Sunday, 21 March 2021

ಹಂಸೋಪನಿಷತ್ ಚಿಂತನ-ಮಂಥನ

ಶ್ರೀಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ, ಪಾವಂಜೆ ಇದರ ಶತಮಾನೋತ್ಸವದ ಪ್ರಯುಕ್ತ ದಿನಾಂಕ 08.10.2019 ರಿಂದ 30.04.2020ರ ವರೆಗೆ ನಮ್ಮ ಗುರುಗಳಾದ ಚಿಕ್ಕಮಗಳೂರಿನ ವೇದ ವಿಜ್ಞಾನ ಮಂದಿರದ ವೇದಕೃಷಿಕ ಶ್ರೀ ಕೆ.ಎಸ್.ನಿತ್ಯಾನಂದರ ಸಮಗ್ರ ಮಾರ್ಗದರ್ಶನದಲ್ಲಿ ಜನಮಾನಸದಲ್ಲಿ ಸುಜ್ಞಾನದ ಹೊಂಬೆಳಕನ್ನು ಪಸರಿಸುವ  "ಮಹಾವ್ರತ ದೀರ್ಘಸತ್ರ ಯಾಗ"ದ ಅಂಗವಾಗಿ ಪ್ರತಿನಿತ್ಯ ನಡೆದ ಚರ್ಚಾಗೋಷ್ಟಿಯಲ್ಲಿ "ಹಂಸೋಪನಿಷತ್" ಚಿಂತನೆ. ಈ ಉಪನಿಷತ್ತಿನ ಸಹಜ ಸಾಹಿತ್ಯಕ ಅರ್ಥವನ್ನು ಬದಿಗಿಟ್ಟು ಕೇವಲ ವಿಶೇಷ ವಿಚಾರಗಳನ್ನು ಮಾತ್ರ ಲೇಖಿಸಲಾಗಿದೆ.

 

ಯಾಗ ಮುಖದಲ್ಲೇ ಒಂದಿಷ್ಟು ಸಂದರ್ಭೋಚಿತ ವಿವರಣೆ ನೀಡಿರುತ್ತಾರೆ. ಅದಕ್ಕಿಂತ ವಿಸ್ತೃತವಾದ ಮತ್ತು ಅದಕ್ಕೆ ಅದರದ್ದೇ ಆದ ನಿಯಮಗಳು ಶಾಸ್ತ್ರಾಧಾರಿತವಾಗಿ ಯಾವ ರೀತಿ ಉಪಯೋಗಿಸಿ ವಿವರಿಸಬೇಕು ಎಂಬುದಿದೆ. ಇದು ಮಾನವನನ್ನು ಯೋಗಿಯನ್ನಾಗಿಸುವ ಸೂತ್ರಗಳನ್ನು ಹೇಳುವ ಉಪನಿಷತ್ತು. ಇಲ್ಲಿ ನಾವು ಮೊದಲು ತಿಳಿದುಕೊಳ್ಳಬೇಕಾದ್ದು -

 

ಶ್ರುತ್ಯೈಃ ಸಂಹಿತಾಃ | ಸಾಹಿತ್ಯೈಃ ಸಗ್ಂಹಿತಾಃ ||

 

ಇದು ಸ್ಪಷ್ಟವಾಗಬೇಕು. ಇಲ್ಲಿ "ಹಂಸ"ವಲ್ಲ, "ಹಗ್ಂಸಃ". ಯಜುರ್ವೇದದಲ್ಲಿ ಉಚ್ಛಾರ ಮಾಡುವಾಗ ಅದು ಗದ್ಯಭಾಗ ಹೆಚ್ಚಿರುವುದರಿಂದ ಅನುಸ್ವಾರವು ’ಗ್ಂ’ ಆಗುತ್ತದೆ. ನಮಗೆ ಪರಿಚಯವಿರುವ ಪಕ್ಷಿ ಹಂಸ. ಹಾಗಾಗಿ ಇಲ್ಲೂ ಹಂಸ ಹಂಸ ಎಂದು ಹೇಳಿಕೊಂಡು ಬರುತ್ತಿದ್ದೇವೆ. ಆದರೆ ಹಂಸಗಾಯತ್ರಿಯೂ ಯಜುರ್ವೇದದಲ್ಲಿ ಉಚ್ಛಾರ ಮಾಡುವಾಗ ಮೂರನೆಯ ಪಾದದಲ್ಲಿ ಹಗ್ಂಸಃ ಎಂದು ಹೇಳುವುದೇ ಪದ್ಧತಿ. ತಾತ್ಪೂರ್ತಿಕ ಆಧಾರಕ್ಕಾಗಿ ಹಂಸ ಪಕ್ಷಿಯ ಉಪಮೆಯನ್ನು ತೆಗೆದುಕೊಳ್ಳಬಹುದೇ ವಿನಃ ಅಲ್ಲಿ ಹಂಸ ಎಂಬ ಪಕ್ಷಿಯ ಪಾತ್ರವಿಲ್ಲ. ಸಂಪೂರ್ಣ ನಮ್ಮ ದೇಹದ ಪಾತ್ರವೇ ಅಲ್ಲಿರುತ್ತದೆ. ನೀವೇ ಹಂಸದಂತೆ ಪ್ರವರ್ತನೆಯನ್ನು ರೂಢಿಸಿಕೊಳ್ಳಬೇಕು. ತಿನ್ನುವ ಆಹಾರವೆಲ್ಲವೂ ನಮ್ಮ ಆಹಾರವಾಗಬಾರದು, ಅದರಲ್ಲಿನ ಸಾರ ಮಾತ್ರ ನಮ್ಮ ಆಹಾರವಾಗಬೇಕು. ಆ ಸಾರವನ್ನು ಗುರುತಿಸುವ ಶಕ್ತಿ ಆ ಹಂಸ ಪಕ್ಷಿಗಿದೆ. ಹಾಲಿಗೆ ನೀರು ಬೆರೆಸಿಕೊಟ್ಟರೆ ಹಾಲು ಮಾತ್ರ ಕುಡಿಯುವ ಶಕ್ತಿ ಇದೆ ಎಂಬ ವದಂತಿ ಇದೆ. ಹಾಗೇ ತಿನ್ನುವ ಅನ್ನದಲ್ಲೂ ಸಾರವನ್ನು ಮಾತ್ರ ಗ್ರಹಿಸುವ ಶಕ್ತಿಯನ್ನು ರೂಢಿಸಿಕೊಳ್ಳಬೇಕು ಎಂದು ಹೇಳುವುದೇ ಹಂಸ ಶಬ್ದಕ್ಕೆ ಸಮೀಪಸ್ಥವಾದಂತಹಾ ಅರ್ಥವಾಗುತ್ತದೆ.

 

ಇಲ್ಲಿ ಮುಖ್ಯವಾಗಿ ನಾವು ಯಾವುದನ್ನು ಸಂಧಿಸಬೇಕು ಎನ್ನುವುದನ್ನು ಮೊದಲಿಗೆ ಸ್ಪಷ್ಟಪಡಿಸಿರುತ್ತದೆ. ಹೆಚ್ಚಾಗಿ ಇದು ಮೂರನೆಯ ಹಂತಕ್ಕೆ ಏರಿದವರು ಮಾಡಬೇಕಾದಂತಹಾ ಯಾಗ ಭಾಗ. ಯಾವುದೋ ವಟುವೋ, ಗೃಹಸ್ಥನೋ ಇದರಲ್ಲಿ ತೊಡಗಿಕೊಳ್ಳುವುದು ಕಷ್ಟ. ಅವರಿಗೆ ಆಗ ಕೌಟುಂಬಿಕ ಸಮಸ್ಯೆಗಳು ಹಲವಾರು ಇರುತ್ತದೆ. ಅವರು ಗೃಹಸ್ಥಾಶ್ರಮದಿಂದ ನಿವೃತ್ತಿಯನ್ನು ಪಡೆಯುವ ಕಾಲ ಬಂದಾಗ, ವಾನಪ್ರಸ್ಥಾಶ್ರಮ ಸ್ವೀಕರಿಸುತ್ತಾನೆ. ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಎಂಬ ಮೂರು ಹಂತಗಳನ್ನು ಕ್ರಮಿಸಿದವನು ಆಯಾ ಆಶ್ರಮ ಸಂಬಂಧಿ ಚಕ್ರಗಳನ್ನು ಸಾಧಿಸಿಕೊಂಡಿರುತ್ತಾನೆ ಎಂದೇ ಅರ್ಥ.

 

ವಟುವು ಕುಂಡಲಿನಿಯನ್ನು ಉದ್ದೀಪನಗೊಳಿಸಿ, ಮೂಲಾಧಾರದಿಂದ ಸ್ವಾಧಿಷ್ಠಾನಕ್ಕೆ ತಂದಾಗಲೇ ಗೃಹಸ್ಥನಾಗಲಿಕ್ಕೆ ಅರ್ಹನು ಎಂದರ್ಥ. ಗೃಹಸ್ಥಾಶ್ರಮದಲ್ಲಿ ಮಣೀಪೂರವನ್ನು ಹೇಗೆ ಸಾಧಿಸುವುದು ಎಂಬುದೇ ಮುಖ್ಯ ಉದ್ದೇಶ. ಹಾಗಾಗಿ ವಾನಪ್ರಸ್ಥ ಎಂಬ ಮೂರನೇ ಹಂತದಲ್ಲಿ ನಿಂತು ಗೃಹಸ್ಥನಾದವನ್ನು ಮಣೀಪೂರವನ್ನು ಹೇಗೆ ಸೇರಬೇಕು ಎಂಬ ಹಂತದ ವಿಶ್ಲೇಷಣೆಯನ್ನು ಮಾಡಿಕೊಂಡು ಹೋಗುತ್ತದೆ. ಅದಕ್ಕೆ ಅದರದ್ದೇ ಆದಂತಹಾ ಪ್ರಾಣಾಯಾಮದ ವಿಧಾನವನ್ನೂ ಹೇಳುತ್ತದೆ. ಆರಂಭದಲ್ಲಿಯೇ:-

 

ಹಂಸಾಖ್ಯೋಪನಿಷತ್ಪ್ರೋಕ್ತನಾದಾಲಿರ್ಯತ್ರ ವಿಶ್ರಮೇತ್ |

ತದಾಧಾರಂ ನಿರಾಧಾರಂ ಬ್ರಹ್ಮಮಾತ್ರಮಹಂ ಮಹಃ ||

 

ನಾದ ರೂಪದಲ್ಲಿಯೇ ಇದನ್ನು ಉಪಾಸಿಸಬೇಕು ಎಂಬ ವಿಧಾನ ಹೇಳಿದೆ. ನಾದ ಯಾವುದು? ವೈಖರಿಯಲ್ಲಿ ಹೇಳುವ ನಾದಕ್ಕೆ ಇಲ್ಲಿ ಯಾವುದೇ ರೀತಿಯ ಮೌಲ್ಯವಿಲ್ಲ. ಉಸಿರಾಟದ ಮುಖೇನ ಕೇವಲ ಗಾಳಿಯ ಸಂಚಾರವನ್ನು ಉಂಟುಮಾಡುತ್ತಾ ೧೦ ರೀತಿಯ ನಾದಗಳನ್ನು ಹೊರಡಿಸುವುದಕ್ಕೆ ಸಾಧ್ಯವಾಗುತ್ತದೆ. ಆ ಹತ್ತರಲ್ಲಿ ಈ ಹಂಸೋಪನಿಷತ್ತು ಒಂಭತ್ತನ್ನು ಪರಿಗ್ರಹಿಸಿದೆ. ಅಂದರೆ ೯ ರೀತಿಯ ನಾದಗಳನ್ನು ಹೊರಡಿಸಿ ನೀವು ಯಶಸ್ಸನ್ನು ಸಾಧಿಸಬಹುದು. ಆದರೆ ಒಂಭತ್ತನೆಯದಾದಂತಹಾ "ಭೇರಿ" ನಾದವನ್ನು ಮಾತ್ರ ನೀವು ಸಾಧನೆ ಮಾಡಬೇಡಿ. ಅದರಿಂದ ದೇಹಕ್ಕೆ ಅಪಾಯವಿದೆ ಎನ್ನುತ್ತದೆ.

 

ನವಮಂ ಪರಿತ್ಯಜ್ಯ ದಶಮಮೇವಾಭ್ಯಸೇತ್

 

ಅಂದರೆ ಒಂಭತ್ತನೆಯದಾದ ಭೇರಿ ನಾದವನ್ನು ಉಸಿರಾಟದ ಮುಖೇನ ಹೊರಡಿಸಬೇಡಿ.ಇಲ್ಲದಿದ್ದರೆ ದೇಹಕ್ಕೆ ಆಪತ್ತಾಗುತ್ತದೆ. ಹಂತಹಂತವಾಗಿ ಸಾಧನೆ ಮಾಡುತ್ತಾ ವಾನಪ್ರಸ್ಥ ದಾಟಿ ಸಂನ್ಯಾಸವನ್ನು ಪಡೆದಾಗ್ಯೂ ಕೊನೆಯ ಹಂತ ಬಂದರೂ ಯಾವುದೋ ಬಂಧನಗಳ ಕಾರಣ ದೇಹ ತ್ಯಜಿಸಲಾಗದಿದ್ದರೆ, ಆಗ ಮಾತ್ರ ಈ ಭೇರಿ ನಾದದ ಮುಖೇನ ದೇಹವನ್ನು ತ್ಯಜಿಸಿ ಹೊರಹೋಗುವಂತಹಾ ವಿಧಾನವನ್ನು ಹೇಳುತ್ತದೆ.

 

ಇದನ್ನು ಬಿಟ್ಟು ಇನ್ನು ಉಳಿದ ಒಂಭತ್ತನ್ನು ಅಭ್ಯಾಸ ಮಾಡುತ್ತಾ ಬಂದಾಗ ನಿಮಗೆ ಮಣಿಪೂರವನ್ನು ಸಂಧಿಸಲಿಕ್ಕಾಗುತ್ತದೆ. ಅದಕ್ಕೆ ಆ ಉಸಿರಾಟದ ವಿಧಾನವನ್ನು ಯಾಗ ಕಾಲದಲ್ಲಿ ವಿವರಿಸಿರುತ್ತಾರೆ. ಅವೆಲ್ಲಾ ಸ್ವಲ್ಪ ಅಭ್ಯಾಸದಿಂದ, ಅಂದರೆ ಒಂದುಪಕ್ಷದ ಕಾಲವಾದರೂ ಅಭ್ಯಾಸ ಮಾಡಬೇಕು. ಚಂದ್ರನ ಪ್ರಥಮ ತಿಥಿಯಿಂದ ಆರಂಭಿಸಿ ಪೌರ್ಣಮಿಯವರೆಗೂ ಅಭ್ಯಾಸ ಮಾಡಬಹುದು. ಅಥವಾ ಪ್ರತಿಪದೆಯಿಂದ ಆರಂಭಿಸಿ ಅಮಾವಾಸ್ಯೆಯವರೆಗೂ ಸಾಧನೆ ಮಾಡಬಹುದು. ಆಗ ಈ ನಾದ ವ್ಯತ್ಯಾಸವನ್ನು ಹೊರಡಿಸುವ ಉಸಿರಾಟದ ಸಾಧನೆಯನ್ನು ೧೫ ದಿನಗಳಲ್ಲೇ ಸಾಧಿಸಿಕೊಳ್ಳಬಹುದು. ಆ ರೀತಿ ನಾದವನ್ನು ಹೊರಡಿಸುವ ವಿಧಾನದಿಂದ ನೀವು ಮಣಿಪೂರವನ್ನು ಸಂಧಿಸಬೇಕು ಎಂದು ಹೇಳುತ್ತಾರೆ. ಅದರಿಂದ ಆಗತಕ್ಕಂತಹಾ ಪರಿಣಾಮಗಳ ಬಗ್ಗೆ ಮೊದಲಿಗೇ ಎಚ್ಚರಿಕೆ ನೀಡಿರುತ್ತಾರೆ.

 

ಪ್ರಥಮೇ ಚಿಂಚಿಣೀಗಾತ್ರಂ

ದ್ವಿತೀಯೇ ಗಾತ್ರಭಂಜನಂ |

ತೃತೀಯೇ ಖೇದನಂ ಯಾತಿ

ಚತುರ್ಥೇ ಕಂಪತೇ ಶಿರಃ ||

 

ಪಂಚಮೇ ಸ್ರವತೇ ತಾಲು

ಷಷ್ಠೇಽಮೃತನಿಷೇವಣಂ |

ಸಪ್ತಮೇ ಗೂಢವಿಜ್ಞಾನಂ

ಪರಾ ವಾಚಾ ತಥಾಷ್ಟಮೇ ||

 

ಅದೃಶ್ಯಂ ನವಮೇ ದೇಹಂ

ದಿವ್ಯಂ ಚಕ್ಷುಸ್ತಥಾಮಲಂ |

ದಶಮೇ ಪರಮಂ ಬ್ರಹ್ಮ |

ಭವೇದ್ಬ್ರಹ್ಮಾತ್ಮಸಂನಿಧೌ ||

 

ಪ್ರತಿಪತ್ತಿನ ಚಂದ್ರನ ಕಲೆಯನ್ನು ಆಧರಿಸಿ ಉಸಿರಾಟದ ವಿಶೇಷ ಕ್ರಿಯೆಯನ್ನು ಮಾಡಲು ಆರಂಭಿಸಿದರೆ ಅದು ನಿಮಗೆ ಹೆಚ್ಚಂದರೆ ಸಪ್ತಮಿಯನ್ನು ತಲುಪುವ ಹೊತ್ತಿಗೆ ನಿಮ್ಮ ಸ್ವಾಧೀನಕ್ಕೆ ಸಿಗುತ್ತದೆ. ಅಷ್ಟರೊಳಗೆ ನಿಮ್ಮ ವಾನಪ್ರಸ್ಥಕ್ಕಿಂತ ಹಿಂದಿನ ಜೀವನದ ಎಲ್ಲಾ ನೆನಪುಗಳು ಮರುಕಳಿಸುತ್ತಾ ಬರುತ್ತವೆ. ಆ ಎಲ್ಲಾ ಮಾನಸಿಕ ಕಷ್ಮಲಗಳನ್ನು ತೊಳೆದುಕೊಳ್ಳುವುದಕ್ಕೆ ಸುಲಭವಾಗಿ ಸಾಧ್ಯವಾಗುತ್ತದೆ. ಹಾಗೆ ಪ್ರತಿಯೊಂದು ಹಂತದಲ್ಲೂ ಬೇರೆ ಬೇರೆ ಕ್ರಿಯೆಗಳು ನಡೆಯುತ್ತದೆ. ಒಂಭತ್ತನೆಯ ಹಂತದಲ್ಲಿ ದೇಹವನ್ನು ಬಿಟ್ಟು ಹೊರನಿಲ್ಲಲು ಸಾಧ್ಯ. ಪುನಃ ಹಿಂತಿರುಗಿ ದೇಹಕ್ಕೆ ಬರಲೂ ಸಾಧ್ಯ. ಅದಕ್ಕೆ ಭೇರಿ ನಾದದ ಸಾಧನೆ ಬೇಕು. ಆದರೆ ದೇಹ ಬಿಟ್ಟು ಹೊರ ನಿಂತು ಪುನಃ ದೇಹಕ್ಕೆ ಹಿಂತಿರುಗಬೇಕಾದರೆ ಅದಕ್ಕೆ ಮತ್ತಷ್ಟು ತಂತ್ರದ ಸಾಧನೆಗಳು ಬೇಕಾಗುತ್ತವೆ. ಅವುಗಳನ್ನು ಸಾಧಿಸಿಕೊಳ್ಳದಿದ್ದರೆ ದೇಹ ಬಿಟ್ಟು ಹೋದವನಿಗೆ ಪುನಃ ದೇಹಕ್ಕೆ ವಾಪಾಸ್ ಬಂದು ಸೇರಿಕೊಳ್ಳಲು ಆಗದೇ ಇರಬಹುದು. ಅಂತಹಾ ಆಪತ್ತಿಗೆ ಒಳಗಾಗಬೇಡಿ ಎಂದೇ ಭೇರಿ ತಾಡನದ ನಾದವನ್ನು ಉಸಿರಾಟದಿಂದ ಹೊರಡಿಸಬೇಡಿ, ಬೇರೆಲ್ಲಾ ನಾದಗಳನ್ನು ಹೊರಡಿಸಿ ತನ್ಮುಖೇನ ಮಣಿಪೂರವನ್ನು ಸಂಧಿಸಲು ಸಾಧ್ಯ ಎಂದು ಹೇಳಿತು. ಅಲ್ಲಿಂದ ಮುಂದಿನ ಯಾತ್ರೆಯನ್ನು ಮುಂದಿನ ಉಪನಿಷತ್ತುಗಳು ಹೇಳುತ್ತವೆ. ಇದೊಂದು ವಿಶೇಷವಾದ ಯೋಗಶಾಸ್ತ್ರ. ಬಹಳ ಸರಳವಾಗಿ, ಸುಲಭವಾಗಿ ಹೇಗೆ ಸಾಧಿಸಿಕೊಳ್ಳಬಹುದು ಎಂದು ಹೇಳುತ್ತದೆ.

 

ಪ್ರಶ್ನೋತ್ತರಗಳು:-


ಪ್ರಶ್ನೆ:- ಹಂಸೋಪನಿಷತ್ತಿನ ಕರ್ತೃ ಯಾರು?

ಒಬ್ಬ ಯೋಗಿ ಎಂದಿದೆ. ಯೋಗಿಶ್ವರನೆಂದರೆ ಶಿವ. ಶಿವನು ಪಾರ್ವತಿಗೆ ಹೇಳಿದ ಎಂಬುದನ್ನು ತೆಗೆದುಕೊಂಡರೆ ಸಾಕು. ಇನ್ನು ಈ ನಾದಭಾಗವನ್ನು ಗೌತಮ ಕೇಳಿದ್ದಕ್ಕೆ ಸನತ್ಕುಮಾರರು ಹೇಳಿದ ಉತ್ತರ ಎಂದೂ ಹೇಳುತ್ತದೆ. ಆದರೆ ಇದು ಅಧಿಕೃತವಲ್ಲ.

 

ಪ್ರಶ್ನೆ:- ಪತಂಜಲಿಯ ಯೋಗಶಾಸ್ತ್ರಕ್ಕೂ ಇದಕ್ಕೂ ಹೋಲಿಕೆ ಇದೆಯೇ?

ಆಯಾ ಕಾಲಘಟ್ಟದಲ್ಲಿ ಹಿಂದಿನಿಂದ ಬಂದಂತಹಾ ಯೋಗಸೂತ್ರಗಳನ್ನು ಪರಿಷ್ಕರಿಸಿ ಬಳಕೆಗೆ ತರುತ್ತಾರೆ. ಆದರೆ ಅದೇ ಪೂರ್ಣವೆಂದಲ್ಲ. ವೇದದಿಂದ ಉದ್ಭವಿಸಿದ ಉಪನಿಷತ್ತುಗಳೇ ಪೂರ್ಣ ಪ್ರಮಾಣದಲ್ಲಿ ಇದನ್ನೆಲ್ಲಾ ಹೇಳುತ್ತವೆ. ಉಪನಿಷತ್ತುಗಳಿಂದ ಆಯ್ದ ವಿಚಾರಗಳು ಆಯಾ ಕಾಲಕ್ಕೆ ಯೋಗಶಾಸ್ತ್ರದಲ್ಲಿ ಹೇಳಲ್ಪಡುತ್ತದೆ.

 

ಪ್ರಶ್ನೆ:- "ಹೃದಯೇ ಅಷ್ಟದಲೇ ಹಂಸಾತ್ಮಾನಂ ಧ್ಯಾಯೇತ್" ಎಂಬ ಒಂದು ವಾಕ್ಯ ಇಲ್ಲಿದೆ. ಹಾಗಂದರೇನು?

 

ಅಷ್ಟು ಮಾತ್ರವಲ್ಲ:-

 

ಏವಂ ಕೃತ್ವಾ ಹೃದಯೇ ಅಷ್ಟದಲೇ ಹಂಸಾತ್ಮಾನಂ ಧ್ಯಾಯೇತ್ | ಅಗ್ನೀಷೋಮೌ ಹೃದಯಾದ್ಯಂಗನ್ಯಾಸ ಕರನ್ಯಾಸೌ ಭವತಃ ||

 

ಎಂದು ತೆಗೆದುಕೊಳ್ಳಬೇಕು. ಈ ಯೋಗಶಕ್ತಿಯು ಸರಳ, ಸುಲಭವಾಗಬೇಕು. ಪ್ರತಿಯೊಬ್ಬನೂ ತನ್ನ ವಯಸ್ಸಿನ ಮಿತಿಯನ್ನು ದಾಟಿದ ಮೇಲೆ ಯೋಗಿಯಾಗಬೇಕು. ಅದು ಬಿಟ್ಟು ರೋಗ-ರುಜಿನಗಳಿಂದ ನರಳುತ್ತಿರುವುದಲ್ಲ. ನನಗೀ ಜೀವನ ಸಾಕು ಎಂದು ಯೋಗಿಯಾಗಿ ಸ್ವೇಚ್ಛೆಯಿಂದ ಜೀವಬಿಡುವಂತೆ ಇರಬೇಕು ಎಂಬುದು ಗುರಿ. ಹಾಗಾಗಿ ಅದನ್ನು ನ್ಯಾಸ ಮಾಡುವುದು ಹೇಗೆ ಎಂದು ಹೇಳುತ್ತಾನೆ. ಆ ನ್ಯಾಸದಲ್ಲಿ "ಅಹಂ ಸಾತ್ಮಾನ್" ಅಂದರೆ "ನಾನು ಆತ್ಮ"ನೆಂಬುದನ್ನು ಗುರುತಿಸಿಕೊಳ್ಳಬೇಕು. ನಾನು ದೇಹವಲ್ಲ. ನಾನು ಆತ್ಮ ಎಂದು ಗುರುತಿಸಿಕೊಂಡಾಗ ದೇಹದಿಂದ ಪ್ರತ್ಯೇಕಿಸಿಕೊಳ್ಳುವುದಕ್ಕೆ ಇರುವಂತಹಾ ಸೂತ್ರವದು. ಅದಕ್ಕೆ ಹೇಗೆ ನ್ಯಾಸ ಮಾಡಬೇಕು?

 

ಅಗ್ನೀಷೋಮಾಭ್ಯಾಂ ವೌಷಟ್ ಹೃದಯಾದ್ಯಂಗನ್ಯಾಸ ಕರನ್ಯಾಸೌ ಭವತಃ ||

 

ಇಲ್ಲಿ "ಅ+ಗ್ನೀ+ಷೋ+ಮ" ಎಂಬ ನಾಲ್ಕಕ್ಷರಗಳಿಂದ ವೌಷಟ್ಕಾರದ ಮುಖೇನ ಹೃದಯಾದಿ ೬ ನ್ಯಾಸ ಹಾಗೂ ಅಂಗುಲ್ಯಾದಿ ೬ ನ್ಯಾಸ ಮಾಡಿಕೊಳ್ಳಬೇಕು. ತನ್ಮೂಲಕ:

 

ತಸ್ಯಾಷ್ಟಧಾ ವೃತ್ತಿರ್ಭವತಿ | ಪೂರ್ವದಲೇ ಪುಣ್ಯೇ ಮತಿಃ ||

 

ಅಷ್ಟದಳ = ೮ ದಳ ೮ ದಿಕ್ಕಿಗೆ. ಪೂರ್ವದಳದಲ್ಲೇ ಶ್ರದ್ಧೆಯನ್ನು ಕೇಂದ್ರೀಕರಿಸಿಕೊಂಡಲ್ಲಿ ಆ ಮತಿಯು ಸ್ಪಷ್ಟವಾಗಿ ಶುದ್ಧರೂಪದಲ್ಲಿ ಪೂರ್ವದಳದಲ್ಲೇ ನೆಲೆಸಲ್ಪಡುತ್ತದೆ. ದೇಹವ್ಯಾಪಾರವಿರುತ್ತದೆ. ದೇಹ ಬಿಟ್ಟು ಹೋಗು ಎಂದು ಯಾವುದೂ ಹೇಳುವುದಿಲ್ಲ. ಆದರೆ ಆಗ ದೇಹ ವ್ಯಾಪಾರವು ನಮಗೆ ಸಂಬಂಧವಿರುವುದಿಲ್ಲ. ಹೇಗೆ ಜೀವನ್ಮುಕ್ತರು ಎಂಬ ಸ್ಥಿತಿ ಇದೆಯೋ ಅದನ್ನು ಈ ನ್ಯಾಸದ ಮುಖೇನ ಕಲಿತುಕೊಳ್ಳಬೇಕು ಎಂದರ್ಥ. ಜೀವನ್ಮುಕ್ತವಾದ ಬದುಕು ಬಹಳ ಆನಂದದಾಯಕವಾದದ್ದು. ಪೂರ್ವ ಎಂದರೆ ಆರಂಭದಲ್ಲಿಯೇ ನಾವು ಮತಿಃ = ಮತಿಯುಕ್ತವಾಗಿ ನಮ್ಮ ಮನಸ್ಸನ್ನು ಕೇಂದ್ರೀಕರಿಸಿಕೊಂಡರೆ ಜೀವನ್ಮುಕ್ತರಾಗಿ ಕೇವಲ ದೇಹ ವ್ಯಾಪಾರ ಮಾತ್ರ ನಡೆಯುತ್ತಿರುತ್ತದೆ. ಅವರನ್ನು ಅವಧೂತರು ಇತ್ಯಾದಿ ಶಬ್ದಗಳಿಂದ ಕರೆಯುತ್ತಾರೆ. ತನ್ಮೂಲಕ ಒಬ್ಬ ಪರಮಪುರುಷ ಅಥವಾ ಯೋಗಿಯಾಗುತ್ತಾನೆ. ಆತನಿಗೆ ಆತ್ಮ ಸಂತೋಷ ಮಾತ್ರ, ದೇಹ ಸಂತೋಷವಿರುವುದಿಲ್ಲ. ಆತ್ಮ ಸಂತೋಷ ಅನುಭವಿಸುವಾಗ ಈ ಬಾಹ್ಯ ಪ್ರಪಂಚದ ಯಾವುದೇ ನೋವು ನಲಿವುಗಳಿಗೆ ಸಂಬಂಧವಿಲ್ಲ. ಅದೇ ದೇಹಸಂತೋಷ ಅನುಭವಿಸುವಾಗ ಮುಳ್ಳು ಚುಚ್ಚಿದರೆ ನೋವಾಗುತ್ತದೆ, ಯಾರಾದರೂ ಹೊಗಳಿದರೆ ಸಂತೋಷವಾಗುತ್ತದೆ.

 

ಪ್ರಶ್ನೆ:- ಹಂಸಕ್ಕೂ ಪರಮಹಂಸಕ್ಕೂ ಏನು ವ್ಯತ್ಯಾಸ?

 

ಇಲ್ಲಿ ಪೂರ್ವದಳದಲ್ಲಿ ಮತ್ಯುಕ್ತವಾಗಿ ನಾವು ನೆಲೆಸಿದಾಗ ಅದರ ಕೇಂದ್ರದಲ್ಲಿಇರುವಂತಹದ್ದು "ಪರಮ". ಅದು ಸಾಮೀಪ್ಯ ಮುಕ್ತಿ ಎಂದರ್ಥ. ಅದೇ ಪರಮದಲ್ಲಿ ಲೀನವಾದರೆ ಸಾರೂಪ್ಯ ಮುಕ್ತಿ. ಇಲ್ಲಿ ಮೊದಲ ಹಂತದಲ್ಲಿ ಹಂಸವೆಂಬ ನಾನು ಪೂರ್ವದಳದಲ್ಲಿ ಮತ್ಯುಕ್ತವಾಗಿ ನಿಲ್ಲಿಸಿಕೊಂಡಿದೆಯೇ ಹೊರತು ಪರಮಹಂಸದಲ್ಲಿ ಲೀನವಾಗಿಲ್ಲ. ನಂತರ ಲೀನವಾದರೆ ಅಲ್ಲಿ ಆತ್ಮ ಅಥವಾ ಹಂಸ ಎಂಬ ಅಸ್ತಿತ್ವವಿಲ್ಲ. ಅದು ಪರಮಹಂಸ ಸ್ವರೂಪ.

 

ಪ್ರಶ್ನೆ:- ಮಣಿಪುರವನ್ನು ಉದ್ದೀಪಿಸುವುದು ಈ ಉಪನಿಷತ್ತಿನ ಉದ್ದೇಶವೇ?

ಉಪನಿಷತ್ತು ಮಣಿಪೂರವನ್ನು ಉದ್ದೀಪನೆ ಮಾಡುವ ದಾರಿಯನ್ನು ಹೇಳುತ್ತದೆಯೇ ಹೊರತು ತಾನೇ ಸ್ವಯಂ ಉದ್ದೀಪಿಸುವ ಉದ್ದೇಶ ಹೊಂದಿರುವುದಿಲ್ಲ. ನೀವು ಸಾಧನೆ ಮಾಡಬೇಕು.

 

ಪ್ರಶ್ನೆ:- ಮಣಿಪೂರವನ್ನು ಸಂಧಿಸಿದರೆ ನಾವು ಅರ್ಧ ಸಾಧನೆ ಮಾಡಿದಂತಲ್ಲವೇ? ನಾವು ತಲುಪಬೇಕಾದ್ದು ಸಹಸ್ರಾರವನ್ನಲ್ಲವೇ?

 

ಮಣಿಪೂರವನ್ನು ನೀವು ಸಾಧಿಸಿಕೊಂಡರೆ, ನಂತರದ ಮೂರು ಚಕ್ರಗಳು ಅಷ್ಟು ಪ್ರಧಾನವಾಗಿರುವುದಿಲ್ಲ. ನೀವು ಆಜ್ಞಾಗೆ ಹೋಗಬಹುದು, ಅಥವಾ ನೇರವಾಗಿ ಸಹಸ್ರಾರಕ್ಕೆ ಹೋಗಬಹುದು. ಆಜ್ಞಾದಲ್ಲಿ ಸಾಧನೆ ಮಾಡಬೇಕು ಎಂದುಕೊಂಡಿದ್ದರೆ, ಆಜ್ಞಾದಲ್ಲಿ ನಿಲ್ಲಿಸಿಕೊಂಡು, ಸಾಧನೆ ಮಾಡಿಕೊಂಡು, ತನ್ನ ಇಚ್ಛಾಶಕ್ತಿಯಂತೆ ಪ್ರಪಂಚವನ್ನು ಒಂದು ಸನ್ಮಾರ್ಗದಲ್ಲಿ ನಡೆಸುವ ಪ್ರಯತ್ನ ಮಾಡಬಹುದು. ಅದು ಅವನಿಗೆ ಅಗತ್ಯವಾದರೆ ಮಾತ್ರ. ಅಥವಾ ನೇರವಾಗಿ ಸಹಸ್ರಾರ ಸೇರಿ ಭಗವತ್ ಸಾಕ್ಷಾತ್ಕಾರ ಹೊಂದಿ ಅಲ್ಲಿ ನೆಲೆಸಬಹುದು. ಅದು ಉದ್ದೇಶವಾಗಿರುತ್ತದೆ.

 

ಆದರೆ ಆಜ್ಞಾಚಕ್ರ ಸಾಧನೆಯಿಂದ ಕೇವಲ ಒಳ್ಳೆಯದು ಮಾತ್ರವಲ್ಲ ಕೆಟ್ಟದ್ದೂ ಮಾಡುವವರಿದ್ದಾರೆ. ಉದಾ - ತಾರಕಾಸುರ ಆಜ್ಞಾ ಚಕ್ರ ಸಾಧನೆ ಮಾಡಿಕೊಂಡು ಲೋಕಕಂಟಕನಾದ. ಪ್ರಪಂಚದಲ್ಲಿ ಸಮಸ್ಯೆ ಹುಟ್ಟಿತು. ಅವನ ಹೇಳುವಂತಹಾ ಸಿದ್ಧಾಂತವೇ ಸತ್ಯವಾಯಿತು. ಅದನ್ನೇ ಜನರು ಅನುಸರಿಸಬೇಕಾಯಿತು. ಹಾಗಾಗಿ ಅದಲ್ಲ, ಅದಕ್ಕಿಂತ ಎತ್ತರದ ಜ್ಞಾನವಿದೆ ಎಂದು ಸಂಶೋಧಿಸಿ ಕೊಟ್ಟ ಸುಬ್ರಹ್ಮಣ್ಯನೇ ಆರನೆಯ ಮಹತ್ತಾದ ಜ್ಞಾನಶಕ್ತಿ. ಹಾಗಾಗಿ ಸುಬ್ರಹ್ಮಣ್ಯನಿಗೆ ೬ ತಲೆ. ಅಂದರೆ ೬ನೇಯದಾದ ಮಹತ್ಶಕ್ತಿ ಇದೆ. ಪುರಾಣದಂತೆ ಸುಬ್ರಹ್ಮಣ್ಯನು ತಾರಕಾರಿ. ಆದರೆ ಆಧ್ಯಾತ್ಮಿಕ ಸತ್ಯವೆಂದರೆ ಪಂಚಭೂತ್ಮಾತ್ಮಕ ವ್ಯವಹಾರವೇ ಕೊನೆಯದೆಂದು ಎಲ್ಲರ ಮೇಲೆ ಹೇರಿದ್ದ ತಾರಕನಿಗೆ ಅದಲ್ಲ, ಅದಕ್ಕಿಂತ ಎತ್ತರವಾದ ೬ನೇಯ ಮಹತ್ ಇದೆ ಎಂದು ತೋರಿಸಿಕೊಟ್ಟ ಷಣ್ಮುಖ. ಆಗ ಉಳಿದೈದು ವಿಚಾರಗಳು ಮರೆಯಾದವು.

 

ಪ್ರಶ್ನೆ:- ಇಲ್ಲಿ ಹೇಳಿರುವ ಪ್ರಾಣಾಯಾಮ ಹೇಗೆ?

ಬಲ ಹೊಳ್ಳೆ ಮುಚ್ಚಿ ಎಡ ಹೊಳ್ಳೆಯಿಂದ ನಿಧಾನವಾಗಿ ಉಸಿರೆಳೆದುಕೊಂಡು ವೇಗವಾಗಿ ಬಿಡಬೇಕು. ಅದಕ್ಕೆ ಎಣಿಕೆ ಇಲ್ಲ. ೯ ರೀತಿಯ ನಾದ ಹೊರಡಿಸಲಿಕ್ಕೆ ಬೇಕಾದ ಸಾಧನೆಯದು. ೧, ೧೦, ೧೦೦, ೧೦೦೦, ಕೋಟಿಯಾದರೂ ಸರಿ ಬಿಡದೆ ಸಾಧನೆ ಮಾಡಿ ಎಂದಿದೆ ಉಪನಿಷತ್ತುಗಳು. ಈಗಿನ ಸಮಾಜದ ವೈಖರಿ ಶಕ್ತಿಯಲ್ಲಿ ಪ್ರಾಣಾಯಾಮಕ್ಕೆ ವಿಶಿಷ್ಟವಾದ ಪೂರಕತೆ ಇದೆ. ಹಾಗಾಗಿ ಕೋಟಿ ಸಂಖ್ಯೆ ಬೇಡ, ಹತ್ತೇ ಸಾಕಾಗಬಹುದು. ಆದರೆ ಇಲ್ಲಿ ಬಹುಭಾವಭಿನ್ನವುಳ್ಳ ಮಾತುಗಳನ್ನಾಡುತ್ತೇವೆ. ಹೊರಗೆ ನಯವಿದ್ದು, ಒಳಗೆ ಕುವಾಕ್ಯ ಇರುತದೆ. ಬಹುಭಿನ್ನ ವೈಖರಿಗಳಿವೆ. ಆಗ ಸ್ವಾಭಾವಿಕವಾಗಿ ಪ್ರಾಣಕ್ಕೆ ಅಂದರೆ ಉಸಿರಾಟಕ್ಕೆ ಹೆಚ್ಚು ಶಕ್ತಿ ಇರುತ್ತದೆ. ಹಾಗಾಗಿ ಈಗ ಇದು ಸುಲಭ ಸಾಧ್ಯ ಸಾಧನೆ. ಚಾಲ್ತಿಯಲ್ಲಿರುವಂತೆ ಸಾಧ್ಯವಿದ್ದಷ್ಟು ಎಡಗೈಯನ್ನು ವಪೆಯ ಹತ್ತಿರ ಒತ್ತಿದಾದ ಅದು ವಪೆಯನ್ನು ನಿಶ್ಚಲಗೊಳಿಸುತ್ತದೆ. ಅಲ್ಲಿಂದ ಮುಂದೆ ಎಡಗೈ ಒಂದು ಮುಂದುವರೆದು ಪಕ್ಕೆಯ ಕೊನೆಗೆ ತಾಗಿರುತ್ತದೆ. ಆ ಎಡಗೈ ಮೇಲೆ ಬಲಗೈ ಇಟ್ಟು ಮೂಗು ಹಿಡಿದಿರುತ್ತದೆ.

 

ಪ್ರಶ್ನೆ:- ನೆನಪಿನ ಶಕ್ತಿ ಹೆಚ್ಚಿಸಲು ಏನು ಮಾಡಬೇಕು ಎಂದು ಒಬ್ಬ ಯೋಗ ಶಿಕ್ಷಕರ ಪ್ರಶ್ನೆ?

ಅದಕ್ಕೆ ವಿಧ್ಯಾರ್ಥಿ ಅಥವಾ ಬ್ರಹ್ಮಚಾರಿ ಆಗಿದ್ದಾಗಲೇ ಮೂಲಾಧಾರವನ್ನು ಉದ್ದೀಪನಗೊಳಿಸಿಕೊಂಡು ಸ್ವಾಧಿಷ್ಠಾನವನ್ನು ಸಾಧಿಸಿಕೊಂಡಿದ್ದರೆ ಅಲ್ಲಿಂದ ಮುಂದೆ ಅವನಿಗೆ ಪ್ರತಿಯೊಂದು ಅಂಶವೂ ನೆನಪಿರುತ್ತದೆ. ಅಂದರೆ ವಿಧ್ಯಾರ್ಥಿ ಜೀವನದಲ್ಲಿ ಕಲಿತದ್ದೆಲ್ಲವೂ, ಜೊತೆಗೆ ಗೃಹಸ್ಥ ಜೀವನದಲ್ಲಿ ಪಕ್ಕಾ ಲೆಕ್ಕಾಚಾರದಂತೆ ನಡೆಯುವ ಎಲ್ಲವೂ ದೃಢವಾಗಿ ನೆನಪಿನಲ್ಲಿ ದಾಖಲಿಸಲ್ಪಡುತ್ತದೆ. ಅದನ್ನು ವಿವೇಕದಲ್ಲಿ ಪರಿವರ್ತಿಸಿ, ಬೇಕಾದ ಸಂದರ್ಭದಲ್ಲಿ ನಿಮಗೆ ಸರಿಯಾದ ಮಾರ್ಗದರ್ಶನ ಮಾಡುತ್ತದೆ. ಬ್ರಹ್ಮಚರ್ಯಾಶ್ರಮದಲ್ಲಿ ಸ್ವಾಧಿಷ್ಠಾನ ಸಾಧಿಸುವ ಉದ್ದೇಶವೇ ಇದು. ಏಕೆಂದರೆ ಗೃಹಸ್ಥರಾದ ಮೇಲೆ ತುಂಬಾ ವಿವೇಕಯುಕ್ತವಾಗಿ ಬದುಕಬೇಕು. ಆತನಿಗೆ ವಿವೇಕವನ್ನು ಒದಗಿಸಿಕೊಡುವುದೇ ಸ್ವಾಧಿಷ್ಠಾನ. ಜಗಳ ಮಾಡುತ್ತಾ ಕುಳಿತರೆ ಗೃಹಸ್ಥಾಶ್ರಮ ನಡೆಯುವುದಿಲ್ಲ. ವಿವೇಕಯುಕ್ತವಾಗಿ, ಯಾರೊಂದಿಗೂ ಜಗಳವಿಲ್ಲದೆ, ಎಲ್ಲರನ್ನೂ ಸಂತುಷ್ಟಗೊಳಿಸುತ್ತಾ, ಒಳ್ಳೆಯ ಮಾತನ್ನೇ ಆಡುತ್ತಾ ಬದುಕಲಿಕ್ಕೆ ಆಗಬೇಕಾದರೆ ಸ್ವಾಧಿಷ್ಠಾನವನ್ನು ಸಾಧಿಸಿಕೊಳ್ಳಬೇಕು. ಅದಕ್ಕಾಗಿಯೇ ಋಗ್ವೇದದ ಪವಮಾನ ಮಂತ್ರಗಳು:-

 

ಸ್ವಾಧಿಷ್ಠಯಾ ಮದಿಷ್ಠಯಾ ಪವಸ್ವ ಸೋಮ ಧಾರಯ |

 

ಎಂದೇ ಆರಂಭವಾಗುತ್ತವೆ. ಸ್ವಾಧಿಷ್ಠಾನವನ್ನು ಸಾಧಿಸಿಕೊಂಡಾಗ ಮಾತ್ರ ಮಧುಯುಕ್ತವಾದ ಜೀವನವನ್ನು ಮಾಡಲಿಕ್ಕೆ ಸಾಧ್ಯ. ಇಲ್ಲದಿದ್ದರೆ ಒಟ್ಟಾರೆ ಸಂಸಾರಿ, ಹೇಗೋ ಜೀವನ ನಡೆಯುತ್ತದೆ ಎಂಬುದರಲ್ಲಿ ಅರ್ಥವೇ ಇಲ್ಲ!

 

ಪ್ರಶ್ನೆ:- ಸ್ವಾಧಿಷ್ಠಾನ ಸಾಧನೆಯಲ್ಲಿ ಮನಸ್ಸನ್ನು ಸ್ವಾಧಿಷ್ಠಾನ ಚಕ್ರಕ್ಕೆ ಕೇಂದ್ರೀಕರಿಸಬೇಕೇ?

 

ಅದು ಯೋಗ ವಿಜ್ಞಾನ, ಮನಸ್ಸಿಗೆ ಸಂಬಂಧಪಟ್ಟಿಲ್ಲ. ಆದರೆ ನಾವು ಮನಸ್ಸಿಗೆ ಒಂದು ಪಾತ್ರ ಕೊಟ್ಟು ಸೇರಿಸಿಕೊಳ್ಳಬೇಕು. ಅದು ಮನಸ್ಸಿನ ಪ್ರವರ್ತನೆಯಲ್ಲ, ಮನಸ್ಸನ್ನು ಪ್ರಯತ್ನಪೂರ್ವಕವಾಗಿ ಒಂದು ಪಾತ್ರ ನಿರ್ವಹಿಸುವಂತೆ ತೊಡಗಿಸಿಕೊಳ್ಳುವುದು. ನೀವೊಂದು ನಾಟಕದಲ್ಲಿ ಒಂದು ಪಾತ್ರ ನಿರ್ವಹಣೆ ಮಾಡುವಾಗ, ಆ ಪಾತ್ರವೇ ನೀವಾಗಿರುತ್ತೀರಿ. ಆದರೆ ನಾಟಕ ಮುಗಿದ ಮೇಲೆ ನೀವು ಆ ಪಾತ್ರವಲ್ಲ, ನೀವು ನೀವೇ ಆಗಿರುತ್ತೀರಿ. ಹಾಗೆಯೇ ಮನಸ್ಸನ್ನು ಒಂದು ಪಾತ್ರ ನಿರ್ವಹಿಸುವಂತೆ ಮಾಡುವ ಕೆಲಸವು ಸ್ವಾಧಿಷ್ಠಾನದಲ್ಲಿ ಮಾಡುವಂತಹಾ ಒಂದು ಪ್ರಕ್ರಿಯೆ.

 

ಪ್ರಶ್ನೆ:- ಅಷ್ಟಾಂಗ ಯೋಗದಿಂದ ಮಾನಸಿಕ ಖಾಯಿಲೆ ಮಾತ್ರವಲ್ಲ ದೈಹಿಕ ಖಾಯಿಲೆಯನ್ನೂ ಗುಣಪಡಿಸಿಕೊಳ್ಳಬಹುದು ಎಂಬ ಮಾತಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಹಾಗೆಯೇ ದೊಡ್ಡ ದೊಡ್ಡ ಯೋಗಸಾಧಕರಿಗೆ ಆರೋಗ್ಯ ಸಮಸ್ಯೆ ಬಂದು ಸತ್ತ ಉದಾಹರಣೆ ಇದೆಯಲ್ಲವೇ?

 

ಖಂಡಿತಾ ಸಾಧ್ಯ. ಕೆಲವರಿಗೆ ಆರೋಗ್ಯ ಕೆಟ್ಟಿರಬಹುದು, ಇನ್ನೂ ಕೆಲವರಿಗೆ ಖಾಯಿಲೆ ಬರದಿದ್ದರೂ  ಆಪ್ತವಲಯವು ತಮ್ಮ ಬೇಳೆ ಬೇಯುವುದಿಲ್ಲವೆಂದು ವಿಷ ಹಾಕಿ ಕೊಂದು ಆರೋಗ್ಯ ಸಮಸ್ಯೆ ಎಂದು ಬಣ್ಣ ಕಟ್ಟಿದರೋ ಎಂಬದು ಚಿಂತನೀಯವಲ್ಲ. ಅಲ್ಲೆಲ್ಲಾ ತನ್ನ ಜೀವನ್ಮುಕ್ತಿಗೆ ಒಂದು ಕಾರಣ ಬೇಕು ಎಂದೇ ಯೋಗಿಗಳ ಚಿಂತನೆ. ತಾನಾಗಿಯೇ ಹೋಗಿ ಸತ್ತರೆ, ಅದು ಕಾನೂನು ಪ್ರಕಾರ ಆತ್ಮಹತ್ಯೆ.  ಆತ್ಮವನ್ನು ಹತ್ಯೆ ಮಾಡಲಾಗುವುದಿಲ್ಲ, ಅದು ದೇಹಾಂತ್ಯವಷ್ಟೆ. ಸಧ್ಯಕ್ಕೆ ಲೋಕಾರೂಢಿ ಶಬ್ದವನ್ನೇ ಬಳಸೋಣ. ಯೋಗಿಯು ಆತ್ಮಹತ್ಯೆ ಮಾಡಿಕೊಳ್ಳದೆ ಸಾಯುವುದಕ್ಕೆ ಬೇಕಾದ ಕಾರಣವನ್ನು ಪ್ರೇಷಿಸಿದರೆ ಅದು ಆತ್ಮಹತ್ಯೆ ಎಂದಾಗುವುದಿಲ್ಲ. ರಮಣ ಮಹರ್ಷಿಗಳು ಅಥವಾ ಅಂತಹಾ ಇನ್ನು ಎಷ್ಟೋ ಸಾಧಕರಿಗೆ ಖಾಯಿಲೆ ಬಂದರೆ ಗುಣಪಡಿಸಿಕೊಳ್ಳಲು ಗೊತ್ತಿರಲಿಲ್ಲ ಎಂದಲ್ಲ. ಗೊತ್ತಿತ್ತು. ಆದರೆ ಬೇಡವಾಗಿತ್ತು. ಹಂಸೋಪನಿಷತ್ತಿನಲ್ಲಿ ಹೇಳಿರುವ ಒಂಭತ್ತು ನಾದಗಳನ್ನು ಸಾಧಿಸಿಕೊಂಡವರಿಗೆ ತನ್ನ ಖಾಯಿಲೆ ಮಾತ್ರವಲ್ಲ, ಬೇರೆಯವರ ಖಾಯಿಲೆಯನ್ನೂ ೯ ರೀತಿಯಲ್ಲಿ ಗುಣಪಡಿಸುವ ಚಿಕಿತ್ಸಾ ವಿಧಾನವೂ ಸಿದ್ಧಿಸಿರುತ್ತದೆ. ಅದರಿಂದ ಎಲ್ಲಾ ಖಾಯಿಲೆಗಳನ್ನು ಗುಣಪಡಿಸಬಹುದು. ಮಾನಸಿಕ ಖಾಯಿಲೆ ಮಾತ್ರವಲ್ಲ, ದೈಹಿಕ ಖಾಯಿಲೆ ಗುಣ, ದೈಹಿಕವಾಗಿ ಅಂಗಾಂಗ ವ್ಯತ್ಯಾಸ ಮಾಡಲು ಇಲ್ಲಿ ಸಾಧ್ಯವಿದೆ. ಉದಾ - ಹೆಣ್ಣನ್ನು ಗಂಡಾಗಿ, ಗಂಡನ್ನು ಹೆಣ್ಣಾಗಿ ಪರಿವರ್ತಿಸುವ ಶಕ್ತಿ ಈ ಸಾಧನೆಗಿದೆ. ಆದರೆ ಅದಕ್ಕೆಲ್ಲಾ ಹೋಗಬೇಡಿ, ಆತ್ಮೋನ್ನತಿಯನ್ನು ಮಾತ್ರ ಸಾಧಿಸಿ.

 

ಪ್ರಶ್ನೆ:- ನೀವು ಪರಕಾಯ ಪ್ರವೇಶ ಮಾಡಿಕೊಂಡು ಬರುತ್ತಾ ೩೭೦ ವರ್ಷಗಳಷ್ಟು ಸ್ಮೃತಿ ಹೊಂದಿದ್ದೀರಿ ಎಂದು ಕೇಳಿದ್ದೇವೆ, ಅದರ ಬಗ್ಗೆ ಕೇಳಬಹುದೇ? (ಬ್ರಹ್ಮ ಋಷಿ ನಿತ್ಯಾನಂದರಿಗೆ ಯೋಗ ಶಿಕ್ಷಕರ ಪ್ರಶ್ನೆ)

 

ನಾನೀಗ ಮಹಾವ್ರತ ಯಾಗ ಬದ್ಧತೆಯಲ್ಲಿ ಉಪನಿಷದ್ ಗೋಷ್ಠಿಯಲ್ಲಿದ್ದೇನೆ. ನಿಮ್ಮ ಪ್ರಶ್ನೆ ತೀರಾ ವೈಯಕ್ತಿಕವಾದದ್ದು. ಅದು ಈ ಗೋಷ್ಠಿಗೆ ಸಂಬಂಧಪಟ್ಟದ್ದಲ್ಲ. ಪರಕಾಯ ಪ್ರವೇಶ ಎಂಬ ವಿಧ್ಯೆ ಇರುವುದು ಸತ್ಯ. ಆದರೆ ಅದು ಈ ಉಪನಿಷದ್ ಗೋಷ್ಠಿಗೆ ಸಂಬಂಧಪಟ್ಟದ್ದಲ್ಲ. ಹಾಗಾಗಿ ಉತ್ತರಿಸುವುದಿಲ್ಲ (ಎಂದು ನಿತ್ಯಾನಂದದಿಂ ಮುಗುಳ್ನಗುತ್ತಾ ಉತ್ತರಿಸಿದರು).

 

ಪ್ರಶ್ನೆ:- ಈ ಉಪನಿಷತ್ತಿನಲ್ಲಿ ಹತ್ತು ಎಂಬುದು ಷಟ್ಚಕ್ರಗಳಿಗೂ ಮೀರಿದ ಹತ್ತು ಚಕ್ರಗಳೇ?

 

ಹತ್ತು ನಾದ ಬಿಂದುಗಳು. ಅದರಲ್ಲಿ ಒಂಭತ್ತು ಮಾತ್ರ ಸಾಧನಾ ಯೋಗ್ಯ. ಒಂಭತ್ತನೆಯದು ಸಾಧನಾ ಯೋಗ್ಯವಲ್ಲ.

 

ಪ್ರಶ್ನೆ:- ಪ್ರಾಣಾಯಾಮದ ಮೂಲಕವೇ ಈ ನಾದೋತ್ಪತ್ತಿಯಾಗುತ್ತದೆಯೇ?

 

ಪ್ರಾಣಾಯಾಮದಲ್ಲಿ ವೈಖರಿಯಲ್ಲಿ ಹೊರಡಿಸುವ ಶಬ್ದವಿದಲ್ಲ. ಉಸಿರಾಟದ ಕಾಲದಲ್ಲಿಯೇ ಬರುವ ನಾದವಿದು. ಅದು ಆಂತರ್ಯದಲ್ಲಿ ಕೇಳಿಸುವ ನಾದ.

 

ಪ್ರಶ್ನೆ:- ಕೆಲವರು ಪ್ರಾಣಾಯಾಮದಲ್ಲಿ ಉಸಿರು ಎಳೆದುಕೊಳ್ಳುವಾಗ ಜೋರು ಶಬ್ದವಾಗುತ್ತದೆ, ಅದುವೇ ಇದಾ?

 

ಒಳ ಎಳೆದುಕೊಳ್ಳುವಾಗ ಒಂದು, ಹೊರಬಿಡುವಾಗ ಮತ್ತೊಂದು ಎಂಬ ಎರಡು ರೀತಿಯ ನಾದಗಳು. ಶ್ವಾಸೋಚ್ಛ್ವಾಸಕ್ಕೆ ಅತೀ ಹೆಚ್ಚು ವೇಗವನ್ನು ಕೊಡಬಾರದು. ವೇಗ ಕೊಡುತ್ತಾ ಹೋದಂತೆ, ಅದು ಅಪಾಯಕಾರಿಯಾದ ಭೇರಿ  ತಾಡನದ ನಾದವಾಗುತ್ತದೆ. ಯಾವಾಗಲೂ ಹಿತಮಿತವಾಗಿ ಕೆಲಸ ಮಾಡಬೇಕು. ದೇಹ ಉಳಿಸಿಕೊಂಡಷ್ಟು ವರ್ಷ ಮಾತ್ರ ಕೆಲಸ ಮಾಡಲು ಸಾಧ್ಯ. ದೇಹವೇ ಹೋದರೆ ಕೆಲಸ ಮಾಡಲಾಗುವುದಿಲ್ಲ.

 

ಪ್ರಶ್ನೆ:- ಇದಕ್ಕೆ ಸಂಬಂಧಿಸಿದ ಪ್ರಾಣಾಯಾಮವನ್ನು ಯಾವಾಗ ಮಾಡಬೇಕು?

 

ಈ ಉಪನಿಷತ್ತಿನಲ್ಲಿ ಅದಕ್ಕೆ ಯಾವುದೇ ಕಾಲವನ್ನು ಹೇಳಿಲ್ಲ. ಒಂದು ಸಾಧನೆ ಎಂದರೆ ಅದಕ್ಕೆ ಸಮಯ ನಿರ್ಬಂಧನೆಯ ಪ್ರಶ್ನೆ ಇಲ್ಲ. ಸಾಧಿಸುವಲ್ಲಿಯವರೆಗೆ ಮಾಡುವ ಹೋರಾಟವೇ ಸಾಧನೆ ಎನ್ನಿಸಿಕೊಳ್ಳುತ್ತದೆ. ಹೋಗುತ್ತಾ ಇರುವಾಗ ರಾಹುಕಾಲ, ಗುಳಿಗೆಕಾಲ ಬಂತೆಂದು ನಿಲ್ಲಿಸಿಕೊಂಡರೆ ಸಾಧನೆಯಾಗುವುದಿಲ್ಲ. ಕಾಲ, ದೇಶಾದಿಗಳೆಲ್ಲಾ ಬ್ರಹ್ಮಚರ್ಯ ಮತ್ತು ಗೃಹಸ್ಥ ಎಂಬ ಒಂದು ಎರಡನೆಯ ಹಂತದಲ್ಲಿರುವ ನಿಯಮಗಳು. ನಂತರ ವಾನಪ್ರಸ್ಥಕ್ಕೆ ಸೇರಿದ ಮೇಲೆ ಕಾಲದ ನಿರ್ಬಂಧಗಳೆಲ್ಲಾ ಇಲ್ಲ. ಮುಹೂರ್ತ ನಿರ್ಣಯವಿಲ್ಲ. ವಾನಪ್ರಸ್ಥರು ಯಾವ ಕೆಲಸವನ್ನು ಮಾಡಲು ಇಚ್ಛಿಸುತ್ತಾರೋ ಅದನ್ನು ಸಾಧಿಸುವಲ್ಲಿಯವರೆಗೆ ಮಾಡುವ ಹೋರಾಟವೇ ಪ್ರಧಾನ.

 

ಪ್ರಶ್ನೆ:- ಹೆಂಗಸರು ರಜಸ್ವಲೆಯರಾದಾಗ ಮೂರು ದಿನ ವಿಶ್ರಾಂತಿಯಲ್ಲಿರುವಾಗಲೂ ಈ ಪ್ರಾಣಾಯಾಮ ಮಾಡಬಹುದೇ?

 

ಯಾವಾಗಲೂ ಮಾಡಬಹುದು. ಇದು ವಾನಪ್ರಸ್ಥಾಶ್ರಮಕ್ಕೆ ಸಂಬಂಧಿಸಿದ್ದು.

 

ಪ್ರಶ್ನೆ:- ಪ್ರಾಣಾಯಾಮದಲ್ಲಿ ಗಾಳಿಯು ನಾದವಾಗಿ ಹೇಗೆ ಪರಿವರ್ತನೆಯಾಗುತ್ತದೆ?

 

ಅದಕ್ಕೆ ಒಂದು ನಿರ್ಧಿಷ್ಟ ಕಾರಣವಿಲ್ಲ. ಆದರೆ ಸಾಮಾನ್ಯವಾಗಿ ದೇಹ ರಚನೆಯಾದಾಗ, ಸ್ವಾಭಾವಿಕವಾಗಿಯೇ ಬೆಳವಣಿಗೆಯನ್ನು ಹೊಂದಿ, ವಯಸ್ಸಿಗೆ ಬಂದಾಗ, ನಾದ ಹೊರಡಿಸಲು ಬೇಕಾದ ಒಳಾಂಗಗಳು ಮೂಗಿನೊಳಗಿನಿಂದೊಳಗೆ ಸಿದ್ಧವಾಗಿಬಿಡುತ್ತದೆ. ಆದರೆ ಎಷ್ಟೋ ಜನರು ಅದನ್ನು ವಿಕೃತ ಟಾನ್ಸಿಲ್ಸ್ ಎಂದು ಕತ್ತರಿಸಿ ತೆಗೆಯುತ್ತಾರೆ. ಆದರೆ ಅದು ವಿಕೃತಿಯಲ್ಲ, ನಾದ ಹೊರಡಿಸಲು ಬೇಕಾದ ವ್ಯವಸ್ಥೆಯನ್ನು ಮಾಡುತ್ತಾ ಹೋಗುತ್ತದೆ ದೇಹ. ಒಂದು ೫೦ ವರ್ಷವಾದ ಮೇಲೆ ಆ ರೀತಿಯ ಪ್ರಯತ್ನಪಟ್ಟರೆ ಸಾಧಕನಾಗಬಹುದು. ಆದರೆ ಅದಕ್ಕಿಂತ ಮುಂಚೆಯೇ ಡಾಕ್ಟರು ಅದನ್ನು ಕತ್ತರಿಸಿ ಇಟ್ಟಿದ್ದರೆ, ಅದು ಆಸ್ಪತ್ರೆಯಲ್ಲಿ ಮಾತ್ರ ನಾದ ಹೊರಡಿಸಬಹುದೇನೋ, ದೇಹದಲ್ಲಲ್ಲ!

 

ಪ್ರಶ್ನೆ:- ನಮಗೆ ಸ್ವಾಭಾವಿಕವಾಗಿ ಒಂದು ಉಸಿರಾಟ ನಡೆಯುತ್ತಿರುತ್ತದೆ. ಅದನ್ನೇ ಗಮನಿಸುತ್ತಿದ್ದರೆ ಯಾವ ಸಾಧನೆಗೆ ಅನುಕೂಲ?

 

ಮೊದಲಿನಿಂದಲೂ ನಾವು ಸ್ವಾಭಾವಿಕವಾಗಿಯೇ ಬೆಳೆದುಕೊಂಡು ಬಂದಿದ್ದರೆ, ಯಾವುದೇ ಅಂಗಚ್ಛೇದ ಪ್ರಕ್ರಿಯೆಗೆ ಒಳಗಾಗಿರದಿದ್ದರೆ, ಸ್ವಾಭಾವಿಕ ಉಸಿರಾಟವೇ ಅವರಲ್ಲಿ ೯ ನಾದಗಳನ್ನೂ ಹುಟ್ಟಿಸುತ್ತದೆ. ಮಧ್ಯದಲ್ಲಿ ಏನೇನೋ ಚಿಕಿತ್ಸೆಗಳು, ವಿಕೃತ ಸಾಧನೆಗಳು, ವಿಕೃತ ಉಪಾಸನೆಗಳು, ವಿಕೃತ ಜೀವನ ವಿಧಾನಗಳಿಂದ ಸ್ವಾಭಾವಿಕತೆಯನ್ನು ಹಾಳುಮಾಡಿಕೊಂಡಿದ್ದರೆ ಸ್ವಾಭಾವಿಕ ನಾದೋತ್ಪನ್ನವಾಗುವುದಿಲ್ಲ. ಆಗ ಪ್ರಯತ್ನಪೂರ್ವಕ ಪಡೆಯಬಹುದು ಅಥವಾ ಪಡೆಯಲು ಆಗದಿರಬಹುದು.

 

ಸಹಜ ಉಸಿರಾಟದಲ್ಲಿ ಎರಡು ವಿಧ:-

೧. ಪಾಶವೀ

೨. ಮಾನವೀ

 

ಈ ಪಾಶವೀ + ಮಾನವೀ = ಆಸುರೀಯಾದರೆ ಕ್ಷುದ್ರಾಚಾರ, ವಾಮಾಚಾರ, ಆಭಿಚಾರ.

 

ಅದೇ ಪಾಶವೀ + ಮಾನವೀ = ದೈವೀಕವಾದರೆ ದೈವತ್ವ, ಯೋಗಿ. ಇಷ್ಟು ಸುಲಭವೀ ಸೂತ್ರ.

 

ಪ್ರಶ್ನೆ:- ಜೀವನ್ಮುಕ್ತಿ ಪಡೆಯಲಿಕ್ಕೆ ಅತ್ಯಂತ ಸುಲಭವಾದ ಪ್ರಾಣಾಯಾಮ ಯಾವುದು?

 

ಈ ಹಂಸೋಪನಿಷತ್ತಿನ ಪ್ರಾಣಾಯಾಮವೇ ಸುಲಭ ಸಾಧ್ಯವಾದದ್ದು. ಯಾವ ರೀತಿಯಲ್ಲಾದರೂ ಒಂಭತ್ತರಲ್ಲಿ ಒಂದು ನಾದವನ್ನಾದರೂ ಸಾಧಿಸಿಕೊಂಡರೆ ಜೀವನದಲ್ಲಿ ಸಂತೃಪ್ತಿ ಅಥವಾ ಮುಕ್ತಿಯನ್ನು ಹೊಂದುವುದಕ್ಕೆ ಸಾಧ್ಯವಾಗುತ್ತದೆ. ಆದರೆ ಭೇರಿ ನಾದವನ್ನು ಮಾತ್ರ ಸಾಧನೆ ಮಾಡಲು ಹೋಗಬೇಡಿ.

 

ಪ್ರಶ್ನೆ: ನಾವು ಒಂದು ಗಮ್ಯ ಸ್ಥಾನಕ್ಕೆ ಸೇರಬೇಕಾದರೆ ಬೇರೆ ಬೇರೆ ದಾರಿಗಳಿರುತ್ತವೆ. ಕಾಶಿಗೆ ಪಾದಯಾತ್ರೆ, ರೈಲು, ಬಸ್ಸು, ಕಾರು, ವಿಮಾನ, ಹೇಗೂ ಹೋಗಬಹುದು. ಹಾಗೆಯೇ ಹಂಸ ಎಂಬ ಪರಮಾತ್ಮನನ್ನು ಸೇರುವುದಕ್ಕೆ ಈ ಹಂಸೋಪನಿಷತ್ತಿನಲ್ಲಿ ಹೇಳಿದ ಒಂದೇ ದಾರಿಯೇ ಅಥವಾ ಭಗವದ್ಗೀತೆಯಲ್ಲಿ ಹೇಳಿದಂತೆ ಕರ್ಮ, ಜ್ಞಾನ, ಭಕ್ತಿ, ಬುದ್ಧಿ ಇತ್ಯಾದಿ ಹಲವು ದಾರಿಗಳಿವೆಯೇ?

 

ಒಟ್ಟು ೧೮ ಮಾರ್ಗಗಳಿವೆ. ಅದರಲ್ಲಿ ೭ ಮಾರ್ಗಗಳನ್ನು ವೇದದಿಂದ ಬಂದ ಬದ್ಧತೆಯುಳ್ಳ ಉಪನಿಷತ್ತುಗಳು ಹೇಳುತ್ತವೆ. ೧೮ ಮಾರ್ಗಗಳನ್ನು ಹೇಳಿದ ಆ ಯೋಗಶಕ್ತಿಯೇ ಮತ್ತೂ ೪ ವಿಶಿಷ್ಟ ಮಾರ್ಗಗಳನ್ನೂ ಹೇಳುತ್ತದೆ. ಅದನ್ನೇ ನಾರಾಯಣ ವಿಶ್ಲೇಷಣೆಯ ಭಾಗದಲ್ಲಿ ಪ್ರದ್ಯುಮ್ನ, ಅನಿರುದ್ಧ, ಸಂಕರ್ಷಣ, ವಾಸುದೇವ ಎಂದದ್ದು. ಅದರ ಮುಖೇನ ಸುಲಭವಾಗಿ, ಸರಳವಾಗಿ, ಯಾವುದೇ ಕಾಲದಲ್ಲೂ ಯಾವುದರ ಸಾಮೀಪ್ಯವನ್ನು ಅಥವಾ ಸಾರೂಪ್ಯವನ್ನು ಹೊಂದಬಹುದು.

 

ನೀವು ಕೋಳೂರ ಕೊಡಗೂಸು ಎಂಬ ಜಾನಪದ ಕಥೆಯನ್ನು ಕೇಳಿರಬಹುದು. ಅವಳು ಈಶ್ವರನಲ್ಲಿ ಸಾರೂಪ್ಯವನ್ನು (ಐಕ್ಯ) ಪಡೆದಳು. ಆದರೆ ಯಾವುದೇ ಸಾಧನೆಯಿಂದಲ್ಲ. ಅದಕ್ಕೆ ಸ್ವಾಭಾವಿಕವಾದ ೪ ಸೂತ್ರಗಳಿವೆ:

 

೧. ತಲ್ಲೀನತೆ

೨. ತಾದಾತ್ಮ್ಯತೆ

೩. ಭೌದ್ಧಿಕವಾಗಿ ಯಾವುದನ್ನೂ ಅತೀ ಶ್ರದ್ಧೆಯಿಂದ ನೋಡುವುದು.

೪. ತನ್ನ ಅಸ್ತಿತ್ವವನ್ನು ತ್ಯಾಗ ಮಾಡುವುದು.

 

ಈ ನಾಲ್ಕು ಸೂತ್ರಗಳೇ ಪ್ರದ್ಯುಮ್ನ, ಅನಿರುದ್ಧ, ಸಂಕರ್ಷಣ ಮತ್ತು ವಾಸುದೇವ. ತನ್ನ ಅಸ್ತಿತ್ವವನ್ನು ತ್ಯಾಗ ಮಾಡಿದಾಗಲೂ ಬಹಳ ಸುಲಭದಲ್ಲಿ ತನ್ನ ಇಚ್ಛಾ ಶಕ್ತಿಯೊಂದಿಗೆ ಸೇರಿಕೊಳ್ಳಲಿಕ್ಕೆ ಸಾಧ್ಯವಾಗುತ್ತದೆ.

 

ಪ್ರಶ್ನೆ:- ತುರೀಯಾವಸ್ಥೆಯ ಬಗ್ಗೆ ಏನು ಹೇಳುತ್ತೀರಿ?

 

ಅದನ್ನೇ ಜೀವನ್ಮುಕ್ತಿ ಎಂದು ಹೇಳಿತ್ತು. ಪ್ರಪಂಚದಲ್ಲಿರುತ್ತೇವೆ, ಆದಕ್ಕಾಗಿ ಸಮಾಜವು ದೈಹಿಕವಾಗಿ ಗುರುತಿಸುತ್ತದೆ. ಆತ್ಮಿಕವಾಗಿ ಸಮಾಜವು ಆತನನ್ನು ಗುರುತಿಸಲಾಗುವುದಿಲ್ಲ. ಆತನು ನಿರಂತರ ಆನಂದಲೋಕದಲ್ಲಿರುತ್ತಾನೆ. ಸಮಾಜವು ಹುಚ್ಚ ಎಂದು ಆತನನ್ನು ಬಿಂಬಿಸುತ್ತದೆ. ಹಾಗಾಗಿ ಆ ರೀತಿಯ ಅವಸ್ಥೆಯನ್ನೇ ತುರೀಯಾವಸ್ಥೆ, ಸಮಾಧಿಸ್ಥಿತಿ ಅಥವಾ ಅವಧೂತ ಸ್ಥಿತಿ ಎಂದೆಲ್ಲಾ ಹೇಳುತ್ತಾರೆ. ನಿಜವಾಗಿಯಾದರೆ ಆತ ಅಷ್ಟುಹೊತ್ತಿಗೆ ಸೇರಿಯಾಗಿರುತ್ತದೆ.  ಆ ದೇಹ ಓಡಾಡುತ್ತಿರುತ್ತದೆ, ಅದಕ್ಕೊಂದು ಸ್ಥಾನ ಕೊಡುತ್ತೀರಿ. ಯಾವ ಸ್ಥಾನವೂ ಸತ್ಯವಾಗಿರುವುದಿಲ್ಲ. ತುರೀಯಾವಸ್ಥೆಯನ್ನು ಪಡೆದಾಗ ಆತನು ಆತ್ಮಿಕವಾಗಿ ಆನಂದ ಲೋಕದಲ್ಲಿರುತ್ತಾನೆ. ಈಗ ಅವನು ಅವನಲ್ಲ. ಆದರೆ ನೀವು ಮಾತ್ರ ದೇಹಕ್ಕೆ ಪೂಜೆ ಮಾಡುತ್ತೀರಿ, ಪಾದಕ್ಕೆ ಪೂಜೆ ಮಾಡುತ್ತೀರಿ, ತಲೆಯ ಮೇಲೆ ಅಭಿಷೇಕ ಮಾಡುತ್ತೀರಿ, ಬಟ್ಟೆ ಹೊದಿಸುತ್ತೀರಿ, ಏನೆಲ್ಲ ಮಾಡುತ್ತೀರಿ. ಆದರೆ ಅದ್ಯಾವುದೂ ಅವರಿಗೆ ಸಂಬಂಧಪಡುವುದಿಲ್ಲ. ಅದನ್ನೇ ಆನಂದಲೋಕದಲ್ಲಿರುವುದು ಅಥವಾ ತುರೀಯಾವಸ್ಥೆ ಎನ್ನುತ್ತಾರೆ.

 

ಅವರಿಗೆ ಈ ಆನಂದಾವಸ್ಥೆಯು ಸುಗಂಧವಿದ್ದಂತೆ. ಅದನ್ನು ಬಿಟ್ಟು ದೈಹಿಕ ವ್ಯಾಪಾರವೆಂಬ ಪ್ರಾಪಂಚಿಕ ಆಚರಣೆಗಳು ಅವರಿಗೆ ದುರ್ಗಂಧವಿದ್ದಂತೆ. ಸತ್ಯದ ಆನಂದವನ್ನು ಕಂಡ ಅವರು ಅಸತ್ಯದ ಪ್ರಪಂಚಿಕ ವ್ಯಾಪಾರಕ್ಕೆ ಹಿಂತಿರುಗಿ ಬರಲು ಸಾಧ್ಯವೇ?

 

ಪ್ರಶ್ನೆ:- ಆತ್ಮವು ದೇಹದಿಂದ ಹೊರಗೆ ಹೋಗುವುದು, ಒಳಗೆ ಬರುವುದು ಎಂದರೇನು? ಆತ್ಮಕ್ಕೆ ಅಂತಹಾ ಚಲನೆಗೆ ಇರುವ ಆಹಾರವೇನು?

 

ಸಾಧಕರೆಂದು ಗುರುತಿಸಲ್ಪಡದಿದ್ದರೂ ಎಷ್ಟೋ ಜನರಿಗೆ ತಾವು ದೇಹ ಬಿಟ್ಟು ಹೊರ ಹೋಗಿ ಸುತ್ತು ಬಂದು ದೇಹ ಸೇರಿದ ಅನುಭವನು ಸ್ವಪ್ನಾವಸ್ಥೆಯಲ್ಲೋ, ಸುಷುಪ್ತಾವಸ್ಥೆಯಲ್ಲೋ ಆಗಿರುತ್ತದೆ. ದೇಹವನ್ನು ಒಂದು ಸ್ಥಿತಿಯಲ್ಲಿಟ್ಟು ಅದನ್ನು ಬಿಟ್ಟು ಹೊರ ಹೋಗಿ ಅದೇ ದೇಹವನ್ನು ನೋಡಿಕೊಳ್ಳುವಂತಹದ್ದು ಅಂತಹಾ ಮಹತ್ ಸಾಧನೆಯೇ ಅಲ್ಲ. ನಾವು ಯಾವಾಗ ತಾದಾತ್ಮ್ಯವನ್ನು ರೂಢಿಸಿಕೊಳ್ಳುತ್ತೇವೆಯೋ ಆಗ ಇದು ಕಷ್ಟವೇ ಅಲ್ಲ. ಯಾವುದೇ ವಿಚಾರದಲ್ಲಿ ಅತೀ ಶ್ರದ್ಧೆಯುಕ್ತವಾದಂತಹಾ ಬದ್ಧತೆಯನ್ನು ಸಾಧಿಸಿಕೊಳ್ಳಬೇಕು. ಅಷ್ಟರಲ್ಲೇ ನಾವು ನಮ್ಮ ದೇಹದಿಂದ ಹೊರಹೋಗಿ ನಮ್ಮನ್ನೂ ನೋಡಿಕೊಳ್ಳಬಹುದು, ಅಥವಾ ಯಾವುದನ್ನೂ ನೋಡಿಕೊಳ್ಳಬಹುದು. ಅದು ತುಂಬಾ ಸರಳವಾದಂತಹಾ ಸಾಧನೆಯ ಒಂದು ಭಾಗ.

 

ಚಲನೆ ಇರುವುದೇ ಆತ್ಮಕ್ಕೆ ಹೊರತು ದೇಹಕ್ಕಲ್ಲ. ಆತ್ಮವು ದೇಹದೊಳಗಿದ್ದಾಗ ದೇಹ ಓಡಾಡುತ್ತದೆಯಷ್ಟೆ. ದೇಹವು ಜಡ, ಆತ್ಮವು ಚರ.

 

ಪ್ರಶ್ನೆ:- ಹುಟ್ಟಿದಾಗಲೇ ಸಾವು ಬರೆದಿಟ್ಟಿರುತ್ತದೆ ಎನ್ನುತ್ತೀರಿ. ಹಾಗಿದ್ದರೆ ಯೋಗ ಸಾಧನೆಯಿಂದ ಪ್ರತಿಯೊಬ್ಬರೂ ತಮ್ಮ ಹಣೇಬರಹವನ್ನು ಬದಲಾಯಿಸಿಕೊಳ್ಳಲು ಸಾಧ್ಯವೇ?

 

ಹಣೆಯಲ್ಲಿ ಏನು ಬರೆದಿದ್ದ ಎಂದು ಗೊತ್ತಿಲ್ಲ. ಆದರೆ ರೋಗಬಂದು ಸಾಯುತ್ತಾನೆ ಎಂಬುದು ಬರೆದಿತ್ತೋ ಗೊತ್ತಿಲ್ಲ. ಆದರೆ ರೋಗವನ್ನು ಆಹ್ವಾನಿಸಿಕೊಳ್ಳುತ್ತಾರೆ. ಅದರಿಂದ ಸಾಯುತ್ತಾರೆ. ಆದರೆ ಹಾಗಾಗಬೇಕೆಂದಿಲ್ಲ. ಒಂದು ೫೦ ವರ್ಷಗಳವರೆಗೆ ಪ್ರಾಪಂಚಿಕ ಜೀವನ ಸಹಜ. ಅದರ ನಂತರದವಾದರೂ ಈ ಯೋಗಸಾಧನೆಯತ್ತ ಹೊರಟು ಇಚ್ಛಾಮರಣಿಗಳಾಗಿ. ರೋಗದಿಂದ ಸಾಯಬೇಡಿ ಎಂದು ಹೇಳುವ ಉದ್ದೇಶವಿಲ್ಲಿದೆ.

 

ಪ್ರಶ್ನೆ:- ಪ್ರಾಣಾಯಾಮ ಮಾಡಲಿಕ್ಕೆ ವಯೋಮಿತಿ ಇದೆಯೇ?

 

ಚಿಕ್ಕ ಮಗುವಿನಿಂದಲೂ ಆರಂಭಿಸಬಹುದು, ಆಕ್ಷೇಪವೇನೂ ಇಲ್ಲ.

 

ಪ್ರಶ್ನೆ:-  ಅಗ್ನೀಷೋಮೌ ಪಕ್ಷಾವೋಂಕಾರಃ, ಶಿರೋ ಬಿಂದುಸ್ತು ನೇತ್ರಂ, ಮುಖಂ ರುದ್ರೋ ರುದ್ರಾಣೀ,

ಚರಣೌ ಬಾಹೂ ಕಾಲಶ್ಚಾ,ಗ್ನಿಶ್ಚೋಭೇ ಪಾರ್ಶ್ವೇ ಭವತಃ, ಪಶ್ಯತ್ಯನಾಗಾರಶ್ಚ, ಶಿಷ್ಟೋಭಯಪಾರ್ಶ್ವೇ ಭವತಃ, ಏಷೋಽಸೌ ಪರಮಹಂಸೋ ಇತಿ ಎಂದರೇನು?

 

ಅದು ಪ್ರಾಕೃತ ಎಂಬ ವಿಧಿ. ಯಾವ್ಯಾವ ಅಂಗದಲ್ಲಿ ನ್ಯಾಸ ಹೇಗೇಗೆ ನ್ಯಾಸ ಮಾಡಿಕೊಳ್ಳಬೇಕು ಎಂದು ಹೇಳುವ ವಿಚಾರ. ಅದನ್ನು ಮಾಡಿಯೇ ತಿಳಿಯಬೇಕೇ ಹೊರತು ವಿವರಿಸಿ ಪೂರೈಸುವುದಿಲ್ಲ.

 

ಪ್ರಶ್ನೆ:- ಭ್ರೂಮಧ್ಯದಲ್ಲಿ ಒಂದು ಜಾಗವಿದೆ. ಅಲ್ಲಿ ಆಜ್ಞಾಚಕ್ರವಿದೆ ಎನ್ನುತ್ತಾರೆ, ಹೌದೇ?

 

ಹೇಳಬಹುದು; ಆದರೆ ಅವೆಲ್ಲಾ ಆಧಾರಗಳಲ್ಲ. ಪ್ರತಿಯೊಂದೂ ದೇಹವೂ ವ್ಯತ್ಯಾಸ ಹೊಂದಿರುತ್ತದೆ.

 

ಪ್ರಶ್ನೆ:- ಯೋಗಿಗಳ, ದೇವರ ಚಿತ್ರಪಟದಲ್ಲಿ ತಲೆಯ ಹಿಂದೆ ಬೇರೆ ಬೇರೆ ಬಣ್ಣದ ಪ್ರಭಾವಳಿ ತೋರಿಸುತ್ತಾರಲ್ಲಾ, ಕಾರಣವೇನು?

 

ಯೋಗಿಗೆ ಮಾತ್ರವಲ್ಲ ಅಥವಾ ದೇವರಿಗೆ ಮಾತ್ರವಲ್ಲ, ಪ್ರತಿಯೊಬ್ಬರಿಗೂ ಪ್ರಭಾವಲಯವಿರುತ್ತದೆ. ಅದೆಲ್ಲಾ ಅಲಂಕಾರಿಕವಷ್ಟೆ. ದೇವರ ವಿಗ್ರಹದಲ್ಲಿ ಇಲ್ಲದಿದ್ದರೂ ಕಡೇ ಪಕ್ಷ ಕಿತ್ತಾಳೆಯ ಪ್ರಭಾವಳಿಯನ್ನಾದರೂ ಇಟ್ಟಿರುತ್ತಾರೆ ಏಕೆಂದರೆ ದೇವರು ಪ್ರಭಾಯುಕ್ತನಾಗಿದ್ದಾನೆ ಎಂದು ತೋರಿಸಲು. ಪ್ರತಿಯೊಂದು ಜೀವಿಗೂ ಆ ಪ್ರಭಾವಲಯವಿದೆ. ಅಲಂಕಾರಿಕ ಬಣ್ಣಗಳಿಗೆಲ್ಲಾ ಅಂತಹಾ ಮಹತ್ವವಿಲ್ಲ.

 

ಪ್ರಶ್ನೆ:- ಮಾಂಸಾಹಾರಿಗಳು ಯೋಗಾಭ್ಯಾಸ ಮಾಡಬಹುದೇ? ಅದು ಪಾಪವೇ?

 

ಆಹಾರ ನಿರ್ಬಂಧವು ಯೋಗಶಾಸ್ತ್ರಕ್ಕೆ ಸಂಬಂಧಪಟ್ಟದ್ದಲ್ಲ. ಆರೋಗ್ಯಶಾಸ್ತ್ರಕ್ಕೆ ಸಂಬಂಧಪಟ್ಟದ್ದು. ಜೀವನಧರ್ಮವಿಧಾನಕ್ಕೆ ಹೇಳಿದ್ದು. ಯೋಗಶಾಸ್ತ್ರದಲ್ಲಿ ನೀವು ಮಾಂಸಾಹಾರಿಯೋ, ಸಸ್ಯಾಹಾರಿಯೋ ಎಂದು ಕೇಳುವುದೇ ಇಲ್ಲ. ಏನು ತಿನ್ನುತ್ತೀರಿ ಎಂಬುದರ ಪರಿವೆಯೇ ಯೋಗಕ್ಕಿರುವುದಿಲ್ಲ. ಆದರೆ ದೇಹಶಾಸ್ತ್ರ ರೀತ್ಯಾ ಮನುಷ್ಯನು ಮಾಂಸಾಹಾರವನ್ನು ತಿಂದರೆ ಜೀರ್ಣಿಸಿಕೊಳ್ಳುವುದಕ್ಕೇ ಆಗುವುದಿಲ್ಲ ಎಂಬುದು ಖಂಡಿತ. ಆದರೆ ಯಾವುದೇ ವಸ್ತುವಿಗೆ ಸಹಜವಾಗಿ ಕೊಳೆಯುವ ಶಕ್ತಿ ಇದೆ. ಅದು ಕರುಳಿನಲ್ಲಿ ಕೊಳೆತು ಸ್ವಾಭಾವಿಕವಾಗಿ ಮಲದಲ್ಲಿ ಹೊರಹೋಗುತ್ತದೆ. ಆದರೆ ಕೊಳೆತಿರುವುದನ್ನು ಕರುಳಿನಲ್ಲಿ ಇಟ್ಟುಕೊಂಡರೆ, ಅಂತಹವರನ್ನು ಧರ್ಮಶಾಸ್ತ್ರವು "ಪಿಶಾಚ" ಎನ್ನುತ್ತದೆ. ಪಿಶ್ = ಕೊಳೆತದ್ದು, ಆಚ್ = ತಿನ್ನುವುದು. ಹಾಗಾಗಿ ಆ ಜೀವನ ಬೇಡ.  ಜೀವಿಗಳೆಲ್ಲಾ ನಮ್ಮ ಸಹಚರರು. ಅವುಗಳೂ ಬದುಕಲಿ. ಅವುಗಳನ್ನು ತಿಂದು ನೀವು ಪಿಶಾಚರಾಗದಿರಿ. ದೇಹವನ್ನು ರೋಗದ ಗೂಡಾಗಿಸದಿರಿ. ನಿರಂತರ ಕೊಳೆಯುವ ಪ್ರಕ್ರಿಯೆಯು ಖಂಡಿತಾ ಕರುಳನ್ನು ಸುಡುತ್ತದೆ. ದೇಹದ ರಕ್ತಶುದ್ಧಿ ಮಾಡುವ ಪ್ರಕ್ರಿಯೆಯೂ ಕರುಳಿನಲ್ಲೇ ಇರುತ್ತದೆ. ಕೊಳೆಯುವುದರಿಂದ ಅಲ್ಲಿಯೂ ಶುದ್ಧ ರಕ್ತವು ದೇಹಕ್ಕೆ ಸಂಚಾರವಾಗದಂತೆ ಮಾಡುತ್ತದೆ. ಮಾಂಸಾಹಾರವನ್ನು ಜೀರ್ಣಿಸಿಕೊಳ್ಳುವ ರಸವು ಮನುಷ್ಯನಲ್ಲಿ ಇಲ್ಲದ್ದರಿಂದ ಮಾಂಸಾಹಾರ ನಿಷೇಧ. ಆದರೆ ಈ ಯೋಗಸಾಧನೆಯಲ್ಲಿ ಮಾತ್ರ ನೀವು ಏನು ತಿನ್ನುತ್ತೀರಿ ಬಿಡುತ್ತೀರಿ ಎಂಬುದರ ಪರಿವೆಯೇ ಇಲ್ಲ. ಸಾಧನೆಯೇ ಮುಖ್ಯ.

 

ಪ್ರಶ್ನೆ:- ಪ್ರಾಣಿಗಳನ್ನು ಕೊಂದು ತಿಂದರೆ ಪಾಪ ಬರುತ್ತದೆಯೇ?

 

ಅದನ್ನು ನೀವು ಕೊಂದು ತಿನ್ನಬೇಕೆನ್ನುವುದು ಅದರ ಮತ್ತು ನಿಮ್ಮ ಹಣೇಬರಹವಿರಬಹುದು. ಅದಕ್ಕೊಂದು ಗಾದೆಯೂ ಮಾಡಿಕೊಂಡಿದ್ದಾರೆ - ’ಕೊಂದ ಪಾಪ ತಿಂದು ಪರಿಹಾರ’. ಆದರೆ ಸತ್ಯವಲ್ಲ. ನಾವು ಕೊಂದು ತಿನ್ನುವ ಪ್ರವೃತ್ತಿಯೇ ಒಳ್ಳೆಯದಲ್ಲ. ಅದೂ ಒಂದು ಜೀವಿ, ನಮ್ಮಂತೆಯೇ ಬದುಕುತ್ತಿದೆ. ಸಾಧ್ಯವಾದರೆ  ಅದಕ್ಕೆ ಸಹಾಯ, ಸಹಕಾರ, ಆಹಾರ ಕೊಡಬಹುದು. ಸಾಧ್ಯವಿಲ್ಲದಿದ್ದರೆ ಅದರ ಆಹಾರ ಅದೇ ದುಡಿದುಕೊಳ್ಳಲಿ ಎಂದು ಬಿಡಬಹುದು. ಅವುಗಳಿಗೆ ಆಹಾರ ನೀಡಲೇಬೇಕೆಂಬ ಬದ್ಧತೆ ನಮಗಿಲ್ಲ. ಆದರೆ ಅದರ ಬದುಕನ್ನು ಕಸಿಯುವುದಕ್ಕೆ ನಮಗೆ ಅಧಿಕಾರವಿಲ್ಲ ಎನ್ನುವ ಕಾರಣಕ್ಕಾಗಿ ಮಾತ್ರ ಕೊಲ್ಲುವುದು ಅಪರಾಧ ಎನ್ನಿಸಿಕೊಳ್ಳುತ್ತದೆ. ಇಲ್ಲದಿದ್ದರೆ ಅಪರಾಧ ಎಂದಾಗುವುದಿಲ್ಲ. ಯಾವುದೇ ಜೀವಿಯನ್ನು ಕೊಂದರೂ ಪುನಃ ಅದನ್ನು ಜೀವಿಸುವಂತೆ ಮಾಡುವ ಶಕ್ತಿ ಆತನಲ್ಲಿದ್ದರೆ, ಕೊಲ್ಲುವುದು ಅಪರಾಧವಲ್ಲ. ಬದುಕುವ ಶಕ್ತಿಯೇ ಇಲ್ಲದೆ ಕೊಂದರೆ, ಅಲ್ಲಿ ಅಧಿಕಾರವೇ ಇಲ್ಲ ಎಂಬ ಕಾರಣಕ್ಕೆ ಅಪರಾಧ ಎನ್ನುತ್ತದೆ ನ್ಯಾಯಶಾಸ್ತ್ರ.

 

ಪ್ರಶ್ನೆ:- ಕೊಲ್ಲುವವನು ಬೇರೆ, ತಿನ್ನುವವನು ಬೇರೆ ಎಂದರೆ ಅವರ ಅಪರಾಧವು ಸಮಾನ ಭಾವವೆಂದಾಗುತ್ತದೆಯೇ?

 

ಅದು ಸಮಾನ ಭಾವವಲ್ಲ, ವ್ಯಾಪಾರೀ ಭಾವ ಎಂದಾಗುತ್ತದೆ!

 

ಪ್ರಶ್ನೆ:- ಷಟ್ಚಕ್ರಗಳ ಸ್ಥಾನ ನಿರ್ದೇಶನ ಮತ್ತು ಅನುಭವಗಳನ್ನು ಈ ಮಹಾವ್ರತ ಯಾಗದಲ್ಲಿ ನಮಗೆ ಕೊಡಿಸುವಿರೇ?

 

ಚಕ್ರಗಳ ಸ್ಥಳವನ್ನು ಸ್ಪಷ್ಟಪಡಿಸುವುದಿಲ್ಲ. ಈ ಸಾಧನೆಯಿಂದ ನೇರವಾಗಿ ಮೇಲಸ್ತರಕ್ಕೆ ತೆಗೆದುಕೊಂಡು ಹೋಗುತ್ತದೆ. ಹಾಗಾಗಿ ಪ್ರಕೃತ, ಪರ ಮತ್ತು ಪೂರ್ವ ಎನ್ನತಕ್ಕಂತಹಾ ಮೂರು ವಿಭಾಗಗಳಾಗಿ ಉಪನಿಷತ್ತುಗಳನ್ನು ವಿಭಾಗಿಸಿಕೊಳ್ಳುತ್ತದೆ. ಇವು ಈ ಯಾಗದಲ್ಲಿ ಇನ್ನೂ ೯-೧೦ ದಿನಗಳ ಕಾಲವಿರುತ್ತದೆ. ಅದರ ನಂತರ ಈ ಷಟ್ಚಕ್ರಗಳ ಸ್ಥಲಗಳನ್ನು ಹೇಳಿಕೊಂಡು ಬರುತ್ತದೆ. ಅಲ್ಲಿ ನಿಮಗೆ ಹೆಚ್ಚು ಸ್ಪಷ್ಟತೆ ಇದೆ. ಈಗ ಸ್ಥಳಗುಣ ಮತ್ತು ವಿಶೇಷಕ ಎಂದು ಹೇಳುವಂತಹದ್ದು ಕಾಮ್ಯ ಮತ್ತು ಭಾವ ಎನ್ನುವ ಭಾಗದಲ್ಲಿ ಮಾತ್ರ ವ್ಯವಹರಿಸಲ್ಪಡುತ್ತದೆ ಎಂದು ಉಪನಿಷತ್ತು ಹೇಳುತ್ತದೆ.

 

ಯಾವುದೋ ಒಂದು ಇಚ್ಛೆ ಇದ್ದು ನಡೆಸುವಂತಹಾ ಕಾಮ್ಯ ಭಾಗ ಒಂದು. ಕೇವಲ ಶ್ರದ್ಧಾ-ಭಕ್ತಿ ಭಾವದಿಂದ ಮಾಡತಕ್ಕಂತಹಾ ಇನ್ನೊಂದು ಭಾಗ. ಅಷ್ಟು ಮಾತ್ರ ವಿಭಾಗಿಸಿ ವಿವರಿಸಿಕೊಂಡು ಹೋಗುತ್ತದೆ. ಮುಂದಿನ ಭಾಗದಲ್ಲಿ ಷಟ್ಚಕ್ರ ಮಾತ್ರವಲ್ಲ ಅಷ್ಟಚಕ್ರಗಳನ್ನೂ ಹೇಳುತ್ತದೆ. ಆ ೮ ಚಕ್ರಗಳಲ್ಲಿರುವಂತಹಾ ಮಹತ್ವವೇನು? ನಿಮಗೇಕೆ ಅದು ಪರಿಚಯವಾಗುತ್ತಾ ಇಲ್ಲ? ಪರಿಚಯ ಮಾಡಿಕೊಳ್ಳುವ ವಿಧಾನ ಹೇಗೆ? ಇದನ್ನೆಲ್ಲಾ ಹೇಳುತ್ತದೆ.

 

ಪ್ರಶ್ನೆ:- ಅಮೃತಬಳ್ಳಿ ಸಸ್ಯದಲ್ಲಿ ಅಮೃತಗುಣವಿದೆ ಎನ್ನುತ್ತಾರೆ. ಹಾಗೆಯೇ ಈ ಯಾಗದಲ್ಲಿ ಬಳಸುವ ಸಸ್ಯಗಳಿಂದ ಸಿಗುವ ಫಲವೇನು?

 

ಯಾವುದೇ ಒಂದು ಮೂಲಿಕೆಯಲ್ಲಿ ಅಮೃತ ತುಂಬಲು ಸಾಧ್ಯವೂ ಇಲ್ಲ, ಅಂತಹಾ ಯಾವುದೇ ಒಂದು ಮೂಲಿಕೆಯು ಇಲ್ಲವೇ ಇಲ್ಲ! ಅಂತಹಾ ಕಲ್ಪನೆಗಳನ್ನು ನೀವು ನಂಬಲೇಬೇಡಿ. ಎಷ್ಟೋ ಜನ ಸಂಜೀವಿನಿ ಮೂಲಿಕೆಯನ್ನು ಹುಡುಕಿಕೊಂಡು ಹೋಗುತ್ತಿದ್ದಾರೆ. ಅದನ್ನೆಲ್ಲಾ ನಂಬಬೇಡಿ, ಸುಳ್ಳದು! ಆದರೆ ನಮಗೆ ಪುರಾಣಗಳಲ್ಲಿ ಸಿಗುವ ಉಲ್ಲೇಖವೇನೆಂದರೆ ಎಲ್ಲವನ್ನೂ ಸೇರಿಸಿ ಮಥನ ಮಾಡಿದರೆ ಅಲ್ಲಿ ಅಮೃತ ಸಿಗುತ್ತದೆ. ಪ್ರಪಂಚದ ಎಲ್ಲದರಲ್ಲೂ ಒಂದಂಶ ಒಳ್ಳೆಯದಿದೆ. ಅದನ್ನೆಲ್ಲಾ ಸೇರಿಸಿದಾಗ ಅಮೃತವೇ ಹೊರತು ಯಾವುದೇ ಒಂದು ಮೂಲಿಕೆಯು ಅಮೃತವಾಗುವುದಿಲ್ಲ. ಅಮೃತಬಳ್ಳಿಯು ಒಂದು ವಿಶಿಷ್ಟ ಮೂಲಿಕೆ. ಅದರಲ್ಲಿರುವ ಔಷಧೀಯ ಸಾರವು ಅಮೃತವೇ ಹೊರತು ನೇರವಾಗಿ ಸಸ್ಯವಲ್ಲ. ಆ ಸಾರವನ್ನು ತೆಗೆದು ಔಷಧವಾಗಿ ಬಳಸುವ ವಿಧಾನ ಹೇಳಿದೆ. ಆದರೆ ಅದು ಗೊತ್ತಿಲ್ಲದೆ ನೇರವಾಗಿ ಬಳಸಿದರೆ ಕೆಟ್ಟಕಹಿ. ನಮ್ಮಲ್ಲಿ ಅಂತಹಾ ಕಹಿಗೆ ಕಹಿವಿಷ ಎನ್ನುತ್ತಾರೆ. ಆದರೆ ಆ ಕಹಿಯನ್ನು ಪರಿವರ್ತಿಸಿ ಅದರಲ್ಲಿರತಕ್ಕಂತಹಾ ಮಧುವನ್ನು ತೆಗೆದು ಔಷಧವಾಗಿ ಬಳಸಿದರೆ ಆಗ ಅದು ಲೋಕಾರೂಢಿಯಲ್ಲಿ ಅಮೃತದಂತೆ ಪರಿಣಮಿಸುತ್ತದೆ.

 

ಪ್ರಶ್ನೆ:- ಈ ಪ್ರಾಣಾಯಾಮ ಮಾಡುವಾಗ ಚಿಕ್ಕವಯಸ್ಸಿನಲ್ಲೇ ಸಾಧನೆಯಾಗಿ ವಿರಕ್ತರಾದರೆ ಕುಟುಂಬಕ್ಕೆ ಸಮಸ್ಯೆಯಲ್ಲವೇ?

 

ಅದೀಗ ಸಮಸ್ಯೆಯಲ್ಲ. ಹಿಂದೆ ಕುಟುಂಬದಲ್ಲಿ ಒಂದು ವ್ಯವಸ್ಥೆ ಇರುತ್ತಿತ್ತು. ಒಂದು ಮಗು ಹುಟ್ಟುತ್ತದೆ. ಅದನ್ನು ರಾಜನಂತೆ ಪೋಷಿಸಿ, ಅದಕ್ಕೆ ವಿಧ್ಯಾಭ್ಯಾಸವನ್ನು ಕೊಟ್ಟು, ಅದು ಅರ್ಹತೆಯನ್ನು ಪಡೆದರೆ ಮಾತ್ರ ಗೃಹಸ್ಥಾಶ್ರಮಕ್ಕೆ ಬರಬೇಕಿತ್ತು. ಇಲ್ಲದಿದ್ದರೆ ಸ್ನಾತಕನಾಗಿ ದೇಶಾಟನೆಯಲ್ಲಿರುತ್ತಿದ್ದರು. ಈಗ ಮಾತ್ರ ಎಲ್ಲರೂ ಗೃಹಸ್ಥಾಶ್ರಮಕ್ಕೆ ಬರಬೇಕು ಎಂಬ ವ್ಯವಸ್ಥೆ ಬಂದಿದೆ. ಆದರೆ ಅದು ಸಹಜವಲ್ಲ, ಅಸಹಜ. ಹಾಗಾಗಿ ನಮ್ಮಲ್ಲಿ ಗೃಹಸ್ಥಾಶ್ರಮವು ತುಂಬಾ ಸೋಲುತ್ತಿದೆ. ಯಾವುದು ಯಶಸ್ವೀಯಾಗುತ್ತದೆ ಎಂಬುದನ್ನು ಕಂಡುಹಿಡಿಯುವುದಕ್ಕೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಎಲ್ಲರೂ ಗೃಹಸ್ಥಾಶ್ರಮಕ್ಕೆ ಬರುತ್ತಿದ್ದಾರೆ. ಅದನ್ನು ತುಲನೆ ಮಾಡಬೇಕಾದರೆ ಎಲ್ಲರೂ ಪ್ರಯತ್ನ ಮಾಡಲೇಬೇಕು. ಅಂದರೆ ಸಾಧನೆ ಮಾಡಬೇಕು, ಆಗ ಅವರಿಗೇ ಗೊತ್ತಾಗುತ್ತದೆ, ಆಗ ಅವರು ತಾವು ಮದುವೆಯಾಗುವುದೇ ಇಲ್ಲ ಎಂದರೆ ಯಾವುದೇ ಕಾರಣಕ್ಕೂ ಅದು ಆಕ್ಷೇಪಾರ್ಹವಲ್ಲ. ಸಾಧನೆ ಮಾಡದೇ ಇದ್ದರೆ ಹೇಗೆ ಗೊತ್ತಾಗುತ್ತದೆ? ಸಾಧನೆ ಮಾಡಿಯೇ ಗೊತ್ತಾಗಬೇಕು. ಅನಿವಾರ್ಯ ಪರಿಸ್ಥಿತಿ ಇದೆ. ಹಾಗಾಗಿ ಎಲ್ಲರೂ ಸಾಧನೆ ಮಾಡಿಕೊಳ್ಳಲಿ, ಯಾರೂ ಕಟ್ಟಿಕೊಂಡ ಸಂಸಾರ ಬಿಡುವ ಅಗತ್ಯವೂ ಇಲ್ಲ, ತೊಂದರೆಯೂ ಇಲ್ಲ. ನಮಗೇನೂ ಜನಸಮೃದ್ಧತೆಯ ಕೊರತೆಯೂ ಇಲ್ಲ. ಹಾಗಾಗಿ ಇದೆಲ್ಲಾ ಸಮಸ್ಯೆಗಳೇ ಅಲ್ಲ.

 

ಪ್ರಶ್ನೆ:- ೧೦ ಅಂಗುಲ ಮೇಲೆ ಎಂಟನೆಯ ಚಕ್ರವಿರುತ್ತದೆಯೇ?

 

ಈ ೯ ರೀತಿಯ ನಾದಾನುಸಂಧಾನ ಮಾಡಿದಾಗ ಹತ್ತಂಗುಲ ಮೇಲೇರಲಿಕ್ಕಾಗುತ್ತದೆ.

 

ಪ್ರಶ್ನೆ:- ಈ ಯಾಗದಲ್ಲಿ ನವಗ್ರಹ ವಿಗ್ರಹ ಪೂಜೆಗೆ ಮಹತ್ವವೇಕಿದೆ?

 

ಬದುಕಿಗೆ ಪ್ರಚೋದನೆ ಕೊಡುವುದು ನವಗ್ರಹಗಳು. ಪ್ರಕೃತಿಯು ಜಡ, ಇಲ್ಲಿ ಯಾವುದೋ ಒಂದು ಚೈತನ್ಯ ಉದ್ಭವವಾಗಬೇಕು (ಹುಟ್ಟಬೇಕು), ಎಂದು ಕಂಡು ಪ್ರಚೋದಿಸಿ ಕಾರ್ಯವೆಸಗುವಂತಹದ್ದು ಆಕಾಶದಲ್ಲಿರತಕ್ಕಂತಹಾ ಒಂದು ಪ್ರಚೋದನಾ ಕಿರಣ. ಅದು ಕುಜನೋ, ಗುರುವೋ, ಬುಧನೋ ಇತ್ಯಾದಿ ಯಾವುದೆಂದು ನಿರ್ಣಯವಿಲ್ಲ. ಆದರೆ ಆ ಕಿರಣದಿಂದ ಇಲ್ಲಿನ ಸೃಷ್ಟಿಯು ಪ್ರಚೋದನೆಗೊಳ್ಳುತ್ತದೆ. ಅದಕ್ಕೆ ಬೇಕಾದಷ್ಟು ಪೂರಕವಾಗಿ ಮಳೆಯನ್ನು ಆಕಾಶವೇ ಒದಗಿಸುತ್ತದೆಯೇ ಹೊರತು ಭೂಮಿಯಲ್ಲ. ಕಿರಣ ಪ್ರಚೋದನೆ ಮತ್ತು ಮಳೆಯ ನಂತರ ಭೂಮಿಯಲ್ಲಿ ಸೃಷ್ಟಿಯಾಗುತ್ತದೆ. ಅದು ಹುಲ್ಲು, ಮನುಷ್ಯ, ಪ್ರಾಣಿ, ಗಿಡ, ಯಾವುದೇ ಆಗಬಹುದು. ಮೂಲ ಪ್ರಚೋದನಾ ಗುಣದಂತೆ ಸೃಷ್ಟಿಯ ರೂಪ ಪಡೆಯುತ್ತದೆ. ಯಾವುದು ಮಳೆ ಎನ್ನತಕ್ಕಂತಹಾ ದ್ರವ್ಯ ಸಾರವನ್ನು ಪಡೆದುಕೊಂಡಿರುತ್ತದೆಯೋ ಅದರಿಂದ ವ್ಯವಹರಿಸುತ್ತದೆ. ಅದು ಸೃಷ್ಟಿಯ ರಹಸ್ಯ. ಒಂದು ಮನುಷ್ಯ, ಒಂದು ಆಕಾರ ಎಂದಾಕ್ಷಣ, ಅದೇ ಗುಣವಿರುವುದಿಲ್ಲ. ಬೇರೆ ಬೇರೆ ಗುಣಗಳಿರುತ್ತದೆ. ಆಕಾರದಲ್ಲಿ ಮನುಷ್ಯರಾಗಿದ್ದರೂ ಮಾನವೀಯ ಗುಣವಿಲ್ಲದೆ ಬೇರೆಬೇರೆ ಗುಣಗಳಿರುತ್ತವೆ ಏಕೆಂದರೆ ಆ ಮಳೆ ಎನ್ನತಕ್ಕಂತಹಾ ಪೂರಕ ರಸಾಂಗಳು ಹೇಗೆ ಕೆಲಸ ಮಾಡಿತು ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ಅದರಿಂದಾಗಿ ಉತ್ಪನ್ನವಾಗುವಂತಹಾ ರೂಪಗಳಿಗೆ ರೂಪ ಒಂದೇ ಆಗಿದ್ದರೂ ಗುಣವ್ಯತ್ಯಯವಿರುತ್ತದೆ. ಹಾಗಾಗಿ ಭಿನ್ನ ಪ್ರಪಂಚ. ಸುಮಾರು ೭೦೦ ಕೋಟಿ ಜನಸಂಖ್ಯೆ ಈಗ ಈ ಪ್ರಪಂಚದಲ್ಲಿದೆ. ಆದರೆ ಯಾರೊಬ್ಬರಿಗೂ ಇನ್ನೊಬ್ಬರಂತೆ ಗುಣವಿಲ್ಲ. ಪ್ರತಿಯೊಬ್ಬರೂ ಭಿನ್ನವೇ! ಆ ಭಿನ್ನತೆಯನ್ನು ಹುಟ್ಟಿಸುವುದು ಯಾವುದು? ಆ ಒಂಭತ್ತರ ಸಂಖ್ಯಾ ಅನುಪಾತದಿಂದ ಹುಟ್ಟತಕ್ಕಂತಹಾ ಬೇರೆ ಬೇರೆ ಭಾಗಗಳು.

 

ವಿಷ್ಣುವಿಗೆ ೪ ಆಯುಧಗಳಿಂದ ೨೪ ಸ್ವರೂಪಗಳು ಬಂದರೆ, ಶಿವನಿಗೆ ೬ ಆಯುಧಗಳಿಂದ ಮೂಲದಲ್ಲಿ ೭೨೦, ನಂತರ ಕೆಲ ವಿಶೇಷ ವಿಭಾಗಗಳು ಸೇರುತ್ತಾ ಒಟ್ಟು ೧೩೮೨ ಸ್ವರೂಪಗಳು ಬರುತ್ತವೆ. ಅದೇ ರೀತಿ ೯ ಗ್ರಹಗಳು ೯ ವಿಧದಲ್ಲಿ ೯ ಹೋರೆಗಳೊಂದಿಗೆ ವ್ಯವಹರಿಸುವುದರಿಂದ ಎಷ್ಟು ಕೋಟಿಯಾಗಬಹುದೆಂದು ಲೆಕ್ಕ ಹಾಕುತ್ತಾ ಕುಳಿತುಕೊಳ್ಳಿ. ಯಾಗ ಮುಗಿಯುವ ವೇಳೆಗೆ ಪೂರ್ಣಾಹುತಿಗಾದರೂ ಬನ್ನಿ.

 

ಪ್ರಶ್ನೆ:- ಪ್ರಾಣಾಯಾಮ ಸರಿಯಾಗಿ ಮಾಡದಿದ್ದರೆ ಆರೋಗ್ಯ ಸಮಸ್ಯೆ ಬರುತ್ತದೆ ಎಂದು ಕೆಲ ಯೋಗಶಾಲೆಗಳಲ್ಲಿ ಹೇಳುತ್ತಾರೆ. ಈ ಹಂಸೋಪನಿಷತ್ತಿನ ಪ್ರಾಣಾಯಾಮವನ್ನು ಎಲ್ಲರೂ ನಿರಪಾಯವೆಂದು ನಂಬಿ ಮಾಡಬಹುದೇ?

 

ಪ್ರಾಣಾಯಾಮವೆಂದರೆ ಮುಖ್ಯವಾಗಿ ಉಸಿರಾಟ. ಹಾಗಾಗಿ ಪ್ರಾಣಾಯಾಮ ಮಾಡದೇ ಇದ್ದರೆ ಖಂಡಿತವಾಗಿ ಮನುಷ್ಯ ಬದುಕುವುದಿಲ್ಲ. ಪ್ರಾಣಾಯಾಮ ಮಾಡಿದರೆ ಸಮಸ್ಯೆ ಬರುತ್ತದೆ ಎಂಬುದು ಸುಳ್ಳು. ಮತ್ತೆ ಅವರವರ ಪ್ರಾರಬ್ಧವೇ ಕಾರಣ. ಪ್ರಾರಬ್ಧಕ್ಕೆ ಪ್ರಾಣಾಯಾಮವನ್ನು ಏಕೆ ಆರೋಪಿಸುತ್ತೀರಿ?

 

ಎಲ್ಲಾ ಜೀವಿಗಳು, ಕಾಳು-ಬೇಳೆಗಳು, ಹುಲ್ಲು-ಕಡ್ದಿಗಳು, ಗಿಡ-ಮರಗಳೂ ಉಸಿರಾಡುತ್ತವೆ. ಅವೆಲ್ಲಾ ಪಾಶವೀ ವೃತ್ತಿಯ ಉಸಿರಾಟ. ಸ್ವಾಭಾವಿಕ ಉಸಿರಾಟವನ್ನು ಮಾಡುವುದು ಪಾಶವೀಗಿಂತ ಸ್ವಲ್ಪ ಮೇಲಿನ ಅಂದರೆ ಮಾನುಷೀ ಉಸಿರಾಟ ಮಾಡಿ ಎಂದು ಹೇಳುತ್ತದೆ. ಅದಕ್ಕಿಂತ ಹೆಚ್ಚಿನದ್ದೇನೂ ಮಾಡಲು ಹೇಳಿಲ್ಲ. ಅದರಿಂದ ಯಾವುದೇ ಆಪತ್ತು ಖಂಡಿತಾ ಇಲ್ಲ.

 

ಮಾನುಷೀ ಉಸಿರಾಟವೆಂದರೆ ಅದಕ್ಕೆ ತಕ್ಕಂತೆ ವ್ಯಕ್ತಿಯ ಪ್ರವರ್ತನೆ ಇರಬೇಕು. ಜೀವನದಲ್ಲಿ ಪ್ರಪಂಚದಿಂದ ಪಡೆದು ಬದುಕುತ್ತಿದ್ದೇನೆ, ಅದಕ್ಕೆ ಏನಾದರೂ ಹಿಂದಿರುಗಿಸಬೇಕು. ಇಂತಹಾ ಚಿಂತನೆಗಳೆಲ್ಲಾ ಪ್ರಾಣಾಯಾಮವೇ. ನಿರಂತರ ತ್ಯಾಗ ಪ್ರವೃತ್ತಿಯಿಂದ ಮಾಡತಕ್ಕಂತಹಾ ಕೆಲಸಗಳೆಲ್ಲಾ ಪ್ರಾಣಾಯಾಮವೇ. ಅದು ಬಿಟ್ಟು ಹದ್ದಿನಂತೆ ಕಿತ್ತು ತಿನ್ನುವ ಪ್ರವೃತ್ತಿಯು ಆಸುರೀ ಪ್ರಾಣಾಯಾಮ.

 

ಪ್ರಶ್ನೆ:- ಹುಲಿಯೊಂದು ಕ್ರೂರ ಪ್ರಾಣಿ. ಅದರ ಮೇಲೆ ಸಂನ್ಯಾಸಿಗಳು ಕುಳಿತರೆ ವ್ಯಘ್ರರಾಗುವುದಿಲ್ಲವೇ? ಹಸು ಸಾಧು ಪ್ರಾಣಿಯಲ್ಲವೇ? ಅದರ ಚರ್ಮವೇಕೆ ಬಳಸುವುದಿಲ್ಲ.

 

ಈ ಪ್ರಪಂಚದ ಸತ್ಯವೆಂದರೆ ಅದು. ಒಬ್ಬ ಸಂನ್ಯಾಸಿಯಾಗಬೇಕಾದರೆ ತುಂಬಾ ಕಷ್ಟವಿದೆ. ಸಂಮ್ಯಗ್ ಜ್ಞಾನವನ್ನು ಪಡೆಯುವ ಉದ್ದೇಶದಿಂದ ಅವನು ದೀಕ್ಷಾ ಬದ್ಧನಾಗಬೇಕಾದರೆ ಏನೇನನ್ನು ತ್ಯಜಿಸಬೇಕು ಲೆಕ್ಕ ಹಾಕಿ. ಅವನ್ನೆಲ್ಲಾ ಅಷ್ಟೇ ಕ್ರೂರವಾಗಿ ದೂರ ಮಾಡಿಕೊಳ್ಳಬೇಕು. ಯಾವುದರ ಮೇಲೂ ಮಮತೆ ಇಡಬಾರದು. ಯಾವುದರ ಮೇಲೂ ಆಸೆ ಇಟ್ಟುಕೊಳ್ಳಬಾರದು. ಎಲ್ಲವನ್ನೂ ತ್ಯಾಗ ಮಾಡಿಕೊಳ್ಳಬೇಕು. ಆ ರೀತಿ ಬದುಕಬೇಕೆಂದರೆ ಅಷ್ಟೇ ಕ್ರೂರತೆ ಬೇಕು. ಉದಾಹರಣೆಗೆ ಒಬ್ಬರ ಮಗನು ಕುಟುಂಬ ಬಿಟ್ಟು ಎಷ್ಟೋ ವರ್ಷ ದೂರ ಹೋದರೆ ಅಪರಾಧಿ ಎನ್ನುತ್ತೀರಿ. ಅದೇ ಮಗನು ಸಂನ್ಯಾಸಿಯಾದರೆ? ಅಷ್ಟೇ ಕ್ರೂರದಿಂದ ಅಪರಾಧಿಯಾಗದಂತೆ ಸಂನ್ಯಾಸಿಯಾಗಬೇಕು.  ಇಲ್ಲಿ ಮಾತೃವತ್, ಪಿತೃವತ್ ಬಂಧಕ್ಕೆ ಸಿಗದೆ ತ್ಯಾಗ ಮಾಡಿ ಹೋಗಬೇಕಾದರೆ ಅಷ್ಟೇ ಕ್ರೂರವಾದ ಅಂದರೆ ಕಠಿಣವಾದ ತ್ಯಾಗ ಬೇಕು. ಹಾಗಾಗಿ ಯಾಗ ಸಂದರ್ಭದಲ್ಲಿ ಬರುವ ಸಂನ್ಯಾಸಿಗಳಿಗೆ ವ್ಯಾಘ್ರ ಚರ್ಮದ ಆಸನ ಏಕೆ ನೀಡುವುದೆಂದರೆ ಅವರು ಸಮಾಜವನ್ನು ಕ್ರೂರವಾಗಿ ತ್ಯಜಿಸಿರುತ್ತಾರೆ, ಆದರೆ ಸಮಾಜದಿಂದ ಬೆಳೆದಿರುವ ಕಾರಣ ಸಮಾಜಕ್ಕೆ ಹಿಂತಿರುಗಿಸುವ ಬಾಧ್ಯತೆ ಇದೆ ಎಂದು ಬೋಧಿಸುವುದಕ್ಕಾಗಿ ವ್ಯಾಘ್ರಚರ್ಮಾಸನ ನೀಡುವುದು. ಅದೇ ದನದಲ್ಲಿ ಕ್ರೂರ ಪ್ರವೃತ್ತಿ ಇಲ್ಲ. ಅದು ಇಲ್ಲಿ ಬಳಸುವುದಲ್ಲ. ಬಾಳೇ ಎಲೆಯಲ್ಲಿ ಊಟ ಮಾಡಬೇಕು, ಅದು ಬಿಟ್ಟು ಕೆಸುವಿನ ಎಲೆಯು ದೊಡ್ಡದಿದೆ ಎಂದು ಅದರಲ್ಲಿ ಊಟ ಮಾಡುವುದಲ್ಲ. ಯಾವ್ಯಾವುದನ್ನು ಹೇಗೇಗೆ ಬಳಸಬೇಕು ಎಂಬ ನಿಯಮಗಳಿವೆಯೋ ಅದರಂತೆಯೇ ಬಳಸಬೇಕು. ಮನಸೋ ಇಚ್ಛೆ ಬಳಸಲು ಬರುವುದಿಲ್ಲ.

🗣️ವೇದಕೃಷಿಕ ಕೆ.ಎಸ್. ನಿತ್ಯಾನಂದರು

ವೇದ ವಿಜ್ಞಾನ ಮಂದಿರ

ಚಿಕ್ಕಮಗಳೂರು

 

✍️ ಹೇಮಂತ್ ಕುಮಾರ್ ಜಿ

ಅಭಿಯಂತರು