲಿ ವಿಭಕ್ತ, ತತ್ಕಾರಣ ‘ಪಾಞ್ಚಜನ್ಯ’ ಎಂದು ಪ್ರಸಿದ್ಧವಾದ ಯಾವ ಚಿತ್ಯಾಗ್ನಿಯು ಸ್ತೋಮ್ಯತ್ರಿಲೋಕೀರೂಪೀ ಮಹಾಪೃಥಿವಿಯ ಮೇಲೆ ಪ್ರತಿಷ್ಠಿತವಾಗಿದೆ. ಈ ಐದರ ಅಪೇಕ್ಷೆಯಿಂದ ಅಮೃತಲಕ್ಷಣವುಳ್ಳ ಚಿತೇನಿಧೇಯಾಗ್ನಿಯು (ಪ್ರಾಣಾಗ್ನಿಯು) ಸರ್ವಶ್ರೇಷ್ಠವಾಗಿದೆ. ಅದನ್ನೇ ಪ್ರಾರ್ಥಿಸಲಾಗುತ್ತದೆ – “ನೀವು ಸರ್ವರಲ್ಲಿ ಶ್ರೇಷ್ಠರೂ, ಜೀವನಸತ್ತೆಯ ಅನ್ಯತಮ ಪ್ರತಿಷ್ಠಾ ಆಗಿದ್ದೀರಿ, ಹಾಗಾಗಿ ನೀವು ನನ್ನನ್ನು ದೀರ್ಘಕಾಲ ಪರ್ಯ್ಯನ್ತ ಜೀವಿತವಾಗಿರಿಸಿರಿ”. ಮನ್ತ್ರಾರ್ಥದ ಸಮ್ಬನ್ಧವಾಗಿ ಪ್ರಶ್ನೆಯು ಉಪಸ್ಥಿತವಾಗಬಹುದು. ಅದೇನೆಂದರೆ ಆತ್ಮದ ೩ ಕಲೆಗಳಲ್ಲಿ ಯಾವ್ಯಾವುದು ಋಕ್-ಯಜುಃ-ಸಾಮ ಆಗಿವೆ? ಇದೇ ಪ್ರಶ್ನೆಗೆ ಸಮಾಧಾನ ನೀಡುತ್ತಾ ಇನ್ನೊಂದು ಮನ್ತ್ರವು ಉಪಸ್ಥಿತವಾಗುತ್ತದೆ. ಅದನ್ನು ಮುಂದಿನ ಲೇಖನದಲ್ಲಿ ನೋಡೋಣ.

ಇಂತು ಸಜ್ಜನ ವಿಧೇಯ,
ಹೇಮಂತ್ ಕುಮಾರ್ ಜಿ.