Friday, 31 January 2020

"ರೂಪಂ ರೂಪಂ ಪ್ರತಿರೂಪೋ ಬಭೂವ" - ಎಲ್ಲ ರೂಪಗಳ ಪ್ರತಿರೂಪವದು


ಪ್ರತಿಯೊಂದು ರೂಪದಲ್ಲಿ ಅದರ ಪ್ರತಿಬಿಂಬವಿದೆ. ಈ ಮಹಾನ್ ವ್ಯಾಪಕ ವೈಜ್ಞಾನಿಕ ತತ್ವದ ಉದ್ಘಾಟನೆಯು ಋಗ್ವೇದದ ಮನೀಷೀ ಮಹರ್ಷಿ ಗರ್ಗರ ಹೃದಯದಲ್ಲಾಯಿತು. ಕವಿಯು ಪ್ರಜ್ಞೆಯ ಬಲದಿಂದ ಬೆರಳೆಣಿಕೆಯ ಶಬ್ದಗಳಲ್ಲಿ ಬ್ರಹ್ಮಾಂಡದ ಆಧಾರಶಿಲೆಯ ವರ್ಣನೆ ಮಾಡಿದ್ದಾರೆ. ಕೊನೆಗೆ ಇದರ ಮೇಲೆಯೇ  ವಿಜ್ಞಾನಿಗಳ ಮಸ್ತಿಷ್ಕ ಗುದ್ದಿಕೊಳ್ಳುತ್ತದೆ, ಹಾಗೂ ಇದರ ಆಶ್ರಯ ಪಡೆದು ಅಧ್ಯಾತ್ಮ-ವೇತ್ತರಿಗೆ ಆನಂತ ಪ್ರಾಪ್ತವಾಗುತ್ತದೆ. ಇದೇ ಸನಾತನ ಸತ್ಯವನ್ನು ಆರ್ಷ ಮಹಾಪ್ರಜ್ಞೆಗಳು ಯುಗ-ಯುಗಗಳಲ್ಲಿ ಅಹರ್ನಿಶೆಗಳಲ್ಲಿ ಘೋಷಿಸಿದ್ದಾರೆ. ದೇಶ ಹಾಗೂ ಕಾಲದ ಶೃಂಖಲೆಗಳಿಂದ ಅತೀತವಾದ್ದು ಈ ವೇದ-ವಿಜ್ಞಾನ. ಇದೇ ತತ್ವದ ಪಾರಾಯಣವನ್ನು ಸಮಸ್ತ ಆರ್ಷ-ಶಾಸ್ತ್ರವು ಸಾವಿರಾರು ಮುಖಗಳಿಂದ ಮಾಡುತ್ತಾ ಬರುತ್ತಿವೆ. ಪ್ರತಿಯೊಂದು ರೂಪದಲ್ಲಿ ಅದರ ಮೂರ್ತಿಯೇ ಪ್ರತಿಬಿಂಬಿತವಾಗಿದೆ.

ಇದೇ ಕಾರಣದಿಂದ ಸಮಸ್ತ ವಿಶ್ವವು ಹೇಗೆ ಅಜ್ಞೇಯವೋ ಹಾಗೆಯೇ ವಿಶ್ವದ ಒಂದು ಪರಮಾಣುವೂ ಅಜ್ಞೇಯವಾಗಿದೆ. ಒಂದೊಂದು ಪರಮಾಣುವಿನ ರೂಪವು ಅದರ ಪ್ರತಿರೂಪವೇ ಆಗಿದೆ. ಹೇಗೆ ಆ ಬ್ರಹ್ಮವು ನೇತಿ ಪದದಿಂದ ಕರೆಯಲ್ಪಟ್ಟಿದೆಯೋ, ಅದೇ ರೀತಿ ಒಂದು ಪರಮಾಣುವಿನ ಆಶ್ಚರ್ಯಮಯ ರಹಸ್ಯವನ್ನು ಸಾವಿರಾರು ಸೂತ್ರಗಳಲ್ಲಿ ವರ್ಣಿಸಿದರೂ ಕೊನೆಯಲ್ಲಿ ಹೇಳುವುದಕ್ಕೆ ಉಳಿಯುವುದು ಇದೊಂದೇ - ನೇತಿ ! ಒಂದು ಅಣುವಿನ ರಹಸ್ಯವನ್ನೂ ಇಲ್ಲಿ ಎಂದೂ ಯಾರೂ ತಿಳಿಯಲಾಗಲಿಲ್ಲ, ಯಾರೂ ಎಂದಿಗೂ ತಿಳಿದಿಲ್ಲ ಹಾಗೂ ಎಂದಿಗೂ ತಿಳಿಯುವುದೂ ಇಲ್ಲ. ಇದು ಧ್ರುವದಂತೆ ಸತ್ಯ. ವಿಜ್ಞಾನವಾದಿಗಳಿಗಿದು ಪರಮ ನಿರಾಶೆಯಾದರೆ, ಯೋಗಿಗಳಿಗಿದೇ ಪರಮ ತೃಪ್ತಿಯು. ಎಷ್ಟು ಆನಂದವೆಂದರೆ ಅದರ ಪ್ರತಿರೂಪತೆಯಿಂದ ಸ್ಥಿತ ಒಂದು ಪರಮಾಣುವಿನ ರೂಪದ ಮೇಲೆಯೂ ವರುಣನ ಪಾಶಗಳ ಪ್ರಹಾರವಾಗುವುದಿಲ್ಲ. ಎಷ್ಟು ನಾವು ತಿಳಿಯಲು ಸಾಧ್ಯವೋ, ಅದು ವರುಣನ ಪಾಶದಲ್ಲಿ ಬಂಧಿಯಾಗಿದೆ, ಅದೇ ಜಡ ಮರ್ತ್ಯಭಾವಾಪನ್ನವಾಗಿದೆ. ಅಜ್ಞಾತ ಭಾಗವು ಅಮೃತಮಯ ಇಂದ್ರಪ್ರಾಣದಿಂದ ಸಂಪೃಕ್ತವಾಗಿರುತ್ತದೆ.

ಪ್ರಜಾಪತಿಯ ಎರಡು ರೂಪಗಳು ಹೇಳಲ್ಪಟ್ಟಿದೆ - ನಿರುಕ್ತ ಹಾಗೂ ಅನಿರುಕ್ತ. ನಿರುಕ್ತವು ಅಲ್ಪ ಹಾಗೂ ಮೃತ್ಯುವಾಗಿದ್ದರೆ, ಅನಿರುಕ್ತವು ಅನಂತ ಹಾಗೂ ಅಮೃತವಾಗಿದೆ (ಛಾಂ.ಉ. ೭|೨೪|೧). ರೂದರ್ಫೋರ್ಡ್, ನೀಲ್ಸ್ ಬೋಹರ್, ಮ್ಯಾಕ್ಸ್ ಪ್ಲ್ಯಾಂಕ್, ಶ್ರೋಡಿಂಗರ್ ಹಾಗೂ ದುರ್ಯೋಧನನ ೧೦೧ ಬಂಧುಗಳು ಸೇರಿಯೂ ಪರಮಾಣುವಿನ ಯಾವ ರೂಪದ ವರ್ಣನೆ ಮಾಡುತ್ತಾರೋ, ಅದು ನಿರುಕ್ತ ಹಾಗೂ ಮರ್ತ್ಯವಾದದ್ದು. ಅವ್ಯಯಾತ್ಮಾ ಇಂದ್ರದ ಪ್ರತಿರೂಪತೆಯಿಂದ ನಿರ್ಮಿತ ಯಾವ ಪರಮಾಣುವಿನ ಕೃತ್ಸ್ನ ರೂಪವಿದೆಯೋ, ಅದರ ತೋರಣದ ಕೆಳಗೆ ಬಂದು ಎಲ್ಲಾ ಉಪಾಸಕರಿಗೆ ಕೊನೆಯಲ್ಲಿ ನೇತಿ ಎಂದು ಹೇಳಿ ತಲೆತಗ್ಗಿಸಬೇಕಾಗುತ್ತದೆ. ವಿದೇಶೀ ತತ್ವಶಾಸ್ತ್ರಜ್ಞ ಮೆಟರ್ಲಿಂಕ್ ಹೇಳುತ್ತಾನೆ -

"ಈ ವಿಶ್ವದ ಒಂದು ಅಣುವಿನ ರಹಸ್ಯವಾದರೂ ಎಂದಿಗೆ ನನಗೆ ಅನುಭವಕ್ಕೆ ಬರುತ್ತದೆಯೋ, ಆ ದಿನ ಒಂದೋ ಈ ವಿಶ್ವವು ಸಮಸ್ತ ವೈಚಿತ್ರ್ಯದಿಂದ ಹೀನ ಶ್ಮಶಾನದಂತಾಗುತ್ತದೆ ಅಥವಾ ನನ್ನ ತಲೆ ಒಡೆದು ಚೂರಾಗುತ್ತದೆ."

ಯಾಜ್ಞವಲ್ಕ್ಯರು ಅಲ್ಲಿಗೆ ತಲುಪುವ ಯತ್ನ ಮಾಡುತ್ತಿದ್ದ ಗಾರ್ಗಿಗೆ - ಹೇ ಗಾರ್ಗೀ! ಅತಿಪ್ರಶ್ನೆ (transcendental questions) ಕೇಳಬೇಡ. ಅತಿಪ್ರಶ್ನೆಗಳಿಂದ ನಿನ್ನ ತಲೆ ಹಾರಿ ಹೋಗುತ್ತದೆ ಎಂದು ಸರಿಯಾದ ಸಂಕೇತವನ್ನೇ ನೀಡಿದ್ದರು.

"ರೂಪಂ-ರೂಪಂ ಪ್ರತಿರೂಪೋ ಬಭೂವ, ತದಸ್ಯ ರೂಪಂ ಪ್ರತಿ ಚಕ್ಷಣಾಯ |
ಇನ್ದ್ರೋ ಮಾಯಾಭಿಃ ಪುರುರೂಪ ಈಯತೇ, ತದಸ್ಯ ಯುಕ್ತಾ ಹರಯಃ ಶತಾದಶ ||" 
ಋ ೬|೪೭|೧೮


ಅದನ್ನು ನೋಡಲಿಚ್ಛಿಸಿದರೆ ಎಲ್ಲಾ ರೂಪಗಳು ಶುಭ. ಎಲ್ಲದರಲ್ಲಿಯೂ ಅದರ ಪ್ರತಿಬಿಂಬವೇ ಇದೆ. ತ್ರಿಭುಜ, ಚತುರ್ಭುಜ, ಪಂಚಭುಜ, ಷಡ್ಭುಜ ಇತ್ಯಾದಿ ಅನಂತ ಭುಜಗಳುಳ್ಳ ಆಕೃತಿಗಳು ಒಂದೇ ವೃತ್ತದ ರೂಪಾಂತರಗಳಾಗಿವೆ. ವೃತ್ತವು ಬಿಂದುವಿನ ರೂಪವಾಗಿದೆ. ಯಾವುದೇ ರೂಪವನ್ನು ನೋಡಿದರೂ ಬಿಂದುವಿನ ಮಹಿಮೆಯೇ ಪ್ರತೀತವಾಗುತ್ತದೆ. ಬಿಂದುವು ಇಂದ್ರವಾಗಿದ್ದು (ಬ್ರಹ್ಮವಾಗಿದ್ದು) ತನ್ನ ಮಾಯೆಯಿಂದ ನಾನಾ ರೂಪಗಳಲ್ಲಿ ಪ್ರಕಟವಾಗುತ್ತಿದೆ. ಅದರ ಸಾವಿರಾರು ರಶ್ಮಿಗಳು ಎಲ್ಲೆಡೆ ಹರಡಿವೆ. ಆ ಬಿಂದುವೇ ಅದರ ಪ್ರತಿಚಕ್ಷಣ ಅಥವಾ ದರ್ಶನಕ್ಕಾಗಿ ಪರ್ಯಾಪ್ತ ರೂಪವು -

"ತದಸ್ಯ ರೂಪಂ ಪ್ರತಿಚಕ್ಷಣಾಯ |"

ರೂಪ-ರೂಪಗಳ ಸನಿಹ ತೆವಳಿ ಬಹುರೂಪತೆಯನ್ನು ಸಾರವೆಂದು ಒಪ್ಪುವುದು ಮಸ್ತಿಷ್ಕದ ಶ್ರಮ. ಅರ್ಧಾಂಶ, ತೃತೀಯಾಂಶ, ಚತುರ್ಥಾಂಶ ಇತ್ಯಾದಿ ಅನೇಕ ಸಂಖ್ಯೆಗಳನ್ನು ಹೇಳಿ, ಒಂದೇ ಆಗಿರುವ  ಪೂರ್ಣವನ್ನು ಯಾರು ಪ್ರಕಟಗೊಳಿಸಲು ಸಾಧ್ಯ? ಹಾಗೆಯೇ ಬಿಂದುವಿನಲ್ಲಿಯೇ ಅನೇಕ ಆಕೃತಿಗಳ ದರ್ಶನ ಪಡೆಯುವುದು ಬುದ್ಧಿಮತ್ತತೆ. ಇದೇ ತತ್ವವನ್ನು ಮಹರ್ಷಿಗಳು ಇಂತೆಂದಿದ್ದಾರೆ -

"ತದಾ ದ್ರಷ್ಟುಃ ಸ್ವರೂಪೇಽವಸ್ಥಾನಮ್ |"
- ಯೋಗ ದರ್ಶನ ೧|

ಸ್ವರೂಪವೇ ಒಂದು ರೂಪವು. ಪ್ರತಿಚಕ್ಷಣಕ್ಕಾಗಿ ಅಷ್ಟೇ ಸಾಕು. ಅದುವೇ ಅಲ್ಪವೆಂದು ಪ್ರತೀತವಾಗುತ್ತಾ ಭೂಮಾದಿಂದ ವ್ಯಾಪ್ತವಾಗಿದೆ. ಅಲ್ಪವು ಭೂಮಾದ ಪ್ರತಿರೂಪವಾಗಿದೆ. ಯಾವ ದ್ರಷ್ಟೃವು ತನ್ನ ಸ್ವರೂಪವನ್ನು ಗುರುತಿಸಿಕೊಂಡನೋ, ಆತನು ಎಲ್ಲವನ್ನು ಅರಿತಂತೆ.ಎಲ್ಲಾ ಚರಾಚರಗಳ ಮಧ್ಯ ಅಥವಾ ಕೇಂದ್ರದಲ್ಲಿ ಯಾವ ಮುಖ್ಯ ಪ್ರಾಣವಿದೆಯೋ, ಅದೇ ಇಂದ್ರ (ಬ್ರಹ್ಮ) -

"ಸ ಯೋಽಯಂ ಮಧ್ಯೇ ಪ್ರಾಣ ಏಷ ಏವೇನ್ದ್ರಃ |" -ಶತಪಥ ೬|||

ಯಾವ ಇಂದ್ರನು ತನ್ನ ಶಕ್ತಿಗಳಿಂದ ಅನೇಕ ರೂಪಗಳನ್ನು ಧಾರಣೆ ಮಾಡಿದ್ದು, ತನ್ನ ಬ್ರಹ್ಮಾಂಡ ಸಂಮಿತ ವಿರಾಟ್ ರಥದಲ್ಲಿ ಸಾವಿರಾರು ಕುದುರೆಗಳು (ಹರಯಃ ಶತಾ ದಶ) ಸೇರಿಕೊಂಡಿವೆ. ’ಕೌಷೀತಕೀ ಬ್ರಾಹ್ಮಣ’ದ ಅನುಸಾರ ಪ್ರಾಣದ ಸಂಜ್ಞೆಯೇ ಹರಿಯು -

ಪ್ರಾಣೋ ವೈ ಹರಿಃ | - ಕೌ. ೧೭|

ಅನಂತ ಪ್ರಾಣವೇ ಇಂದ್ರದ ಸಾವಿರಾರು ಅಶ್ವಗಳು. ಅವುಗಳ ಸಹಾಯದಿಂದಲೇ ಈ ಮಹಾನ್ ರಥವು ಗತಿಶೀಲವಾಗಿರುತ್ತದೆ.

- ಹೇಮಂತ್ ಕುಮಾರ್ ಜಿ.

Friday, 24 January 2020

ಸಂಪ್ರಶ್ನೆ - ಒಂದು ಮಹಾಪ್ರಶ್ನೆ?


ವೇದದ ಮಹರ್ಷಿಗಳು ಬ್ರಹ್ಮ-ವಿಷಯಕ ತಮ್ಮ ಜಿಜ್ಞಾಸೆಯನ್ನು ಹಲವು ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ. ಸಮಾಧಿಯಲ್ಲಿ ವಿಶ್ವದ ರಹ್ಯಗಳ ಮೇಲೆ ಚಿಂತನೆ ನಡೆಸುತ್ತಾ ಯಾವಾಗ ಅವರು ವಿಶ್ವಪತಿಯ ಸ್ವರೂಪದ ಧ್ಯಾನ ಮಾಡುತ್ತಿದ್ದರೋ, ಆಗ ಅನಂತ ಅಜ್ಞೇಯ ತತ್ವದ ಅನಿರ್ವಚನೀಯತೆಯಿಂದ ಮುಗ್ಧರಾಗಿ ಅವರು "ಕಸ್ಮೈ ದೇವಾಯ ಹವಿಷಾ ವಿಧೇಮ (ಋ. ೧೦|೧೨೧|೧-೯)" ಎಂಬ ಗೀತೆಯನ್ನು ಗಾನ ಮಾಡಿದರು. ಈ ಸಂಗೀತವು ಪ್ರಪಂಚದ ಸಾಹಿತ್ಯದಲ್ಲಿ ಇಂದಿಗೂ ಅದ್ವಿತೀಯವಾಗಿದೆ. ಅದಾವ ದೇವನಿಗೆ ನಾವು ನಮ್ಮಯ ಹವಿಸ್ಸನ್ನು ಸಮರ್ಪಿಸಬೇಕು? - ಈ ಸನಾತನ ಪ್ರಶ್ನೆಯ ವಿರಾಟ ಉದರದಲ್ಲಿ ಪ್ರಪಂಚದ ಎಲ್ಲಾ ಉತ್ತರಗಳು ನಿರಂತರವಾಗಿ ಬಂದುಹೋಗುತ್ತಿರುತ್ತವೆ ಹಾಗೂ ಪಚನವಾಗುತ್ತಿರುತ್ತವೆ. ಆದರೆ ಈ ಪ್ರಶ್ನೆಯ ಕುಕ್ಷಿಯಲ್ಲಿ ಯಾವ ಹುತಭುಕ್ ವೈಶ್ವಾನರವಿದೆಯೋ, ಅದು ಎಂದಿಗೂ ತೃಪ್ತವಾಗುವುದು ಕಂಡುಬರುವುದಿಲ್ಲ. ಯುಗ-ಯುಗಾಂತರಗಳಿಂದ ದಾರ್ಶನಿಕರು ಇದೇ ಪ್ರಶ್ನೆಗಾಗಿ ತಮ್ಮ ವೈಚಾರಿಕ ಹವಿಸ್ಸನ್ನು ಕಲ್ಪಿಸುತ್ತಾ ಬಂದಿದ್ದಾರೆ; ಆದರೆ ಇಂದಿನವರೆಗೆ ಈ ವಿರಾಟ್ ಪ್ರಶ್ನೆಯು ಅಂಗದನ ಕಾಲಿನಂತೆ ತನ್ನ ಭೂಮಿಯಿಂದ ಎಳ್ಳಷ್ಟೂ ವಿಚಲಿತವಾಗಲಿಲ್ಲ. ಈ ಪ್ರಶ್ನೆಯು ಅಚ್ಯುತವಾಗಿದೆ. ಇತೆರೆ ಎಲ್ಲಾ ಸಮಾಧಾನಗಳು ಜಗಮಗಿಸಿದರೂ, ಈ ಪ್ರಶ್ನೆಯು ಧ್ರುವದಂತೆ ತನ್ನ ಸ್ಥಾನವನ್ನು ಕಾಯ್ದಿರಿಸಿಕೊಂಡಿದೆ. ಉದ್ಧಮ ಬುದ್ಧಿವಾದಗಳ ಆಘಾತಗಳಿಂದ ಇದರ ವಜ್ರ ಶರೀರವು ಇನ್ನೂ ದುರ್ಭೇದ್ಯವಾಗುತ್ತಾ ಹೋಗುತ್ತದೆ. ಹೇಗೆ ಪಾರದದ ಮೂರ್ಚ್ಛನೆಗಾಗಿ ಮಧ್ಯಕಾಲೀನ ರಸೇಂದ್ರ ದರ್ಶನದ ಅನುಯಾಯಿಗಳ ಪ್ರಯತ್ನವು ಸಫಲತೆಯನ್ನು ಕಾಣಲಿಲ್ಲವೋ, ಹಾಗೆಯೇ ವಿಶ್ವದ ಮಹಾನ್ ಒಗಟಿನ ಸಂಪ್ರಶ್ನೆಯನ್ನು ಬುದ್ಧಿವಾದದ ನಾರಾಚವು ಎಂದಿಗೂ ಭೇದಿಸಲಾಗಲಿಲ್ಲ.

ಕಲ್ಪಾದಿಯಿಂದ ಕಲ್ಪಾಂತ್ಯದವೆರೆಗೆ ಹಬ್ಬಿಕೊಂಡಿರುವ ಕಾಲದ ವಿಶಾಲ ವಿಸ್ತಾರದಲ್ಲಿ ದೂರದಿಂದ ಹಾಗೂ ನಿಕಟದಿಂದ ಅನೇಕ ವಿಚಾರಗಳ ಪರಿವ್ರಾಜಕರು ಈ ಸಂಪ್ರಶ್ನೆಗೆ ಶರಣಾಗಿದ್ದಾರೆ. ಇದರ ತೀರ್ಥೋದಕದಲ್ಲಿ ಮಿಂದ ಶ್ರದ್ಧಾಳುಗಳಿಗೆ ಶಾಂತಿ ದೊರಕಿದರೆ, ಅಶ್ರದ್ಧಾಳುಗಳಿಗೆ ನಿರಾಶೆಯು ಕಟ್ಟಿಟ್ಟ ಬುತ್ತಿ.

ವೇದವು ಇಂತೆಂದಿದೆ -

ಯೋ ದೇವಾನಾಂ ನಾಮಧಾ ಏಕ ಏವ ತಂ ಸಂಪ್ರಶ್ನಂ ಭುವನಾ ಯನ್ತಿ ಸರ್ವಾ |
- ಅಥರ್ವ ೨||

ಅಂದರೆ - ಅನೇಕ ದೇವತೆಗಳ ನಾಮ-ಭೇದವಿದ್ದರೂ, ಯಾವುದು ಒಂದೇ ಆಗಿದೆಯೋ, ಅಂತಹಾ ಸಂಪ್ರಶ್ನೆ ಎಂಬ ಬ್ರಹ್ಮದ ಶರಣದಲ್ಲಿ ಸಮಸ್ತ ಭುವನವು ಪ್ರಾಪ್ತವಾಗುತ್ತದೆ.

ಈ ತತ್ವವು ಅಜ್ಞೇಯ ಹಾಗೂ ಅನಂತವಾಗಿದ್ದಾಗ್ಯೂ, ಋಷಿಗಳು ಹಾಗೂ ಧ್ಯಾನಶೀಲ ಕವಿಗಳು ತಮ್ಮ-ತಮ್ಮಯ ಬುದ್ಧಿಗೆ ತೋಚಿದಂತೆ ಅದನ್ನು ಬಗೆದರು.

ನಾಸದೀಯ ಸೂಕ್ತದ ಋಷಿಯು ಕೇಳಿದರು -

"ಕೋ ಅದ್ಧಾ ವೇದ ಕ ಇಹ ಪ್ರವೋಚತ್?"
­- ಋ. ೧೦|೧೨೯|
ಅಂದರೆ -
                   ಯಾರು ತಿಳಿದರು, ಯಾರು ಹೇಳಿದರು?

ಇದರ ಉತ್ತರವು ಹಲವು ರೀತಿಯಲ್ಲಿರಬಹುದು -

                   ಯಾರೂ ತಿಳಿಯಲಿಲ್ಲ, ಯಾರೂ ಹೇಳಲಿಲ್ಲ.
ಅಥವಾ -
                   ಯಾರೆಷ್ಟು ತಿಳಿದರೋ, ಅವರಷ್ಟು ಹೇಳಿದರು.
ಅಥವಾ -
                   ತಿಳಿದವರೆಲ್ಲರು ಅದನು ಅಜ್ಞೇಯವೆಂದೇ ಹೇಳಿದರು.

ನಂತರವೂ ಅವರಲ್ಲಿ ಹೇಳದೆ ಕುಳಿತವರಾರಿಲ್ಲ. ಭಾವ-ಭೇದದಿಂದ ಈ ಭಿನ್ನ ಸಮಾಧಾನಗಳಿವೆ, ಆದರೆ ಆ ಪ್ರಶ್ನೆಯು ನಿತ್ಯವೂ ನವೀನವಾಗಿಯೇ ಇರುತ್ತದೆ. ಹೇಗೆ ಬಹು ಪುರಾತನವಾಗಿದ್ದರೂ ಉಷೆಯು ನಿತ್ಯ ಯುವತಿಯೋ (ಋ. ೩|೬೧|೧), ಹಾಗೆಯೇ ಬ್ರಹ್ಮದ ರಹಸ್ಯ ಅಥವಾ ಪ್ರಶ್ನೆಯು ಸದಾ ಕಾಯಕಲ್ಪ ಮಾಡಿಕೊಂಡು ಹೊಸದಾಗಿಯೇ ಇರುತ್ತದೆ. ಹಿಂದಿನ ಶತಮಾನದಲ್ಲಿ ಪ್ರಶ್ನೆ ಹಾಗೂ ಸಮಾಧಾನ ಎಂಬ ಋಣ-ಧನ ವಿದ್ಯುತ್ತುಗಳ ಯಾವ ಸ್ವರೂಪವಿತ್ತೋ, ಅದು ಅರ್ವಾಚೀನ ವಿಜ್ಞಾನದ ಮುಂದೆ ಹೊಸ ಕಳೇವರದಲ್ಲಿ ಉಪಸ್ಥಿತವಾಗಿದೆ. ಹೊಸ ಬೀಜ, ಹೊಸ ಶಾಖೆ-ಪ್ರಶಾಖೆಗಳು. ಆದರೆ ಆ ಬೀಜದ ಅವ್ಯಕ್ತ ಸ್ವರೂಪ; ಅದರ ರಹಸ್ಯವು ಅಪರಿವರ್ತನಾಶೀಲವಾಗಿದೆ; ಅದು ಹೇಗೆ ಮೊದಲು ನೇತಿ-ನೇತಿ ಎಂಬ ಪರಿಧಿಯಿಂದ ಆವೃತವಾಗಿತ್ತೋ, ಹಾಗೆಯೇ ಇಂದಿಗೂ ಸಿದ್ಧವಾಗುತ್ತಿದೆ. ಆ ಪ್ರಶ್ನ-ರೂಪೀ ಪ್ರಜಾಪತಿಯ ನಿರುಕ್ತ-ರೂಪವು (Manifest forms) ಬದಲಾಗುತ್ತಿರುತ್ತದೆ, ಅದರ ಅನಿರುಕ್ತ-ರೂಪವು ಸದಾ ಏಕರಸವಾಗಿರುತ್ತದೆ. ಬ್ರಾಹ್ಮಣ ಗ್ರಂಥಗಳು ಪ್ರಜಾಪತಿಯ ಎರಡು ರೂಪಗಳನ್ನು ಹೇಳಿವೆ -

ದ್ವಯಂ ಹ ವೈ ಪ್ರಜಾಪತೇ ರೂಪಂ, ನಿರುಕ್ತಂ ಚ, ಅನಿರುಕ್ತಂ ಚ |

ಅನಿರುಕ್ತ (Unmanifest or undefined) ಪ್ರಜಾಪತಿಯೇ ಅಮೃತವು. ಯಾವ ಆಹುತಿಯಲ್ಲಿ ಯಾವುದೇ ದೇವತೆಯ ಹೆಸರಿರುವುದಿಲ್ಲವೋ, ಆ ಅನಿರುಕ್ತ ಆಹುತಿಯು ಪ್ರಜಾಪತಿಗೆ ತಲುಪುತ್ತದೆ. ಇದೇ ಪ್ರಜಾಪತಿಯ ಉಪಾಂಶು ಆಹುತಿಯಾಗಿದೆ. ಇದು ಸೃಷ್ಟಿಯ ಮೂಲ ತತ್ವದ ರೂಪದಲ್ಲಿ ಸಮಸ್ತ ಬ್ರಹ್ಮಾಂಡದಲ್ಲಿ ಪರಿಪೂರಿತವಾದಂತಹಾ ನಿರ್ಘೋಷ ವಾಕ್ (Silent, unmanifest speech) ಆಗಿದೆ. ಇದರಿಂದಲೇ ಪ್ರಜಾಪತಿಯ ನಿರುಕ್ತ-ರೂಪೀ ಘೋಷಿಣೀ ವಾಕ್ ಉತ್ಪನ್ನವಾಗುತ್ತದೆ. ಒಂದು ಅನಂತವಾದರೆ, ಇನ್ನೊಂದು ಶಾಂತ. ಒಂದು ಸಂಪ್ರಶ್ನೆಯಾದರೆ, ಇನ್ನೊಂದು ಅದರ ಉತ್ತರ. ಕಾರ್ಲಾಇಲ್ ಹೇಳುತ್ತಾನೆ -

Under all speech that is good... there lies a silence that is better. Silence is as deep as eternity, speech is shallow as time.

ಅಂದರೆ - ಶಬ್ದಮಯ ವಾಕ್ಕಿನಿಂದಾಚೆ ಶಬ್ದಕ್ಕಿಂತ ಉತ್ಕೃಷ್ಟತರದಲ್ಲಿರುವ ಒಂದು ಗುಹ್ಯ ಮೌನದ ಭಾಷೆ ಇದೆ. ಮೌನವು ಏಕರಸ ಮಹಾಕಾಲದಂತೆ ಅಗಾಧವಾಗಿದ್ದರೆ, ವಾಣಿಯು ಪರಿಮಿತ ಕಾಲದಂತೆ ಅಪರ್ಯಾಪ್ತವಾಗಿದೆ.

ನಮ್ಮ ಸಹಸ್ರಮುಖೀ ಪ್ರಶ್ನೆಗಳ ಪರ್ಯವಸಾನವು ವಿರಾಟ್ ರಹಸ್ಯದ ಅಂತಸ್ತಲದಲ್ಲಾಗುತ್ತದೆ. ಇಂದು ಒಂದುವೇಳೆ ನಮ್ಮ ಪ್ರಶ್ನೆಗಳಿಗೆ ಉತ್ತರವು ಸಿಗದಿದ್ದರೆ, ಅದರಲ್ಲಿ ವಿಷಾದಕ್ಕೆ ಸ್ಥಾನವಿಲ್ಲ, ನಮ್ಮ ಪೂರ್ವಜ ಮನೀಷಿಗಳು ನಮಗಾಗಿ ಶಂಕೆ ಮತ್ತು ಸಂದೇಹಗಳ ಪ್ರಶಸ್ತ ರಾಜಮಾರ್ಗ ಮಾಡಿಟ್ಟಿಲ್ಲವೇ?

ಮೌರೈಸ್ ಮೈಟರಲಿಂಕ್ ಎಂಬ ನೋಬೆಲ್ ಪಾರಿತೋಷಕದ ವಿಜಯಿಯು ತನ್ನ 'The Great Secret' ಎಂಬ ಪುಸ್ತಕದಲ್ಲಿ ಸುಂದರವಾಗಿ ಆಶ್ವಾಸನಾಪೂರಕ ಶಬ್ದಗಳಲ್ಲಿ ಇದೇ ಭಾವವನ್ನು ವ್ಯಕ್ತಪಡಿಸಿದ್ದಾನೆ -

Let us at once give ear to the "Rig-Veda," the most authentic echo of the most immemorial traditions; let us note how it approaches the formidable problem:

"There was neither Being nor non-Being. There was neither atmosphere nor heavens above the atmosphere. What moved and whither?  And in whose care? Were there waters, and the bottomless deep?

"There was then neither death nor immortality. The day was not divided from the night. Only the One breathed, in Himself, without extraneous breath, and apart from Him, there was nothing.

"Then for the first-time desire awoke within Him; this was the first seed of the Spirit. The sages, full of understanding, striving within their hearts, discovered in non-Being the link with Being.

"Who knoweth and who can tell where creation was born, whence it came, and whether the gods were not born afterward? Who knoweth whence it hath come?

"Whence this creation hath come, whether it be created or uncreated, He whose eye watches over it from the highest heaven, He alone knoweth: and yet doth He knows?" [Rig-Veda X.129] Is it possible to find, in our human annals, words more majestic, more full of solemn anguish, more august in tone, more devout, more terrible? Where could we find at the very foundation of life, a completer and more irreducible confession of ignorance? Where, from the depths of our agnosticism, which thousands of years have augmented, can we point to a wider horizon?  At the very outset, it surpasses all that has been said and goes farther than we shall ever dare to go, lest we fall into despair, for it does not fear to ask itself whether the Supreme Being knows what He has done-knows whether He is or is not the Creator, and questions whether He has become conscious of Himself.

ಅಂದರೆ - "ಬನ್ನಿರಿ, ಯಾರ ಶಬ್ದಗಳಲ್ಲಿ ಚಿರ-ಉಪಾರ್ಜಿತ ಜ್ಞಾನದ ಪ್ರತಿಧ್ವನಿಯು ನಿಹಿತವೋ ಅಂತಹಾ ಋಗ್ವೇದದ ಮನೀಷಿಗಳ ಮಾತನ್ನು ನಾವು ಮೊದಲಿಗೆ ಕೇಳಿಸಿಕೊಳ್ಳೋಣ. ನೋಡಿರಿ ಹೇಗೆ ಅವರು ಈ ಗರಿಷ್ಠ ಪ್ರಶ್ನೆಯ ಸಮಾಧಾನ ನೀಡಿದ್ದಾರೆ -

’ಸತ್ ಇರಲಿಲ್ಲ, ಅಸತ್ ಇರಲಿಲ್ಲ. ಅಂತರಿಕ್ಷವಿರಲಿಲ್ಲ, ಅದರಾಚೆಯ ವ್ಯೋಮವಿರಲಿಲ್ಲ. ಯಾವುದೆಲ್ಲಿ ಗತಿವುಳ್ಳದ್ದಾಗಿತ್ತು? ಯಾರ ಶರಣದಲ್ಲಿತ್ತು? ಆ ಸಮಯದಲ್ಲಿ ಜಲ ಹಾಗೂ ಗಂಭೀರ ಸಾಗರ ಇದ್ದವೋ?

’ಮೃತ್ಯುವಿರಲಿಲ್ಲ ಅಮೃತವೂ ಇಲ್ಲ. ರಾತ್ರಿ ಮತ್ತು ಹಗಲುಗಳ ವಿವೇಕವಿರಲಿಲ್ಲ. ಕೇವಲ ಅದೇ ಒಂದು ತನ್ನ ಶಕ್ತಿಯಿಂದ, ವಾಯುವಿಲ್ಲದೆಯೇ ಪ್ರಾಣನ-ಕ್ರಿಯೆಯನ್ನು ಮಾಡುತ್ತಿತ್ತು. ಅದನ್ನು ಹೊರತುಪಡಿಸಿ ಇನ್ನೇನಿರಲಿಲ್ಲ.’

’ಮೊತ್ತಮೊದಲು ಅದರಲ್ಲಿ ಮನದ ಅಗ್ರಿಮ ಬೀಜವಾದ ಕಾಮನೆಯು ಉತ್ಪನ್ನವಾಯಿತು. ಜ್ಞಾನದಿಂದ ಪೂರಿತ ವಿಪ್ರರು ತಮ್ಮ ಅಂತಸ್ತಲದಲ್ಲಿ ಹುಡುಕುತ್ತಾ ಸತ್ತಿನ ಸಂಬಂಧವನ್ನು ಅಸತ್ತಿನಲ್ಲಿ ಕಂಡುಹಿಡಿದರು.’

’ಯಾರು ತಿಳಿದಿರುವರು ಹಾಗೂ ಯಾರು ಹೇಳಬಲ್ಲರು; ಈ ಸೃಷ್ಟಿಯು ಎಲ್ಲಿಂದಾಗಿದೆ? ದೇವತೆಗಳೂ ಇದರ ಜನ್ಮದ ನಂತರವೇ ಉತ್ಪನ್ನವಾಗಿದ್ದಾರೆ. ಯಾರು ತಿಳಿದಿರುವರು ಇವರೆಲ್ಲಿಂದ ಉತ್ಪನ್ನರಾದರೆಂದು?

’ಈ ವಿಸೃಷ್ಟಿಯು ಎಲ್ಲಿಂದ ಉತ್ಪನ್ನವಾಯಿತು, ಇದು ಜನ್ಮಿಯೋ ಅಥವಾ ಅಜನ್ಮಿಯೋ? ಪರಮ ವ್ಯೋಮದಲ್ಲಿರುವ ಇದರ ಸಾಕ್ಷೀ ದ್ರಷ್ಟೃವು ಮಾತ್ರ ಇದನ್ನು ಅರಿತಿರಬೇಕು. ಆತನೂ ಅರಿತಿರುವನೋ ಇಲ್ಲವೋ?

[ಋಗ್ವೇದ ೧೦|೧೨೯|,,,,೭]

ಯಾವುದೇ ಮಾನವೀಯ ಸಾಹಿತ್ಯದಲ್ಲಿ ಇದಕ್ಕಿಂತ ಹೆಚ್ಚು ಉದಾತ್ತ, ಇದಕ್ಕಿಂತ ಹೆಚ್ಚು ವಿಷಾದಪೂರ್ಣ, ಇದಕ್ಕಿಂತ ಹೆಚ್ಚು ಓಜಸ್ವೀ, ಇದಕ್ಕಿಂತ ಹೆಚ್ಚು ನಿಷ್ಠಾಪೂರ್ಣ ಹಾಗೂ  ಇದಕ್ಕಿಂತ ಹೆಚ್ಚು ಭಯಾನಕ ಶಬ್ದಗಳು ಸಿಗುತ್ತವೆಯೇ? ಜೀವನ-ಪ್ರವಾಹದ ಪ್ರಾರಂಭದಲ್ಲಿಯೇ ಎಲ್ಲಿ ಈ ರೀತಿ ಪೂರ್ಣತಮ ವಿಧಿಯಿಂದ ಮನುಷ್ಯರು ತಮ್ಮ ಅಜ್ಞತೆಯನ್ನು ಏಕಾಂತತಃ ಸ್ವೀಕರಿಸಿದ್ದಾರೆ? ಸಾವಿರಾರು ವರ್ಷಗಳಿಂದ ಹೆಚ್ಚುತ್ತಿರುವ ನಮ್ಮ ಗಂಭೀರ ಸಂಶಯ ಹಾಗೂ ಸಂದೇಹಗಳ ಪರಿಧಿಯು ಎಲ್ಲಿಯಾದರೂ ಇಲ್ಲಿರುವಷ್ಟು ವಿಶಾಲವಾಗಲು ಸಾಧ್ಯವೇ? ಇಲ್ಲಿಯವರೆಗೆ ಈ ನಿಟ್ಟಿನಲ್ಲಿ ಏನೆಲ್ಲ ಹೇಳಬಹುದೋ, ಅವೆಲ್ಲವನ್ನೂ ಕಲಾಹೀನ ಮಾಡುವಂತೆ ನಮ್ಮೀ ಉಷಃಕಾಲೀನ ವಾಕ್ಯವಿದೆ. ಮತ್ತೆ ಈ ಜಟಿಲ ಸಂಪ್ರಶ್ನೆಗಳ ಪಥದಲ್ಲಿ ನಡೆಯುತ್ತಾ ನಾವು ಭವಿಷ್ಯದಲ್ಲಿ ನಿರಾಶೆ ಹೊಂದಿ ಬಿಟ್ಟೋಡದಂತೆ ಕಾಪಾಡಲು ಈ ’ನಾಸದೀಯ ಸೂಕ್ತ’ದ ಋಷಿಯು, ಸಂಶಯವಾದದ ಮಾರ್ಗದಲ್ಲಿ ನಿರ್ಭಯದಿಂದ ಏನು ಹೇಳಿದ್ದಾರೆಂದರೆ, ನಾವು ಭವಿಷ್ಯದಲ್ಲಿ ಎಂದಿಗಾದರೂ ಏನಾದರೂ ಹೆಚ್ಚಿಗೆ ಕಂಡುಹಿಡಿಯಬಹುದೋ, ಅದಕ್ಕಿಂತಲೂ ಇನ್ನೂ ಹೆಚ್ಚು ಇದರಲ್ಲಿ ಹೇಳಿದೆ.  ಬ್ರಹ್ಮಕ್ಕೂ ಈ ಸೃಷ್ಟಿಯ ಅಥವಾ ತನ್ನೀ ಸೃಷ್ಟಿಯ ಜ್ಞಾನವು ಇದೆಯೋ ಇಲ್ಲವೋ ಎಂಬ ಪ್ರಶ್ನೆ ಕೇಳಲು ಅವರಿಗೆ ಯಾವುದೇ ತೊದಲುವಿಕೆ ಉಂಟಾಗಲಿಲ್ಲ."

- ಹೇಮಂತ್ ಕುಮಾರ್ ಜಿ.

Monday, 20 January 2020

"ಕಃ"

ಈ ವಿರಾಟ್ ಸೃಷ್ಟಿಯ ಲಲಾಟದಲ್ಲಿ ಮಹಾಕಾಲನ ಕೈಗಳಲ್ಲಿ ಎಲ್ಲೆಡೆ ಒಂದೇ ಅಕ್ಷರ ಬರೆದಿದೆ. ಋಷಿಗಳು, ಮನುಷ್ಯರು, ಕ್ರಾಂತಿದರ್ಶೀ ಪ್ರಾಜ್ಞ ಕವಿಗಳು, ಯೋಗೀಶ್ವರರು ಆದಿಕಾಲದಿಂದ ಒಂದು ಮಹಾನ್ ರಹಸ್ಯವನ್ನು ತಿಳಿದುಕೊಳ್ಳುವ ಸತತ ಪ್ರಯತ್ನ ಮಾಡಿದ್ದಾರೆ; ಆದರೆ ಅವರೂ ಕೊನೆಯಲ್ಲಿ ಕಃ’ ಎಂಬ ಪ್ರಚಂಡ ಪ್ರಶ್ನೆಯ ಎದುರು ಶ್ರದ್ಧೆಯಿಂದ ತಮ್ಮ ಪ್ರಣಾಮಾಂಜಲಿ ಸಮರ್ಪಿಸಬೇಕಾಯಿತು. ಈ ಜಗತ್ತಿನಲ್ಲಿ ಯಾವ ಅಸಂಖ್ಯ ರಹಸ್ಯಗಳು ಪ್ರತೀತವಾಗುತ್ತವೆಯೋ, ಅವೆಲ್ಲದರ ಪರ್ಯವಸಾನವು ಒಂದೇ ರಹಸ್ಯದಲ್ಲಾಗುತ್ತದೆ. ಕೊನೆಯಲ್ಲಿ ರಹಸ್ಯವು ಒಂದೇ ಆಗಿದೆ ಹಾಗೂ ಸಹಸ್ರ-ಲಕ್ಷ ವರ್ಷಗಳ ಪ್ರಯತ್ನದ ಅನಂತರವೂ ಆ ರಹಸ್ಯವು ಇಂದಿನವರೆಗೆ ಅದೇ ರೀತಿ ಸುಮುದ್ರಿತ ಹಾಗೂ ಸುಗುಪ್ತವಾಗಿದೆ, ಹೇಗೆಂದರೆ ಒಂದು ಕಾಲದಲ್ಲಿ ಋಷಿಗಳು "ಕಸ್ಮೈ ದೇವಾಯ ಹವಿಷಾ ವಿಧೇಮ" (ಋ. ೧೦|೧೨೧|೧-೯) ಎಂಬ ಧ್ವನಿಯಿಂದ ಗಂಗೆಯ ಅಂತರ್ವೇದಿಯನ್ನು ಪ್ರಕಟಪಡಿಸುತ್ತಾರೆ. 

ಪ್ರಾಚೀನ ಮನೀಷಿಯರು ಆ ಅನಂತ ಅಜ್ಞೇಯ ರಹಸ್ಯಾತ್ಮಕ ’ಕಃ’ ಎಂಬುದರ ದುರ್ಧರ್ಷತೆಯಿಂದ ಮುಗ್ಧರಾಗಿ ಅದೇ ಕ್ಷಣದಲ್ಲಿ ಹೀಗೂ ಎಂದರು -

"ಕೋ ಅದ್ಧಾ ವೇದ ಕ ಇಹ ಪ್ರವೋಚತ್ |" (ಋ. ೧೦|೧೨೯|೬)

"ಯಾರು ಅರಿತಿಹರೋ, ಯಾರದನು ಹೇಳಬಲ್ಲರೋ?"

ಆದರೆ ಅವರ ಉತ್ತರಾಧಿಕಾರೀ ಮನುಷ್ಯ-ಜಾತಿಯ ಮಕ್ಕಳು ದರ್ಪ-ಪೂರ್ವಕ ಆ ’ಶಿವಧನುಸ್’ ರೂಪೀ ರಹಸ್ಯದೊಂದಿಗೆ ತಮ್ಮ ಶಕ್ತಿಯನ್ನು ಪ್ರದರ್ಶಿಸುವ ಮೋಘ ಪ್ರಯಾಸ ಮಾಡಿದ್ದಾರೆ. ಆದರೆ ಫಲವೇನಾಯಿತು, ಹಾಗೂ ಮುಂದೇನಾಗಲಿಕ್ಕಿದೆ?

ಆ ಅಜ್ಞೇಯ ರಹಸ್ಯವು ಶಂಭುವಿನ ಶರಾಸನದಂತೆ ಎಳ್ಳುಮಾತ್ರವೂ ಅಲುಗಾಡುವುದಿಲ್ಲ. ತಿಳಿಯುವುದೇನೆಂದರೆ, ನಮ್ಮೆಲ್ಲರ ಬುದ್ಧಿ-ಬಲದ ಗುರುತ್ವವನ್ನು ಪಡೆದು ಅದು ಇನ್ನೂ ಜಟಿಲ ಹಾಗೂ ಕ್ಲಿಷ್ಟವಾಗುತ್ತಾ ಹೋಗುತ್ತದೆ. ಕವಿಯು ಏನು ಹೇಳಿದ್ದಾನೋ, ನಮಗೆ ಅದೇ ಉಕ್ತಿ ಸತ್ಯವೆಂದು ಪ್ರತೀತವಾಗುತ್ತದೆ.

ಆ ’ಕ’ ಸಂಜ್ಞಕ ರಹಸ್ಯ ರೂಪೀ ಧನುಸ್ಸನ್ನು ಮುರಿಯುವ ಅನೇಕ ವೈಜ್ಞಾನಿಕ ಹಾಗೂ ದಾರ್ಶನಿಕ ಪ್ರಯತ್ನಗಳ ಒಂದೇ ಫಲ ಹೊರಡುವುದೇನೆಂದರೆ ಆ ’ಕ’ ಎಂಬುದರಿಂದ ಅಭಿಹಿತ ಧನುರ್ಧರನ ಮಹಿಮೆಯೇ ಅಧಿಕಾಧಿಕ ವ್ಯಕ್ತವಾಗುತ್ತಾ ಬಂದಿರುವುದು. ಛಾಂದೋಗ್ಯ ಉಪನಿಷತ್ತಿನಲ್ಲಿ ಬ್ರಹ್ಮನಿಗೆ ಎರಡು ಹೆಸರುಗಳನ್ನು ಹೇಳಿದೆ -

ಕಂ ಬ್ರಹ್ಮ, ಖಂ ಬ್ರಹ್ಮೇತಿ
ಕಂ ಚ ಖಂ ಚ ನ ವಿಜಾನಾಮಿ |
ಯದ್ವಾವ ಕಂ ತದೇವ ಖಂ
ಯದೇವ ಖಂ ತದೇವ ಕಮಿತಿ || 

ಛಾಂ.ಉ. ೪|೧೦|


ಅಂದರೆ ಬ್ರಹ್ಮ ಒಂದೇ ಇರುವುದು. ಬ್ರಹ್ಮವೇ ’ಖ’ ಆಗಿದೆ. ಬ್ರಹ್ಮ ರೂಪೀ ಪೂರ್ಣ ಪದಾರ್ಥವು ’ಕ’ ಆಗಿದೆ. ಆ ಪೂರ್ಣದ ಪರಿಜ್ಞಾನಾರ್ಥ ಎಷ್ಟು ಪೂರ್ತಿ ಇದೆಯೋ, ಎಷ್ಟು ಜ್ಞಾನ-ವಿಜ್ಞಾನಾತ್ಮಕ ಉಪಾಯಗಳಿವೆಯೋ, ಅವೆಲ್ಲವೂ ’ಖ’ ಎಂಬುದರ ಅಂತರ್ಗತವಾಗಿದೆ. ವಸ್ತುತಃ ’ಕ’ ಹಾಗೂ ’ಖ’ ಭಿನ್ನವೆಂದು ಪ್ರತೀತವಾದರೂ ಅಭಿನ್ನವಾಗಿವೆ. ಯಾರು ’ಕ’ವನ್ನು ತಿಳಿದಿಲ್ಲವೋ, ಅವರು ’ಖ’ವನ್ನೂ ಎಂದಿಗೂ ತಿಳಿಯಲಾರರು, ಎಂಬುದರಲ್ಲಿ ಸಂದೇಹವಿದೆ.

ಕಂ = ಖಂ

ಈ ಸಮೀಕರಣದ ಒಂದೆಡೆ ಭಾರತೀಯ ಋಷಿಗಳಿದ್ದರೆ, ಇನ್ನೊಂದೆಡೆ ಅರ್ವಾಚೀನ ವೈಜ್ಞಾನಿಕರ ಪ್ರಯಾಸ; ಆದರೆ ’ಕ’ ಎಂಬುದರ ಸಹಾಯತೆಯ ಹೊರತು ’ಖ’ ಎಂಬುದರ ಅನುಸರಣೆಯು ಅಂಧೇನೈವ ನೀಯಮಾನಾ ಯಥಾಂಧಾಃ’ ಎಂಬುದರ ಉದಾಹರಣೆಯೇ ಆಗುತ್ತದೆ. 

ಅನಂತ ಪೂರ್ಣ ತತ್ವವನ್ನು ಸ್ವೀಕರಿಸದ ಹೊರತು ಸಹಸ್ರ ಸಂವತ್ಸರದವರೆಗೆ ಖ ಮಾರ್ಗದಿಂದ ಸ್ವಾಮೀ ಕಾರ್ತಿಕೇಯನಂತೆ ತಿರುಗುತ್ತಿದ್ದರೂ ಸತ್ಯಾತ್ಮಕ ’ಕ’ ಎಂಬುದರ ಸಂಪ್ರಾಪ್ತಿ ಅಸಂಭವ. ’ಕ’ ಇಲ್ಲದೆ ’ಖ’ ಶೂನ್ಯ.

ಕ’ ಪೂರ್ಣ ಆನಂದವಾಗಿದೆ. ’ಖ’ ಶೂನ್ಯವು. ’ಕ’ ಎಂಬುದರ ಕುಕ್ಷಿಯಲ್ಲಿ ’ಖ’ ಎಂಬುದರ ನಿವಾಸವಿದೆ. ’ಖ’ ರೂಪೀ ಸಂಪ್ರಶ್ನೆಯ ಉತ್ತರವೇ ’ಕ’ ಆಗಿದೆ. ವಸ್ತುತಃ ’ಕ’ ಎಂಬುದು ಎಂದು ’ಖ’ ಎಂಬುದನ್ನು ಪಾಕ ಮಾಡಿಕೊಳ್ಳುತ್ತದೆಯೋ, ತಿಂದುಬಿಡುತ್ತದೆಯೋ, ಆಗ ’ಕ’ ಎಂಬುದೇ ಉಳಿಯುತ್ತದೆ. ’ಕ’ ಆನಂದವಾಗಿದೆ. ’ಖ’ ಅದರ ಅನ್ನವಾಗಿದೆ. ಬ್ರಹ್ಮ ಹಾಗೂ ಜಗತ್ತಿನ ಸಂಬಂಧ ಇದೇ ಆಗಿದೆ. ಊರ್ಣನಾಭಿಯಂತೆ (ಜೇಡ) ಅದರ ಕುಕ್ಷಿಯಿಂದ ಜನ್ಮಪಡೆದು ನಂತರ ಅದರಲ್ಲಿಯೇ ವಿಲೀನವಾಗುತ್ತದೆ. ಈ ರೀತಿ ಪ್ರಶ್ನೆ ಹಾಗೂ ಉತ್ತರಗಳೆರಡರ ಸಂಬಂಧದಿಂದ ಪರಿಪೂರ್ಣ ಅಕ್ಷರವು ಒಂದು ’ಕ’ ಆಗಿದೆ -

೧. ಕಃ = ಯಾರು = ಸಂಪ್ರಶ್ನ
೨. ಕಃ = ಪೂರ್ಣ ಆನಂದ = ಉತ್ತರ

ಅದು ಏನು? ಅದು ಪೂರ್ಣ ಆನಂದವು. ಇದೇ ತತ್ವವನ್ನು ಋಷಿಗಳು ’ಕಃ’ ಎಂಬ ಒಂದು ಅಕ್ಷರದಿಂದ ವ್ಯಕ್ತಪಡಿಸಿದ್ದಾರೆ.

ಆದ್ದರಿಂದ ’ಕ’ ಎಂಬುದು ಪ್ರಜಾಪತಿಯ ಹೆಸರಾಗಿದೆ. ಇದು ಎಲ್ಲದರ ಗರ್ಭದಲ್ಲಿದೆ, ಇದು ಎಲ್ಲದರೊಳಗೆ ವಿಚರಿಸುತ್ತದೆ, ಅದು ’ಕ’ ನಾಮಕ ಕೇಂದ್ರ ಪ್ರಜಾಪತಿಯು, ಅದು ಅವ್ಯಕ್ತವು. ಅದನ್ನೇ ಅನಿರುಕ್ತ ಪ್ರಜಾಪತಿ ಎನ್ನಲಾಗುತ್ತದೆ. ಇದಕ್ಕೆ ಯಾವುದೇ ಗ್ರಾಹಕವಿಲ್ಲ. ಆಹುತಿ ಪರಿಶೇಷದಿಂದ ಅದೇ ಅನಿರುಕ್ತ ಪ್ರಜಾಪತಿಯನ್ನು ತಿಳಿಯಲಾಗುತ್ತದೆ.

ಅದೇ ಕೇಂದ್ರವು ನಾನಾ ಆಕೃತಿಗಳಿಂದ ವ್ಯಕ್ತವಾಗಿ ನಿರುಕ್ತ ಪ್ರಜಾಪತಿಯಾಗುತ್ತದೆ. ಅದೇ ಆಯಾಯ ದೇವತೆಗಳ ಭಾಗದಲ್ಲಿ ಬರುತ್ತದೆ. ನಿರುಕ್ತದ ಅಂತರ್ಭಾವವು ಅನಿರುಕ್ತದಲ್ಲಿದೆ. ಇವೇ ಎರಡು ಸ್ವರೂಪಗಳಾದ ಸಮಸ್ತ ವಿಶ್ವ ಹಾಗೂ ತದ್ಬಾಹ್ಯ ತತ್ವ ಸೇರಿಕೊಂಡು ಪೂರ್ಣತೆಯ ಪರಿಚಾಯಕವಾಗುತ್ತವೆ.

ಎರಡಕ್ಕೂ ಕಃ’ ಎಂಬುದೇ ವೈದಿಕ ಸೂತ್ರವಾಗಿದೆ. ಇದನ್ನೇ ಧ್ಯಾನಗಮ್ಯವನ್ನಾಗಿಸಿ ಇಂದಿಗೂ ಋಷಿಗಳ ವಂಶಜರು ಕಸ್ಮೈ ದೇವಾಯ’ ಮಂತ್ರಗಳನ್ನು ಉಚ್ಚಾರಣೆ ಮಾಡುತ್ತಾರೆ.

- ಹೇಮಂತ್ ಕುಮಾರ್ ಜಿ.