Sunday, 26 July 2020

ಐದು ವರ್ಷಗಳ ಕಾಲ ನಡೆದ ಅಗ್ನ್ಯಾ ವೈಷ್ಣವೀ ಯಾಗದ ವರದಿ


ಶ್ರೀಗುರುಭ್ಯೋ ನಮಃ

"ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ"
"ಕೃಣ್ವಂತೋ ವಿಶ್ವಮಾರ್ಯಮ್"

"ಅಗ್ನ್ಯಾ ವೈಷ್ಣವೀ ಯಾಗ" ಕುರಿತು ಸೂತ್ರಗಳ ಮತ್ತು ತಂತ್ರಗಳ ಆಧಾರದಲ್ಲಿ ಏನು ವಿವರಿಸಲ್ಪಟ್ಟಿದೆ, ಪರಿಣಾಮವೇನು, ಯಾಗದ ಉದ್ದೇಶವೇನು, ಅನುಷ್ಠಾನದ ವಿವರಣೆ, ಯಾಗ ಕಾಲದ ಪೂರಕತೆ, ಶುಭಾಶುಭ ಪರಿಣಾಮಗಳು, ದೀರ್ಘಕಾಲ ನಡೆದುಕೊಂಡು ಬರುವುದರಿಂದ ಮಧ್ಯಕಾಲೀನ ಸಹಜ ಪ್ರಾಪಂಚಿಕ ತೊಡರುಗಳು, ಯಾಗ ಸಹಾಯಕರಾಗಿದ್ದವರಿಂದ ಸಹಕಾರ ಮತ್ತು ಅಸಹಕಾರಗಳು, ಯಾಗದ ಫಲವಿವರಣೆಯೊಂದಿಗೆ, ಈ ಹಿಂದೆ ಈ ಯಾಗ ಮಾಡಿದ ಮಹಾತ್ಮರ ಬಗ್ಗೆ, ಅಲ್ಲಿನ ಪರಿಣಾಮಗಳು, ಯಾಗದೇವತೆಗಳು, ಋಷಿಮುನಿಗಳು, ಸೂತ್ರಗಳಲ್ಲಿ ಅಡಕವಾಗಿದ್ದ ರಹಸ್ಯ ವಿಚಾರಗಳ ಉದ್ಘಾಟನೆಯ ಕಾಲದಲ್ಲಿ ಉಂಟಾಗುವ ವಿಘ್ನಗಳು, ಇನ್ನೂ ಕೆಲ ಬೇರೆ ಬೇರೆ ರೀತಿಯ ಅನಿವಾರ್ಯತೆಗಳು, ಯಾಗದ ಆರ್ಥಿಕತೆ, ಅದರ ಹೊಂದಾಣಿಕೆ, ಮುಖ್ಯವಾಗಿ ವೈಯಕ್ತಿಕವಾಗಿ ನನ್ನ ಮೇಲೆ ವಿಧಿಸಲ್ಪಡುವ ನಿರ್ಬಂಧಗಳು, ಇವುಗಳೆಲ್ಲದರ ಬಗ್ಗೆ ಈ ಯಾಗ ವರದಿಯಲ್ಲಿ ವಿವರವಾಗಿ ಬರೆದು, ಯಾಗಫಲವನ್ನು ಉಲ್ಲೇಖಿಸಿ, ಯಾಗದ ಪೂರ್ಣಫಲವನ್ನು ಅಗ್ನಿಯಲ್ಲಿ ಧಾರೆಯೆರೆದು ಸಮಸ್ತಜೀವಕೋಟಿಗಳಿಗೆ, ಚರಾಚರಗಳಿಗೆ, ಪಂಚಭೂತಗಳಿಗೆ ಸಮರ್ಪಿಸಿ ಮಂಗಳಾಚರಣೆ ಮಾಡುತ್ತೇನೆ ಎಂದು ಘೋಷಿಸುತ್ತಾ ಈ ವರದಿ ಸಿದ್ಧಪಡಿಸಿರುತ್ತೇನೆ.

ಶುಲ್ಬ, ಬೋಧಾಯನ, ಆಶ್ವಲಾಯನ, ಮೈತ್ರಾಯಣೀಯ ಸಹಿತ ೨೭ ಸೂತ್ರಗಳ ಸಮಗ್ರ ಅಧ್ಯಯನ, ಅನುಷ್ಠಾನ, ಋಗ್ಯಜುಃಸಾಮಾಥರ್ವ ವೇದಗಳು, ಉಪಶಾಖೆಗಳು, ಇನ್ನಿತರೆ ಪುರಾಣೋಕ್ತ ಸ್ತೋತ್ರ, ಶ್ಲೋಕಪಾಠಗಳು, ನಾಳ, ನಾರಂಗ, ನಾರಾಯಣೀಯಾದಿ ತಂತ್ರಗಳು, ಅಸ್ತ್ರಗಳು ಅಲ್ಲದೆ ಲಂಫಟ್ಕಾರ, ವಷಟ್ಕಾರ, ವೌಷಟ್ಕಾರ, ಹುಂಫಟ್ಕಾರ, ಸ್ವಾಹಾಕಾರ, ಆಕೂತಿ, ಆಘಾರ ತಂತ್ರಗಳು ಮತ್ತು ಯೋಜಕಗಳು, ಬೀಜಾದಿ ವಿದಳನ ಕ್ರಿಯಾದಿಗಳು, ಕೀಲಕಗಳ ಪರಿಷ್ಕರಣೆ, ದೇವತಾ ಅನುಸಂಧಾನ ಪ್ರಯೋಗ, ಪರೀಕ್ಷೆ, ಸಾಧಕ ಬಾಧಕಗಳು ಇವೆಲ್ಲವೂ ಈ ಐದು ವರ್ಷಗಳಲ್ಲಿ ಸತತ ಅನುಷ್ಠಾನ ನಡೆದು ಪೂರ್ಣತೆಯತ್ತ ಬಹಳ ಪ್ರಯತ್ನಪೂರ್ವಕವಾಗಿ ನಡೆಸಲಾಗಿರುತ್ತದೆ.

೮೪ ಬಾರಿ ಪೂರ್ತಾ ಋಗ್ವೇದ ಮಂತ್ರಗಳು, ೬೪ ಬಾರಿ ಶುಕ್ಲ ಯಜುರ್ವೇದ, ೫೬ ಬಾರಿ ತೈತ್ತರೀಯ ಸಂಹಿತೆ (ಕೃಷ್ಣಯಜುರ್ವೇದ), ೪೦ ಬಾರಿ ಸಾಮವೇದ, ೩೨ ಬಾರಿ ಅಥರ್ವವೇದ, ಇನ್ನಿತರೆ ಪುರಾಣೀತಿಹಾಸಿಕ ಶ್ಲೋಕ ಮಂತ್ರಗಳು ೭೨ ಸಾವಿರ ಸಂಖ್ಯೆ, ಸೂತ್ರೋಕ್ತ ಪ್ರಕ್ರಿಯೆಗಳು - ೨೪೫೦ ರಷ್ಟು ಉಪನಯನ, ೨೫೬ ರಷ್ಟು ಚೌಲ, ೧೫೦ ರಷ್ಟು ನಾಮಕರಣ, ೮೦ ರಷ್ಟು ಮದುವೆ, ೧೫೦ ರಷ್ಟು ಉತ್ತರ ಷೋಡಶಕ್ರಿಯಾದಿಗಳು, ಇನ್ನಿತರೆ ಸೂತ್ರೋಕ್ತ ಪ್ರಕ್ರಿಯೆಗಳು - ೭ ಸಾವಿರದಷ್ಟು ಚಂಡಿಕಾಹೋಮ, ೬ ಸಾವಿರದಷ್ಟು ನವದುರ್ಗಾ, ದುರ್ಗಾ ಹೋಮಗಳು, ಸಹಸ್ರ ನಾರೀಕೇಳ ಹೋಮ, ರುದ್ರ ಹೋಮಾದಿಗಳು, ಜೃಂಭಕಾದಿ ಹಲವು ಅಸ್ತ್ರಮಂತ್ರಗಳು ಹಲವು ಸಾವಿರ ಮೀರಿ, ಇನ್ನಿತರೆ ಸೂತ್ರೋಕ್ತ ಶಾಂತಿಗಳು ಎಲ್ಲವೂ ಈ ಸಂದರ್ಭದಲ್ಲಿ ಅನುಷ್ಠಿಸಲ್ಪಟ್ಟಿರುತ್ತದೆ. ವಿಶೇಷಾನುಷ್ಠಾನವಾಗಿ ಸುಮಾರು ೨೪ ಲಕ್ಷ ಗಾಯತ್ರೀ, ೨೦ ಸಾವಿರ ರುದ್ರ, ೮ ಸಾವಿರ ಅಘಮರ್ಷಣ, ೬ ಸಾವಿರದಷ್ಟು ಅಭ್ಯಾವರ್ತಿನಿ, ೨ ಸಾವಿರದಷ್ಟು ಉಪನಿಷತ್ ಹೋಮಗಳು, ೬೦೦ ರಷ್ಟು ಮಹಾನಾರಾಯಣ, ರಾಮಾಯಣ ಶ್ಲೋಕಮಂತ್ರಗಳಿಂದ ಮೂರು ಬಾರಿ, ನಾಳ, ನಾರಂಗ, ನಾರಾಯಣಾದಿ ತಂತ್ರ ಸೂತ್ರಗಳು ೨೧ ಬಾರಿ ಅನುಷ್ಠಿಸಲ್ಪಟ್ಟಿರುತ್ತದೆ.

ಇನ್ನು ಅನುಷ್ಠಿಸಿದ ಪ್ರಕ್ರಿಯೆಗಳೆಲ್ಲವೂ ಈ ಐದು ವರ್ಷಗಳಲ್ಲಿ ಯಾಗ ಉದ್ದೇಶದಿಂದಲೇ ಆಗಿರುತ್ತದೆ. ಇತರೆ ಶಾಂತಿ ಪ್ರಕ್ರಿಯೆಗಳೂ ಕೂಡ ಯಾಗ ಉದ್ದೇಶಿತ ಪ್ರಕ್ರಿಯೆಗಳಾದ್ದರಿಂದ ಉಚಿತವಾಗಿಯೇ ಅನುಷ್ಠಿಸಲ್ಪಟ್ಟಿರುತ್ತದೆ. ಈ ಯಾಗ ಮಧ್ಯದಲ್ಲಿ ಇತರೆ ಸ್ಥಳಗಳಲ್ಲಿ ಇಲ್ಲಿನ ಯಾಗ ವಿಧಿ ನಡೆಯುತ್ತಿರುವಂತೆಯೇ
೧) ಸೌತ್ರಾಮಣಿ ಗವಾಮಯನ ಯಾಗ (ಪಾವಂಜೆಯಲ್ಲಿ),
೨) ಚತುಃಸಂಹಿತಾಯಾಗ (ಗುಬ್ಬಿಯಲ್ಲಿ),
೩) ರಾಮನಾಮ ತಾರಕಯಜ್ಞ (ಕಲ್ಲಡ್ಕದಲ್ಲಿ),
೪) ಸಾರ್ವತ್ರಿಕ ಖಾಯಿಲೆ ನಿರ್ವಹಣೆಗೆ ಚಿಕುನ್‍ಗುನ್ಯ ಬಂದ ಕಾಲದಲ್ಲಿ ಸಂಕ್ಲೇಷ ನಿವಾರಿಣೀ,
೫) ಉತ್ತಮ ಪ್ರಜಾವೃದ್ಧಿ ಉದ್ದೇಶದಿಂದ ಸಿಂಹಿಕಾಯಾಗ,
ಇನ್ನಿತರೆ ಕೆಲ ಯಾಗ ಪ್ರಕ್ರಿಯೆಗಳೂ ನಡೆಸಲ್ಪಟ್ಟಿರುತ್ತದೆ. ಅವುಗಳೂ ಕೂಡ ಉತ್ತಮ ಯಶಸ್ವೀ ಯಾಗವೆನ್ನಿಸಿಕೊಂಡು ಜನಜನಿತವಾಗಿರುತ್ತದೆ. ಪ್ರತಿಯೊಂದು ಪ್ರಕ್ರಿಯೆಯೂ ಕೂಡ ಅಗ್ನ್ಯಾ ವೈಷ್ಣವೀಯಾಗದ ಸೂತ್ರ ಪರಿಷ್ಕರಣೆಯೆಂಬ ರೀತಿಯಲ್ಲಿ ನಾನಾ ರೀತಿಯ ವಿಶೇಷ ಪ್ರಯೋಗವಾಗಿರುತ್ತದೆ. ೫ ವರ್ಷ ಪರ್ಯಂತ ಹಲವು ಪೂರ್ವೋದಾಹರಣೆಯನ್ನು ಮುಂದಿಟ್ಟುಕೊಂಡು, ಹಲವು ಪರಿಷ್ಕರಣೆಯನ್ನು ಆಧಾರವಾಗಿಟ್ಟುಕೊಂಡು ಆ ಸಂಬಂಧೀ ನಿರ್ಬಂಧಗಳನ್ನು, ವಿಧಿಯನ್ನೂ, ವಿಧಾನಗಳನ್ನೂ, ಪ್ರಯೋಗವನ್ನೂ ಚಾಚೂ ತಪ್ಪದೇ ಪಾಲಿಸಿಕೊಂಡು ಬರುವ ಪ್ರಯತ್ನ ಮಾಡಿರುತ್ತೇವೆ. ಇಲ್ಲೆಲ್ಲಾ ಅನಿರೀಕ್ಷಿತ ತೊಡಕುಗಳು, ಸಮಸ್ಯೆಗಳು, ಸಂಕಟಗಳು ಒದಗಿಬಂದರೂ ಯಾವುದೇ ರೀತಿಯ ಆಮಿಷಕ್ಕೆ ಬಲಿಯಾಗದೆ ಅದನ್ನು ನಿರ್ವ್ಯಾಜದಿಂದ ತ್ಯಾಗ ಮಾಡಿ ಮುಂದುವರೆದಿರುತ್ತೇವೆ. ಇಲ್ಲೆಲ್ಲಾ ಹಲವು ರೀತಿಯ ವ್ಯಾವಹಾರಿಕ ಪ್ರಪಂಚದ ಪ್ರಾಪಂಚಿಕ ಸಂಕಷ್ಟಗಳೂ, ಧೈವೀಕ ಸಂಕಷ್ಟಗಳೂ, ಸಹಜ ಪ್ರಾಕೃತಿಕ ಸಂಕಷ್ಟಗಳೂ, ಯುಗಧರ್ಮ ಆಧರಿಸಿದ ಸಂಕಷ್ಟಗಳೂ ಹೀಗೆ ನಾನಾ ರೀತಿಯಲ್ಲಿ ಬೃಹದಾಕಾರವಾಗಿ ಎದುರಾದಾಗಲೆಲ್ಲಾ ನಿಷ್ಠುರತೆಯಿಂದ, ಧೀರತ್ವದಿಂದ ಅವನ್ನು ಎದುರಿಸಿ ಈ ವರ್ಷ (೨೦೧೧) ಪರ್ಯಂತ ಯಾಗವನ್ನು ಸಮರ್ಥವಾಗಿ ನಿರ್ವಹಿಸಿರುತ್ತೇವೆ. ಹೆಚ್ಚಾಗಿ ಸಹಾಯಕರಾಗಿ, ಯಾಗದಲ್ಲಿ ಕರ್ತವ್ಯ ದೀಕ್ಷಿತರಾಗಿದವರ ಕೆಲ ಕುತ್ಸಿತ ಅವಿಚಾರಗಳು ವಿಪರೀತ ಸಂಕಷ್ಟವನ್ನು ಉಂಟು ಮಾಡಿರುತ್ತದೆ. ಅಲ್ಲೆಲ್ಲಾ ಅನಿವಾರ್ಯವಾಗಿ ಅನುಷ್ಠಾನಗಳನ್ನು ಪರಿವರ್ತಿಸಿಕೊಂಡು, ಸ್ಥಳಾಂತರಿಸಿಕೊಂಡು ಮಾಡಿದ್ದು, ಅದರಿಂದಾಗಿ ವಿಪರೀತ ಶ್ರಮ, ಪ್ರಯಾಣ, ಖರ್ಚು, ವೇಧೆ ಉಂಟಾಗಿರುತ್ತದೆ. ಆದರೆ ಎಲ್ಲಿಯೂ ಕ್ರುದ್ಧತೆಗೆ ಅವಕಾಶವೀಯದೆ ವಿಧಿವಿಧಾನಗಳನ್ನೇ ಪ್ರಧಾನವಾಗಿ ಆಚರಿಸಿಕೊಂಡು ಬರಲಾಗಿದೆ. ಪ್ರತೀ ದಿನವೂ, ಪ್ರತೀ ಕ್ಷಣವೂ ತುಂಬಾ ಎಚ್ಚರಿಕೆಯಿಂದಲೇ ನಡೆಸಬೇಕಾದ ಪ್ರಕ್ರಿಯೆ ಇದು ದೀರ್ಘಸತ್ರಯಾಗ. ಇಲ್ಲಿ ಸ್ವಲ್ಪ ನ್ಯೂನತೆ ಉಂಟಾದರೂ ಅಧ್ವರ್ಯುವಿನ ಪ್ರಾಣಕ್ಕೆ ಕುತ್ತು. ಹಾಗಾಗಿ ಹಂತ ಹಂತವಾಗಿ ಎಚ್ಚರಿಕೆಯಿಂದ ನಡೆಸಿದ್ದೇನೆ ಎಂಬುದಕ್ಕೆ ಈ ಯಾಗದ ಪೂರ್ಣಾಹುತಿ ಮಾಡುತ್ತಿರುವುದೇ ಸಾಕ್ಷಿ. ಒಂದು ವಿವರಣೆ ಗಮನಿಸಿ. ಈ ಅಗ್ನ್ಯಾ ವೈಷ್ಣವೀ ಯಾಗ ಈ ಹಿಂದೆ ಸಂಕಲ್ಪಿಸಲ್ಪಟ್ಟಿದ್ದು ಹಲವು ಬಾರಿ. ಆದರೆ ಅರ್ಧಾನುಷ್ಠಾನವಾದದ್ದು ಹೆಚ್ಚು. ಪೂರ್ಣವಾದದ್ದು ಕೇವಲ ೧೭ ಬಾರಿ ಮಾತ್ರ. ಉಳಿಕೆ ಸಂದರ್ಭಗಳಲ್ಲಿ ಕಂಟಕ, ಅಪಮೃತ್ಯು, ರಾಜವಿಕ ತಡೆ ಇತ್ಯಾದಿ ಕಾರಣದಿಂದಾಗಿ ನಿಂತು ಹೋದದ್ದೇ ಹೆಚ್ಚು. ಹಲವಾರು ಜನ ಅಧ್ವರ್ಯುಗಳು ಈ ಕಾರ್ಯದಲ್ಲಿ ತೊಡಗಿ ನಂಬಿಕಸ್ತರ ನಂಬಿಕೆ ದ್ರೋಹಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡ ಉದಾಹರಣೆಗಳೇ ಹೆಚ್ಚು. ಇವನ್ನೆಲ್ಲ ಅರಿತು ಯಾವುದೇ ತೊಡಕುಗಳು ಬರಲಿ, ದೇಹ ಆತ್ಮಭೇದವನ್ನು ಅರಿತುಕೊಂಡು ಈ ಸಾಧನೆ ಮಾಡಲೇಬೇಕೆಂದು ೫ ವರ್ಷಗಳ ಸತತ ಪ್ರಯತ್ನದಿಂದ ಈ ಲೇಖನ ಬರೆಯುವ ಕಾಲಕ್ಕೆ ಪೂರ್ಣಾ ಯಶಸ್ವಿಯಾಗಿ ನಿರ್ವಹಿಸಿ ಪೂರ್ಣಾಹುತಿ ಮಾಡಿರುತ್ತೇನೆ. ಆ ಸಂಬಂಧಿಯಾಗಿ ಯಾಗವಿಧಿ ಸಹಿತವಾಗಿ ನಡೆದ ಎಲ್ಲಾ ಪ್ರಕ್ರಿಯೆಗಳನ್ನೂ ಸೂಕ್ಷ್ಮವಾಗಿ ವಿವರಿಸುತ್ತಾ ಈ ಲೇಖನ ಮುಂದುವರೆಸುತ್ತೇನೆ. ಇದರ ಉದ್ದೇಶ ಮುಂದೆಯೆಂದಾದರೂ ಈ ಯಾಗ ಮಾಡುವುದಿದ್ದಲ್ಲಿ ಸಹಕಾರವಾಗಲೀ ಎಂಬುದಾಗಿರುತ್ತದೆ.

ಶ್ರೀವ್ಯಯನಾಮ ಸಂವತ್ಸರದ ಚೈತ್ರ ಶುದ್ಧ ೧ ಯು ದಿನಾಂಕ ೩೦-೦೩-೨೦೦೬ನೇ ತೇದಿಯಿಂದ ಆರಂಭಿಸಿ ಸರ್ವಜಿತು, ಸರ್ವಧಾರಿ, ವಿರೋಧಿ, ವಿಕೃತಿ ಸಂವತ್ಸರಗಳು ಪೂರ್ತಿ ೫ ವರ್ಷ ಪರ್ಯಂತ ನಡೆಸುವ ಈ ಯಾಗ ಪ್ರಕ್ರಿಯೆಯು ಮುಖ್ಯವಾಗಿ ವೇದಮಂತ್ರಗಳ ಪುನರುತ್ಥಾನ, ಸಮಗ್ರ ಜ್ಞಾನದ ಆವಿರ್ಭಾವ, ಮಂತ್ರ, ತಂತ್ರಶಕ್ತಿಯ ನಿರೂಪಣೆರೂಪದ "ಅಗ್ನ್ಯಾ ವೈಷ್ಣವೀ" ಎಂಬ ಈ ಯಾಗವು ಶುಲ್ಬ, ಬೋಧಾಯನ, ಆಶ್ವಲಾಯನ, ಮೈತ್ರಾಯಣೀಯ ಆದಿಯಾಗಿ ೨೭ ಸೂತ್ರಗಳು, ನಾಲ್ಕು ವೇದಗಳು, ಅವುಗಳ ಶಾಖೆಗಳು, ನಾರಾಯಣ, ನಾರಂಗ, ನಾಳಾದಿ ೨೪ ಅಗಸ್ತ್ಯ ಪ್ರೋಕ್ತ ದಾಕ್ಷಿಣಾತ್ಯ ತಂತ್ರಗಳೂ, ಪುರಾಣೋಕ್ತ ಸೂತ್ರಗಳೂ, ಒಟ್ಟಾಗಿ ವಿಮರ್ಶಿಸಲ್ಪಟ್ಟು ಅನುಷ್ಠಿಸಿ ಪರಿಣಾಮ, ಫಲ, ಸಾಫಲ್ಯತೆಯನ್ನು ತಿಳಿದು ಅಗತ್ಯ ಬಿದ್ದಲ್ಲಿ ಕೆಲ ಪರಿಷ್ಕರಣೆ ಕೊಟ್ಟು ಸತತ ಸಾಧನೆ ಮಾಡಲಾಗಿದೆ. ಒಟ್ಟಾರೆ ಯಾಗ ಸಮರ್ಥವಾಗಿ ಸಂಪನ್ನಗೊಂಡಿಗೆ; ಈಗಿನ ಕಾಲಮಾನಕ್ಕನುಸರಿಸಿ. ೨೦೧೧ನೇ ಮಾರ್ಚ್ ಮೂರನೇ ತಾರೀಖಿನಿಂದ ಆರಂಭಿಸಿ ಅನುಷ್ಠಿತ ದೇವತಾ ಉಪಾಸನೆ, ಪೂರ್ಣಾಹುತಿ ಪ್ರಕ್ರಿಯೆಗಳು ಆರಂಭವಾಗಿರುತ್ತದೆ. ತಾ. ೦೪-೦೪-೨೦೧೧ ರಂದು ಅದ್ಭ್ಯ ದೇವತಾ ಪೂರ್ಣಾಹುತಿ. ನಂತರ ತಾ. ೦೫-೦೪-೨೦೧೧ ರಂದು ಅವಭೃತೋತ್ಸವ ನಡೆಸಿ ಸಮಾರೋಪ ಮಾಡಲಾಗುವುದು.

ಇಲ್ಲಿ ಮುಖ್ಯವಾಗಿ ಅಧ್ವರ್ಯುವಾಗಿ ನಾನೊಬ್ಬನೇ ಸ್ವಯಂ ಘೋಷಿಸಿ ಯಾರ ಮೇಲೂ ಜವಾಬ್ದಾರಿಯನ್ನು ಹೇರದೆ ಬರತಕ್ಕ ಎಡರು ತೊಡರು, ಆಪತ್ತುಗಳನ್ನು ನಾನೇ ಸ್ವೀಕರಿಸುತ್ತಾ, ಇತರೆ ಸಹಾಯಕರಾಗಿ ನನ್ನ ಅಭಿಮಾನಿಗಳನ್ನು ಸೇರಿಸುವುದರ ಮುಖೇನ ಈ ಯಾಗದ ಯಾವುದೇ ಕೆಟ್ಟ ಪರಿಣಾಮ ಅವರಿಗೆ ಬಾಧಿಸದಂತೆ ರೂಪಿಸಿಕೊಂಡು ಸಂಖ್ಯಾಪೂರ್ತಿಗೆ ಬೇಕಾದಾಗ ಲಕ್ಷ ಲಕ್ಷ ಸಂಖ್ಯೆಯ ಹೋಮ ಹವನಗಳನ್ನು ಮಾಡಿಸಿದ್ದೇನೆ. ಅವನ್ನೆಲ್ಲಾ ಒಂದೊಂದಾಗಿ ವಿವರಿಸುತ್ತೇನೆ. ಮೊದಲ ವರ್ಷ ವ್ಯಯನಾಮ ಸಂವತ್ಸರದಲ್ಲಿ ರುದ್ರ, ಚಂಡಿಕಾ, ಮಿತ್ರಾವರುಣಾ, ಧ್ಯಾವಾಪೃಥಿವೀ, ಇಂದ್ರಾಗ್ನೀ, ಇಂದ್ರ, ಸೋಮ, ಪೂಷಾ, ಬೃಹಸ್ಪತಿ, ಭಾರತೀ, ಇಳಾ, ಸರಸ್ವತೀ, ಆಕೂತಿ, ಕುಹೂ, ರಾಕಾ, ಸರಸ್ವಾನ್, ಸಿನಿವಾಲೀ, ಬ್ರಹ್ಮ, ಪಿತೃ, ಧರ್ಮ, ವಿಷ್ಣು, ವರುಣ, ಸರ್ಪ, ನಾಗ, ಸವಿತೃ, ಬರ್ಹಿ, ಇಧ್ಮ, ರಸ, ಸೋಮಕ, ಜ್ವಾಲಾ, ಜ್ವಲ, ಮಾತೃಕಾ, ಓಘ, ಧೃತಿ, ಸತ್ಯ, ಅಧ್ವರ, ಪುರುಷ, ಮರುತ್, ಪರ್ಜನ್ಯ, ಸುಕೃತ್, ಪ್ರಕೃತಿ, ಶ್ರೀಯಾದಿಯಾಗಿ ನಲವತ್ತೆರಡು ಮೂಲ ಸ್ವಭಾವವನ್ನು ತತ್ವಾದಿಯಾಗಿ ವಿಭಜಿಸಿ ಹನ್ನೊಂದು ಲಕ್ಷ ಸಂಖ್ಯೆಯಲ್ಲಿ ಹವಿರ್ಭಾಗವನ್ನು ಕೊಟ್ಟು ನಂತರ ಸೂತ್ರ ವಿಂಗಡಣೆ ಮಾಡಿ ಸೂತ್ರೋಕ್ತ ಪೂರ್ವ ಷೋಡಶವನ್ನು ಅಧ್ಯಯನ ಮಾಡಲಾಯ್ತು. ಈ ಸಂದರ್ಭದಲ್ಲಿ ಆಶ್ವೀಜ ಮಾಸದ ಕೊನೆಯಲ್ಲಿ ಹುಟ್ಟಿದ ಕೆಲ ತೊಡಕುಗಳ ನಿವಾರಣೆಗಾಗಿ ಪ್ರಕ್ರಿಯೆಯನ್ನು ವಿಭಜಿಸಿ ಒಂದು ಭಾಗವನ್ನು ಸುಳ್ಯದಲ್ಲಿ ಸ್ಥಾಪಿಸಿ, ಅಲ್ಲಿನ ಸ್ಥಳವನ್ನು ಪಡೆದು ಯಾಗಭೂಮಿಯಾಗಿ ಪರಿವರ್ತಿಸಿಕೊಂಡು ಸೂಕ್ತ ರೀತಿಯಲ್ಲಿ ನಡೆಸಿಕೊಂಡು ಬಂದಿರುತ್ತೇನೆ. ಎರಡು ಕಡೆಯಲ್ಲಿ ಯಾಗ ನಡೆಸುತ್ತಾ ಮೇಲ್ಕಂಡ ದೇವತಾತ್ಮಕ ತತ್ವಗಳ ವಿಭಜನೆ ಮಾಡುತ್ತಾ ಅಲ್ಲಲ್ಲಿ ಸೂಕ್ತ ಪರಿಷ್ಕರಣಾಯೋಗ್ಯ ವಿಚಾರಗಳನ್ನೂ, ಸಂಶೋಧನಾಯೋಗ್ಯ ವಿಚಾರಗಳನ್ನೂ ಗುರುತಿಸಿ ಅದನ್ನು ಸಾಮಾಜಿಕವಾಗಿ ಸಮಸ್ಯಾ ಪರಿಹಾರವೆಂಬ ಸೂತ್ರದಂತೆ ಕಷ್ಟದಲ್ಲಿರುವ ಆರ್ತರಿಗೆ ಪರಿಹಾರ ಮಾಡಿಕೊಡುತ್ತಾ ಯಾಗ ಪ್ರಕ್ರಿಯೆ ನಡೆಸಿಕೊಂಡು ಬಂದಿರುತ್ತೇನೆ. ಹಾಗೆ ಒಂದು ವರ್ಷ ಪೂರ್ತಿ ಯಾಗದ ಉದ್ದೇಶದ ಭೂಮಿಕೆ ಸಿದ್ಧಪಡಿಸಲು ಬೇಕಾಯ್ತು. ನಂತರ ಹಿಂದೆ ಗುರುತಿಸಿದ ವಿಚಾರಗಳನ್ನು ಮಾತ್ರ ಇಟ್ಟುಕೊಂಡು ಅವನ್ನು ವೇದಮೂಲದಿಂದ ಅನ್ವೇಷಣೆ ಮಾಡಿ ಚಾಲ್ತಿಯಲ್ಲಿರುವ ಪ್ರಕ್ರಿಯೆಗಳ ಸಾಧಕ ಬಾಧಕಗಳನ್ನು ಅಧ್ಯಯನ ಮಾಡಲಾರಂಭಿಸಿದೆ.

ಈ ಎರಡನೆಯ ವರ್ಷದಲ್ಲಿ ಅಂದಾಜು ೨೦ ಸಾವಿರ ಸಂಖ್ಯೆಯಲ್ಲಿ ರುದ್ರ ಹೋಮ, ೬ ಸಾವಿರ ಬಾರಿ ಚಂಡಿಕಾ ಹೋಮ, ಇತರೆ ಶಾಂತಿ ಪ್ರಕ್ರಿಯೆಗಳು, ಪರಾಶರೀಯ ಕರ್ಮವಿಪಾಕ ಶಾಂತಿಗಳು, ಕಾಲಾದೇಶಿತ ಬಾಧಕವಾದ ಕಾಲಸರ್ಪಶಾಂತಿಗಳು, ವಷಟ್ಕಾರ ಮುಖೇನ ತಂತ್ರೋಕ್ತ ಪ್ರಕ್ರಿಯೆಗಳು ಇತ್ಯಾದಿ ಅನುಷ್ಠಾನ ಸಹಿತವಾಗಿ ಪುರಾಣೋಕ್ತ ಮಂತ್ರ, ಶ್ಲೋಕಗಳ ಸಂಪೂರ್ಣ ಅಧ್ಯಯನ ಮಾಡಲಾಯ್ತು. ಈ ಸಂದರ್ಭದಲ್ಲಿ ಸಮಾಜದಲ್ಲಿರತಕ್ಕ ಕೆಲ ಗಂಭೀರ ಸಮಸ್ಯೆಗಳ ಅಧ್ಯಯನ, ಅವುಗಳ ನಿವಾರಣೋಪಾಯ, ಸುಲಭ ಮತ್ತು ಸರಳೀಕರಣ ಮಾಡುವಲ್ಲಿ ಹೆಚ್ಚಿನ ಶ್ರಮ ಮೀಸಲಾಯ್ತು. ಎರಡನೆಯ ವರ್ಷ ಸಹಾಯಕರ ಕೆಲ ಅವರ ವೈಯಕ್ತಿಕ ಕಾರಣದಿಂದಾಗಿ ಹಲವು ಸಂದಿಗ್ಧತೆಗಳು ಹುಟ್ಟಿತು. ಅದರ ಪರಿಮಾರ್ಜನೆಗಾಗಿ ಬೇರೆ ಬೇರೆ ರೀತಿಯ ಇತರೆ ಕರ್ಮಾಂಗಗಳನ್ನು, ಯಾಗವನ್ನೂ ಹುಟ್ಟು ಹಾಕಿ ಅವರ ಗಮನ ಬೇರೆಡೆಗೆ ಸೆಳೆಯುತ್ತಾ ಯಾಗಮುಖದಲ್ಲಿ ತೊಡಗಿಸಿಕೊಂಡು ಕಾರ್ಯಸಾಧನೆ ಮಾಡಲಾಯ್ತು. ಉದಾ - ಗವಾಮಯನ ಯಾಗ. ಹೀಗೆ ಹಲವಾರು ಪ್ರಕ್ರಿಯೆಗಳನ್ನು ಹುಟ್ಟು ಹಾಕಿ ಕಾರ್ಯ ಸಾಧಿಸಿಕೊಂಡು ಸಹಾಯಕರ ಅಸಹಕಾರವನ್ನು ಸರಿದೂಗಿಸಿ ಸರ್ವಧಾರಿ ಸಂವತ್ಸರ ಪ್ರವೇಶ ಮಾಡಲಾಯ್ತು. ಈ ಮಧ್ಯೆ ಇನ್ನೊಂದು ವಿಭಾಗ ಮಾಡಿ ಮೂಲ್ಕಿಯಲ್ಲಿ ಯಾಗೋದ್ದೇಶದ ನೆಪ ಒಡ್ಡಿ ಅಲ್ಲಿಯೂ ಯಾಗ ಪ್ರಕ್ರಿಯೆ ಆರಂಭಿಸಲಾಯ್ತು. ಹೀಗೆ ಮೂರು ವಿಭಾಗ ಮಾಡಿ ಮೂರು ಕಡೆಯಲ್ಲಿ ಯಾಗ ನಡೆಸುತ್ತಾ ಅಲ್ಲೆಲ್ಲಾ ಹೋಗಿ ಬಂದು ಮಾಡುತ್ತಾ ಮತ್ತು ಅಲ್ಲಲ್ಲಿಯೇ ತಾತ್ಕಾಲಿಕ ವರಣೆ ಕೊಟ್ಟು ಸಹಾಯಕರಿಂದ ಮಾಡಿಸುತ್ತಾ ಸಮತೋಲನ ಕಾಯ್ದುಕೊಂಡು ಬಂದಿರುತ್ತೇನೆ. ಈ ಹೊತ್ತಿಗೆ ಅಂದರೆ ಸರ್ವಜಿತ್ ಸಂವತ್ಸರದ ಕೊನೆಯಲ್ಲಿ ಈ ಪ್ರಾಪಂಚಿಕ ಗಂಧವೇ ಇಲ್ಲದ ಒಂದು ಪ್ರದೇಶ ಅನಾಯಾಸವಾಗಿ ಪ್ರಾಪ್ತವಾಯ್ತು. ಅಲ್ಲಿ ವಿಶಾಲ ಸ್ಥಳ, ತೀರಾ ಮುಗ್ಧ ಜನರು, ತಪೋಭೂಮಿ, ಸಾಧನಾಕ್ಷೇತ್ರವಾಗಿದ್ದ ಸ್ಥಳ, ಎಂದೋ ನನ್ನಿಂದ ಸಹಾಯ ಪಡೆದ ವ್ಯಕ್ತಿ ಉಚಿತವಾಗಿ ಕೊಟ್ಟರು. ಅದರ ಹಿನ್ನೆಲೆಯೇನೆಂದು ಮುಂದೆ ಅರ್ಥವಾಯ್ತು.

ಹೀಗೆ ಸರ್ವಧಾರಿ ಸಂವತ್ಸರದಲ್ಲಿ ಜೊತೆಗಾರರನ್ನೂ, ಸಹಾಯಕರನ್ನೂ, ಅಲ್ಲದೆ ಅಧ್ಯಾತ್ಮ ಆಸಕ್ತಿಯುಳ್ಳ ಕೆಲ ಮಹಿಳೆಯರನ್ನೆಲ್ಲ ತೊಡಗಿಸಿಕೊಂಡು ಮೂರನೆಯ ಹಂತ ಶಕ್ತಿಸಂಚಯನವೆಂಬ ಪ್ರಕ್ರಿಯೆಯನ್ನು ಆರಂಭಿಸಿ ತನ್ಮೂಲಕ ನಾನಾ ವಿಧದ ಲಂಫಟ್ಕಾರ, ವಷಟ್ಕಾರ, ವೌಷಟ್ಕಾರ, ಹುಂಫಟ್ಕಾರ, ಇತ್ಯಾದಿ ಭಿನ್ನ ಭಿನ್ನ ಪ್ರಕ್ರಿಯೆ ಮುಖೇನ ಸಹಜ ಪ್ರಕೃತಿಯಲ್ಲಿರತಕ್ಕ ವಿಕೃತಿಯನ್ನು ಅರಿತು ಅದಕ್ಕೆ ಚಿಕಿತ್ಸೆ ಕೊಡುವುದರ ಮುಖೇನ ಅಗಾಧತೆಯನ್ನು ಸಾಧಿಸಿದೆ. ತನ್ಮುಖೇನ ರಾಜವಿಕ+ಧೈವಿಕ ಏಕತಾನತೆಯನ್ನು ಅರಿತು ಅದರ ಪರಸ್ಪರ ಹೊಂದಾಣಿಕೆಯನ್ನು ಸೂತ್ರ ಮುಖೇನ ಅರ್ಥೈಸಿ ಈ ಸಂದರ್ಭದಲ್ಲಿ ಪ್ರಕ್ರಿಯೆಯು ತೀರಾ ಕಠಿಣವಾದ್ದರಿಂದ ಹಲವು ಪ್ರಾಣಾಪಾಯಕಾರೀ ಸಂದರ್ಭ ಒದಗಿ ಬರಲು ಆರಂಭವಾಯ್ತು. ಅವನ್ನೆಲ್ಲಾ ಎದೆಗೊಟ್ಟು ಎದುರಿಸಿ ನಾನು ನಾನೇ ಆಗಿ ಉಳಿಯುವ ಪ್ರಯತ್ನ ಮಾಡಿದೆ. ನಿತ್ಯ ಭಿಕ್ಷೆ, ಅದರ ಸಂಗ್ರಹ ಮಾತ್ರ ನಾನೇ ಸಿದ್ಧಪಡಿಸಿದ ಪಾಕ, ಅದು ಮಾತ್ರ ಉಂಡು ಪ್ರತ್ಯೇಕವಾಗಿಯೇ ಉಳಿದುಕೊಂಡು ಬಂದೆ. ಸಮಾಜದಲ್ಲಿ ತೋರಿಕೆಗೆ ಒಂದಾಗಿಯೇ ಬಾಳುತ್ತಾ ಆದರೆ ಅಷ್ಟೇ ಪ್ರಮಾಣದಲ್ಲಿ ಅವರಿಗರಿಯದಂತೆ ಬೇರೆಯೇ ಬದುಕುತ್ತಾ ಒಂದು ರೀತಿಯ ವಿಚಿತ್ರ, ವಿಶಿಷ್ಟಜೀವನ ಆರಂಭಿಸಿದೆ. ಅಂದರೆ ಜೀವನ ನಾಟಕ, ಅದರಲ್ಲಿ ಕೆಲ ನಿಬಂಧನೆ ನನಗೆ ನಾನೇ ವಿಧಿಸಿಕೊಂಡೆ. ಯಾರಿಗೂ ಅವರ ತಪ್ಪನ್ನು ತೋರಿಸುವುದಿಲ್ಲ, ಹೇಳುವುದೂ ಇಲ್ಲ, ಒಂದು ವಿಚಾರ ಒಮ್ಮೆ ಮಾತ್ರ ಹೇಳುವುದು. ಯಾವ ದಾಕ್ಷಿಣ್ಯಕ್ಕೂ ವೈಯಕ್ತಿಕ ನೆಲೆಯಲ್ಲಿ ಬಲಿಬೀಳದಿರುವುದು. ಯಾರಲ್ಲಿಯೂ ಏನನ್ನೂ ಅಪೇಕ್ಷಿಸದಿರುವುದು. ಸಾಧ್ಯವಾದಷ್ಟು ಸಂಗ್ರಹಿತ ಹಣ ಮತ್ತು ವಸ್ತುಗಳನ್ನು ದಾನ ಮಾಡುವುದು. ಅತೀ ನಿರಪೇಕ್ಷರಾಗಿರುವ ಮುಗ್ಧಜನರ ಜೊತೆಯಲ್ಲಿ ಮುಕ್ತನಾಗಿದ್ದು ಆತ್ಮಸಂತೋಷ ಪಡೆಯುವುದು. ಗೋ ಇತ್ಯಾದಿ ಸಾಧುಪ್ರಾಣಿಗಳ ಪೋಷಣೆ ಪಾಲನೆಯಲ್ಲಿಯೇ ನನ್ನನ್ನು ತೊಡಗಿಸಿಕೊಳ್ಳುತ್ತಾ ಬಂದೆ. ಅಲ್ಲಿಯೂ ಕೆಲ ವಿಚ್ಛಿದ್ರತೆಗಳು ಕೆಲಸ ಮಾಡಲಾರಂಭಿಸಿದಾಗ ಒಂದಕ್ಕೊಂದು ಸಂಬಂಧವಿಲ್ಲ ಕಡೆಯಲ್ಲಿ ನೆಲಸುತ್ತಾ ಪ್ರಾಪಂಚಿಕದ ಸಂಪರ್ಕವಿಲ್ಲದ ಕರಿಕೆ ಸಮೀಪದ ಕಾಡುಜನರ ಮಧ್ಯೆ ಈ ಯಾಗದ ಕೇಂದ್ರ ಬಿಂದುವನ್ನು ಸ್ಥಾಪಿಸಿಕೊಂಡು ನಿರಂತರತೆಯನ್ನು ಸಾಧಿಸಿದೆ.

ನಂತರ ಬಂತು ವಿರೋಧಿ ನಾಮ ಸಂವತ್ಸರ. ಮುಖ್ಯವಾಗಿ ಈ ಕಾಲದಲ್ಲಿ ಸಂಸ್ಕರಿತ ವಿಚಾರಗಳ, ವಿಧಿಗಳ ಬಗ್ಗೆ ಪ್ರಯೋಗ ಪರಿಷ್ಕರಣೆ ಮಾಡಬೇಕಿತ್ತು. ಆದರೆ ಇತರೆ ಕೆಲಸದ ಒತ್ತಡ, ಕೆಲ ರಾಜಕೀಯಾತ್ಮಕ ಒತ್ತಡ ಕಾರಣ ಸಂಸ್ಕರಿತ ವಿಚಾರಗಳ ನೇರ ಪ್ರಯೋಗ ಆರಂಭಿಸಿದೆ. ಒಂದರಿಂದ ಒಂದು ಯಶಸ್ವಿಯಾಗುತ್ತಾ ಬಂತು ಪ್ರಯೋಗಗಳು. ಅದನ್ನು ಸಮಕಾಲೀನ ಸಮಸ್ಯಾ ನಿವಾರಣೆಗಾಗಿ ಬಳಸುತ್ತಾ ಬಂದೆ. ಈ ಕಾಲದಲ್ಲಿ ಒಟ್ಟು ೨೭ ಸೂತ್ರಗಳಲ್ಲಿ ಕೆಲ ಮುಖ್ಯ ಪುರಾಣೋಕ್ತ ಭಾಗಗಳಲ್ಲಿ ಬಳಸಲ್ಪಟ್ಟು ಮಂತ್ರಗಳೂ, ಶ್ಲೋಕಗಳೂ ಉತ್ತಮ ಪರಿಷ್ಕರಣೆಗೊಳಪಟ್ಟಿವೆ. ಇವೆಲ್ಲಾ ಸಾಧನೆಗೆ ಸಿಕ್ಕ ಫಲವೆಂದು ಘಂಟಾಘೋಷವಾಗಿ ಹೇಳಬಹುದು. ಜೊತೆಯಲ್ಲಿ ಎಲ್ಲಾ ವೇದಗಳ ಒಂದೊಂದು ಮಂತ್ರದ ಬೀಜಶಕ್ತಿಯನ್ನೂ, ಅದರ ಕೀಲಕವನ್ನೂ, ನ್ಯಾಸವನ್ನು ಅರಿತು ಪ್ರಯೋಗ ಮುಖೇನ ಬಳಸಿ ಅದರ ಶಕ್ತಿ ಸಾರ್ಥಕತೆ, ಸಮಾಜೋಪಯೋಗವನ್ನು ಅರ್ಥಮಾಡಿಕೊಂಡಿರುತ್ತೇನೆ. ಮತ್ತು ಧೈವೀಕತೆಯ ಆಧಾರದಲ್ಲಿ ಮಂತ್ರಬೀಜಗಳ ಕಾರ್ಯವ್ಯಾಪ್ತಿಯೂ ತಿಳಿದು ಬಂತು. ಸಹಜ ಸಾಧನೆಯಿಂದ ಕೂಡಿದ ಇಚ್ಛಾಶಕ್ತಿಯು ನಿರಂತರತೆಯನ್ನು ಸಾಧಿಸಲು ವಿನಿಯೋಗಿಸಿದೆ. ಧಾರ್ಮಿಕವಾಗಿ ಈ ಭರತಭೂಮಿ ಬೆಳೆಯುವತ್ತ ಇಚ್ಛಾಶಕ್ತಿಯನ್ನೂ ತೊಡಗಿಸಿದೆ, ಸಾರ್ಥಕವಾಗಿರುತ್ತದೆ. ಜನ ಮಾನಸದಲ್ಲಿ ಧಾರ್ಮಿಕ ಪ್ರಜ್ಞೆ, ಧರ್ಮಪ್ರಜ್ಞೆ, ಸತ್ಯ, ನ್ಯಾಯದಲ್ಲಿ, ತೊಡಗಿಸುವ ಕೆಲ ಮುಖ್ಯ ಸುಲಭೋಪಾಯಗಳೂ ಕಂಡುಬಂದವು. ನಂತರ ಸಮಾಜ ವ್ಯಾಪಕವಾದ ರೋಗಾದಿಗಳು, ದೈಹಿಕ ಮಾನಸಿಕ ದೋಷಗಳು, ಋಣಕಾರಣವಾದ ಕ್ಲೇಷ, ಕರ್ಮ ಸಂಬಂಧಿತ ಬಾಧೆಗಳನ್ನು ನಿವಾರಿಸುವ ದಾರಿ ಹುಡುಕುತ್ತಾ ಈ ಸಂಶೋಧನೆಯಲ್ಲಿ ತೊಡಗಿಸಿಕೊಂಡೆ. ಅಲ್ಲಿಗೆ ವಿಕೃತಿ ನಾಮ ಸಂವತ್ಸರ ಬಂತು.

ಈ ವಿಕೃತಿ ಸಂವತ್ಸರದಲ್ಲಿ ಪ್ರಕೃತಿಯಲ್ಲಿರಬಹುದಾದ ಸಕಲ ವಿಕೃತಿಗಳನ್ನೂ ಅರ್ಥ ಮಾಡಿಕೊಂಡು ಹಿಂದೆ ಅನುಷ್ಠಿಸಿದ ಎಲ್ಲಾ ಮಂತ್ರಗಳೂ, ದೇವ ದೇವತೆಗಳೂ, ಸಕಲ ಜ್ಞಾನಾಗಳೂ, ಸಹಜ ಫಲಗಳೂ ಸಮಾಜದಲ್ಲಿ ತೊಡಗುವಂತೆ ಪ್ರಯೋಗ ಆರಂಭಿಸಿರುತ್ತೇನೆ. ಈ ಪ್ರಯೋಗದಿಂದ ಭಾರತೀಯ ಅಧ್ಯಾತ್ಮ ಮೇರುವಿನೋಪಾದಿಯಲ್ಲಿ ಬೆಳೆದು ಪ್ರಪಂಚವ್ಯಾಪಿಯಾಗುವತ್ತ ಪ್ರಯತ್ನ ಮಾಡಲಾಗುವುದು. ಜನರಲ್ಲಿ ಧೈವಭಕ್ತಿ, ಸತ್ಯ, ನ್ಯಾಯ, ಧರ್ಮದಲ್ಲಿ ನಿಷ್ಠೆ, ಶೃದ್ಧಾದಿ ಪಂಚದಶ ಗುಣವೃದ್ಧಿ, ಆರೋಗ್ಯಾದಿ ಅಷ್ಟೈಶ್ವರ್ಯ ಪ್ರಾಪ್ತಿ, ಆನಂದಾದಿ ಯೋಗ ಪ್ರಾಪ್ತಿ, ತನ್ಮುಖೇನ ಲೋಕಕಲ್ಯಾಣ ಮತ್ತು ಆತ್ಮಕಲ್ಯಾಣದ ಫಲಪ್ರಾಪ್ತಿಯಾಗುವಂತೆ ಪ್ರಯತ್ನ ಮಾಡಲಾಗುತ್ತದೆ. ದೇಶದಲ್ಲಿ ವ್ಯಾಪಕವಾದ ಮೋಸ, ವಂಚನೆ, ಅತೃಪ್ತಿ, ಧನದಾಹ, ದರೋಡೆ, ಕೊಲೆ, ಸುಲಿಗೆ, ವಿಚ್ಛಿದ್ರತೆ, ದ್ರೋಹಾದಿ ಬುದ್ಧಿಗಳು, ನಿರಂತರವಾಗಿ ಕ್ಷೀಣಿಸುತ್ತಾ ಬರುವಂತೆ ಈ ಯಾಗದಲ್ಲಿ ಪ್ರಯತ್ನಿಸಲಾಗಿದೆ. ಆ ಸಂಬಂಧಿ ತಾ.೦೪-೦೩-೨೦೧೧ ರಿಂದ ಆರಂಭಿಸಿ ತಾ.೦೪-೦೪-೨೦೧೧ರವರೆಗೆ ಸಂಯೋಜನೆ ಮಾಡಲಾಗುವುದು. ತನ್ಮೂಲಕ ಪ್ರಕೃತಿ ಸ್ಪಂದಿಸುವಂತೆ ಮಾಡಿದಲ್ಲಿ ಯಾಗ ಪೂರ್ಣವಾಗುತ್ತದೆ ಎಂದು ತಿಳಿಸಲು ಸಂತೋಷಿಸುತ್ತೇನೆ.

ಹೀಗೆ ಸತತವಾಗಿ ನಡೆದ ೫ ವರ್ಷ ಪರ್ಯಂತದ ಅಗ್ನ್ಯಾ ವೈಷ್ಣವೀ ಯಾಗ ಯಶಸ್ಸಿಗೆ, ಆರ್ಥಿಕತೆಗೆ, ಬೆಂಬಲಕ್ಕೆ ನಿಂತವರು ಋತ್ವಿಕ್ ವಾಣಿ ಬಳಗದ ಆಜೀವ ಸದಸ್ಯರು, ಅವರನ್ನೆಲ್ಲಾ ಸ್ಮರಿಸಿ ನಂತರ ಸಹಾಯಕರಾಗಿ ಸ್ಫೂರ್ತಿದಾಯಕರಾದವರಿಗೆಲ್ಲಾ ಧನ್ಯವಾದ ಸಮರ್ಪಿಸುತ್ತೇನೆ.

೧) ಧರ್ಮಪತ್ನಿ (ಸುಮತಿ)
೨) ಸುಬ್ರಹ್ಮಣ್ಯ
೩) ಔರಸಪುತ್ರ (ಮದನ್ ಕುಮಾರ್)
೪) ಗುರುರಾಜ
೫) ನಾಗೇಶ್ ಅಡಿಗರು
೬) ಶ್ರೀನಿವಾಸ್
೭) ಗುರುಪ್ರಸಾದ್
೮) ಅಖಿಲೇಶ್
೯) ರಮೇಶ್ ರಾಜು
೧೦) ರಮೇಶ್
೧೧) ರವಿ
೧೨) ಕೃಷ್ಣ
೧೩) ವೇದ ವಿಜ್ಞಾನ ಮಂದಿರದ ವಿಧ್ಯಾರ್ಥಿಗಳು
೧೪) ಸುಮತಿ ಸತೀಶ್
೧೫) ರೋಹಿಣಿ
೧೬) ರಾಣಿ
೧೭) ಮಹಾಲಕ್ಷ್ಮಮ್ಮ
೧೮) ಕುಸುಮ
೧೯) ಲಲಿತಮ್ಮ
೨೦) ಜಯಂತಿ ಅಮ್ಮ
೨೧) ಲತಾ ಶ್ರೀಕಾಂತ ಹೆಗ್ಗಡೆ
೨೨) ಸುಮಿತ್ರ
೨೩) ಸೌಭಾಗ್ಯಮ್ಮ
೨೪) ಗೀತಾ
೨೫) ಮೋಹನ
೨೬) ಅಮರೇಶ
೨೭) ವಿಧ್ಯಾಶಂಕರ್
೨೮) ನರೇಶ
೨೯) ನಾಗಭೂಷಣ
೩೦) ಸಂಪತ್ ರಾಯರು
೩೧) ಕೃಷ್ಣರಾವ್
೩೨) ಕೀರ್ತಿ ಕುಮಾರ್
೩೩) ಹೇಮಂತ್ ಕುಮಾರ್ ಜಿ
೩೪) ಲಕ್ಷ್ಮೀನಾರಾಯಣ ತುಂಗರು
೩೫) ವಸಂತ
೩೬) ವಿಮಲ
೩೭) ವೆಂಕಟೇಶ್ ಟಿ.ವಿ.
೩೮) ಗಿರೀಶ್
೩೯) ರವಿಕಿರಣ್
೪೦) ಅರುಣ್ ಕುಮಾರ್
೪೧) ಸಂದೇಶ್
೪೨) ಅಕ್ಷಯ
೪೩) ಅನಿತಾ
೪೪) ವಿಜಯ
೪೫) ಶೋಭಾ
೪೬) ನಿರಂಜನ ಭಟ್ಟರು
೪೭) ದಿವಾಕರ ಭಟ್ಟರು
೪೮) ನಾಗೇಶ್
೪೯) ಸತೀಶ್
೫೦) ಅಭಿನಂದನ
೫೧) ಶಶಿಕಲಾ
೫೨) ಡಾ|| ಪಳ್ಳತಡ್ಕ ಕೇಶವ ಭಟ್ಟರು
೫೩) ಜಾನ್ ಲೂಯಿಸ್
೫೪) ರಿಚರ್ಡ್
೫೫) ಇಸ್ಮಾಯಿಲ್
೫೬) ಕಬೀರ್
೫೭) ದಾಮಿನಿ
೫೮) ಶಿವಾನಂದ
೫೯) ಜಗದೀಶ
೬೦) ಮಧು
೬೧) ಜಿತೇಂದ್ರ ಕೊಟ್ಟಾರಿ (ಕಲ್ಲಡ್ಕ)
೬೨) ಡಾ|| ಪ್ರಭಾಕರ ಭಟ್ಟರು (ಕಲ್ಲಡ್ಕ)
೬೩) ಡಾ|| ವೀಣಾ
೬೪) ಡಾ|| ಎಸ್. ಎನ್. ಪಡಿಯಾರ್
೬೫) ಅರುಣಾ ಪಡಿಯಾರ್
೬೬) ಅರವಿಂದ
೬೭) ಹರೀಶ
೬೮) ಶ್ರೀಕಾಂತ ಹೆಗ್ಗಡೆ
೬೯) ರಾಮಕೃಷ್ಣ ಹೆಗ್ಗಡೆ
೭೦) ಮಣಿಕಂಠ
೭೧) ಸತೀಶ
೭೨) ಕುಮಾರ್
೭೩) ಗವಾಮಯನ ಯಾಗದಲ್ಲಿ ಸಹಕರಿಸಿದ ಎಲ್ಲಾ ಋತ್ವಿಜರು, ದೀಕ್ಷಿತರು, ಕಾರ್ಯಕರ್ತರು,
೭೪) ವರ್ಧಮಾನ ಶೆಟ್ಟರು
೭೫) ರಾಮ ತಾರಕ ಯಜ್ಞದಲ್ಲಿನ ಎಲ್ಲಾ ಋತ್ವಿಜರು
೭೬) ಚತುಃ ಸಂಹಿತಾ ಯಾಗದ ಎಲ್ಲಾ ಋತ್ವಿಜರು
೭೭) ಇನ್ನಿತರೆ ಈ ಯಾಗ ಕಾಲದ ಎಲ್ಲಾ ಪ್ರಕ್ರಿಯೆಯಲ್ಲಿ ಭಾಗವಹಿಸಿ ಸಹಕರಿಸಿದವರು.

ಮತ್ತು ಪ್ರತ್ಯಕ್ಷ ಪರೋಕ್ಷವಾಗಿ ಸಹಕರಿಸಿದವರೆಲ್ಲರಿಗೂ ಕೃತಜ್ಞತೆ ಸಮರ್ಪಿಸುತ್ತಾ ಯಾಗ ಫಲವು ನಮ್ಮ ಸಂಸ್ಥೆಯ ಸದಸ್ಯರು, ಆಜೀವ ಸದಸ್ಯರು, ಯಾಗದ ಕಾರ್ಯಕರ್ತರೂ ಅಲ್ಲದೆ ಇದರಲ್ಲಿ ಅಸಹಕಾರ, ತೊಂದರೆ ಇತ್ಯಾದಿ ಉಂಟು ಮಾಡಿದವರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.

ಮುಖ್ಯವಾಗಿ ನಮ್ಮ ಸಂಸ್ಥೆಯ ಆಜೀವಸದಸ್ಯರೆಲ್ಲರಿಗೂ ಅನಂತಾನಂತ ಕೃತಜ್ಞತೆ ಸಲ್ಲಿಸುವುದರೊಂದಿಗೆ ಯಾಗಫಲವನ್ನು ಮುಂದಿನ ಸಂಚಿಕೆಯಲ್ಲಿ ಪ್ರಕಟಿಸುತ್ತೇನೆ ಎಂದು ತಿಳಿಸುತ್ತಾ ಈ ಲೇಖನ ಮುಗಿಸುತ್ತಿದ್ದೇನೆ.

ಕೊನೆಯಲ್ಲಿ ಆಜೀವ ಸದಸ್ಯರೆಲ್ಲರಿಗೂ ಯಾಗದ ಪ್ರಸಾದ ತಲುಪಿಸುವ ಪ್ರಯತ್ನ ಮಾಡುತ್ತೇನೆ ಎಂದು ಘೋಷಿಸುತ್ತೇನೆ.

ಘೋಷಣೆ

ಈ ೫ ವರ್ಷಗಳ ಕಾಲ ನಡೆಸಿದ
ಯಾಗದ ಸಂಪೂರ್ಣ ಫಲವನ್ನೂ ಈ
ದೇಶದಲ್ಲಿ ಹುಟ್ಟಿದ ಜೀವಕೋಟಿಗಳಿಗೆ
ಸಂಪೂರ್ಣವಾಗಿ ಸಮರ್ಪಿಸುತ್ತೇನೆ.

ಲೋಕಾಃ ಸಮಸ್ತಾಃ ಸುಖಿನೋ ಭವಂತು

ಬೇಡಿ ತಿನ್ನುವ ಕಾಲ ಆಟ
ವಾಡಿ ದಂತಿತ್ತು ಗುರುವೆ ನೀ
ಕಾಡದಿರು ಸಾಕೆನಗೆ ಬೇಡಿ ತಿನ್ನುವ ಜೀವನವು ಸದಾ ನಿ |
ನ್ನಡಿದಾವರೆಯ ನೆನೆವೆ ನಾ
ನೀಡು ನಿನ್ನಡಿದಾವರೆಯಲಿ
ದೃಢಭಕುತಿಯನು ಮರೆಯದಂತಿರಲಿ ಸಾಕೆನಗೆ ದೇವಾ || ||
ನಾಡಜನರಾ ಸೇವೆ ನಿನ್ನಯ
ಹಾಡಿ ಹೊಗಳುವ ಶೃದ್ಧೆ ನಾ
ಓಡಾಡಿಕೊಂಡಿರಲಾರೋಗ್ಯವದು ಎನಗೆ ಸಾಕೈ ದೇವ |
ಬೇಡಲಾರೆನು ನಿನ್ನ ನಾನೆಂದು
ಬಡವನಲ್ಲ ನಿನ್ನಯ ಭಕುತ
ಬಡತನವ ಕಾಣಿಸದಿರು ಬೇಡಿ ಬದುಕುವೆನೆಂಬೆನೂ || ||
ಮಾಡಿದಾ ಯಾಗದಲಿ ತೃಪ್ತಿಯ
ನೀಡಿ ಹರಸೈ ಸಕಲ ಜೀವರನು
ಕಾಡುವಾ ಕರ್ಮದಿಂ ಮುಕ್ತಿಯ ನೀಡಿ ಕರುಣಿಸು |
ಒಡೆಯ ಶಂಕರನೆ ನಿನ್ನಯ ಧ್ಯಾನ
ಒಡೆಯದಂತಿರಲಿ ಮನದೊಳು
ಪಡೆಯುವೆನು ಸದ್ಗತಿಯ ನಾ ಬಿಡೆನು ನಿನ್ನಯ ಭಕುತಿಯು || ||

ಇಂತು
ಯಾಗಾಧ್ವರ್ಯು
ಕೆ.ಎಸ್. ನಿತ್ಯಾನಂದ

ಯಾಗ ಫಲ ನಿರೂಪಣೆ

ಧೈವ ಸಂಕಲ್ಪದಂತೆ ಸತತವಾಗಿ ೫ ವರ್ಷಗಳ ಕಾಲ ನಡೆದ "ಅಗ್ನ್ಯಾ ವೈಷ್ಣವೀ ಯಾಗ"ವನ್ನು ತಾ. ೪-೪-೨೦೧೧ ರಂದು ಅದ್ಭ್ಯದೇವತಾ ಪೂರ್ಣಾಹುತಿಯೊಂದಿಗೆ ಸಮಾರೋಪ ಮಾಡಿ ಈ ಯಾಗಫಲವನ್ನು ಕೆಲ ನಿರ್ಬಂಧದೊಂದಿಗೆ ಸೂಚ್ಯವಾಗಿ ಬರೆಯುತ್ತಿದ್ದೇನೆ.

"ಉದ್ಗಾತೇವ ಶಕುನೇ ಸಾಮ ಗಾಯಸಿ ಬ್ರಹ್ಮಪುತ್ರ ಇವ ಸವನೇಷು ಶಂಸಸಿ |
ವೃಷೇವ ವಾಜೀ ಶಿಶುಮತೀರಪೀತ್ಯಾ ಸರ್ವತೋ ನಃ ಶಕುನೇ ಭದ್ರ ಮಾವದ ವಿಶ್ವತೋ ನಃ ಶಕುನೇ ಪುಣ್ಯಮಾವದ" ||

ಎಂಬಂತೆ ಸದಾ ಶುಭ ನುಡಿಯಬೇಕು ಎಂಬುದು ವೇದದ ಆದರ್ಶ. ಅಶುಭಗಳು ಕಂಡುಬಂದರೂ ನುಡಿಯದಿರು. "ನುಡಿದು ಬಲ ನೀಡಿದರೆ ನಡೆವ ಅಶುಭಗಳೆಲ್ಲ ಕಡೆಯ ಕಾಣುವುದಯ್ಯ ನುಡಿದು ನೀ ಬಲ ನೀಡದಿರು ಜಡ ಮಾನವ" ಎಂದಿದ್ದಾನೆ ಒಬ್ಬ ಕವಿ. ಒಂದು ವಿಚಾರವನ್ನು ಪದೇ ಪದೇ ಹೇಳುವುದರಿಂದ ಅದು ಘಟಿಸುವ ಸಾಧ್ಯತೆ ಇದೆ. ಆದ ಕಾರಣ ಅಶುಭ ವಾಕ್ಯವನ್ನು ನುಡಿಯದೇ ತಡೆ ಮಾಡು ಎಂದು ಹೇಳಿದ್ದಾರೆ. "ಆಡದೆಲೆ ಮಾಡುವವ ರೂಢಿಯೊಳಗುತ್ತಮನು. ಆಡಿ ಮಾಡುವವ ಮಧ್ಯಮನು. ಆಡಿಯೂ ಮಾಡದವನು ಅಧಮನು" ಎಂದಿದ್ದಾರೆ ಜ್ಞಾನಿಗಳು. ಹಾಗಾಗಿ ಈ ಮೇಲ್ಕಂಡ ಆದರ್ಶಗಳನ್ನು ಮೈಗೂಡಿಸಿಕೊಂಡ ಕೆಲ ಉದಾರಿ ಧರ್ಮಭೀರುಗಳ ಸಹಾಯ ಸಹಾಕಾರದೊಂದಿಗೆ ಯಶಸ್ವಿಯಾಗಿ ಈ ದೀರ್ಘಸತ್ರಯಾಗವನ್ನು ಪ್ರಚಾರ, ಆಡಂಬರವಿಲ್ಲದೆ ಹಿಮ್ಮೇಳಗಳ ಸಹಾಯವಿಲ್ಲದೇ ಸರಳವಾಗಿ ಶಾಸ್ತ್ರೀಯವಾಗಿ ಸೂತ್ರೋಕ್ತರೀತಿಯಲ್ಲಿ ಮಾಡಿ ಪೂರ್ಣಾಹುತಿಯನ್ನು ಮಾಡಲಾಗಿದೆ. ಪೂರ್ಣಾಹುತಿ ಕಾಲದಲ್ಲಿ ಯಾಗದೇವತೆ ಹೇಳುವ ಒಂದೇ ವಾಕ್ಯ ೩ ವಿಧ, ೨೪ ಬೇರೆ ಬೇರೆ ವಿಧದಲ್ಲಿ ಅರ್ಥಕೊಡುವ ಯಾಗಫಲವಾಗಿರುತ್ತದೆ. ಅದರ ವಿವರಣೆಯನ್ನು ಈಗ ವಿವರಿಸುತ್ತೇನೆ. ಮೊದಲಾಗಿ "ಉದ್ಗಾತೇವ ಶಕುನೇ" ಎಂದು ಹೇಳಿದ್ದು ಇದೇ ಕಾರಣದಿಂದಾಗಿ. ಕೆಲವೊಂದು ವಿಚಾರಗಳನ್ನು ನೇರವಾಗಿ ಸಮಾಜಕ್ಕೆ ಘೋಷಿಸುವಂತಿಲ್ಲ. ಅದರ ಪರಿಣಾಮ ತಡೆಯುವ ಪ್ರಯತ್ನ ಮಾತ್ರವಿರಬೇಕು ಎಂಬುದು ಆರ್ಷೇಯವಾದ. ಉದಾ - ಸೂರ್ಯಗ್ರಹಣ ನೋಡಬೇಡಿ ಎಂದರು ಹಿರಿಯರು. ಆದರೆ ಅದರಲ್ಲಿ ಸಾರ್ವತ್ರಿಕ ಹಿತವಿದೆ. ನೋಡಿದವರಿಗೆಲ್ಲಾ ತೊಂದರೆ ಇಲ್ಲ. ಆದರೆ ಕೆಲವೇ ಜನರಿಗೆ ದೃಷ್ಟಿ ನಾಶವಾಗಬಹುದು. ಹಾಗಾಗಿ ಅವರು ಯಾರು ಎಂದು ಗುರುತಿಸುವುದು ಕಷ್ಟಕರವಾದ್ದರಿಂದ, ಸಾರ್ವತ್ರಿಕ ಕಣ್ಣು ಪರೀಕ್ಷೆ ಸಾಧ್ಯವಿಲ್ಲದ್ದರಿಂದ ಬರೇ ಕೇವಲ ಸ್ವಲ್ಪಕಾಲ ಸೂರ್ಯನನ್ನು ನೋಡದೇ ಇರುವುದರಿಂದ ಎಲ್ಲರಿಗೂ ರಕ್ಷಣೆಯಾಗಲು ಸಾಧ್ಯವಾದ್ದರಿಂದ ಗ್ರಹಣಕಾಲದಲ್ಲಿ ಸೂರ್ಯನನ್ನು ನೋಡಬೇಡಿ ಎಂದರು. ಇದೆಲ್ಲಾ ನಮ್ಮ ಪೂರ್ವೀಕರ ಸಮ "ಸಹಿಷ್ಣುಜ್ಞಾನ" ಇಲ್ಲಿಯೂ ಅದನ್ನು ಬಳಸಲಾಗಿದೆ. ಮುಖ್ಯವಾದ ವಿಚಾರಗಳನ್ನು ಮಾತ್ರ ವಿವರಿಸುತ್ತೇನೆ.

ಒಂದಾನೊಂದು ಕಾಲದಲ್ಲಿ ಇಡೀ ಭರತಭೂಮಿಯಲ್ಲಿ ಅಗ್ರಹಾರ ವ್ಯವಸ್ಥೆ ಇತ್ತು. ಅಲ್ಲಿ ಬ್ರಾಹ್ಮಣರೆಲ್ಲಾ ಒಟ್ಟಾಗಿ ವಾಸಿಸುತ್ತಾ ಜಪ, ತಪೋನುಷ್ಠಾನ, ಉಪಾಸನೆ, ಆರಾಧನೆ, ಯಾಗಯಜ್ಞಗಳಲ್ಲಿಯೇ ತಮ್ಮನ್ನು ತೊಡಗಿಸಿಕೊಂಡು ಸಂತೃಪ್ತರಾಗಿ ಬದುಕುತ್ತಿದ್ದರು. ಬಿಡಿಯಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಬ್ರಾಹ್ಮಣರೂ ಇದ್ದರು. ಆದರೆ ಅವರಿಗೆ ಅಂತಹಾ ಗೌರವ ಸ್ಥಾನಮಾನಗಳಿರಲಿಲ್ಲ. ಅಗ್ರಹಾರವಾಸಿಗಳೆಂದರೆ ವಿಶೇಷ ಸ್ಥಾನಮಾನ. ಹಾಗಾಗಿ ಈಗಲೂ ಎಷ್ಟೋ ಜನ ನಾವು ಅಹಿಚ್ಛತ್ರದಿಂದ ಬಂದವರು ದಕ್ಷಿಣಭಾರತಕ್ಕೆ ಎನ್ನುತ್ತಾರೆ. ಅಹಿಚ್ಛತ್ರ ಎಂದರೆ ಅಗ್ರಹಾರ ಇದು ಸಮಾನಾರ್ಥಕ ಪದ. ಆ ಕಾಲದಲ್ಲಿ ನಡೆಯುತ್ತಿದ್ದ ಯಾಗ ಯಜ್ಞಗಳು ಈಗ ಸಂಪೂರ್ಣ ನಿಂತಿರುತ್ತದೆ. ಕಾರಣ ಒಗ್ಗಟ್ಟು ಇಲ್ಲ. ತ್ಯಾಗವಿಲ್ಲ. ಧನಮೂಲದ ಯಾಗಯಜ್ಞಗಳು ಫಲಕಾರಿಯಲ್ಲ. ಹಣವಿಲ್ಲದೇ ತ್ಯಾಗಶೀಲರಾದ ಬರೇ ಅಶನ ವಸನಗಳನ್ನು ಪಡೆದು ಬದುಕುವ ಇಚ್ಛೆಯಿದ್ದ ಬ್ರಾಹ್ಮಣರೇ ಕಾಣುತ್ತಿಲ್ಲ. ದಕ್ಷಿಣೆ ದಾನ ಇತ್ಯಾದಿ ಪ್ರಲೋಭನೆಗೆ ಒಳಗಾದವರೇ ಹೆಚ್ಚು. ಜೊತೆಯಲ್ಲಿ ದಕ್ಷಿಣೆ ದಾನವಿಲ್ಲದಿದ್ದರೆ ಮಾಡಿದ ಕೆಲಸ ಫಲವಿಲ್ಲವೆಂಬ ಬೊಗಳೆಗೆ ವೇದದ ಆಧಾರ ಕೊಡುತ್ತಾರೆ. ಯಾಗಗಳಲ್ಲಿ ದಾನಾದಿಗಳು ಪ್ರಧಾನವಾದ ಯಾಗವೇ ಬೇರೆ. ಬಹುದಕ್ಷಿಣಾ ಯಾಗವೆಂಬ ವಿಧಿಯೇ ಬೇರೆ. ಎಲ್ಲಾ ಯಾಗಯಜ್ಞಗಳಿಗೂ ದಕ್ಷಿಣೆಯಿಲ್ಲ. ಅಲ್ಲಿ ತ್ಯಾಗವೇ ಪ್ರಧಾನ. ಸಾಮಾನ್ಯ ನಿತ್ಯ ನೈಮಿತ್ತಿಕ ಶಾಂತಿಕರ್ಮಗಳಲ್ಲಿ "ಸ್ವಸ್ತಿಕ"ವೆಂಬ ಒಂದು ದಿನದ ಊಟದ ಸಾಮಗ್ರಿ ಮಾತ್ರ ಬ್ರಾಹ್ಮಣರಿಗೆ ಅಶನಾರ್ಥವಾಗಿ ಕೊಡುವುದಿದೆ. ಆದರೆ ಆ ಆದರ್ಶ, ತ್ಯಾಗ, ಸಹಿಷ್ಣು, ಉದಾರಿ, ವೇದಬ್ರಹ್ಮ, ಪುರೋಹಿತರಾದ ಬ್ರಾಹ್ಮಣರು ಸಿಗುವುದು ಕಷ್ಟ.

ಇವೆಲ್ಲಾ ಏಕೆ ಮೊದಲಾಗಿ ಹೇಳಿದೆನೆಂದರೆ ಯಾಗಫಲದಲ್ಲಿ ಮೇಲೆ ಹೇಳಿದ ವಿಚಾರಗಳನ್ನು ಮಂಡಿಸಿ ಖಂಡಿಸಿರುತ್ತೇನೆ. ಆ ಕಾರಣದಿಂದಾಗಿ ಮುಂದಿನ ಫಲಶ್ರುತಿಗೆ ಪೂರಕವಾಗಿ ಈ ಪೀಠಿಕೆ ಬರೆದಿರುತ್ತೇನೆ. ಮೊದಲಾಗಿ ಈ ಯಾಗದಲ್ಲಿ ಪ್ರತ್ಯಕ್ಷ, ಪರೋಕ್ಷವಾಗಿ ಭಾಗವಹಿಸಿದ ಮತ್ತು ಆರ್ಥಿಕ ಮೂಲದ ಸಹಾಯ ಒದಗಿಸಿದ ಋತ್ವಿಕ್‌ವಾಣಿ ಬಳಗದ ಆಜೀವ ಸದಸ್ಯರನ್ನು ಕೃತಜ್ಞತಾಪೂರ್ವಕ ಸ್ಮರಿಸುತ್ತಾ ಯಾಗದೇವತೆಯ ಮುಖೋದ್ಗೀತ ವಾಕ್ಯವನ್ನು ಲೇಖಿಸಿ ನನ್ನ ಬುದ್ಧಿಮತ್ತೆಯ ಅಳವಿಯಲ್ಲಿ ವಿಮರ್ಶಿಸಿ ವಿವರಣೆ ನೀಡುತ್ತಿದ್ದೇನೆ. ಇದು ಯಾಗಫಲ -

"ವಿಶ್ವಾ ಅಧಿಶ್ರಿಯೋ ಜ್ಯೋತಿಷಾ ಹಾಸತೇ ತಮೋಜ್ಞಾನಂ ನಿಶ್ಯೇನಾ ಸುತರಾ ಭವಃ"
"ವೃಕ್ಯಂ ವೃಕಂ ಬ್ರಹ್ಮಾ ಯಾವ ಜ್ಞಾತಯೋ ದೇವ್ಯಾ ಅಕ್ಷಂತೋ ನಿ ಪಕ್ಷಿಣ ಸುತರಾಭವಃ"
"ಇವಾಕರಂ ವೃಣೀಶ್ಯ ಮೂರ್ಧ್ನಿಕಾಮೇನ ನಿಪದ್ಯಂತೋ ಜನಾ ಚಕ್ರೇಣ ಪರಿಪಂಥಿನಃ"

ಈ ರೀತಿಯಲ್ಲಿ ಉದ್ಘರಿಸಿದ ವಾಕ್ಯದಲ್ಲಿ ಸತ್ಯತೆ ಇದೆ. ಸಮರ್ಥತೆ ಇದೆ. ನ್ಯಾಯವಿದೆ. ಧರ್ಮವಿದೆ. ಲೋಕಹಿತವಿದೆ. ಸರ್ವಜನಕಲ್ಯಾಣ ಉದ್ದೇಶದ ಯಾಗಫಲಪ್ರದವೆಂಬ ಪ್ರಶಂಸೆ ಇದೆ. ಫಲಾನುಭವಿಯಾಗಲು ಸರ್ವರಿಗೂ ಅರ್ಹತೆ ಇದೆಯೆಂಬ ಈ ವಾಕ್ಯ ಒಟ್ಟು ಹದಿನಾರು ರೀತಿಯ ಉತ್ತರರೂಪೀ ರಹಸ್ಯ ವಾಕ್ಯವಾಗಿರುತ್ತದೆ. ಅದರಲ್ಲಿ ೧೨ನ್ನು ನಿರ್ಬಂಧದಡಿಯಲ್ಲಿ ವಿವರಿಸಲು ನಾನು ಶಕ್ತನಾಗಿದ್ದೇನೆ ಎಂದು ಈ ಮೂಲಕ ವಿನಮ್ರವಾಗಿ ಘೋಷಿಸುತ್ತೇನೆ. ಒಟ್ಟು ೨೪ ಅರ್ಥ. ಅದರಲ್ಲಿ ೧೬ ಸಾರ್ವತ್ರಿಕ ಫಲದಾಯಕ. ಸದ್ಯಕ್ಕೆ ೧೨ನ್ನು ವಿವರಿಸಲು ಶಕ್ತ.

೦೧) ಈ ಪ್ರಸಕ್ತ ಕಾಲೀನ ಜಗತ್ತು ತಾನೇನು, ತನಗೇನು, ಗುರಿಯೇನು ಅರಿಯದೇ ಮೂಢನಾಗಿ ಮೂರ್ಖನಂತೆ ಕತ್ತಲೆಯನ್ನು ಹಿಂಬಾಲಿಸುತ್ತಿದೆ. ಅದಕ್ಕೆ ಬೆಳಕು ನೀಡುತ್ತದೆ. (ತಿರುಕ ಸಂಹಿತಾ)

೦೨) ತನಗೆ ಅಗತ್ಯವಿರಲಿ, ಇಲ್ಲದಿರಲಿ ತನಗೇ ಬೇಕೆಂಬ ಮೂರ್ಖತನದಿಂದ ಎಲ್ಲವನ್ನೂ ಬಾಚಲು ಹೋಗಿ ತನ್ನದ್ದನ್ನು ಕಳೆದುಕೊಳ್ಳುತ್ತದೆ; ಅಜ್ಞಾನದಿಂದ. ಅದಕ್ಕೆ ಜ್ಞಾನ ಒದಗಿಸುತ್ತದೆ. (ತಿರುಕ ಸಂಹಿತಾ)

೦೩) ತನ್ನಾತ್ಮ ಕಲುಷಿತನ ಮುಚ್ಚಿ ಮರೆಯಾಗಿಸಲು ವ್ಯರ್ಥ ಪರದೂಷಿಸುವ ಮಾನವನೇ ನಿನ್ನ ನಾಶವದು ತಿಳಿದುಕೊ. ತಿಳಿವ ಹರಿವ ಒರತೆ ಇಲ್ಲಿದೆ. (ತಿರುಕ ಸಂಹಿತಾ)

೦೪) ವೇದಾದಿ ಸತ್ಯವನು ಬೋಧಿಪ ನಿಜಗುರು ಈ ಲೋಕಕಿಳಿದು ಬರುವನು ಕಾಯುತಿರು ನೀನು.

೦೫) ಈ ಲೋಕದಾಳ್ವಿಕೆಯು ಭಕ್ತರೊಳಗಳವಡಿಸಿ ಧರ್ಮಸೂತ್ರದಿ ಆಳ್ವಿಕೆ ಬಹುದು ಬೇಗ.

೦೬) ಧರ್ಮವೊಂದೇ ಕೇಳು, ಬಹು ಭಿನ್ನ ಜೀವನವು ಅರಿತು ಬಾಳುವ ಕಾಲ ಸನ್ನಿಹಿತವು.

೦೭) ಪಕ್ಷಭೇದಗಳಿರಲಿ ವಿಚಾರ ಪಕ್ಷಗಳಿರಲಿ ಜೀವನ ಪಕ್ಷದೊಳು ದಯೆ ಧರ್ಮವಿರಲಿ ದಾರಿ ತೋರಿಪ ವಸ್ತು ಸಿಕ್ಕಿಹುದು ಈಗ. (ತಿರುಕ ಸಂಹಿತಾ)

೦೮) ಧನ, ಕನಕ, ವಸ್ತು, ವಾಹನವೆಲ್ಲ ಸ್ಥಿರವಲ್ಲ ಬ್ರಹ್ಮವೊಂದೇ ಸ್ಥಿರ, ಚಿದಾನಂದ ಕಾಣು ಅದನೊದಗಿಸುವ ಧೀರ ಬರುವನು ಅರುಣೋದಯವಾಗಿದೆ ಕಿರಣ ಕಾಯೊ.

೦೯)  ವಿಜ್ಞಾನ ಗೊಬ್ಬರವು ನಂಬದಿರು ಸುಜ್ಞಾನವಿಲ್ಲದಾ ಮೂಢ ಜನರನು ಕತ್ತಲೆಗೆ ತಳ್ಳುತಿದೆ ಕಡಿದು ಬಿಸುಡುವ ಲೋಕಪಿತನವತಾರ ಕಾಲ ಕಾಣು.

೧೦) ಜ್ವಲಿಪ ಅಗ್ನಿಯಲಿ ಜ್ವಾಲೆಗಳು ಆರುವಿಧ ಬಹುವರ್ಣ ಬಹುಭಿನ್ನ ಗುರಿಯೊಂದೆ ಶಾಖ್ ಭೌತಿಕದ ಇಂಧನವ ತಿಂದು ಭೌತಿಕ ಶಾಖ ಕೊಡುವನು ನೀ ತಂಪಕಿರಣವನರಿಯಬೇಕು. (ತಿರುಕ ಸಂಹಿತೆ)

೧೧) ಧರ್ಮ ಕಾರಣವೊಂದು ರಾಜಕಾರಣವೊಂದು ಬೇರಲ್ಲ ಕರ್ಮಕಾರಣದಿಂದ ಅದು ವ್ಯಾಪಾರ ಬಿಡು ನೀ ಚಿಂತೆ ಸುಜ್ಞಾನಕಿದು ದಾರಿ ಓದಿ ಅರಿಯಿರಯ್ಯಾ. (ತಿರುಕ ಸಂಹಿತೆ)

೧೨) ಲೋಗರೆಲ್ಲರು ಸುಖದಾಶೆಯಲಿ ಭಗವರಿಯದಾ ಕತ್ತಲೆಯಲಿ ಸಿಕ್ಕಿ ತೊಳಲಾಡುತಿರೆ ಸುಜ್ಞಾನ ಬೋಧೆಗೆ ಬರೆ ಮಾತು ಸಾಲದು ಬಡಿತವೇ ಬೇಕು ಅದುವೆ ಪ್ರಕೃತಿ ಉತ್ಪಾತಗಳು ಕಾಣಿರೊ.

ಹೀಗೆ ೧೨ ಅರ್ಥಗಳನ್ನು ಕನ್ನಡದ ಭಾಷೆಯಲ್ಲಿ ಗೂಢವಾಗಿ ವಿವರಿಸಿದ್ದೇನೆ. ಮುಂದಿನ ಕಂತಿನಲ್ಲಿ ಇನ್ನು ನಾಲ್ಕನ್ನು ವಿವರಿಸುತ್ತೇನೆ. ಉಳಿಕೆ ೮ ಕಾಲಾವಕಾಶವಿದ್ದರೆ ನಿಧಾನವಾಗಿ ವಿವರಿಸುವ ಪ್ರಯತ್ನ ಮಾಡುತ್ತೇನೆ.

ಇನ್ನು ಗೂಢವಾಗಿ ನನ್ನ ಅಳವಿಯಲ್ಲಿ ಆ ವಾಕ್ಯದ ವಿಚಾರ ಲೋಕಮುಖಕ್ಕೆ ಕೊಟ್ಟಿರುತ್ತೇನೆ. ಒಟ್ಟಾರೆ ನಮ್ಮೀ ಪ್ರಪಂಚದಲ್ಲಿರತಕ್ಕ ದುಃಖ ದುಮ್ಮಾನ ದೂರ ಮಾಡುವ ಒಬ್ಬಾತ ಬರುತ್ತಾನೆ. ಮೋಸ ವಂಚನೆ ಬಯಲಿಗೆಳೆಯುತ್ತಾನೆ. ಸುಜ್ಞಾನ ಬೋಧಿಸುವಾತ ಬಂದೇ ಬರುತ್ತಾನೆ. ಅವನನ್ನು ಕಾಯುವುದು ಬಿಟ್ಟು ನಮಗೇನೂ ದಾರಿಯಿಲ್ಲ ಎಂಬ ಸತ್ಯ ಅರಿತುಕೊಂಡು ಧರ್ಮಬದ್ಧವಾಗಿ ಬಾಳಿರಿ. ದಯೆ, ಧರ್ಮ, ಶಾಂತಿ, ಕ್ಷಮೆ, ಸತ್ಯಗಳನ್ನು ಮೈಗೂಡಿಸಿಕೊಂಡು ಸುಜ್ಞಾನದ ಅನ್ವೇಷಣೆಯಲ್ಲಿ ತೊಡಗೋಣವೆಂದು ಹೇಳುತ್ತಾ ಇದರ ಉಪಸಂಹಾರ ಪರ್ವವನ್ನು ಹೇಳುತ್ತೇನೆ.

ಸ್ವಸ್ತಿ ಪ್ರಜಾಭ್ಯಃ ಪರಿಪಾಲಯಂತಾಂ ನ್ಯಾಯೇಣ ಮಾರ್ಗೇಣ ಮಹಿಂ ಮಹೀಶಾಃ |
ಗೋಬ್ರಾಹ್ಮಣೇಭ್ಯಃ ಶುಭಮಸ್ತು ನಿತ್ಯಂ ಲೋಕಾಃ ಸಮಸ್ತಾಃ ಸುಖಿನೋ ಭವಂತು ||

ಮೂಕನ ಮಾಡಯ್ಯ | ದೇವೇಶ | ಎನ್ನ ನಿನ್ನ ನಾಮವ ಬಿಟ್ಟು
ಏಕೆ ಬೇರೇ ಮಾತು ವ್ಯರ್ಥ | ಭವಹರ | ಮೂಕತನವೇ ಸುಖವಯ್ಯಾ
ಶಾಕ ಪಾಕದ ಆಸೆ | ನಾಕವೆಂಬಾ | ಭ್ರಮೆಯಾಸೆ ನೀ ದೊರೆಯೆ
ಚಾಕಚಕ್ಯತೆ ಬೇಕೆ | ಸುಲಭನೇ | ನಿನ್ನ ನಾಮ ಮನದೊಳಿರಲೂ ||

ಎಲ್ಲದಕ್ಕಿಂತ ಕಷ್ಟಕರವಾದದ್ದು ಬೋಧನೆ. ಅದರಲ್ಲೂ ಸುಜ್ಞಾನ ಬೋಧನೆ ಅಸಾಧ್ಯವೆಂದೇ ಹೇಳಬಹುದು. ಒಂದು ಕಾಲದಲ್ಲಿ ಸತ್ಯ, ಧರ್ಮಬದ್ಧ ಜ್ಞಾನಬೋಧೆ ಬೇಕಿತ್ತು. ಆದರೆ ಈಗ ಹಾಗಲ್ಲ ಜನರಿಗೇ ಅವರು ಜೀವನದಲ್ಲಿ ತಮ್ಮ ಅಪರಾಧ, ಭ್ರಷ್ಟತೆ, ಮೋಸ, ವಂಚನೆಗೆ ಒಂದು ಆಧ್ಯಾತ್ಮಿಕ ಆಸರೆ ಬೇಕು. ಮತ್ತು ಅದರ ಸಮರ್ಥನೆ ಬೇಕು. ಹಾಗಾಗಿ ಅಧ್ಯಾತ್ಮ ಬೋಧೆ ಕಷ್ಟವೆಂದದ್ದು. ಎಲ್ಲರೂ ತಮ್ಮ ಮೂಗಿನ ನೇರಕ್ಕೇ ಆಲೋಚನೆ ಮಾಡುತ್ತಾ ತಾವು ಮಾಡುವುದೇ ಸರಿಯೆಂಬ ಭ್ರಮಾಲೋಕದಲ್ಲಿರುವಾಗ ಸದ್ಬೋಧೆ ಪಥ್ಯವಾಗುವುದಿಲ್ಲ. ಹಾಗಾಗಿ ಮೂಕನಾದರೆ ಗೊತ್ತಿದ್ದೂ ಹೇಳದೇ ಇದ್ದ ಪಾಪಕ್ಕೆ ಗುರಿಯಾಗಲಾರದಲ್ಲವೆ?

ಈ ಯಾಗಕಾಲದಲ್ಲಿ ನಾ ಹಿಡಿದ ಒಂದು ವಿಶೇಷ ವೃತವೇ ಇದು. ಯಾರ ತಪ್ಪನ್ನೂ ಹೇಳುವುದಿಲ್ಲ. ಒಂದು ವಿಚಾರ ಒಮ್ಮೆ ಮಾತ್ರಾ ಹೇಳುವುದು. ಎಲ್ಲವನ್ನೂ ಸಮನಾಗಿ ಸ್ವೀಕರಿಸುವುದು. ಶುಭಾಶುಭಗಳೆಲ್ಲವನ್ನೂ ಸಮತಾಭಾವದಿಂದ ಗ್ರಹಿಸುವುದು. ನಿಂದೆ, ಹೊಗಳಿಕೆಗೆ ಯಾವುದೇ ಬೆಲೆ ಕೊಡದಿರುವುದು. ಸದಾ ಧೈವಚಿಂತನೆ, ಧೈವಸೇವೆಯೇ ಗುರಿಯಾಗಿರುವುದು. ಸ್ವಹಿತಕ್ಕಾಗಿ ಯಾವುದನ್ನೂ ಮಾಡದಿರುವುದು. ಯಾರಿಂದಲೂ ಸ್ವಂತಕ್ಕಾಗಿ ಬೇಡದಿರುವುದು. ಈ ಅಷ್ಟ ಲಕ್ಷಣಯುಕ್ತವಾದ ವೃತ ಗ್ರಹಣ ಮಾಡಿ ಯಾರನ್ನೂ ನಿಂದಿಸದೇ ದೂಷಿಸದೇ ಐದು ವರ್ಷಗಳನ್ನು ಪೂರೈಸಿದ್ದೇನೆ. ಇದರಿಂದಾಗಿ ಯಾಗಸೂತ್ರಗಳ ಪರಿಷ್ಕರಣೆ, ವೇದಾದಿ ಮಂತ್ರಗಳ ಧಾರಣಾ ಶಕ್ತಿ, ಚಾಲ್ತಿಯಲ್ಲಿರುವ ಸೂತ್ರೋಕ್ತ ವಿಧಿವಿಧಾನಗಳ ಉಪಯುಕ್ತತೆ ಮತ್ತು ಸೂಕ್ತ ಪರಿಷಕ್ರಣೆ, ಪುರಾತನ ಋಷಿಮುನಿಗಳ ಛಾಯಾ ದರ್ಶನ, ಪ್ರಯೋಗ ಸಿದ್ಧಿ, ಅಸ್ತ್ರಾದಿಗಳ ಸಿದ್ಧಿ, ಯಾಗ ದೇವತಾ ಅನುಗ್ರಹಸಿದ್ಧಿ, ಲೋಕಕಲ್ಯಾಣದ ಗುರಿಯೆಲ್ಲವೂ ತುಂಬಾ ಉತ್ತಮವೆಂಬ ರೀತ್ಯಲ್ಲಿ ಲಭಿಸಿರುತ್ತದೆ. ಅದೇ ಯಾಗಫಲ ನಿರೂಪಣವೆಂಬ ಹಿಂದಿನ ಅಧ್ಯಾಯ ಓದಿ ಮತ್ತು ತಿರುಕ ಸಂಹಿತೆಯನ್ನೂ ಓದಿ ಅರ್ಥ ಮಡಿಕೊಳ್ಳಿರಿ. ಇಲ್ಲದಿದ್ದರೂ ನಿಮ್ಮ ಪ್ರಾಪ್ತ ಫಲ ಖಂಡಿತಾ. ಚಿಂತೆ ಬೇಡ. ಇನ್ನು ಉಪಸಂಹಾರ ಭಾಗದಲ್ಲಿ ಈ ವಿಚಾರ ತಿಳಿಸದಿದ್ದರೆ ನಿಮಗೆ ನನ್ನ ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತದೆ. ಅದಕ್ಕಾಗಿ ಈ ವಿಚಾರ ತಿಳಿಸುತ್ತಾ, ನಾನು ಯಾರಿಂದಲೂ ಏನನ್ನೂ ನಿರೀಕ್ಷಿಸದೆ ಈ ರೀತಿ ಯಾಗ, ಯಜ್ಞ, ದಾಸೋಹ, ಹೇಗೆ ನಡೆಸಲು ಸಾಧ್ಯವೆಂಬ ನಿಮ್ಮ ಪ್ರಶ್ನೆ ಹಾಗೆಯೇ ಉಳಿಯುತ್ತದೆ. ಅದಕ್ಕಾಗಿ ಈ ವಿಚಾರ ಮಂಡಿಸುತ್ತೇನೆ. ನಾನು ಒಬ್ಬ ವ್ಯಕ್ತರೂಪದ ಅಸತ್ಯ. ಅವ್ಯಕ್ತರೂಪದ ಸತ್ಯ. ನನ್ನ ರೂಪದಿಂದ ನನ್ನನ್ನು ಗುರುತಿಸಬೇಡಿ. ನನ್ನ ಆತ್ಮಿಕಭಾವದಿಂದ ಅರಿಯಿರಿ. ಜೀವನದಲ್ಲಿ ನನಗರಿವಿರುವಂತೆ ಜಾಗ್ರತ್, ಸ್ವಪ್ನ, ಸುಷುಪ್ತಿಯಲ್ಲಿಯೂ ಯಾರಿಗೂ ಕೆಟ್ಟದ್ದನ್ನು ಹಾರೈಸದ, ಕೆಟ್ಟದ್ದನ್ನು ಮಾಡದ, ನನ್ನ ವೃತ್ತಿಯೇ ನನಗೆ ಹಲವು ರೀತಿಯಲ್ಲಿ ಬಾಧಕಗಳು. ವ್ಯಕ್ತ ರೂಪದ ಹುಟ್ಟು ಸಾವುಗಳಿಂದ ಅತೀತವಾದ ವಿಧ್ಯೆ ಸಾಧಿಸಿ ಅವ್ಯಕ್ತನಾಗಿ ಪ್ರಕಟಪ್ರಪಂಚದಲ್ಲಿ ವ್ಯವಹರಿಸುವ ಯಾವ ಬಂಧನ ಬಂಧುತ್ವವನ್ನೂ ಹಚ್ಚಿಕೊಳ್ಳದ ಒಬ್ಬ ಅನಾಥ ಅಥವಾ "ತಿರುಕ". ತಿರುಕ ಅಂದರೆ ತನ್ನದ್ದಲ್ಲದ ಇನ್ನೊಬ್ಬರ ಕರ್ಮವನ್ನು ಬೇಡಿ ತಾನು ತಿಂದು ಅವರಿಗೆ ಅಂದರೆ ದಾತರಿಗೆ ಸಹಕರಿಸುವವನು ಎಂದರ್ಥ. ಇಲ್ಲಿ ನನ್ನದ್ದಾದ ಕರ್ಮಶೂನ್ಯತೆಯಲ್ಲಿ ಪರ ಕರ್ಮ, ಋಣಗಳನ್ನು ಮುಕ್ತವಾಗಿ ಬೇಡಿ ತಿಂದು ಅರಗಿಸಿಕೊಳ್ಳುವ ಕರ್ಮವಿಪಾಕಪದ್ಧತಿಯನ್ನು ಅರಿತ ವಿಶ್ವಕ್ಸೇನವೆಂಬ ಜಠರಾಗ್ನಿಯನ್ನು ಹೊಂದಿ ಲೋಕಕ್ಷೇಮವೇ ಗುರಿಯಾಗಿ ಪ್ರಕೃತಿಯಿಂದ ಕರ್ಮಾಧಾರಿತವಾದ ಆಯುರ್ಮಾನವನ್ನು ಪಡೆಯುತ್ತಾ ನಿರಂತರ ಸಂಚಾರಿಯಾಗಿ ಪೂರ್ವದಿಂದ ಪಶ್ಚಿಮಕ್ಕೆ ಸಂಚಾರ ಬದ್ಧತೆಯನ್ನು ಹೊಂದಿದ ತಿರುಕನಾಗಿದ್ದೇನೆ ಎಂದು ಘೋಷಿಸುತ್ತೇನೆ. ಇನ್ನು ನಾನು ಆರ್ಜಿಸಿದ ಪ್ರಾಪಂಚಿಕ ನಾಟಕೀಯ ಬಂಧುವರ್ಗ ಪೂರ್ವ ಕರಾವಳಿಯಲ್ಲಿ ಹುಟ್ಟಿ ಉತ್ತರದ ಮೇರುವನ್ನು ಸೇರಿ ಉತ್ತರದಾಯಿತ್ವವನ್ನು ಪಡೆದು ದಕ್ಷಿಣಕ್ಕೆ ಬಂದು ಪಶ್ಚಿಮ ಕರಾವಳಿ ಪ್ರದೇಶವನ್ನು ಆಡುಂಬೊಲವಾಗಿ ಮಾಡಿಕೊಂಡು ಅಲ್ಲಿನ ಅಗಸ್ತ್ಯ ಪ್ರಣೀತ ತಂತ್ರಶಾಸ್ತ್ರಗಳ ಅಧ್ಯಯನದೊಂದಿಗೆ ಹಲವು ರೀತಿಯ ಬಂಧುವರ್ಗವನ್ನು ಗಳಿಸಿದ್ದೇನೆ. ಆಶ್ರಿತರು, ಭಕ್ತರು, ಅಭಿಮಾನಿಗಳು, ನಿಂದಕರು, ದೂಷಿತರು, ತಟಸ್ಥರು, ಪಾಪಗ್ರಸ್ತರು, ಶಾಪಗ್ರಸ್ತರು, ಅಪರಾಧಿಗಳು, ನವನವಾದಾನಾ ಆಧೀಕ ಬಂಧುವರ್ಗವೆಲ್ಲವೂ ನನಗೆ ಸಮಾನ. ನನ್ನ ದೂಷಣೆಯಿಂದ ನನಗೆ ಹಸಿವೆ ಇಂಗುತ್ತದೆ. ಹೊಗಳಿಕೆಯಿಂದ ಜೀರ್ಣವಾಗುತ್ತದೆ. ನಿಂದನೆಯಿಂದ ನಿದ್ರೆ, ಅಭಿಮಾನಿಗಳ ಹಿತಕ್ಕಾಗಿ ಎಚ್ಚರ, ಪಾಪ, ಶಾಪಗ್ರಸ್ತರ ಉದ್ಧಾರವೇ ವೃತ್ತಿ, ಅಪರಾಧ ಪರಿವರ್ತನೆಯೇ ಬೋಧನೆಯ ಗುರಿಯಾಗಿ ವ್ಯಕ್ತರೂಪದ ದೇಹ ನಾನಲ್ಲ, ನನ್ನದಲ್ಲ, ಆತ್ಮವೇ ನಾನೆಂದು ಅರಿತು ಬದುಕು ನಡೆಸುತ್ತಿರುವ ಒಬ್ಬ ಬಡವ. ಇನ್ನೊಬ್ಬರಿಂದ ಬರುವ ನಿಂದಾ ದೂಷಣೆಯೇ ನನ್ನ  ಯಾಗದ ಹವಿರ್ದ್ರವ್ಯಗಳು, ಅಜ್ಞಾನಿಗಳ ಅಜ್ಞಾನವಾಕ್ಯವೇ ಇಂಧನ, ನಾ ತಿಳಿದ ವೇದಮಂತ್ರಗಳೇ ಬಲ, ಶಕ್ತಿ, ತೇಜ, ಓಜ, ಪ್ರಾಣ, ಜೀವ, ಕಲಶ, ಅರುಣ, ಧೀ, ದ್ರಿಯಃ, ಶ್ರೇಯ, ಪ್ರೇಯಗಳು. ಅವುಗಳನ್ನು ಬೀಜರೂಪದಲ್ಲಿ ಬಿತ್ತಿ ಬೆಳೆ ತೆಗೆಯುವ ಒಬ್ಬ ವೇದದ ದೃಷ್ಟಿಯಲ್ಲಿ ಮಾಪನದಲ್ಲಿ ಅಜ್ಞಾನಿ ರೈತ. ಹೀಗೆಂದು ನನ್ನ ಬಂಧುಗಳು ಅವರ ಮನಸ್ಸಿಗೆ ಗ್ಲಾನಿ ಉಂಟು ಮಾಡಿಕೊಂಡು ತೊಳಲಾಡುತ್ತಾ ನಾನಾ ಕಷ್ಟ ಕೋಟಲೆಗಳಿಗೆ ಸಿಕ್ಕಿ ನರಳುತ್ತಾರೆ. ಅವರಿಗೆ ಸದ್ಬೋಧೆ ಮಾಡುವ ನೆಪದಲ್ಲಿ ಏಕಸಂಧಿ ಸೂತ್ರದಂತೆ ತಿರುಕ ಸಂಹಿತ ಬರೆದಿದ್ದೇನೆ. ಓದಿ ಅರ್ಥಮಾಡಿಕೊಳ್ಳಿರೆಂದು ಹಾರೈಸುತ್ತೇನೆ. ಮೊದಲಾಗಿ ಹೇಳುತ್ತೇನೆ ನನಗೆ ಯಾರ ಮೇಲೂ ದ್ವೇಷವಿಲ್ಲ, ಅಸೂಯೆಯಿಲ್ಲ. ನೀವು ನೀವಾಗಿ ಬೆಳೆಯಿರಿ ಎಂಬುದೇ ನನ್ನ ಹಾರೈಕೆ. ಆದರೆ ಆದಷ್ಟು ಸನ್ಮಾರ್ಗದಲ್ಲಿ ಬೆಳೆಯಿರಿ. ದುರಾಸೆಗೆ ಬಲಿಬಿದ್ದು ನಾಶವಾಗದಿರಿ ಎಂದು ಹೇಳುತ್ತೇನೆ. ಆತ್ಮೋನ್ನತಿಯ ಗುರಿಯಿಡಿ. ಭೋಗಜೀವನದ ಗುರಿಯಿಂದ ಬೆಳೆಯಬೇಡಿರೆನ್ನುತ್ತೇನೆ. ನೀವು ನೀವಾಗಿ ಬೆಳೆಯುವವರೆಗೆ ನನ್ನಿಂದಾದ ಹಣ ಸಹಾಯ, ಮಾರ್ಗದರ್ಶನ ಸದಾ ಇದ್ದೇ ಇದೆ. ಇನ್ನು ನಿಮಗೆ ಆ ಸಾಮರ್ಥ್ಯ ಇಲ್ಲವೇ ಸುಮ್ಮನಿರಿ. ನಿಮ್ಮ ಅಭಿವೃದ್ಧಿಯಲ್ಲಿ ನನ್ನ ಪಾತ್ರ ವ್ಯವಹರಿಸುತ್ತದೆ. ಆಗ ನಿಮ್ಮ ಅಭಿವೃದ್ಧಿ ಖಂಡಿತ. ಅದು ಏನು, ಹೇಗೆ ಹೇಳಲಾರೆ. ಅದನ್ನು ಬಿಟ್ಟು ನನ್ನ ಚರ್ಯೆಯನ್ನೊ, ವರ್ತನೆಯನ್ನೊ ವಿಮರ್ಶಿಸ ಹೋಗಿ ವೃಥಾ ಕಾಲಹರಣ ಮಾಡಬೇಡಿರಿ. ಇದು ನಾನು ಗುರುತಿಸಿದ ನನ್ನ ೯ ರೀತಿಯ ಬಂಧುಗಳಿಗೂ ಒಂದೇ ಎಂದು ಈ ಮೂಲಕ ಘೋಷಿಸುತ್ತೇನೆ.

ನಿಮ್ಮ ನಿಮ್ಮ ಮನಃಕಷಾಯ, ದುರ್ಬುದ್ಧಿ, ದುರಾಸೆ, ದುರಾಗ್ರಹ, ಪ್ರಲೋಭನೆ, ಹೊದಕ, ಚಾಡಿ, ಚಾಟಕಾದಿ ಈ ಎಂಟು ದುರ್ಗುಣಗಳನ್ನು ಬಿಟ್ಟು ಬದುಕುವ ಮನುಷ್ಯ ಮಾತ್ರ ಶ್ರೇಷ್ಠನೂ, ಜ್ಯೇಷ್ಠ, ಗುಣವಂತನೂ, ಧನವಂತನೂ, ಕೀರ್ತಿಶಾಲಿಯೂ ಆಗುತ್ತಾನೆ ಎಂದು ಈ ಮೂಲಕ ತಿಳಿಸುತ್ತಾ ಈ ಲೇಖನ ಮುಗಿಸುತ್ತಿದ್ದೇನೆ.

ಲೋಕಾಃ ಸಮಸ್ತಾಃ ಸುಖಿನೋ ಭವಂತು

ಕೆ. ಎಸ್. ನಿತ್ಯಾನಂದರು
ವೇದ ವಿಜ್ಞಾನ ಮಂದಿರ
ಚಿಕ್ಕಮಗಳೂರು