Thursday, 6 October 2022

ರಾವಣ ಜಿಜ್ಞಾಸೆಮಂಡೋರವನ್ನು ರಾವಣನ ಪತ್ನಿ ಮಂಡೋದರಿಯ ಸ್ಥಳವೆಂದು ಪರಿಗಣಿಸಿ ರಾವಣ ಭಕ್ತರು ಇಬ್ಬರನ್ನೂ ಪೂಜಿಸಲು ಆರಂಭಿಸಿದ್ದಾರೆ. ಮಂದಸೌರ್‌ನ ಕೆಲವರು ತಮ್ಮನ್ನು ಮಂಡೋದರಿಯ ವಂಶಸ್ಥರು ಎಂದು ಹೇಳಿಕೊಳ್ಳುತ್ತಿದ್ದಾರೆ. ಕೌಶಲ್ಯ, ಸುಮಿತ್ರ, ಭರತ ಮೊದಲಾದವರ ಭಕ್ತರಾರೂ ಇಲ್ಲ. ಮಂಡೂರ ಎಂದರೆ ಕಬ್ಬಿಣ, ಅದಕ್ಕೂ ಮಂಡೋದರಿಗೂ ಸಂಬಂಧವಿಲ್ಲ. ಮಂಡೋದರಿಯು ಮಯ ದಾನವನ ಮಗಳು. ಮಾಯಾ ರಾಕ್ಷಸ ಜನಾಂಗದ ಪ್ರದೇಶವು ಮೆಕ್ಸಿಕೋ ಆಗಿತ್ತು, ಇದನ್ನು ಆಂಗ್ಲದಲ್ಲಿ ಮಾಯಾ ನಾಗರಿಕತೆಯಾಗಿ ಪರಿವರ್ತಿಸಲಾಗಿದೆ. ಪೂರ್ವ ಆಫ್ರಿಕಾದ ಸುಮಾಲಿಯಾ ಮತ್ತು ಪಶ್ಚಿಮ ಆಫ್ರಿಕಾದ ಮಾಲಿ ದೇಶಗಳಿಗೆ ರಾವಣನ ತಾಯಿಯ ಕಡೆಯ ಅಜ್ಜರಾದ ಮಾಲಿ-ಸುಮಾಲಿಯರ ಹೆಸರನ್ನು ಇಡಲಾಗಿದೆ. ಈ ಕಥೆಗಳನ್ನು ರಾವಣನ ಮೂಢ ಭಕ್ತರು ಹರಡಿದ್ದಾರೆ. ಹಿಂದೂ ಧರ್ಮದ ಎಲ್ಲ ನಂಬಿಕೆಗಳನ್ನು ವಿರೋಧಿಸಬೇಕಾದ ಕಾರಣ ರಾವಣ ಭಕ್ತಿ ಹೆಚ್ಚಾಗುತ್ತಿದೆ. ವರ್ಣಾಶ್ರಮ ಧರ್ಮವನ್ನು ವಿರೋಧಿಸಲು ಜಾತಿರಹಿತ ಸಮಾಜವನ್ನು ಕಲ್ಪಿಸಲಾಗಿದೆ, ಇದು ಇಲ್ಲಿಯವರೆಗೆ ಜಗತ್ತಿನಲ್ಲಿ ಎಲ್ಲಿಯೂ ಸಂಭವಿಸಿಲ್ಲ. ವಿಗ್ರಹಾರಾಧನೆಯ ವಿರೋಧವೂ ಭಕ್ತಿಯನ್ನು ಕೊನೆಗಾಣಿಸಲು ನಡೆದದ್ದು. ಅಹಿಂಸೆ, ಕಳ್ಳತನ ಮಾಡದಿರುವುದು ಮುಂತಾದವುಗಳನ್ನು ಆದರ್ಶವೆಂದು ಹೇಳಿರುವುದರಿಂದ ರಾವಣನ ಭಕ್ತಿಯ ಹೆಸರಿನಲ್ಲಿ ದರೋಡೆಕೋರ ಮತ್ತು ಸ್ತ್ರೀಯರ ಅಪಹರಣವನ್ನು ಸಮರ್ಥಿಸುವ ಹುನ್ನಾರವಿದೆ. ರಾಮಾಯಣದಲ್ಲಿ ಎಲ್ಲಿಯೂ ರಾವಣನಿಂದ ವೇದಗಳನ್ನು ಓದಿದ ಉಲ್ಲೇಖವಿಲ್ಲ ಎನ್ನುತ್ತಾರೆ ವಿದ್ವಾಂಸರು. ಓದಿದ್ದರೂ ದುರಾಚಾರವಿದ್ದಲ್ಲಿ ವೇದಾಜ್ಞಾನ ಉಪಯೋಗಕ್ಕೆ ಬರುವುದಿಲ್ಲ. ರಾವಣನು ವಿಶ್ವ ವಿಜೇತನಾಗಿದ್ದರೆ, ಜಗತ್ತಿನಲ್ಲಿ ಎಲ್ಲೋ ಅವನ ಜೀವನ ಚರಿತೆ ರಾರಾಜಿಸುತ್ತಿತ್ತು. ರಾಮನು ವಸಿಷ್ಠರಲ್ಲಿ ವೇದಗಳನ್ನು ಓದಿದ ವರ್ಣನೆ ಇದೆ. ಅವರು ವೇದಗಳನ್ನು ಓದಿದ್ದ ಕಾರಣ ನಾಲ್ಕು ವೇದಗಳ ಪಂಡಿತರಿಂದ ಮಾತ್ರ ಅಂತಹ ಕೆಲಸವನ್ನು ಮಾಡಲು ಸಾಧ್ಯ ಎಂದು ಹನುಮಂತನನ್ನು ಗುರುತಿಸಿದರು. ರಾವಣನೂ ವೇದಗಳನ್ನು ಓದಿದ್ದರೆ ಅಥವಾ ವೇದದ ಆಶಯದಂತೆ ಸನ್ನಡತೆ ಇದ್ದಿದ್ದರೆ ಹನುಮಂತನ ವೇದಗಳ ಜ್ಞಾನದ ಅರಿವಾಗುತ್ತಿತ್ತು. ಅಹಂಕಾರವಶಾತ್ ಅಜ್ಞಾನದಿಂದಾಗಿ ಶತ್ರುವಿನ ಸಾಮರ್ಥ್ಯವನ್ನು ಕಡಿಮೆ ಎಂದು ಪರಿಗಣಿಸಿಯೇ ಸೋತು ಸತ್ತ. ಅವನು ವಿಮಾನವನ್ನೂ ತಯಾರಿಸಲಿಲ್ಲ, ಪುಷ್ಪಕ ವಿಮಾನವನ್ನು ಕುಬೇರನಿಂದ ವಂಚನೆಯಿಂದ ಕಸಿದುಕೊಂಡ. ರಾವಣನು ತಂತ್ರವನ್ನು ಅಭ್ಯಾಸ ಮಾಡಿದ್ದನು ಹಾಗೂ ಮಾಯಾ ಯುದ್ಧದ ಮೂಲಕ ದೇವತೆಗಳೊಂದಿಗೆ ಹೋರಾಡುವ ಶಕ್ತಿಯನ್ನು ಪಡೆದನು. ರಾಮನು ವಿಶ್ವಾಮಿತ್ರ, ಭಾರದ್ವಾಜ ಮತ್ತು ಅಗಸ್ತ್ಯರಿಂದ ಹೆಚ್ಚು ಸುಧಾರಿತ ದಿವ್ಯಾಸ್ತ್ರಗಳನ್ನು ಹೊಂದಿದ್ದನು, ಅದಕ್ಕೆ ರಾವಣನ ಬಳಿ ಉತ್ತರವಿರಲಿಲ್ಲ. ರಾಮದಳವು ಸಮುದ್ರದ ಮೇಲೆ ಸೇತುವೆಯನ್ನು ನಿರ್ಮಿಸುವ ಕೌಶಲ್ಯವನ್ನು ಹೊಂದಿತ್ತು. ಅಂತಹ ಸೇತುವೆಯನ್ನು ನಿರ್ಮಿಸಬಹುದು ಎಂದು ರಾವಣನಿಗೆ ನಂಬಲಾಗಲಿಲ್ಲ. ರಾಮೇಶ್ವರದಲ್ಲಿ ಶಿವಪೂಜೆಗೆ ರಾವಣನನ್ನು ಅರ್ಚಕನನ್ನಾಗಿ ಮಾಡಲಾಗಿದೆ ಎಂದು ರಾವಣನ ಹಿರಿಮೆಯ ಮತ್ತೊಂದು ಸುಳ್ಳು ಕಥೆಯನ್ನು ಸೃಷ್ಟಿಸಲಾಗಿದೆ. ಆದರೆ ಶುಕ ಮತ್ತು ಸಾರಣರನ್ನು ಬೇಹುಗಾರಿಕೆಗೆ ಕಳುಹಿಸಿದ ನಂತರವೂ ಅವನಿಗೆ ಸೇತುವೆ ಅಥವಾ ರಾಮನ ಸೈನ್ಯದ ಬಗ್ಗೆ ತಿಳಿದಿರಲಿಲ್ಲ. ಶುಕ ಮತ್ತು ಸಾರಣರು ರಾಮನ ಸೈನ್ಯವನ್ನು ನೋಡಿ ಹುಚ್ಚರಾದರು ಮತ್ತು ಸೈನಿಕರ ಸಂಖ್ಯೆಯನ್ನು 10 ರ ಘಾತ 65 ಎಂದು ಹೇಳಿದರು, ಇದರಿಂದಾಗಿ ರಾವಣ ಅವರನ್ನು ಬೈದು ಓಡಿಸಿದನು. ಇಡೀ ಸೌರವ್ಯೂಹದ ಪರಿಮಾಣವು ಎಲೆಕ್ಟ್ರಾನ್ ಘಟಕದಲ್ಲಿ ಕೇವಲ 10 ರ ಘಾತ 60 ರಷ್ಟಿದೆ. ಮಾನವರ ಸರಾಸರಿ ತೂಕವು 60 ಕೆಜಿ ಆಗಿದ್ದರೆ, 10 ರ ಘಾತ 65 ಎಣಿಕೆಯ ಮಾನವರ ತೂಕವು ಇಡೀ ಗ್ಯಾಲಕ್ಸಿಯ (ಬ್ರಹ್ಮಾಂಡ) ಕೋಟಿ ಪಟ್ಟಾಗುತ್ತದೆ. ರಾವಣನ ಏಕೈಕ ವಿಶೇಷತೆಯೆಂದರೆ ಮೋಸ ಮತ್ತು ತಂತ್ರ. ಅವನ ತಂತ್ರವು ಉಡ್ಡೀಶ ತಂತ್ರ ಎಂದು ವಿಭೀಷಣನಿಂದ ಪ್ರಚಾರ ಮಾಡಲಾಯಿತು. ರಾವಣನೆಂಬವನಿಂದ ಋಗ್ವೇದದ ಒಂದು ಅಪ್ರಕಟಿತ ನಿರುಕ್ತ ಮತ್ತು ಭಾಷ್ಯವಿದೆ ಎನ್ನುತ್ತಾರೆ, ಆದರೆ ಇದು ಲಂಕಾಪತಿಯಾದ ರಾವಣನದ್ದಲ್ಲ ಎಂಬ ಅಭಿಪ್ರಾಯವೂ ಇದೆ.

ರಾವಣ ನಾಗರೀಕತೆಯನ್ನು ದಕ್ಷಿಣ ಭಾರತದಲ್ಲಿ ಅದರಲ್ಲೂ ತಮಿಳು ಜನರಲ್ಲಿ ಸಾಕಷ್ಟು ಪ್ರಚಾರ ಮಾಡಲಾಗುತ್ತಿದೆ. ಅಲ್ಲಿನ ವಿದ್ಯಾವಂತರ ಮೂರ್ಖತನದ ಬಗ್ಗೆ ಬಿ.ಜಿ.ಎಲ್ ಸ್ವಾಮಿಯವರ ತಮಿಳು ತಲೆಗಳ ನಡುವೆ ಎಂಬ ಪುಸ್ತಕದಲ್ಲಿ ಚೆನ್ನಾಗಿ ತಿಳಿಸಿದ್ದಾರೆ. ಹಾಗಾಗಿ ಅಲ್ಲಿನ ಹಲವು ವಿದ್ವಾಂಸರಿಗೆ ನಿಜವಾದ ತಮಿಳು ಸಂಸ್ಕೃತಿಯ ಬಗ್ಗೆ ಏನೂ ತಿಳಿದಿಲ್ಲ ಎಂದು ಹೇಳಬೇಕಾಗಿದೆ. ರಾವಣನು ಶಿಕ್ಷಿಸಬೇಕಾದ ಅಪರಾಧವನ್ನು ಮಾಡಿದ್ದಾನೆ. ದಕ್ಷಿಣ ಭಾರತದಲ್ಲಿ ರಾವ್ ಎಂಬುದು ಉತ್ತರ ಭಾರತದಲ್ಲಿ ರಾವಲ್ ಅಥವಾ ಭೋಜ್‌ಪುರಿಯಲ್ಲಿ ಇರಿಸಲಾಗಿರುವ ರವಾ ಗೌರವಾರ್ಥ ಪದವಾಗಿದೆ. ಯಾರಲ್ಲಿ ಯಜ್ಞ ರೂಪೀ ಋಷಭವು (ವೃಷಭ) ರವ ಮಾಡುತ್ತಿರುತ್ತದೋ ಅವರು ರಾವ್ ಅಥವಾ ರಾವ ಮತ್ತು ಮಹಾದೇವನಂತಿದ್ದಾರೆ ಎಂಬರ್ಥ.

ತ್ರಿಧಾ ಬದ್ಧೋ ವೃಷಭೋ ರೋರವೀತಿ ಮಹೋದೇವೋ ಮರ್ತ್ಯಾಂ ಆವಿವೇಶ (ಋ. 4.58.3).

ತಮಿಳಿನಲ್ಲಿ, ರಾಮ ರಾಮನ್, ಕೃಷ್ಣ ಕೃಷ್ಣನ್ ಇತ್ಯಾದಿ ಆದಂತೆ ರಾವ ರಾವಣನಾಗುತ್ತಾನೆ. ಆದರೆ ತಮಿಳುನಾಡಿನ ರಾಮೇಶ್ವರಂನಿಂದ ರಾವಣನ ಮೇಲೆ ದಾಳಿ ನಡೆದಿದ್ದರಿಂದ ಅಲ್ಲಿಗೆ ರಾವ್(ವ) ಎಂಬ ಪದದ ಬಳಕೆ ನಿಂತಿತು. ಎಲ್ಲಾ ಇತರ ದಕ್ಷಿಣ ಭಾರತದ ಭಾಷೆಗಳು ರಾವ ಇದೆ, ತಮಿಳನ್ನು ಮಾತ್ರ ಅನ್-ರವಾ ಭಾಷೆ ಎಂದು ಕರೆಯಲಾಗುತ್ತದೆ. ಆದ್ದರಿಂದ, ರಾವಣ ನಾಗರಿಕತೆಯಲ್ಲ, ರಾವಣ ವಿರೋಧಿ ನಾಗರಿಕತೆ ಇದೆ. ಕ್ರಿಶ್ಚಿಯನ್ ಶಿಕ್ಷಣದ ಮೂಲಕ ರಾವಣನ ಭಕ್ತಿಯನ್ನು ಪ್ರಚಾರ ಮಾಡಿದವರ ಹೆಸರುಗಳು ರಾಮಸ್ವಾಮಿ ನಾಯ್ಕರ್, ಎಂ.ಜಿ ರಾಮಚಂದ್ರನ್, ಶೃಂಗೇರಿ ವಿದ್ಯಾಪೀಠದ ಪ್ರಾಂಶುಪಾಲರಾದ ರಾಮಾನುಜ ದೇವನಾಥನ್ (ಅವರ ಪ್ರಕಾರ ಕುಂಭಕರ್ಣ ಅಸುರನಾಥನ್ ಎಂಬುದು ಸರಿಯಾದ ಹೆಸರಂತೆ), ಜಯರಾಮ ರಮೇಶ್ (ಜಯರಾವಣ ಮಹೇಶ್) ಇತ್ಯಾದಿ.

ರಾವಣನ ರಾಜ್ಯ ದೊಡ್ಡದಾಗಿತ್ತು. ಆದರೆ ವಿಶ್ವವಿಜಯಿ ಅಥವಾ ಅಜೇಯನಾಗಿರಲಿಲ್ಲ. ಅವನು ಅಯೋಧ್ಯೆ, ಮಾಹಿಷ್ಮತಿ ಅಥವಾ ಕಿಷ್ಕಿಂಧೆಯನ್ನು ನೇರ ಯುದ್ಧದಲ್ಲಿ ಸೋಲಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಇಂದಿನ ದಿನಗಳಲ್ಲಿ ಪಾಕಿಸ್ತಾನ ಮಾಡುವಂತೆ ವಿಶ್ವಾಮಿತ್ರರ ಆಶ್ರಮಕ್ಕೆ, ಬಕ್ಸರ್, ದಂಡಕಾರಣ್ಯ, ಪಂಚವಟಿ ಮುಂತಾದೆಡೆ ಭಯೋತ್ಪಾದಕ ನುಸುಳುಕೋರರನ್ನು ಕಳುಹಿಸಿದ್ದ. ಕೈಕೇಯಿಯೂ ಇದ್ದ ಯುದ್ಧದಲ್ಲಿ ದಶರಥನು ರಾವಣನನ್ನು ಸೋಲಿಸಿದನು. ಆದರೆ ನೇರವಾಗಿ ಸೈನಿಕರು ಒಳಗೆ ನುಸುಳಿರುವ ಭಯೋತ್ಪಾದನೆಯನ್ನು ತೊಡೆದುಹಾಕಲು ಸಾಧ್ಯವಾಗಲಿಲ್ಲ. ಹಾಗಾಗಿ ರಾಮ 14 ವರ್ಷಗಳ ಕಾಲ ಕಾಡಿನಲ್ಲಿ ಅಲೆಯಬೇಕಾಯಿತು. ಪಟ್ಟಾಭಿಷೇಕ ಮಾಡಬೇಕಿದ್ದ ರಾಮನನ್ನು ಯುದ್ಧದಲ್ಲಿ 300 ರಾಜರು ಬೆಂಬಲಿಸುತ್ತಿದ್ದರು. ಇದರಿಂದ ರಾವಣನಿಗೆ ತೊಂದರೆಯಾಯಿತು. ಅವನು ರಾಜ್ಯದ ವಿರುದ್ಧ ಯುದ್ಧ ಮಾಡಬಹುದಿತ್ತು, ಆದರೆ ಕಾಡಿನಲ್ಲಿ ನಡೆದಾಡುವ ತಪಸ್ವಿಯ ವಿರುದ್ಧ ಅಲ್ಲ. ಯುದ್ಧಕ್ಕಾಗಿ ಅಸುರರನ್ನು ಕಾರಣವಾಗಿಸಬೇಕಾಗುತ್ತದೆ.

Sunday, 29 May 2022

ಮರಣಾಸನ್ನ ವಾಲಿಯ ಆರೋಪಗಳಿಗೆ ರಾಮನ ಪ್ರತ್ಯುತ್ತರ

ವಾಲಿವಧೆಯನ್ನು ವಿರೋಧಿಸುವವರು ಮತ್ತು ಶ್ರೀರಾಮಚಂದ್ರನನ್ನು ಆ ಕಾರಣಕ್ಕೆ ನಿಂದಿಸುವವರು ರಾಮಾಯಣವನ್ನು ಮೂಲ ಶ್ಲೋಕ ಸಹಿತ ಸರಿಯಾಗಿ ಓದಿರುವುದಿಲ್ಲ. ಇಂದು ಕೆಲವರು ಮಾಡುವ ಆರೋಪಗಳನ್ನೆಲ್ಲಾ ವಾಲಿಯಿಂದಲೇ ಕಿಷ್ಕಿಂದಾ ಕಾಂಡದ ೧೭ನೇ ಸರ್ಗದಲ್ಲಿ ವಾಲ್ಮೀಕಿಗಳು ಮಾಡಿಸಿದ್ದಾರೆ. ಅದಕ್ಕೆ ೧೮ನೇ ಸರ್ಗದಲ್ಲಿ ವಾಲಿಗೆ ರಾಮನೇ ನೀಡಿದ ಉತ್ತರವನ್ನು ಸಾರ್ವಜನಿಕ ಹಿತಾಸಕ್ತಿಯಿಂದ ಹಂಚಿಕೊಳ್ಳಲಾಗುತ್ತಿದೆ.ರಾಮ - “ಸೌಮ್ಯ-ಕಪೀಶ್ವರ, ನೀನು ಧರ್ಮಾರ್ಥಕಾಮಗಳ ಸ್ವರೂಪವನ್ನೂ ಶಿಷ್ಟಾಚಾರವನ್ನೂ ಅರಿಯದೆ ಅಜ್ಞಾನದಿಂದ ನನ್ನನ್ನು ನಿಂದಿಸಬಹುದೆ? ಜ್ಞಾನಿಗಳೂ ಆಚಾರ್ಯರೆಂದು ಗೌರವಾನ್ವಿತರೂ ಆದ ಹಿರಿಯರನ್ನು ಕೇಳಿ ಧರ್ಮಾದಿಗಳ ತತ್ತ್ವವನ್ನು ನೀನು ತಿಳಿದಿಲ್ಲ. ತಿಳಿಯದೆ ಕೇವಲ ಕವಿ ಚಾಪಲ್ಯದಿಂದ ನನಗೆ ಇಂಥ ಮಾತನ್ನಾಡಲು ಉದ್ದೇಶಿಸಿದೆ (೪-೫). ಈ ದೇಶವೆಲ್ಲವೂ ಇಕ್ಷ್ವಾಕು ವಂಶದ ರಾಜರಿಗೆ ಸೇರಿದ್ದು. ಪರ್ವತ ಮಹಾರಣ್ಯ ವನಗಳೆಲ್ಲವೂ ಅವರಿಗೆ ಅಧೀನವಾದದ್ದು. ಮೃಗ ಪಕ್ಷಿ ಮನುಷ್ಯರ ನಿಗ್ರಹಾನುಗ್ರಹಗಳು ಅವರ ಅಧಿಕಾರಕ್ಕೆ ಒಳಪಟ್ಟಿದ್ದು (4). ಈ ಭೂಪ್ರದೇಶವನ್ನು ಧರ್ಮಾತ್ಮನೂ ಸತ್ಯ ಸಂಧನೂ ಋಜುಬುದ್ಧಿಯೂ ಆದ ಭರತನು ಪಾಲಿಸುತಿದ್ದಾನೆ. ಅವನು ಧರ್ಮಾರ್ಥಕಾಮಗಳ ತತ್ತ್ವವನ್ನರಿತವನಾಗಿ ದುಷ್ಟರನ್ನು ನಿಗ್ರಹಿಸಿ ಶಿಷ್ಟರನ್ನು ಅನುಗ್ರಹಿಸುವುದರಲ್ಲಿ ತತ್ಪರನಾಗಿದ್ದಾನೆ (೭). ನಯ ವಿನಯಗಳೂ ಸತ್ಯವೂ ಯಾರಲ್ಲಿ ಸ್ಥಿರವಾಗಿ ನೆಲೆಸಿವೆಯೋ, ಯಾರಲ್ಲಿ ಶೌರ್ಯವು ಪ್ರತ್ಯಕ್ಷವೋ, ಯಾರು ದೇಶಕಾಲಗಳ ಪರಿಸ್ಥಿತಿಯನ್ನು ಬಲ್ಲನೋ ಅವನೇ ಭೂಮಂಡಲಕ್ಕೆ ಅಧಿಪತಿಯೆನಿಸಿಕೊಳ್ಳುತ್ತಾನೆ. ಅಂತಹ ರಾಜನೇ ಭರತ (೮). ಅವನ ಧರ್ಮಪುರಸ್ಸರವಾದ ಆಜ್ಞೆಯನ್ನು ಮನ್ನಿಸಿ ಧರ್ಮ ರಕ್ಷಣೆಗಾಗಿ ನಾವು ಭೂಮಂಡಲವನ್ನು ಸುತ್ತುತ್ತಿದ್ದೇವೆ. ಧರ್ಮಾಭಿವೃದ್ಧಿ ಯಾಗಲೆಂದು ನಾವು ನಮ್ಮಂತೆಯೇ ಅನೇಕ ಭೂಪಾಲರೂ ಸಂಚರಿಸುತಿದ್ದೇವೆ. ರಾಜಸಿಂಹನೆನಿಸಿದ ಧರ್ಮವತ್ಸಲನಾದ ಭರತನು ಸಕಲ ಪೃಥ್ವಿಯನ್ನೂ ಪಾಲಿಸುತ್ತಿರುವಾಗ ಯಾವನು ಧರ್ಮವನ್ನು ಅತಿಕ್ರಮಿಸಿ ನಡೆದಾನು? (೯-೧೦), ಸ್ವಧರ್ಮದಲ್ಲಿ ನಿರತರಾದ ನಾವು ಭರತಾಜ್ಞೆಯನ್ನು * ಮನ್ನಿಸಿ, ಧರ್ಮಭ್ರಷ್ಟನನ್ನು ನಿಯಮಾನುಸಾರವಾಗಿ ದಂಡಿಸುತ್ತಿದ್ದೇವೆ. 

(* ಭರತನು ತಾನಾಗಿ ಆಜ್ಞೆ ಮಾಡದಿದ್ದರೂ ಮೂಲಭೂತವಾದ ರಾಜಧರ್ಮದ ನಿರ್ವಹಣೆಯ ಹೊಣೆ ಶ್ರೀರಾಮನಮೇಲೂ ಇದೆ, ಭರತನು ಶ್ರೀರಾಮನ ಪ್ರತಿನಿಧಿ ಯಾಗಿ ಆ ಸಮಯದಲ್ಲಿ ರಾಜನೇ ಆಗಿದ್ದಾನೆ. ಭರತನು ರಾಜನಂದೂ ಅವನ ಆಜ್ಞೆಯನ್ನು ಪಾಲಿಸುತ್ತಿದ್ದೇನೆಂದೂ ಹೇಳುವುದು ಶ್ರೀರಾಮನ ವಿನಯಸಂಪತ್ತನ್ನು ಸೂಚಿಸುತ್ತದೆ.)

ನೀನು ಧರ್ಮಕ್ಕೆ ಹಾನಿಯನ್ನುಂಟುಮಾಡಿದ್ದೀಯೆ. ನಿನ್ನ ಕೃತಿಯಿಂದ ಲೋಕ ನಿಂದಿತನಾಗಿದ್ದೀಯೆ, ಕಾಮಲೋಲುಪನಾಗಿ ರಾಜಮಾರ್ಗದಿಂದ ಜಾರಿದ್ದೀಯೆ (೧೧-೧೨). ಎಲೈ ವಾಲಿ, ಧರ್ಮಮಾರ್ಗದಲ್ಲಿರತಕ್ಕವನು ತನ್ನ ತಂದೆ, ಅಣ್ಣ, ವಿದ್ಯೆಯನ್ನು ಕಲಿಸಿದ ಗುರು-ಈ ಮೂವರನ್ನು ತಂದೆಯೆಂದು ಭಕ್ತಿಯಿಂದ ಗೌರವಿಸಬೇಕು. ಹಾಗೆಯೇ ತನ್ನ ಮಗ, ತಮ್ಮ, ಗುಣಶಾಲಿಯಾದ ಶಿಷ್ಯ-ಈ ಮೂವರನ್ನು ಮಕ್ಕಳೆಂದು ತಿಳಿದು ವಾತ್ಸಲ್ಯದಿಂದ ನೋಡಿಕೊಳ್ಳಬೇಕು. ಧರ್ಮಮಾರ್ಗವೇ ಯುಕ್ತವೆಂದು ನಂಬುವುದಾದರೆ, ಹೀಗೆ ನಡೆದುಕೊಳ್ಳಬೇಕು (೧೩-೧೪). ಎಲೈ ವಾನರ, ಸಜ್ಜನರ ಧರ್ಮ ಮಾರ್ಗವು ಅತಿಸೂಕ್ಷ್ಮವಾದುದು. ಅದರ ತತ್ತ್ವವನ್ನು ತಿಳಿಯುವುದು ಬಹು ಕಷ್ಟ, ಸಕಲ ಜಂತುಗಳ ಹೃದಯದಲ್ಲಿ ನೆಲೆಸಿದ ಅಂತರ್ಯಾಮಿಯಾದ ಆತ್ಮನೊಬ್ಬನಿಗೆ ಇದು ಸರಿ ಇದು ತಪ್ಪು ಎಂದು ಧರ್ಮಾಧರ್ಮಗಳ ವಿವೇಕ ಜ್ಞಾನವಿರುತ್ತದೆ (೧೫). ನೀನು ಮೊದಲೇ ಚಪಲಸ್ವಭಾವದ ವಾನರ, ಅವಿವೇಕಿಗಳೂ ಚಪಲಚಿತರೂ ಆದ ಕಪಿಗಳೊಡನೆ ಸಮಾಲೋಚಿಸುವ ನಿನಗೆ ಏನು ಗೊತ್ತಿದೆ? ಕುರುಡನನ್ನು ಹುಟ್ಟು ಕುರುಡರು ಕರೆದೊಯ್ಯುವಂತೆ ನಿನ್ನ ಪರಿಸ್ಥಿತಿಯಾಗಿದೆ (೧೬). ನನ್ನ ಮಾತಿನ ಅಭಿಪ್ರಾಯವನ್ನು ವಿವರಿಸಿ ಹೇಳುವೆನು, ಕೇಳು. ಬರಿಯ ರೋಷಾವೇಶದಿಂದ ನನ್ನನ್ನು ನಿಂದಿಸಬೇಡ. ನಿನ್ನನ್ನು ನಾನು ಸಂಹರಿಸಲು ಇದು ಕಾರಣವೆಂದು ತಿಳಿ, ಏನೆಂದರೆ, ನೀನು ಸನಾತನಧರ್ಮವನ್ನು ಉಲ್ಲಂಘಿಸಿ ನಿನ್ನ ತಮ್ಮನ ಭಾರ್ಯೆಯೊಡನೆ ರಮಿಸುತ್ತಿದ್ದೀಯೆ (೧೭-೧೮). ಮಹಾತ್ಮನಾದ ಸುಗ್ರೀವನು ಜೀವಿಸಿರುವಾಗಲೇ ಅವನ ಭಾರ್ಯೆಯಾದ ರುಮೆಯೊಡನೆ ನೀನು ಕಾಮಲೋಲುಪನಾಗಿ ವರ್ತಿಸುತ್ತಿದ್ದೀಯೆ. ಅವಳು ನಿನಗೆ ಸೊಸೆಯಾಗಲಿಲ್ಲವೆ? ಈ ಪಾಪಕರ್ಮವನ್ನು ಎಸಗಿದ್ದೀಯೆ. ಧರ್ಮವನ್ನುಲ್ಲಂಘಿಸಿ ಕಾಮಪರಾಯಣನಾಗಿ ತಮ್ಮನ ಹೆಂಡತಿಯನ್ನು ಮುಟ್ಟಿದುದಕ್ಕೋಸ್ಕರ ನಿನಗೆ ಈ ಶಿಕ್ಷೆಯನ್ನು ವಿಧಿಸಿದ್ದೇನೆ (೧೯-೨೦). ವಾನರೇಶ್ವರ, ಧರ್ಮವಿರುದ್ಧವಾಗಿ ವರ್ತಿಸುತ್ತ ಶಿಷ್ಟಾಚಾರವನ್ನು ಅತಿಕ್ರಮಿಸುವವನಿಗೆ ಮರಣದಂಡನೆಯಲ್ಲದೆ ಅವನನ್ನು ನಿಗ್ರಹಿಸುವ ಇನ್ನೊಂದು ಮಾರ್ಗವು ನನಗೆ ತೋರದು (೨೧). ನಾನು ಸತ್ಕುಲಪ್ರಸೂತನಾದ ಕ್ಷತ್ರಿಯನಾಗಿ ನಿನ್ನ ಪಾಪಕರ್ಮವನ್ನು ಸಹಿಸಲಾರೆ. ಮಗಳು ಒಡಹುಟ್ಟಿದವಳು, ತಮ್ಮನ ಮಡದಿ-ಇವರಲ್ಲಿ ಯಾವನು ಕಾಮಾತಿರೇಕದಿಂದ ಪ್ರವರ್ತಿಸುವನೋ ಅವನಿಗೆ ವಧೆಯೇ ಶಿಕ್ಷೆಯೆಂದು ಶಾಸ್ತ್ರವಿಹಿತವಾಗಿದೆ. ಭರತನು ಈ ಭೂಮಿಗೆ ಅಧಿಪತಿ. ನಾವು ಅವನ ಆದೇಶದಂತೆ ನಡೆಯತಕ್ಕವರು (೨೨-೨೩). ನೀನು ಧರ್ಮವನ್ನುಲ್ಲಂಘಿಸಿದ್ದೀಯೆ. ನಿನ್ನನ್ನು ನೋಡುತ್ತ ಉಪೇಕ್ಷೆಯಿಂದಿರಲು ಹೇಗೆ ಸಾಧ್ಯ? ಸಮಾನ್ಯನೂ ಪ್ರಾಜ್ಞನೂ ಆದ ಭರತನು ಧರ್ಮಾತಿಕ್ರಮಣವಾಗದಂತೆ ಧರ್ಮದಿಂದ ರಾಜ್ಯವನ್ನು ಪರಿಪಾಲಿಸುತ್ತಿದ್ದಾನೆ. ಸ್ವಚ್ಛೆಯಾಗಿ ನಡೆಯತಕ್ಕವರನ್ನು ದಂಡಿಸುವುದರಲ್ಲಿ ಉದ್ಯುಕ್ತನಾಗಿದ್ದಾನೆ. ನಾವು ಭರತನ ಆಜ್ಞೆಯೇ ಪ್ರಮಾಣವೆಂದು ಮನ್ನಿಸುತ್ತೇವೆ (೨೪-೨೫). ಆದ್ದರಿಂದ, ಎಲೈ ಕಪೀಶ್ವರ, ಮರ್ಯಾದೆಯನ್ನತಿಕ್ರಮಿಸುವ ನಿನ್ನಂಥವರನ್ನು ಶಿಕ್ಷಿಸುವ ಕಾರ್ಯದಲ್ಲಿ ತೊಡಗಿದ್ದೇವೆ. ನನಗೆ ಸುಗ್ರೀವನೊಡನಾದ ಮೈತ್ರಿಯು ಲಕ್ಷ್ಮಣನ ಸ್ನೇಹ ದಂತೆ ಅತಿದೃಢವಾದುದು. ಅವನ ಮಡದಿಯನ್ನೂ ರಾಜ್ಯವನ್ನೂ ಕೊಡಿಸುವುದಕ್ಕಾಗಿ ಈ ಮೈತ್ರಿ ಏರ್ಪಟ್ಟಿತು. ಆತನೂ ನನ್ನ ಹಿತಸಾಧನೆಯಲ್ಲಿ ನಿರತನಾಗಿದ್ದಾನೆ. ನಿನ್ನನ್ನು ಕೊಲ್ಲುವುದಾಗಿ ಅಗ್ನಿ ಸನ್ನಿಧಾನದಲ್ಲಿ ಪ್ರತಿಜ್ಞೆ ಮಾಡಿ ಮಾತುಕೊಟ್ಟಿದ್ದೇನೆ (೨೬-೨೭). ನನ್ನಂಥವನು ಪ್ರತಿಜ್ಞೆ ಮಾಡಿ ಅದನ್ನು ಉಪೇಕ್ಷಿಸಲು ಹೇಗೆ ಶಕ್ಯವಾದೀತು? 

ಧರ್ಮಸಮ್ಮತವಾದ ಈ ಮಹತ್ತರ ಕಾರಣಗಳೆಲ್ಲವೂ ಸೇರಿದುದರಿಂದ ನಿನ್ನನ್ನು ದಂಡಿಸುವುದು ಅವಶ್ಯಕವಾಯಿತು. ಈ ದಂಡನೆಯು ನಿನಗೆ ಯುಕ್ತವಾದುದೆಂದು ನೀನು ಒಪ್ಪಿಕೊಳ್ಳಬೇಕು. ನಿನ್ನನ್ನು ಶಿಕ್ಷಿಸಿರುವುದು ಸರ್ವವಿಧದಲ್ಲಿಯ ಧರ್ಮ ಎಂದೇ ತಿಳಿಯಬೇಕು (೨೮-೨೯). ಧರ್ಮದಲ್ಲಿಯೇ ದೃಷ್ಟಿಯುಳ್ಳವನು ಮಿತ್ರನಿಗೆ ಉಪಕಾರಮಾಡಲೇಬೇಕು. ಎಲೈ ವಾಲಿ, ಧರ್ಮವನ್ನೇ ಅನುಸರಿಸತಕ್ಕವನಾಗಿದ್ದರೆ ನೀನೂ ಕೂಡ ಇಂತಹ ಕಾರ್ಯವನ್ನು ಮಾಡುತ್ತಿದ್ದೆ. ಸದಾಚಾರವನ್ನು ಕುರಿತು ಮನುವು ಎರಡು ಶ್ಲೋಕಗಳನ್ನು ಹೇಳಿದ್ದಾನೆ. (ಮನುಸ್ಮೃತಿ-೮-೩೧೮, ೩೧೬). ಧರ್ಮನಿಷ್ಟರೆಲ್ಲರೂ ಅವನ್ನು ಪರಿಗ್ರಹಿಸಿದ್ದಾರೆ. ಅದರಂತೆ ನಾನು ನಡೆದುಕೊಂಡಿದ್ದೇನೆ (೩೦-೩೧), ಆ ಶ್ಲೋಕಗಳ ಅರ್ಥವೇನೆಂದರೆ, ಜನರು ಪಾಪಕರ್ಮಗಳನ್ನಾಚರಿಸಿದರೂ ರಾಜರಿಂದ ತಕ್ಕ ಶಿಕ್ಷೆಯನ್ನು ಪಡೆದಲ್ಲಿ, ಅವರ ಪಾಪಗಳೆಲ್ಲವೂ ನೀಗುತ್ತವೆ. ಪುಣ್ಯವಂತರಾದ ಸಜ್ಜನರಂತೆ ಅವರು ಸದ್ಗತಿಯನ್ನು ಪಡೆಯುತ್ತಾರೆ (೩೨). ಕಳ್ಳನನ್ನು ರಾಜನು ದಂಡಿಸಲಿ ಅಥವಾ ದಂಡಿಸದೆ ಬಿಡುಗಡೆಮಾಡಲಿ, ಕಳ್ಳತನದ ಪಾಪವು ಅವನಿಗೆ ನೀಗುವುದು. ಆದರೆ ಪಾಪಿಯನ್ನು ದಂಡಿಸದ ರಾಜನು ಅವನ ಪಾಪಕ್ಕೆ ಭಾಗಿಯಾಗುತ್ತಾನೆ' (೩೩). ವಾಲಿ, ನಿನ್ನಂತೆಯೇ ಒಬ್ಬ ಶ್ರಮಣನು ಹಿಂದೆ ಒಂದು ಪಾಪಕೃತ್ಯವನ್ನು ಮಾಡಿದ್ದನು. ಆಗ ನನ್ನ ವಂಶದಲ್ಲಿ ಪೂಜ್ಯನಾದ ಮಾಂಧಾತನು ಆ ಶ್ರಮಣನಿಗೆ ಘೋರವಾದ ತಕ್ಕ ಶಿಕ್ಷೆಯನ್ನು ವಿಧಿಸಿದನು. ನಿನ್ನಂತೆಯೇ ಅನೇಕ ಭೂಪಾಲರು ಪ್ರಮಾದದಿಂದ ದುಷ್ಕೃತ್ಯಗಳನ್ನು ನಡೆಸಿ, ಅನಂತರ ಪ್ರಾಯಶ್ಚಿತ್ತವನ್ನು ಮಾಡಿಕೊಂಡಿದ್ದಾರೆ. ಪ್ರಾಯಶ್ಚಿತ್ತದಿಂದ ಪಾಪವು ಪರಿಹೃತವಾಗುತ್ತದೆ (೩೪-೩೫). ಆದ್ದರಿಂದ ವ್ಯಥೆ ಪಡಬೇಡ. ನಿನ್ನ ವಧೆಯು ಧರ್ಮವಿಹಿತವಾಗಿ ನಡೆದಿದೆ ವಾನರೇಶ್ವರ, ನಾವು ಈ ವಿಷಯದಲ್ಲಿ ಸ್ವತಂತ್ರರಲ್ಲ. ಅಲ್ಲದೆ ಮತ್ತೊಂದು ಕಾರಣವನ್ನು ಕೇಳು, ಮುಖ್ಯವಾದ ಆ ಕಾರಣವನ್ನು ಕೇಳಿದರೆ, ನನ್ನ ವಿಷಯದಲ್ಲಿ ನೀನು ಕೋಪಿಸಲಾರೆ (೩೬-೩೭) ವಾನರೇಶ್ವರ, ನೀನು ನಿಂದಿಸಿದ್ದರಿಂದ ನನಗೆ ವ್ಯಧೆಯೂ ಇಲ್ಲ, ಕೋಪವೂ ಇಲ್ಲ. ಮನುಷ್ಯರು ಕಾಡುಮೃಗಗಳನ್ನು ಬಲೆಗಳಿಂದಲೂ ಹಗ್ಗಗಳಿಂದಲೂ ಇತರ ಕಪಟೋಪಾಯಗಳಿಂದಲೂ ಹಿಡಿಯುತ್ತಾರೆ. ಎದುರಿಗೆ ನಿಂತಾಗಲಿ, ಮರೆಯಲ್ಲಿ ನಿಂತಾಗಲಿ ಸೆರೆಹಿಡಿಯುತ್ತಾರೆ. ಮೃಗಗಳು ಹೆದರಿ ಓಡುತ್ತಿರಲಿ, ನಂಬಿಕೆಯಿಂದ ನಿಂತಿರಲಿ ಅವನ್ನು ಕೊಲ್ಲುತ್ತಾರೆ (೩೮-೩೯).

ಅವು ಪ್ರಮಾದವಶದಿಂದ ಸಿಕ್ಕಲಿ, ಎಚ್ಚರಿಕೆಯಿಂದಿರಲಿ, ಅನ್ಯಾಭಿಮುಖವಾಗಿಯೇ ಇರಲಿ. ಆ ಮೃಗಗಳನ್ನು ಮಾಂಸಾರ್ಥಿಗಳಾದ ಜನರು ಕೊಲ್ಲುತ್ತಾರೆ. ಇದರಲ್ಲಿ ದೋಷವಿಲ್ಲ. ಧರ್ಮಕೋವಿದರಾದ ರಾಜರ್ಷಿಗಳೂ ಈ ಮಾರ್ಗವನ್ನನುಸರಿಸಿ ಬೇಟೆಯಾಡುತ್ತಾರೆ. ಆದ್ದರಿಂದ ವಾನರ, ನಿನ್ನನ್ನು ಬಾಣದಿಂದ ಘಾತಿಸಿದ್ದೇನೆ (೪೦-೪೧). ನನ್ನೊಡನೆ ಯುದ್ಧ ಸನ್ನದ್ಧನಾಗಿ ಬಂದಿರು-ಬಾರದಿರು, ನಿನ್ನನ್ನು ವಧಿಸಿದ್ದೇನೆ. ನೀನೊಂದು ಶಾಖಾಮೃಗ. ದುರ್ಲಭವಾದ ಧರ್ಮ, ಜೀವನ, ಅಭ್ಯುದಯಗಳನ್ನು ರಾಜರೇ ಪ್ರಜೆಗಳಿಗೆ ಸಂಪಾದಿಸಿಕೊಡುತ್ತಾರೆ; ಇದರಲ್ಲಿ ಸಂದೇಹವಿಲ್ಲ. ಆದ್ದರಿಂದ ರಾಜರನ್ನು ಹಿಂಸಿಸುವುದಾಗಲಿ ನಿಂದಿಸುವುದಾಗಲಿ ಆಕ್ಷೇಪಿಸುವುದಾಗಲಿ ಕೂಡದು. ಅವರಿಗೆ ಅಪ್ರಿಯವಾದ ಮಾತನ್ನಾಡಬಾರದು(೪೨-೪೩). ರಾಜರೆಂದರೆ ಮಹೀತಳದಲ್ಲಿ ಮನುಷ್ಯ ರೂಪದಿಂದ ಸಂಚರಿಸುವ ದೇವತೆಗಳು. ನೀನು ಧರ್ಮಸೂಕ್ಷ್ಮವನ್ನರಿಯದೆ ಬರಿಯ ರೋಷಾವೇಶದಿಂದ ನನ್ನನ್ನು ದೂಷಿಸಿದ್ದೀಯೆ. ಪಿತೃಪಿತಾಮಹಪರಂಪರೆಯಿಂದ ಬಂದ ಧರ್ಮಮಾರ್ಗದಲ್ಲಿ ನಾನು ಸ್ಥಿರವಾಗಿ ನಿಂತಿದ್ದೇನೆ” ಎಂದು ಹೇಳಿದನು. 

ಶ್ರೀರಾಮನ ನುಡಿಯನ್ನಾಲಿಸಿ ವಾಲಿಗೆ ಬಹಳ ಪಶ್ಚಾತ್ತಾಪವಾಯಿತು (೪೪-೪೫). ಧರ್ಮದ ವಿಷಯದಲ್ಲಿ ಸರಿಯಾದ ಅರಿವಾಯಿತು. ರಾಘವನಲ್ಲಿ ದೋಷವಿಲ್ಲವೆಂದು ಮನಸ್ಸಿಗೆ ಅನ್ನಿಸಿತು. ಆ ವಾನರೇಂದ್ರನು ಕೈಮುಗಿದುಕೊಂಡು ವಿಜ್ಞಾಪಿಸಿದನು:

* ಪುರುಷೋತ್ತಮ, ನೀನು ಹೇಳುವುದು ವಾಸ್ತವ; ಸಂಶಯವಿಲ್ಲ. ಅಲ್ಪನಾದವನು ಮಹಾಪುರುಷನಿಗೆ ಪ್ರತಿಯಾಗಿ ಹೇಳುವುದು ಶಕ್ಯವಲ್ಲ. ಮೊದಲು ನಿನಗೆ ಅಯುಕ್ತವೂ ಅಪ್ರಿಯವೂ ಆದ ಮಾತನ್ನಾಡಿಬಿಟ್ಟೆನು. ರಾಘವ, ನನ್ನ ತಪ್ಪನ್ನು ಮನಸ್ಸಿಗೆ ತಂದುಕೊಳ್ಳಬೇಡ (೪೬-೪೮). ನೀನು ಸಕಲವಸ್ತುಗಳ ತತ್ತ್ವವನ್ನು ಬಲ್ಲವನು. ಪ್ರಜೆಗಳ ಹಿತದಲ್ಲಿ ನಿರತನಾದವನು. ಕಾರ್ಯಕಾರಣಗಳನ್ನು ನಿರ್ಣಯಿಸುವುದರಲ್ಲಿ ನಿನ್ನ ಬುದ್ಧಿಯು ಪಕ್ಷಪಾತ ರಹಿತವಾಗಿ ನಿರ್ಮಲವಾಗಿದೆ ; ಸ್ಥಿರವಾಗಿದೆ. ನಾನು ಧರ್ಮಜ್ಞಾನವಿಲ್ಲದವನು. ಧರ್ಮಬಾಹಿರರಲ್ಲಿ ಅಗ್ರಗಣ್ಯ. ಹೇ ಧರ್ಮಜ್ಞ, ಧರ್ಮ ಸಂಹಿತವಾದ ಮಾತಿನಿಂದ ಅಭಯವನ್ನು ನೀಡಿ ನನ್ನನ್ನು ಪರಿಪಾಲಿಸು. ಈಗ ನಾನು ನನಗಾಗಲಿ, ತಾರೆಗಾಗಲಿ, ನನ್ನ ಬಂಧುಗಳಿಗಾಗಲಿ ಅಷ್ಟಾಗಿ ಶೋಕಿಸುವುದಿಲ್ಲ. ಆದರೆ ಗುಣಶ್ರೇಷ್ಠನೂ ಕನಕಾಂಗದ ಭೂಷಿತನೂ ಆದ ನನ್ನ ಮಗ ಅಂಗದನನ್ನು ನೆನೆಸಿಕೊಂಡರೆ ದುಃಖ ಉಮ್ಮಳಿಸುವುದು (೫೦-೫೧). ಬಾಲ್ಯದಿಂದಲೂ ಅವನನ್ನು ಪ್ರೀತಿಯಿಂದ ಲಾಲಿಸುತ್ತಿದ್ದೇನೆ. ಇನ್ನು ಮೇಲೆ ನನ್ನನ್ನು ಕಾಣದೆ ಅವನು ದೀನನಾಗುವನು. ನೀರನ್ನು ಬಳಸಿ ಬತ್ತಿ ಹೋಗುವ ಕೊಳದಂತೆ, ನನ್ನ ಮಗನು ದಿನದಿನವೂ ಕೃಶವಾಗುತ್ತ ಹೋಗುವನು (೫೨). ಅವನು ಇನ್ನೂ ಹುಡುಗ, ಬುದ್ದಿ ಬೆಳೆದಿಲ್ಲ. ನನ್ನ ಒಬ್ಬನೇ ಮುದ್ದು ಮಗ ತಾರೆಯ ಗರ್ಭದಲ್ಲಿ ಜನಿಸಿದ್ದಾನೆ. ಶ್ರೀರಾಮ, ನೀನು ಅಂಗದನನ್ನು ಕಾಪಾಡಿಕೊಂಡು ಬರಬೇಕು. ಅವನು ಬಾಲಕನಾದರೂ ಮಹಾಶೂರ (೫೩). ಸುಗ್ರೀವನಲ್ಲಿಯೂ ಅಂಗದನಲ್ಲಿಯೂ ಒಂದೇ ವಿಧವಾಗಿ ವಾತ್ಸಲ್ಯ ಬುದ್ಧಿಯನ್ನಿಡು. ಸರಿಯಾಗಿ ನಡೆದರೆ ಪಾಲಿಸತಕ್ಕವನೂ ತಪ್ಪಿದರೆ ದಂಡಿಸತಕ್ಕವನೂ ನೀನೇ. ಹೇ ನರೇಶ್ವರ, ನಿನ್ನ ತಮ್ಮಂದಿರಾದ ಭರತನನ್ನೂ ಲಕ್ಷ್ಮಣನನ್ನೂ ಹೇಗೆ ಪ್ರೀತಿಯಿಂದ ನೋಡಿಕೊಳ್ಳುವೆಯೋ ಹಾಗೆಯೇ ಸುಗ್ರೀವನನ್ನೂ ಅಂಗದನನ್ನೂ ನೋಡಿಕೊ (೫೪-೫). ತಾರೆ ಏನನ್ನೂ ಅರಿಯಳು. ಅವಳಲ್ಲಿ ಅಪರಾಧವಿಲ್ಲ. ನನ್ನ ತಪ್ಪಿಗಾಗಿ ಅವಳನ್ನು ಅಪರಾಧಿನಿಯೆಂದು ಸುಗ್ರೀವನು ಎಣಿಸಿಯಾನು. ಸುಗ್ರೀವನು ಅವಳನ್ನು ಅವಮಾನಪಡಿಸದಂತೆ ನೀನು ಎಚ್ಚರಿಕೆ ವಹಿಸಬೇಕು (೫೬). ಶ್ರೀರಾಮ, ನಿನ್ನ ಅನುಗ್ರಹಕ್ಕೆ ಪಾತ್ರನಾಗಿ ನಿನ್ನ ಅಧೀನದಲ್ಲಿದ್ದು ನಿನ್ನ ಇಷ್ಟದಂತೆ ನಡೆದಲ್ಲಿ ಮಾತ್ರ ಸುಗ್ರೀವನು ರಾಜ್ಯವನ್ನಾಳಲು ಸಾಧ್ಯ. ಹಾಗಿದ್ದರೆ ಸ್ವರ್ಗವನ್ನೂ ಪಡೆಯಬಹುದು ; ಭೂಮಿಯನ್ನೂ ಆಳಬಹುದು. ತಾರೆಯು ಬೇಡ ಬೇಡವೆಂದರೂ ಕೇಳದೆ ನಾನು ನಿನ್ನಿಂದ ವಧೆಯನ್ನು ಬಯಸಿದೆನೋ ಎಂಬಂತೆ ಬಂದೆನು (೫೭-೫೮). ಸೋದರನಾದ ಸುಗ್ರೀವನೊಡನೆ ದ್ವಂದ್ವಯುದ್ಧಕ್ಕೆ ನಿಂತೆನು.” ಹೀಗೆ ಹೇಳಿ ಆ ಕಪೀಶ್ವರನು ಶ್ರೀರಾಮನಿಗೆ ಕೈ ಮುಗಿದು ಸುಮ್ಮನಾದನು. ಆಗ ಅವನಿಗೆ ವಿವೇಕೋದಯವಾಗಿತ್ತು. ಶ್ರೀರಾಮನು ಧರ್ಮತತ್ತ್ವವನ್ನೊಳಗೊಂಡ ವಾಕ್ಯದಿಂದ ವಾಲಿಯನ್ನು ಸಂತೈಸುತ್ತ ಹೇಳಿದನು (೫೯-೬೦) : “ವಾನರೋತ್ತಮ ಇದಕ್ಕಾಗಿ ನೀನು ಚಿಂತಿಸಬೇಡ. (ನಿನ್ನನ್ನು ಕೊಂದುದಕ್ಕಾಗಿ ನಮ್ಮ ವಿಷಯದಲ್ಲಾಗಲಿ ನಿನ್ನ ವಿಷಯದಲ್ಲಾಗಲಿ ಚಿಂತಿಸಬೇಕಾದ್ದಿಲ್ಲ ನಿನಗಿಂತಲೂ ಅಧಿಕವಾಗಿ ನಮಗೆ ಧರ್ಮದಲ್ಲಿ ನಿಶ್ಚಯಜ್ಞಾನವುಂಟು, ಶಿಕ್ಷಾರ್ಹನಿಗೆ ಶಿಕ್ಷೆ ಯನ್ನು ವಿಧಿಸುವವನು, ಶಿಕ್ಷೆಗೆ ಒಳಗಾಗತಕ್ಕವನು ಅವರಿಬ್ಬರಿಗೆ ಯಾವ ಹಾನಿಯೂ ಒದಗುವುದಿಲ್ಲ. ಕಾರಣವಾದ ದಂಡವಿಧಾನ, ಕಾರ್ಯವಾದ ದಂಡಾನುಭವ-ಇವುಗಳಿಂದ ಉದ್ದೇಶವು ಫಲಿಸಿ ಅವರು ಕೃತಕೃತ್ಯರಾಗುತ್ತಾರೆ. ನೀನು ಶಿಕ್ಷೆಯನ್ನು ಪಡೆದದ್ದರಿಂದ ನಿನ್ನ ಪಾಪವು ನೀಗಿತು. (೬೬೧-೬೨). ಧರ್ಮಶಾಸ್ತ್ರೋಕ್ತವಾದ ಮಾರ್ಗದಿಂದಲೇ ನೀನು ಧರ್ಮಯುಕ್ತವೂ ಸಹಜವೂ ಆದ ಶುದ್ಧ ಸ್ವಭಾವವನ್ನು ಪಡೆದಿದ್ದೀಯೆ. ನಿನ್ನ ಅಂತರಂಗದಲ್ಲಿರುವ ಶೋಕಮೋಹಗಳನ್ನೂ ಭಯವನ್ನೂ ಪರಿತ್ಯಜಿಸು(೬೪). ವಾನರೇಶ್ವರ, ನಿನ್ನ ಕರ್ಮಫಲವನ್ನು ಮೀರಲು ನಿನ್ನಿಂದಾಗದು. ಅಂಗದನು ನಿನ್ನಲ್ಲಿ ಹೇಗಿದ್ದನೋ ಹಾಗೆಯೇ ಸುಗ್ರೀವನಲ್ಲಿಯೂ ನನ್ನಲ್ಲಿಯೂ ವರ್ತಿಸುವನು. (ಅವನನ್ನು ಪುತ್ರವಾತ್ಸಲ್ಯದಿಂದ ನೋಡಿಕೊಳ್ಳುವೆವು) ಎಂದು ಹೇಳಿದನು (೬೫). ಮಹಾತ್ಮನೂ ಧರ್ಮನಿಷ್ಠನೂ ರಣಶೂರನೂ ಆದ ಶ್ರೀರಾಮನ ಈ ಮಧುರವಾಕ್ಯವನ್ನು ಕೇಳಿ ವಾಲಿಯು “ ಪ್ರಭು, ನೀನು ದೇವೇಂದ್ರನಿಗೆ ಸಮಾನನು. ನಿನ್ನ ಪರಾಕ್ರಮ ಅದ್ಭುತವಾದುದು. ಶರಾಘಾತದಿಂದ ನಾನು ಬುದ್ಧಿಗೆಟ್ಟು ನಿನ್ನ ಮಹಿಮೆಯನ್ನರಿಯದೆ ನಿನ್ನನ್ನು ನಿಂದಿಸಿದೆನು. ಸ್ವಾಮಿ, ಪ್ರಸನ್ನನಾಗು. ನನ್ನನ್ನು ಕ್ಷಮಿಸು” ಎಂದು ನುಡಿದನು (೬೬-೬೭).

ಇಲ್ಲಿಗೆ ಶ್ರೀಮದ್ ವಾಲ್ಮೀಕಿ ರಾಮಾಯಣದ ಕಿಂಧಾಕಾಂಡದಲ್ಲಿ ಹದಿನೆಂಟನೆಯ ಸರ್ಗ ಮುಕ್ತಾಯಗೊಂಡಿತು.


Monday, 17 January 2022

ಬ್ರಾಹ್ಮೀ ಕವನ - 2


ಕಲಿಯು ಮುಚ್ಚಿದೆ

ಯಾರು ಬಲ್ಲರು

ಅದರೊಳಗೇನಿದೆ,

ಈ ಜಿಜ್ಞಾಸೆ

ಮಾಳ್ಪುದು ಸುಂದರ

ವಾಗದನು,

ಎಲ್ಲರ ನೋಟಗಳಲಿ.

ಅದರಲಿ ಮುಚ್ಚಿದೆ

ಹೂವಿನ

ಭವಿಷ್ಯ,

ದುಂಬಿಗಳ

ಪರಾಗ,

ಹೊಸ ಪೀಳಿಗೆಯ

ಶುಕ್ರ,

ಬಿರುಗಾಳಿಗಳಲಿ

ಎದ್ದು ನಿಂತಿರುವ

ಸಾಹಸ,

ಕಾಮನಬಿಲ್ಲಿನ

ಬಣ್ಣ

ಸುಗಂಧವ ಹಂಚುವ 

ಉದಾರತೆ

ಸೃಷ್ಟಿಯಲಿ,

ಪಕಳೆಗಳ

ಕೋಮಲತೆ,

ವಸಂತದ

ಸಂಗೀತ,

ಸೂರ್ಯನ ಬೆಂಕಿಯಲಿ

ತಪಿಸುವ

ಧೈರ್ಯ,

ಜೀವನದ

ಕ್ಷಣಭಂಗುರತೆ,

ಅದಿದೆ ಎನ್ನುವ

ಅಸ್ತಿತ್ವದ

ಅಕ್ಷೀಣ ವಿಶ್ವಾಸ.

ಇವೇ ಎಲ್ಲವೂ

ಅರಳುವವು

ಒಂದಿನ,

ಹೂವಾಗಿ

ಬದಲಿಪುದು

ಸ್ವರೂಪವದರ,

ಪ್ರಾಕಟ್ಯ

ರಹಸ್ಯಗಳೆಲ್ಲ,

ಅದಾವಾಗಾಗುವಳು

ಒಬ್ಬಾಕೆ

ಜೀವಂತ ನಾರಿ

ಆ ಒಂದೇ ಕ್ಷಣ

ಜೀವನದಲಿ

ಆಪುದು ಮಹತ್ವಪೂರ್ಣ,

ಪಡೆದು ಅಸ್ತ್ರ-ಶಸ್ತ್ರ

ಮಾಯೆಯ

ಹತ್ತು ಕೈಗಳಲಿ,

ನಿರ್ಮಿಪುದು

ಸೃಷ್ಟಿಯ.

ಅರಳಿದ ನಂತರ

ಇನ್ನೇನು,

ಶೇಷ

ಮುದುಡುವಿಕೆ

ಕಾಲದಲಿ,

ಕೆಲ ಹೂವು

ಏರುವವು

ದೇವರಶಿರವ.


- ವಿಜ್ಞಾಸು

Saturday, 15 January 2022

ಬ್ರಾಹ್ಮೀ ಕವನ - 1

ಮೊತ್ತಮೊದಲು

ಸೃಷ್ಟಿಯಲಿ

ನೀನಿದ್ದೆ

ಬ್ರಾಹ್ಮೀ!

ಯಾರಿಲ್ಲದಿರಲು,

ಕೃಷ್ಣವೂ

ಕೃಷ್ಣೆಯೂ

ನೀನೇ,

ತಾಯಿ ನೀ

ಶುಕ್ಲದ,

ಆಕಾಶ ನೀ

ವಾಯು ನೀ

ಇಂದೂ ನೀ

ನುಸಿರು ಈ ಮನೆ

ಯಿನ್ಯಾರಿಗಿಂತ ಮೊದಲು,

ನಿನ್ನ ಸ್ಪಂದನ

ಮಾಯಾ ರೂಪದಲಿ

ಸರಿಸಲಿ ಆವರಣ

ನನ್ನ

ಅವ್ಯಯ ಮನದ,

ಒಂದಾಗಿರೋಣ 

ಆತ್ಮಿಕ ಸ್ತರದಲಿ

ನಾವು ನೀವು,

ಸಂಬಂಧಗಳ ಬಿರುಕು

ಕಳೆದು ಹೋಗಲಿ,

ವಯಸ್ಸು ನಮ್ಮ

ನಡುವೆ ಸಮಾನ

ಆತ್ಮವೆಲ್ಲರದೂ ಒಂದೇ,

ಇದೇ ಆಶಿಷ

ಇರಲಿ ಸದಾ

ನನ್ನ ಮೇಲೆ,

ಅರ್ಪಿತವೀ 

ಶಬ್ದ ಪುಷ್ಪ

ನಾದ-ವಿಹೀನ

ಹೃದಯಾಕಾಶದಿಂದ

ನಿನಗೆ 

ಬ್ರಾಹ್ಮೀ!


- ವಿಜ್ಞಾಸು