Tuesday, 24 November 2020

ವೇದಪಾಠದಲ್ಲಿ ಗುರುವಿನ ಮಹತ್ವ

 

ಧ್ವನಿಮುದ್ರಿಕೆಗಳು, ದೃಶ್ಯಮುದ್ರಿಕೆಗಳು, ಪುಸ್ತಕಗಳು ವೇದ ಕಲಿಸಬಲ್ಲವೇ?

ವೇದವು ನಾದ, ಅದರ ಪಾಠ ವಿಧಾನವು ಗುರು-ಶಿಷ್ಯ ಪರಂಪರೆಯ ಬದ್ಧ ಚೌಕಟ್ಟಿನಲ್ಲಿ ಪ್ರವಹಿಸುತ್ತಾ ಬಂದಿದೆ. ಗುರುವು ಹೇಳುವುದು, ಶಿಷ್ಯನು ಕೇಳಿಸಿಕೊಳ್ಳುವುದು, ಪುನಃ ೩ ಸಲ ಉಚ್ಚರಿಸುವುದು, ತನ್ಮುಖೇನ ಆ ನಾದವು ಮಿದುಳು ಕೋಶಗಳಲ್ಲಿ ದಾಖಲಾಗುವುದು. ಇದಕ್ಕೆಲ್ಲಾ ಗರಿಷ್ಠ ೮ನೇ ವಯಸ್ಸಿನಿಂದ ಉಪನಯನ ಸಂಸ್ಕಾರದ ತರುವಾಯ ನಿರಂತರ ಗುರುಕುಲದಲ್ಲಿ ಸೇವೆಯಿಂದ ಕಲಿಯುವ ವಿಧಾನ ಅನೂಚನವಾದದ್ದು. ಆದರೆ ಗುರುಕುಲದ ಕುರುಹೂ ಇಂದು ಜನಮಾನಸದಿಂದ ವಿದೂರವಾಗಿದೆ. ಅಲ್ಲಿ ನಿಷ್ಕಾಮರಾಗಿ, ಅಂದರೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕಲಿಯುವ ವಿಧಾನವಿತ್ತು, ಹಾಗಾಗಿ ಬೇಡದಿದ್ದರೂ ಫಲಿಸುತ್ತಿತ್ತು. ಆದರೆ ಇಂದು ನಿಂತದ್ದಕ್ಕೆ, ಕೂತದಕ್ಕೆ ಫಲವೇನು ಎಂದು ಕೇಳುವ ವರ್ಗಕ್ಕೆ ಎಂದು ಉತ್ತರಿಸುವುದು? ವೇದ ಕಲಿಯಲು ಬೇಕಾದ್ದು ಶ್ರದ್ಧೆ ಮತ್ತು ಭಕ್ತಿ ಎಂಬ ಎರಡು ಮುಖ್ಯ ಅರ್ಹತೆಗಳು. ಇವೆರಡು ಗುರು ಸಮ್ಮುಖದಲ್ಲಿ ಉದಯಿಸುತ್ತವೆಯೇ ಹೊರತು ಧ್ವನಿಮುದ್ರಿಕೆಯಲ್ಲೋ ಪುಸ್ತಕದಲ್ಲೋ ಅಲ್ಲ. ಪುಸ್ತಕದಲ್ಲಿರುವುದು ವೇದವಲ್ಲ, ವೇದದ ಶಬ್ದ ಸಮೂಹ, ಬರೆದದ್ದು ನಿರ್ಜೀವ, ಗುರುಮುಖೋದ್ಘಾತವು ಸಜೀವ! ಗುರುವಿನ ಮಹತ್ವ ಅರಿತವರಿಗೆ ಮಾತ್ರ ವೇದವು ವೇದ್ಯವಾಗಲು ಸಾಧ್ಯ. ಈ ಕಾಲಘಟ್ಟದಲ್ಲಿ ಹಲವರು ಮೂಲಸಂಸ್ಕಾರಗಳಿಗೆ ಮಹತ್ವ ನೀಡುವುದಿಲ್ಲ ಮತ್ತು ವಯೋಮಾನ ರೀತ್ಯಾ ವೇದ ಕಲಿಕೆಗೆ ಇಳಿಯುವುದಿಲ್ಲ. ಮಿದುಳು ಕೋಶಗಳು ಬಲಿತ ನಂತರ ಅದರಲ್ಲಿ ವಿಶೇಷ ನಾದವನ್ನು ದಾಖಲಿಸುವುದು ಹರಸಾಹಸ. ಪ್ರೌಢರಾದಾಗ ಕಾಮನಾಪೂರ್ತಿಗಾಗಿ ಅಥವಾ ವೃದ್ಧರಾದಾಗ ಬೇರೇನೂ ಕೆಲಸವಿಲ್ಲ ಹೀಗಾದರೂ ಸಮಯ ಕಳೆಯೋಣವೆಂದೋ ಕೆಲವರು ಶೀಘ್ರಗಾಮಿಗಳಾಗಿ ವೇದ ಕಲಿಯಲು ಇಳಿಯುತ್ತಾರೆ. ಆರಂಭ ಶೂರತ್ವ ಮೆರೆದು ಕೆಲವೇ ಸಮಯದಲ್ಲಿ ಅದನ್ನು ಬಿಟ್ಟು ಇನ್ನೊಂದಕ್ಕೆ ಜಿಗಿಯುತ್ತಾರೆ. ವೇದಕಲಿಕೆಯು ಇವರಿಗೆ ಕ್ಷಿಪ್ರಪ್ರಸಾದಾನುಗ್ರಾಹಿಯಾಗಬೇಕು, ಇಲ್ಲದಿದ್ದರೆ ವೇದ ಬೇಡ. ಅದಕ್ಕೆ ವೇದ ದುಃಖಿಸುವುದಿಲ್ಲ, ಯಾರಾದರೂ ಬಂದು ತನ್ನನ್ನು ಕಲಿಯಿರಿ ಎಂದು ವೇದವು ಅಂಗಲಾಚುವುದೂ ಇಲ್ಲ. ಆದರೆ ನಿಷ್ಕಾಮರಾಗಿದ್ದು ಗುರುಮುಖದಿಂದ ವೇದ ಕಲಿಯುತ್ತಿದ್ದರೆ "ವೇದ ಪಾರಾಯಣದ ಫಲ"ವಾದರೂ ಕೇಳದೆಯೇ ಬರುತ್ತದೆ. ಶ್ರದ್ಧಾ ಭಕ್ತಿ ಇಟ್ಟು ಇಚ್ಛಾಶೂನ್ಯರಾಗಿ ವೇದ ಪಾರಾಯಣ ಮಾಡುತ್ತಿದ್ದರೆ ನೀವು ಕೇಳದೆಯೇ ವೇದವು ನಿಮಗೆ ಧರ್ಮಬದ್ಧವೂ, ಪ್ರಾಪ್ತಿಯೂ, ಸಮಾಜಕ್ಕೆ ಔಷಧವೂ ಆದದ್ದನ್ನು ಕಾಲದೇಶ ನಿಯಮವರಿತು ಪೂರೈಸುತ್ತದೆ.

 

ವೇದ ಕಲಿಯಲು ಗುರು ಏಕೆ ಬೇಕು?

 

ಜೀವವಿರುವ, ಜೀವತರಂಗ ಹೊರಡಿಸುವ, ಹೊರಡಿಸಿ ಶಿಷ್ಯನ ಮಿದುಳನ್ನು ಪ್ರೇಷಿಸುವ, ಪ್ರೇಷಿಸಿ ಔನ್ನತ್ಯಕ್ಕೆ ಕರೆದೊಯ್ಯುವುದು ಗುರುವೇ ಹೊರತು ಪುಸ್ತಕಗಳೋ, ಧ್ವನಿಮುದ್ರಿಕೆಗಳೋ, ದೃಶ್ಯಮಾಧ್ಯಮಗಳೋ ಅಲ್ಲ! ಗುರುವಿನ ಸಾಮೀಪ್ಯ, ಸಹವಾಸ, ಸತ್ಸಂಗ, ಸಹಪಥಗಮನ. ಗುರುವಿನ ಉಪದೇಶವಿಲ್ಲದೆ ಬರೇ ಯಾವುದೋ ಪುಸ್ತಕದಲ್ಲಿ ಬರೆದದ್ದನ್ನು ಓದಿಕೊಂಡರೆ ವೇದ ಪಾಠ ಆಗುವುದಿಲ್ಲ ಎಂಬುದು ಸನಾತನ ಸಂಪ್ರದಾಯದ ಅಂಬೋಣ. ಪುಸ್ತಕಗಳು ಹೆಚ್ಚಾಗಿ ಬಳಕೆಯಲ್ಲಿಲ್ಲದ ಕಾಲದಲ್ಲಿ ವೇದವು ಮಿದುಳಿಗೆ ದಾಖಲಾಗುವ ನಾದವಾಗಿತ್ತು. ಈಗ ಪುಸ್ತಕದಲ್ಲಿ ಮಾತ್ರ ಉಳಿಯುವ, ಮಿದುಳಿನಲ್ಲಿ ಉಳಿಯದ, ನಿರ್ಜೀವ ಪದಪುಂಜವೋ ಎಂಬಂತಾಗಿದೆ. ಪುಸ್ತಕದಲ್ಲಿರುವ ತಪ್ಪುಗಳನ್ನು ಗುರುಗಳು ಮಾತ್ರ ತಿದ್ದಿ ಸರಿದಾರಿ ತೋರಿಸಬಲ್ಲರು. ಗುರು ಮುಖೇನ ವೇದಪಾಠವಾದಾಗ ಮಾತ್ರ ಅದು ಉಪದೇಶ ಎಂದಾಗುತ್ತದೆ. ಆಗ ಮಾತ್ರ ಅದನ್ನು ಪೂಜೆ, ಹೋಮ, ಶಾಂತಿ, ಚಿಕಿತ್ಸೆ ಇತ್ಯಾದಿಗಳಲ್ಲಿ ಬಳಸಲು ಅರ್ಹತೆ ಪ್ರಾಪ್ತವಾಗುತ್ತದೆ. ಆದರೆ ಪ್ರಯೋಗಿಸುವ ಅನುಮತಿಯಲ್ಲ! ಅದಕ್ಕೆ ಸಪ್ತರ್ಷಿಗಳು ಮತ್ತು ಪರಿವ್ರಾಜಕರಿದ್ದಾರೆ. ಅವರು ಪರವಾನಗೆ ನೀಡದೆ ಬಳಕೆಯಾಗುವುದೂ ಇಲ್ಲ. ಕೆಲವರು ಕೆಲ ಗುರುಗಳ ಮೇಲೆ ಒತ್ತಡ ತರುತ್ತಾರೆ. ಒತ್ತಡಕ್ಕೆ ಮಣಿದಂತೆ ಬಾಹ್ಯದಲ್ಲಿ ನಾಟಕವಾಡಬೇಕಾಗುತ್ತದೆಯೇ ಹೊರತು ಅನರ್ಹರಿಗೆ, ಅಪಾತ್ರರಿಗೆ ಯಾವುದೇ ಪ್ರಯೋಗದ ಪರವಾನಗೆಯನ್ನು ನೀಡುವುದಿಲ್ಲ. ವಿದೇಶೀ ಬಂಡುಕೋರರು ಬಂದಾಗ ನಡೆದದ್ದೂ ಇದೇ! ಅವರಲ್ಲಿ ಅನರ್ಹರಾರಿಗೂ ವೇದ ಕಲಿಸಲಿಲ್ಲ, ಪ್ರಯೋಗವಂತೂ ಅಂತಹವರಾರಿಗೂ ಹೇಳಿ ಕೊಡಲೇ ಇಲ್ಲ. ವೇದ ತನ್ನನ್ನು ಮತ್ತು ಪ್ರಪಂಚವನ್ನು ರಕ್ಷಣೆ ಮಾಡಿಕೊಂಡಿರುತ್ತದೆ. ಪರವಾನಗೆ ಇಲ್ಲದೆ ಪ್ರಯೋಗಿಸಿದರೆ ವಿಪ್ಲವಕ್ಕೆ ಕಾರಣವಾಗುವುದರಿಂದ ವಿದೇಶಕ್ಕೆ ಗಡಿಪಾರು, ಮರಣದಂಡನೆ, ಪ್ರೇತ/ಬೇತಾಳ/ಬ್ರಹ್ಮರಾಕ್ಷಸವಾಗಿ ಅಲೆಯುವುದು, ಇತ್ಯಾದಿ ವೈಧಿಕ ನ್ಯಾಯಶಾಸ್ತ್ರ ರೀತ್ಯಾ ಧರ್ಮದ ದಂಡನೆಗಳಿವೆ. ಗುರುವಿಲ್ಲದೆ ಬರೇ ಪುಸ್ತಕದಿಂದಲೋ, ಧ್ವನಿಮುದ್ರಿಕೆಯಿಂದಲೋ ಮಾತ್ರ ವೇದ ಕಲಿತರೆ ಮಣಮಣ ಹೇಳಲಿಕ್ಕೆ ತೊಂದರೆಯಿಲ್ಲ, ಆದರೆ ಅದು ವೇದೋಪದೇಶವನ್ನು ಮತ್ತು ಪ್ರಯೋಗಾರ್ಹತೆಯನ್ನು ಕೊಡುವುದೇ ಇಲ್ಲ! ಶಿಷ್ಯರು ತಾವೇ ಓದುವಾಗ ಸರಿ ಎಂದುಕೊಂಡೇ ಓದುತ್ತಾರೆ. ನಮ್ಮ ಬೆನ್ನು ನಮಗೆ ಕಾಣುವುದಿಲ್ಲ ಎಂಬುದನ್ನು ನೆನಪಿಡಬೇಕು.

 

ಸಸ್ವರ ವೇದಮಂತ್ರ ಏಕೆ?

 

ಋಗ್ವೇದದ ವಿಚಾರಕ್ಕೆ ಬರುವುದಾದರೆ ಉದಾತ್ತ, ಅನುದಾತ್ತ, ಸ್ವರಿತ ಎಂಬ ಮೂರು ಸ್ವರ ಪ್ರಧಾನವಾಗಿ ಕಂಡುಬರುತ್ತದೆ. ಇವುಗಳಿಂದಲೇ ಅರ್ಥಸ್ಫುರಣೆ ಮತ್ತು ಪ್ರಯೋಗ ನಿರ್ಣಯ. ಇಲ್ಲಿಯವರೆಗೆ ಲಭ್ಯ ಪ್ರಕಟಿತ ಪುಸ್ತಕಗಳಲ್ಲಿಯಾಗಲೀ ವೇದವಿದ್ವಾಂಸರಲ್ಲಾಗಲೀ ಸಸ್ವರ ವೇದಾರ್ಥದ ವಿಧಾನವೇ ಉಳಿದಿಲ್ಲ. ದೇಶಾದ್ಯಂತ ಹಲವು ತೋರ್ಪಡಿಕೆಯ ವಿದ್ವಾಂಸರಿಗೆ ಇದನ್ನು ಕೇಳಿದಾಗ ಉತ್ತರ ಸಿಕ್ಕಿಲ್ಲ. ಕೇವಲ ೧೨ ಮಂದಿ ಬ್ರಾಹ್ಮಿ ಭಾಷೆ ತಿಳಿದ ಸಾಧಕರಲ್ಲಿ ಉಳಿದಿದೆ ಎಂದು ನಮ್ಮ ಗುರುಗಳ ವಾಕ್ಯ.

 

"ಪ್ರೀತಿ, ಪ್ರೇಮ, ವಿಶ್ವಾಸ, ದಯೆ, ಕ್ಷಮೆ, ದಾನ, ಔದಾರ್ಯ, ಸಹಿಷ್ಣುತೆ, ಪಾಪ-ಪುಣ್ಯಗಳ ಪರಿಚಯವಿಲ್ಲದ ವಿದ್ಯೆ ವಿಧ್ಯೆಯೇ ಅಲ್ಲ. ಅದನ್ನು ಅರಿಯದ ಜೀವನವು ಜೀವನವೇ ಅಲ್ಲ. ಬದುಕು ಬದುಕೇ ಅಲ್ಲ. ಅದು ಪುಸ್ತಕ/ಧ್ವನಿಮುದ್ರಿಕೆ/ದೃಶ್ಯಮಾಧ್ಯಮದಿಂದ ಬರುವುದೂ ಇಲ್ಲ. ವೇದ ಹೇಳಿದ ಇಂತಹಾ ಮಾನವೀಯ ಬದುಕಿನಲ್ಲಿ ಮಾತ್ರಾ ಸುಖವಿದೆ, ಆನಂದವಿದೆ, ಜೀವನದರಿವಿದೆ. ಅರಿವು ಆತ್ಮಜ್ಞಾನವನ್ನು ಹುಟ್ಟಿಸಬಲ್ಲದು. ಆತ್ಮಜ್ಞಾನವೇ ಬ್ರಹ್ಮದರಿವು, ಆ ಬ್ರಹ್ಮವೇ ಸತ್ಯ, ಈ ಲೋಕವೆಲ್ಲಾ ಮಿಥ್ಯ, ನಶ್ವರ". "ಇದು ವೇದಮಾರ್ಗ".

 

ವೇದ ಪಾಠ ವಿಧಾನ ಹೇಗೆ? 

ವೇದವು ಎಲ್ಲಾ ವಿಚಾರಗಳ ಸಂಗ್ರಹವಾಗಿದ್ದು ೧೦ ಮುಖದಲ್ಲಿ ಬ್ರಾಹ್ಮಿ ಭಾಷೆಯಲ್ಲಿ ಗ್ರಂಥಸ್ಥವಾಗಿದೆ:-

೧. ಮಂಥನ

೨. ಪ್ರಯೋಗ

೩. ಚಿಕಿತ್ಸಾ

೪. ಜ್ಞಾನ

೫. ಪರಿಣಾಮ

೬. ಪ್ರಾಗಾಥ

೭. ಪರಿಣಯ

೮. ವಿಶೇಷಣ

೯. ಪರಿಚಯ

೧೦. ಪೂರ್ಣತೆ

ಋಗ್ವೇದದ ಪ್ರತಿ ಮಂತ್ರಕ್ಕೂ "ಸ್ಮೃತಿ, ಕಲ್ಪ, ಶಾಸ್ತ್ರ, ಧರ್ಮ, ಜ್ಞಾನ, ಛಂದೋ, ದೇವತಾ, ಋಷಿ" ಎಂಬ ಅಷ್ಟಾಂಗಗಳಿವೆ. ಇವನ್ನೆಲ್ಲಾ ಮೌಖಿಕವಾಗಿ ಪಾಠ ಮಾಡಿ ಪೂರೈಸುವುದಿಲ್ಲ. ಆದರೆ ದಶವಿಧ ವೇದಪಾಠ ವಿಧಾನದಲ್ಲಿ ಸಹಜವಾಗಿಯೇ ಅಡಕವಾಗಿರುತ್ತದೆ. 

ವೇದವು ವಿಶೇಷ ಸಂಶೋಧನಾ ಗ್ರಂಥ. ಸಮಗ್ರ ಪ್ರಪಂಚ ಸೃಷ್ಟಿ, ಸ್ಥಿತಿ, ಲಯ ವಿಚಾರ, ಜೀವೋತ್ಪತ್ತಿ, ವೃದ್ಧಿ, ಪೂರಕತೆಯನ್ನು ಒಳಗೊಂಡಿರುತ್ತದೆ. ವೇದವನ್ನು ಆಧುನಿಕ ಮೆಕಾಲೆ ಶಿಕ್ಷಣ ನೀತಿಯಲ್ಲಿ ಕಲಿಯಲೋ, ಅರ್ಥೈಸಲೋ ಹೋಗಬೇಡಿ. ವೇದವನ್ನು ಪುರಾತನ ಭಾರತೀಯ ಪರಂಪರೆಯ "ಅಧ್ಯಯನ, ಜಪ, ಅನುಷ್ಠಾನ, ಉಪಾಸನಾ, ಪ್ರಯೋಗ, ಉಪಸಂಹಾರ" ಚೌಕಟ್ಟಿನಲ್ಲಿ ಮೇಲ್ತಿಳಿಸಿದ ದಶವಿಧ ಪಾಠಗಳ ಮುಖೇನ ಕನಿಷ್ಠ ೧೨ ವರ್ಷಗಳ ಕಾಲ ಕಲಿತರೆ ಮಾತ್ರ ಉಪಯುಕ್ತ. ನೀವು ಯಾವುದೋ ಮಾರ್ಗದಲ್ಲಿ ಬಹುದೂರ ಸಾಗಿದ್ದು ಕಲಿಯಲಾರಂಭಿಸಿದೊಡನೆಯೇ ಒಮ್ಮೆಗೊಮ್ಮೆಗೇ ವೇದಸಿದ್ಧಿಸಬೇಕೆಂದರೆ ಸಾಧ್ಯವಿಲ್ಲ. ಹಲವು ಕಾಲದ ಪರಿಶ್ರಮದಿಂದ, ಹಲವು ಜನ್ಮಗಳಲ್ಲಿನ ಪುಣ್ಯಬಲದಿಂದ ಯಾವುದೋ ಒಂದು ವೇದ ಮಂತ್ರವಾದರೂ ವೇದ್ಯವಾದರೆ ಅದಕ್ಕಿಂತ ಮಿಗಿಲಾದ್ದು ಬೇರೇನಿಲ್ಲ. ಅದಕ್ಕಾಗಿಯೇ ಒಂದು ಮಂತ್ರವನ್ನಾದರೂ ಸಾಧಿಸಿಕೊಳ್ಳಿರೆಂದು ಗಾಯತ್ರೀ ಛಂದಸ್ಸಿನ ಸವಿತೃ ದೇವತಾಕ ಮಂತ್ರೋಪದೇಶವನ್ನು ಉಪನಯನ ಸಂಸ್ಕಾರದಲ್ಲಿ ತಂದೆಯಿಂದಲೇ ಕೊಡಿಸುವ ವ್ಯವಸ್ಥೆ ಇದೆ. ಅದುವೇ ಉಳಿದೆಲ್ಲಾ ವೇದಭಾಗಕ್ಕೂ ಕೀಲಿಕೈ. ಉಳಿದ ವೇದಭಾಗವನ್ನು ಪ್ರಾಚ್ಯವಿಧ್ಯಾ ಪಾಠ ವಿಧಾನದಲ್ಲಿಯೇ ಕಲಿಯಬೇಕಾಗುತ್ತದೆ. ಅದು ಗುರುಮುಖೇನ ಸಾಧ್ಯವೇ ಹೊರತು ಗುರುವನ್ನು ತಿರಸ್ಕರಿಸಿ ಕೇವಲ ಪುಸ್ತಕವೋ, ಧ್ವನಿಮುದ್ರಿಕೆಯೋ, ದೃಶ್ಯಮಾಧ್ಯಮವೋ, ಇನ್ನೇನೋ ವಿಧಾನಗಳಿಂದ ಫಲಿಸುವುದಿಲ್ಲ. 

ವೇದವು ಹೀಗೇ ಮಾಡಿ ಎನ್ನುವುದಿಲ್ಲ, "ಇದು ಹೀಗಿದೆ, ಇದು ಹೀಗಿದ್ದರೆ ಇದರ ಉಪಯೋಗವು ಹೇಗೆ? ಇದು ಹೀಗಿದ್ದರೆ, ಹೀಗಾಗುತ್ತದೆ, ಇತ್ಯಾದಿ" ಹೇಳುತ್ತಾ ಹೋಗುತ್ತದೆ. ಸರಿಯಾಗಿ ಕಲಿತು, ಸರಿಯಾಗಿ ಬಳಸಿದರೆ ಋಷಿಯಾಗಬಹುದು. ಸರಿಯಾಗಿ ಕಲಿಯದೆ ಎಡವಟ್ಟು ಮಾಡಿಕೊಂಡರೆ ಬ್ರಹ್ಮರಾಕ್ಷಸವಾಗಬಹುದು. ಆಯ್ಕೆ ನಿಮ್ಮದ್ದು. ಯಾರೂ ವೇದವನ್ನು ರಕ್ಷಿಸಲು ಹೋರಾಡಬೇಕಿಲ್ಲ. ಅದು ಕೋಟ್ಯಾಂತರ ವರ್ಷಗಳಿಂದ ಸಜೀವವಾಗಿ ಜಾಗೃತವಾಗಿಯೇ ಇದೆ. ಅದಕ್ಕೆ ಸ್ವತಂತ್ರ ಅಸ್ತಿತ್ವದ ಶಕ್ತಿ ಇದೆ. ಅದು ಸಮಾಜವನ್ನೂ ಕಾಯುತ್ತದೆ. ನಾವು ವೇದದ ಸಾರ್ವಕಾಲಿಕ, ಸಾರ್ವದೇಶಿಕ ಸೂಚನೆಯಂತೆ ಜೀವನ ರೂಪಿಸಿಕೊಂಡಲ್ಲಿ ಯಶಸ್ವಿಯಾಗುತ್ತೇವೆ. ನಾವೂ ವೇದದಂತೆ ನಿರಂತರತೆಯನ್ನು ಪಡೆಯಲು ಸಾಧ್ಯ. 

ಇಂತು ಸಜ್ಜನ ವಿಧೇಯ,

ಹೇಮಂತ್ ಕುಮಾರ್ ಜಿ.